Wednesday, September 24, 2014

ಭಗವಂತ ಹಾಗೂ ಸಕಲಕಲಾ ವಲ್ಲಭ

                ನಾನು ಈ ಎರಡು ವಿಷಯಗಳ ಬಗ್ಗೆ ಹೇಳಲೇಬೇಕು. ಭಗವಂತ ಹಾಗೂ ಸಕಲಕಲವಾ ವಲ್ಲಭ ಎಂಬುದನ್ನು ನೋಡಿ ಇದೇನಿದು ಎಂದುಕೊಳ್ಳಬೇಡಿ. ಇದು ಇಬ್ಬರ ಹೆಸರು. ಒಬ್ಬ ಮಹಾನುಭಾವರಿಗೆ ಹುಟ್ಟಿದ ತಕ್ಷಣ ಇಟ್ಟ ಹೆಸರು ಭಗವಂತ ಎಂಬುದಾದರೆ ಇನ್ನೊಬ್ಬ ಮಹಾಶಯನಿಗೆ ನಾವಿಟ್ಟ ಹೆಸರು ಸಕಲಕಲಾ ವಲ್ಲಭ ಎಂಬುದು. ಈ ಇಬ್ಬರ ಬಗ್ಗೆ ಬಹು ದಿನಗಳ ಹಿಂದೆಯೇ ಹೇಳಬೇಕು ಎಂದುಕೊಂಡೆ. ಕಾರಣಾಂತರಗಳಿಂದ ಆಗಿರಲಿಲ್ಲ ನೋಡಿ.
                ಭಗವಂತನ ಬಗ್ಗೆ ಮೊದಲು ಹೇಳಿಬಿಡುತ್ತೇನೆ. ಈ ಭಗವಂತನಿದ್ದಾನಲ್ಲ ಹಾಗೆಂದರೆ ದೇವರ ಬಗ್ಗೆ ಹೇಳುತ್ತಿದ್ದೇನೆ ಎಂದು ಖಂಡಿತ ಅಂದುಕೊಳ್ಳಬೇಡಿ. ಭಗವಂತ ಇದು ಒಬ್ಬ ವ್ಯಕ್ತಿಯ ನಾಮಧೇಯ. ಅದ್ಯಾರು ಆತನ ಮಾತಾ ಪಿತರಿಗೆ ಐಡಿಯಾ ಕೊಟ್ಟರೋ ಮಗನ ಭಗವಂತನ ಸಮಾನ ಆಗಲಿ ಎಂದುಕೊಂಡರೋ ಏನೋ ಭಗವಂತ ಎಂದು ಹೆಸರಿಟ್ಟರು. ಮಗ ಹಾಗೆ ಆಗಲಿ ಹೀಗೆ ಆಗಲಿ ಎಂದು ಅವರು ಅಂದುಕೊಂಡಿದ್ದಿರಬಹುದು. ಆದರೆ ಭಗವಂತ ಆಗಿದ್ದು ಮಾತ್ರ ಮಟ್ಕಾದಲ್ಲಿ ಹೆಸರುವಾಸಿಯಾದ ಆಟಗಾರ. ನಾನು ಹೈಸ್ಕೂಲಿಗೆ ಹೋಗುತ್ತಿದ್ದಾಗ ಆತ ನನ್ನ ದೊಡ್ಡಪ್ಪನ ಮನೆಗೆ ಬರುತ್ತಿದ್ದ. ವಯಸ್ಸು ಆ ದಿನಗಳಲ್ಲಿ 80ರ ಆಜುಬಾಜು ಇರಬೇಕು.  ಲಟೂರಿ ಸೈಕಲ್ ಹತ್ತಿಕೊಂಡು ವಾರಕ್ಕೆ ಮೂರು ಬಾರಿಯೋ ನಾಲ್ಕು ಬಾರಿಯೋ ಬರುತ್ತಿದ್ದ. ಆತನನ್ನು ನೋಡಿದರೆ ಸೈಕಲ್ ತುಳಿಯುವ ಶಕ್ತಿಯಿದೆಯಾ ಎನ್ನುವ ಅನುಮಾನ ಮೂಡುವುದು ಖಂಡಿತ. ಆದರೆ ಆತ ಮಾತ್ರ ಭಕ್ತಿಯಿಂದ ಬರುತ್ತಿದ್ದ. ಖುಷಿಯಿಂದ ಮಾತಾಡುತ್ತಿದ್ದ. `ಈ ಹುಡ್ಗ ಬಹಳ ಓದ್ಕತ್ತಾನೆ..' ಎನ್ನುವ ಪ್ರಶಂಸೆ ನನ್ನ ಮೇಲೆ.
         ಆ ದಿನಗಳಲ್ಲಿ ನನ್ನ ದೊಡ್ಡಪ್ಪ ಬಹಳ ಮಟ್ಕಾ ಆಡುತ್ತಿದ್ದ. ಭಗವಂತ ಹಾಗೂ ದೊಡ್ಡಪ್ಪ ಸೇರು ಅದೇನೋ ಲೆಕ್ಕಾಚಾರ ಮಾಡಿ ಓಸಿಯ ಅಂಕಿಸಂಖ್ಯೆಗಳನ್ನು ಹೆಕ್ಕಿ ತೆಗೆಯುತ್ತಿದ್ದರು. ನಾನು ಹಾಗೂ ನನ್ನ ಅಣ್ಣ ಅದನ್ನು ಸಂಖ್ಯಾಶಾಸ್ತ್ರ ಎಂದು ಕರೆಯುತ್ತಿದ್ದೆವು. ದೊಡ್ಡಪ್ಪ ಹಾಗೂ ಭಗವಂತ ಇಬ್ಬರೂ ಪಟ್ಟಾಗಿ ಕುಳಿತು ಮಟ್ಕಾ ಸಂಖ್ಯೆಗಳನ್ನು ಹೆಕ್ಕಿ ಹೆಕ್ಕಿ ಹುಡುಕುತ್ತ, ಅದೇನೋ ಸುಂದರ ವಿನ್ಯಾಸದಲ್ಲಿ ಪಿರಾಮಿಡ್ ಉಲ್ಟಾ ಇಟ್ಟಾಗ ಹೇಗೆ ಇರುತ್ತದೆಯೋ ಆ ರೀತಿಯಲ್ಲಿ ಬರೆಯುತ್ತ ಕುಳಿತಿದ್ದಾಗ ಕಳೆದ ಜನ್ಮದಲ್ಲಿ ಇಬ್ಬರೂ ಕಾಮರ್ಸ್ ವಿದ್ಯಾರ್ಥಿಗಳಾಗಿದ್ದರೆಂದೂ ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ ಮೂರ್ನಾಲ್ಕು ಪಿ.ಎಚ್.ಡಿ. ಗಳಿಸಿಕೊಂಡಿದ್ದಾರೆಂದೂ ಅಂದುಕೊಳ್ಳುತ್ತಿದ್ದೆವು.
          ಇಂತಹ ಭಗವಂತನ ಬಳಿ ನಾನು ಅನೇಕ ಸಾರಿ ನಿಂಗ್ಯಾಕೆ ಭಗವಂತ ಅಂತ ಹೆಸರಿಟ್ಟಿದ್ದಾರೆ ಎಂದು ಕೇಳಿದ್ದೆ. ಆಗ ಅದಕ್ಕೆ ಆತನ ಬೊಚ್ಚು ಬಾಯಿಯ ನಗೆಯೇ ನನಗೆ ಉತ್ತರವಾಗುತ್ತಿತ್ತೇ ಹೊರತು ಭಗವಂತ ಎಂಬುದು ನೈಜ ನಾಮಧೇಯವೇ, ಅಡ್ಡ ಹೆಸರೇ ಎಂಬುದೂ ತಿಳಿಯುತ್ತಿರಲಿಲ್ಲ. ಹೀಗಿದ್ದ ಭಗವಂತ ಥೇಟು ನಮ್ಮ ಬೇಂದ್ರೆ ಅಜ್ಜನಂತೆ ಇದ್ದ. ಯಾವುದೋ ಆಂಗಲ್ಲಿನಲ್ಲಿ ವರಕವಿಗಳನ್ನು ಹೋಲುತ್ತಿದ್ದ ಭಗವಂತನ ಬಳಿ ನಾನು ಅನೇಕ ಸಾರಿ ಹೀಗೆ ಹೇಳಿದ್ದಿದೆ. ಆತ ಮಾತ್ರ ಬೇಂದ್ರೆ ಎಂದರೆ ಯಾರು ಎಂದು ಕೇಳುತ್ತಿದ್ದ. ಇಂತಹ ಭಗವಂತ ಬೇಂದ್ರೆ ಅಜ್ಜನ ಕುರುಡು ಕಾಂಚಾಣ, ನಾಕು ತಂತಿ ಈ ಮುಂತಾದ ಹಾಡುಗಳನ್ನು ಎಷ್ಟು ಚಂದಾಗಿ ಹಾಡುತ್ತಿದ್ದನೆಂದರೆ ಆಹ್... ಸಮಯ ಹರಿಯುತ್ತಿದ್ದುದು ಗೊತ್ತಾಗುತ್ತಿರಲಿಲ್ಲ. ಆತ ಹೀಗೆ ಹೇಳಿದಾಗಲೆಲ್ಲ ನಾನು `ಭಗವಂತಾ.. ನೀ ಹಾಡ್ತಾ ಇದ್ದೀಯಲ್ಲ.. ಈ ಹಾಡುಗಳನ್ನು ಬರೆದಿದ್ದು ಅದೇ ಬೇಂದ್ರೆ ಅಜ್ಜ..' ಎಂದಾಗ ಹೌದಾ.. ಎಂದು ಕಣ್ಣಗಲಿಸುತ್ತಿದ್ದ.
