Monday, December 22, 2014

ನನ್ನ ಕವನದಲ್ಲಿ

ಕವನವೆನ್ನ ಬಾಳ ಉಸಿರು
ಕವನವೆನ್ನ ಜೀವನ
ಇದುವೆ ನನ್ನ ಸ್ಪೂರ್ತಿ, ನಿತ್ಯ
ಮನಕೆ ನಲಿವು ಅನುದಿನ ||

ನನ್ನ ಕವನ ನನ್ನ ಬಾಳ
ಪ್ರೀತಿಗೊಂದು ಸೇತುವೆ
ದುಃಖ, ನೋವು, ಕಷ್ಟಗಳೆ
ಕವನದಲ್ಲಿ ತುಂಬಿವೆ ||

ಭಾವನೆಗಳ ಭದ್ರ ಗೋಡೆ
ಕವನದಲ್ಲಿ ಮೆರೆದಿದೆ
ನೂರು, ಚಿಂತೆ ಗೊಡವೆಗಳೊಡನೆ
ಕವನ ಎಂದೂ ಬೆರೆತಿದೆ ||

ನನ್ನ ಕವನ ಚಿಕ್ಕ ಚೊಕ್ಕ
ಬಾಳಿನಂತೆ, ಪದಗಳೂ
ಒಮ್ಮೆ ನಲಿವು, ಜೊತೆಗೆ ಅಳುವು
ಜೊತೆಗೆ ಹಲವು ಸುಳಿಗಳು ||

ನಾನು, ನನ್ನ ಜೀವ, ಕವನ
ಬಾಳಿನುದ್ದ ಬೆರೆತಿದೆ
ಕವನದೊಡಲ ಭಾವದಿಂದ
ಲೋಕವನ್ನೂ ಮರೆತಿಹೆ ||

****
(ಈ ಕವಿತೆಯನ್ನು ಬರೆದಿರುವುದು 21-09-2006ರಂದು ದಂಟ್ಕಲ್ಲಿನಲ್ಲಿ)

Saturday, December 20, 2014

ಅಘನಾಶಿನಿ ಕಣಿವೆಯಲ್ಲಿ-3

(ಮಲೆನಾಡ ಸೌಂದರ್ಯ)
              ಆ ದಿನ ವಿಕ್ರಮ ಪ್ರದೀಪನನ್ನು ಕಂಡೊಡನೆ `ಅರೇ.. ಇದೇನಿದು ಆಶ್ಚರ್ಯ.. ಬಹಳ ದಿನವಾಗಿತ್ತಲ್ಲಾ.. ನಿನ್ನನ್ನು ನೋಡಿ. ಏನು? ಯಾವ ಕಡೆಗೆ ಹೋಗಿತ್ತೋ ಸವಾರಿ? ಮತ್ತೆ ಏನಪ್ಪಾ ಸಮಾಚಾರ?..' ಎಂದು ಕೇಳಿದ.
               `ಹುಂ.. ಸಮಾಚಾರ ಏನು ಬಂತು? ಎಲ್ಲಾ ಒಳ್ಳೇದೆ. ಅಂದ ಹಾಗೆ ನಿನ್ನನ್ನು ಸ್ವಲ್ಪ ಅರ್ಜೆಂಟಾಗಿ ನೋಡ್ಬೇಕಿತ್ತು ಅದಕ್ಕೆ ಬಂದೆ..' ಎಂದ ಪ್ರದೀಪ.
               `ಏನಪ್ಪಾ ಅಂತ ಅರ್ಜೆಂಟು? ಏನು ವಿಷ್ಯ?' ಎಂದ ವಿಕ್ರಂ.
               `ಏನಿಲ್ಲಾ ನಾನು ಮೊನ್ನೆ ಒಂದು ವಾರ ಬೆಂಗಳೂರಿಗೆ ಹೋಗಿದ್ದೆ. ಬಹಳ ತುರ್ತು ವಿಷಯ ಆಗಿದ್ದರಿಂದ ನಿನಗೂ ಹೇಳಿರಲಿಲ್ಲ. ಅಲ್ಲಿಗೆ ಹೋಗಿದ್ದಾಗ ಒಬ್ರು ಸಿಕ್ಕಿದ್ರು ಅವ್ರ ಹೆಸರು ಜಯಂತರಾಮ್ ಅಂತ. ಅವರೊಂದು ಕಂಪ್ನಿಯಿಂದ ದೊಡ್ಡದೊಂದು ಸ್ಪರ್ಧೆ ಇಟ್ಟಿದ್ದಾರೆ. ಬಾಡಿ ಬಿಲ್ಡಿಂಗು, ಕರಾಟೆ, ಟ್ರೆಕ್ಕಿಂಗು, ಕುಂಗ್ ಫೂ, ವಾಲ್ ಕ್ಲೈಂಬಿಂಗ್ ಇತ್ಯಾದಿಗಳ ಬಗ್ಗೆ ಸ್ಪರ್ಧೆ ನಡೆಸಲಾಗುತ್ತಿದೆ. ಅದನ್ನ ನಿಂಗೆ ತಿಳಿಸೋಣ ಅಂತಲೇ ಬಂದೆ. ಅದು ಇರೋದು ಜನವರಿ 28ಕ್ಕೆ. ಬೆಂಗಳೂರ್ನಲ್ಲೇ..' ಎಂದು ಹೇಳಿದ ಪ್ರದೀಪ.
                 `ಅಂದ್ರೆ ಇವತ್ತು ಜನವರಿ 17. ಇನ್ನು ಬರೀ 11 ದಿನಗಳು ಇದೆಯಲ್ಲೋ. ಅಷ್ಟು ಟೈಮ್ನಲ್ಲಿ ಹೇಗೆ ತಯಾರಿ ಮಾಡಲಿ? ಯಾವಾಗ ಹೋಗ್ಲಿ? ಎಷ್ಟು ಜನರನ್ನು ಕರೆದುಕೊಂಡು ಹೋಗ್ಲಿ? ಜೊತೆಗೆ ಇಲ್ಲಿ ಪೈಪೋಟಿ ಬೇರೆ ಇದೆ. ಹತ್ತಿರದಲ್ಲೇ ಇನ್ನೊಂದು ಮಾರ್ಷಲ್ ಆರ್ಟ್ಸ್ ತರಬೇತಿ ಕೇಂದ್ರ ಬೇರೆ ಶುರುವಾಗಿದೆ. ಯಾಕೋ ಇದೆಲ್ಲಾ ಬೇಡ ಅನ್ನಿಸ್ತಿದೆ ದೀಪು. ಸುಮ್ನೆ ಎಲ್ಲಾ ಬಿಟ್ಟು ಮತ್ತೆ ಊರಿಗೆ ವಾಪಾಸು ಹೋಗ್ಲಾ ಅನ್ನಿಸ್ತಾ ಇದೆ..' ಎಂದು ಅರ್ಧ ನಿರಾಶೆಯೂ, ಅರ್ಧ ದುಃಖವೂ, ಖಿನ್ನತೆಯಿಂದಲೂ ಹೇಳಿದ ವಿಕ್ರಂ.
                `ಅದಕ್ಕೆಲ್ಲಾ ಯಾಕಪ್ಪಾ ಹಾಗೆ ಬೇಜಾರು ಮಾಡ್ಕೋತಿಯಾ? ನಾನಿದ್ದೀನಲ್ಲಾ ಮಾರಾಯಾ. ಎಲ್ಲಾ ವ್ಯವಸ್ಥೆ ಆಗಿದೆ. ನಿನ್ಜೊತೆ ನಾನೂ ಬರ್ತಿದ್ದೀನಿ. ಜನವರಿ 25ಕ್ಕೆ ಹೊರಡೋದು. ಜನವರಿ 30ಕ್ಕೆ ವಾಪಾಸು ಹೊರಡೋದು. ಮತ್ತೆ ಅದು, ಇದು ಅನ್ನೋದೆಲ್ಲಾ ಬಿಟ್ಟು ಸುಮ್ಮನೆ ಒಪ್ಕೋ. ತೀರಾ ಮತ್ತೆ ಕ್ಯಾತೆ ತೆಗೀಬೇಡ...ನಿನ್ ಸಮಸ್ಯೆಗಳೆಲ್ಲ ಏನೇ ಇರಲಿ. ಈ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ನಿನಗೆ ನಿನ್ನ ತರಬೇತಿ ಕೇಂದ್ರಕ್ಕೆ ಲಾಭವಾಗುವುದೇ ಜಾಸ್ತಿ. ಗೆದ್ದರಂತೂ ಸಾಕಷ್ಟು ಹೆಸರು ಬರುತ್ತದೆ ಮಾರಾಯಾ.. ರಿಜೆಕ್ಟ್ ಮಾಡಬೇಡ.. ' ಎಂದ ಪ್ರದೀಪ.
              `ಅದೇನೋ ಸರಿ.. ಆ ವಿಷ್ಯ ಹಾಗಿರಲಿ. ನೀನ್ಯಾಕೆ ಬೆಂಗಳೂರಿಗೆ ಹೋಗಿದ್ದೆ? ' ಎಂದು ಕೇಳಿದ ವಿಕ್ರಂ.
              `ಅದನ್ನೆಲ್ಲಾ ಇನ್ನೊಮ್ಮೆ ಹೇಳ್ತೀನಿ. ಅಂದ ಹಾಗೆ ನಾನು ಸಧ್ಯ ನಿನ್ನ ಜೊತೆ ಇರೋಕಾಗೋದಿಲ್ಲ. ರೂಮು ಚೇಂಜ್ ಮಾಡ್ತಾ ಇದ್ದೀನಿ.' ಎಂದು ಹೇಳಿದ ಪ್ರದೀಪ್.
              `ಏನೋ ಇದು? ಎಲ್ಲಿಗೆ ಹೋಗ್ತಾ ಇದ್ದೀಯೋ? ಯಾಕೋ.. ಏನಾಯ್ತೋ? ಎಲ್ಲಿಗೆ ಹೋಗ್ತಾ ಇದ್ದೀಯೋ?'
              `ಥೋ ಮಾರಾಯಾ ಅದರದ್ದೊಂದು ದೊಡ್ಡ ಕಥೆ. ಯಾಕೂ ಇಲ್ಲ. ಇವತ್ತು ಬೇಡ. ಇನ್ನೊಮ್ಮೆ ಹೇಳ್ತೀನಿ. ನೀನು ನಿನ್ನ ಕನಿಷ್ಟ 10 ಜನರ ಟೀಂ ಸಜ್ಜು ಮಾಡಿ ಇಟ್ಕೋ. 25ಕ್ಕೆ ಹೊರಡೋದು ನೆನಪಿರ್ಲಿ. ಇನ್ನೊಂದ್ಸಾರಿ ಸಿಕ್ತೀನಿ.' ಎಂದು ಹೇಳುತ್ತಾ ಹೊರಟೇಹೋದ ಪ್ರದೀಪ. ಅವನ ಬಾಯಲ್ಲಿ `ಕಾಲವನ್ನು ತಡೆಯೋರು ಯಾರೂ ಇಲ್ಲ.. ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ..' ಎಂಬ ಹಾಡು ಕೇಳಿಬರುತ್ತಿತ್ತು.
              ಈ ಘಟನೆಗಳನ್ನೆಲ್ಲಾ ಅನಾಮಿಕ ಜೋಡಿಕಂಗಳು ವೀಕ್ಷಿಸುತ್ತಿದ್ದವು. ಮಾತು ಕತೆಗಳನ್ನೆಲ್ಲ ಆಲಿಸಲು ಪ್ರಯತ್ನಿಸುತ್ತಿದ್ದವು. ವಿಕ್ರಮನಿಗಾಗಲೀ, ಪ್ರದೀಪನಿಗಾಗಲೀ ಇದು ಗೊತ್ತಾಗಲೇ ಇಲ್ಲ.

