`ಯೇ ವಾಣಿ.. ಮಗಂಗೆ ನಕ್ಷತ್ರರಿತ್ಯಾ
ವ ಅಕ್ಷರದ ಹೆಸರು ಇಡಲೆ ಅಡ್ಡಿಲ್ಲೆ ಹೇಳಿ ಭಟ್ರು ಹೇಳ್ತಾ ಇದ್ರು.. ಎಂತಾ ಹೇಳಿ ಹೆಸರು ಇಡಲಕ್ಕು.? ಎಂತಾದ್ರೂ ನೆನಪು ಮಾಡ್ಕಂಜ್ಯಾ..? ಅಚ್ಚೆಮನೆ ತಂಗಿ ಹತ್ರ ಹೆಸರಿನ ಪುಸ್ತಕ ತಗಂಡುಬಪ್ಪಲೆ ಹೇಳಿದಿದ್ಯಲೆ. ಯಾವುದಾದ್ರೂ ಚೊಲೋ ಹೆಸ್ರು ಇದ್ರೆ ಆರ್ಸು ನೋಡನಾ.. ' ಎಂದು ವಾಣಿಯ ಗಂಡ ಹೇಳಿದಾಗ ವಾಣಿಗೆತಟ್ಟನೆ ನೆನಪಾದ ಹೆಸರು ವಿನಾಯಕ.
ಮದುವೆಯಾಗಿ ಮಗುವಿನ ತಾಯಿಯಾದರೂ ಈ ಹೆಸರು ಮರೆಯುತ್ತಿಲ್ಲವಲ್ಲ ಎಂದುಕೊಂಡಳು ವಾಣಿ. ಜಾತ್ರೆಯಲ್ಲಿ ಸಿಕ್ಕು ಮಾತನಾಡಿದ ನಂತರ ವಿನಾಯಕನ ಕುರಿತು ಒಂದೆ ಒಂದು ನೆನಪಿನ ಸಾಲು ಕೂಡ ವಾಣಿಯ ಮನಸ್ಸಿನಲ್ಲಿ ಹಾಯ್ದಿರಲಿಲ್ಲ. ಜಾತ್ರೆಯ ಜನಜಂಗುಳಿಯಲ್ಲಿ ಕಣ್ಣಂಚಿನಲ್ಲಿ ಮೂಡಿದ್ದ ಹನಿ ನೀರನ್ನು ಮನೆಯವರಿಗೂ ಕಾಣದಂತೆ ಒರೆಸಿಕೊಂಡು ನಿಟ್ಟುಸಿರುವ ಬಿಟ್ಟಿದ್ದಳು. ಹೋಗುವ ಮುನ್ನ ಕೊನೆಯ ಸಾರಿ ಮಾತನಾಡಬೇಕಿತ್ತು ಎಂದು ಜಾತ್ರೆಯಲ್ಲಿ ಅನ್ನಿಸಿತ್ತಾದರೂ ಅದಕ್ಕೆ ಅವಕಾಶವನ್ನೇ ನೀಡದಂತೆ ವಿನಾಯಕನ ದೋಸ್ತರು ಆತನನ್ನು ದೂರಕ್ಕೆ ಕರೆದೊಯ್ದಿದ್ದರು.
ಆ ನಂತರದ ದಿನಗಳಲ್ಲಿ ವಾಣಿಗೆ ವಿನಾಯಕ ನಿಜಕ್ಕೂ ಮರೆತು ಹೋಗಿದ್ದ. ದಿನಕಳೆದಂತೆಲ್ಲ ವಾಣಿ ಮನೆಯ-ಸಂಸಾರದ ಒತ್ತಡಗಳಲ್ಲಿ ಸಿಲುಕಿದ್ದಳು. ವಿನಾಯಕನನ್ನು ನೆನಪು ಮಾಡಿಕೊಳ್ಳಲೂ ಪುರಸೊತ್ತು ಸಿಗುತ್ತಿರಲಿಲ್ಲ. ಮನಸ್ಸಿನ ತುಂಬ ನೆನಪಾಗಿ ಕಾಡಿದ್ದ, ಮದುವೆಯ ನಂತರವೂ ಮತ್ತೆ ಮತ್ತೆ ಕನಸಾಗಿದ್ದ ಹುಡುಗ ಈ ನಡುವೆ ಬಾ ಎಂದರೂ ಕನಸಿನಲ್ಲಿ ಬರುತ್ತಿರಲಿಲ್ಲ. ಕಾಡುತ್ತಿರಲಿಲ್ಲ. ವಿನಾಯಕನಿಗೆ ಜಾಗಕೊಟ್ಟಿದ್ದ ಹೃದಯದಲ್ಲಿ ತನ್ನ ಗಂಡನನ್ನು ನಿಧಾನವಾಗಿ ಕೆತ್ತಿಕೊಳ್ಳುತ್ತಿದ್ದಳು. ವಿನಾಯಕ ಸ್ಮೃತಿ ಪಟಲದಿಂದ ಮರೆಯಾಗುತ್ತಿದ್ದ.
