Friday, November 14, 2014

ಮದ್ವೆ ಮಾಡ್ಕ್ಯಳೆ-3

ಕೂಸೆ ನಿಂಗೆ ಹೊಸದೊಂದು
ಗಂಡು ನೋಡಿದ್ನೇ
ಮಾಣಿ ಭಾರಿ ಶಿಸ್ತಾಗಿದ್ದ
ಮದ್ವೆ ಆಗ್ತ್ಯನೆ..|

ಆನು ಇನ್ನೂ ಓದಕಾಜು
ಮದ್ವೆ ಬ್ಯಾಡದೋ ಅಪ್ಪಯ್ಯಾ
ದೊಡ್ಡ ಕೆಲ್ಸ ಹುಡುಕಕಾಜು
ತ್ರಾಸು ಕೊಡಡ್ದೋ |

ಮಾಣಿ ಭಾರಿ ಚೊಲೋ ಇದ್ನೆ
ಮದ್ವೆ ಆಗ್ತ್ಯನೆ ಕೂಸೆ
ದೊಡ್ಡ ಕೆಲ್ಸ ಮಾಡ್ತಾ ಇದ್ದ
ಒಪ್ಪಿಗ್ಯತ್ಯನೆ |

ನಂದಿನ್ನೂ ಡಿಗ್ರಿ ಆಜಿಲ್ಲೆ
ಈಗ್ಲೆ ಎಂತಕ್ಕೆ ಮದ್ವೆ
ಇನ್ನೂ ಎರ್ಡು ವರ್ಷ ಹೋಗ್ಲಿ ಸುಮ್ನೆ
ಆಮೇಲೆ ನೋಡನ |

ಮೊನ್ನೆ ಬಂದ ಜೋಯಿಸ್ರಂತೂ
ಲೀಸ್ಟು ಕೊಟ್ಟಿದ್ದ
ದೊಡ್ಡ ಪಟ್ಟಿಯಲ್ಲಿ ನೂರು ಮಾಣಿ
ಪೋಟೋ ಇಟ್ಟಿದ್ದ |

ಪೋಟೋ ತೋರ್ಸಿ, ಆಸೆ ತೋರ್ಸಿ
ತಲೆ ಕೆಡ್ಸಡದೋ ಅಪ್ಪಯಾ
ಯಂಗಿನ್ನೂ ಓದಕಾಜು
ತ್ರಾಸು ಕೊಡಡದೋ |

ಉದ್ದ ಲೀಸ್ಟು ಇಲ್ಲಿಟ್ಟಿದ್ದಿ
ಬೇಗ ನೋಡ್ಬಿಡೆ ಕೂಸೆ
ಯಾರಡ್ಡಿಲ್ಲೆ ಹೇಳದನ್ನ
ಬೇಗ ಹೇಳ್ಬಿಡೆ |

ಮೂಲೆಮನೆ ಮಾಣಿಗೆ
ಕೆಲ್ಸ ಇಲ್ಯಲಾ ಅಪ್ಪಯ್ಯಾ
ದಂಟಕಲ್ ಮಾಣಿ
ದಂಟಿನ ಹಾಂಗೆ ಇದ್ದಿಗಿದ್ನಲಾ |

ಕಲ್ಮನೆ, ಸಣ್ಣಳ್ಳಿ, ಹೇರೂರು
ಇನ್ನೂ ಹೆಸ್ರು ರಾಶಿ ಇದ್ದಲೆ ಕೂಸೆ
ಅಜ್ಜಿಮನೆ, ಕಾನಳ್ಳಿ, ಹೊಸಳ್ಳಿ
ಮಾಣಿಯಕ್ಕ ಚೊಲೋ ಇದ್ವಲೆ |

ಕಲ್ಮನೆ ಮಾಣಿ ಸಣ್ಣಕ್ಕಿದ್ದ
ಸಣ್ಣಳ್ಳಿಯಂವ ಓದಿದ್ನಿಲ್ಲೆ
ಹೇರೂರ ಮಾಣಿ ಹಲ್ ಸರಿ ಇಲ್ಯಡಾ
ಯಂಗೆ ಬ್ಯಾಡದೋ ಅಪ್ಪಯ್ಯಾ |

ಪಟ್ಟಿ ಇನ್ನೂ ಜಾಸ್ತಿ ಇದ್ದು
ಬೇಗ ಒಪ್ಗ್ಯಳೇ ಕೂಸೆ
ಒಳ್ಳೆ ಟೈಮು ಬೇಗನೆ ನೋಡಿ
ಮದ್ವೆ ಮಾಡ್ಬುಡ್ತಿ |

ಅಜ್ಜಿಮನೆ ಮಾಣಿಗೆ ವಯಸ್ಸಾಗೋತು
ಕಾನಳ್ಳಿ ಮಾಣಿಗೆ ಊರು ಗೊತ್ತಿಲ್ಲೆ
ಹೊಸಳ್ಳಿ ಮಾಣಿ ಚಂದಾನೇ ಇಲ್ಲೆ
ಮದ್ವೆ ಬ್ಯಾಡದೋ ಅಪ್ಪಯ್ಯಾ |

ನಿಂಗ್ ಹೇಳಿ ಸಾಕಾಗೋತೆ
ಹಟಾ ಮಾಡಡದೇ ಕೂಸೆ
ಹಳ್ಳಿ ಮಾಣಿ ಒಪ್ಪಿಕೊಳ್ಳೆ
ತ್ರಾಸು ಕೊಡಡದೇ |

ಬೆಂಗಳೂರು ಮಾಣಿ ಇದ್ರೆ ಹೇಳು
ಮದ್ವೆ ಮಾಡ್ಕ್ಯತ್ತಿ ಅಪ್ಪಯ್ಯಾ
ಹಳ್ಳಿ ಬದಿಯವ್ ಬ್ಯಾಡದೇ ಬ್ಯಾಡ
ನಾ ಒಪ್ಪತ್ನಿಲ್ಲೆ |

ಹಿಂಗೇಳದೆ ಮಳ್ ಕೂಸೆ
ಮದ್ವೆಗೆ ಒಪ್ಕ್ಯಳೆ
ಬದುಕಿನ ತುಂಬ ಪ್ರೀತಿ ಮಾಡ್ತ
ಹೂಂ ಅಂತೇಳೆ |

ಬ್ಯಾಡದೇ ಬ್ಯಾಡ ಹಳ್ಳಿ ಹುಡುಗ
ಎರಡನೆ ಮಾತಿಲ್ಲೆ ಅಪ್ಪಯ್ಯಾ
ಇದರ ಬಿಟ್ಟರೆ ಇನ್ನು ಬ್ಯಾರೆ ಉತ್ತರ
ಯಂಗೆ ಗೊತ್ತಿಲ್ಲೆ |

****
(ಸುಮ್ಮನೆ ತಮಾಷೆಗೆ ಅಂತ ಬರೆದ ಹವ್ಯಕ ಗೀತೆ. ಮಗಳಿಗೆ ಹಲವಾರು ಊರುಗಳ ಹುಡುಗರ ಲೀಸ್ಟನ್ನು ತಂದು ಇವರಲ್ಲಿ ಯಾರನ್ನಾದರೂ ಮದುವೆಯಾಗು ಎಂದು ಹೇಳುವ ತಂದೆಗೆ ಮಗಳು ಕೊಡುವ ಉತ್ತರ ಈ ಹವ್ಯಕ ಗೀತೆಯಲ್ಲಿದೆ..)
(ಬರೆದಿದ್ದು ನ.14, 2014ರಂದು ಶಿರಸಿಯಲ್ಲಿ)

