Sunday, September 7, 2014

ನನ್ನ ಒಲವು

ನೀನೆಂದರೆ ಒಲವ ಖನಿ
ಪ್ರೀತಿಯ ಬನಿ |

ಎದೆಯಾಳದಲ್ಲಿ ಹುದುಗಿಟ್ಟ
ಅವ್ಯಕ್ತ ಬಾವ ನೀನು |
ಕಣ್ಣಲ್ಲಿ ಜಿನುಗಿದ್ದರೂ 
ಉದುರದ ನೀರು ನೀನು |

ಬಾಯಿ ಬೊಚ್ಚಾಗಿದ್ದರೂ
ಉಕ್ಕುವ ನಗು ನೀನು |
ಮಗುವಿನ ಒಡಲಿನಿಂದ 
ಇಳಿವ ಕೇಕೆ ನೀನು |

ಶತಮಾನಗಳಿಂದ ಬಂದ
ಸಂಪ್ರದಾಯ ನೀನು |
ಹರಿವ ನದಿಗೆ ಅಡ್ಡಾಗಿ
ಕಟ್ಟಿದ ಒಡ್ಡು ನೀನು |

ಮರೆತರೂ ಮರೆಯದ
ಸೇಡಿನ ಕಿಡಿ ನೀನು |
ವರ್ಷಗಳುರುಳಿದರೂ ಮಾಯದ
ಗಾಯದ ಕಲೆ ನೀನು |

ಒಲವೇ ಹೀಗೆ ಸದಾ ಕಾಲ ಕಾಡುತ್ತದೆ
ಬಿಡದೇ ಸೆಳೆಯುತ್ತದೆ. |
ಒಳಗೊಳಗೆ ಮೊಳೆಯುತ್ತದೆ.
ಹೆಮ್ಮರವಾಗಿ ನಿಲ್ಲುತ್ತದೆ |

**

(ಈ ಕವಿತೆಯನ್ನು ಬರೆದಿದ್ದು 07-09-2014ರಂದು ಶಿರಸಿಯಲ್ಲಿ)

Friday, September 5, 2014

ಬೆಂಗಾಲಿ ಸುಂದರಿ-24

(ಬಾಂಗ್ಲಾದಲ್ಲಿ ಹಿಂದೂ ಹಬ್ಬದ ಆಚರಣೆ)
             ತುಳಿದಷ್ಟೂ ದಾರಿ ದೂರವಾಗುತ್ತಿದೆಯಾ ಎನ್ನಿಸುತ್ತಿತ್ತು. ಬಂಗಾಳದಲ್ಲಿ ಮುಂಜಾವು ಆಗಷ್ಟೆ ಕಣ್ತೆರೆಯುತ್ತಿತ್ತು. ಸೂರ್ಯ ನಿಧಾನವಾಗಿ ಮೂಡಣದಲ್ಲಿ ಏರಿ ಬರುತ್ತಿದ್ದ. ಬಾನು ರಂಗೇರಿತ್ತು. ಬೆಳಗಿನ ಹೊಸ ಹುಮ್ಮಸ್ಸು ವಿನಯಚಂದ್ರ ಸಾಕಷ್ಟು ವೇಗವಾಗಿ ಸೈಕಲ್ ತುಳಿಯುತ್ತಲೇ ಇದ್ದ. ಸಲೀಂ ಚಾಚಾ ರಾತ್ರಿಯೆಲ್ಲ ಸೈಕಲ್ ತುಳಿದ ಕಾರಣ ಈಗತಾನೆ ನಿದ್ದೆಗೆ ಜಾರಿದ್ದ. ಚಾಚಾನಿಗೆ ವಯಸ್ಸಾಗಿದ್ದರೂ ಕೂಡ ಮೈಯಲ್ಲಿ ಬಹಳ ಕಸುವನ್ನು ಹೊಂದಿದ್ದಾನೆ. ಅದೆಷ್ಟು ದಶಕಗಳ ಕಾಲ ಸೈಕಲ್ ತುಳಿದಿದ್ದನೋ ಚಾಚಾ. ಈಗಲೂ ಯುವಕರನ್ನು ನಾಚಿಸುವಂತೆ ಸೈಕಲ್ ತುಳಿಯಿತ್ತಿದ್ದ. ಚಾಚಾನ ವೇಗ, ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆ ವಿನಯಚಂದ್ರನನ್ನು ಬೆರಗುಗೊಳಿಸಿದ್ದವು. ಈ ಚಾಚಾನ ಸಹಾಯ, ಸಹಯೋಗ ಇಲ್ಲದಿದ್ದರೆ ಬಾಂಗ್ಲಾದ ಯಾವುದೋ ಗಲ್ಲಿಯಲ್ಲಿ ಹೆಣವಾಗಿ ಬೀಳುತ್ತಿದ್ದೆವು ತಾವು ಎಂದುಕೊಂಡ ವಿನಯಚಂದ್ರ.
                ರಸ್ತೆಯಲ್ಲಿ ಆಗೊಮ್ಮೆ ಈಗೊಮ್ಮೆ ವಾಹನಗಳು ಭರ್ರೆಂದು ಹಾದು ಹೋಗುತ್ತಿದ್ದವು. ಕಾಲಿಯಾಖೈರ್ ನ ಹೊರ ರಸ್ತೆಯಲ್ಲಿ ಸಾಗಿ ಮಿರ್ಜಾಪುರದ ರಸ್ತೆಯ ಕಡೆಗೆ ಹೊರಳುವ ವೇಳೆಗೆ ಆಗಲೇ ಸೂರ್ಯ ತನ್ನ ಮೊದಲ ಕಿರಣಗಳನ್ನು ಭೂಮಿಯ ಮೇಲೆ ಚೆಲ್ಲಿಯಾಗಿತ್ತು. ಕಾಲಿಯಾಖೈರ್ ದಾಟುತ್ತಿದ್ದಂತೆ ಮತ್ತೆ ವಿಸ್ತಾರವಾದ ಗದ್ದೆಯ ಬಯಲುಗಳು ಕಾಣಿಸಿದವು. ಗದ್ದೆಬಯಲಿನ ಕೊನೆಯಲ್ಲಿ ಗೆರೆ ಎಳೆದಂತೆ ನದಿಯೊಂದು ಹಾದು ಹೋಗಿತ್ತು. ಬ್ರಹ್ಮಪುತ್ರಾ ನದಿಯ ಒಡಲನ್ನು ಸೇರುವ ಈ ನದಿಯನ್ನು ನಾವು ದಾಟಿ ಬಂದಿದ್ದೇವೆ ಎಂದುಕೊಂಡ ವಿನಯಚಂದ್ರ.
               ಮಾತಿನ ಹುಕಿಗೆ ಬಿದ್ದಿದ್ದ ಮಧುಮಿತಾ `ಮಳೆಗಾಲದಲ್ಲಿ ಪ್ರವಾಹ ಉಕ್ಕೇರಿದಾಗ ಬ್ರಹ್ಮಪುತ್ರಾ ನದಿ ಈ ಪ್ರದೇಶವನ್ನೆಲ್ಲ ಮುಳುಗಿಸಿಬಿಡುತ್ತದೆ..' ಎಂದಳು.
              `ಹಾಗಾದರೆ ಬ್ರಹ್ಮಪುತ್ರಾ ನದಿ ಕೂಡ ಇಲ್ಲೇ ಎಲ್ಲೋ ಹತ್ತಿರದಲ್ಲಿರಬೇಕು..' ಎಂದು ಕೇಳಿದ ವಿನಯಚಂದ್ರ.
                `ಊಹೂಂ. ಆ ನದಿ ಸಾಕಷ್ಟು ದೂರದಲ್ಲಿಯೇ ಇದೆ. ಆದರೆ ಮಳೆಗಾಲದಲ್ಲಿ ಅದರಲ್ಲಿ ನೀರಿನ ಹರಿವು ಸಿಕ್ಕಾಪಟ್ಟೆ ಜಾಸ್ತಿಯಾಗಿರುತ್ತದೆ. ಬಾಂಗ್ಲಾ ನಾಡು ಬಯಲು. ಈ ಗದ್ದೆ ಬಯಲಿನ ತುಂಬೆಲ್ಲ ನೀರು ತುಂಬಿ ಬಿಡುತ್ತವೆ. ಜೊತೆಗೆ ಮಳೆಗಾಲದ ಸಂದರ್ಭದಲ್ಲಿ ಬ್ರಹ್ಮಪುತ್ರ ನದಿಯ ಉಪನದಿಗಳೂ ಉಕ್ಕೇರುವ ಕಾರಣ ನೀರು ಎಲ್ಲೆಂದರಲ್ಲಿ ನಿಲ್ಲುತ್ತವೆ. ಮಳೆಗಾಲದಲ್ಲಿ ನೋಡಬೇಕು. ಆಗ ಈ ರಸ್ತೆಯಿದೆಯಲ್ಲ ಇದರ ಅಕ್ಕಪಕ್ಕದಲ್ಲೆಲ್ಲ ನೀರು ನಿಂತಿರುತ್ತವೆ. ನಡುವೆ ಮಾತ್ರ ಕರ್ರಗೆ ಉದ್ದಾನುದ್ದ ಟಾರು ರಸ್ತೆ ಹಾದು ಹೋಗಿದ್ದು ಎಂತ ಚಂದ ಕಾಣಿಸುತ್ತೆ ಅಂತೀಯಾ..'
           `ಓಹೋ.. ನೀನು ಈ ಪ್ರದೇಶದಲ್ಲಿ ಅನೇಕ ಸಾರಿ ಓಡಾಡಿದ್ದೀಯಾ ಅನ್ನು...'
           `ಹುಂ.. ಬಹಳಷ್ಟು ಸಾರಿ ಓಡಾಡಿದ್ದೀನಿ. ಆದರೆ ಸೈಕಲ್ಲಿನ ಮೇಲೆ ಹೀಗೆ ಭಯದ ನೆರಳಿನಲ್ಲಿ ಓಡಾಡುತ್ತಿರುವುದು ಇದೇ ಮೊದಲು ನೋಡು. ನನ್ನದು ಸರ್ಕಾರಿ ಕೆಲಸವಾಗಿರೋ ಕಾರಣ ಒಂದೆರಡು ಸಾರಿ ಇಲ್ಲಿಗೆ ಕೆಲಸದ ನಿಮಿತ್ತ ಬಂದಿದ್ದೆ. ಮಳೆಗಾಲದಲ್ಲಿ ಪ್ರವಾಹದ ರಿಪೋರ್ಟ್ ಗೂ ಬಂದಿದ್ದೆ. ಆಗಲೇ ನನಗೆ ಅನುಭವವಾಗಿದ್ದು.' ಎಂದಳು ಮಧುಮಿತಾ.
          `ನಾನೊಂದು ಮಾತು ಕೇಳಲಾ..?' ಎಂದ ವಿನಯಚಂದ್ರ
          `ಹುಂ..ಕೇಳು.. ಅದಕ್ಕೆಂತ ಸಂಕೋಚ? ನೀನು ಒಂದು ಬಿಟ್ಟು ಹತ್ತು ಮಾತು ಕೇಳು.. ನಾನು ಉತ್ತರಿಸುತ್ತೇನೆ..'
          `ನಿಂದು ಸರ್ಕಾರಿ ನೌಕರಿ ಅಂತೀಯಾ.. ಆದರೆ ಇಂತಹ ನೌಕರಿಯಲ್ಲಿದ್ದೂ ನಾವು ಹೀಗೆ ಕದ್ದು ಓಡಿ ಬರಬೇಕಾ? ಸರ್ಕಾರದ ಮಟ್ಟದಲ್ಲಿ ಪರಿಚಯದವರನ್ನು ಹಿಡಿದು ಹೇಗಾದರೂ ಮಾಡಿ ನಾವು ಭಾರತ ತಲುಪಬಹುದಿತ್ತಲ್ಲ.. ಈ ರಿಸ್ಕು, ಭಯ, ಭೀತಿ, ದುಗುಡ ಇವೆಲ್ಲ ಬೇಕಿತ್ತಾ?' ಎಂದ ವಿನಯಚಂದ್ರ.
