Monday, March 3, 2014

ಬಸ್ಸಿನ ಕಂಬಿಯಲ್ಲಿ ತಲೆ ಸಿಕ್ಕಿಸಿಕೊಂಡಿದ್ದು

(ಇಂತದ್ದೇ ಕಂಬಿಯಲ್ಲಿ ತಲೆ ಸಿಕ್ಕಿಸಿಕೊಂಡಿದ್ದು-ಬಾಣದ ಗುರುತಿದ್ದಲ್ಲಿ ಗಮನಿಸಿ)
         ಯಾವಾಗ್ಲೂ ಇವನು ತನ್ನ ಅನುಭವಗಳನ್ನೇ ಬರೆದುಕೊಳ್ಳುತ್ತಾನೆ ಎಂದುಕೊಳ್ಳಬೇಡಿ. ನನ್ನ ಬದುಕಿನಲ್ಲಿ ಕೆಲವೊಂದು ಅಪರೂಪದ ಅನುಭಗಳಾಗಿವೆ. ಅವನ್ನು ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.
           ಇದು ಚಿಕ್ಕವನಿದ್ದಾಗ ಎಂದೋ ನಡೆದ ಘಟನೆ. ನನಗೆ ಆ ಚಿಕ್ಕಂದಿನ ಘಟನೆ ಅಲ್ಪ ಸ್ವಲ್ಪ ನೆನಪಿನಲ್ಲಿದೆ. ಅದಕ್ನಕಿಂತ ಹಿರಿಯರು ಹೆಚ್ಚು ಹೇಳಿದ್ದರಿಂದ ಘಟನೆ ನೆನಪಿದೆ. ಆಗ ನನಗೆ ಮೂರೋ ನಾಲ್ಕೋ ವರ್ಷ ವಯಸ್ಸು ಇರಬಹುದು. ಕಿಲಾಡಿ ಹುಡುಗ ನಾನು ಎಂದೇ ವರ್ಡ್ ಫೇಮಸ್ಸು. ನಿಂತಲ್ಲಿ ನಿಲ್ಲದ ಪೋಕರಿ ಮಾಣಿ.
            ಅಂದು ಅಮ್ಮ ಹಾಗೂ ಅರುಂಧತಿ ಅತ್ತೆ (ಅಪ್ಪನ ಅಕ್ಕ. ಅವರು ಈಗಿಲ್ಲ) ಇವರಿಬ್ಬರೂ ಸೇರಿ ನನ್ನನ್ನು ಕರೆದುಕೊಂಡು ಸಾಗರದ ಹತ್ತಿರ ಭೀಮನಕೋಣೆಯಲ್ಲಿರುವ ನೆಂಟರಮನೆಯ ಕಡೆಗೆ ಹೊರಟಿದ್ದರು. ಸಾಗರದಿಂದ ಅನತಿ ದೂರದಲ್ಲಿರುವ ಈ ಊರಿಗೆ ಹೋಗಬೇಕೆಂದರೆ ಖಾಸಗಿ ಬಸ್ಸುಗಳನ್ನೇ ಹಿಡಿಯಬೇಕು. ಸರ್ಕಾರಿ ಬಸ್ಸುಗಳು ಅಲ್ಲೊಂದು ಇಲ್ಲೊಂದು ಇದ್ದ ಕಾಲದಲ್ಲಿ ನಾವು ಒಂದು ಖಾಸಗಿ ಬಸ್ಸನ್ನೇರಿ ಹೊರಟೆವು.
             ನಾನು ಕಿಲಾಡಿ ಎಂದು ಮೊದಲೇ ಹೇಳಿದ್ದೆನಲ್ಲ. ಸುಮ್ಮನೆ ಇರದ ನಾನು ಬಸ್ಸಿನಲ್ಲಿ ಪುಂಡರಪೂಟನ್ನು ಶುರುಹಚ್ಚಿಕೊಂಡೆ. ಅಮ್ಮ ಬೈದು ಹಿಡಿಶಾಪ ಹಾಕಿದರೂ ಕೇಳಲಿಲ್ಲ. ಬಸ್ಸ್ಇನಲ್ಲಿ ಓಡುವುದು, ಸೀಟಿನಿಂದ ಸೀಟಿಗೆ ಜಿಗಿಯುವುದು.. ಹೀಗೆ ಹಲವಾರು ಕೆಲಸಗಳನ್ನು ಮಾಡಿದೆ. ಅದ್ಯಾವುದೋ ಪುಣ್ಯಾತ್ಮ ಬಸ್ಸಿನ ತಲೆಯ ಮೇಲೆ ಹತ್ತಿ ಯಾವುದೋ ಲಗೇಜನ್ನು ಏರಿಸುತ್ತಿದ್ದ. ನನಗೆ ಕುತೂಹಲ ತಡೆಯಲು ಸಾಧ್ಯವಾಗಲಿಲ್ಲ. ಬಸ್ಸಿನಲ್ಲಿ ಕಂಡಕ್ಟರ್ ಕೂರುವ ಸೀಟಿನ ಪಕ್ಕದಲ್ಲಿ ಹಾಕಿರುತ್ತಾರಲ್ಲ ಲಗೇಜ್  ಕಂಬಿಗಳು ಅದರೊಳಗೆ ತಲೆ ತೂರಿಸಿಬಿಟ್ಟೆ.
             ತೂರಿಸುವುದು ತೂರಿಸಿದೆ. ಆದರೆ ತೆಗೆಯಲಿಕ್ಕಾಗಬೇಕಲ್ಲ. ಊಹೂ.. ಏನು ಮಾಡಿದರೂ ತಲೆಯನ್ನು ಹೊರಕ್ಕೆ ತೆಗೆಯಲು ಆಗುತ್ತಿಲ್ಲ. ಬಸ್ಸಿನ ಮೇಲೆ ಲಗೇಜು ಏರಿಸುವವರೆಲ್ಲ ಗದರಲು ಆರಂಭಿಸಿದರು. ನಾನು ಹೋ ಎಂದು ಅರಚಲು ಆರಂಭಿಸಿದೆ.
             ದುರಾದೃಷ್ಟಕ್ಕೆ ಆಗಲೇ ಬಸ್ಸನ್ನೂ ಬಿಟ್ಟುಬಿಟ್ಟರು.ದೇಹ-ತಲೆ ಬೇರೆ ಬೇರೆ ಆದಂತೆ. ದೇಹ ಒಳಗೆ, ತಲೆ ಹೊರಗೆ. ನನ್ನ ಅಳು ಜೋರಾಯಿತು. ಅಮ್ಮ ಹಾಗೂ ಅತ್ತೆಗೆ ದಿಗ್ಭ್ರಮೆ.
             ಅಷ್ಟರಲ್ಲಾಗಲೇ ಬಸ್ಸಿನಲ್ಲಿದ್ದ ಜನರು, ಕಂಡಕ್ಟರ್-ಡ್ರೈವರ್ ಇವರ ಗಮನ ನನ್ನ ಕಡೆಗೆ ಹರಿದಿತ್ತು. ಮಗನನ್ನು ಸರಿಯಾಗಿ ನೋಡಿಕೊಂಡಿಲ್ಲ. ಭಾನಗಡಿ ಮಾಡಿಕೊಂಡಿದೆ ಎಂದು ಎಲ್ಲರೂ ಅಮ್ಮನಿಗೆ ಬೈಯುವವರೇ. ಭಯ ಹಾಗೂ ನಾಚಿಕೆಯಿಂದ ಅಮ್ಮ ಹಾಗೂ ಅತ್ತೆಯ ಮುಖ ಕೆಂಪಾಗಿತ್ತು.
             ಅಮ್ಮ ಅದೇನು ಮಾಡಿದರೂ ತಲೆಯನ್ನು ಸಿಕ್ಕಿಬಿದ್ದ ಕಂಬಿಯಿಂದ ತೆಗೆಯಲಿಕ್ಕಾಗುತ್ತಿಲ್ಲ. ಗಿಲೋಟಿನ್ ಯಂತ್ರಕ್ಕೆ ಹಾಕಿದಾಗ ಹೇಗೆ ತಲೆ ಸಿಕ್ಕಿಬಿದ್ದು ಒದ್ದಾಡುತ್ತೇವೋ ಹಾಗೆ ನಾನು ಒದ್ದಾಡತೊಡಗಿದ್ದೆ. ಕೊನೆಗೊಮ್ಮೆ ಅಮ್ಮ ದೇವರ ಮೇಲೆ ಭಾರ ಹಾಕಿ ಕಣ್ಣು ಮುಚ್ಚಿ ಜೋರಾಗಿ ಎಳೆದಳು. ಪುಣ್ಯಕ್ಕೆ ತಲೆ ಕಂಬಿಯಿಂದ ಬಿಡಿಸಿಕೊಂಡು ಬಂದಿತು. ಉಫ್.. ನನ್ನ ಪ್ರಾಣ ಉಳಿಯಿತು. ಎಳೆದ ರಭಸಕ್ಕೆ ನನ್ನ ತಲೆಯ ಎರಡೂ ಪಕ್ಕ ಕೆಂಪಗಾಗಿ ಕಿನ್ನೆತ್ತರು ಗಟ್ಟಿತ್ತಲ್ಲದೇ ಈಗಲೋ ಆಗಲೋ ರಕ್ತ ಸುರಿಯುತ್ತದೆ ಎನ್ನುವಂತಾಗಿತ್ತು. ಹಿಂಗಾದರೆ ಆಗಲಿ ಜೀವ ಉಳಿಯಿತಲ್ಲ.. ಸಾಕು. ಎಂದು ನಿಟ್ಟುಸಿರಾಗಿದ್ದರು ಮನೆಯಲ್ಲಿ.
**
             ಇಂತಹ ನನ್ನ ಅನೇಕ ಲಿಗಾಡಿತನಗಳನ್ನು ಅಮ್ಮ ಸೈರಿಸಿಕೊಂಡಿದ್ದಾಳೆ. ಹೆಚ್ಚಿನ ಸಾರಿ ಸಹನೆಯಿಂದ ಮತ್ತೆ ಹಲವು ಸಾರಿ ಸಹನೆಯನ್ನೂ ಬಿಟ್ಟು ಏಟು ಹಾಕಿದವಳು ಅಮ್ಮ. ಅವಿಭಕ್ತ ಕುಟುಂಬದಲ್ಲಿ  ಹಿರಿಯ ಮೊಮ್ಮಗನಾಗಿ ಹುಟ್ಟಿದ ತಪ್ಪಿಗೆ ಯಾರೇ ತಪ್ಪು ಮಾಡಿದರೂ ನನ್ನ ಮೇಲೆ ಅದು ಬರುತ್ತಿತ್ತು. ಶಿಕ್ಷೆ ಅನುಭವಿಸಬೇಕಾಗುತ್ತಿತ್ತು. ಆಗೆಲ್ಲ ನನ್ನ ಬೆನ್ನಿಗೆ ನಿಂತು ನನ್ನ ಪರವಾಗಿ ವಾದಿಸಿದವಳು ಅಮ್ಮ. ಪರಿಣಾಮವಾಗಿ ಅಮ್ಮ ಬೈಗುಳಗಳನ್ನು ಕೇಳಬೇಕಿತ್ತು. ನನ್ನ ಬಾಲ್ಯದ ಕಿಲಾಡಿತನಗಳ ದೆಸೆಯಿಂದ ಅನೇಕ ಸಾರಿ ಅಮ್ಮ ಕಣ್ಣೀರು ಹಾಕಿದ್ದೂ ಇದೆ. ಆದರೆ ಈಗ ಅವುಗಳನ್ನು ಮೆಲುಕು ಹಾಕುವ ಅಮ್ಮ ಅವೆಲ್ಲ ಎಷ್ಟು ಮಜವಾಗಿದ್ದವಲ್ಲಾ ಎಂದು ನಗುತ್ತಾಳೆ. ಅಮ್ಮನಿಗೆ ಹಾಗೂ ಅಮ್ಮನ ಪ್ರೀತಿಗೆ ಸಲಾಂ. ಮಾ.8 ವಿಶ್ವಮಹಿಳಾ ದಿನಾಚರಣೆ. ಅಮ್ಮನಿಗೆ ಶುಭಾಷಯ ಹೇಳಲು ಮತ್ತೊಮ್ಮೆ ನೆಪ ಸಿಕ್ಕಂತಾಗಿದೆ.
ಅಮ್ಮಾ. ವಿಶ್ವ ಮಹಿಳಾ ದಿನಾಚರಣೆಯ ಶುಭಾಷಯಗಳು. 