ಹೀಗೆ ದಿನಕಳೆದಾಗ ಅದ್ಯಾವ ಮಾಯೆಯಲ್ಲಿ ತಾನು ತನ್ನೊಡಲಲ್ಲಿ ಇನ್ನೊಂದು ಜೀವವನ್ನು ಹೊತ್ತುಕೊಂಡಿದ್ದೆ ಎನ್ನುವುದು ವಾಣಿಗೆ ಮಾಯೆಯಂತಾಗಿತ್ತು. ಅದ್ಯಾವುದೋ ಶುಭ ಗಳಿಗೆಯಲ್ಲಿ ತನ್ನೊಳಗೆ ಇನ್ನೊಂದು ಜೀವ ಮೊಳೆಯಲು ಕಾತರವಾಗಿತ್ತು. ಗರ್ಭದೊಳಗಿನ ಶಿಶು ಬೆಳೆದಂತೆಲ್ಲ ವಾಣಿ ಮನದೊಳಗೆ ಖುಷಿಯನ್ನು ಅನುಭವಿಸಿದ್ದಳು. ಅದ್ಯಾವುದೋ ತಿಂಗಳಲ್ಲಿ ಒಡಲೊಳಗಿನ ಜೀವ ಚಲನೆಯನ್ನೂ ಪಡೆದುಕೊಂಡಿತು. ಗರ್ಭಗುಡಿಯೊಳಗೆ ಆಡಹತ್ತಿತು. ಬೆಳೆದು ಒಡಲಿನ ಗೋಡೆಯನ್ನು ಫುಟಬಾಲಿನಂತೆ ಒದೆಯಲು ಆರಂಭಿಸಿದಾಗ ಹುಟ್ಟುವ ಮಗು ಗಂಡೇ ಆಗಿರಲಿ ಎಂದು ಆಶಿಸಿಕೊಂಡಿದ್ದಳು. ಗಂಡ ಹಲವು ಸಾರಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಹುಟ್ಟಲಿರುವ ಮಗು ಗಂಡೋ ಹೆಣ್ಣೋ ನೋಡಿಸೋಣ ಎಂದಿದ್ದಾಗ ವಾಣಿ ಮೊಟ್ಟ ಮೊದಲ ಬಾರಿಗೆ `ಅದು ತಪ್ಪು ಕಣ್ರಿ. ಬದುಕಿನಲ್ಲಿ ಕೆಲವು ಸಾರಿಯಾದರೂ ಕುತೂಹಲ ಇರಲಿ. ಮಗು ಗಂಡಾಗಲಿ ಅಥವಾ ಹೆಣ್ಣಾಗಲಿ.. ಈಗ ಅದರ ಪರೀಕ್ಷೆ ಬೇಡವೇ ಬೇಡ..' ಎಂದು ಹೇಳಿದ್ದಳು. ಹೀಗೆ ಹೇಳಿದ ನಂತರ ವಾಣಿಗೆ ಸಿಕ್ಕಾಪಟ್ಟೆ ಆತ್ಮವಿಶ್ವಾಸ ಬಂದಿತ್ತು.
ಬಹುಶಃ ವಾಣಿ ಹೀಗೆ ಹೇಳಿದಳು ಎಂದು ಗೊತ್ತಾದ ನಂತರವೇ ಆಕೆಯ ಅತ್ತೆಯ ಸಿಡಿಮಿಡಿ ಹೆಚ್ಚಾಗಿದ್ದಿರಬೇಕು. ಸುಮ್ಮನೆ ಇದನ್ನು ಗಮನಿಸಿದ್ದ ವಾಣಿ ಮಾತಾಡಲು ಹೋಗಿರಲಿಲ್ಲ. `ವಾಣಿಗೆ ಗಂಡು ಮಗುವೇ ಹುಟ್ಟಬೇಕು. ಹೆಣ್ಣು ಬೇಡವೇ ಬೇಡ..' ಎಂದು ಆಗಾಗ ಅತ್ತೆ ಹೇಳುತ್ತಿದ್ದ ಮಾತು ಕೇಳಿ ವಾಣಿ ಮನಸ್ಸಿನೊಳಗೆ ಕುದ್ದುಹೋಗಿದ್ದರೂ ಅದನ್ನು ಅವರೆದುರು ಆಡಿರಲಿಲ್ಲ.