ಬೆಂಗಾಲಿ ಸುಂದರಿ-39

           ಸಾಕಷ್ಟು ದೊಡ್ಡದಾಗಿತ್ತು ತೀಸ್ತಾ ನದಿ. ಅಕ್ಕಪಕ್ಕದಲ್ಲಿ ಹಾದು ಹೋದಂತಿದ್ದ ಎರಡು ಸೇತುವೆಗಳು ನದಿಯ ಇಕ್ಕೆಲಗಳನ್ನು ಜೋಡಿಸಿದ್ದವು. ಬೇಸಿಗೆಯ ಆರಂಭವಾದ್ದರಿಂದ ನದಿಯಲ್ಲಿ ನೀರು ಕಡಿಮೆಯಿತ್ತು. ಉದ್ದನೆಯ ಬಯಲು ಮಲಗಿದೆಯೋ ಎಂಬಂತೆ ಕಾಣುತ್ತಿದ್ದ ಪ್ರದೇಶ. ಒಂದು ಕಡೆಯಲ್ಲಿ ಚಿಕ್ಕದೊಂದು ಸರೋವರದ ಆಕೃತಿಯಲ್ಲಿ ನೀರು ನಿಂತುಕೊಂಡಿತ್ತು. ಅರ್ಚಕರು `ಭಾರತಕ್ಕೂ ಬಾಂಗ್ಲಾದೇಶಕ್ಕೂ ತೀಸ್ತಾ ನದಿ ನೀರಿನ ಹಂಚಿಕೆಯ ಸಲುವಾಗಿ ಗಲಾಟೆಗಳು ನಡೆದಿವೆ. ಆಗೀಗ ವಿವಾದಗಳು ಉಂಟಾಗುತ್ತಲೂ ಇರುತ್ತವೆ. ಕಳೆದ ಎರಡು ದಶಕಗಳಿಂದ ಈ ನದಿ ನಿರಿನ ಹಂಚಿಕೆ ಜ್ವಲಂತವಾಗಿಯೇ ಇದೆ. ಎರಡೂ ರಾಷ್ಟ್ರಗಳು ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿವೆ. ಹೀಗಾಗಿ ತೀಸ್ತಾನದಿ ನೀರು ಹಂಚಿಕೆ ಕಗ್ಗಂಟಾಗಿಯೇ ಉಳಿದಿದೆ' ಎಂದರು. ವಿನಯಚಂದ್ರ ಹಾಗೂ ಮಧುಮಿತಾ ಸುಮ್ಮನೇ ಕೇಳುತ್ತಿದ್ದರು.
           `ಭಾರತದ ಸಿಕ್ಕಿಂ ರಾಜ್ಯದಲ್ಲಿ ಹುಟ್ಟುವ ತೀಸ್ತಾ ನದಿ ನಂತರ ಪಶ್ಚಿಮ ಬಂಗಾಳದ ಫಾಸಲೆಯಲ್ಲಿ ಹರಿದು ಬಾಂಗ್ಲಾದೇಶವನ್ನು ಸೇರುತ್ತದೆ. ಭಾರತದಲ್ಲಿ ಈ ನದಿಗೆ ಹಲವಾರು ಅಣೆಕಟ್ಟುಗಳನ್ನೂ ಕಟ್ಟಲಾಗಿದೆ. ಹಿಮಾಲಯದಲ್ಲಿ ಹುಟ್ಟುವ ನದಿಯಾದ ಕಾರಣ ಸದಾಕಾಲ ತುಂಬಿರುತ್ತದೆ. ಇಂತಹ ನದಿ ನೀರನ್ನು ಭಾರತ ಅಣೆಕಟ್ಟಿ ತಾನೇ ಇಟ್ಟುಕೊಳ್ಳುತ್ತದೆ. ಪರಿಣಾಮವಾಗಿ ಬಾಂಗ್ಲಾದೇಶಕ್ಕೆ ಅಗತ್ಯವಾದ ನೀರು ಸಿಗುತ್ತಿಲ್ಲ ಎನ್ನುವ ವಾದ ಬಾಂಗ್ಲಾದೇಶದ್ದು. ಭಾರತವೂ ತನ್ನದೇ ಆದ ವಾದವನ್ನು ಮುಂದಿಡುತ್ತದೆ. ವಿಚಿತ್ರವೆಂದರೆ ನೀರು ಸರಿಯಾಗಿ ಹಂಚಿಕೆಯಾಗುತ್ತಿಲ್ಲ ಎಂದು ಕೂಗಾಡುವ ಬಾಂಗ್ಲಾದೇಶ ಮಾತ್ರ ತೀಸ್ತಾ ನದಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದೇ ಇಲ್ಲ. ಆದರೆ ಭಾರತ ಸಮರ್ಪಕವಾಗಿ ನೀರು ಹಂಚಿಕೆ ಮಾಡುವುದಿಲ್ಲ ಎಂದು ಕೂಗಾಡುವುದನ್ನು ನಿಲ್ಲಿಸುವುದೇ ಇಲ್ಲ.. ಇದೋ ನೋಡಿ ಈ ನದಿಯ ಇಕ್ಕೆಲಗಳೂ ಸದಾಕಾಲ ಹಸಿರಾಗಿ ಇರವಂತಾಗಬಹುದಿತ್ತು. ವರ್ಷಕ್ಕೆ ಮೂರು ಬೆಳೆಗಳನ್ನೂ ಬೆಳೆಯಬಹುದಿತ್ತು. ಆದರೆ ನದಿಯ ಅಕ್ಕಪಕ್ಕದ ಬಯಲುಗಳು ಮಾತ್ರ ಒಣಗಿ ನಿಂತಿವೆ..' ಎಂದರು ಅರ್ಚಕರು.
           ವಿಶಾಲವಾದ ನದಿ ಹರವಿನ ಪಾತ್ರ ಬತ್ತಿದಂತಿತ್ತು. ಉದ್ದವಾದ ಸೇತುವೆ ನದಿಯನ್ನು ಅಡ್ಡಡ್ಡ ಸೀಳಿದಂತೆ ಮುಂದಕ್ಕೆ ಸಾಗಿತ್ತು. ನದಿಯ ಪಾತ್ರದಲ್ಲಿ ಅದ್ಯಾರೋ ಉಸುಕನ್ನು ತೆಗೆಯುತ್ತಿದ್ದರು. ಸೇತುವೆಯ ಮೇಲೆ ವೇಗವಾಗಿ ಸಾಗುತ್ತಿದ್ದ ಬಸ್ಸಿನಿಂದ ಒಂದು ಪಕ್ಕದಲ್ಲಿ ಮಾತ್ರ ನೀರಿನ ಗುಂಡಿಯಿದ್ದರೆ ಅಲ್ಲೊಂದಿಷ್ಟು ಮಹಿಳೆಯರು ತಲೆಯ ಮೇಲೆ ನೀರಿನ ಕೊಡಗಳನ್ನು ಹೊತ್ತು ಸಾಗುತ್ತಿದ್ದರು. ನಂದನ ವನದಲ್ಲೂ ಬರವೇ ಎಂದುಕೊಂಡ ವಿನಯಚಂದ್ರ. ತೀಸ್ತಾ ನದಿ ಸೇತುವೆ ದಾಟಿ ಮುನ್ನಡೆಯಿತು ಬಸ್ಸು. ಸೇತುವೆ ದಾಟಿದ ನಂತರ ರಸ್ತೆಯಲ್ಲಿ ಹೊರಳಿ ಕುರಿಗ್ರಾಮದ ಕಡೆಗೆ ಹೊರಟಿತು. ರಸ್ತೆಯ ಇಕ್ಕೆಲಗಳಲ್ಲೂ ಮನೆಗಳು. ಪುಟ್ಟ-ಪುಟ್ಟ ಹಳ್ಳಿಗಳು ಕಾಣಿಸಿದವು. ಮುಂದೆ ಮುಂದೆ ಸಾಗಿದಂತೆಲ್ಲ ರಸ್ತೆ ಮತ್ತಷ್ಟು ಕಿರಿದಾಯಿತು. ಕಿರಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ನಿಧಾನವಾಗಿ ಹೆಚ್ಚತೊಡಗಿತು.
           ಅಲ್ಲೊಂದು ಕಡೆ ತಿಂಡಿ ತಿನ್ನಲು ವಾಹನ ನಿಲ್ಲಿಸಲಾಯಿತು. ಅರ್ಚಕರ ಬಸ್ಸಿನಿಂದ ಇಳಿದರು. ಅಷ್ಟೇ ಅಲ್ಲ ವಿನಯಚಂದ್ರ ಹಾಗೂ ಮಧುಮಿತಾರನ್ನೂ ಇಳಿಯಲು ಹೇಳಿ ಅಲ್ಲೇ ಇದ್ದ ಹೊಟೆಲೊಂದಕ್ಕೆ ಕರೆದೊಯ್ದರು. ಹೊಟೆಲಿನಲ್ಲಿ ಬೆಂಗಾಲಿ ಸ್ಪೆಷಲ್ ರಸಗುಲ್ಲಕ್ಕೆ ಆರ್ಡರ್ ಕೊಟ್ಟರು. ಕೆಲವೇ ಕ್ಷಣಗಳಲ್ಲಿ ಕಣ್ಣೆದುರಿಗೆ ತಂದಿಟ್ಟ ರಸಗುಲ್ಲವನ್ನು ಮೂವರೂ ಸವಿಯುತ್ತಿದ್ದಾಗಲೇ `ರೋಶಗುಲಾ.. ಬೆಂಗಾಲಿಯ ವಿಶೇಷ ತಿಂಡಿ. ಈ ರಾಷ್ಟ್ರಕ್ಕೇನಾದರೂ ರಾಷ್ಟ್ರೀಯ ತಿಂಡಿ ಎನ್ನುವುದು ಇದ್ದರೆ ಅದು ರೋಶಗುಲಾ ವೇ ಹೌದು..' ಎಂದರು. ವಿನಯಚಂದ್ರ ರೋಶಗುಲಾದ ಹೆಸರು ಕೇಳಿ ಕೆಲಕಾಲ ಅವಾಕ್ಕಾಗಿ ನಿಂತಿದ್ದ. ಕೊನೆಗೆ ರಸಗುಲ್ಲಾವೇ ಬಾಂಗ್ಲಾದೇಶದಲ್ಲಿ ರಶೊಗುಲಾವಾಗಿ ಬದಲಾಗಿದೆ ಎಂಬುದು ನೆನಪಾಯಿತು. ಮಧುಮಿತಾಳಂತೂ ಖುಷಿಯಿಂದ ಸವಿದಳು. ಆಕೆಗೆ ಚಿಕ್ಕಂದಿನಿಂದ ಬಲು ಆಪ್ತ ತಿಂಡಿಯಾಗಿತ್ತದು. ಕಳೆದುಹೋಗಿದ್ದು ಮತ್ತೊಮ್ಮೆ ಸಿಕ್ಕಂತಾಯಿತು. ಮತ್ತೊಮ್ಮೆ ರೊಶಗುಲಾವನ್ನು ನೀಡಿದ್ದಕ್ಕಾಗಿ ಅರ್ಚಕರಿಗೆ ಧನ್ಯವಾದ ಹೇಳಿದಳು ಆಕೆ.
         ಮತ್ತೆ ಹೊರಡಲು ಅನುವಾದ ಬಸ್ಸನ್ನು ಏರಿದರು ಮೂವರೂ. ಬಸ್ಸು ರಾಜರಹಾಟ್ ಪ್ರದೇಶವನ್ನು ಹಾದು ಒಂದು ತಾಸಿನ ಅವಧಿಯಲ್ಲಿ ಕುರಿಗ್ರಾಮವನ್ನು ತಲುಪಿತು. ಅಲ್ಲಿ ಇಳಿದ ಮೂವರೂ ಆ ಗ್ರಾಮದ ಫಾಸಲೆಯಲ್ಲೇ ಇದ್ದ ಸ್ಥಳದತ್ತ ತೆರಳಿದರು. ಮುಖ್ಯ ಬೀದಿಯಿಂದ ಕವಲೊಡೆದ ಸಾದಾ ರಸ್ತೆಯಲ್ಲಿ ಸಾಗಿ ಅಲ್ಲೆಲ್ಲೋ ಒಂದು ಕಡೆ ಅರ್ಚಕರು ಇಬ್ಬರನ್ನು ಕರೆದೊಯ್ದರು. ಮನೆಯೊಂದರ ಬಳಿ ನಿಲ್ಲಿಸಿ ಮನೆಯ ಯಜಮಾನನನ್ನು ಕರೆದರು. ಮನೆಯ ಯಜಮಾನ ಹೊರಬಂದ ನಂತರ ಆತನನ್ನು ಅರ್ಚಕರು ಪರಿಚಯಿಸಿದರು.
         ಭಾರತಕ್ಕೆ ಕಳಿಸುವ ಅರ್ಚಕರ ಕೈಂಕರ್ಯದಲ್ಲಿ ಜೊತೆಗೂಡಿದ ವ್ಯಕ್ತಿಯಾಗಿದ್ದರು ಆತ. ಆತನೂ ಹಿಂದೂವೇ ಆಗಿದ್ದ. ಭಾರತ ತಲುಪುವ ವರೆಗೆ ಸಹಾಯ ಮಾಡುವುದು ಆತನ ಪ್ರಮುಖ ಕಾರ್ಯವಾಗಿತ್ತು. ತನ್ನ ಮನೆಯ ಪಕ್ಕದಲ್ಲೇ ಇದ್ದ ಕೊಠಡಿಯಲ್ಲಿ ಸಂಜೆಯಾಗುವ ವರೆಗೆ ಉಳಿಯಲು ಅವಕಾಶ ಮಾಡಿಕೊಟ್ಟ. ಮಾತಿಗೆ ನಿಂತ ಅರ್ಚಕರು `ಇಲ್ಲಿಯವರೆಗಿನ ನಮ್ಮ ಪ್ರಯಾಣ ನಿರಾಳ. ಯಾವುದೇ ತೊಂದರೆ ಆಗಿರಲಿಲ್ಲ. ಆದರೆ ಇನ್ನುಮುಂದಿನ ಹಾದಿಯಂತೂ ಬಹಳ ಕಠಿಣ. ಹೆಜ್ಜೆ ಹೆಜ್ಜೆಗೆ ಅಪಾಯವಿದೆ. ಮೊದಲಿಗೆ ನಾವು ಧರ್ಲಾ ನದಿಯನ್ನು ದಾಟಿ ಭಾರತದ ಗಡಿಯತ್ತ ಹೋಗಬೇಕು. ಅಲ್ಲಿ ಸಮಯ ನೋಡಿ ದಾಟಬೇಕು. ಅದೃಷ್ಟವಿದ್ದರೆ ಇವತ್ತೇ ದಾಟಬಹುದು. ಸಾಧ್ಯವಾಗದಿದ್ದರೆ ಕಾಯಬೇಕು. ಕೆಲವೊಮ್ಮೆ ನಾವು ಹೀಗೆ ಕಾಯುವುದು ಕನಿಷ್ಟ ಒಂದು ವಾರವೂ ಆಗಬಹುದು. ನೋಡೋಣ ಏನಾಗುತ್ತದೆ ಅಂತ..' ಎಂದರು.
         ಇಬ್ಬರೂ ತಲೆಯಲ್ಲಾಡಿಸಿ ಸುಮ್ಮನಾದರು. ಸಂಜೆಯಾಗುವುದನ್ನೇ ಕಾಯುತ್ತ ಕಳೆದರು. ಹೀಗೆ ಕಾಯುತ್ತಿದ್ದಾಗಲೇ ಉಳಿದಕೊಂಡಿದ್ದ ಮನೆಯ ಯಜಮಾನರು, ಅವರ ಪತ್ನಿ, ಮಕ್ಕಳು ಬಂದು ಪರಿಚಯ ಮಾಡಿಕೊಂಡರು. ವಿನಯಚಂದ್ರನಿಗೆ ಇವರೆಲ್ಲ ಎಷ್ಟು  ಆಪ್ತರು ಎನ್ನಿಸಿತು. ಕತ್ತಲಾಗುತ್ತಿದ್ದಂತೆ ಅರ್ಚಕರು ಭಾರತದ ಗಡಿಯತ್ತ ತೆರಳುವಂತೆ ಸೂಚಿಸಿದರು. ಬೇಗನೇ ತಯಾರಾದ ವಿನಯಚಂದ್ರ ಹಾಗೂ ಮಧುಮಿತಾ ಭಾರತದ ಗಡಿಯತ್ತ ಹೊರಟರು. ಸೈಕಲ್ ರಿಕ್ಷಾ ಒಂದನ್ನು ಬಾಡಿಗೆಗೆ ತಂದಿದ್ದ ಅರ್ಚಕರು ಸೀದಾ ಭಾರತದ ಗಡಿಯತ್ತ ತಮ್ಮನ್ನು ಕರೆದೊಯ್ಯಲು ಹೇಳಿದರು. ಅರ್ಚಕರ ಅಣತಿಯನ್ನು ಕೇಳಿದ ಸೈಕಲ್ ರಿಕ್ಷಾವಾಲಾ `ಏನು ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದೀರಾ..? ಹುಷಾರು..' ಎಂದ. ಅರ್ಚಕರು ಅದೇನೋ ಅಬೂಬು ಹೇಳಿದರಾದರೂ ಸೈಕಲ್ ರಿಕ್ಷಾವಾಲಾ ನಂಬಲಿಲ್ಲ.
         ಕೆಲ ಹೊತ್ತಿನಲ್ಲಿಯೇ ಧಾರ್ಲಾ ನದಿಯನ್ನು ದಾಟಿ ಸೈಕಲ್ ಮುಂದಕ್ಕೆ ಸಾಗಿತು.ಅಲ್ಲೆಲ್ಲೋ ಒಳ ಪ್ರದೇಶಗಳಲ್ಲಿ ಸೈಕಲ್ ಸಾಗುತ್ತಿದ್ದರೆ ವಿನಯಚಂದ್ರನಿಗೆ ತಾವು ಎತ್ತ ಸಾಗುತ್ತಿದ್ದೇವೆ ಎನ್ನುವುದು ಬಗೆ ಹರಿಯಲಿಲ್ಲ. ಅಕ್ಕಪಕ್ಕದಲ್ಲಿ ವಿಶಾಲವಾದ ಬಯಲು ಇರುವುದು ಗೊತ್ತಾಗುತ್ತಿತ್ತು. ಸೈಕಲ್ ರಿಕ್ಷಾವಾಲ ಸೈಕಲ್ಲಿಗೆ ಯಾವುದೇ ಬೆಳಕು ಅಳವಡಿಸಿರಲಿಲ್ಲ. ಕತ್ತಲೆಯಲ್ಲಿಯೇ ಮುಂದಕ್ಕೆ ಸಾಗುತ್ತಿದ್ದ. ಭಾರತದ ಗಡಿಯೊಳಕ್ಕೆ ನುಸುಳಲು ಅದೆಷ್ಟು ಜನರನ್ನು ಹೀಗೆ ಕರೆದೊಯ್ದಿದ್ದನೋ. ಪಳಗಿದ ಆತನಿಗೆ ಯಾವ ಕ್ಷಣದಲ್ಲಿ ಹೇಗೆ ಮಾಡಬೇಕು ಎನ್ನುವುದು ಗೊತ್ತಿತ್ತು. ಆದ್ದರಿಂದ ಕತ್ತಲೆಯಲ್ಲಿಯೇ ಹಳೆಯ ಜಾಡಿನ ರಸ್ತೆಯಲ್ಲಿ ಸಾಗುತ್ತಿದ್ದ. ಒಂದು ತಾಸಿನ ಪಯಣದ ನಂತರ ಭಾರತದ ಗಡಿ ಪ್ರದೇಶವೆನ್ನುವುದು ದೂರದಲ್ಲಿ ಕಾಣುತ್ತಿತ್ತು. ಹಾಕಿದ್ದ ಬೇಲಿ, ಅಲ್ಲೆಲ್ಲೋ ಒಂದು ಕಡೆಯಿದ್ದ ಸರ್ಚ್ ಲೈಟಿನಿಂದ ಭಾರತದ ಗಡಿಯನ್ನು ಗುರುತಿಸಬಹುದಿತ್ತು. ದೂರದಲ್ಲೇ ಸೈಕಲ್ ರಿಕ್ಷಾ ನಿಲ್ಲಿಸಿ ಸುಸಂದರ್ಭಕ್ಕಾಗಿ ಕಾಯುತ್ತ ನಿಂತರು.

