Wednesday, December 24, 2014

ಅಘನಾಶಿನಿ ಕಣಿವೆಯಲ್ಲಿ-4


          ಮೂರ್ತಿಗಳ ಮನೆಯನ್ನು ಸೇರುವ ವೇಳೆಗೆ ಆಗಲೇ ಮದ್ಯಾಹ್ನ ಕಳೆದು ಸಂಜೆ ಧಾವಿಸುತ್ತಿತ್ತು. ಬಂದವರು ವಿಶ್ರಾಂತಿಗಾಗಿ ನಿಲ್ಲಲೇ ಇಲ್ಲ. ಬೆಂಗಳೂರಿನ ಬೀದಿಗಳಲ್ಲಿ ತಿರುಗಾಡುವ ಹುಚ್ಚು ಎಲ್ಲರಿಗೂ. ತಿರುಗಿದರು. ಮೂರ್ತಿಯವರ ಮನೆಯಿದ್ದ ಮಲ್ಲೇಶ್ವರಂ, ಬ್ರಿಗೇಡ್ ರೋಡ್, ಎಂ. ಜಿ. ರೋಡ್ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಓಡಾಡಿ ಬಂದರು. ಮರಳಿ ಮೂರ್ತಿಯವರ ಮನೆ ಸೇರುವ ವೇಳೆಗೆ ಸಂಜೆ 9ನ್ನೂ ದಾಟಿತ್ತು.
           ಬರುವ ವೇಳೆಗೆ ಅಲ್ಲಿಯೇ ಇದ್ದ ಮೂರ್ತಿಯವರು `ಏನ್ರಪ್ಪಾ ಬೆಂಗಳೂರು ತಿರುಗಾಡಿ ಬಂದಿರಾ? ಯಾವ್ ಯಾವ್ ಕಡೆಗೆ ಹೋಗಿದ್ರಿ?' ಎಂದು ಕೇಳಿದರು.
          `ಇಲ್ಲ.. ಇಲ್ಲ.. ಎಲ್ಲ ಕಡೆ ಹೋಗಿಲ್ಲ.. ಮಲ್ಲೇಶ್ವರಂ ಅಷ್ಟೇ ಓಡಾಡಿದ್ವಿ ನೋಡಿ..' ಎಂದು ತಮಾಷೆ ಮಾಡಿದ ವಿಕ್ರಂ. `ಹಿಡಿಸ್ತಾ ಬೆಂಗಳೂರು?' ಕೇಳಿದರು ಮೂರ್ತಿಗಳು.
           `ಹುಂ.. ಬೆಂಗಳೂರು ಹಿಡಿಸದರೇ ಇದ್ದರೆ ಹೇಗೆ ಹೇಳಿ? ಮಂಗಳೂರಿನಂತೆ ಸೆಖೆ, ಉಪ್ಪುನೀರು ಯಾವುದೂ ಇಲ್ಲಿಲ್ಲ. ತಂಪು ಹವೆ, ಆಹ್ಲಾದಕರ ವಾತಾವರಣ.. ಬಹಳ ಖುಷಿಯಾಗುತ್ತದೆ..' ಎಂದ ವಿಕ್ರಂ. ಆ ಸಮಯದಲ್ಲಿ ಮೂರ್ತಿಯವರ ಮನೆಯವರೆಲ್ಲ  ಆಗಮಿಸಿದ್ದರು. ಹೀಗಾಗಿ ಎಲ್ಲರನ್ನೂ ಮತ್ತೊಮ್ಮೆ ಪರಿಚಯಿಸಿದರು.

*****4*****

           `ನೋಡಿ.. ನಾಳೆ ಜವರಿ 26. ಎಲ್ಲರೂ ಗಣರಾಜ್ಯೋತ್ಸವದ ತಲೆಬಿಸಿಯಲ್ಲಿ ಇರ್ತಾರೆ. ಇಂಥ ಟೈಮನ್ನು ನಾವು ಹಾಳುಮಾಡ್ಕೋಬಾರ್ದು. ಇಂಥ ಹೊತ್ತಲ್ಲಿ ಪೊಲೀಸರು ಬೇರೆ ಕಡೆ ಯೋಚನೆ ಮಾಡ್ತಿರ್ತಾರೆ. ನಾವು ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿ ಈ ವಸ್ತುಗಳನ್ನ ಅಂದ್ರೆ ಗಾಂಜಾ, ಕೋಕೋ ಎಲೆಗಳು, ಆಯುರ್ವೇದ ಔಷಧಿಗಳು, ಆಫೀಮು ಇವನ್ನೆಲ್ಲ ಸಾಗಿಸಬೇಕು. ಕಾರವಾರ, ತದಡಿ, ಭಟ್ಕಳ, ಅಂಕೋಲಾ, ಧಾರೇಶ್ವರ  ಈ ಭಾಗಗಳಲ್ಲಿ ಬೀಚಿನ ಮೂಲಕ ವಿದೇಶಗಳಿಗೆ ಈ ವಸ್ತುಗಳನ್ನು ಸಾಗಿಸುವುದು ಸುಲಭ. ನೆನಪಿರ್ಲಿ ಎಲ್ಲ ಕಡೆ ಹುಷಾರಾಗಿರಬೇಕು. ವಿದೇಶದಿಂದ ಬರುವ ಮಾಲುಗಳನ್ನು ಸರಿಯಾಗಿ ಸಂಗ್ರಹ ಮಾಡಿಕೊಳ್ಳಿ. ಬಂದ ಮಾದಕ ವಸ್ತುಗಳನ್ನು ಸರಿಯಾಗಿ ಹಂಚಿಕೆ ಮಾಡಬೇಕು. ಶಿರಸಿಯಲ್ಲೂ ಈ ಕಾರ್ಯ ಸಮರ್ಪಕವಾಗಿ ಆಗಬೇಕು. ನೆನಪಿರ್ಲಿ. ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮೆಲ್ಲರ ತಲೆ ಎಗರುತ್ತದೆ ನೆನಪಿಟ್ಕೊಂಡಿರಿ..' ಎಂದು ಒಬ್ಬಾತ ಅದೊಂದು ನಿಘೂಡ ಸ್ಥಳದಲ್ಲಿ ತನ್ನವರಿಗೆ ಹೇಳುತ್ತಿದ್ದ. ಉಳಿದವರು ಅದಕ್ಕೆ ತಲೆಯಲ್ಲಾಡಿಸುತ್ತಿದ್ದರು.
           ಜನರನ್ನು ಒಳ್ಳೆಯತನದಿಂದ ಕೆಟ್ಟತನಕ್ಕೆಳೆಯುವ, ಅವರಿಗೆ ಬೇರೆ ಯಾವುದರೆಡೆಗೂ ಯೋಚನೆಯೇ ಇರದಂತೆ, ಮಾದಕ ವಸ್ತುಗಳ ದಾಸರನ್ನಾಗಿ ಮಾಡುವ ಜಾಲವೊಂದು ಅಲ್ಲಿತ್ತು. ಅಲ್ಲದೇ ಮಲೆನಾಡಿನ ಮಡಿಲಲ್ಲಿ ಬೆಳೆಯುವ ಅತ್ಯಮೂಲ್ಯ ಗಿಡಮೂಲಿಕೆಗಳನ್ನು ಕದ್ದು ಸಾಗಿಸಿ ಬಹು ರಾಷ್ಟ್ರೀಯ, ಔಷಧಿ ತಯಾರಿಕಾ ಸಂಸ್ಥೆಗಳಿಗೆ ಮಾರಾಟವನ್ನು ಮಾಡಲಾಗುತ್ತಿತ್ತು. ಈ ಜಾಲಕ್ಕೆ ಜನರ ಒಳಿತು, ಕೆಡುಕುಗಳು ಇಷ್ಟವಿರಲಿಲ್ಲ. ಹಣಗಳಿಕೆಯೊಂದೇ ಮೂಲೋದ್ಧೇಶವಾಗಿತ್ತು. ಪೊಲೀಸ್ ಇಲಾಖೆ ಇವರ ಬೆನ್ನು ಬಿದ್ದು ದಶಕಗಳೇ ಕಳೆದಿದ್ದವು. ಆದರೆ ಇಲಾಖೆ ಚಿಕ್ಕ ಜಾಡನ್ನು ಹಿಡಿಯಲೂ ವಿಫಲವಾಗಿತ್ತು. ಗೂಢಚರ ಇಲಾಖೆ ತಮ್ಮ ಅಧಿಕಾರಿಗಳನ್ನು ಈ ಜಾಲದ ಹಿಂದೆ ಬಿಟ್ಟಿತ್ತು. ಜೊತೆ ಜೊತೆಯಲ್ಲಿ ಖಾಸಗಿ ಗೂಢಚಾರರೂ ಕೂಡ ತಮ್ಮದೇ ಕೆಲಸವನ್ನು ಮಾಡಲು ಆರಂಭಿಸಿದ್ದರು. ಈ ಜಾಲವನ್ನು ಬೇಧಿಸಿದರೆ ತಮಗೆ ಹೆಮ್ಮೆ ಎಂದುಕೊಂಡಿದ್ದರು. ಆದರೆ ಒಂದು ಸಣ್ಣ ಎಳೆ ಸಿಕ್ಕಿತು ಎಂದು ಹುಡುಕಲು ಆರಂಭಿಸಿದರೆ ಗೊಂದಲ ಉಂಟಾಗಿ ಎತ್ತೆತ್ತಲೋ ಸಾಗುತ್ತಿತ್ತು.

****

         ಜನವರಿ 26. ಗಣರಾಜ್ಯದ ದಿನ. ಮೊದಲೇ ನಿರ್ಧರಿಸಿದಂತೆ ವಿಕ್ರಂ ಹಾಗೂ ಜೊತೆಗಾರರು ವಿಧಾನ ಸೌಧದ ಎದುರು ಬಂದು ಸೇರಿದರು. ಅಲ್ಲಿಂದ ಪರೇಡ್ ಗ್ರೌಂಡಿಗೆ ಹೋದರು. ಏನೋ ವಿಶೇಷ ನಡೆಯುತ್ತದೆ ಎಂದುಕೊಂಡು ಹೋದವರಿಗೆ ರಾಜಕಾರಣಿಗಳ ಭಾಷಣ ಬೇಸರವನ್ನು ತರಿಸಿತು. ನಿರಾಸೆಯಿಂದ ಸುತ್ತಮುತ್ತಲೂ ಓಡಾಡಲು ಆರಂಭಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣವನ್ನು ವೀಕ್ಷಿಸಿ, ಹತ್ತಿರದಲ್ಲೇ ಇದ್ದ ಕಬ್ಬನ್ ಪಾರ್ಕನ್ನು ವೀಕ್ಷಣೆಗೆ ಹೊರಟರು. ಕಬ್ಬನ್ ಪಾರ್ಕಿನಲ್ಲಿದ್ದ ಪ್ರೇಮಿಗಳ ಜೋಡಿಗಳನ್ನು ನೋಡಿ ಬೆರಗಾದರು. ಕೆಲವೆಡೆ ಅಸಹ್ಯವನ್ನೂ ಪಟ್ಟುಕೊಂಡರು. ಜೊತೆಗಿದ್ದ ಪ್ರದೀಪನ ಕಣ್ಣಿಗೆ ವಿಶೇಷ ಸಂಗತಿಯೊಂದು ಬಿದ್ದಿತು. ವಿಕ್ರಂ ಹಾಗೂ ಅವನ ಜೊತೆಗಾರರು ಎಲ್ಲ ಕಡೆಗೆ ಓಡಾಡುತ್ತಿದ್ದರೂ ವ್ಯಕ್ತಿಯೊಬ್ಬ ಇವರನ್ನು ಹಿಂಬಾಲಿಸುತ್ತಿದ್ದ. ಬಹಳ ಸಮಯದಿಂದ ವಿಕ್ರಂ-ಜೊತೆಗಾರರು ಹೋದ ಕಡೆಯಲ್ಲೆಲ್ಲ ಬರುತ್ತಿದ್ದ. ಚಲನವಲನ ವೀಕ್ಷಿಸುತ್ತಿದ್ದ. ಪ್ರದೀಪ ಮೊದ ಮೊದಲು ಇದನ್ನು ಅಲಕ್ಷಿಸಿದನಾದರೂ ನಂತರ ಆ ವ್ಯಕ್ತಿ ಹಿಂಬಾಲಿಸುತ್ತಿದ್ದುದು ಖಚಿತವಾದ ನಂತರ ತಾನು ಸ್ವಲ್ಪ ಎಚ್ಚರಿಕಿಯಿಂದ ಇರತೊಡಗಿದೆ. ಈ ವಿಷಯವನ್ನು ಮೊದಲು ವಿಕ್ರಂನಿಗೆ ತಿಳಿಸೋಣ ಎಂದುಕೊಂಡನಾದರೂ ಕೊನೆಗೆ ಬೇಡ ಎಂದುಕೊಂಡು ಸುಮ್ಮನಾದ. ಹಾಗಾದರೆ ಹೀಗೆ ಹಿಂಬಾಲಿಸುತ್ತಿದ್ದ ವ್ಯಕ್ತಿ ಯಾರು? ಪ್ರದೀಪನೇನಾದರೂ ವಿಕ್ರಂನಿಗೆ ಈ ವಿಷಯ ತಿಳಿಸಿದ್ದರೆ ಮುಂದೇನಾದರೂ ತಿರುವು ಘಟಿಸುತ್ತಿತ್ತೇ? ಇದೇನಿದು ಇಂತಹ ಗೂಢತೆ?