ನವ ವಸಂತಗಳು ತುಂಬಿ ಅದೊಂದು ಶುಭದಿನ ಒಡಲೊಳಗಿನ ಭುವಿಗಿಳಿದಿತ್ತು. `ಗಂಡು ಮಗು..' ಎಂದು ವೈದ್ಯರು ಹೇಳಿದ್ದೇ ತಡ ಮೊದಲಿಗೆ ನಿಟ್ಟುಸಿರು ಬಿಟ್ಟ ವಾಣಿ ತನ್ನ ಆರಾಧ್ಯದೈವ ವರದಮೂರ್ತಿ ಗಣಪತಿಗೆ ಮನಸಾರೆ ವಂದಿಸಿದ್ದಳು. `ಯಮ್ಮನೆದಕ್ಕೆ ಅಂತೂವಾ ಗಂಡೇ ಹುಟ್ಟಿದ್ದು.. ಕೂಸು ಹುಟ್ಟಿದ್ರೆ ಆನಂತೂ ಅದನ್ನ ಮನೆಯೊಳಗೆ ಸೇರಿಸ್ತಿದ್ನಿಲ್ಲೆ..' ಎಂದು ಅತ್ತೆ ಕೊಂಕು ನುಡಿದಿದ್ದು ಕೇಳಿದ್ದರೂ ಕೇಳಿಸದಂತಿದ್ದಳು ವಾಣಿ. ಮಗು ಬೆಳ್ಳಗಿತ್ತು. ಗುಂಡಗಿತ್ತು. ನಕ್ಕರೆ ಮುತ್ತು ಉದುರುವಂತಿದ್ದವು. ವಾಣಿ ಹಾಗೂ ಆಕೆಯ ಗಂಡನಿಗೆ ಸ್ವರ್ಗವೇ ಧರೆಗಿಳಿದು ಬಂದಂತಿತ್ತು.
ನಂತರದ ದಿನಗಳು ಕನಸಿನಂತೆ ಕಳೆದವು. ಸೂತಕದ ಶಾಸ್ತ್ರದ ಕೊನೆಯ ದಿನ ಮಗುವಿಗೆ ನಾಮಕರಣ ಮಾಡಬೇಕು. ಮನೆಗೆ ಬಂದಿದ್ದ ಪುರೋಹಿತ ಭಟ್ಟರು ಪಂಚಗವ್ಯ ಕುಡಿಸಿ ಶುದ್ಧಿ ಮಾಡಿ ಪಂಚಾಂಗ ತೆಗೆದು `ವ' ಅಕ್ಷರ ಬರುತ್ತದೆ. ವ ಅಕ್ಷರದ ಹೆಸರನ್ನಿಡಿ ಎಂದು ಹೇಳಿದಾಗ ವಾಣಿಗೆ ತಟ್ಟನೆ ನೆನಪಾಗಿದ್ದು ವಿನಾಯಕ. ತನಗ್ಯಾಕೆ ಈ ಹೆಸರೇ ನೆನಪಾಯಿತು ಎಂದು ಅನೇಕ ಸಾರಿ ಆಲೋಚಿಸಿದ್ದಳು ವಾಣಿ. ವಿನಾಯಕನನ್ನು ಮರೆತು ಆಗಲೇ ಬಹಳ ಸಮಯ ಘಟಿಸಿ ಹೋಗಿದೆ. ಆದರೂ ಆತನೇ ಯಾಕೆ ನೆನಪಾಗಬೇಕು. ಆ ಹೆಸರೇ ಯಾಕೆ ಕಣ್ಮುಂದೆ ಸುಳಿಯಬೇಕು..? ಬಿಟ್ಟೆನೆಂದರೂ ಆತನ ಹೆಸರು ಮತ್ತೆ ಮತ್ತೆ ನೆನಪಾಗುತ್ತಿದೆ ಎಂದಾದರೆ ವಿನಾಯಕನ ಬಗ್ಗೆ ನನ್ನ ಮನಸ್ಸಿನಲ್ಲಿ ಇನ್ನೂ ಸ್ಥಾನವಿದೆಯಾ..? ಎಂದೆಲ್ಲ ಆಲೋಚಿಸಿದ್ದರೂ ಗಂಡನ ಬಳಿ ಅದೇ ಹೆಸರನ್ನು ಸೂಚಿಸಿದ್ದಳು.
`ವಿನಾಯಕ... ವಿನಾಯಕ.. ವಿನಾಯಕ...' ಎಂದು ಮಗುವಿನ ಬಲಗಿವಿಯಲ್ಲಿ ಮೂರು ಸಾರಿ ಹೆಸರು ಉಚ್ಛರಿಸುವುದರ ಜೊತೆಗೆ ವಿನಾಯಕ ಎಂಬ ಹೆಸರನ್ನು ಮಗು ಪಡೆದುಕೊಂಡಿತ್ತು.