(ಮುಂದುವರಿಯುತ್ತದೆ..)

Sunday, November 9, 2014

ಒಂದಿಷ್ಟು HONEYಗಳು

`ಸಿದ್ದು'ಗಳು

ಕ್ರಿಕೆಟ್ ಕಾಮೆಮಟರಿಯಲ್ಲಿ
ಬಲು ಜೋರು ಸಿದ್ದು |
ಹಾಗೆಯೇ ಚಾಮುಂಡೇಶ್ವರಿ ಕ್ಷೇತ್ರ
ಮತ್ತು ಸದನದಲ್ಲಿ ನಿದ್ದೆಯಲ್ಲಿ
ಜೋರಂತೆ ಸಿದ್ದು |

ಕ್ರೀಡಾ ಮನೋಭಾವ

ಪದೇ ಪದೆ ಬರುವ
ಸೋಲನ್ನೂ ಕೂಡ
ಗೆಲುವಿನಂತೆ ಸವಿಯುವ
ಜಗತ್ತಿನ ಏಕೈಕ ತಂಡ
ಅದು ಭಾರತದ ಕ್ರಿಕೆಟ್ ತಂಡ ||


ಹುಟ್ಟಿದ ದಿನ

ವರ್ಷಕ್ಕೊಮ್ಮೆ ಬಂದು
ನಿನ್ನ ಆಯುಷ್ಯ ಒಂದು
ವರ್ಷ ಕಳೆಯಿತು
ಜೊತೆಗೆ ನೀನು ಸಾವಿಗೆ
ಒಂದು ವರ್ಷ ಹತ್ತಿರವಾದೆ
ಎನ್ನುವ ದಿನ |

ಎನರ್ಜಿ ಸೀಕ್ರೆಟ್

ಪ್ರತಿ matchನಲ್ಲೂ ಹೊಡೆಯುವ
ತೆಂಡೂಲ್ಕರ್ ಶಾಟು, ಅದು
ಬಹಳ ಫಾಸ್ಟು |
ಏಕೆಂದರೆ ಅದರ ಸೀಕ್ರೆಟ್ಟು
ಪ್ಯಾಕೆಟ್ ಒಳಗಿನ ಬೂಸ್ಟು ||


ಉಪಸಂಪಾದಕ

ಉಪಸಂಪಾದಕನೆಂದರೆ
ಏನೆಂದುಕೊಂಡಿರಿ?
ಪತ್ರಿಕೆಯ ಏಳಿಗೆಗಾಗಿ
ಉಪಹಾರವನ್ನೂ ಸೇವಿಸದೇ
ಉಪವಾಸ ಬಿದ್ದು ದುಡಿಯುವಾತ ||

