Saturday, February 15, 2014

ನೀತಿ

ಅರಳಬೇಕು ಮನದಲ್ಲಿ ಪ್ರೀತಿ
ಹೃದಯದಲಿ ಒಲವು |
ತುಂಬಬೇಕು ಕಣ್ಣಿನಲಿ ಕರುಣೆ
ಮನದಲಿ ಸಹನೆ ||

ಚಿಗುರಬೇಕು ಜೀವದಲಿ ಉಸಿರು
ಬರಡಿನಲಿ ಹಸಿರು |
ತೊಡೆಯಬೇಕು ಎದೆಯಲ್ಲಿ ಕ್ರೌರ್ಯ
ತುಂಬಿರಲಿ ಧೈರ್ಯ ||

ಬೆಳಗಬೇಕು ಮನೆಯಲ್ಲಿ ದೀಪ
ನೂರೊಂದು ರೂಪ |
ಹುಡುಕಬೇಕು ಹೊಸತೊಂದು ಶಕ್ತಿ
ಜೀವನದ ಮುಕ್ತಿ ||

ಬರೆಯಬೇಕು ಹಲವೆಂಟು ಸಾಲು
ಕವನದ ಸೊಲ್ಲು |
ಹೆಚ್ಚಬೇಕು ರಾಷ್ಟ್ರದೆಡೆ ಪ್ರೀತಿ
ಒಗ್ಗಟ್ಟೇ ಶಕ್ತಿ ||


**
(ಈ ಕವಿತೆಯನ್ನು ಬರೆದಿದ್ದು 14-11-2005ರಂದು ದಂಟಕಲ್ಲಿನಲ್ಲಿ)

Friday, February 14, 2014

ಮಳೆಗಾಲದ ಮಡಿಲಿನಿಂದ (ಪ್ರೇಮಪತ್ರ-11)

ಪ್ರೀತಿಯ ಪ್ರೀತಿ
             ನಿಂಗೊತ್ತಲ್ಲ.. ಮಳೆ, ಮಳೆಯ ಬೀಳುವಿಕೆ, ಅದರ ರೌದ್ರತೆ, ಜಿಟಿ ಜಿಟಿ, ಸ್ನಿಗ್ಧತೆ. ಆ ವರ್ಷಧಾರೆಯಲ್ಲಿ ಒದ್ದೆಯಾಗಿ, ಆಡಿ, ಕುಣಿದು, ನಲಿದಿದ್ದನ್ನು ಮರೆತಿಲ್ಲ ತಾನೆ. ಮರೆತರೆ ಮತ್ತೊಮ್ಮೆ ನೆನಪು ಮಾಡಿಕೋ..
             ಈ ವರ್ಷವಂತೂ ಭರಪೂರ ಮಳೆಯಾಗಿದೆ. ಆರಂಭದಲ್ಲಿ ಮಳೆಗಾಲ ಇಲ್ಲ ಎಂದುಕೊಂಡವರು ಹಲವರಿದ್ದರು. ಆದರೆ ಶುರುವಾದ ಮಳೆ ನಿಲ್ಲಲೇ ಇಲ್ಲ. ಮುರು ತಿಂಗಳು ಭರ್ಜರಿ ಸುರಿಯಿತು. ಈ ವರ್ಷದ ಮಳೆಗಾಲ ನನಗೆ ಖಂಡಿತವಾಗಿಯೂ ಬಾಲ್ಯದಲ್ಲಿ ಬೀಳುತ್ತಿದ್ದ ಅಬ್ಬರದ ಮಳೆಗಾಲವನ್ನು ನೆನಪು ಮಾಡಿಕೊಟ್ಟಿತು. ನಿನಗೆ ನೆನಪಿರಬಹುದು. ಕಳೆದ ೊಂದೆರಡು ಮಳೆಗಾಲ. ಪ್ರಾರಂಭದಲ್ಲಿ ಗುಡುಗು, ಮಿಂಚು, ಸಿಡಿಲುಗಳ ಜೊತೆಗೆ ಚಿತ್ತಾಕರ್ಷಕ ಕೋಲ್ಮಿಂಚಿನ ಸಮ್ಮುಖದಲ್ಲಿ ಮಳೆರಾಯ ಬರುತ್ತಿದ್ದ. ಮದುವೆಯ ದಿಬ್ಬಣ ಗರ್ನಾಲು, ಕಜನಿ, ಆಟಂಬಾಂಬುಗಳ ಜೊತೆಯಲ್ಲಿ ಬರುವಂತೆ. ಆಗ ನಾವೆಲ್ಲರೂ ಅತ್ಯುತ್ಸಾಹ ಆನಂದದಿಂದ
`ಮಳೆ ಬಂತೋ ಮಳೆರಾಯ..
ಕೊಡೆ ಸೂಡಸೋ ಸುಬ್ರಾಯ..'
ಎಂದು ಕೂಗುತ್ತಾ ಮಳೆರಾಯನ ಆಗಮನವನ್ನು ಎದುರುಗೊಳ್ಳುತ್ತಿದ್ದುದನ್ನು ನೀನು ಮರೆತಿಲ್ಲ ಎಂದುಕೊಳ್ಳುತ್ತೇನೆ. ಆದರೆ ವಿಚಿತ್ರ ನೋಡು ಈ ಸಾರಿಯ ಮಳೆಗಾಲ ಹಾಗೆ ಬರಲೇ ಇಲ್ಲ. ಸದ್ದಿಲ್ಲದೇ, ಯಾವುದೇ ಆವಾಜು ಮಾಡದೇ ಬಂದ. ಆದರೆ ಬಂದ ಮಳೆರಾಯ ಸಾಕಷ್ಟು ಹಾವಳಿಯನ್ನು ಮಾಡಿದ್ದು ಮಾತ್ರ ಖರೆ ಹೌದು. ವೀಕ್ಲಿ ರಜಾ ಕೊಡು ಮಾರಾಯಾ.. ಎಂದರೂ ಮಳೆರಾಯ ಕೇಳಿರಲೇ ಇಲ್ಲ.
                 ಪ್ರತಿವರ್ಷ ಏನು ಅಂದ್ರೆ, ಮಳೆಗಾಲ ಪ್ರಾರಂಭವಾಗಿ ಒಂದು ವಾರದ ಒಳಗೆ ನಮ್ಮೂರ ಬಳಿ ಹರಿಯುವ ಅಘನಾಶಿನಿ ನದಿ ರೌದ್ರಾಕಾರ ತಾಳಿ ಮೈದುಂಬಿ, ಉಕ್ಕೇರಿ ಅಕ್ಕಪಕ್ಕದ ತೋಟ, ಗದ್ದೆಗಳನ್ನೆಲ್ಲಾ ಆಕ್ರಮಿಸಿ ಬಿಡುತ್ತಿತ್ತು. ಅದಕ್ಕಿಂತಲೂ ಮುಖ್ಯವಾಗಿ ಬೇಸಿಗೆ ಬಂದಾಗ ನಮ್ಮೂರಲ್ಲಿ ಅಡಿಕೆ ಮುಂಡಿ, ಹಗರು ದಬ್ಬೆ (ಅಡಿಕೆ ದಬ್ಬೆ)ಗಳಿಂದ ಸಂಕ ಮಾಡಿ ಹಾಕುತ್ತಾರೆ. ಅದನ್ನು ನದಿ ತೇಲಿಸಿಕೊಂಡು ಹೋಗುತ್ತಿತ್ತು. ಇದು ಪ್ರತಿ ವರ್ಷದ ವಾಡಿಕೆ. ಆದರೆ ಈ ವರ್ಷದ ಮಳೆ ಒಂದೆರಡು ದಿನಗಳಲ್ಲಿಯೇ ಕಾಲುಸಂಕವನ್ನು ಕೊಚ್ಚಿಕೊಮಡು ಹೋಯಿತು. ಅಬ್ಬಾ ಮಳೆಯೇ ಎಂದುಕೊಂಡಿದ್ದೆ.

