Wednesday, August 22, 2018

ರಕ್ಷಾ ಬಂಧನದ ವಿವಿಧ ನೋಟಗಳು


ತಂಗಿಗೆ ಅಣ್ಣನ ಮೇಲಿನ ಪ್ರೀತಿ, ಅಣ್ಣನಿಗೆ ತಂಗಿಯ ಮೇಲಿನ ಕಾಳಜಿಯ ಪ್ರತೀಕ ರಕ್ಷಾಬಂಧನ. ಸದಾ ನನ್ನ ಮೇಲೆ ಪ್ರೀತಿ ಇರಲಿ ಎಂದು ತಂಗಿ ರಕ್ಷಾ ಬಂಧನವನ್ನು ಕಟ್ಟಿದರೆ, ನಿನ್ನ ರಕ್ಷಣೆ ಹಾಗೂ ಜವಾಬ್ದಾರಿ ತನ್ನದು ಎಂಬಂತೆ ಅಣ್ಣ ರಕ್ಷಾ ಬಂಧನದ ನಂತರ ನಡೆದುಕೊಳ್ಳುತ್ತಾನೆ. ಬಾಲ್ಯದಿಂದಲೂ ರಕ್ಷಾ ಬಂಧನದ ಕಡೆಗೆ ಇರುವ ಭಾವಗಳು ಒಂದು ತೆರನಾದರೆ, ಬೆಳೆದು ದೊಡ್ಡವರಾದಂತೆಲ್ಲ ಆ ಭಾವನೆಗಳು ಕೊಂಚ ಬದಲಾಗುತ್ತವೆ. ಇನ್ನು ಕಾಲೇಜು ದಿನಗಳು ಬಂದರಂತೂ ರಕ್ಷಾ ಬಂಧನ ಎಂದರೆ ಮಾರು ದೂರ ಓಡಡಿದವರೂ ಇದ್ದಾರೆ. ನಾ ಕಂಡಂತೆ ರಕ್ಷಾ ಬಂಧನ ಬಹಳ ವಿಶಿಷ್ಟವಾದದ್ದು. ನಾನು ಪಾಲ್ಗೊಂಡ ರಕ್ಷಾ ಬಂಧನದಲ್ಲಿ ಸಿಹಿಯೂ ಇತ್ತು, ಕಹಿಯೂ ಇತ್ತು. ಇಂತಹ ನಾಲ್ಕು ಘಟನೆಗಳನ್ನ ಇದೋ ಇಲ್ಲಿಡುತ್ತಿದ್ದೇನೆ.


* ಬಾಲ್ಯದಲ್ಲಿ ರಕ್ಷಾ ಬಂಧನ ಅಂದರೆ ಬಹಳ ಆಪ್ತ ಕ್ಷಣಗಲಿಗೂ ಕಾರಣವಾಗಿತ್ತು. ನಮ್ಮೂರಿನಲ್ಲಿನ ಚಿಕ್ಕ ಪುಟ್ಟ ಹುಡುಗಿಯರೆಲ್ಲ ಆ ದಿನಗಳಲ್ಲಿ ಬಂದು ನನಗೆ ರಾಖಿ ಕಟ್ಟುತ್ತಿದ್ದರು. ಅವರ ಪಾಲಿಗೆ ನಾನು ಪ್ರೀತಿಯ ಸಹೋದರನಾಗಿದ್ದೆ. ರಾಖಿ ಕಟ್ಟಿದಾಗಲೆಲ್ಲ ನನ್ನ ಬಳಿ ಅವರು ಏನಾದರೂ ಕೊಡುಗೆಯನ್ನು ಕೇಳುತ್ತಿದ್ದರು. ಆದರೆ ಕೊಡುಗೆ ನೀಡಲು ನನ್ನ ಕೈಲಿ ಏನೂ ಇರುತ್ತಿರಲನೋಟಗಳು. ರಕ್ಷಾ ಬಂಧನ ಕಟಟ್ಟಿದವರಿಗೆ ಏನನ್ನೂ ಕೊಡಲಾಗುತ್ತಿಲ್ಲವಲ್ಲ ಎಂದು ನಾನು ತೊಳಲಾಡುತ್ತಿದ್ದೆ. ಇನ್ನೂ ವಿಚಿತ್ರ ಎಂದರೆ ರಾಖಿ ಕಟ್ಟಲು ಬಂದವರಿಗಾಗಿ ಕೊಡಲೇಬೇಕು ಎನ್ನುವ ಕಾರಣಕ್ಕಾಗಿ ಹಿಂದಿನ ದಿನವೇ ಪೇರಲೆ, ನೇರಲೆ ಹೀಗೆ ವಿವಿಧ ಹಣ್ಣುಗಳನ್ನು ಕೊಯ್ದುಕೊಂಡು ತಂದು ಗುಡ್ಡೆ ಹಾಕಿದ್ದೂ ಇದೆ. ಅವನ್ನು ಕೊಡಲು ಹೋದಾಗ ಇದು ಬೇಡ ಎಂದು ತಿರಸ್ಕಾರ ಮಾಡಿದವರೂ ಇದ್ದಾರೆ. ಬಹುಶಃ ನನ್ನ ತೊಳಲಾಟ ಆ ದಿನಗಳಲ್ಲಿ ಅಮ್ಮನಿಗೆ ಗೊತ್ತಾಗಿರಬೇಕು. ಈ ಕಾರಣದಿಂದಲೇ ರಾಖಿ ಹಬ್ಬದ ಎಡ-ಬಲದಲ್ಲಿ ಅಮ್ಮ ಸಿಹಿಯುಂಡೆಗಳನ್ನು ಮಾಡಿಕೊಡುತ್ತಿದ್ದರು. ಅವನ್ನು ನೀಡಿದ ನಂತರವೇ ನನಗೆ ರಾಖಿ ಕಟ್ಟಿದವರು ಸುಮ್ಮನಾಗುತ್ತಿದ್ದರು.

* ಹೈಸ್ಕೂಲು ದಿನಗಳಿರಬೇಕು. ಆ ದಿನಗಳಲ್ಲಿ ಮನಸ್ಸಿನಲ್ಲಿ ಹಲವು ಗೊಂದಲಗಳು ಹುಟ್ಟುವ ಸಮಯ. ಸಣ್ಣ ಸಣ್ಣ ಆಸೆಗಳು ಚಿಗುರೊಡೆದು ಎಲ್ಲವನ್ನೂ ಆಸೆ ಕಂಗಳಿಂದ ನೋಡುವ ಕಾಲ ಅದು. ಆ ದಿನಗಳಲ್ಲಿ ನಾವು ರಕ್ಷಾ ಬಂಧನದ ದಿನಗಳಲ್ಲಿ ಹೈಸ್ಕೂಲಿಗೆ ಹೊರಟ ಸಂದರ್ಭದಲ್ಲಿ ಹಲವರು ನಮ್ಮ ಬಳಿ ಹೈಸ್ಕೂಲಿಗೆ ಹೋದರೆ ಹುಡುಗಿಯರು ರಾಖಿ ಕಟ್ಟುತ್ತಾರೆ ಎಂದು ಅಣಕಿಸುತ್ತಿದ್ದರು. ತದ ನಂತರದಲ್ಲಿ ರಾಖಿ ಕಟ್ಟಿಸಿಕೊಂಡರೆ ಏನೋ ದೊಡ್ಡ ಅಪರಾಧವಾಗುತ್ತೆ ಎನ್ನುವ ಭಾವನೆಗಳು ಮನಸ್ಸಿನಲ್ಲಿ ಮೂಡತೊಡಗಿದ್ದವು. ನಾನೂ, ನನ್ನ ಗೆಳೆಯರು ಹೈಸ್ಕೂಲಿಗೆ ಹೋದರೂ, ಯಾವುದೇ ಗೆಳತಿಯರು ರಾಖಿ ಕಟ್ಟಲು ಬಂದರೂ ಅವರಿಂದ ತಪ್ಪಿಸಿಕೊಳ್ಳುತ್ತಿದ್ದೆವು. ಆದರೂ ಒಂದಿಬ್ಬರು ರಾಖಿ ಕಟ್ಟಿದಾಗ ಸುಮ್ಮನೆ ಪೆಚ್ಚುನಗೆ ಬೀರುತ್ತ ಕಟ್ಟಿಸಿಕೊಳ್ಳುತ್ತಿದ್ದೆವು. ಇಷ್ಟಾದ ಮೇಲೆ ನಮ್ಮ ಗೆಳೆಯರಲ್ಲೇ ಸ್ಪರ್ಧೆಗಳು ನಡೆಯುತ್ತಿದ್ದವು. ಯಾರಿಗೆ ಜಾಸ್ತಿ ರಾಖಿ ಕಟ್ಟಿದ್ದಾರೋ ಅವರು ಮಹಾಶೂರ ಎಂಬಂತೆ. ನಾನೂ ಒಬ್ಬ ಮಹಾಶೂರ ಎಂಬಂತೆ ಬಿಂಬಿಸಿಕೊಳ್ಳಲು ಅಂಗಡಿಗೆ ತೆರಳಿ ಆಗೆಲ್ಲ ಸಿಗುತ್ತಿದ್ದ ಬಹಳ ಕಡಿಮೆ ಬೆಲೆಯ ರಾಖಿಗಳನ್ನು ಕೊಂಡು ಅದನ್ನು ನಾವೇ ಕಟ್ಟಿಕೊಂಡು ಎಲ್ಲರೆದುರು ಕೈ ತೋರಿಸಿ ನಕ್ಕಿದ್ದು ಇದೆ. ಮಹಾಶೂರ ಎಂಬಂತೆ ಬೀಗಿದ್ದೂ ಇದೆ.

* ಕಾಲೇಜು ದಿನಗಳಲ್ಲಿ ರಾಖಿಯ ದಿನ ಬಂತೆಂದರೆ ಸಾಕು ನಾವೆಲ್ಲ ನಾಪತ್ತೆಯಾಗುತ್ತಿದ್ದೆವು. ಹಲವರು ಆ ದಿನಗಳಲ್ಲಿ ತಮ್ಮ ಪ್ರೀತಿಯನ್ನು ಕಟ್ಟಿಕೊಂಡಿದ್ದರೆ, ಇನ್ನೂ ಹಲವರದ್ದು ಒನ್ ವೇ ಲವ್. ಮತ್ತೆ ಕೆಲವರು ಹುಡುಗಿಯರ ಬೆನ್ನಿಗೆ ಬಿದ್ದು ಪ್ರೀತ್ಸೆ ಪ್ರೀತ್ಸೆ ಎನ್ನುತ್ತಿದ್ದ ಸಮಯ ಅದು. ಹುಡುಗಿಯರೋ ಮಹಾ ಬುದ್ಧಿವಂತರು, ಹುಡುಗರ ಎಲ್ಲ ಕಾಟಕ್ಕೂ ಪೂರ್ಣವಿರಾಮ ಹಾಕಲು ರಾಖಿ ಹಬ್ಬವನ್ನೇ ಕಾಯುತ್ತಿದ್ದರು. ಹುಡುಕಿ ಹುಡುಕಿ ರಾಖಿ ಕಟ್ಟುತ್ತಿದ್ದರು. ಈ ಸಂದರ್ಭಗಳಲ್ಲಿ ಯಾರದ್ದೋ ಮೇಲಿನ ಸಿಟ್ಟು ಇನ್ಯಾರದ್ದೋ ಮೇಲೆ ತಿರುಗಿದ್ದೂ ಇದೆ ಬಿಡಿ.! ಯಾರಿಗೋ ರಾಖಿ ಕಟ್ಟಬೇಕು ಎಂದುಕೊಂಡವರು ಅದೇ ಸಿಟ್ಟಿಗೆ ಆತನ ಗೆಳೆಯನಿಗೋ, ಇನ್ಯಾರಿಗೋ ರಾಖಿ ಕಟ್ಟಿದ ಘಟನೆಗಳೂ ಇದೆ. ಇಂತದ್ದನ್ನೆಲ್ಲ ತಪ್ಪಿಸಿಕೊಳ್ಳುವ ಕಾರಣಕ್ಕಾಗಿ ಆ ದಿನ ಹುಡುಗರಿಗೆಲ್ಲ ಕಾಲೇಜು ಅಘೋಷಿತವಾಗಿ ರದ್ದಾಗುತ್ತಿತ್ತು. ಹುಡುಗಿಯರಿಗೆ ಸಿಗದೇ ತಪ್ಪಿಸಿಕೊಂಡು, ಅಬ್ಬ ಬಚಾಆವಾದೆವು ಎಂದುಕೊಳ್ಳುತ್ತಿದ್ದರು. ಮಜಾ ಎಂದರೆ ಕೆಲವು ಹುಡುಗಿಯರು ರಕ್ಷಾ ಬಂಧನದ ಮರುದಿನವೂ ಕೂಡ ರಾಖಿ ಕಟ್ಟಿದ ನಿದರ್ಶನಗಳಿವೆ. ಈ ಘಟನೆಗಳು ಈಗಲೂ ಇದೆ ಬಿಡಿ.