Friday, February 28, 2014

ಹಿಸೆ ಪಂಚಾಯ್ತಿಕೆ-2

ಕೋರ್ಟು ಮುಂದೋದಂತೆ
ಮತ್ತೆ ಶುರು ಪಂಚಾಯ್ತಿ
ಸುಬ್ಬಣ್ಣ ಹೆಣ್ತಿಗಂದ
ತಲೆ ತಿನ್ನಡ ಮಾರಾಯ್ತಿ ||

ಪಟ್ಟಾಗಿ ಕುಂತ ಪಂಚರು
ಶುರು ಮಾಡಿದ ಹಿಸೆ
ದೊಡ್ಡಮನೆ ಅಣ್ಣತಮ್ಮಂದ್ರಲ್ಲಿ
ಆರೋಗಿತ್ತು ಪಸೆ ||

ಆರು ಬಣ್ಣ ಮಾಸ್ತರಂಗೆ
ಬಾಗಲಪಾಲು ನಾಗಣ್ಣಯ್ಯಂಗೆ
ದೊಡ್ಡಪಾಲಿಗೆ ಗಣಪತಿ
ಹೊಳೆ ಅಂಚಿಂದು ಸುಬ್ಬಣ್ಣಂಗೆ ||

ಗದ್ದಲೆಂತು ಪಾಲೆ ಇಲ್ಲೆ
ಎಲ್ಲಾ ಮಹೇಶನ್ನ ಸೇರ್ತು
ಮನೆ ಅಂಚಿನ ಗದ್ದೆ ಮಾತ್ರ
ಸುಬ್ಬಣ್ಣಂಗೆ ಬಂತು ||

ಎಲ್ಲಾ ಮುಗಿದು ಹೊರಡ ಹೊತ್ತಿಗೆ
ಯಂಕಣ್ಣಂದು ತಕರಾರು
ಚರಾಸ್ತಿ ಪಾಲಾಜಿಲ್ಲೆ
ಇರ್ಲಿ ಸ್ವಲ್ಪ ದರಕಾರು ||

ಗ್ಯಾಸ್ ಬಾವಿ ನಾಗಪ್ಪಂಗೆ
ಮಹೇಶಂಗೆ ಟಿ.ವಿ
ಯಂಕಣ್ಣಂಗೆ ಮೋಟಾರ್ ಬೈಕು
ಸುಬ್ಬಣ್ಣಂಗೆ ಕೋವಿ ||

ಮಂಕಾಳಕ್ಕ ಕೂಗಲೆ ಹಿಡತ್ತು
ಯಂಗೂ ಪಾಲು ಬೇಕಿತ್ತು
ಸುಮ್ಮನಿರಸಲ್ ಹೋದವ್ವಿಲ್ಲೆ
ಹಿಸೆ ಆಗಲೇ ಬೇಕಿತ್ತು ||

ಗದ್ದೆ ಮನೆ ಮಂಕಾಳಕ್ಕಂಗೆ
ಗಪ್ಗಪತಿಗೆ ಗದ್ದೆ ತೋಟ
ದೊಡ್ಡಪಾಲನ್ನು ಕೇಳವಿಲ್ಲೆ
ಯಾವಾಗ್ಲೂ ಮಂಗನ ಕಾಟ ||

ಮನೆಯಲ್ ಅರ್ಧ ಪಾಲಾಗಿತ್ತು
ಹೆಬ್ಬಾಗಲ್ಲಲ್ ನಾಗಪ್ಪ
ಮನೆಗೆ ಗೋಡೆ ಬಂದಾಗಿತ್ತು
ಹಿತ್ಲಾಕಡಿಗೆ ಸುಬ್ಬಣ್ಣ ||

ಪಂಚಾಯ್ತಿಗೆ ಕುಂತಿದ್ದವ್ವ
ಪಕ್ಕದಮನೆಯ ಮಂಞಾತ
ಹಳೆ ಹಿಸೆ ಸರಿಯಿತ್ತಿಲ್ಲೆ
ತನಗೆ ಪಾಲು ಕಮ್ಮಿ ಇತ್ತಾ ||