                          ಅದು ಹೋಗಲಿ ಬಿಡು.. ಈ ಮಳೆರಾಯ ಅಡಿಕೆ ಬೆಳೆಗಾರನ ಮೇಲೆ ಮುನಿದುಕೊಳ್ಳುವುದು ಜಾಸ್ತಿ ನೋಡು. ಕಳೆದ ಒಂದೆರಡು ವರ್ಷ ಅನಿಯಮಿತವಾಗಿ ಮಳೆ ಸುರಿದ ಪರಿಣಾಮ ಅಡಿಕೆಗೆ ಕೊಳೆ ಬಂದಿತ್ತು. ಆದರೆ ಈ ವರ್ಷ ಎಡಬಿಡದೇ ಮಳೆ ಸುರಿದ ಕಾರಣ ಕೊಳೆ ರೋಗದ ಜೊತೆಗೆ ಸುಳಿ ಕೊಳೆಯುವ ರೋಗವೂ ಕಾಡಿ ಮರಗಳೆಲ್ಲ ತಲೆಗಳಚಿಕೊಂಡು ಉದುರಲಾರಂಭಿಸಿವೆ. ಅಡಿಕೆ ಬೆಳೆಯ ಮೂಲ ಹಿಂಗಾರ ಕೊಳೆತುಹೋದ ಕಾರಣ ಮುಂದಿನ ಫಸಲು ಹೇಗೋ ಏನೋ ಎನ್ನುವ ಚಿಂತೆಯಲ್ಲಿ ಅಡಿಕೆ ಬೆಳೆಗಾರನಿದ್ದಾನೆ. ಇದು ಹಾಗಿರಲಿ, ಮಳೆಯ ಅಬ್ಬರ ಎಲ್ಲ ಕಡೆಯೂ ಇತ್ತೆಂದು ಹೇಳಲಿಕ್ಕೆ ಆಗುವುದಿಲ್ಲ ನೋಡು. ನಮ್ಮಲ್ಲಿ ಈ ರೀತಿಯ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಬಯಲುಸೀಮೆಯಲ್ಲೂ ಅಬ್ಬರಿಸಿದ ಎಂದರೆ ತಪ್ಪಾಗುತ್ತದೆ. ಬಯಲನಾಡಿನಲ್ಲಿ ಆತನ ಪತ್ತೆಯೇ ಇಲ್ಲದ ಕಾರಣ ಅಲ್ಲಿನ ನಿವಾಸಿಗಳು ನೀರಿಗೆ ತತ್ವಾರ ಎನ್ನುವಂತಹ ಪಾಡು ಎದುರಾಗಿದೆ. ಈ ಮಳೆಗಾಲದಲ್ಲಿಯೂ ಆತ ಓಡುವ ಮೋಡಗಳ ಬಳಿ
ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ...
 ಎಂದು ಆರ್ತನಾಗಿ ಬೇಡುತ್ತಿದ್ದಾನೆ. ಆತನಿಗೆ ಒಂಚೂರಾದ್ರೂ ಕರುಣೆ ಬೇಕಿತ್ತಲ್ವಾ?
                            ಹೀಗಿದ್ರೂ ಮಳೆರಾಯನನ್ನು ಕಂಡ್ರೆ ನನ್ನ, ನಿನ್ನಂತವರಿಗೆ ಬಲು ಇಷ್ಟ. ಯಾಕಂದ್ರೆ ಮಳೆ ಬೀಳುವಾಗ, ತನ್ನ ಆರ್ಭಟ ತೋರಿಸುತ್ತಿರುವಾಗ ಮನೆಯಲ್ಲಿ ಹಾಕುವ ಹೊಡ್ಸಲಿನಲ್ಲಿ, ಸಂಗ್ರಹಿಸಿದ ಗೇರು ಬೀಜ, ಮಾಡಿಟ್ಟ ಹಲಸಿನ ಹಪ್ಪಳವನ್ನು ಸುಟ್ಟು ಅದನ್ನು ತಿನ್ನುತ್ತಾ ಯಾವುದಾದ್ರೂ ಪುಸ್ತಕ ಲೋಕದಲ್ಲಿ ವಿಹಾರ ಮಾಡುವುದೋ ಅಥವಾ ನಮಗಿಷ್ಟವಾದ ಹಾಡುಗಳನ್ನು ಮೊಬೈಲಿನಲ್ಲಿ ತುರುಕಿಕೊಂಡು ಕಿವಿಗೆ ಇಯರ್ ಪೋನ್ ಹಚ್ಚಿಕೊಂಡು ಕೇಳುವುದೋ ಎಷ್ಟೆಲ್ಲ ಖುಷಿ ಕೊಡುತ್ತವೆ ಅಲ್ಲವಾ..? ಅದರಲ್ಲೂ ಸಂಜೆ ನಾಲ್ಕೈದು ಗಂಟೆಯಾಗಿರಬೇಕು, ಹೊರಹೋಗಲು ಆಗದಂತೆ ಜಿಟಿ ಜಿಟಿ ಮಳೆ ಸುರಿಯುತ್ತಿರಬೇಕು, ಸುತ್ತಮುತ್ತಲೂ ಮಳೆ ಜಿರಲೆಗಳು ವಾಟರ್ ವಾಟರ್ ಎಂದು ಅರಚುತ್ತಿರಬೇಕು.. ಆಹಾ.. ಓಹೋ.. ಏನು ಆನಂದವೋ..
ಒಂದು ಚಣದ ಸಂಜೆ ಮಳೆ
ಬೀಳಲಿಂದು ತೋಯಲಿಳೆ
ಏನು ಆನಂದವೋ ಏನು ಆನಂದವೋ..||