          ಮೊನ್ನೆ ದೊಡ್ಡಪ್ಪನ ಮನೆಗೆ ಹೋಗಿದ್ದೆ. ಯಾಕೋ ಭಗವಂತ ತುಂಬ ನೆನಪಾದ. ದೊಡ್ಡಪ್ಪನ ಬಳಿ ಭಗವಂತನ ವಿಷಯ ಕೇಳಿದೆ. ಆಗ ದೊಡ್ಡಪ್ಪ.. `ಹೋಗಾ.. ಈಗೆಲ್ಲ ಮಟ್ಕಾ ಬಿಟ್ಟುಬಿಟ್ಟಿದ್ದಾರೆ. ಭಗವಂತ ನೀನು ಹೈಸ್ಕೂಲು ಓದುತ್ತಿದ್ದ ಸಂದರ್ಭದಲ್ಲಿ ಬಂದಿದ್ದೇ ಕೊನೆ. ಆಮೇಲೆ ಇತ್ತ ಮುಖ ಹಾಕಿಲ್ಲ.. ವಯಸ್ಸಾಗಿದೆ. ಇನ್ನೂ ಜೀವಂತ ಇದ್ದಾನೆ. ಮನೆಯ ಹತ್ತಿರ ನಡೆದುಕೊಂಡು ಹೋಗಿಬಂದು ಮಾಡುತ್ತಿರುತ್ತಾನೆ. ಒಂದು ಕಣ್ಣು ಪೂರ್ತಿ ಕುರುಡಾಗಿ ಬೆಳ್ಳಗಾಗಿದೆ. 90 ವರ್ಷ ಆಯ್ತಲ್ಲ..' ಎಂದ. `ಹಂಗಾದ್ರೆ ಭಗವಂತ ಸೆಂಚೂರಿ ಸ್ಟಾರ್ ಆಗ್ತಾನಾ?' ಎಂದೆ. `ಹೋ.. ಖಂಡಿತ.. ಎಷ್ಟಂದ್ರೂ ಅಂವ ಭಗವಂತ ಅಲ್ಲವಾ..' ಎಂದು ಕಣ್ಣುಮಿಟುಕಿಸಿದರು.
           ಭಗವಂತನಷ್ಟೇ ವಿಶೇಷವಾಗಿ ನನಗೆ ಸೆಳೆದಿದ್ದೇ ಸಕಲಕಲಾ ವಲ್ಲಭ. ಇತ್ತೀಚೆಗೆ ಪರಿಚಯದವರ ಮನೆಯ ಮದುವೆಗೆ ಹೋಗಿದ್ದೆ. ಬಹು ವರ್ಷಗಳ ನಂತರ ಅಂವ ಸಿಕ್ಕಿದ್ದ. ಅವನನ್ನು ನೋಡದೇ ಮಾತಾಡಿ, ತಮಾಷೆ ಮಾಡದೇ ಐದಾರು ವರ್ಷಗಳೇ ಕಳೆದು ಹೋಗಿತ್ತೇನೋ. ಎದುರಿಗೆ ಕಂಡವನೇ ಭರತನಾಟ್ಯದ ಸ್ಟೈಲಿನಲ್ಲಿ ತಲೆಯನ್ನು ಕುಣಿಸುತ್ತ... `ಏನೋ.. ಅರಾಮನೋ.. ಏನ್ ಮಾಡ್ತಾ ಇದ್ಯೋ.. ಕಾಣಲಿಕ್ಕೇ ಇಲ್ಲವಲ್ಲೋ...' ಎಂದ.. ಈ ಪುಣ್ಯಾತ್ಮ ಹಾಗೇ ಇದ್ದಾನೆ ಒಂದು ಚೂರೂ ಬದಲಾಗಿಲ್ಲವಲ್ಲ ಎಂದುಕೊಂಡೆ ನಾನು.
                ಸಕಲಕಲಾವಲ್ಲಭ ಎಂದು ನಮ್ಮ ಕೈಲಿ ಕರೆಸಿಕೊಳ್ಳುತ್ತಿದ್ದ ಆತ ನನಗೆ ಬಹಳ ಹಳೆಯ ಕಾಲದಿಂದ ಪರಿಚಯ. ದಶಕಗಳ ಹಿಂದಿನಿಂದಲೂ ನಾನು ಅವನನ್ನು ನೋಡುತ್ತ ಬಂದಿದ್ದೇನೆ. ನಾನು ಮೊದಲ ಸಾರಿ ನೋಡಿದಾಗ ಹೇಗಿದ್ದನೋ ಈಗಲೂ ಹಾಗೆಯೇ ಇದ್ದಾನೆ. ಆ ವಿಷಯದಲ್ಲಿ ಮಾತ್ರ ನಾನು ಅನೇಕ ಸಾರಿ ಬೆರಗು ಪಟ್ಟಿದ್ದಿದೆ. ದೈಹಿಕವಾಗಿ ಸ್ವಲ್ಪ ಬದಲಾಗಿದ್ದು ಬಿಟ್ಟರೆ ಹಾವ-ಭಾವ, ಚಹರೆ, ಬಣ್ಣ, ಮಾತು, ನಗು ಎಲ್ಲ ಮೊದಲಿನಂತೆಯೇ ಇದ್ದಿದ್ದು ವಿಶೇಷ.
                ನಿಮಗೆ ಹೆಚ್ಚಿಗೆ ಹೇಳುವ ಮುನ್ನ ಸಕಲಕಲಾ ವಲ್ಲಭನ ಬಗ್ಗೆ ನಾನು ಮೊದಲೇ ತಿಳಿಸಿಬಿಡುತ್ತೇನೆ. ಸಕಲಕಲಾ ವಲ್ಲಭ, ಭರತನಾಟ್ಯ ಕಲಾ ಪ್ರವೀಣ ಎಂದು ಆತನಿಗೆ ಹೆಸರಿಟ್ಟವರು ನಾವೇ. ಹೀಗೆ ಆತನನ್ನು ನಾವು ಕರೆಯುವುದಕ್ಕೂ ಪ್ರಮುಖ ಕಾರಣಗಳಿವೆ. ಹೇಳಿದೆನಲ್ಲ ನನಗೆ ಅವನ ಪರಿಚಯ ಆಗಿದ್ದು ದಶಕಗಳ ಹಿಂದೆ ಅಂತ. ನಾನು ಅವನನ್ನು ನೋಡಿದಾಗ ನನಗಿನ್ನೂ ಹೈಸ್ಕೂಲು ವಿದ್ಯಾರ್ಥಿಯ ವಯಸ್ಸಿರಬೇಕು. ಅಂದರೆ ಹುರುಪಿನ ಹರೆಯದ ಕಾಲ. ಯಾರೇ ಕಂಡರೂ ಅವರಲ್ಲಿನ ದೋಷಗಳನ್ನು ಎತ್ತಿ ಹೇಳುತ್ತ, ನಾನೇ ಸರಿ, ಉಳಿದವರಲ್ಲೆಲ್ಲ ದೋಷವಿದೆ ಎಂದುಕೊಳ್ಳುತ್ತಿದ್ದ ಕಾಲ. ನನ್ನ ಮನಸ್ಥಿತಿಗೆ ತಕ್ಕಂತೆ ನನ್ನ ಅಣ್ಣನೂ ಸಿಕ್ಕಿಬಿಟ್ಟಿದ್ದ. ನಾನು-ಅಣ್ಣ ಸೇರಿಕೊಂಡು ಕಂಡ ಕಂಡವರಿಗೆಲ್ಲ ಹೆಸರಿಡುತ್ತ, ಅವರಲ್ಲಿನ ದೋಷಗಳನ್ನು ಆಡಿಕೊಳ್ಳುತ್ತ ಚನ್ನಾಗಿ ಮನರಂಜನೆಯನ್ನು ಪಡೆದುಕೊಳ್ಳುತ್ತಿದ್ದುದು ಸುಳ್ಳಲ್ಲ. ನಮ್ಮ ಬಾಯಿಗೆ ಆಗ ಸಿಕ್ಕವನೇ ಈ ಸಕಲಕಲಾ ವಲ್ಲಭ ಉರುಫ್ ಭರತನಾಟ್ಯ ಕಲಾ ಪ್ರವೀಣ. ನಾವಿಟ್ಟ ಹೆಸರು ಅದ್ಹೇಗೋ ಊರಿನ ತುಂಬ ಹರಡಿ ಆತನ ನಿಜ ಹೆಸರು ಮರೆತು ನಾವಿಟ್ಟ ಹೆಸರಿನಿಮದಲೇ ಎಲ್ಲ ಕರೆಯತೊಡಗಿದ್ದು ವಿಶೇಷವಾಗಿತ್ತು
             ಆತನ ಬಳಿಯಿದ್ದ ಲೂನಾ ಎಂದಿಗೂ ಮರೆಯದ ಜೊತೆಗಾರ. ಲೂನಾ ಜೊತೆಗೆ ಟರ್ರೆಂದು ಸಾಗುತ್ತಿದ್ದರೆ ಊರು ತುಂಬ ಮೊಳಗುತ್ತಿತ್ತು. ಮನೆಯಿಂದ ಲೂನಾ ಚಾಲೂ ಮಾಡಿದರೆ ಸಾಕು ಸಕಲಕಲಾ ವಲ್ಲಭನ ಸವಾರಿ ಎತ್ತಲೋ ಹೊರಟಿದೆ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದರು. ಲೂನಾ ಸದ್ದಿಗೆ ಬೆದರಿ ಕಿವಿಗೆ ಹತ್ತಿಯನ್ನು ತೂರಿಕೊಳ್ಳುತ್ತಿದ್ದರು. ನಾನಿದ್ದ ಆ ಊರಿನಲ್ಲಿ ರೈಲ್ವೆ ಹಳಿಯಿತ್ತು. ದಿನಕ್ಕೆರಡು ಬಾರಿ ರೈಲು ಕೂಡ ಬಂದು ಹೋಗುತ್ತಿತ್ತು. ಸಕಲಕಲಾವಲ್ಲಭನ ಲೂನಾದ ಶಬ್ದ ರೈಲಿನ ಕೂ.. ಕೂಗನ್ನೂ ಮೀರಿಸುವಂತಿತ್ತು. ಹಲವರು ಈ ಲೂನಾ ಸದ್ದಿಗೆ ಬೆಚ್ಚಿ ಬೆರಗಿನಿಂದ ಕಣ್ಣಗಲಿಸಿ ನೋಡುತ್ತಿದ್ದರು. ಅದರಲ್ಲಿ ನನ್ನ ದೊಡ್ಡಪ್ಪನ ಮನೆಯ ಎಮ್ಮೆಯೂ ಒಂದು.