*********2**********

               ನೋಡ ನೋಡ್ತಾ ಇದ್ದಂತೆ ಜನವರಿ 25 ಬಂದೇ ಬಿಟ್ಟಿತು. ತೀರಾ ಹೊರಡುವ ಮುನ್ನ ಕಣ್ಣೀರು ಮನೆಗೆ ಪೋನ್ ಮಾಡಿದ. ಕಣ್ಣೀರು ಮನೆಯ ಲ್ಯಾಂಡ್ಲೈನ್ ಅದೇನಾಗಿತ್ತೋ. ಎಷ್ಟು ಸಾರಿ ಪ್ರಯತ್ನಿಸಿದರೂ ಸದ್ದು ಮಾಡಲಿಲ್ಲ. ಮೊಬೈಲ್ ಸಿಗ್ನಲ್ ಸಿಗದ ಪ್ರದೇಶವಾದ ಕಾರಣ ಮನೆಗೆ ಸುದ್ದಿ ತಿಳಿಸುವುದು ಹೇಗೆ ಎನ್ನುವ ಗೊಂದಲಕ್ಕೆ ಬಿದ್ದ. ಹಳೆಯ ಗಂಡನ ಪಾದವೇ ಗತಿ ಎನ್ನುವಂತೆ ಕೊನೆಯ ಕ್ಷಣದಲ್ಲಿ ಮನೆಗೆ ಪತ್ರವನ್ನು ಬರೆದು ಪೋಸ್ಟ್ ಮಾಡಿ ಬಂದ.
(ಅಘನಾಶಿನಿ ನದಿ)
             ಆ ದಿನ ಹೊರಡುವ ಮುನ್ನ ತನ್ನ ಜೊತೆಗಾರರೆಲ್ಲರೂ ಬಂದಿದ್ದಾರೋ ಇಲ್ಲವೋ ಎಂದು ನೋಡಿಕೊಂಡು ಬಸ್ಸನ್ನೇರಿದ. ಆಗಲೇ ಪ್ರದೇಪ ಬಂದು ತನ್ನ ಎಂದಿನ ಶೈಲಿಯ ವಾಗ್ಝರಿ ಹಾಗೂ ಗಾನಲಹರಿ ಪ್ರಾರಂಭಿಸಿದ್ದ. ಅವರು ಮಂಗಳೂರನ್ನು ಬಿಟ್ಟಿದ್ದು 7.30ಕ್ಕೆ.
            ಪ್ರದೀಪನ ಹರಟೆಗೋ ಅಥವಾ ಬೇರೇನೋ ಕಾರಣಕ್ಕೆ ಅವರಿಗೆಲ್ಲ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ. ಅವರು ಬೆಂಗಳೂರನ್ನು ತಲುಪುವ ವೇಳೆಗೆ ಸಂಜೆ ಆರಾಗಿತ್ತು. ಅಲ್ಲಿ ಬಸ್ಸನ್ನು ಇಳಿಯುವ ಹೊತ್ತಿಗಾಗಲೇ ಒಬ್ಬ ಇಳಿ ವಯಸ್ಸಿನ ವ್ಯಕ್ತಿ ಎದುರಾದ. ಪ್ರದೀಪ ಅವರನ್ನು ವಿಕ್ರಮ ಹಾಗೂ ಅವನ ಜೊತೆಗಾರರಿಗೆ ಪರಿಚಯಿಸಿದ. ಅವರು ಕೃಷ್ಣಮೂರ್ತಿ ಎಂದೂ ಬಹಳ ಕಾಲದಿಂದ ಪರಿಚಯವೆಂದೂ ಕಷ್ಟಕಾಲದಲ್ಲಿ ತನಗೆ ಸಹಾಯ ಮಾಡಿದವರೆಂದೂ ತಿಳಿಸಿದ ಪ್ರದೀಪ. ಜೊತೆಗೆ ಆ ಮಹಾನುಭಾವರ ಮನೆಯಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಆಗಿದೆಯೆಂದೂ ತಿಳಿಸಿದ. ಕೊನೆಗೆ ಎಲ್ಲರೂ ಸೇರಿ ಮೂರ್ತಿಗಳ ಮನೆಗೆ ಹೊರಟರು.