           `ಹುಂ.. ನೀನು ಹೇಳೋದು ಸರಿ. ಆದರೆ ಬಾಂಗ್ಲಾದಲ್ಲಿ ಸರ್ಕಾರಿ ಕೆಲಸ ಅಂದರೆ ಅಷ್ಟಕ್ಕಷ್ಟೆ. ನಾನು ನನಗೆ ಪರಿಚಯ ಇರೋ ಯಾರನ್ನೋ ಹಿಡಿದು ಭಾರತಕ್ಕೆ ಹೋಗಲು ತಯಾರಿ ನಡೆಸಿದೆ ಅಂತ ಇಟ್ಟುಕೊಂಡರೆ ಅವರಿಗೆ ಆಗದವರ ಮೂಲಕ ಹಿಂಸಾವಾದಿಗಳಿಗೆ ಮಾಹಿತಿ ಸಿಕ್ಕು ಏನೇನೋ ಮಾಡಿಬಿಡುತ್ತಾರೆ. ಅಲ್ಲದೇ ಇಲ್ಲಿ ಬಹುತೇಕ ಪ್ರತಿಯೊಬ್ಬ ಸರ್ಕಾರಿ ನೌಕರನೂ ಒಂದೊಂದು ರಾಷ್ಟ್ರೀಯ ಪಕ್ಷಕ್ಕೆ ನಿಷ್ಟನಾಗಿರಬೇಕು. ಅಂದರೆ ಆತ ತಾನು ಯಾರ ಆಡಳಿತದ ಅವಧಿಯಲ್ಲಿ ನೌಕರಿ ಮಾಡಲು ಆರಂಭಿಸುತ್ತಿದ್ದಾನೋ ಆ ಪಕ್ಷಕ್ಕೆ ಆತ ನಿಷ್ಟನಾಗಿರುತ್ತಾನೆ. ಬಿಡು ಹಾಗೆ ನಿಷ್ಟನಾಗಿರುವುದು ಆತನಿಗೆ ಅನಿವಾರ್ಯವೂ ಆಗಿರುತ್ತದೆ. ಇಂತಹ ವ್ಯಕ್ತಿಗಳು ತಮಗಾಗದವರ ಅಂದರೆ ತಮ್ಮ ಪಕ್ಷಕ್ಕೆ ನಿಷ್ಟನಾಗಿರದ ಅಧಿಕಾರಿಗಳ ತಪ್ಪು ಹುಡುಕುವಲ್ಲಿ, ಅವರ ವಿರುದ್ಧ ಕೆಲಸ ಮಾಡುವಲ್ಲಿ ಉತ್ಸುಕರಾಗಿರುತ್ತಾರೆ. ನಾನು ಯಾವುದೇ ಪಕ್ಷಕ್ಕೆ ನಿಷ್ಟೆ ತೋರಿಸಿಲ್ಲ. ಅದೂ ಕೂಡ ತಪ್ಪಾಗಿದೆ. ನಾನು ಯಾವುದೇ ಪಕ್ಷಕ್ಕೆ ಸೇರಿರದ ಕಾರಣ ಎಲ್ಲ ರಾಷ್ಟ್ರೀಯ ಪಕ್ಷಗಳೂ ನನ್ನ ವಿರುದ್ಧ ಸೇಡು ತೀರಿಕೊಳ್ಳಲು ಕಾಯುತ್ತಿರುವುದು ಸಾಮಾನ್ಯ. ನಾನು ಹಾಗೂ ನೀನು ಭಾರತಕ್ಕೆ ಹೊರಡಲು ತಯಾರಿ ನಡೆಸುತ್ತಿರುವುದು, ವಿಮಾನಯಾನ  ಮಾಡಲು ಯತ್ನಿಸುವುದನ್ನು ತಡೆಯಲು ಎಂತಹ ಕಾರ್ಯಕ್ಕೂ ಅವರು ಮುಂದಾಗುತ್ತಾರೆ. ಹತ್ಯೆಯನ್ನೂ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಬಹುಶಃ ನಾವೀಗ ಕದ್ದು ಭಾರತದ ಗಡಿಯೊಳಕ್ಕೆ ನುಸುಳುವ ಪ್ರಯತ್ನ ನಡೆಸುವುದು ಆ ವಿಧಾನಕ್ಕಿಂತ ಸುಲಭವನ್ನಿಸುತ್ತದೆ. ಅದಕ್ಕೇ ಸಲೀಂ ಚಾಚಾ ಈ ವಿಧಾನವನ್ನು ಹೇಳಿದಾಗ ನಾನು ಒಪ್ಪಿಕೊಂಡಿದ್ದು.' ಎಂದಳು ಮಧುಮಿತಾ.
          `ಹುಂ..' ಎಂದು ತಲೆಕೊಡವಿದ ವಿನಯಚಂದ್ರ `ಹಾಳಾದ ರಾಜಕಾರಣ.. ಏನೆಲ್ಲಾ ಮಾಡಿಬಿಡುತ್ತದೆ.. ಶಿಟ್..' ಎಂದ.
          `ವಿನೂ ಒಂದು ಮಾತು ಹೇಳಲಾ. ನಾವು ವಿಮಾನಯಾನ ಮಾಡಿ ಭಾರತಕ್ಕೆ ಹೋಗಿದ್ದರೆ ಒಮದು ತಾಸು ಅಥವಾ ಎರಡು-ಮೂರು ತಾಸುಗಳಲ್ಲಿ ಭಾರತವನ್ನು ತಲುಪಿಬಿಡುತ್ತಿದ್ದೆವು. ಆದರೆ ನಾವು ಈ ರೀತಿಯಲ್ಲಿ ರಸ್ತೆಯ ಮೂಲಕ ಭಾರತವನ್ನು ತಲುಪುವುದು ಮಾತ್ರ ಬಹಳ ಖುಷಿ ಕೊಡುವ ವಿಚಾರ ನೋಡು. ಬದುಕಿನಲ್ಲಿ ಅದೆಷ್ಟೋ ಕಷ್ಟಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುತ್ತೇವೆ. ಇದು ಕಷ್ಟಕರವೇ ಹೌದು. ಈ ಕಷ್ಟವನ್ನೂ ಒಮ್ಮೆ ನಾವು ಅನುಭವಿಸಿಬಿಡೋಣ. ಸವಾಲುಗಳಿಗೆ ಒಡ್ಡಿಕೊಳ್ಳುವುದು ಅಂದರೆ ನನಗೆ ಬಹಳ ಖುಷಿ ಕೊಡುವ ವಿಚಾರ. ನಿನಗೂ ಕೂಡ ಸವಾಲುಗಳಿಗೆ ಎದುರು ನಿಲ್ಲುವುದು ಅಂದರೆ ಇಷ್ಟ ಅಂತ ಹೇಳಿದ್ದೆಯಲ್ಲ. ಮುಂದೇನಾಗುತ್ತದೆಯೋ ಅಂತ ನೋಡಿಬಿಡೋಣ.. ಅಲ್ಲವಾ' ಎಂದಳು ಮಧುಮಿತಾ.
           `ಹೌದು ಮಧು. ನೀ ಹೇಳುವುದು ನಿಜ. ಬಾಂಗ್ಲಾ ನಾಡಿನಲ್ಲಿ ಹೀಗೆ ಪ್ರಯಾಣ ಮಾಡಿ ಗಡಿಯೊಳಗೆ ನುಸುಳುವುದು ಒಂಥರಾ ಮಜಾ ಇರುತ್ತದೆ. ಅದರಲ್ಲಿಯೂ ಭಾರತದ ಗಡಿಯನ್ನು ನುಸುಳುವುದಿದೆಯಲ್ಲ. ನಾನು ಕನಸು, ಮನಸಿನಲ್ಲಿಯೂ ಇಂತಹದ್ದೊಂದು ಜರುಗಬಹುದು ಎಂದು ಆಲೋಚನೆ ಮಾಡಿರಲಿಲ್ಲ ನೋಡು..' ಎಂದ ವಿನಯಚಂದ್ರ. ಮುಂದುವರಿದವನೇ ಬಾಂಗ್ಲಾದೇಶದ ಹಿಂಸಾಚಾರ, ಅಲ್ಲಿಯ ರಾಜಕಾರಣ, ರಾಜಕೀಯ ಪಕ್ಷಗಳ ನಡೆ ಇವುಗಳ ಬಗ್ಗೆ ಮಾತನಾಡಿ ಹಿಡಿಶಾಪ ಹಾಕಿದ
          ಮಧುಮಿತಾ ಮಾತನ್ನು ಕೇಳಿಸಿಕೊಂಡು ನುಡಿದಳು. `ಇಷ್ಟೇ ಅಲ್ಲ ವಿನೂ. ನಮ್ಮ ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಮಸಾಚಾರಕ್ಕೆಲ್ಲ ರಾಜಕಾರಣವೇ ಕಾರಣ. ಮುಖ್ಯವಾಗಿ ಇರುವುದು ಎರಡು ಪಕ್ಷ. ಇವರನ್ನು ಬೆಂಬಲಿಸಿದರೆ ಅವರು, ಅವರನ್ನು ಬೆಂಬಲಿಸಿದರೆ ಇವರು ನಮ್ಮ ಮೇಲೆ ಹಿಂಸಾಚಾರ ಮಾಡುತ್ತಾರೆ. ಹೋಗಲಿ ಮೂರನೇ ಪಕ್ಷವಾದರೂ ಇದೆಯಾ? ಅದನ್ನೂ ಬೆಳೆಯಲು ಕೊಡುವುದಿಲ್ಲ ಈ ಎರಡು ಪಕ್ಷಗಳು. ಹಿಂದೂಗಳೇ ಪಕ್ಷವನ್ನು ಕಟ್ಟಲು ಹಲವು ಸಾರಿ ಯೋಚನೆ ಮಾಡಿದ್ದರಂತೆ. ಆದರೆ ಅದು ಸಾಧ್ಯವೇ ಆಗಿಲ್ಲ. ಬಹುಶಃ ಕುಟಿಲ ರಾಜಕಾರಣದಲ್ಲಿ ಸಿಲುಕಿ ಹಿಂದೂಗಳ ಪಕ್ಷ ಕಟ್ಟುವ ಕನಸು ಕನಸಾಗಿಯೇ ಉಳಿದಿರಬೇಕು. ' ಎಂದಳು ಮಧುಮಿತಾ.
          `ಛೇ.. ಇಷ್ಟು ಪುಟ್ಟ ದೇಶವನ್ನು ಹೇಗೆಲ್ಲ ತಯಾರು ಮಾಡಬಹುದಿತ್ತು. ಆದರೆ ತನ್ನ ಸ್ವಾರ್ಥಕ್ಕಾಗಿ ಕೆಲವೇ ಕೆಲವು ನಡೆಸುವ ದಾಳಕ್ಕೆ ಇಲ್ಲಿನ ಜನರು ಬಲಿಯಾಗುತ್ತಿದ್ದಾರಲ್ಲ.. ಇಂತಹ ಕಾರಣಗಳಿಗಾಗಿ ಈ ದೇಶ ಪ್ರತ್ಯೇಕವಾಗಬೇಕಿತ್ತೇ? ಮೊದಲು ಭಾರತದಿಂದ ಆಮೇಲೆ ಪಾಕಿಸ್ತಾನದಿಂದ.. ಏನೋ ಆಗಬೇಕು ಎಂದುಕೊಂಡವರು ಮತ್ತೇನೋ ಆಗಿಬಿಟ್ಟರಲ್ಲ. ಗಂಗೆಯ ಮುಖಜ ಭೂಮಿ, ಸುಂದರಬನ್ಸ್, ಚಿತ್ತಗಾಂಗ್ ಬೆಟ್ಟಗಳು, ಮೇಘಾಲಯ, ತುರಾ ಬೆಟ್ಟಗಳ ಒಂದು ಪಾರ್ಶ್ವ, ಅಸಂಖ್ಯಾತ ಹಿಂದೂ ದೇಗುಲಗಳು, ಢಾಕಾ ಎಂಬ ಸುಂದರ ನಗರಿ, ಭತ್ತವನ್ನು ಬೆಳೆಯುವ ಲಕ್ಷಗಟ್ಟಲೆ ಎಕರೆ ಪ್ರದೇಶಗಳು.. ಓಹ್.. ಸ್ವರ್ಗವಾಗಲು ಇನ್ನೆಂತದ್ದು ಬೇಕಿತ್ತು. ತಾನೇ ತನ್ನನ್ನು ನರಕಕ್ಕೆ ದೂಡಿಕೊಳ್ಳುವುದು ಎಂದರೆ ಇದೇ ಏನೋ..' ಎಂದು ತನ್ನೊಳಗಿನ ಅಸಮಧಾನ ತೋಡಿಕೊಂಡ ವಿನಯಚಂದ್ರ.