*****

             ಒಂದೆರಡು ದಿನಗಳನ್ನು ಬೆಂಗಳೂರಿನಲ್ಲಿ ಕಳೆದ ಮೇಲೆ ನಿರ್ಣಾಯಕ ಎನ್ನಿಸಿದಂತಹ ದಿನಗಳು ಬಂದವು. ಜನವರಿ 28. ಆ ದಿನದ ಸೂರ್ಯ ಟೆನ್ಶನ್ ನೊಂದಿಗೆ ಹುಟ್ಟಿದನೇನೋ ಎನ್ನುವಂತೆ ಎಲ್ಲರಿಗೂ ಅನ್ನಿಸತೊಡಗಿತ್ತು. ಎಲ್ಲರೂ ಸಮಗ್ರ ತಯಾರಿಯೊಂದಿಗೆ ನಿಗದಿತ ಸ್ಥಳಕ್ಕೆ ಹೋದರು. ಅಲ್ಲಾಗಲೇ ಜನರೆಲ್ಲರೂ ಸೇರಿದ್ದರು.
             ಅದೊಂದು ದೊಡ್ಡ ಬಯಲಿನಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದ್ದವು. ಅಲ್ಲಿ ಹೋಗಿ ಕುಳಿತುಕೊಳ್ಳುವ ವೇಳೆಗಾಗಲೇ ಸ್ಪರ್ಧಾ ಘೋಷಣೆಯೂ ಆಯುತು. ಪ್ರಾರಂಭದ ಒಂದೆರಡು ಸ್ಪರ್ಧೆಗಳಲ್ಲಿ ಗೆಲುವುಗಳನ್ನೇ ಕಾಣಲಿಲ್ಲ. ನಂತರ ಜೂಡೋದಲ್ಲಿ ಒಬ್ಬಾತ ಬಹುಮಾನ ಗಳಿಸಿದ. ನಂತರ ಗೆಲುವೆಂಬುದು ಎಲ್ಲ ಕಡೆಗಳಿಂದಲೋ ಎದ್ದೋಡಿ ಬಂದಿತು. ಕುಂಗ್-ಫೂ, ಕತ್ತಿ-ವರಸೆ, ಕರಾಟೆ, ವಾಲ್ ಕ್ಲೈಂಬಿಂಗ್ ಗಳಲ್ಲೆಲ್ಲಾ ಭರ್ಜರಿ ಗೆಲುವುದು ವಿಕ್ರಮನ ಅದ್ವೈತ ಆತ್ಮರಕ್ಷಣೆ ಕೇಂದ್ರದ ತಂಡಗಳಿಗಾಯಿತು.
            ತಮಾಷೆಗೆ ಎಂಬಂತೆ 3 ಸ್ಪರ್ಧೆಗಳಲ್ಲಿ ವಿಕ್ರಂ ಪಾಲ್ಗೊಂಡಿದ್ದ. ಆದರೆ ಆ ಮೂರೂ ಸ್ಪರ್ಧೆಯ ಪ್ರಥಮ ಸ್ಥಾನ ವಿಕ್ರಂನಿಗೆ ಮೀಸಲಾಯಿತು. ಇದರಿಂದ ಖುಷಿಯೋ ಖುಷಿ ಹೊಂದಿದ ಆತ.
            ಒಟ್ಟಿನಲ್ಲಿ ಬೆಂಗಳೂರಿನ ಪ್ರವಾಸ ಗೆಲುವನ್ನೇ ತಂದಿತು ಅವರಿಗೆ. ಮರುದಿನ ಕನ್ನಡದ ಬಹುತೇಕ ಎಲ್ಲಾ ಕ್ರೀಡಾ ಪುಟಗಳಲ್ಲಿ ಇವರ ಸಾಧನೆಯನ್ನು ಪ್ರಶಂಶಿಸಿ ಬರೆದಿದ್ದರು. ಮಂಗಳೂರ ಸಾಹಸಿಗರು, ವಿಕ್ರಂನ ತಂಡದ ವಿಕ್ರಮ ಮುಂತಾದ ತಲೆಬರಹದೊಂದಿಗೆ ವರದಿಗಳು ಬಂದಿದ್ದವು. ಹೀಗೆ ಒಮ್ಮಿಂದೊಮ್ಮೆಲೆ ವಿಕ್ರಮ ಕರ್ನಾಟಕದಾದ್ಯಂತ ಮನೆ ಮಾತಾದ. ಇದರಿಂದ ಮೂರ್ತಿಯವರ ಮನೆಯಲ್ಲಂತೂ ಬಹಳ ಸಂತಸ ಪಟ್ಟರು. ತಾವೇ ಗೆದ್ದಂತೆ ಕುಣಿದಾಡತೊಡಗಿದರು.
            ವಿಕ್ರಂ ತಂಡದವರು ಜನವರಿ 29ರಂದು ಬೆಂಗಳೂರಿನಲ್ಲೇ ಉಳಿದು ಜನವರಿ 30ರಂದು ಮಂಗಳೂರಿಗೆ ವಾಪಾಸಾದರು. ರೂಮಿನಲ್ಲಿ ಬಂದು ಕುಳಿತುಕೊಳ್ಳುವಷ್ಟರಲ್ಲೇ ವಿಕ್ರಮನ ಮೊಬೈಲ್ ಬಿಡುವಿಲ್ಲದಂತೆ ರಿಂಗಣಿಸತೊಡಗಿತ್ತು. ಪೋನಿನ ಮೇಲೆ ಫೋನ್. ಅಭಿನಂದನೆಗಳ ಸುರಿಮಳೆ. ಎಲ್ಲ ಕರೆಗಳನ್ನು ಸ್ವೀಕರಿಸಿ, ಅವರ ಅಭಿನಂದನೆಯನ್ನು ಸ್ವೀಕರಿಸುವಷ್ಟರಲ್ಲಿ ವಿಕ್ರಂ ಸುಸ್ತೋ ಸುಸ್ತು.
           ಆ ದಿನ ವಿಕ್ರಂ ಬಹಳ ಸಂತಸದಿಂದ ಸ್ವರ್ಗಕ್ಕೇ  ಮೂರು ಗೇಣು ಎಂಬಂತೆ ಆಡತೊಡಗಿದ್ದ. ಅದರ ನೆನಪಲ್ಲೇ ಆತ ಮಲಗಿ ಸವಿ ಕನಸನ್ನೂ ಕಾಣಲಾರಂಭಿಸಿದ.

****
     
          ಮರುದಿನ, ವಿಕ್ರಂ ಬಹಳ ಲೇಟಾಗಿ ಎದ್ದ. ತಿಂಡಿ ಇತ್ಯಾದಿಯನ್ನು ಮುಗಿಸುವ ವೇಳೆಗಾಗಲೇ ಆತನ ರೂಮಿನ ಕಾಲಿಂಗ್ ಬೆಲ್ ಸದ್ದಾಗತೊಡಗಿತು. ಹೋಗಿ ಬಾಗಿಲು ತೆಗೆದ. ಬಾಗಿಲಲ್ಲಿ ಒಬ್ಬಾಕೆ ನಿಂತಿದ್ದಳು. ಹಿಂದೆ ಒಬ್ಬಾತ ಗಡ್ಡದವನು ನಿಂತಿದ್ದ. ವಿಕ್ರಮನಿಗೆ ಒಮ್ಮೆಲೆ ಅಚ್ಚರಿಯಾದರೂ ಸಾವರಿಸಿಕೊಂಡು ಅವರನ್ನು ಒಳಕ್ಕೆ ಸ್ವಾಗತಿಸಿದ. ಬ್ಯಾಚುಲರ್ ರೂಮ್. ಒಳಗಿದ್ದ ವಸ್ತುಗಳು ಸಾಕಷ್ಟು ಅಸ್ತವ್ಯಸ್ತವಾಗಿದ್ದವು. ಮುಜುಗರದಿಂದ ಅವನ್ನೆಲ್ಲ ಮುಚ್ಚಿಡುವ ಪ್ರಯತ್ನ ಮಾಡಿದ. ಬಂದ ಆಗಂತುಕರು ನಕ್ಕರು.
          ಅವರೀರ್ವರೂ ಒಳಕ್ಕೆ ಬಂದವರೇ ತಮ್ಮ ಪರಿಚಯವನ್ನು ತಿಳಿಸಿದರು. ಅವರೀರ್ವರಲ್ಲಿ ಒಬ್ಬಾಕೆ ವಿಜೇತಾ ಎಂದೂ, ಇನ್ನೊಬ್ಬ ಗಡ್ಡಧಾರಿ ವ್ಯಕ್ತಿ ನವೀನಚಂದ್ರ ಎಂದೂ ತಿಳಿಯಿತು. ನವೀನಚಂದ್ರ ಮಂಗಳೂರು ಮೇಲ್ ಪತ್ರಿಕೆಯ ಉಪಸಂಪಾದಕರೆಂದೂ, ವಿಜೇಜಾ ಅದರ ವರದಿಗಾರ್ತಿಯೆಂದೂ ತಿಳಿಯಿತು. ನವೀನಚಂದ್ರ ಸುಮಾರು 50ರ ಆಸುಪಾಸಿನವನು. ವಿಜೇತಾಳಿಗೆ ಬಹುಶಃ 22-23 ಇರಬಹುದು. ಆಗ ತಾನೇ ಕಾಲೇಜನ್ನು ಮುಗಿಸಿ ಬಂದಿದ್ದಳೇನೋ ಎಂದುಕೊಂಡ. ಚಂದನೆಯ ದುಂಡು ಮುಖ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎನ್ನಿಸುವಂತಿದ್ದಳು ಅವಳು.
         `ನಿಮ್ಮ ಬಗ್ಗೆ ಪೇಪರಿನಲ್ಲಿ ನೋಡಿದೆ. ನಿಮ್ಮಂಥವರು ಮಂಗಳೂರಿನವರು ಎಂದರೆ ಹೆಮ್ಮೆಯ ಸಂಗತಿ. ಹಾಳು ಬಿದ್ದು ಹೋಗುತ್ತಿರುವ ಇಂದಿನ ಯುವ ಜನತೆಗೆ ತಿಳಿ ಹೇಳಲು ನಿಮ್ಮನ್ನು ಬಳಸಿ, ನಿಮ್ಮ ಸಂದರ್ಶನ ಮಾಡಲು ಬಂದಿದ್ದೇವೆ.' ಎಂದು ನವೀನಚಂದ್ರ ಹೇಳಿದರು.
          `ಅಯ್ಯೋ ಅಂತಹ ದೊಡ್ಡ ಸಾಧನೆ ನಾವೇನೂ ಮಾಡಿಲ್ಲ.. ಥೋ... ಬಿಡಿ..' ಎಂದ ವಿಕ್ರಂ.
          `ಇಲ್ಲ.. ಇಲ್ಲ.. ನೀವು ಈಗ ಮಾಡಿರುವ ಸಾಧನೆ ಬಹು ದೊಡ್ಡದು ನೋಡಿ..' ಎಂದಳು ವಿಜೇತಾ. ಆಕೆಯ ಧ್ವನಿ ಮಧುರವಾಗಿತ್ತು.
          `ಏನೋ, ಎಂಥೋ.. ನಾನು ಕಲಿಸಿದೆ, ನನ್ನ ಪ್ರೆಂಡ್ಸ್ ಪ್ರದೀಪ್ ಜೊತೆಗಿದ್ದು ಸಹಾಯ ಮಾಡಿದ. ಗೆದ್ವಿ. ಅದಿರ್ಲಿ ಬಿಡಿ.. ನಿಮ್ಮನ್ನ ನನ್ನ ಸಾಹಸಿ ತಂಡದ ಬಳಿಗೆ ಕರೆದೊಯ್ಯುತ್ತೇನೆ. ಬನ್ನಿ ಎಂದು ಅವರನ್ನು ಕರೆದೊಯ್ದ.
           ಹೀಗೆ ಕರೆದೊಯ್ದಿದ್ದನ್ನೂ ಕೂಡ ಆ ಅಪರಿಚಿತ ವ್ಯಕ್ತಿ ವೀಕ್ಷಿಸಿ, ಫಾಲೋ ಮಾಡುತ್ತಿದ್ದ. ಆತ ತಾನು ಕಂಡಿದ್ದನ್ನು ಇನ್ನೊಬ್ಬರಿಗೆ ತಿಳಿಸುತ್ತಿದ್ದ. ಆದರೆ ಯಾಕೆ ಹೀಗೆ ಮಾಡುತ್ತಿದ್ದಾನೆ ಎನ್ನುವುದು ಮಾತ್ರ ನಿಘೂಡವಾಗಿತ್ತು.
          ವಿಕ್ರಂ ಅವರಿಬ್ಬರನ್ನೂ ಅದ್ವೈತ ಆತ್ಮರಕ್ಷಣೆ ಕೇಂದ್ರಕ್ಕೆ ಕರೆದೊಯ್ದ. ಎಲ್ಲರನ್ನೂ ಪರಿಚಯಿಸಿದ. ಅವರು ಏನೇನೋ ಪ್ರಶ್ನೆ ಕೇಳಿದರು. ಇವರು ಉತ್ತರಿಸಿದರು. ಆದರೆ ಆ ದಿನ ಮಾತ್ರ ಪ್ರದೀಪನ ಸುಳಿವೇ ಇರಲಿಲ್ಲ. ಆತನ ಪರಿಚಯಿಸಲು ಆದಿನ ಸಾಧ್ಯವಾಗಲೇ ಇಲ್ಲ. ನವೀನ ಚಂದ್ರ ಹಾಗೂ ವಿಜೇತಾ ಇಬ್ಬರೂ ತಮ್ಮನ್ನು ಮತ್ತೆ ಭೇಟಿಯಾಗಬೇಕೆಂದು ಹೇಳಿ ಹೊರಟುಹೋದರು.
          ಮರುದಿನ ಮಂಗಳೂರು ಮೇಲ್ ನಲ್ಲಿ ಇವರ ಸಂದರ್ಶನವೇ ಪ್ರಮುಖ ಸುದ್ದಿಯಾಗಿ ಹೊರಹೊಮ್ಮಿತ್ತು. ಇದರಿಂದ ಖುಷಿಯಾದ ವಿಕ್ರಂ ಅದಕ್ಕೆ ಕಾರಣರಾದವರಿಗೆ ಮನದಲ್ಲಿಯೇ ಥ್ಯಾಂಕ್ಸ್ ಎಂದುಕೊಂಡ. ಮುಂದೊಂದು ದಿನ ಇದೇ ಹೊಸ ತಿರುವನ್ನು ನೀಡಲಿತ್ತು.