*************

             ಅದೊಂದು ತೀರಾ ದೊಡ್ಡದಲ್ಲದಿದ್ದರೂ ತಕ್ಕಮಟ್ಟಿಗೆ ದೊಡ್ಡದಾಗಿ ಕಾಣುತ್ತಿದ್ದ, ಬಂಗಲೆಯಂತಹ ಮನೆ. ಆ ಮನೆಯ ಮುಂದೆ ಬಹುತೇಕ ಆ ಊರಿನ ಎಲ್ಲ ಜನರೂ ಸೇರಿದ್ದರು. ಅವರ ಮುಖಭಾವ ಅಲ್ಲಿಗೆ ಯಾರೋ ಒಬ್ಬ ಪ್ರಮುಖ ವ್ಯಕ್ತಿ ಬರುತ್ತಾನೆ ಎಂಬುದನ್ನು ತೋರಿಸುತ್ತಿತ್ತು,
             ಆ ಮನೆಯ ಯಜಮಾನನೇ ಬೇಣದಗದ್ದೆಯ ಶಿವರಾಮ. ಆ ಶಿವರಾಮ ಅವರೂ ಮನೆಯೆದುರು ನಿಂತು ಕಾಯುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ  ಮನೆಯ ಕಂಪೌಂಡಿನ ಎದುರಿಗೆ ಒಂದು ಕಾರು ಬಂದು ನಿಂತಿತು. ಆ ಕಾರಿನಿಂದ ಓರ್ವ ಆಜಾನುಬಾಹು ವ್ಯಕ್ತಿ ಕೆಳಗಿಳಿದ. ನೋಡಲು ಎಣ್ಣೆಗೆಂಪು ಬಣ್ಣ. ಸಾಕಷ್ಟು ದಿನದಿಂದ ಕತ್ತರಿ ಪ್ರಯೋಗ ಮಾಡದಿದ್ದ ಮೀಸೆ. ಉದ್ದಾಗಿ ತುಟಿಯನ್ನು ಮುಚ್ಚಿತ್ತು. ಇನ್ ಷರ್ಟ್ ಮಾಡಿದ ಕಾರಣ ಶಿಸ್ತಿನಂತೆ ಕಾಣುತ್ತಿದ್ದ ವ್ಯಕ್ತಿತ್ವ. ಸಿಗರೇಟು ಸೇದುತ್ತಿದ್ದ ಎನ್ನುವುದರ ಕುರುಹಾಗಿ ಕಪ್ಪಾಗಿದ್ದ ಕೆಳತುಟಿ. ಇವಿಷ್ಟು ಆತನ ಮೇಲ್ಚಹರೆಯಾಗಿತ್ತು. ಕಾರಿನಿಂದ ಇಳಿದವನೇ ಸುಬ್ರಹ್ಮಣ್ಯ. ಬೇಣದಗದ್ದೆಯ ಶಿವರಾಮನ ತಮ್ಮ. ಕಾರಿನಿಂದಿಳಿದವನನ್ನು ಮನೆಯ ಕೆಲಸಗಾರರೆಲ್ಲ ಸ್ವಾಗತಿಸಿದರು. ಸಿಂಗಾಪುರದಲ್ಲಿ ಕೆಲಸದ ನಿಮಿತ್ತ ಉಳಿದಿದ್ದ ಸುಬ್ರಹ್ಮಣ್ಯ 8-10 ವರ್ಷಗಳ ಹಿಂದೆ ಊರಿಗೆ ಬಂದಿದ್ದ. ಆ ನಂತರ ಈಗಲೇ ಊರಿಗೆ ಬರುತ್ತಿದ್ದುದು.
            `ಬಂದ್ಯಾ ಸುಬ್ಬು.. ಬಾ.. ಒಳಗೆ... ಪ್ರಯಾಣ ಚಂದ ಆತಾ?' ಎಂದು ಕೇಳಿದ ಶಿವರಾಮ್. ಅದಕ್ಕೆ ಚುಟುಕಾಗಿ ಉತ್ತರಿಸಿದ ಸುಬ್ರಹ್ಮಣ್ಯ. ಸೀದಾ ಸರಸರನೆ ಮನೆಯೊಳಕ್ಕೆ ಹೋದ. ಉಳಿದವರು ಹಿಂಬಾಲಿಸಿದರು.
             ಬೇಣದಗದ್ದೆ ಅಪ್ಪಟ ಮಲೆನಾಡಿನ ಹಳ್ಳಿ. ಕೇವಲ ಮೂರೋ ನಾಲ್ಕೋ ಮನೆಗಳಿರುವ ಊರು ಇದು. ಮಲೆನಾಡಿನ ದಟ್ಟ ಕಾನನದೊಳಗೆ ಇರುವ ಈ ಹಳ್ಳಿಯ ಒಂದು ಪಕ್ಕದಲ್ಲಿ ದಡ್ಡ ಕಾಡು ಹಾಗೂ ಕಡಿದಾದ ದೈತ್ಯ ಬೆಟ್ಟ. ಇನ್ನುಳಿದ ಕಡೆಗಳಲ್ಲಿ ಬಳಸಿ ಹರಿಯುವ ಪಾಪನಾಶಿನಿಯಾದ ಅಘನಾಶಿನಿ ನದಿ. ಇದೇ ನದಿ ಜೀವದಾಯಿ. ಈ ನದಿಯ ಸುತ್ತಲೂ ಕತ್ತಲೆಯಂತಹ ಕಾನು. ಬೇಣದಗದ್ದೆಯೂ ಹೊಂದಿ ಕೋಂಡೇ ಇರುವ ಕಾರಣ ಇಲ್ಲೂ ದಟ್ಟ ಕಾನನವೇ ಇತ್ತು. ಇರುವ ಮನೆಗಳಲ್ಲಿ ಶಿವರಾಮ ಅವರ ಮನೆಯೇ ದೊಡ್ಡದು. ಇದಕ್ಕೆ ಕಾರಣಗಳಂತೂ ಸಾಕಷ್ಟಿದೆ. ಶಿವರಾಮ ಅವರ ತಂದೆ ತಲೆ ತಲಾಂತರದಿಂದ ಆಸ್ತಿವಂತರು. ದೊಡ್ಡ ಭಾಗಾಯ್ತದ ಜಮೀನು. ಊರಿನಲ್ಲಿ ಇರುವ ಉಳಿದ ಕುಟುಂಬಗಳು ಬೇರೆ ಕಡೆಯಿಂದ ಬಂದು ನೆಲೆಸಿದಂತವರು. ಶಿವರಾಮ್ ಅವರ ತಮ್ಮ ಸುಬ್ರಹ್ಮಣ್ಯ ಮನೆ ಕಟ್ಟಿಸಲು ಸಾಕಷ್ಟು ಖರ್ಚನ್ನು ಮಾಡಿದ್ದಾರೆ. ದೊಡ್ಡ ಮನೆ ಎಷ್ಟು ಭವ್ಯವೋ ಅಷ್ಟೇ ನಿಘೂಡವೂ ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
             ಶಿವರಾಮ್ ಅವರ ಮನೆಯಲ್ಲಿ 8-10 ಎಕರೆಗೂ ಹೆಚ್ಚಿನ ಅಡಿಕೆ ತೋಟವಿದೆ. ಅಡಿಕೆ ತೋಟದಲ್ಲಿ ಯಾಲಕ್ಕಿ, ಕಾಳುಮೆಣಸು, ಕೊಕ್ಕೋ, ವೆನ್ನಿಲಾಗಳು ಬೆಳೆಯುತ್ತಿವೆ. ನಾಲ್ಕೆಕರೆ ಗದ್ದೆಯೂ ಇದೆ. ಗದ್ದೆಯಲ್ಲಿ ಭತ್ತದ ಜೊತೆಗೆ ಕಬ್ಬು, ಕೆಲವೊಂದು ಋತುವಿನಲ್ಲಿ ಉದ್ದು, ವಟಾಣಿ, ಕಡಲೆ, ಶೇಂಗಾಗಳನ್ನು ಬೆಳೆಯಲಾಗುತ್ತದೆ. ಶಿವರಾಮ್ ಅವರು ಚಿಕ್ಕಂದಿನಿಂದ ಕೃಷಿಯತ್ತ ಒಲವು ಬೆಳೆಸಿಕೊಂಡು ಮನೆಯಲ್ಲಿಯೇ ಉಳಿದರೆ ಸುಬ್ರಹ್ಮಣ್ಯ ಮಾತ್ರ ಕೃಷಿಯತ್ತ ಅನಾಸಕ್ತಿ ಬೆಳಸಿಕೊಂಡು ಮನೆಯಿಂದ ಹೊರಕ್ಕೆ ಹೋಗಿ ಮಾರ್ಕೇಟಿಂಗ್ ವೃತ್ತಿಯನ್ನು ಕೈಗೊಂಡು ಅದರಲ್ಲಿ ಹಂತ ಹಂತವಾಗಿ ಯಶಸ್ಸನ್ನು ಗಳಿಸಿ ಸಿಂಗಾಪುರಕ್ಕೆ ಹೋಗಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದರು.
         ಊರಿನಲ್ಲಿ ಸುಬ್ರಹ್ಮಣ್ಯನನ್ನು ಸುಬ್ಬು, ಸುಬ್ಬಣ್ಣ ಎಂದು ಎಲ್ಲರೂ ಕರೆಯುತ್ತಾರಾದರೂ ಆತನ ಶ್ರೀಮಂತಿಕೆ, ಸಿಂಗಾಪುರದಲ್ಲಿ ನೆಲೆಸಿರುವ ಬಗೆಗೆ ಊರಿನವರು ಮಾತನಾಡುವುದೇ ಬೇರೆಯ ರೀತಿ. ಸುಬ್ರಹ್ಮಣ್ಯನದ್ದು ಮಾರ್ಕೇಟಿಂಗ್ ಕೆಲಸ ಅಲ್ಲವೇ ಅಲ್ಲ. ಬದಲಾಗಿ ಸ್ಮಗ್ಲಿಂಗು, ಅದೂ ಇದೂ ಕೆಲಸವಿದೆ. ಪಶ್ಚಿಮ ಘಟ್ಟದ ಕಾಡಿನಿಂದ ಆಯುರ್ವೇದ ಔಷಧಿಗಳನ್ನು ಕದ್ದು ವಿದೇಶಕ್ಕೆ ಸಾಗಿಸುವ ದೊಡ್ಡದೊಂದು ಜಾಲ ಸುಬ್ರಹ್ಮಣ್ಯನ ಜೊತೆಯಿದೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಎಂತಾ  ಒಳ್ಳೆಯ ಅಣ್ಣನಿಗೆ ಎಂತಾ ತಮ್ಮ ಎಂದೂ ಮಾತನಾಡಿಕೊಳ್ಳುತ್ತಿದ್ದರು. ಇಂತಹ ಮಾತುಗಳು ಅಣ್ಣ ಶಿವರಾಮನ ಕಿವಿಗೂ ಬಿದ್ದಿತ್ತಾದರೂ ಆ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದೇ ಸುಮ್ಮನುಳಿದಿದ್ದ.

****
(ಮುಂದುವರಿಯುತ್ತದೆ)

Friday, December 19, 2014

ನಾನಾಗಬೇಕು..

