(ಬಾಂಗ್ಲಾದೇಶದ ಗ್ರಾಮೀಣ ಪ್ರದೇಶ) |
`ಕಾಲ್ನಡಿಯೆಯೇ ಹಣೆಯಲ್ಲಿ ಬರೆದುಕೊಂಡಿದ್ದರೆ ಏನುಮಾಡಲಿಕ್ಕೆ ಬರುತ್ತದೆ ಹೇಳು..' ಎಂದಳು ಮಧುಮಿತಾ..
`ಹುಂ.. ಹೌದು ಕಣೆ.. ಬಾ ನಡೆಯೋಣ..ನಮ್ಮಲ್ಲಿ ಕಸುವು ಸಾಕಷ್ಟಿದೆ ಅಲ್ಲವಾ' ಎಂದು ಮತ್ತಷ್ಟು ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರು. ಅಲ್ಲೆಲ್ಲೋ ಒಂದು ಕಡೆಯಲ್ಲಿ ರಾತ್ರಿಯ ಊಟವನ್ನೂ ಮಾಡಿದರು.
`ವಿನು ನೀನು ನನಗೆ ಸಿಗದೇ ಇದ್ದರೆ ನನ್ನ ಗತಿ ಏನಾಗುತ್ತಿತ್ತೋ ಅಲ್ಲವಾ?.' ಎಂದಳು ಮಧುಮಿತಾ
`ಗೊತ್ತಿಲ್ಲ ಮಧು. ನೀನು ನನಗೆ ಸಿಕ್ಕಿದ್ದು ಮಾತ್ರ ನನ್ನ ಅದೃಷ್ಟ ಎಂದೇ ಹೇಳಬೇಕು ನೋಡು. ಕಾಲೇಜಿನ ದಿನಗಳಲ್ಲಿ ಒಂದಿಬ್ಬರು ಹುಡುಗಿಯರು ನನ್ನಲ್ಲಿ ಆಸಕ್ತಿಯನ್ನು ಮೂಡಿಸಿದ್ದರಾದರೂ ತೀರಾ ಇಷ್ಟಪಡುವಷ್ಟು ಹತ್ತಿರವಾಗಿರಲಿಲ್ಲ. ಆದರೆ ನೀನು ಮಾತ್ರ ಮೊದಲ ನೋಟದಲ್ಲೇ ನನಗಿಷ್ಟವಾಗಿಬಿಟ್ಟೆ. ನನ್ನ ಮನಸ್ಸನ್ನು ಆವರಿಸಿಕೊಂಡು ಬಿಟ್ಟಿದ್ದೆ. ನಿಜ ಹೇಳುತ್ತೇನೆ ಮಧು. ಆ ದಿನ ನಾವು ಕಾಂತಾಜಿ ದೇವಾಲಯಕ್ಕೆ ಹೋಗಿದ್ದೆವಲ್ಲ. ಆ ದಿನ ನನಗೆ ಹುಷಾರಿರಲಿಲ್ಲ ಎಂದು ಸೂರ್ಯನ್ ಹೇಳಿದ್ದ ನೆನಪಿದೆಯಾ? ಅದು ನಿಜವಲ್ಲ. ನಿನ್ನ ಜೊತೆ ಮಾತನಾಡಬೇಕು, ನಿನ್ನ ಸನಿಹ ಇರಬೇಕು ಎನ್ನುವ ಕಾರಣಕ್ಕಾಗಿ ಸೂರ್ಯನ್ ಮಾಡಿದ ಪ್ಲಾನ್ ಅದಾಗಿತ್ತು' ಎಂದ ವಿನಯಚಂದ್ರ.
`ನಂಗೊತ್ತಿತ್ತು. ಆ ದಿನ ನಿನಗೆ ಏನೂ ಆಗಿರಲಿಲ್ಲ ಎನ್ನುವುದು ನನಗೆ ತಿಳಿದಿತ್ತು. ನೀನು ನಾಟಕ ಮಾಡುತ್ತಿದ್ದುದೂ ನನಗೆ ತಿಳಿದಿತ್ತು ವಿನು. ಆದರೂ ನಾನು ನಿನ್ನ ಜೊತೆ ಮಾತನಾಡಿದೆ. ಬೆರೆತೆ. ಯಾಕೆ ಗೊತ್ತಾ, ಮೊದಲ ನೋಟದಲ್ಲಿಯೇ ನೀನೂ ನನಗೆ ಇಷ್ಟವಾಗಿಬಿಟ್ಟಿದೆ' ಎಂದು ಮಧುಮಿತಾ ಹೇಳಿದಾಗ ವಿನಯಚಂದ್ರ ಬೆರಗಾಗಿದ್ದ. ಯಲಾ ಇವಳಾ ಎಂದುಕೊಳ್ಳುತ್ತಿದ್ದಾಗಲೇ ಮಾತು ಮುಂದುವರಿಸಿದ ಮಧುಮಿತಾ `ನಾನು ಢಾಕಾ ಯುನಿವರ್ಸಿಟಿಯಲ್ಲಿ ಎಂಎಯನ್ನೂ ಮುಗಿಸಿದ್ದೇನೆ. ನನ್ನ ಕಾಲೇಜು ಬದುಕಿನಲ್ಲಿ ಅದೆಷ್ಟೋ ಜನರು ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಎಲ್ಲರೂ ಮುಸಲ್ಮಾನರು. ಯಾರೊಬ್ಬರನ್ನೂ ನಾನು ಇಷ್ಟ ಪಡಲಿಲ್ಲ ನೋಡು. ಒಂದಿಬ್ಬರಂತೂ ಅತ್ಯಾಚಾರ ಮಾಡಿಬಿಡುತ್ತೇನೆ ಎಂದೂ ಬೆದರಿಕೆ ಹಾಕಿದ್ದರು. ಮುಖಕ್ಕೆ ಆಸಿಡ್ ಎರಚುತ್ತೇನೆ ಎಂದೂ ಹೆದರಿಸಿದ್ದರು. ಆದರೆ ನಾನು ಮಾತ್ರ ಅವರ ಬೆದರಿಕೆಗೆ ಜಗ್ಗಿರಲಿಲ್ಲ, ಕುಗ್ಗಿರಲಿಲ್ಲ ನೋಡು. ಆದರೆ ಆ ದಿನ ಹೊಟೆಲಿನಲ್ಲಿ ಯಾವಾಗ ನಿನ್ನನ್ನು ಕಂಡೆನೋ ಆ ಕ್ಷಣವೇ ಇಷ್ಟವಾಗಿಬಿಟ್ಟೆ ವಿನು. ಬಾಗಿಲು ತೆಗೆದಾಕ್ಷಣ ನೀನು ನನ್ನನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದುದು ನನ್ನ ಅರಿವಿಗೆ ಬಂದಿತ್ತು. ನಾನೂ ಕೂಡ ಅಷ್ಟೇ ಅಚ್ಚರಿ, ಪ್ರೀತಿಯಿಂದ ನಿನ್ನನ್ನು ನೋಡಲು ಆರಂಭಿಸಿದ್ದೆ..' ಎಂದು ಮಧುಮಿತಾ ಹೇಳಿದಾಗ ಮಾತ್ರ ವಿನಯಚಂದ್ರ ಮತ್ತಷ್ಟು ಅಚ್ಚರಿ ಹಾಗೂ ಹೆಮ್ಮೆಯಿಂದ ವಿನಯಚಂದ್ರ ನೋಡಿದ್ದ.
`ಮಧು ನಾವು ಭಾರತವನ್ನು ತಲುಪುತ್ತೀವೋ ಇಲ್ಲವೋ ಗೊತ್ತಿಲ್ಲ. ಇಲ್ಲಿಯವರೆಗೆ ಒಟ್ಟಾಗಿದ್ದೇವೆ. ಪ್ರೇಮದ ರಸಾನುಭೂತಿಯನ್ನು ಅನುಭವಿಸಿದ್ದೇವೆ. ನಮ್ಮ ಮುಂದಿನ ಭವಿಷ್ಯ ಖಂಡಿತವಾಗಿಯೂ ನನಗೆ ಗೊತ್ತಿಲ್ಲ. ನಿನಗೂ ಗೊತ್ತಿಲ್ಲ. ಬದುಕಿದರೆ ಒಟ್ಟಿಗೆ ಒಬ್ಬರನ್ನೊಬ್ಬರು ಸದಾಕಾಲ ಪ್ರೀತಿಸುತ್ತಾ ಜೀವನ ನಡೆಸೋಣ. ಶ್ರೀಮಂತಿಕೆ ಬಂದರೆ ಬರಲಿ, ಬಡತನ ಇದ್ದರೆ ಇರಲಿ ನಮ್ಮ ಪ್ರೀತಿ ಮುಕ್ಕಾಗಬಾರದು. ಸದಾಕಾಲ ನಾವು ಪ್ರೀತಿಸುತ್ತ ಬದುಕಬೇಕು. ಸಾವು ಬರುತ್ತದೆ ಎಂದರೆ ಅದಕ್ಕೂ ಹೆದರಬಾರದು. ಒಂದೇ ಏಟಿಗೆ ಸತ್ತು ಹೋಗೋಣ.. ಅಲ್ಲವಾ' ಎಂದ ವಿನಯಚಂದ್ರ.
`ಗೆಲ್ಲುತ್ತೇವೆ ವಿನು ನಾವು. ಸಾವಿನ ಮಾತು ಯಾಕೆ ಈ ಸಂದರ್ಭದಲ್ಲಿ ಹೇಳು. ನಾವು ಗೆಲ್ಲೋಣ. ಭಾರತವನ್ನು ತಲುಪೋಣ. ಭಯ ಬೇಡ..' ಎಂದಿದ್ದಳು ಮಧುಮಿತಾ. ಇಬ್ಬರಲ್ಲೂ ಭಯದ ನಾಡಿನಲ್ಲಿಯೂ ಭರವಸೆಯ ಬೆಳಕು ಮೂಡಿತ್ತು.