             ಇಂತಹ ವ್ಯಕ್ತಿಗೆ ಭರತನಾಟ್ಯ ಕಲಾ ಪ್ರವೀಣ ಎನ್ನುವುದರ ಹಿಂದೆಯೂ ಮಜವಾದ ಕತೆಯಿದೆ. ಅದ್ಯಾಕೋ ಗೊತ್ತಿಲ್ಲ ಪಾ..ಪ ಆತ ಮಾತನಾಡುವಾಗವಿರಲಿ ಅಥವಾ ಸುಮ್ಮನಿದ್ದಾಗಲೇ ಇರಲಿ ತಲೆ ಕುಣಿಸುತ್ತಿದ್ದ. ಆತನೇ ಕುಣಿಸುತ್ತಿದ್ದನೋ ಅಥವಾ ಅರಿವಿಲ್ಲದಂತೆ ತಲೆಯೇ ಕುಣಿದುಬಿಡುತ್ತಿತ್ತೋ ನನಗೆ ಗೊತ್ತಿಲ್ಲ. ಆದರೆ ಆತನನ್ನು ನೋಡಿದ ನಮಗಂತೂ ಬಹಳ ತಮಾಷೆಯೆನ್ನಿಸುತ್ತಿತ್ತು. ನಮ್ಮಲ್ಲಿ ನಗು ಉಕ್ಕುತ್ತಿದ್ದರೂ ಕಷ್ಟಪಟ್ಟು ಅದನ್ನು ತಡೆದುಕೊಳ್ಳುತ್ತಿದ್ದೆವು. ಆತ ಹೊರಟುಹೋದ ನಂತರ ಬಿದ್ದು ಬಿದ್ದು ನಗುತ್ತಿದ್ದೆವು.
           ಇಂತಹ ಸಕಲಕಲಾವಲ್ಲಭನ ಇನ್ನೊಂದು ಗುಣ ಎಂದರೆ ಅದು ವಾಚಾಳಿತನ.  ವಾಚಾಳಿತನವೆಂದರೆ ಯಾವರೀತಿ ಅಂತೀರಿ.. ಥೋ.. ಥೋ.. ಮಾತು ಶುರುಮಾಡಿದ ಅಂದರೆ ಸರಪಟಾಕಿಯ ಚೀಲಕ್ಕೇ ಬೆಂಕಿ ಕೊಟ್ಟಂತೆ. ಮಾತಿನ ಭರದಲ್ಲಿ ಏನೇನು ಹೇಳುತ್ತಾನೆ ಎನ್ನುವುದು ಆತನಿಗೆ ಬಹುಶಃ ಅರಿವೇ ಇರುವುದಿಲ್ಲವೇನೋ. ಹೀಗೆ ಮಾತನಾಡುತ್ತಿದ್ದಾಗ ನಮ್ಮ ಬಳಿ ಆತ `ಮನಮೋಹನ ಸಿಂಗ್ ಎಂತಾ ಚಂದ ಮಾತಾಡ್ತಾರಲ್ಲಾ.. ಮನಮೋಹನ ಸಿಂಗ್ ಮಾತಾಡಲಿಕ್ಕೆ ಶುರು ಮಾಡಿದರೆಂದರೆ ಅದಕ್ಕೆ ಬ್ರೆಕೇ ಇಲ್ಲ...' ಎಂದು ಬಿಟ್ಟಿದ್ದ.. ಆ ದಿನ ಅವನ ಮಾತು ಕೇಳಿ ನಮಗೆ ಬಂದ ನಗು ಒಂದು ವಾರಗಳ ಕಾಲವಾದರೂ ಮರುಕಳಿಸುತ್ತಲೇ ಇತ್ತು. ಹೆಸರಾಂತ ಬರಹಗಾರರು, ಕವಿಗಳು, ಲೇಖಕರ ಕುರಿತು ಮಾತನಾಡುತ್ತಿದ್ದ ಈ ವಲ್ಲಭ ಅವರು ತನ್ನ ಬಾಲ್ಯ ಸ್ನೇಹಿತ ಎಂದೋ, ಕ್ಲಾಸ್ ಮೇಟ್ ಎಂದೋ, ಡಿಗ್ರಿಯಲ್ಲಿ ಹಾಸ್ಟೆಲ್ ನಲ್ಲಿ ಒಟ್ಟಿಗೇ ಇದ್ದವರೆಂದೋ ಹೇಳುತ್ತಿದ್ದ. ನಾವಂತೂ ಬಹಳ ಎಂಜಾಯ್ ಮಾಡುತ್ತಿದ್ದೆವು. ಆಗ ಸಿಕ್ಕಾಪಟ್ಟೆ ಓಡುತ್ತಿದ್ದ ಟ್ಯಾಬ್ಲಾಯ್ಡ್ ಪತ್ರಿಕೆಗಳು ನಮ್ಮನ್ನು ಬಹಳ ಆಕರ್ಷಿಸಿದ್ದವು. ಆ ಕಪ್ಪು ಬಿಳುಪಿನ ಸುಂದರಿ ತನ್ನ ವಿಶಿಷ್ಟ ಬಗೆಯಿಂದ ಎಲ್ಲರನ್ನು ಸೆಳೆದಿತ್ತು. ಈಗ ಅದೊಂಥರಾ ತಣ್ಣಗಾಗಿರುವ ನಕ್ಷತ್ರ.. ಬಿಡಿ ಅದನ್ನ.. ಆ ಪತ್ರಿಕೆಯ ಸಂಪಾದಕರ ಬಗ್ಗೆಯೂ ಈತ ಪುಂಖಾನುಪುಂಖವಾಗಿ ಹೇಳಿದ್ದ. ಆ ಸಂಪಾದಕರು ತಮ್ಮ ನೆಗೆ ಬಂದಿದ್ದರು ಹಾಗೆ ಹೀಗೆ ಎಲ್ಲ ಅಂದಿದ್ದ.. ನಾವು ಯಥಾ ಪ್ರಕಾರ ನಕ್ಕು ಸುಮ್ಮನಾಗಿದ್ದೆವು.
           ಆ ನಂತರ ನಾನು ಹುಬ್ಬಳ್ಳಿ-ಧಾರವಾಡದ ಯುನಿವರ್ಸಿಟಿಗೆ ಹೋದಾಗ ಅಲ್ಲೆಲ್ಲೋ ಒಂದು ರೂಮಿನಲ್ಲಿ ಸಕಲಕಲಾವಲ್ಲಭ ಹೇಳಿದ ಎಲ್ಲ ಮಾಹಿತಿಗಳೂ ಲಭ್ಯವಾದವು. ಆ ಹೆಸರಾಂತ ಟ್ಯಾಬ್ಲಾಯ್ಡಿನ ಸಂಪಾದಕರ ಪರಾಕ್ರಮಗಳೆಲ್ಲ ಸಿಕ್ಕವು. ಆಗಲೇ ನನಗನ್ನಿಸಿದ್ದೆಂದರೆ ಸಕಲಕಲಾವಲ್ಲಭ ಹೇಳಿದ್ದೆಲ್ಲವೂ ಸುಳ್ಳಲ್ಲ. ಕೆಲವು ಸತ್ಯವೂ ಇದೆ ಎಂಬುದು.
           ಇಂತಹ ಸಕಲಕಲಾವಲ್ಲಭ ಮೊನ್ನೆ ಮೊನ್ನೆ ಸಂಬಂಧಿಕರ ಮದುವೆಯಲ್ಲಿ ಸಿಕ್ಕಿದ್ದ. ನಾನು ಸಂಬಂಧಿಕರ ಮದುವೆಯ ಕಾರಣ ತಯಾರಿ ಅದು ಇದೂ ಅಂತ ಒಂದೆರಡು ದಿನ ಮೊದಲೇ ಹೋಗಿದ್ದೆ. ಆತನೂ ತಯಾರಿಗೆ ಬಂದಿದ್ದ. ನನ್ನ ಅಣ್ಣ ಅವನ ಬಳಿ ಹೋಗಿ ನನ್ನ ಬಗ್ಗೆ ಹೇಳಿ ಇಬ್ಬರೂ ಸೇರಿ ಕೆಲಸ ಮಾಡ್ರಪ್ಪಾ ಅಂತ ಜವಾಬ್ದಾರಿ ಹೊರಿಸಿಬಿಟ್ಟಿದ್ದ. ಅಲ್ಲಿಂದ ಶುರುವಾಗಿತ್ತು ನನ್ನ ಪೀಕಲಾಟ.
