Thursday, October 19, 2017

ಮುಕ್ತಿ ವಾಹಿನಿ

ನಗುವವರೆಂದೂ ನನ್ನ ಜೊತೆ
ಪಯಣಿಸುವುದಿಲ್ಲ
ಕೇಕೆ ಕಲರವಗಳ ಸದ್ದು
ನನ್ನೊಳಿಲ್ಲ|

ಕೆಲವೊಮ್ಮೆ ಒಬ್ಬಂಟಿ
ಆಗಾಗ ಜಂಟಿ
ಬಂಧುಬಾಂಧವರು ಸುತ್ತ
ಬತ್ತದಂತ ಅಳುವೇ
ಸುತ್ತಮುತ್ತ |

ಬರುವವರಲ್ಲಿ ಮುಗಿಯದ
ಕಣ್ಣೀರು
ಬಿಕ್ಕುತ್ತ ಸಾಗುವವರೇ ಎಲ್ಲರೂ,
ಕಿವಿ ಗಡಚಿಕ್ಕಿದೆ
ತಮಟೆಯ ಸದ್ದು
ಯಮ ಸನಿಹಕೆ ಬಂದರೂ
ಅವನೆದೆಗೂ ಗುದ್ದು |

ಮನೆಯಿಂದ ಮಸಣ
ನನ್ನ ಏಕೈಕ ಮಾರ್ಗ
ನಡುವೆ ಪ್ರತಿಧ್ವನಿಸುವುದು
ಗೋವಿಂದ...ಗೋವಿಂದಾ..
ರಾಮ ನಾಮ ಸತ್ಯ ಹೇ...|

ನನಗೂ ನಗುವ
ಕೇಳುವ ಆಸೆಯಿದೆ
ಪುಟ್ಟ ಮಗುವ ಅಳುವ
ಹೊಸಹುಟ್ಟಿನ ಕೇಕೆಯ
ಕೇಳುವ ಆಸೆ ಹೆಚ್ಚಿದೆ |

ನಾನು ಮುಕ್ತಿ ವಾಹಿನಿ
ನನಗಿದೆ ಕರ್ತವ್ಯ
ಸತ್ತವರ ಹೊತ್ತೊಯ್ಯುವ
ಕೈಂಕರ್ಯ ನನ್ನದು
ಹುಟ್ಟುವವರ ಕರೆದೊಯ್ಯುವ
ಕನಸು ಕಾಣುವ ಅರ್ಹತೆಯೆನಗಿಲ್ಲ |

ಆದರೂ
ಕನಸು ಕಾಣುತ್ತೇನೆ ನಾನು
ಸತ್ತವರ ಹೊತ್ತೊಯ್ಯುವ
ಕಾರ್ಯದ ನಡುವೆಯೂ
ಹೊಸ ಹುಟ್ಟಿನ,
ಮಗುವಿನ ಅಳುವಿಗಾಗಿ |

ಅತ್ತಿತ್ತ ತುಯ್ದಾಡಿ
ತೊಟ್ಟಿಲಾಗುತ್ತೇನೆ ||


===================

(ಈ ಕವಿತೆಯನ್ನು ಬರೆದಿರುವುದು ಅಕ್ಟೋಬರ್ ೧೮, ೨೦೧೭ರಂದು ದಂಟಕಲ್ಲಿನಲ್ಲಿ)

Wednesday, September 27, 2017

ಮೋಹಿನಿಯಾಗಿ ಬರುತ್ತಿದ್ದಾಳೆ ಸಿದ್ದಾಪುರದ ಭಾರತಿ

ಈಕೆ ನಮ್ಮದೇ ಸಿದ್ದಾಪುರದ ಹವ್ಯಕರ ಹುಡುಗಿ. ಅಭಿನಯ, ನೃತ್ಯ, ಯೋಗಾಭ್ಯಾಸದಲ್ಲಿ ಎತ್ತಿದ ಕೈ. ಕಾಲೇಜು ದಿನಗಳಲ್ಲಿಯೇ ಅತ್ಯುತ್ತಮ ನಟಿ ಎಂದು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿಕೊಂಡಾಕೆ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಕನಸು ಹಾಗೂ ಆದರ್ಶಗಳನ್ನು ಮನಸ್ಸಿನಲ್ಲಿ ತುಂಬಿಕೊಂಡಾಕೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾರೇ ನೀ ಮೋಹಿನಿ ಧಾರವಾಹಿಯಲ್ಲಿ ಈಕೆಯದು ಮೋಹಿನಿಯ ಪಾತ್ರ. ಮೊದಲ ಧಾರಾವಾಹಿಯೇಲ್ಲಿಯೇ ಸಾಕಷ್ಟು ಸ್ಟ್ರಾಂಗ್ ಹಾಗೂ ಕಠಿಣ ಪಾತ್ರ ನಿರ್ವಹಣೆಯ ಹೊಣೆ ಈಕೆಯ ಹೆಗಲ ಮೇಲಿದೆ. ಧಾರಾವಾಹಿ ಲೋಕಕ್ಕೆ ಕಾಲಿಟ್ಟ ನಮ್ಮೂರ ಹುಡುಗಿಯನ್ನು ಬೆಂಬಲಿಸೋಣ ಬನ್ನಿ..

ಕಣ್ಣಿನಲ್ಲಿ ಅಗಾಧವಾದ ಸಾಧನೆಯ ಕನಸು. ಮನಸ್ಸಿನಲ್ಲಿ ಕಾರ್ಮಿಕರಿಗೆ, ಸಾಮಾಜಿಕವಾಗಿ ಸೌಲಭ್ಯಗಳನ್ನು ಒದಗಿಸುವ ತುಡಿತ. ಕರಗತವಾಗಿರುವ ಅಭಿನಯ ಕಲೆ. ಅಗಾಧವಾದ ಪ್ರತಿಭೆ. ಇವೆಲ್ಲವನ್ನೂ ಇಟ್ಟುಕೊಂಡು ಧಾರವಾಹಿ ಲೋಕಕ್ಕೆ ಕಾಲಿಟ್ಟಿದ್ದಾಳೆ ಭಾರತಿ ಹೆಗಡೆ. ಜೀ ಕನ್ನಡ ವಾಹಿನಿಯಲ್ಲಿ ಆರಂಭಗೊಂಡಿರುವ ಯಾರೇ ನೀ ಮೋಹಿನಿ ಧಾರವಾಹಿಯಲ್ಲಿ ಮೋಹಿನಿ ಪಾತ್ರವನ್ನು ಹಾಕಿರುವ ಭಾರತಿ ಹೆಗಡೆ ಈಗಾಗಲೇ ಬಿತ್ತರವಾಗಿರುವ ಧಾರವಾಹಿ ಟ್ರೇಲರ್ಗಳಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾಳೆ. ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ ಭಾರತಿ ಅವರ ಕನಸ್ಸು ದೊಡ್ಡದಿದೆ. ಹೊಸ ಆಕಾಂಕ್ಷೆಗಳೊಂದಿಗೆ ಧಾರವಾಹಿ ಲೋಕಕ್ಕೆ ಕಾಲಿಟ್ಟಿರರುವ ಭಾರತಿ ಹೆಗಡೆಯವರುಮಾತಿಗೆ ಸಿಕ್ಕಾಗ ತಮ್ಮ ಕುರಿತು, ಆಸೆ, ಆಕಾಂಕ್ಷೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