ನಾನಾಗಬೇಕು
ಇಳಿವ ಇಬ್ಬನಿಯು
ನಗುವ ಹೂವಿನಂತರಾಳದಲ್ಲಿ
ಇಳಿದು ಮೂಡುವ ಹನಿ ||

ನಾನಾಗಬೇಕು
ನವ ವಸಂತಾಗಮನದ
ಹೊಸ ಹರ್ಷೋಲ್ಲಾಸದಲ್ಲಿ ಮಾಮರದ,
ಒಡಲ ಆಳದಲ್ಲೆಲ್ಲೋ ಕುಳಿತು
ಉಲಿದು ಹಾಡುವ ಕೋಗಿಲೆ ||

ನಾನಾಗಬೇಕು
ಇರುಳಲ್ಲಿ ಮಿಣುಕುವ
ಬಳುಕಿ ಕರೆವ ಮಿಂಚುಹುಳ |
ಎದೆಬಡಿತದಾವೇಗಕ್ಕಿಂತಲೂ
ಜೋರಾಗಿ ತಬ್ಬಿ ಹಿಡಿದ ಮರನ
ಕುಟ್ಟಿ ಹಸಿವೋಡಿಸುವ ಮರಕುಟಿಗ ||

ನಾನಾಗಬೇಕು
ಸುಳಿ ಸುಳಿವ ಪ್ರೀತಿ,
ನಲಿದು ನಗುವೊಂದು ನಿಸರ್ಗ |
ಹಸಿರ ಸಂಕುಲ ಜೀವಿ ಜಗತ್ತು,
ಜೊತೆಗೆ ನಿರ್ಮಲ ಜೀವನ ||

ನಾನಾಗಬಲ್ಲೆ
ಮುಂದೊಂದು ದಿನ
ಚಿಕ್ಕ ಜೀವಿ, ಹಸಿರು ಭತ್ತ |
ಆದಾರಾ ಆಸೆ ಜೀರದ ಬಯಕೆ
ಹಸನಾಗುವುದು ಮುಂದಣ ಜನುಮದಲ್ಲೇ ||

****
(ಈ ಕವಿತೆಯನ್ನು ಬರೆದಿರುವುದು 19-11-2006ರಂದು ದಂಟಕಲ್ಲಿನಲ್ಲಿ)
(ಈ ಕವಿತೆಯನ್ನು 23-01-2008ರಂದು ಆಕಾಶವಾಣಿ ಕಾರವಾರದಲ್ಲಿ ವಾಚನ ಮಾಡಲಾಗಿದೆ)