          ಅದೊಂದು ಕಾರಣಕ್ಕೆ ನನಗೆ ಅಣ್ಣನ ಮನೆಯಿಂದ 10-12 ಕಿ.ಮಿ ದೂರವೇ ಇರುವ ಪಟ್ಟಣಕ್ಕೆ ಹೋಗಿ ಅದೇನೇನೋ ವಸ್ತುಗಳನ್ನು ತರಬೇಕಿತ್ತು. ಅಣ್ಣ ನನಗೆ ಕೆಲಸ ವಹಿಸಿದ್ದ. ಜೊತೆಗೆ ಸಕಲಕಲಾ ವಲ್ಲಭನನ್ನು ಕರೆದುಕೊಂಡು ಹೋಗು ಅಂದಿದ್ದ. ತಥ್ ಎಂದುಕೊಂಡೆನಾದರೂ ನಾನು ನನ್ನ ಪಲ್ಸರ್ ನ ಕಿವಿ ಹಿಂಡಿದ್ದೆ. ಅಷ್ಟರಲ್ಲಿ ಸಕಲಕಲಾವಲ್ಲಭ ತನ್ನ ಹೊಸ ಬೈಕನ್ನು ತೆಗೆದುಕೊಂಡು ಬಂದ. ನಾನು ನನ್ನ ಗಾಡಿಯಲ್ಲಿ ಹೋಗೋಣ ಎಂದೆ. ಆತ ಪಟ್ಟು ಬಿಡದೇ ಅವನ ಗಾಡಿಯಲ್ಲಿ ನನ್ನನ್ನು ಕುಳ್ಳಿರಿಸಿಕೊಂಡ. ನಾಣು ಕುಳಿತೆ. ಕುಳಿತ ತಕ್ಷಣ `ತಮಾ.. ಗಟ್ಟಿ ಹಿಡಿದುಕೊ..' ಎಂದ. ನಾನು ಹುಂದೆ. ಮುಂದೇನೋ ಶೋ ಇದೆ ಎಂದುಕೊಂಡೆ. ಅದಕ್ಕೆ ತಕ್ಕಂತೆ ಗಾಡಿ ಚಾಲೂ ಮಾಡಿದವನೇ ಒಂದು ಸಾರಿ ಬೈಕನ್ನು ರೋಂಯ್...ಎಂದು ಕೂಗಿಸಿದ. ನಾನೂ ವೇಗವಾಗಿ ಬೈಕ್ ಚಾಲನೆ ಮಾಡ್ತೀನಾದರೂ ತೀರಾ ವೀಲಿಂಗು ಇತ್ಯಾದಿ ಇತ್ಯಾದಿಯೆಲ್ಲ ನನಗೆ ಗೊತ್ತಿಲ್ಲ. ಇಂವ ಬೇರೆ ಎಕ್ಸಲರೇಟರ್ ಹೈ ಮಾಡಿ ಗಾಡಿಯನ್ನು ಕೂಗಿಸುತ್ತಿದ್ದಾನೆ. ದೇವರೆ ಏನಪ್ಪಾ ಗತಿ ಎಂದುಕೊಂಡು ಗಟ್ಟಿಯಾಗಿ ಬೈಕ್ ಹಿಡಿದು ಕುಳಿತೆ.
          ಶುರುವಾಯಿತು ನೋಡಿ ಪಯಣ. 15-20-25 ಕಿ.ಮಿ ವೇಗ. ಮೂರ್ನಾಲ್ಕು ಕಿ.ಮಿ ದೂರ ಬಂದರೂ ಗಾಡಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತಾದರೂ ವೇಗ ಮಾತ್ರ 25ನ್ನು ದಾಟಿ ಹೋಗುತ್ತಿರಲಿಲ್ಲ. ನಂಗ್ಯಾಕೋ ಅನುಮಾನ. `ಗಾಡಿ ಸಮಾ ಇದೆಯಾ..' ಎಂದು ಕೇಳಿದೆ. `ಹೋ .. ಹೊಸ ಗಾಡಿ.. ಸಮಾ ಇದೆಯಾ ಎಂದು ಕೇಳ್ತೀಯಲ್ಲ ಮಾರಾಯಾ..' ಎಂದ ಆತ. ನಾನು ಸುಮ್ಮನಾದೆ. ಮತ್ತೊಂದಷ್ಟು ದೂರ ಹೋದ ನಂತರ ನನಗೆ ಅನುಮಾನ ಬಂದು `ನೀ ಇನ್ನೂ ಎರಡನೇ ಗೇರ್ ನಲ್ಲೇ ಇದ್ದೀಯ ಅನ್ನಿಸುತ್ತದೆ.. ನಿನ್ನ ಗಾಡಿಗೆ ಇನ್ನೂ ಎರಡು ಗೇರ್ ಗಳಿವೆ. ಹಾಕು ಮಾರಾಯಾ..' ಅಂದೆ. `ಥೋ.. ಥೋ.. ಹಂಗೇನಿಲ್ಲ.. ನಾನೇ ಬೇಕು ಅಂತಲೇ ಹೀಗೆ ಹೊಡೀತಾ ಇದ್ದೇನೆ. ನೀನು ಸುಮ್ಮನಿರು..' ಎಂದನಾದರೂ ಮತ್ತೊಂದು ಗೇರನ್ನು ಹಾಕಿದ. ನಾನು ನಿಟ್ಟುಸಿರು ಬಿಟ್ಟೆ. ಕಷ್ಟಪಟ್ಟು ಆತನ ಬಳಿ ಗಲಾಟೆ ಮಾಡಿ ಬಾಕಿ ಇದ್ದ ಇನ್ನೂ ಒಂದು ಗೇರನ್ನು ಹಾಕಿಸಿದೆ.  ಬೈಕು 30 ಕಿ.ಮಿ ವೇಗದಲ್ಲಿ ಚಲಿಸುತ್ತಿತ್ತು. ಸಕಲಕಲಾವಲ್ಲಭ ಅಂದ `ಗಟ್ಟಿ ಹೊಡ್ಕೋ.. ನಾನು ಸಿಕ್ಕಾಫಟ್ಟೆ ಫಾಸ್ಟಾಗಿ ಹೋಗ್ತಾ ಇದ್ದೀನಿ.. ಇದು ನನ್ನ ಹೈಸ್ಪೀಡು..' ಅಂದ. ನಾನು ಪೆಚ್ಚಾದೆ.
         10-12 ಕಿಮಿ ದೂರದವನ್ನು ಆ ಪುಣ್ಯಾತ್ಮ ಒಂದು ತಾಸಿನಲ್ಲಿ ಮುಟ್ಟಿದಾಗ ಮಾತ್ರ ನನಗೆ ರೇಗಿ ಹೋಗಿತ್ತು. `ನಾನು ಬೈಕ್ ಹೊಡೆಯುತ್ತೇನೆ. ನೀನು ಕೂತಿರು ಹಿಂದೆ..' ಎಂದೆ. ಅದಕ್ಕಾತ ಸುತಾರಾಂ ಒಪ್ಪಲಿಲ್ಲ. ಇದೊಳ್ಳೆ ವಿಚಿತ್ರವಾಯಿತಲ್ಲ ತಥ್. ಎಂತಾ ಪೀಕಲಾಟ ಮಾರಾಯ್ರೆ ಎಂದುಕೊಂಡೆ. ಮತ್ತೊಮ್ಮೆ ಆ ಪುಣ್ಯಾತ್ಮನ ಜೊತೆಗೆ ಕುಳಿತುಕೊಂಡು ಬಂದೆ. ಬಂದು ತಕ್ಷಣವೇ ಅಣ್ಣನ ಬಳಿ ನಡೆದ ಎಲ್ಲ ವಿಷಯವನ್ನೂ ಹೇಳಿದೆ. ನಾನು ಬರುತ್ತಿದ್ದಂತೆಯೇ ನನ್ನ ಪಾಡು ನೋಡಿ ನಗಲಾರಂಭಿಸಿದ ಅಣ್ಣ ನನ್ನ ಕಥೆ ಕೇಳಿ ಸಿಕ್ಕಾಪಟ್ಟೆ ನಗಲಾರಂಭಿಸಿದ. ಸಕಲಕಲಾವಲ್ಲಭ ಸ್ವಲ್ಪ ದೂರಕ್ಕೆ ಹೋದ ತಕ್ಷಣವೇ `ಆತ ಬೈಕ್ ಹೆಂಗೆ ಹೊಡೀತಾನೆ ಅನ್ನೋದನ್ನು ನಿಂಗೆ ತೋರಿಸಬೇಕು ಅಂತಾನೇ ಈ ಜಾಲಿ ರೈಡ್ ಮಾಡಿಸಿದ್ದು..' ಎಂದ.
         `ಜಾಲಿರೈಡ್ ಮನೆ ಹಾಳಾಗಾ.. ನಾನು ಬೈಕ್ ಹೊಡಿತೇನೆ ಕೊಡೋ ಮಾರಾಯಾ ಅಂದ್ರೂ ಕೊಡಲಿಲ್ಲ,. ಇನ್ನು ಇವನ ಜೊತೆ ಎಲ್ಲೂ ಹೋಗೋದಿಲ್ಲ ಮಾರಾಯಾ..' ಎಂದೆ. ಮತ್ತೆ ನಕ್ಕ ಅಣ್ಣ.. `ನೀನು ಹೋಗುವ ಮುನ್ನ ನಾನು ಅವನಬಳಿ ನಿನ್ನನ್ನು ತೋರಿಸಿ ನಿಂಗೆ ಬೈಕ್ ಹೊಡೆಯೋಕೆ ಬರೋದಿಲ್ಲ.. ಬೈಕ್ ಕೇಳಿದರೂ ಕೊಡಬೇಡ. ನಿನ್ನ ಹೊಸ ಬೈಕ್ ಹಾಳುಮಾಡಿಕೊಳ್ಳಬೇಡ ಅಂತ ಸಕಲಕಲಾವಲ್ಲಭನ ಬಳಿ ಹೇಳಿದ್ದೆ..' ಎಂದ. ನಾನು ಪೆಚ್ಚಾದೆ. ಆ ನಂತರ ಅನೇಕ ಸಾರಿ  ಆತ ನನ್ನನ್ನು ಅಲ್ಲಿಗೆ ಹೋಗೋಣ ಬಾ, ಇಲ್ಲಿಗೆ ಹೋಗೋಣ ಬಾ ಎಂದರೂ ನಾನು ಮಾತ್ರ ಊಹೂಂ.. ಹೋಗಲಿಲ್ಲ.
                