* ನಿಮ್ಮ ಊರು, ನಿಮ್ಮ ಬಗ್ಗೆ, ಕುಟುಂಬದವರ ಬಗ್ಗೆ ಹೇಳಿ
ನನ್ನ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ನಮ್ಮದು ಕೃಷಿ ಕುಟುಂಬ. ಅಪ್ಪ ಕೃಷಿಕರು. ತಾಯಿ ಗೃಹಿಣಿ. ಅಣ್ಣ ಕೂಡ ಕೃಷಿಕರು. ಪ್ರಾಥಮಿಕ ಶಾಲೆಯ ಅಭ್ಯಾಸವನ್ನು ನಾನು ಊರಿನಲ್ಲಿಯೇ ಮಾಡಿದ್ದೇನೆ. ಉನ್ನತ ಶಿಕ್ಷಣ ಬೆಂಗಳೂರಿನಲ್ಲಿ ಕೈಗೊಂಡಿದ್ದೇನೆ. ಬಿಎ ಪದವಿಯನ್ನು ಬೆಂಗಳೂರಿನ ಅಮ್ಮಣ್ಣಿ ಕಾಲೇಜಿನಲ್ಲಿ ಮಾಡಿರುವ ನಾನು, ಎಂಎಸ್ಡಬ್ಲೂವನ್ನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಕೈಗೊಂಡಿದ್ದೇನೆ. ಇನ್ನೂ ಹೆಚ್ಚಿನ ಓದಿನ ಕನಸು ಇದೆ. ಅಭಿನಯದ ಜೊತೆಗೆ ಓದನ್ನು ಮುಂದುವರಿಸುತ್ತಿದ್ದೇನೆ.

* ನಿಮ್ಮ ಅಭಿನಯ, ಆಸಕ್ತಿಗಳ ಕುರಿತು ಹೇಳಿ..
ನನಗೆ ಚಿಕ್ಕಂದಿನಿಂದ ನೃತ್ಯ, ನಟನೆ, ಸಂಗೀತದಲ್ಲಿ ಆಸಕ್ತಿ. ನಾನು ಆಕ್ಟಿಂಗ್ಗೆ ವಿಶೇಷ ತರಬೇತಿಯನ್ನೇನೂ ಪಡೆದುಕೊಂಡಿಲ್ಲ. ಚಿಕ್ಕಂದಿನಲ್ಲಿ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಆಗೆಲ್ಲ ಬಹುಮಾನಗಳು ಬಂದಿವೆ. ನಂತರ ಅದನ್ನೇ ಸ್ವಲ್ಪ ಮಾರ್ಪಡಿಸಿಕೊಂಡೆ. ನಾನು ಭರತನಾಟ್ಯವನ್ನು ಕಲಿತಿದ್ದೇನೆ. ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. 2009ರಿಂದ 2012ರ ವರೆಗಿನ ಕಾಲೇಜು ಅಧ್ಯಯನದ ಸಂದರ್ಭದಲ್ಲಿ ಸತತ ಮೂರು ವರ್ಷಗಳ ಕಾಲ ಅತ್ಯುತ್ತಮ ನಟಿ ಎಂಬ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಸಿಕ್ಕಿದೆ. ಇದರ ಜೊತೆಗೆ ಸಂಗೀತ ಕೇಳೋದು ನನ್ನ ಆಸಕ್ತಿಯ ವಿಷಯ. ಯೋಗಾಭ್ಯಾಸ ಮಾಡಿದ್ದೇನೆ. ಯೋಗಾಸನ ನನ್ನ ಆಸಕ್ತಿಯ ವಿಷಯವೂ ಹೌದು.

* ಮನೆಯಲ್ಲಿ ಧಾರಾವಾಹಿ ನಟನೆ ಬಗ್ಗೆ ಬೆಂಬಲ ಇದೆಯಾ?
ಹೌದು. ಅಪ್ಪ, ಅಮ್ಮ ಹಾಗೂ ಅಣ್ಣ ನನ್ನ ನಟನೆ ಹಾಗೂ ಈ ರೀತಿಯ ಸಾಮಾಜಿಕ ಚಟುವಟಿಕೆಗಳಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನೀಡುತ್ತಲೂ ಇದ್ದಾರೆ. ನಾನು ಒಳ್ಳೆಯದನ್ನು ಮಾಡಿದಾಗಲೆಲ್ಲ ನನ್ನ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದ್ದಾರೆ. ನನ್ನ ಬೆಳವಣಿಗೆಗೆ ಪೂರಕವಾಗಿ ಉತ್ತೇಜನ ನೀಡಿದ್ದಾರೆ.


* ಯಾರೇ ನೀ ಮೋಹಿನಿ, ಇದು ನಿಮ್ಮ ಮೊದಲ ಧಾರವಾಹಿಯಾ? ಈ ಮೊದಲು ಯಾವುದಾದರೂ ಧಾರಾವಾಹಿಯಲ್ಲಿ ನಟನೆ ಮಾಡಿದ್ದೀರಾ?
ಪೂರ್ಣ ಪ್ರಮಾಣದ, ಮುಖ್ಯ ಪಾತ್ರ ಇರುವ ಧಾರವಾಹಿ ಎಂದರೆ ಅದು ಯಾರೇ ನೀ ಮೋಹಿನಿ. ಈ ಧಾರಾವಾಹಿಗೂ ಮೊದಲು ನಾನು ಬಣ್ಣ ಹಚ್ಚಿದ್ದೆ. 4-5 ವರ್ಷಗಳ ಹಿಂದೆ ಜನಶ್ರೀ ಸುದ್ದಿ ವಾಹಿನಿಗಾಗಿ ತಯಾರಿಸಲಾಗಿದ್ದ `ಸಮಾಜ`  ಎಂಬ ಕಿರುಚಿತ್ರ ಸರಣಿಯಲ್ಲಿ ಪಾತ್ರ ಮಾಡಿದ್ದೆ. ನಂತರ ಕಲಸರ್್ ಸೂಪರ್ನಲ್ಲಿ ಬರುತ್ತಿರುವ ಶಾಂತಂ ಪಾಪಂನ ಒಂದು ಎಪಿಸೋಡ್ನಲ್ಲಿ ಸಾಮಾಜಿಕ ಹೋರಾಟಗಾರ್ತಿಯ ಪಾತ್ರ ಮಾಡಿದ್ದೆ. ಇದೀಗ ಯಾರೇ ನೀ ಮೋಹಿನಿ ಧಾರವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದೇನೆ.