* ಇದು ನನ್ನ ಗೆಳೆಯನ ಬದುಕಿನಲ್ಲಿ ನಡೆದ ಘಟನೆ. ನಮ್ಮದೇ ಆಪ್ತ ಬಳಗದ ಗೆಳೆಯ ಆತ. ಆತ ಬಹಳ ಬುದ್ಧಿವಂತ. ಆದರೆ ಸ್ವಲ್ಪ ಹುಂಭ ಸ್ವಭಾವದವನು. ಇದ್ದಕ್ಕಿದ್ದಂತೆ ರೇಗುತ್ತಿದ್ದ ಆತ ಆ ಸಿಟ್ಟಿನಲ್ಲಿ ಏನು ಬೇಕಾದರೂ ಮಾಡಿಬಿಡುತ್ತಿದ್ದ. ಆತನಿಗೆ ಒಬ್ಬಾಕೆಯ ಮೇಲೆ ಹಿತವಾಗಿ ಲವ್ವಾಗಿತ್ತು. ಆಕೆಗೂ ಇಷ್ಟವಿತ್ತೇನೋ. ಇಬ್ಬರೂ ಪರಿಚಿತರಾಗಿದ್ದರು. ಮಾತನಾಡುತ್ತಿದ್ದರು. ಕಾಲೆಜು ಕಾರಿಡಾರುಗಳಲ್ಲಿ ಅಡ್ಡಾಡುತ್ತದ್ದರು. ಇದು ನಮ್ಮಂತಹ ಹಲವು ಗೆಳೆಯರ ಕಣ್ಣಿಗೂ ಬಿದ್ದಿತ್ತು. ಪ್ರೀತಿ ಇತ್ತೋ, ಇಲ್ಲವೋ ಗೊತ್ತಿಲ್ಲ ಆದರೆ ನಮ್ಮ ಗೆಳೆಯರ ಪಾಲಿಗಂತೂ ಇದು ಖಂಡಿತವಾಗಿಯೂ ಲವ್ವೇ ಎಂಬಂತೆ ಬಿಂಬಿತವಾಆಗಿ, ಸಣ್ಣ ಪ್ರಮಾಣದಲ್ಲಿ ಗುಸು ಗುಸು ಕೂಡ ನಡೆದಿತ್ತು. ಕೊನೆಗೊಮ್ಮೆ ಈ ಗುಸು ಗುಸು ಗೆಳೆಯನ ಕಿವಿಗೂ ಬಿದ್ದಿತ್ತು. ಇದ್ದಕ್ಕಿದ್ದಂತೆ ಸಿಟ್ಟಾಗಿದ್ದ ಆತ ಸೀದಾ ಅಂಗಡಿಗೆ ಹೋಗಿ ರಾಖಿಯನ್ನು ಕೊಂಡು, ಅದೇ ಹಡುಗಿಯನ್ನು ಕರೆದು ಅವಳಿಗೆ ರಾಖಿ ಕೊಟ್ಟು, ಕಟ್ಟುವಂತೆ ಹೇಳಿದ್ದ. ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿದ್ದ ಆಕೆ ರಾಖಿಯನ್ನು ಕಟ್ಟಿ ಸದ್ದಿಲ್ಲದೇ ನಡೆದು ಹೋದದ್ದು ಇನ್ನೂ ಕಣ್ಣಮುಂದಿದೆ. ಅದಾಗಿ ಎಷ್ಟೋ ವರ್ಷಗಳು ಕಳೆದ ಮೇಲೂ ಆ ಮಿತ್ರ ಈಗಲೂ, ಛೇ ಆ ದಿನ ಹೀಗೆ ಮಾಡಬಾರದಿತ್ತು ಎಂದುಕೊಳ್ಳುತ್ತಿದ್ದುದನ್ನು ಕಂಡಿದ್ದೇನೆ. ಹೀಗೆ ರಕ್ಷಾ ಬಂಧನ ಬೆಸೆದುಕೊಂಡಿದೆ. ಬೆಸೆದ ಬಂಧದ ನಡುವೆ ಸಂತರವನ್ನೂ ತಂದಿದೆ.ಸ


Tuesday, August 21, 2018

ನನ್ನ ನೆರಳಂತಿದ್ದವಳು... ನನಗೆ ನೆರಳಾದಳು..!!


ಪ್ರತಿಯೊಬ್ಬರೂ ಅಕ್ಕರೆಯಿಂದ, ಪ್ರೀತಿಯಿಂದ ಬಯಸುವ ಒಂದೇ ಶಬ್ದ ತಂಗಿ. ಹಲವರ ಪಾಲಿಗೆ ತಂಗಿ ಎಂಬುದು ಅದೃಷ್ಟ. ಅಕ್ಕಂದಿರನ್ನು ಹೊಂದಿರುವವರೂ ತಮಗೊಬ್ಬ ತಂಗಿ ಇರಬೇಕಿತ್ತು ಎಂದುಕೊಳ್ಳುತ್ತಾರೆ. ತಂಗಿ ಹಲವರ ಪಾಲಿಗೆ ಸರ್ವಸ್ವ.
ನನಗೂ ಅಷ್ಟೇ, ತಂಗಿ ನನ್ನ ಪಾಲಿಗೆ ಒಲವಿನ ಖನಿಯೇ. ನನಗಿಂತ ನಾಲ್ಕೈದು ವರ್ಷ ಚಿಕ್ಕವಳು. ಪ್ರೀತಿಯಲ್ಲಿ, ಜವಾಬ್ದಾರಿಯಲ್ಲಿ ನನಗಿಂತ ಹತ್ತಾರು ವರ್ಷ ದೊಡ್ಡವಳು.
ನನಗೆ ನಾಲ್ಕೈದು ವರ್ಷವಾಗಿದ್ದಾಗ ಶಿರಸಿಯ ಜಿ. ಎಂ. ಹೆಗಡೆ ಆಸ್ಪತ್ರೆಯಲ್ಲಿ ಅಮ್ಮನ ಮಗ್ಗುಲಲ್ಲಿ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದ ಚಿಕ್ಕ ತಂಗಿಯನ್ನು ಮೊಟ್ಟಮೊದಲ ಬಾರಿ ನೋಡಿ ಸುಮ್ಮನೆ ನಕ್ಕಿದ್ದೆ. ಮೃದು ಮೈ ಮುಟ್ಟಿ ಹೆದರಿದ್ದೆ. ನಂತರ ಆ ದಿನವೇ ಹೆರಿಗೆ ವಾರ್ಡಿನ ಚೇರುಗಳ ಅಡಿಯಲ್ಲಿ ರಾತ್ರಿ ಮಲಗಿ ನಿದ್ರಿಸಿದ್ದೆ. ರಾತ್ರಿ ದೊಡ್ಡದಾಗಿ ತಂಗಿ ಅತ್ತಾಗ ಬೆದರಿ ಎಚ್ಚರಾಗಿದ್ದೆ. ಇದು ತಂಗಿಯ ಕುರಿತು ನನ್ನ ಮೊದಲ ನೆನಪು.
ಬಾಲ್ಯದಲ್ಲಿ ನನಗೂ ತಂಗಿಯ ನಡುವೆಯೂ ಅದೆಷ್ಟೋ ಭಾವನೆಗಳು. ಆಕೆ ಚಿಕ್ಕಂದಿನಲ್ಲಿ ಸಿಕ್ಕಾಪಟ್ಟೆ ದಪ್ಪ ಇದ್ದಳು. ನಾನು ಇಂದಿನಂತೆಯೇ ಅಂದೂ ಬಡಕಲು. ಆಕೆಯನ್ನು ಎತ್ತಿಕೊಳ್ಳಲು ಹೋಗಿ, ಒಜ್ಜೆಯಾಗಿ ಕೈಬಿಟ್ಟುಬಿಡುವಂತಾಗುತ್ತಿತ್ತು. `ತಮಾ ನಿನ್ನತ್ರ ಆಗ್ತಿಲ್ಯೋ...' ಎಂದು ಅಮ್ಮ ಆಗಾಗ ಗದರಿದ್ದು ಇನ್ನೂ ಕಿವಿಯಲ್ಲಿ ಗುಂಯೆನ್ನುತ್ತಲೇ ಇದೆ.
ಕೊಲ್ಲೂರಿನಲ್ಲಿ ತಣ್ಣಗೆ, ಶಾಂತವಾಗಿ ಹರಿಯುತ್ತಿರುವ ನದಿಯ ನೆನಪಿಗೆ ನನ್ನ ತಂಗಿಗೆ ಅಮ್ಮ-ಅಪ್ಪ ಸೌಪರ್ಣಿಕಾ ಎಂದು ಹೆಸರನ್ನಿಟ್ಟರೂ, ಉಳಿದವರ ಬಾಯಿ ತಿರುಗದೇ ನಂತರದಲ್ಲಿ ಅದು ಸುಪರ್ಣ ಆದರೂ ಚಿಕ್ಕಂದಿನಲ್ಲಿ ನಾನು ವಿಜಯಾ ಎಂದು ಹೆಸರಿಟ್ಟಿದ್ದೆ. ನನ್ನ ಹೆಸರು ವಿನಯ, ತಂಗಿಯ ಹೆಸರು ವಿಜಯ.. ಒಳ್ಳೆಯ ಪ್ರಾಸ ಎಂದುಕೊಂಡಿದ್ದೆ. ಚಿಕ್ಕಂದಿನಲ್ಲಿ ಆಟದ ರೀತಿಯಲ್ಲಿ ಆ ಹೆಸರನ್ನು ಕರೆದಿದ್ದೆ. ಆದರೆ ದೊಡ್ಡವನಾದ ನಂತರ ಯಾವತ್ತಿಗೂ ಆಕೆಯನ್ನು ವಿಜಯ ಎಂದು ಕರೆದಿಲ್ಲ. ವಿಜಯ ಎಂದರೂ ಆಕೆಗೆ ಅದು ತನ್ನ ಹೆಸರು ಎನ್ನುವುದೂ ಗೊತ್ತಿಲ್ಲವೇನೋ ಬಿಡಿ.

