Sunday, November 2, 2014

ಮೌನ ಭೋಜನ

ಮೌನಭೋಜನ
ಏನೆಲ್ಲಾ ನೀಡಿತು ? ಹೊಸತನ !
ಘಮ್ಮೆಂದು ಕಂಪುಚೆಲ್ಲಿ ಮನವ
ತಣಿದು-ಕುಣಿಸಿದ ಧೂಪದ ಕಂಪು,
ಜೊತೆಗೆ ಹರ್ಷಾನಂದವ ನೀಡಿದ
ಕೊಳಲಗಾನದ ಇಂಪು |

ಮೌನಭೋಜನ..
ನವ ಜೀವೋದ್ಧೀಪನ |
ಹಣತೆಯಿಂದ ಬೆಳಕು ಚೆಲ್ಲಿ
ಬಾಳು ಬೆಳಗುವ ದೀಪ,
ಮೌನ ಮೆರೆಯುವ ನಿಶೆಯ ಹೊಸ್ತಿಲೊಳು
ಆತ್ಮ-ಮನಸ್ಸು ಪಡೆದಿದೆ
ಹೊಸದಾದ ಒಂದು ರೂಪ |

ಮೌನಭೋಜನ..
ಮರೆಯದ ಮಧುರ ಭಾವನ |
ಚಿರಂತನ | ಕಾಪಿಡಿದು ಕೊನೆಯ
ಜೀವ ಬಿಂದು ಉಳಿವವರೆಗೆ
ಮೈಝುಮ್ಮೆನ್ನಿಸುವ ಭಾವ ಮಿಲನ
ಜೊತೆಗೆ ಭಾವಸ್ಫುರಣ |

ಮೌನಭೋಜನ..
ಸ್ಫೂರ್ತಿಯ ಬಟ್ಟಲೊಳು,
ಮನದ ತುಂಬಾ ತೃಪ್ತಿ ಇಟ್ಟು
ಬದುಕಿಗೊಂದು ನವ ಸ್ಫೂರ್ತಿಯಾಗಿ
ಸವಿ ನೆನಪಿಟ್ಟ ಕವನ |
ಭಾವ ತಂತುಗಳ ಮಿಲನ |

ಮೌನಭೋಜನ..
ಸ್ಪೂರ್ತಿ-ಮಾರ್ಗದರ್ಶಿ-ಚೇತನಾ |
ಬಾಳಿಗೆ ಹೊಸತು ಪ್ರೇರಣಾ |
ಕಳೆದಿದೆ ಏಕತಾನ |
ಗದ್ದಲದ ಗುಡ್ಡದೊಳು
ಮೌನ ಹೃದಯ ಸ್ಪಂದನ |

***
(ಈ ಕವಿತೆಯನ್ನು ಬರೆದಿರುವುದು ಹುಳಗೋಳದಲ್ಲಿ 18-12-2006ರಂದು)
(ನಾನು ಕಾಲೇಜು ಓದುತ್ತಿದ್ದ ದಿನಗಳಲ್ಲಿ ಎಬಿವಿಪಿಯಲ್ಲಿ  ಅರೆಕಾಲಿಕ ಸದಸ್ಯನಾಗಿದ್ದೆ. ಆ ಸಂದರ್ಭದಲ್ಲಿ ಎಬಿವಿಪಿಯಿಂದ ಹುಳಗೋಳದಲ್ಲಿ ಸ್ಪೂರ್ತಿ-2006ರ ಎಂಬ ಶಿಬಿರ ಹಮ್ಮಿಕೊಳ್ಳಲಾಗಿತ್ತು. ವ್ಯಕ್ತಿತ್ವ ವಿಕಸನದ ಆ ಶಿಬಿರದಿಂದ ನಾನು ಕಲಿತದ್ದು ಹಲವಷ್ಟು. ಆ ಸಂದರ್ಭದಲ್ಲಿ ಮೌನಭೋಜನ ಎನ್ನುವ ಹೊಸ ವಿಧಾನವನ್ನು ನಾನು ಸವಿದ ನಂತರ ಬರೆದಿದ್ದು ಈ ಕವನ.
ಈ ಮೌನಭೋಜನದ ಬಗ್ಗೆ ನಾವು ಹೇಳುವುದು ಸಾಕಷ್ಟಿದೆ. ಬ್ರಾಹ್ಮಣರ ಮನೆಗಳಲ್ಲಿ ಉಪನಯನವಾದ ನಂತರ ಉಪಾಕರ್ಮ ಆಗುವ ವರೆಗೆ ಊಟಕ್ಕೆ ಕುಳಿತಾಗ ಮಾತನಾಡಬಾರದು ಎನ್ನುವ ನಿಯಮ/ಶಾಸ್ತ್ರವಿದೆ. ನನ್ನ ಉಪನಯನದ ಸಂದರ್ಭದಲ್ಲೂ ನಾನು ಹೀಗೆ ಮಾಡಿದ್ದೆ. ಈಗಿನವರು ಹಾಗೆಮಾಡಿದ್ದು ನಾ ಕಾಣೆ ಬಿಡಿ. ಅದೇ ರೀತಿಯ ಈ ಮೌನಭೋಜನ ಕೊಂಚ ವಿಶಿಷ್ಟವಾದುದು ಎಂದೇ ಹೇಳಬಹುದು. ವಿದ್ಯುತ್ ದೀಪವಿಲ್ಲದೇ ಹಣತೆಯ ದೀಪದ ಬೆಳಕಲ್ಲಿ ಮೌನವಾಗಿ ಊಟವನ್ನು ಮಾಡುವುದೇ ಈ ಪ್ರಕ್ರಿಯೆ.
ಹಣತೆ ಸೂಸುವ ಮಂದ್ರಬೆಳಕು. ಘಮ್ಮೆನ್ನುವಾ ವಾಸನೆ ಸುತ್ತೆಲ್ಲ ಪರಿಸರವನ್ನು ಆವರಿಸಿ ವಿಶಿಷ್ಟ ಅನುಭವ ನೀಡಿದರೆ ಆ ಸಂದರ್ಭದಲ್ಲಿ ಹಾಕಲಾಗುವ ಕೊಳಲ ನಿನಾದ ಮನಸ್ಸನ್ನು ತಲ್ಲೀನಗೊಳಿಸುತ್ತದೆ. `ಇಂತದ್ದು ಬೇಕು, ಇದು ಬೇಡ..' ಎಂದು ಕೈ ಸನ್ನೆಯಲ್ಲೇ ಹೇಳಿ ಹಾಕಿಸಿಕೊಳ್ಳುವ, ಬೇಡವೆನ್ನುವ ವಿಧಾನವಂತೂ ಮಜಾ ಕೊಡುತ್ತದೆ. ಇಂತಹ ಮೌನಭೋಜನ ಉಣ್ಣುವವರಿಗಷ್ಟೇ ಅಲ್ಲ ಬಡಿಸುವವರಿಗೂ ಸವಾಲು ಕೂಡ ಹೌದು. ಇಂತದ್ದೊಂದು ಮೌನಭೋಜನದ ಅವಕಾಶ ಸಿಕ್ಕರೆ ತಪ್ಪಿಸಿಕೊಳ್ಳಬೇಡಿ. ನೀವೂ ಭಾಗವಹಿಸಿ. ಉಂಟಾಗುವ ಆನಂದ ಎಲ್ಲರಿಗೂ ಹಂಚಿ )