* ಯಾರೇ ನೀ ಮೋಹಿನಿ ಪಾತ್ರದ ಹೇಗಿದೆ? ನಿಮ್ಮದು ನೆಗೆಟಿವ್ ಪಾತ್ರವಾ?
ಯಾರೇ ನೀ ಮೋಹಿನಿಯಲ್ಲಿ ನನ್ನದು ವಿಶಿಷ್ಟ ಪಾತ್ರ. ಇದರಲ್ಲಿ ಈಗಾಗಲೇ ಸತ್ತುಹೋಗಿರುವ ಮೋಹಿನಿಯ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ. ಸ್ವಲ್ಪ ವಿಶಿಷ್ಟ ಹಾಗೂ ವಿಭಿನ್ನವಾದ ಪಾತ್ರ ನನ್ನದು. ಈ ಧಾರಾವಾಹಿಯಲ್ಲಿ ಅತ್ತೆಗೆ ಕಾಟ ಕೊಡುವ ಮೋಹಿನಿಯಾಗಿ ನಾನು ನಟನೆ ಮಾಡಿದ್ದೇನೆ. ಪ್ರೀತಿಸುವ ಗಂಡ, ಸಾಯಿಸುವ ಅತ್ತೆ ಇದು ಮುಖ್ಯ ಹಂದರ. ಜೊತೆಯಲ್ಲಿ ಮುಗ್ಧವಾಗಿರುವ ಗಂಡನ ರಕ್ಷಣೆಯ ಹೊಣೆಯೂ ನನ್ನ ಪಾತ್ರಕ್ಕಿದೆ. ಧಾರಾವಾಹಿಯಲ್ಲಿರುವ ಇನ್ನೊಂದು ಮುಖ್ಯ ಪಾತ್ರವಾದ ಬೆಳ್ಳಿಯನ್ನು ನನ್ನ ಗಂಡನ ಜೊತೆಗೆ ಸೇರಿಸುವ ಬಹುಮುಖ್ಯ ಕಾರ್ಯವೂ ಮೋಹಿನಿಯದ್ದು. ಖಂಡಿತವಾಗಿಯೂ ಇದು ನೆಗೆಟಿವ್ ಪಾತ್ರ ಅಂತ ಹೇಳಲಾರೆ. ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಶೇಡ್ ಇದೆ. ಪ್ರತಿ ಹಂತದಲ್ಲಿಯೂ ಗಂಡ ಹಾಗೂ ಬೆಳ್ಳಿಯನ್ನು ಕಾಪಾಡುವ ಪಾತ್ರವಾಗಿ ಪಾಸಿಟಿವ್ ಆಗಿ ಕಾಣಿಸಿಕೊಳ್ಳುವ ನಾನು ಅತ್ತೆಯ ವಿಷಯದಲ್ಲಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತೇನೆ.

* ಈ ಧಾರವಾಹಿಗೆ ನೀವು ಆಯ್ಕೆಯಾಗಿದ್ದು ಹೇಗೆ? ಶೃತಿ ನಾಯ್ಡು ಅವರ ಪ್ರೊಡಕ್ಷನ್ ಅಲ್ವಾ..
ಶಾಂತಂಪಾಪಂ ನಲ್ಲಿ ನಟಿಸಿದಾಗ ಕೆಲವರು ನನಗೆ ಧಾರವಾಹಿ ಆಫರ್ ಕೊಟ್ಟಿದ್ದರು. ನಂತರ ಯಾರೇ ನೀ ಮೋಹಿನಿ ಧಾರಾವಾಹಿ ಆಡಿಷನ್ ಬಗ್ಗೆ ಗೊತ್ತಾಯಿತು. ಆಡಿಷನ್ನಲ್ಲಿ ಭಾಗವಹಿಸಿದೆ. 2 ಸಾರಿ ಸ್ಕ್ರೀನ್ ಟೆಸ್ಟ್ ನಡೆಯಿತು. ಅದರಲ್ಲಿಯೂ ಆಯ್ಕೆಯಾದೆ. ಈ ಸಂದರ್ಭದಲ್ಲಿ ಶೃತಿ ನಾಯ್ಡು ಅವರು ಪರಿಚಯವಾದರು. ಮೀಡಿಯಾ ಬಗ್ಗೆ ಒಲವಿತ್ತು. ಮುಖ್ಯ ಪಾತ್ರಗಳನ್ನು ಬಯಸಿದ್ದೆ. ಅದೇ ಸಿಕ್ಕಿತು.

* ಮೊದಲ ಪಾತ್ರದಲ್ಲೇ ಮೋಹಿನಿಯಾಗಿದ್ದೀರಲ್ಲ
ಹಾಗೇನೂ ಇಲ್ಲ. ಪಾತ್ರ ಬಹಳ ಸ್ಟ್ರಾಂಗ್ ಆಗಿದೆ. ಮಾಧುರಿ ದೀಕ್ಷಿತ್ ಅಂತಹ ಮಹಾನ್ ನಟಿಯರೇ ಮೋಹಿನಿಯ ಪಾತ್ರ ಮಾಡಿದ್ದಾರೆ. ನನಗೆ ಬಹಳ ಸವಾಲಿನ ಪಾತ್ರ. ಮೋಹಿನಿಯಾಗಿದ್ದಕ್ಕೆ ಖಂಡಿತವಾಗಿಯೂ ಬೆಜಾರಿಲ್ಲ. ಖುಷಿಯಾಗುತ್ತಿದೆ. ಎಲ್ಲರೂ ಈಗೀಗ ನನ್ನನ್ನು ಮೋಹಿನಿ ಅಂತಲೇ ಕರೆಯುತ್ತಿದ್ದಾರೆ. ಬಹಳ ಸಂತೋಷವಾಗ್ತಿದೆ. ಈಗ ಕೆಲವು ದಿನಗಳ ಕಾಲ ನನ್ನ ಪಾತ್ರ ಮೋಹನಿಯಾಗಿ ಬರುತ್ತದೆ. ಕೆಲವು ದಿನಗಳ ನಂತರ ಫ್ಲಾಷ್ಬ್ಯಾಕ್ ಕಥೆ ಆರಂಭವಾಗುತ್ತೆ. ಅಲ್ಲಿ ನನ್ನ ನಿಜವಾದ ಪಾತ್ರ ಆರಂಭ ಅನ್ನಬಹುದು