Tuesday, September 23, 2014

ನೀನೆಂಬ ನನ್ನೊಲವು

(ರೂಪದರ್ಶಿ : ಅನುಷಾ ಹೆಗಡೆ)
ಕವಿತೆಯಾಗಿ ನೀನು
ನನ್ನ ಬಳಿಗೆ ಬಂದೆ
ಮರೆಯದ ನಗುವಾಗಿ
ನೂರು ಕಾಲ ನಿಂತೆ ||

ಹಾರುವ ಮುಂಗುರುಳು
ಮನಕೆ ರೆಕ್ಕೆ ನೀಡಿದೆ
ಸೆಳೆಯುವ ಕಣ್ಣೋಟ
ನನ್ನೊಲವನು ತೀಡಿದೆ ||

ನಿನ್ನ ಮಾತು ಸದಾಕಾಲ
ಕಿವಿಯೊಳಗೆ ರಿಂಗಣ
ಹಾಲಿನಂತ ಮುಗುಳ್ನಗು
ನನ್ನ ಮನವು ತಲ್ಲಣ ||

ನಿನ್ನ ನಾನು ಕಂಡಾಗಲೇ
ಮನದಿ ಹರುಷ ಹರುಷ
ನಿನಗಾಗಿ ಕಾಯುವೆನು
ನಾನು ನೂರು ವರುಷ ||


***
(ಎಂದೋ ಅರ್ಧ ಬರೆದು ಇಟ್ಟಿದ್ದ ಈ ಕವಿತೆಯನ್ನು ಪೂರ್ತಿ ಮಾಡಿದ್ದು ಸೆ.23, 2014ರಂದು ಶಿರಸಿಯಲ್ಲಿ )
(ಈ ಕವಿತೆಗೆ ರೂಪದರ್ಶಿಯಾಗಿ ಭಾವಚಿತ್ರ ಬಳಕೆಗೆ ಅನುಮತಿ ನೀಡಿದ ಅನುಷಾ ಹೆಗಡೆಗೆ ಧನ್ಯವಾದಗಳು)