ಚೀಲದಲ್ಲಿ ಊಟ, ತಿಂಡಿ ಕಡಿಮೆಯಾಗುತ್ತಿತ್ತು. ಹೆಚ್ಚೆಂದರೆ ಇನ್ನೊಂದು ದಿನಕ್ಕೆ ಸಾಕಾಗುವಷ್ಟು ಮಾತ್ರ ಬಾಕಿ ಉಳಿದಿತ್ತು. ಜೇಬಿನಲ್ಲಿ ದುಡ್ಡೂ ಕೂಡ ಅಗತ್ಯ ಪ್ರಮಾಣದಲ್ಲಿ ಇರಲಿಲ್ಲ. ಭಾರತವನ್ನು ತಲುಪಿದರೂ ಭಾರತದಲ್ಲಿ ಹೊಟ್ಟೆಗೇನು ಮಾಡುವುದು ಎನ್ನುವ ಸಮಸ್ಯೆ ಇವರ ತಲೆಯಲ್ಲಿ ಕೊರೆಯಲಾರಂಭಿಸಿತ್ತು. ಈಗ ಖರ್ಚು ಮಾಡುತ್ತಿರುವುದೇ ಕನಿಷ್ಟ ಪ್ರಮಾಣದ್ದು. ಆ ನಡುವೆಯೂ ದುಡ್ಡಿನ ಖರ್ಚನ್ನು ಇನ್ನಷ್ಟು ಕಡಿಮೆ ಮಾಡಲು ಚಿಂತಿಸಿದರು. ನೇರವಾದ ರಸ್ತೆ ಎಷ್ಟು ನಡೆದರೂ ಮುಗಿಯುವುದೇ ಇಲ್ಲವೇ ಎಂದುಕೊಂಡರು ಇಬ್ಬರೂ. ಅಷ್ಟರಲ್ಲಿ ಒಂದು ಜೀಪು ಅದೇ ಮಾರ್ಗದಲ್ಲಿ ಸಾಗಿ ಬಂದಿತು. ವಿನಯಚಂದ್ರ ಕೈ ಮಾಡುವ ಮೊದಲೇ ಜೀಪು ನಿಂತಿತು. ಜೀಪಿನಲ್ಲಿ ನಾಲ್ಕೈದು ಜನರಿದ್ದುದು ಕಂಡುಬರುತ್ತಿತ್ತು. ಜೀಪಿನ ಡ್ರೈವರ್ `ಬರ್ತೀರಾ ಸಾಬ್..' ಎಂದು ಕೇಳಿದ್ದ. ವಿನಯಚಂದ್ರನಿಗೆ ಹೋಗುವ ಮನಸ್ಸಿತ್ತು. ಮಧುಮಿತಾ ಯಾಕೋ ಹಿಂದೇಟು ಹಾಕಿದಳು. ವಿನಯಚಂದ್ರನನ್ನು ಕೈ ಹಿಡಿದು ಜಗ್ಗಿ ನಿಲ್ಲಿಸಿದಳು. ಮಧುಮಿತಾಳಿಗೆ ಯಾಕೋ ಅನುಮಾನ ಬಂದಂತಾಗಿತ್ತು. ಅಷ್ಟರಲ್ಲಿ ಜೀಪಿನಲ್ಲಿದ್ದವರೇ ಮೂರ್ನಾಲ್ಕು ಜನರು ಜೀಪಿನಿಂದ ಇಳಿದು ಬಂದು ಏಕಾಏಕಿ ವಿನಯಚಂದ್ರ ಹಾಗೂ ಮಧುಮಿತಾರನ್ನು ಹಿಡಿದು ಗಾಡಿಯೊಳಕ್ಕೆ ತುಂಬಿಕೊಂಡುಬಿಟ್ಟರು.
ಜೀಪಿನ್ನು ಏರುವಾಗ ವಿನಯಚಂದ್ರ ಹಾಗೂ ಮಧುಮಿತಾ ಸಾಕಷ್ಟು ಪ್ರತಿರೋಧ ಒಡ್ಡಿದರಾದರೂ ಅದು ಸಾಕಾಗಲಿಲ್ಲ. ಕೂಗಿದರು, ಗಲಾಟೆ ಮಾಡಿದರು. ಕೊಸರಾಡಿದರು. ಜೀಪಿನಲ್ಲಿದ್ದವರು ಅವ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಬಯಲಿನಲ್ಲಿ ನಡೆದು ಬರುತ್ತಿದ್ದ ಕಾರಣ ಇವರು ಕೂಗಿದ್ದು ಮತ್ಯಾರಿಗೂ ಕೇಳಿಸಲೇ ಇಲ್ಲ. ಯಾರವರು, ಯಾಕೆ ಇವರನ್ನು ಗಾಡಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ ಒಂದೂ ಅರ್ಥವಾಗಲಿಲ್ಲ. ವಿನಯಚಂದ್ರ ಜಬರದಸ್ತಿಗೆ ಇಳಿದ. ಜೀಪಿನಲ್ಲಿದ್ದವರು ವಿನಯಚಂದ್ರನ ಮುಖ ಮೂತಿ ನೋಡದೆ ನಾಲ್ಕೇಟು ಬಿಗಿದರು. ವಿನಯಚಂದ್ರ ಆ ಏಟಿಗೆ ತತ್ತರಿಸಿದ. ಪ್ರಜ್ಞೆತಪ್ಪಿ ಬಿದ್ದ.
