Friday, October 17, 2014

ಸುಖ

(ಚಿತ್ರ ಕೃಪೆ : ಅವಧಿ ಮ್ಯಾಗಝಿನ್)
ನೋಡಿದ
ಅವ
ಎದೆ ಝಲ್ಲೆಂದಿತು |

ಕಾಡಿದ
ಅವ
ಮನಸು ತಲ್ಲಣಿಸಿತು |

ಮುಟ್ಟಿದ
ಅವ
ಹೃದಯ ಹೂವಾಯಿತು |

ತಟ್ಟಿದ
ಅವ
ಕನಸು ನೂರಾಯಿತು |

ಮುತ್ತಿದ
ಅವ
ಅಂಕೆ ತಪ್ಪಿತು |

ತಬ್ಬಿದ
ಅವ
ಮನ ಹಬ್ಬಿತು |

ಆಡಿದ
ಅವ
ದೇಹ ನಲಿಯಿತು |

ಓಡಿದ
ಅವ
ನೆನಪು ನರಳಿತು |

ಮರೆಯಾದ
ಅವ
ದುಃಖ ಹೊಳೆಯಾಯಿತು |

ಅಡಗಿದ
ಅವ
ಕನಸು ಕಣ್ಣಲ್ಲಿ ಚೀರಿತು |

ಮರಳಿದ
ಅವ
ಮತ್ತೆ ಜೀವ ಬಂದಿತು ||


**
(ಈ ಕವಿತೆ ಬರೆದಿದ್ದು 17-10-2014ರಂದು ಶಿರಸಿಯಲ್ಲಿ)

ಬೆಂಗಾಲಿ ಸುಂದರಿ-33

(ಶೇರ್ ಪುರದಲ್ಲಿರುವ ಕೋಟೆಯೊಂದರ ಅವಶೇಷ)
             ಅದೇ ಸಮಯದಲ್ಲಿ ಬಾಗಿಲನ್ನು ಯಾರೋ ತಟ್ಟಿದಂತಾಯಿತು. ಎಲ್ಲರೂ ಮೌನವಹಿಸಿದರು. ಮುಷ್ಫೀಕರನ ಹೆಂಡತಿ ಹೋಗಿ ಬಾಗಿಲು ತೆರೆದಳು. ಬಂದಿದ್ದವನು ಮುಷ್ಪಿಕರನ ಬಂಟ. ಮಧುಮಿತಾಳನ್ನು ಮುಷ್ಫಿಕರನ ಬಳಿ ಕರೆದೊಯ್ಯಲು ಬಂದಿದ್ದ. ಕೊನೆಗೆ ಮುಷ್ಫಿಕರನ ಹೆಂಡತಿಯೇ ಕೆಲ ಸಮಯದ ನಂತರ ಮಧುಮಿತಾ ಬರುತ್ತಾಳೆ ಎಂದು ಹೇಳಿ ಆತನನ್ನು ಕಳಿಸಿದಳು. ಆತ ಹೋದ ತಕ್ಷಣ ಇತ್ತ ಇವರು ಕಾರ್ಯಪ್ರವೃತ್ತರಾದರು. ಕತ್ತಲೆಯಲ್ಲಿ ಮುಷ್ಫಿಕರನ ಹೆಂಡತಿ ಯಾವ ರೀತಿ ಇದ್ದಾಳೆ ಎನ್ನುವುದು ವಿನಯಚಂದ್ರ ಹಾಗೂ ಮಧುಮಿತಾಳಿಗೆ ಗೊತ್ತಾಗಲಿಲ್ಲ. ಬಹುತೇಕ ಮಧುಮಿತಾಳಂತೆ ಇರಬಹುದೇನೋ ಅನ್ನಿಸಿತು.
             ಮುಷ್ಫಿಕರನ ಹೆಂಡತಿ ಮಧುಮಿತಾಳಂತೆ ಬಟ್ಟೆ ಧರಿಸಿಕೊಂಡಳು. ತನ್ನ ಚಹರೆಯನ್ನು ಬದಲಿಸಿಕೊಂಡಳು. ಮುಷ್ಫೀಕರನೇನೂ ಮಧುಮಿತಾಳನ್ನು ನೋಡಿರಲಿಲ್ಲವಾದ್ದರಿಂದ ಅನುಮಾನ ಬರುವ ಸಾಧ್ಯತೆಗಳಿರಲಿಲ್ಲ. ವಿನಯಚಂದ್ರ ದೊಡ್ಡದೊಂದು ದೊಣ್ಣೆಯನ್ನು ಅಡಗಿಸಿ ಇಟ್ಟುಕೊಂಡ. ಮುಷ್ಫೀಕರನ ಹೆಂಡತಿಯೇ ಮುಂದಕ್ಕೆ ಸಾಗಿದಳು. ಅವಳ ಜೊತೆಯಲ್ಲಿ ವಿನಯಚಂದ್ರ ಹೋದ. ಮಧುಮಿತಾ ಮುಷ್ಫಿಕರನ ಹೆಂಡತಿಯ ಅಣತಿಯಂತೆ ಆ ಕೋಟೆಯಂತಹ ಮನೆಯ ಇನ್ನೊಂದು ದಿಕ್ಕಿನಲ್ಲಿದ್ದ ಕಳ್ಳ ದಾರಿಯತ್ತ ಸಾಗಿದಳು. ಮುಷ್ಫಿಕರನ ಹೆಂಡತಿ ಮುಷ್ಫೀಕರನ ಶಯನಕೋಣೆಗೆ ಸಾಗುತ್ತಿದ್ದಂತೆಯೇ ವಿನಯಚಂದ್ರ ಹೊರಗಡೆಯೇ ನಿಂತ. ಬಾಗಿಲು ತೆರೆದುಕೊಂಡೇ ಇತ್ತು. ಹೊರಗಿನಿಂದ ನೋಡುತ್ತಿದ್ದ ವಿನಯಚಂದ್ರನಿಗೆ ಮುಷ್ಫೀಕರನ ಆಕಾರ, ಚಹರೆ ಕಣ್ಣಿಗೆ ಕಾಣುತ್ತಿತ್ತು.
         ಕೋಟೆಯಂತಹ ಮನೆಯಲ್ಲಿ, ಕೈಗೆ ಕಾಲಿಗೆ ಆಳುಗಳನ್ನು ಇಟ್ಟುಕೊಂಡಿದ್ದ, ಗೂಂಡಾಗಳ ಪಡೆಯನ್ನೇ ನಿರ್ಮಾಣ ಮಾಡಿಕೊಂಡು ದಿನಕ್ಕೊಂದು ಹೆಣ್ಣಿನ ಬದುಕು ಹಾಳುಮಾಡುತ್ತಿದ್ದ ಮುಷ್ಫೀಕರ ನೋಡಲಿಕ್ಕೆ ದೈತ್ಯ ದೇಹಿಯೇನೂ ಅಲ್ಲ. ಸಾಧಾರಣ ಎತ್ತರ. ಆದರೆ ಗಟ್ಟುಮುಟ್ಟಾಗಿದ್ದ. ಬೆಂಗಾಲಿ ಮುಖ. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದವನು ಸೂರ್ಯನನ್ನೇ ಕಾಣಲಿಲ್ಲವೇನೋ ಎಂಬಂತೆ ಬಿಳುಚಿಕೊಂಡಿದ್ದ. ಮೈಕೈತುಂಬ ಆಭರಣಗಳ ಸರಮಾಲೆಯಿತ್ತು. ಅಬ್ಬಾ ಖಯಾಲಿ ಮನುಷ್ಯನೇ ಎಂದುಕೊಂಡ ವಿನಯಚಂದ್ರ. ನಿನಗೆ ಬುದ್ಧಿ ಕಲಿಸುತ್ತೇನೆ ಇರು ಎಂದುಕೊಂಡ ಮನಸ್ಸಿನಲ್ಲಿಯೇ. ಮುಷ್ಫಿಕರನ ಹೆಂಡತಿ ಆ ಕೋಣೆಯೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡಳಾದರೂ ಚಿಲಕ ಹಾಕಲಿಲ್ಲ.
          ಒಳಹೋದವಳೇ ಮುಷ್ಫೀಕರನನ್ನು ರಮಿಸತೊಡಗಿದಳು. ಮುಷ್ಫಿಕರನಿಗೆ ಒಮ್ಮೆ ಆಶ್ಚರ್ಯ. ಈ ಕೋಣೆಗೆ ಬರುವವರೆಲ್ಲ ಗಲಾಟೆ ಮಾಡುತ್ತಾರೆ, ಅಳುತ್ತಾರೆ, ಬೆದರುತ್ತಾರೆ. ದೈನ್ಯದಿಂದ ಬೇಡಿಕೊಳ್ಳುತ್ತಾರೆ. ಕೂಗತ್ತಾರೆ. ಕಬ್ಬರಿಯುತ್ತಾರೆ. ಆದರೆ ಈಕೆ ಮಾತ್ರ ತನ್ನನ್ನು ರಮಿಸುತ್ತಿದ್ದಾಳಲ್ಲ ಎಂದು ಕ್ಷಣಕಾಲ ಆಲೋಚಿಸಿದ. ಆದರೆ ಮನಸ್ಸು ಆ ಕಡೆಗೆ ಹೆಚ್ಚಿನ ಸಮಯ ಹೋಗಲಿಲ್ಲ. ರಮಿಸತೊಡಗಿದ್ದವಳನ್ನು ತಾನೂ ಮುದ್ದಿಸತೊಡಗಿದ್ದ. ತನ್ನ ತೆಕ್ಕೆಗೆ ಬಿದ್ದಿದ್ದವಳ ತುಟಿಗೆ ತುಟಿಯೊತ್ತಲು ಸಜ್ಜಾಗುತ್ತಿದ್ದ. ಹೀಗಿದ್ದಾಗಲೇ ವಿನಯಚಂದ್ರ ಕೋಣೆಯೊಳಕ್ಕೆ ಬಂದಿದ್ದ. ಮುಷ್ಫಿಕರನಿಗೆ ಇದು ಕೊಂಚವೂ ಅರಿವಿಗೆ ಬಾರಲಿಲ್ಲ. ಬಂದವನೇ ಸರಿಯಾದ ಸಮಯಕ್ಕೆ ಕಾಯುತ್ತ ನಿಂತ. ಹೀಗಿದ್ದಾಗಲೇ ವಿನಯಚಂದ್ರನಿಗೆ ಮುಷ್ಫಿಕರನ ಹೆಂಡತಿ ಸನ್ನೆ ಮಾಡಿದ್ದಳು. ತಕ್ಷಣವೇ ವಿನಯಚಂದ್ರ ಅಡಗಿಸಿ ಇಟ್ಟಿದ್ದ ದೊಣ್ಣೆಯನ್ನು ಬೀಸಿದ್ದ. ಮುಷ್ಫಿಕರನ ಹೆಂಡತಿ ತಪ್ಪಿಸಿಕೊಂಡರೆ ಏಟು ಸರಿಯಾಗಿ ಮುಷ್ಫಿಕರನ ಹಣೆಗೆ ಬಿದ್ದಿತ್ತು. ಏಟಿನ ಬಲ ಯಾವ ರೀತಿ ಇತ್ತೆಂದರೆ ಒಮ್ಮೆಲೆ ಕೂಗಿಕೊಂಡ ಮುಷ್ಫಿಕರ ತಲೆಯೊಡೆದು ಬಿದ್ದಿದ್ದ. ಎಚ್ಚರ ತಪ್ಪಿತ್ತು. ಒಡೆದ ಹಣೆಯಿಂದ ರಕ್ತ ಧಾರೆ ಧಾರೆಯಾಗಿ ಹರಿಯತೊಡಗಿತ್ತು. ವಿನಯಚಂದ್ರ ಹೊಡೆದು ಬಿಟ್ಟಿದ್ದನಾದರೂ ಆದ ಗಾಯದಿಂದ ಅವಾಕ್ಕಾಗಿ ನಿಂತಿದ್ದ. ಮುಷ್ಫಿಕರನ ಹೆಂಡತಿ ಒಮ್ಮೆ ವಿನಯಚಂದ್ರನನ್ನು ನೋಡಿದವಳೇ ಆತನ ಕೈಯಲ್ಲಿದ್ದ ದೊಣ್ಣೆಯನ್ನು ತೆಗೆದುಕೊಂದು ಎಚ್ಚರತಪ್ಪಿದ್ದ ಮುಷ್ಪಿಕರನ ದೇಹದ ಮೇಲೆಲ್ಲ ಹೊಡೆತಗಳನ್ನು ಬಾರಿಸತೊಡಗಿದ್ದಳು. ತಲೆಗೆ ಬಿದ್ದ ಹೊಡೆತದಿಂದ ಮುಷ್ಫಿಕರ ಎಚ್ಚರ ತಪ್ಪಿದ್ದು ಸ್ಪಷ್ಟವಾಗಿತ್ತು. ಮುಂದಿನ ಹೊಡೆತವೆಲ್ಲ ಆತನ ಹೆಂಡತಿ ತನ್ನ ಭಾವನೆಗಳನ್ನು ಹೊರಹಾಕಲು ಬಳಕೆ ಮಾಡಿಕೊಂಡಿದ್ದಳು. ಮನ ದಣಿಯೆ ಹೊಡೆದ ನಂತರವೇ ಅವಳ ಆವೇಶ ಇಳಿದಿದ್ದು.
