Saturday, August 5, 2017

ಕಳವೆಯ ಮುದ್ದಿನ ಗೌರಿ ಇನ್ನಿಲ್ಲ

ಕಾಡು-ನಾಡಿನ ಕೊಂಡಿಯಾಗಿದ್ದ ಜಿಂಕೆ - 17 ವರ್ಷದ ಒಡನಾಟ ಅಂತ್ಯ

ಕಾಡು ಹಾಗೂ ನಾಡಿನ ನಡುವೆ ಕೊಂಡಿಯಾಗಿ, ಕಾಡು ಸಂರಕ್ಷಣೆಯ ಪಾಠವನ್ನು ನಾಡಿನ ಮಂದಿಗೆಲ್ಲ ಸಾರಿ ಹೇಳುತ್ತಿದ್ದ ಗೌರಿ ಜಿಂಕೆ ಇನ್ನಿಲ್ಲ. ಕಳವೆಯ ಕಾಡಿನಲ್ಲಿ ಹುಟ್ಟಿ, ನಾಡಿನ ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದ ಗೌರಿ ಜಿಂಕೆ ತನ್ನ ವಯೋಸಹಜ ಕಾರಣಗಳಿಂದಾಗಿ ಇಹಲೋಕ ತ್ಯಜಿಸಿದ್ದಾಳೆ.
ಕಾಡಿನ ಜಿಂಕೆ ನಾಡಿನ ಒಡನಾಡಿ :
2001ರ ಆಸುಪಾಸಿನಲ್ಲಿ ಮರಿಯಾಗಿದ್ದ ಗೌರಿ ಬೇಟೆ ನಾಯಿಗಳ ದಾಳಿಗೆ ಸಿಕ್ಕಿ ತತ್ತರಿಸಿತ್ತು. ಹುಟ್ಟಿ ಆಗಷ್ಟೇ ಐದಾರು ದಿನಗಳು ಕಳೆದಿದ್ದ ಗೌರಿಯ ಮೇಲೆ ಬೇಟೆಗಾರರ ನಾಯಿಗಳು ದಾಳಿ ಮಾಡಿದ್ದವು. ಹಾಗಿದ್ದಾಲೇ ಸ್ಥಳೀಯರೊಬ್ಬರು ತಾಯಿಯಿಂದ ಬೇರ್ಪಟ್ಟು ಪರಿತಪಿಸುತ್ತಿದ್ದ ಗೌರಿಯನ್ನು ಹಿಡಿದು ತಂದಿದ್ದರು. ಮನೆಗೆ ತಂದವರಿಗೆ ತಮ್ಮ ಮನೆಯಲ್ಲಿ ಜಿಂಕೆ ಮರಿಗೆ ಅಗತ್ಯವಾದ ಹಾಲು ಇಲ್ಲ ಎನ್ನುವುದು ಅರಿವಾಗಿ, ಹೈನುಗಳನ್ನು ಸಾಕಿದ್ದ ಪರಿಸರ ಬರಹಗಾರ ಶಿವಾನಂದ ಕಳವೆಯವರ ಮನೆಗೆ ಮರಿಜಿಂಕೆಯನ್ನು ಬಿಟ್ಟು ಬಂದಿದ್ದರು. ಅಂದಿನಿಂದ ಜಿಂಕೆ ಶಿವಾನಂದ ಕಳವೆ ಅವರ ಮನೆಯ ಒಡನಾಡಿಯಾಗಿತ್ತು.
ಮನೆಯಲ್ಲಿ ಕುಟುಂಬದ ಸದಸ್ಯರಂತೆ ಬೆಳೆದ ಜಿಂಕೆ ಮರಿಗೆ ಗೌರಿ ಎಂದು ಹೆಸರಿಟ್ಟಿದ್ದೂ ಆಯಿತು. ಮನೆಯ ಎಲ್ಲ ಸದಸ್ಯರೂ ಕೂಡ ಗೌರಿಯ ಪ್ರತಿಗೆ ಪಾತ್ರರಾದರು. ಮನೆಯ ನಾಯಿ, ದನ-ಕರುಗಳ ಜೊತೆಗೆ ತಾನೂ ಬೆಳೆಯಿತು ಗೌರಿ. ಇಂತಹ ಗೌರಿ ಕೆಲ ದಿನಗಳಲ್ಲಿಯೂ ಕಳವೆ ಊರಿನ ಎಲ್ಲರ ಪ್ರೀತಿಯನ್ನೂ ಗಳಿಸಿಕೊಂಡಿತು. ಶಿವಾನಂದ ಕಳವೆಯವರ ಮನೆಯಲ್ಲಿನ ದೋಸೆ, ಸಂಕಷ್ಟಿ ದಿನದಂದು ಮಾಡುವ ಪಂಚಕಜ್ಜಾಯ, ಸಿಹಿತಿಂಡಿಗಳು ಗೌರಿಯ ಅಚ್ಚುಮೆಚ್ಚಿನ ಆಹಾರವಾದವು. ಕಾಡಿನ ಪ್ರಾಣಿ ಜಿಂಕೆ ನಾಡಿನ ಪ್ರೀತಿಪಾತ್ರ ಪ್ರಾಣಿಯಾಗಿ ರೂಪುಗೊಂಡಿತ್ತು.
ಶಿವಾನಂದ ಕಳವೆಯವರು ಆಗಾಗ್ಗೆ ಗೌರಿಯನ್ನು ಕಾಡಿಗೆ ಪರಿಚಯಿಸುವ ಕಾರ್ಯ ಮಾಡುತ್ತಲೇ ಇದ್ದರು. ಗೌರಿ ಬೆಳೆಯುತ್ತಿದ್ದಂತೆಲ್ಲ ಕಳವೆಯವರ ಮನೆಯ ಬಳಿಗೆ ಬರುತ್ತಿದ್ದ ಜಿಂಕೆಗಳ ಹಿಂಡು ಗೌರಿಯನ್ನು ಆಕಷರ್ಿಸಿತು. ಆ ಸಂದರ್ಭದಲ್ಲಿಯೇ ಕಳವೆಯವರು ಗೌರಿಯನ್ನು ಕಾಡಿಗೆ ಕಳಿಸುವ ಕಾರ್ಯವನ್ನೂ ಮಾಡಿದರು. ಕಾಡಿನ ಹಿಂಡಿನ ಜೊತೆಗೆ ಗೌರಿಯನ್ನು ಕಳಿಸಿದರು. ಮೊದ ಮೊದಲು ಅಂಜಿದ್ದ ಗೌರಿ ನಂತರ ಕಾಡಿನ ಗೆಳೆಯರ ಜೊತೆ ಬೆರೆತುಕೊಂಡಿತು.
ಗೌರಿಗೊಬ್ಬ ಮಗ ಗಣೇಶ :