ಹತ್ತು ಹದಿನೈದು ಕಿಲೋಮೀಟರ್ ದೂರ ಚಲಿಸಿದ ಜೀಪು ನಂತರ ಅಲ್ಲೇ ಒಂದು ಕಡೆ ಊರಿನೊಳಕ್ಕೆ ತಿರುಗಿತು. ವಿನಯಚಂದ್ರನಿಗೆ ಯಾವುದೋ ಲೋಕದಲ್ಲಿ ಸಾಗುತ್ತಿದ್ದಂತೆ ಅನ್ನಿಸುತ್ತಿತ್ತು. ಜೀಪು ಸಾಗುತ್ತಿರುವುದು ಗೊತ್ತಾಗುತ್ತಿತ್ತಾದರೂ ಕೈಕಾಲು ಆಡುತ್ತಿರಲಿಲ್ಲ. ಮಾತಾಡೋಣ ಎಂದರೆ ನಾಲಿಗೆಯೇ ಬಿದ್ದು ಹೋಗಿದೆಯೇನೋ ಎಂಬಂತಾಗಿತ್ತು. ಅಲ್ಲೊಂದು ಮನೆಯ ಎದುರು ಜೀಪು ನಿಂತಿತ್ತು. ಮನೆಯೆಂದರೆ ಮನೆಯಲ್ಲ ಅದು. ದೊಡ್ಡ ಜಮೀನ್ದಾರನ ಬಂಗಲೆ ಎನ್ನಬಹುದು. ಹುಬ್ಬಳ್ಳಿ ಕಡೆಯಲ್ಲಿ ವಾಡೆಗಳಿರುತ್ತಾವಲ್ಲ. ಆ ರೀತಿಯದ್ದು. ದೊಡ್ಡ ಕೋಟೆಯಂತಹ ರಚನೆ. ವಿನಯಚಂದ್ರನಿಗೆ ಅದು ಅಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಯಾರೋ ಇಬ್ಬರು ಮಧುಮಿತಾಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದರೆ ಮತ್ತಿಬ್ಬರು ವಿನಯಚಂದ್ರನ್ನು ದರದರನೆ ಎಳೆದುಕೊಂಡು ಹೋಗುತ್ತಿದ್ದರು. ಆ ಮನೆಯ ಒಳಗೆ ಸುತ್ತಿ ಬಳಸಿ ಸಾಗುತ್ತಿರುವುದು ತಿಳಿಯುತ್ತಿತ್ತು. ಕೊನೆಗೆ ಅದೊಂದು ಕತ್ತಲೆಯ ಕೋಣೆಗೆ ಒಯ್ದು ಮಧುಮಿತಾ ಹಾಗೂ ವಿನಯಚಂದ್ರನನ್ನು ಹಾಕಿ ಕೋಣೆಯ ಬಾಗಿಲನ್ನು ಹಾಕಿಬಿಟ್ಟರು.
ವಿನಯಚಂದ್ರನಿಗಿನ್ನೂ ಸ್ಪಷ್ಟವಾಗಿ ಎಚ್ಚರಾಗಿರಲಿಲ್ಲ. ಮಧುಮಿತಾ ಮಾತ್ರ ಭಯದಿಂದ ಮಾತೇ ಬಾರದಂತೆ ಕುಳಿತಿದ್ದಳು. ಯಾರು, ಯಾಕೆ ಇಲ್ಲಿಗೆ ಕರೆತಂದಿದ್ದಾರೆ ಒಂದೂ ಬಗೆಹರಿಯಲಿಲ್ಲ. ಮಧುಮಿತಾ ಮಾತ್ರ ಪಕ್ಕದಲ್ಲೇ ಕವುಚಿ ಬಿದ್ದುಕೊಂಡಿದ್ದ ವಿನಯಚಂದ್ರನನ್ನು ಬಡಿದು ಎಬ್ಬಿಸಲು ಪ್ರಯತ್ನಿಸಿದಳು. ನಾಲ್ಕೈದು ಸಾರಿ ಪ್ರಯತ್ನಿಸಿದ ನಂತರ ನಿಧಾನವಾಗಿ ವಿನಯಚಂದ್ರ ಕಣ್ಣುಬಿಟ್ಟ. ಕಣ್ಣುತೆರೆದವನಿಗೆ ಒಮ್ಮೆ ತಾನೆಲ್ಲಿದ್ದೇನೆ, ಏನಾಗುತ್ತಿದೆ ಒಂದೂ ತಿಳಿಯಲಿಲ್ಲ.
`ಮಧು.. ಏನಿದು..? ನಾವೆಲ್ಲಿದ್ದೇವೆ? ಏನಾಗುತ್ತಿದೆ..?' ಅರ್ಥವಾಗದವನಂತೆ ಕೇಳಿದ.
`ನನಗೂ ಗೊತ್ತಿಲ್ಲ ವಿನೂ.. ಯಾರೋ ಎಳೆದುಕೊಂಡು ಬಂದರು. ಗಾಡಿಯಲ್ಲಿ ನಿನಗೆ ಹೊಡೆದರು. ನೀನು ಎಚ್ಚರ ತಪ್ಪಿದೆ. ನಂತರ ನಮ್ಮಿಬ್ಬರನ್ನೂ ಎಲ್ಲೋ ಕರೆದುಕೊಂಡು ಬಂದು ಮನೆಯೊಂದರಲ್ಲಿ ಕೂಡಿಹಾಕಿದ್ದಾರೆ. ಅದಷ್ಟೇ ಗೊತ್ತಿದೆ.. ಆದರೆ ಯಾಕೆ ಹೀಗೆ, ನಾವೇನು ತಪ್ಪು ಮಾಡಿದ್ದೇವೆ.. ಒಂದೂ ಗೊತ್ತಿಲ್ಲ.. ಅಬ್ಬಾ.. ಗಾಡಿಯಲ್ಲಿದ್ದವರು ಕುಡಿದಿದ್ದರು. ಅದೆಷ್ಟು ತೊಂದರೆ ಕೊಟ್ಟರು ಅಂದರೆ ಛೀ...' ಎಂದಳು ಮಧುಮಿತಾ..