ಆ ಸಂದರ್ಭಗಳಲ್ಲಿಯೇ ಎಂತಹ ವ್ಯಕ್ತಿಯಾದರೂ ಆಗ ಕವಿಯಾಗುತ್ತಾನೆ. ಕವನ ಕಟ್ಟುತ್ತಾನೆ. ತಾನು ಕೇಳಿದ ಭ್ರಮಾಭರಿತ ಸುಂದರ ಹಾಡನ್ನು ಗುನುಗುತ್ತಾನೆ. ನಮ್ಮನ್ನು ಹೀಗೆ ಮಾಡಿಸಬಲ್ಲ ಸುಂದರ ಶಕ್ತಿ ಮಳೆಗಿದೆ. ಹನಿಗಿದೆ.
                               ನಿಂಗೆ ನೆನಪಿರಬಹುದು. ನಾನು, ನೀನು ಶಾಲೆಗೆ ಹೋಗುವಾಗ ಭರ್ಜರಿ ಮಳೆ ಬಂತೆಂದರೆ ಶಾಲೆಗೆ ರಜಾ ಕೊಡುತ್ತಿದ್ದರು. ಅದನ್ನೆಲ್ಲಾ ಮರೆಯಲಾದೀತೆ.? ನಾನಂತೂ ನನ್ನೂರಿನಿಂದ 2-3 ಕಿ.ಮಿ ದೂರವಿರುವ ಕೋಡಶಿಂಗೆ ಶಾಲೆಗೆ ಹೋಗುವಾಗ ದಾರಿಯಲ್ಲೆಲ್ಲಾ ಕಾಣುವ ಒರತೆಗಳನ್ನು ನೋಡಿ ಅದಕ್ಕೆ ಬಾಯಿ ಹಾಕಿ ನೀರನ್ನು ತುಂಬಿಕೊಂಡು ಪುರ್ರೆಂದು ತೂರುತ್ತಾ ಹೋಗುತ್ತಿದ್ದೆ. ಅದು ನಿನಗೆ ಮರೆತಿಲ್ಲವಲ್ಲ. ಇದರ ಜೊತೆಗೆ ಮಳೆಗಾಲದ ಸ್ಪೆಷಲ್ ಎನ್ನಿಸಿರುವ `ಬಿಕ್ಕೆ'ಯ ಹಣ್ಣನ್ನು ಹೇಗೆ ತಿನ್ನುತ್ತಿದ್ದೆವಲ್ಲ. ಇಂತಹ ಮಳೆಗಾಲ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳು..
                                   ಈ ಪತ್ರವನ್ನು ಬರೆಯುತ್ತಿರುವ ಸಂದರ್ಭದಲ್ಲೇ ನಮ್ಮೂರಿನ ಗುಡ್ಡದ ಮೂಲೆಯಲ್ಲೆಲ್ಲೋ ಕುಳಿತು ತನ್ನ ಮಂಜುಳ ದಣಿಯಿಂದ `ಯಾಂಹೋ...' ಎಂದು ದನಿಗರೆಯುತ್ತಿರುವ ನವಿಲಿನ ಕೂಗು ಕಿವಿಯನ್ನು ತಣಿಸುತ್ತಿದೆ. ಮಳೆಗಾಲವನ್ನು ಕೂಗಿ ಕರೆಯುವ ಮಯೂರಗಳು ಮಾಡುವ ನರ್ತನ ನೋಡಲಂತೂ ಕಣ್ಣೇ ಸಾಲದು ಎನ್ನಿಸಿಬಿಟ್ಟಿದೆ.
ಬೇಸಿಗೆಯೆಂಬ ಬರಡನು ಓಡಿಸಿ
ಭೂಮಿಗೆ ತಂಪಿನ ಧಾರೆಯ ಸುರಿಸಿ
ರೈತರ ಮನವನು ತಣಿಯಿಸಿ ಹರ್ಷಿಸಿ
ಇಳಿವುದು ಭೂಮಿಗೆ ನೀರ ಮಳೆ ||
                              ನಿಜ.. ಬರಡು ಬೇಸಿಗೆಯ ಗರ್ಭದೊಳಗೆ ಹೂತು ಹೋಗಿರುವ ಹಸಿರು ಕಾಂತಿಯ ತೃಣವ ಹುಡುಕಿ ಅದಕ್ಕೆ ತಂಪಿನ ಜೀವಧಾರೆಯ ಸುರಿಸಿ ಅದರಿಂದ ಜೀವಜನನಕ್ಕೆ ಕಾರಣವಾಗುವ ಮಳೆಯೇ ನೀನು ರಿಯಲೀ ಗ್ರೇಟ್..|
                                ಇಂತಹ ಮಳೆಯ ಮಧ್ಯದಲ್ಲೇ ನಡೆಯುವ, ಬರುವ ಆರಿದ್ರಾ ಮಳೆಯ ಹಬ್ಬ, ನಾಗರ ಪಂಚಮಿ, ಚೌತಿ ಹಬ್ಬ, ಕೊಡೆ ಅಮಾವಾಸ್ಯೆ, ನೂಲ ಹುಣ್ಣೀಮೆ, ಕೃಷ್ಣಾಷ್ಟಮಿ ಜೊತೆಗೆ ಮಳೆಗಾಲದ ಅಂಚಿನಲ್ಲಿ ಬರುವ ನವರಾತ್ರಿ ಮುಂತಾದ ಹಬ್ಬಗಳು ಮಳೆಯ ಕಾರಣದಿಂದಲೇ ರಂಗೇರುತ್ತವೆ.
                                ಇಂತಹ ಮಳೆಯೇ ನಮ್ಮ ಜೀವದಾತವಾದ ಭತ್ತ, ರಾಗಿ, ಜೋಳ, ಗೋಧಿ ಮುಂತಾದವುಗಳಿಗೆ, ಅವುಗಳ ಬೆಳೆಗಳಿಗೆ, ಬೆಳವಣಿಗೆಗಳಿಗೆ, ಬದುಕಿಗೆ ಕಾರಣವಾಗುತ್ತವೆ. ಇಷ್ಟೆಲ್ಲ ಮಾಡುವ ಮಳೆ ಹವ್ಯಕರ ಹಣದ ಥೈಲಿಯಾದ ಅಡಿಕೆಗೂ ಕೊಳೆ ರೋಗವನ್ನು ತಂದುಬಿಡುತ್ತದೆ. ಜೊತೆಗೆ ಜಿಗಣೆಗಳು, ಉಂಬಳಗಳು ವರ್ಷವೊಂದರ ದೀರ್ಘ ನಿದ್ರೆಗೆ ಶರಣು ಹೊಡೆದು, ಹನಿಮಳೆಯಿಂದ ಜೀವತಳೆದು ಪ್ರಾಣಿಗಳ ರಕ್ತವನ್ನು ಹೀರಲು ಕಾತರಿಸಿ ಕಾಯುತ್ತವೆ. ಈ ಮಳೆಯ ಮಧ್ಯದಲ್ಲಿಯೇ ಅಮ್ಮನಿಗೆ ಸೌತೆಕಾಯಿ ಸಸಿಯನ್ನು, ಅಂಗೀಕಸೆ ಬೀಜವನ್ನೂ `ಪೋಲಿ ಜಾನಿ'ಯ ಬಳಿ ಎರವಲು ಪಡೆದು ನೆಟ್ಟಾಗಿರುತ್ತದೆ. ಅಪ್ಪನೂ `ಲೇ ಇವ್ಳೇ.. ಇವತ್ತು ಕಳಲೆ ಹುಳಿ ಮಾಡೆ..' ಎಂದು ಹೇಳಿ ಕಳಲೆಯನ್ನು ತಂದಾಗಿರುತ್ತದೆ. ತಂಗಿಗೂ ಅಷ್ಟೆ ಅದ್ಯಾರದ್ದೋ ಮನೆಯಲ್ಲಿ ಕಂಡ ಹೊಸ ಜಾತಿಯ ಜರ್ಬರಾ ಹೂವಿನ ಗಿಡವನ್ನೋ, ಸೋಣೆಯ ಹೂವಿನ ಸಸಿಯನ್ನೋ, ಡೇರೆ ಹಿಳ್ಳನ್ನೋ ನೆಡುವ ನೆಪದಲ್ಲಿ ಮಣ್ಣು ಕಲೆಯಲು ಆರಂಭಿಸಿಯಾಗಿರುತ್ತದೆ. ಮಳೆ ಎಲ್ಲರ ಮನಸ್ಸನ್ನು ಹಸನು ಮಾಡುತ್ತದೆ ಎನ್ನುವುದು ಇದಕ್ಕೇ ಅಲ್ಲವಾ ಹೇಳೋದು..?
                                ಇಷ್ಟು ಸಾಕಲ್ಲವೇ ಗೆಳತಿ ಮಳೆಗಾಲದ ಸವಿಯನ್ನು ಸವಿಯಲಿಕ್ಕೆ. ನೀನು ಓದುವ ಹೊತ್ತಿಗೆ ಖಂಡಿತ ಮಳೆ ತನ್ನ ಇನ್ನೊಂದು ಆಯಾಮಕ್ಕೆ ಹೋಗಿರುತ್ತದೆ. ಸವಿ ನೆನಪಿನಿಂದ ಬರೆದ ಪತ್ರವನ್ನು ಸವಿ ನೆನಪಿನಿಂದಲೇ ಓದಿದಂತೆ ಮಳೆಗಾಲದ ಮಡಿಲಿನಿಂದ ಬರೆಯುವ ಪತ್ರವನ್ನು ಅಷ್ಟೇ ಸಂತಸದಿಂದ ಓದು. ಆ ಮಳೆಗಾಲದ ಭಾವನೆಗಳು ನಿನ್ನ ಬೆನ್ನೇರಿ ಬಂದರೆ ಪ್ರೀತಿಯ ಓಲೆ ಬರೆದಿದ್ದಕ್ಕೂ ಸಾರ್ಥಕ. ಆದರೂ ಹೇಳಬೇಕು ಕಣೆ ಗೆಳತಿ ಇಂತಹ ಮಳೆ ಸುರಿಯುವ ಮಲೆನಾಡನ್ನೂ, ನನ್ನನ್ನೂ ಬಿಟ್ಟು ನೀನು ಮಳೆಯ ಲವಲೇಶವೂ ಇಲ್ಲದ ಜೋರ್ಡಾನ್ ಎಂಬ ದೇಶಕ್ಕೆ ಹೋಗಬಾರದಿತ್ತು ನೀನು.. ಯಾಕೋ ಮಳೆ, ಹನಿ, ನಾನು, ನೀನು, ಕೈಹಿಡಿದು ನಡೆದ ಜಾರುವ ರಸ್ತೆ, ಉಕ್ಕೇರಿ ಹರಿಯುವ ನದಿಯ ದಡದಲ್ಲಿ ತಲೆಯ ಮೇಲೆ ಕೈಹೊತ್ತು ಕುಳಿತದ್ದು, ರಸ್ತೆಯಲ್ಲಿ ಹರಿಯುವ ನೀರನ್ನು ಪಚಾ ಪಚಾ ಹಾರಿಸಿದ್ದು, ಊಹೂಂ ಇವೆಲ್ಲವನ್ನೂ ನೀನು ಮಿಸ್ ಮಾಡ್ಕೋತಿದ್ದೀಯಾ ಅಂತ ನನಗೆ ಖಂಡಿತ ಗೊತ್ತಿದೆ. ಭಾವನೆಗಳು ಬಿಸಿಲಿಗೆ ಒಣಗಿ ಹೋಗಿರುವ ಆ ದೇಶದಿಂದ ಯಾವಾಗ ಮರಳುತ್ತೀಯೋ ಎಂದು ನಾನು ಕಾಯುತ್ತಿದ್ದೇನೆ.
                                  ಎಂತಾ ವಿಚಿತ್ರ ನೋಡು.. ಯಾವಾಗಲೋ ಬರೆದ ಈ ಪತ್ರಕ್ಕೆ ಈಗ ಈಮೇಲ್  ಸೌಭಾಗ್ಯವೂ ಸಿಕ್ಕಿದೆ. ಅಕ್ಷರಗಳು ಎಷ್ಟು ಅದೃಷ್ಟ ಮಾಡಿರುತ್ತವೆ ಮಾರಾಯ್ತಿ. ಹೆಚ್ಚಿನ ಸಮಯ ಅಕ್ಷರಕ್ಕೆ ಒಳ್ಳೆಯದೇ ಭಾಗ್ಯ ದೊರಕುತ್ತದೆ. ನಾನೇ ಬರೆದ ಅಕ್ಷರಗಳು ನಿನ್ನ ಉಸಿರು ಸೋಕುವಷ್ಟು ಹತ್ತಿರಕ್ಕೆ ಬಂದು ನಿಲ್ಲುತ್ತವೆ. ನನಗೆ ಅಕ್ಷರದ ಮೇಲೆಯೇ ಹೊಟ್ಟೆಕಿಚ್ಚಾಗುತ್ತಿದೆ ಗೆಳತಿ.
                                   ಉಫ್.. ಸಾಕು.. ಸಿಕ್ಕಾಪಟ್ಟೆ ಹೆಚ್ಚಾಯಿತಲ್ಲ ಬರೆದ ಪತ್ರ.. ಕೊನೆ ಮಾಡುತ್ತೇನೆ.. ನಿನೀರುವ ನಾಡಿನಲ್ಲಿ ಮಳೆಯೇ ಬರುವುದಿಲ್ಲ. ಗ್ರಾಚಾರ ಕೆಟ್ಟು ಎಲ್ಲಾದರೂ ಬರುವ ಮಳೆ ಖಂಡಿತ ಇಷ್ಟು ಖುಷಿಯನ್ನು ಕೊಡುವುದಿಲ್ಲ ಎಂದು ನನಗೆ ಗೊತ್ತಿದೆ. ಈ ಪತ್ರದ ಮೂಲಕವಾದರೂ ಮಳೆಯನ್ನು ಎಂಜಾಯ್ ಮಾಡು.. ನಿನ್ನ ಉತ್ತರಕ್ಕಾಗಿ ನವಿಲಿನಂತೆ ಕಾಯುತ್ತಿರುತ್ತೇನೆ.

ಇಂತಿ ನಿನ್ನೊಲವಿನ
ವಿನು


**
(ಖಂಡಿತ ಈ ಪತ್ರ ಬರೆದಿದ್ದು ಈಗಲ್ಲ. ಮಳೆಗಾಲ ಕಳೆದ ತಿಂಗಳೊಪ್ಪತ್ತಿನಲ್ಲಿ ಬರೆದಿದ್ದು. ಬರೆದು ಹಾಕಲು ಸಮಯ ಸಿಕ್ಕಿರಲಿಲ್ಲ. ಈ ವ್ಯಾಲಂಟೈನ್ಸ್ ಡೇ ಗೆ ಏನಾದರೂ ಬರೆಯೋಣ ಅಂದುಕೊಂಡವನಿಗೆ ಹಳೆಯ ಬರಹಗಳ ಗುಚ್ಛ ಸಿಕ್ಕಿತು. ಅದರಲ್ಲೊಂದು ಈ ಪ್ರೇಮಪತ್ರ. ಅದು ನಿಮ್ಮ ಮುಂದಿದೆ. ಬೇಸಿಗೆಯಲ್ಲಿ ಮಳೆಗಾಲವನ್ನು ಒಂಚೂರು ಮೆಲುಕು ಹಾಕೋಣ)
(ಈ ಪ್ರೇಮಪತ್ರ ಪ್ರಕಟಿಸಿ ಕದಂಬವಾಣಿಯ ಅಂದಿನ ಸಂಪಾದಕ ದಿ.ಸುಬ್ಬಣ್ಣಂಗೆ ಧನ್ಯವಾದಗಳನ್ನು ಎಷ್ಟು ಹೇಳಿದರೂ ಸಾಕಾಗುವುದಿಲ್ಲ. ಅಂದಹಾಗೆ ಇದನ್ನು ಬರೆದಿದ್ದು ಆಗಸ್ಟ್ 2006ರಲ್ಲಿ)

Thursday, February 13, 2014

ನಮ್ಮೂರ ಬಸ್ಸು

(ಚಿತ್ರ ಕೃಪೆ : ಪ್ರವೀಣ ನಾರಾಯಣ ಭಟ್ಟ ದೇವತೆಮನೆ)
ನಮ್ಮುರ ಬಸ್ಸಿನಲಿ
ಏನುಂಟು ಏನಿಲ್ಲ
ಬರೆಯ ಹೋದರದು
ಒಂದು ಕಥನ ಕಾವ್ಯ ||

ಬಸ್ಸಿನೊಳು ಜನರಿಲ್ಲ
ಸೀಟೆಲ್ಲ ಖಾಲಿ
ಆಗಾಗ ಆಗುವುದು
ಪಂಚರ್ರು ಗಾಲಿ  ||

ಚಾಲಕನ ಸಾಹಸದಿ
ಬೀಳುವುದು ಗೇರು
ಎಷ್ಟು ತಳ್ಳಿದರೂ ಕೂಡ
ಹತ್ತುವುದಿಲ್ಲ ಏರು ||

ಮಳೆಗಾಲ ಬಂದರೆ
ಒಳಗೆಲ್ಲ ನೀರು
ಕೂಗಾಟ, ಚೀರಾಟ
ರಶ್ಶಿಲ್ಲ ಜೋರು ||

ನಮ್ಮೂರ ಬಸ್ಸಿನಲ್ಲಿ
ಡ್ರೈವರ್ರೇ ಹೀರೋ
ಗಾಡಿ ಓಡಿಸುವ ವೇಗ
ಮಾತ್ರ ಬರೀ ಝೀರೋ ||

ನಮ್ಮೂರ ರಸ್ತೆಯಲಿ
ಹೊಂಡಗಳು ಸೋಂಪು
ಹಾಗಾಗಿ ಬಸ್ಸು
ಆಗುವುದು ಜಂಪು ||

ಬಸ್ಸದು ಸಾಗಿರಲು
ನಡುಗುವುದು ಬಾಡಿ
ಆದರೂ ಜೋರಾಗಿ
ಓಡುವುದು ನೋಡಿ ||

ಬಸ್ಸಲ್ಲಿ ಒಡೆದಿದೆ
ಕಿಟಕಿಯ ಗ್ಲಾಸು
ಅದು ತಿಳಿಸುವುದು
ಸಾರಿಗೆಯ ಲಾಸು ||

ಈ ರೀತಿ ಉಂಟಯ್ಯಾ
ನಮ್ಮೂರ ಬಸ್ಸು
ಬಸ್ಸಿನ ತುಂಬೆಲ್ಲ
ಅಪಘಾತ ಕೇಸು ||

(ಈ ಕವಿತೆಯನ್ನು ಬರೆದಿದ್ದು 7.12.2006ರಂದು ದಂಟಕಲ್ಲಿನಿಂದ ಶಿರಸಿಗೆ ಹೋಗುವಾಗ..)
(ಶಿರಸಿ-ಅಡಕಳ್ಳಿ-ಗೋಳಿಕಟ್ಟಾ ಎಂಬ ದಿನಕ್ಕೆರಡು ಬಾರಿ ಬಂದು ಹೋಗುವ ಬಸ್ಸಿನ ಖಾಯಂ ಪಯಣಿಗ ಒಂದುಕಾಲದಲ್ಲಿ ನಾನಾಗಿದ್ದೆ. ಬಸ್ಸಿನಲ್ಲಿ ನಾನು-ಡ್ರೈವರ್-ಕಂಡಕ್ಟರ್ ಸೇರಿ 10 ತಲೆಗಳನ್ನು ಕಷ್ಟಪಟ್ಟು ಎಣಿಸಬೇಕಿತ್ತು. ಖಾಲಿ ಖಾಲಿ ಹೊಡೆಯುತ್ತಿದ್ದ ಈ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾಗಲೇ ನನಗೆ ಈ ಕವಿತೆ ಹೊಳೆದಿದ್ದು.. ಬಸ್ಸು ಸಾಗಿದಂತೆಲ್ಲ ಗೀಚುತ್ತ ಹೋಗಿದ್ದೆ.. ಅದೇ ಈ ಕವಿತೆ.. ನಮ್ಮುರ ರಸ್ತೆ, ಬಸ್ಸಿನ ಪರಿಸ್ಥಿತಿಯನ್ನು ಈ ಕವಿತೆ ತಿಳಿಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡುತ್ತದೆ.. ಒಟ್ಟಿನಲ್ಲಿ ಅಡ್ಕಳ್ಳಿ ಬಸ್ಸಿಗೆ ಝೈ ಎನ್ನಿ.)

Wednesday, February 12, 2014

ಮೂಡು ಹಣತೆ


ಮೂಡು ದಿಕ್ಕಲಿ ಹಣತೆ ಬೆಳಗಿದೆ
ತಿಮಿರ ದೂರಕೆ ಓಡಿದೆ |
ಎದೆಯ ಬೃಂದಾವನದ ನಡುವಲಿ
ಹೊಸತು ಹೊನಲದು ಮೂಡಿದೆ ||

ಬೆಳಕ ಬಳುಕಿನ ರಶ್ಮಿಯಿಂದಲಿ
ಭುವಿಯು ನಗುತಲಿ ನಿಂತಿದೆ |
ಹಸಿರು, ಉಸಿರಿಗೆ ಮೆರಗು ನೀಡುತ
ಹೊಸತು ಲೋಕವ ಕಟ್ಟಿದೆ ||

ಮೂಡು ಹಣತೆಯು ಜಡವ ಕಳೆದಿದೆ
ಭ್ರಮೆಯು ದೂರಕೆ ಓಡಿದೆ |
ಬಯಕೆಯಾ ಹೊಸ ಬಿಸುಪಿನಂಚಲಿ
ಪ್ರೀತಿ ಸಸಿಯು ಮೊಳೆತಿದೆ ||

ಗಗನದ ಆ ಪಟಲದಂಚಲಿ
ಗೌರವರ್ಣವು ಮೆರೆದಿದೆ |
ಬಣ್ಣ ಬೆಳಗಿದೆ, ತಿಮಿರ ಕಳೆದಿದೆ
ಬೆಳಕು ಎಲ್ಲೆಡೆ ಸುರಿದಿದೆ ||

**
(ಈ ಕವಿತೆಯನ್ನು ಬರೆದಿದ್ದು ಶಿರಸಿಯಲ್ಲಿ 1.01.2008ರಂದು)
(ಸೂರ್ಯೋದಯದ ಕುರಿತು ಒಂದು ರಿದಮಿಕ್ ಕವಿತೆ.. ಈ ಕವಿತೆಗೆ ಸುಪರ್ಣ ಹೆಗಡೆ ಹಾಗೂ ಪೂರ್ಣಿಮಾ ಅವರು ರಾಗವನ್ನು ಹಾಕಿ ಹಾಡಿದ್ದಾರೆ)

Tuesday, February 11, 2014

ಬೆಂಗಾಲಿ ಸುಂದರಿ-7

(ಕಾಂತಾಜಿ ದೇವಾಲಯ, ಬಾಂಗ್ಲಾದೇಶ)
                   ಎದುರಲ್ಲಿ ನಿಂತಿದ್ದಾಕೆಯನ್ನು ಬಿಟ್ಟ ಕಣ್ಣಿನಿಂದ ನೋಡುತ್ತಿದ್ದ ವಿನಯಚಂದ್ರ ಸೂರ್ಯನ್ ಧ್ವನಿ ಕೇಳಿ ವಾಸ್ತವಕ್ಕೆ ಬಂದ. ತಕ್ಷಣ `ಏನು..?' ಎಂಬಂತೆ ನೋಡಿದ. ಅದಕ್ಕೆ ಆಕೆ ಹಿಂದಿಯಲ್ಲಿ ಬಾಂಗ್ಲಾದೇಶದ ಪ್ರವಾಸಿ ತಾಣಗಳನ್ನು ಭಾರತ ಕಬ್ಬಡ್ಡಿ ತಂಡಕ್ಕೆ ತೋರಿಸುವ ಹೊಣೆಗಾರಿಕೆಯನ್ನು ತನಗೆ ನೀಡಿದ್ದಾರೆಂದೂ ಎಲ್ಲ ಆಟಗಾರರ ಬಳಿ ವಿಷಯ ತಿಳಿಸಿಯಾಗಿದೆಯೆಂದೂ ಈ ರೂಮೊಂದೆ ಬಾಕಿಯಿತ್ತೆಂದೂ ತಿಳಿಸಿದಳು. ಬೇಗನೆ ಹೊರಡಲು ತಯಾರಾಗಬೇಕೆಂದು ಹೇಳಿದಳು.
                  ತಾನು ಬಂದ ವಿಷಯವನ್ನು ಆಕೆ ಅರಳುಹುರಿದಂತೆ ಪಟಪಟನೆ ಮಾತನಾಡುತ್ತಿದ್ದರೆ ವಿನಯಚಂದ್ರ ಮರುಳನಂತೆ ನೋಡುತ್ತಿದ್ದ. ಅವನಿಗೆ ಹೂಂ ಅನ್ನಲೂ ಮರೆತುಹೋಗಿತ್ತು. ಸೂರ್ಯನ್ ಬಂದು ಏನಿವರ ಹಕ್ಕೀಕತ್ತು ಎಂದು ನೋಡದೇ ಇದ್ದಿದ್ರೆ ವಿನಯಚಂದ್ರ ಎಲ್ಲಿ ಕಳೆದುಹೋಗುತ್ತಿದ್ದನೋ.  ಸೂರ್ಯನ್ ಬಂದವನೆ ವಿನಯಚಂದ್ರನನ್ನು ತಟ್ಟಿ ಎಬ್ಬಿಸಿ `ಏನೂ.. ನೀನು ಕಳೆದುಹೋದ್ಯಾ..?' ಎಂಬಂತೆ ನೋಡಿದ. ವಿನಯಚಂದ್ರ ನೋಡುತ್ತಿದ್ದ ಪರಿಯನ್ನು ವಿಚಿತ್ರವಾಗಿ ಗಮನಿಸುತ್ತಿದ್ದ ಆ ಬೆಂಗಾಲಿ ಹುಡುಗಿಯೂ ಒಮ್ಮೆ ಹಿತವಾಗಿ ನಕ್ಕಿದ್ದಳು. ವಿನಯಚಂದ್ರನಿಗೆ ಅವಳ ಹೆಸರನ್ನು ಕೇಳಿಬಿಡಬೇಕೆನ್ನುವ ತವಕವಿತ್ತು. ಆದರೆ ಕೇಳಲು ಶಬ್ದಗಳು ಹೊರಬರಲೇ ಇಲ್ಲ.
                 ಸೂರ್ಯನ್ ಹುಡುಗಿಯ ಮುಖ ಕಂಡಿದ್ದೇ ತಡ ಪಟಪಟನೆ ತಾನು ಮಾತನಾಡಲು ಆರಂಭಿಸಿದ್ದ. ಆತ ಅವಳ ಬಳಿ ಅದೇನು ಮಾತನಾಡಿದನೋ.. ವಿನಯಚಂದ್ರ ಮಾತ್ರ ಅವಳನ್ನು ನೋಡುವುದರಲ್ಲಿಯೇ ತಲ್ಲೀನನಾಗಿದ್ದ. ಜೀವನದಲ್ಲಿ ಮೊಟ್ಟ ಮೊದಲಬಾರಿಗೆ ವಿನಯಚಂದ್ರನ ಹೃದಯ ಕಳುವಾಗಿತ್ತು. ಮನಸು ತನ್ನನ್ನೇ ತಾನು ಮರೆತು ಹೋಗಿತ್ತು. ಮಾತು ಮೌನವಾಗಿತ್ತು. ಸೂರ್ಯನ್ ನ ಬಳಿಯಾದರೂ ಆಕೆಯ ಹೆಸರನ್ನು ಕೇಳುವಂತೆ ಹೇಳಬೇಕು ಎಂದು ಸನ್ನೆ ಮಾಡಿದ. ಸೂರ್ಯನ್ ಬೇಕಂತಲೆ ಅದನ್ನು ಕಡೆಗಣಿಸಿದ. ವಿನಯಚಂದ್ರನಿಗೆ ಉರಿದುಹೋಯಿತು. ಸೂರ್ಯನ್ ಬಳಿ ಏನೇನೋ ಮಾತನಾಡಿದ ಆಕೆ ವಾಪಸಾದ ತಕ್ಷಣ ವಿನಯಚಂದ್ರ ಸೂರ್ಯನ್ ಮೇಲೆ ಮುಗಿಬಿದ್ದ.
`ಆಕೆಯ ಹೆಸರು ಕೇಳಬೇಕಿತ್ತು ಕಣೋ..' ಎಂದ
`ನಾನು ಕೇಳಿದೆ..' ಎಂದ ಸೂರ್ಯನ್
`ಏನು..?'
`ಹೆಸರುಕಾಳು..'
`ತಮಾಷೆ ಸಾಕು..'
`ಹೋಗೋ.. ಹೋಗೋ..'
`ಹೇಳೋ ಮಾರಾಯಾ...'
`ಏನು ಅವಳ ಮೇಲೆ ಅಷ್ಟೆಲ್ಲ ಆಸಕ್ತಿ..'
`ಏನಿಲ್ಲ.. ಹಾಗೆ ಸುಮ್ಮನೆ... '
`ಇದೆಲ್ಲಾ ಬೇಡ.. ನಮಗೂ ಗೊತ್ತಾಗುತ್ತೆ...'
`ಏನ್ ಗೊತ್ತಾಗುತ್ತೆ..? ಏನ್ ಗೊತ್ತಾಯ್ತು ನಿಂಗೆ..?'
`ಚನ್ನಾಗಿದ್ದಾಳೆ... ಮಾತಾಡಿಸಬೇಕು ಎನ್ನಿಸಿತಲ್ವಾ?.. ಅಂತೂ ನೀನು ಮರುಳಾದೆ ಅನ್ನು..'
`ಹೆ.. ಹಂಗೇನಿಲ್ಲ ಮಾರಾಯಾ... ಯಾಕೋ ಸುಮ್ಮನೆ ಕೇಳೋಣ ಅನ್ನಿಸಿತು..' ವಿನಯಚಂದ್ರ ಮಾತು ಹಾರಿಸಲು ಯತ್ನಿಸಿದ.
`ನಾನು ಅವಳ ಹೆಸರನ್ನು ಕೇಳಿದೆ.. ಬಹಳ ಚನ್ನಾಗಿದೆ ಅವಳ ಹೆಸರು.. ಅವಳಂತೆ..'
`ಏನು ಹೆಸರು..?'
`ಹೇಳೋದಿಲ್ಲ... ಯಾಕೆ ಹೇಳಬೇಕು ನಿಂಗೆ..? ಹೋಗಲೋ...' ಎಂದು ಛೇಡಿಸಿದ.. ಆ ನಂತರ ಎಷ್ಟು ಗೋಗರೆದರೂ ಸೂರ್ಯನ್ ಹೇಳಲಿಲ್ಲ. ಅವನಿಗೂ ವಿನಯಚಂದ್ರನನ್ನು ಆಟವಾಡಿಸಬೇಕು ಎನ್ನಿಸಿರಬೇಕು. ವಿನಯಚಂದ್ರನಿಗೆ ಬೇಜಾರಾದಂತೆನಿಸಿತು. ಇನ್ನು ಸೂರ್ಯನ್ ಬಳಿ ಕೇಳಿ ಉಪಯೋಗವಿಲ್ಲ ಎಂದುಕೊಂಡ. ಮಾತು ಬದಲಿಸಿದ.
                  ಸಂಜೆಯ ವೇಳೆಗೆ ಸೂರ್ಯನ್ ಗೆ ವಿಷಯ ಮರೆತಂತಾಗಿತ್ತಾದರೂ ವಿನಯಚಂದ್ರನ ಮನದಲ್ಲಿ ಬೆಂಗಾಲಿ ಸುಂದರಿ ಕಾಡುತ್ತಲೇ ಇದ್ದಳು. ಏನ್ ಮಾಡ್ತಾ ಇರಬಹುದು ಆಕೆ? ಎಲ್ಲಿ ಇರಬಹುದು? ಮತ್ತೊಮ್ಮೆ ನೋಡಬೇಕಲ್ಲಾ ಎನ್ನಿಸಿತು. ನೋಡಿದಷ್ಟೂ ನೋಡಬೇಕೆನ್ನಿಸುವಂತಿದ್ದಳು ಆಕೆ. ಹೊಟೆಲಿನಲ್ಲಿ ಎಲ್ಲಾದರೂ ಕಾಣಬಹುದೆ ಎಂದು ಅಡ್ಡಾಡಲು ಹೊರಟ. ಇನ್ನೇನು ರೂಮಿನಿಂದ ಹೊರಬೀಳಬೇಕು ಎನ್ನುವಷ್ಟರಲ್ಲಿ ಸೂರ್ಯನ್ ಮತ್ತೊಮ್ಮೆ `ಏನೋ.. ಅವಳನ್ನು ನೋಡಲು ಹೊರಟೆಯಾ..? ನಿನಗಿಲ್ಲಿ ಅವಳು ಕಾಣಿಸೋದಿಲ್ಲ..' ಎಂದು ಛೇಡಿಸಿದ. ಮುಂದುವರಿದು `ನಾನು ಬರಲಾ ನಿನ್ಜೊತೆ...' ಎಂದ. ವಿನಯಚಂದ್ರ ಮಾತನಾಡದೆ ಮುನ್ನಡೆದ. ಹುಸಿಮುನಿಸನ್ನೂ ನೋರಿದ.
               ಹೊಟೆಲ್ ಭವ್ಯವಾಗಿತ್ತು. ದೊಡ್ಡದಾಗಿಯೂ ಇತ್ತು. ಹೊಳಪಿನ ಟೈಲ್ಸಿನ ಮೇಲೆ ನಡೆಯುವವನ ಪ್ರತಿಬಿಂಬ ಬೀಳುತ್ತದೆ ಎನ್ನುವಂತಿತ್ತು. ಬಾಂಗ್ಲಾದೇಶ ಬಡ ರಾಷ್ಟ್ರ ಎಂದು ಎಲ್ಲೋ ಓದಿದಂತಿತ್ತು. ಆದರೆ ಈ ಹೊಟೆಲಿನಲ್ಲಿ ಶ್ರೀಮಂತಿಕೆ ಎದ್ದು ಕಾಣಿಸುತ್ತಿದೆ. ಬಡತನದ ಲವಲೇಶವೂ ಇಣುಕುತ್ತಿಲ್ಲವಲ್ಲ ಎಂದುಕೊಂಡ ವಿನಯಚಂದ್ರ. ಹಾಗೆ ಹೊಟೆಲಿನ ಕಂಪೌಂಡಿನ ಬಳಿ ಬಂದ. ಅಲ್ಲೊಂದು ಸ್ವಿಮ್ಮಿಂಗ್ ಫೂಲ್ ಇತ್ತು. ಭಾರತ ತಂಡದ ಒಂದಿಬ್ಬರು ಆಟಗಾರರು ಅಲ್ಲಿ ಈಜಾಟವನ್ನು ನಡೆಸಿದ್ದರು. ಯಾಕೋ ವಿನಯಚಂದ್ರನಿಗೂ ಮನಸ್ಸು ತಡೆಯಲಿಲ್ಲ. ಸೀದಾ ಬಂದವನೆ ನೀರಿಗಿಳಿದ.
                 ತನ್ನೂರಿನ ಫಾಸಲೆಯಲ್ಲಿ ಹರಿದುಹೋಗುವ ನದಿಯಲ್ಲಿ ಈಜು ಕಲಿತಿದ್ದುದು ನೆನಪಾಯಿತು. ಬಾಲ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಈಜು ಕಲಿತ ಸಾಹಸವೂ ಅರಿವಿಗೆ ಬಂದಿತು. ಕಾಲು ತಪ್ಪುವಷ್ಟು ಆಳದ ಗುಂಡಿಗೆ ಹೋಗಿ, ಇದ್ದಕ್ಕಿದ್ದಂತೆ ಕಾಲು ಜಾರಿ ನೀರೊಳಗೆ ಕಂತಿ ಒಮ್ಮೆ ನೀರು ಕುಡಿದು ಖು.. ಖು.. ಖು ಅಂತ ಕೆಮ್ಮಿ ಯಡರಾ ಬಡರಾ ಕಾಲು ಬಡಿದು ನೀರಿನಿಂದ ಹೇಗ್ಹೇಗೋ ಎದ್ದು ಬಂದಿದ್ದರ ನೆನಪಾಯಿತು. ಆ ನಂತರ ಅನೇಕ ದಿನಗಳ ಕಾಲ ಈಜೂ ಬೇಡ ನದಿಯೂ ಬೇಡ ಎಂದು ನಮಸ್ಕಾರ ಹಾಕಿದ್ದೂ ನೆನಪಿಗೆ ಬಂದು ಹಿತವಾಗಿ ನಕ್ಕ. ಅಷ್ಟರ ನಂತರ ತನ್ನ ಓರಗೆಗಿಂತ ಹಿರಿಯ ಹುಡುಗರ ಒತ್ತಾಯಕ್ಕೆ ಕಟ್ಟು ಬಿದ್ದು ನದಿಯಲ್ಲಿ ಕಷ್ಟಪಟ್ಟಾದರೂ ಈಜು ಕಲಿತಿದ್ದ. ಆದರೆ ಒಂದು ಆತನಿಗೆ ಸ್ವಲ್ಪ ಸಮಸ್ಯೆ ಉಂಟುಮಾಡುತ್ತಿತ್ತು. ಹರಿಯುವ ನೀರಿನಲ್ಲಿ ಸೆಳವಿಗೆ ಅಡ್ಡವಾಗಿ, ಉದ್ದವಾಗಿ ಈಜುತ್ತಿದ್ದ ಆತ ನಿಂತ ಸ್ಮಿಮ್ಮಿಂಗ್ ಫೂಲ್ ನ ನೀರಿನಲ್ಲಿ ಈಜಲು ಆರಂಭದಲ್ಲಿ ಸ್ವಲ್ಪ ಕಷ್ಟವನ್ನೇ ಪಟ್ಟ ಎನ್ನಿ. ಬಾಲ್ಯದ ಹುಡುಗಾಟಗಳು, ಈಜಿನ ಜೊತೆಗೆ ಕೆಣಕಾಟಗಳು ಆತನಲ್ಲಿ ಒಮ್ಮೆ ನಗುವಿಗೆ ಕಾರಣವಾದವು. ಅದು ಅವನ ಜೊತೆಯಲ್ಲಿ ಈಜುತ್ತಿದ್ದ ಪಂಜಾಬಿನ ಆಟಗಾರನೊಬ್ಬನಿಗೆ ಕಂಡು `ಏನ್ ಉಸ್ತಾದ್.. ಒಬ್ಬೊಬ್ನೆ ನಗ್ತೀದಿಯಾ..? ನಿನ್ ಲವ್ವರ್ ನೆನಪಾದಳಾ..?' ಎಂದ.
                `ಲವ್ವೂ ಇಲ್ಲ ಎಂತ ಮಣ್ಣೂ ಇಲ್ಲ.. ನಾನು ಇದುವರೆಗೂ ಯಾರನ್ನೂ ಲವ್ ಮಾಡಿಲ್ಲ..' ಎಂದ..
`ಥೂ ನಿನ್ನ.. ವೇಸ್ಟು ಕಣೋ ನೀನು.. ಯಾಕೆ ಬದುಕ್ತಿದ್ದೀಯಾ..? ಲವ್ ಮಾಡಿಲ್ಲ ಅಂದ್ರೆ ನಿಂದೂ ಒಂದು ಬದುಕಾ.. ಚಲ್...ಚಲ್.. ನಾನ್ ನೋಡು ಕನಿಷ್ಟ ಹತ್ತು ಲವ್ ಮಾಡಿದ್ದೇನೆ.. ಗಂಡಸಾದ ಮೇಲೆ ಲವ್ ಮಾಡದೇ ಇರೋಕಾಗತ್ತಾ.. ಥೂ ನಿನ್ನ.. ಎಳಸು ನೀನು' ಎಂದ. ಪಂಜಾಬಿಯ ದೃಷ್ಟಿಯಲ್ಲಿ ವಿನಯಚಂದ್ರ ಏನಕ್ಕೂ ಬಾರದವನು. ಆದರೆ ವಿನಯಚಂದ್ರ ಯಾರನ್ನೂ ಪ್ರೀತಿಸದೇ ಇರಲು ಹಲವಾರು ಕಾರಣಗಳಿದ್ದವು. ಆತ ಹರೆಯಕ್ಕೆ ಕಾಲಿಟ್ಟಾಗಲೇ ತಾನು ಪ್ರೀತಿಸುವ ಹುಡುಗಿ ಹೀಗಿರಬೇಕು ಎನ್ನುವ ಹಲವಾರು ಅಂಶಗಳನ್ನು ಮನದಲ್ಲಿಯೇ ಹಾಕಿಕೊಂಡಿದ್ದ. ತನ್ನ ಪ್ರೀತಿಯ ಹುಡುಗಿಯ ಲಕ್ಷಣಗಳಿಗೊಂದು ಚೌಕಟ್ಟನ್ನು ರೂಪಿಸಿದ್ದ. ಹುಡುಗಿ ಚನ್ನಾಗಿರದಿದ್ದರೂ, ಸುರಸುಂದರಿಯಾಗಿ ಇರದೇ ಇದ್ದರೂ ತಪ್ಪಿಲ್ಲ. ಆದರೆ ಲಕ್ಷಣವಂತೆಯಾಗಿರಬೇಕು. ಉದ್ದನೆಯ ಜಡೆ ಆಕೆಗೆ ಇರಬೇಕು. ಕಾಡು ಸುತ್ತಬೇಕು. ಹಾಡು ಹೇಳಬೇಕು. ಹೀಗೆ ಏನೇನೋ ಅಂಶಗಳು.. ಒಂದಿಬ್ಬರು ಹುಡುಗಿಯರು ವಿನಯಚಂದ್ರನ ಬಳಿ ಪ್ರೇಮನಿವೇದನೆ ಮಾಡಿಕೊಂಡಿದ್ದೂ ಇದೆ. ಆದರೆ ತಾನು ಬಯಸಿದ ಅಂಶಗಳು ಅವರಲ್ಲಿ ಇರದ ಕಾರಣ ಅವರಿಗೆ ಒಪ್ಪಿಗೆಯನ್ನು ಸೂಚಿಸಿರಲಿಲ್ಲ ಆತ.
                    ಇದೀಗ ಅಪರೂಪಕ್ಕೆ ಒಬ್ಬಳು ಹುಡುಗಿ ವಿನಯಚಂದ್ರನ ಮನಸ್ಸಿಗೆ ಹಿಡಿಸಿದ್ದಳು. ನೋಡಲು ಚನ್ನಾಗಿದ್ದಳು. ಜೊತೆಗೆ ಯಾಕೋ ಆಕೆಯನ್ನು ನೋಡಿದಾಕ್ಷಣ ಆಪ್ತಭಾವ ಕಾಡಲಾರಂಭಿಸಿತ್ತು. ಮೇಲ್ನೋಟಕ್ಕೆ ಆಕೆಯದು ಉದ್ದವಾದ ಜಡೆಯಂತೆ ಕಂಡು ಆತ ಒಳಗೊಳಗೆ ಖುಷಿ ಪಟ್ಟಿದ್ದ. ಆಕೆಯ ಅಗಲ ಹಣೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾಳನ್ನು ನೆನಪಿಗೆ ತಂದುಕೊಟ್ಟಿದ್ದರೂ ಆಕೆಯನ್ನು ನೋಡುತ್ತಿದ್ದರೆ ಏನೋ ಒಂದು ಹಿತವಾದ ಭಾವನೆ ಅವನಲ್ಲುಂಟಾಗುತ್ತಿತ್ತು. ಸೂರ್ಯನ್ ಹೇಳದಿದ್ದರೂ ಪರವಾಗಿಲ್ಲ. ಸಿಕ್ಕರೆ ನಾನು ಮಾತನಾಡಿಸಬೇಕು. ಹೋಗಿ ಅವಳ ಬಳಿ ಹೆಸರು ಹೇಳಿ, ಏನು ಮಾಡ್ತಿರೋದು ಎಂದೆಲ್ಲಾ ವಿಚಾರಿಸಬೇಕು ಎಂದುಕೊಂಡ. ಆಕೆ ಮುಸ್ಲೀಂ ಹುಡುಗಿಯಾದರೆ ಏನ್ ಮಾಡೋದು ಎಂಬ ಭಾವನೆಯೂ ಕಾಡದಿರಲಿಲ್ಲ. ಹಾಗಾಗದಿರಲಿ ಎಂದು ಒಮ್ಮೆ ಬೇಡಿಕೊಂಡ. ಹಿಂದೂ ಹುಡುಗಿಯೇ ಇರಬೇಕು. ಇಲ್ಲವಾದರೆ ಅಷ್ಟು ಚಂದಾಗಿ ಸೀರೆ ಉಡ್ತಿದ್ದಳಾ.. ಹಣೆಗೆ ಬಿಂದಿ ಇತ್ತು. ಖಂಡಿತ ಹಿಂದೂ ಹುಡುಗಿಯೇ ಇರಬೇಕು ಎಂದುಕೊಂಡ ವಿನಯಚಂದ್ರ. ಯಾಕೋ ಸಮಾಧಾನವಾದಂತಾಯಿತು.
                      ಕತ್ತಲಾಗುವ ವೇಳೆಗೆ ಮತ್ತೆ ಹೊಟೆಲ್ ಒಳಗೆ ಮುಖಮಾಡಿದ. ಬದುಕು ಚಿಕ್ಕದಾಗಿ ಹಳಿತಪ್ಪಿದಂತಿತ್ತು. ಸೂರ್ಯನ್ ಮಾತ್ರ ಕೆಣಕುವಿಕೆ ಹಾಗೂ ನಗುವಿನಲ್ಲಿ ತಲ್ಲೀನನಾಗಿದ್ದ. ಆಕೆಯ ಪ್ರತಿರೂಪದೊಂದಿಗೆ ಆದಿನವನ್ನು ಕಳೆಯಲು ಯತ್ನಿಸಿದ ವಿನಯಚಂದ್ರ. ಹುಡುಗಿಯರು ಹೇಗಿದ್ದರೂ ಚಂದ. ಮೇಕಪ್ಪು ಮಾಡದಿದ್ದರೆ ಇಷ್ಟವಾಗುತ್ತಾರೆ. ಹುಡುಗರು ಮೇಕಪ್ ಮಾಡಿದ ಹುಡುಗಿಯನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಮೇಕಪ್ ಇಲ್ಲದೇ ಸಹಜ ಸುಂದರಿಯಾಗಿದ್ದರೆ ಬಹಳ ಖುಷಿ ಪಡುತ್ತಾರೆ. ಇವಳೂ ಅಷ್ಟೇ ಮೇಕಪ್ ಮಾಡಿದಂತೆ ಕಾಣಲಿಲ್ಲ. ಸಹಜ ಸುಂದರಿ ಎಂದುಕೊಂಡ ವಿನಯಚಂದ್ರ. ಮನಸ್ಸಿನಲ್ಲಿ ಮತ್ತೆ ಅವಳ ರೂಪವನ್ನು ಕಣ್ತುಂಬಿಕೊಳ್ಳಲು ಯತ್ನಿಸಿದ.

**

                 ಮರುದಿನ ಬೆಳಿಗ್ಗೆ ಟೀಂ ಪ್ರಾಕ್ಟೀಸಿಗೆ ತಯಾರಾಗಬೇಕಿತ್ತು. ಹೊಟೆಲಿನಿಂದ ಹತ್ತಿರದ ತರಬೇತಿ ಗ್ರೌಂಡಿಗೆ ಕರೆದೊಯ್ಯಲಾಯಿತು. ಮೂರು ಗಂಟೆಗಳಿಗೂ ಅಧಿಕ ಕಾಲ ಬೆವರಿಳಿಸಿದ ಮೇಲೆ ತಂಡದ ಆಟಗಾರರು ಹಾಗೂ ಇತರರಿಗೆ ಆ ದಿನ ಬಾಂಗ್ಲಾದೇಶದ ಪ್ರವಾಸಿ ಸ್ಥಳಗಳ ಬಗ್ಗೆ ಕರೆದೊಯ್ಯಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಯಿತು. ವಿನಯಚಂದ್ರನ ಆದಿಯಾಗಿ ಎಲ್ಲರೂ ಸಂತಸಪಟ್ಟರು. ಪ್ರವಾಸಿ ಸ್ಥಳಕ್ಕೆ ತೆರಳುವಲ್ಲಿ ಆ ಬೆಂಗಾಲಿ ಸುಂದರಿ ಜೊತೆಯಾಗುತ್ತಾಳೆ ಎನ್ನುವುದು ಆತನ ನೆನಪಿಗೆ ಬಂದು ಮತ್ತಷ್ಟು ಉಲ್ಲಸಿತನಾದ. ಜಾಧವ್ ಅವರು ಬಂದು ಎಲ್ಲರನ್ನೂ ಬಾಂಗ್ಲಾದೇಶದ ಪ್ರಸಿದ್ಧ ಸ್ಥಳ, ಹಿಂದೂ ದೇವಾಲಯವಾದ ಕಾಂತಾಜಿ ಟೆಂಪಲ್ ಗೆ ಕರೆದೊಯ್ಯಲಾಗುತ್ತದೆ ಎಂದು ಮಾಹಿತಿ ನೀಡಿ ಹೋದರು. ಟೀಮ್ ಆಟಗಾರರೆಲ್ಲ ಅದಕ್ಕಾಗಿ ತಯಾರಾದರು.
                   ಬಾಂಗ್ಲಾದೇಶದ ದಿನಾಜ್ ಪುರದಲ್ಲಿರುವ ಐತಿಹಾಸಿಕ ಹಿಂದೂ ದೇವಾಲಯ ಇದು. ಹಿಂದೂಗಳೇ ಅಧಿಕವಿರುವ ಬಾಂಗ್ಲಾದೇಶದ ಸ್ಥಳ ಇದು ಎಂದರೂ ತಪ್ಪಾಗಲಿಕ್ಕಿಲ್ಲ. ಭಾರತ ತಂಡದ ಆಟಗಾರರೆಲ್ಲ ಹಿಂದೂಗಳು ಎನ್ನುವ ಕಾರಣಕ್ಕೆ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿರಬೇಕು ಎಂದು ತರ್ಕಿಸಿದ ವಿನಯಚಂದ್ರ.
               ಮದ್ಯಾಹ್ನದ ವೇಳೆ ಎಲ್ಲರೂ ತಯಾರಾಗಿದ್ದರು. ಹೈಟೆಕ್ ಬಸ್ಸೊಂದು ಆಟಗಾರರನ್ನು ಕರೆದೊಯ್ಯಲು ಹೊಟೆಲ್ ಗೆ ಆಗಮಿಸಿತ್ತು. ವಿನಯಚಂದ್ರ ಲಗುಬಗೆಯಿಂದ ಬಸ್ಸನ್ನೇರಿದ. ಅಲ್ಲಿ ನಿಂತು ಬೆಂಗಾಲಿ ಸುಂದರಿಗಾಗಿ ಹುಡುಕಾಡಿದ. ಆದರೆ ಆಕೆ ಕಾಣಲಿಲ್ಲ. ಒಮ್ಮೆ ನಿರಾಸೆಯಾದಂತಾಯಿತು.
                 ಇನ್ನೇನು ಬಸ್ಸು ಹೊರಡಬೇಕು ಎನ್ನುವಷ್ಟರಲ್ಲಿ ಆಕೆ ಬಂದು ಬಸ್ಸನ್ನೇರಿದಳು. ವಿನಯಚಂದ್ರನ ಮುಖ ಹುಣ್ಣಿಮೆ ಚಂದ್ರನಂತೆ ಬೆಳಗಿತು.  ಅವಳನ್ನೇ ನೋಡಲು ಆರಂಭಿಸಿದ. ಆಕೆ ಮೊದಲಿಗೆ ಬಾಂಗ್ಲಾಶೈಲಿಯಲ್ಲಿ `ನಮೋಷ್ಕಾರ್..' ಎಂದವಳೇ `ನಾನು ಮಧುಮಿತಾ ಬಂಡೋಪಧ್ಯಾಯ.. ನಿಮ್ಮ ತಂಡದ ಮೇಲ್ವಿಚಾರಣೆಗಾಗಿ ನನ್ನನ್ನು ನೇಮಕ ಮಾಡಲಾಗಿದೆ. ನಿಮಗೆ ಬಾಂಗ್ಲಾದೇಶದಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು..' ಎಂದಳು.
ವಿನಯಚಂದ್ರನ ಮನಸ್ಸಿನಲ್ಲಿ ಮತ್ತೆ ತರಂಗಗಳು ಎದ್ದಿದ್ದವು. ಕವಿತೆಯೊಂದು ಸದ್ದಿಲ್ಲದಂತೆ ಹೊರಬರಲು ಸಜ್ಜಾದಂತಿತ್ತು.
ನಿನ್ನ ಸನಿಹವೆನ್ನ ಮನದ
ದುಗುಡ ದೂರ ಮಾಡಿದೆ... 
ಎನ್ನಲು ತವಕಿಸುತ್ತಿತ್ತು ಮನಸ್ಸು. ವಿನಯಚಂದ್ರನಿಗೆ ಖುಷಿಯೋ ಖುಷಿ. ಮೊದಲನೆಯದಾಗಿ ಆಕೆಯ ಹೆಸರು ಗೊತ್ತಾಯಿತಲ್ಲ ಎಂಬಿದಾದರೆ ಆಕೆ ಹಿಂದುವೂ ಹೌದು. ಬಂಡೋಪಾಧ್ಯಾಯ ಎಂದರೆ ಬೆಂಗಾಲಿ ಬ್ರಾಹ್ಮಣರಿರಬೇಕು ಎಂದುಕೊಂಡು ಮತ್ತಷ್ಟು ಸಂತಸಪಟ್ಟ.
                  ಆಕೆ ಮುಂದುವರಿಸಿದಳು `ನಾವು ಈಗ ಹೋಗುತ್ತಿರುವ ಸ್ಥಳ ಕಾಂತಾಜಿ ಟೆಂಪಲ್ ಅಂತ. ಢಾಕಾದಿಂದ ಸರಿಸುಮಾರು 7 ಗಂಟೆ 30 ನಿಮಿಷದ ಬಸ್ಸಿನ ಪಯಣ. 371 ಕಿ.ಮಿ ದೂರದಲ್ಲಿದೆ. ನಾವು ಈ ಮದ್ಯಾಹ್ನ ಹೊರಟವರು ಸಂಜೆಯಷ್ಟೊತ್ತಿಗೆ ಕಾಂತಾಜಿ ದೇವಸ್ಥಾನದಲ್ಲಿ ಇರುತ್ತೇವೆ. ಅಲ್ಲಿ ಸಂಜೆ ಉಳಿದು, ದೇವಸ್ಥಾನವನ್ನು ನಾಳೆ ನೋಡಿ ನಾಳೆ ಸಂಜೆಯೊಳಗಾಗಿ ಢಾಕಾಕ್ಕೆ ವಾಪಾಸಾಗುತ್ತೇವೆ.. ಬಾಂಗ್ಲಾದೇಶದಲ್ಲಿರುವ ಕೆಲವೇ ಕೆಲವು ವಿಶೇಷ, ವಿಶಿಷ್ಟ ಹಾಗೂ ಪ್ರಾಚೀನ ಹಿಂದೂ ದೇವಾಲಯಗಳಲ್ಲಿ ಇದೂ ಒಂದು. ಅಪರೂಪವಾದದ್ದು. ಕಾಂತಾಜಿ ದೇವಾಲಯ ನಿರ್ಮಾಣ ಆರಂಭವಾಗಿದ್ದು 1704ರಲ್ಲಿ. ಮಹಾರಾಜ ಪ್ರಾಣನಾಥ ಎಂಬಾತ ಈ ದೇವಾಲಯ ನಿರ್ಮಾಣವನ್ನು ಆರಂಭ ಮಾಡಿದ. 1722ರಲ್ಲಿ ಮಹಾರಾಜ ಪ್ರಾಣನಾಥನ ಮಹ ರಾಜಾ ರಾಮನಾಥ ಈ ದೇವಾಲಯ ಕಟ್ಟಡವನ್ನು ಪೂರ್ತಿಗೊಳಿಸಿದ. ಟೆರ್ರಾಕೋಟಾದ ವಾಸ್ತುಶಿಲ್ಪಕ್ಕೆ ಇದೊಂದು ಪ್ರಮುಖ ಉದಾಹರಣೆ ಎನ್ನಬಹುದು. 1897ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಬೀಕರ ಭೂಕಂಪದಲ್ಲಿ ಈ ದೇವಾಲಯ ಬಹುತೇಕ ಹಾಳಾಗಿತ್ತು. ಆದರೆ ಆ ನಂತರ ಇದನ್ನು ಮತ್ತೊಮ್ಮೆ ಮರು ನಿರ್ಮಾಣ ಮಾಡಲಾಗಿದೆ..' ಎಂದು ಮಧುಮಿತಾ ಹೇಳುತ್ತಿದ್ದರೆ ವಿನಯಚಂದ್ರ ಆಕೆಯ ಕಣ್ಣನ್ನು ತದೇಕಚಿತ್ತದಿಂದ ನೋಡುತ್ತಿದ್ದ.
                `ಬ್ರಿಟೀಷರ ಆಗಮನ, ಬ್ರೀಟಷರು ಭಾರತವನ್ನು ಆಕ್ರಮಿಸಿದ್ದು, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಪಡೆದರೂ ಬಾಂಗ್ಲಾದೇಶದ ಭಾಗ ಹಿಸೆಯಾಗಿದ್ದು, 1971ರಲ್ಲಿ ಪ್ರತ್ಯೇಕ ರಾಷ್ಟ್ರೋದಯ, ಹಿಂದೂಗಳ ಮೇಲೆ ಮಾರಣಹೋಮ ಇತ್ಯಾದಿಗಳನ್ನೆಲ್ಲ ಕಂಡರೂ ದೃಢವಾಗಿ ನಿಂತಿದೆ ಈ ದೇವಸ್ಥಾನ.. ಎಲ್ಲರೂ ಖುಷಿಯಿಂದ ನೋಡಿಕೊಂಡು ಬರೋಣ..' ಎಂದು ಮಧುಮಿತಾ ಹೇಳುತ್ತಿದ್ದರೆ ವಿನಯಚಂದ್ರ ಅವಳ ಮಾತಿನ ಮಧುರತೆಯಲ್ಲಿ ಕಳೆದೇ ಹೋದಂತಿದ್ದ.

(ಮುಂದುವರಿಯುತ್ತದೆ..)