ಗೌರಿಗೆ ಒಂಭತ್ತು ವರ್ಷವಾಗಿದ್ದಾಗ ಅದು ಗರ್ಭ ಧರಿಸಿತು. ಅಲ್ಲದೇ ಮರಿಯನ್ನೂ ಹಾಕಿತು. ಹುಟ್ಟಿದ ಮರಿಗೆ ಗಣೇಶ ಎನ್ನುವ ನಾಮಕರಣವೂ ಆಯಿತು. ಶಿವಾನಂದ ಕಳೆವಯವರ ಮನೆಯನ್ನು ತವರು ಮನೆ ಮಾಡಿಕೊಂಡಿದ್ದ ಗೌರಿ ತನ್ನ ಮರಿಯನ್ನು ಅವರ ಮನೆಗೆ ಕರೆದುಕೊಂಡು ಬಂದಿತು. ಕಾಡಿನಲ್ಲಿ ಮರಿ ಇದ್ದರೆ ಅದರ ಜೀವಕ್ಕೆ ಅಪಾಯ ಉಂಟಾಗಬಹುದು ಎನ್ನುವ ಕಾರಣಕ್ಕಾಗಿ ನಾಡಿನತ್ತ ಮರಿಯನ್ನು ಕರೆತಂದ ಗೌರಿ ಕೆಲ ದಿನಗಳ ಕಾಲ ಗಣೇಶನನ್ನು ಮನೆಯಲ್ಲಿಯೇ ಇರಿಸಿತ್ತು ಎನ್ನುತ್ತಾರೆ ಶಿವಾನಂದ ಕಳವೆಯವರು.
ಅದಾದ ನಂತರ ಗೌರಿ ಏನಿಲ್ಲವೆಂದರೂ ಒಂಭತ್ತಕ್ಕೂ ಹೆಚ್ಚಿನ ಮರಿಗಳನ್ನು ಹಾಕಿದೆ. ಆ ಮರಿಗಳೆಲ್ಲ ಇದೀಗ ದೊಡ್ಡವಾಗಿವೆ. ಅವು ಕೂಡ ಮಕ್ಕಳು-ಮರಿಗಳನ್ನು ಮಾಡಿಕೊಂಡು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಳವೆಯ ಕಾಡಿನಲ್ಲಿ ದೊಡ್ಡದೊಂದು ಹಿಂಡನ್ನು ಸೃಷ್ಟಿ ಮಾಡಿವೆ. ಕಾಡಿನಲ್ಲಿ ಹುಟ್ಟಿ, ನಾಡಿನಲ್ಲಿ ಬೆಳೆದು ನಂತರ ಮತ್ತೆ ಕಾಡಿಗೆ ಹಿಂತಿರುಗಿದ ಗೌರಿ ಆಗಾಗ ಕಳವೆಗೆ ಬರುತ್ತಲೇ ಇದ್ದಳು. ಶಿವಾನಂದ ಕಳವೆಯವರು ಹಾಗೂ ಅವರ ಕುಟುಂಬದ ಯಾರೇ ಸದಸ್ಯರು ಕಾಡಿನತ್ತ ಮುಖ ಮಾಡಿ `ಗೌರಿ... ಬಾ ಇಲ್ಲಿ..' ಎಂದರೆ ಸಾಕು ಕ್ಷಣಾರ್ಧದಲ್ಲಿ ಮನೆಯತ್ತ ಓಡಿಬರುತ್ತಿದ್ದಳು ಗೌರಿ.
ಈ ಗೌರಿಯ ಕಾರಣದಿಂದಲೇ ಕಳವೆ ಹಾಗೂ ಸುತ್ತಮುತ್ತಲ ಊರುಗಳಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಕಾಡಿನ ಬೇಟೆಗಳೂ ನಿಂತವು ಎನ್ನುತ್ತಾರೆ ಕಳವೆಯವರು. ಊರಿನ ಯಾರದೇ ಮನೆಗೆ ಹೋಗಿ ಮನೆಯ ಸದಸ್ಯರ ಮುಂದೆ ನಿಂತು ತಿಂಡಿಯನ್ನು ಕೇಳಿ ಪಡೆಯುತ್ತಿದ್ದ ಗೌರಿ ಇನ್ನಿಲ್ಲ. ಗೌರಿ ಸಾವನ್ನಪ್ಪಿರುವ ವಿಷಯ ಕೇಳಿದ ಪ್ರತಿಯೊಬ್ಬರೂ ಹೌಹಾರಿದ್ದಾರೆ. ತಮ್ಮದೇ ಕುಟುಂಬದ ಸದಸ್ಯರನ್ನು ಕಳೆದುಕೊಂಡಷ್ಟು ದುಃಖ ಪಡುತ್ತಿದ್ದಾರೆ. ವಯೋ ಸಹಜ ಕಾರಣಗಳಿಂದ ಗೌರಿ ಸಾವನ್ನಪ್ಪಿದ್ದಾಳೆ. ಆದರೂ ಕೂಡ ಹಾವು ಅಥವಾ ಇನ್ಯಾವುದೇ ವಿಷ ಜಂತು ಕಚ್ಚಿರಬಹುದು ಎನ್ನುವ ಸಣ್ಣ ಅನುಮಾನಗಳೂ ಕೂಡ ಇದೆ. ಶಿವಾನಂದ ಕಳವೆಯವೆ ಮನೆಯ ಹಿಂಭಾಗದ ಕಾಡಿನಲ್ಲಿನ ರಾಮಪತ್ರೆ ಮರದ ಕೆಳಗೆ ಗೌರಿಯ ಮೃತದೇಹ ಸಿಕ್ಕಿದೆ. ಗೌರಿಯ ಸಾವಿನ ಸುದ್ದಿ ತಿಳಿದ ತಕ್ಷಣ ಗೌರಿಯನ್ನು ಕಂಡವರು, ಮಾತನಾಡಿಸಿದವರು, ಸ್ಥಲೀಯರು, ಪರಿಸರ ಪ್ರೇಮಿಗಳು, ಪ್ರಾಣಿ-ಪಕ್ಷಿ ಪ್ರಿಯರು ಕಳವೆಯತ್ತ ಮುಖಮಾಡಿ ಗೌರಿಯ ಅಂತಿಮ ದರ್ಶನ ಮಾಡಿಕೊಂಡು ಬಂದಿದ್ದಾರೆ. ಕಾಡು-ನಾಡನ್ನು ಬೆಸೆದ ಜೀವಿಯೊಂದು ಇನ್ನಿಲ್ಲವಾಗಿದೆ. ತನ್ನದೇ ಆದ ಮೂಕಭಾಷೆಯ ಮೂಲಕ ಕಾಡಿನ ಪಾಠವನ್ನು ತಿಳಿಸಿದ ಗೌರಿ ಜಿಂಕೆ ಎಲ್ಲರ ಮನಸ್ಸಿನಲ್ಲಿ ಮಾಸಲಾರಂತಹ ನೆನಪನ್ನು ಬಿಟ್ಟು ಹೋಗಿದ್ದಾಳೆ.