           `ಹುಂ. ಖಂಡಿತ ಹೌದು. ಈ ದೇಶದಲ್ಲಿ ಸಮಸ್ಯೆಗಳು ಖಂಡಿತ ಕೊನೆಗೊಳ್ಳುವುದಿಲ್ಲ ನೋಡು. ಭಾರತದ ಅವಿಭಾಜ್ಯ ಅಂಗವಾಗಿದ್ದ ಈ ನಾಡನ್ನು ಯಾವಾಗ ಬ್ರಿಟೀಷರು ಒಡೆದರೋ ಆಗಲೇ ಶುರುವಾಯಿತು ನರಕ. ಮೊಟ್ಟಮೊದಲು ಬ್ರಿಟೀಷರ ವಿರುದ್ಧ ಸೋತ ಸಿರಾಜುದ್ದೌಲ, ಆತನಿಗೆ ಮೋಸ ಮಾಡಿದ ಮಿರ್ ಸಾಧಿಕ್ ಎಲ್ಲ ಆ ನಂತರ ನಡೆದ ಸಾಲು ಸಾಲು ಯುದ್ಧಗಳು, ನಡುವೆ ಮಿಚಿಂನಂತೆ ಬಂದು ಕ್ಷಣಕಾಲ ಸ್ವಾತಂತ್ರ್ಯವನ್ನು ಕೊಡಿಸಿದ ಸೇನಾನಿ ನೇತಾಜಿ.. ಈ ಎಲ್ಲವನ್ನೂ ಕಂಡಿದ್ದು ಇದೇ ನಾಡು. ಭಾರತದಿಂದ ಪ್ರತ್ಯೇಕವಾದ ನಂತರವಾದರೂ ಬಾಂಗ್ಲಾ ನಾಡು ಆರಾಮಾಗಿದೆಯಾ ಅದೂ ಇಲ್ಲ. ಪಾಕಿಸ್ತಾನದ ಸತ್ಯಾಚಾರಕ್ಕೆ ಸತತ 2 ದಶಕ ನಲುಗಿದೆ. ಭಾರತದ ಸಹಾಯದಿಂದಲೇ ಸ್ವತಂತ್ರವಾಗಿದ್ದರೂ ಕೂಡ ಭಾರತದ ವಿರುದ್ಧವೇ ಭಯೋತ್ಪಾದನೆಯಂತಹ ಕೆಲಸಗಳನ್ನು ಈ ದೇಶ ನಡೆಸುತ್ತಿದೆ. ಬಾಂಗ್ಲಾ ನಾಡಿನ ಸ್ವಾತಂತ್ರ್ಯಕ್ಕಾಗಿ ಶೇಕ್ ಮುಜೀಬುರ್ ರೆಹಮಾನ್ ಹೋರಾಡಿದರು. ಗಾಂಧೀಜಿಯವರಂತೆ ಇವರನ್ನೂ ಹತ್ಯೆ ಮಾಡಲಾಯಿತು. ಇದೀಗ ಅವರ ಮಗಳು ಇಲ್ಲಿನ ರಾಜಕಾರಣಿ. ವಿಚಿತ್ರವೆಂದರೆ ಅವರ ಆಡಳಿತವಾಗಿದ್ದರೂ ಇಲ್ಲಿ ಹಿಂಸಾಚಾರ ನಿಂತಿಲ್ಲ. ಬಹುಶಃ ನಿಲ್ಲುವುದೂ ಇಲ್ಲ. ಮತೋನ್ಮಾದ, ರಾಜಕಾರಣ, ಯುದ್ಧೋತ್ಸಾಹ ಈ ನಾಡನ್ನು ಹಾಳುಮಾಡಿದೆ. ಪ್ರತಿ ವರ್ಷ ಏನಿಲ್ಲವೆಂದರೂ ಕನಿಷ್ಟ 5000ಕ್ಕೂ ಅಧಿಕ ಹಿಂದೂಗಳ ಹತ್ಯೆಯಾಗುತ್ತದೆ. ಅದಕ್ಕೂ ಹೆಚ್ಚು ಮತಾಂತರವಾಗುತ್ತದೆ. ಹಿಂದೂ ಮಹಿಳೆಯರ ಬಲಾತ್ಕಾರ ನಡೆಯುತ್ತದೆ. ಆದರೆ ಪೊಲೀಸ್ ಸ್ಟೇಷನ್ನುಗಳಲ್ಲಿ ಇವುಗಳ ಪ್ರಕರಣ ದಾಖಲಾಗುವುದಿಲ್ಲ. ಯಾರಾದರೂ ಪ್ರಕರಣ ದಾಖಲು ಮಾಡಲು ಹೋದರೆ ಅವರು ಇದ್ದಕ್ಕಿದ್ದಂತೆ ಕಾಣೆಯಾಗುತ್ತಾರೆ. ಇಲ್ಲವೇ ಹೆದರಿಸಿ, ಬೆದರಿಸಿ ಸುಮ್ಮನಿರಿಸಲಾಗುತ್ತದೆ. ಇದು ನಾನು ಅತ್ಯಂತ ಹತ್ತಿರದಿಂದ ನೋಡಿದ ಅನುಭವವೂ ಹೌದು.' ಎಂದು ಮಧುಮಿತಾ ಹೇಳಿದಳು.
          `ಮಧು.. ಈ ದೇಶದಲ್ಲಿ ಎಷ್ಟು ಹಿಂದುಗಳಿರಬಹುದು? ಮೊದಲೆಷ್ಟಿದ್ದರು? ಈಗ ಎಷ್ಟಾಗಿದ್ದಾರೆ? ಅವರ್ಯಾಕೆ ಬಾಂಗ್ಲಾ ಹಿಂಸಾಚಾರದ ವಿರುದ್ಧ ತಿರುಗಿಬೀಳಬಾರದು? ಶಸ್ತ್ರದ ಮೂಲಕವಾದರೂ ಸರಿ ಯಾಕೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬಾರದು? ಹಿಂಸೆಗೆ ಹಿಂಸೆಯೇ ಉತ್ತರವಲ್ಲವಾ? ಕತ್ತಿಗೆ ಕತ್ತಿಯಿಂದಲೇ ಉತ್ತರ ಕೊಡಬೇಕು ಎಂದು ಶಿವಾಜಿಯಾದಿಯಾಗಿ ಅನೇಕರು ಹೇಳಿಲ್ಲವಾ? ಯಾಕೆ ಬಾಂಗ್ಲಾ ದೇಶದ ಹಿಂದೂಗಳು ಹಾಗೆ ಮಾಡುತ್ತಿಲ್ಲ? ಯಾಕೆ ನೋವನ್ನು ಉಂಡು ಸುಮ್ಮನೆ ಉಳಿದಿದ್ದಾರೆ? ಯಾಕೆ ಎಲ್ಲರೂ ಹಿಂದುಗಳನ್ನು ಕೊಂದರೂ ಏನು ಮಾಡದೇ ಸುಮ್ಮನೆ ಉಳಿದುಹೋಗಿದ್ದಾರೆ?' ಎಂದು ಅಸಹನೆಯಿಂದ ಕೇಳಿದ ವಿನಯಚಂದ್ರ.
(ಹಿಂಸಾಚಾರಕ್ಕೆ ಮನೆ ಕಳೆದುಕೊಂಡ ಹಿಂದೂ ಯುವತಿ ರೋಧಿಸುತ್ತಿರುವುದು)
           `ಬಾಂಗ್ಲಾದೇಶದಲ್ಲಿ 1941ರ ವೇಳೆಗೆ ಹಿಂದೂಗಳ ಸಂಖ್ಯೆ ಶೆ.28ರಷ್ಟಿತ್ತು. ಆ ನಂತರ ಆ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗುತ್ತ ಬಂದಿದೆ. 1974ರಲ್ಲಿ ಹಿಂದೂಗಳ ಪ್ರಮಾಣ ಶೆ.13.5ಕ್ಕೆ ಇಳಿಕೆಯಾಯಿತು. ಅಂದರೆ ಎರಡು ದಶಕದಲ್ಲಿ ಶೆ.50ರಷ್ಟು ಕಡಿಮೆಯಾಯಿತು. 2001ರಲ್ಲಿ ಹಿಂದೂಗಳ ಪ್ರಮಾಣ ಶೆ.9.6ಕ್ಕೆ ಇಳಿಕೆಯಾಗಿದೆ. ಭಾರತವನ್ನು ವಿಭಜಿಸಿ ಪಶ್ಚಿಮ ಪಾಕಿಸ್ತಾನ ಹಾಗೂ ಪೂರ್ವ ಪಾಕಿಸ್ತಾನ ಎಂದು ವಿಭಾಗಿಸಲಾಯಿತು. ಆ ಸಂದರ್ಭದಲ್ಲಿ ಈಗ ಬಾಂಗ್ಲಾ ಎಂದು ಕರೆಯುವ ಪೂರ್ವ ಪಾಕಿಸ್ತಾನದಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಚಿತ್ತಗಾಂಗ್ ಪ್ರದೇಶ ಕೂಡ ಕಣ್ತಪ್ಪಿನಿಂದಲೋ ಅಥವಾ ಬ್ರಿಟೀಶರ ಕುಟಿಲ ನೀತಿಯಿಂದಲೋ ಬಾಂಗ್ಲಾದಲ್ಲೇ ಉಳಿದುಹೋಯಿತು. ಭಾರತಕ್ಕೆ ಸೇರಲೇಬೇಕಾಗಿದ್ದ ಪ್ರದೇಶ ಬಾಂಗ್ಲಾದಲ್ಲಿ ಉಳಿದುಬಿಟ್ಟಿತು. ಈಗಲೂ ಕೂಡ ಬಾಂಗ್ಲಾದಲ್ಲೇ ಅತ್ಯಂತ ಹೆಚ್ಚು ಹಿಂದೂಗಳಿರುವ ಪ್ರದೇಶವೆಂದರೆ ಅದು ಚಿತ್ತಗಾಂಗ್. ಆದರೆ ತೀರಾ ಇತ್ತೀಚೆಗಂತೂ ಹಿಂದೂಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿತವಾಗುತ್ತಿದೆ. ಬಾಂಗ್ಲಾದ ಹಿಂದೂಗಳು ಬಡವರು. ಎರಡು ಹೊತ್ತಿನ ಊಟಕ್ಕೆ ಕಷ್ಟಪಡಬೇಕು. ಅಂತದ್ದರಲ್ಲಿ ಹೋರಾಟ ಹೇಗೆ ಮಾಡಬೇಕು? ಅವರು ಯಾವ ರೀತಿ ಸಶಸ್ತ್ರ ಹೋರಾಟ ಮಾಡಬೇಕು? ಭಾರತ ಏನಾದರೂ ಸಹಾಯ ಮಾಡಿದ್ದರೆ ತಮ್ಮ ರಕ್ಷಣೆಗಾದರೂ ಹೋರಾಟ ಮಾಡುತ್ತಿದ್ದರೇನೋ. ಆದರೆ ಭಾರತ ಸಹಾಯಕ್ಕೇ ಬರಲಿಲ್ಲ. ಇಲ್ಲಿನ ಹಿಂದೂಗಳ ಧ್ವನಿ ಈಗಾಗಲೇ ಕ್ಷೀಣಿಸಿದೆ. ಪಕ್ಕದ ಹಿಂದೂ ಬಹುಸಂಖ್ಯಾತ ರಾಷ್ಟ್ರ ನಮ್ಮ ದೇಶದ ತಾಯಿ. ಆದರೂ ಅದು ಸಹಾಯಕ್ಕೆ ಬಂದಿಲ್ಲ. ಎಲ್ಲೋ ಯಾರ್ಯಾರೋ ಹತ್ಯೆಯಾಗುತ್ತಿದ್ದರೆ ಮಾನವ ಹಕ್ಕುಗಳ ಸಂಘಟನೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಹುಯ್ಯಲಿಡುತ್ತಾರೆ. ಆದರೆ ಬಾಂಗ್ಲಾ ದೇಶದ ಕುರಿತು ಮಾತ್ರ ಅವರು ಮಾತೇ ಆಡುವುದಿಲ್ಲ. ಖಂಡಿತವಾಗಿಯೂ ಬಾಂಗ್ಲಾ ಹಿಂದೂಗಳ ನೋವು, ದುಃಖ ಅವರ ಕಣ್ಣಿಗೆ ಕಾಣುತ್ತಿಲ್ಲವೇ? ಅಥವಾ ಜಾಣ ಕುರುಡೇ? ಯಾಕೋ ಮನಸ್ಸು ತುಂಬಾ ಪ್ರಕ್ಷುಬ್ಧಗೊಳ್ಳುತ್ತದೆ.' ಎಂದು ಹತಾಶಳಾಗಿ ನುಡಿದಳು ಮಧುಮಿತಾ.
          `ಬಾಂಗ್ಲಾ ದೇಶದ ಕಥೆ ಹಾಗಿರಲಿ. ನಿಮ್ಮದೇ ದೇಶದಲ್ಲಿ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆಯಲ್ಲ ವಿನೂ. ಅದಕ್ಕೇ ನಿಮ್ಮ ದೇಶ ಮಾತನಾಡುತ್ತಿಲ್ಲ. ಇನ್ನು ನಮ್ಮ ದೇಶದಲ್ಲಿ ನಡೆಯುವ ಕಗ್ಗೊಲೆಗಳ ಬಗ್ಗೆ ಮಾತನಾಡುತ್ತದೆಯಾ? ಕೋಮುಗಲಭೆ ಸಂಭವಿಸಿದಾಗೆಲ್ಲ ಹಿಂದೂಗಳದ್ದೇ ತಪ್ಪು ಎಂದು ಹೇಳಿ ಅವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗುತ್ತದೆ. ಆಗ ನಿಮ್ಮದೇ ಭಾರತ ಸರ್ಕಾರ ಏನಾದರೂ ಮಾಡಿದೆಯಾ? ನಾವೆಲ್ಲ ಗೋವನ್ನು ಪವಿತ್ರ ಪ್ರಾಣಿಯಾಗಿ ಪೂಜೆ ಮಾಡುತ್ತೇವೆ. ದೇವರು ಎನ್ನುತ್ತೇವೆ. ಅಂತಹ ಗೋವನ್ನು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭಾರತದಲ್ಲಿ ಕೊಲ್ಲಲಾಗುತ್ತದೆ. ಅದನ್ನು ತಡೆಗಟ್ಟಲಾಗಿದೆಯಾ ಹೇಳು. ಹೀಗೆಲ್ಲಾ ಇದ್ದಾಗ ಪಕ್ಕದ ದೇಶದಲ್ಲಿ ತಮ್ಮದೇ ಬಾಂಧವರು ಸಾಯುತ್ತಿದ್ದರೂ ಅವರಿಗೆ ಹೇಗೆ ಸಹಾಯ ಮಾಡುತ್ತಾರೆ? ಶಸ್ತ್ರಕ್ಕೆ ಶಸ್ತ್ರವೇ ಉತ್ತರವಾಗುತ್ತದೆ ನಿಜ. ಆದರೆ  ಬಾಂಗ್ಲಾದ ಬಡ ಹಿಂದೂಗಳಿಗೆ ಶಸ್ತ್ರವನ್ನು ನೀಡುವವರು ಯಾರು? ಅದ್ಯಾರೋ ಕಣ್ಣಿಗೆ ಕಾಣದ ನಕ್ಸಲರಿಗೆ ಪುರೂಲಿಯಾದಂತಹ ಪ್ರದೇಶಗಳಲ್ಲಿ ಅನಾಮಧೇಯ ವಿಮಾನಗಳೂ ಕೂಡ ಶಸ್ತ್ರಾಸ್ತ್ರವನ್ನು ಎಸೆದು ಹೋಗುತ್ತವೆ. ಬಾಂಗ್ಲಾದಲ್ಲಿ ಇಂತದ್ದನ್ನೆಲ್ಲ ಕನಸು ಕಾಣಲು ಸಾಧ್ಯವಿಲ್ಲ ಬಿಡು. ಬಾಂಗ್ಲಾದ ಹಿಂದೂಗಳು ಮೊದಲು ಹೊಟ್ಟೆಗೆ ಸಿಗಲಿ ಎಂದು ಬಯಸುತ್ತಾರೆ. ಆ ನಂತರ ಅವರು ಶಸ್ತ್ರದ ಬಗ್ಗೆ ಆಲೋಚನೆ. ನೀನೇನಾದರೂ ಭಾರತಕ್ಕೆ ಹೋಗಿ, ಬಂದೂಕು ಅಥವಾ ಶಸ್ತ್ರಾಸ್ತ್ರ ತಯಾರು ಮಾಡುವ ಕಾರ್ಖಾನೆ ತೆಗೆದರೆ ಹೇಳು. ಬಾಂಗ್ಲಾದಲ್ಲಿ ಯಾವ ಯಾವ ಪ್ರದೇಶಕ್ಕೆ ಎಷ್ಟು ಪ್ರಮಾಣದಲ್ಲಿ ಹಿಂದೂಗಳಿಗಾಗಿ ಶಸ್ತ್ರವನ್ನು ಒದಗಿಸಬೇಕು ಎಂಬುದನ್ನು ನಾನು ಹೇಳುತ್ತೇನೆ..' ಎಂದು ಹೇಳಿದ ಮಧುಮಿತಾ ಕಣ್ಣುಮಿಟುಕಿಸಿದಳು.
          ವಿನಯಚಂದ್ರ ಒಮ್ಮೆ ಅಸಹನೆಯಿಂದ ಹೊಯ್ದಾಡಿದ. ನಂತರ ಮಾತನಾಡಿದ ಆತ `ಬಾಂಗ್ಲಾದಲ್ಲಿ ಇರುವ ಪಕ್ಷಗಳಲ್ಲಿ ಹಿಂದೂ ನಾಯಕರಿಲ್ಲವೇ? ಅವರೂ ಮಾತನಾಡುತ್ತಿಲ್ಲವೇ?' ಎಂದು ಕೇಳಿದ.
         `ಇದ್ದಾರೆ. ಹಲವರು ಪ್ರಮುಖ ಮಂತ್ರಿ ಸ್ಥಾನವನ್ನೂ ಪಡೆದಿದ್ದರು. ಆದರೆ ಅವರ್ಯಾರೂ ಹಿಂದೂಗಳ ಪರಿಸ್ಥಿತಿ ಬಗ್ಗೆ ಆಲೋಚಿಸಲೂ ಇಲ್ಲ. ಅವರ ಸಮಸ್ಯೆಗಳ ಬಗ್ಗೆ ಹೋರಾಟವನ್ನೂ ನಡೆಸಿಲ್ಲ. ಛೇ..' ಎಂದಳು ಮಧುಮಿತಾ.
         ವಿನಯಚಂದ್ರನ ಮನಸ್ಸಿನಲ್ಲಿ ನೂರಾರು ಹೊಯ್ದಾಟಗಳು ಶುರುವಾದಂತಿತ್ತು. ಅದೇ ಗುಂಗಿನಲ್ಲಿ ಸೈಕಲ್ ತುಳಿಯುತ್ತಿದ್ದ. ಸಲೀಂ ಚಾಚಾನಿಗೆ ನಿದ್ದೆ ಬಂದಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ  ಮಾತಾಡದೇ ಮಲಗಿದ್ದರು. ಕೆಲವೇ ಸಮಯದ ನಂತರ ಮಿರ್ಜಾಪುರ ಹತ್ತಿರಕ್ಕೆ ಬಂದಿತು. ಮಿರ್ಕಾಪುರದ ಫಾಸಲೆಗೆ ಬಂದ ತಕ್ಷಣ ಮಧುಮಿತಾ ಸಲೀಂ ಚಾಚಾನನ್ನು ಎಚ್ಚರಿಸಿದಳು. ಆತ ಯಾವು ಯಾವುದೋ ದಾರಿಯಲ್ಲಿ ಸೈಕಲ್ ತುಳಿಯುವಂತೆ ಹೇಳಿದ. ಸಲೀಂ ಚಾಚಾನ ಅಣತಿಯಂತೆ ವಿನಯಚಂದ್ರ ಮಿರ್ಜಾಪುರದ ಗಲ್ಲಿ ಗಲ್ಲಿಗಳಲ್ಲಿ ಸೈಕಲ್ ತುಳಿಯಲಾರಂಭಿಸಿದ. ಸಲೀಮ ಚಾಚಾ ಅದ್ಯಾವಾಗ ಮಿರ್ಜಾಪುರವನ್ನು ನೋಡಿದ್ದನೋ ಎಷ್ಟು ಸರಾಗವಾಗಿ ರಸ್ತೆಯನ್ನು ಹೇಳುತ್ತಿದ್ದನೆಂದರೆ ವಿನಯಚಂದ್ರ ಅಚ್ಚರಿಗೊಂಡಿದ್ದ. ಕೊನೆಗೆ ಅದೊಂದು ಮನೆಯ ಬಳಿ ಸೈಕಲ್ ನಿಲ್ಲಿಸುವಂತೆ ಹೇಳಿದ. ವಿನಯಚಂದ್ರ ಸೈಕಲ್ ನಿಲ್ಲಿಸಿದ. ಸಲೀಂ ಚಾಚಾ ಇಳಿದು ಮನೆಯೊಂದರ ಕದ ತಟ್ಟಿದ. ವಿನಯಚಂದ್ರ ಹಾಗೂ ಮಧುಮಿತಾ ವಿಸ್ಮಯದಿಂದ ನೋಡುತ್ತಿದ್ದರು.