Saturday, November 1, 2014

ಬೆಂಗಾಲಿ ಸುಂದರಿ-36

(ತಾಹತ್ ಮಹಲ್ ರಂಗಪುರ)
           ಬಸ್ಸು ನಿಧಾನವಾಗಿ ಚಲಿಸುತ್ತಿತ್ತು. ಬಸ್ಸಿನ ಆಮೆವೇಗ ಬಹುಬೇಗನೆ ಬೇಸರ ತರಿಸಿಬಿಟ್ಟಿತು. ಚಲಿಸುವ ವೇಳೆಯಲ್ಲಿ ಬಸ್ಸಿನ ಪ್ರತಿಯೊಂದು ಭಾಗಗಳೂ ನಡುಗುತ್ತಿದ್ದವು. ವಿನಯಚಂದ್ರನಂತೂ ದೇವರೇ ಈ ಬಸ್ಸು ಎಲ್ಲಿಯೂ ಕೈಕೊಡದೇ ಇರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದ. ಏದುಸಿರು ಬಿಡುತ್ತಾ ಬಸ್ಸು ಸಾಗುತ್ತಿತ್ತು. ಮತ್ತೊಂರ್ಧ ತಾಸಿನ ನಂತರ ಬೋಗ್ರಾ ನಗರವನ್ನು ದಾಟಿದ ಬಸ್ಸು ರಂಗಪುರದತ್ತ ಮುಖ ಮಾಡಿತು. ಮಾರ್ಗ ಕ್ರಮಿಸಿದಂತೆಲ್ಲ ಬಸ್ಸಿನಲ್ಲಿ ನಿಧಾನಕ್ಕೆ ಜನ ತುಂಬಲಾರಂಭಿಸಿದರು.
           ಆಮೆವೇಗದ ಕಾರಣ ಪ್ರಯಾಣ ಮತ್ತಷ್ಟು ದೀರ್ಘವಾಗುತ್ತಿದೆಯಾ ಎಂದುಕೊಂಡ ವಿನಯಚಂದ್ರ. ಮನಸ್ಸಿನಲ್ಲಿ ಅದೇನೋ ಅಸಹನೆ. ಬಸ್ಸಂತೂ ಏರಿಳಿತವೇ ಇಲ್ಲವೇನೋ ಎಂಬಂತೆ ಸಾಗುತ್ತಿತ್ತು. ರಂಗಪುರವನ್ನು ಯಾವಾಗ ತಲುಪುತ್ತೇನಪ್ಪಾ ದೇವರೆ ಎನ್ನಿಸದೇ ಇರಲಿಲ್ಲ. ನೂನ್ಗೋಲಾ, ನಾಮೂಜಾ ಈ ಮುಂತಾದ ಊರುಗಳನ್ನು ಹಿಂದಕ್ಕೆ ಹಾಕು ಬಸ್ಸು ಮುಮದೆ ಸಾಗಿತು. ಮಧುಮಿತಾ ವಿನಯಚಂದ್ರನಿಗೆ ಪ್ರತಿ ಊರುಗಳು ಬಮದಾಗಲೂ ಬೆಂಗಾಲಿಯ ಹೆಸರುಗಳನ್ನು ಓದಿ ಹೇಳುತ್ತಿದ್ದಳು. ವಿನಯಚಂದ್ರ ತಲೆಯಲ್ಲಾಡಿಸುತ್ತಿದ್ದ. ಗೋವಿಂದೋಗೋಂಜ್ ಎಂಬ ಊರನ್ನು ತಲುಪುವ ವೇಳೆಗೆ ಒಂದೆರಡು ತಾಸುಗಳು ಕಳೆದಿತ್ತು. ನಿಧಾನವಾಗಿ ಏರುತ್ತಿದ್ದ ಬಿಸಿಲಿನ ಕಾರಣ ಬಸ್ಸಿನೊಳಗೆ ವಾತಾವರಣದಲ್ಲಿ ಬಿಸಿ ಹೆಚ್ಚಾಗುತ್ತಿತ್ತು. ಬಸ್ಸಿನ ನೆತ್ತಿ ಕಾದಂತೆಲ್ಲ ಒಳಗೆ ಕುಳಿತವರು ಚಡಪಡಿಸತೊಡಗಿದರು.
           ನಡುವೆಲ್ಲೋ ಜಮುನಾ ನದಿಯನ್ನು ಸೇರುವ ಉಪನದಿಯೊಂದು ಸಿಕ್ಕಿತು. ಈ ನದಿಯ ಬಳಿ ಬಸ್ಸನ್ನು ನಿಲ್ಲಿಸಿದ ಡ್ರೈವರ್ ಓಡಿ ಹೋಗಿ ಬಾಟಲಿಯಲ್ಲಿ ನೀರನ್ನು ಹಿಡಿದುಕೊಂಡು ಬಂದು ಬಸ್ಸಿನ ರೇಡಿಯೇಟರ್ ಗೆ ಹಾಕಿದ. ಒಮ್ಮೆ ಬಸ್ಸಿನ ಅಂತರಾಳದ ಬಾಯಾರಿಕೆಗೆ ತಂಪನ್ನು ನೀಡಿದ ಚಾಲಕ ಮತ್ತೆ ಬಸ್ಸನ್ನು ಮುಂದಕ್ಕೋಡಿಸಿದ. ವೇಗ ಮಾತ್ರ ಹೆಚ್ಚಲಿಲ್ಲ. ಇನ್ನೊಂದು ತಾಸಿನ ಪಯಣದ ನಂತರ ಬಸ್ಸು ಪಾಲಾಶ್ಬಾರಿ ಎಂಬಲ್ಲಿಗೆ ಹಾಗೂ-ಹೀಗೂ ಎಂಬಂತೆ ಬಂದು ತಲುಪಿತು. ಅಲ್ಲಿಗೆ ಬಂದು ತಲುಪಿದ ಬಸ್ಸು ಒಮ್ಮೆ ಗರ್ರ್ ಎಂದು ಸದ್ದು ಮಾಡಿ ಸ್ಥಬ್ಧವಾಯಿತು. ನಂತರ ಡ್ರೈವರ್ ಏನೇ ಪ್ರಯತ್ನ ಮಾಡಿದರೂ ಮತ್ತೆ ಮುಂದಕ್ಕೆ ಹೊರಡಲಿಲ್ಲ. ಸದ್ದನ್ನೂ ಮಾಡಲಿಲ್ಲ.
           `ನಾನಾಗ್ಲೇ ಹೇಳಿದ್ದೆ. ಈ ಬಸ್ಸು ಎಲ್ಲಾದರೂ ಕೈಕೊಡುತ್ತದೆ ಅಂತ.. ನೋಡು.. ಈಗ ಏನಾಯ್ತು ಅಂತ..' ಎಂದು ಮಧುಮಿತಾಳನ್ನು ಛೇಡಿಸಿದ ವಿನಯಚಂದ್ರ. ಹುಂ ಎಂದಳಾಕೆ. ಬಸ್ಸಿನಲ್ಲಾಗಲೇ ಗುಜು ಗುಜು ಶುರುವಾಗಿತ್ತು. ಕೆಲವರು ಸಣ್ಣದಾಗಿ ಗಲಾಟೆಯನ್ನೂ ಆರಂಭಿಸಿದರು. ಸೀಟಿನಿಂದೆದ್ದ ವಿನಯಚಂದ್ರ ನುಗ್ಗಾಡಿ ಮುಂದಕ್ಕೆ ಹೋಗಿ ಕಂಡಕ್ಟರ್ ಬಳಿ ಬಸ್ಸು ಮುಂದಕ್ಕೆ ಹೋಗದ ಕಾರಣ ತಮ್ಮ ಪ್ರಯಾಣದ ಹಣವನ್ನು ಮರಳಿಸುವಂತೆ ಕೇಳಿದ. ವಿನಯಚಂದ್ರನ ಹಿಂದಿ ಅರ್ಥವಾಗದಂತೆ ನೋಡುತ್ತಿದ್ದ ಕಂಡಕ್ಟರ್ ಬಳಿ ಮಧುಮಿತಾ ಬಂದು ವಿವರಿಸಿದಳು. ಕೊನೆಗೆ ಕಂಡಕ್ಟರ್ ಒಪ್ಪಲಿಲ್ಲ. ವಿನಯಚಂದ್ರನ ವಾದವನ್ನು ಕೇಳುತ್ತಿದ್ದ ಒಂದಷ್ಟು ಪ್ರಯಾಣಿಕರು ವಿನಯಚಂದ್ರನ ಪರವಾಗಿ ನಿಂತರು. ಸಣ್ಣ ಪ್ರಮಾಣದ ಗಲಾಟೆಯೇ ನಡೆಯಿತು. ಒಂದಿಬ್ಬರು ತೋಳೇರಿಸಿಕೊಂಡು ಕಂಡಕ್ಟರನ ಮೇಲೇರಿ ಹೋದರು. ಹೆದರಿದ ಕಂಡಕ್ಟರ್ ಹಣ ವಾಪಾಸು ನೀಡಲು ಮುಂದಾದ. ವಿನಯಚಂದ್ರ ಮೊದಲಿಗೆ ಹಣವನ್ನು ಇಸಿದುಕೊಂಡು ಗುಂಪಿನಿಂದ ಹೊರಬಂದ. `ಅಬ್ಬ ಇಷ್ಟಾದರೂ ಸಿಕ್ಕಿತಲ್ಲ. ಮುಂದಿನ ಪ್ರಯಾಣ ಹೇಗೆ ಮಾಡೋದು ಅಂದ್ಕೊಂಡಿದ್ದೆ. ಉಪವಾಸದಲ್ಲೇ ಭಾರತ ಗಡಿಯವರೆಗೆ ತಲುಪಬೇಕಾ ಎಂದುಕೊಂಡಿದ್ದೆ. ಆದರೆ ಪ್ರಯಾಣದ ಜೊತೆಗೆ ದುಡ್ಡೂ ಸಿಕ್ಕಿತು ನೋಡು..' ಎಂದವನೇ ಹಣ ಎಣಿಸಲು ಆರಂಭಿಸಿದ. ತಾನಂದುಕೊಂಡಿದ್ದಕ್ಕಿಂತ ಜಾಸ್ತಿ ಹಣ ವಾಪಾಸು ಬಂದಿತ್ತು. ಮತ್ತೊಮ್ಮೆ ಮುಖ ಊರಗಲವಾಯಿತು ವಿನಯಚಂದ್ರನಿಗೆ.
        ಊರಿನ ದಾರಿಯಲ್ಲಿ ನಡೆದು ಹೊರಟವರು ಕಂಡ ಕಂಡ ವಾಹನಕ್ಕೆಲ್ಲ ಕೈ ಮಾಡಲು ಆರಂಭಿಸಿದರು. ಆದರೆ ಮೊದ ಮೊದಲು ಯಾವ ವಾಹನಗಳೂ ನಿಲ್ಲಲಿಲ್ಲ. ಕೊನೆಗೊಂದು ಲಡಕಾಸಿ ಜೀಪು ಸಿಕ್ಕಿತು. ಜೀಪು ನೋಡಿದ ವಿನಯಚಂದ್ರ ಏರಲು ಅನುಮಾನ ಮಾಡಿದ. ಕೊನೆಗೆ ಮಧುಮಿತಾಳೇ `ಸಾಧ್ಯವಾದಷ್ಟು ದೂರದ ವರೆಗೆ ಹೋಗೋಣ..ಪ್ರಯಾಣ ಮಾಡಿದ್ದಷ್ಟೇ ಬಂತು.. ಮತ್ತೆ ಇಂತಹ ಅವಕಾಶ ಸಿಗುತ್ತದೆ ಎನ್ನುವುದು ಕಷ್ಟ ನೋಡಿ..' ಎಂದಳು. ವಿನಯಚಂದ್ರ ಒಪ್ಪಿಕೊಂಡು ಜೀಪೇರಿದ. ಜೀಪು ನಿಧಾನವಾಗಿ ಮುಂದಕ್ಕೆ ಸಾಗಿತು. ಅಂಕುಡೊಂಕಿನ ಹಾದಿಯಲ್ಲಿ ಸಾಗಿದ ಜೀಪು ಮಿಥಾಪುರ, ಪೀರ್ ಗಂಜ್, ದುರ್ಗಾಪುರಗಳನ್ನು ದಾಟಿ ಹಿಥೋಂಪುರಕ್ಕೆ ಆಗಮಿಸಿತು. ಆ ಊರು ಬಂದ ತಕ್ಷಣ ಜೀಪಿನ ಯಜಮಾನ ವಿನಯಚಂದ್ರನ ಬಳಿ `ಎಲ್ಲಿಗೆ ಹೋಗುತ್ತಿರುವುದು..' ಎಂದು ವಿಚಾರಿಸಿದ. ಮಧುಮಿತಾ `ರಂಗಪುರ್..' ಎಂದಳು. ಕೊನೆಗೆ ಜೀಪಿನ ಯಜಮಾನ ಅವರನ್ನು ಅಲ್ಲೇ ಇಳಿಸಿ ತಾನು ಬೇರೊಂದು ದಾರಿಯಲ್ಲಿ ಹೊರಟ. ಇವರ ಬಳಿ ಪ್ರಯಾಣದ ದರವನ್ನು ಇಸಿದುಕೊಳ್ಳಲಿಲ್ಲ. ವಿನಯಚಂದ್ರ ಮೇಲೆಬಿದ್ದು ದುಡ್ಡಕೊಡಬೇಕಾ ಎಂದೂ ಕೇಳಲಿಲ್ಲ.
         `ನೋಡು ಮಧು.. ದುಡ್ಡಿನ ಶಿಲ್ಕು ನಮ್ಮ ಬಳಿ ಕಡಿಮೆ ಇದೆ ಎಂದಾದರೆ ಪೈಸೆ ಪೈಸೆಗೆ ಲೆಕ್ಖಮಾಡಬೇಕಾಗುತ್ತದೆ. ಕೊಡುವ ಮೊತ್ತದಲ್ಲಿ ಒಂದು ರು. ಉಳಿದರೂ ಸಾಕು ಎನ್ನಿಸುತ್ತದೆ. ಈಗ ನೋಡು ಆ ಕಂಡಕ್ಟರ್ ದುಡ್ಡು ವಾಪಾಸು ಕೊಟ್ಟಿದ್ದಕ್ಕೆ ಮನಸ್ಸು ಹೂವಾಗುತ್ತಿದೆ... ' ಎಂದ ವಿನಯಚಂದ್ರ.
          `ಹೌದು.. ದುಡ್ಡು ಸಿಕ್ಕಾಪಟ್ಟೆ ಕೈಗೆ ಸಿಗುತ್ತಿದ್ದರೆ ಖರ್ಚು ಮಾಡುವುದೇ ಗೊತ್ತಾಗುವುದಿಲ್ಲ. ಆದರೆ ಈಗ ನೋಡು ಇರುವ ದುಡ್ಡನ್ನೇ ಎಷ್ಟು ಕಡಿಮೆಯೋ ಅಷ್ಟು ಕಡಿಮೆ ಪ್ರಮಾಣದಲ್ಲಿ ಖರ್ಚು ಮಾಡಬೇಕು. ದುಡ್ಡನ್ನು ಸಮರ್ಪಕವಾಗಿ ಬಳಕೆ ಮಾಡುವುದನ್ನು ಕಲಿಸುತ್ತದೆ ಇದು..' ಎಂದಳು.
           `ಚಿಕ್ಕಂದಿನಿಂದ ನನಗೆ ಅಪ್ಪ ಕೈತುಂಬಾ ಹಣಕೊಡುತ್ತಿದ್ದರು. ಕೊಟ್ಟ ಹಣಕ್ಕೆ ಲೆಕ್ಖ ನೀಡು ಅನ್ನುತ್ತಿದ್ದರು. ನಾನು ಅವರ ಕಣ್ಣು ಕಟ್ಟಲು ಲೆಕ್ಖ ಬರೆದಿದ್ದೂ ಇದೆ. ಆಗ ಬೇಕಾಬಿಟ್ಟಿ ಖರ್ಚು ಮಾಡಿದ್ದೆ. ಆದರೆ ಕೆಟ್ಟದ್ದಕ್ಕೆ ಖರ್ಚು ಮಾಡಲಿಲ್ಲ. ನಾನು ಖರ್ಚು ಮಾಡಿದ್ದೆಲ್ಲವೂ ಒಳ್ಳೆಯದಕ್ಕೇ ಎಂದುಕೊಂಡಿದ್ದೆ. ಆದರೆ ಈಗ ಮಾತ್ರ ದುಡ್ಡಿನ ಮಹತ್ವ ಗೊತ್ತಾಗುತ್ತಿದೆ. ಆಗ ಕಲಿತಿದ್ದಕ್ಕಿಂತ ಹೆಚ್ಚು ಈಗ ಕಲಿತಿದ್ದೇನೆ. ದುಡ್ಡಿಗೆ ನಮಸ್ಕಾರ ಕೊಡಬೇಕು ಅನ್ನಿಸುತ್ತದೆ..' ಎಂದ ವಿನಯಚಂದ್ರ.
           `ಹೌದು ವಿನು.. ಕಲಿಕೆ ನಿರಂತರ. ಯಾರಿಂದ, ಹೇಗೆ, ಯಾವಾಗ ಕಲಿಯುತ್ತೇವೆ ಎನ್ನುವುದನ್ನು ಹೇಳಲು ಬರುವುದಿಲ್ಲ ನೋಡು. ದುಡ್ಡು ನಮಗೆ ಭಾರಿ ಪಾಠ ಕಲಿಸುತ್ತದೆ. ಕೆಳಕ್ಕೆ ತಳ್ಳುತ್ತದೆ. ಮೇಲೆ ಬರಲು ಸಹಾಯ ಮಾಡುತ್ತದೆ..' ಎಂದಳು ಮಧುಮಿತಾ. ತಲೆಯಲ್ಲಾಡಿಸಿದ ವಿನಯಚಂದ್ರ.
(ಬೇಗಂ ರೋಖಿಯಾ ವಿಶ್ವವಿದ್ಯಾಲಯ ರಂಗಪುರ)