-----
ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾದ ನೂರಾರು ಜನರು :
ಯಾರಾದರೂಗಣ್ಯ ವ್ಯಕ್ತಿಗಳು ಸತ್ತರೆ ನೂರಾರು ಜನರು, ಸಾವಿರಾರು ಜನರು ಅವರ ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾಗುವುದನ್ನು ನಾವು ಕಾಣುತ್ತೇವೆ. ಕೇಳುತ್ತೇವೆ. ಕಾಡು ಪ್ರಾಣಿ ಸತ್ತರೆ ನೂರಾರು ಜನರು ಅದರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದನ್ನು ಕೇಳಿದ್ದೀರಾ? ಗೌರಿಯ ಅಂತ್ಯ ಸಂಸ್ಕಾರದಲ್ಲಿ ಕಳವೆ ಹಾಗೂ ಸುತ್ತಮುತ್ತಲಿನ ನೂರಾರು ಜನರು ಪಾಲ್ಗೊಂಡಿದ್ದರು. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಪ್ರತಿಯೊಬ್ಬರ ಕಣ್ಣಾಲಿಗಳು ತುಂಬಿದ್ದವು. ಕಳವೆಯ ಗ್ರಾಮಸ್ಥರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಕಾಡು ಹಾಗೂ ನಾಡಿನ ನಡುವೆ ಕೊಂಡಿಯಾಗಿ, ನಾಡಿನ ಮಂದಿಯ ಪ್ರೀತಿಯನ್ನು ಗಳಿಸಿ, ಕಾಡಿನ ಸೂಕ್ಷ್ಮಗಳನ್ನು, ನಾಡಿನ ಕ್ರೌರ್ಯಗಳನ್ನು ಒಟ್ಟಾಗಿ ಕಂಡಿದ್ದ ಗೌರಿ ಇನ್ನು ಬರಿ ನೆನಪು ಮಾತ್ರ