(ಮುಂದುವರಿಯುತ್ತದೆ.)

Thursday, September 4, 2014

ತುಂಬರದ ಅಬ್ಬರ

ತುಂಬರಗೋಡ ಜಲಪಾತದ ಅಬ್ಬರ
ಕಣ್ತುಂಬಿಕೊಳ್ಳಲು ಬಾ ಹತ್ತಿರ
ಮಳೆಗಾಲದ ಅಬ್ಬರಕ್ಕೆ ಹಲವಾರು ಜಲಪಾತಗಳು ಜೀವಕಳೆಯನ್ನು ಪಡೆದುಕೊಂಡಿದೆ. ಬೇಸಿಗೆಯ ಬೇಗೆಗೆ ಜೀವಕಳೆದುಕೊಂಡಂತೆ ಕಾಣುತ್ತಿದ್ದ ಜಲಪಾತಗಳೆಲ್ಲ ಮೈದುಂಬಿಕೊಂಡು ಅಬ್ಬರಿಸುತ್ತಿವೆ. ನೋಡುಗರನ್ನು ಕೈಬೀಸಿ ಕರೆಯುತ್ತಿವೆ. ಅಂತಹ ಜಲಪಾತಗಳಲ್ಲೊಂದು ತುಂಬರಗೋಡ ಜಲಪಾತ.
ದೊಡ್ಡ ಗುಡ್ಡದಿಂದ ಮುತ್ತಿನ ಹನಿಗಳಂತೆ ಭುವಿಗಿಳಿದು ಬರುವ ತುಂಬರಗೋಡ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿದೆ. ಅಜಮಾಸು 30 ಅಡಿಗಳ ಎತ್ತರದಿಂದ ಬೀಳುವ ಈ ಜಲಪಾತದ ಸೌಂದರ್ಯವನ್ನು ವೀಕ್ಷಿಸಲು ಕಣ್ಣು ಸಾಲದು. ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಈ ಜಲಪಾತವನ್ನು ವೀಕ್ಷಣೆ ಮಾಡಲು ಕಷ್ಟಪಡಬೇಕಾಗಿಲ್ಲ. ರಸ್ತೆಯ ಪಕ್ಕದಲ್ಲಿಯೇ ಇರುವ ಈ ಜಲಪಾತ ಪ್ರೇಕ್ಷಕರನ್ನು ವಿಶೇಷವಾಗಿ ಸೆಳೆಯಬಲ್ಲದು. ಮಳೆಗಾಲದ ಕಾರಣ ಜಲಪಾತದಲ್ಲಿ ನೀರಿನ ಪ್ರಮಾಣ ತೀವ್ರವಾಗಿರುತ್ತದೆ. ಧೋ ಎನ್ನುವ ಸದ್ದು ಕಿವಿಗೆ ತಟ್ಟುತ್ತದೆ. ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರನ್ನು ಕಟ್ಟಿಹಾಕುತ್ತದೆ.
ವಿಶ್ವದಾದ್ಯಂತ ಇರುವ ಜಲಪಾತಗಳೆಲ್ಲ ನೈಸರ್ಗಿಕ ಜಲಪಾತಗಳು. ಎಲ್ಲೋ ಒಂದೆರಡು ಜಲಪಾತಗಳು ಮಾನವ ನಿರ್ಮಿತವಾದವುಗಳು. ತುಂಬರಗೋಡ ಜಲಪಾತ ಸಹ ಮಾನವ ನಿರ್ಮಿತ ಜಲಪಾತ. ಅಚ್ಚರಿಯಾಗುತ್ತಿರಬಹುದು. ಆದರೆ ಇದು ಸತ್ಯ. ಕಳೆದೊಂದು ದಶಕಕ್ಕೂ ಮುನ್ನ ತುಂಬರಗೋಡ ಪ್ರದೇಶದಲ್ಲಿ ಕಲ್ಲಿನ ಗಣಿಗಳಿದ್ದವು. ದೊಡ್ಡದೊಂದು ಗುಡ್ಡವೇ ಕಲ್ಲಿನಿಂದ ಆವೃತವಾಗಿದ್ದವು. ಆದರೆ ಆ ಕಲ್ಲಿನ ಗುಡ್ಡವನ್ನು ಗಣಿಗಾರಿಕೆಗೆ ಕಡಿದ ನಂತರ ಕಡಿದಾದ ಪ್ರದೇಶ ನಿರ್ಮಾಣವಾಯಿತು. ಈ ಪ್ರದೇಶದಲ್ಲಿ ಹರಿಯುತ್ತಿದ್ದ ತುಂಬರಗೋಡ ಹಳ್ಳ ಜಲಪಾತವಾಗಿ ಧುಮ್ಮಿಕ್ಕಲಾರಂಭಿಸಿತು. ಗುಡ್ಡದಿಂದ ಕಲ್ಲುಗಣಿಯ ಆಳಕ್ಕೆ ಬೀಳುವ ಜಲಪಾತವನ್ನು ನೋಡುವುದೇ ಸುಂದರ. ಜಲಪಾತ ನೀಡುವ ಖುಷಿಯೇ ಬೇರೆ.
ಮಾನವ ನಿರ್ಮಿತ ಜಲಪಾತ ಎಂದೇ ಕರೆಸಿಕೊಳ್ಳುವ ಈ ಜಲಪಾತವನ್ನು ಜೂನ್ ತಿಂಗಳಿನಿಂದ ಡಿಸೆಂಬರ್ ವರೆಗೆ ವೀಕ್ಷಣೆ ಮಾಡಬಹುದು. ಈ ಸಮಯದಲ್ಲಿ ಜಲಪಾತದ ಅಬ್ಬರ ಜೋರಾಗಿರುತ್ತದೆ. ಉಳಿದ ಸಮಯದಲ್ಲಿ ತುಂಬರಗೋಡ ಹಳ್ಳದಲ್ಲಿ ನೀರಿನ ಹರವು ಕಡಿಮೆಯಾಗುವ ಕಾರಣ ಜಲಪಾತ ಕಳೆಗುಂದುತ್ತದೆ. ಮಳೆಗಾಲದಲ್ಲಂತೂ ಮೈದುಂಬಿಕೊಳ್ಳುವ ತುಂಬರಗೋಡ ಜಲಪಾತ ಕಣ್ತುಂಬಿಕೊಂಡರೆ ಬಹಳ ಖುಷಿ ನೀಡುತ್ತದೆ.
ರಸ್ತೆಯ ಪಕ್ಕದಲ್ಲಿಯೇ ಇರುವ ಈ ಜಲಪಾತವನ್ನು ನೋಡಲು ಉಳಿದ ಜಲಪಾತಗಳಂತೆ ಚಾರಣವನ್ನು ಮಾಡಬೇಕಾಗಿಲ್ಲ. ಗುಡ್ಡವನ್ನು ಏರಬೇಕಿಲ್ಲ. ಮುಖ್ಯ ರಸ್ತೆಯಿಂದ 500 ಮೀಟರ್ ದೂರದಲ್ಲಿಯೇ ಈ ಜಲಪಾತವಿದೆ. ಜಲಪಾತ ಕಾಣುವವರೆಗೂ ಕಚ್ಚಾ ರಸ್ತೆಯಿದೆ. ವಾಹನಗಳನ್ನು ಒಯ್ಯಬಹುದು. ಮಳೆಗಾಲದಲ್ಲಂತೂ ದೊಡ್ಡ ಜಲಪಾತದ ಜೊತೆಗೆ ಅಕ್ಕಪಕ್ಕದಲ್ಲಿ ನಾಲ್ಕೈದು ಕವಲುಗಳನ್ನು ನೋಡಬಹುದಾಗಿದೆ. ಮಳೆಗಾಲದಲ್ಲಂತೂ ಜಲಪಾತದ ಸೌಂದರ್ಯ ಇಮ್ಮಡಿಸುತ್ತದೆ. ಜಲಪಾತ ಇರುವ ಸ್ಥಳ ಒಂದಾನೊಂದು ಕಾಲದಲ್ಲಿ ಕಲ್ಲು ಗಣಿಯಾಗಿದ್ದ ಕಾರಣ ಜಲಪಾತದ ನೀರು ಬೀಳುವ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಹಳ ಆಳವಿದೆ. ಅಲ್ಲದೇ ಚೂಪಾದ ಕಲ್ಲುಗಳೂ ಇಲ್ಲಿದೆ. ಇಲ್ಲಿ ಈಜುವುದು ಅಪಾಯಕರ. ವಾರಾಂತ್ಯದಲ್ಲಿ ಪಿಕ್ ನಿಕ್ ಮಾಡಲು ಹೇಳಿ ಮಾಡಿದಂತಹ ಸ್ಥಳ ಇದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಇತರ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಈ ಜಲಪಾತವನ್ನು ಬಹು ಸುಲಭದಲ್ಲಿ ನೋಡಬಹುದಾಗಿದೆ. ಹುಬ್ಬಳ್ಳಿ ಭಾಗದಿಂದ ಆಗಮಿಸುವ ಪ್ರವಾಸಿಗರಂತೂ ಮಾರ್ಗಮದ್ಯದಲ್ಲಿ ಸಿಗುವ ಈ ಜಲಪಾತವನ್ನು ಅರೆಘಳೊಗೆಯಲ್ಲಿ ಕಣ್ತುಂಬಿಕೊಂಡು ಹೋಗಬಹುದಾಗಿದೆ.
ಜಲಪಾತವಿರುವ ಪ್ರದೇಶ ಇದುವರೆಗೂ ಸ್ವಚ್ಛತೆಯಿಂದ ಕೂಡಿದೆ. ಜಲಪಾತದ ಕೆಳಭಾಗದಲ್ಲಿ ಗದ್ದೆಗಳಿವೆ. ಈ ಜಲಪಾತದ ಪ್ರದೇಶದಲ್ಲಿ ತ್ಯಾಜ್ಯಗಳನ್ನು ಎಸೆಯುವುದು ನಿಷಿದ್ಧ. ಪ್ರಕೃತಿ ಸೌಂದರ್ಯವನ್ನು ಹಾಳು ಮಾಡುವ ಎಲ್ಲ ಕೆಲಸಗಳಿಗೂ ಇಲ್ಲಿ ಕಡ್ಡಾಯ ಕಡಿವಾಣವಿದೆ. ಪ್ರವಾಸಿಗರು ಈ ಕುರಿತು ಎಚ್ಚರಿಕೆ ವಹಿಸಿ, ಜಲಪಾತ ವೀಕ್ಷಣೆ ಮಾಡಿಕೊಂಡು ಹೋಗಬೇಕಾಗಿದೆ.
ಜಲಪಾತಕ್ಕೆ ಹೋಗುವ ಬಗೆ :
ಶಿರಸಿ ಸಿದ್ದಾಪುರ ರಸ್ತೆಯಲ್ಲಿ ಶಿರಸಿಯಿಂದ 25 ಕಿ.ಮಿ ಹಾಗೂ ಸಿದ್ದಾಪುರದಿಂದ 14 ಕಿ.ಮಿ ದೂರದಲ್ಲಿ 16ನೇ ಮೈಲ್ ಎನ್ನುವ ಊರಿದೆ. ಈ ಊರಿನಿಂದ 2 ಕಿ.ಮಿ ಅಂತರದಲ್ಲಿ ತುಂಬರಗೋಡ ಎನ್ನುವ ಊರಿಗೆ ತೆರಳುವ ಮಾಹಿತಿ ಫಲಕ ಕಾಣುತ್ತಿದೆ. ಇಲ್ಲಿಯೇ ರಸ್ತೆ ಪಕ್ಕದಲ್ಲಿ ಜಲಪಾತವಿದೆ. ಸ್ಥಳೀಯರ ಬಳಿ ಜಲಪಾತದ ಬಗ್ಗೆ ಕೇಳಿದರೆ ಮಾಹಿತಿ ನೀಡುತ್ತಾರೆ. ಜಲಪಾತಕ್ಕೆ ತೆರಳುವ ರಸ್ತೆಗೆ ಹೊರಳಿದ ತಕ್ಷಣ ಜಲಪಾತ ಧುಮ್ಮಿಕ್ಕುವ ಸದ್ದು ಕೇಳುತ್ತದೆ. ಸುಲಭವಾಗಿ ಜಲಪಾತ ವೀಕ್ಷಣೆ ಮಾಡಿ ತೆರಳಬಹುದು.