ಚಿಕ್ಕಂದಿನಲ್ಲೆಲ್ಲ ನನಗೆ ಅದೆಷ್ಟೋ ಸಂಗತಿಗಳಲ್ಲಿ ತಂಗಿ ಕಾಂಪಿಟೇಟರ್. ನಾನು ಯಾವುದೇ ಕೆಲಸ ಮಾಡಲಿ, ಕಿಲಾಡಿಯಲ್ಲಿ ತೊಡಗಲಿ ಅಲ್ಲೆಲ್ಲ ತಂಗಿ ಇರುತ್ತಿದ್ದಳು. ಕೆಲವೊಮ್ಮೆ ನನಗಿಂತ ಹೆಚ್ಚಿನ ಕಿಲಾಡಿಗಳನ್ನು ಅವಳೇ ಮಾಡುವ ಮೂಲಕ ನನ್ನ ಕ್ರೆಡಿಟ್ ಗಳನ್ನೆಲ್ಲ ಅವಳೇ ತೆಗೆದುಕೊಳ್ಳುತ್ತಿದ್ದಳು. ಆಗೆಲ್ಲ ನನಗೆ ಭಯಂಕರ ಸಿಟ್ಟು ಬರುತ್ತಿತ್ತು ಬಿಡಿ.
ಆಗಾಗ ನಾವು ಯುದ್ಧ ಮಾಡಿಕೊಳ್ಳುತ್ತಿದ್ದೆವು. ಅಡುಗೆ ಮನೆಗೆ ಹೋಗಿ ಎರಡು ದೊಡ್ಡ ದೊಡ್ಡ ಸೌಟುಗಳನ್ನು ತೆಗೆದುಕೊಂಡು ಕಟಾರಿ ವೀರರಂತೆ ಕಾದಾಟ ಮಾಡುತ್ತಿದ್ದೆವು. ಈ ಕಾಳಗ ಎಷ್ಟು ಬೀಕರವಾಗಿರುತ್ತಿತ್ತೆಂದರೆ, ಯಾವುದಾದರೂ ಒಂದು ಸೌಟು ಮುರಿಯುವುದರೊಂದಿಗೆ ಮುಕ್ತಾಯವಾಗುತ್ತಿತ್ತು. ಹೀಗೆ ಸೌಟು ಮುರಿದವರು ಸೋಲುತ್ತಿದ್ದರು. ಈಗಲೂ ಆಗೀಗ ನಾಆವು ಮುರಿದ ಸೌಟುಗಳು ಕಾಣಸಿಗುತ್ತಿರುತ್ತವೆ ಬಿಡಿ. ಇದನ್ನು ನೋಡಿದ ನಮ್ಮೂರಿಗರು ಆಗ ನಮ್ಮ ಬಳಿ `ಅಣ್ಣ ತಂಗಿ ಹೆಂಗಿರಬೇಕು.. ಕಚ್ಚೋ ಕುನ್ನಿಯ ಹಂಗಿರಬೇಕು' ಎಂದು ಛೇಡಿಸುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ.
ಬಾಲ್ಯದಿಂದಲೇ ಆಕೆ ನನಗೆ ನೆರಳಂತೆ ಬೆಳೆದಳು. ಹಲವು ಸಾರಿ ನನಗೂ ನೆರಳಾದಳು. ನನಗೆ ಹೋಲಿಕೆ ಮಾಡಿದರೆ ಆಕೆ ಸ್ಪಲ್ಪ ಫಾಸ್ಟು. ಎದುರಿನಲ್ಲಿ ನಾವು ಬೈದುಕೊಂಡು, ಹೊಡೆದಾಡಿಕೊಂಡು ಮಾಡುತ್ತಿದ್ದರೂ ನಮ್ಮೊಳಗಿನ ಬಂಧ, ಒಲವು ಯಾವತ್ತೂ ಕಡಿಮೆಯಾಗಲಿಲ್ಲ. ಅಮ್ಮನ ಬಳಿ ಪುಕಾರು ಹೇಳುತ್ತಿದ್ದೆವಾದರೂ ಕೊನೆಯಲ್ಲಿ ನಾವಿಬ್ಬರೂ ಯಾವಾಗಲೋ ಒಂದಾಗಿಬಿಡುತ್ತಿದ್ದೆವು. ನಾನು ಆಕೆಗೆ ಕಲ್ಲು ಹೊಡೆದು ಆಕೆ ಎಚ್ಚರು ತಪ್ಪಿ ಬಿದ್ದಿದ್ದು, ಆ ನಂತರ ಸಿಕ್ಕಾಪಟ್ಟೆ ನನ್ನನ್ನು ದ್ವೇಷ ಮಾಡಿದ್ದು, ಕಣ್ಣಾ ಮುಚ್ಚಾಲೆ ಆಡುವಾಗ ನಾನು ಮೊಣಕಾಲನ್ನು ಕಿತ್ತುಕೊಂಡು ಬಂದಾಗ ರಕ್ತ ನಿಲ್ಲಲಿ ಎಂದು ಕೆಜಿಗಟ್ಟಲೆ ಸಕ್ಕರೆಯನ್ನು ಬಾಯಿಗೆ ಹಾಕಿದ್ದು, ದೋಸೆ ಎರೆಯುತ್ತಿದ್ದ ತಂಗಿ ಯಾವುದೋ ಕಾರಣಕ್ಕೆ ಬಿಸಿಯಾಗಿದ್ದ ಕಾವಲಿ ಸೌಟನ್ನು ತಂದು ನನ್ನ ಕಾಲಮೇಲೆ ಇಟ್ಟಿದ್ದು, ನಾನು ಉರಿಯಿಂದ ಕೂಗ್ಯಾಡಿದಾಗ ಆಕೆಯೇ ನಂತರ ಔಷಧಿ ಹಚ್ಚಿದ್ದು.. ಇದ್ಯಾವುದೂ ಮರೆಯುವುದಿಲ್ಲ ಬಿಡಿ. ಹಲವು ಸಂದರ್ಭಗಳು ನಗು ತಂದರೆ ಇನ್ನು ಹಲವು ಘಟನೆಗಳು ನೆನಪಾದಾಗ ನಮಗರಿವಿಲ್ಲದಂತೆಯೇ ಕಣ್ಣಂಚಿನಲ್ಲಿ ನೀರನ್ನು ತಂದುಬಿಡುತ್ತವೆ.
ಅಪ್ಪನಿಗೆ ತಂಗಿ ಎಂದರೆ ಸಿಕ್ಕಾಪಟ್ಟೆ ಪ್ರೀತಿ ಇತ್ತು. ಇದು ನನಗೆ ತಂಗಿಯ ಮೇಲೆ ಬಹಳ ಹೊಟ್ಟೆಕಿಚ್ಚು ತರಲು ಕಾರಣವಾಗಿತ್ತು. ಶಾಲೆಯಲ್ಲಿ ಮಾರ್ಕ್ಸ್ ಕಾರ್ಡ್ ತಂದಾಗಲೆಲ್ಲ ನನಗೆ ಹತ್ತಾರು ಹೊಡೆತಗಳನ್ನು ಹೊಡೆಯುತ್ತಿದ್ದ ಅಪ್ಪ ಫಸ್ಟ್ ರ್ಯಾಂಕ್ ಬಾ ಎನ್ನುತ್ತಿದ್ದ. ಆದರೆ ತಂಗಿಯ ಬಳಿ ಮಾತ್ರ ಏನನ್ನೂ ಹೇಳದೇ ಸಹಿ ಹಾಕಿ ಕಳುಹಿಸುತ್ತಿದ್ದ. ನಾನು ಏನೇ ಇಂಡೆಂಟ್ ಹಾಕಿದರೂ ಅದು ಬರುತ್ತಿರಲಿಲ್ಲ. ತಂಗಿ ಏನೇ ಬೇಕು ಎಂದರೂ ಅದು ಬರುತ್ತಿತ್ತು. ಇದು ಆ ದಿನಗಳಲ್ಲಿ ನನಗೆ ಸಾಕಷ್ಟು ಬೇಜಾರಿಗೂ ಕಾರಣವಾಗಿತ್ತು. ಮೊನ್ನೆ ಮೊನ್ನೆ ಇದೇ ವಿಷಯ ಮಾತನಾಡಿದಾಗ ತಂಗಿಯೇ ನನ್ನ ಬಳಿ `ಅಣಾ.. ನೀನು ಆ ದಿನಗಳಲ್ಲಿ ಫಸ್ಟ್ ಬರುವ ಸಾಮರ್ಥ್ಯ ಹೊಂದಿದ್ದೆ. ಹಂಗಾಗಿ ಅಪ್ಪನಿಂಗೆ ಹೊಡೆದು ಫಸ್ಟ್ ಬಾ ಎನ್ನುತ್ತಿದ್ದ. ನಾನು ಏನೇ ಜಪ್ಪಯ್ಯ ಅಂದರೂ ಫಸ್ಟು ಬರುವುದಿಲ್ಲ ಅಂತ ಗೊತ್ತಿತ್ತು.. ಹಂಗಾಗಿ ನನಗೆ ಮಾಫಿ ಸಿಗುತ್ತಿತ್ತು..' ಎಂದಿದ್ದಳು. ನಂತರ ಇಬ್ಬರೂ ನಕ್ಕಿದ್ದೆವು.
ಬಾಲ್ಯದ ಜಗಳಗಳು, ಹೊಡೆದಾಟಗಳು, ಮುನಿಸು, ಪುಕಾರು, ಕೋಪ, ಚಾಡಿಗಳೆಲ್ಲ ಬೆಳೆ ಬೆಳೆದಂತೆಲ್ಲ ಕಾಣೆಯಾಗತೊಡಗಿ ಯಾವುದೋ ಮಾಯೆಯಲ್ಲಿ ನಮ್ಮ ನಡುವಿನ ಬಂಧಗಳು ಗಟ್ಟಿಗೊಳ್ಳತೊಡಗಿದ್ದವು. ಈಕೆ ನನ್ನ ತಂಗಿ, ಇಂವ ನನ್ನ ಅಣ್ಣ ಎನ್ನುವ ಭಾವನೆ ಯಾವಾಗ ಗಟ್ಟಿಯಾಗಿ ಸೆಲೆಯೊಡೆಯಿತೋ ಗೊತ್ತಿಲ್ಲ. ಹೈಸ್ಕೂಲಿಗೆ ನಾನು ನನ್ನ ದೊಡ್ಡಪ್ಪನ ಮನೆಗೆ ಹೋದೆ. ಆ ನಂತರದಲ್ಲಿ ಆಕೆ ನನ್ನನ್ನು ಎಷ್ಟು ಮಿಸ್ ಮಾಡಿಕೊಂಡಳೋ, ನಾನೂ ಆಕೆಯನ್ನುಸಾಕಷ್ಟು ಮಿಸ್ ಮಾಡಿಕೊಂಡೆ ಬಿಡಿ.