Thursday, September 18, 2014

ನಿನಗಾಗಿ

ನಿನಗಾಗಿ ಕೇಳೆ ಓ ಗೆಳತಿ
ಹೃದಯವೊಂದು ಕಾದಿದೆ |
ನಿನ್ನ ನೆನಪ ನೆರಳಿನಲ್ಲಿ
ಜೀವ ಹಿಡಿದು ನಿಂತಿದೆ ||

ಧಮನಿಯ ಎಳೆ ಎಳೆಗಳಲ್ಲಿ
ನಿನ್ನ ಬಿಂಬ ತುಂಬಿದೆ |
ನಿನ್ನ ಪ್ರೀತಿ ಹಸಿರಿಗಾಗಿ
ಸಕಲ ಕಾಲವೂ ಕಾದಿದೆ ||

ನೀನೆಂದರೆ ಹೃದಯಕಾಯ್ತು
ಜೀವ-ಪ್ರೀತಿ-ಉಸಿರು |
ನೀನು ಮರೆತೆನೆಂದರಾಯ್ತು
ಹರಿದು ಬಿಡುವುದು ನೆತ್ತರು ||

ಹೃದಯ-ಮನಸು ನಿನ್ನದಂತೆ
ತನ್ನ ಜೀವ ಮರೆತಿದೆ |
ತನ್ನ ಪ್ರಾಣಕಿಂತ ಮಿಗಿಲು
ನಿನ್ನ ಒಲವ ಬಯಸಿದೆ ||

***
(ಈ ಕವಿತೆಯನ್ನು ಬರೆದಿರುವುದು ದಂಟಕಲ್ಲಿನಲ್ಲಿ 05-12-2006ರಂದು)

ಸೋದೆ ಸದಾಶಿವರಾಯನ ನೆಪದಲ್ಲಿ ಇತಿಹಾಸದ ಪುಟಗಳಲ್ಲಿ ಓಡಾಟ


ಚರಿತ್ರೆಯ ಪುಟದಲ್ಲಿ ಮರೆಯಾದ ಸೋದೆಯ ವಿದ್ವಾಂಸ ದೊರೆ ಸದಾಶಿವರಾಯಯನ್ನು ಸ್ಮರಿಸುವ ಸಲುವಾಗಿ, ಸಾರಸ್ವತ ಲೋಕದಿಂದಲೂ ಕಡೆಗಣಿಸಲ್ಪಟ್ಟ ಶ್ರೇಷ್ಠ ಇತಿಹಾಸ ತಜ್ಞರಿಗೆ ಮತ್ತು ಇತಿಹಾಸ ಸಂಶೋಧಕರಿಗೆ ಇವನ ಹೆಸರಿನಲ್ಲಿಯೇ `ಸೋದೆ ಸದಾಶಿವರಾಯ ಪ್ರಶಸ್ತಿ'ಯನ್ನ ಕೊಡುವ ಕಾರ್ಯಕ್ರಮವೊಂದು ಶಿರಸಿಯಲ್ಲಿ ಆಯೋಜನೆಯಾಗಿದೆ.
ಈ ವರ್ಷದಿಂದ ಪ್ರತಿ ವರ್ಷ ಶಿರಸಿಯಲ್ಲಿ ಸೋದೆಯ ಮೂರು ಮಠಗಳಾದ ಸ್ವರ್ಣವಲ್ಲೀ ಮಠ, ಸೋದೆ ವಾದಿರಾಜಮಠ, ಸ್ವಾದಿ ಜೈನಮಠ ಹಾಗೂ ಶ್ರೀನಿಕೇತನ ವಿದ್ಯಾಲಯ ಸಹಯೋಗದಲ್ಲಿ ಜಾಗೃತವೇದಿಕೆ ಸೋಂದಾ(ರಿ) ಇವರು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಿತಿಯ ಮೂಲಕ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನವನ್ನ ಸಂಘಟಿಸಿ ಈ ಪ್ರಶಸ್ತಿಯನ್ನ ಪ್ರದಾನ ಮಾಡಲಾಗುತ್ತದೆ. ಸೆ.20ರಂದು ಶಿರಸಿಯಲ್ಲಿ ಡಾ. ಶ್ರೀನಿವಾಸ ರಿತ್ತಿಯವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪ್ರಾದೇಶಿಕ ಇತಿಹಾಸದ ಜಾಗೃತಿ, ವಿದ್ಯಾರ್ಥಿಗಳಲ್ಲಿ ಇತಿಹಾಸದಲ್ಲಿ ಆಸಕ್ತಿ ಮೂಡಿಸುವುದು ಮತ್ತು ಮರೆಯಲ್ಲಿರುವ ಇತಿಹಾಸ ತಜ್ಞರನ್ನು ಗೌರವಿಸುವುದು ಇದರ ಉದ್ದೇಶವಾಗಿದೆ. ಇನ್ಮೂಲಕ  ಸದಾಶಿವರಾಯನೂ ಚಿರಂತನವಾಗಲಿ ಎನ್ನುವುದು ಈ ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ.
ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಈಗಿನ ಸೋಂದಾ ಹಾಗೂ ಸುತ್ತಮುತ್ತಲ ಪ್ರದೇಶಗಳ ಅರಸರ ಆಳ್ವಿಕೆಯಲ್ಲಿ ರಾಜಧಾನಿಯಾಗಿ ಮೆರೆದ ಸುಂದರ ಸ್ಥಳ. ಪ್ರಕೃತಿಯ ರಮಣೀಯತೆಯ ಮಧ್ಯೆ ಕಂಗೊಳಿಸುತ್ತಿರುವ ಸೋದೆ ಪ್ರದೇಶದಲ್ಲಿ ಮಠಗಳು, ಮಂದಿರಗಳು ಕೋಟೆ ಕೊತ್ತಲೆಗಳು, ಇನ್ನಿತರ ಐತಿಹಾಸಿಕ ಕುರುಹುಗಳು ಸೋದೆ ಅರಸರ ಆಳ್ವಿಕೆಯ ಕುರುಹುಗಳೇ ಆಗಿವೆ. ಸೋದೆಯ ಅರಸರ ಸಾಮ್ರಾಜ್ಯದ ಪ್ರಮುಖ ಅರಸರುಗಳೆಂದರೆ ಇಮ್ಮಡಿ ಅರಸಪ್ಪ ನಾಯಕ, ರಾಮಚಂದ್ರ ನಾಯಕ, ಮಧುಲಿಂಗ ನಾಯಕ, ರಘುನಾಥ ನಾಯಕ, ಇಮ್ಮಡಿ ಸದಾಶಿವರಾಯ. ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಪ್ರದೇಶ, ಘಟ್ಟದ ಕೆಳಗಿನ ಪ್ರದೇಶ, ಹಾವೇರಿ ಜಿಲ್ಲೆಯ ಹಾನಗಲ್, ಶಿವಮೊಗ್ಗ ಜಿಲ್ಲೆಯ ಸೊರಬ ಈ ಮುಂತಾದ ಪ್ರದೇಶಗಳಲ್ಲಿ ಅಜಮಾಸು 230ವರ್ಷ ಸಮೃದ್ಧ ಆಳ್ವಿಕೆಯನ್ನು ನೀಡಿದ್ದ ಈ ಸೋದೆ ಸಾಮ್ರಾಜ್ಯ ಮೈಸೂರಿನ ಹೈದರಾಲಿಯ ದಾಳಿಗೆ ಸಿಲುಕಿ ಕ್ರಿ.ಶ. 1763ರಲ್ಲಿ ಅವನತಿಯನ್ನ ಕಂಡಿತು.
ಇಂತಹ ಸುಂದರ ಸಾಮ್ರಾಜ್ಯದ ಪ್ರಬಲ ಅರಸನಾಗಿ ಆಳ್ವಿಕೆ ಮಾಡಿದ ಮಹಾನ್ ವ್ಯಕ್ತಿತ್ವದ ಅರಸನೇ ಸೋದೆಯ ಇಮ್ಮಡಿ ಸದಾಶಿವರಾಯ. ಚರಿತ್ರೆಯ  ಪುಟಗಳಲ್ಲಿ ಸಾಮಂತ ಸಾಮ್ರಾಜ್ಯದ ಸಾಮಂತ ಅರಸರು ಸ್ವತಂತ್ರ ಅರಸರಿಗಿಂತ ಮಿಗಿಲಾದ ವ್ಯಕ್ತಿತ್ವವನ್ನು ಹೊಂದಿದ್ದು ಅವರಿಗಿಂತ ಹೆಚ್ಚು ಸಾಧನೆ ಮಾಡಿದ್ದರೂ ಇತಿಹಾಸ ಪುಟಗಳಲ್ಲಿ  ಹೊಳೆಯದಿದ್ದರೂ ಕನಿಷ್ಠ ಪಕ್ಷ ಒಂದು ಸಾಲಿನ ಸ್ಥಾನವನ್ನು ಪಡೆಯದಿರುವುದು ದುರದೃಷ್ಟಕರ. ಇಂತಹ ಅನೇಕ ಸಾಮಂತ ಅರಸರು ನಮ್ಮ ನೆಲದಲ್ಲಿ ಮಿಂಚಿ ಮರೆಯಾಗಿದ್ದಾರೆ. ಅವರಲ್ಲಿ ಅಗ್ರಗಣ್ಯನೇ ಸೋದೆಯ ಸದಾಶಿವರಾಯ. ಈತ ಸೋದೆಯನ್ನ ಕ್ರಿ.ಶ. 1618ರ ವರೆಗೆ ಅರಸನಾಗಿ ಆಳ್ವಿಕೆ ಮಾಡಿದ್ದ. ತನ್ನ 26 ವರ್ಷಗಳ ಈ ಸುದೀರ್ಘ ಅವಧಿಯಲ್ಲಿ ಕಲೆ, ಸಂಸ್ಕೃತಿ, ಧರ್ಮ, ಸಾಹಿತ್ಯ, ವಾಸ್ತು ಶಿಲ್ಪಕ್ಕೆ ಈತನ ಕೊಡಿಗೆ ಅನನ್ಯ, ಅನುಪಮವಾದುದು.
ಸದಾಶಿವರಾಯ ಮಧುಲಿಂಗ ನಾಯಕನ ಪುತ್ರ. ಪ್ರಸಿದ್ಧಳಾಗಿರುವ ಬೆಳವಡಿ ಮಲ್ಲಮ್ಮಳ ಸಹೋದರ ಬಾಲ್ಯದಿಂದಲೇ ಚುರುಕುಮತಿಯಾಗಿದ್ದ ಸದಾಶಿವರಾಯ ಚತುರ್ಭಾಷಾ ಪಂಡಿತ. ಕನ್ನಡ, ಸಂಸ್ಕೃತ, ಉರ್ದು, ಮರಾಠಿ ಭಾಷೆಯಲ್ಲಿ ಪರಿಣಿತಿಯನ್ನು ಸಾಧಿಸಿದ್ದ. ನಂತರ ಅಣ್ಣನಾದ ರಾಮಚಂದ್ರ ನಾಯಕನ ಆಳ್ವಿಕೆಯ ನಂತರ ವಂಶಪಾರಂಪರ್ಯವಾಗಿ ಸೋದೆಯ ಅರಸನಾಗಿ ಸಿಂಹಾಸನ ಅಲಂಕರಿಸಿದ.