`ಛೇ... ಕ್ರೂರಿಗಳು..' ಎಂದ ವಿನಯಚಂದ್ರ.. `ಮುಂದೇನು ಮಾಡುವುದು? ಎಲ್ಲೋ ಹೋಗುವವರು ಎಲ್ಲಿಗೆ ಬಂದೆವಪ್ಪಾ? ಇಲ್ಲಿಂದ ತಪ್ಪಿಸಿಕೊಂಡು ಹೋಗುವುದು ಹೇಗೆ? ಅದು ಸಾಧ್ಯವಾ? ಅಸಾಧ್ಯವಾ? ನಮಗೇಕೆ ಇಷ್ಟೆಲ್ಲ ಕಷ್ಟಗಳು ಎದುರಾಗುತ್ತಿವೆ..' ಎಂದ ಅಸಹನೆಯಿಂದ.
ಕೆಲ ಹೊತ್ತಿನ ಬಳಿಕ ಯಾರೋ ಆ ಕೋಣೆಯ ಬಾಗಿಲು ತೆರೆಯುತ್ತಿರುವ ಸದ್ದಾಯಿತು. ವಿನಯಚಂದ್ರ ಕೂಡಲೇ ಜಾಗೃತನಾದ. ಕೋಣೆಯ ತುಂಬ ಕತ್ತಲಾವರಿಸಿದ್ದರೂ ಕಣ್ಣು ಆ ಕತ್ತಲೆಗೆ ಹೊಂದಿಕೊಂಡಿತ್ತು. ಮಬ್ಬಾದ ದೀಪದ ಬೆಳಕಿನಲ್ಲಿ ಆ ಕೋಣೆಯನ್ನೆಲ್ಲ ಸರಸರನೆ ಹುಡುಕಾಡಿದ ವಿನಯಚಂದ್ರ ಆತ್ಮರಕ್ಷಣೆಗೆ ಏನಾದರೂ ಆಯುಧ ಸಿಗಬಲ್ಲದೇ ಎಂದು ಹುಡುಕತೊಡಗಿದ. ಅಲ್ಲೆಲ್ಲೋ ಮೂಲೆಯಲ್ಲಿ ಮಂಚದ ಕಾಲಿನ ಮುರಿದ ರಚನೆಯಂತದ್ದಿತ್ತು. ಅದನ್ನೇ ತೆಗೆದು ಜಾಗೃತೆಯಿಂದ ಅಡಗಿಸಿ ಇಟ್ಟುಕೊಂಡ. ಬಾಗಿಲು ತೆಗೆದು ಒಳಬಂದಿತೊಂದು ಆಕೃತಿ. ಮೊದಲಿಗೆ ಸರಿಯಾಗಿ ಗೊತ್ತಾಗಲಿಲ್ಲ. ತೀರಾ ಹತ್ತಿರಕ್ಕೆ ಬಂದ ನಂತರ ಒಳಬಂದಿದ್ದೊಬ್ಬಳು ಹೆಂಗಸು ಎನ್ನುವುದು ಅರಿವಾಯಿತು. ಒಳಬಂದವಳೇ ಕೈಯ್ಯಲ್ಲಿ ತಿಂಡಿಯನ್ನು ಹಿಡಿದುಕೊಂಡು ಬಂದಿದ್ದಳು.
ಮಧುಮಿತಾಳ ಬಳಿ ಬಂದ ಆಕೆ ಕೈಯಲ್ಲಿದ್ದುದ್ದನ್ನು ಕೊಟ್ಟು ತಿನ್ನು ಎಂದಳು. ಮಧುಮಿತಾ ಒಮ್ಮೆ ಆ ಹೆಂಗಸನ್ನು ನೋಡಿದವಳೇ ಆಕೆ ಕೊಟ್ಟಿದ್ದನ್ನು ತಿನ್ನಲು ನಿರಾಕರಿಸಿದಳು. `ನಮ್ಮನ್ಯಾಕೆ ಇಲ್ಲಿ ಕೂಡಿ ಹಾಕಿದ್ದಾರೆ.. ಯಾರು ನೀವು..? ಏನು ಇದೆಲ್ಲ..?' ಎಂದು ಸಿಟ್ಟಿನಿಂದ ಕೇಳಿದಳು ಮಧುಮಿತಾ.
ಯವ್ವನವನ್ನು ಆಗಷ್ಟೇ ದಾಟುತ್ತಿದ್ದ ಆ ಹೆಂಗಸು ಮಧುಮಿತಾಳ ಕೈಯನ್ನು ಹಿಡಿದುಕೊಂಡು `ಅದೊಂದು ದೊಡ್ಡ ಕಥೆ.. ಏನಂತ ಹೇಳುವುದು..' ಎಂದಳು.. ಅದಕ್ಕುತ್ತರವಾಗಿ `ಈ ರೀತಿಯ ಸುತ್ತುಬಳಸಿನ ಮಾತುಗಳು ಬೇಡ.. ನಿಜ ಹೇಳಿ.. ನೀವ್ಯಾರು? ನಮ್ಮನ್ಯಾಕೆ ಇಲ್ಲಿ ಕೂಡಿ ಹಾಕಿದ್ದೀರಿ?' ಎಂದು ಚೀರಿದಳು.