           ರಂಗಪುರ ಹತ್ತಿರದಲ್ಲೇ ಇತ್ತು. ವಾಹನ ಸಿಗುವ ವರೆಗೆ ನಡೆಯುತ್ತ ಸಾಗೋಣ ಎಂದು ನಿರ್ಧಾರ ಮಾಡಿದ ಇಬ್ಬರೂ ಮುಂದಕ್ಕೆ ಹೆಜ್ಜೆ ಹಾಕಿದರು. ದಾರಿ ಸಾಗುತ್ತಲೇ ಇದ್ದರೂ ಯಾವೊಂದು ವಾಹನವೂ ಇವರ ಬಳಿ ನಿಲ್ಲಲಿಲ್ಲ. ಮದ್ಯಾಹ್ನದ ಉರಿಬಿಸಿಲು ಕಡಿಮೆಯಾಗಿ ಸಂಜೆ ಮೂಡುತ್ತಿತ್ತು. ಆಗಲೇ ಇಬ್ಬರಿಗೂ ಮದ್ಯಾಹ್ನ ಏನೂ ತಿಂದಿಲ್ಲ ಎನ್ನುವುದು ಅರಿವಾಯಿತು. ರಂಗಪುರ ತಲುಪುವ ವರೆಗೆ ಏನನ್ನೂ ತಿನ್ನಬಾರದು ಎಂದು ನಿರ್ಧರಿಸಿ ಬೇಗ ಬೇಗನೆ ಹೆಜ್ಜೆ ಹಾಕಿದರು ಇಬ್ಬರೂ. ಹಸಿವಾಗಿರುವುದು ಮರೆಯಲಿ ಎನ್ನುವ ಕಾರಣಕ್ಕೆ ಯಾವು ಯಾವುದೋ ಸುದ್ದಿಗಳನ್ನು ಮಾತನಾಡುತ್ತ ಬರುತ್ತಿದ್ದರು. ಪೈರ್ ಬಂದ್ ಎನ್ನುವ ಊರು ಸಿಕ್ಕಿತು ಅವರಿಗೆ. ಅಲ್ಲಿಗೆ ಬರುವ ವೇಳೆಗೆ ಹಸಿವೆಯನ್ನು ತಾಳಲಾರೆ ಎನ್ನುವಂತಾಗಿತ್ತು ಇಬ್ಬರಿಗೂ. ರಸ್ತೆಯ ಅಕ್ಕಪಕ್ಕದಲ್ಲಿ ಜೋಳ ಬೆಳೆದು ನಿಂತಿದ್ದು ಕಾಣಿಸಿತು. ಉದ್ದುದ್ದದ ಜೋಳದ ಕುಂಡಿಗೆಗಳು ಬೆಳೆದಿದ್ದವು. ವಿನಯಚಂದ್ರ ತಡೆಯಲಾದರೆ ಹೋಗಿ ಒಂದೆರಡನ್ನು ಕಿತ್ತುಕೊಂಡು ಬಂದ.  ಇಬ್ಬರೂ ತಿನ್ನಲಾರಂಭಿಸಿದರು. ಚೀಲದಲ್ಲಿ ಕೊಂಚವೇ ನೀರಿತ್ತು. ನೀರನ್ನು ಕುಡಿಯುವ ವೇಳೆಗೆ ಹಸಿವು ಕೊಂಚ ಅಡಗಿದಂತಾಯಿತು. ಮತ್ತೆ ಮುಂದಕ್ಕೆ ಹೆಜ್ಜೆ ಹಾಕಿದರು.
           ವಿಸ್ತಾರವಾದ ಬಯಲು, ನಡು ನಡುವೆ ಸಿಗುವ ಒಣಗಿದ ಹೊಳೆಗಳು ಪದೇ ಪದೆ ಸಿಕ್ಕವು. ರಂಗಪುರ ನಿಧಾನವಾಗಿ ಹತ್ತಿರಾಗುತ್ತಿತ್ತು. ನಡು ನಡುವೆ ಒಂದೆರಡು ಅಡ್ಡ ರಸ್ತೆಗಳೂ ಸಿಕ್ಕವು. ಮತ್ತೊಂದರ್ಧ ತಾಸಿನ ಪಯಣದ ವೇಳೆಗೆ ಸೂರ್ಯನಾಗಲೇ ಕಂತಿದ್ದ. ನಿಧಾನವಾಗಿ ಕತ್ತಲಾವರಿಸಿಬಿಟ್ಟಿತ್ತು. ರಂಗಪುರ ನಗರದ ಹೊರ ಭಾಗದಲ್ಲೇ ಪ್ರಯಾಣ ಮಾಡಬಹುದಾದ ಬೈಪಾಸ್ ರಸ್ತೆ ಕೂಡ ಸಿಕ್ಕಿತು. ಅಲ್ಲಿ ವಿನಯಚಂದ್ರ `ನಾವು ಯಾವ ಮಾರ್ಗದಲ್ಲಿ ಸಾಗೋದು?' ಎಂದು ಕೇಳಿದ. `ಬೈಪಾಸ್.. ಬೇಡ ಮಾರಾಯಾ.. ಇಂತಹ ಬೈಪಾಸ್ ರಸ್ತೆಯಲ್ಲೇ ಅಲ್ಲವಾ ಸಲೀಂ ಚಾಚಾನನ್ನು ಕಳೆದುಕೊಂಡಿದ್ದಲ್ಲವಾ? ನಗರದೊಳಗೇ ಹೋಗೋಣ.. ಇವತ್ತು ರಾತ್ರಿ ಪ್ರಯಾಣ ಖಂಡಿತ ಸಾಧ್ಯವಾಗದ ಮಾತು. ಅಲ್ಲೆಲ್ಲಾದರೂ ಪಾರ್ಕು ಇದ್ದರೆ ಅಲ್ಲೇ ಮಲಗೋಣ. ಬೋಗ್ರಾದಲ್ಲಿ ಮಲಗಿದಂತೆ.. ಇಲ್ಲಿಂದ ಭಾರತದ ಗಡಿ ತೀರಾ ದೂರವೇನಲ್ಲ. ಒಂದೆರಡು ದಿನದ ಪಯಣ ಅಷ್ಟೇ. ಸಲೀಂ ಚಾಚಾ ಹೇಳಿದ ಏಜೆಂಟನ ಪೋನ್ ನಂಬರ್ ನನ್ನ ಬಳಿ ಇದೆ. ಒಮ್ಮೆ ಪೋನ್ ಮಾಡಿ ನೋಡೋಣ. ಆತನ ಸಹಾಯ ಸಿಕ್ಕರೆ ಹಾಗೆ.. ಇಲ್ಲವಾದರೆ ನಾವೇ ಒಂದು ಪ್ರಯತ್ನ ಮಾಡೋಣ..' ಎಂದಳು. ಆಕೆಯ ಸಲಹೆ ಸರಿಯೆನ್ನಿಸಿತು.
        ರಂಗಪುರ ನಗರಿಯೆಡೆಗೆ ತೆರಳುವ ರಸ್ತೆಯಲ್ಲೇ ಮುನ್ನಡೆದರು. ಅರ್ಧ ಗಂಟೆಯ ನಂತರ ರಂಗಪುರ ನಗರಿ ಕತ್ತಲೆಯ ಜೊತೆಗೆ, ಬೆಳಕಿನ ದೀಪಗಳೊಡನೆ ಬರಮಾಡಿಕೊಂಡಿತು. ಎಲ್ಲೆಲ್ಲೂ ಝಗಮಗಿಸುವ ಬೆಳಕು, ರಸ್ತೆಯ ತುಂಬೆಲ್ಲ ಸೈಕಲ್ ರಿಕ್ಷಾಗಳು, ಬೆಂಗಾಲಿಯಲ್ಲಿ ಮಾತನಾಡುತ್ತ ಓಡಾಡುವ ಜನ, ಕಣ್ಣಿಗೆ ಕಾಣಿಸಿತು. ನಗರದೊಳಗೆ ಕಾಲಿಟ್ಟಂತೆಲ್ಲ ಉಬ್ಬರ ಮನಸ್ಸೂ ಉಲ್ಲಾಸಗೊಂಡಿತು. ಅಲ್ಲೆಲ್ಲೋ ಒಂದು ಬೀದಿಯಲ್ಲಿ ಸಾಗುತ್ತಿದ್ದಾಗಲೇ ಒಂದು ದೇವಸ್ಥಾನ ಕಣ್ಣಿಗೆ ಬಿದ್ದಿತು. ಅಚ್ಚರಿಯಿಂದ ನೋಡದವರೇ ದೇವಸ್ಥಾನದ ಒಳಹೊಕ್ಕರು. ದೇವಸ್ಥಾನದಲ್ಲೇ ಇದ್ದ ಅರ್ಚಕರೊಬ್ಬರು ಇವರನ್ನು ಅನುಮಾನದಿಂದಲೇ ನೋಡಿದರು. ಕೊನೆಗೆ ಮಧುಮಿತಾಳೇ ಬೆಂಗಾಲಿಯಲ್ಲಿ ಎಲ್ಲ ವಿಷಯ ತಿಳಿಸಿದಾಗ ಅರ್ಚಕರು ದೇವಸ್ಥಾನದ ಒಳಗೆ ಉಳಿಯಲು ಅವಕಾಶ ಮಾಡಿಕೊಟ್ಟರು. ರಾತ್ರಿಯೂಟವನ್ನೂ ನೀಡಿದರು. ಹಸಿದಿದ್ದ ಇಬ್ಬರೂ ಬೇಗ ಬೇಗನೆ ಊಟ ಮಾಡಿದರು. ಊಟ ಮುಗಿದ ನಂತರ ಅರ್ಚಕರು ಮಾತಿಗೆ ಕುಳಿತರು.