***
`ಇದೆಂತಾ ಮಳ್ಳು ಹುಚ್ಚು ನಿಂಗೆ..? ಮಗು ಹುಟ್ಟುವುದಕ್ಕೂ ಮುನ್ನ ಅದರ ಲಿಂಗ ಪರೀಕ್ಷೆ ಮಾಡಲಾಗ. ಹುಟ್ಟೋ ಮಗು ಗಂಡೋ ಹೆಣ್ಣೋ ಹೇಳಿ ಪರೀಕ್ಷೆ ಮಾಡಿಸಿದ್ದ ಹೇಳಿ ಗೊತ್ತಾದರೆ ಜೈಲಿಗೆ ಹೋಗಕಾಗ್ತು. ಗಂಡು ಹುಟ್ಟಲಿ, ಹೆಣ್ಣು ಹುಟ್ಟಲಿ. ಯಂದೆ ಮಗು ಅಲ್ದ. ಹುಟ್ಟ ಮಗುವಿನ ಮೇಲೆ, ವಾಣಿಯ ಮೇಲೆ ಎಂತೆಂತಾದ್ರೂ ಆರೋಪ ಹೊರಸಿದ್ರೆ ಸರಿಯಿರ್ತಿಲ್ಲೆ ನೋಡು..' ಎಂದು ಸುಧೀರ ಮೊಟ್ಟ ಮೊದಲು ತನ್ನ ತಾಯಿಯ ಎದುರು ಮಾತನಾಡಿದ್ದ.
ನಾಲ್ಕೆಕರೆ ಜಮೀನಿನ ಒಡೆಯ ಸುಧೀರ ಹೆಗಡೆ. ಆತನಿಗೆ ವಾಣಿಯ ಜಾತಕ ಬಂದಾಗ ಮೊದಲಿಗೆ ಪೋಟೋ ನೋಡಬೇಕು. ಕೂಸು ಚನ್ನಾಗಿದ್ದರೆ ಮದುವೆಗೆ ಒಪ್ಪಿಕೊಳ್ಳುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದ್ದ. ಕೊನೆಗೆ ವಾಣಿಯ ಪೋಟೋವನ್ನು ನೋಡಿದ್ದ. ಚನ್ನಾಗಿದ್ದಾಳೆ ಕೂಸು. ಬಿ.ಕಾಂ ಓದಿದ್ದಾಳೆ ಎಂದಾಗ ಮಾತ್ರ ಸುಧೀರನ ಮನಸ್ಸಿನಲ್ಲಿ ಕೊಂಚ ಅಳುಕು ಉಂಟಾಗಿದ್ದು ನಿಜ. ಓದಿದ ಹುಡುಗಿ. ಕಾಮರ್ಸ್ ಕಾಲೇಜಿನವಳು. ಆ ಕಾಲೇಜಿನ ಹುಡುಗಿಯರು ಸ್ವಲ್ಪ ಜೋರಿರುತ್ತಾರೆ ಎಂದು ಕೇಳಿ ತಿಳಿದಿದ್ದ ಸುಧೀರ ಕೊನೆಗೊಮ್ಮೆ ಮದುವೆಗೆ ಒಪ್ಪಿಕೊಂಡಿದ್ದ. ಶಿರಸಿಯಲ್ಲಿ ಕೆಲಸದಲ್ಲಿದ್ದವನಿಗೆ ವಾಣಿಯ ಕುರಿತು ಅಲ್ಲಿ ಇಲ್ಲಿ ವಿಚಾರಿಸಿದಾಗ ಮಾಹಿತಿ ನೀಡಿದವರು ಅನೇಕ ಜನರಿದ್ದರು. ಆತ ಹಲವರ ಬಳಿ ವಾಣಿಯ ಬಗ್ಗೆ ಕೇಳಿದ್ದ. ಅವರೆಲ್ಲರೂ ಕೂಸಿನ ಒಳ್ಳೆಯ ಗುಣಗಳ ಬಗ್ಗೆ ಹೇಳಿದ್ದರು. ಆದರೆ ಯಾರೂ ಕೂಡ ವಾಣಿ ಹಾಗೂ ವಿನಾಯಕರ ಬಗ್ಗೆ ಹೇಳಿರಲಿಲ್ಲ. ಹುಡುಗಿ ಒಳ್ಳೆಯವಳು ಎಂಬುದು ಗೊತ್ತಾದ ತಕ್ಷಣ ಮದುವೆಗೆ ಒಪ್ಪಿಕೊಂಡುಬಿಟ್ಟಿದ್ದ.