ತಕರಾರ್ ಪಕರಾರ್ ಇದ್ರೂ ಕೂಡ
ದೊಡ್ಡ ಮನೆ ಪಾಲಾತು
ಮನೆ ಮನದ ಜೊತೆಯಲ್ಲಂತೂ
ಎಲ್ಲವೂ ಚೂರಾತು ||

**
(ಹಿಸೆ ಪಂಚಾಯ್ತಿಕೆಯ ಮತ್ತರ್ಧ ಭಾಗ)

Thursday, February 27, 2014

ಬೆಂಗಾಲಿ ಸುಂದರಿ-9

ಕಾಂತಾಜಿ ದೇವಾಲಯದ ಗೋಡೆಯ ಮೇಲಣ ಕೆತ್ತನೆಗಳು
                  `ನನಗೆ ಬಹಳ ದಿನಗಳಿಂದ ಕುತೂಹಲಕ್ಕೆ ಕಾರಣವಾಗಿತ್ತು ಈ ಬೆಂಗಾಲಿ ನಾಡು.. ನಮ್ಮ ಪ್ರೀತಿಯ ಸುಭಾಷ ಚಂದ್ರ ಭೋಸರು ಓಡಾಡಿದ ಸ್ಥಳ. ಇಲ್ಲೇ ಕೂಗಳತೆ ದೂರದಲ್ಲಿ ಅಲ್ಲವಾ ಸುಭಾಷರು ಹುಟ್ಟಿದ್ದು.. ಭಾರತದಲ್ಲಿ ಏನೇ ಬದಲಾವಣೆ ಆಗುತ್ತದೆ ಎಂದಾದರೂ ಮೊದಲು ಬೆಂಗಾಲಿ ನಾಡಿನಲ್ಲೇ ಆಗುತ್ತದೆ ಎನ್ನುತ್ತಾರೆ. ಹೌದಲ್ಲವಾ..? ಬುದ್ಧಿವಂತರ ನಾಡು ಎಂದೂ ಬಂಗಾಲವನ್ನು ಕರೆಯುತ್ತಾರೆ ಅಲ್ಲವಾ..' ಎಂದ ವಿನಯಚಂದ್ರ.
                   `ಹೌದು ಹೌದು.. ಎಲ್ಲ ಬದಲಾವಣೆಗಳೂ ಇಲ್ಲಿಂದಲೇ ಆಗಿದ್ದು..' ಎಂದವಳೇ `ಮೊಟ್ಟಮೊದಲು ಬ್ರಿಟೀಷರ ದಾಸ್ಯಕ್ಕೆ ಒಳಗಾಗಿದ್ದು ಇದೇ ಬೆಂಗಾಲಿ ಸ್ಥಳವೇ ಅಲ್ಲವಾ..' ಎಂದು ಹೇಳಿ ನಾಲಿಗೆ ಕಚ್ಚಿಕೊಂಡಳು.
                   ವಿನಯಚಂದ್ರನಿಗೆ ಅಚ್ಚರಿಯಾಯಿತು. ಬೆಂಗಾಲಿ ನಾಡಿನ ಈ ಹುಡುಗಿಗೆ ತನ್ನ ದೇಶದ ಕುರಿತು ಯಾಕೋ ಒಳ್ಳೆ ಭಾವನೆ ಇದ್ದಂತಿಲ್ಲ ಎಂದುಕೊಂಡನಾದರೂ ಕೇಳಲು ಹಿಂಜರಿದ. ಆಕೆಯ ಬಳಿ `ನನಗೆ ಇಲ್ಲಿ ಗಂಗಾನದಿ ಸಮುದ್ರವನ್ನು ಸೇರುವ ಸ್ಥಳವನ್ನು ನೋಡಬೇಕೆಂಬ ಆಸೆಯಿದೆ. ನಮ್ಮ ಪ್ರವಾಸದ ಪಟ್ಟಿಯಲ್ಲಿ ಅದೂ ಉಂಟಾ..?' ಎಂದ.
                 `ಇಲ್ಲ.. ಇಲ್ಲ.. ನೋಡೋಣ ನಮ್ಮ ಸೀನಿಯರ್ ಗೆ ತಿಳಿಸುತ್ತೇನೆ.. ಅವರೇನಾದರೂ ಕ್ರಮ ಕೈಗೊಳ್ಳಬಹುದು.. ಹೌದು ಅಲ್ಲೆಂತದ್ದು ನೋಡೋದು ನಿಮಗೆ..?'
                  `ಗಂಗಾನದಿ ಸಮುದ್ರ ಸೇರುವ ಸ್ಥಳದಲ್ಲಿರುವ ಸುಂದರಬನ್ಸ್ ನೋಡಬೇಕು. ಉದ್ದುದ್ದದ ಬೀಳಲುಗಳನ್ನು ಚಾಚಿ ನಿಂತ ಚಿತ್ರ ವಿಚಿತ್ರ ಕಾಂಡ್ಲಾ ಕಾಡನ್ನು ನೋಡಬೇಕು. ಬೆಂಗಾಲಿಯ ಭವ್ಯ ನಿಲುಕಿನ ಬಿಳಿಹುಲಿಗಳನ್ನು ನೋಡಬೇಕು. ಅಳಿವಿನ ಅಂಚಿನಲ್ಲಿದೆಯಂತಲ್ಲಾ.. ಬಹಳ ಕುತೂಹಲವಿದೆ. ನಮ್ಮೂರಿನಲ್ಲೆಲ್ಲ ಹಳದಿ ಪಟ್ಟೆ ಪಟ್ಟೆ ಹುಲಿ ನೋಡಿದ್ದೆ.. ಈ ಬಿಳಿ ಹುಲಿಗಳು ಹೇಳಿರ್ತವೆ ಅನ್ನೊದು ನೋಡಬೇಕೆಂಬ ಆಸೆಯಿದೆ.. ಜೊತೆಗೆ ಗಂಗಾನದಿ ಸಮುದ್ರ ಸೇರಿದ ನಂತರವೂ ಅನೇಕ ಕಿಲೋಮೀಟರ್ ಗಳವರೆಗೆ ಸಮುದ್ರದ ನೀರಿನಲ್ಲಿದ್ದರೂ ಹರಿಯುತ್ತ ಹೋಗುತ್ತದಂತಲ್ಲ ಅಲ್ಲೊಮ್ಮೆ ದೋಣಿ ಯಾತ್ರೆ ಕೈಗೊಳ್ಳಬೇಕು. ಸಮುದ್ರದೊಳಕ್ಕೆ ಸೇರಿದ್ದರೂ ಮೂರ್ನಾಲ್ಕು ಕಿ.ಮಿ ದೂರದ ವರೆಗೆ ಗಂಗೆಯ ನೀರು ಉಪ್ಪಾಗದೇ ಸಿಹಿ ಸಿಹಿಯಾಗಿಯೇ ಉಳಿಯುತ್ತದಂತಲ್ಲ.. ಅದನ್ನು ನೋಡಬೇಕು. ಆ ಸಿಹಿ ನೀರಿನಲ್ಲಿಯೇ ಇರುವ ಅತ್ಯಪರೂಪದ ಡಾಲ್ಫಿನ್ನುಗಳನ್ನು ನೋಡಬೇಕು. ಗಂಗೆಯ ಸೆಳವಿನಲ್ಲಿ ದೋಣಿ ಓಲಾಡುತ್ತಿದ್ದಾಗ ನಾನು ಹೋ ಎಂದು ಕಿರುಚಬೇಕು..' ಎಂದ ವಿನಯಚಂದ್ರ.
                   `ಎಂತಾ ವಿಚಿತ್ರ ಆಸೆ ನಿಮ್ಮದು.. ಮಜವಾಗಿದೆ ಕೇಳೋದಿಕ್ಕೆ.. ನನಗೆ ನಿಮ್ಮ ಕಡೆ ಕುತೂಹಲ ಮೂಡುತ್ತಿದೆ.. ಕಬ್ಬಡ್ಡಿ ಆಟಗಾರರು ಅಂತೀರಾ.. ನಾನ್ ವೆಜ್ ಆಗೋದಿಲ್ಲ.. ಕೇಳಿದರೆ ಬ್ರಾಹ್ಮಣರು ಅಂತೀರಾ.. ಬ್ರಾಹ್ಮಣರಿಗೂ ಕಬ್ಬಡ್ಡಿಗೂ ಎಂತ ಸಂಬಂಧ..? ಎತ್ತಲ ಕಬ್ಬಡ್ಡಿ ಎತ್ತಲ ನಿಮ್ಮ ಆಹಾರಪದ್ಧತಿ.. ವಿಚಿತ್ರ ಎನ್ನಿಸುತ್ತಿದೆ. ಅದ್ಹೇಗೆ ನಿಮ್ಮ ಶಕ್ತಿಯನ್ನು ಕಾಪಾಡಿಕೊಳ್ಳುತ್ತಿದ್ದೀರೋ.. ಈ ಬಡ ಬಾಂಗ್ಲಾದೇಶದವರೆಲ್ಲ ಭಾರತಕ್ಕೆ ಕದ್ದು ಹೋಗಿ ಅಲ್ಲಿ ಬದುಕಿ ಜೀವನ ಕಟ್ಟಿಕೊಂಡರೆ ಸಾಕು ಎಂದುಕೊಳ್ಳುತ್ತಿದ್ದಾರೆ. ಆದರೆ ಬಾಂಗ್ಲಾದೇಶವನ್ನು ನೋಡೋದು ನಿನ್ನ ವಿಚಿತ್ರ ಆಸೆ.. ಗಂಗಾನದಿ ಕೊಳಕೆದ್ದು ಹೋಗಿದೆ ಎನ್ನುವವರ ನಡುವೆ ಗಂಗಾನದಿ ಸಮುದ್ರ ಸೇರುವುದನ್ನು ನೋಡಬೇಕು ಅಂತೀಯಾ.. ನಾಡಿಗೆ ದಾಳಿ ಮಾಡಿ ಹುಲಿ ಅವರಿವರನ್ನು ಕಚ್ಚಿಕೊಂಡು ಹೋಗುತ್ತಿದೆ ಅಂತ ಹುಲಿಯ ಬಗ್ಗೆ ಬೈದುಕೊಂಡು ಓಡಾಡುವವರ ನಡುವಿನಲ್ಲೂ ಹುಲಿಯನ್ನು ನೋಡಬೇಕು ಅಂತೀಯಾ.. ನನಗೆ ಬಹಳ ಅಚ್ಚರಿಯೆನ್ನಿಸುತ್ತಿದೆ ನಿನ್ನ ವ್ಯಕ್ತಿತ್ವ..' ಎಂದಳು ಮಧುಮಿತಾ.. ವಿನಯಚಂದ್ರ ಹೆಮ್ಮೆಯಿಂದ ಬೀಗಿದ.