(ಮುಂದುವರಿಯುತ್ತದೆ)

ಭಲೆ ಭೀಮನವಾರೆ

(ಭೀಮನಗುಡ್ದದಲ್ಲಿ ಸೂರ್ಯೋದಯ)
ಮೂಡಣದಲ್ಲಿ ಸೂರ್ಯ ಉದಯಿಸುತ್ತಿದ್ದರೆ ಮನಸ್ಸಿನಲ್ಲಿ ಉಂಟಾಗುವ ರೋಮಾಂಚನ ಬಣ್ಣಿಸಲಸದಳ. ಬಾನು ಕೆಂಪಾಗಿ, ಕಿತ್ತಳೆ ಹಣ್ಣಿನ ಬಣ್ಣದಲ್ಲಿ ನೇಸರ ಆಗಸದಲ್ಲಿ ಎತ್ತರೆತ್ತರಕ್ಕೆ ಬರುತ್ತಿದ್ದರೆ ನೋಡುಗರ ಮನಸ್ಸಿನಲ್ಲಿ ಉಂಟಾಗುವ ಆನಂದ ಬಣ್ಣಿಸಲಸದಳ. ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭೀಮನವಾರೆ ಗುಡ್ಡದ ಸುಂದರ ಚಿತ್ರಣ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಂತ ಮಳೆ ಬೀಳುವ ಪ್ರದೇಶ ಎನ್ನುವ ಖ್ಯಾತಿಯನ್ನು ಗಳಿಸಕೊಂಡಿರುವ ಸಿದ್ದಾಪುರ ತಾಲೂಕಿನ ನಿಲ್ಕುಂದದ ಫಾಸಲೆಯಲ್ಲಿಯೇ ಇರುವ ಸುಂದರ ಸ್ಥಳ ಭೀಮನವಾರೆಗುಡ್ಡ. ಸೂರ್ಯೋದಯ ಹಾಗೂ ಸೂರ್ಯಾಸ್ತ ಕಣ್ಣು ತುಂಬಿಕೊಳ್ಳಲು ಹೇಳಿ ಮಾಡಿಸಿದಂತಹ ಸ್ಥಳ. ಪಶ್ಚಿಮ ಘಟ್ಟದ ಕೊಟ್ಟ ಕೊನೆಯಲ್ಲಿರುವ ಈ ಪ್ರದೇಶದಲ್ಲಿ ನಿಂತು ನೋಡಿದರೆ ಕರಾವಳಿ ಭಾಗದ ದೂರದೂರದ ಚಿತ್ರಣ ಕಣ್ಣಿಗೆ ತುಂಬುತ್ತದೆ. ಕೆಳಗಿನ ಆಳದಲ್ಲೆಲ್ಲೋ ಅಂಗೈನ ರೇಖೆಗಳ ಆಕಾರದಲ್ಲಿ ಹರಿದು ಹೋಗುವ ಅಘನಾಶಿನಿ ನದಿಯಂತೂ ಮನಸ್ಸಿನಲ್ಲಿ ಸಂತಸಕ್ಕೆ ರೆಕ್ಕೆ ಕಟ್ಟುತ್ತದೆ.
ನೆರಳು ಬೆಳಕಿನ ಚಿತ್ತಾರ
ದ್ವಾಪರಯುಗದಲ್ಲಿ ವನವಾಸದಲ್ಲಿದ್ದ ಪಾಂಡವರು ಈ ಪ್ರದೇಶದಲ್ಲೆಲ್ಲ ಸುತ್ತಾಡಿದ್ದರಂತೆ. ಆಗ ಭುಜಬಲ ಪರಾಕ್ರಮಿ ಭೀಮ ಈ ಸ್ಥಳದಲ್ಲಿ ಒಂದು ವಾರೆಯಾಗಿ ಮಲಗಿ ವಿಶ್ರಮಿಸಿದ್ದನಂತೆ. ಆ ಕಾರಣಕ್ಕಾಗಿಯೇ ಈ ಸ್ಥಳಕ್ಕೆ ಭೀಮನವಾರೆ ಗುಡ್ಡ ಎನ್ನುವ ಹೆಸರು ಬಂದಿದೆ. ಭೀಮ ಮಲಗಿದ್ದ ಎನ್ನುವುದಕ್ಕೆ ಕುರುಹು ಎಂಬಂತೆ ಭೂಮಿಯ ಮೇಲೆ ಮಡಿಕೆ ಮಡಿಕೆಗಳೆದ್ದಿವೆ. ತಲೆದಿಂಬಿನಂತಹ ರಚನೆ ಮೇಲಕ್ಕೆದ್ದು ವಿಸ್ಮಯವನ್ನು ಹುಟ್ಟಿಸುತ್ತದೆ. ಭೀಮನವಾರೆಗುಡ್ಡದ ತುತ್ತ ತುದಿಯಲ್ಲಿ ನಿಂತರೆ ಬೀಸಿ ಬರುವ ಅಬ್ಬರದ ಗಾಳಿಯಂತೂ ಎದೆಯೊಳಗೆ ತಲ್ಲಣವನ್ನು ಮುಡಿಸುವಂತದ್ದು. ಅಕ್ಕಪಕ್ಕದಲ್ಲಿ ಪ್ರಪಾತ ನಡುವೆ ಕಾಲು ಹಾದಿಯಷ್ಟೇ ಇರುವ ಗುಡ್ಡವಂತೂ ನೋಡಿದಷ್ಟೂ ಖುಷಿಯನ್ನು ಕೊಡುತ್ತದೆ.
ಭೀಮನಗುಡ್ಡದ ಸುತ್ತಮುತ್ತ ದಟ್ಟವಾದ ಕಾಡಿದೆ. ಗುಡ್ಡದ ತುದಿಯಲ್ಲಿ ನಿಂತುಕೊಂಡರೆ ಕೆಳಭಾಗದಲ್ಲಿ ಜಲಪಾತ ಧುಮ್ಮಿಕ್ಕುವ ಸದ್ದು ಕಿವಿಗಪ್ಪಳಿಸುತ್ತದೆ. ಕರಾವಳಿ ಪ್ರದೇಶವನ್ನು ಆವರಿಸಿರುವ ಮಂಜು, ಊದ್ದಕ್ಕೆ ಅಂಕುಡೊಂಕಾಗಿ ಹರಿದು ಹೋಗಿರುವ ಅಘನಾಶಿನಿ ನದಿ, ತಲವಾರಿನಲ್ಲಿ ಕಡಿದಂತೆ ಚೂಪಾಗಿರುವ ಗುಡ್ಡಗಳು ನೋಡಿದಷ್ಟೂ ನೋಡಬೇಕು ಎನ್ನಿಸುತ್ತದೆ. ಮುಂಜಾನೆ 6 ಗಂಟೆಗೆಲ್ಲ ಭೀಮನವಾರೆ ಗುಡ್ಡವನ್ನು ತಲುಪಿದರಂತೂ ಸೂರ್ಯೋದಯದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಕರ್ನಾಟಕದಲ್ಲಿ ಆಗುಂಬೆಯ ಸೂರ್ಯೋದಯ, ಸೂರ್ಯಾಸ್ತ ಹೆಸರುವಾಸಿ. ಅದಕ್ಕೆ ಸಾಟಿಯಾಗುವಂತಹ ಸೌಂದರ್ಯ ಭೀಮನವಾರೆಗುಡ್ಡದ್ದು ಎಂದರೂ ತಪ್ಪಾಗಲಿಕ್ಕಿಲ್ಲ.
ಈ ಸುಂದರ ತಾಣವನ್ನು ನೋಡಲು ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಬೆಳಗಿನ ಜಾವದಲ್ಲಿ ಗುಡ್ಡವನ್ನೇರುತ್ತಾರೆ. ಜೊತೆ ಜೊತೆಯಲ್ಲಿಯೇ ಸಂಜಯಾಗುವುದನ್ನೇ ಕಾಯುತ್ತ ಸೂಯರ್ಾಸ್ತವನ್ನು ನೋಡಿ ಆನಂದಿಸುತ್ತಾರೆ. ಭೀಮನವಾರೆ ಗುಡ್ಡವನ್ನು ನೋಡಲು ಆಗಮಿಸುವ ಪ್ರವಾಸಿಗರು ಹತ್ತಿರದಲ್ಲಿಯೇ ಇರುವ ಉಂಚಳ್ಳಿ ಜಲಪಾತ, ವಾಟೆಹೊಳೆ ಜಲಪಾತ, ನಿಲ್ಕುಂದದ ಪ್ರಾಚೀನ ದೇವಾಲಯ ವೀಕ್ಷಣೆ ಮಾಡಬಹುದಾಗಿದೆ. 10 ಕಿ.ಮಿ ಅಂತರದಲ್ಲೇ ಇರುವ ಲಕ್ಕಿಕುಣಿ ಬೆಟ್ಟ, ಬೆಣ್ಣೆಹೊಳೆ ಜಲಪಾತ, ಮಂಜುಗುಣಿ ದೇವಾಲಯಗಳನ್ನೂ ನೋಡಬಹುದಾಗಿದೆ. ಈ ಪ್ರಸಿದ್ಧ ತಾಣಕ್ಕೆ ಆಗಮಿಸುವವರು ಸಿದ್ದಾಪುರಕ್ಕೆ ಆಗಮಿಸಿ ಹಾರ್ಸಿಕಟ್ಟಾ ಹೆಗ್ಗರಣಿಯ ಮೂಲಕ ಬರಬಹುದಾಗಿದೆ. ಹುಬ್ಬಳ್ಳಿ ಭಾಗದ ಪ್ರವಾಸಿಗರು ಶಿರಸಿ-ಅಮ್ಮೀನಳ್ಳಿ ಮೂಲಕ ಭೀಮನಗುಡ್ಡವನ್ನು ತಲುಪಬಹುದಾಗಿದೆ. ಮಂಗಳೂರು ಭಾಗದವರು ಕುಮಟಾದಿಂದ ಬಂಡಲಕ್ಕೆ ಆಗಮಿಸಿ ಅಲ್ಲಿಂದ ಭೀಮನವಾರೆಗುಡ್ಡ ತಲುಪಬಹುದಾಗಿದೆ. ಶಿರಸಿಯಿಂದ 33 ಕಿ.ಮಿ, ಸಿದ್ದಾಪುರದಿಂದ 45 ಕಿ.ಮಿ ಹಾಗೂ ಕುಮಟಾದಿಂದ 60 ಕಿ.ಮಿ ದೂರದಲ್ಲಿ ಈ ಸುಂದರ ಸ್ಥಳವಿದೆ.
ಭೀಮನವಾರೆ ಗುಡ್ಡಕ್ಕೆ ಆಗಮಿಸುವ ಪ್ರವಾಸಿಗರು ಇತ್ತೀಚಿನ ದಿನಗಳಲ್ಲಿ ಇಲ್ಲಿನ ಪರಿಸರವನ್ನು ಹಾಳುಗೆಡವುವ ಕಾರ್ಯ ಮಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್ ಬಿಸಾಡುವುದು, ತಿನ್ನಲು ತಂದ ತಿಂಡಿಗಳನ್ನು ಎಸೆಯುವ ಕೆಲಸ ಮಾಡುತ್ತಿದ್ದಾರೆ. ಭೀಮನಗುಡ್ಡದಲ್ಲಿ ನಿರ್ಮಾಣ ಮಾಡಿರುವ ವೀಕ್ಷಣಾ ಗೋಪುರದಲ್ಲಿ ಫೈರ್ ಕ್ಯಾಂಪ್ ಮಾಡುವ ಮೂಲಕ ಅದನ್ನು ಹಾಳುಮಾಡುತ್ತಿದ್ದರೆ ಗೋಪುರದ ಗೋಡೆಗಳ ಮೇಲೆ ತಮ್ಮ ವಿಕಾರ ಅಕ್ಷರಗಳನ್ನು ಬರೆಯುವ ಮೂಲಕ ಅಂದಗೆಡಿಸುತ್ತಿದ್ದಾರೆ. ಈ ತಾಣದ ಸುತ್ತಮುತ್ತ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆಯಲಾಗಿದೆ. ಭೀಮನಗುಡ್ಡಕ್ಕೆ ಆಗಮಿಸುವ ಪ್ರವಾಸಿಗರು ಇಂತಹ ಕಾರ್ಯಗಳನ್ನು ನಿಲ್ಲಿಸಬೇಕಾಗಿದೆ. ನಿಸರ್ಗದ ಮಡಿಲಿನಲ್ಲಿರುವ ಸುಂದರ ಪ್ರದೇಶದ ಅಂದಗೆಡದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರವಾಸಿಗರ ಮೇಲಿದೆ. ನಮ್ಮದೇ ನಾಡಿನ ಭಾಗವನ್ನು ಸುಂದರವಾಗಿ ಇಟ್ಟುಕೊಳ್ಳುವ ಕಾರ್ಯವೂ ನಡೆಯಬೇಕಾಗಿದೆ.