* ಧಾರಾವಾಹಿ ತಂಡ ಹೇಗಿದೆ?
ಧಾಆರಾವಾಹಿ ಟೀಂ ಸಂಪೂರ್ಣ ಬೆಂಬಲ ನೀಡುತ್ತಿದೆ. ಎಪಿಸೋಡ್ ನಿರ್ದೇಶಕರಾದ ಸಂತೋಷ್ ಗೌಡರ್ ಅವರು ಎಲ್ಲ ಸಂದರ್ಭಗಳಲ್ಲಿಯೂ ಬೆಂಬಲ ನೀಡುತ್ತಾರೆ. ಸಲಹೆ, ಸಹಕಾರ ನೀಡುತ್ತಾರೆ. ನನಗೆ ನಟನೆ ಕಷ್ಟವೇನಲ್ಲ. ಮೊದಲ ಸಾರಿ ಕ್ಯಾಮರಾಆ ಎದುರಿಸಿದಾಗ ಭಯವೇನೂ ಆಗಲಿಲ್ಲ. ಆಂಕರಿಂಗ್ ಮಾಅಡುತ್ತ ಬಂದವಳಾದ್ದರಿಂದ ಸ್ಟೇಜ್ ಫಿಯರ್ ಕೂಡ ಇರಲಿಲ್ಲ. ಹೀಗಾಗಿ ಮೊದಲ ಸಾರಿ ಕ್ಯಾಮರಾ ಎದುರಿಸಿದ್ದಕ್ಕೆ ತೊಂದರೆ ಏನೂ ಆಗಲಿಲ್ಲ.


* ನಿಮ್ಮ ನಟನೆ ಬಗ್ಗೆ ನಿಮ್ಮ ಬಳಗ, ಊರಿನವರು ಏನಂತಾರೆ? ರೆಸ್ಪಾನ್ಸ್ ಹೇಗಿದೆ?
ನಾನು ಊರಿನಿಂದ ಬಂದು 8 ವರ್ಷಗಳೆ ಆದವು. ಯಾರೇ ನೀ ಮೋಹಿನಿ ಧಾರವಾಹಿ ಶುರುವಾದ ನಂತರ ಊರಿಗೆ ಹೋಗಿಲ್ಲ. ಆದರೆ ಊರಿನಿಂದ ಪೋನ್ಗಳು ಬರುತ್ತಿರುತ್ತವೆ. ಪಾಸಿಟಿವ್ ರೆಸ್ಪಾನ್ಸ್ ಇದೆ. ಫೇಸ್ ಬುಕ್ಕಲ್ಲಿ ಕೂಡ ಒಳ್ಳೆಯ ರೆಸ್ಪಾನ್ಸ್ ಇದೆ. ನನಗೆ ಪ್ರೆಂಡ್ಸ್ ಕಡಿಮೆ. ಕಡಿಮೆ ಅನ್ನುವುದಕ್ಕಿಂತಲೂ ಹೆಚ್ಚಾಗಿ, ನಾನು ಸೆಲೆಕ್ಟಿವ್. ಬಳಗದವರೆಲ್ಲ ಒಳ್ಳೆಯ ಅಭಿಪ್ರಾಯಗಳನ್ನೇ ಹೇಳುತ್ತಿದ್ದಾರೆ.


* ಸಾಮಾಜಿಕವಾಗಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದೀರಿ. ಅದರ ಬಗ್ಗೆ ಹೇಳಿ
ಧಾರಾವಾಹಿ ಲೋಕಕ್ಕೆ ಬರುವ ಮೊದಲು ನಾನು ಲೇಬರ್ ಡಿಪಾರ್ಟ್ಮೆಂಟಿನಲ್ಲಿ ನಾನು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. 2014-15ರಲ್ಲಿ ಈ ಕೆಲಸ ಮಾಡುತ್ತಿದ್ದ ನಾನು ನಂತರದಲ್ಲಿ ಅದನ್ನು ಬಿಟ್ಟಿದ್ದೇನೆ. ಎನ್ಜಿಓಗಳಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ನನಗೆ ಮೊದಲಿನಿಂದಲೂ ಆಸಕ್ತಿ. ನನ್ನದೇ ಆದ ಎನ್ಜಿಓ ಆರಂಬಿಸುವ ಆಸೆಯೂ ಇದೆ. ಸಾಮಾಜಿಕವಾಗಿ ಜನಸಾಮಾನ್ಯರಿಗೆ ಸಹಾಯ ಮಾಡುವ ಗುರಿ ಇದೆ. ಇದೀಗ ನಾನು ಚಂದ್ರಾ ಲೇ ಔಟ್ನಲ್ಲಿ ವಾರದಲ್ಲಿ ಐದು ದಿನಗಳ ಕಾಲ ಯೋಗಾಸನ ಕ್ಲಾಸ್ ನಡೆಸುತ್ತಿದ್ದೇನೆ. ಜೊತೆಯಲ್ಲಿ ಪ್ರಚೋದಯ ನಾಟ್ಯಾಲಯ ಎನ್ನುವ ಭರತನಾಟ್ಯ ಶಾಲೆಯನ್ನೂ ಕೂಡ ತೆರೆದಿದ್ದೇನೆ. ಆಸಕ್ತರಿಗೆ ನೃತ್ಯ ಹೇಳಿಕೊಡುತ್ತಿದ್ದೇನೆ.