                 `ನಿಮ್ಮೂರು ಎಲ್ಲಿ..? ನಿಮ್ಮ ಕುಟುಂಬದ ಕುರಿತು ನನಗೆ ಹೇಳಲೇ ಇಲ್ವಲ್ಲಾ.. ನಾನು ಕೇಳಿದರೆ ತಪ್ಪೇನೂ ಇಲ್ಲ ಅಲ್ಲವಾ..?' ವಿನಯಚಂದ್ರ ಕೇಳಿದ್ದ.
                 `ಕಿಶೋರ್ ಗಂಜ್ ಅಂತ ನಮ್ಮ ಊರು. ನನ್ನ ಕುಟುಂಬ ಅಲ್ಲಿ ವಾಸ ಮಾಡುತ್ತಿದೆ. ಆದರೆ ನಾನು ಮಾತ್ರ ಹೊಟ್ಟೆಪಾಡಿಗಾಗಿ ಢಾಕಾಕ್ಕೆ ಬಂದು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಬುರಿಗಂಗಾ ನದಿ ತೀರದ ಬಳಿಯ ಅಪಾರ್ಟ್ ಮೆಂಟಿನಲ್ಲಿ ನನ್ನ ವಾಸ. ಮನೆಯಲ್ಲಿ ತಂದೆ-ತಾಯಿ-ಇಬ್ಬರು ತಂಗಿಯರಿದ್ದಾರೆ. ತಂಗಿಯರು ಓದುತ್ತಿದ್ದಾರೆ. ಕಿಶೋರ್ ಗಂಜ್ ಕಾಲೇಜಿನಲ್ಲಿ. ತಂದೆಯವರು ಬೆಂಗಾಲಿ. ಹಿಂದುತ್ವವಾದಿ. ಆದರೆ ಬಾಂಗ್ಲಾದೇಶದಲ್ಲಿ ಈಗಿನ ಪರಿಸ್ಥಿತಿಯಲ್ಲಿ ಅವರನ್ನು ಸುಮ್ಮನಿರಿಸುವುದು ಕಷ್ಟವಾಗಿದೆ. ಅಪ್ಪ ಯಾವಾಗ ತನ್ನ ಧರ್ಮದ ಕುರಿತಂತೆ ಗಲಾಟೆ ಮಾಡಿಕೊಳ್ಳುತ್ತಾನೋ ಎನ್ನುವ ಭಯ ನನ್ನನ್ನು ಕಾಡುತ್ತಿದೆ. ಹಿಂದೂ ಧರ್ಮದ ಕುರಿತು ಮಾತು ಬಂದರೆ ಸಾಕು ಅಪ್ಪ ಗಂಟೆಗಟ್ಟಲೆ ಮಾತನಾಡುತ್ತ ನಿಂತು ಬಿಡುತ್ತಾರೆ. ಬಹಳಷ್ಟು ಸಾರಿ ಅಪ್ಪನಿಗೆ ಹೇಳಿದ್ದೆ ನಮ್ಮ ಈಗಿನ ಪರಿಸ್ಥಿತಿ ನೋಡಿಕೊಂಡು ಹಿಂದುತ್ವದ ಬಗ್ಗೆ ಮಾತನಾಡು ಅಂತ. ಆದರೆ ನಾನು ಆತನಿಗೆ ಹೇಳಿದ ನಂತರ ಆತ ಹಿಂದುತ್ವದ ಕುರಿತು ಮಾತನಾಡುವುದು ಜಾಸ್ತಿಯಾಗಿದೆ. ಇಲ್ಲಿ ರಾಜಕೀಯ ಕಾರಣಗಳಿಗಾಗಿ ಹಿಂದುಗಳಲ್ಲಿಯೇ ಪ್ರಮುಖರಾದವರನ್ನೆಲ್ಲ ಹುಡಕಿ ಹುಡುಕಿ ಕೊಲ್ಲಲಾಗುತ್ತದೆ. ನನ್ನ ಅಪ್ಪನ ಮೇಲೂ ದೃಷ್ಟಿ ಬಿದ್ದಿರಬೇಕು. ಭಯದ ನೆರಳಿನಲ್ಲಿ ಬದುಕುತ್ತಿದೆ ನಮ್ಮ ಕುಟುಂಬ.. ಅಪ್ಪ ಮಾತ್ರ ಎಷ್ಟು ತಿಳಿಹೇಳಿದರೂ ಅರ್ಥ ಮಾಡಿಕೊಳ್ಳುತ್ತಿಲ್ಲ' ಎಂದು ಸುಮ್ಮನಾದಳು ಮಧುಮಿತಾ..
                 ನಿಟ್ಟುಸಿರುಬಿಟ್ಟ ವಿನಯಚಂದ್ರ. `ಭಾರತ ಸ್ವಾತಂತ್ರ್ಯ ಪಡೆದಾಗ ಭಾರತಕ್ಕೆ ವಲಸೆ ಬಂದಿಲ್ಲ ನಿನ್ನ ತಂದೆ.. ಯಾಕೆ..?'
                   `ನನಗೆ ಗೊತ್ತಿಲ್ಲ... ಒಂದೆರಡು ಸಾರಿ ಕೇಳಿದ್ದೆ. ಆಗೆಲ್ಲಾ ನಾನು ಹುಟ್ಟಿದ ಸ್ಥಳವನ್ನು ಹೇಗೆ ತೊರೆದು ಹೋಗುವುದು..? ಎಂದು ಪ್ರಶ್ನೆ ಮಾಡಿದ್ದರು. ಈಗಲೂ ಅನೇಕ ಸಾರಿ ಹೇಳಿದ್ದೇನೆ. ಯಾರಾದರೂ ನಿನ್ನ ಪರಿಚಯದವರು ಭಾರತದಲ್ಲಿದ್ದರೆ ಹೇಳು ಅಲ್ಲಿಗೆ ಹೋಗಿ ಬದುಕಿ ಬಿಡೋಣ ಅಂತ.. ಆದರೆ ಕೇಳುತ್ತಿಲ್ಲ.. ಈ ಅಭದ್ರ ಬದುಕು ನನಗೆ ಸಾಕಾಗಿ ಹೋಗಿದೆ. ಭಯದ ನೆರಳಿನಲ್ಲಿ, ಯಾವಾಗ ಸಾಯುತ್ತೇವೋ ಎನ್ನುವ ಹೆದರಿಕೆಯ ನಡುವೆ ಬದುಕುವುದು ಬೇಡ. ನೆಮ್ಮದಿಯನ್ನರಸಿ ಭಾರತಕ್ಕೆ ಹೋಗಿ ಬಿಡೋಣ.. ಯಾವುದಾದರೊಂದು ಸಹಾಯ ಹಸ್ತ ನಮಗಾಗಿ ಕಾಯುತ್ತಿರಬಹುದು. ಕಾಪಾಡಬಹುದು ಎಂದುಕೊಂಡಿದ್ದೇನೆ. ಕಾಯುತ್ತಿದ್ದೇನೆ. ಮನೆಯಲ್ಲೂ ಹೇಳಿದ್ದೇನೆ. ಈಗೀಗ ಅಪ್ಪನೂ ಏನಾದರೂ ಮಾಡಿಕೊ ಎಂದು ಹೇಳಿ ಸುಮ್ಮನಾಗುತ್ತಿದ್ದಾರೆ. ಆದರೂ ಅವರನ್ನು ತೀರಾ ಒತ್ತಾಯ ಮಾಡುವುದು ಕಷ್ಟ ಅಲ್ಲವಾ.. ಒತ್ತಾಯ ಮಾಡಿದರೆ ಇನ್ನೇನಾದರೂ ಮಾಡಿಕೊಂಡು ಬಿಟ್ಟಾರು ಎನ್ನುವ ಭಯ ಬಿಡದೇ ಕಾಡುತ್ತಿದೆ..'
               ಕ್ಷಣಕಾಲ ಸುಮ್ಮನಿದ್ದ ವಿನಯಚಂದ್ರ. ಏನು ಮಾತನಾಡಬೇಕೆಂಬುದೇ ತಿಳಿಯಲಿಲ್ಲ. ನಂತರ ಆತ ಮಾತನಾಡಿದ `ನಾನೂ ಅದನ್ನೇ ಹೇಳಬೇಕೆಂದುಕೊಂಡಿದ್ದೆ. ಇಷ್ಟಕ್ಕೂ ಬಾಂಗ್ಲಾದೇಶದಲ್ಲಿ ಯಾಕಾಗಿ ಅರಾಜಕತೆ..? ಹಿಂದುಗಳ ಮೇಲೆ ದೌರ್ಜನ್ಯಕ್ಕೆ ಕಾರಣ..? ಅಲ್ಪಸ್ವಲ್ಪ ಗೊತ್ತಿದೆ. ಆದರೆ ಸ್ಪಷ್ಟವಾಗಿಲ್ಲ..'
                `ನಾನು ಹೇಳಿದರೆ ತಪ್ಪಾಗುತ್ತದೆ. ಆದರೆ ಹೇಳದಿದ್ದರೆ ಮನಸ್ಸಿಗೆ ಏನೋ ಒಂಥರಾ.. ಇಲ್ಲಿ ಮಹಿಳೆಯರದ್ದೇ ಆಡಳಿತ. ಶೇಖ್ ಹಸೀನಾ ಇಲ್ಲಿಯ ಈಗಿನ ಪ್ರಧಾನಮಂತ್ರಿ. ವಿರೋಧಪಕ್ಷದ ಮುಖಂಡತ್ವವೂ ಮಹಿಳೆಯದ್ದೇ. ಅದರ ಮುಖ್ಯಸ್ಥೆ ಬೇಗಂ ಖಾಲಿದಾ ಜಿಯಾ. ಅವಾಮಿ ಲೀಗ್ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಇಲ್ಲಿನ ಪ್ರಮುಖ ಪಕ್ಷಗಳು. ಹಿಂದುಗಳು ಯಾವ ಪಕ್ಷವನ್ನು ಬೆಂಬಲಿಸುತ್ತಾರೋ ಅವರು ಅಧಿಕಾರದ ಚುಕ್ಕಾಣಿ ಹಿಡಿಯಬಲ್ಲರು. ಭಾರತದಲ್ಲಿ ಹೇಗೆ ಅಲ್ಪಸಂಖ್ಯಾತರಿದ್ದಾರೋ ಬಾಂಗ್ಲಾದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಈಗ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ನಮಗೆ ಚುನಾವಣೆ ಬಂತೆಂದರೆ ಮಾತ್ರ ಇತ್ತ ದರೆ ಅತ್ತ ಹುಲಿ ಎನ್ನುವಂತಹ ಪರಿಸ್ಥಿತಿ. ಈ ಪಕ್ಷ ಬೆಂಬಲಿಸಿದರೆ ಆ ಪಕ್ಷದವರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ.. ಅವರನ್ನು ಬೆಂಬಲಿಸಿದರೆ ಇವರು ನಮ್ಮಮೇಲೆ ದೌರ್ಜನ್ಯ ಎಸಗುತ್ತಾರೆ. ಅನೇಕ ಕಡೆಗಳಲ್ಲಿ ನಮ್ಮ ಜಮೀನುಗಳನ್ನು ಬಲಾತ್ಕಾರವಾಗಿ ವಶಪಡಿಸಿಕೊಂಡಿದ್ದಾರೆ. ಮನೆಗಳಿಗೆ ಬೆಂಕಿ ಇಟ್ಟಿದ್ದಾರೆ. ಹಿಂದು ಮುಖಂಡರುಗಳನ್ನು ಹುಡುಕಿ ಹುಡುಕಿ ಕೊಲ್ಲಲಾಗುತ್ತದೆ. ನಾವು ಮಹಿಳೆಯರು ಅವರ ದೃಷ್ಟಿಗೆ ಮೊದಲು ಬಿದ್ದು ಬದುಕು ದಾರುಣವಾಗುತ್ತದೆ.. ಸಾಕಾಗಿಬಿಟ್ಟಿದೆ ನಮಗೆ. .' ಎಂದು ಅಲವತ್ತುಕೊಂಡಳು ಮಧುಮಿತಾ.
                 ವಿನಯಚಂದ್ರನಿಗೆ ಮತ್ತೆ ಏನು ಮಾತಾಡಬೇಕು ತಿಳಿಯಲಿಲ್ಲ.. ಸುಮ್ಮನೆ ಕುಳಿತಿದ್ದ.
                 ಮಧುಮಿತಾ ಮುಂದುವರಿದಳು `ಆದರೆ ಒಂದು ವಿಚಿತ್ರ ಗಮನಕ್ಕಿದೆಯೋ ಇಲ್ಲವೋ ಗೊತ್ತಿಲ್ಲ.. ಇದು ನಿಮ್ಮ ದೇಶದ ಕುರಿತು ಹೇಳುವಂತದ್ದು. ಕಾರಣಗಳು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಇಲ್ಲಿ ಈ ಪ್ರಮಾಣದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಬಹುಸಂಖ್ಯಾತ ಹಿಂದೂಗಳ ನಾಡು ಭಾರತ ಮಾತ್ರ ಈ ಕುರಿತು ಮಾತನ್ನೇ ಆಡುತ್ತಿಲ್ಲ. ಅಲ್ಲೆಲ್ಲೋ ಯೂರೋಪಿನಲ್ಲಿ ಕಾರ್ಟೂನುಗಳನ್ನು ಬಿಡಿಸದರೆ ಭಾರತದಲ್ಲಿ ಗಲಾಟೆಯಾಗುತ್ತದೆ. ಚರ್ಚುಗಳ ಮೇಲೆ ದಾಳಿಗಳಾದರೆ ಭಾರತ ಅದಕ್ಕೆ ಉಗ್ರ ಪ್ರತಿಕ್ರಿಯೆ ನೀಡುತ್ತದೆ. ಅಮೆರಿಕಾದ ಅಧ್ಯಕ್ಷ  ಭಾರತದಲ್ಲಿನ ಧರ್ಮ ಸಹಿಷ್ಣುತೆ ಸರಿಯಾಗಿರಬೇಕೆಂದು ಮಾತಾಡಿ ಹೋಗುತ್ತಾರೆ. ಆದರೆ ನಾವ್ಯಾಕೆ, ನಮ್ಮ ನೋವ್ಯಾಕೆ ನಿಮ್ಮ ದೇಶದ ಕುರಿತು ಮಾತನಾಡುವವರಿಗೆ, ನಿಮ್ಮ ದೇಶದವರಿಗೆ ಕಾಣುತ್ತಿಲ್ಲ..? ನಾವು ಬಾಂಗ್ಲಾದೇಶವನ್ನು ಬಿಟ್ಟು ಬರುತ್ತೇವೆ. ನಮಗೆ ಭಾರತದಲ್ಲಿ ಅವಕಾಶಕೊಡಿ ಎಂದರೆ ಕೊಡುತ್ತದೆಯೇ..? ಯಾಕೀಥರ ವಿನು..? ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮನ್ಯಾಕೆ ಬಲಿಕೊಡುತ್ತಾರೆ.? ಮತಕ್ಕಾಗಿ ಯಾಕೆ ಓಲೈಕೆ ನಡೆಯುತ್ತಿದೆ..? ಬಾಂಗ್ಲಾದೇಶದವರು ಅಸ್ಸಾಮಿಗೆ ಹೋದರೆ ನಿಮ್ಮ ದೇಶದವರನ್ನೇ ಕೊಲ್ಲುತ್ತಿದ್ದಾರೆ. ಅದಕ್ಕೂ ನೀವು ಉತ್ತರ ಹೇಳುತ್ತಿಲ್ಲವಲ್ಲ.. ಭಾರತದ ಕುರಿತು ಎಂತ ಅಭಿಮಾನವಿದೆ ನನಗೆ ಗೊತ್ತಾ..? ಆದರೆ ಇತ್ತಿಚಿನ ನಡೆಗಳು ನನ್ನೊಳಗಿನ ಅಭಿಮಾನದ ಗೋಡೆಗಳನ್ನು ಕೆಡವುತ್ತಿದೆ.. ಎಂತಾ ನಾಡು ಭಾರತ.. ಆದರೆ ನಿಮ್ಮವರೇಕೆ ನಿಮ್ಮವರ ಕಡೆಗೆ ಮಿಡಿಯುತ್ತಿಲ್ಲ..?'