Saturday, November 8, 2014

ಬೆಂಗಾಲಿ ಸುಂದರಿ-38

(ರಂಗಪುರದ ಬೀದಿ)
             ಬೆಳಗಿನ ಜಾವದಲ್ಲೇ ಎದ್ದ ಅರ್ಚಕರು ಹಾಯಾಗಿ ನಿದ್ದೆ ಮಾಡುತ್ತಿದ್ದ ವಿನಯಚಂದ್ರ ಹಾಗೂ ಮಧುಮಿತಾಳನ್ನು ಎಬ್ಬಿಸಿದರು. ಅದ್ಯಾವಾಗಲೂ ಮಾಡಿದ್ದ ತಿಂಡಿಯನ್ನು ತಿನ್ನಿಸಿ ಬೇಗ ಬೇಗನೆ ಪ್ರಯಾಣ ಆರಂಭಕ್ಕೆ ಒತ್ತಡ ಹಾಕಿದರು. ಈ ಅರ್ಚಕರದ್ದು ಸ್ವಲ್ಪ ಗಡಿಬಿಡಿ ಸ್ವಭಾವ ಎಂದುಕೊಂಡ ವಿನಯಚಂದ್ರ. ಆದರೂ ತಮ್ಮ ಒಳ್ಳೆಯದಕ್ಕೇ ಈ ಕೆಲಸ ಮಾಡುತ್ತಿದ್ದಾರಲ್ಲ ಎಂದುಕೊಂಡು ಸುಮ್ಮನಾದ. ಅರ್ಚಕರೇ ಮುಂಜಾನೆದ್ದು ತಿಂಡಿಯನ್ನೂ ಮಾಡಿಟ್ಟಿದ್ದರು. ತಿಂಡಿ ತಿಂದು ಭಾರತದ ಗಡಿಯತ್ತ ತೆರಳಲು ತಯಾರಾದರು.  ದೇವಸ್ಥಾನದಲ್ಲಿ ಪೂಜೆಯನ್ನು ಮಾಡಲು ಆರಂಭಿಸುತ್ತಿದ್ದಂತೆ ವಿನಯಚಂದ್ರ ಹಾಗೂ ಮಧುಮಿತಾ ದೇವರ ಬಳಿ ಬಂದು ಮುಂದಿನ ಪ್ರಯಾಣ ಸುಗಮವಾಗಿ ನೆರವೇರಲಿ ಎಂದು ಬೇಡಿಕೊಂಡರು. ಇದುವರೆಗಿನ ಪ್ರಯಾಣ ಒಂದು ಹಂತದ್ದಾಗಿದ್ದರೆ ಇನ್ನು ಮುಂದಿನ ಸಂಚಾರವೇ ಮತ್ತೊಂದು ಹಂತದ್ದಾಗಿತ್ತು. ಭಾರತದ ಗಡಿಯೊಳಗೆ ನುಸುಳುವುದು ಪ್ರಯಾಣದ ಪ್ರಮುಖ ಘಟ್ಟವೇ ಆಗಿತ್ತು.
             ಅದೊಂದು ಶಿವನ ದೇವಾಲಯ. ಅರ್ಚಕರೇ ಹೇಳಿದ ಪ್ರಕಾರ ಆ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆಯಂತೆ. ಬೆಡಿದ್ದನ್ನು ಈಡೇರಿಸುತ್ತಾನೆ ಎಂದೂ ಅರ್ಚಕರು ಹೇಳಿದರು. ಶಿವನಿಗೆ ಅಡ್ಡಬಿದ್ದ ಮಧುಮಿತಾ ವಿನಯಚಂದ್ರರು ಬದುಕಿನಲ್ಲಿ ಸುಖ-ಶಾಂತಿ ಸದಾ ನೆಲೆಸಿರಲಿ, ಮುಮದಿನ ಪ್ರಯಾಣದಲ್ಲಿ ಯಾವುದೇ ವಿಘ್ನಗಳು ಬಾರದೇ ಇರಲಿ ಎಂದು ಬೇಡಿಕೊಂಡರು.
            ನಂತರ ಅರ್ಚಕರೊಡನೆ ರಂಗಪುರ ಬಸ್ ನಿಲ್ದಾಣಕ್ಕೆ ತೆರಳಿ ಭಾರತದ ಗಡಿ ಪ್ರದೇಶದಲ್ಲಿ ಇರುವ ಊರಿನ ಕಡೆಗೆ ತೆರಳುವ ಬಸ್ಸಿಗಾಗಿ ಕಾಯುತ್ತ ನಿಂತರು. `ಸಲೀಂ ಚಾಚಾ.. ಭಾರತದ ಗಡಿಯೊಳಕ್ಕೆ ನುಗ್ಗಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಏಜೆಂಟನೊಬ್ಬನನ್ನು ಪರಿಚಯ ಮಾಡಿಕೊಟ್ಟಿದ್ದ. ಆ ಏಜೆಂಟ ನಮ್ಮ ಬಳಿ ರಂಗಪುರಕ್ಕೆ ಬರುವಂತೆ ಹೇಳಿದ್ದ..' ಎಂದು ವಿನಯಚಂದ್ರ ಹೇಳಿದ.
           `ಏಜೆಂಟರು.. ಥೂ.. ಅವರನ್ನು ನಂಬಲಿಕ್ಕೆ ಹೋಗಬೇಡಿ. ಅವರಂತೂ ನಿಮ್ಮ ಬಳಿ ಸಿಕ್ಕಾಪಟ್ಟೆ ದುಡ್ಡು ಪಡೆಯುತ್ತಾರೆ. ನಂಬಿದಾಗಲೆಲ್ಲ ಕೈ ಕೊಡುವವರು ಅವರು. ಅವರ ಮೋಸಕ್ಕೆ ಬಲಿಯಾದವರು ಹಲವರಿದ್ದಾರೆ.. ಮೋಸ ಮಾಡುವ ಏಜೆಂಟರ ಸಾಲಿನಲ್ಲಿ ಇವನೂ ಒಬ್ಬನಿರಬೇಕು..' ಎಂದು ಅರ್ಚಕರು ಹೇಳಿ ಸುಮ್ಮನಾದರು.
            `ಆದರೆ ಈ ಏಜೆಂಟನನ್ನು ನಾನು ನೋಡಿದ್ದೆ. ಆದರೆ ಹಾಗೆ ಕಾಣಲಿಲ್ಲ. ಸಲೀಂ ಚಾಚಾ ಬೇರೆ ಆತ ಬಹಳ ಒಳ್ಳೆಯವನು.. ಇದುವರೆಗೂ ನೂರಕ್ಕೂ ಹೆಚ್ಚು ಜನರನ್ನು ಭಾರತದೊಳಕ್ಕೆ ಕಳಿಸಿದ್ದಾನೆ ಎಂದೂ ಹೇಳಿದ್ದ..' ಎಂದ ವಿನಯಚಂದ್ರ.
            `ಅಯ್ಯೋ.. ಬಾಂಗ್ಲಾದೇಶದಲ್ಲಿ ಭಾರತದ ಗಡಿಯೊಳಕ್ಕೆ ಬಾಂಗ್ಲಾ ನಿವಾಸಿಗಳನ್ನು ಕಳಿಸಲು ದೊಡ್ಡದೊಂದು ಜಾಲವೇ ಇದೆ. ಸಾವಿರಾರು ಜನರು ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಜನರನ್ನು ಭಾರತದೊಳಕ್ಕೆ ಅಕ್ರಮವಾಗಿ ಕಳಿಸಲು ಅವರು ಯಶಸ್ವಿಯೂ ಆಗಿದ್ದಾರೆ. ಹೆಚ್ಚಿನವರು ಭಾರತಕ್ಕೆ ಕಳಿಸುವುದಕ್ಕಾಗಿ ಭಾರಿ ಮೊತ್ತವನ್ನು ತೆಗೆದುಕೊಳ್ಳುತ್ತಾರೆ. ಅವರಲ್ಲಿ ಬಹಳ ಜನ ಒಮ್ಮೆ ಹಣ ಪಡೆದ ನಂತರ ನಾಪತ್ತೆಯಾಗುತ್ತಾರೆ. ಸಾವಿರಾರು ಜನರು ಏಜೆಂಟರ ಮೋಸಕ್ಕೆ ಬಲಿಯಾಗಿದ್ದಾರೆ...' ಎಂದರು ಅರ್ಚಕರು.
            `ಹೌದಾ..?' ಎಂದು ಅಚ್ಚರಿಯಿಂದ ಕೇಳಿದ ವಿನಯಚಂದ್ರ.
             `ಹುಂ.. ಬಾಂಗ್ಲಾ ದೇಶದವರಿಗೆ ಭಾರತ ಎನ್ನುವುದು ಸ್ವರ್ಗ. ಪಕ್ಕದ ದೊಡ್ಡ ರಾಷ್ಟ್ರ ಭಾರತ. ಬಾಂಗ್ಲಾದಂತೆ ಬದುಕು ನರಕವಲ್ಲ. ಇಲ್ಲಿನಂತೆ ಅನಿಶ್ಚಿತತೆಯೂ ಭಾರತದಲ್ಲಿ ಇಲ್ಲ.  ಭಾರತದಲ್ಲಿ ರಾಜಕಾರಣಿಗಳು ಓಲೈಕೆ ಮಾಡುತ್ತಾರೆ ಎನ್ನುವುದು ಗೊತ್ತಿರುವ ಸಂಗತಿಯೂ ಹೌದು. ಒಮ್ಮೆ ಭಾರತದೊಳಕ್ಕೆ ಹೋಗಿಬಿಟ್ಟರೆ ಆರಾಮಾಗಿ ಜೀವನ ನಡೆಸಬಹುದು ಎನ್ನುವುದು ಇಲ್ಲಿನ ಸಾವಿರಾರು ಜನರ ನಂಬಿಕೆ. ಆ ಕಾರಣಕ್ಕಾಗಿಯೇ ಭಾರತದೊಳಕ್ಕೆ ಹೋಗಲು ಹಾತೊರೆಯುತ್ತಾರೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಭಾರತೊಳಕ್ಕೆ ನುಸುಳುತ್ತಲೂ ಇದ್ದಾರೆ. ಬಾಂಗ್ಲಾದಲ್ಲೇ ಈ ಕಾರಣಕ್ಕಾಗಿಯೇ ಒಂದು ಜೋಕೂ ಕೂಡ ಇದೆ. `ನಾವಿಬ್ಬರು.. ನಮಗಿಬ್ಬರು.. ಹೆಚ್ಚಿಗೆ ಇದ್ದವರು ಭಾರತಕ್ಕೆ ಹೋದರು..' ಎಂದು ಹೇಳುತ್ತಿರುತ್ತಾರೆ. ಇಂತಹ ನುಸುಳುವಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡವರು ಭಾರತಕ್ಕೆ ಕಳಿಸುವ ನೆಪದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ..' ಎಂದರು ಅರ್ಚಕರು.
(ರಂಗಪುರದಲ್ಲಿರುವ ಮಹಾಬೋಧಿ ದೇವಸ್ಥಾನ)
            `ನಮ್ಮ ದೇಶದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಲು, ರೇಷನ್ ಕಾರ್ಡ್ ಮಾಡಿಸಲು, ಎಲ್.ಐಸಿ. ಹೀಗೆ ಹಲವಾರು ಕಡೆಗಳಲ್ಲಿ ಏಜೆಂಟರಿರುತ್ತಾರೆ. ಆದರೆ ಈ ಬಗೆಯ ಏಜೆಂಟರನ್ನು ಕಂಡಿರಲಿಲ್ಲ ನೋಡಿ..' ಎಂದು ನಕ್ಕ ವಿನಯಚಂದ್ರ.
              `ಹೌದು.. ಇಂತಹ ಕಾರಣಕ್ಕೇ ಬಾಂಗ್ಲಾದೇಶ ವಿಭಿನ್ನವಾಗಿದೆ. ವಿಚಿತ್ರವೂ ಆಗಿದೆ..' ಎಂದಳು ಮಧುಮಿತಾ.
              `ಎಲ್ಲಾ ಸರಿ.. ನೀವೂ ಹಲವರನ್ನು ಭಾರತಕ್ಕೆ ಕಳಿಸಿದ್ದೀನಿ ಎಂದಿರಲ್ಲ.. ಸುಮಾರು ಎಷ್ಟು ಜನರನ್ನು ಭಾರತಕ್ಕೆ ಕಳಿಸಿರಬಹುದು?' ಎಂದು ಕೇಳಿದ ವಿನಯಚಂದ್ರ.
             `ನಾನು ಇದುವರೆಗೂ 125 ಜನರನ್ನು ಭಾರತಕ್ಕೆ ಕಳಿಸಿದ್ದೇನೆ. ಅವರೆಲ್ಲರೂ ಹಿಂದೂಗಳೇ. ಅವರೆಲ್ಲ ಭಾರತಕ್ಕೆ ಹೋಗುವಾಗ ಕೇಳುವ ಒಂದೇ ಪ್ರಶ್ನೆಯೆಂದರೆ ನೀವೂ ಭಾರತಕ್ಕೆ ಬನ್ನಿ ಅಂತ. ಆಗ ಅವರ ಬಳಿ ನಾನು ಮತ್ಯಾರಾದರೂ ಹಿಂದೂಗಳು ಭಾರತಕ್ಕೆ ಬರುವವರಿದ್ದರೆ ಅವರನ್ನು ಕಳಿಸಲು ನಾನು ಬರಬೇಕಾಗುತ್ತದೆ ಎಂದು ಹೇಳಿದ್ದೆ. ಈಗ ನೀವೂ ಕೇಳುತ್ತಿದ್ದೀರಿ. ನಿಮಗೂ ನಾನು ಅದೇ ಉತ್ತರವನ್ನು ನೀಡುತ್ತೇನೆ. ಮೊದಲೇ ಹೇಳಿಬಿಡುತ್ತೇನೆ. ನಾನು ಏಜೆಂಟನಲ್ಲ. ನಾನು ದುಡ್ಡಿಗಾಗಿಯೂ ಮಾಡುವುದಿಲ್ಲ. ನಾನು ನನ್ನ ತೃಪ್ತಿಗಾಗಿ ಮಾಡುತ್ತೇನೆ. ಬಾಂಗ್ಲಾದಲ್ಲಿ ಹಿಂದೂಗಳು ಹೀನಾಯವಾಗಿ ಸಾಯುತ್ತಿದ್ದಾರೆ. ಅವರ ಬದುಕು ಭಾರತಕ್ಕೆ ಹೋದರೆ ಚನ್ನಾಗಿರುತ್ತದೆ ಎನ್ನುವ ಕಾರಣಕ್ಕಾಗಿ ನಾನು ಈ ಕೆಲಸವನ್ನು ಮಾಡುತ್ತಿದ್ದೇನೆ. ನನ್ನಿಂದಾಗಿ ನೂರಾರು ಜನರು ಬದುಕುತ್ತಾರೆ ಎಂದಾದರೆ ಅಷ್ಟೇ ಸಾಕು..' ಎಂದರು ಅರ್ಚಕರು.
         ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಅರ್ಚಕರನ್ನು ಹೆಮ್ಮೆಹಿಂದ ನೋಡಿದರು. ಅಷ್ಟರಲ್ಲಿ ಭಾರತದ ಗಡಿ ಪ್ರದೇಶದಲ್ಲಿರುವ ಬಾಂಗ್ಲಾದ ಹಳ್ಳಿಗಳಿಗೆ ತೆರಳುವ ಬಸ್ಸೊಂದು ಬಂದಿತು. ಅರ್ಚಕರೇ ಮುಂದಾಳುವಾಗಿ ಬಸ್ಸನ್ನೇರಿದರು. ಬಸ್ಸು ಸಾಕಷ್ಟು ಖಾಲಿಯಿತ್ತು. ` ಈ ಬಸ್ಸು ನಾಗೇಶ್ವರಿ ಎನ್ನುವ ಊರಿಗೆ ತೆರಳುತ್ತದೆ. ಸರಿಸುಮಾರು 100 ಕಿ.ಮಿ ದೂರದೊಳಗೆ ನಾವು ಅಲ್ಲಿಗೆ ತೆರಳಬಹುದು. ಆದರೆ ಎರಡು ದೇಶಗಳ ಗಡಿ ಭಾಗವಾದ ಕಾರಣ ಈ ಪ್ರದೇಶದ ರಸ್ತೆಗಳು ತೀರಾ ಕೆಟ್ಟದಾಗಿದೆ. ಹೀಗಾಗಿ ನಾಗೇಶ್ವರಿಯನ್ನು ತಲುಪಲು ಸಾಕಷ್ಟು ಸಮಯ ಸಿಗುತ್ತದೆ..' ಎಂದರು ಅರ್ಚಕರು.
         `ಬಾಂಗ್ಲಾದೇಶವೇ ಕೆಟ್ಟದ್ದು. ಅಂತದ್ದರಲ್ಲಿ ಈ ಪ್ರದೇಶ ಇನ್ನೂ ಕೆಟ್ಟದಾಗಿದೆ ಎನ್ನುತ್ತಾರೆ.. ಹೇಗಿದೆಯಪ್ಪಾ..' ಎಂದುಕೊಂಡ ವಿನಯಚಂದ್ರ. ಮಧುಮಿತಾ ಹಿಂದೆ ಹಲವು ಬಾರಿ ರಂಗಪುರಕ್ಕೆ ಬಂದಿದ್ದಳು. ಆದರೆ ರಂಗಪುರದಿಂದ ಮುಂದಕ್ಕೆ ಭಾರತದ ಗಡಿಯವರೆಗೆ ಬಂದಿರಲಿಲ್ಲ. ಹೀಗಾಗಿ ಮುಂದಿನ ಪಯಣ ಅವಳಿಗೂ ಹೊಸದೇ ಆಗಿತ್ತು. ಬೆರಗಿನಿಂದಲೇ ಹೊರಟಳು. ಬಸ್ಸು ಅರ್ಧ ತಾಸಿನ ವಿಶ್ರಮದ ನಂತರ ಹೊರಟಿತು.
           ರಂಗಪುರದ ವಾತಾವರಣ ಬಾಂಗ್ಲಾದೇಶದ ಇತರ ಭಾಗಗಳಿಗಿಂತ ಕೊಂಚ ಭಿನ್ನವಾಗಿತ್ತು. ಬಾಂಗ್ಲಾದ ಎಲ್ಲ ಕಡೆಗಳಲ್ಲಿ ಭತ್ತದ ಗದ್ದೆಗಳು ವಿಶಾಲವಾಗಿದ್ದರೆ ರಂಗಪುರದ ಸುತ್ತಮುತ್ತ ಗದ್ದೆಗಳ ಜೊತೆ ಜೊತೆಯಲ್ಲಿ ಕುರುಚಲು ಕಾಡುಗಳಿದ್ದವು. ಬಯಲು ಕಡಿಮೆಯಾಗಿ ಚಿಕ್ಕಪುಟ್ಟ ಗುಡ್ಡಗಳೂ ಕಾಣಿಸಿಕೊಳ್ಳತೊಡಗಿದ್ದವು. ಗುಡ್ಡ ತುಂಬೆಲ್ಲ ಹೇರಳವಾಗಿ ಮರಗಳು ಆವರಿಸಿದ್ದವು. ಅರ್ಧಗಂಟೆಯ ಪ್ರಯಾಣ ನಂತರ ರಂಗಪುರದ ಫಾಸಲೆಯನ್ನು ದಾಟಿ ಬಸ್ಸು ನಾಗೇಶ್ವರಿಯ ಕಡೆಗೆ ತೆರಳಿತು. ರಂಗಪುರದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ದೇವಾಲಯಗಳು ಕಣ್ಣಿಗೆ ಬೀಳುತ್ತಿದ್ದವು. ಅಲ್ಲೊಂದು ಕಡೆ ಭವ್ಯವಾಗಿ ನಿರ್ಮಾಣ ಮಾಡಲಾಗಿದ್ದ ಮಹಾಬೋಧಿ ದೇವಾಲಯವೂ ಕಾಣಿಸಿತು. ಕುತೂಹಲ ತಡೆಯಲಾಗದೇ ವಿನಯಚಂದ್ರ `ಈ ಊರಿನಲ್ಲಿ ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವ ಹಾಗಿದೆ.. ದೇವಸ್ಥಾನಗಳು ಸಾಕಷ್ಟು ಕಂಡೆ. ಅಲ್ಲೊಂದು ಕಡೆ ಬೌದ್ಧ ದೇವಾಲಯವೂ ಕಾಣಿಸಿತು..' ಎಂದ.
            `ಹೌದು.. ರಂಗಪುರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಿಂದೂಗಳಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿರುವ ಪ್ರಮುಖ ಪ್ರದೇಶಗಳಲ್ಲಿ ರಂಗಪುರವೂ ಒಂದು. ಶೆ.10 ರಿಂದ 15ರಷ್ಟು ಹಿಂದೂಗಳಿದ್ದಾರೆ ಇಲ್ಲಿ. ಶೆ.1ರಷ್ಟು ಬೌದ್ಧರೂ ಇದ್ದಾರೆ. ಹಲವಾರು ದೇವಾಲಯಗಳೂ ಇಲ್ಲಿದೆ. ಬೌದ್ಧರ ಪ್ರಮುಖ ಯಾತ್ರಾ ಸ್ಥಳವಾದ ಮಹಾಬೋಧಿ ದೇವಾಲಯ ಇಲ್ಲಿದೆ. ಈ ದೇವಾಲಯಕ್ಕೆ 10 ಶತಮಾನಗಳ ಹಿನ್ನೆಲೆಯಿದೆ.. ಭವ್ಯವಾದ ಈ ದೇವಾಲಯವನ್ನು ನೋಡುತ್ತಿದ್ದರೆ ಮನಸ್ಸಿನಲ್ಲಿ ಅದೇನೋ ಶಾಂತಿ..' ಎಂದರು ಅರ್ಚಕರು.
            `ನಾನು ಎಲ್ಲೋ ಕೇಳಿದ್ದೇನೆ. 2013ರಲ್ಲಿ ಹಿಂದೂ ವಿರೋಧಿ ದಂಗೆ ಬಾಂಗ್ಲಾದಲ್ಲಿ ನಡೆದಿತ್ತಂತೆ.. ಆಗ ಬಹಳಷ್ಟು ಹಿಂದೂಗಳನ್ನು ಹತ್ಯೆ ಮಾಡಿದ್ದರಂತೆ.. ಹಿಂದೂಗಳ ಮನೆಗಳನ್ನು ಸುಟ್ಟು ಹಾಕಿದ್ದರಂತೆ..' ಎಂದು ಕೇಳಿದ ವಿನಯಚಂದ್ರ.
             `ಹೌದು.. 1971ರಲ್ಲಿ ನಡೆದ ನಂತರ 2013ರಲ್ಲಿ ಹಿಂದೂ ವಿರೋಧಿ ದಂಗೆ ಬಾಂಗ್ಲಾದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯಿತು. 2000ದಿಮದಲೂ ನಡೆಯುತ್ತಲೇ ಬಂದಿತ್ತಾದರೂ 2013ರಲ್ಲಿ ತೀವ್ರ ಸ್ವರೂಪ ಕಂಡಿತು. 2013ರಲ್ಲಿ ಬಾಂಗ್ಲಾದೇಶದ ಮುಸ್ಲಿಂ ಧಾರ್ಮಿಕ ಮುಖಂಡರು ಹಿಂದೂಗಳ ದಂಗೆಗೆ ಕರೆ ನೀಡಿದ್ದರು. ಈ ಕಾರಣಕ್ಕಾಗಿಯೇ ದಂಗೆ ನಡೆದು ಅದೆಷ್ಟೋ ಹಿಂದೂಗಳು ಹತ್ಯೆಯಾದರು. ಅವರ ಮನೆಗಳು ಬೆಂಕಿಗೆ ಆಹುತಿಯಾದವು. ದರೋಡೆ ನಡೆಯಿತು. ಮಾನಭಂಗವೂ ಆಯಿತು. ಕೊನೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅದು ದೊಡ್ಡ ಸುದ್ದಿಯಾದಾಗ ರಾಜಕೀಯ ಒತ್ತಡಗಳು ಹೆಚ್ಚಿದ ಕಾರಣ ಬಾಂಗ್ಲಾ ಸರ್ಕಾರ ದಂಗೆಯನ್ನು ತಡೆಯಿತು ಎನ್ನಿ..' ಎಂದರು ಅರ್ಚಕರು.
             `ಯಾರು ಈ ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ..?'
(ಕಂದುಬಣ್ಣದಲ್ಲಿರುವ ಪ್ರದೇಶಗಳೆಲ್ಲ 2013ರಲ್ಲಿ
 ಹಿಂದೂಗಳ ಮೇಲೆ ದಾಳಿ ನಡೆದ ಪ್ರದೇಶಗಳು)
             `ಎಲ್ಲರೂ ಮಾಡುತ್ತಾರೆ. ಬಡಪಾಯಿ ಹಿಂದೂಗಳು. ಸುಮ್ಮನಿರುತ್ತಾರಲ್ಲ.. ಅದಕ್ಕೆ ಹೀಗೆ. 2013ರಲ್ಲಿ ಬಾಂಗ್ಲಾದೇಶಿ ಜಮಾತೆ ಇಸ್ಲಾಮಿ ಸಂಘಟನೆ ಕರೆ ಕೊಟ್ಟಿತ್ತು. ಅದರಿಮದಾಘಿ ಬಹುತೇಕ ಬಾಂಗ್ಲಾದಾದ್ಯಂತ ದಂಗೆ ತೀವ್ರವಾಗಿ ನಡೆಯಿತು. ಚಿತ್ತಗಾಂಗ್, ಕುಲ್ನಾ, ರಂಗಪುರ, ಬರೀಸಾಲ್, ರಾಜಾಶಾಹಿ, ಢಾಕಾ, ಸಿಲ್ಹೇಟ್ ಈ ಎಲ್ಲ ವಿಭಾಗಗಳಲ್ಲೂ ದಂಗೆ ತೀವ್ರವಾಗಿತ್ತು. ಹಿಂದೂಗಳ 36 ದೇವಸ್ಥಾನಗಳ ಮೇಲೂ ದಾಳಿ ನಡೆಯಿತು. ರಾಜಗಂಜ್ ನ ಕಾಳಿ ದೇವಾಲಯ, ಬೈನ್ನಬಾರಿ, ಪಿಂಗ್ಜೋರ್, ಗೈಯಾರ್ಚಾರ್ ನ ದೇವಾಲಯಗಳು, ನಲ್ಚಿರಾದ ಪಿಂಗ್ಳಕಟಿ ಸರ್ಭಜನಿನ್ ದುರ್ಗಾ ಮಂದಿರ, ಗೋಲಿಮಂದ್ರಾದ ಕಾಲಿ ದೇವಾಲಯ, ರಾಮಚಂದ್ರಪುರದ ದೇವಾಲಯ, ಅಲಿದಾಂಗಾದ ಸರ್ಭಜನೀನಾ ಪೂಜಾ ಸಂಘ ಮಂದಿರ, ಲಖೀಪುರ, ರಾಥೇರ್ ಪುರಗಳ ಕಾಳಿ ಮಂದಿರ, ನಥಪಾರಾದ ಖೇತ್ರಪಾಲ ದೇವಾಲಯ, ಘುಟಿಯಾದ ಕಾಳಿ ಮಂದಿರ, ಪಕೂರಿಯಾದ ಹರಿ ಮಂದಿರ, ಚಪಟಾಲಿ ಹಾಗೂ ಬಾಂಗ್ಲಾ-ದಶಪುರದ ದೇವಾಲಯಗಳು, ಬಟಾಜೋರ್ ನ ರಾಧಾಕೃಷ್ಣ ದೇವಾಲಯ, ಪಕ್ಷಿಯಾ, ಶಶಂಗಾವ್ನ ಕಾಳಿ ಮಂದಿರಗಳು, ಅಂಶು ಕುಕ್ರುಲ್ ಪೂರ್ಬಪಾರಾದ ರಾಧಾ ಗೋವಿಂದ ಮಂದಿರ, ಅಛಿಂ ಬಜಾರ್ ನ ಕಾಳಿ ದೇವಸ್ತಾನ, ಕಲ್ಖುಲಾದ ಶಿವ ದೇವಸ್ಥಾನ, ಕಾಫಿಲಾಬಾರಿಯಾದ ದುರ್ಗಾ ದೇವಸ್ಥಾನ, ಅಂಟೈಲ್, ಕುರಿಪೈಕಾದ ರಾಧಾ ಗೋವಿಂದ ಮಂದಿರಗಳು, ಮಾಧವಪುರದ ಮಾಧವ ದೇವಸ್ಥಾನ, ಬೋಬಹಾಲಾದ ಹರಿ ಮಂದಿರ, ದಕ್ಷಿಣ ಮಾರ್ತಾದ ಕಾಳಿ ಮಂದಿರ, ಸಬೇಕ್ಪಾರಾ, ಕರ್ಮಕರ್ಪಾರಾ, ಬಮೂನಿಯಾ, ಕಾಮರ್ಚತ್ ನ ದೇವಸ್ಥಾನಗಳು ಹಾಗೂ ಕೆಶೂರಿತಾ ಮಧ್ಯಪಾರಾದ ಶ್ರೀಶ್ರೀ ಲಕ್ಷ್ಮಿ ಮಠಮಂದಿರಗಳ ಮೇಲೆ ದಾಳಿ ನಡೆದಿದ್ದವು. ದೇವಸ್ಥಾನಗಳಿಗೂ ಸಾಕಷ್ಟು ಹಾನಿಯಾಗಿತ್ತು. ಈಗೀಗ ಅವನ್ನೆಲ್ಲ ಸರಿಪಡಿಸಲಾಗುತ್ತಿದೆ. 1989, 1990, 1992, 2000, 2004, 2005, 2006, 2012ರಲ್ಲೆಲ್ಲ ಹಿಂದೂಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಇದರಿಂದುಂಟಾದ ಹಾನಿ ಲೆಕ್ಖಕ್ಕೆ ಸಿಗುತ್ತಿಲ್ಲ..' ಎಂದು ಹೇಳಿದ ಅರ್ಚಕರು ದೀರ್ಘವಾಗಿ ನಿಟ್ಟುಸಿರು ಬಿಟ್ಟರು.
           `ಈ ಸಂಗತಿಗಳೆಲ್ಲ ಎಷ್ಟು ಸ್ಪಷ್ಟವಾಗಿ ಹೇಳುತ್ತಿದ್ದೀರಲ್ಲ.. ಅದರಲ್ಲೂ ದೇವಸ್ಥಾನಗಳ ಮೇಲೆ ದಾಳಿಯಾಗಿದ್ದು.. ಅವುಗಳ ಹೆಸರನ್ನೆಲ್ಲ ಹೇಳಿದಿರಲ್ಲ.. ನಿಮ್ಮನ್ನು ಮೆಚ್ಚಲೇಬೇಕು..' ಎಂದ ವಿನಯಚಂದ್ರ.
           `ಬೇಡ ಬೇಡ ಎಂದರೂ ನೆನಪಿನಲ್ಲಿಯೇ ಇರುತ್ತವೆ ಈ ಎಲ್ಲ ಸಂಗತಿಗಳು. ಬಾಂಗ್ಲಾದೇಶದ ಹಿಂದೂ ದೇವಾಲಯಗಳಲ್ಲಿರುವ ಅರ್ಚಕರನ್ನು ಕೇಳಿದರೆ ಈ ಎಲ್ಲ ವಿಷಯಗಳನ್ನು ನನಗಿಂತ ಸ್ಪಷ್ಟವಾಗಿ ಹೇಳಬಲ್ಲರು. ನಮಗೆಲ್ಲರಿಗೂ ಆ ದಿನಗಳೆಂದರೆ ಬೆಂಕಿಯ ಮೇಲಿನ ನಡಿಗೆಯೇ ಆಗಿತ್ತು. ನಾವು ನಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ದೇವಸ್ಥಾನಗಳನ್ನೂ ರಕ್ಷಣೆ ಮಾಡಿಕೊಳ್ಳಬೇಕಲ್ಲ. ಬಹುಶಃ ಆ ದೇವರೇ ಆ ದಿನಗಳಲ್ಲಿ ನಮ್ಮನ್ನು ಕಾಪಾಡಿದ ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ..' ಎಂದರು. ವಿನಯಚಂದ್ರ ಮೌನವಾಗಿಯೇ ಮಾತು ಕೇಳುತ್ತಿದ್ದ.
          `ನೀವು ಹೇಳಿದ ಮಾತುಗಳನ್ನು ಆಲಿಸಿದೆ. ಬಾಂಗ್ಲಾದಲ್ಲಿ ಕಾಳಿ ದೇವಸ್ಥಾನಗಳು ಜಾಸ್ತಿ ಇದ್ದಂತಿದೆಯಲ್ಲ..' ಎಂದ ವಿನಯಚಂದ್ರ.
           `ಹೌದು.. ಬಾಂಗ್ಲಾದೇಶ ಮಾತ್ರವಲ್ಲ ನಿಮ್ಮ ಪಶ್ಚಿಮ ಬಂಗಾಳದಲ್ಲೂ ಕೂಡ ಕಾಳಿ ಆರಾಧಕರು ಜಾಸ್ತಿ ಇದ್ದಾರೆ. ಬೆಂಗಾಳಿಗಳೇ ಹಾಗೆ ಕಾಳಿ ಹಾಗೂ ರಾಧಾ-ಗೋವಿಂದರನ್ನು ಆರಾಧನೆ ಮಾಡುತ್ತಾರೆ. ಬೆಂಗಾಲಿಗಳಿಗೆ ಕಾಳಿಯೆಂದರೆ ಅಪಾರ ಪ್ರಿತಿ. ಕಾಳಿ ಓಡಾಡಿದ ನೆಲ ಈ ಪ್ರದೇಶ ಎಂದು ಯಾವಾಗಲೂ ಅಂದುಕೊಳ್ಳುತ್ತಾರೆ. ಸ್ವಾಮಿವಿವೇಕಾನಂದರು, ರಾಮಕೃಷ್ಣ ಪರಮಹಂಸರೆಲ್ಲ ಕಾಳಿ ಆರಾಧನೆ ಮಾಡಿದವರೇ ಅಲ್ಲವೇ? ಅವರೆಲ್ಲ ಬೆಂಗಾಲಿ ನಾಡಿನಲ್ಲಿ ಓಡಾಡಿದವರೇ ಅಲ್ಲವೇ?' ಎಂದು ಹೇಳಿದರು ಅರ್ಚಕರು.
           `ಕಾಳಿ ಆರಾಧನೆ.. ಕಾಳಿ ಕರ್ಮಭೂಮಿ ಹೀಗೆ ಅಂದುಕೊಳ್ಳುವುದೇನೋ ಸರಿ. ಈ ಕಾರಣಕ್ಕಾಗಿಯೇ ಈ ನಾಡು ಇಷ್ಟೆಲ್ಲ ರಕ್ತಬಲಿ ಪಡೆಯುತ್ತಿದೆಯೇ? ಕಾಳಿಯೆಂದರೆ ಬಲಿ ಪಡೆಯುವವಳಲ್ಲವೇ? ಈ ನಾಡಿನಲ್ಲಿ ನಡೆಯುವ ರಕ್ತಪಾತ ನೋಡಿದಾಗಲೆಲ್ಲ ನನಗೆ ಹೀಗೆ ಅನ್ನಿಸುತ್ತಿದೆ..' ಎಂದು ಥಟ್ಟನೆ ಹೇಳಿದಳು ಮಧುಮಿತಾ.
             `ಇರಬಹುದೇನೋ.. ಈ ನಾಡಿನಲ್ಲಿ ಯಾವಾಗಲೂ ರಕ್ತಪಾತ ನಡೆಯುತ್ತಿರುವುದು ಸುಳ್ಳಲ್ಲ. ಪ್ರಾಚೀನ ಕಾಲದಿಂದಲೂ ನಡೆಯುತ್ತ ಬಂದಿದೆ. ಬ್ರಿಟೀಷರು ಬಂದ ನಂತರ ಇಲ್ಲಿ ಯುದ್ಧಗಳ ಮೂಲಕ ರಕ್ತಪಾತ ಇಮ್ಮಡಿಸಿದರೆ ಭಾರತದಿಂದ ಬೇರ್ಪಟ್ಟ ಬಳಿಕ ರಕ್ತಪಾತ ನೂರ್ಮಡಿಸಿದೆ ಎಂದರೂ ತಪ್ಪಾಗಲಿಕ್ಕಿಲ್ಲ ನೋಡಿ..' ಎಂದರು ಅರ್ಚಕರು.
               `ಅಪ್ಪ ಯಾವಾಗಲೋ ಹೇಳುತ್ತಿದ್ದರು.. ಬೆಂಗಾಲಿಗಳೆಂದರೆ ಬುದ್ಧಿವಂತರು ಅಂತ.. ಭಾರತದಲ್ಲಿ ಏನೇ ಬದಲಾವಣೆಗಳಿದ್ದರೂ ಮೊದಲು ಬಂಗಾಳದಲ್ಲೇ ಆಗುತ್ತದೆ. ಹೊಸ ಸಾಧ್ಯತೆಗಳಿಗೆ ಬಂಗಾಳ ತೆರೆದುಕೊಳ್ಳುತ್ತದೆ ಎಂದೆಲ್ಲ ಹೇಳುತ್ತಿದ್ದರು. ಆದರೆ ಎಂತಹ ನಾಡು ಹೇಗಾಗಿಬಿಟ್ಟಿತಲ್ಲ..' ಎಂದು ಗೊಣಗಿದ ವಿನಯಚಂದ್ರ. ಅರ್ಚಕರೂ ಕುಡ ಹೌದೆಂದು ತಲೆಯಲ್ಲಾಡಿಸಿದರು. ಅಷ್ಟರಲ್ಲಿ ಬಸ್ಸು ಶಹೀದ್ ಬಾಗ್, ಕೌನಿಯಾಗಳನ್ನು ಹಾದು ತೀಸ್ತಾನದಿ ಸೇತುವೆಯ ಬಳಿ ಆಗಮಿಸಿತು.