            ಇಷ್ಟೆಲ್ಲ ಆಗಿದ್ದರೂ ಆತನ ಬಂಟರಿಗೆ ಏನೋ ತಿಳಿದಿರಲಿಲ್ಲ. ಇದು ಅಚ್ಚರಿಗೂ ಕಾರಣವಾಗಿತ್ತು. ತಕ್ಷಣ ಜಾಗೃತಳಾದ ಮುಷ್ಫಿಕರನ ಹೆಂಡತಿ ವಿನಯಚಂದ್ರನನ್ನು ಹಿಡಿದು ಎಳೆದುಕೊಂಡು ಹೊರಟಳು. ಮಧುಮಿತಾ ಸಾಗಿದ್ದ ಕಳ್ಳ ದಾರಿಯಲ್ಲೇ ಮುಂದಕ್ಕೆ ಸಾಗಿದಳು. ಅಲ್ಲೆಲ್ಲೋ ಒಂದು ಕಡೆ ಸಾಗುವ ದಾರಿಯಲ್ಲಿ ಮಧುಮಿತಾ ನಿಂತುಕೊಂಡಿದ್ದಳು. ಅವಳನ್ನೂ ಕರೆದುಕೊಂಡು ತಾನೇ ಮುಂದಾಳುವಾಗಿ ಹೊರಟಳು ಮುಷ್ಫಿಕರನ ಮಡದಿ. ದಾರಿಯ ಕೊನೆಯಲ್ಲೊಬ್ಬ ಬಂಟ ನಿಂತುಕೊಂಡಿದ್ದ. ಆತನ ಬಳಿ ಅದೇನು ಹೇಳಿದಳೋ ತಕ್ಷಣ ಅವನು ಎತ್ತಲೋ ಹೊರಟುಹೋದ. ನಂತರ ವಿನಯಚಂದ್ರ ಹಾಗೂ ಮಧುಮಿತಾಳನ್ನು ಕರೆದುಕೊಂಡು ಹೊರಬಂದ ಆಕೆ  ಎಲ್ಲೆಲ್ಲೋ ಸುತ್ತಿಸಿ ಯಾವು ಯಾವುದೋ ದಾರಿಯಲ್ಲಿ ಮುಂದಕ್ಕೆ ಕರೆದೊಯ್ದಳು. ಆ ಕೋಟೆಯಂತ ಮನೆಯಲ್ಲಿದ್ದ ಬಂಟರ ಕಣ್ಣಿಗೆ ಕಾಣದಂತೆ ಬಹುದೂರ ಕರೆದೊಯ್ದ ನಂತರ ಸುರಕ್ಷಿತ ಎನ್ನುವಂತಾದ ಮೇಲೆ ವಿನಯಚಂದ್ರ ಹಾಗೂ ಮಧುಮಿತಾ ಹೊರಡುವ ಮಾರ್ಗವನ್ನು ತಿಳಿಸಿ ತಾನು ಮರಳಲು ಅನುವಾದಳು.
        ವಿನಯಚಂದ್ರ ಆಕೆಗೆ ಧನ್ಯವಾದ ಹೇಳಿದ. ಮಧುಮಿತಾ ಕಣ್ತುಂಬಿಕೊಂಡು ಕಾಲಿಗೆ ನಮಸ್ಕರಿಸಲು ಮುಂದಾದಳು. ಆಗ ಮಾತನಾಡಿದ ಮುಷ್ಫಿಕರನ ಹೆಂಡತಿ `ಬೇಡ.. ನಾನೂ ಆತನಿಗೆ ಬುದ್ಧಿ ಕಲಿಸಬೇಕು ಎಂದುಕೊಂಡಿದ್ದೆ. ಅದೇ ಸಮಯಕ್ಕೆ ನೀವು ಸಿಕ್ಕಿರಿ. ಆತನಿಗೆ ಈಗ ಏಟು ಬಿದ್ದಿದೆ. ಸತ್ತಿದ್ದಾನೋ? ಬದುಕಿದ್ದಾನೋ ಗೊತ್ತಿಲ್ಲ. ಬದುಕಿದ್ದರೆ ಮುಂದೆ ಇಂತಹ ಕಾರ್ಯಕ್ಕೆ ಕೈ ಹಾಕುವುದಿಲ್ಲ ಎಂದುಕೊಂಡಿದ್ದೇನೆ. ನೋಡೋಣ ಏನಾಗುತ್ತದೆ ಅಂತ.. ನೀವು ಮುಂದಕ್ಕೆ ಸಾಗಿ. ಇನ್ನು ಐದಾರು ಕಿಮಿ ಸಾಗಿದ ನಂತರ ಹೆದ್ದಾರಿ ಸಿಗುತ್ತದೆ. ಅಲ್ಲಿಯವರೆಗೂ ಓಡುತ್ತಲೇ ಇರಿ. ಯಾವ ಕ್ಷಣದಲ್ಲಿ ಮುಷ್ಫಿಕರನ ಬಂಟರು ನಿಮ್ಮನ್ನು ಹುಡುಕಿ ಬರುತ್ತಾರೆ ಹೇಳುವುದು ಅಸಾಧ್ಯ. ಸಾಧ್ಯವಾದರೆ ಈ ರಸ್ತೆಗೆ ಸಮಾನಾಂತರವಾಗಿ ಮರಗಳ ಮರೆಯಲ್ಲಿ ಸಾಗಿ. ಹೆದ್ದಾರಿಗೆ ಹೋಗುವವರೆಗೆ ಈ ದಾರಿಯನ್ನು, ನಾನು ಹೇಳಿದಂತೆ ಬಳಕೆ ಮಾಡಿ. ಆಮೇಲೆ ಸಮಸ್ಯೆಗಳು ಅಷ್ಟಾಗಿ ಇರುವುದಿಲ್ಲ.. ನಿಮಗೆ ಒಳ್ಳೆಯದಾಗಲಿ.. ಅಲ್ಲಾ ನಿಮ್ಮನ್ನು ಕಾಪಾಡಲಿ .. ' ಎಂದು ಹೇಳಿದವಳೇ ಒಂದೇ ಒಂದು ಮಾತಿಗೆ ಕಾಯದೇ ವಾಪಾಸಾದಳು.
                   ಮಧುಮಿತಾ ಹಾಗೂ ವಿನಯಚಂದ್ರ ಓಡಲು ಆರಂಭಿಸಿದರು. ಮುಷ್ಫಿಕರನ ಹೆಂಡತಿ ಹೇಳಿದ್ದೆಲ್ಲವನೂ ಚಾಚೂತಪ್ಪದೇ ಪಾಲಿಸುತ್ತ ಮುನ್ನಡೆದರು. ಇದರಿಂದಾಗಿ ಅರ್ಧಗಂಟೆಯೊಳಗೆ ಹೆದ್ದಾರಿ ಸಿಕ್ಕಿತು. ಹೆದ್ದಾರಿಯಲ್ಲಿ ವಾಹನ ಸಂಚಾರವೂ ಆರಂಭವಾಗಿತ್ತು.
            ವಿನಯಚಂದ್ರ ಯಾವುದೋ ಒಂದು ವಾಹನಕ್ಕೆ ಕೈ ಮಾಡಿದ. ನಿಂತ ವಾಹನದಲ್ಲಿ ಇಬ್ಬರೂ ತೂರಿಕೊಂಡರು. ಆ ವಾಹನ ಹೆದ್ದಾರಿಗುಂಟ ಸಾಗಿ ಬೋಗ್ರಾಕ್ಕೆ ಕವಲೊಡೆಯುವಲ್ಲಿ ಇವರನ್ನಿಳಿಸಿ ತೆರಳಿತು. ಅಲ್ಲೊಂದಷ್ಟು ಹೊಟೆಲುಗಳು, ಅಂಗಡಿಗಳು ಇದ್ದವು. ಅಲ್ಲೊಂದು ಅಂಗಡಿಯಲ್ಲಿ ಬಾಳೆಯ ಹಣ್ಣು, ಬ್ರೆಡ್ಡುಗಳನ್ನು ತಿಂದು ಹಸಿವನ್ನು ಕಡಿಮೆ ಮಾಡಿಕೊಂಡರು. ನಂತರ ಬಸ್ಸಿಗಾಗಿ ಕಾಯುತ್ತ ನಿಂತರು. ಕೆಲವೇ ಕ್ಷಣದಲ್ಲಿ ಇವರಿಗಾಗಿಯೇ ಬಂತೇನೋ ಎನ್ನುವಂತೆ ಬಸ್ಸೊಂದು ಆಗಮಿಸಿತು. ಖಾಲಿ ಖಾಲಿಯಾಗಿತ್ತು. ತಕ್ಷಣವೇ ಬಸ್ಸಿನ್ನು ಏರಿ ಕುಳಿತವರಿಗೆ ಒಮ್ಮೆ ನಿರಾಳ ಬಾವನೆ.
              `ಮಧು.. ಇಷ್ಟೊತ್ತಿಗೆ ಮುಷ್ಫಿಕರನ ಮನೆಯಲ್ಲಿ ಹುಯ್ಯಲೆದ್ದಿರುತ್ತದೆ ಅಲ್ಲವಾ?'
              `ಹುಂ.. ಖಂಡಿತ.. ಬಹುಶಃ ಅವನ ಬಂಟರು ನಮ್ಮನ್ನು ಹುಡುಕಲು ಆರಂಭಿಸಿರಲೂ ಸಾಕು.. ಇಲ್ಲಿಗೂ ಬಂದು ಬಿಡುತ್ತಾರಾ?'
              `ಏನೋ ಗೊತ್ತಿಲ್ಲ ಮಧು.. ಮುಷ್ಫಿಕರನ ಹೆಂಡತಿ ನಮ್ಮನ್ನು ಕಾಪಾಡಿದಳಲ್ಲ. ಅವಳೇ ಏನಾದರೂ ಮಾಡುತ್ತಾಳೆ ಎನ್ನುವ ವಿಶ್ವಾಸ ನನ್ನದು. ಖಂಡಿತ ಅವಳನ್ನು ನಾವು ನೆನೆಯ ಬೇಕು ಅಲ್ಲವಾ?'
              `ಹೌದು ವಿನು.. ಅವಳಿರಲಿಲ್ಲ ಎಂದರೆ ನೆನಪು ಮಾಡಿಕೋ.. ನಮ್ಮ ಬದುಕು ಇಷ್ಟೊತ್ತಿಗೆ ಚಿಂದಿಯಾಗಿಬಿಡುತ್ತಿತ್ತು. ಯಾವ ಗದ್ದೆಯಲ್ಲಿ ನಾವು ಮಣ್ಣಾಗಿರುತ್ತಿದ್ದೆವೋ.. ಅಲ್ಲವಾ?'
               `ಹುಂ.. ಅವಳನ್ನು ಎಷ್ಟು ನೆನಪು ಮಾಡಿಕೊಂಡರೂ ಸಾಲದು ನೋಡು.. ನಮ್ಮ ಈ ಪಯಣದಲ್ಲಿ ಸಲೀಂ ಚಾಚಾ ಎಷ್ಟು ಮುಖ್ಯಪಾತ್ರವಾಗುತ್ತಾನೋ ಅಷ್ಟೇ ಕೂಡ ಅವಳೂ.. ನಾವು ಅವರನ್ನು ದಿನನಿತ್ಯ ನೆನೆಯಲೇಬೇಕು..'
            ಮಾತು ಹೀಗೆ ಸಾಗಿತ್ತು. ಬಸ್ಸು ಮುಂದಕ್ಕೆ ಸಾಗಿದಂತೆಲ್ಲ ಮನಸ್ಸಿನ ತುಂಬೆಲ್ಲ ನೂರಾರು ಆಲೋಚನೆಗಳು. ದೊಡ್ಡ ಗಂಡಾಂತರದಿಂದ ಪಾರಾದ ಸಂತಸ. ಮಧುಮಿತಾ ಈಗೀಗ ಒಂದೊಂದು ಕನ್ನಡ ಶಬ್ದವನ್ನು ಆಡಲು ಶುರುಮಾಡಿದ್ದಳು. ವಿನಯಚಂದ್ರನೇ ಆಗೀಗ ಆಕೆಗೆ ಹೇಳಿಕೊಟ್ಟಿದ್ದ. ಅದೇ ರೀತಿ ವಿನಯಚಂದ್ರನೂ ಕೂಡ ಬೆಂಗಾಲಿಯಲ್ಲಿ ಮಾತನಾಡತೊಡಗಿದ್ದ. ನಮಸ್ಕಾರಕ್ಕೆ ನಮೋಷ್ಕಾರ್ ಎನ್ನುವುದು, `ವ' ಅಕ್ಷರವಿದ್ದಲ್ಲಿ `ಬ' ಅಕ್ಷರವನ್ನು ಬಳಕೆ ಮಾಡುವುದು ಮಾಡುತ್ತಿದ್ದ.