                     ಅವಳ ಮಾತಿಗೆ ವಿನಯಚಂದ್ರನಲ್ಲಿ ಉತ್ತರವಿರಲಿಲ್ಲ.. ಸುಮ್ಮನೆ ಉಳಿದಿದ್ದ.. ಏನು ಮಾತಾನಾಡಬೇಕು ಎನ್ನುವುದು ಅರ್ಥವಾಗಲಿಲ್ಲ..? ಅವಳಿಗೆ ಏನು ಹೇಳಲಿ.? ಎಂಬ ದ್ವಂದ್ವದಲ್ಲಿ ಉಳಿದಿದ್ದ. ಭಾರತವೆಂದರೆ ಭವ್ಯ ರಾಷ್ಟ್ರ. ಸೂಪರ್ ಪವರ್ ಆಗುತ್ತಿದೆ.. ಹಾಗೆ ಹೀಗೆ ಎನ್ನುವ ಮಾತುಗಳೆಲ್ಲ ಕೇಳಿಬರುತ್ತವೆ. ಆದರೆ ಭಾರತದಲ್ಲಿ ನಡೆಯುತ್ತಿರುವ ವೈರುಧ್ಯಗಳ ಕುರಿತು ಏನು ಹೇಳಲಿ..? ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರೇಮಿಗಳಿರುವ ದೇಶ ಭಾರತ ಎನ್ನಲಾಗುತ್ತಿದೆ. ಆದರೆ ಒಳಗಿಂದೊಳಗೆ ಭಾರತದ ಪ್ರೇಮಸೌಧ ಕುಸಿದು ಬೀಳುತ್ತಿದೆ. ತನ್ನೊಳಗೆ ನೂರಾರು ಸಣ್ಣ ಸಣ್ಣ ಗಾಯಗಳಾಗುತ್ತಿವೆ. ತನಗೆ ಬೇಕು ಎಂದಾದರೆ ಭಾರತದಲ್ಲಿ ಹೊಸ ಹೊಸ ರಾಜ್ಯಗಳೇ ದಿನ ಬೆಳಗಾಗುವುದರೊಳಗೆ ಹುಟ್ಟಿ ಬಿಡುತ್ತವೆ. ಅಸ್ಸಾಮಿನಲ್ಲಿ ದಿನವಹಿ ಮಾರಣಹೋಮ ನಡೆಯುತ್ತಿದ್ದರೂ ಅದರ ಬಗ್ಗೆ ಮಾತನಾಡುವುದಿಲ್ಲ. ಕಾಶ್ಮೀರ ಮತ್ತೆ ಮತ್ತೆ ಕಾಡುತ್ತಿದೆ. ಇಷ್ಟಕ್ಕೆ ನಿಲ್ಲದೇ ಪಕ್ಕದ ಡ್ರಾಗನ್ ಚೀನಾ ಪದೆ ಪದೆ ಭಾರತದ ಗಡಿಯೊಳಗೆ ಕಾಲಿಟ್ಟು ರೆಡಿ ಆಟವನ್ನು ಆಡುತ್ತಿದ್ದರೂ ಅದರ ವಿರುದ್ಧ ಮಾತಾಡುವ ತಾಕತ್ತಿಲ್ಲದಂತೆ ವರ್ತನೆ ಮಾಡುತ್ತಿದೆ.. ಆದರೂ ಬಾಯಿ ಮಾತಿನಲ್ಲಿ ದೇಶ ಬದಲಾಗುತ್ತಿದೆ.. ಅಭಿವೃದ್ಧಿಯ ಪಥದಲ್ಲಿದೆ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ.. ಎಲ್ಲವೂ ಅಂದುಕೊಂಡಂತಿಲ್ಲ ಎಂದು ಅವಳಿಗೆ ಹೇಳೋಣ ಅನ್ನಿಸಿತು ವಿನಯಚಂದ್ರನಿಗೆ. ಆದರೆ ಹೇಳಲಿಕ್ಕೆ ಆಗಲಿಲ್ಲ.
                 `ನನ್ನನ್ನೊಮ್ಮೆ ನಿನ್ನ ಮನೆಗೆ ಕರೆದೊಯ್ಯುತ್ತೀಯಾ..? ಯಾಕೋ ನಿಮ್ಮವರನ್ನು ನೋಡಬೇಕು ಎನ್ನಿಸುತ್ತಿದೆ..' ಮಾತು ಹೊರಳಿಸುತ್ತ ಕೇಳಿದ ವಿನಯಚಂದ್ರ.
                   `ಖಂಡಿತ ವಿನೂ.. ನೋಡೋಣ ಯಾವಾಗಲಾದರೂ ಕರೆದೊಯ್ಯುತ್ತೇನೆ. ನಿಮ್ಮ ವಿಶ್ವಕಪ್ಪಿದೆಯಲ್ಲ.. ಅಷ್ಟರೊಳಗೆ ಸಾಧ್ಯವಾದರೆ ಕರೆದೊಯ್ಯುತ್ತೇನೆ.. ಇಲ್ಲವಾದರೆ ಆ ನಂತರ ನೋಡೋಣ..' ಎಂದಳು.
                   ನಂತರ ಮಾತು ಹಲವಾರು ವಿಷಯಗಳ ಕಡೆಗೆ ಸರಿಯಿತು. ಮಾತಿನ ಭರದಲ್ಲಿ ವಿನಯಚಂದ್ರ ತಾನು ಹಾಗೂ ತನ್ನ ಕಬ್ಬಡ್ಡಿ ಪ್ರೇಮದ ಬಗ್ಗೆ ಹೇಳಿದ. ಜಗತ್ತಿನಲ್ಲಿ ಅತ್ಯುತ್ತಮ ಕ್ರೀಡೆಯೆಂದರೆ ಕಬ್ಬಡ್ಡಿ ಎನ್ನುವಂತೆಯೂ ಮಾತನಾಡಿದ. ಕ್ರಿಕೆಟ್ಟಿಗೆ ಹೇಗೆ ವಿವಿಧ ದೂರದರ್ಶನ ವಾಹಿನಿಗಳಿವೆಯೋ ಅದೇ ರೀತಿ ಕಬ್ಬಡ್ಡಿಗೂ ಒಂದು 24*7 ವಾಹಿನಿ ಮಾಡಿ ಕಬ್ಬಡ್ಡಿ ಪಂದ್ಯಗಳನ್ನು ಪ್ರಸಾರ ಮಾಡುವ ಕನಸಿದೆ ಎಂಬ ಮಾತುಗಳನ್ನೂ ಆಡಿದ. ಕಬ್ಬಡ್ಡಿಗೆ ಹೆಚ್ಚಿನ ಗೌರವವನ್ನು ನೀಡಿ ಕಬ್ಬಡ್ಡಿಯನ್ನು ಜಗದ್ವಿಖ್ಯಾತ ಮಾಡುವ ಕನಸಿನ ಬಗ್ಗೆ ಮಧುಮಿತಾಳ ಜೊತೆ ಹಲವಾರು ಸಂಗತಿಗಳನ್ನು ಹಂಚಿಕೊಂಡ ವಿನಯಚಂದ್ರ.
                  ಮಾತು ಸಾಗಿದಂತೆ ಬಸ್ಸೂ ಎಗ್ಗಿಲ್ಲದೇ ಸಾಗುತ್ತಿತ್ತು. ಸೂರ್ಯ ಪಶ್ಚಿಮದಲ್ಲಿ ನಿಧಾನವಾಗಿ ಇಳಿಯುತ್ತಿದ್ದ. ಕೆಂಪು ಕೆಂಪಾಗಿ ಸುಲಿದ ಕಿತ್ತಳೆ ಹಣ್ಣಿನಂತೆ ಕಾಣುತ್ತಿದ್ದ ಸಂದರ್ಭದಲ್ಲಿಯೇ ಬಸ್ಸು ಕೂಡ ಕಾಂತಾಜಿ ದೇವಸ್ಥಾನವಿರುವ ಊರಿನ ಫಾಸಲೆಯತ್ತ ಬರುತ್ತಿತ್ತು. ದಿನಾಜ್ ಪುರದಿಂದ ಕಾಂತಾನಗರದತ್ತ ತಿರುಗುವ ವೇಳೆಗೆ ಕತ್ತಲೆ ಸುಳಿ ಸುಳಿದು ಬರತೊಡಗಿತ್ತು.
ಕಾಂತಾನಗರಕ್ಕೆ ಬರುವ ಮಾರ್ಗದಲ್ಲಿ ವಿನಯಚಂದ್ರ ಹಾಗೂ ಮಧುಮಿತಾ ಯಾವುದೋ ಯುಗಗಳ ಗೆಳೆಯರಂತಾಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಈ ಇಬ್ಬರೂ ಒಬ್ಬರಿಗೊಬ್ಬರು ಕುತೂಹಲಕ್ಕೆ ಕಾರಣವಾಗಿದ್ದರು. ಇವರ ಆಪ್ತತೆ ಸೂರ್ಯನ್ ಗೆ ಖುಷಿಯನ್ನು ತಂದಿತ್ತು. ಇಬ್ಬರ ನಡುವೆ ತಾನು ಬಂದು ತೊಂದರೆ ಕೊಡಬಾರದೆಂದು ದೂರವೇ ಉಳಿದಿದ್ದ.