ಹೈಸ್ಕೂಲು ಹಾಗೂ ಪಿಯುಸಿಯ ದಿನಗಳು ನನಗೆ ಹಾಗೂ ತಂಗಿಗೆ ಕಷ್ಟದ ದಿನಗಳು. ಈ ಎರಡೂ ಸಂದರ್ಭಗಳಲ್ಲಿ ನಾಆನು ಬೇರೆಯವರ ಮನೆಯಲ್ಲಿ ಉಳಿದುಕೊಂಡೇ ಓದಿದ ಕಾರಣ ಮನೆಯ ಕಷ್ಟಗಳು ನನಗೆ ಅರಿವಾಗಲೇ ಇಲ್ಲ. ಅದೇ ತಂಗಿ ಮನೆಯಲ್ಲಿಯೇ ಇದ್ದ ಕಾರಣ ಎಲ್ಲವೂ ಆಕೆಗೆ ಗೊತ್ತಿತ್ತು. ಹೈಸ್ಕೂಲಿನ ಮೂರೂ ವರ್ಷ ಅಪ್ಪ ನನ್ನನ್ನು ಶಾಲಾ ಪ್ರವಾಸಕ್ಕೆ ಕಳಿಸಲಿಲ್ಲ ಎಂದು ಮುನಿಸಿಕೊಂಡಿದ್ದೆ. ಆದರೆ ಅಪ್ಪನ ಕೈಲಿ ದುಡ್ಡಿರಲಿಲ್ಲ, ಅಷ್ಟೇಕೆ ಮನೆಯಲ್ಲಿ ಅಕ್ಕಿಯನ್ನು ತರಲಿಕ್ಕೂ ದುಡ್ಡಿರಲಿಲ್ಲ ಎನ್ನುವ ಸಂಗತಿ ಅಪ್ಪ ಅಮ್ಮನ ಬಿಟ್ಟರೆ ತಂಗಿಗೆ ಮಾತ್ರ ಗೊತ್ತಿದ್ದಿದ್ದು. ಆಕೆಯನ್ನು ಅಪ್ಪ ಹೈಸ್ಕೂಲು ಓದಿಸಲೂ ಕಳಿಸಲಾರೆ ಎಂದು ಹೇಳುತ್ತಿದ್ದ. ಅಮ್ಮ ಅದ್ಹೇಗೋ ದುಡ್ಡು ಹೊಂದಿಸಿ ತಂದಿದ್ದಳು. ಹೈಸ್ಕೂಲಿಗೇನೋ ಅಡ್ಮಿಷನ್ ಆಗಿತ್ತು. ಆದರೆ ಹಾಕಿಕೊಂಡು ಹೋಗಲು ಶಾಲಾ ಬಟ್ಟೆಗಳೇ ಇರಲಿಲ್ಲ. ಕೊನೆಗೆ ನನ್ನದೇ ಓರಿಗೆಯ ನಮ್ಮೂರಿನ ಇನ್ನೊಬ್ಬಳಿಂದ ಎರಡು ಜತೆ ಆಕೆ ಹಾಕಿ ಬಿಟ್ಟ ಯುನಿಫಾರ್ಮನ್ನು ತಂದುಕೊಂಡು ಅದನ್ನೇ ಶಾಲೆಗೆ ಹಾಕಿಕೊಂಡು ಹೋಗಿದ್ದಳು. ಆ ಯುನಿಫಾರ್ಮು ಹರಿದ್ದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಪಾಪ.. ತಂಗಿಯೆ ಅದಕ್ಕೆ ಪಿನ್ ಚುಚ್ಚಿಕೊಂಡು ಹೋಗಿದ್ದು, ಅದೆಷ್ಟೋ ದಿನಗಳ ನಂತರ ನಮ್ಮ ಗಮನಕ್ಕೆ ಬಂದಿತ್ತು.
ತಂಗಿ ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗಿದ್ದಳು. ಆಗ ಅಪ್ಪನೂ, ನಾನೂ ಸಿಕ್ಕಾಪಟ್ಟೆ ಬೈದಿದ್ದೆವು. ಮರು ಪರೀಕ್ಷೆಯಲ್ಲಿ ಪಾಸು ಮಾಡಿದ್ದ ಆಕೆಗೆ ಪಿಯುಸಿಗೆ ಹೋಗಲು ಸಾಧ್ಯವೇ ಆಗಿರಲಿಲ್ಲ. ಕೊನೆಗೆ ಎಕ್ಸಟರ್ನಲ್ ಆಗಿ ಕಟ್ಟಿ ಒಂದೇ ವರ್ಷಕ್ಕೆ ಪಿಯು ಪಾಸು ಮಾಡಿದ್ದ ತಂಗಿ, ಎಸ್ಸೆಲ್ಸಿಯಲ್ಲಿ ಫೇಲಾದರೇನಂತೆ, ಪಿಯುಸಿಯಲ್ಲಿ ಒಂದೇ ವರ್ಷಕ್ಕೆ ಪಾಸು ಮಾಡಿದ್ದೇನೆ ನೋಡಿ ಎಂದು ಬೀಗಿದ್ದಳು. ನಂತರ ಆಕೆ ಕೂಡ ನನ್ನಂತೆ ಇಂಗ್ಲೀಷ್ ಮೇಜರ್, ಜರ್ನಲಿಸಂ ಮಾಡಿದಳು. ಯಾಕೆ ಇದನ್ನೇ ಆಯ್ಕೆ ಮಾಡಿಕೊಂಡೆ ಎಂದರೆ, ಅಣ್ಣ ಮಾಡಿದ್ದ. ಅಂವ ಮಾಡಿದ್ದು ಚೊಲೋ ಇರ್ತು ಅಂತ.. ಹಂಗಾಗಿ ನಾನೂ ಮಾಡಿದ್ದು.. ಎಂದಿದ್ದಳು.
ಬೆಳೆದು ದೊಡ್ಡವರಾದ ನಮ್ಮ ಭಾವನೆಗಳೂ ಬಲಿತವು. ತಂಗಿ ಯಾವುದೋ ಮಾಯೆಯಲ್ಲಿ ಜವಾಬ್ದಾರಿಯುತ ಅಕ್ಕನಂತೆ ವವರ್ತನೆಗೆ ತೊಡಗಿದ್ದಳು. ನನ್ನ ಚಿಕ್ಕ ಚಿಕ್ಕ ತಪ್ಪುಗಳಿಗೆ ಅಪ್ಪ-ಅಮ್ಮ ಬಯ್ಯದೇ ಇದ್ದರೂ ತಂಗಿಯಂತೂ ಬಯ್ಯುತ್ತಿದ್ದಳು. ಮಗ ಎಂಬ ಕಾರಣಕ್ಕೆ ನನ್ನ ತಪ್ಪುಗಳನ್ನು ಅಪ್ಪ-ಅಮ್ಮ ಖಂಡಿಸದಿದ್ದರೂ, ನೇರವಾಗಿ ಹೇಳಿ ಅದನ್ನು ಖಂಡಿಸುತ್ತಿದ್ದ ಸಂದರ್ಭದಲ್ಲೆಲ್ಲ, ನಾನು ಚಿಕ್ಕಂದಿನಿಂದ ನೋಡಿದ ತಂಗಿ ಇವಳೇನಾ ಎನ್ನುವ ಅನುಮಾನವೂ ಬರುತ್ತಿತ್ತು. ನನ್ನ ಮೊದಲ ಕವಿತೆ ತರಂಗದಲ್ಲಿ ಪ್ರಕಟಗೊಂಡಾಗ ನನಗಿಂತ ಹೆಚ್ಚು ಸಂಭ್ರಮಿಸಿದ್ದು ಆಕೆಯೇ. ಆ ಸಂದರ್ಭಗಳಲ್ಲೆಲ್ಲ ಆಕೆ ತನ್ನ ಸಂಗತಿಗಳನ್ನೆಲ್ಲ ಹೇಳಿಕೊಳ್ಳುತ್ತಿದ್ದುದು ನನ್ನ ಬಳಿ ಮಾತ್ರವೇ.
ಯಾರೋ ಒಬ್ಬಾತ ಆಕೆಗೆ ಹೈಸ್ಕೂಲು, ಕಾಲೇಜಿಗೆ ಹೋಗುವಾಗ ತ್ರಾಸು ಕೊಡ್ತಾನೆ ಎಂದಿದ್ದು, ಒಂದಿನ ಅಡ್ಡ ಹಾಕಿ ಆತನ ಬಳಿ ನಾನು ಗಲಾಟೆ ಮಾಡಿದ್ದು, ಆಕೆಯ ಬಳಿ ಯಾರೋ ಒಬ್ಬ ಪ್ರೇಮ ನಿವೇದನೆ ಮಾಡಿಕೊಂಡಿದ್ದು ಎಲ್ಲವನ್ನೂ ಹೇಳಿದ್ದಳು. ಕೊನೆಗೆ ಆಕೆ ಕೂಡ ಲವ್ ಮಾಡಿದಾಗ ಅದನ್ನೂ ನನ್ನ ಬಳಿ ಹೇಳಿದ್ದಲ್ಲದೇ, ಆತನನ್ನು ನನಗೆ ಪರಿಚಯಿಸಿದ್ದಳು. ನಾನು ಆತನ ಬಳಿ ಎರಡು ತಾಸು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದೆ.
ಕಾಲೇಜು ದಿನಗಳಲ್ಲಿ ನನಗೆ ಯಾರಾದರೂ ಹುಡುಗಿ ಇಷ್ಟವಾದರೆ ಅದನ್ನು ಮೊದಲು ತಂಗಿಯ ಬಳಿಯೇ ಹೇಳುತ್ತಿದ್ದೆ ಬಿಡಿ. ಕಾಲೇಜು ಬದುಕು ಮುಗಿದ ನಂತರ ನಾನು ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದೆ. ಎರಡೋ-ಮೂರೋ ವರ್ಷದ ನಂತರ ಅನಾರೋಗ್ಯದಿಂದಾಗಿ ಬೆಂಗಳೂರು ಬಿಟ್ಟು ಬಂದಾಗ ನನ್ನನ್ನು ಅಕ್ಕರೆಯಿಂದ ಕಂಡಿದ್ದು ತಂಗಿಯೇ. ಅದೆಷ್ಟೋ ಸಂದರ್ಭಗಳಲ್ಲಿ ನಾನು ಡಿಪ್ರೆಷನ್ ನಿಂದ ಬಳಲಿ, ಬದುಕಿನ ಕುರಿತು ಆಸೆಯನ್ನೇ ಬಿಟ್ಟು ಮಲಗಿದ್ದಾಗ ಅಮ್ಮ-ತಂಗಿಯೇ ನನ್ನಲ್ಲಿ ಕಳೆದು ಹೋಗಿದ್ದ ಆತ್ಮವಿಶ್ವಾಸವನ್ನು ಮರಳಿ ತುಂಬಿಕೊಟ್ಟಿದ್ದು.
ತದನಂತರದಲ್ಲಿ ಆಕೆಯ ಮದುವೆ ಆಯಿತು. ಇದೀಗ ಆಕೆಗೆ ಇಬ್ಬರು ಮುದ್ದಾದ ಮಕ್ಕಳು. ಇದಾದ ಮೇಲೂ ನಮ್ಮ ನಡುವಿನ ಪ್ರೀತಿ, ನಂಬಿಕೆಗಳು ಬದಲಾಗಿಲ್ಲ ಬಿಡಿ. ಈಗಲೂ ಆಗಿಗ ನಾವು ಸಣ್ಣ ಪುಟ್ಟ ಕಾರಣಕ್ಕೆ ಬೈದುಕೊಳ್ಳುತ್ತೇವೆ. ಜಗಳ ಮಾಡಿಕೊಳ್ಳುತ್ತೇವೆ. ಅದಾದ ಅರೆಘಳಿಗೆಯಲ್ಲೇ ಪ್ರೀತಿಯಿಂದ ಇರುತ್ತೇವೆ. ಇದ್ಯಾವುದೂ ಮರೆಯುವುದು ಅಸಾಧ್ಯ ಬಿಡಿ.
ಇಂತಹ ತಂಗಿ... ಮುಂದಿನ ಜನ್ಮ ಜನ್ಮಾಂತರಗಳಿಗೂ ನನಗೇ ಸಿಗಲಿ.. ಆಕೆಯ ಒಲವಿನ ಋಣ ಭಾರ ನನ್ನ ಮೇಲಿದೆ.