***
(ಈ ಲೇಖನವು ಸಪ್ಟೆಂಬರ್ 4, 2014ರ ಕನ್ನಡಪ್ರಭದ ಬೈ2ಕಾಫಿಯ ಟೂರೂಕೇರಿಯಲ್ಲಿ ಪ್ರಕಟಗೊಂಡಿದೆ)

Wednesday, September 3, 2014

ಅನಾಥ ಪಕ್ಷಿಗಳು

ಸೂರು ಮರೆತ ಹಕ್ಕಿಗಳು ಅವರು
ತಂದೆ ಯಾರೋ,
ತಾಯಿ ಯಾರೋ
ಬದುಕಲಿ ನೋವ ಉಂಡವರು  |

ಕಣ್ಣಲಿ ಕನಸ ಕಂಡವರು ಅವರು
ಬಂಧುಗಳಿಲ್ಲ
ಬಳಗವೂ ಇಲ್ಲ
ಎಂದೋ ನಗುವನು ಮರೆತವರು |

ಹೊಟ್ಟೆಗೆ ಹಿಟ್ಟನು ಬಯಸುವರು ಇವರು
ನಗುವು ಎಲ್ಲೋ
ನಲಿವು ಎಲ್ಲೋ
ಬಾಳಲಿ ಸೂರನು ಬಯಸಿದರು |

ಯಾರದೋ ತಪ್ಪಿಗೆ ಸಿಲುಕಿದರು ಇವರು
ಆಸೆಗಳುಂಟು
ಕನಸುಗಳುಂಟು
ಬಯಕೆಗೆ ಅಣೆಯನ್ನು ಕಟ್ಟಿದರು |


**

(ಈ ಕವಿತೆಯನ್ನು ಬರೆದಿರುವುದು 7-08-2006ರಂದು ದಂಟಕಲ್ಲಿನಲ್ಲಿ)