ಆಡಳಿತದಲ್ಲಿ ನಿಷ್ಣಾತನಾಗಿದ್ದ ಈತ ಸಾಮ್ರಾಜ್ಯವನ್ನು ಘಟ್ಟದ ಕೆಳಗಿನ ಕಾರವಾರದವರೆಗೆ ವಿಸ್ತರಿಸಿ ಅಲ್ಲಿ ತನ್ನ ಹೆಸರಿನಲ್ಲಿ ಸದಾಶಿವಗಡ ಕೋಟೆಯನ್ನು ನಿರ್ಮಿಸಿದ. ಪೋರ್ಚುಗೀಸರ ಜೊತೆ ಒಡಂಬಡಿಕೆಯನ್ನ ಮಾಡಿಕೊಂಡು ವ್ಯಾಪಾರದಲ್ಲಿ ಹಿಡಿತಸಾಧಿಸಿ ರಾಜ್ಯವನ್ನ ಆರ್ಥಿಕವಾಗಿ ಬಲಪಡಿಸಿದ ಅವನ ಆಳ್ವಿಕೆಯ ಕಾಲದಲ್ಲಿ ಸೋದೆ ರಾಜ್ಯದ ಮೇಲೆ ಕಣ್ಣಿಟ್ಟಿದ್ದ ಕೆಳದಿ ಅರಸರು ಮತ್ತು ಮೊಘಲರ ದಾಳಿಯನ್ನ ತಡೆಗಟ್ಟಲು ಬಿಜಾಪುರದ ಆದಿಲ್ಷಾಹಿಗಳ ಸಹಾಯವನ್ನು ಪಡೆದಿದ್ದ. ಬಿಜಾಪುರದ ಅದಿಲ್ ಶಾಹಿಗಳ ಜೊತೆ ಉತ್ತಮ ಬಾಂಧವ್ಯವನ್ನ ಹೊಂದಿದ್ದ ಈತನ ಸಾಮ್ರಾಜ್ಯದ ಮೇಲೆ ವೈರಿಗಳು ದಾಳಿ ಮಾಡಿದಾಗ ಸಹಾಯಕ್ಕೆ ಬರುತ್ತಿದ್ದವರು ಬಿಜಾಪುರದ ಆದಿಲ್ಷಾಹಿಗಳು.
ಸದಾಶಿವರಾಯನ ಮೇಲೆ ಆದಿಲ್ಷಾಹಿಗಳ ಪ್ರಭಾವ ಹೇಗಿತ್ತೆಂದರೆ ಈತನು ಇದೇ ಇಸ್ಲಾಮಿಕ್ ಶೈಲಿಯ ಅನೇಕ ಸ್ಮಾರಕಗಳನ್ನ ಶಿರಸಿ ಮತ್ತು ಸೋದೆಯಲ್ಲಿ ನಿರ್ಮಿಸಿದ್ದ. ಮುಖ್ಯವಾಗಿ ಸೋದೆಯಲ್ಲಿರುವ ಗದ್ದಿಗೆ ಸ್ಮಾರಕ ಇದೊಂದು ತೀರಾ ಅಪರೂಪದ ಸ್ಮಾರಕ. ಇಡೀ ದಕ್ಷಿಣ ಭಾರತದಲ್ಲೇ ಇದು ಅಪರೂಪದ್ದು  ಎನ್ನಿಸಿಕೊಂಡಿದೆ. ಇದು 40 ಅಂಕಣದ ಕರಿಕಲ್ಲಿನ ಬೃಹತ್ ಅರಮನೆಯಾಗಿದೆ. ಮುಂದೆ ಇವನ ಸಮಾಧಿಯನ್ನ ಇಲ್ಲೇ  ಮಾಡಲಾಯಿತು. ಇಂದಿಗೂ ಸದಾಶಿವರಾಯನ ಸಮಾಧಿಯನ್ನು ಸೋದೆಯ ಗದ್ದಿಗೆ ಮನೆಯಲ್ಲಿ ಕಾಣಬಹುದು. ಇವನ ಗದ್ದಿಗೆಯಿಂದಾಗಿಯೇ ಈ ಸ್ಥಳಕ್ಕೆ ಆ ಹೆಸರು ಬಂದಿದೆ. ಸದಾಶಿವರಾಯನ ಇನ್ನೊಂದು ಪ್ರಮುಖ ಇಂಡೋ ಇಸ್ಲಾಮಿಕ್ ವಸ್ತುಶಿಲ್ಪೀಯ ಕೊಡುಗೆ ಎಂದರೆ ಶಿರಸಿಯಲ್ಲಿರುವ ' ಮುಸುಕಿನ ಬಾವಿ'. ಇದನ್ನು ತನಗೆ  ಸ್ಪೂರ್ತಿ ಯಾಗಿದ್ದ ತನ್ನ ಪ್ರೇಯಸಿಯೋರ್ವಳಿಗೆ ಆತ ನಿರ್ಮಿಸಿದ್ದ, ಇದೊಂದು  ಪ್ರೇಮ ಸ್ಮಾರಕವಾಗಿ ಮೌನವಾಗಿ ನಿಂತಿದೆ.
ಸೋದೆಯ ಹಳೆಯೂರು ಎಂಬಲ್ಲಿ ಶಂಕರನಾರಾಯಣ ದೇವಾಲಯ ನಿರ್ಮಿಸಿದವನೂ ಕೂಡ ಸದಾಶಿವರಾಯನೇ. ಇದರಲ್ಲಿ ಶಂಕರ ಮತ್ತು ನಾರಾಯಣರ ಎರಡು ಪ್ರತ್ಯೇಕ ಗರ್ಭಗುಡಿಗಳಿದ್ದು ಶೈವ ಮತ್ತು ವೈಷ್ಣವರ ಮಧ್ಯೆ ಮಧುರ ಬಾಂಧವ್ಯ ಸ್ಥಾಪನೆಗೆಂದೇ ಸದಾಶಿವರಾಯ ಇದನ್ನು ನಿಮರ್ಮಿಸಿದ್ದು ಇದರಿಂದ ಆತನ ಸೌಹಾರ್ದ ಭಾವನೆ ಅರ್ಥವಾಗುತ್ತದೆ. ಹಾಗೆಯೇ ಸೋದೆಯಲ್ಲಿ ಸದಾಶಿವ ದೇವಸ್ಥಾನ ಮತ್ತು ಮೊಘಲರಿಂದ ರಕ್ಷಣೆ ಪಡೆಯಲೆಂದು ಸ್ವರ್ಣವಲ್ಲೀ ಮಠದ ಸಮೀಪ ನಿರ್ಮಿಸಿರುವ ಕೋಟೆ ಇವನ  ನಿರ್ಮಾಣವೇ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗ ಕರ್ನಾಟಕದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶಿರಸಿಯ ಮಾರಿಕಾಂಬಾ ದೇವಾಲಯವನ್ನು ನಿರ್ಮಿಸಿದವನು ಇದೇ ಸದಾಶಿವರಾಯ ಎಂಬುದು ಉಲ್ಲೇಖನೀಯ ಸಂಗತಿ. ಬನವಾಸಿಯಲ್ಲಿ ಸದಾಶಿವೇಶ್ವರ ದೇವಾಲಯ ನಿರ್ಮಾಣ ಮತ್ತು ಸುಂದರವಾದ ತ್ರಿಲೋಕಮಂಟಪವೂ ಸದಾಶಿವ ರಾಯನ ಕೊಡುಗೆಯೇ ಆಗಿದೆ.
ಆತನ ಸಾಂಸ್ಕೃತಿಕ ಕಳಕಳಿ ಬಹು ವಿಶಿಷ್ಟವಾದುದು. ಬಿಜಾಪುರ ಆದಿಲ್ಷಾಹಿಗಳಿಗೆ ತೋರಿಸುವ ಸಲುವಾಗಿ ತನ್ನ ರಾಜ್ಯದ ಒಂದು ಯಕ್ಷಗಾನ ಮೇಳವನ್ನ ಬಿಜಾಪುರಕ್ಕೆ ಕರೆದುಕೊಂಡುಹೋಗಿ ಆಡಿಸಿದ್ದ ಎಂಬುದು ಯಕ್ಷಗಾನದ ಚರಿತ್ರೆಗೆ ಸಂಬಂಧಿಸಿದಂತೆಯೂ ಮಹತ್ವದ ಸಂಗತಿಯಾಗುತ್ತದೆ. ಇದು ಸದಾಶಿವರಾಯನ ಒಂದು ಮುಖವಾದರೆ ಇನ್ನೊಂದು ಮುಖ ಆತನ ಸಾಹಿತ್ಯದ ಮುಖ. ಆತ ಆಡಳಿತಾತ್ಮಕವಾಗಿ ಎಷ್ಟು ಉತ್ತಮ ಅರಸನಾಗಿದ್ದನೋ ಸಾಹಿತ್ಯಿಕವಾಗಿಯೂ ಅಷ್ಟೇ ದೊಡ್ಡ ವಿದ್ವಾಂಸನಾಗಿದ್ದ.
ಆ ಕಾಲದಲ್ಲೇ ಆತ ಹದಿನೇಳು ಕೃತಿಗಳನ್ನ ರಚಿಸಿದ್ದ, ಅದರಲ್ಲಿ ಈಗ ಒಂದು ಪ್ರಕಟಗೊಂಡಿದೆ. 'ಸದಾಶಿವ ನೀತಿ'. ಇದನ್ನ ಹೊರತುಪಡಿಸಿ ಆತನ ಇನ್ನಿತರರ ಕೃತಿಗಳೆಂದರೆ ಸ್ವರವಚನಗಳು, ಸಮಸ್ಯಾಪೂರ್ಣ ವೃತ್ತಕಂದ, ರಾಗಮಾಲಿಕೆ, ಪಂಚವಿಂಶತಿ ಲೀಲೆಯ ರಗಳೆ, ತ್ರಿವಿಧಿ, ಉಳುವೆಯ ಮಹಾತ್ಮೆ, ಜೋಗುಳ ಪದಗಳು, ನವರಸ ಜಕ್ಕಿಣಿ, ಪಂಚವಿಂಶತಿ ಲೀಲೆಯ ಮೂಲ ಪದ್ಯ, ಜಾವಡಿ, ಭಿಕ್ಷಾಟನಾ ಲೀಲೆಯ ಕಂದ, ಖಡ್ಗ ಪ್ರಬಂಧ, ಮಂಗಲಾಷ್ಟಿಕೆಗಳು, ಪ್ರಭುಲಿಂಗ ಲೀಲೆಯ ಜಾವಡಿ ಮಹಾ ಚದುರಂಗ ಲಕ್ಷಣ, ಕಲಹಕೇತಯ್ಯಗಳ ಲಕ್ಷಣ, ಕಂದಪದ್ಯ, ಮುಂತಾದವು. ಇಂತಹ ನಾಯಕನ ನೆನಪಿಗೋಸ್ಕರ ಹಾಗೂ ಇತಿಹಾಸದ ಪುಟಗಳಲ್ಲಿ ಮತ್ತೊಮ್ಮೆ ಕನ್ಣಾಡಿಸುವ ಸಲುವಾಗಿ ರಾಜ್ಯಮಟ್ಟದ ಇತಿಹಾಸ ಮೇಳಕ್ಕೆ ಶಿರಸಿ ಸಜ್ಜಾಗುತ್ತಿದೆ. ಇತಿಹಾಸ ತಜ್ಞರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