ಎನಿ ವೇ.. ಮತ್ತೊಮ್ಮೆ ರಕ್ಷಾ ಬಂಧನ ಬಂದಿದೆ...
ರಕ್ಷಾ ಬಂಧನದ ಶುಭಾಷಯಗಳು...

ತಂಗಿ... ಮಿಸ್ ಯೂ..

Sunday, August 19, 2018

ಬನ್ನಿ ನೀರು ಕೊಟ್ಟ ನೆಲದ ಋಣ ತೀರಿಸೋಣ

ಇತಿಹಾಸದ ಪುಟಗಳನ್ನು ಗಮನಿಸಿದಾಗ ಕೊಡಗಿನಷ್ಟು ನತದೃಷ್ಟ ಜಿಲ್ಲೆ ಇನ್ನೊಂದಿಲ್ಲ. ಸಾಲು ಸಾಲು ದುರಂತಹಳು, ನರಮೇಧಗಳನ್ನು, ವಿಕೋಪಗಳನ್ನು ಕಂಡಜಿಲ್ಲೆ. ಅದೆಷ್ಟೋ ರೌದ್ರ ಘಟನೆಗಳಿಗೆ ಸಾಕ್ಷಿಯಾದ ಜಿಲ್ಲೆ. ಇಂತಹ ಕೊಡಗು ಮತ್ತೊಮ್ಮೆ ಪ್ರಕೃತಿ ವಿಕೋಪಕ್ಕೆ ನಲುಗಿದೆ. ಮಳೆಯ ರೌದ್ರ ನರ್ತನಕ್ಕೆ ವಿಲಿ ವಿಲಿ ಒದ್ದಾಡುತ್ತಿದೆ.
ಎಲ್ಲಿ ಭೂರಮೆ ದೇವ ಸನ್ನಿಧಿ
ಬಯಸಿ ಬಿಮ್ಮನೆ ಬಂದಳೋ..
ಎಂದು ಕವಿ ಪಂಜೆ ಮಂಗೇಶರಾಯರಿಂದ ಹೊಗಳಿಸಿಕೊಂಡ ನಾಡು ಕೊಡಗು. ಬೃಹ್ಮಗಿರಿಯಿಂದ ಪುಷ್ಪಗಿರಿವರೆಗೆ ಹಬ್ಬಿದ ನಾಡು, ಸೌಂದರ್ಯದ ಬೀಡು ಎಂದೆಲ್ಲ ಕರೆಸಿಕೊಂಡ ಸ್ಥಳ ಕೊಡಗು. ಕರ್ನಾಟಕದ ಕಾಶ್ಮೀರ, ಕರ್ನಾಟಕದ ಸ್ವಿಡ್ಜರ್ಲೆಂಡ್, ಕಾಫಿಯ ನಾಡು, ಕಿತ್ತಳೆಯ ಬೀಡು ಹೀಗೆ ಹತ್ತು ಹಲವು ಅಭಿದಾನಗಳು ಕೊಡಗಿಗೆ ಇದೆ. ಶೂರರ ನಾಡು, ವೀರರ ಬೀಡು ಎಂದೆಲ್ಲ ಕರೆಸಿಕೊಳ್ಳುತ್ತಿದೆ ಕೊಡಗು. ಭಾರತದ ಸೇನೆಗೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ನೀಡಿದ ಜಿಲ್ಲೆ ಎನ್ನುವ ಹೆಸರೂ ಕೊಡಗಿಗೆ ಇದೆ. ಅತಿ ಹೆಚ್ಚು ಸೈನಿಕ ಅಧಿಕಾರಿಗಳನ್ನೂ ಕೊಟ್ಟ ಜಿಲ್ಲೆ. ಪರಮವೀರಚಕ್ರ ಒಂದನ್ನು ಹೊರತು ಪಡಿಸಿ ಉಳಿದೆಲ್ಲ ಶೌರ್ಯ ಫದಕಗಳೂ ಕೊಡವಿಗೆ ಸಿಕ್ಕಿದೆ. ಕರ್ನಾಟಕಕ್ಕೆ ಸಿಕ್ಕಿರುವ ಎರಡು ಮಹಾವೀರಚಕ್ರ ಪದಕಗಳಲ್ಲಿ ಎರಡೂ ಸಿಕ್ಕಿರುವುದು ಕೊಡಗಿಗೇ. ನಿಸರ್ಗ ಸಂಪತ್ತು, ಪ್ರವಾಸಿ ತಾಣಗಳ ಸಂಖ್ಯೆ ಹೇರಳವಾಗಿದೆ. ನೂರಕ್ಕೂ ಹೆಚ್ಚಿನ ಪ್ರವಾಸಿತಾಣಗಳನ್ನು ಹೊಂದಿದ್ದು ವರ್ಷಂಪ್ರತಿ ಲಕ್ಷಾಂತರ ಜನರು ಕೊಡಗಿನ ಸೌಂದರ್ಯಗಳನ್ನು ಕಣ್ತುಂಬಿಕೊಳ್ಳುತ್ತಾರೆ. ದಕ್ಷಿಣ ಭಾರತದ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯನ್ನ ಹೊಂದಿರುವ ಜಿಲ್ಲೆ. ಕರ್ನಾಟಕ ಹಾಗೂ ಕೇರಳಗಳ ನಡುವೆ ೪೧೦೨ ಚದರ ಕಿಮಿಗಳಷ್ಟು ವ್ಯಾಪ್ತಿಯಲ್ಲಿ ಹರಡಿರುವ ಪುಟ್ಟ ಜಿಲ್ಲೆ.
ವಿಶೇಷ ಸಂಪ್ರದಾಯ, ವಿಶಿಷ್ಟ ಸಂಸ್ಕೃತಿ, ಆಚರಣೆಗಳನ್ನು ನಡೆಸಿಕೊಂಡು ಬರುತ್ತಿರುವ, ತಮ್ಮದೇ ಆದ ಭಾಷೆಯನ್ನೂ ಚಾಲ್ತಿಯಲ್ಲಿ ಇಟ್ಟುಕೊಂಡು ವಿವಿಧತೆಯ ನಡುವೆಯೂ ಏಕತೆಯನ್ನು ಪ್ರದರ್ಶಿಸುತ್ತಿರುವ ಜಿಲ್ಲೆ ಕೊಡಗು. ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಪ್ರತಿ ಕುಟುಂಬಗಳೂ ತಮ್ಮದನ್ನಾಗಿ ಮಾಡಿಕೊಂಡು, ಪ್ರತಿ ವರ್ಷ ಕೊಡಗಿನ ಕುಟುಂಬಗಳಲ್ಲೇ ನಡೆಸುತ್ತಿರುವ ಜಿಲ್ಲೆ. ಭಾರತ ಸ್ವತಂತ್ರಗೊಂಡ ನಂತರ ಇದುವರೆಗೂ ಕೊಡಗಿನ ೫೯ ಆಟಗಾರರು ಭಾರತ ಹಾಕಿ ತಂಡಲ್ಲಿ ಆಡಿದ್ದಾರೆ ಎಂದರೆ, ಜಿಲ್ಲೆಯಲ್ಲಿ ಹಾಕಿಯ ಕುರಿತು ಅದೆಷ್ಟು ಪ್ರೀತಿ ಇರಬಹುದು ಎನ್ನುವುದನ್ನು ನೀವೇ ಗಮನಿಸಿ. ಕೊಡಗಿನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಬಿಡಿ.
ಇತಿಹಾಸದ ಪುಟಗಳಲ್ಲಿ ಇಣುಕಿದಾಗ ಕೊಡಗಿನ ದುರಂತಗಳಲ್ಲಿ ಮೊಟ್ಟ ಮೊದಲು ನಿಲ್ಲುವುದು ಟಿಪ್ಪುವಿನ ದಾಳಿಯ ಸಂದರ್ಭದಲ್ಲಿ. ಕೊಡಗಿನ ವೀರರನ್ನು ಎದುರು ಹಾಕಿಕೊಂಡ ಟಿಪ್ಪು ಸುಲ್ತಾನ ಪದೇ ಪದೆ ಕೊಡವರ ಮೇಲೆ ಯುದ್ಧ ಮಾಡಿ, ಸಾಕಷ್ಟು ಸಾರಿ ಸೋತು, ಕೊನೆಗೊಮ್ಮೆ ಗೆದ್ದು, ಗೆದ್ದ ನಂತರ ಸಾಲು ಸಾಲು ಮಾರಣ ಹೋಮ ನಡೆಸಿದ್ದು, ಅದೆಷ್ಟೋ ಸ್ತ್ರೀಯರ ಮಾನಭಂಗ ಮಾಡಿದ್ದು, ಸಹಸ್ರಾರು ಜನರ ಶಿರಚ್ಛೇಧ ಮಾಡಿದ್ದು, ಸಹಸ್ರ ಸಂಖ್ಯೆಯ ವೀರರನ್ನು ಮತಾಂತರ ಮಾಡಿದ್ದು ಕಣ್ಣ ಮುಂದೆ ಇದೆ. ಕೊಡಗಿನ ದೇವಟ್ಟಿ ಪರಂಬು ಎಂಬಲ್ಲಿ ನಡೆದ ಕೊಡವರ ಹತ್ಯಾಕಾಂಡದಲ್ಲಿ ೪೦ ಸಾವಿರ ಜನರನ್ನು ಹತ್ಯೆ ಮಾಡಿದ್ದ ಘಟನೆಗಳು ಇಂದಿಗೂ ಕೊಡವರ ಮನಸ್ಸಿನಿಂದ ಮರೆತಿಲ್ಲ. ಆ ಸಂದರ್ಭದಲ್ಲಿ ಆ ನಂತರದಲ್ಲಿಯೂ ಕೊಡಗು ಎದುರಿಸಿದ್ದು ದುರಂತಗಳ ಸರಮಾಲೆಯನ್ನೇ.
ಕಾಡು, ಹಸಿರನ್ನೇ ಹಾಸು ಹೊದ್ದಿರುವ ಕೊಡಗು ಸ್ವತಂತ್ರ ಭಾರತದಲ್ಲಿಯೂ ಸಾಕಷ್ಟು ನೋವುಗಳು, ದುರಂತಗಳನ್ನೇ ಎದುರಿಸಿದೆ. ವಿದ್ಯುತ್ ಮಾರ್ಗಗಳಿಗಾಗಿ ಸಮೃದ್ಧ ಕಾಡನ್ನು ಕಳೆದುಕೊಂಡು, ಕೊನೆಗೊಮ್ಮೆ ಈ ಕಾಡಿನ ಸಂರಕ್ಷಣೆಗಾಗಿ ಹೋರಾಟಕ್ಕೆ ಇಳಿದ ಜಿಲ್ಲೆ ಕೊಡಗು. ದೊಡ್ಡ ದೊಡ್ಡ ಹೈಟೆನ್ಶನ್ ವಿದ್ಯುತ್ ಮಾರ್ಗಗಳಿಗಾಗಿ ಅದೆಷ್ಟೋ ಕೊಡವರು ತಮ್ಮ ಜಮೀನುಗಳನ್ನು, ಮನೆಗಳನ್ನು ಕಳೆದುಕೊಂಡಿದ್ದಾರೆ.
ಕೊಡವರನ್ನು ಹೆಚ್ಚು ಕಾಡಿರುವ ಸಮಸ್ಯೆಗಳಲ್ಲಿ ಕೇರಳದಿಂದ ಬರುವ ಮಾಪಿಳ್ಳೆಗಳ ವಲಸೆ ಕೂಡ ಒಂದು. ಈ ವಲಸೆಯಿಂದಲೇ ಜಿಲ್ಲೆಯಲ್ಲಿ ಮತಾಂತರ ಸಮಸ್ಯೆ ತೀವ್ರವಾಗಿದೆ. ಈ ಕಾರಣದಿಂದಲೇ ಕೊಡವಿನಿಂದಲೇ ಕೆಲವು ಆತಂಕಕಾರಿ ಸಂಘಟನೆಗಳೂ ಹುಟ್ಟಿಕೊಂಡು, ಕಾಡುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲಿ ನಿಷೇಧಗೊಂಡ ದೇಶ ವಿರೋಧದ ಸಂಘಟನೆಗಳು ಕೊಡಗಿನಲ್ಲಿ ಹೆಜ್ಜೆ ಊರಿದೆ.
ಇದೀಗ ಕೊಡಗಿನಲ್ಲಿ ರೈಲ್ವೆಯದೇ ಸದ್ದು. ಇದುವರೆಗೂ ರೈಲ್ವೆ ಮಾರ್ಗವೇ ಇಲ್ಲದ ಜಿಲ್ಲೆ ಎನ್ನುವ ಖ್ಯಾತಿ ಗಳಿಸಿಕೊಂಡಿದ್ದ ಕೊಡಗಿನಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾವನೆಗಳು ದಡ್ಡವಾಗಿದೆ. ರೈಲ್ವೆ ಮಾರ್ಗ ನಿರ್ಮಾಣ ಮಾಡಲು ಸಮೀಕ್ಷೆಗಳೂ ನಡೆದಿವೆ. ಮೊದಲು ಮಡಿಕೆರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಆದರೆ ಮಡಿಕೆರಿಯ ನಂತರ ಆ ರೈಲ್ವೆ ಸಂಪರ್ಕವನ್ನು ಕೇರಳದ ಕಣ್ಣೂರಿಗೆ ಜೋಡಿಸುವ ಹುನ್ನಾರವೂ ಇದ್ದು, ಈ ಮಾರ್ಗ ನಿರ್ಮಾಣದಿಂದ ಕೊಡಗಿಗೆ ಲಾಭವಾಗುವುದಕ್ಕಿಂತ ಜಾಸ್ತಿ ಕೇರಳಕ್ಕೇ ಆಗಲಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಈ ರೈಲ್ವೆ ಮಾರ್ಗಕ್ಕಾಗಿ ಇನ್ನೆಷ್ಟು ಅರಣ್ಯ ನಾಶವಾಆಗಬೇಕೋ? ಇನ್ನೆಷ್ಟು ಕೇರಳಿಗರ ವಲಸೆ ಕೊಡಗಿನ ಕಡೆ ಆಗಬೇಕೋ? ಈ ಕಾರಣದಿಂದಲೇ ಕೊಡಗಿನ ಜನರು ರೈಲ್ವೆ ಮಾರ್ಗವನ್ನು ಸ್ವಾಗತಿಸುವುದಕ್ಕಿಂತ ಹೆಚ್ಚಾಗಿ ವಿರೋಧಿಸುತ್ತಿದ್ದಾರೆ.