**

                   ಕಾಂತಾನಗರದ ಮುಖ್ಯ ಆಕರ್ಷಣೆ ಕಾಂತಾಜಿ ದೇವಾಲಯ. ನಗರದ ಪ್ರಮುಖ ಸ್ಥಳವಾದ ಇದು ಅಪ್ಪಟ ಹಿಂದೂ ಶೈಲಿಯಲ್ಲಿದೆ. ಥಟ್ಟನೆ ನೋಡಿದರೆ ಅಸ್ಸಾಮಿನ ಯಾವುದೋ ದೇವಾಲಯದಂತೆ ಕಾಣುತ್ತದೆ. ಅಸ್ಸಾಮಿಗಳ ಪ್ರಭಾವ ಸಾಕಷ್ಟಿದ್ದಂತೆ ಅನ್ನಿಸುತ್ತದೆ. ಕಾಂತಾನಗರ ಹಿಂದುಗಳೇ ಬಹುಸಂಖ್ಯೆಯಲ್ಲಿರುವ ಊರು. ಭಾರತದ ಗಡಿಯಲ್ಲಿರುವ ಸ್ಥಳವೂ ಹೌದು. ದೂರದಿಗಂತದಲ್ಲಿ ಪರ್ವತಗಳ ಸಾಲು ಕಾಣಿಸುತ್ತದೆ. ಕೊರೆಯುವ ಚಳಿಯೂ ಇಲ್ಲಿದೆ. ಭಾರತದ ಗಡಿ ಹತ್ತಿರವಿರುವ ಕಾರಣ ಭಾರತದ ನಗರಕ್ಕೂ ಇಲ್ಲಿಗೂ ಬಸ್ ಸೌಕರ್ಯವಿದೆ. ಭಾರತದಿಂದಲೂ ಹಲವರು ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆಂದು ಮಧುಮಿತಾ ಹೇಳಿದ್ದಳು.
                    ಶ್ರದ್ಧಾಭಕ್ತಿಯ ತಾಣವಾದ ಕಾಂತಾಜಿ ದೇವಾಲಯ ನವರತ್ನ ಶೈಲಿಯಲ್ಲಿ ನಿರ್ಮಾಣವಾಗಿತ್ತು. ಕಾಂತಾಜಿ ದೇವಾಲಯದ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿದಂತೆ ಅನ್ನಿಸಿತು. ಬೆಳಕಿನ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿತ್ತು. ಸಂಜೆಗತ್ತಲಿನಲ್ಲಿ ಹಾಕಿದ್ದ ಬೆಳಕಿನಲ್ಲಿ ದೇಗುಲ ಬೆಳಗುತ್ತಿತ್ತು. ದೇವಾಲಯದ ಒಳಗೆ ತೆರಳಿ ಆಟಗಾರರೆಲ್ಲ ಪೂಜೆಯನ್ನು ಕೈಗೊಂಡರು.  ವಿಶ್ವಕಪ್ಪು ಶುಭತರಲಿ ಎಂದು ಬೇಡಿಕೊಂಡರು. ವಿನಯಚಂದ್ರನೂ-ಮಧುಮಿತಾರೂ ಪೂಜೆಯಲ್ಲಿ ಪಾಲ್ಗೊಂಡಿದ್ದರೆಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಆದರೆ ಇಬ್ಬರೂ ಒಟ್ಟಾಗಿ ತಿರುಗಾಡಿದ್ದು ಮಾತ್ರ ವಿಶೇಷ ಸಂಗತಿಗಳಲ್ಲಿ ಒಂದಾಗಿತ್ತು. ಈ ವಿಶೇಷತೆ ಉಳಿದ ಆಟಗಾರರಿಗೆ ಅಚ್ಚರಿತಂದಿತ್ತು. ಸೂರ್ಯನ್ ಮಾತ್ರ ಸಹಜವಾಗಿದ್ದಿದ್ದ.
               `ಹಗಲಿನಲ್ಲಿ ನೋಡಬೇಕು ಈ ದೇವಾಲಯವನ್ನು..'
                `ರಾತ್ರಿಯೇ ಇಷ್ಟು ಚಂದ ಕಾಣ್ತಾ ಇದೆ.. ಖಂಡಿತ ಬೆಳಗ್ಗೆ ಇನ್ನೂ ಚನ್ನಾಗಿರಬಹುದಲ್ವಾ..?'
                `ಹುಂ.. ವಿಶಾಲ ದೇವಾಲಯ, ದೈತ್ಯ ಕಂಬಗಳು.. ಕಂಬಗಳ ಮೇಲೆ ವಿಶಿಷ್ಟ ಕೆತ್ತನೆಗಳು.. ಬೆಳಗ್ಗೆ ಸೂರ್ಯನ ಕಿರಣ ನೇರವಾಗಿ ಗರ್ಭಗುಡಿಯಲ್ಲಿ ಕಾಂತಾಜಿ ಮೂರ್ತಿಯ ಮೇಲೆ ಬಿದ್ದಾಗ ಕಾಣುವ ದೃಶ್ಯವಂತೂ ಬಣ್ಣಿಸಲು ಅಸಾಧ್ಯ. ನಾಳೆ ಬೆಳಿಗ್ಗೆ ನೀನ್ನನ್ನು ನಾನು ಖಂಡಿತ ಕರೆದುಕೊಂಡು ಬರುತ್ತೇನೆ..'
                 `ಅಷ್ಟು ಮಾಡು ಮಾರಾಯ್ತಿ.. ನನಗೆ ಬಹಳ ಕುತೂಹಲವಿದೆ..' ವಿನಯಚಂದ್ರನಿಗೆ ಹಂಪಿಯನ್ನು ನೋಡಿದ್ದು ನೆನಪಾಯಿತು. ಹಂಪಿಯ ವಿಜಯ ವಿಠಲ ದೇವಾಲಯದ ಮೇಲೆ ಸೂರ್ಯನ ಮೊದಲ ಕಿರಣ ಬಿದ್ದು ಮೆರಗು ಮೂಡುವುದು ಕಣ್ಣಿಗೆ ಅಂದವನ್ನು ತಂದಿತ್ತು. ಅದೇ ಅಚ್ಚರಿ ಈ ದೇವಾಲಯದಲ್ಲೂ ಆಗುತ್ತದೆಯಾ ಎಂದುಕೊಂಡ ವಿನಯಚಂದ್ರ.
                 `ಖಂಡಿತ..'
ಮಧುಮಿತಾ-ವಿನಯಚಂದ್ರರ ಮಾತುಕತೆ ಸಾಗಿತ್ತು.