ಸ್ವರ್ಗದಲ್ಲಿ ನಡೆಯಿತು ಎಂಬಂತೆ ಮದುವೆಯಾಗಿತ್ತು. ಮದುವೆಯಾದ ನಂತರ ಶುಭಗಳಿಗೆಯಲ್ಲಿ ವಾಣಿ ಮನೆಯೊಳಗೆ ಕಾಲಿಟ್ಟಿದ್ದಳು. ಮೊದ ಮೊದಲು ವಾಣಿಯ ಮನಸ್ಸಿನಲ್ಲಿ ಅದೇನು ಬೇಜಾರೋ. ಅದೇನೋ ಆಲೋಚನೆ ಮಾಡುತ್ತ ಕುಳಿತಿರುತ್ತಿದ್ದಳು. ಆಕೆಯ ಅನ್ಯಮನಸ್ಕತೆಗೆ ಕಾರಣವನ್ನರಿಯದ ಸುಧೀರ ಮದುವೆಯಾಗಿ ಬಂದ ಹೊಸತಾದ ಕಾರಣ ಹೀಗೆ ಎಂದುಕೊಂಡಿದ್ದ. ವಾಣಿಯ ಜೊತೆಗೆ ಹೆಚ್ಚು ಹೆಚ್ಚು ಬೆರೆಯಲು ಯತ್ನಿಸುತ್ತಿದ್ದ. ಆದರೆ ಶಿರಸಿಯಲ್ಲಿ ಮಾಡುತ್ತಿದ್ದ ಶೇರ್ ಮಾರ್ಕೇಟ್ ಬಿಸಿನೆಸ್ ಲಾಭದಲ್ಲಿತ್ತು. ಅದು ಲಾಭದತ್ತ ಮುಖ ಮಾಡಿದಂತೆಲ್ಲ ಮನೆಗೆ ಬರುವುದು ಲೇಟಾಗುತ್ತಿತ್ತು. `ಛೇ.. ವಾಣಿಯೆಷ್ಟು ಬೇಜಾರು ಮಾಡಿಕೊಳ್ಳುತ್ತಾಳೋ..' ಎಂದು ಅನೇಕ ಸಾರಿ ಅಂದುಕೊಂಡಿದ್ದ ಸುಧೀರ. `ಖಂಡಿತ ಇವತ್ತು ಮನೆಗೆ ಬೇಗನೇ ಹೋಗಿ ವಾಣಿಯ ಜೊತೆಗೆ ಪ್ರೀತಿಯಿಂದ ಮಾತನಾಡಬೇಕು. ಮುದ್ದುಮಾಡಿ ರಮಿಸಬೇಕು... ' ಎಂದು ಹಗಲು ಹೊತ್ತಿನಲ್ಲೆಲ್ಲ ಎಂದುಕೊಳ್ಳುತ್ತಿದ್ದ ಸುಧೀರನಿಗೆ ರಾತ್ರಿ ಮಾತ್ರ ಏನು ಮಾಡಿದರೂ ಲೇಟಾಗಿ ಹೋಗುತ್ತಿತ್ತು. ತಥ್.. ಎಂದು ತನ್ನನ್ನೇ ತಾನು ಬೈದುಕೊಂಡು ಮನೆಗೆ ಹೋಗುವ ವೇಳೆಗೆ ಗಂಡನಿಗಾಗಿ ಕಾಯುತ್ತಿರುವ ವಾಣಿಯ ಬಾಡಿದ ಮುಖ ಕಾಣುತ್ತಿತ್ತು. ತನಗರಿವಿಲ್ಲದಂತೆ ಮನಸ್ಸಿನಲ್ಲಿ ಪಾಪಪ್ರಜ್ಞೆ ಮೂಡಿದಂತಾದರೂ ಸುಧೀರ ಅಸಹಾಯಕನಾಗಿದ್ದ.
`ಹಗಲಿಡಿ ಅದೇನು ಮಾಡುತ್ತಾಳೋ ಪಾ..ಪ. ಹೊತ್ತು ಕಳೆಯುವ ಕಷ್ಟ ಗೊತ್ತಿದೆ. ಮನೆಯಲ್ಲಿ ಆಳುಗಳಿಗೆ ಬರವಿಲ್ಲ. ಆದರೆ ಅವರಿಗೆಲ್ಲ ಅಡುಗೆ ಸೇರಿದಂತೆ ಎಲ್ಲ ರೀತಿಯ ಕಾರ್ಯಗಳನ್ನು ಕೈಗೊಳ್ಳುವುದು ವಾಣಿಯ ಕೆಲಸ. ಅದಕ್ಕೆಲ್ಲ ಎಷ್ಟು ಕಷ್ಟ ಪಡುತ್ತಾಳೋ.. ವಾರಕ್ಕೊಂದು ದಿನವಾದರೂ ಲಕ್ಷ್ಮೀ ಟಾಕೀಸಿಗೆ ಹೋಗಿ ಹೊಚ್ಚ ಹೊಸ ಸಿನೆಮಾ ತೋರಿಸಿಕೊಂಡು ಬರೋಣ ಎಂದರೆ ಬಿಡುವೇ ಸಿಗುತ್ತಿಲ್ಲ. ಮನೆಯಲ್ಲಿ ಅಲ್ಪಸ್ವಲ್ಪ ಸಮಯ ಸಿಕ್ಕರೂ ಜಮೀನಿನ ದೇಖರಿಕೆ ನೋಡಿಕೊಳ್ಳಬೇಕು. ಇಂತಹ ಹಲವು ಹಳವಂಡಗಳ ನಡುವೆ ಹೆಂಡತಿಯನ್ನು ಮರೆಯುತ್ತಿದ್ದೇನಾ..?' ಎಂದು ಸುಧೀರ ರಾತ್ರಿ ಊಟಕ್ಕೆ ಕುಳಿತಾಗ ಯೋಚಿಸುತ್ತಿದ್ದ. ಮೌನವಾಗಿ ಬಡಿಸುವ ವಾಣಿಯ ಕುರಿತು ಮರುಕವಾಗುತ್ತಿತ್ತು. ಊಟ ಮುಗಿಯುವ ವೇಳೆಗೆ ಹಾಸಿಗೆಯ ಕಡೆಗೆ ಹೋಗಬೇಕು. ನಿಜವಾಗಿಯೂ ಹೇಳಬೇಕೆಂದರೆ ಹಾಸಿಗೆಯಲ್ಲಿ ಮಾತ್ರ ವಾಣಿ ಹಾಗೂ ಸುಧೀರ ಗಂಡ-ಹೆಂಡಿರಾಗುತ್ತಿದ್ದರು. ಉಳಿದಂತೆ ಗಂಡ ಎಂಬ ಪಾತ್ರದಲ್ಲಿ ಅವನಿರುತ್ತಿದ್ದ. ಹೆಂಡತಿ ಎಂಬ ಪಾತ್ರದಲ್ಲಿ ಅವಳಿರುತ್ತಿದ್ದಳು. ಬದುಕು ಯಾಂತ್ರೀಕರಣದಂತಾಗಿಬಿಟ್ಟಿತ್ತು.