* ಬಹಳಷ್ಟು ಆಫರ್ ಬಂದಿರಬೇಕಲ್ಲ? ಸಿನೆಮಾ ಆಫರ್ಗಳಿಗೆ ಒಪ್ಕೋತೀರಾ?
ಹೌದು ಬಹಳಷ್ಟು ಆಫರ್ ಬಂದಿದೆ. ಎಲ್ಲ ಆಫರ್ಗಳೂ ಸಿನೆಮಾಗಳಿಗೇ ಬಂದಿದೆ. ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತವಾಗಿಯೂ ನಾನು ನಟಿಸುತ್ತೇನೆ. ಸುದೀಪ್, ದರ್ಶನ್, ಪುನೀತ್ ಸರ್ ಅವರ ಜೊತೆಗೆ ನಟಿಸಲು ಆಸೆಯಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನನಗೆ ಆಸಕ್ತಿ ಇದೆ. ಈ ಕಾರಣದಿಂದ, ಸಿನೆಮಾಗಳಲ್ಲಿ ಆಫರ್ ಬಂದರೆ ಮಾಡಲೋ, ಬೇಡವೋ ಅನ್ನುವ ಗೊಂದಲವೂ ಕಾಡುತ್ತಿದೆ. ಆದರೆ ಪಾತ್ರ ಚನ್ನಾಗಿದ್ದರೆ ಖಂಡಿತವಾಗಿಯೂ ನಟಿಸುತ್ತೇನೆ. ಮಾಡೆಲಿಂಗ್ ಆಫರ್ ಕೂಡ ಬರ್ತಿದೆ. ಆದರೆ ಮೊದಲೇ ಹೇಳಿದಂತೆ ನಾನು ಸೆಲೆಕ್ಟಿವ್. ಕಥೆ ಚನ್ನಾಗಿರಬೇಕು. ಪಾತ್ರ ಕೂಡ.

Monday, August 21, 2017

ಸಿಹಿ-ಕಹಿ ಸಾಲುಗಳು

ತಂತ್ರ-ಪ್ರತಿತಂತ್ರ

ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ..
ಇದಕ್ಕೊಂದು ಉದಾಹರಣೆ ...
ಐಟಿ ರೈಡ್ ಆದ ತಕ್ಷಣ 
ಕರೇಂಟ್ ಹೋಗುವುದು.!


ರೂವಾರಿ

ಐಟಿ ರೈಡ್ ಆದಾಗ 
ಎಲ್ರೂ ಷಾ ಕಡೆ ನೋಡ್ತಾ ಇದ್ರು...
ಸಿದ್ದಣ್ಣ ಖುಷಿಯಿಂದ 
ಒಳಗೊಳಗೆ ನಕ್ರು...


ಕಾರಣ 

ಪಪ್ಪೂ..:
ಗುಜರಾತಲ್ಲಿ ಸಿಕ್ಕಾಪಟ್ಟೆ ಮಳೆ ಬರ್ತಿದೆ..
ಇದಕ್ಕೆ ಮೋದಿ ಕಾರಣ..
ರಾಜೀನಾಮೆ ಕೊಡ್ಬೇಕು...!


ನೋಟ

ಬೆಂಗಳೂರಲ್ಲಿ ಮಳೆ 
ಬರುತ್ತಿರುವಾಗ ರೈನ್ ಕೋಟ್ ಹಾಕ್ಕೊಂಡು ಹೋಗುವವನನ್ನು 
ಅನ್ಯಗ್ರಹ ಜೀವಿಯಂತೆ ದಿಟ್ಟಿಸುತ್ತಾರೆ..!

ಜೂಜು

ಟ್ರಾಫಿಕ್ಕಿನಲ್ಲಿಸಿಗ್ನಲ್ ಬಿಟ್ಟ ತಕ್ಷಣಪ್ರತಿಯೊಬ್ಬಬೈಕ್ ಸವಾರನೂರೇಸಿಗೆ ಇಳಿದ ಕುದುರೆಯಾಗುತ್ತಾನೆ..!


ರೂಪಾಂತರ

ಜಪಾನಿಗರ ಬೋನ್ಸಾಯ್ 
ತಂತ್ರಜ್ಞಾನಕ್ಕೆ ಸಿಕ್ಕು ತಮ್ಮ 
ದೈತ್ಯ ದೇಹ ಕಳೆದುಕೊಂಡ 
ಡೈನೋಸಾರ್ ಗಳೇ 
ಈಗಿನ ಓತಿಕ್ಯಾತಗಳು..!


ಪ್ರಯೋಗ ಪಶು

ಜಪಾನಿಗರು ಮೊಟ್ಟಮೊದಲು 
ಬೋನ್ಸಾಯ್ ತಂತ್ರಜ್ಞಾನ 
ಪ್ರಯೋಗ ಮಾಡಿದ್ದು 
ಡೈನೋಸಾರ್ ಗಳ ಮೇಲಂತೆ..!


ಕಾರಣ

ಅವ್ನು ತೊಡೆ ಕಚ್ಚಿದ್ನಂತೆ..
ಇವ್ನು ಕಂಪ್ಲೇಂಟ್ ಕೊಟ್ನಂತೆ..
ಅದೆಲ್ಲ ಸರಿ.. 
ಅವ್ನು ತೊಡೆ ಕಚ್ಚೋ ತನಕ 
ಇವನೇನ್ ಮಾಡ್ತಿದ್ದ ಅಂತ..!

ಪೂಜೆ

ಹೆಂಡತಿಯಿಂದ ಗಂಡನಿಗೆ
ಭೀಮನ ಅಮಾವಾಸ್ಯೆ 
ದಿನ ಪಾದಪೂಜೆ..‌
ಉಳಿದ ದಿನಗಳಲ್ಲಿ ಮಂಗಳಾರತಿ..!!!


ಬದಲಾವಣೆ

ಹುಡುಗಿಯರು ಆಕೆಯ 
ಹುಡುಗ ಸ್ವಾಭಿಮಾನಿ ಆಗಿರಬೇಕು 
ಎಂದು ಬಯಸುತ್ತಾರೆ..!
ಅದೇ ರೀತಿ ಆ ಹುಡುಗ 
ತಾನು ಹೇಳಿದ್ದನ್ನೆಲ್ಲ 
ಕುರಿಯಂತೆ ಕೇಳಲಿ ಎಂದುಕೊಳ್ಳುತ್ತಾರೆ.!


-------------------
(ಆಗಾಗ ಬರೆಯುತ್ತಿದ್ದ ಸ್ಟೇಟಸ್ಸುಗಳಲ್ಲಿ ಆಯ್ದ... ುತ್ತಮವಾದ ಸ್ಟೇಟಸ್ಸುಯಗಳನ್ನು ಈ ರೂಪದಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ.. ಓದಿ ಹೇಳಿ)


Friday, August 18, 2017

ತಮಾಷೆಯ ಸಾಲುಗಳು..!

ಬದಲಾವಣೆ..

ಕಿವಿಯ ಮೇಲೆ ಪೆನ್ ಇಟ್ಕಂಡ್.. 

ಕೈಯಲ್ ಟಕ್ ಟಕ್ ಅನ್ನಿಸ್ತಾ 
ಟಿಕೆಟ್ ಟಿಕೆಟ್ ಅನ್ನುವ 
ಕಂಡಕ್ಟರ್ ಗಳು ಏನಾದರು..? ಏನಾದರು?