                `ಮಧು.. ಬೆಂಗಾಲಿಯಲ್ಲಿ ನನ್ನ ಹೆಸರು ಬಿನೋಯ್ಚಂದ್ರ ಆಗುತ್ತಲ್ಲ..' ಎಂದು ಕೇಳಿದ್ದ.  `ಹುಂ ಹೌದು..' ಎಂದು ಅವಳು ಕನ್ನಡದಲ್ಲಿಯೇ ಉತ್ತರಿಸಿದ್ದಳು.
               ಹತಿಕುಮುರುಲ್ ದಾಟಿ ಮುಂದಕ್ಕೆ ಸಾಗಿದಂತೆ ಚಿಕ್ಕದೊಂದು ನದಿ ಸಿಕ್ಕಿತು. `ವಿನು ಅದೋ ನೋಡು ಆ ನದಿಯೆ ಬೆಂಗಾಲಿ ನದಿ.. ನದಿ ಚಿಕ್ಕದು. ಆದರೆ ಹೆಸರು ಇಡೀ ದೇಶದ್ದೇ..' ಎಂದಳು.
                `ಭಾರತದಲ್ಲಿ ಮಾತ್ರ ಭಾರತ ಎಂಬ ನದಿಯಿಲ್ಲ. ಹಿಂದೂಸ್ಥಾನಕ್ಕೆ ಕಾರಣವಾದ ಸಿಂದೂ ಇದೆ. ಆದರೆ ಬಾಂಗ್ಲಾದೇಶದಲ್ಲಿ ಬೆಂಗಾಲಿ ನದಿ ಇದೆ.. ವಾವ್..' ಎಂದ ವಿನಯಚಂದ್ರ.
            ನದಿಯ ದಡದಲ್ಲೆಲ್ಲ ಗದ್ದೆಗಳು, ಮನೆಗಳು ಸಾಕಷ್ಟಿದ್ದವು. ಅಲ್ಲೊಮ್ಮೆ ಇಲ್ಲೊಮ್ಮೆ ಅಡಿಕೆಯ ತೋಟಗಳೂ ಕಾಣಿಸಿದ್ದವು. ವಿನಯಚಂದ್ರ ಅಚ್ಚರಿಯಿಂದ ನೋಡಿದ್ದ. ಕೊನೆಗೆ ತನ್ನ ಮನೆಯಲ್ಲಿ ಯಾವಾಗಲೋ ಒಮ್ಮೆ ಅಡಿಕೆ ದರ ಕುಸಿತದ ವಿಷಯ ಬಂದಾಗ ಅಪ್ಪ `ಬಾಂಗ್ಲಾದಿಂದ ಅಡಿಕೆ ಕಳ್ಳಮಾಲಿನ ರೂಪದಲ್ಲಿ ಭಾರತಕ್ಕೆ ಬರ್ತಾ ಇದೆಯಂತೆ.. ಆ ಕಾರಣಕ್ಕೆ ನಮ್ಮಲ್ಲಿ ಅಡಿಕೆ ದರ ಕುಸಿತವಾಗಿದೆ..' ಎಂದಿದ್ದು ನೆನಪಾಯಿತು. ಅಡಿಕೆ ತೋಟದಲ್ಲಿ ಫಸಲೂ ಕೂಡ ಸಾಕಷ್ಟಿತ್ತು. ಭಾರತದ ಅಡಿಕೆ ಮಾರುಕಟ್ಟೆಯಲ್ಲಿ ದರವನ್ನು ಏರಿಳಿತ ಮಾಡುವಷ್ಟು ಸಾಮರ್ಥ್ಯ ಈ ಅಡಿಕೆ ತೋಟಗಳಿಗಿದೆಯಲ್ಲ ಎಂದುಕೊಂಡ ಆತ.
              ಮತ್ತೊಂದು ಅರ್ಧಗಂಟೆಯ ಪ್ರಯಾಣ ಬಳಿಕ ಭುಯಿಯಾಘಟಿ ಎನ್ನುವ ಗ್ರಾಮ ಸಿಕ್ಕಿತು. ಅಲ್ಲಿಗೆ ಬರುವ ವೇಳೆಗೆ ಬಸ್ಸು ಸಂಪೂರ್ಣ ಭರ್ತಿಯಾಗಿ ಕಾಲಿಡಲು ಜಾಗವಿಲ್ಲ ಎಂಬಂತಾಗಿತ್ತು. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರಿಗೂ ಮೊದಲೇ ಸೀಟು ಸಿಕ್ಕಿತ್ತಾದ್ದರಿಂದ ಜನಜಂಗುಳಿಯಲ್ಲಿ ಒದ್ದಾಡುವ ಪ್ರಸಂಗ ಎದುರಾಗಲಿಲ್ಲ. ಬಸ್ಸಿನಲ್ಲಿ ಜನಜಂಗುಳಿ ಎಷ್ಟೊತ್ತಪ್ಪಾ ಎಂದರೆ ಒಂದಿಬ್ಬರು ವಿನಯಚಂದ್ರನ ಮೈಮೇಲೆ ಒರಗಿಕೊಂಡೇ ನಿಂತಿದ್ದರು. ವೇಗವಾಗಿ ಸಾಗುತ್ತಿದ್ದ ಬಸ್ಸು ಗಾಳಿಯನ್ನು ಸೀಳುತ್ತಿದ್ದರೂ ಒಳಗಿದ್ದವರು ಮಾತ್ರ ಬೆವರಿ ನೀರಾಗಿದ್ದರು.
              ಧನಕುಂಡಿ ಎನ್ನುವ ಊರನ್ನು ತಲುಪುವ ವೇಳೆಗೆ ಬಸ್ಸು ಅಸಹನೀಯ ಎನ್ನಿಸತೊಡಗಿತ್ತು. ಬಸ್ಸಿನ ಟಾಪಿನ ಮೇಲೆಲ್ಲ ಜನರು ಕುಳಿತಿದ್ದರು. ಈಗಾಗಲೇ ಒಂದೂವರೆ ತಾಸು ಬಸ್ಸು ಪ್ರಯಾಣ ಮಾಡಿದ್ದವರು ಇನ್ನೂ ಎರಡು ತಾಸಿಗಿಂತ ಅಧಿಕ ಪ್ರಯಾಣ ಕೈಗೊಳ್ಳಬೇಕಿತ್ತು. ಪ್ರಮುಖ ಪಟ್ಟಣವಾದ ಶೇರ್ ಪುರವನ್ನು ತಲುಪುವ ವೇಳೆಗೆ ಆಗಸವಾಗಲೇ ಕೆಂಪಡರಿತ್ತು. ಮೂರು ತಾಸುಗಳ ಪಯಣ ಮೈಮನಸ್ಸುಗಳನ್ನು ಕದಡಿಬಿಟ್ಟಿತ್ತು. ಇಬ್ಬರಿಗೂ ಸಾಕಷ್ಟು ಆಯಾಸವಾಗಿತ್ತು. ಆದರೂ ಬೋಗ್ರಾವನ್ನು ತಲುಪುವುದು ಅನಿವಾರ್ಯವಾದ ಕಾರಣ ಇಬ್ಬರೂ ಸಹಿಸಿಕೊಂಡಿದ್ದರು. ಶೇರ್ ಪುರ ಸಾಕಷ್ಟು ದೊಡ್ಡದಾದ ನಗರಿಯೇ. 20-25 ಕಿ.ಮಿ ವಿಸ್ತಾರವಾಗಿರುವ ನಗರ ಎಂದರೂ ತಪ್ಪಿಲ್ಲ. ಪಕ್ಕದ ಹಾಜಿಪುರವನ್ನೂ ತನ್ನೊಳಗೆ ನುಂಗಿಕೊಂಡು ಬೆಳೆಯುತ್ತಿದೆ ಶೇರ್ ಪುರ. ಒಂದರ್ಧ ಗಂಟೆಯ ವಿರಾಮದ ನಂತರ ಬಸ್ಸು ಮುಂದಕ್ಕೆ ಹೊರಟಿತು.
             `ವಿನೂ.. ಇಲ್ಲೊಂದು ಊರಿದೆ ನೋಡು.. 9.ಮೈಲ್.. ಅಂತ.. ಎಂತ ಮಜವಾಗಿದೆಯಲ್ಲ..' ಎಂದು ಕೇಳಿದಳು ಮಧುಮಿತಾ. ತಕ್ಷಣ ವಿನಯಚಂದ್ರನಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಫುರ ತಾಲೂಕಿನಲ್ಲಿ `16ನೇ ಮೈಲ್' ಎಂಬ ಊರು ಇರುವುದು ನೆನಪಿಗೆ ಬಂದಿತು. ಮಧುಮಿತಾನ ಬಳಿ ಹೇಳಿದ. `ಆ ಹೆಸರು ಬಂದಿದ್ದೇಕೆ..?' ಕೇಳಿದ್ದಳು.
           `ನನಗೂ ಸರಿಯಾಗಿ ಗೊತ್ತಿಲ್ಲ.. ಬಹುಶಃ ಆ ಊರಿನಿಂದ ಶಿರಸಿಗೆ 16 ಮೈಲು ದೂರವಾಗುತ್ತದೆ ಎಂಬ ಲೆಕ್ಖವಿರಬೇಕು.. ಮುಂಚೆ ಘಟ್ಟದ ಕೆಳಗೆ ಅಂದರೆ ಕರಾವಳಿಯಿಂದ ಕಾಲ್ನಡಿಗೆಯಲ್ಲಿ ಬಂದವರು ಆ ಊರಿನ ಬಳಿ ಬರುತ್ತಿದ್ದರಂತೆ. ಅಲ್ಲಿ ಉಳಿಯುವ ವ್ಯವಸ್ಥೆ ಕೈಗೊಳ್ಳಲಾಗುತ್ತಿತ್ತಂತೆ. ಅಲ್ಲಿ ವಿಶ್ರಾಂತಿ ಪಡೆದು ನಂತರ ಪ್ರಯಾಣ ಮಾಡುತ್ತಿದ್ದರಂತೆ. ಆ ಕಾರಣಕ್ಕೆ ಆ ಹೆಸರನ್ನು ಇಟ್ಟಿರಬಹುದು. ಇದು ಬ್ರಿಟೀಷರ ಕಾಲದ್ದು..' ಎಂದ ವಿನಯಚಂದ್ರ. ಮಧುಮಿತಾಳಿಗೆ ಎಷ್ಟು ಅರ್ಥವಾಯಿತೋ ಗೊತ್ತಾಗಲಿಲ್ಲ.
           `ಹೇಯ್.. ನೀ ಹೇಳಿದ್ದು ನಿಜವೇ ಇರಬೇಕು.. ನೋಡು ಶೇರ್ ಪುರದಿಂದ 9ನೇ ಮೇಲ್ ಗೆ 9 ಮೈಲು ದೂರವಿದೆ.. ಈ ಊರಿಗೂ ಅದೇ ಕಾರಣಕ್ಕೆ ಹೀಗೆ ಹೆಸರು ಇಟ್ಟಿರಬೇಕು..' ಎಂದಳು ಮಧುಮಿತಾ. ವಿನಯಚಂದ್ರ ನಕ್ಕ. ಮತ್ತೊಂದು ಅರ್ಧತಾಸಿನ ಪ್ರಯಾಣದ ನಂತರ ಸುಲ್ತಾನ್ ಗಂಜ್ ಎಂಬ ಪ್ರದೇಶ ಸಿಕ್ಕಿತು. ಮತ್ತೊಂದು ತಾಸಿನ ನಂತರ ಬೋಗ್ರಾ ಸಿಕ್ಕಿತು. ಅಲ್ಲಿಗೆ ತೆರಳುವ ವೇಳೆಗೆ ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಸಾಕಷ್ಟು ಹಣ್ಣಾಗಿದ್ದರು.