ಈ ನಡುವೆ ಆಯಿ ವಾಣಿಗೆ ಇಲ್ಲ ಸಲ್ಲದ ಕಿರಿ ಕಿರಿಗಳನ್ನು ನೀಡುತ್ತಿದ್ದಾಳೆ ಎಂಬುದು ಅದ್ಹೇಗೋ ಗೊತ್ತಾದ ನಂತರ ಸುಧೀರ ತನ್ನನ್ನು ತಾನು ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ಯತ್ನಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದ. ಅದರ ಫಲವಾಗಿಯೇ ಆತ ವಾಣಿಯನ್ನು ಶಿರಸಿ ಮಾರಿಕಾಂಬಾ ಜಾತ್ರೆಗೆ ಕರೆದೊಯ್ದಿದ್ದ. ಜಾತ್ರೆಯ ಕಲರವವಿರಬೇಕು. ವಾಣಿ ಹೂವಿನಂತಾಗಿದ್ದಳು. ಬಲೂನಿನಂತೆ ಹಾರಾಡಿದ್ದಳು. ಅಲ್ಲೊಂದು ಕಡೆ ಅದ್ಯಾರೋ ದೋಸ್ತರ ದಂಡಿರಬೇಕು. ಕಾಲೇಜಿನವರಂತೆ ಸಿಕ್ಕಾಗ ಮಾತ್ರ ವಾಣಿ ಮೌನಿಯಾಗಿದ್ದಳು. ತನಗೆ ಪರಿಚಯ ಮಾಡಿಸಿದ್ದಳು. ಅದ್ಯಾರೋ ಹುಡುಗನ ಬಳಿ ಮಾತನಾಡಿದ್ದಳು. ತನ್ನನ್ನೂ ಪರಿಚಯ ಮಾಡಿಸಿದ್ದಳು. ಈ ಹುಡುಗರ ದಂಡು ಸಿಗುವ ಮುನ್ನ ಖುಷಿ ಖುಷಿಯಾಗಿದ್ದ ವಾಣಿ ಆ ನಂತರ ಇದ್ದಕ್ಕಿದ್ದಂತೆ ತನ್ನನ್ನು ಅಲ್ಲಿಂದ ಕರೆದೊಯ್ದದ್ದು, ಕಣ್ಣಿನಂಚಿನಲ್ಲಿ ಮೂಡಿದ್ದ ನೀರನ್ನು ಒರೆಸಿಕೊಂಡಿದ್ದು. ನಂತರ ಜಾತ್ರೆಯ ತುಂಬೆಲ್ಲ ಮೌನವಾಗಿದ್ದನ್ನು ಕಂಡಾಗ ಮಾತ್ರ ಸುಧೀರ ಕುಸಿದುಹೋಗಿದ್ದ. ಖುಷಿಪಟ್ಟುಕೊಂಡು ಇರಬೇಕಿದ್ದ ಹುಡುಗಿಯನ್ನು ಮದುವೆಯಾಗಿ ತಾನು ಕೂಡಿ ಹಾಕಿಬಿಟ್ಟೆನೆ? ಮದುವೆಗೂ ಮುನ್ನ ವಾಣಿ ಬಹಳ ಖುಷಿಯಿಂದಿದ್ದಳು. ಅವಳನ್ನು ಆದರಿಸುವ, ಇಷ್ಟಪಡುವ ಗೆಳೆಯರ ದಂಡು ಬಹಳ ದೊಡ್ಡದಿತ್ತು. ತಾನು ಮದುವೆಯಾಗುವ ಮೂಲಕ ಹಾರುವ ಹಕ್ಕಿಯನ್ನು ತಂದು ಪಂಜರದಲ್ಲಿ ಕೂಡಿಟ್ಟೆನಾ..? ಯಾಕೋ ತಪ್ಪು ಮಾಡಿದೆ ಎಂದೆಲ್ಲ ಆಲೋಚಿಸಿದ್ದ ಸುಧೀರ. ವಾಣಿಯ ಕಣ್ಣೀರಿನ ನಿಜವಾದ ಕಾರಣ ಗೊತ್ತಾಗದಿದ್ದರೂ ತನ್ನ ನೇರಕ್ಕೆ ಆಲೋಚನೆ ಮಾಡಿದ್ದ ಸುಧೀರ. ಏನಾದರಾಗಲಿ ವಾಣಿಗಾಗಿಯೇ ದಿನದಲ್ಲಿ ಒಂದಷ್ಟು ದಿನವನ್ನು ಮೀಸಲಿರಿಸಬೇಕು ಎನ್ನುವ ನಿರ್ಧಾರವನ್ನು ಸುಧೀರ ತೆಗೆದುಕೊಂಡು ಅದರಂತೆಯೇ ನಡೆದುಕೊಳ್ಳ ಹತ್ತಿದ್ದನ್ನು ವಾಣಿಯೂ ಗಮನಿಸಿದ್ದಳು.