ಅಪ್ ಡೇಟ್ ಆದರು..!


ಆಸೆ


ಕಾಣದ ಕಡಲಿಗೆ..

ಹಂಬಲಿಸಿದೆ ಮನ..
ಕಾಣುವ ಕಡಲನು
ಮೂದಲಿಸಿದೆ..!

ಕ`ಬಡ್ಡಿ'


ಬ್ಯಾಂಕ್
'ಬಡ್ಡಿ' 
ಹೆಚ್ಚಿದಾಗೆಲ್ಲಾ 
ಕ'ಬಡ್ಡಿ' 
ಆಡುವ 
ಆಸೆ..



ಅಸಹಿಷ್ಣು ಮನ


ಹತ್ ವರ್ಷದಿಂದ 

ಕಾಡದ ಅಸಹಿಷ್ಣುತೆ...
ಅಧಿಕಾರದಿಂದ 
ಕೆಳಗಿಳಿಯುವ ಸಂದರ್ಭದಲ್ಲಿ..
ಕಾಡ್ತಾ ಇದೆಯಂತೆ..!

ಬೇಡಿಕೆ


ಉಪ್ಪ ಕೊಡ್ತೀನಿ

ಒಪ್ಕೋ ಅಂದೆ...
OPPO ಕೊಡ್ಸು
ಒಪ್ಕೋತೀನಿ ಅಂದ್ಲು..!



(ಸುಮ್ನೆ ತಮಾಷೆಗೆ ಬರೆದ ಸಾಲುಗಳು.. 
ಫೇಸ್ ಬುಕ್ಕಲ್ಲಿ ಆಗಾಗ ಬಂದಿದೆ... ಇವುಗಳು..)