(ಮುಂದುವರಿಯುತ್ತದೆ.)

Thursday, October 16, 2014

ನಾನೊಬ್ಬ ಕಥೆಗಾರ


ನಾನೊಬ್ಬ ಕಥೆಗಾರ
ಪಾತ್ರಗಳ ಆಡಿಸುವೆ |
ನನ್ನೆಯಾ ಭಾವನೆಗೆ
ಬಣ್ಣಗಳ ನೀಡುವೆ ||

ಅಳುವ ಕಣ್ಣಲಿ ನಾನು
ನಗೆಯ ಮೂಡಿಸಬಲ್ಲೆ |
ನಗುವಾತ ವ್ಯಕ್ತಿಯನು
ನಾ ಅಳಿಸಬಲ್ಲೆ ||

ಅರೆಘಳಿಗೆ ಸಮಯದಲಿ
ಪಾತ್ರಗಳ ಬದಲಿಸುವೆ |
ಕಲ್ಪನೆಯು ಮೆರೆಯುವಿಕೆಯ
ನೋಡಿ ನಲಿವೆ ||

ಕಥೆಯೆನ್ನ ಜೀವನವು
ಇದುವೆ ಸಂಗಾತಿ |
ಕಥೆಗಾಗಿ ಬದುಕಿರುವೆ
ಇದುವೆನ್ನ ಪ್ರೀತಿ ||

ಓದುಗನೆ ನೀನೆನ್ನ
ಕಥೆಯ ಜೀವಾಳ |
ನನ್ನ ಕಥೆ ಮೆರೆವುದಕೆ
ನೀನೇ ದಾಳ ||

***
(ಈ ಕವಿತೆಯನ್ನು ಬರೆದಿರುವುದು 19-10-2006ರಂದು ದಂಟಕಲ್ಲಿನಲ್ಲಿ)

Wednesday, October 15, 2014

ತೆರೆ

ಬದುಕ ತೆರೆ
ತೆರೆದು ಬತ್ತಲಾದಾಗ
ಕಣ್ಣೆದುರು ರಾಚಿದ್ದು
ನೋವುಗಳ ಮುಲುಕು |

ಎಲ್ಲ ಬಿಟ್ಟು, ಶರಧಿಯ
ಮಡಿಲೊಳು ತಲೆಯಿಟ್ಟು
ನೋವಿಗೊಂದು ಸಮಾಧಾನ
ವೆಂಬಂತೆ ಬಿಕ್ಕಿ ಅತ್ತು
ಹಗುರಾಗುವಾ ಎಂದರೆ
ಅಲ್ಲಿ ಮತ್ತದೇ ತೆರೆ-ತೆರೆಯ
ಬಿಂಬ-ಪ್ರತಿಬಿಂಬ |

ತೆರೆ, ಬಾಗಿಲು ತೆರೆ
ಹೊರ ಕವಚದೊಳು
ನಗುವಿನ ತೆರೆ, ಒಳಗೆಲ್ಲಾ
ಕಣ್ಣಹನಿ, ಹೃದಯ
ಹಿಂಡುವ ನೋವು.
ಒಳಗೊಂದು-ಹೊರಗೊಂದು
ಅರಿವಾಗದ ರೂಪ |

ತೆರೆ, ನೋವಿನ ಅಲೆ.
ತುಂತುಂಬಿ ಬಂದಷ್ಟೂ
ಬತ್ತದ ಸೆಲೆ |

ತೆರೆ, ತೆರೆಯ ತೆರೆ
ತೆರೆ-ತೆರೆ-ತೆರೆ-ತೆರೆ
ಮೀರದ ತೆರೆ |

ಕೊನೆಯೊಳೊಮ್ಮೆ ಆ ನೋವ
ತೆರೆಯ-ತೆರೆ.
ತೆರೆ ತೆರೆದ ನಂತರ
ಪಸೆ ಆರಿದ ಆಳದಲ್ಲೂ
ಮತ್ತೆಲ್ಲೋ ಒಂದು ನಲಿವ
ಸೆಲೆ, ಬರೆಯಲು
ಮರೆಯಲು ಬಯಸಿದೆ |