ಇದ್ದಕ್ಕಿದ್ದಂತೆ ಒಂದು ದಿನ ವಾಣಿ ತನ್ನಲ್ಲಿ ಇನ್ನೊಂದು ಜೀವ ಮೊಳೆತಿದೆ ಎಂದಾಗ ಸುಧೀರ ಬಾನಿಗೆ ಜಿಗಿದಿದ್ದ. ಆ ನಂತರವಂತೂ ದೈನಂದಿನ ಶೇರ್ ಮಾರ್ಕೇಟಿನ ಕೆಲಸವನ್ನು ಬದಿಗೊತ್ತಿ ಹೆಂಡತಿಯ ಜೊತೆಗೆ ಕಳೆಯತೊಡಗಿದ್ದ. ಹುಟ್ಟುವ ಮಗು ಹಾಗಿರುತ್ತದೆ, ಹೀಗಿರುತ್ತದೆ ಎಂದೆಲ್ಲ ಕನಸನ್ನು ಕಟ್ಟಲಾರಂಭಿಸಿದ್ದ. ಗಂಡು ಮಗುವೇ ಹುಟ್ಟಲಿ ದೇವರೆ ಎಂದೂ ಆಗಾಗ ಬೇಡಿಕೊಳ್ಳುತ್ತಿದ್ದ. ಹೀಗಿದ್ದಾಗಲೇ ಒಂದಿನ ಇದ್ದಕ್ಕಿದ್ದಂತೆ ಆಯಿ ಬಂದು `ಯೇ ತಮಾ.. ವಾಣಿಯ ಹೊಟ್ಟೆಲಿರೋ ಮಗು ಕೂಸಾ..? ಮಾಣಿಯಾ ಹೇಳಿ ನೋಡಿಸ್ಕ್ಯಂಡು ಬರಕಾಗಿತ್ತಲಾ.. ಮಾಣಿಯಾದ್ರೆ ಅಡ್ಡಿಲ್ಯಾ.. ಕೂಸಾದ್ರೆ ಬ್ಯಾಡದಾ..' ಎಂದು ಹೇಳಿದ್ದಳು. ಸುಧೀರನೂ ಹುಂ ಎಂದು ವಾಣಿಯ ಬಳಿ ಬಂದು ಕೇಳಿದ್ದ. ಆಗ ವಾಣಿ ಸಿಟ್ಟಿನಿಂದ ಬೇಡವೇ ಬೇಡ ಎಂದಿದ್ದಳು. ಅದಕ್ಕೆ ಪ್ರತಿಯಾಗಿ ಸುಧೀರ ಆಯಿಯನ್ನು ಎದುರುಹಾಕಿಕೊಂಡು ಮಾತನಾಡಿದ್ದ. ವಾಣಿಗೆ ಸುಧೀರ ಆಯಿಯ ಬಳಿ ಹೇಳಿದ್ದ ಮಾತನ್ನು ಕೇಳಿದ ನಂತರ ಗಂಡನ ಕುರಿತು ಮೂಡಿದ್ದ ಅಭಿಮಾನ ಇಮ್ಮಡಿಸಿತ್ತು.