Thursday, October 30, 2014

ಒಪ್ಪಿಬಿಡು ಮನವೇ

(ಚಿತ್ರ : ವಿನಾಯಕ ಹೆಗಡೆ)
ಒಪ್ಪಿಬಿಡು ಮನವೇ ನೀ
ನನ್ನೊಡಲ ಪ್ರೀತಿಯಾ
ತೊರೆಯದಿರು ಜೊತೆ ನೀನು
ನನ್ನೊಡಲ ಬುತ್ತಿಯಾ |

ನೀನಿರುವೆ ನನ ಪ್ರಾಣ
ಸಕಲ ಜೀವವೂ ನೀನು
ನನ್ನ ಬಾಳೆಲೆಯ ನವ
ಚೈತ್ರದುಸಿರು ನೀನು |

ನಾನು ನಿನ್ನಯ ಪ್ರೇಮಿ
ಜೊತೆ ಬಾಳ್ವೆ, ನಿನ್ನ ಹಿತ
ಬಾಳು ಕರಗುವ ಮುನ್ನ
ಒಮ್ಮೆ ಒಪ್ಪಿಬಿಡು ಮನವೇ |

ಕಳೆದಿರಲಿ ಹಳೆ ದುಃಖ
ಮೂಡಿ ಬರಲೀ ಪ್ರೀತಿ
ನನ್ನ ನೀನೊಪ್ಪಿದೊಡೆ
ಬಾಳ್ವೆ ಪೂರಾ ಸ್ವಾತಿ ||

***
(ಈ ಕವಿತೆಯನ್ನು ಬರೆದಿರುವುದು 01-11-2006ರಂದು ದಂಟಕಲ್ಲಿನಲ್ಲಿ)

Monday, October 27, 2014

ಮುರೇಗಾರ್ ಸಮಸ್ಯೆಗೆ ಮುಕ್ತಿ ಎಂದು?

(ಮುರೇಗಾರ್ ಜಲಪಾತ)