ತೆರೆ. ಮೀರದ ಸೆರೆ
ಕೊನೆಯ ತೆರೆ
ಕೊಟ್ಟ ಕೊನೆಯ ತೆರೆ ||

***
(ಈ ಕವಿತೆಯನ್ನು ಬರೆದಿರುವುದು 10-02-2007ರಂದು ಕಾರವಾರದಲ್ಲಿ)

Tuesday, October 14, 2014

ಅಪರಾಧಿ ನಾನಲ್ಲ (ಕಥೆ)

           ಅಂದಿನ ಕೆಲಸ ಮುಗಿಸಿ ಮನೆಗೆ ಬಂದು ಊಟ ಮಾಡಿ ಟಿವಿ ಹಚ್ಚಿದ ತಕ್ಷಣ ನಿರೂಪಕಿ ಯಾವುದೋ ಸುದ್ದಿಯನ್ನು ಪದೇ ಪದೆ ಹೇಳತೊಡಗಿದ್ದಳು. `ಉಡುಪಿಯಲ್ಲಿ ನಕ್ಸಲ್ ನಿಗ್ರಹ ಪಡೆಯಿಂದ ಕೋಂಬಿಂಗ್. ನಕ್ಸಲರ ಜೊತೆಗೆ ಗುಂಡಿನ ಕಾಳಗ. ಇಬ್ಬರ ಹತ್ಯೆ..' ಎಂದು ಹೇಳುತ್ತಿದ್ದಳು.
           ಹೇಳಿದ್ದನ್ನೇ ತಾನು ನಾಲ್ಕು ಸಾರಿ ಹೇಳಿ, ಸ್ಥಳೀಯ ವರದಿಗಾರರಿಂದ ಎರಡು ಸಾರಿ ಹೇಳಿಸಿ, ಟಿವಿ ಪರದೆಯ ಮೇಲೆ ಮೂರು ಸಾರಿ ಅದೇ ಸಾಲುಗಳನ್ನು ಮರುಪ್ರಕಟಿಸಿ, ಮತ್ತೆ ತಾನು ಎರಡು ಸಾರಿ ಹೇಳುವಲ್ಲಿಗೆ ಹೇಳಿದ್ದೇ ವಿಷಯವನ್ನು ಹತ್ತುನಿಮಿಷಕ್ಕೆ ಎಳೆದಿದ್ದಳು. ನಾನು ಮತ್ತಿನ್ನೇನಾದರೂ ಹೊಸ ಸುದ್ದಿ ಹೇಳುತ್ತಾಳೋ ಎಂದು ಕಾದೆ. ಆಕೆ ಹೇಳಲಿಲ್ಲ. ಇವರ ಹಣೆಬರಹವೇ ಇಷ್ಟು ಎಂದುಕೊಂಡು ಚಾನಲ್ ಬದಲಾಯಿಸಿದೆ.
           ಆದರೆ ಮನಸ್ಸಿನ ತುಂಬ ನಕ್ಸಲರು, ನಕ್ಸಲ್ ಪೀಡಿತ ಪ್ರದೇಶದ ಬಗ್ಗೆ ಆಲೋಚನೆ ಶುರುವಾಯಿತು. ಬಹು ದಿನಗಳಿಂದ ನನ್ನ ಮನಸ್ಸಿನಲ್ಲಿ ನಕ್ಸಲ್ ಪೀಡಿತ ಪ್ರದೇಶಕ್ಕೆ ಹೋಗಿ ಬರಬೇಕು. ಅಲ್ಲಿನ ಜನಜೀವನ ಹೇಗಿರುತ್ತದೆ ಎನ್ನುವುದನ್ನು ವೀಕ್ಷಿಸಬೇಕು. ನಕ್ಸಲ್ ನಿಗ್ರಹ ಪಡೆಯ ಕೋಂಬಿಂಗ್ ನೋಡಬೇಕು. ಜನಸಾಮಾನ್ಯರ ದೈನಂದಿನ ಜೀವನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಬೇಕು. ಸಾಧ್ಯವಾದರೆ ಅಲ್ಲಿ ಉಳಿದುಕೊಳ್ಳಲು ಪ್ರಯತ್ನ ಮಾಡಬೇಕು ಎಂಬ ಆಸೆ ಕಾಡುತ್ತಿತ್ತು. ಇದೀಗ ಉಡುಪಿ ಜಿಲ್ಲೆಯಲ್ಲಿ ನಕ್ಸಲ್ ಎನ್ ಕೌಂಟರ್ ನಡೆದಿದೆಯಲ್ಲ. ಅಲ್ಲಿಗೆ ಹೋಗಿಬರೋಣ ಎಂದುಕೊಂಡೆ. ಹೆಚ್ಚಿನ ಮಾಹಿತಿಗಾಗಿ ಮತ್ತದೇ ಸುದ್ದಿ ವಾಹಿಸಿಯ ಮೊರೆ ಹೊಕ್ಕೆ.
            `ಕುದುರೆಮುಖ ರಾಷ್ಟ್ರೀಯ ಉದ್ಯಾನದ  ಬಳಿ ಇರುವ ಗ್ರಾಮವೊಂದರಲ್ಲಿ ನಕ್ಸಲ್ ನಿಗ್ರಹ ಪಡೆಯು ನಕ್ಸಲರ ಜೊತೆಗೆ ಗುಂಡಿನ ಕಾಳಗ ನಡೆಸಿದೆ. ಗುಂಡಿನ ಕಾಳಗಕ್ಕೆ ಇಬ್ಬರು ನಕ್ಸಲರು ಬಲಿಯಾಗಿದ್ದಾರೆ. ಇಬ್ಬರು ಪೊಲೀಸರಿಗೂ ಗಾಯವಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸ್ ಕಾವಲು ಬಿಗಿಯಾಗಿದೆ.' ಎಂದು ಹೇಳುತ್ತಿದ್ದರು. ಮರುದಿನ ಅಲ್ಲಿಗೆ ಹೋಗಲೇಬೇಕು ಎಂದುಕೊಂಡು ತಕ್ಷಣವೇ ಕಾರ್ಯಪ್ರವೃತ್ತನಾದೆ. ನಕ್ಸಲ್ ಪೀಡಿತ ಪ್ರದೇಶಕ್ಕೆ ಹೋಗಬೇಕಾದರೆ ಮಾಡಿಕೊಳ್ಳಬೇಕಾದ ಪೂರ್ವತಯಾರಿಯಲ್ಲಿ ತೊಡಗಿದೆ. ಹೊಸದಾಗಿ ಕೊಂಡಿದ್ದ ಡಿಎಸ್ಎಲ್ಆರ್ ಕ್ಯಾಮರಾವನ್ನು ತಯಾರು ಮಾಡಿಟ್ಟುಕೊಂಡೆ.
            ಮರುದಿನವೇ ಗಾಡಿಯನ್ನು ತೆಗೆದುಕೊಂಡು ನಕ್ಸಲ್ ಪೀಡಿತ ಪ್ರದೇಶಕ್ಕೆ ಹೊರಟೆ. ನನ್ನ ಊರಿನಿಂದ ನಿರಂತರ ಮೂರು ತಾಸುಗಳ ಪಯಣದ ನಂತರ ಉಡುಪಿ ಜಿಲ್ಲೆಯಿಂದ ಕಾರ್ಕಳಕ್ಕೆ ಬಂದು ಅಲ್ಲಿಂದ ಟಿವಿಯಲ್ಲಿ ಬಿತ್ತರಿಸಿದ್ದ ನಕ್ಸಲ್ ಪೀಡಿತ ಗ್ರಾಮದ ಕಡೆಗೆ ಹೊರಟೆ. ಕೆಲ ಕಿಲೋಮೀಟರುಗಳ ದೂರದ ನಂತರ ಕುದುರೇಮುಖ ರಾಷ್ಟ್ರೀಯ ಉದ್ಯಾನದ ತಪಾಸಣಾ ಕೇಂದ್ರ ಸಿಕ್ಕಿತು. ಅಲ್ಲಿ ನನ್ನನ್ನು ಪೊಲೀಸರು ತಡೆದರು. ನನ್ನಂತೆ ಇನ್ನೂ ಅನೇಕ ವಾಹನಗಳನ್ನೂ ಅವರು ತಡೆದಿದ್ದರು ಎನ್ನಿ. ನಾನು ನನ್ನ ಬೈಕನ್ನು ಪಕ್ಕಕ್ಕೆ ನಿಲ್ಲಿಸಿ ನನ್ನ ಸರದಿಗಾಗಿ ಕಾಯುತ್ತ ನಿಂತೆ. ಆದರೆ ಪೊಲೀಸರು ಅಲ್ಲಿದ್ದವರಲ್ಲಿ ಯಾರನ್ನೂ ಮುಂದಕ್ಕೆ ಬಿಡುವ ಹಾಗೆ ಕಾಣಲಿಲ್ಲ. ನಾನು ಸೀದಾ ಅಲ್ಲಿದ್ದ ಪೊಲೀಸನೊಬ್ಬನ ಬಳಿ `ತುರ್ತಾಗಿ ಹೋಗಬೇಕಾಗಿದೆ.. ನನ್ನನ್ನು ಬಿಡಿ..' ಎಂದೆ. ಆತ ಒಪ್ಪಲೇ ಇಲ್ಲ. ನಾನು ಪರಿಪರಿಯಾಗಿ ಕೇಳಿಕೊಂಡೆ. ಕೊನೆಗೆ ನನ್ನ ಮನೆಯಲ್ಲಿ ಹಿರಿಯರ ಆರೋಗ್ಯ ಸಮಸ್ಯೆ ಉಂಟಾಗಿದೆ. ಸೀರಿಯಸ್ ತೊಂದರೆಯಿದೆ. ಬೇಗನೇ ಹೋಗಬೇಕಿತ್ತು. ಎಂದೆ. ನನ್ನ ಮಾತನ್ನು ನಂಬಿದನಿರಬೇಕು. ಹಲವಾರು ಪತ್ರಗಳಲ್ಲಿ ಸಹಿ ಪಡೆದುಕೊಂಡು, ನಾನು ಹೊರಟ ಸಮಯವನ್ನು ನಮೂದು ಮಾಡಿಕೊಂಡು ಮುಂದಕ್ಕೆ ಹೋಗಲು ಬಿಟ್ಟ.
           ನಾನು ಕುದುರೆಮುಖ ರಾಷ್ಟ್ರೀಯ ಅರಣ್ಯ ಪ್ರದೇಶಕ್ಕೆ ಹೋಗುವವನು ನಕ್ಸಲ್ ಪೀಡಿತ ಪ್ರದೇಶ ಬಂದ ತಕ್ಷಣ ಸೀದಾ ನನ್ನ ಗಾಡಿಯನ್ನು ಅತ್ತ ತಿರುಗಿಸಿದೆ. ನಾನು ಹೊರಡುವ ಮುನ್ನ ಸಂಪೂರ್ಣ ಮಾಹಿತಿ ಕಲೆಹಾಕಿ ಬಂದಿದ್ದರಿಂದ ನನಗೆ ಸಮಸ್ಯೆಯಾಗಲಿಲ್ಲ. ಮುಖ್ಯ ರಸ್ತೆಯಿಂದ ಮೂರ್ನಾಲ್ಕು ಕಿಲೋಮೀಟರ್ ದೂರ ಹೋದ ನಂತರ ಕಾಡು ಮತ್ತಷ್ಟು ದಟ್ಟವಾಯಿತು. ನನಗೆ ಅಚ್ಚರಿಯಾಗಿದ್ದೆಂದರೆ ಅಂತಹ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆಯ ಒಬ್ಬೇ ಒಬ್ಬ ಸಿಬ್ಬಂದಿಯೂ ತಪಾಸಣೆ ಮಾಡುತ್ತಿಲ್ಲ ಎನ್ನುವುದು. ಒಂಟಿ ದಾರಿಯಲ್ಲಿ ನಾನೊಬ್ಬನೇ ಒಬ್ಬಂಟಿಯಾಗಿ ಮುಂದಕ್ಕೆ ಸಾಗುತ್ತಿದ್ದೆ. ಮತ್ತೊಂದು ಮೂರ್ನಾಲ್ಕು ಕಿಲೋಮೀಟರ್ ದೂರಕ್ಕೆ ಸಾಗಿದರೂ ಕೂಡ ಯಾರೊಬ್ಬರೂ ನನಗೆ ಕಾಣಿಸಲಿಲ್ಲ. ಹೀಗೆ ಸಾಗುತ್ತಿದ್ದಾಗ ಅಲ್ಲೊಂದು ಕಡೆ ಒಂದಷ್ಟು ಜನರು ನನ್ನನ್ನು ಅಡ್ಡಗಟ್ಟಿದರು. ಅವರ ಕೈಯಲ್ಲೆಲ್ಲ ಕತ್ತಿಗಳಿದ್ದವು, ಗುದ್ದಲಿ, ಪಿಕಾಸಿ ಮುಂತಾದ ಆಯುಧಗಳಿದ್ದವು. ನಾನು ಎದುರಿಗೆ ಕಂಡಿದ್ದೇ ತಡ ನನ್ನನ್ನು ಬೆನ್ನಟ್ಟಿ ಬಂದರು. ನನಗೆ ಒಮ್ಮೆಲೆ ಜೀವ ಕೈಗೆ ಬಂದಿತು. ಯಾರು ಇವರು, ನನ್ನ ಮೇಲೆ ಯಾವ ಕಾರಣಕ್ಕೆ ದಾಳಿ ಮಾಡುತ್ತಿದ್ದಾರೆ. ನಾನು ಏನಾದರೂ ತಪ್ಪು ಮಾಡಿದ್ದೇನಾ? ಅಥವಾ ನಕ್ಸಲರೇ ಈ ವೇಶ ತೊಟ್ಟುಕೊಂಡು ಬಂದಿದ್ದಾರಾ ಎಂದೆಲ್ಲ ಆಲೋಚಿಸಿದೆ.
           ನಾನು ಆ ಹಳ್ಳಿಯ ಹಾಳು ರಸ್ತೆಯಲ್ಲಿ ಅದೆಷ್ಟು ವೇಗವಾಗಿ ಗಾಡಿ ಓಡಿಸಿದ್ದೆ ಎಂದರೆ ಕೆಲವೇ ಕ್ಷಣಗಳಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆದ ಊರು ಸಿಕ್ಕಿತು. ಒಂದಿಬ್ಬರು ಹಿರಿಯರು ಅಲ್ಲಿನ ಮನೆಗಳ ಮುಮದೆ ಕುಳತಿದ್ದರು. ನಾನು ಅವರ ಬಳಿ ಹೋಗಿ ನನ್ನ ವಿಚಾರವನ್ನು ತಿಳಿಸಿದೆ. ನಾನು ಬಂದ ಕಾರಣವನ್ನೂ, ನನ್ನ ವಿವರವನ್ನೂ ಹೇಳಿದೆ. ಆ ಮನೆಗಳ ಮುಂದೆ ಕುಳಿತಿದ್ದ ಹಿರಿಯರು ನನ್ನ ಬಗ್ಗೆ ಮೊದಲಿಗೆ ಅನುಮಾನ ವ್ಯಕ್ತಪಡಿಸಿದರಾದರೂ ಕೊನೆಗೆ ನನ್ನನ್ನು ನಂಬಲು ಆರಂಭಿಸಿದರು. ಅಷ್ಟರಲ್ಲಿ ದಾರಿ ಮಧ್ಯದಲ್ಲಿ ನನಗೆ ಸಿಕ್ಕು, ನನ್ನನ್ನು ಅಡ್ಡಗಟ್ಟಿದ್ದ ಗುಂಪು ಅಲ್ಲಿಗೆ ಬಂದಿತು. ಬಂದವರೇ ಏಕಾಏಕಿ ನನ್ನ ಮೇಲೆ ಏರಿಬಂದರು. ಒಂದಿಬ್ಬರು ನಾಲ್ಕೇಟುಗಳನ್ನು ಬಿಗಿದೂ ಬಿಟ್ಟರು. ಹೊಡೆತ ತಿಂದ ನನಗೆ ಒಂದೆರಡು ಕಡೆ ಚಿಕ್ಕ ಗಾಯಗಳಾಗಿ ರಕ್ತವೂ ಒಸರಿತು. ಅಷ್ಟರಲ್ಲಿ ಅಲ್ಲೇ ಇದ್ದ ಒಬ್ಬ ಹಿರಿಯ ನನ್ನನ್ನು ರಕ್ಷಣೆ ಮಾಡಿದ. ಕೊನೆಗೆ ನಾನು ಹೇಳಿದ್ದ ನನ್ನ ವಿಷಯವನ್ನೇ ಆ ಗುಂಪಿನ ಮುಂದಕ್ಕೆ ತಿಳಿಸಿದ. ನಂತರವೇ ಅವರೆಲ್ಲ ನನ್ನ ಜೊತೆಗೆ ಸಮಾಧಾನದಿಂದ ಮಾತನಾಡಿದ್ದು.