ವಾಣಿಗೆ ಒಂಭತ್ತು ತಿಂಗಳು ತುಂಬಿದಾಗಲೇ ಸುಧೀರ ನಿಂತಲ್ಲಿ ನಿಲ್ಲಲಿಲ್ಲ ಕೂತಲ್ಲಿ ಕೂರಲಿಲ್ಲ ಎನ್ನುವಂತಾಗಿದ್ದ. ಶುಭಗಳಿಗೆಯಲ್ಲಿ ವಾಣಿ ಹಡೆದಳು. ಹುಟ್ಟಿದ ಮಗು ಗಂಡಾಗಿತ್ತು. ಹರಕೆ ಹೊತ್ತುಕೊಂಡಿದ್ದ ಪರಿಣಾಮ ಹೀಗಾಗಿದೆ ಎಂದುಕೊಂಡ ಸುಧೀರ. ನಂತರದ ದಿನಗಳೆಲ್ಲ ಕನಸಿನಂತೆ ಕಳೆದುಹೋದವು. ಭಟ್ಟರು ಪಂಚಾಂಗ ನೋಡಿದವರೇ ವ ಅಕ್ಷರದ ಹೆಸರನ್ನು ಇಡಬೇಕು ಎಂದಾಗ ಮಾತ್ರ ಆಲೋಚನೆಗೆ ಬಿದ್ದಿದ್ದ ಸುಧೀರ. ಶಾಲೆಗೆ ಸೇರಿಸಿದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಅ ಅಕ್ಷರದಿಂದ ಆರಂಭವಾಗುವ ಹೆಸರನ್ನಿಡಬೇಕು ಎಂದಾಗ ಭಟ್ಟರು ವ ಅಕ್ಷರವನ್ನು ಸೂಚಿಸಿದ್ದರು. ಈ ಕುರಿತು ಆಲೋಚನೆಗೆ ಬಿದ್ದಿದ್ದರೂ ವ ಅಕ್ಷರದಿಂದ ಶುರುವಾಗುವ ಹೆಸರನ್ನಿಡುವುದೇ ಸೂಕ್ತ ಎಂದುಕೊಂಡ ಸುಧೀರ. ತಕ್ಷಣವೇ ಫೇಸ್ ಬುಕ್ಕಿಗೆ ತೆರಳಿ ತನ್ನ ಗೋಡೆಯಲ್ಲಿ `ವ..' ಅಕ್ಷರದಿಂದ ಆರಂಭವಾಗುವ ಗಂಡು ಮಗುವಿನ ಹೆಸರನ್ನು ಸೂಚಿಸಿ. ತನ್ನ ಮಗುವಿಗೆ ಇಡಬೇಕು ಎಂದೂ ಸ್ಟೇಟಸ್ ಅಪ್ ಡೇಟ್ ಮಾಡಿ ಬಂದಿದ್ದ. ಹೀಗೆ ಅಪ್ ಡೇಟ್ ಮಾಡಿದ್ದ ಅರ್ಧ ಗಂಟೆಯಲ್ಲಿ ವ ಅಕ್ಷರದ ವಿಚಿತ್ರ, ವಿಕ್ಷಿಪ್ತ, ವಿಲಕ್ಷಣ ಹೆಸರುಗಳನ್ನೆಲ್ಲ ಫೇಸ್ ಬುಕ್ ಮಂದಿ ಬರೆದು ಬಿಸಾಡಿದ್ದರು. ಅದನ್ನು ನೋಡಿ ಸುಮ್ಮನಾಗಿದ್ದ ಸುಧೀರ ಹೆಂಡತಿಯ ಬಳಿ ಬಂದು `ವ' ಅಕ್ಷರದ ವಿಷಯ ತಿಳಿಸಿದ್ದ ತಕ್ಷಣ ಆಕೆ ಆಲೋಚಿಸಿ ವಿನಾಯಕ ಎಂದಿದ್ದಳು.
ವ ಅಕ್ಷರದಿಂದ ಎಷ್ಟೆಲ್ಲ ಮಾಡರ್ನ್ ಹೆಸರುಗಳಿವೆ. ವಿನಾಯಕ ಎಂಬುದು ಹಳೆಯದಾಗಿಲ್ಲವಾ..? ಎಂದು ವಾಣಿಯ ಬಳಿ ಕೇಳಬೇಕೆನ್ನುವಷ್ಟರಲ್ಲಿ ವಾಣಿಯೇ `ವರದಮೂರ್ತಿ ಗಣಪತಿಯ ಬಳಿ ಗಂಡು ಮಗು ಹುಟ್ಟಿದರೆ ನಿನ್ನ ಹೆಸರನ್ನು ಇಡುತ್ತೇನೆ ಎಂದುಕೊಂಡಿದ್ದೆ.. ಅದಕ್ಕೆ ಹಳೆಯದಾದರೂ ಪರವಾಗಿಲ್ಲ ಈ ಹೆಸರನ್ನಿಟ್ಟಿದ್ದೇನೆ..' ಎಂದು ಹೇಳಿದ್ದಳು.
ವಾಣಿಗೆ ಮತ್ತೆ ವಿನಾಯಕ ನೆನಪಾಗಿದ್ದ. ಸುಧೀರ ವಿನಾಯಕನ ಹೆಸರನ್ನೇ ಮಗುವಿನ ಕಿವಿಯಲ್ಲಿ ಉಚ್ಛರಿಸಿದ್ದ.
***