Saturday, August 5, 2017

ಕಳವೆಯ ಮುದ್ದಿನ ಗೌರಿ ಇನ್ನಿಲ್ಲ

ಕಾಡು-ನಾಡಿನ ಕೊಂಡಿಯಾಗಿದ್ದ ಜಿಂಕೆ - 17 ವರ್ಷದ ಒಡನಾಟ ಅಂತ್ಯ

ಕಾಡು ಹಾಗೂ ನಾಡಿನ ನಡುವೆ ಕೊಂಡಿಯಾಗಿ, ಕಾಡು ಸಂರಕ್ಷಣೆಯ ಪಾಠವನ್ನು ನಾಡಿನ ಮಂದಿಗೆಲ್ಲ ಸಾರಿ ಹೇಳುತ್ತಿದ್ದ ಗೌರಿ ಜಿಂಕೆ ಇನ್ನಿಲ್ಲ. ಕಳವೆಯ ಕಾಡಿನಲ್ಲಿ ಹುಟ್ಟಿ, ನಾಡಿನ ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದ ಗೌರಿ ಜಿಂಕೆ ತನ್ನ ವಯೋಸಹಜ ಕಾರಣಗಳಿಂದಾಗಿ ಇಹಲೋಕ ತ್ಯಜಿಸಿದ್ದಾಳೆ.
ಕಾಡಿನ ಜಿಂಕೆ ನಾಡಿನ ಒಡನಾಡಿ :
2001ರ ಆಸುಪಾಸಿನಲ್ಲಿ ಮರಿಯಾಗಿದ್ದ ಗೌರಿ ಬೇಟೆ ನಾಯಿಗಳ ದಾಳಿಗೆ ಸಿಕ್ಕಿ ತತ್ತರಿಸಿತ್ತು. ಹುಟ್ಟಿ ಆಗಷ್ಟೇ ಐದಾರು ದಿನಗಳು ಕಳೆದಿದ್ದ ಗೌರಿಯ ಮೇಲೆ ಬೇಟೆಗಾರರ ನಾಯಿಗಳು ದಾಳಿ ಮಾಡಿದ್ದವು. ಹಾಗಿದ್ದಾಲೇ ಸ್ಥಳೀಯರೊಬ್ಬರು ತಾಯಿಯಿಂದ ಬೇರ್ಪಟ್ಟು ಪರಿತಪಿಸುತ್ತಿದ್ದ ಗೌರಿಯನ್ನು ಹಿಡಿದು ತಂದಿದ್ದರು. ಮನೆಗೆ ತಂದವರಿಗೆ ತಮ್ಮ ಮನೆಯಲ್ಲಿ ಜಿಂಕೆ ಮರಿಗೆ ಅಗತ್ಯವಾದ ಹಾಲು ಇಲ್ಲ ಎನ್ನುವುದು ಅರಿವಾಗಿ, ಹೈನುಗಳನ್ನು ಸಾಕಿದ್ದ ಪರಿಸರ ಬರಹಗಾರ ಶಿವಾನಂದ ಕಳವೆಯವರ ಮನೆಗೆ ಮರಿಜಿಂಕೆಯನ್ನು ಬಿಟ್ಟು ಬಂದಿದ್ದರು. ಅಂದಿನಿಂದ ಜಿಂಕೆ ಶಿವಾನಂದ ಕಳವೆ ಅವರ ಮನೆಯ ಒಡನಾಡಿಯಾಗಿತ್ತು.
ಮನೆಯಲ್ಲಿ ಕುಟುಂಬದ ಸದಸ್ಯರಂತೆ ಬೆಳೆದ ಜಿಂಕೆ ಮರಿಗೆ ಗೌರಿ ಎಂದು ಹೆಸರಿಟ್ಟಿದ್ದೂ ಆಯಿತು. ಮನೆಯ ಎಲ್ಲ ಸದಸ್ಯರೂ ಕೂಡ ಗೌರಿಯ ಪ್ರತಿಗೆ ಪಾತ್ರರಾದರು. ಮನೆಯ ನಾಯಿ, ದನ-ಕರುಗಳ ಜೊತೆಗೆ ತಾನೂ ಬೆಳೆಯಿತು ಗೌರಿ. ಇಂತಹ ಗೌರಿ ಕೆಲ ದಿನಗಳಲ್ಲಿಯೂ ಕಳವೆ ಊರಿನ ಎಲ್ಲರ ಪ್ರೀತಿಯನ್ನೂ ಗಳಿಸಿಕೊಂಡಿತು. ಶಿವಾನಂದ ಕಳವೆಯವರ ಮನೆಯಲ್ಲಿನ ದೋಸೆ, ಸಂಕಷ್ಟಿ ದಿನದಂದು ಮಾಡುವ ಪಂಚಕಜ್ಜಾಯ, ಸಿಹಿತಿಂಡಿಗಳು ಗೌರಿಯ ಅಚ್ಚುಮೆಚ್ಚಿನ ಆಹಾರವಾದವು. ಕಾಡಿನ ಪ್ರಾಣಿ ಜಿಂಕೆ ನಾಡಿನ ಪ್ರೀತಿಪಾತ್ರ ಪ್ರಾಣಿಯಾಗಿ ರೂಪುಗೊಂಡಿತ್ತು.
ಶಿವಾನಂದ ಕಳವೆಯವರು ಆಗಾಗ್ಗೆ ಗೌರಿಯನ್ನು ಕಾಡಿಗೆ ಪರಿಚಯಿಸುವ ಕಾರ್ಯ ಮಾಡುತ್ತಲೇ ಇದ್ದರು. ಗೌರಿ ಬೆಳೆಯುತ್ತಿದ್ದಂತೆಲ್ಲ ಕಳವೆಯವರ ಮನೆಯ ಬಳಿಗೆ ಬರುತ್ತಿದ್ದ ಜಿಂಕೆಗಳ ಹಿಂಡು ಗೌರಿಯನ್ನು ಆಕಷರ್ಿಸಿತು. ಆ ಸಂದರ್ಭದಲ್ಲಿಯೇ ಕಳವೆಯವರು ಗೌರಿಯನ್ನು ಕಾಡಿಗೆ ಕಳಿಸುವ ಕಾರ್ಯವನ್ನೂ ಮಾಡಿದರು. ಕಾಡಿನ ಹಿಂಡಿನ ಜೊತೆಗೆ ಗೌರಿಯನ್ನು ಕಳಿಸಿದರು. ಮೊದ ಮೊದಲು ಅಂಜಿದ್ದ ಗೌರಿ ನಂತರ ಕಾಡಿನ ಗೆಳೆಯರ ಜೊತೆ ಬೆರೆತುಕೊಂಡಿತು.
ಗೌರಿಗೊಬ್ಬ ಮಗ ಗಣೇಶ :
ಗೌರಿಗೆ ಒಂಭತ್ತು ವರ್ಷವಾಗಿದ್ದಾಗ ಅದು ಗರ್ಭ ಧರಿಸಿತು. ಅಲ್ಲದೇ ಮರಿಯನ್ನೂ ಹಾಕಿತು. ಹುಟ್ಟಿದ ಮರಿಗೆ ಗಣೇಶ ಎನ್ನುವ ನಾಮಕರಣವೂ ಆಯಿತು. ಶಿವಾನಂದ ಕಳೆವಯವರ ಮನೆಯನ್ನು ತವರು ಮನೆ ಮಾಡಿಕೊಂಡಿದ್ದ ಗೌರಿ ತನ್ನ ಮರಿಯನ್ನು ಅವರ ಮನೆಗೆ ಕರೆದುಕೊಂಡು ಬಂದಿತು. ಕಾಡಿನಲ್ಲಿ ಮರಿ ಇದ್ದರೆ ಅದರ ಜೀವಕ್ಕೆ ಅಪಾಯ ಉಂಟಾಗಬಹುದು ಎನ್ನುವ ಕಾರಣಕ್ಕಾಗಿ ನಾಡಿನತ್ತ ಮರಿಯನ್ನು ಕರೆತಂದ ಗೌರಿ ಕೆಲ ದಿನಗಳ ಕಾಲ ಗಣೇಶನನ್ನು ಮನೆಯಲ್ಲಿಯೇ ಇರಿಸಿತ್ತು ಎನ್ನುತ್ತಾರೆ ಶಿವಾನಂದ ಕಳವೆಯವರು.
ಅದಾದ ನಂತರ ಗೌರಿ ಏನಿಲ್ಲವೆಂದರೂ ಒಂಭತ್ತಕ್ಕೂ ಹೆಚ್ಚಿನ ಮರಿಗಳನ್ನು ಹಾಕಿದೆ. ಆ ಮರಿಗಳೆಲ್ಲ ಇದೀಗ ದೊಡ್ಡವಾಗಿವೆ. ಅವು ಕೂಡ ಮಕ್ಕಳು-ಮರಿಗಳನ್ನು ಮಾಡಿಕೊಂಡು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಳವೆಯ ಕಾಡಿನಲ್ಲಿ ದೊಡ್ಡದೊಂದು ಹಿಂಡನ್ನು ಸೃಷ್ಟಿ ಮಾಡಿವೆ. ಕಾಡಿನಲ್ಲಿ ಹುಟ್ಟಿ, ನಾಡಿನಲ್ಲಿ ಬೆಳೆದು ನಂತರ ಮತ್ತೆ ಕಾಡಿಗೆ ಹಿಂತಿರುಗಿದ ಗೌರಿ ಆಗಾಗ ಕಳವೆಗೆ ಬರುತ್ತಲೇ ಇದ್ದಳು. ಶಿವಾನಂದ ಕಳವೆಯವರು ಹಾಗೂ ಅವರ ಕುಟುಂಬದ ಯಾರೇ ಸದಸ್ಯರು ಕಾಡಿನತ್ತ ಮುಖ ಮಾಡಿ `ಗೌರಿ... ಬಾ ಇಲ್ಲಿ..' ಎಂದರೆ ಸಾಕು ಕ್ಷಣಾರ್ಧದಲ್ಲಿ ಮನೆಯತ್ತ ಓಡಿಬರುತ್ತಿದ್ದಳು ಗೌರಿ.
ಈ ಗೌರಿಯ ಕಾರಣದಿಂದಲೇ ಕಳವೆ ಹಾಗೂ ಸುತ್ತಮುತ್ತಲ ಊರುಗಳಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಕಾಡಿನ ಬೇಟೆಗಳೂ ನಿಂತವು ಎನ್ನುತ್ತಾರೆ ಕಳವೆಯವರು. ಊರಿನ ಯಾರದೇ ಮನೆಗೆ ಹೋಗಿ ಮನೆಯ ಸದಸ್ಯರ ಮುಂದೆ ನಿಂತು ತಿಂಡಿಯನ್ನು ಕೇಳಿ ಪಡೆಯುತ್ತಿದ್ದ ಗೌರಿ ಇನ್ನಿಲ್ಲ. ಗೌರಿ ಸಾವನ್ನಪ್ಪಿರುವ ವಿಷಯ ಕೇಳಿದ ಪ್ರತಿಯೊಬ್ಬರೂ ಹೌಹಾರಿದ್ದಾರೆ. ತಮ್ಮದೇ ಕುಟುಂಬದ ಸದಸ್ಯರನ್ನು ಕಳೆದುಕೊಂಡಷ್ಟು ದುಃಖ ಪಡುತ್ತಿದ್ದಾರೆ. ವಯೋ ಸಹಜ ಕಾರಣಗಳಿಂದ ಗೌರಿ ಸಾವನ್ನಪ್ಪಿದ್ದಾಳೆ. ಆದರೂ ಕೂಡ ಹಾವು ಅಥವಾ ಇನ್ಯಾವುದೇ ವಿಷ ಜಂತು ಕಚ್ಚಿರಬಹುದು ಎನ್ನುವ ಸಣ್ಣ ಅನುಮಾನಗಳೂ ಕೂಡ ಇದೆ. ಶಿವಾನಂದ ಕಳವೆಯವೆ ಮನೆಯ ಹಿಂಭಾಗದ ಕಾಡಿನಲ್ಲಿನ ರಾಮಪತ್ರೆ ಮರದ ಕೆಳಗೆ ಗೌರಿಯ ಮೃತದೇಹ ಸಿಕ್ಕಿದೆ. ಗೌರಿಯ ಸಾವಿನ ಸುದ್ದಿ ತಿಳಿದ ತಕ್ಷಣ ಗೌರಿಯನ್ನು ಕಂಡವರು, ಮಾತನಾಡಿಸಿದವರು, ಸ್ಥಲೀಯರು, ಪರಿಸರ ಪ್ರೇಮಿಗಳು, ಪ್ರಾಣಿ-ಪಕ್ಷಿ ಪ್ರಿಯರು ಕಳವೆಯತ್ತ ಮುಖಮಾಡಿ ಗೌರಿಯ ಅಂತಿಮ ದರ್ಶನ ಮಾಡಿಕೊಂಡು ಬಂದಿದ್ದಾರೆ. ಕಾಡು-ನಾಡನ್ನು ಬೆಸೆದ ಜೀವಿಯೊಂದು ಇನ್ನಿಲ್ಲವಾಗಿದೆ. ತನ್ನದೇ ಆದ ಮೂಕಭಾಷೆಯ ಮೂಲಕ ಕಾಡಿನ ಪಾಠವನ್ನು ತಿಳಿಸಿದ ಗೌರಿ ಜಿಂಕೆ ಎಲ್ಲರ ಮನಸ್ಸಿನಲ್ಲಿ ಮಾಸಲಾರಂತಹ ನೆನಪನ್ನು ಬಿಟ್ಟು ಹೋಗಿದ್ದಾಳೆ.