           ನಾನು ಕೆಲವು ಪತ್ರಿಕೆಗಳಿಗೆ ಹವ್ಯಾಸಿಯಾಗಿ ಬರೆಯುತ್ತಿರುತ್ತೇನೆ. ಆ ವಿಷಯವನ್ನು ಅವರಿಗೆ ತಿಳಿಸಿದೆ. ಇದನ್ನು ಕೇಳಿದ್ದೇ ತಡ ನನ್ನ ಮೇಲೆ ಹಲ್ಲೆ ಮಾಡಿದ ಜನರು ಕಂಗಾಲಾಗಿಬಿಟ್ಟರು. ಏನೋ ಬಹುದೊಡ್ಡ ತಪ್ಪು ಮಾಡಿದ್ದೇವೆನ್ನುವಂತೆ ದಮ್ಮಯ್ಯ ಗುಡ್ಡೆ ಹಾಕಿದರು. ಅವರಲ್ಲೇ ಒಬ್ಬಾತ `ಅಲ್ಲಾ ಮಾರಾಯ್ರೆ.. ನೀವು ಪೇಪರ್ರಿನವರು ಅಂತ ಹೇಳುತ್ತೀರಿ.. ಅದೆಂತ ಆ ಪೊಲೀಸರ ಥರ ಬಟ್ಟೆ ಹಾಕಿಕೊಂಡು ಬರುವುದು..? ನಿಮ್ಮನ್ನು ಪೊಲೀಸರು ಅಂದುಕೊಂಡೆವಲ್ಲ ಮಾರಾಯ್ರೆ...' ಎಂದ. ನನಗೆ ಒಮ್ಮೆ ಗೊಂದಲ ಮೂಡಿತು. ಅರೇ ಒಂದು ವೇಳೆ ನಾನು ಪೊಲೀಸನೇ ಆಗಿದ್ದರೆ ನನಗೆ ಹೊಡೆಯುತ್ತಿದ್ದರೇ? ಕೇವಲ ಪೊಲೀಸರು ತೊಡುವ ಬಟ್ಟೆಯ ತರಹದ್ದೇ ಬಟ್ಟೆ ನಾನು ತೊಟ್ಟು ಬಂದಿದ್ದಕ್ಕೆ ಹೊಡೆಯುತ್ತಾರೆಂದರೆ ಏನೋ ಸಮಸ್ಯೆ ಇದೆ ಎನ್ನುವುದು ಗೊತ್ತಾಯಿತು.
           ನನಗೆ ಆಗ ಸಂಪೂರ್ಣ ಅರಿವಾಗಿದ್ದೆಂದರೆ ಖಯಾಲಿಗೆ ಬಿದ್ದು ಮಿಲಿಟರಿಯವರು ಹಾಕಿಕೊಳ್ಳುತ್ತಾರಲ್ಲ ಅದೇ ರೀತಿಯ ಒಂದು ಜರ್ಕೀನ್ ಹಾಕಿಕೊಂಡು ಬಂದಿದ್ದೆ. ಅದನ್ನು ನೋಡಿ ನಾನು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿ ಎಂದುಕೊಂಡು ಹಲ್ಲೆ ಮಾಡಿದ್ದರು. ಆದರೆ ನನಗೆ ಅರಿವಾಗದೇ ಇದ್ದಿದ್ದು ಎಂದರೆ ಪೊಲೀಸರ ಮೇಲೆ ಇವರು ಯಾಕೆ ಹಲ್ಲೆ ಮಾಡಲು ಹೋಗಿದ್ದರು ಎನ್ನುವುದು. ಓಹೋ ಇದೇ ಕಾರಣಕ್ಕೆ ನಾನು ಬರುವ ದಾರಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಒಬ್ಬನೇ ಒಬ್ಬ ಸಿಬ್ಬಂದಿಯೂ ಕಾಣಿಸಲಿಲ್ಲ ಎಂದುಕೊಂಡೆ.
            ನನ್ನ ಮೇಲೆ ಹಲ್ಲೆ ಮಾಡಿದವರಲ್ಲೇ ಒಂದಿಬ್ಬರು ತಮ್ಮನ್ನು ಕ್ಷಮಿಸಿ ಎಂದು ಹೇಳಿದ್ದಷ್ಟೇ ಅಲ್ಲದೇ ನನ್ನ ಆದರಾತಿಥ್ಯಕ್ಕೆ ನಿಂತರು. ಹೊಡೆತ ತಿಂದಿದ್ದ ನೋವು ಮರೆಯುವಷ್ಟು ಪ್ರೀತಿಯಿಂದ ಮಾತನಾಡಿಸಿದರು. ಕೊನೆಗೆ ನಾನು ಎಲ್ಲರ ಬಳಿ ಮಾಹಿತಿ ಪಡೆಯಲು ಮುಂದಾದೆ. ಕಾಡು ತಿರುಗಿಸಿ ಎಂದೆ. ಗುಂಡಿನ ಕಾಳಗ ನಡೆದ ಸ್ಥಳವನ್ನು ನೋಡಬೇಕಲ್ಲ ಎಂದೂ ಹೇಳಿದೆ. ಎಲ್ಲರೂ ಮೌನವಹಿಸಿದರು. ಕೊನೆಗೆ ನಾನು ಸಾಕಷ್ಟು ಒತ್ತಾಯ ಮಾಡಿದ ನಂತರ ಒಂದಿಬ್ಬರು ಮಾತಿಗೆ ನಿಂತರು. ನಾನು ಚಕ್ಕನೆ ಅವರ ಪೋಟೋ ತೆಗೆದುಕೊಂಡೆ. ಅವರಲ್ಲೊಬ್ಬ `ಹೋಯ್.. ಇಲ್ಲಿ ಬನ್ನಿ ಮಾರಾಯ್ರೆ.. ನಾವು ಆ ಗುಂಡಿನ ಕಾಳಗ ನಡೆದ ಸ್ಥಳಕ್ಕೆ ಹೋಗಿ ಬರುವಾ.. ಆಮೇಲೆ ಎಲ್ಲ ಮಾಹಿತಿ ತಗೆದುಕೊಂಡರೆ ಆಯಿತು..' ಎಂದ. ನಾನು ಆತನನನ್ನು ಹಿಂಬಾಲಿಸಿದೆ.
            ದೊಡ್ಡದೊಂದು ಕಲ್ಲುಗುಡ್ಡ, ದೈತ್ಯ ಕಾನನಗಳು, ಗವ್ವೆನ್ನುವ ಕಾಡು, ಕಾಡುವ ವನ್ಯ ಜೀವಿಗಳು, ಎದೆಯೆತ್ತರದ ದರೆಗಳು.. ಬಹುಶಃ ಗುಂಡಿನ ಚಕಮಕಿ ನಡೆದ ಸ್ಥಳದ ಚಹರೆ ಹೀಗೆಯೇ ಇರಬೇಕೇನೋ ಎಂದುಕೊಂಡು ನಾನು ಆತನ ಹಿಂದಕ್ಕೆ ಹೆಜ್ಜೆ ಹಾಕುತ್ತಿದ್ದೆ. ಮಾತಿನ ನಡುವೆ ನನ್ನನ್ನು ಸ್ಥಳ ವೀಕ್ಷಣೆಗೆ ಕರೆದೊಯ್ಯುತ್ತಿದ್ದವರ ಬಳಿ `ಯಜಮಾನ್ರೆ.. ನಿಮ್ಮ ಹೆಸರೆಂತದ್ದು..?' ಎಂದು ಕೇಳಿದ್ದೆ.
            ತಕ್ಷಣವೇ ಆತ `ಹೋಯ್.. ನಿಮ್ಮದು ಶಿರಸಿಯಾ?' ಎಂದು ಕೇಳಿದವನೇ ತನ್ನ ಹೆಸರು ಕೃಷ್ಣ ಶೆಟ್ಟಿ ಎಂದೂ ತಿಳಿಸಿದ. ಊರಿನಲ್ಲಿ 25 ಮನೆಗಳಿವೆ. ಒಂದು ಶಾಲೆಯಿದೆ. ಎಂದೆಲ್ಲ ಹೇಳಿದವನು ಊರಿನ ಮಾಹಿತಿಯನ್ನು ಕೊಡುತ್ತ ಹೋದ. ಆತನ ಮಾತಿನ ಪ್ರಕಾರವೇ ಆ ಊರು ನಿಸರ್ಗದ ನಡುವೆಯಿದ್ದರೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ನಾಗರಿಕ ಜಗತ್ತಿನ ಯಾವುದೇ ಸೌಲಭ್ಯಗಳು ಉರಿಗೆ ಸಿಗುತ್ತಿಲ್ಲ. ವಿದ್ಯುತ್, ರಸ್ತೆ, ದೂರವಾಣಿಗಳಿಂದ ಊರು ದೂರವಾಗಿದೆ. ಈ ಪ್ರದೇಶದಲ್ಲಿ ಹೇರಳ ನೀರಿದ್ದರೂ ಸದ್ಬಳಕೆ ಸಾಧ್ಯವಾಗುತ್ತಿಲ್ಲ. ಕಾಡಿನ ಕಾರಣ ವನ್ಯ ಮೃಗಗಳ ಹಾವಳಿ ಹೆಚ್ಚಿದೆ ಎನ್ನುವುದು ತಿಳಿಯಿತು.
            ಇಂತಹ ಊರಿನ ಸಮಸ್ಯೆ ಮುಂದಿಟ್ಟುಕೊಂಡು ನ್ಯಾಯ ಕೊಡಿಸುವ ಮಾತುಗಳನ್ನಾಡುತ್ತಲೇ ನಕ್ಸಲರು ಕಾಲಿಟ್ಟರು.  ಊರಿನಲ್ಲಿ ಒಂದೆರಡು ಜನ ಓದಿಕೊಂಡವರು ಅವರಿಗೆ ಸಹಾಯವನ್ನೂ ಮಾಡಿದರು. ಒಂದೆರಡು ಮೂರು ಸಾರಿ ಊರಿನಲ್ಲಿಯೇ ನಕ್ಸಲರ ಸಭೆಗಳೂ ನಡೆದವು ಎನ್ನುವ ಮಾಹಿತಿಯನ್ನೂ ಕೃಷ್ಣಯ್ಯ ಶಟ್ಟರು ನೀಡಿದರು. ಹೀಗೆಂದವರೇ `ಈ ನಕ್ಸಲರು ಬಂದಿದ್ದರಿಂದಲೇ ನಮ್ಮೂರಿನ ಶಾಂತಿ-ನೆಮ್ಮದಿಗಳು ಕಳೆದು ಹೋದವು. ಅವರ ಹಿಂದೆ ನಕ್ಸಲ್ ನಿಗ್ರಹ ಪಡೆಯವರೂ ಬಂದವು. ಬೆನ್ನು ಬೆನ್ನಿಗೆ ಗುಂಡಿನ ಕಾಳಗಗಳೂ ನಡೆಯಲು ಆರಂಭಿಸಿದವು. ಇವರು ಅವರನ್ನು ಬೆನ್ನಟ್ಟುವುದು, ಅವರು ಇವರನ್ನು ಅಟ್ಟಿಸಿಕೊಂಡು ಹೋಗುವುದು ನಡೆಯಿತು. ಹೀಗಿದ್ದಾಗಲೇ ಒಂದು ಸಾರಿ ನಕ್ಸಲರು ನಮ್ಮೂರಲ್ಲೇ ಪಕ್ಕದ ಮನೆಯ ಒಬ್ಬರನ್ನು ಕೈ ಕತ್ತರಿಸಿದ್ದರು. ಕಾರಣ ಕೇಳಿದಾಗ ನಕ್ಸಲ್ ನಿಗ್ರಹ ಪಡೆಗೆ ಮಾಹಿತಿ ರವಾನೆ ಮಾಡುತ್ತಿದ್ದರು ಎಂದು ಹೇಳಿದರು. ನೆಮ್ಮದಿಯಿಂದ ನಮ್ಮೂರು ಭಯ-ಭೀತಿಯಿಂದ ಬಸವಳಿದಿದ್ದೇ ಆವಾಗ.. ಈ ಊರು ನಮಗೀಗ ಸಾಕೆನ್ನಿಸಿಬಿಟ್ಟಿದೆ.. ನೋಡಿ..' ಎಂದಿದ್ದರು. ನಾನು ಮೌನದಿಂದ ಅವರ ಮಾತನ್ನು ಆಲಿಸತೊಡಗಿದ್ದೆ.
           `ಕಳೆದೊಂದು ವರ್ಷದಿಂದ ಇದೇ ಆಗಿಬಿಟ್ಟಿದೆ ನೋಡಿ. ಇದ್ದೊಂದು ಶಾಲೆಯೂ ಮುಚ್ಚಿ ಹೋಗಿದೆ. ಶಾಲೆ ಕಲಿಸಲು ಬರುತ್ತಿದ್ದ ಶಿಕ್ಷಕರು ಹೆದರಿಕೊಂಡು ಈ ಊರಿನಿಂದಲೇ ವರ್ಗ ಮಾಡಿಸಿಕೊಂಡು ಹೋಗಿದ್ದಾರೆ. ಕಾಡಿನ ಮಧ್ಯ ಆರಾಮಾಗಿ ಬದುಕುತ್ತಿದ್ದವರು ರಾತ್ರಿ ಹಗಲು ಎನ್ನದೇ ಗುಂಡಿನ ಸದ್ದನ್ನು ಕೇಳುವಂತಾಗಿದೆ ನೋಡಿ.. ಯಾಕಾದರೂ ಹೀಗಾಗುತ್ತದೆಯೋ ಎಂದುಕೊಂಡರೆ ಅದೋ ನಿನ್ನೆ ಬೇರೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಎರಡು ಪ್ರದೇಶಗಳಲ್ಲಿ ಗುಂಡಿನ ಕಾಳಗ ನಡೆದಿದೆ. ಪೊಲೀಸರಿಗೂ ಗುಮಡು ತಾಗಿದೆ...' ಎಂದು ಹೇಳುವಷ್ಟರಲ್ಲಿ ಚಿಕ್ಕದೊಂದು ಗದ್ದೆ ಬಯಲು ಸಿಕ್ಕಿತು. ಶೆಟ್ಟರು ಅಲ್ಲಿಯೇ ಒಂದು ಕಡೆ ಕರೆದೊಯ್ದು ನಿಲ್ಲಿಸಿ `ಇದೇ ಜಾಗ ನೋಡಿ..' ಎಂದರು.
            `ನಾನು ಸುತ್ತಮುತ್ತ ಹುಡುಕಾಡಿದೆ. ಗುಂಡಿನ ಕಾಳಗ ನಡೆಯುವ ಸ್ಥಳ ಹಾಗಿರುತ್ತದಂತೆ ಹೀಗಿರುತ್ತದಂತೆ ಎಂದೆಲ್ಲ ಕೇಳಿದವನನ್ನು ಗದ್ದೆ ಬಯಲಿನಲ್ಲಿ ನಿಲ್ಲಿಸಿ ಇಗೋ ಇಲ್ಲಿದೆ ನೋಡಿ ಎಂದು ತೋರಿಸುತ್ತಿದ್ದರೆ ಜಾಗವನ್ನು ನೋಡಿದ ನನಗೆ ಭ್ರಮನಿರಸನವಾಗಿತ್ತು. `ಎಲ್ಲಿ..?' ಎಂದೆ.. ಕೆಳಗೆ ತೋರಿಸಿ `ಇದೇ ನೋಡಿ ಇಲ್ಲೇ ಒಬ್ಬನು ಸತ್ತಿದ್ದು, ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಬಲಿಯಾಗಿದ್ದು..' ಎಂದ. ಅಲ್ಲೊಂದಷ್ಟು ಹೊಂಡಗಳು ಬಿದ್ದಿದ್ದವು. ರಕ್ತ ಕೂಡ ಬಿದ್ದಿತ್ತು. ಮಹಜರು ಮಾಡಿದಂತಹ ಗುರುತುಗಳಿದ್ದವು. ನಾನು ನೋಡಿ ಚಕಚಕನೆ ಪೋಟೋ ಕ್ಲಿಕ್ಕಿಸತೊಡಗಿದೆ. ಶೆಟ್ಟರು ಜಾಗ ತೋರಿಸುತ್ತ ನಿಂತಿದ್ದರು. `ಅದು ಸರಿ  ಶೆಟ್ಟರೆ.. ಈ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ..' ಎಂದವನೇ `ನನಗೆ ಇನ್ನೂ ಅರ್ಥ ಆಗದೇ ಇದ್ದಿದ್ದು ಅಂದರೆ ನೀವೆಲ್ಲ ಯಾಕೆ ನನ್ನನ್ನು ಹಲ್ಲೆ ಮಾಡಲು ಯತ್ನಿಸಿದ್ದು? ಕೊನೆಗೆ ಕೇಳಿದಾಗ ಪೊಲೀಸರು ಎನ್ನುವ ಗುಮಾನಿ ಮೇಲೆ ಹಲ್ಲೆಗೆ ಯತ್ನಿಸಿದೆ ಎಂದರಲ್ಲ? ಅಂತದ್ದೆಂತಹ ಕಾರಣ ಇದೆ? ಪೊಲೀಸರು ಏನಾದರೂ ಮಾಡಿದ್ದಾರಾ ನಿಮಗೆ..? ಏನೋ ಗೊಂದಲವಾಗುತ್ತಿದೆಯಲ್ಲ..? ಏನದು ಹೇಳಿ... ಬಿಡಿಸಿ ಹೇಳಿ..' ಎಂದೆ.
          ಕೃಷ್ಣ ಶೆಟ್ಟರು ನಿಧಾನವಾಗಿ ಹೇಳುತ್ತ ಹೋದರು. ಕೇಳುತ್ತಿದ್ದ ನಾನು ಮೈತುಂಬ ಬೆವರುತ್ತ ನಿಂತೆ. ಮನಸ್ಸಿನಲ್ಲಿ ಏನೋ ತಳಮಳ ಶುರುವಾಯಿತು.