`ಇಲ್ಲ.. ನಾನು ಈ ಕೆಲಸ ಮಾಡಿಲ್ಲ. ಈ ಕೆಲಸ ಮಾಡಿದವನು ಮುಷ್ಪಿಕರ್. ಆತ ಈ ಸುತ್ತಮುತ್ತಲ ಭಾಗದ ಬಹುದೊಡ್ಡ ಜಮೀನ್ದಾರ. ಯಾರೇ ಹೊಸ ಹುಡುಗಿಯರು, ಹೆಂಗಸರು ಕಾಣಲಿ ಅವರನ್ನು ಎಳೆದುಕೊಂಡು ಬಂದು ಅವರ ಮೇಲೆ ಅತ್ಯಾಚಾರ ಮಾಡುವುದು ಆತನ ಕೆಲಸ. ಅದಕ್ಕಾಗಿಯೇ ತನ್ನದೊಂದು ಪಡೆಯನ್ನೇ ನೇಮಿಸಿಕೊಂಡಿದ್ದಾರೆ. ಆತನ ಕಣ್ಣಿಗೆ ನೀನು ಕಾಣಿಸಿದ್ದೀಯಾ.. ಅದೇ ಕಾರಣಕ್ಕೆ ನಿನ್ನನ್ನು ಎಳೆದುಕೊಂಡು ಬಂದಿದ್ದಾರೆ..' ಎಂದು ಹೇಳಿದಳು ಆ ಹೆಂಗಸು.
ಮಾತು ಕೇಳಿ ಬೆಚ್ಚಿ ಬಿದ್ದರು ವಿನಯಚಂದ್ರ ಹಾಗೂ ಮಧುಮಿತಾ. ಮುಂದೇನು ಮಾಡುವುದು ಎಂದು ಆಲೋಚನೆ ಮಾಡುತ್ತಿದ್ದಾಗಲೇ ತಿಂಡಿಯನ್ನು ತಂದಾಕೆಯೇ ಮಾತು ಮುಂದುವರಿಸಿದಳು. `ಪ್ರತಿ ದಿನ ಇದೇ ರೀತಿ ಆಗಿದೆ. ಇವರು ಯಾರು ಯಾರನ್ನೋ ಎಳೆದುಕೊಂಡು ಬರುತ್ತಾರೆ. ಅವರ ಮೇಲೆ ಅತ್ಯಾಚಾರ ನಡೆಯುತ್ತದೆ. ಬೆಳಗಾಗುವ ವೇಳೆಗೆ ಕೆಲವರು ಸತ್ತಿರುತ್ತಾರೆ. ಅರೆ ಜೀವ ಆಗಿರುವವರನ್ನು ಅದೇ ಗುಂಪು ಎಲ್ಲೋ ಹೋಗಿ ಒಗೆದು ಬರುತ್ತಾರೆ...' ಎಂದು ನಿಟ್ಟುಸಿರು ಬಿಟ್ಟವಳು `ನನ್ನನ್ನು ಮದುವೆಯಾದಾಗಿನಿಂದ ಇದನ್ನು ನೋಡಿ ರೋಸಿ ಹೋಗಿದ್ದೇನೆ. ನಾನು ಮದುವೆಯಾದ ನಂತರ ಅದೆಷ್ಟೋ ಸಹಸ್ರ ಹೆಂಗಳೆಯರು ತಮ್ಮ ಬದುಕನ್ನು ಇಲ್ಲಿ ಕಳೆದುಕೊಂಡಿದ್ದಾರೆ. ಅನೇಕ ಸಾರಿ ಇವನ್ನು ಪ್ರತಿಭಟಿಸಿದ್ದೇನೆ. ಆದರೆ ಪ್ರತಿಭಟನೆ ಮಾಡಿದಾಗಲೆಲ್ಲ ಮೈಸುಲಿಯುವಂತಹ ಹೊಡೆತಗಳು ಬಿದ್ದಿವೆ..' ಎಂದಳು.
`ನೀನು ಇದನ್ನು ಹೇಳಲು ನಮ್ಮೆದುರು ಬಂದೆಯಾ?' ಎಂದು ಕೇಳಿದ ಮಧುಮಿತಾ ಮತ್ತೇನೋ ಹೊಳೆದಂತೆ `ನಿನ್ನ ಯಜಮಾನ ಎಳೆದುಕೊಂಡು ಬರುವ ಪ್ರತಿಯೊಬ್ಬ ಹೆಂಗಸರ ಬಳಿಯೂ ನೀನು ಇದೇ ಕಥೆಯನ್ನು ಹೇಳುತ್ತೀಯಾ? ಅವರಿಗೆ ನೀನು ಈ ಕಥೆ ಹೇಳುವುದನ್ನು ಬಿಟ್ಟು ಬೇರೆ ಸಹಾಯ ಮಾಡುವುದೇ ಇಲ್ಲವೇ? ನಿನ್ನದೂ ಒಂದು ಬದುಕಾ. ಥೂ..' ಎಂದಳು ಮಧುಮಿತಾ.
`ಬಯ್ಯಬೇಡಿ. ಅವರಲ್ಲಿ ಶಕ್ತಿಯಿದೆ. ನಾನು ಅಸಹಾಯಕಿ. ನಾನು ಈ ಕೆಲಸವನ್ನಲ್ಲದೇ ಇನ್ನೇನು ಮಾಡಬಲ್ಲೆ ಹೇಳಿ? ನಾನು ಏನು ಮಾಡಲು ಹೋದರೂ ನನ್ನನ್ನು ಹೊಡೆಯುತ್ತಾರೆ. ಬಡಿಯುತ್ತಾರೆ. ಕೊಲ್ಲಲಿಕ್ಕೂ ಹೇಸುವುದಿಲ್ಲ ಕ್ರೂರಿಗಳು' ಎಂದು ಹೇಳಿದಾಕೆ ಅಳುವುದೊಂದೇ ಬಾಕಿ.