-------------------

17 ವರ್ಷದ ಒಡನಾಟ
2001ರಲ್ಲಿ ಹುಟ್ಟಿ ಐದು ದಿನವಾದಾಗ ನಮ್ಮ ಮನೆಗೆ ಬಂದಿದ್ದ ಗೌರಿ 17 ವರ್ಷ ನಮ್ಮ ಜೊತೆ ಒಡನಾಡಿದೆ. ಅದಕ್ಕೆ 9ನೇ ವರ್ಷವಾದಾಗ ಕಾಡಿನ ಜೊತೆ ಒಡಡನಾಡಿ, ತದನಂತರ 9 ಮರಿಗಳನ್ನು ಹಾಕಿತ್ತು. ಸಾಮಾನ್ಯವಾಗಿ ಜಿಂಕೆಗಳು 23-25 ವರ್ಷಗಳ ಕಾಲ ಬದುಕುತ್ತವೆ. ಮನುಷ್ಯರ ಒಡನಾಟ ಇದ್ದರೆ ಜಾಸ್ತಿ ವರ್ಷಗಳ ಕಾಲ ಬದುಕಲೂ ಬಹುದು. ಆದರೆ ಗೌರಿ ಮಂಗಳವಾರ ಸಾವನ್ನಪ್ಪಿದೆ. ಗೌರಿಯ ಅಂತ್ಯಸಂಸ್ಕಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕೈಗೊಳ್ಳಲಾಗಿದೆ. ಅದರ ಅಂತ್ಯಸಂಸ್ಕಾರಕ್ಕೆ ನೂರಾರು ಜನರು ಆಗಮಿಸಿದ್ದರು. ಇದು ಪ್ರಾಣಿಯೊಂದು ಜನರ ಜೊತೆ ಹೊಂದಿದ್ದ ಒಡನಾಟಕ್ಕೆ, ಪ್ರೀತಿಗೆ ಸಾಕ್ಷಿ.
ಶಿವಾನಂದ ಕಳವೆ
ಪರಿಸರ ಬರಹಗಾರರು


(ಈ ಲೇಖನವು ಹೊಸ ದಿಗಂತದಲ್ಲಿ ಪ್ರಕತವಾಗಿದೆ)

No comments:

Post a Comment