ಪ್ರವಾಸೋದ್ಯಮದಿಂದ ಬದುಕನ್ನು ಕಟ್ಟಿಕೊಂಡ ಜಿಲ್ಲೆ ಕೊಡಗು. ಈ ಪ್ರವಾಸೋದ್ಯಮದಿಂದಲೇ ಹಾನಿಗೂ ಜಿಲ್ಲೆ ಒಳಗಾಗಿದೆ. ಜಿಲ್ಲೆಯ ಧಾರಣಾ ಸಾಮರ್ಥ್ಯ ೬ ಲಕ್ಷ. ಆದರೆ ಪ್ರತಿ ವರ್ಷ ಜಿಲ್ಲೆಯ ಪ್ರವಾಸಿ ತಾಣಗಳಿಗಾಗಿ ಬೇರೆಡೆಯಿಂದ ಬರುವ ಪ್ರವಾಸಿಗರು ೬೦ ಲಕ್ಷಕ್ಕೂ ಅಧಿಕ. ಹೀಗೆ ಬಂದವರಂತೂ ಸುಮ್ಮನೆ ಬರುವುದಿಲ್ಲ. ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಪರಿಣಾಮವಾಗಿ ಕೊಡಗಿನ ಪ್ರವಾಸಿ ತಾಣಗಳು ತ್ಯಾಜ್ಯಗಳ ಬೀಡಾಗುತ್ತಿದೆ. ಕೊಡಗಿನ ಪ್ರವಾಸಿ ತಾಣಗಳ ದುಸ್ಥಿತಿಗೆ ಬೆಂಗಳೂರಿನ ಬುದ್ಧಿವಂತರ ಕೊಡುಗೆ ಬಹು ದೊಡ್ಡದಿದೆ.
ಇವೆಲ್ಲವುಗಳ ಜತೆಯಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಕೊಡಗಿನ ಸ್ಥಿತಿ. ಕೇರಳದ ಮೇಲೆ ಮುನಿಸಿಕೊಂಡ ವರುಣರಾಯ ಇದೀಗ ಕೊಡಗಿನ ಮೇಲೂ ಸಿಟ್ಟಾಗಿದ್ದಾನೆ. ಕಳೆದೊಂದು ವಾರದಿಂದ ಕೊಡಗಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಜತೆಗೆ ಗಾಆಳಿಯ ಅಬ್ಬರ ಕೂಡ ಕೊಡಗನ್ನು ಹೈರಾಣು ಮಾಡಿದೆ. ಗಾಳಿ, ಮಳೆ, ಪ್ರವಾಹದಿಂದಾಗಿ ಕೊಡಗು ಹೈರಾಣಾಗಿದೆ. ಕೊಡಗಿನ ಗುಡ್ಡಗಳು ನೋಡ ನೋಡುತ್ತಿದ್ದಂತೆಯೇ ಕುಸಿತಕ್ಕೊಳಗಾಗುತ್ತಿದೆ. ಮರ ಗಿಡಗಳು ಬುಡಮೇಲಾಗುತ್ತಿವೆ. ಉಕ್ಕೇರುತ್ತಿರುವ ನದಿಗಳು ಯಾವುದೇ ಬೇಧ-ಭಾವ ಮಾಡದೇ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿವೆ. ಸಹಸ್ರ ಮನೆಗಳು ನೆಲಕಚ್ಚಿವೆ. ರಸ್ತೆಗಳಂತೂ ನಾಮಾವಶೇಷಗೊಂಡಿವೆ. ಕೆಲವು ಊರುಗಳಂತೂ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಮಳೆ, ಭೂಕುಸಿತ, ಪ್ರವಾಹಗಳಿಂದ ನಾಪತ್ತೆಯಾದವರ ಸಂಕ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ.
ಕೊಡಗಿನಲ್ಲಿ ಈಗ ಎತ್ತ ನೋಡಿದರತ್ತ ನೀರು, ನೀರು, ಬರೀ ನೀರು ಎನ್ನುವ ಪರಿಸ್ಥಿತಿ ಉದ್ಭವವಾಗಿದೆ. ಕೆಂಪು, ಕಂದು ಬಣದ ನದಿಗಳು ರಕ್ಕಸ ಗಾತ್ರವನ್ನು ತಾಳಿ, ಮನೆ, ಜಮೀನುಗಳನ್ನು ಆಪೋಶನ ತೆಗೆದುಕೊಂಡು ಮುನ್ನುಗ್ಗುತ್ತಿವೆ. ಹೀಗೆ ಮುನ್ನುಗ್ಗುವ ಭರದಲ್ಲಿ ಎದುರು ಸಿಗುವ ರಸ್ತೆಗಳು, ಸೇತುವೆಗಳು, ವಾಹನಗಳು, ಮನುಷಷ್ಯರು ಹೀಗೆ ಎಲ್ಲವನ್ನೂ ನುಂಗುತ್ತಿವೆ. ಕೊಡಗಿನ ನಾಪೊಕ್ಲು, ಮಡಿಕೇರಿಯ ಸುತ್ತಮುತ್ತಲ ಎಲ್ಲ ಗ್ರಾಮಗಳು, ಕಾಲೂರು, ಕಗ್ಗೋಡು, ಪೊನ್ನಂಪೇಟೆ, ಕುಶಾನಗರ, ಕಕ್ಕಬ್ಬೆ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯ ಅಬ್ಬರ ತೀವ್ರವಾಗಿದೆ. ಕಾಳುಮೆಣಸು, ಕಾಫಿ ಸಂಪೂರ್ಣವಾಗಿ ನೆಲಕಚ್ಚಿದ್ದರೆ ಭತ್ತದ ಗದ್ದೆಗಳ ಪಾಡಂತೂ ಹೇಳುವುದೇ ಬೇಡ ಎನ್ನುವಂತಾಗಿದೆ. ಕೊಡಗಿನವರ ಪ್ರಕಾರ ಮುಂದಿನ ವರ್ಷ ಕಾಫಿ ಹಾಗೂ ಕಾಳುಮೆಣಸಿನ ಬೆಳೆ ತೆಗೆಯುವುದು ಕಷ್ಟ. ರೌದ್ರ ಮಳೆ ಕಾಫಿಯ ರೈತರ ಆದಾಯದ ಮೂಲವನ್ನು ಸಂಪೂರ್ಣವಾಗು ಕೊಚ್ಚಿಕೊಂಡು ಹೋಗಿದೆ. ಕಾವೇರಿ ನದಿಯ ಉಪನದಿಯಾಗಿರುವ (ಕಾವೇರಿ ನದಿಗೆ ಇರುವ ದೊಡ್ಡ ನೀರಿನ ಮೂಲ) ಲಕ್ಷ್ಮಣತೀರ್ಥ, ರಾಮತೀರ್ಥ, ಇತರ ಸಾವಿರಾತು ತೋಡುಗಳು ತುಂಬಿ ಹರಿಯುತ್ತಿದೆ. ಕೊಡಗಿಗೆ ಹೋಗುವ ಮಾರ್ಗಗಳೆಲ್ಲ ಬಂದಾಗಿದೆ. ಹಲವು ಕಡೆಗಳಲ್ಲಿ ಸೇತುವೆ, ರಸ್ತೆಗಳು ಕೊಚ್ಚಿಕೊಂಡು ಹೋಗಿದೆ. ವಿದ್ಯುತ್, ದೂರವಾಣಿ, ಅಂತರ್ಜಾಲಗಳೆಲ್ಲ ಕಾರ್ಯ ನಿಲ್ಲಿಸಿ ವಾರಗಳೇ ಸಂದಿವೆ. ಮಳೆರಾಯನ ಮುನಿಸು ಇನ್ನೂ ತಗ್ಗಿಲ್ಲ.
ಪ್ರಾಕೃತಿಕ ವಿಕೋಪಗಳಲ್ಲಿ ನಲುಗಿರುವ ಕೊಡಗಿಗೆ ಪ್ರತಿಯೊಬ್ಬರ ಸಹಾಯವೂ ಅಗತ್ಯವಿದೆ. ವಾರಾಂತ್ಯದಲ್ಲೋ, ರಜೆಯ ಸಂದರ್ಭದಲ್ಲೋ ದಿನಕಳೆದು, ಸಂಭ್ರಮ, ಸಂತಸವನ್ನು ಆಚರಿಸಲು ಕೊಡಗಿನ ಪ್ರವಾಸಿ ತಾಣಗಳಿಗೆ ಹೋದವರು ಇದೀಗ ತಮ್ಮ ಜವಾಬ್ದಾರಿಯನ್ನು ಅರಿತು, ಕೊಡಗಿಗೆ ಸಹಾಯ ಮಾಡುವ ಅಗತ್ಯವಿದೆ. ಮಂದಾಲಪಟ್ಟಿ, ಇರ್ಪು ಜಲಪಾತ, ಅಬ್ಬಿ ಮುಂತಾದ ಕಡೆಗಳಿಗೆ ಪ್ರವಾಸಕ್ಕೆ ಹೋಗಿ ಕೇಕೆ ಹೊಡೆದ ಪ್ರವಾಸಿಗರೆಲ್ಲ ಕೊಡಗಿನ ಮಳೆಯಲ್ಲಿ ಬದುಕು ಕಳೆದುಕೊಂಡ ನತದೃಷ್ಟರ ಬೆನ್ನಿಗೆ ನಿಲ್ಲುವ ಜರೂರತ್ತಿದೆ. ಬೆಂಗಳೂರಿಗರು ಸೇರಿದಂತೆ ಕೋಟ್ಯಂತರ ಜನರು ಕುಡಿಯುವ ಕಾವೇರಿ ನದಿಯ ನೀರಿನ ಮೂಲ ಕೊಡಗು. ಇಂತಹ ಕೊಡಗು ಇದೀಗ ಪ್ರಕೃತಿಯ ವೈಪರಿತ್ಯಕ್ಕೆ ಸಿಲುಕಿ ವಿಲಿ ವಿಲಿ ಒದ್ದಾಟ ನಡೆಸುತ್ತಿದೆ. ನಾವು ಕುಡಿಯುವ ನೀರಿನ ನೆಲದ ಋಣ ತೀರಿಸಲು ಇದೊಂದು ಸದವಕಾಶ.
ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬೀಳುವಂತಹ ಪರಿಸ್ಥಿತಿಯಲ್ಲಿ ಕೊಡಗಿನ ವೀರರ ಕೈಹಿಡಿಯುವ ಮಹತ್ತರ ಕಾರ್ಯವನ್ನು ಕೈಗೊಳ್ಳಬೇಕಿದೆ. ವರುಣನ ಬಾಧೆಗೆ ಬಲಿಯಾದವರು ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಲು, ಹೊಸ ಜೀವನವನ್ನು ಮತ್ತೆ ಆರಂಭಿಸಲು, ಕೈಲಾದ ಸಹಾಯವನ್ನು ಒದಗಿಸುವ ಹೊಣೆಗಾರಿಕೆ ಇದೆ. ಪ್ರವಾಸಿ ತಾಣಕ್ಕೆ ಹೋಗಿ ಸಂತೋಷವನ್ನು ಪಡುವಾಗ ಇರುವ ನಮ್ಮ ಉತ್ಸಾಹ, ಆಸಕ್ತಿಯನ್ನು ಇಂತಹ ಅನಿವಾರ್ಯ ಸಂದರ್ಭದಲ್ಲೂ ತೋರಿಸಬೇಕಾದ ಅಗತ್ಯವಿದೆ. ಆಹಾರವನ್ನೋ, ಹಣವನ್ನೋ ಅಥವಾ ಅಗತ್ಯ ಸಾಮಗ್ರಿಗಳನ್ನೋ ಸರ್ಕಾರದ ಮೂಲಕವೋ ಅಥವಾ, ಕೊಡಗಿನ ಪುನರ್ ನಿರ್ಮಾಣಕ್ಕಾಗಿ ಈಗಾಗಲೇ ಮೊದಲ ಹೆಜ್ಜೆ ಇಟ್ಟಿರುವ ಸ್ವಯಂಸೇವಕರ ತಂಡಗಳಿಗೋ ನೀಡುವ ಮೂಲಕ ಕೊಡಗಿಗೆ ಯತ್ಕಿಂಚಿತ್ ಸಹಾಯವನ್ನಾದರೂ ನಾವು ಮಾಡಬೇಕಿದೆ.
ಕೊಡವರು ದುರಂತಗಳನ್ನು ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೋ, ಅದೇ ರೀತಿ ಸಹಾಯ ಮಾಡಿದವರನ್ನು, ಬದುಕು ಕಟ್ಟಿಕೊಟ್ಟವರನ್ನು, ಬದುಕಿಗೆ ಆಸರೆಯಾದವರನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡು, ಆರಾಧಿಸುತ್ತಾರೆ. ಪದೇ ಪದೆ ದುರಂತಕ್ಕೆ ಈಡಾಗುತ್ತಿರುವ ನತದೃಷ್ಟ ಜಿಲ್ಲೆಯ ಬೆನ್ನಿಗೆ ನಾವು ನಿಲ್ಲೋಣವೇ? ಕೊಡಗಿನ ವೀರರ ಸಹಾಯಕ್ಕೆ ಕೈಜೋಡಿಸೋಣವೇ? ಇಂತಹ ಸಂದರ್ಭದಲ್ಲಿ ಬನ್ನಿ ಕೊಡವರ ಜತೆ ನಿಲ್ಲೋಣ. ಕೊಡವರಿಗೆ ಕೈಲಾದ ಸಹಾಯ ಮಾಡೋಣ. ಕೊಡಗಿನ ಜನಸ್ನೇಹಿಗಳಿಗೆ ಸಹಾಯ ಮಾಡುವ ಮೂಲಕ ಅವರ ಮನಸ್ಸಿನಲ್ಲಿ ಶಾಸ್ವತ ಸ್ಥಾನ ಪಡೆಯೋಣ.





Saturday, August 18, 2018

ಭಾರತ ಕ್ರಿಕೆಟ್‌ನ ಭವ್ಯ ಪರಂಪರೆಯ ಕೊಂಡಿ ಅಜಿತ್ ವಾಡೇಕರ್

ಎಂಟು ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದ ಆಟಗಾರನಾಗಿ, ಅಗ್ರೆಸ್ಸಿವ್ ಆಟದಿಂದ ಎದುರಾಳಿಗಳ ನಿದ್ದೆಗೆಡಿಸಿದ್ದ ಹೆಸರಾಂತ ಕ್ರಿಕೆಟ್ ಆಟಗಾರ ಅಜಿತ್ ವಾಡೇಕರ್ ನಿಧನರಾಗಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಉತ್ತಮ ಪ್ರದರ್ಶನಕ್ಕೆ ನಾಂದಿ ಹಾಕಿದ ಆಟಗಾರ ಅಜಿತ್ ವಾಡೇಕರ್.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ತಮ್ಮ 77ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಕ್ರಿಕೆಟ್ ಜೀವನದ ರೋಚಕತೆಯಿಂದ ಕೂಡಿದೆ.
1941ರ ಏಪ್ರಿಲ್ 1ರಂದು ಜನಿಸಿದ್ದ ಅಜಿತ್ ಲಕ್ಷ್ಮಣ ವಾಡೇಕರ್ ತಮ್ಮ 17ನೇ ವಯಸ್ಸಿನಲ್ಲಿ ಅಂದರೆ 1958ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ನಂತರ ನಾಲ್ಕೇ ವರ್ಷಗಳಲ್ಲಿ ಭಾರತ ತಂಡದ ಆಸ್ತಿಯಾದರು. ಬಾಲ್ಯದ ದಿನಗಳಲ್ಲಿ ಅಜಿತ್ ಗಣತ ವಿಭಾಗವನ್ನು ಆಯ್ಕೆ ಮಾಡಿಕೊಂಡು, ಇಂಜಿನಿಯರ್ ಆಗಲಿ ಎನ್ನುವುದು ಅಜಿತ್ ತಂದೆ ಲಕ್ಷ್ಮಣ್‌ರ ಕನಸಾಗಿತ್ತು. ಆದರೆ ಕ್ರಿಕೆಟ್ ಕಡೆಗೆ ಒಲವು ಮೂಡಿಸಿಕೊಂಡಿದ್ದ ಅಜಿತ್, ಕ್ರಿಕೆಟ್‌ನಲ್ಲಿ ಪೂರ್ಣಕಾಲಿಕವಾಗಿ ತೊಡಗಿಸಿಕೊಂಡರು.
ಸೋಟಕ ಎಡಗೈ ಬ್ಯಾಟ್ಸಮನ್ ಆಗಿದ್ದ ವಾಡೇಕರ್ ಅವರು 1971ರಲ್ಲಿ ವೆಸ್ಟ್  ಇಂಡೀಸ್ ಮತ್ತು ಇಂಗ್ಲೆಡ್‌ನಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ಐತಿಹಾಸಿಕ ಗೆಲುವು  ಸಾಧಿಸಲು ಕಾರಣರಾಗಿದ್ದರು. 1966ರಿಂದ 1974ರವರೆಗೆ 8 ವರ್ಷಗಳ ಕಾಲ ಭಾರತ ತಂಡದ ಆಟಗಾರನಾಗಿ, ನಾಯಕನಾಗಿ ಮುನ್ನಡೆಸಿದರು.
ಭಾರತ ತಂಡ ಕಂಡ ಅತ್ಯುತ್ತಮ ಸ್ಲಿಪ್ ಫಿಲ್ಡರ್ ಎನ್ನುವ ಹೆಗ್ಗಳಿಕೆ ಕೂಡ ಇವರಿಗಿದೆ. ಪ್ರಥಮ ಸ್ಲಿಪ್‌ನಲ್ಲಿ ಫೀಲ್ಡಿಿಂಗ್ ಮಾಡುತ್ತಿದ್ದ ವಾಡೇಕರ್ ಆಕರ್ಷಕ ಕ್ಯಾಚುಗಳನ್ನು ಹಿಡಿಯುವ ಮೂಲಕ ಹೆಸರಾಗಿದ್ದರು.
ಬಾಂಬೆ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾದ ಅಜಿತ್ ವಾಡೇಕರ್ 1971ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾದರು. ಇವರ ನೇತೃತ್ವದ ಟೀಂ ಇಂಡಿಯಾ 1971ರಲ್ಲಿ ಇಂಗ್ಲೆೆಂಡ್ ವಿರುದ್ಧದ 3 ಟೆಸ್ಟ್  ಪಂದ್ಯಗಳ ಸರಣಿಯನ್ನ 1-0 ಅಂತರದಲ್ಲಿ ಕೈವಶ ಮಾಡಿಕೊಂಡಿತು. ಇದಾದ ಬಳಿಕ ಅದೇ ವರ್ಷ ವೆಸ್ಟ್  ಇಂಡೀಸ್ ವಿರುದ್ಧ ಕೂಡ ಟೆಸ್ಟ್  ಸರಣಿಯಲ್ಲಿ ಗೆದ್ದು ಜಯ ಗಳಿಸಿದ್ದರು.
ಇದಾದ ಬಳಿಕೆ 1972-73ರ ಅವಯಲ್ಲಿ ಇವರ ನೇತೃತ್ವದ ಟೀಂ ಇಂಡಿಯಾ ತಂಡ  ಇಂಗ್ಲೆೆಂಡ್ ತಂಡವನ್ನು  2-1 ಅಂತರದಲ್ಲಿ ಸೋಲಿಸಿ ಸರಣಿ ಜಯಿಸಿತ್ತು. ಈ ಮೂಲಕ ವಿದೇಶಿ ನೆಲದಲ್ಲಿ ಮೂರು ಬಾರಿ ಸರಣಿ ಗೆದ್ದ ಯಶಸ್ವಿ ನಾಯಕನಾಗಿ ವಾಡೇಕರ್ ಗುರುತಿಸಿಕೊಂಡಿದ್ದರು. ಸತತ ಏಳು ವರ್ಷಗಳ ಕಾಲ ಟೀಂ ಇಂಡಿಯಾ ಬ್ಯಾಟಿಂಗ್ ಶಕ್ತಿಯಾಗಿ ಗುರುತಿಸಿಕೊಂಡಿದ್ದ ಇವರು, 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದರು.
ಇವರ ನಾಯಕತ್ವದ ಅಡಿಯಲ್ಲಿ ಸುನೀಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ಫಾರೂಕ್ ಇಂಜಿನಿಯರ್, ಭಾರತದ ಸ್ಪಿನ್ ಅಸಗಳಾದ ಬಿಶನ್‌ಸಿಂಗ್ ಬೇಡಿ, ಇಎಎಸ್ ಪ್ರಸನ್ನ, ಬಿ. ಚಂದ್ರಶೇಖರ್, ಎಸ್. ವೆಂಕಟರಾಘವನ್ ಅವರು ಆಟವಾಡಿದ್ದಾಾರೆ. ಅಜಿತ್ ವಾಡೇಕರ್ ನಿಧನದಿಂದ ಭಾರತ ಕ್ರಿಕೆಟ್ ಇತಿಹಾಸದ ಭವ್ಯ ಪರಂಪರೆಯ ಕೊಂಡಿಯೊಂದು ಕಳಚಿದಂತಾಗಿದೆ.