`ಅಸಹಾಯಕಿ.. ಎಂತಹ ನೆಪವನ್ನು ಹೇಳ್ತೀಯಾ ನೀನು. ನೆಪ ಅಷ್ಟೆ. ನಿನಗೆ ಮನಸ್ಸಿಲ್ಲ ಅಷ್ಟೇ. ಯಾರು ಯಾರದ್ದೋ ಬದುಕು ಹಾಳಾದರೆ ನಿನಗೇನು. ನೀನು ಮಾತ್ರ ಆರಾಮಾಗಿರ್ತೀಯಾ. ಕೈಯಲ್ಲಿ ಆಗೋದಿಲ್ಲ ಅಂತೀಯಲ್ಲ.. ನಾವು ತಪ್ಪಿಸಿಕೊಳ್ಳಬೇಕು. ಸಹಾಯ ಮಾಡ್ತೀಯಾ?' ಎಂದು ಕೇಳಿಬಿಟ್ಟಳು ಮಧುಮಿತಾ.
ಬೆರಗು ಗಣ್ಣಿನಿಂದ ನೋಡಿದ ಆ ಹೆಂಗಸು ಕೆಲಕಾಲ ಮೌನವಾದಳು. ಅಷ್ಟರಲ್ಲಿ ವಿನಯಚಂದ್ರ ಅಲ್ಲಿಯೇ ಇರುವುದು ಗಮನಕ್ಕೆ ಬಂದಿತ್ತು. ಆತನ ಕಡೆಗೆ ದೃಷ್ಟಿ ಹಾಯಿಸಿ `ಇವರ್ಯಾರು?' ಎಂದಳು. ಮುಷ್ಪೀಕರ್ ನ ಬಂಟರೇ ಯಾರೋ ಇಲ್ಲಿದ್ದಾರೆ. ತನ್ನ ಮಾತನ್ನು ಅವರು ಕೇಳಿಬಿಟ್ಟಿದ್ದಾರೆ ಎನ್ನುವ ಭಯ ಆಕೆಯಲ್ಲಿ ಒಮ್ಮೆ ಕಾಡಿತು. ಕೊನೆಗೆ ಮಾತಿಗೆ ನಿಂತ ಮಧುಮಿತಾಳೆ ತಾವು ಯಾವ ಕಾರಣಕ್ಕೆ ಬಂದಿದ್ದೇವೆ. ಯಾರು? ಎತ್ತ ಸಾಗುತ್ತಿದ್ದೇವೆ ಎನ್ನುವುದನ್ನು ತಿಳಿಸಿದಳು. ಎಲ್ಲ ಹೇಳಿದ ನಂತರ ಮಧುಮಿತಾ ಹಾಗೂ ವಿನಯಚಂದ್ರ ತಪ್ಪಿಸಿಕೊಳ್ಳಲು ಸಹಾಯ ಮಾಡುವುದಾಗಿ ಭರವಸೆ ನೀಡಿದಳು.
ತಪ್ಪಿಸಿಕೊಳ್ಳುವ ಕಾರ್ಯ ಬಹುಬೇಗನೆ ಆಗಬೇಕಾಗಿತ್ತು. ಯಾವ ಕ್ಷಣದಲ್ಲಿ ಮುಷ್ಪೀಕರ್ ಮಧುಮಿತಾಳನ್ನು ತನ್ನ ಮಂಚಕ್ಕೆ ಬರುವಂತೆ ಬುಲಾವ್ ನೀಡುತ್ತಾನೋ ಗೊತ್ತಿರಲಿಲ್ಲ. ತಪ್ಪಿಸಿಕೊಳ್ಳುವುದೇನೋ ಸರಿ. ಆದರೆ ಮುಷ್ಪೀಕರ್ ನಿಗೆ ಯಾಕೆ ಬುದ್ಧಿ ಕಲಿಸಿ ಹೋಗಬಾರದು ಎನ್ನುವ ಆಲೋಚನೆ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿತು. ತಕ್ಷಣವೇ ಮಧುಮಿತಾಳ ಕಿವಿಯಲ್ಲಿ ಈ ವಿಷಯವನ್ನು ತಿಳಿಸಿದ. ಮಧುಮಿತಾ ಕೂಡ ಆ ವಿಷಯಕ್ಕೆ ಒಪ್ಪಿಗೆ ಸೂಚಿಸಿದಳು. ಅಲ್ಲೇ ಎದುರಿಗಿದ್ದ ಮುಷ್ಪೀಕರನ ಹೆಂಡತಿಯ ಬಳಿ ಈ ವಿಷಯವನ್ನು ತಿಳಿಸಿದಳು. ಹೀಗೊಂದು ಸಾಧ್ಯತೆಯನ್ನು ಯಾವತ್ತೂ ಯೋಚಿಸಿರಲಿಲ್ಲವೋ ಎಂಬಂತೆ `ಯಾ ಅಲ್ಲಾ..' ಎಂದವಳೇ `ತಾನೂ ಇದಕ್ಕೆ ಕೈ ಜೋಡಿಸುತ್ತೀನಿ.. ಒಳ್ಳೆಯ ಸಾಧ್ಯತೆ. ಆದರೆ ನೀವು ಯಾವ ರೀತಿ ಬುದ್ಧಿ ಕಲಿಸುತ್ತೀರಿ ಹಾಗೂ ಇದರಿಂದ ಅಪಾಯವೇನೂ ಆಗುವುದಿಲ್ಲ ಅಲ್ಲವಾ?' ಎಂದು ಕೇಳಿದಳು.