-----
ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾದ ನೂರಾರು ಜನರು :
ಯಾರಾದರೂಗಣ್ಯ ವ್ಯಕ್ತಿಗಳು ಸತ್ತರೆ ನೂರಾರು ಜನರು, ಸಾವಿರಾರು ಜನರು ಅವರ ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾಗುವುದನ್ನು ನಾವು ಕಾಣುತ್ತೇವೆ. ಕೇಳುತ್ತೇವೆ. ಕಾಡು ಪ್ರಾಣಿ ಸತ್ತರೆ ನೂರಾರು ಜನರು ಅದರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದನ್ನು ಕೇಳಿದ್ದೀರಾ? ಗೌರಿಯ ಅಂತ್ಯ ಸಂಸ್ಕಾರದಲ್ಲಿ ಕಳವೆ ಹಾಗೂ ಸುತ್ತಮುತ್ತಲಿನ ನೂರಾರು ಜನರು ಪಾಲ್ಗೊಂಡಿದ್ದರು. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಪ್ರತಿಯೊಬ್ಬರ ಕಣ್ಣಾಲಿಗಳು ತುಂಬಿದ್ದವು. ಕಳವೆಯ ಗ್ರಾಮಸ್ಥರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಕಾಡು ಹಾಗೂ ನಾಡಿನ ನಡುವೆ ಕೊಂಡಿಯಾಗಿ, ನಾಡಿನ ಮಂದಿಯ ಪ್ರೀತಿಯನ್ನು ಗಳಿಸಿ, ಕಾಡಿನ ಸೂಕ್ಷ್ಮಗಳನ್ನು, ನಾಡಿನ ಕ್ರೌರ್ಯಗಳನ್ನು ಒಟ್ಟಾಗಿ ಕಂಡಿದ್ದ ಗೌರಿ ಇನ್ನು ಬರಿ ನೆನಪು ಮಾತ್ರ

-------------------

17 ವರ್ಷದ ಒಡನಾಟ
2001ರಲ್ಲಿ ಹುಟ್ಟಿ ಐದು ದಿನವಾದಾಗ ನಮ್ಮ ಮನೆಗೆ ಬಂದಿದ್ದ ಗೌರಿ 17 ವರ್ಷ ನಮ್ಮ ಜೊತೆ ಒಡನಾಡಿದೆ. ಅದಕ್ಕೆ 9ನೇ ವರ್ಷವಾದಾಗ ಕಾಡಿನ ಜೊತೆ ಒಡಡನಾಡಿ, ತದನಂತರ 9 ಮರಿಗಳನ್ನು ಹಾಕಿತ್ತು. ಸಾಮಾನ್ಯವಾಗಿ ಜಿಂಕೆಗಳು 23-25 ವರ್ಷಗಳ ಕಾಲ ಬದುಕುತ್ತವೆ. ಮನುಷ್ಯರ ಒಡನಾಟ ಇದ್ದರೆ ಜಾಸ್ತಿ ವರ್ಷಗಳ ಕಾಲ ಬದುಕಲೂ ಬಹುದು. ಆದರೆ ಗೌರಿ ಮಂಗಳವಾರ ಸಾವನ್ನಪ್ಪಿದೆ. ಗೌರಿಯ ಅಂತ್ಯಸಂಸ್ಕಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕೈಗೊಳ್ಳಲಾಗಿದೆ. ಅದರ ಅಂತ್ಯಸಂಸ್ಕಾರಕ್ಕೆ ನೂರಾರು ಜನರು ಆಗಮಿಸಿದ್ದರು. ಇದು ಪ್ರಾಣಿಯೊಂದು ಜನರ ಜೊತೆ ಹೊಂದಿದ್ದ ಒಡನಾಟಕ್ಕೆ, ಪ್ರೀತಿಗೆ ಸಾಕ್ಷಿ.
ಶಿವಾನಂದ ಕಳವೆ
ಪರಿಸರ ಬರಹಗಾರರು


(ಈ ಲೇಖನವು ಹೊಸ ದಿಗಂತದಲ್ಲಿ ಪ್ರಕತವಾಗಿದೆ)