Monday, September 1, 2014

ಚಕ್ಕುಲಿ ಡಾಕ್ಟರ್

ಗಣೇಶ ಚತುರ್ಥಿಯ ವಿಶೇಷವಾಗಿ ಎಲ್ಲರ ಮನೆಗಳಲ್ಲಿ ಚಕ್ಕುಲಿ ಮಾಡುವುದು ಸಾಮಾನ್ಯ. ಚಕ್ಕುಲಿ ಮಾಡುವ ಸಲುವಾಗಿಯೇ ಯಂತ್ರಗಳೂ ಬಂದಿವೆ. ಯಂತ್ರದ ಸಹಾಯದಿಂದ ಸರಸರನೆ ಚಕ್ಕುಲಿ ಮಾಡಲಾಗುತ್ತದೆ. ಇಂತಹ ಬದಲಾವಣೆಯ ನಡುವೆಯೇ ಕೈಯಲ್ಲಿ ಚಕ್ಕುಲಿ ಸುತ್ತುವವರು ಅಲ್ಲೊಮ್ಮೆ ಇಲ್ಲೊಮ್ಮೆ ಸಿಗುತ್ತಾರೆ. ಕೈಚಕ್ಕುಲಿಯನ್ನು ಮಾಡುವವರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಾಸವಾಗಿರುವ ಕೆಶಿನ್ಮನೆಯ ಡಾ|| ಶೇಷಗಿರಿ ಹೆಗಡೆ ಮತ್ತು ಚೈತ್ರಿಕಾ ದಂಪತಿಗಳೂ ಒಬ್ಬರು.
ಮಲೆನಾಡಿನಲ್ಲಿ ಗಣೇಶ ಚತುರ್ಥಿಗೆ ಚಕ್ಕುಲಿ ಕಡ್ಡಾಯ. ಬಾಯಲ್ಲಿಟ್ಟರೆ ಕರಕನೆ ಸದ್ದು ಮಾಡುತ್ತ, ರುಚಿಯನ್ನೂ ಮೂಡಿಸುತ್ತ ಆಹಾ ಎನ್ನಿಸುವ ಚಕ್ಕುಲಿಯನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ತಯಾರಿಸಲೇ ಬೇಕು. ಮೂರ್ನಾಲ್ಕು ದಶಕಗಳ ಹಿಂದೆ ಮನೆ ಮನೆಗಳಲ್ಲಿ ಕೈಯ ಮೂಲಕವೇ ಚಕ್ಕುಲಿಗಳನ್ನು ಮಾಡಲಾಗುತ್ತಿತ್ತು. ಈಗ ಚಕ್ಕುಲಿ ತಯಾರಿಸಲು ಎಲ್ಲೆಡೆ ಯಂತ್ರಗಳನ್ನು ಕಾಣಬಹುದು. ಈ ಯಂತ್ರಗಳಿಗೆ ಚಕ್ಕುಲಿ ಮಟ್ಟು ಎಂದು ಕರೆಯಲಾಗುತ್ತದೆ. ಚಕ್ಕುಲಿ ಮಟ್ಟಿನ ಸಹಾಯದಿಂದ ಒಂದು ತಾಸಿಗೆ ನೂರಾರು ಚಕ್ಕುಲಿಗಳನ್ನು ಮಾಡಲಾಗುತ್ತದೆ. ಚಕ್ಕುಲಿ ಮಾಡುವುದನ್ನು ಚಕ್ಕುಲಿ ಕಂಬಳ ಎಂದೇ ಕರೆಯಲಾಗುತ್ತದೆ. ಆಧುನಿಕ ಕಾಲದಲ್ಲಿ ಚಕ್ಕುಲಿ ಮಾಡುವ ಶೈಲಿ ಬದಲಾಗಿರುವ ಸಂದರ್ಭದಲ್ಲಿಯೇ ಅಲ್ಲೊಬ್ಬರು ಇಲ್ಲೊಬ್ಬರು ಹಳೆ ಸಂಪ್ರದಾಯವನ್ನು ಮರೆಯದೇ ಅದೇ ವಿಧಾನದಿಂದ ಚಕ್ಕುಲಿ ಮಾಡುತ್ತಿದ್ದಾರೆ.
ಕೈಚಕ್ಕುಲಿ ಬಹಳ ರುಚಿಕಟ್ಟಾದುದು ಎಂದು ಹೇಳುತ್ತಾರೆ. ಈಗೀಗ ಮನೆಗಳಲ್ಲಿ ತಯಾರು ಮಾಡಲಾಗುವ ಚಕ್ಕುಲಿಗಿಂತ ಭಿನ್ನವಾಗಿರುವ ಈ ಕೈಚಕ್ಕುಲಿ ಸವಿದವರಿಗಷ್ಟೇ ಅದರ ವಿಶೇಷತೆ ತಿಳಿಯಬಲ್ಲದು. ಕೆಶಿನ್ಮನೆಯ ಡಾ|| ಶೇಷಗಿರಿ ಹೆಗಡೆ ಮತ್ತು ಚೈತ್ರಿಕಾ ದಂಪತಿಗಳು ಕೈಚಕ್ಕುಲಿ ತಯಾರು ಮಾಡುವ ಮೂಲಕ ಹಳೆಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೇ ಇತರರಿಗೂ ಕೈಚಕ್ಕುಲಿ ತಯಾರು ಮಾಡುವುದನ್ನು ಹೇಳಿಕೊಡುತ್ತಾರೆ. ಮನೆಯಲ್ಲಿಯೇ ಚಕ್ಕುಲಿ ಕಂಬಳವನ್ನು ಮಾಡುವ ಮೂಲಕ ನೆರೆ-ಹೊರೆಯವರಿಗೆಲ್ಲ ಕೈಚಕ್ಕುಲಿಯ ಸವಿಯನ್ನು ಉಣ್ಣಿಸುವ ಕಾರ್ಯ ಮಾಡುತ್ತಿದ್ದಾರೆ.
ಕೆಶಿನ್ಮನೆಯ ಡಾ. ಶೇಷಗಿರಿ ಹೆಗಡೆ ವೃತ್ತಿಯಿಂದ ವೈದ್ಯರು. ಆಸ್ಪತ್ರೆಯ ಕೆಲಸದ ಜಂಜಾಟದಿಂದ ಕೆಲಕಾಲ ಮುಕ್ತನಾಗಿ, ತನಗೆ ಖುಷಿ ಕೊಟ್ಟ ಕೆಲಸವನ್ನು ಮಾಡಬೇಕೆನ್ನುವುದು ಅವರ ಅಭಿಲಾಷೆ. ಆದರೆ ವೃತ್ತಿಯ ನಡುವೆ ಬಿಡುವೆನ್ನುವುದು ಅಸಾಧ್ಯವಾಗುತ್ತಿತ್ತು. ಕೊನೆಗೂ ಕೈಚಕ್ಕುಲಿ ತಯಾರಿಸುವ ನೆಪದಲ್ಲಿ ಆಸ್ಪತ್ರೆಯಿಂದ ದೂರ ಉಳಿಯುವ ನಿರ್ಧಾರ ಕೈಗೊಂಡರು ಡಾಕ್ಟರು. ಮನೆಯಲ್ಲಿ ಕೈಚಕ್ಕುಲಿ ತಯಾರಿಸುತ್ತ ತೀರಾ ಪರಿಚಿತರ ಕಾಯಿಲೆಗೆ ಔಷಧಿ ಹೇಳುತ್ತ ಅವಶ್ಯ ಬಿದ್ದರೆ ಅವರನ್ನು ಮನೆಗೇ ಕರೆಸಿಕೊಂಡು ನೋಡಿ ಪರಿಹಾರ ನೀಡುತ್ತ ಮಡದಿ ಚೈತ್ರಿಕಾ ಹದಮಾಡಿಕೊಡುವ ಹಿಟ್ಟನ್ನು ಕೈಯ್ಯಲ್ಲಿ ಮುದ್ದೆಮಾಡಿ ಚಕ್ಕುಲಿ ಎಳೆ ತೆಗೆದು ಮಣೆಯ ಮೇಲೆ ಸುರಳಿ ಸುತ್ತುವುದಕ್ಕೆ ಆರಂಭಿಸಿದರೆ ಅದನ್ನು ನೋಡುವುದೇ ಆನಂದ.
ಕಳೆದ 35 ವರ್ಷಗಳಿಂದ ಕೈಚಕ್ಕುಲಿ ಮಾಡುತ್ತ ಬಂದಿರುವ ಡಾ. ಶೇಷಗಿರಿ ಹೆಗಡೆ ತಮ್ಮ ಅಜ್ಜಿ ಈ ಕಲೆಯನ್ನು ಕಲಿತುಕೊಳ್ಳಲು ಹೇಳಿದ್ದನ್ನೇ ಪ್ರೇರಣೆಯನ್ನಾಗಿ ತೆಗೆದುಕೊಂಡು ಕಲಿತಿದ್ದಾಗಿ ಅವರು ಹೇಳುತ್ತಾರೆ. ಡಾಕ್ಟರ್ನ್ನು ಮದುವೆಯಾಗಿ ಬಂದ ಮೇಲೆ ತಾನೂ ಕೈಯ್ಯಲ್ಲಿ ಚಕ್ಕುಲಿ ಸುತ್ತುವುದನ್ನು ಕಲಿತಿದ್ದೇನೆ ಎನ್ನುವ ಚೈತ್ರಿಕಾ, ಹಿಟ್ಟು ಹದಮಾಡಿ ಕೊಟ್ಟು ತಾನೂ ಚಕ್ಕುಲಿ ಸುತ್ತಿ ಸಂಬ್ರಮಿಸುತ್ತಾರೆ.
ಕೈಯ್ಯಲ್ಲಿ ಸುತ್ತುವ ಚಕ್ಕುಲಿ ಹಿಟ್ಟನ್ನು ಹದಮಾಡಿ ಬಹಳ ಹೊತ್ತು ಇಡುವಂತಿಲ್ಲ. ಸಿದ್ಧವಾದದ್ದನ್ನು ಚಕ್ಕುಲಿ ಮಾಡಿಕೊಂಡು ಮತ್ತೆ ಹಿಟ್ಟು ಹದಗೊಳಿಸಿಕೊಳ್ಳಬೇಕು. ತಾವು ಸಣ್ಣವರಿದ್ದಾಗ ಹಿಟ್ಟು ಹದಮಾಡುವ ಕೆಲಸ ಮಾಡುತ್ತಿದ್ದೆವು. ಆಗ ಊರಿನ ಅನೇಕರು ಈ ಕಲೆಯಲ್ಲಿ ಪಳಗಿದವರು ಇರುತ್ತಿದ್ದುದರಿಂದ ತಮ್ಮಂಥ ಹುಡುಗರಿಗೆ ಹಿಟ್ಟು ನಾದುವ ಕೆಲಸವಿರುತ್ತಿತ್ತು.
ಹಿಂದೆ ಹಿಟ್ಟಿಗೆ ನೀರು ಬಳಸುತ್ತಿರಲಿಲ್ಲ. ಯಾಕೆಂದರೆ ನೀರು ಬಳಸಿದರೆ ಮೈಲಿಗೆ ಎಂಬ ಭಾವನೆಯಿತ್ತು. ಅದಕ್ಕಾಗಿ ಅತ್ತಿ ಮರದಿಂದ ತೆಗೆದ ರಸ ಬಳಸಲಾಗುತ್ತಿತ್ತು. ಒಮ್ಮೆ ಅತ್ತಿರಸ ಸಿಗಲಿಲ್ಲ, ಮನೆಯಲ್ಲಿ ಸಮೃದ್ಧ ಹಾಲು ಕೊಡುವ ಜಸರ್ಿ ಆಕಳಿನ ಹಾಲನ್ನೇ ಬಳಸಿ ಕೈಚಕ್ಕುಲಿ ಮಾಡಿದ್ದೇವೆಂಬ ನೆನಪು ಡಾ|| ಹೆಗಡೆಯವರದ್ದು. ಈಗಲೂ ಚೌತಿ ಸಂದರ್ಭದಲ್ಲಿ ಮುಂಜಾನೆಯಿಂದ ಸಂಜೆಯ ವರೆಗೂ ಚಕ್ಕುಲಿ ತಯಾರಿಸಿ ಕಂಬಳವನ್ನು ಕೈಗೊಳ್ಳುತ್ತಾರೆ. ಅಕ್ಕಪಕ್ಕದವರನ್ನೂ ಕರೆದು, ಕೈಚಕ್ಕುಲಿಯನ್ನು ನೀಡಿ ಹರ್ಷಿಸುತ್ತಾರೆ. ಇವರ ಕೈಯಲ್ಲಿ ತಯಾರಾಗುವ ಚಕ್ಕಲಿಯ ಸವಿಯೇ ಬೇರೆ. ಕೈಚಕ್ಕುಲಿ ತಯಾರಿಸುವ ಮೂಲಕ ಅಪರೂಪದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿರುವ ಈ ವೈದ್ಯರು ಅಚ್ಚರಿಯನ್ನು ಹುಟ್ಟುಹಾಕುತ್ತಾರೆ.


***
(ಈ ಲೇಖನವು ಸೆ.1, 2014ರ ಕನ್ನಡಪ್ರಭದ ಬೈ2ಕಾಫಿಯಲ್ಲಿ ಪ್ರಕಟಗೊಂಡಿದೆ)