***
         ಅಪ್ಪು ಶೆಟ್ಟರು ನಮ್ಮೂರಿನವರೇ. ಮೂಲ ಕುಂದಾಪುರ. ಇಲ್ಲಿಗೆ ಬಂದು ಉಳಿದಿದ್ದಾರೆ. ಇಲ್ಲಿಗೆ ಬಂದ ಮೇಲೆ ಅವರ ಅದೃಷ್ಟ ಖುಲಾಯಿಸಿ ಒಂದೆಕರೆ ಜಮೀನು ಮಾಡಿಕೊಂಡಿದ್ದಾರೆ. ಜಮೀನಿನಲ್ಲಿ ತೆಂಗು, ಅಡಿಕೆ ಮರಗಳಿವೆ. ಒಳ್ಳೆಯ ಫಸಲು ಕೂಡ ಬರುತ್ತಿದೆ. ಹಾಗೆ ನೋಡಿದರೆ ನಮ್ಮೂರಲ್ಲಿ ಅಪ್ಪು ಶೆಟ್ಟರೇ ಎಲ್ಲರಿಗಿಂತ ಸ್ವಲ್ಪ ಅನುಕೂಲಸ್ಥರು ಎನ್ನಬಹುದು. ಇವರ ಒಬ್ಬನೇ ಮಗ ನಿರಂಜನ. ಈ ನಿರಂಜನ ಇದ್ದಾನಲ್ಲ ಅವನೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಊರಿನವರಿಗೆ ಪ್ರೀತಿ ಪಾತ್ರನಾಗಿ ಬದುಕಿದವನು ನಿರಂಜನ. ನಮ್ಮೂರಿನಲ್ಲಿ ಮೊಟ್ಟ ಮೊದಲು ಕಾಲೇಜು ಮೆಟ್ಟಿಲು ಹತ್ತಿದವನೆಂದರೆ ಇದೇ ನಿರಂಜನನೇ. ನಮ್ಮೂರಿನಿಂದಲೇ ಪ್ರತಿದಿನ ಕಷ್ಟಪಟ್ಟು ಕಾಲೇಜಿಗೆ ಹೋಗಿ ಬಂದು ಮಾಡುತ್ತಿದ್ದ. ಇದು ಮೂರ್ನಾಲ್ಕು ವರ್ಷದ ಹಿಂದಿನ ಮಾತು. ಆಮೇಲೆ ಕಾಲೇಜು ಮುಗಿಯಿತು. ಅಪ್ಪು ಶೆಟ್ಟರ ಅಣತಿಯಂತೆ ಕಾಲೇಜು ಮುಗಿದ ಮೇಲೆ ಮನೆಯಲ್ಲೇ ಉಳಿದು ಜಮೀನು ನೋಡಿಕೊಳ್ಳುವ ಕಾಯಕದಲ್ಲಿ ನಿರತನಾಗಿದ್ದ.
           ಹೀಗಿದ್ದಾಗಲೇ ನಮ್ಮೂರಿಗೆ ನಕ್ಸಲರು ಮೊದಲು ಕಾಲಿರಿಸಿದರು. ಯಾವು ಯಾವುದೋ ಸಮಸ್ಯೆಗಳು, ಕಾರಣಗಳನ್ನು ಮುಂದಿಟ್ಟುಕೊಂಡು ನಮ್ಮೂರಿನ ಸುತ್ತಮುತ್ತ ಒಡಾಡತೊಡಗಿದವರು ನಕ್ಸಲರು. ಇವರನ್ನು ಮೊಟ್ಟ ಮೊದಲ ಬಾರಿಗೆ ವಿರೋಧಿಸಿದವನೇ ನಮ್ಮ ನಿರಂಜನ. ನಮ್ಮೂರಿನಲ್ಲಿ ನಿರಂಜನ ಕಾಲೇಜು ಮೆಟ್ಟಿಲು ಹತ್ತಿದ ನಂತರ ನಾಲ್ಕಾರು ಜನ ಹುಡುಗರು ಕಾಲೇಜಿನಲ್ಲಿ ಓದಿದ್ದಾರೆ. ಆದರೆ ಅವರೆಲ್ಲ ನಕ್ಸಲರ ಮರುಳು ಮಾತಿಗೆ ಬಲಿಯಾಗಿ ಅವರ ಜೊತೆಗೆ ಹೊರಟು ನಿಂತಿದ್ದಾಗ ನಿರಂಜನನೇ ತಡೆದಿದ್ದ. ಒಂದೆರಡು ಸಾರಿ ನಿರಂಜನನಿಗೂ ಹಾಗೂ ನಕ್ಸಲರ ಗುಂಪಿನ ನಡುವೆಯೂ ಘರ್ಷಣೆಗಳಾಗಿದ್ದವು. ನಕ್ಸಲರು ಬಂದು ಒಂದೆರಡು ಸಾರಿ ನಿರಂಜನನನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿ ಹೋಗಿದ್ದರು. ಆದರೆ ನಿರಂಜನ ಅದಕ್ಕೆ ಸೊಪ್ಪು ಹಾಕಿರಲಿಲ್ಲ.
           ನಮ್ಮೂರಲ್ಲಿ ಇರುವ ಏಕೈಕ ಶಾಲೆಗೆ ಶಿಕ್ಷಕರ ಕೊರತೆ ಮೊದಲಿನಿಂದಲೂ ಇದೆ. ಕಾಡಿನ ನಡುವೆ ಇರುವ ಈ ಶಾಲೆಗೆ ಶಿಕ್ಷಕರು ವರ್ಗವಾಗಿ ಬಂದರೂ ಮೂರು ತಿಂಗಳಿಗಿಂತ ಹೆಚ್ಚಿನ ಕಾಲ ಇರುವುದೇ ಇಲ್ಲ. ಕಾಡು ಹಾಗೂ ಕೊಂಪೆಯ ಕಾರಣ ಶಿಕ್ಷಕರು ಇಲ್ಲಿಂದ ಕಾಲ್ಕಿತ್ತಿದ್ದೇ ಹೆಚ್ಚು. ಹೊರ ಜಗತ್ತಿನ ಸಂಪರ್ಕವಿಲ್ಲ. ಆಧುನಿಕ ಯಂತ್ರಗಳಿಲ್ಲ. ದೂರವಾಣಿಯಿಲ್ಲ. ವಿದ್ಯುತ್ ಕೂಡ ಕಂಬ, ತಂತಿಗಳಿವೆ. ಆದರೆ ಆಗೀಗ ವಿದ್ಯುತ್ ಬಂದರೆ ಬಂದೀತು ಅಷ್ಟೆ ಎನ್ನುವಂತಹ ವಾತಾವರಣ.ಇಂತಹ ಊರಿನಲ್ಲಿ ಯಾವ ಮಾಸ್ತರ್ರು ಉಳಿಯುತ್ತಾರೆ ಹೇಳಿ. ಮಾಸ್ತರ್ ಊರು ಬಿಟ್ಟರೆ ನಿರಂಜನನಿಗೆ ಶಾಲೆಯ ಕೆಲಸ. ಆತನೇ ಮಕ್ಕಳನ್ನು ಕೂರಿಸಕೊಂಡು ವಿದ್ಯೆ ಕಲಿಸುವ ಕಾರ್ಯ ಮಾಡುತ್ತಿದ್ದ.
            ಹೀಗಿದ್ದಾಗ ನಕ್ಸಲರ ಕಾರುಬಾರು ನಮ್ಮೂರಲ್ಲಿ ಜೋರಾಯಿತು. ನಮ್ಮೂರಿನ ಒಂದೆರಡು ಮನೆಗಳವರು ಆಂತರಿಕವಾಗಿ ನಕ್ಸಲರಿಗೆ ಬೆಂಬಲವನ್ನೂ ನೀಡಲು ಆರಂಭಿಸಿದರು. ಹೀಗಿದ್ದಾಗ ಒಂದು ಸಾರಿ ನಕ್ಸಲರು ನಮ್ಮೂರಿನ ಶಾಲೆಯ ಆವರಣದಲ್ಲಿಯೇ ಸಭೆಯೊಂದನ್ನು ನಡೆಸಿದ್ದರು. ಇದರಿಂದ ಸಿಟ್ಟಾಗಿದ್ದ ನಿರಂಜನ ನಕ್ಸಲರನ್ನು ಊರಿಗೆ ಬರದಂತೆ ಮಾಡಲು ಚಿಂತಿಸಿ ನಕ್ಸಲ್ ನಿಗ್ರಹ ಪಡೆಗೆ ಮಾಹಿತಿ ನೀಡಿದ್ದ. ಬಹುಶಃ ನಿರಂಜನ ಹೇಳಿದ ನಂತರವೇ ಇರಬೇಕು ನಮ್ಮೂರಿಗೆ ನಕ್ಸಲ್ ನಿಗ್ರಹ ಪಡೆ ಕಾಲಿರಿಸಿದ್ದು. ಆನಂತರದ ದಿನಗಳಲ್ಲಿ ನಮ್ಮೂರು ದಿನವಹಿ ಗುಂಡಿನ ಕಾಳಗದ ಸದ್ದು ಕೇಳುವಂತಾಗಿದ್ದು.
          ನಕ್ಸಲ್ ನಿಗ್ರಹ ಪಡೆಯೇನೋ ಬಂದಿತು. ಅವರ ಹಿಂದೆ ಸಾಲು ಸಾಲು ಅಧಿಕಾರಿಗಳು ಬಂದರು. ಅಧಿಕಾರಿಗಳ ಎದುರು ನಿರಂಜನ ನಮ್ಮೂರಿನ ಸಮಸ್ಯೆಗಳ ಕುರಿತು ತಿಳಿಸುತ್ತಲೇ ಹೋದ. ಅರ್ಜಿಗಳ ಮೇಲೆ ಅರ್ಜಿ ಕೊಡುತ್ತಲೇ ಹೋದ. ಆದರೆ ಆ ಅರ್ಜಿಗಳಿಗೆ ಯಾವುದೇ ಪುರಸ್ಕಾರ ಸಿಗಲಿಲ್ಲ. ಅವೆಲ್ಲಿ ಹೋದವೋ ಅರ್ಥವಾಗಲಿಲ್ಲ. ಒಂದು ಹಂತದಲ್ಲಿ ನಿರಂಜನ ರೋಸಿ ಹೋಗಿದ್ದಂತೂ ಹೌದು. ಹೀಗಿದ್ದಾಗಲೇ ನಿರಂಜನನ ಕಣ್ಣಿಗೆ ಒಂದು ದೊಡ್ಡ ಅಪರಾಧ ಜಗತ್ತು ಕಣ್ಣುಬಿಟ್ಟಿತ್ತು.
          ಊರಿಗೆ ಬಂದಿದ್ದ ನಕ್ಸಲ್ ನಿಗ್ರಹ ಪಡೆ ಕೇವಲ ನಕ್ಸಲರನ್ನು ಹೆಡೆಮುರಿ ಕಟ್ಟುವ ಕಾರ್ಯ ಮಾತ್ರ ಮಾಡುತ್ತಿರಲಿಲ್ಲ. ಬದಲಾಗಿ ಊರಿನಲ್ಲಿ ಇಲ್ಲ ಸಲ್ಲದ ಕಾರ್ಯಗಳಲ್ಲಿ ಅದು ತೊಡಗಿಕೊಳ್ಳಲಾರಂಭಿಸಿತು. ಹಲವಾರು ಅಪರಾಧಿ ಕಾರ್ಯಗಳನ್ನು ನಡೆಸಲು ಶುರುಮಾಡಿತು. ಅದೊಂದು ದಿನ ನಿರಂಜನ ಕಣ್ಣಿಗೆ ಈ ಚಟುವಟಿಕೆಗಳು ಬಿದ್ದವು.
         ನಮ್ಮೂರಿನ ಫಾಸಲೆಯಲ್ಲಿ ಆಯುರ್ವೇದ ಗಿಡಮೂಲಿಕೆಗಳು ಹೇರಳವಾಗಿದೆ. ನಿರಂಜನನೇ ಹೇಳಿದಂತೆ ಜಗತ್ತಿನ ಯಾವ ಮೂಲೆಯಲ್ಲೂ ದೊರಕದಂತಹ ಅಪರೂಪದ ವನಸ್ಪತಿಗಳು ಇಲ್ಲಿ ಸಿಗುತ್ತವಂತೆ. ಆತ ಹೇಳಿ ಖುಷಿಪಟ್ಟಿದ್ದ. ನಾವೂ ಒಂದು ರೀತಿಯಲ್ಲಿ ಹೆಮ್ಮೆ ಪಟ್ಟುಕೊಂಡಿದ್ದೆವು. ನಕ್ಸಲ್ ನಿಗ್ರಹ ಪಡೆ ಇಲ್ಲಿಗೆ ಬಂದಿತ್ತಲ್ಲ. ಬಂದ ಒಂದೆರಡು ತಿಂಗಳ ಕಾಲ ಸುಮ್ಮನಿತ್ತು. ಕೇವಲ ನಕ್ಸಲ್ ನಿಗ್ರಹದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿತ್ತು. ಆದರೆ ಕಾಲಕ್ರಮೇಣ ಈ ಪಡೆಯ ಬೇರೆ ಕೆಲಸಗಳೂ ಆರಂಭಗೊಂಡವು. ಪಡೆಯಲ್ಲಿದ್ದ ಒಂದೆರಡು ಅಧಿಕಾರಿಗಳು ನಿಧಾನವಾಗಿ ನಮ್ಮೂರಿನಲ್ಲಿ ಸಿಗುತ್ತಿದ್ದ ಆಯುರ್ವೇದ ಔಷಧಿಗಳನ್ನು ಕದ್ದು ಮಾರತೊಡಗಿದರು. ಮೊದ ಮೊದಲಿಗೆ ಒಂದೊಂದೇ ಗಿಡ ಕಿತ್ತು ಒಯ್ಯಲು ಆರಂಭಿಸಿದ ಅವರು ನಂತರ ತಮ್ಮ ಜೀಪು ಹೊರಟಾಗಲೆಲ್ಲ ರಾಶಿ ರಾಶಿಗಟ್ಟಲೆ ಔಷಧಿಗಳನ್ನು ಒಯ್ಯ ತೊಡಗಿದ್ದರು. ನಿರಂಜನನ ಕಣ್ಣಿಗೆ ಇದು ಬಿದ್ದಿದ್ದು ಅದೊಂದು ದಿನ.
           ವಿಷಯ ಗೊತ್ತಾದ ನಂತರ ನಿರಂಜನ ನಕ್ಸಲ್ ನಿಗ್ರಹ ಪಡೆಯ ಈ ಕಾರ್ಯವನ್ನು ವಿರೋಧಿಸಿದ. ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳ ಬಳಿ ಮಾತನಾಡಿದ. ಅವರು ಮಾಡುತ್ತಿದ್ದ ಈ ಕಾರ್ಯದ ವಿರುದ್ಧ ಸೂಕ್ಷ್ಮವಾಗಿ ಎಚ್ಚರಿಕೆಯನ್ನೂ ನೀಡಿದ. ಪರಿಣಾಮವಾಗಿ ಆಯುರ್ವೇದ ಔಷಧಿ ಕದ್ದು ಮಾರಾಟ ಮಾಡುವುದು ನಿಲ್ಲುವುದಕ್ಕಿಂತ ಹೆಚ್ಚಾಗಿ ನಿರಂಜನನ ವಿರುದ್ಧ ಅಧಿಕಾರಿಗಳು ಸಿಟ್ಟಾದರೆ ಎಂದೇ ಹೇಳಬಹುದು. ಆಯುರ್ವೇದ ಔಷಧಿಗಳನ್ನು ಅಧಿಕಾರಿಗಳು ಕದ್ದೊಯ್ಯುತ್ತಿದ್ದ ಸಂದರ್ಭದಲ್ಲಿ ಒಂದೆರಡು ಬಾರಿ ಅವರನ್ನು ಅಡ್ಡಗಟ್ಟಿ ಹಿಡಿದ. ಆ ನಂತರವಂತೂ ಆ ಅಧಿಕಾರಿಗಳ ಸಿಟ್ಟು ತಾರಕಕ್ಕೆ ಏರಿತು ಎಂದೇ ಹೇಳಬಹುದು.
             ಹೀಗಿದ್ದಾಗ ಈಗೊಂದು ನಾಲ್ಕು ದಿನಗಳ ಹಿಂದೆ ನಮ್ಮೂರ ಫಾಸಲೆಯಲ್ಲಿ ನಕ್ಸಲರು ಕಾಣಿಸಿಕೊಂಡರು. ಆ ವಿಷಯ ನಕ್ಸಲ್ ನಿಗ್ರಹ ಪಡೆಗೆ ತಿಳಿಯಿತು. ಅವರು ಬಂದು ಇಲ್ಲಿ ಕೂಂಬಿಂಗ್ ಮಾಡತೊಡಗಿದರು. ಬಂದವರು ತಮಗೆ ಬೇಕಾದ ಆಯುರ್ವೇದ ಔಷಧಿಗಳನ್ನು ಸಂಗ್ರಹ ಮಾಡಲು ಆರಂಭಿಸಿದರು. ನಿರಂಜನನಿಗೂ ಇದು ತಿಳಿಯಿತು. ಆತ ಅವರನ್ನು ತಡೆಯಲು ಇದೇ ಗದ್ದೆ ಬಯಲಿಗೆ ಬಂದಿದ್ದ. ಹೀಗಿದ್ದಾಗಲೇ ನಿಗ್ರಹ ಪಡೆಯ ಕಣ್ಣಿಗೆ ನಕ್ಸಲರು ಕಾಣಿಸಿಕೊಂಡಿದ್ದರು. ಅದೋ ನೋಡಿ ಎಂದು ಕೃಷ್ಣ ಶೆಟ್ಟರು ನನಗೆ ತೋರಿಸಿದರು. ಒಂದಷ್ಟು ಮರಗಳಿದ್ದ ಜಾಗ ಕಾಣಿಸಿತು. ಅಲ್ಲೇ ನಕ್ಸಲರು ಕಣ್ಣಿಗೆ ಬಿದ್ದಿದ್ದು. ಅದೇ ಸಂದರ್ಭದಲ್ಲಿ ಫೈರಿಂಗ್ ಕೂಡ ಶುರುವಾಯಿತು. ಇತ್ತಂಡಗಳೂ ಗುಂಡಿನ ಚಕಮಕಿ ನಡೆದೇ ಬಿಟ್ಟವು.