ಪಾದಾರ್ಪಣೆ, ಸಾ‘ನೆ
1966ರ ಡಿಸೆಂಬರ್ 13ರಂದು ವೆಸ್ಟ್  ಇಂಡೀಸ್ ವಿರುದ್ಧ ಟೀಂ ಇಂಡಿಯಾ ಪರ ಮುಂಬೈನಲ್ಲಿ ಪಾದಾರ್ಪಣೆ ಮಾಡದರು. 1974ರ ಜುಲೈ 13ರಂದು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇವರು ಟೆಸ್ಟ್  ಕ್ರಿಕೆಟ್‌ನಲ್ಲಿ 2113 ರನ್ ಗಳಿಸಿದ್ದರು. ಇದರಲ್ಲಿ 1 ಶತಕ, 14 ಅರ್ಧ ಶತಕಗಳಿದ್ದವು. 143ರನ್ ವಾಡೇಕರ್‌ರ ಸರ್ವಾಧಿಕ ಸ್ಕೋರ್. 46 ಕ್ಯಾಚ್‌ಗಳನ್ನು ಹಿಡಿದು ಸಾಧನೆ ಮಾಡಿದ್ದರು. ಆದರೆ ಇವರು ಆಡಿದ್ದು ಕೇವಲ ಎರಡೇ ಎರಡು ಏಕದಿನ ಪಂದ್ಯ. ಈ ಎರಡು ಪಂದ್ಯಗಳಲ್ಲಿ ಗಳಿಸಿದ ಒಟ್ಟೂ ರನ್ 73.
237 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅಜಿತ್ ವಾಡೇಕರ್ 15,380ರನ್ ಭಾರಿಸಿದ್ದಾಾರೆ. ಇವರಿಗೆ ಭಾರತ ಸರ್ಕಾರ 1967ರಲ್ಲಿ ಅರ್ಜುನ್ ಪ್ರಶಸ್ತಿ ಹಾಗೂ 1972ರಲ್ಲಿ  ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇತರೆ ಕಾರ್ಯಗಳು
1990ರ ವೇಳೆಗ ಅಜಿತ್ ವಾಡೇಕರ್ ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು. ಅಲ್ಲದೇ 1990ರ ದಶಕದಲ್ಲಿ ಭಾರತ ಕ್ರಿಕೆಟ್ ತಂಡದ ತರಬೇತುದಾರನಾಗಿ, ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ  ಕಾರ್ಯ ನಿರ್ವಹಣೆ ಮಾಡಿದ್ದಾಾರೆ. ಟೆಸ್‌ಟ್‌ ತಂಡದ ಆಟಗಾರನಾಗಿ, ನಾಯಕನಾಗಿ, ತರಬೇತುದಾರ ಹಾಗೂ ಮ್ಯಾನೇಜರ್ ಆಗಿ ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷನಾಗಿ ಕೆಲಸ ಮಾಡಿದ ಕೆಲವೇ ಕೆಲವು ಆಟಗಾರರಲ್ಲಿ ಅಜಿತ್ ವಾಡೇಕರ್ ಒಬ್ಬರು. 

ಯುವಕರ ಸ್ವಾತಂತ್ರ್ಯ ಹರಣ ಆಗುತ್ತಿರುವುದೆಲ್ಲಿ?


ನಮ್ಮ ಹಿರಿಯರ ತ್ಯಾಗ, ಬಲಿದಾನ, ಶ್ರಮದ ಪ್ರತಿಫಲವಾಗಿ ಭಾರತಕ್ಕೆ 1947ರಲ್ಲೇ ಸ್ವಾತಂತ್ರ್ಯ ಸಿಕ್ಕಿದೆ. ನಮಗೆ ಸಿಕ್ಕ ಸ್ವಾತಂತ್ರ್ಯ ಸಂಭ್ರಮಕ್ಕೆ 72 ವಸಂತಗಳೇ ಕಳೆದಿವೆ. ಸ್ವಾತಂತ್ರ್ಯವೇನೋ ಸಿಕ್ಕಾಯಿತು. ಆದರೆ ಇಂದಿನ ಯುವ ಶಕ್ತಿ ಅದನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳುತ್ತಿದೆಯಾ? ಹಿರಿಯರ ತ್ಯಾಗ, ಬಲಿದಾನ, ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಯುವ ಜನತೆ ನೀಡುತ್ತಿದೆಯಾ? ನೂರಾರು ವರ್ಷಗಳ ಹೋರಾಟದಿಂದಾಗಿ ಸಿಕ್ಕ ಸ್ವಾತಂತ್ರ್ಯ ದಿನಂಪ್ರತಿ ಕಳೆದು ಹೋಗುತ್ತಿದೆಯಾ? ಹೌದು. ದೈನಂದಿನ ಹಲವು ಅನಗತ್ಯ ಕಾರ್ಯಗಳಿಂದಲೇ ಸಿಕ್ಕ ಸ್ವಾತಂತ್ರ್ಯ ಕಳೆದು ಹೋಗುತ್ತಿದೆ. ಸ್ವಾತಂತ್ರ್ಯದ ಶ್ರಮವನ್ನು ಯುವ ಜನತೆ ಹೇಗೆಲ್ಲ ಹಾಳು ಮಾಡುತ್ತಿದೆ? ಆಧುನಿಕ ಸ್ವಾತಂತ್ರ ಹರಣದ ಐದು ಅಂಶಗಳು ಇಲ್ಲಿದೆ ನೋಡಿ

೧)• ಇಂದಿನ ಯುವ ಜನತೆ ಮೊಬೈಲ್ ದಾಸರಾಗಿ ಬಿಟ್ಟಿದ್ದಾಾರೆ. ಒಂದೇ ಒಂದು ಕ್ಷಣವೂ ಕೂಡ ಮೊಬೈಲ್ ಬಿಟ್ಟಿರಲಾರರು ಎನ್ನುವಂತಹ ಸಮಯ ಬಂದಿದೆ. ಸಾಮಾಜಿಕ ಜಾಲತಾಣಗಳು ಯುವಕರ ಸ್ವಾತಂತ್ರ್ಯವನ್ನು ಬಲಿ ತೆಗೆದುಕೊಂಡಿದೆ. ಯಾವಾಗ, ಯಾರ ಕೈಲಿ ನೋಡಿದರೂ ಮೊಬೈಲ್ ಮಾತ್ರ ಎನ್ನುವಂತಾಗಿದೆ. ಅಂಗೈಲಿ ಅರಮನೆಯಂತಿರುವ ಮೊಬೈಲ್ ಸದ್ದಿಲ್ಲದೇ ಸ್ವಾತಂತ್ರವನ್ನು ಕಿತ್ತುಕೊಂಡಿದೆ.

೨) • ಹಣವಿಲ್ಲದೇ ಯಾವುದೂ ಇಲ್ಲ. ಬದುಕಿಗೆ ಹಣವೇ ಮುಖ್ಯ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಹಣಕ್ಕಾಗಿ ಏನು ಬೇಕಾದರೂ ಮಾಡುತ್ತೇವೆ ಎನ್ನುವಂತಹ ಸಂದರ್ಭ ಎದುರಾಗಿದೆ. ಹಣ ಸಿಗುತ್ತದೆ ಎಂದಾದರೆ ಎಲ್ಲವನ್ನೂ ಕಳೆದುಕೊಳ್ಳಲು ಸಿದ್ಧ ಎನ್ನುವಂತಾಗಿದೆ. ಹಣವೂ ಸ್ವಾತಂತ್ರಹರಣ ಮಾಡಿದೆ.

೩) ಅವಕಾಶಗಳು ಯಾರಿಗೆ ಬೇಕಿಲ್ಲ ಹೇಳೀ? ಸುಂದರ ಬದುಕು ಕಟ್ಟಿಕೊಳ್ಳಲು ಅವಕಾಶ ಬಹು ಅತ್ಯಗತ್ಯ. ಅವಕಾಶ ತಾನಾಗಿಯೇ ಬರಲಿ ಎಂದು ಯಾರೊಬ್ಬರೂ ಕಾದು ಕುಳಿತುಕೊಳ್ಳಲು ಸಿದ್ಧವಿಲ್ಲ. ಅವಕಾಶಕ್ಕಾಗಿ ತಮ್ಮ ಸ್ವಾಭಿಮಾನವನ್ನೇ ಅಡವಿಟ್ಟು ಬದುಕುವಂತಹ ಪ್ರಸಂಗ ಎದುರಾಗಿದೆ. ಅವಕಾಶ ಸಿಗುತ್ತದೆ ಎಂದಾದರೆ ಸ್ವಾಭಿಮಾನ ಹಾಳಾಗಲಿ ಬಿಡಿ ಎನ್ನುವವರು ಹೆಚ್ಚುತ್ತಿದ್ದಾಾರೆ. ಸ್ವಾಾಭಿಮಾನ ಕಳೆದುಕೊಂಡರೆ ಸ್ವಾತಂತ್ರ ಕಳೆದುಕೊಂಡಂತೇ.

೪)• ಬದುಕುವುದಕ್ಕಾಾಗಿ ಉದ್ಯೋಗ ಬೇಕೇಬೇಕು. ಉದ್ಯೋಗ ಮಾಡುವ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಮರ್ಜಿಗೆ ಸಿಲುಕಲೇಬೇಕು ಎನ್ನುವಂತಾಗಿದೆ. ಸ್ವತಂತ್ರನಡೆಗೆ ಅವಕಾಶವೇ ಇಲ್ಲ ಎನ್ನುವಂತಾಗಿದೆ. ಹಿರಿಯ ಅಧಿಕಾರಿಗಳು ಹೇಳಿದಂತೆ ಮಾಡಬೇಕು, ಹೇಳಿದಂತೆ ಕೇಳಬೇಕು. ಅವರು ಹೇಳಿದ್ದು ಬಿಟ್ಟು ಸ್ವತಂತ್ರ ಆಲೋಚನೆ ಕೈಗೊಂಡರೆ ವೃತ್ತಿಗೆ ಧಕ್ಕೆ ಬರಬಹುದು. ಈ ಮೂಲಕ ಸ್ವಾತಂತ್ರ ಸದ್ದಿಲ್ಲದೇ ಕಳೆದುಹೋಗುತ್ತಿದೆ.

೫)• ಸಾಮಾಜಿಕ ಜಾಲತಾಣಗಳ ಪರಿಣಾಮದಿಂದ ಹೋರಾಟದ ಮನೋಭಾವವನ್ನೇ ಯುವ ಜನತೆ ಕಳೆದುಕೊಳ್ಳುತ್ತಿದೆ. ಯಾವುದೇ ಹೋರಾಟ ಕೈಗೊಳ್ಳಬೇಕಾದಲ್ಲಿ ಅದು ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತ ಎಂಬಂತಾಗಿದೆ. ಲೈಕ್ ಒತ್ತಿ, ಶೇರ್ ಮಾಡುವ ಮೂಲಕ ಹೋರಾಟಕ್ಕೆ, ಹರತಾಳಕ್ಕೆ ತಮ್ಮ ಕೊಡುಗೆ ಮುಗಿಯಿತು ಎಂಬಂತೆ ವರ್ತಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಸ್ವಾತಂತ್ರವನ್ನು ಇನ್ನೊಮ್ಮೆ ನಾವು ವಿದೇಶಗಳ ಕೈಗೆ ಕೊಟ್ಟು ಬಿಟ್ಟಿದ್ದೇವೆ. ಅದರಿಂದ ಹೊರಬರಲು ಸಾಧ್ಯವಾಗದೇ ಒದ್ದಾಡುತ್ತಿದ್ದೇವೆ.