Tuesday, December 16, 2014

ಅಘನಾಶಿನಿ ಕಣಿವೆಯಲ್ಲಿ-2

(ಮಳೆಗಾಲದಲ್ಲಿ ಕಣ್ಣೀರುಮನೆಗೆ ಹೋಗುವ ರಸ್ತೆ ಪರಿಸ್ಥಿತಿ)
           ವಿಕ್ರಮ ಮೂಲತಃ ಒಬ್ಬ ಮಲೆನಾಡಿನ ಯುವಕ. ಇವನ ಊರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹತ್ತಿರದ `ಕಣ್ಣೀರು ಮನೆ' ಎಂಬ ಒಂದು ಚಿಕ್ಕ ಹಳ್ಳಿ. ಇವನ ಮನೆಯವರು ಭಾರಿ ಶ್ರೀಮಂತರು. 8-10 ಎಕರೆಯಷ್ಟು ಜಮೀನಿರುವ ಮನೆ ಇವರದ್ದು. ಊರಿನಲ್ಲಿದ್ದುದು ಆರೇಳು ಮನೆಗಳಾದರೂ ದೊಡ್ಡ ಹಾಗೂ ಊರಿನ ಕೊಟ್ಟಕೊನೆಯಲ್ಲಿದ್ದ ಮನೆ ವಿಕ್ರಮನದ್ದಾಗಿತ್ತು. ವಿಕ್ರಮ ಪಿಯುಸಿ ವರೆಗೆ ಕಾಲೇಜು ಕಲಿತಿದ್ದ. ನಂತರ ಬಿಎಯನ್ನು ಹೊರಗಿನಿಂದಲೇ ಕಲಿತು ಪಾಸು ಮಾಡಿದ್ದ. ಪಿಯುಸಿಗೆ ಹೋಗುವಾಗಲೇ ಯಲ್ಲಾಪುರದಲ್ಲಿ ಮಾರ್ಷಲ್ ಆರ್ಟ್ ಕಲಿತ ಗುರುಗಳೊಬ್ಬರು ಸಿಕ್ಕಿದ್ದರಿಂ ಶ್ರದ್ಧೆಯಿಂದ ಕಲಿತಿದ್ದ. ಕುಂಗ್ ಫೂ, ಕರಾಟೆಯನ್ನು ಭಕ್ತಿಯಿಂದ ಕಲಿತಿದ್ದ. ನಂತರದ ದಿನಗಳಲ್ಲಿ ಈ ಕರಾಟೆ, ಕುಂಗ್ ಫೂ ಗಳೇ ಆತನ ಕೈ ಹಿಡಿದಿದ್ದವು.
            ವಿಕ್ರಮನ ತಂದೆ ರಾಜಾರಾಮ ಭಟ್ಟರಿಗೆ ಮಗ ಪಿಯುಸಿಯ ನಂತರ ಓದಲು ಇಷ್ಟವಿರಲಿಲ್ಲ. ಮನೆಯಲ್ಲಿ ಸಾಕಷ್ಟು ಜಮೀನಿದ್ದರೂ ಪಾರಂಪರಿಕವಾಗಿ ಬಂದ ವೈದಿಕ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಿದ್ದರು. ರಾಜಾರಾಮ ಭಟ್ಟರ ಪೌರೋಹಿತ್ಯಕ್ಕೆ ನೂರಾರು ಜನ ಶಿಷ್ಯರೂ ಇದ್ದರು. ತನ್ನಂತೆ ಮಗನೂ ವೈದಿಕ ವೃತ್ತಿಯಲ್ಲಿ ಮುಂದುವರಿಯಲಿ, ಮಂತ್ರವನ್ನು ಕಲಿಯಲಿ, ಭಟ್ಟತನಿಕೆ ಮುಂದುವರಿಸಲಿ ಎನ್ನುವ ಆಸೆ ರಾಜಾರಾಮ ಭಟ್ಟರದ್ದಾಗಿತ್ತು.
          ಅದಕ್ಕೆ ಇಂಬು ಎಂಬಂತೆ ಕಣ್ಣೀರು ಮನೆ ಎಂಬ ಯಾರೂ ಕೇಳಿರದ ಹೆಸರಿನ ಕುಗ್ರಾಮಕ್ಕೆ ಹೋಗಿ-ಬಂದು ಮಾಡಬೇಕೆಂದರೆ ಹರಸಾಹಸ ಪಡಬೇಕಿತ್ತು. ವಿನಾಯಕ ಓದುತ್ತೇನೆ ಎಂದರೂ ಅದಕ್ಕೆ ಎದುರಾಗಿ ನೂರಾರು ಸವಾಲುಗಳಿದ್ದವು. ದಟ್ಟ ಕಾಡು, ಮಳೆಗಾಲದಲ್ಲಿ ದಿನದ 24 ತಾಸುಗಳೂ ಜೊರಗುಡುವ ಮಳೆ, ಉಕ್ಕೇರಿ ಹರಿಯುವ ಹಳ್ಳ-ಕೊಳ್ಳಗಳು, ಸೇತುವೆಯೇ ಇಲ್ಲದ ರಸ್ತೆಗಳು ಈ ಎಲ್ಲ ಕಾರಣಗಳು ವಿಕ್ರಮನ ಓದಿನ ಶತ್ರುಗಳಾಗಿದ್ದವು. ಮಳೆಗಾಲದಲ್ಲಿ ದ್ವೀಪದಂತಾಗುತ್ತಿದ್ದ ಈ ಊರು ಒಮ್ಮೊಮ್ಮೆ ತಿಂಗಳಾನುಗಟ್ಟಲೆ ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಂಡುಬಿಡುತ್ತಿತ್ತು. ಪಿಯುಸಿ ಓದಲು ವಿಕ್ರಮ ಯಲ್ಲಾಪುರಕ್ಕೆ ಬರಲು ಅದೆಷ್ಟು ಕಷ್ಟಪಟ್ಟಿದ್ದ ಎನ್ನುವುದು ಅವನಿಗಷ್ಟೇ ಗೊತ್ತು. ರಾಜಾರಾಮ ಭಟ್ಟರೂ ಮಗನನ್ನು ಮುಂದಕ್ಕೆ ಓದಿಸಲು ತಯಾರಿರಲಿಲ್ಲ. `ಓದಿ ಕಡಿದು ಗುಡ್ಡೇ ಹಾಕುವುದೆಂತದ್ದಿದ್ದು.. ಮಂತ್ರ ಕಲ್ತಕಂಡು ಭಟ್ಟತನಿಕೆ ಮಾಡು. ಮಠಕ್ಕೆ ಕಳಿಸ್ತೆ. ಆರ್ ತಿಂಗ್ಳು ಇದ್ಕಂಡು ಬಾ..' ಎಂದು ಖಂಡತುಂಡವಾಗಿ ಹೇಳಿಬಿಟ್ಟಿದ್ದರು. ತಂದೆಯೊಡನೆ ಜಗಳವಾಡಿಕೊಂಡು ವಿಕ್ರಂ ಮನೆ ಬಿಟ್ಟು ಬಂದಿದ್ದ. ಮಂಗಳೂರನ್ನು ತಲುಪಿದ್ದ.
            ಮಂಗಳೂರಿಗೆ ಬಂದ ಹೊಸತರಲ್ಲಿ ವಿಕ್ರಮನಿಗೆ ಯಲ್ಲಾಪುರದಲ್ಲಿ ಕುಂಗ್ ಫೂ-ಕರಾಟೆಯನ್ನು ಕಲಿಸಿದ್ದ ಗುರುಗಳು ಬೆನ್ನಿಗೆ ನಿಂತಿದ್ದರು. ಅವರ ಸಹಾಯದಿಂದಲೇ ಕುಂಗ್ ಫೂ-ಕರಾಟೆಯ ಶಾಲೆಯೊಂದನ್ನು ತೆರೆದಿದ್ದ. ಆ ಶಾಲೆಯ ಮೂಲಕವೇ ಅನ್ನವನ್ನು ಸಂಪಾದಿಸಲಾರಂಭಿಸಿದ್ದ. ಇನ್ನು ಅವನ ವಯಸ್ಸಿನ ವಿಚಾರಕ್ಕೆ ಬಂದರೆ ಅವನಿನ್ನೂ ಇಪ್ಪತ್ತೈದರ ತರುಣ. ಉತ್ಸಾಹಿ ಯುವಕ.  ಸ್ಫುರದ್ರೂಪಿ. ಗುಡ್ಡ-ಬೆಟ್ಟಗಳಲ್ಲಿ, ಕಾಡು-ಕಣಿವೆಗಳಲ್ಲಿ ಓಡಾಡಿದ ಆತ ಸಹಜವಾಗಿಯೇ ಕಟ್ಟುಮಸ್ತಾಗಿದ್ದ.  