(ಮುಂದುವರಿಯುತ್ತದೆ..)

Thursday, November 6, 2014

ತಿರುಗಾಟ

ಭೂಮಿಯಂತೆ ನಾನೂ ಕೂಡ
ನಿಂತ ಕಡೆಗೆ ನಿಲ್ಲಲಾರೆ
ಒಮ್ಮೆ ಇಲ್ಲಿ ಹಾಗೇ ಮುಂದೆ
ತಿರುಗಿ ಸಾಗುತಿರುವೆನು |

ಯಾರ ಹಂಗೂ ನನಗೆ ಇಲ್ಲ
ಸ್ಪಷ್ಟ ನೆಲೆಯ ಕುರುಹೂ ಇಲ್ಲ
ಅಲೆಮಾರಿಯ ಬದುಕು ಪೂರಾ
ಮುಟ್ಟುವುದಿಲ್ಲ ಯಾವುದೇ ತೀರ |

ಮನಸಿನಂತೆ ನನ್ನ ವೇಗ
ಕ್ಷಣದಿ ಬದುಕು ಆವೇಗ
ಬಂಧನವು ಬಾಳಲಿ ಇಲ್ಲ
ತಿರುಕತನವೇ ತುಂಬಿದೆಯಲ್ಲ |

ತಿರುಗಾಟವೇ ನನ್ನ ಬದುಕು
ನಿಲುವಿಗಿಲ್ಲ ಇಂಥ ಝಲಕು
ನಡೆಯುತಲೇ ಗೆಲ್ಲುವೆ
ಸಾಗುತಲೇ ಬದುಕುವೆ |

**
(ಈ ಕವಿತೆಯನ್ನು ಬರೆದಿರುವುದು 09-10-2006ರಂದು ದಂಟಕಲ್ಲಿನಲ್ಲಿ)
( ಆಕಾಶವಾಣಿ ಕಾರವಾರದಲ್ಲಿ ಈ ಕವಿತೆಯನ್ನು 23-01-2008ರಂದು ವಾಚನ ಮಾಡಲಾಗಿದೆ)