ಪ್ರತಿಯಾಗಿ ವಿನಯಚಂದ್ರ `ಯಾವ ರೀತಿ ಬುದ್ಧಿ ಕಲಿಸಬೇಕು ಎನ್ನುವುದು ಇನ್ನೂ ಗೊತ್ತಿಲ್ಲ. ಇನ್ನು ಮುಂದೆ ಹೆಂಗಸರ ಬದುಕನ್ನು ಹಾಳುಮಾಡಬಾರದು. ಆ ರೀತಿಯಲ್ಲಿ ಏನಾದರೂ ಮಾಡಬೇಕು. ನಿಮ್ಮ ಸಹಾಯ ಸಹಕಾರ ಇಲ್ಲದೇ ಈ ಕೆಲಸ ಅಸಾಧ್ಯ. ಈ ಕೆಲಸ ಅಪಾಯಕರವಂತೂ ಹೌದು. ಆದರೆ ಎಷ್ಟು ದೊಡ್ಡ ಪ್ರಮಾಣದ್ದೆಂಬುದು ನಮಗೂ ಗೊತ್ತಿಲ್ಲ. ನಮ್ಮಿಂದ ಆಗದಿದ್ದರೆ ನೀವಾದರೂ ಈ ಕೆಲಸ ಮಾಡಲೇಬೇಕು. ನಂತರ ನಮಗೆ ಬೋಗ್ರಾವನ್ನು ತಲುಪುವ ಮಾರ್ಗವನ್ನೂ ನೀವೇ ತಿಳಿಸಬೇಕು. ಹೇಳಿ ನಿಮ್ಮಿಂದ ಇದು ಸಾಧ್ಯವಾ? ಆಗೋದಿಲ್ಲ ಅಂತಾದರೆ ಹೇಳಿಬಿಡಿ.. ನಾವೇ ಈ ಕೆಲಸವನ್ನು ಹೇಗಾದರೂ ಮಾಡುತ್ತೇವೆ. ಆದರೆ ದಯವಿಟ್ಟು ಯಾರ ಬಳಿಯೂ ಈ ಬಗ್ಗೆ ಬಾಯಿ ಬಿಡಬೇಡಿ..' ಎಂದ.
`ಖಂಡಿತ ಯಾರ ಬಳಿಯೂ ಹೇಳೋದಿಲ್ಲ..' ಎಂದವಳೇ ಒಮ್ಮೆ ಎದ್ದು ಹೋಗಿ ಕೋಣೆಯ ಕದವನ್ನು ಗಟ್ಟಿಯಾಗಿ ಹಾಕಲಾಗಿದೆಯೋ ಇಲ್ಲವೋ ಎಂದು ನೋಡಿಕೊಂಡು ಬಂದಳು. `ಆ ಹರಾಮಖೋರನನ್ನು ನನ್ನ ಗಂಡ ಎನ್ನಲು ನಾಚಿಕೆಯಾಗುತ್ತಿದೆ. ಸಮಯ ಸಿಕ್ಕಾಗ ಆತನಿಗೆ ಬುದ್ಧಿ ಕಲಿಸಬೇಕು ಎಂದು ನಾನು ಅನೇಕ ಸಾರಿ ಆಲೋಚನೆ ಮಾಡಿದ್ದೇ. ಆದರೆ ಆ ಕೆಲಸ ನನ್ನೊಬ್ಬನಿಂದ ಸಾಧ್ಯವಾಗುವುದಿಲ್ಲ ಎಂದು ಸುಮ್ಮನಾಗಿದ್ದೆ. ಆದರೆ ನೀವು ಇವತ್ತು ದೇವರಂತೆ ಬಂದಿದ್ದೀರಿ. ಅಲ್ಲಾಹುವೇ ನಿಮ್ಮನ್ನು ಕಳಿಸಿದ್ದಾನೆ ಎಂದುಕೊಳ್ಳುತ್ತೇನೆ. ಇಲ್ಲಿಯವರೆಗೆ ಆತ ಅವರಿವರ ಬದುಕನ್ನು ಹಾಳುಮಾಡಿದ್ದೇ ಸಾಕು. ಇನ್ನು ಮುಂದಾದರೂ ಉಪಕಾರಿಯಾಗಿ ಬಾಳಲಿ..' ಎಂದು ಹೇಳಿದ ಆಕೆಯ ಬಾಯಲ್ಲಿ ಎಷ್ಟೋ ದಿನಗಳ ಅಸಹನೆ, ನೋವು ತುಂಬಿರುವುದು ಸ್ಪಷ್ಟವಿತ್ತು. ತಕ್ಷಣವೇ ಮನಸ್ಸಿನಲ್ಲಿ ಏನೋ ಆಲೋಚನೆ ಮಾಡಿದ ವಿನಯಚಂದ್ರ ಕೂಡಲೇ ಇಬ್ಬರ ಬಳಿಯೂ ಮಾಡಬೇಕಾದ ಕಾರ್ಯಗಳನ್ನು ವಿವರಿಸಿದ. ಆ ಪ್ರಕಾರವಾಗಿ ಕಾರ್ಯಪ್ರವೃತ್ತರಾದರು.
(ಮುಂದುವರಿಯುತ್ತದೆ)