(ಮುಂದುವರಿಯುತ್ತದೆ..)

Wednesday, February 26, 2014

ಸನ್ಯಾಸಿ

ಎಲ್ಲ ಬಿಟ್ಟು
ಕಾವಿಯುಟ್ಟು
ಆದ ಆತ
ಸನ್ಯಾಸಿ,
ಪರಿವ್ರಾಜಕ |

ಮನದೊಳಗೆ
ತುಂಬಿಹುದು
ಆಸೆ ಆಮಿಷಗಳ
ರಾಶಿ, ರಾಶಿ |

ಕರಿ ಕಾಮ,
ಮೋಹ, ಲೋಭ
ಹಗೆ ಸಿಟ್ಟು
ಎಲ್ಲದಕ್ಕೆ ಕಟ್ಟು,
ತೋರಿಕೆಗೆ ಕೆಂಪು
ಕಾವಿ. ಸನ್ಯಾಸಿ |

ಮುಂದೊಮ್ಮೆ
ಜವನೆದುರು
ಸತ್ವ ಪರೀಕ್ಷೆ,
ಅಸಲು ಜ್ಞಾನದ
ತೋರಿಕೆ, ಆ ಕ್ಷಣ
ಆತ ಸನ್ಯಾಸಿ ||

**
(ಈ ಕವಿತೆ ಬರೆದಿದ್ದು 04-02-2007ರಲ್ಲಿ ದಂಟಕಲ್ಲಿನಲ್ಲಿ)

Tuesday, February 25, 2014

ಶ್..! ಸೀರಿಯಸ್ ಹನಿಗಳು

* ಹುಚ್ಚು ಪ್ರೀತಿ*

ಅವನು ಅವಳನ್ನು
ಹುಚ್ಚನಂತೆ ಪ್ರೀತಿಸಿದ |
ಬದುಕು ಅರ್ಪಿಸಿದ ||
ಕೊನೆಗೆ ಆ ಪ್ರೀತಿ
ಅವಳಿಗೆ ಒಂದು
ಹುಚ್ಚಾಸ್ಪತ್ರೆಯಲ್ಲಿ ಸಿಕ್ಕಿತು ||


*ನಗ್ನ ಸತ್ಯ*

ದೀಪ ಆರಿದಾಗ
ಬದುಕೆಲ್ಲ ಕತ್ತಲು |
ಬಟ್ಟೆ ಬಿಚ್ಚಿದಾಗ
ಬರಿ ಬೆತ್ತಲು
ಸುತ್ತಲೂ ||


*ಗಾಂಧಾರಿಯ ಮಗ*

ಗಾಂಧಾರಿಯ ಮನದೊಳಗಣ
ಸುಪ್ತ ಧೂರ್ತತನಗಳ
ಮೂರ್ತ ರೂಪವೇ
ದುರ್ಯೋಧನ ||

*ಬಾರಿ*

ಅತ್ತೆಗೊಂದು ಬಾರಿ
ಸೊಸೆಗೊಂದು ಬಾರಿ
ಆದರೆ ಬಡವನ
ಪಾಲಿಗೆ ಇರುವುದೊಂದೇ
ದುಬಾರಿ ||

*ಸಂಸಾರ*

ಸಂಸಾರವೆಂದರೆ
ನಿಸ್ಸಾರ ಎಂದೆಲ್ಲಾ
ಹೇಳಿದ ಕವಿಗಳಿಗೆ
ಕೊನೆಗೂ ಗೊತ್ತಾಗಲಿಲ್ಲ
ಅದರಲ್ಲೂ  SOME
ಸಾರವಿದೆ ಎಂಬುದು ||

*ವಿರಹಧಾರೆ*

ಸೂರ್ಯ-ಚಂದ್ರರ ಪ್ರೇಮದ
ಕಣ್ಣಾಮುಚ್ಚಾಲೆಯಲ್ಲಿ
ಬೆಂದುಹೋದ ಭುವಿ
ಮಳೆಯಾಗಿ ಕಣ್ಣೀರು
ಸುರಿಸಿದಳು ||

*ಒಡಲಾಳ-1*

ಮಳೆ ಭೂಮಿಯೊಳಗಿನಿಂದ
ಬರತೊಡಗಿದರೆ ಏನಾಗುತ್ತೆ..?
ಸಿಡಿಲು-ಗುಡುಗು
ಭುವಿಯಲ್ಲಿ ಹುಟ್ಟುತ್ತೆ..||

*ಒಡಲಾಳ-2*

ಮಳೆ ಭೂಮಿಯೊಳಗಿನಿಂದ
ಬರತೊಡಗಿದರೆ
ಏನಾಗುತ್ತೆ..?
ಲಾವಾರಸ ಆಕಾಶದಿಂದ
ತೊಟ್ಟಿಕ್ಕುತ್ತದೆ ಅಷ್ಟೆ..||


*ಗೆಲುವು*

ಆತ ಅವಳ ಜೊತೆಗೆ
ಕಾಂಪಿಟೇಶನ್ನುಗಳಲ್ಲಿ
ಸೋತು ಸೋತು
ಅವಳ ಮನಸ್ಸನ್ನೇ
ಗೆದ್ದುಕೊಂಡುಬಿಟ್ಟ ||

*ಬೆಳಗು*

ಆಗಸದ ತುಟಿಗಳು
ಭುವಿಯ ಚುಂಬನದಿಂದ
ರಂಗೇರಿದೆ |
ಒಂದರೆಗಳಿಗೆಯಲ್ಲಿ ಬಾಳ
ಕತ್ತಲೆ ಮರೆತು ರಂಗು
ರಂಗಾಗಿ ಬೆಳಕಾಗುತ್ತಿದೆ ||

*ಬಾ-ನಲ್ಲ*

ಓಹ್... ಆ ಆಗಸವೇಕೆ
ಕೆಂಪು ಕೆಂಪಾಗಿದೆ..?
ಬಹುಶಃ ಅದಕ್ಕೆ
ಭುವಿಯ ನಲ್ಲನ
ಆಗಮನದ ಸುದ್ದಿಯ
ಅರಿತಿರಬೇಕು ||

*ನಾಚುವ ನೇಸರ*

ಸೂರ್ಯನಿಗೂ ಪ್ರಿಯತಮೆ ಭೂಮಿ
ಎಂದರೆ ಆಗಾಗ ನಾಚಿಕೆ |
ಅದಕ್ಕೇ ಆತ ಮೋಡದಲ್ಲಿ
ಮರೆಯಾಗುತ್ತಾನೆ ||

****
(ಲೈಟ್ ಕಾಮಿಡಿನ ಎಷ್ಟು ದಿನ ಅಂತ ಬರೀತಿಯಾ..? ಒಂಚೂರು ಸೀರಿಯಸ್ ಆದ ಬರಹಗಳನ್ನು ಬರಿ ಎಂದವರು ಕೆಲವರು. ಹಾಗೆ ನನಗೆ ಬರೆಯಲು ಬರುವುದೇ ಇಲ್ಲ ಎಂದುಕೊಂಡಿದ್ದೆ. ಒತ್ತಾಯ ಮಾಡಿದರು ದೋಸ್ತರು. ಸುಮ್ಮನೆ ನೋಡುವಾ ಎಂದು ಬರೆದಿದ್ದೇನೆ.. ಈ ರೀತಿಯಾಗಿದೆ.. ಹೇಗಿದೆ ಎನ್ನುವುದು ನಿಮ್ಮ ಅಭಿಪ್ರಾಯದಿಂದ ತಿಳಿಯಬೇಕು.. ಹೇಳ್ತೀರಲ್ವಾ.?)