ಮಾರ್ಷಲ್ ಆರ್ಟ್ ಕಲಿಯುವ ಸಂದರ್ಭದಲ್ಲಿ ಕಟ್ಟುಮಸ್ತಿನ ದೇಹಕ್ಕೆ ಇನ್ನಷ್ಟು ಸಾಣೆ ಹಿಡಿದ ಕಾರಣ ಮತ್ತಷ್ಟು ಆಕರ್ಷಕವಾಗಿದ್ದ. ನಾಲ್ಕು ಜನ ಒಟ್ಟಾಗಿ ಅವನ ಮೇಲೆ ಬಿದ್ದರೂ ಅವರನ್ನು ಮಣಿಸಬಲ್ಲ ತಾಕತ್ತನ್ನು ಹೊಂದಿದ್ದ ವಿಕ್ರಂ. ಜೊತೆಗೆ ಚಾಕಚಕ್ಯತೆ ಕೂಡ ಇತ್ತು.  ವಿಕ್ರಮನ ತಾಯಿ ಮನೆಯಲ್ಲಿ ವಿಕ್ರಮಾರ್ಜುನ ವಿಜಯವನ್ನು ಓದುವಾಗ ಹೆಸರು ಇಷ್ಟವಾಗಿ ವಿಕ್ರಮ ಎಂದು ಹೆಸರಿಟ್ಟಿದ್ದರಂತೆ. ಇಂತಹ ವಿಕ್ರಮನ ರೂಪಕ್ಕೆ, ಆಕರ್ಷಕ ವ್ಯಕ್ತಿತ್ವಕ್ಕೆ ಮರುಳಾಗದ ಜನರೇ ಇಲ್ಲ ಎಂದರೆ ಅತಿಶಯೋಕ್ತಿ ಖಂಡಿತ ಅಲ್ಲ.
(ಕಣ್ಣೀರು ಮನೆ ತಲುಪಲು ಇಷ್ಟು ಕಷ್ಟ ಪಡಲೇಬೇಕು)
             ವಿಕ್ರಮನ ತಾಯಿ ಲಕ್ಷ್ಮಿ. ಊರಿನವರ ಪಾಲಿಗೆ ಲಕ್ಷ್ಮಿಬಾಯಿ. ವಿಕ್ರಮನ ಪಾಲಿಗೆ `ಲಕ್ ಬಾಯಿ..' ತಮಾಷೆಯಿಂದ ತಾಯಿಯನ್ನು ಕರೆಯುತ್ತಿದ್ದಿದ್ದೇ ಹೀಗೆ. ಸಾತ್ವಿಕ ಗುಣದ ಲಕ್ಷ್ಮೀಬಾಯಿ ಎಂದೂ ಸಿಟ್ಟಾಗಿದ್ದನ್ನು ಯಾರೂ ಕಂಡಿಲ್ಲ.ಸದ್ಗುಣಿ, ಕರುಣಾಮಯಿ, ಸಹನಾಶೀಲೆ ಇತ್ಯಾದಿಗುಣಗಳನ್ನೂ ಪೋಣಿಸಿ ಬಿಡಬಹುದು. ಮಗ ಮಂಗಳೂರಿಗೆ ಹೊರಟಾಗ ಗಂಡ ರಾಜಾರಾಮ ಭಟ್ಟರಿಗೆ ಗೊತ್ತಾಗದಂತೆ ಸಹಾಯ ಮಾಡಿದ ಖ್ಯಾತಿ, ಪ್ರೀತಿ ಇವರದ್ದು.
             ಮನೆಯಲ್ಲಿದ್ದ ಇನ್ನೊಬ್ಬರು ಸದಸ್ಯರೆಂದರೆ ವಿಕ್ರಮನ ಅಜ್ಜಿ ಮಹಾಲಕ್ಷ್ಮಿ. ಅವರ ವಯಸ್ಸಿನ ಬಗ್ಗೆ ಸ್ಪಷ್ಟವಾಗಿ ಕೇಳಿದರೆ ಹೇಳುವುದು ಕಷ್ಟ. ಕೆವರು 80 ಎಂದರೆ ಮತ್ತೆ ಕೆಲವರು 85 ಎನ್ನುತ್ತಾರೆ. 90-95 ಎಂದು ಹೇಳುವವರೂ ಇದ್ದಾರೆ. ಅಜ್ಜಿಯನ್ನೇ ಕೆಳಿದರೆ ಶತಮಾನಗಳ ಕಥೆ ಹೇಳಿಬಿಟ್ಟಾರು. ಮುಪ್ಪಾದರೂ ಅಜ್ಜಿ ಗಟ್ಟಾಗಿದ್ದಳು. ಇವರನ್ನು ನೋಡಿ ವಿಕ್ರಮ ಯಾವಾಗಲೂ ಓಲ್ಡ್ ಈಸ್ ಗೋಲ್ಡ್ ಎನ್ನುತ್ತಿದ್ದ. ವಿಕ್ರಮನಿಗೆ ಅಜ್ಜಿಯೆಷ್ಟು ಪ್ರೀತಿ ಪಾತ್ರಳೋ ಅಜ್ಜಿಗೂ ವಿಕ್ರಮನೆಂದರೆ ಪ್ರಾಣ. ಪಂಚ ಪ್ರಾಣ. ಈಕೆಯ ಗುಣವರ್ಣನೆ ಮಾಡುವಾಗ ಹಲವಾರು ವಿಶೇಷಣಗಳನ್ನು ಸೇರಿಸಬಹುದು. ಇದು ವಯಸ್ಸಾದವರ ವಿಷಯವಾದ್ದರಿಂದ ಜಾಸ್ತಿ ಹೇಳದೆ ಮುಂದಕ್ಕೆ ಸಾಗುವುದು ಒಳಿತು. ಮಹಾಲಕ್ಷ್ಮಿ, ಮಹಾಲಕ್ಷ್ಮಮ್ಮ ಅವರು ತಮ್ಮ ಮೊಮ್ಮಗ ವಿಕ್ರಮನನ್ನು ಪ್ರೀತಿಯಿಂದ ಕರೆಯುವುದು `ವೀಕೂ...' ಎಂದು. ಇದಕ್ಕೆ ಪ್ರತಿಯಾಗಿ ವಿಕ್ರಮ ಅಜ್ಜಿಯ ಬಳಿ `ಯಾವ ದಿಕ್ಕಿನಿಂದ ನೋಡಿರೂ ನಾನು ವೀಕಾಗಿ ಕಾಣಿಸ್ತ್ನಿಲ್ಲೆ.. ಅದೆಂತಕ್ಕೆ ವೀಕೂ ಹೇಳ್ತೆ...' ಎಂದು ಕೇಳಿದರೆ ಅಜ್ಜಿ `ಚಿಕ್ಕಂದಿನಲ್ಲಿ ನೀನು ಬಹಳ ಸಣ್ಣ ಇದ್ದೆ.. ಅದ್ಕೆ ಹಂಗೆ ಕರೆಯೋದು..' ಎನ್ನುತ್ತಿದ್ದರು.
            ವಿಕ್ರಮನ ಕುಟುಂಬದ ಸದಸ್ಯರು ಇಷ್ಟೇ ಅಲ್ಲ. ಇನ್ನೂ ಒಬ್ಬರಿದ್ದಾರೆ. ಕುಟುಂಬದ ಕೊಟ್ಟ ಕೊನೆಯ ಸದಸ್ಯೆ. ವಿಕ್ರಮನ ತಂಗಿ ರಮ್ಯ. ವಿಕ್ರಮನಿಗಿಂತ ನಾಲ್ಕೈದು ವಸಂತಗಳಷ್ಟು ಚಿಕ್ಕವಳು. ಅವಳು ಯಲ್ಲಾಪುರದಲ್ಲಿ ಬಿ.ಎ ಮೊದಲ ವರ್ಷದಲ್ಲಿ ಓದುತ್ತಿದ್ದಳು. ವಿಕ್ರಮನ ಒತ್ತಾಯದಿಂದಲೇ ರಾಜಾರಾಮ ಭಟ್ಟರು ಮಗಳನ್ನು ಯಲ್ಲಾಪುರದಲ್ಲಿ ಕಾಲೇಜು ಕಲಿಕೆಗೆ ಹಾಕಿದ್ದರು. ವಾಚಾಳಿ ಗುಣದ ರಮ್ಯ ಸುಮ್ಮನಿದ್ದಳೆಂದರೆ ಏನೋ ಆಗಿದೆ ಎನ್ನುವ ತೀರ್ಮಾನಕ್ಕೆ ಬರಬಹುದಿತ್ತು.
**********
           ವಿಕ್ರಮ ಸ್ಥಾಪಿಸಿದ್ದ `ಅದ್ವೈತ ಆತ್ಮರಕ್ಷಣೆ ..' ಕೇಂದ್ರಕ್ಕೆ ಮಂಗಳೂರಷ್ಟೇ ಅಲ್ಲ ಅಕ್ಕಪಕ್ಕದ ಬಜಪೆ, ಉಲ್ಲಾಳ, ಕಾಸರಕೋಡ, ಸುರತ್ಕಲ್ ಈ ಮುಂತಾದ ಕಡೆಗಳಿಂದಲೂ ಯುವಕರು ಕಲಿಯಲು ಬರುತ್ತಿದ್ದರು. ಇವನ ಗರಡಿಯಲ್ಲಿ ಪಳಗಿದವರು ಸಾಕಷ್ಟು ಹೆಸರನ್ನೂ ಗಳಿಸುತ್ತಿದ್ದರು.
           ಹೀಗಿದ್ದಾಗ ಒಂದು ದಿನ ವಿಕ್ರಮ ಸ್ಥಾಪಿಸಿದ್ದ ಮಾರ್ಷಲ್ ಆರ್ಟ್ ಕಲಿಕಾ ಕೇಂದ್ರದ ಬಳಿಯಲ್ಲೇ ಇನ್ನೊಂದು ಮಾರ್ಷಲ್ ಆರ್ಟ್ ಕೇಂದ್ರ ಪ್ರಾರಂಭವಾಗಿತ್ತು. ಆರಂಭದಲ್ಲೇ ಸಾಕಷ್ಟು ಗಿಮಿಕ್ಕುಗಳನ್ನು ಮಾಡಿದ್ದ ಆ ಕೇಂದ್ರ `ಹೊಸ ನೀರು ಬಂದು ಹಳೇ ನೀರನ್ನು ಕೊಚ್ಚಿಕೊಂಡು ಹೋಯಿತು' ಎಂಬಂತೆ ತನ್ನತ್ತ ಎಲ್ಲರನ್ನೂ ಸೆಳೆಯಲಾರಂಭಿಸಿತ್ತು. ಸಾಕಷ್ಟು ಹಣವನ್ನು ಹೊಂದಿದ್ದ ಅದರ ಮಾಲೀಕರು ತರಹೇವಾರಿ ಜಾಹೀರಾತಿನ ಮೂಲಕ ಯಶಸ್ವಿಯಾಗಿದ್ದರು. 50ಕ್ಕೂ ಅಧಿಕ ಜನರಿದ್ದ ವಿಕ್ರಮನ ಕಲಿಕಾ ಕೇಂದ್ರದ ಪರಿಸ್ಥಿತಿ ಇದರಿಂದ ಯಾವ ಪರಿಣಾಮ ಎದುರಿಸಿತೆಂದರೆ ಕೊನೆ ಕೊನೆಗೆ ಕೇವಲ 15-20 ಜನರಷ್ಟೇ ಉಳಿಯುವಂತಾಯಿತು. ವಿಕ್ರಮನ ವೃತ್ತಿಗೆ ಬಲವಾದ ಹೊಡೆತ ಬೀಳಲಾರಂಭವಾಗಿತ್ತು, ಇದರಿಂದ ಚಿಂತಾಕ್ರಾಂತನಾದ ವಿಕ್ರಮ ಖಿನ್ನತೆಗೆ ಒಳಗಾಗಿ ಸದಾಕಾಲ ಇದರ ಬಗ್ಗೆಯೇ ಆಲೋಚನೆ ಮಾಡಲು ಆರಂಭಿಸಿದ್ದ.
(ಕಣ್ಣೀರು ಮನೆ ರಸ್ತೆಯ ಕಣ್ಣೀರು ತರಿಸುವ ದಾರಿ)
            ಅದೊಂದು ದಿನ ಇದೇ ಆಲೋಚನೆಯಲ್ಲಿ ಮುಂಜಾನೆ ಬೇಗನೇ ಎದ್ದು ತನ್ನ ಕಲಿಕಾ ಕೇಂದ್ರಕ್ಕೆ ಬಂದ ವಿಕ್ರಮ. ಅಷ್ಟರಲ್ಲಾಗಲೇ ಅಲ್ಲಿಗೆ ಬಂದು ನಿಂತಿದ್ದ ವಿಕ್ರಮನ ಆಪ್ತರಲ್ಲಿ ಆಪ್ತನಾದ ಗೆಳೆಯ ಪ್ರದೀಪ. ತಾನೂ ನಗುವುದು, ಇತರರನ್ನೂ ನಗಿಸುವುದು ಪ್ರದೀಪನ ಕಾರ್ಯ. ಧ್ವನಿ ಅಷ್ಟೇನೂ ಚನ್ನಾಗಿರಲಿಲ್ಲ. ಆದರೆ ಹಾಡುವ ಹುಚ್ಚು ಮಾತ್ರ ವಿಪರೀತವಿತ್ತು. ಹಾಡನ್ನು ಆತ ಹಾಡುತ್ತಾನೆ ಎನ್ನುವುದಕ್ಕಿಂತ ಅರಚುತ್ತಾನೆ ಎಂದರೆ ಸರಿಯಾಗುತ್ತಿತ್ತು. ಆದರೆ ಆತ ಜೀವನದಲ್ಲಿ ಅದೆಷ್ಟೋ ದೊಡ್ಡ ದೊಡ್ಡ ನೋವುಗಳನ್ನು ಎದುರಿಸಿದ್ದಾನೆ ಎನ್ನುವುದನ್ನು ಆತನ ಕಣ್ಣನ್ನು ನೋಡಿದರೆ ಅರ್ಥವಾಗಿ ಬಿಡುತ್ತಿತ್ತು.
             ಆತ ಚಿಕ್ಕವಯಸ್ಸಿನವನಾಗಿದ್ದರೂ ಬಹಳಷ್ಟು ಜೀವನಾನುಭವವನ್ನು ಕಂಡಿದ್ದ. ಪದೇ ಪದೆ ಅನುಭವಿಸುತ್ತಲೂ ಇದ್ದ. ಈತ ಮೂಲತಃ ಸಾಗರ ಕಡೆಯ ಹಳ್ಳಿಯೊಂದರ ಹುಡುಗ. ಪ್ರದೀಪ ಹುಟ್ಟಿದ ಕೆಲವೇ ವರ್ಷಗಳಲ್ಲಿ  ಕುಡುಕ ತಂದೆ ಪ್ರದೀಪನನ್ನೂ ಆತನ ತಾಯಿಯನ್ನೂ ಬಿಟ್ಟು ಮತ್ತೊಬ್ಬಳ ಜೊತೆಗೆ ಓಡಿಹೋದ. ತಾಯಿ ಕಷ್ಟಪಟ್ಟು ಸಾಕಿದ್ದಳು. ಹಾಗೂ ಹೀಗೂ ಪಿಯುಸಿ ಓದಿದ. ಪಿಯುಸಿ ಓದುತ್ತಿದ್ದಾಗ ಒಂದು ಹುಡುಗಿಯನ್ನು ಪ್ರೀತಿಸಿದ. ಆಕೆ ಆತನನ್ನು ತಿರಸ್ಕಾರ ಮಾಡಿದಳು. ಆಗ ಛಲಕ್ಕೆ ಬಿದ್ದ ಪ್ರದೀಪ ಅವಳ ಬಳಿ `ನೋಡು.. ಇನ್ನು ಆರೇಳು ವರ್ಷಗಳಲ್ಲಿ ಕರ್ನಾಟಕವೇ ನನ್ನನ್ನು ಹೊಗಳುವಂತೆ ಆಗುತ್ತೇನೆ...' ಎಂದು ಹೇಳಿ ಅವಳ ಕಡೆಗೆ ಸಿಟ್ಟಿನಿಂದ ಬಂದಿದ್ದ. ಅಲ್ಲಿಂದ ಊರು ಬಿಟ್ಟು ಬಂದವನಿಗೆ ಜೊತೆಯಾಗಿದ್ದು ಪ್ರದೀಪನಂತೆ ಮನೆಯಿಂದ ಬಂದಿದ್ದ ವಿಕ್ರಂ. ಇಬ್ಬರ ಭೆಟಿಯೂ ಮಂಗಳೂರಿನಲ್ಲೇ ಆಗಿತ್ತು. ಅಲ್ಲಿ, ಇಲ್ಲಿ ಏನೇನೋ ಕೆಲಸ ಮಾಡಿ ಕಾಲೇಜು ಮುಗಿಸಿದ ಆತನಿಗೆ ಇತ್ತೀಚೆಗೆ ದೊಡ್ಡದೊಂದು ಕೆಲಸವೂ ಸಿಕ್ಕಿತ್ತು. ಆದರೆ ಆತನಿಗೆ ಸಿಕ್ಕ ಕೆಲಸ ಏನು ಎನ್ನುವುದನ್ನು ಮಾತ್ರ ಯಾರಿಗೂ ಹೇಳಿರಲಿಲ್ಲ. ಗೆಳೆಯ ವಿಕ್ರಮನ ಬಳಿಯೂ ಹೇಳದೇ ಉಳಿದಿದ್ದ. ವಿಚಿತ್ರವೆಂದರೆ ಇಂತಹ ಪ್ರದೀಪ ಪದೇ ಪದೆ ಕಾಣೆಯಾಘಿಬಿಡುತ್ತಿದ್ದ. ಹೇಳದೇ ಕೇಳದೇ ಎಲ್ಲೋ ಹೋಗಿಬಿಡುತ್ತಿದ್ದ. ವಿಕ್ರಮ ಸಾಕಷ್ಟು ಬಾರಿ ಈ ಕುರಿತು ವಿಚಾಸಿದಿದ್ದನಾದರೂ ಉತ್ತರ ಬರದಿದ್ದಾಗ ಕೇಳುವುದನ್ನೇ ಬಿಟ್ಟಿದ್ದ. ಇಂತಹ ನಿಘೂಡತೆಯೇ ಮುಂದೊಂದು ದಿನ ಪ್ರದೀಪ ಹಾಗೂ ವಿಕ್ರಮನ ಬಾಳಲ್ಲಿ ಬಹುದೊಡ್ಡ ತಿರುವನ್ನು ನೀಡಲಿತ್ತು.

(ಮುಂದುವರಿಯುತ್ತದೆ)             

ಕರೆದಿದೆ ಬಾರಾ ದೇವಕಾರ

(ದೇವಕಾರದ ಸೊಬಗು)
ಉತ್ತರ ಕನ್ನಡ ಜಿಲ್ಲೆಯ ನಿಸರ್ಗದಲ್ಲಿ ಹೊರ ಜಗತ್ತಿಗೆ ಅಷ್ಟಾಗಿ ಪರಿಚಿತವಾಗದ ಅನೇಕ ಜಲಪಾತಗಳಿವೆ. ಸೌಂದರ್ಯ, ಅಬ್ಬರ, ದೈತ್ಯ ನಿಲುವು ಹೊಂದಿರುವ ಜಲಪಾತವೊಂದಿದೆ. ಹೊರ ಜಗತ್ತಿಗೆ ಅಷ್ಟಾಗಿ ಪರಿಚಿತವಾಗದ ಈ ಜಲಪಾತವೇ ದೇವಕಾರ ಜಲಪಾತ.
ದೇವಕಾರ ಹೆಸರಿಗೆ ತಕ್ಕಂತೆ ದೇವರದ್ದೇ ಕಾರುಬಾರಿನ ಜಾಗ ಎಂದರೂ ತಪ್ಪಾಗಲಿಕ್ಕಿಲ್ಲ. ದಟ್ಟ ಕಾಡು, ಎತ್ತ ನೋಡಿದರತ್ತ ಹಸಿರಿನ ಚೆಲುವು ತುಂಬಿರುವ ದೇವಕಾರ ಗ್ರಾಮದ ಹತ್ತಿರವೇ ಇದೆ ಜಲಪಾತ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ಕಾರವಾರ ತಾಲೂಕುಗಳ ಗಡಿ ಪ್ರದೇಶದಲ್ಲಿರುವ ಈ ಜಲಪಾತ ತನ್ನ ಚೆಲುವಿನಿಂದ ಎಲ್ಲರನ್ನು ಸೆಳೆಯುತ್ತದೆ. ಪಶ್ಚಿಮ ಘಟ್ಟದ ತುದಿಯಿಂದ ಕಣಿವೆಯಾಳಕ್ಕೆ ಧುಮ್ಮಿಕ್ಕುವ ನೀರಿನ ಸೊಬಗನ್ನು ವೀಕ್ಷಿಸುವುದೇ ಖುಷಿಯ ಸಂಗತಿ. ಕಾಳಿ ನದಿಯನ್ನು ಸೇರುವ ಹಳ್ಳವೊಂದರ ಸೃಷ್ಟಿ ದೇವಕಾರ ಜಲಪಾತ. 15-200 ಅಡಿ ಎತ್ತರದ ಈ ಜಲಪಾತವನ್ನು ಮಳೆಗಾಲ ಹೊರತು ಪಡಿಸಿ ಉಳಿದೆಲ್ಲ ಕಾಲದಲ್ಲಿಯೂ ನೋಡಬಹುದಾಗಿದೆ.
ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಂತಹ ಕಾಡಿನ ನಡುವೆ ಇರುವ ಈ ಜಲಪಾತ ವೀಕ್ಷಣೆ ಮಾಡಬೇಕೆಂದರೆ ಸಾಹಸವನ್ನೇ ಮಾಡಬೇಕು. ಕೊಡಸಳ್ಳಿ ಹಾಗೂ ಕದ್ರಾ ಅಣೆಕಟ್ಟುಗಳ ನಡುವಿನ ಪ್ರದೇಶದಲ್ಲಿ ಇರುವ ದೇವಕಾರ ಗ್ರಾಮವನ್ನು ತಲುಪುವುದು ಸುಲಭವಲ್ಲ. ವರ್ಷದ ಆರು ತಿಂಗಳು ಈ ಊರು ದ್ವೀಪವೇ ಸರಿ. ಮೂರು ಕಡೆಯಲ್ಲಿ ಸುತ್ತುವರಿದಿರುವ ಕಾಳಿ ನದಿಯ ನೀರು. ಇನ್ನೊಂದು ಕಡೆ ಎದೆಮಟ್ಟಕ್ಕೆ ಏರಬೇಕಾದಂತಹ ಕಡಿದಾದ ಪಶ್ಚಿಮ ಘಟ್ಟ. ಇಂತಹ ಪ್ರದೇಶದಲ್ಲಿ ದೇವಕಾರ ಗ್ರಾಮವಿದೆ. ದೇವಕಾರ ಗ್ರಾಮದಿಂದ 1-2 ಕಿ.ಮಿ ಅಂತರದಲ್ಲಿ ಜಲಪಾತವಿದೆ. ಜಲಪಾತ ವರ್ಷದ ಎಲ್ಲ ಕಾಲದಲ್ಲಿಯೂ ಧುಮ್ಮಿಕ್ಕುತ್ತದೆ. ಮಳೆಗಾಲದಲ್ಲಿ ತನ್ನ ಸೊಬಗನ್ನು ನೂರ್ಮಡಿಸಿಕೊಳ್ಳುತ್ತದೆ. ಇಂತಹ ಜಲಪಾತವನ್ನು ಕಣ್ತುಂಬಿಕೊಳ್ಳಬೇಕೆಂದರೆ ಕನಿಷ್ಟ 10 ಕಿ.ಮಿ ನಡೆಯುವುದು ಕಡ್ಡಾಯ.
(ದೇವಕಾರದಲ್ಲಿರುವ ದೇವಸ್ಥಾನ)
ಈ ಜಲಪಾತವನ್ನು ತಲುಪಲು ಪ್ರಮುಖವಾಗಿ ಮೂರು ದಾರಿಗಳಿವೆ. ಯಲ್ಲಾಪುರದಿಂದ ಇಡಗುಂದಿ ಮಾರ್ಗವಾಗಿ ಕಳಚೆ ಗ್ರಾಮ ತಲುಪುವುದು. ಕಳಚೆ ಗ್ರಾಮದಿಂದ 12 ಕಿ.ಮಿ ಕಡಿದಾದ ಗುಡ್ಡ ಬೆಟ್ಟವನ್ನು ಹತ್ತಿಳಿದು ನಡೆದು ದೇವಕಾರ ಗ್ರಾಮವನ್ನು ತಲುಪುವುದು ಒಂದು ಮಾರ್ಗ. ಯಲ್ಲಾಪುರದಿಂದ ಇಡಗುಂದಿ ಮಾರ್ಗವಾಗಿ ಬಾರೆ ಎಂಬ ಊರಿನ ದಾರಿಯಲ್ಲಿ ಸಾಗುವುದು. ಅಲ್ಲಿಂದ ಕಾನುರು ಎಂಬ ಗ್ರಾಮದ ಬಳಿ ಬಂದು 3 ಕಿ.ಮಿ ನಡೆದರೆ ಜಲಪಾತದ ನೆತ್ತಿಯನ್ನು ತಲುಪಬಹುದು. ಆದರೆ ಜಲಪಾತದ ತಲೆಭಾಗದಿಂದ ಕೆಳಕ್ಕೆ ಇಳಿಯುವುದು ಅಸಾಧ್ಯ. ಅತ್ಯಂತ ಕಡಿದಾದ, ಇಳಿಜಾರು ಕಲ್ಲುಬಂಡೆಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ನುರಿತ ಚಾರಣಿಗರು ಮಾತ್ರ ಕೆಳಕ್ಕೆ ಇಳಿಯಬಹುದಾಗಿದೆ. ಮೇಲ್ಭಾಗದಿಂದ ಜಲಪಾತವನ್ನು ವೀಕ್ಷಿಸುವವರು ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಮೂರನೇ ಮಾರ್ಗ ಕಾರವಾರದಿಂದ ಆಗಮಿಸುವುದು. ಕಾರವಾರದಿಂದ ಕೈಗಾ ಮೂಲಕ ಕೊಡಸಳ್ಳಿಗೆ ಆಗಮಿಸಿ ಕೊಡಸಳ್ಳಿ ಅಣೆಕಟ್ಟೆ ಅಧಿಕಾರಿಗಳ ಅನುಮತಿ ಪಡೆದು ಅಣೆಕಟ್ಟು ದಾಟಿದರೆ ದೇವಕಾರಿಗೆ ತೆರಳುವ ಕಚ್ಚಾ ರಸ್ತೆ ಮಾರ್ಗ ಸಿಗುತ್ತದೆ. ಈ ರಸ್ತೆ ಮಾರ್ಗದಲ್ಲಿ 11 ಕಿ.ಮಿ ಸಂಚರಿಸಿದರೆ ದೇವಕಾರ ಗ್ರಾಮ ಸಿಗುತ್ತದೆ. ಸ್ಥಳೀಯರ ಬಳಿ ಜಲಪಾತದ ಬಗ್ಗೆ ಕೇಳಿದರೆ ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಮಳೆಗಾಲದಲ್ಲಿ ಈ ರಸ್ತೆ ಮಾತ್ರ ನದಿ ನೀರಿನಲ್ಲಿ ಮುಳುಗಿರುತ್ತದೆ. ಬೇಸಿಗೆಯಲ್ಲಿ ಮಾತ್ರ ಈ ಮಾರ್ಗದಲ್ಲಿ ಸಂಚಾರ ಮಾಡಬಹುದು.
ದೇವಕಾರ ಗ್ರಾಮದಲ್ಲಿ ಕೆಲವೇ ಕೆಲವು ಮನೆಗಳಿವೆ. ಬಡ, ಮಧ್ಯಮ ವರ್ಗದ ಕುಟುಂಬಗಳು ಇಲ್ಲಿ ವಾಸ ಮಾಡುತ್ತಿವೆ. ಇಲ್ಲಿಗೆ ಪ್ರವಾಸಿಗರು ಬರುವುದು ಕಡಿಮೆ. ಆಗಮಿಸುವ ಪ್ರವಾಸಿಗರಿಗೆ ಕೇವಲ ಜಲಪಾತವನ್ನು ತೋರಿಸುವ ಕಾರ್ಯವನ್ನು ಮಾತ್ರ ಸ್ಥಳೀಯರು ಮಾಡುತ್ತಾರೆ. ಪ್ರವಾಸಿಗರಿಗೆ ಅಗತ್ಯವಾದ ಊಟ, ತಿಂಡಿಗಳನ್ನು ಇಲ್ಲಿಗೆ ಬರುವಾಗ ಪ್ರವಾಸಿಗರೇ ತರತಕ್ಕದ್ದು. ಆಧುನಿಕ ಜಗತ್ತಿನ ಸೌಲಭ್ಯಗಳು ಈ ಊರಿಗೆ ಇನ್ನೂ ತಲುಪಿಲ್ಲದ ಕಾರಣ ಈ ಊರಿನ ಪರಿಸರವನ್ನು ಮಲಿನ ಮಾಡುವುದು ನಿಷಿದ್ಧ. ಇಲ್ಲಿ ಮೊಬೈಲ್ ರಿಂಗಣಿಸುವುದಿಲ್ಲ. ಬಸ್ಸುಗಳು, ವಾಹನಗಳ ಸುಳಿವಿಲ್ಲ. ವಿದ್ಯುತ್ ಸಂಪರ್ಕ ಕೆಲವೇ ಮನೆಗಳಿಗಿದೆ. ಪ್ರವಾಸಿಗರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲ. ಬೆಳಿಗ್ಗೆ ಮುಂಜಾನೆ ಜಲಪಾತ ವೀಕ್ಷಣೆಗೆ ಬಂದರೆ ಸಂಜೆ ಮರಳಲೇ ಬೇಕು. ದಟ್ಟ ಕಾಡು ಇದಾದ್ದರಿಂದ ಕಾಡು ಪ್ರಾಣಿಗಳ ಹಾವಳಿ ಸದಾ ಇರುತ್ತದೆ. ಸ್ಥಳೀಯರ ಮಾರ್ಗದರ್ಶನವಿಲ್ಲದೇ ಇಲ್ಲಿಗೆ ಆಗಮಿಸುವುದು ಅಪಾಯಕರ.
(ಕೊಡಸಳ್ಳಿ ಅಣೆಕಟ್ಟು)
ದೇವಕಾರ ಗ್ರಾಮದಲ್ಲೊಂದು ದೇವಾಲಯವಿದೆ. ಜಲಪಾತಕ್ಕೆ ಆಗಮಿಸುವವರು ಈ ದೇವಾಲಯದ ಬಳಿ ವಿರಮಿಸಬಹುದು. ದೇವರಿಗೆ ಪೂಜೆ ಮಾಡಿ ಧನ್ಯತೆಯನ್ನು ಪಡೆಯಬಹುದು. ಆಗಮಿಸುವ ಮಾರ್ಗ ಮಧ್ಯದಲ್ಲಿ ಕಾಳಿ ನದಿಯ ವಿಹಂಗಮ ನೋಡವನ್ನೂ ನೋಡಬಹುದು. ಕೊಡಸಳ್ಳಿ ಅಣೆಕಟ್ಟು ಹಾಗೂ ಕದ್ರಾ ಅಣೆಕಟ್ಟಿನ ಹಿನ್ನೀರಿನ ಸೊಬಗನ್ನು ವೀಕ್ಷಿಸಬಹುದು.
ಕಷ್ಟಪಟ್ಟು ಆಗಮಿಸಿದರೆ ಜಲಪಾತ ಇಷ್ಟವಾಗುತ್ತದೆ. 10-12 ಕಿ.ಮಿ ದೂರದ ಟ್ರೆಕ್ಕಿಂಗಿನ ಸುಸ್ತು, ಕಷ್ಟವನ್ನೆಲ್ಲ ಜಲಪಾತದ ಸೊಬಗು ಒಂದೇ ಏಟಿಗೆ ಓಡಿಸಿಬಿಡುತ್ತದೆ. ತಣ್ಣನೆಯ ಜಲಪಾತದ ನೀರಂತೂ ಮನಸ್ಸಿನ ಎಲ್ಲ ದುಃಖ, ಕಷ್ಟಗಳಿಗೆ ಪೂರ್ಣವಿರಾಮ ಹಾಕಿಬಿಡುತ್ತದೆ. ಹೊಟ್ಟೆಗೆ ಅಮೃತದಂತಹ ಸವಿಯನ್ನು ನೀಡುತ್ತದೆ. ದೈತ್ಯ ಬಂಡೆಗಳ ಸಾಲಿನಿಂದ ಧುಮ್ಮಿಕ್ಕುವ ಜಲಪಾತ ನೋಡಿದಷ್ಟೂ ನೋಡಬೇಕೆನ್ನಿಸುತ್ತದೆ. ಹಾಲ್ನೊರೆಯ ಸೊಬಗಂತೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಮಳೆಗಾಲದ ನಂತರ ನೀರು ಹೆಚ್ಚಾಗಿರುವ ಸಂದರ್ಭದಲ್ಲಿ ಈ ಜಲಪಾತ ಭೋರೆನ್ನುವ ಸದ್ದು ಮೂರ್ನಾಲ್ಕು ಕಿ.ಮಿ ವರೆಗೂ ಕೇಳಿಸುತ್ತದೆ. ಗವ್ವೆನ್ನುವ ಕಾಡಿನಲ್ಲಿ ಜಲಪಾತದ ಭೋರೆನ್ನುವ ಸದ್ದು ಒಳ್ಳೆಯ ಅನುಭೂತಿಯನ್ನು ನೀಡುತ್ತದೆ. ನೀವೂ ಈ ಅನುಭವವನ್ನು ಸವಿಯಬೇಕಿದ್ದರೆ ಜಲಪಾತಕ್ಕೆ ತೆರಳಲೇ ಬೇಕು. ಹಾಗಿದ್ರೆ ಯಾಕೆ ತಡ? ಈಗಲೇ ರೆಡಿ ಮಾಡಿಕೊಳ್ಳಿ ನಿಮ್ಮೆಲ್ಲ ವಸ್ತುಗಳನ್ನು. ಹೊರಡಲು ತಯಾರಾಗಿ.
ಜಲಪಾತಕ್ಕೆ ತಲುಪುವ ಬಗೆ
ಬೆಂಗಳೂರಿನಿಂದ ಆಗಮಿಸುವವರು ಹುಬ್ಬಳ್ಳಿ ಅಥವಾ ಶಿವಮೊಗ್ಗ-ಶಿರಸಿ ಮೂಲಕ ಯಲ್ಲಾಪುರ ತಲುಪಿ ಅಲ್ಲಿಂದ ಬಸ್ ಅಥವಾ ವಾಹನ ಮೂಲಕ ಕಳಚೆ ತಲುಪಿ ಅಲ್ಲಿಂದ ಟ್ರೆಕ್ಕಿಂಗ್ ಮೂಲಕ ಜಲಪಾತ ತಲುಬಹುದು. ಮಂಗಳೂರಿನ ಕಡೆಯವರು ಕಾರವಾರ ತಲುಪಿ ಕೈಗಾ-ಕೊಡಸಳ್ಳಿ ಮೂಲಕ ಕಾಳಿ ನದಿ ದಾಟಿ ಟ್ರೆಕ್ಕಿಂಗ್ ಮಾಡಿ ಜಲಪಾತದ ಒಡಲು ತಲುಪಬಹುದು. ಹುಬ್ಬಳ್ಳಿಯಲ್ಲಿ ಹತ್ತಿರದ ವಿಮಾನ ನಿಲ್ದಾಣವಿದೆ. ಅಂಕೋಲಾ, ಕಾರವಾರದಲ್ಲಿ ರೈಲು ನಿಲ್ದಾಣಗಳಿವೆ. ಕಾರವಾರದಿಂದ ಕೊಡಸಳ್ಳಿ, ಯಲ್ಲಾಪುರದಿಂದ ಕಳಚೆಯ ವರೆಗೆ ಸರ್ಕಾರಿ ಬಸ್ ಓಡಾಡುತ್ತದೆ. ಅಲ್ಲಿಂದ ಟ್ರೆಕ್ಕಿಂಗ್ ಅನಿವಾರ್ಯ.