           ಹೀಗಿದ್ದಾಗಲೇ ಅದ್ಯಾವನೋ ಒಬ್ಬ ಅಧಿಕಾರಿಗೆ ನಿರಂಜನನ ವಿರುದ್ಧ ಭಾರಿ ಸಿಟ್ಟಿತ್ತು. ತಾವು ಆಯುರ್ವೇದ ಔಷಧಿ ಮಾರುವುದನ್ನು ತಡೆಯುತ್ತಾನಲ್ಲ. ಈತನಿಗೊಂದು ಗತಿ ಕಾಣಿಸಬೇಕು. ಮೇಲಧಿಕಾರಿಗಳಿಗೆ ಕಂಪ್ಲೇಂಟ್ ಮಾಡುವ ಇವನನ್ನು ಮಟ್ಟ ಹಾಕಬೇಕು ಎಂದುಕೊಂಡ ಆತ ಏಕಾ ಏಕಿ ನಿರಂಜನನ ಮೇಲೆ ಗುಂಡು ಹಾರಿಸಿಬಿಟ್ಟ.. ಒಂದೇ ಗುಂಡು ನಿಂರಜನನ ಪ್ರಾಣ ಪಕ್ಷಿ ಹಾರಿಹೋಗಿತ್ತು.. ಎಂದವರೇ ಕೃಷ್ಣ ಶೆಟ್ಟರು ಕಣ್ಣೀರುಗರೆಯಲು ಆರಂಭಿಸಿದರು.
         ನನಗೆ ಆಘಾತವಾಗಿತ್ತು. ಟಿವಿ ಚಾನಲ್ ಬಿತ್ತರಿಸಿದ ವರದಿಯಲ್ಲಿ ಇಬ್ಬರು ನಕ್ಸಲರು ಸತ್ತಿದ್ದಾರೆ ಎಂದಿತ್ತು. ಆದರೆ ಇಲ್ಲಿ ಸತ್ತ ಇಬ್ಬರ ಪೈಕಿ ಒಬ್ಬ ನಿರಪರಾಧಿ. ನಕ್ಸಲನೇ ಅಲ್ಲ. ಒಬ್ಬ ನಕ್ಸಲನನ್ನು ಪೊಲೀಸರು ಕೊಂದಿದ್ದು ಖರೆಯಾಗಿದ್ದರೂ ಇನ್ನೊಬ್ಬನನ್ನು ಬೇಕಂತಲೇ ಹತ್ಯೆ ಮಾಡಿದ್ದರು. ಛೇ ಹೊರ ಜಗತ್ತಿನಲ್ಲಿ ಸುಳ್ಳು ಸುದ್ದಿ ಬಿತ್ತರವಾಗುತ್ತಿದೆಯಲ್ಲ.. ಎಂದುಕೊಂಡು ಚಡಪಡಿಸಿದೆ.
         ಸಾವರಿಸಿಕೊಂಡ ಕೃಷ್ಣ ಶೆಟ್ಟರು ಮಾತು ಮುಂದುವರಿಸಿದರು. ನಕ್ಸಲ್ ನಿಗ್ರಹ ಪಡೆಯವರೇ ನಿರಂಜನನ್ನು ಹತ್ಯೆ ಮಾಡಿದರು ಎನ್ನುವ ಸುದ್ದಿ ಊರಿನ ತುಂಬ ಕಾಡ್ಗಿಚ್ಚಿನಂತೆ ಹಬ್ಬಿತು. ನಾವೆಲ್ಲ ಬಂದು ಸೇರುವ ಹೊತ್ತಿಗೆ ಪಡೆಯವರು `ನಕ್ಸಲರೇ ಈತನನ್ನು ಹತ್ಯೆ ಮಾಡಿದ್ದಾರೆ..' ಎಂದು ಹಬ್ಬಿಸಲು ನೋಡಿದರು. ಆದರೆ ನಾವು ನಂಬಲಿಲ್ಲ. ನಮ್ಮೂರಿಗರು ನಕ್ಸಲ್ ನಿಗ್ರಹ ಪಡೆಯ ವಿರುದ್ಧ ಸಿಟ್ಟಿಗೆದ್ದರು. ತಕ್ಷಣವೇ ಮನೆ ಮನೆಯ ಜನರೆಲ್ಲ ಸಿಡಿದೆದ್ದರು. ಕೈಗೆ ಸಿಕ್ಕ ಆಯುಧಗಳನ್ನು ತಂದು ನಕ್ಸಲ್ ನಿಗ್ರಹ ಪಡೆಯ ಮೇಲೆ ಎರಗಿ ಬಿದ್ದರು. ಒಂದಿಬ್ಬರು ನಮ್ಮ ಕೈಲಿ ಏಟನ್ನೂ ತಿಂದರು. ನಾವು ಯಾವಾಗ ತಿರುಗಿಬಿದ್ದೆವೋ ಆಗ ನಮ್ಮೂರನ್ನು ಬಿಟ್ಟ ಹೋದವರು ಇದುವರೆಗೂ ಮರಳಿಲ್ಲ ನೋಡಿ. ಅದಕ್ಕೇ ನೀವು ಬಂದಿದ್ದನ್ನು ನೋಡಿ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳೇ ಮತ್ತೆ ಬಂದರೇನೋ ಎಂದು ನಾವು ಹಲ್ಲೆಗೆ ಮುಂದಾಗಿದ್ದು ಎಂದರು ಕೃಷ್ಣ ಶೆಟ್ಟರು.
          ನಾನು ಮೌನವಾಗಿ ನಿಂತಿದ್ದೆ. ನಮ್ಮೂರಿನ ಎಲ್ಲರ ಕನಸಿನಂತೆ ಬತ್ತದ ಚಿಲುಮೆಯಂತೆ ಇದ್ದ ನಿರಂಜನ. ಅಪ್ಪು ಶೆಟ್ಟರ ಏಕೈಕ ಮಗ. ಪಾ..ಪ ಅವರು ಈಗ ಹಾಸಿಗೆ ಹಿಡಿದು ಕುಳಿತಿದ್ದಾರೆ. ನಾಲ್ಕು ದಿನದ ಹಿಂದೆ ನಡೆದ ಈ ಘಟನೆ ನನಗೆ ಇನ್ನೂ ಕಣ್ಣ ಮುಂದೆ ಇದೆ. ಇನ್ನೂ ಇಪ್ಪತ್ತೈದು ಮೀರಿರಲಿಲ್ಲ. ಮದುವೆ ಮಕ್ಕಳನ್ನು ಕಾಣಬೇಕಿದ್ದ ಆತ. ಅನ್ಯಾಯ ತಡೆಯಲು ಹೋಗಿ ತಾನೇ ಅನ್ಯಾಯವಾಗಿ ಹತ್ಯೆಯಾಗಿದ್ದ. ನಕ್ಸಲರನ್ನು ನಿಗ್ರಹಿಸಬೇಕಿದ್ದವರು ನಿರಂಜನನ್ನು ಹತ್ಯೆ ಮಾಡಿದ್ದರು. ಆ ದಿನ ನಾವು ಗಲಾಟೆ ಮಾಡಿದ ನಂತರದಿಂದ ಇದುವರೆಗೂ ನಿಮ್ಮನ್ನು ಹೊರತು ಪಡಿಸಿದರೆ ಬೇರೆ ಯಾರೊಬ್ಬರೂ ಬರಲಿಲ್ಲ. ನಕ್ಸಲ್ ನಿಗ್ರಹ ಪಡೆಯವರು ಹಾಗಿರಲಿ ಆವತ್ತು ಓಡಿ ಹೋದ ನಕ್ಸಲರು ಇಂದಿನವರೆಗೆ ಈ ಕಡೆಗೆ ಬಂದಿಲ್ಲ ನೋಡಿ. ಬಂದರೆ ಅವರಿಗೂ ಗತಿ ಕಾಣಿಸುತ್ತೇವೆ.. ಎಂದರು ಕೃಷ್ಣ ಶೆಟ್ಟರು.
           ನಿಧಾನವಾಗಿ ಮರಳಿದ ನಾವು ಅಪ್ಪು ಶೆಟ್ಟರನ್ನು ನೋಡಿದೆ. ಹಾಸಿಗೆಯಲ್ಲಿ ಈಗಲೋ ಆಗಲೋ ಎನ್ನುವಂತೆ ಮಲಗಿದ್ದರು. ಮಗನನ್ನು ಕಳೆದುಕೊಂಡಿದ್ದ ದುಃಖ ಅವರನ್ನು ಬಾಧಿಸುತ್ತಿತ್ತು. ನಾನು ನಿಧಾನವಾಗಿ ಅವರ ಬಳಿ ಹೋದೆ ಸಮಾಧಾನ ಮಾಡಲು ಯತ್ನಿಸಿದೆ. ಆದರೆ ನಾನು ಸಮಾಧಾನ ಮಾಡಲು ಯತ್ನಿಸಿದಂತೆಲ್ಲ ಅವರು ಮತ್ತಷ್ಟು ದುಃಖಿತರಾಗುತ್ತಿದ್ದಂತೆ ಅನ್ನಿಸಿತು. ನಾನು ಎದ್ದು ಅಸಮಧಾನದಿಂದ ಅತ್ತಿತ್ತ ತಿರುಗಾಡಲು ಯತ್ನಿಸಿದೆ. ಅಷ್ಟರಲ್ಲಿ ನನ್ನ ಬಳಿಗೆ ಕೃಷ್ಣ ಶೆಟ್ಟರು ಬಂದರು. `ಈ ಘಟನೆ ನಡೆದಿದ್ದು ಯಾವಾಗ ಅಂದಿರಿ..?' ನಾನು ಕೇಳಿದೆ.
            `ನಾಲ್ಕು ದಿನಗಳ ಹಿಂದೆ..' ಎಂದರು ಕೃಷ್ಣ ಶೆಟ್ಟರು. `ಹೌದಾ... ಆದರೆ ಈ ಘಟನೆ ನಿನ್ನೆ ನಡೆದಿದೆ ಅಂತ ಟಿವಿಯಲ್ಲಿ ಬಂತಲ್ಲ.. ಅದನ್ನು ನೋಡಿದವನೇ ನಾನು ಇಲ್ಲಿಗೆ ಬಂದೆ..' ಎಂದೆ.
              `ಇಲ್ಲ.. ಇದು ನಾಲ್ಕು ದಿನದ ಹಿಂದೆ ನಡೆದಿದ್ದು.. ಅವರು ಘಟನೆ ಮುಚ್ಚಿ ಹಾಕಲು ಹೀಗೆ ಹೇಳಿರಬೇಕು ನೋಡಿ..' ಎಂದರು ಶೆಟ್ಟರು.
               `ಅವರು ನಿನ್ನೆ ಘಟನೆ ನಡೆದಿದ್ದು ಎಂದರು. ಜೊತೆಗೆ ನಕ್ಸಲ್ ನಿಗ್ರಹ ಪಡೆಯವರು ಇಬ್ಬರು ನಕ್ಸಲರನ್ನು ಹತ್ಯೆ ಮಾಡಿದ್ದಾರೆ ಎಂದೂ ಟಿವಿಯಲ್ಲಿ ಬರುತ್ತಿದೆ. ಎಂತಹ ಸುಳ್ಳಿ ಹೇಳಿದರಲ್ಲ. ಮೋಸಗಾರರು... ನಿರಪರಾಧಿ, ಅಮಾಯಕ ನಿರಂಜನನ್ನು ಹತ್ಯೆ ಮಾಡಿದ್ದಲ್ಲದೇ ಆತನಿಗೂ ನಕ್ಸಲ್ ಪಟ್ಟ ಕಟ್ಟಿದರಲ್ಲ.. ತಮ್ಮ ತಪ್ಪು ಮುಚ್ಚಿಕೊಳ್ಳುವುದಕ್ಕಾಗಿ ಹೇಗೆಲ್ಲ ಹೇಳಿದರಲ್ಲ.. ಛೇ..' ಎಂದೆ.
             ನನ್ನ ಮಾತನ್ನು ಕೇಳಿದ ಅಪ್ಪು ಶೆಟ್ಟರು ತಕ್ಷಣ ಹಾಸಿಗೆಯಿಂದ ಎದ್ದರು. ಮಗನ ಸಾವಿನಿಂದ ಕಂಗೆಟ್ಟಿದ್ದ ಅವರು ಈಗಲೋ ಆಗಲೋ ಎನ್ನುತ್ತಿದ್ದವರು ಥಟ್ಟನೆ ಎದ್ದು ನಿಂತರು. `ಹೋಯ್.. ನಿಮ್ ಹೆಸರೆಂತದು.. ಅದೆಂತದಾರೂ ಇರಲಿ.. ಇಲ್ನೋಡಿ.. ನನ್ನ ಮಗ ನಕ್ಸಲನಲ್ಲ.. ನನ್ನ ಮಗ ಯಾವ ಅಪರಾಧವನ್ನೂ ಮಾಡಿಲ್ಲ. ನನ್ನ ಮಗನನ್ನು ಕೊಂದವರು ನಕ್ಸಲ್ ನಿಗ್ರಹ ಪಡೆಯವರು.. ಅವರು ಮೋಸಗಾರರು. ಹೊರ ಜಗತ್ತಿನಲ್ಲಿ ನನ್ನ ಮಗ ನಕ್ಸಲ. ಆತನನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿದ್ದಾರಾ..' ಎಂದು ಕಟಕಟನೆ ಹಲ್ಲು ಕಡಿದರು. ಅಲ್ಲಿಯವರೆಗೂ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದ ಅವರಲ್ಲಿ ಇದ್ದಕ್ಕಿದ್ದಂತೆ ದೈತ್ಯ ಶಕ್ತಿ ಬಂದಿತ್ತು. ನನ್ನನ್ನು ಬಂದು ಭುಜವನ್ನು ಹಿಡಿದು.. `ನನಗೊಂದು ಸಹಾಯ ಮಾಡಿ.. ನೀವು ಈ ಕೂಡಲೇ ಹೊರಡಿ. ನಿಮ್ಮ ಜೊತೆಗೆ ನಾನೂ ಬರುತ್ತೇನೆ. ಅದ್ಯಾರ ಬಳಿ ಹೇಳುತ್ತೀರೋ.. ಏನು ಮಾಡುತ್ತೀರೋ ಗೊತ್ತಿಲ್ಲ. ನನ್ನ ಮಗ ನಕ್ಸಲನಲ್ಲ. ನನ್ನ ಮಗ ಅಪರಾಧಿಯಲ್ಲ ಎಂದು ಸಾಬೀತು ಮಾಡಬೇಕಿದೆ. ಜಗತ್ತಿಗೆ ಸಾರಿ ಹೇಳಬೇಕಿದೆ. ನನ್ನ ಮಗನನ್ನು ನಕ್ಸಲ್ ನಿಗ್ರಹ ಪಡೆ ವಿನಾಕಾರಣ, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಹತ್ಯೆ ಮಾಡಿತು ಎಂದು ಹೇಳಬೇಕಿದೆ. ನನ್ನನ್ನು ಕರೆದುಕೊಂಡು ಹೋಗಿ. ನಿಮ್ಮ ಕಾಲಿಗೆ ಬೀಳುತ್ತೇನೆ ಮಾರಾಯ್ರೆ.. ನನಗೆ ಇದೊಂದು ಸಹಾಯ ಮಾಡಿ..' ಎಂದು ದೀನನಾಗಿ ಹೇಳಿದರು.
           ನಾನು ತಕ್ಷಣ ಅಲ್ಲಿಂದ ಹೊರಡಲು ಅನುವಾದೆ. ನನ್ನ ಗಾಡಿಯನ್ನು ಮತ್ತೆ ಚಾಲೂ ಮಾಡಿದೆ. ಇಡೀ ಊರು ನನ್ನನ್ನು ತದೇಕಚಿತ್ತದಿಂದ ನೋಡುತ್ತಿದ್ದರೆ ಉಟ್ಟ ಬಟ್ಟೆಯಲ್ಲಿಯೇ ಅಪ್ಪು ಶೆಟ್ಟರು ವೇಗವಾಗಿ ಬಂದು ನನ್ನ ಗಾಡಿಯ ಹಿಂದಿನ ಸೀಟಿನಲ್ಲಿ ಕುಳಿತುಕೊಂಡರು. ನಾನು ಮತ್ತೆ ನಗರದ ಕಡೆಗೆ ಹೊರಟಿದ್ದೆ.

**
(ಈ ಕತೆಯನ್ನು ಬರೆದಿದ್ದು ಅ.14 ಹಾಗೂ 15ರಂದು ಶಿರಸಿಯಲ್ಲಿ)