          ಶಿರಸಿ ತಾಲೂಕಿನ ಸಾಲ್ಕಣಿ ಗ್ರಾ.ಪಂ ವ್ಯಾಪ್ತಿಯ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಹಲವಾರು ಸಮಸ್ಯೆಗಳಿಂದ ಬಳಲುತ್ತಿವೆ. ಅಸಮರ್ಪಕ ರಸ್ತೆ, ವಿದ್ಯುತ್ ಸಮಸ್ಯೆ ಈ ಊರುಗಳನ್ನು ಬಾಧಿಸುತ್ತಿದೆ.
ಶಿರಸಿಯನ್ನು ಜಿಲ್ಲೆಯಲ್ಲಿ ಮುಂದುವರಿದ ತಾಲೂಕು ಎಂದು ಕರೆಯಲಾಗುತ್ತದೆ. ಈ ತಾಲೂಕಿನ ಸಾಲ್ಕಣ ಪಂಚಾಯತ ವ್ಯಾಪ್ತಿಯಲ್ಲಿರುವ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಸಮರ್ಪಕ ರಸ್ತೆ ಸಂಚಾರದಿಂದ ಬವಣೆ ಎದುರಿಸುವಂತಾಗಿದೆ. ಮುರೇಗಾರ್, ಹುಡ್ಲೇಜಡ್ಡಿ, ದುಗ್ಗುಮನೆ, ಶಿರ್ಲಬೈಲ್, ಮಳ್ಳಿಕೈ ಈ ಮುಂತಾದ ಊರುಗಳಿಗೆ ತೆರಳುವ ರಸ್ತೆ ತೀವ್ರವಾಗಿ ಹಾಳಾಗಿದ್ದು ಸಂಚಾರ ಅಸಾಧ್ಯ ಎನ್ನುವಂತಾಗಿದೆ.
ಶಿರಸಿಯಿಂದ ಸಾಲ್ಕಣಿಗೆ ತೆರಳುವ ಮುಖ್ಯ ರಸ್ತೆಯಿಂದ 5 ಕಿ.ಮಿ ಅಂತರದಲ್ಲಿ ಈ ಎಲ್ಲ ಊರುಗಳಿವೆ. ಈ ಊರಿಗೆ ತೆರಳಲು ಡಾಂಬರು ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಿರ್ವಹಣೆಯ ಕೊರತೆಯಿಂದಾಗಿ ಡಾಂಬರು ರಸ್ತೆ ಈಗಾಗಲೇ ಕಿತ್ತು ಹೋಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಉಂಟಾಗಿದ್ದು ಮಾರ್ಗದಲ್ಲಿ ಸಂಚಾರ ಮಾಡುವವರು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ. ಈ ಮಾರ್ಗದಲ್ಲಿ ಸಿಗುವ ಘಟ್ಟ ಪ್ರದೇಶದಲ್ಲಂತೂ ಡಾಂಬರು ರಸ್ತೆಯನ್ನು ಹುಡುಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರಂತೂ ರಸ್ತೆಯಲ್ಲಿ ಎದ್ದಿರುವ ಕಲ್ಲುಗಳು ಯಾವ ಕ್ಷಣದಲ್ಲಿ ವಾಹನವನ್ನು ಪಂಚರ್ ಮಾಡುತ್ತದೆಯೋ ಎನ್ನುವ ಭಯದಿಂದಲೇ ಸಾಗಬೇಕಾಗಿದೆ. ದೊಡ್ಡ ದೊಡ್ಡ ಹೊಂಡಗಳಲ್ಲಿ ನೀರು ತುಂಬಿಕೊಂಡಿದ್ದು ಸಂಪೂರ್ಣ ರಸ್ತೆಯನ್ನು ಆವರಿಸಿಕೊಂಡಿದೆ. ಹೊಂಡದ ಆಳವನ್ನರಿಯೇ ಮುಂದೆ ಸಾಗುವವರು ಬಿದ್ದ ಉದಾಹರಣೆಗಳೂ ಇದೆ.
ಈ ರಸ್ತೆಯನ್ನು 2004ರಿಂದ 2006ರ ಅವಧಿಯಲ್ಲಿ ಡಾಂಬರೀಕರಣ ಮಾಡಲಾಗಿದೆ. ಆದರೆ ರಸ್ತೆ ನಿರ್ಮಾಣ ಮಾಡಿದ ದಶಕಗಳು ಕಳೆಯುವಲ್ಲಿಯೇ ಸಂಪೂರ್ಣ ಹಾಳಾಗಿರುವುದು ಕಾಮಗಾರಿಯ ಗುಣಮಟ್ಟವನ್ನು ತೋರಿಸುತ್ತದೆ. ಈ ವರ್ಷ ಈ ರಸ್ತೆ ಮರುಡಾಂಬರೀಕರಣಕ್ಕಾಗಿ 1.5 ಲಕ್ಷ ರು. ಬಿಡುಗಡೆಯಾಗಿತ್ತು. ಆದರೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿಲ್ಲ. ಇದರಿಂದಾಗಿ 200ಕ್ಕೂ ಅಧಿಕ ಮನೆಗಳ 3000ಕ್ಕೂ ಹೆಚ್ಚಿನ ಜನರು ಹಾಳಾದ ರಸ್ತೆಯಲ್ಲಿ ಪ್ರಯಾಸದಿಂದ ಸಾಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಮುರೇಗಾರ್ ಜಲಪಾತಕ್ಕೆ ತೆರಳುವ ರಸ್ತೆಯನ್ನು ಕಳೆದ ವರ್ಷ ಅಗಲೀಕರಣ ಮಾಡಲಾಗಿತ್ತು. ಇದಕ್ಕಾಗಿ 1.20 ಲಕ್ಷ ರು. ವೆಚ್ಚದಲ್ಲಿ ಅಲ್ಲಲ್ಲಿ ಅಗಲೀಕರಣವನ್ನೂ ಕೈಗೊಳ್ಳಲಾಗಿತ್ತು. ಆದರೆ ಈ ವರ್ಷದ ಮಳೆಗೆ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಕೆಲವು ಕಡೆಗಳಲ್ಲಂತೂ ರಸ್ತೆಯ ಮಧ್ಯದಲ್ಲಿಯೇ ದೊಡ್ಡ ದೊಡ್ಡ ಕಾಲುವೆಗಳು ಉಂಟಾಗಿವೆ. ದುಗ್ಗುಮನೆ ಸನಿಹದಲ್ಲಿ ಮೋರಿಯೊಂದರ ಪಾಶ್ರ್ವ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಮುರೇಗಾರ್ ಜಲಪಾತವನ್ನು ವೀಕ್ಷಣೆ ಮಾಡಲು ಆಗಮಿಸುವ ಪ್ರವಾಸಿಗರು ಈ ಮಾರ್ಗದಲ್ಲಿ ಕಷ್ಟಪಟ್ಟು, ರಸ್ತೆಯನ್ನು ಹಳಿಯುತ್ತ ಪ್ರಯಾಣ ಮಾಡುತ್ತಿದ್ದಾರೆ. ಹೊಂಡಮಯ ರಸ್ತೆಯಿಂದಾಗಿ ಹೈರಾಣಾಗುತ್ತಿದ್ದಾರೆ.
(ಹಾಳು ರಸ್ತೆ)