***
(ಸೆ.18ರ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.)
(ಪೂರಕ ಮಾಹಿತಿ ನಿಡಿದವರು ಇತಿಹಾಸ ತಜ್ಷ ಲಕ್ಷ್ಮೀಶ ಹೆಗಡೆ ಸೋಂದಾ)

Wednesday, September 17, 2014

ಚಿತ್ರ-ವಿಚಿತ್ರ

ಪಪ್ಪುವಿನ ಬಯಕೆ

ಮೋದಿಯ ಫ್ಯಾನಿಗೆ
ಬಿರುಗಾಳಿಗೆ ಬಲಿಯಾಗಿ
ಪಪ್ಪೂ ಅಳಲು
`ನನಗೂ ಕಮಲ ಬೇಕು...'

***
ಆಗ್ರಹ

ನಮ್ಮೂರ ಹಾಲು ಡೇರಿ ಸಂಘದ ಚುನಾವಣೆಯಲ್ಲಿ ರಂಗಣ್ಣಂಗೆ ಗೆಲುವು..
`ಇದು ಮೋದಿ ವೈಫಲ್ಯದ ಪರಮಾವಧಿ. ಕೂಡಲೇ ಪಿ. ಎಂ. ಸ್ಥಾನಕ್ಕೆ ರಾಜಿನಾಮೆ ಕೋಡಬೇಕು' : ಪಪ್ಪೂ

***

ಕಲಿ

ಯಾರೇ ಕೂಗಾಡಲಿ..
ಊರೇ ಹೋರಾಡಲಿ
ವಾಟಾಳ ಮಾತ್ರ
ಗಂಡುಗಲಿ |

***

ಚಿತ್ರನಟ

ಅಂಬರೀಶ್ ಚಿತ್ರದ ಹೆಸರು
ಮಂಡ್ಯದ ಗಂಡು
ಕುಮಾರಣ್ಣನ ಮಗ ನಿಖಿಲ
ಸಿನಿಮಾ ಹೀರೋ ಆದರೆ
ಚಿತ್ರದ ಹೆಗಡೆ
ಹಾಸನದ ಗುಂಡು |

**

ಲೈಕ್ ಪ್ರಿಯ

ಬಾಕ್ಸಿಂಗ್ ಚತುರ
ಮೈಕ್ ಟೈಸನ್..
ಲೈಕ್ ಒತ್ತುವ ಚತುರ
ಲೈಕ್ ಟೈಸನ್ |