*****

(ಮುಂದುವರಿಯುತ್ತದೆ)

Monday, December 22, 2014

ಜೊತೆ (ಕಥೆ)

      ಅವಳು ಮಕ್ಕಳು ಹುಟ್ಟಿದ ಒಂದೂ ವರೆ ವರ್ಷದ ತರುವಾಯ ಅನಿತಾ ಮತ್ತೆ ಕೆಲಸಕ್ಕೆ ಸೇರಬೇಕು ಎಂದು ಬಯಸಿದಳು. ಅದಕ್ಕಾಗಿ ಹಲವಾರು ಕಡೆಗಳಲ್ಲಿ ಅಪ್ಲಿಕೇಶನ್ನುಗಳನ್ನೂ ಹಾಕಿ ಬಂದಿದ್ದಳು. ಕೊನೆಗೊಂದು ಕಂಪನಿ ಆಕೆಯನ್ನು ಇಂಟರ್ವ್ಯೂಗೆ ಕರೆದಿತ್ತು. ಶುಭದಿನದಂದು ಆಕೆ ಇಂಟರ್ವ್ಯೂಗೆ ಹೋದ ಅನಿತಾ ಸರದಿಯ ಪ್ರಕಾರ ಕಾದು ತನ್ನ ಸಮಯ ಬಂದಾಗ ಕಂಪನಿ ಮಾಲೀಕರ ಚೇಂಬರ್ ಒಳ ಹೊಕ್ಕಳು. ಒಳ ಹೋಗಿ ನೋಡಿದವಳಿಗೆ ಒಮ್ಮೆ ದಿಘ್ಬ್ರಾಂತಿ. ಮಾಲೀಕನ ಸೀಟಿನಲ್ಲಿ ಕುಳಿತವನು ವಿನಾಯಕನೇ. ಅವನನ್ನೇ ಕಂಡ ಹಾಗೆ ಆಗುತ್ತದೆಯಲ್ಲ. ಅವನೇ ಹೌದಾ? ಅಥವಾ ಬೇರೆ ಯಾರಾದರೂ? ಜಗತ್ತಿನಲ್ಲಿ ಒಂದೇ ಥರದ ಜನ 7 ಮಂದಿ ಇರುತ್ತಾರಂತೆ. ವಿನಾಯಕನ ರೀತಿ ಇರುವ ವ್ಯಕ್ತಿಯಾ ಇವನು? ಎಂದುಕೊಂಡಳು ಅನಿತಾ.
                 ಒಮ್ಮೆ ಕಣ್ಣುಜ್ಜಿಕೊಂಡು ನೋಡಿದರೂ ರೂಪ ಬದಲಾಗಲಿಲ್ಲ. ವಿನಾಯಕನೇ ಹೌದು ಕಾಲೇಜು ದಿನಗಳಲ್ಲಿ ನೋಡಿದ್ದಕ್ಕಿಂತ ಬಹಳ ದಪ್ಪಗಾಗಿದ್ದಾನೆ. ರೂಪು ಕೊಂಚ ಚೇಂಜಾಗಿದೆ. ಆದರೆ ಈತ ಮಾಲೀಕನಾಗಲು ಹೇಗೆ ಸಾಧ್ಯ? ಏನಾಯ್ತು.. ಎಂದು ಕೊಂಡವಳಿಗೆ ಒಮ್ಮೆ ಭೂಮಿ ನಿಂತಂತಹ ಅನುಭವ. ಕಣ್ಣಲ್ಲಿ ಧಳ ಧಳನೆ ನೀರು ಇಳಿಯುತ್ತಲಿತ್ತು.

*****

            `ನಮಗೆ ಕೂಸು ಹುಟ್ಟಿದ್ರೆ ಅವನಿ ಹೇಳಿ ಹೆಸರು ಇಡೊಣ.. ಮಾಣಿ ಹುಟ್ಟಿದರೆ ಅತ್ರಿ ಅಂತ ಹೆಸರಿಡೋಣ.. ಏನಂತೀಯಾ..?' ವಿನಾಯಕ ಕೇಳಿಬಿಟ್ಟಿದ್ದ.
             `ಮಾರಾಯಾ.. ಅದೆಲ್ಲ ಕೊನೆಗಾಯ್ತು.. ಮೊದಲು ನಮಗೆ ಮದುವೆಯಾಗಲಿ.. ಆಮೇಲೆ ಮಕ್ಕಳು ಮರಿ ಎಲ್ಲ.. ಆಮೇಲೆ ಮಕ್ಕಳ ಹೆಸರನ್ನು ಯೋಚಿಸಿದರಾಯ್ತು.. ಬಿಡು..' ಎಂದಿದ್ದಳು ಅನಿತಾ.
             `ನಮಗೆ ಮದುವೆ ಆಗೇ ಆಗ್ತದೆ ಮಾರಾಯ್ತಿ.. ಯಾಕೆ ನೀನು ಹಂಗೆ ಆಲೋಚನೆ ಮಾಡೋದು? ನಮ್ಮನ್ನು ದೂರ ಮಾಡುವವರು ಯಾರಿದ್ದಾರೆ ಹೇಳು? ಅದು ಬಿಟ್ಹಾಕು.. ಈ ಹೆಸರುಗಳು ಹೇಗಿದೆ ಹೇಳು..?' ಎಂದು ಕೇಳಿದ್ದ ವಿನಾಯಕ.
             `ಹೆಸರು ಬಹಳ ಚಂದಿದ್ದು... ಆದರೆ ಈ ಹೆಸರೇ ಯಾಕೆ?'
             `ಈ ಎರಡೂ ಹೆಸರು ಯಾಕೋ ಬಹಳ ಇಷ್ಟವಾಗಿದೆ.. ನಿಂಗೂ ಇಷ್ಟವಾದರೆ ಮುಂದೆ ನಮಗೆ ಹುಟ್ಟುವ ಮಕ್ಕಳಿಗೆ ಇಡೋಣ...' ಎಂದ ವಿನಾಯಕ.
             `ನಮ್ಮ ಮದುವೆ ಇನ್ನೂ ಬಹಳ ಸಮಯ ಹಿಡಿಯುತ್ತದೆ ಮಾರಾಯಾ.. ಇನ್ನೂ ನಮ್ಮ ಓದು ಮುಗೀಬೇಕು.. ಆಮೇಲೆ ನಮ್ಮ ಮನೆಯಲ್ಲಿ ಮದುವೆ ಪ್ರಸ್ತಾಪ ಇಡಬೇಕು.. ಮದುವೆಗೆ ಮನೆಯಲ್ಲಿ ಒಪ್ಪಿಕೊಳ್ಳಬೇಕು.. ಉಫ್.. ಇಷ್ಟೆಲ್ಲ ಆಗಲಿಕ್ಕಿ ಇನ್ನೂ ಮೂರ್ನಾಲ್ಕು ವರ್ಷಗಳೇ ಬೇಕು.. ಆದರೂ ನೀನು ಈಗಲೇ ನಮ್ಮ ಮಕ್ಕಳಿಗೆ ಹೆಸರು ಇಡುವ ಹಂತಕ್ಕೆ ಬಂದೆಯಲ್ಲ ಮಾರಾಯಾ.. ಎಂತಾ ಕನಸೋ ನಿನ್ನದು...' ಎಂದಳು.
             ಹುಂ ಎಂದು ನಸುನಕ್ಕಿದ್ದ ವಿನಾಯಕ. ಹಿತವಾಗಿ ಆತನ ಕೈಯನ್ನು ಹಿಡಿದು ನಡೆಯತೊಡಗಿದಳು ಅನಿತಾ. ಮಾತು ಮುಂದಕ್ಕೆ ಸಾಗಿತ್ತು.
            ವಿನಾಯಕ ಹಾಗೂ ಅನಿತಾ ಪ್ರೀತಿಸಲಿಕ್ಕೆ ಹಿಡಿದು ಆರು ತಿಂಗಳಾಯಿತು. ವಿನಾಯಕನಿಗೆ ಕಾಲೇಜಿನಲ್ಲಿ ಸುಮ್ಮನೆ ಪರಿಚಯವಾದವಳು ಅನಿತಾ. ಪರಿಚಯ ಸ್ನೇಹವಾಗಿ, ಬಿಡಿಸದ ಬಂಧವಾಗಿ ಅದ್ಯಾವುದೋ ಘಳಿಗೆಯಲ್ಲಿ ಮಾರ್ಪಟ್ಟಿತ್ತು. ಓದುತ್ತಿದ್ದ ಕಾಲೇಜಿನಲ್ಲಿ ಸುದ್ದಿಯಾಗುವಷ್ಟು ಬಂಧ ಬೆಳೆದಿತ್ತು. ಇಬ್ಬರೂ ಒಬ್ಬರಿಗೊಬ್ಬರು ಜೀವಕ್ಕೆ ಜೀವ ಎನ್ನುವಷ್ಟು ಒಂದಾಗಿದ್ದು. ಹೀಗಿದ್ದಾಗಲೇ ವಿನಾಯಕ ಅನಿತಾಳ ಬಳಿ ತನ್ನ ಮನಸ್ಸಿನಲ್ಲಿ ಮೂಡಿದ ಭಾವನೆಯನ್ನು ಬಿಚ್ಚಿಟ್ಟಿದ್ದ. ಆಕೆಯೂ ಅದಕ್ಕೆ ಹಿತವಾಗಿ ಮಾತನಾಡಿದ್ದಳು.
            `ಅಲ್ಲಾ.. ಅವನಿ ಹಾಗೂ ಅತ್ರಿ ಎನ್ನುವ ಹೆಸರೇ ಯಾಕೆ ನಿನ್ನ ಮನಸ್ಸಿನಲ್ಲಿ ಮೂಡಿದ್ದು?' ಎಂದೂ ಕೇಳಿದ್ದಳು ಅನಿತಾ. `ಅವನಿ ಎನ್ನುವ ಹೆಸರಿನಲ್ಲಿ ಅ ಅಕ್ಷರ ಇದೆ. ವ ಇದೆ. ನಿ ಇದೆ. ಅ ಅಂದರೆ ನಿನ್ನ ಹೆಸರಿನ ಮೊದಲ ಅಕ್ಷರ ಅನಿತಾ. ವ ಹಾಗೂ ನಿ ಯಲ್ಲಿ ನನ್ನ ಹೆಸರಿನಲ್ಲಿರುವ ಅಕ್ಷರಗಳಿವೆ. ಅದಕ್ಕೆ ಅವನಿ ಹೆಸರು ಆಯ್ಕೆ ಮಾಡಿಕೊಂಡಿದ್ದು. ಅತ್ರಿ ಹೆಸರು.. ಸುಮ್ಮನೆ ಆಯ್ಕೆಮಾಡಿಕೊಂಡಿದ್ದು. ಆದರೂ ಅದಲ್ಲಿ ನಿನ್ನ ಹೆಸರಿನಲ್ಲಿರುವ ಅಕ್ಷರಗಳಿವೆ..' ಎಂದು ಹೇಳಿ ಪೆಚ್ಚು ನಗು ನಕ್ಕಿದ್ದ ವಿನಾಯಕ.  `ನಿಂಗೆ ಪಕ್ಕಾ ಹುಚ್ಚೇಯಾ...' ಎಂದು ನಕ್ಕಿದ್ದಳು ಅನಿತಾ.
             ಇಬ್ಬರೂ ಈ ಹೆಸರುಗಳ ಬಗ್ಗೆ ತಮಾಷೆ ಮಾಡಿಕೊಂಡಿದ್ದರೂ ಮನಸ್ಸಿನಲ್ಲಿ ಮಾತ್ರ ನೆನಪಿಟ್ಟುಕೊಂಡಿದ್ದರು. ಇದೇ ಹೆಸರನ್ನು ಇಡಬೇಕು ಎಂದುಕೊಂಡೂ ಆಗೀಗ ಅಂದುಕೊಳ್ಳುತ್ತಿದ್ದರು. ಹೀಗೆ ಹೆಸರನ್ನು ಇಟ್ಟುಕೊಳ್ಳುವುದರಲ್ಲೂ ಒಂಥರಾ ಮಜವಿದೆ ಎಂದು ಇಬ್ಬರಿಗೂ ಅನ್ನಿಸಿತ್ತು. ಭೂಮಿಯೆಂಬ ಅರ್ಥ ಕೊಡುವ ಅವನಿ, ಮಹಾಮುನಿ ಅತ್ರಿಯ ಹೆಸರುಗಳು ವಿನಾಯಕನಿಗೆ ಯಾವ ಕ್ಷಣದಲ್ಲಿ ಹೊಳೆದವೋ ಎಂದುಕೊಂಡಿದ್ದಳು ಅನಿತಾ.
             `ಚೆಂದದ ಹೆಸರು ಕಣೋ ವಿನು.. ಇಂತಹ ವಿಶಿಷ್ಟ ಕಾರಣಗಳಿಗೆ ನೀನು ನಂಗಿಷ್ಟವಾಗ್ತೀಯಾ.. ಐ ಲವ್ ಯೂ..' ಎಂದು ಹೇಳಿದ್ದಳು ಅನಿತಾ. ಖುಷಿಯಿಂದ ಅವಳನ್ನು ತಬ್ಬಿ ನೇವರಿಸಿದ್ದ ವಿನಾಯಕ.
             ಅವರ ಪ್ರೇಮಯಾನದ ಬದುಕು ಕಾಲೇಜು ದಿನಗಳಲ್ಲಿ ಸರಳವಾಗಿ, ಸುಂದರವಾಗಿ ಯಾವುದೇ ತೊಂದರೆಯಿಲ್ಲದೇ ನಿರಾತಂಕವಾಗಿ ಮುಂದಕ್ಕೆ ಸಾಗಿತ್ತು. ಕಾಲೇಜು ಜೀವನ ಮುಕ್ತಾಯ ಎನ್ನುವುದು ಅವರ ಬಾಳ ನೌಕೆಗೆ ತಡೆಯನ್ನೊಡ್ಡಿತ್ತು. ಕಾಲೇಜು ಮುಗಿದ ತಕ್ಷಣ ವಿನಾಯಕನ ಮುಂದೆ ಬದುಕಿನ ಕಲ್ಲು ಮುಳ್ಳಿನ ದಾರಿ ಎದುರು ನಿಂತು ಅಣಕಿಸುತ್ತಿತ್ತು. ಆದರೆ ಅನಿತಾಳಿಗೆ ಈ ಸಮಸ್ಯೆ ಇರಲಿಲ್ಲ. ಮನೆಯಲ್ಲಿ ಸಾಕಷ್ಟು ಅನುಕೂಲಸ್ತರಾಗಿದ್ದರು. ಅನಿತಾಳೇ ತಂದೆಯ ಬಳಿ ಹರಪೆ ಬಿದ್ದು ಬೆಂಗಳೂರಿಗೆ ಜಾಬ್ ಮಾಡಲು ಹೋಗುತ್ತೇನೆ ಎಂದಿದ್ದಳು. ಆಕೆಯ ಅಪ್ಪಯ್ಯ ಅದಕ್ಕೆ ಒಪ್ಪಿಗೆಯನ್ನೂ ಕೊಟ್ಟುಬಿಟ್ಟಿದ್ದ. ಇತ್ತ ವಿನಾಯಕನ ಬದುಕು ಮಾತ್ರ ಎತ್ತೆತ್ತಲೋ ಸಾಗುತ್ತಿತ್ತು.
***
           ಕೆಳ ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ ವಿನಾಯಕನ ಮನೆಯಲ್ಲಿ ಕಾಲೇಜು ಮುಗಿಸಿದವನು ಕೆಲಸ ಮಾಡಲೇಬೇಕಾದ ಜರೂರತ್ತಿತ್ತು. ಸೊಸೈಟಿಯ ಸಾಲದ ನೊಟೀಸು ಪದೇ ಪದೆ ಬಂದು ಪೋಸ್ಟ್ ಮನ್ ಮೂಲಕ ಕದ ತಟ್ಟುತ್ತಿತ್ತು. ವಿನಾಯಕನ ಅಪ್ಪಯ್ಯ ಮಗನ ಬಳಿ ಏನಾದರೂ ಕೆಲಸವನ್ನು ಹಿಡಿ ಎನ್ನುವ ಒತ್ತಡವನ್ನೂ ಹಾಕತೊಡಗಿದ್ದ. ಹುಡುಗಿಯರಿಗೆ ಬಹುಬೇಗನೆ ಕೆಲಸ ಸಿಕ್ಕಿಬಿಡುತ್ತದೆ.. ಆದರೆ ಹುಡುಗರಿಗೆ ಹಾಗಲ್ಲ. ವಿನಾಯಕನ ಪರಿಸ್ಥಿತಿಯೂ ಇದೇ ಆಗಿತ್ತು. ವರ್ಷಗಳು ಉರುಳಿದರೂ ವಿನಾಯಕನಿಗೆ ಗಟ್ಟಿ ಕೆಲಸ ಸಿಗಲೇ ಇಲ್ಲ. ಅತ್ತ ಅನಿತಾ ವಿನಾಯಕನ ಮೇಲೆ ಒತ್ತಡ ಹಾಕತೊಡಗಿದ್ದಳು.
          `ಮನೆಲಿ ಅಪ್ಪಯ್ಯ ಗಮಡು ನೋಡಲೆ ಹಿಡದ್ದಾ.. ಬೇಗ ನೀ ಒಂದ್ ಜಾಬ್ ಹಿಡಿ ಮಾರಾಯಾ.. ಆಮೇಲೆ ಅಪ್ಪಯ್ಯನ ಕೈಲಿ ಹೇಳು.. ಯನ್ನ ಮದುವೆ ಆಗುವ ಬಗ್ಗೆ ಮಾತನಾಡು...' ಎಂದು ಅನಿತಾ ಹೇಳಿದಾಗಲೆಲ್ಲ ವಿನಾಯಕ ಸಬೂಬು ಹೇಳುತ್ತಿದ್ದ. ವಿನಾಯಕನ ಕೆಲಸದ ಅನ್ವೇಷಣೆ ಸಾಗಿಯೇ ಇತ್ತು. ಅದ್ಯಾವುದೋ ಸಾಡೆ ಸಾತಿನ ಶನಿ ವಿನಾಯಕನ ಹೆಗಲ ಮೇಲೆ ಏರಿ ಕುಳಿತಿದ್ದ. ಯಾವುದೇ ಕೆಲಸ ವಿನಾಯಕನ ಕೈಯನ್ನು ಭದ್ರವಾಗಿ ಹಿಡಿದಿರಲಿಲ್ಲ.
           ಇತ್ತ ಅನಿತಾ ಕೂಡ ನೋಡುವಷ್ಟು ನೋಡಿದಳು. ವಿನಾಯಕನಿಗೆ ಯಾವುದೇ ಕೆಲಸ ಸಿಗುವ ಭರವಸೆ ಉಳಿದಿರಲಿಲ್ಲ. ಅಪ್ಪಯ್ಯ ಒಂದಿನ ಬೆಂಗಳೂರಿನಲ್ಲಿ ಸಿಎ ಪಾಸು ಮಾಡಿ ಒಳ್ಳೆ ಕೆಲಸದಲ್ಲಿದ್ದ ಹುಡುಗನೊಬ್ಬ ಪೋಟೋ ತೋರಿಸಿ ಮದುವೆ ಪ್ರಸ್ತಾಪ ಇಟ್ಟೇಬಿಟ್ಟದಿದ್ದರು. ಕೊಟ್ಟ ಕೊನೆಯ ಬಾರಿಗೆ ವಿನಾಯಕನ ಬಳಿ ಕೆಲಸದ ವಿಷಯ ಹೇಳಿದ ಅನಿತಾ ಕೊನೆಗೊಮ್ಮೆ ಅಪ್ಪಯ್ಯ ತೋರಿಸಿದ ಹುಡುಗನನ್ನು ಮದುವೆಯಾಗಲು ಹೂಂ ಅಂದುಬಿಟ್ಟಿದ್ದಳು. ಧಾಂ.. ಧೂಂ.. ಆಗಿ ಮದುವೆಯೂ ನಡೆಯಿತು. ಸಿ.ಎ. ಮಾಡಿ ಕೆಲಸದಲ್ಲಿದ್ದ ಹುಡುಗನ ಹೆಂಡತಿಯಾಗಿ ಅನಿತಾ ಬೆಂಗಳೂರಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದರೆ ವಿನಾಯಕ ಒಳಗೊಳಗೆ ಮರುಗಿ, ಕೊರಗಿ, ಖಿನ್ನತೆಯಿಂದ ಬಳಲಿ ಹೋಗಿದ್ದ. ಬದುಕಿನ ಎಲ್ಲ ದಾರಿಗಳು ಮುಚ್ಚಿ ಹೋದಂತಾಗಿ ಮಂಕಾಗಿ ಕುಳಿತಿದ್ದ. ಬದುಕಿನ ದಾರಿಯಲ್ಲಿ ದೊಡ್ಡದೊಂದು ಗುಡ್ಡ ಕುಸಿದು ಬಿದ್ದಂತೆ ದಿಕ್ಕು ಕಾಣದಂತೆ ಉಳಿದುಬಿಟ್ಟಿದ್ದ.
            ಅನಿತಾಳ  ಮದುವೆ ಯಾರೊಬ್ಬನ ಜೊತೆಗೋ ಆದಾಗಲೇ ವಿನಾಯಕನ ಹೆಗಲಿನ ಮೇಲೆ ಕುಳಿತಿದ್ದ ಶನಿ ನಿಧಾನವಾಗಿ ಇಳಿದುಬಿಟ್ಟಿದ್ದ. ಅದ್ಯಾವುದೋ ಕ್ಷಣದಲ್ಲಿ ಮಾಡಿಕೊಂಡಿದ್ದ ಪುಣ್ಯದ ಫಲವಾಗಿ ವಿನಾಯಕನಿಗೆ ಹೆಸರಾಂತ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತ್ತು. ಪರಿಣಾಮವಾಗಿ ವಿನಾಯಕ ಕೂಡ ಬೆಂಗಳೂರು ವಾಸಿಯಾಗಿದ್ದ.
           ಬೆಂಗಳೂರಿನ ಬದುಕು ವಿನಾಯಕನಿಗೆ ದುಡ್ಡು ಮಾಡುವ ದಾರಿಯನ್ನು ಕಲಿಸಿಬಿಟ್ಟಿತ್ತು. ಬೆಂಗಳೂರಿಗೆ ಹೋದ ಎರಡೇ ವರ್ಷದಲ್ಲಿ ಒಂದೆರಡು ಸೈಟುಗಳನ್ನು ಕೊಳ್ಳುವಷ್ಟು ಹಣವೂ ಸಂಗ್ರಹವಾಗಿತ್ತು. ಹೀಗಿದ್ದಾಗಲೇ ವಿನಾಯಕನ ಮನೆಯಲ್ಲೂ ಆತನಿಗೆ ಹುಡುಗಿಯನ್ನು ಹುಡುಕಿ ಮದುವೆ ಮಾಡಲು ಮುಂದಾಗಿದ್ದರು. ವಿನಾಯಕ ಕೂಡ ಸಾಕಷ್ಟು ಹುಡುಗಿಯರನ್ನು ನೋಡಿದನಾದರೂ ಯಾರೊಬ್ಬರೂ ಇಷ್ಟವಾಗಲಿಲ್ಲ. ಅನಿತಾಳ ನೆನಪಿನ್ನೂ ಆತನ ಮನಸ್ಸಿನಲ್ಲಿ ಕೂತಿತ್ತು. ಪದೇ ಪದೆ ಕೊರೆಯುತ್ತಲೇ ಇತ್ತು.
**********

        ಮದುವೆಯಾಗಿ ಮೂರು ವರ್ಷ ಕಳೆದ ನಂತರವೂ ಅನಿತಾಳಿಗೆ ವಿನಾಯಕ ನೆನಪಾಗುತ್ತಲೇ ಇದ್ದ. ಕೆಲಸ ಮಾಡುವ ಗಂಡ, ಕೈತುಂಬ ಸಂಬಳ ತರುತ್ತಾನೆ. ಕಾರಿದೆ, ದೊಡ್ಡದೊಂದು ಫ್ಲಾಟ್ ಇದೆ. ವೀಕೆಂಡಲ್ಲಿ ಹೊಗೆನಕಲ್ ಜಲಪಾತಕ್ಕೋ, ಮುತ್ತತ್ತಿಗೋ, ಬನ್ನೇರುಘಟ್ಟಕ್ಕೋ, ಅಪರೂಪಕ್ಕೊಮ್ಮೆ ಕೊಡಗಿಗೋ, ಮೈಸೂರಿಗೋ ಕರೆದುಕೊಂಡು ಹೋಗಿ ಬರುತ್ತಾನೆ. ಆದರೂ ಏನೋ ಕೊರತೆಯಿದೆ ಎನ್ನುವುದು ಆಕೆಗೆ ಅನ್ನಿಸಲು ಆರಂಭಿಸಿತ್ತು. ತಾನೂ ಕೆಲಸಕ್ಕೆ ಹೂಗುವವಳಾದರೂ ಆಗೀಗ ವಿನಾಯಕನ ನೆನಪು ಥಟ್ಟನೆ ನೆನಪಾಗುತ್ತಿತ್ತು. ಹೀಗಿದ್ದಾಗಲೇ ಅನಿತಾಳಿಗೆ ಅವಳಿ ಜವಳಿ ಮಕ್ಕಳು ಜನಿಸಿದ್ದರು.

************

            ವಿನಾಯಕ ಕೊನೆಗೂ ಹುಡುಗಿಯೊಬ್ಬಳನ್ನು ಮದುವೆಯಾಗಲು ಒಪ್ಪಿದ. ಹೀಗಾಗುವ ವೇಳೆಗೆ ಕೈಗೆ ಸಿಕ್ಕಿದ್ದ ಕೆಲಸವನ್ನು ಬಿಟ್ಟು ಬಿಟ್ಟಿದ್ದ ವಿನಾಯಕ ತನ್ನದೇ ಸ್ವಂತ ಕಂಪನಿಯೊಂದನ್ನು ಹುಟ್ಟು ಹಾಕಿದ್ದ. ಮದುವೆಯಾದ ನಂತರವಂತೂ ಆ ಕಂಪನಿ ಲಾಭದ ಗುಡ್ಡವನ್ನು ಏರಲಾರಂಭಿಸಿತ್ತು. ಇದಕ್ಕೆ ಕೈ ಹಿಡಿದವಳ ದೆಸೆ ಎನ್ನಬಹುದು. ಬಹುತೇಕರು ಹೀಗೆಯೇ ಹೇಳುತ್ತಾರೆ. ಕಂಪನಿ ಆರಂಭಿಸಿ ವರ್ಷ ಕಳೆಯುವಷ್ಟರಲ್ಲಿ ನಾಲ್ಕಾರು ಕಡೆಗಳಲ್ಲಿ ಶಾಖೆಗಳನ್ನೂ ತೆರೆದು ವಿಸ್ತಾರವಾಗುತ್ತಲಿತ್ತು. ಹೀಗಿದ್ದಾಗಲೇ ಒಂದು ದಿನ ವಿನಾಯಕ ಕಂಪನಿಯ ಹೊಸದೊಂದು ಶಾಖೆಗೆ ಕೆಲಸಗಾರರನ್ನು ನೇಮಿಸಿಕೊಳ್ಳಲು ಜಾಹೀರಾತು ನೀಡಿದ್ದ. ಸಾಕಷ್ಟು ಅರ್ಜಿಗಳೂ ಬಂದಿದ್ದವು. ಇಂಟರ್ವ್ಯೂಗೆ  ಬಂದವರಲ್ಲಿ ಅನಿತಾಳೂ ಇರುತ್ತಾಳೆ ಎಂದು ಕನಸಿನಲ್ಲೂ ಅಂದಕೊಂಡಿರಲಿಲ್ಲ.
          ಎದುರಿಗೆ ಅನಿತಾ ಬಂದು ನಿಂತಿದ್ದಾಗ ಏನು ಹೇಳಬೇಕು ಎನ್ನುವುದು ವಿನಾಯಕನಿಗೆ ಒಮ್ಮೆಗೆ ತೋಚಲೇ ಇಲ್ಲ. ಸುಮ್ಮನೆ ಗರಬಡಿದವನಂತೆ ಕುಳಿತಿದ್ದ. ಅನಿತಾಳೂ ತಬ್ಬಿಬ್ಬಾಗಿ ನಿಂತಿರುವುದು ಸ್ಪಷ್ಟವಾಗಿತ್ತು. `ಬನ್ನಿ ಕುಳಿತುಕೊಳ್ಳಿ..' ಎಂದವನೇ `ಚನ್ನಾಗಿದ್ದೀಯಾ?..' ಎಂದು ಕೇಳಿದ್ದ. ಕಣ್ಣಲ್ಲಿ ಹನಿಗೂಡಿಸಿಕೊಂಡಿದ್ದ ಅನಿತಾ ಹೂಂ ಅಂದಿದ್ದು ವಿನಾಯಕನ ಕಿವಿಗೆ ಕೇಳಿಸಲಿಲ್ಲ. ಅಷ್ಟು ಅಸ್ಪಷ್ಟವಾಗಿತ್ತು. ಉಳಿದಂತೆ ವಿನಾಯಕ ಸಂದರ್ಶನದಲ್ಲಿ ಬೇರೇನನ್ನೂ ಕೇಳಲಿಲ್ಲ. ಮೌನವಾಗಿಯೇ ಕುಳಿತಿದ್ದ ಅನಿತಾ ಕೆಲ ಘಳಿಗೆಯ ನಂತರ ವಾಪಾಸು ಬಂದಿದ್ದಳು.
         ಇದಾದ ಮರುದಿನವೇ ಕೆಲಸ ಅನಿತಾಳಿಗೆ ಸಿಕ್ಕಿರುವುದು ಖಾತ್ರಿಯಾಗಿತ್ತು.

********
           ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ವಿನಾಯಕ ಅನಿತಾಳನ್ನು ಎಂದೂ ಮಾತನಾಡಿಸಲು ಮುಂದಾಗಲಿಲ್ಲ. ಅನಿತಾ ಮಾತ್ರ ಒಂದೆರಡು ಸಾರಿ ಮಾತನಾಡಲು ಪ್ರಯತ್ನಿಸಿದ್ದಳಾದರೂ ವಿನಾಯಕ ಕಂಪನಿಗೆ ಬಾಸ್ ಆಗಿದ್ದ ಕಾರಣ ತೀರಾ ಹುಡಾಯಲು ಹೋಗಿರಲಿಲ್ಲ.
           ವರ್ಷವೊಂದು ಕಳೆದಿತ್ತು. ವಿಚಿತ್ರವೆಂದರೆ ವಿನಾಯಕನಿಗೂ ಅವಳಿಜವಳಿ ಮಕ್ಕಳು ಹುಟ್ಟಿದ್ದರು. ಮಕ್ಕಳು ಹುಟ್ಟಿದ್ದ ಖುಷಿಯಲ್ಲಿ ಕಂಪನಿಯ ಕೆಲಸಗಾರರಿಗೆಲ್ಲ ಪಾರ್ಟಿಕೊಡಲು ಮುಂದಾದ ವಿನಾಯಕ. ಮಕ್ಕಳ ಹೆಸರಿಡುವ ಕಾರ್ಯ ಮುಗಿದ ನಂತರ ಬಂದು ಎಲ್ಲರಿಗೂ ಪಾರ್ಟಿಗೆ ಏರ್ಪಾಟು ಮಾಡಿದ್ದ. ಪ್ರತಿಯೊಬ್ಬರೂ ಕುಟುಂಬದ ಸದಸ್ಯರ ಜೊತೆಗೆ ಬರಬೇಕೆಂಬ ತಾಕೀತನ್ನೂ ಮಾಡಿದ್ದ. ಆತನ ತಾಕೀತಿಗೆ ಪ್ರತಿಯಾಗಿ ಅನಿತಾಳೂ ತನ್ನ ಗಂಡನನ್ನು ಕರೆದುಕೊಂಡು ಬಂದಿದ್ದಳು.
           ವಿನಾಯಕ ಪಾರ್ಟಿಯಲ್ಲಿ ಅನಿತಾಳಿಗೆ ಸಿಕ್ಕಿದ್ದ. ತನ್ನ ಹೆಂಡತಿಗೆ ಪರಿಚಯ ಮಾಡಿದ್ದ. ಅನಿತಾಳ ಗಂಡ ವಿನಾಯಕನಿಗೆ ಹಾಗೂ ವಿನಾಯಕನ ಹೆಂಡತಿ ಅನಿತಾಳಿಗೆ ಆಪ್ತರಾಗಿದ್ದರು. ಯಾವುದೋ ಕಾಲದ ಗೆಳೆಯರೇನೋ ಎಂಬಂತೆ ಮಾತಿಗೆ ಕುಳಿತಿದ್ದರು. ಮಾತಿನ ಮಧ್ಯದಲ್ಲಿಯೇ ವಿನಾಯಕ ಅನಿತಾಳ ಗಂಡನ ಬಳಿ ಮಕ್ಕಳ ಬಗ್ಗೆ ಕೇಳಿದ್ದ. ಅದಕ್ಕೆ ಪ್ರತಿಯಾಗಿ ಇಬ್ಬರು ಮಕ್ಕಳ ವಿಷಯವನ್ನು ತಿಳಿಸಿದ್ದ ಅನಿತಾಳ ಗಂಡ ಅವಳಿ-ಜವಳಿ ಮಕ್ಕಳಲ್ಲಿ ಒಬ್ಬ ಹುಡುಗ ಇನ್ನೊಬ್ಬಳು ಹುಡುಗಿ ಎನ್ನುವುದನ್ನು ತಿಳಿಸಿದ್ದ. ಹುಡುಗನಿಗೆ ಅತ್ರಿಯೆಂದೂ ಹುಡುಗಿಗೆ ಅವನಿಯೆಂದೂ ಹೆಸರಡಲಾಗಿದೆ. ಅನಿತಾಳ ಒತ್ತಾಯದಿಂದಲೇ ಈ ಹೆಸರನ್ನು ಇಟ್ಟಿದ್ದಾಗಿ ತಿಳಿಸಿದರು. ವಿನಾಯಕ ಮಾತನಾಡುತ್ತಿದ್ದವನು ಇದ್ದಕ್ಕಿದ್ದಂತೆ ಮೌನಿಯಾಗಿದ್ದ. ಮನಸ್ಸಿನಲ್ಲಿ ಒನಕೆಯಿಂದ ಕುಟ್ಟಿದ ಅನುಭವವಾಗಿತ್ತು. ಕಣ್ಣಂಚು ಹನಿಗೂಡಿದ್ದರೂ ಮಾತು ಮರೆಸಿ ಸುಮ್ಮನಾಗಿದ್ದ.
******
       ವಿನಾಯಕನ ಹೆಂಡತಿಯ ಬಳಿ ಮಾತಿಗೆ ಕುಳಿತಿದ್ದ ಅನಿತಾಳಿಗೆ ಗಮನವೆಲ್ಲ ವಿನಾಯಕ ಹಾಗೂ ತನ್ನ ಗಂಡ ಮಾತನಾಡುತ್ತಿರುವುದರ ಮೇಲೆಯೇ ನಿಂತಿತ್ತು. ಮಾತಿನ ಭರದಲ್ಲಿ ವಿನಾಯಕ ಎಲ್ಲಾದರೂ ತನ್ನ ಗಂಡನ ಬಳಿ ತಾವಿಬ್ಬರೂ ಪ್ರೀತಿಸಿದ ವಿಷಯ ಹೇಳಿಬಿಡುತ್ತಾನಾ ಎಂದೂ ಕ್ಷಣಕಾಲ ಅನುಮಾನಿಸಿದ್ದಳು ಅನಿತಾ. ವಿನಾಯಕನಿಗೆ ಕೆಲಸ ಇಲ್ಲ ಎನ್ನುವ ಕಾರಣಕ್ಕಾಗಿ ಆತನನ್ನು ಧಿಕ್ಕರಸಿ ಹೋಗಿದ್ದಕ್ಕೆ ಪ್ರತಿಯಾಗಿ ವಿನಾಯಕ ಎಲ್ಲಾದರೂ ತನ್ನ ಹಾಗೂ ಅವನ ಪ್ರೇಮದ ಕುರಿತು ಹೇಳಿ ಸಂಸಾರದಲ್ಲಿ ಹುಳಿ ಹಿಂಡಿಬಿಟ್ಟರೆ ಎಂದೂ ಆಲೋಚಿಸತೊಡಗಿದ್ದಳು. ಆದರೆ ನಗು ನಗುತ್ತ ಮಾತನಾಡುತ್ತಿದ್ದ ಅವರು ಯಾವ ಹೊತ್ತಿನಲ್ಲೂ ಸಿಟ್ಟಾಗಿದ್ದು ಕಾಣಿಸಲಿಲ್ಲ. ಬದಲಾಗಿ ಯಾವುದೋ ಮಾತಿಗೆ ಇದ್ದಕ್ಕಿದ್ದಂತೆ ವಿನಾಯಕ ಮೌನಿಯಾಗಿದ್ದು ಮಾತ್ರ ಕಾಣಿಸಿತು. ಯಾರಿಗೂ ಕಾಣದಂತೆ ಕಣ್ಣೊರೆಸಿಕೊಂಡಿದ್ದು ಮಾತ್ರ ಅನಿತಾಳಿಗೆ ಸ್ಪಷ್ಟವಾಗಿತ್ತು. ಅನಿತಾ ದೀರ್ಘ ನಿಟ್ಟುಸಿರು ಬಿಟ್ಟದ್ದಳು.
****
           `ಅವಳಿ ಜವಳಿ ಮಕ್ಕಳು ನೋಡಿ ನಮಗೆ.. ಒಂದು ಗಂಡು ಒಂದು ಹೆಣ್ಣು...' ಎಂದು ವಿನಾಯಕನ ಹೆಂಡತಿ ಹೇಳುತ್ತಿದ್ದಂತೆ ಅನಿತಾ ತನಗೂ ಅವಳಿ ಜವಳಿ ಮಕ್ಕಳು ಹುಟ್ಟಿದ್ದು ನೆನಪಾಯಿತು. ಒಂದು ಕ್ಷಣ ಎಲ್ಲೋ ಏನೋ ನೆನಪಾದಂತಾಯಿತು. `ಹೆಸರೆಂತಾ ಇಟ್ಟಿದ್ದಿ?' ಕೇಳಿದ್ದಳು  ಅನಿತಾ.. `ಕೂಸಿಗೆ ಅವನಿ.. ಮಾಣಿಗೆ ಅತ್ರಿ... ನಮ್ಮನೆಯವರೇ ಈ ಹೆಸರು ಇಟ್ಟಿದ್ದು.. ಎಂತಾ ಚಂದ ಹೆಸರು ಅಲ್ದಾ...' ಎಂದು ವಿನಾಯಕನ ಹೆಂಡತಿ ಹೇಳುತ್ತಿದ್ದಂತೆ ಅನಿತಾ ಮೌನಿಯಾಗಿದ್ದಳು. ಮಾತು ಮರೆತಂತಾಗಿದ್ದಳು.


(ಮುಗತ್ತು)
   
       

ನನ್ನ ಕವನದಲ್ಲಿ

ಕವನವೆನ್ನ ಬಾಳ ಉಸಿರು
ಕವನವೆನ್ನ ಜೀವನ
ಇದುವೆ ನನ್ನ ಸ್ಪೂರ್ತಿ, ನಿತ್ಯ
ಮನಕೆ ನಲಿವು ಅನುದಿನ ||

ನನ್ನ ಕವನ ನನ್ನ ಬಾಳ
ಪ್ರೀತಿಗೊಂದು ಸೇತುವೆ
ದುಃಖ, ನೋವು, ಕಷ್ಟಗಳೆ
ಕವನದಲ್ಲಿ ತುಂಬಿವೆ ||

ಭಾವನೆಗಳ ಭದ್ರ ಗೋಡೆ
ಕವನದಲ್ಲಿ ಮೆರೆದಿದೆ
ನೂರು, ಚಿಂತೆ ಗೊಡವೆಗಳೊಡನೆ
ಕವನ ಎಂದೂ ಬೆರೆತಿದೆ ||

ನನ್ನ ಕವನ ಚಿಕ್ಕ ಚೊಕ್ಕ
ಬಾಳಿನಂತೆ, ಪದಗಳೂ
ಒಮ್ಮೆ ನಲಿವು, ಜೊತೆಗೆ ಅಳುವು
ಜೊತೆಗೆ ಹಲವು ಸುಳಿಗಳು ||

ನಾನು, ನನ್ನ ಜೀವ, ಕವನ
ಬಾಳಿನುದ್ದ ಬೆರೆತಿದೆ
ಕವನದೊಡಲ ಭಾವದಿಂದ
ಲೋಕವನ್ನೂ ಮರೆತಿಹೆ ||

****
(ಈ ಕವಿತೆಯನ್ನು ಬರೆದಿರುವುದು 21-09-2006ರಂದು ದಂಟ್ಕಲ್ಲಿನಲ್ಲಿ)

Saturday, December 20, 2014

ಅಘನಾಶಿನಿ ಕಣಿವೆಯಲ್ಲಿ-3

(ಮಲೆನಾಡ ಸೌಂದರ್ಯ)
              ಆ ದಿನ ವಿಕ್ರಮ ಪ್ರದೀಪನನ್ನು ಕಂಡೊಡನೆ `ಅರೇ.. ಇದೇನಿದು ಆಶ್ಚರ್ಯ.. ಬಹಳ ದಿನವಾಗಿತ್ತಲ್ಲಾ.. ನಿನ್ನನ್ನು ನೋಡಿ. ಏನು? ಯಾವ ಕಡೆಗೆ ಹೋಗಿತ್ತೋ ಸವಾರಿ? ಮತ್ತೆ ಏನಪ್ಪಾ ಸಮಾಚಾರ?..' ಎಂದು ಕೇಳಿದ.
               `ಹುಂ.. ಸಮಾಚಾರ ಏನು ಬಂತು? ಎಲ್ಲಾ ಒಳ್ಳೇದೆ. ಅಂದ ಹಾಗೆ ನಿನ್ನನ್ನು ಸ್ವಲ್ಪ ಅರ್ಜೆಂಟಾಗಿ ನೋಡ್ಬೇಕಿತ್ತು ಅದಕ್ಕೆ ಬಂದೆ..' ಎಂದ ಪ್ರದೀಪ.
               `ಏನಪ್ಪಾ ಅಂತ ಅರ್ಜೆಂಟು? ಏನು ವಿಷ್ಯ?' ಎಂದ ವಿಕ್ರಂ.
               `ಏನಿಲ್ಲಾ ನಾನು ಮೊನ್ನೆ ಒಂದು ವಾರ ಬೆಂಗಳೂರಿಗೆ ಹೋಗಿದ್ದೆ. ಬಹಳ ತುರ್ತು ವಿಷಯ ಆಗಿದ್ದರಿಂದ ನಿನಗೂ ಹೇಳಿರಲಿಲ್ಲ. ಅಲ್ಲಿಗೆ ಹೋಗಿದ್ದಾಗ ಒಬ್ರು ಸಿಕ್ಕಿದ್ರು ಅವ್ರ ಹೆಸರು ಜಯಂತರಾಮ್ ಅಂತ. ಅವರೊಂದು ಕಂಪ್ನಿಯಿಂದ ದೊಡ್ಡದೊಂದು ಸ್ಪರ್ಧೆ ಇಟ್ಟಿದ್ದಾರೆ. ಬಾಡಿ ಬಿಲ್ಡಿಂಗು, ಕರಾಟೆ, ಟ್ರೆಕ್ಕಿಂಗು, ಕುಂಗ್ ಫೂ, ವಾಲ್ ಕ್ಲೈಂಬಿಂಗ್ ಇತ್ಯಾದಿಗಳ ಬಗ್ಗೆ ಸ್ಪರ್ಧೆ ನಡೆಸಲಾಗುತ್ತಿದೆ. ಅದನ್ನ ನಿಂಗೆ ತಿಳಿಸೋಣ ಅಂತಲೇ ಬಂದೆ. ಅದು ಇರೋದು ಜನವರಿ 28ಕ್ಕೆ. ಬೆಂಗಳೂರ್ನಲ್ಲೇ..' ಎಂದು ಹೇಳಿದ ಪ್ರದೀಪ.
                 `ಅಂದ್ರೆ ಇವತ್ತು ಜನವರಿ 17. ಇನ್ನು ಬರೀ 11 ದಿನಗಳು ಇದೆಯಲ್ಲೋ. ಅಷ್ಟು ಟೈಮ್ನಲ್ಲಿ ಹೇಗೆ ತಯಾರಿ ಮಾಡಲಿ? ಯಾವಾಗ ಹೋಗ್ಲಿ? ಎಷ್ಟು ಜನರನ್ನು ಕರೆದುಕೊಂಡು ಹೋಗ್ಲಿ? ಜೊತೆಗೆ ಇಲ್ಲಿ ಪೈಪೋಟಿ ಬೇರೆ ಇದೆ. ಹತ್ತಿರದಲ್ಲೇ ಇನ್ನೊಂದು ಮಾರ್ಷಲ್ ಆರ್ಟ್ಸ್ ತರಬೇತಿ ಕೇಂದ್ರ ಬೇರೆ ಶುರುವಾಗಿದೆ. ಯಾಕೋ ಇದೆಲ್ಲಾ ಬೇಡ ಅನ್ನಿಸ್ತಿದೆ ದೀಪು. ಸುಮ್ನೆ ಎಲ್ಲಾ ಬಿಟ್ಟು ಮತ್ತೆ ಊರಿಗೆ ವಾಪಾಸು ಹೋಗ್ಲಾ ಅನ್ನಿಸ್ತಾ ಇದೆ..' ಎಂದು ಅರ್ಧ ನಿರಾಶೆಯೂ, ಅರ್ಧ ದುಃಖವೂ, ಖಿನ್ನತೆಯಿಂದಲೂ ಹೇಳಿದ ವಿಕ್ರಂ.
                `ಅದಕ್ಕೆಲ್ಲಾ ಯಾಕಪ್ಪಾ ಹಾಗೆ ಬೇಜಾರು ಮಾಡ್ಕೋತಿಯಾ? ನಾನಿದ್ದೀನಲ್ಲಾ ಮಾರಾಯಾ. ಎಲ್ಲಾ ವ್ಯವಸ್ಥೆ ಆಗಿದೆ. ನಿನ್ಜೊತೆ ನಾನೂ ಬರ್ತಿದ್ದೀನಿ. ಜನವರಿ 25ಕ್ಕೆ ಹೊರಡೋದು. ಜನವರಿ 30ಕ್ಕೆ ವಾಪಾಸು ಹೊರಡೋದು. ಮತ್ತೆ ಅದು, ಇದು ಅನ್ನೋದೆಲ್ಲಾ ಬಿಟ್ಟು ಸುಮ್ಮನೆ ಒಪ್ಕೋ. ತೀರಾ ಮತ್ತೆ ಕ್ಯಾತೆ ತೆಗೀಬೇಡ...ನಿನ್ ಸಮಸ್ಯೆಗಳೆಲ್ಲ ಏನೇ ಇರಲಿ. ಈ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ನಿನಗೆ ನಿನ್ನ ತರಬೇತಿ ಕೇಂದ್ರಕ್ಕೆ ಲಾಭವಾಗುವುದೇ ಜಾಸ್ತಿ. ಗೆದ್ದರಂತೂ ಸಾಕಷ್ಟು ಹೆಸರು ಬರುತ್ತದೆ ಮಾರಾಯಾ.. ರಿಜೆಕ್ಟ್ ಮಾಡಬೇಡ.. ' ಎಂದ ಪ್ರದೀಪ.
              `ಅದೇನೋ ಸರಿ.. ಆ ವಿಷ್ಯ ಹಾಗಿರಲಿ. ನೀನ್ಯಾಕೆ ಬೆಂಗಳೂರಿಗೆ ಹೋಗಿದ್ದೆ? ' ಎಂದು ಕೇಳಿದ ವಿಕ್ರಂ.
              `ಅದನ್ನೆಲ್ಲಾ ಇನ್ನೊಮ್ಮೆ ಹೇಳ್ತೀನಿ. ಅಂದ ಹಾಗೆ ನಾನು ಸಧ್ಯ ನಿನ್ನ ಜೊತೆ ಇರೋಕಾಗೋದಿಲ್ಲ. ರೂಮು ಚೇಂಜ್ ಮಾಡ್ತಾ ಇದ್ದೀನಿ.' ಎಂದು ಹೇಳಿದ ಪ್ರದೀಪ್.
              `ಏನೋ ಇದು? ಎಲ್ಲಿಗೆ ಹೋಗ್ತಾ ಇದ್ದೀಯೋ? ಯಾಕೋ.. ಏನಾಯ್ತೋ? ಎಲ್ಲಿಗೆ ಹೋಗ್ತಾ ಇದ್ದೀಯೋ?'
              `ಥೋ ಮಾರಾಯಾ ಅದರದ್ದೊಂದು ದೊಡ್ಡ ಕಥೆ. ಯಾಕೂ ಇಲ್ಲ. ಇವತ್ತು ಬೇಡ. ಇನ್ನೊಮ್ಮೆ ಹೇಳ್ತೀನಿ. ನೀನು ನಿನ್ನ ಕನಿಷ್ಟ 10 ಜನರ ಟೀಂ ಸಜ್ಜು ಮಾಡಿ ಇಟ್ಕೋ. 25ಕ್ಕೆ ಹೊರಡೋದು ನೆನಪಿರ್ಲಿ. ಇನ್ನೊಂದ್ಸಾರಿ ಸಿಕ್ತೀನಿ.' ಎಂದು ಹೇಳುತ್ತಾ ಹೊರಟೇಹೋದ ಪ್ರದೀಪ. ಅವನ ಬಾಯಲ್ಲಿ `ಕಾಲವನ್ನು ತಡೆಯೋರು ಯಾರೂ ಇಲ್ಲ.. ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ..' ಎಂಬ ಹಾಡು ಕೇಳಿಬರುತ್ತಿತ್ತು.
              ಈ ಘಟನೆಗಳನ್ನೆಲ್ಲಾ ಅನಾಮಿಕ ಜೋಡಿಕಂಗಳು ವೀಕ್ಷಿಸುತ್ತಿದ್ದವು. ಮಾತು ಕತೆಗಳನ್ನೆಲ್ಲ ಆಲಿಸಲು ಪ್ರಯತ್ನಿಸುತ್ತಿದ್ದವು. ವಿಕ್ರಮನಿಗಾಗಲೀ, ಪ್ರದೀಪನಿಗಾಗಲೀ ಇದು ಗೊತ್ತಾಗಲೇ ಇಲ್ಲ.

*********2**********

               ನೋಡ ನೋಡ್ತಾ ಇದ್ದಂತೆ ಜನವರಿ 25 ಬಂದೇ ಬಿಟ್ಟಿತು. ತೀರಾ ಹೊರಡುವ ಮುನ್ನ ಕಣ್ಣೀರು ಮನೆಗೆ ಪೋನ್ ಮಾಡಿದ. ಕಣ್ಣೀರು ಮನೆಯ ಲ್ಯಾಂಡ್ಲೈನ್ ಅದೇನಾಗಿತ್ತೋ. ಎಷ್ಟು ಸಾರಿ ಪ್ರಯತ್ನಿಸಿದರೂ ಸದ್ದು ಮಾಡಲಿಲ್ಲ. ಮೊಬೈಲ್ ಸಿಗ್ನಲ್ ಸಿಗದ ಪ್ರದೇಶವಾದ ಕಾರಣ ಮನೆಗೆ ಸುದ್ದಿ ತಿಳಿಸುವುದು ಹೇಗೆ ಎನ್ನುವ ಗೊಂದಲಕ್ಕೆ ಬಿದ್ದ. ಹಳೆಯ ಗಂಡನ ಪಾದವೇ ಗತಿ ಎನ್ನುವಂತೆ ಕೊನೆಯ ಕ್ಷಣದಲ್ಲಿ ಮನೆಗೆ ಪತ್ರವನ್ನು ಬರೆದು ಪೋಸ್ಟ್ ಮಾಡಿ ಬಂದ.
(ಅಘನಾಶಿನಿ ನದಿ)
             ಆ ದಿನ ಹೊರಡುವ ಮುನ್ನ ತನ್ನ ಜೊತೆಗಾರರೆಲ್ಲರೂ ಬಂದಿದ್ದಾರೋ ಇಲ್ಲವೋ ಎಂದು ನೋಡಿಕೊಂಡು ಬಸ್ಸನ್ನೇರಿದ. ಆಗಲೇ ಪ್ರದೇಪ ಬಂದು ತನ್ನ ಎಂದಿನ ಶೈಲಿಯ ವಾಗ್ಝರಿ ಹಾಗೂ ಗಾನಲಹರಿ ಪ್ರಾರಂಭಿಸಿದ್ದ. ಅವರು ಮಂಗಳೂರನ್ನು ಬಿಟ್ಟಿದ್ದು 7.30ಕ್ಕೆ.
            ಪ್ರದೀಪನ ಹರಟೆಗೋ ಅಥವಾ ಬೇರೇನೋ ಕಾರಣಕ್ಕೆ ಅವರಿಗೆಲ್ಲ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ. ಅವರು ಬೆಂಗಳೂರನ್ನು ತಲುಪುವ ವೇಳೆಗೆ ಸಂಜೆ ಆರಾಗಿತ್ತು. ಅಲ್ಲಿ ಬಸ್ಸನ್ನು ಇಳಿಯುವ ಹೊತ್ತಿಗಾಗಲೇ ಒಬ್ಬ ಇಳಿ ವಯಸ್ಸಿನ ವ್ಯಕ್ತಿ ಎದುರಾದ. ಪ್ರದೀಪ ಅವರನ್ನು ವಿಕ್ರಮ ಹಾಗೂ ಅವನ ಜೊತೆಗಾರರಿಗೆ ಪರಿಚಯಿಸಿದ. ಅವರು ಕೃಷ್ಣಮೂರ್ತಿ ಎಂದೂ ಬಹಳ ಕಾಲದಿಂದ ಪರಿಚಯವೆಂದೂ ಕಷ್ಟಕಾಲದಲ್ಲಿ ತನಗೆ ಸಹಾಯ ಮಾಡಿದವರೆಂದೂ ತಿಳಿಸಿದ ಪ್ರದೀಪ. ಜೊತೆಗೆ ಆ ಮಹಾನುಭಾವರ ಮನೆಯಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಆಗಿದೆಯೆಂದೂ ತಿಳಿಸಿದ. ಕೊನೆಗೆ ಎಲ್ಲರೂ ಸೇರಿ ಮೂರ್ತಿಗಳ ಮನೆಗೆ ಹೊರಟರು.

*************

             ಅದೊಂದು ತೀರಾ ದೊಡ್ಡದಲ್ಲದಿದ್ದರೂ ತಕ್ಕಮಟ್ಟಿಗೆ ದೊಡ್ಡದಾಗಿ ಕಾಣುತ್ತಿದ್ದ, ಬಂಗಲೆಯಂತಹ ಮನೆ. ಆ ಮನೆಯ ಮುಂದೆ ಬಹುತೇಕ ಆ ಊರಿನ ಎಲ್ಲ ಜನರೂ ಸೇರಿದ್ದರು. ಅವರ ಮುಖಭಾವ ಅಲ್ಲಿಗೆ ಯಾರೋ ಒಬ್ಬ ಪ್ರಮುಖ ವ್ಯಕ್ತಿ ಬರುತ್ತಾನೆ ಎಂಬುದನ್ನು ತೋರಿಸುತ್ತಿತ್ತು,
             ಆ ಮನೆಯ ಯಜಮಾನನೇ ಬೇಣದಗದ್ದೆಯ ಶಿವರಾಮ. ಆ ಶಿವರಾಮ ಅವರೂ ಮನೆಯೆದುರು ನಿಂತು ಕಾಯುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ  ಮನೆಯ ಕಂಪೌಂಡಿನ ಎದುರಿಗೆ ಒಂದು ಕಾರು ಬಂದು ನಿಂತಿತು. ಆ ಕಾರಿನಿಂದ ಓರ್ವ ಆಜಾನುಬಾಹು ವ್ಯಕ್ತಿ ಕೆಳಗಿಳಿದ. ನೋಡಲು ಎಣ್ಣೆಗೆಂಪು ಬಣ್ಣ. ಸಾಕಷ್ಟು ದಿನದಿಂದ ಕತ್ತರಿ ಪ್ರಯೋಗ ಮಾಡದಿದ್ದ ಮೀಸೆ. ಉದ್ದಾಗಿ ತುಟಿಯನ್ನು ಮುಚ್ಚಿತ್ತು. ಇನ್ ಷರ್ಟ್ ಮಾಡಿದ ಕಾರಣ ಶಿಸ್ತಿನಂತೆ ಕಾಣುತ್ತಿದ್ದ ವ್ಯಕ್ತಿತ್ವ. ಸಿಗರೇಟು ಸೇದುತ್ತಿದ್ದ ಎನ್ನುವುದರ ಕುರುಹಾಗಿ ಕಪ್ಪಾಗಿದ್ದ ಕೆಳತುಟಿ. ಇವಿಷ್ಟು ಆತನ ಮೇಲ್ಚಹರೆಯಾಗಿತ್ತು. ಕಾರಿನಿಂದ ಇಳಿದವನೇ ಸುಬ್ರಹ್ಮಣ್ಯ. ಬೇಣದಗದ್ದೆಯ ಶಿವರಾಮನ ತಮ್ಮ. ಕಾರಿನಿಂದಿಳಿದವನನ್ನು ಮನೆಯ ಕೆಲಸಗಾರರೆಲ್ಲ ಸ್ವಾಗತಿಸಿದರು. ಸಿಂಗಾಪುರದಲ್ಲಿ ಕೆಲಸದ ನಿಮಿತ್ತ ಉಳಿದಿದ್ದ ಸುಬ್ರಹ್ಮಣ್ಯ 8-10 ವರ್ಷಗಳ ಹಿಂದೆ ಊರಿಗೆ ಬಂದಿದ್ದ. ಆ ನಂತರ ಈಗಲೇ ಊರಿಗೆ ಬರುತ್ತಿದ್ದುದು.
            `ಬಂದ್ಯಾ ಸುಬ್ಬು.. ಬಾ.. ಒಳಗೆ... ಪ್ರಯಾಣ ಚಂದ ಆತಾ?' ಎಂದು ಕೇಳಿದ ಶಿವರಾಮ್. ಅದಕ್ಕೆ ಚುಟುಕಾಗಿ ಉತ್ತರಿಸಿದ ಸುಬ್ರಹ್ಮಣ್ಯ. ಸೀದಾ ಸರಸರನೆ ಮನೆಯೊಳಕ್ಕೆ ಹೋದ. ಉಳಿದವರು ಹಿಂಬಾಲಿಸಿದರು.
             ಬೇಣದಗದ್ದೆ ಅಪ್ಪಟ ಮಲೆನಾಡಿನ ಹಳ್ಳಿ. ಕೇವಲ ಮೂರೋ ನಾಲ್ಕೋ ಮನೆಗಳಿರುವ ಊರು ಇದು. ಮಲೆನಾಡಿನ ದಟ್ಟ ಕಾನನದೊಳಗೆ ಇರುವ ಈ ಹಳ್ಳಿಯ ಒಂದು ಪಕ್ಕದಲ್ಲಿ ದಡ್ಡ ಕಾಡು ಹಾಗೂ ಕಡಿದಾದ ದೈತ್ಯ ಬೆಟ್ಟ. ಇನ್ನುಳಿದ ಕಡೆಗಳಲ್ಲಿ ಬಳಸಿ ಹರಿಯುವ ಪಾಪನಾಶಿನಿಯಾದ ಅಘನಾಶಿನಿ ನದಿ. ಇದೇ ನದಿ ಜೀವದಾಯಿ. ಈ ನದಿಯ ಸುತ್ತಲೂ ಕತ್ತಲೆಯಂತಹ ಕಾನು. ಬೇಣದಗದ್ದೆಯೂ ಹೊಂದಿ ಕೋಂಡೇ ಇರುವ ಕಾರಣ ಇಲ್ಲೂ ದಟ್ಟ ಕಾನನವೇ ಇತ್ತು. ಇರುವ ಮನೆಗಳಲ್ಲಿ ಶಿವರಾಮ ಅವರ ಮನೆಯೇ ದೊಡ್ಡದು. ಇದಕ್ಕೆ ಕಾರಣಗಳಂತೂ ಸಾಕಷ್ಟಿದೆ. ಶಿವರಾಮ ಅವರ ತಂದೆ ತಲೆ ತಲಾಂತರದಿಂದ ಆಸ್ತಿವಂತರು. ದೊಡ್ಡ ಭಾಗಾಯ್ತದ ಜಮೀನು. ಊರಿನಲ್ಲಿ ಇರುವ ಉಳಿದ ಕುಟುಂಬಗಳು ಬೇರೆ ಕಡೆಯಿಂದ ಬಂದು ನೆಲೆಸಿದಂತವರು. ಶಿವರಾಮ್ ಅವರ ತಮ್ಮ ಸುಬ್ರಹ್ಮಣ್ಯ ಮನೆ ಕಟ್ಟಿಸಲು ಸಾಕಷ್ಟು ಖರ್ಚನ್ನು ಮಾಡಿದ್ದಾರೆ. ದೊಡ್ಡ ಮನೆ ಎಷ್ಟು ಭವ್ಯವೋ ಅಷ್ಟೇ ನಿಘೂಡವೂ ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
             ಶಿವರಾಮ್ ಅವರ ಮನೆಯಲ್ಲಿ 8-10 ಎಕರೆಗೂ ಹೆಚ್ಚಿನ ಅಡಿಕೆ ತೋಟವಿದೆ. ಅಡಿಕೆ ತೋಟದಲ್ಲಿ ಯಾಲಕ್ಕಿ, ಕಾಳುಮೆಣಸು, ಕೊಕ್ಕೋ, ವೆನ್ನಿಲಾಗಳು ಬೆಳೆಯುತ್ತಿವೆ. ನಾಲ್ಕೆಕರೆ ಗದ್ದೆಯೂ ಇದೆ. ಗದ್ದೆಯಲ್ಲಿ ಭತ್ತದ ಜೊತೆಗೆ ಕಬ್ಬು, ಕೆಲವೊಂದು ಋತುವಿನಲ್ಲಿ ಉದ್ದು, ವಟಾಣಿ, ಕಡಲೆ, ಶೇಂಗಾಗಳನ್ನು ಬೆಳೆಯಲಾಗುತ್ತದೆ. ಶಿವರಾಮ್ ಅವರು ಚಿಕ್ಕಂದಿನಿಂದ ಕೃಷಿಯತ್ತ ಒಲವು ಬೆಳೆಸಿಕೊಂಡು ಮನೆಯಲ್ಲಿಯೇ ಉಳಿದರೆ ಸುಬ್ರಹ್ಮಣ್ಯ ಮಾತ್ರ ಕೃಷಿಯತ್ತ ಅನಾಸಕ್ತಿ ಬೆಳಸಿಕೊಂಡು ಮನೆಯಿಂದ ಹೊರಕ್ಕೆ ಹೋಗಿ ಮಾರ್ಕೇಟಿಂಗ್ ವೃತ್ತಿಯನ್ನು ಕೈಗೊಂಡು ಅದರಲ್ಲಿ ಹಂತ ಹಂತವಾಗಿ ಯಶಸ್ಸನ್ನು ಗಳಿಸಿ ಸಿಂಗಾಪುರಕ್ಕೆ ಹೋಗಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದರು.
         ಊರಿನಲ್ಲಿ ಸುಬ್ರಹ್ಮಣ್ಯನನ್ನು ಸುಬ್ಬು, ಸುಬ್ಬಣ್ಣ ಎಂದು ಎಲ್ಲರೂ ಕರೆಯುತ್ತಾರಾದರೂ ಆತನ ಶ್ರೀಮಂತಿಕೆ, ಸಿಂಗಾಪುರದಲ್ಲಿ ನೆಲೆಸಿರುವ ಬಗೆಗೆ ಊರಿನವರು ಮಾತನಾಡುವುದೇ ಬೇರೆಯ ರೀತಿ. ಸುಬ್ರಹ್ಮಣ್ಯನದ್ದು ಮಾರ್ಕೇಟಿಂಗ್ ಕೆಲಸ ಅಲ್ಲವೇ ಅಲ್ಲ. ಬದಲಾಗಿ ಸ್ಮಗ್ಲಿಂಗು, ಅದೂ ಇದೂ ಕೆಲಸವಿದೆ. ಪಶ್ಚಿಮ ಘಟ್ಟದ ಕಾಡಿನಿಂದ ಆಯುರ್ವೇದ ಔಷಧಿಗಳನ್ನು ಕದ್ದು ವಿದೇಶಕ್ಕೆ ಸಾಗಿಸುವ ದೊಡ್ಡದೊಂದು ಜಾಲ ಸುಬ್ರಹ್ಮಣ್ಯನ ಜೊತೆಯಿದೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಎಂತಾ  ಒಳ್ಳೆಯ ಅಣ್ಣನಿಗೆ ಎಂತಾ ತಮ್ಮ ಎಂದೂ ಮಾತನಾಡಿಕೊಳ್ಳುತ್ತಿದ್ದರು. ಇಂತಹ ಮಾತುಗಳು ಅಣ್ಣ ಶಿವರಾಮನ ಕಿವಿಗೂ ಬಿದ್ದಿತ್ತಾದರೂ ಆ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದೇ ಸುಮ್ಮನುಳಿದಿದ್ದ.

****
(ಮುಂದುವರಿಯುತ್ತದೆ)

Friday, December 19, 2014

ನಾನಾಗಬೇಕು..

ನಾನಾಗಬೇಕು
ಇಳಿವ ಇಬ್ಬನಿಯು
ನಗುವ ಹೂವಿನಂತರಾಳದಲ್ಲಿ
ಇಳಿದು ಮೂಡುವ ಹನಿ ||

ನಾನಾಗಬೇಕು
ನವ ವಸಂತಾಗಮನದ
ಹೊಸ ಹರ್ಷೋಲ್ಲಾಸದಲ್ಲಿ ಮಾಮರದ,
ಒಡಲ ಆಳದಲ್ಲೆಲ್ಲೋ ಕುಳಿತು
ಉಲಿದು ಹಾಡುವ ಕೋಗಿಲೆ ||

ನಾನಾಗಬೇಕು
ಇರುಳಲ್ಲಿ ಮಿಣುಕುವ
ಬಳುಕಿ ಕರೆವ ಮಿಂಚುಹುಳ |
ಎದೆಬಡಿತದಾವೇಗಕ್ಕಿಂತಲೂ
ಜೋರಾಗಿ ತಬ್ಬಿ ಹಿಡಿದ ಮರನ
ಕುಟ್ಟಿ ಹಸಿವೋಡಿಸುವ ಮರಕುಟಿಗ ||

ನಾನಾಗಬೇಕು
ಸುಳಿ ಸುಳಿವ ಪ್ರೀತಿ,
ನಲಿದು ನಗುವೊಂದು ನಿಸರ್ಗ |
ಹಸಿರ ಸಂಕುಲ ಜೀವಿ ಜಗತ್ತು,
ಜೊತೆಗೆ ನಿರ್ಮಲ ಜೀವನ ||

ನಾನಾಗಬಲ್ಲೆ
ಮುಂದೊಂದು ದಿನ
ಚಿಕ್ಕ ಜೀವಿ, ಹಸಿರು ಭತ್ತ |
ಆದಾರಾ ಆಸೆ ಜೀರದ ಬಯಕೆ
ಹಸನಾಗುವುದು ಮುಂದಣ ಜನುಮದಲ್ಲೇ ||

****
(ಈ ಕವಿತೆಯನ್ನು ಬರೆದಿರುವುದು 19-11-2006ರಂದು ದಂಟಕಲ್ಲಿನಲ್ಲಿ)
(ಈ ಕವಿತೆಯನ್ನು 23-01-2008ರಂದು ಆಕಾಶವಾಣಿ ಕಾರವಾರದಲ್ಲಿ ವಾಚನ ಮಾಡಲಾಗಿದೆ)