ಸಾಲ್ಕಣಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯೂ ತೀವ್ರವಾಗಿದೆ. ಮುರೇಗಾರ್ ಹಾಗೂ ಸುತ್ತಮುತ್ತಲ ಊರುಗಳಿಗೆ ಸಾಲ್ಕಣಿ ಸಮೀಪದ ಟಿ.ಸಿ.ಯಿಂದಲೇ ವಿದ್ಯುತ್ ಸರಬರಾಜು ಆಗುತ್ತದೆ. ಆದರೆ ಅಸಮರ್ಪಕ ವಿದ್ಯುತ್ ಸರಬರಾಜಿನ ಕಾರಣ ಕತ್ತಲೆಯಲ್ಲಿಯೇ ಕಾಲಕಳೆಯುವ ಪರಿಸ್ಥಿತಿ ಈ ಭಾಗದ ಜನರದ್ದಾಗಿದೆ. ಪದೇ ಪದೆ ಟಿ.ಸಿ. ಹಾಳಾಗುತ್ತದೆ. ವಿದ್ಯುತ್ ಮಾರ್ಗದಲ್ಲಿ ದೋಷ ಸಂಭವಿಸುತ್ತದೆ. ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಮುರಿದು ಬೀಳುತ್ತಿರುತ್ತದೆ. ಆದರೆ ಹೆಸ್ಕಾಂ ಈ ಭಾಗದ ಕಡೆಗೆ ಗಮನ ಹರಿಸುತ್ತಿಲ್ಲ. ಹುಲೇಕಲ್, ಸಾಲ್ಕಣಿ ಭಾಗದಲ್ಲಿರುವ ಲೈನ್ಮನ್ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೆ ಆ ಕಡೆಗೆ ಆಗಮಿಸುವುದೇ ಇಲ್ಲ. ಕಳೆದ ಎರಡು-ಮೂರು ವರ್ಷಗಳಲ್ಲಿ ಒಮ್ಮೆಯೂ ಈ ಗ್ರಾಮಗಳಿಗೆ ಬಂದಿಲ್ಲ ಎಂದು ಸ್ಥಳೀಯರು ಕಿಡಿಕಾರುತ್ತಾರೆ. ಈ ಕುರಿತು ಇಲಾಖೆಯ ಅಧಿಕಾರಿಗಳಲ್ಲಿ ಕೇಳಿದರೆ ಗ್ರಾಮಸ್ಥರೆ ಸರಿಪಡಿಸಿಕೊಳ್ಳಿ ಎಂದು ಉತ್ತರ ನೀಡಿದ್ದಾರೆ. ಇದರಿಂದಾಗಿ ಮುರೇಗಾರ್, ದುಗ್ಗುಮನೆ, ಶಿರ್ಲಬೈಲ್, ಹುಡ್ಲೆಜಡ್ಡಿ, ಮಳ್ಳಿಕೈ ಈ ಮುಂತಾದ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೇ ಸ್ಥಳೀಯರೇ ಸರಿಪಡಿಸಿಕೊಳ್ಳುತ್ತಿದ್ದಾರೆ.
ಶಿರಸಿಯಿಂದ ಕೇವಲ 22 ಕಿ.ಮಿ ದೂರದಲ್ಲಿರುವ ಈ ಗ್ರಾಮಗಳಲ್ಲಿ ಸಮಸ್ಯೆಗಳು ಜ್ವಲಂತವಾಗಿದೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಸಾಲ್ಕಣಿ, ಹುಲೇಕಲ್ ಅಥವಾ ಶಿರಸಿಗೆ ಆಗಮಿಸುವ ಅನಿವಾರ್ಯತೆಯಿದೆ. ಆದರೆ ರಸ್ತೆ ಸಮರ್ಪಕವಾಗಿಲ್ಲ. ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಕಳೆದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಈ ಕುರಿತು ಗಮನ ಹರಿಸಿಲ್ಲ ಎನ್ನುವ ಆಕ್ರೋಶ ಗ್ರಾಮಸ್ಥರಲ್ಲಿದೆ. ಈಗಲೂ ಯಾವುದೇ ಜನಪ್ರತಿನಿಧಿಗಳು ತಮ್ಮ ಗೋಳನ್ನು ಕೇಳುತ್ತಿಲ್ಲ. ಪ್ರವಾಸಿ ತಾಣವಾದ ಮುರೇಗಾರ್ ಜಲಪಾತಕ್ಕೆ ತೆರಳುವ ರಸ್ತೆಯನ್ನೂ ಸರಿಪಡಿಸಲು ಮುಂದಾಗಿಲ್ಲ. ಆ ನೆಪದಲ್ಲಾದರೂ ಈ ಊರುಗಳಿಗೆ ಸರ್ವಋತು ರಸ್ತೆಯಾಗುತ್ತದೆ ಎನ್ನುವ ಕನಸು ಕನಸಾಗಿಯೇ ಉಳಿದಿದೆ. ಜಿಲ್ಲೆಯವರೇ ಆದ ಪ್ರವಾಸೋದ್ಯಮ ಸಚಿವರು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ. ರಸ್ತೆ ಹಾಗೂ ವಿದ್ಯುತ್ ಸಮಸ್ಯೆಗೆ ಪೂರ್ಣವಿರಾಮ ಹಾಕಬೇಕಾದ ಅಗತ್ಯವಿದೆ.

***
ರಸ್ತೆ ಹಾಗೂ ವಿದ್ಯುತ್ ಸಮಸ್ಯೆ ನಮ್ಮ ಭಾಗದಲ್ಲಿ ತೀವ್ರವಾಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದ್ದು ಸಂಚರಿಸುವುದು ಅಸಾಧ್ಯ ಎನ್ನುವಂತಾಗಿದೆ. ರಸ್ತೆ ದುರಸ್ತಿ ಮಾಡಿಸಿಕೊಡಿ ಎಂದು ಹಲವಾರು ಸಾರಿ ಅರ್ಜಿ ಅದಕ್ಕೆ ಮನ್ನಣೆ ದೊರಕಿಲ್ಲ. ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಲೈನ್ಮನ್ ಈ ಭಾಗಕ್ಕೆ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಆಗಮಿಸುವುದೇ ಇಲ್ಲ. ಸ್ಥಳೀಯರೇ ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಈ ಸಮಸ್ಯೆಗಳನ್ನು ಸಂಬಂಧಪಟ್ಟವರು ಸರಿಪಡಿಸಬೇಕಾಗಿದೆ.
ರಾಘವೇಂದ್ರ ಎನ್ ನಾಯ್ಕ, ಇಲೆಕ್ಟ್ರಿಕ್ ಕೆಲಸಗಾರ, ಶಿರ್ಲಬೈಲ್


***
(ಇದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ)