Sunday, February 9, 2014

ಬ್ರಹ್ಮಚಾರಿಯ ಮಗಳು (ಕಥೆ)ಭಾಗ-2

                 ಅವಳು ನನ್ನನ್ನು ಸೀದಾ ತಮ್ಮ ಮನೆಗೆ ಕರೆದುಕೊಂಡು ಬಂದಳು. ಕಣ್ಣು ಕೆಂಪಾಗಿತ್ತಾದರೂ ಅದು ದುಃಖದಿಂದಲೋ ಅಥವಾ ಸಿಟ್ಟಿನಿಂದಲೋ ಎನ್ನುವುದು ನನ್ನ ಯೋಚನೆಗೆ ನಿಲುಕಲಿಲ್ಲ. ನಾನು ಮೌನದಿಂದ ಜೊತೆಗೆ ಬಂದಿದ್ದೆ. ಮನೆಗೆ ಬಂದವಳೇ ಮನೆಯ ಜಗುಲಿಯ ಮೇಲೆ ತನ್ನನ್ನು ಕುಕ್ಕರು ಬಡಿ ಎಂಬಂತೆ ಕುಳ್ಳಿರಿಸಿ ಒಳಹೋದಳು. ಒಂದರೆಘಳಿಗೆ ಪತ್ತೆಯಿರಲಿಲ್ಲ. ನನಗೆ ಆ ಸಮಯದಲ್ಲಿ ಉಂಟಾದ ನೀರವತೆ, ಮೌನವನ್ನು ಸಹಿಸಲು ಸಾಧ್ಯವಾಗಲಿಲ್ಲ. ಅವಳು ನನ್ನನ್ನು ಕುಳ್ಳಿರಿಸಿದ್ದ ಜಾಗದಲ್ಲಿಯೂ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಎದ್ದು ಜಗುಲಿಯಲ್ಲಿ ಓಡಾಡತೊಡಗಿದೆ.
                  ಜಗುಲಿಯ ಮೇಲೆ ಗೋಡೆಗೆ ವಿವಿಧ ಪೋಟೋಗಳನ್ನು ನೇತು ಹಾಕಲಾಗಿತ್ತು. ಹಳೆಯ ಕಾಲದಲ್ಲಿ ವರ್ಣಚಿತ್ರದಲ್ಲಿ ರಚಿಸಿದ್ದ ಹಿರಿಯರ ಚಿತ್ರಗಳು, ನಡುವಲ್ಲಿದ್ದ ಮುಂಡಿಗೆ ಕಂಭವೊಂದಕ್ಕೆ ಹಾಕಿದ್ದ ಕಟ್ಟಿನ ಸರ್ದಾರ್ ವಲ್ಲಭ ಭಾಯ್ ಪಟೇಲರದ್ದೊಂದು ಪೋಟೋ ಹಾಗೂ ನೇತಾಜಿಯವರ ಮಿಲಿಟರಿ ಉಡುಗೆಯ ಪೋಟೋಗಳು ಒಮ್ಮೆಗೆ ಸೆಳೆದಂತಾಯಿತು. ಅಂಬಿಕಾಳ ಅಪ್ಪನಿಗೆ ತೀರಾ ವಯಸ್ಸಾಗಿಲ್ಲ. ತೀರಾ ಸ್ವಾತಂತ್ರ್ಯ ಹೋರಾಟದ ಕಾಲದವರೂ ಅಲ್ಲ.  ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಸ್ವಾತಂತ್ರ್ಯ ಪಡೆದ ನಂತರ ಒಂದು ದಶಕದೀಚೆಗೆ ಹುಟ್ಟಿದವರಿರಬೇಕು ಅವರು. ಹಳೆ ಮನೆಯಲ್ಲಿ ಅವರು ಈ ಪೋಟೋ ಖಂಡಿತ ಹಾಕಿರಲು ಸಾಧ್ಯವಿಲ್ಲ. ಅಂಬಿಕಾಳ ತಂದೆಯ ಹಿರಿಯರ್ಯಾರೋ ಹಾಕಿದ್ದನ್ನು ಜೋಪಾನವಾಗಿ ಕಾಯ್ದಿಟ್ಟುಕೊಂಡು ಬಂದಿರಬೇಕು ಎಂದು ತರ್ಕಿಸಿದೆ.
                 ಅಷ್ಟರಲ್ಲಿ ಅಂಬಿಕಾ ತನ್ನ ತಂದೆಯೊಡನೆ ಬಂದಳು. ಬಂದವರೆ.. `ತಮಾ.. ಏನು ನಿನ್ನ ಕಥೆ..?..' ಎಂದರು. ನಾನು ಮಾತನಾಡುವುದರೊಳಗಾಗಿ `ಇದು ಹೀಗೇ ಆಗುತ್ತದೆ ಎಂದು ಗೊತ್ತಿತ್ತು.. ನೀನು ಆವತ್ತು ನಮ್ಮ ಮನೆಗೆ ಬಂದಿದ್ದಾಗಲೇ ಈ ವಿಷಯದ ಕುರಿತು ನಾನು ಸ್ಪಷ್ಟಪಡಿಸಬೇಕಿತ್ತು.. ಆದರೆ ನಾನು ಹಾಗೆ ಮಾಡಲಿಲ್ಲ ನೋಡು.. ಅದಕ್ಕೇ ಈಗ ನಿನ್ನಲ್ಲಿ ಅನುಮಾನ ಮೂಡಿದೆ..' ಎಂದು ನೇರವಾಗಿ ವಿಷಯವನ್ನು ನನ್ನ ಬಳಿ ಹೇಳಿದ್ದರು.
                ನಾನು ಅವರ ಮುಖವನ್ನೊಮ್ಮೆ ಅಂಬಿಕಾಳ ಮುಖವನ್ನೊಮ್ಮೆ ನೋಡಿದೆ. ಅವಳು ಬೇರೆಲ್ಲೋ ದೃಷ್ಟಿಯನ್ನು ಹಾಯಿಸಿದ್ದಳು. ಮೊಟ್ಟ ಮೊದಲ ಬಾರಿಗೆ ನಾನು ಕೇಳಬಾರದ್ದನ್ನು ಕೇಳಿದೆನೇ ಎನ್ನಿಸಿತು. `ಅದು.. ಅದು.. ನನ್ನ ಪ್ರಶ್ನೆ ಅದಲ್ಲ..' ಎಂದು ನನ್ನೊಳಗಿದ್ದ ವಿಷಯವನ್ನು ಸ್ಪಷ್ಟಪಡಿಸಲು ಯತ್ನಿಸಿದೆ.
               `ನಿನ್ನ ವಿಷಯ ನನಗೆ ಅರ್ಥವಾಗುತ್ತದೆ. ನಿನ್ನೊಳಗಿನ ಗೊಂದಲವೂ ನನಗೆ ಗೊತ್ತಾಗುತ್ತದೆ.. ನೀನು ಮತ್ತಷ್ಟು ಸಮಸ್ಯೆಗೆ ಒಳಗಾಗಿ ತೊಳಲುವ ಮೊದಲು ನಾನೇ ಹೇಳಿಬಿಡ್ತೆನೇ..' ಎಂದವರೇ ಬ್ರಹ್ಮಚಾರಿಯ ಮಗಳು ಎಂದು ಅಂಬಿಕಾಳನ್ನು ಕರೆಯುತ್ತಿದ್ದುದರ ಹಿಂದಿನ ಗುಟ್ಟನ್ನು ನನ್ನ ಬಳಿ ಹೇಳಲು ಮುಂದಾದರು.

**
               ನಾನು ಹೇಳುವುದು ಹೆಚ್ಚೂ ಕಡಿಮೆ 1980ರ ದಶಕದಲ್ಲಿ ನಡೆದಿದ್ದು ಎಂದರೆ ನಿನ್ನ ಅರಿವಿಗೆ ನಿಲುಕುವುದಿಲ್ಲ ಬಿಡು. ನಾನು ಆಗ ನಿನ್ನಂತೆ ಹೈದ. ಈಗಿನಂತೆ ವಯಸ್ಸಾದ ಕುರುಹನ್ನು, ನೆರಿಗೆಗಟ್ಟಿದ ಮುಖವನ್ನೂ ಗುಳಿಬಿದ್ದ ಕಣ್ಣನ್ನೂ ನೀನು ಕಲ್ಪಿಸಿಕೊಳ್ಳಲೂ ಸಾಧ್ಯವೇ ಇಲ್ಲ ಬಿಡು. ನಾನು ಆಗಿನ ಕಾಲದಲ್ಲಿಯೇ ಕಾಲೇಜು ಮೆಟ್ಟಿಲನ್ನು ಹತ್ತಿದವನು. ನೀವು ಹೋಗುತ್ತಿದ್ದೀರಲ್ಲಾ.. ಅದೇ ಕಾಲೇಜು ನನ್ನದು. ಆದರೆ ಈಗಿನ ಹಾಗೆ ಆಧುನಿಕತೆಯ ಕುರುಹು ಇರಲಿಲ್ಲವಾಗಿದ್ದರೂ ಆಗಿನ ಝಲಕು ಬೇರೆಯ ರೀತಿಯೇ ಇತ್ತು. ನಮ್ಮ ಜಮಾನಾದ ಕಾಲೇಜನ್ನು ನೆನಪು ಮಾಡಿಕೊಂಡರೆ ನಿಮ್ಮದೆಲ್ಲ ಏನಿಲ್ಲ ಬಿಡು.
               ನಾನು ಕಾಲೇಜಿನ ಎರಡನೇ ವರ್ಷದ ಡಿಗ್ರಿಯಲ್ಲಿ ಓದುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದಾಕೆಯೇ ಅವಳು. ಆಗಿನ ಕಾಲದಲ್ಲಿ ನಮ್ಮ ಕಾಲೇಜಿನಲ್ಲಿ ಹಲವರು ರೂಪಸಿಯರಿದ್ದರು. ಇವಳೂ ಅವಳ ಸಾಲಿಗೆ ಸೇರಬಹುದಾಗಿತ್ತು. ಅವಳನ್ನು ನಾನು ನೋಡಲು ಒಂದೆರಡು ತಿಂಗಳುಗಳೇ ಬೇಕಾಗಿತ್ತು. ಗೆಳೆಯರೆಲ್ಲ ಇವಳನ್ನು ಉದ್ದ ಜಡೆಯ ಸುಂದರಿ ಎಂದು ಹೇಳುತ್ತಿದ್ದರು. ನಾನು ಅವಳನ್ನು ನೋಡಿದಾಗಲೆಲ್ಲ ಅವಳ ಉದ್ದ ಜಡೆ ಮಾತ್ರ ನನ್ನ ಕಣ್ಣಿಗೆ ಬೀಳುತ್ತಿತ್ತು. ಅದೆಷ್ಟೋ ಸಾರಿ ನಾನು ಅವಳ ಮುಖವನ್ನು ನೋಡಬೇಕು ಎಂದುಕೊಂಡಿದ್ದೆ. ಆಗೆಲ್ಲ ಅದು ಯಾವ್ಯಾವುದೋ ಕಾರಣಗಳಿಂದಾಗಿ ಸಾಧ್ಯವಾಗುತ್ತಲೇ ಇರಲಿಲ್ಲ. ಕೊನೆಗೊಮ್ಮೆ ಸಿಕ್ಕಳು. ಅವಳ ಸಿಕ್ಕ ದಿನ ಇಂತದ್ದೇ ವಿಶೇಷ ಘಟನೆ ಜರುಗಿತು ಎನ್ನಲಾರೆ. ನನಗೆ ಅವಳ ಮುಖ ಕಂಡಿತು ಎನ್ನುವುದೇ ವಿಶೇಷ ಸಂಗತಿ. ಅಪರೂಪಕ್ಕೆ ಎದೆಯಲ್ಲಿ ರೋಮಾಂಚನ. ಉದ್ದ ಜಡೆಯ ಸುಂದರಿ ನಿಜಕ್ಕೂ ಚನ್ನಾಗಿದ್ದಳು. ಬೆಳ್ಳಗಿದ್ದಳು. ಮನಮೋಹಕವಾಗಿದ್ದಳು.
                 ಇಂದಿನ ಜಮಾನಾದ ನೀವಾದರೆ `ಲವ್ ಎಟ್ ಫಸ್ಟ್ ಸೈಟ್..' ಎನ್ನುತ್ತೀರಲ್ಲ. ಅದೇ ರೀತಿ. ನನಗೂ ಹಾಗೆಯೇ ಆಯಿತು. ನಾನು ಒಂದೇ ನೋಟದಲ್ಲಿ ಮೆಚ್ಚಿದೆ. ಎದೆಯೊಳಗೆ ಪುಕ ಪುಕವಾದರೂ ಹೋಗಿ ಮಾತನಾಡಿಸಿದೆ. ಅವಳೂ ಮಾತನಾಡಿದಳು. ನೆಪಕ್ಕೆ ನಮ್ಮ ಪರಿಚಯವಾದಂತಾಯಿತು. ನಂತರ ನಾವು ಆತ್ಮೀಯರಾದೆವು. ನಾವು ಆತ್ಮೀಯರಾಗಲು ಇಂತಹ ಕಾರಣಗಳೆಂಬುದಿರಲಿಲ್ಲ. ಆಕೆ ನನ್ನ ಬಳಿ ಆತ್ಮೀಯಳಾಗಿದ್ದನ್ನು ಕಂಡು ಹೊಟ್ಟೆಉರಿ ಪಟ್ಟುಕೊಂಡರು. ಆದರೆ ಅವರ ಹೊಟ್ಟೆಯುರಿ ನಮ್ಮ ಆತ್ಮೀಯತೆಗೆ ಭಂಗ ತರಲಿಲ್ಲ. ಹೀಗೆ ಒಂದು ಸಂದರ್ಭದಲ್ಲಿ ನನಗೆ ಆಕೆಯ ಮೇಲೆ ಪ್ರೀತಿ ಬೆಳೆಯಿತು. ಆದರೆ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಅವಳನ್ನು ಪ್ರೀತಿಸುತ್ತಿದ್ದ ಸಂಗತಿ ನನ್ನ ತಂಗಿಗೆ ಗೊತ್ತಿತ್ತು. ಒಂದಿನ ಆಕೆ ಹೋಗಿ ಅವಳ ಬಳಿ ಹೇಳಿದಳು. ಇದರಿಂದ ಆಕೆ ಮೊದಲು ರೇಗಾಡಿದಳಂತೆ. ಆದರೆ ನಂತರ ಒಪ್ಪಿಕೊಂಡಳು. ನಿರಂತರ ಮೂರ್ನಾಲ್ಕು ವರ್ಷ ನಾವು ಪ್ರೀತಿಸಿದ್ದೆವು.
                 ಆ ದಿನಗಳಲ್ಲಿ ನಾನು ಬಹಳ ಕಷ್ಟಕ್ಕೆ ಸಿಲುಕಿಕೊಂಡಿದ್ದೆ. ಜೀವನ ನಿರ್ವಹಣೆ ತೊಂದರೆಯಲ್ಲಿತ್ತು. ನನ್ನ ಬಳಿ ಅವಳು ತನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದಳು. ನಾನು ನನ್ನ ಪರಿಸ್ಥಿತಿಯನ್ನು ಅವಳಿಗೆ ತಿಳಿಸಿ ಈಗ ಕಷ್ಟ. ಇನ್ನೊಂದು ವರ್ಷ ಕಾಯೋಣ ಅಂದೆ.
ಅದಕ್ಕವಳು ಇಲ್ಲ ಕಣೋ.. ನಮ್ಮ ಮನೆಯಲ್ಲಿ ನನಗೆ ಗಂಡು ಹುಡುಕುತ್ತಿದ್ದಾರೆ ಎಂದಳು.
`ನಾನು ಹೇಗಾದರೂ ಮಾಡಿ ಮನೆಯಲ್ಲಿ ಕೇಳು..' ಅಂದೆ
`ಹುಲಿಯಂತ ನಮ್ಮಪ್ಪ.. ಭಯವಾಗುತ್ತೆ..'
`ನಾನು ಬಂದು ಕೆಳಲಾ..?'
`ಬೇಡ.. ಬಾರಾಯಾ.. ಆ ಕೆಲಸವನ್ನು ಮಾಡಿಬಿಡಬೇಡ.. ಸ್ವಲ್ಪ ದಿನ ಹೇಗೋ ಕಾಲತಳ್ತೀನಿ.. ಒಂದ್ನಾಲ್ಕು ತಿಂಗಳು ಮುಂದೂಡಬಹುದು.. ಆದರೆ ನೀನು ಬೇಗ ನಿನ್ನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬೇಕು..'
`ಅಷ್ಟಾದರೂ ಸಮಯ ಕೊಟ್ಯಲ್ಲಾ ಮಾರಾಯ್ತಿ.. ಥ್ಯಾಂಕ್ಯೂ..'
                 ಇಷ್ಟಾದ ಮೇಲೆ ಒಂದೆರಡು ತಿಂಗಳು ನನ್ನ ಜೀವನದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವಲ್ಲಿಯೇ ಕಳೆದುಹೋಯಿತು. ಆ ಸಂದರ್ಭದಲ್ಲಿ ಅವಳನ್ನು ಮಾತನಾಡಿಸಲೂ ಸಮಯ ಸಿಗಲಿಲ್ಲ. ನನಗೂ ಅವಳಿಗೂ ಭೇಟಿಯೇ ಆಗುತ್ತಿರಲಿಲ್ಲ. ಅಷ್ಟು ಒತ್ತಡದಲ್ಲಿ ಕಳೆದುಹೋಗಿದ್ದೆ.  ಬದುಕಿನ ಅರಲು ಗದ್ದೆಯಲ್ಲಿ ಕಾಲು ಹೂತು ಬೀಳುತ್ತಿದ್ದಾಗ ಕಷ್ಟಪಟ್ಟು ಎತ್ತಿ ಎತ್ತಿ ಹೆಜ್ಜೆ ಹಾಕಲು ಯತ್ನಿಸುತ್ತಿದ್ದೆ. ಹೀಗಿದ್ದಾಗ ಒಂದಿನ ಯಾರೋ ಅಂದರು `ನೀನು ಪ್ರೀತಿಸ್ತಾ ಇದ್ದೆಯಲ್ಲ ಹುಡುಗಿ ಅವಳಿಗೆ ಮದುವೆ ಆಯ್ತು..' ಅಂತ..
                ನನಗೆ ದಿಘ್ಭ್ರಮೆ, ಭಯ, ಆತಂಕ ಎಲ್ಲ ಒಟ್ಟೊಟ್ಟಿಗೆ ಆಯಿತು. ಮನಸ್ಸು ಕಸಿವಿಸಿಗೊಂಡಿತು. ಏನೂ ಮಾಡಲಾರೆ.. ಏನೋ ಹೇಳಲಾರೆ.. ಮನಸ್ಸು ಕತ್ತಲು ಕತ್ತಲಂತೆ ಭಾಸವಾಯಿತು. ಅವಳ ಮನೆಗೆ ಹೋಗಿ ಕೂಗಾಡಿ, ರೇಗಾಡಿ ಬರುವ ಅನ್ನಿಸಿತು. ಹೇಗೋ ತಡೆದುಕೊಂಡೆ. ಆಕೆ ನನ್ನ ಮನಸ್ಸಿನಲ್ಲಿ ಆರದ ಗಾಯವನ್ನು ಮಾಡಿ ಹೋಗಿದ್ದಳು. ಇನ್ನೊಂದು ಸ್ವಲ್ಪ ಸಮಯವಿದೆ ಎಂದ ಅವಳು ಕಾರಣವನ್ನು ಹೇಳದೇ ಹೊರಟು ಹೋಗಿದ್ದಳು. ಅವಳ ತಪ್ಪಾ, ಅವಳ ಅಪ್ಪನ ಬಲವಂತಾ..? ತೋಚಲಿಲ್ಲ. ಅವಳು ಹೇಳದೇ ಹೋಗಿದ್ದಳು. ಕಾರಣ ಹೇಳಿ ಹೋಗಿದ್ದರೂ ಇಷ್ಟು ಬೇಜಾರಾಗುತ್ತಿರಲಿಲ್ಲವೇನೋ.. ನಾಲ್ಕೈದು ತಿಂಗಳುಗಳೇ ಬೇಕಾದವು ಅವಳ ಧೋಖಾವನ್ನು ನಾನು ಮೆಟ್ಟಿ ನಿಲ್ಲಲು. ಅವಳಿಗಿಂತ ಹೊರತಾದ ಬದುಕು ಇದೆ ಎಂದು ಅನ್ನಿಸಲಾರಂಭವಾಗಿತ್ತು. ಅವಳೆದುರು ನಾನೂ ಯಾಕೆ ಅವಳಿಗಿಂತ ಚನ್ನಾಗಿ, ಆದರ್ಶವಾಗಿ ಬದುಕಬಾರದು ಎಂದುಕೊಂಡೆ. ನಾನಾಗಲೇ ನಿರ್ಧಾರ ಮಾಡಿದೆ. ಅವಳೆದುರು ಅವಳಿಗಿಂತ ಚನ್ನಾಗಿ ಬದುಕ ಬೇಕೆಂದು. ಅದಕ್ಕೇ ಆ ಕ್ಷಣವೇ ನಾನು ಜೀವನದಲ್ಲಿ ಮದುವೆಯಾಗಬಾರದು ಎಂಬ ನಿರ್ಧಾರಕ್ಕೆ ಬಂದೆ. ಇದುವರೆಗೂ ನನ್ನ ಬದುಕಿನಲ್ಲಿ ಇನ್ನೊಬ್ಬಳನ್ನು ನನ್ನ ಪ್ರೇಮಿಯಾಗಿ ಕಂಡಿಲ್ಲ. ನನ್ನ ಪಾವಿತ್ರ್ಯತೆಯನ್ನು ಹಾಳುಮಾಡಿಕೊಂಡಿಲ್ಲ. ಜನರು ನನ್ನ ಬಗ್ಗೆ ನಾನಾ ರೀತಿ ಹೇಳುತ್ತಾರಾದರೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ಇಂವನೇನೋ ಹುಚ್ಚು ಆದರ್ಶದ ಹಾದಿ ಹಿಡಿದು ಹೋದ. ಪಿರ್ಕಿಯಿರಬೇಕು ಎಂದುಕೊಂಡರು.  ಆದರೆ ನಾನು ಅದಕ್ಕೆ ಸೊಪ್ಪು ಹಾಕಲಿಲ್ಲ. ಕೊನೆಗೆ ಅನಾಥಾಶ್ರಮದಿಂದ ಹೋಗಿ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ಬಂದೆ. ಅವಳಿಗೆ ನನ್ನನ್ನು ಬಿಟ್ಟುಹೋದ ಹುಡುಗಿಯ ನೆನಪಿಗಾಗಿ ಅಂಬಿಕಾ ಎಂಬ ಹೆಸರನ್ನಿಟ್ಟೆ. ಅಂದಹಾಗೆ ನಾನು ಪ್ರಿತಿಸಿದ್ದ ಹುಡುಗಿಯ ಹೆಸರು ನಿಂಗೆ ಹೇಳಲಿಲ್ಲ ಅಲ್ವಾ.. ಹೌದು.. ಅವಳ ಹೆಸರು ಅಂಬಿಕಾ ಅಂತಲೇ ಆಗಿತ್ತು. ಅಂಬಿಕಾಳ ನೆನಪಿಗಾಗಿಯೇ ಈ ನನ್ನ ಮಗಳಿಗೂ ಆ ಹೆಸರನ್ನೇ ಇಟ್ಟಿದ್ದೇನೆ. ಅವಳೇ ಈ ಹುಡುಗಿ ಎಂದು ಅಂಬಿಕಾಳನ್ನು ತೋರಿಸಿದ ಅವಳಪ್ಪ.
                     `ನಾನು ಪ್ರೀತಿಸಿದ ಹುಡುಗಿಗೆ ದಕ್ಕಿದ ಪ್ರೀತಿಗಿಂತ ಹೆಚ್ಚು ಇವಳಿಗೆ ಸಿಕ್ಕಿದೆ. ನಾನು ಒಳ್ಳೆಯ ಪ್ರೇಮಿಯಾಗಲಿಲ್ಲವೇನೋ ಎಂಬ ಭಾವ ಕಾಡುತ್ತಿತ್ತು. ಆದರೆ ಇವಳನ್ನು ಸಾಕಿ ಒಳ್ಳೆಯ ಅಪ್ಪನಂತೂ ಆಗಿದ್ದೇನೆ. ಈಗ ಹೇಳು.. ಬ್ರಹ್ಮಚಾರಿಗೆ ಮಕ್ಕಳಿರಬಾರದಾ..? ಬ್ರಹ್ಮಚಾರಿಯ ಮಗಳು ಎಂದರೆ ಯಾಕೆ ತಪ್ಪಾಗಿಯೇ ನೋಡಬೇಕು..? ಎಲ್ಲರಂತೆ ನೀನೂ ಆಲೋಚನೆಯನ್ನೇಕೆ ಮಾಡಿಬಿಟ್ಟೆ..? ನೀನು ಎಲ್ಲರಂತಲ್ಲ.. ಏನೋ ಅಂದುಕೊಂಡಿದ್ದೆ. ಆದರೆ ಏನೂ ಇಲ್ಲವಲ್ಲ ನೀನು' ಎಂದು ಕೇಳಿದರು.
                  ಅವರ ಮಾತು ನನ್ನ ಮನಸ್ಸನ್ನು ಇರಿಯಲಾರಂಭಿಸಿತ್ತು. ನನಗೆ ಏನು ಮಾತಾಡಬೇಕೆಂಬುದು ತೋಚಲಿಲ್ಲ. ಸುಮ್ಮನುಳಿದೆ. ಅಂಬಿಕಾಳ ತಂದೆ ನನ್ನ ಮೌನವನ್ನು ಏನೆಂದುಕೊಂಡರೋ..? ಅರ್ಥವಾಗಲಿಲ್ಲ. ತಪ್ಪಿತಸ್ಥ ಭಾವನೆ ನನ್ನನ್ನು ಕಾಡುತ್ತಿತ್ತು. ಅವರು ನಿಟ್ಟುಸಿರು ಬಿಟ್ಟು ತಮ್ಮ ದೊಡ್ಡ ಮನೆಯ ಚಿಕ್ಕ ಬಾಗಿಲನ್ನು ದಾಟಿ ಒಳಹೋದರು. ಮತ್ತೊಮ್ಮೆ ನಾನೆಂತ ತಪ್ಪು ಮಾಡಿಬಿಟ್ಟೆನಲ್ಲಾ ಛೀ.. ಎಂದುಕೊಂಡೆ.. ಅಂಬಿಕಾಳ ಅಪ್ಪನ ಬಗ್ಗೆ ಹೆಮ್ಮೆಯೂ ಮೂಡಿತು.

**
              `ಅಂಬಿಕಾ.. ಪ್ಲೀಸ್.. ಕ್ಷಮಿಸು ಮಾರಾಯ್ತಿ.. ನಂಗೆ ಗೊತ್ತಾಗಲಿಲ್ಲ.. ಅನುಮಾನಿಸಿದೆ.. ನಿಜಕ್ಕೂ ಹೀಗಾಗಿರಬಹುದು ಎನ್ನುವ ಚಿಕ್ಕ ಸುಳಿವೂ ಸಿಗಲಿಲ್ಲ. ಈ ನಿಟ್ಟಿನಲ್ಲಿ ನಾನು ಆಲೋಚಿಸಲೂ ಇಲ್ಲ.. ಯಾರೋ ಏನೋ ಹೇಳಿದರು ಅಂತ ಅವರ ಮಾತನ್ನು ಕೇಳಿದೆ. ಇನ್ನು ಮುಂದೆ ಯಾವತ್ತೂ ನಿನ್ನನ್ನು ಅನುಮಾನಿಸೋದಿಲ್ಲ. ನಿನ್ನ ಮೇಲಾಣೆ...' ನಾನು ಅಂಬಿಕಾಳ ಬಳಿ ಗೋಗರೆದೆ.
              `ಸಾಕು.. ಸಾಕು... ಈಗ ನೀನು ಮಾಡಿದ್ದೆ ಸಾಕು ಮಾರಾಯಾ.. ನಾನೆಂತಾ ನಿಷ್ಕಲ್ಮಶವಾಗಿ ನಿನ್ನನ್ನು ಪ್ರೀತಿಸಿದ್ದೆ.. ಯಾರೋ ಬ್ರಹ್ಮಚಾರಿಯ ಮಗಳು ಅಂದರಂತೆ.. ನೀನು ಬಂದು ಕೇಳಿದೆಯಂತೆ.. ಎಂತಾವ್ಯಕ್ತಿತ್ವ ನಿಂದು..? ನಿನ್ನಿಂದ ನಾನು ಇಂತಹ ಮಾತುಗಳನ್ನು ಖಂಡಿತ ನಿರೀಕ್ಷೆ ಮಾಡಿರಲಿಲ್ಲ. ನಾನೆಲ್ಲಾದರೂ ನಿನ್ನ ಹಿನ್ನೆಲೆಯ ಬಗ್ಗೆ ಅಥವಾ ನಿನ್ನವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದೆನಾ..? ಆ ಬಗ್ಗೆ ಒಂದೇ ಒಂದಕ್ಷರ ಕೇಳಿರಲಿಲ್ಲ.  ಆದರೂ ನಿನ್ನಿಂದ ಇಂತಹ ಮಾತುಗಳು.. ನೀನು ನನ್ನನ್ನು ನಿಷ್ಕಲ್ಮಷವಾಗಿ ಪ್ರೀತಿಸಿದ್ದೆ ಅನ್ನುವುದನ್ನು ಹೇಗೆ ನಾನು ನಂಬಬೇಕು..? ಬೇಡ... ನನಗೆ ಇಂಥ ಪ್ರಿತಿ ಬೇಡವೇ ಬೇಡ. ನಾನು ನಿನ್ನನ್ನು ಇಷ್ಟು ದಿನ ಪ್ರೀತಿಸಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಇಂತವನನ್ನು ಪ್ರೀತಿಸಿದೆನಾ ಎಂದೂ ಅನ್ನಿಸಲು ಆರಂಭಿಸಿದೆ. ಕೊನೆಯದಾಗಿ ಹೇಳುತ್ತಿದ್ದೇನೆ. ಇನ್ನು ಮುಂದೆ ನೀನು ನನಗೆ ಮುಖ ತೋರಿಸಬೇಡ. ಐ ಹೇಟ್ ಯೂ.. ಗುಡ್ ಬಾಯ್...' ಎಂದು ಹೇಳಿದ ಅವಳ ಮುಖ ಕೆಂಪಾಗಿ ದೇಹ ಥರಗುಡುತ್ತಿತ್ತು. ನಾನು ಮಾತಿಲ್ಲದೇ ಅವಳನ್ನು ಬೀಳ್ಕೊಟ್ಟಿದ್ದೆ.   ಬ್ರಹ್ಮಚಾರಿಯ ಮಗಳು ಗ್ರೇಟ್ ಅಷ್ಟೇ ಅಲ್ಲ ಮತ್ತಷ್ಟು ಒಗಟಾಗಿದ್ದಳು. ಅವಳೆಡೆಗೆ ನನ್ನ ಮನಸ್ಸು ಹೆಮ್ಮೆಯನ್ನು ಪಡುತ್ತಿತ್ತು.

**
(ಮುಗಿಯಿತು)

Saturday, February 8, 2014

ನನ್ನೆದೆಯ ಗುಡಿಯೊಳಗೆ

ನನ್ನೆದೆಯ ಗುಡಿಯೊಳಗೆ
ನಿನ್ನ ರೂಪವ ನಿಲಿಸಿ
ಆರಾಧನೆಯ ಸಲಿಸಿ
ಬದುಕು ನಡೆಸಿರುವೆ ||

ಮನದ ಸವಿ ಬಟ್ಟಲಲಿ
ನಿನ್ನ ಬಿಂಬದ ಹಾಲ
ಮಧುರಾಮೃತವೆ ಎಂದು
ಹಿಡಿದು ನಲಿದಿರುವೆ ||

ನಿನ್ನೊಡಲ ಕಂಗಳಿಗೆ
ನಾ ಮಿಡಿವ ರೆಪ್ಪೆಗಳು,
ನಿನ್ನೊಡಲ ಕಾಂತಿಯನು
ನಾ ಮೆರೆಸುತಿರುವೆ ||

ನಿನ್ನುಸಿರೆ ನನ್ನುಸಿರು
ಮನದಿ ನಿನ್ನದೆ ಹೆಸರು
ನನ್ನ ನೀ ಮರೆತಿರಲು
ನಾ ಪ್ರಾಣ ಬಿಡುವೆ ||

**
(ಈ ಕವಿತೆಯನ್ನು ಬರೆದಿದ್ದು 06-09-2007ರಲ್ಲಿ ದಂಟಕಲ್ಲಿನಲ್ಲಿ)
(ಈ ಕವಿತೆಯು ಮೆ.31, 2009ರ ಕರ್ಮವೀರ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ)
(ಸಹೋದರಿ ಸುಪರ್ಣ ದಂಟಕಲ್, ಪೂರ್ಣಿಮಾ ಹೆಗಡೆ ಹಾಗೂ ಸಹೋದರ ಗಿರೀಶ್ ಕಲ್ಲಾರೆ ಅವರುಗಳು ಈ ಕವಿತೆಗೆ ರಾಗ ಹಾಕಿ ಹಾಡಲು ಪ್ರಯತ್ನಿಸಿದ್ದಾರೆ. ಅವರಿಗೆ ಧನ್ಯವಾದಗಳು)

Friday, February 7, 2014

ಬೆಂಗಾಲಿ ಸುಂದರಿ-6


               ಮರುದಿನ ಮುಂಜಾನೆ 4 ಗಂಟೆಗೆ ವಿಮಾನದ ಮೂಲಕ ಬಾಂಗ್ಲಾದೇಶದ ರಾಜಧಾನಿ ಢಾಕಾಕ್ಕೆ ಹೋಗುವುದೆಂಬ ನಿರ್ಣಯವಾಗಿತ್ತು. ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯದಲ್ಲಿರುವ ಕ್ರೀಡಾ ಗ್ರಾಮದಲ್ಲಿ ಕಬ್ಬಡ್ಡಿ ವಿಶ್ವಕಪ್ ನಡೆಯಲಿತ್ತು. ಕಬ್ಬಡ್ಡಿ ವಿಶ್ವಕಪ್ಪಿಗಾಗಿ `ಎ' ಮತ್ತು `ಬಿ' ಎಂಬ ಎರಡು ಗುಂಪನ್ನು ಮಾಡಲಾಗಿತ್ತು. ವಿಶ್ವಚಾಂಪಿಯನ್ ಪಟ್ಟ ಹಾಗೂ ನಂಬರ್ 1 ಎಂಬ ರಾಂಕಿನಲ್ಲಿರುವ ಭಾರತ `ಎ' ಗುಂಪಿನ ಮೊದಲ ಸ್ಥಾನದಲ್ಲಿತ್ತು. ಮೂರನೇ ರಾಂಕಿನ ಪಾಕಿಸ್ತಾನ, ಐದನೇ ರಾಂಕಿನ ಉಕ್ರೇನ್, ಏಳನೆ ರಾಂಕಿನ ಕೆನಡಾ, ಒಂಭತ್ತನೇ ರಾಂಕಿನ ಚೀನಾಗಳು ಇದೇ ಗ್ರೂಪಿನಲ್ಲಿದ್ದವು. ಜೊತೆಯಲ್ಲಿ ಥೈಲ್ಯಾಂಡ್, ಸೌಥ್ ಕೋರಿಯಾ ಹಾಗೂ ನ್ಯೂಝಿಲ್ಯಾಂಡ್ ತಂಡಗಳೂ `ಎ'ಗ್ರೂಪಿನಲ್ಲಿದ್ದವು.
                 `ಬಿ' ಗುಂಪಿನಲ್ಲಿ ಬಾಂಗ್ಲಾದೇಶದ ಜೊತೆಗೆ ಇರಾನ್, ಚೈನೀಸ್ ತೈಪೇ, ಮಲೇಶಿಯಾ, ನೇಪಾಳ ತಂಡಗಳು ಪ್ರಮುಖವಾಗಿದ್ದವು. ಅವುಗಳ ಜೊತೆಯಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ಶ್ರೀಲಂಕಾಗಳಿದ್ದವು. ಭಾರತದ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ಉಕ್ರೇನ್ ತಂಡಗಳು ಭಲಿಷ್ಟವಾಗಿದ್ದವು. ಈ ತಂಡಗಳ ಎದುರು ಜಿದ್ದಿನ ಆಟವನ್ನು ನಿರೀಕ್ಷೆ ಮಾಡಲಾಗುತ್ತಿತ್ತು. ತಂಡದ ತರಬೇತುದಾರರೂ ಈ ಕುರಿತು ಹೆಚ್ಚಿನ ಸಲಹೆಗಳನ್ನು ನೀಡಿದ್ದರು. ಆಟ ರೋಚಕವಾಗಲಿದೆ ಎನ್ನುವುದರ ಸುಳಿವನ್ನು ಈ ಗುಂಪುಗಳೇ ನೀಡುತ್ತಿದ್ದವು.
                  ವಿನಯಚಂದ್ರ ಮರುದಿನ ಮುಂಜಾನೆ ಹೊರಡಬೇಕಾಗುತ್ತದೆ ಎಂದು ತನ್ನ ಲಗೇಜುಗಳನ್ನೆಲ್ಲ ತುಂಬಿಟ್ಟುಕೊಂಡಿದ್ದ. ರೂಮಿನ ಜೊತೆಗಾರ ಸೂರ್ಯನೂ ಕೂಡ ತನ್ನ ಬಟ್ಟೆ ಬರೆಗಳನ್ನೆಲ್ಲ ತುಂಬಿಕೊಂಡಿದ್ದ. ಸೂರ್ಯನ್ ಬಾಂಗ್ಲಾದೇಶದ ಕುರಿತು ಮಾಹಿತಿ ನೀಡುವ ಸಿಡಿಯಲ್ಲಿ ಬೆಂಗಾಲಿ ಹುಡುಗಿಯರನ್ನು ನೋಡಿದ ನಂತರ ಮರುಳನಂತೆ ಆಡುತ್ತಿದ್ದ. ಮಾತೆತ್ತಿದರೆ  `ಮಗಾ.. ಯಾರಾದರೂ ಬೆಂಗಾಲಿ ಹುಡುಗಿಯನ್ನು ಬಲೆಗೆ ಬೀಳಿಸಿಕೊಂಡು ಹಾರಿಸಿಕೊಂಡು ಬರಬೇಕು ಕಣೋ.. ಬಹಳ ಮನಸ್ಸಿಗೆ ಇಷ್ಟವಾಗಿದ್ದಾರೆ. ಹೃದಯ ಕದ್ದುಬಿಟ್ಟಿದ್ದಾರೆ ಮಾರಾಯಾ' ಎಂದು ಬಡಬಡಿಸುತ್ತಿದ್ದ.
                 `ಅಯ್ಯೋ ಮಳ್ಳೆ.. ಹಾಗೆಲ್ಲಾದರೂ ಮಾಡಿಬಿಟ್ಟೀಯಾ.. ಹುಷಾರು ಮಾರಾಯಾ.. ನಮಗೆ ವಾಪಾಸು ಬರಲಿಕ್ಕೆ ಸಾಧ್ಯವಾಗದಂತೆ ಮಾಡಿಬಿಟ್ಟಾರು.. ಅಂತಹ ಭಾನಗಡಿ ಮಾಡಬೇಡವೋ.. ' ಎಂದು ವಿನಯಚಂದ್ರ ಮಾರುತ್ತರ ನೀಡಿದ್ದ.
                  `ಹೇ ಹೇ.. ಬಾಂಗ್ಲಾದೇಶಿಯರಿಗೆ ಗೊತ್ತಾಗದಂತೆ ಎತ್ತಾಕ್ಕೊಂಡು ಬರ್ತೇನೆ ನೋಡ್ತಾಯಿರು..'
                  `ಹೋಗೋ.. ಹೋಗೋ.. ಬೊಗಳೆ ಕೊಚ್ಚಬೇಡ.. ಬರೀ ಇದೆ ಆಯ್ತು.. ಬಾಂಗ್ಲಾದಲ್ಲಿ ಹುಡುಗಿಯರನ್ನು ಹೊರತು ಪಡಿಸಿದಂತೆ ಬೇಕಾದಷ್ಟು ವಿಷಯಗಳಿವೆ ಮಾರಾಯಾ.. ಅದರ ಬಗ್ಗೆ ಮಾತನಾಡು...'
                  `ಊಹೂ.. ನನಗೆ ಹುಡುಗಿಯರ ವಿಷಯ ಬಿಟ್ಟು ಬೇರೇನೂ ತಲೆಗೆ ಹೋಗುವುದೇ ಇಲ್ಲ.. ಜಗತ್ತಿನ ಪರಮ ಆಕರ್ಷಣೀಯ ಅಂಶ, ವ್ಯಕ್ತಿಗಳು ಅಂದರೆ ನನಗೆ ಹುಡುಗಿಯರು...ಮತ್ತಿನ್ಯಾವ ವಿಷಯವೂ ನನಗೆ ಬೇಡ.. ಊಹೂ' ಎಂದು ದೃಢವಾಗಿ ಹೇಳಿದ್ದ.
                   ಇಂವ ಉದ್ಧಾರ ಆಗುವ ಆಸಾಮಿಯಲ್ಲ ಎಂದುಕೊಂಡ ವಿನಯಚಂದ್ರ ತಲೆಕೊಡವಿ ಎದ್ದು ಹೊರಡಬೇಕೆನ್ನುವಷ್ಟರಲ್ಲಿ ಸೂರ್ಯನ್ `ಹೇಯ್ ದೋಸ್ತ್.. ಬೆಂಗಾಲಿ ಹುಡುಗಿಯರಿಗೆ ಜಗತ್ತಿನ ಸುಂದರಿಯರಲ್ಲಿ ಪ್ರಮುಖ ಸ್ಥಾನವಿದೆ ಗೊತ್ತಾ.. ನಮ್ ಬಾಲಿವುಡ್ಡಲ್ಲೇ ನೋಡು ಅದೆಷ್ಟೆಲ್ಲಾ ಜನ ಬೆಂಗಾಲಿ ಸುಂದರಿಯರಿದ್ದಾರೆ.. ಬಿಪಾಶಾ ಬಸು, ಕೊಂಕಣಾ ಸೇನ್ ಶರ್ಮಾ, ಸುಚಿತ್ರ ಸೇನ್, ಮೂನ್ ಮೂನ್ ಸೇನ್, ಇನ್ನೂ ಹಲವರು.. ನಿಮ್ ಕನ್ನಡದಲ್ಲೂ ಇದ್ದಾಳಲ್ಲೋ ಏಂದ್ರಿತಾ ರೇ...' ಅಂದ.
                  `ಅದು ಏಂದ್ರಿತಾ ರೇ ಅಲ್ಲ.. ಐಂದ್ರಿತಾ ರೈ..' ಎಂದು ಸರಿಪಡಿಸಲು ಮುಂದಾದ ವಿನಯಚಂದ್ರ. `ಅವಳ ಬಗ್ಗೆಯೂ ಗೊತ್ತಾ ನಿಂಗೆ..?' ವಿಸ್ಮಯದಿಂದ ಕೇಳಿದ್ದ.
                  `ಅವಳೂ ನನಗೆ ಇಷ್ಟವಾದವಳೇ ನೋಡು.. ಇರ್ಲಿ.. ನೋಡು ನಾ ಹೇಳಿ ಮುಗಿಸಿಲ್ಲ ಆಗಲೇ ಬೆಂಗಾಲಿ ಹುಡುಗಿಯರ ಬಗ್ಗೆ ನೀನೂ ಮಾತನಾಡಲು ಆರಂಭ ಮಾಡಿಬಿಟ್ಟೆ.. ಹೆ ಹೆ.. ಬಾಂಗ್ಲಾದೇಶದಲ್ಲಿ ನೀನೂ ಏನೋ ಒಂದು ಆಗ್ತೀಯಾ ಬಿಡು..' ಎಂದು ಸೂರ್ಯನ್ ಛೇಡಿಸಿದಾಗ ವಿನಯಚಂದ್ರನಿಗೆ ಆತನ ಬುರಡಿಗೆ ಒಂದು ಬಿಗಿಯುವ ಅನ್ನಿಸಿತ್ತಾದರೂ ಸರಿಯಲ್ಲ ಎಂದುಕೊಂಡು ಸುಮ್ಮನಾದ.

**

                    ನಸುಕಿನಲ್ಲೆದ್ದು ಸ್ನಾನ ಮುಗಿಸುವ ವೇಳೆಗೆ ಎಲ್ಲರೂ ತಯಾರಾದಿರಾ ಎಂದು ಟೀಂ ಮ್ಯಾನೇಜರ್ ಕೋಣೆಯ ಕದವನ್ನು ದೂಡಿಕೊಂಡೇ ಬಂದರು. ಸೂರ್ಯನ್ ಇನ್ನೂ ತಯಾರಾಗುತ್ತಿದ್ದ.. `ಹೇಯ್ ಲೇಝಿ ಫೆಲ್ಲೋ.. ಬೇಗ.. ಕ್ವಿಕ್.. ಲೇಟಾಗ್ತಾ ಇದೆ..' ಎಂದು ಮ್ಯಾನೇಜರ್ ಅವಸರಿಸಿದರು.
                   ತಯಾರಾಗಿ ಬೆಳಗಿನ ಜಾವದಲ್ಲಿ ಟ್ರಾಫಿಕ್ಕೇ ಇಲ್ಲದ ದೆಹಲಿಯ ರಸ್ತೆಗಳಲ್ಲಿ ಮಂಜಿನ ಮುಸುಕನ್ನು ಕಣ್ಣಲ್ಲಿ ಸೆಳೆಯುತ್ತಾ ಕಬ್ಬಡ್ಡಿ ತಂಡ ಏರ್ಪೋರ್ಟ್ ತಲುಪಿತು. ವಿಮಾನವನ್ನೇರುವ ಮುನ್ನ ನಡೆಯುವ ಎಲ್ಲಾ ಚೆಕ್ಕಿಂಗ್ ಪ್ರಕ್ರಿಯೆಗಳೆಲ್ಲ ಮುಗಿಯುವ ವೇಳೆಗೆ ಕೊಂಚ ವಿಳಂಬವಾದರೂ ಸಾವರಿಸಿಕೊಂಡು ಮುನ್ನಡೆದರು.
                  ವಿಮಾನದ ಒಳಕ್ಕೆ ಹೋದೊಡನೆ ಸೂರ್ಯನ್ ಅಲ್ಲಿದ್ದ  ಗಗನಸಖಿಯರ ಬಳಿ ಮಾತಿಗೆ ನಿಂತಿದ್ದ. ಮನಸು ಸೆಳೆಯಲು ಯತ್ನಿಸುತ್ತಿದ್ದ. ವಿನಯಚಂದ್ರನಿಗೆ ವಿಮಾನದಲ್ಲಿ ಕುಳಿತ ತಕ್ಷಣವೇ ನಿದ್ದೆ. ಕಣ್ಣುಬಿಡುವ ವೇಳೆಗೆ ಬಾಂಗ್ಲಾದೇಶದ ನೆತ್ತಿಯ ಮೇಲೆ ವಿಮಾನ ಹಾರಾಡುತ್ತಾ ಢಾಕಾದ ಹಜರತ್ ಶಾ ಜಲಾಲ್ ಅಂತರಾಷ್ಟ್ರೀಯ ವಿಮಾನದಲ್ಲಿ ಕಾಲೂರಲು ಹವಣಿಸುತ್ತಿತ್ತು. ಬಾಂಗ್ಲಾದೇಶದ ನೆಲಕ್ಕೆ ಕಾಲಿಡುವ ವೇಳೆಗೆ ಅಲ್ಲಿ ಬೆಳಗಿನ ಏಳು ಗಂಟೆ. ಅಂದರೆ ದೆಹಲಿಯಿಂದ ಮೂರುವರೆ ಗಂಟೆಗಳ ಪಯಣ. ಭಾರತಕ್ಕಿಂತ ಅರ್ಧಗಂಟೆ ಮುಂದಿದೆ ಬಾಂಗ್ಲಾದೇಶ. ಬೆಂಗಾಲಿಗಳಿಗೆ ಚುಮು ಚುಮು ಮುಂಜಾನೆ. ಬಾನಂಚಿನಲ್ಲಿ ನೇಸರನೂ ಕಣ್ಣುಬಿಡಲು ತಯಾರಾಗುತ್ತಿದ್ದ. ಆಗತಾನೆ ಎದ್ದು ಕಣ್ಣುಜ್ಜಿದ ಪರಿಣಾಮ ಕಣ್ಣು ಕೆಂಗಾಗಿದೆಯೇನೋ ಎಂದುಕೊಳ್ಳುವಂತೆ ಕಾಣುವ ನೇಸರ ಮನಸೆಳೆಯುತ್ತಿದ್ದ.
                ಎದ್ದವನಿಗೆ ಕೈಗೆ ಧರಿಸಿದ್ದ ವಾಚನ್ನು ನೋಡಿ ಒಮ್ಮೆ ದಿಘಿಲಾಯಿತು. ಏನೋ ಯಡವಟ್ಟಾಗಿದೆ.. ಭಾರತದಲ್ಲಿ, ಅದೂ ತನ್ನೂರಿನಲ್ಲಿದ್ದರೆ ಇನ್ನೂ ಐದೂವರೆಯೂ, ಆರು ಗಂಟೆಯೋ ಆಗಿರುವಂತಹ ಸಮಯ. ಆದರೆ ಇಲ್ಲಿ ಬೆಳ್ಳನೆ ಬೆಳಗಾಗಿದೆ. ಕೊನೆಗೆ ತಾನು ಬಾಂಗ್ಲಾದೇಶದಲ್ಲಿ ಇದ್ದೇನೆ ಎನ್ನುವುದು ಅರಿವಾಗಿ ಕೈಗಡಿಯಾರದ ಸಮಯವನ್ನು ಒಂದು ತಾಸು ಮುಂದೋಡಿಸಿದ. ಆಗ ಸಮಯಕ್ಕೆ ತಾಳೆಯಾದಂತೆನ್ನಿಸಿತು. ನಿರಾಳನಾದ.
                 ಭಾರತ ತಂಡದ ಆಟಗಾರರನ್ನು ಎದುರುಗೊಳ್ಳಲು ಸಜ್ಜಾಗಿದ್ದ ಬಾಂಗ್ಲಾದೇಶದ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು. ಅವರಿಗೊಂದು ಬಸ್ಸನ್ನೂ ತಯಾರು ಮಾಡಲಾಗಿತ್ತು, ಸಾಮಾನ್ಯವಾಗಿ ಕ್ರಿಕೇಟಿಗರಿಗೆ ಅದ್ಧೂರಿ, ಐಶಾರಾಮಿ ಬಸ್ಸುಗಳನ್ನು ನೀಡಲಾಗುತ್ತದೆ. ಆದರೆ ಕಬ್ಬಡ್ಡಿ ಆಟಗಾರರಿಗೆ ಸಂಚಾರಕ್ಕೆ ನೀಡಲಾದ ಬಸ್ಸು ಅದ್ಧೂರಿಯಾಗಿರದಿದ್ದರೂ ಚನ್ನಾಗಿತ್ತು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಂತರ್ಯುದ್ಧ, ದಂಗೆ, ಗಲಾಟೆಯ ನೆಪದಿಂದ ಎಲ್ಲಿ ಆಟಗಾರರು ಭದ್ರತೆಯ ನೆಪವೊಡ್ಡಿ ಆಗಮಿಸಲು ಹಿಂದೇಟು ಹಾಕುತ್ತಾರೋ ಎನ್ನುವ ಕಾರಣಕ್ಕಾಗಿ ಬಾಂಗ್ಲಾ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವನ್ನು ಮಾಡಿತ್ತು. ಬೆಂಗಾಲಿ ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಪರವಾಗಿಲ್ಲ, ಕಬ್ಬಡ್ಡಿ ಆಟಗಾರರಿಗೂ ಸುಮಾರು ಬೆಲೆಯಿದೆ ಎಂದುಕೊಂಡ ವಿನಯಚಂದ್ರ. ತಕ್ಕಮಟ್ಟಿಗೆ ಸಿದ್ಧತೆಗಳು ನಡೆದಿದ್ದವು.
                    ಬಾಂಗ್ಲಾದೇಶದ ಹೊರವಲಯಕ್ಕೆ ಅವರನ್ನು ಹೊತ್ತ ಬಸ್ಸು ಕರೆದೊಯ್ಯಿತು. ಢಾಕಾದ ಜಿಯಾವುರ್ ಹೊಟೆಲ್ ಎಂಬ ಐಶಾರಾಮಿ ಹೊಟೆಲಿನಲ್ಲಿ ವಾಸ್ತವ್ಯಕ್ಕೆ ಏರ್ಪಾಡು ಮಾಡಲಾಗಿತ್ತು. ಈ ಹೊಟೆಲಿನಿಂದ ಕಬ್ಬಡ್ಡಿ ಪಂದ್ಯಾವಳಿಗಳು ನಡೆಯಲಿದ್ದ ನ್ಯಾಷನಲ್ ಸ್ಟೇಡಿಯಂ ಅಜಮಾಸು ಆರೆಂಟು ಕಿ.ಮಿ ದೂರದಲ್ಲಿತ್ತು. ಭಾರತದ ಕಬ್ಬಡ್ಡಿ ತಂಡ ಉಳಿದುಕೊಂಡಿದ್ದ  ಹೊಟೆಲಿನಲ್ಲಿಯೇ ಎರಡು-ಮೂರು ವಿದೇಶಿ ತಂಡಗಳಿಗೂ ವಾಸ್ತವ್ಯದ ಏರ್ಪಾಡು ಮಾಡಲಾಗಿತ್ತು. ಭಾರತದ ತಂಡ ಬಾಂಗ್ಲಾದೇಶವನ್ನು ತಲುಪಿದ ಐದು ದಿನಗಳ ನಂತರ ಕಬ್ಬಡ್ಡಿ ವಿಶ್ವಕಪ್ ಪಂದ್ಯಾವಳಿಗಳು ಜರುಗಲಿದ್ದವು. ಮೊದಲ ಪಂದ್ಯದಲ್ಲಿ ಸ್ಥಳೀಯ ಬಾಂಗ್ಲಾದೇಶ ತಂಡವು ದಕ್ಷಿಣ ಆಪ್ರಿಕಾ ತಂಡದೊಂದಿಗೆ ಆಡಲಿತ್ತು. ಅದೇ ದಿನ ಎರಡನೇ ಪಂದ್ಯದಲ್ಲಿ ಭಾರತ ತಂಡವು ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿತ್ತು.
                    ಪ್ರತಿದಿನ ಎರಡು-ಮೂರು ಪಂದ್ಯಗಳನ್ನು ನಡೆಸಲಾಗುತ್ತಿತ್ತು. ಒಂದೊಂದು ಗುಂಪಿನಲ್ಲಿದ್ದ ಎಂಟೆಂಟು ತಂಡಗಳಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಗೆದ್ದ ಅಥವಾ ಅತ್ಯಂತ ಹೆಚ್ಚು ಪಾಯಿಂಟ್ ಗಳಿಸಿದ ನಾಲ್ಕು ತಂಡಗಳು ಕ್ವಾರ್ಟರ್ ಫೈನಲ್ ತಲುಪುತ್ತಿದ್ದವು. ಕ್ವಾರ್ಟರ್ ಫೈನಲ್ಲಿನಲ್ಲಿ 8 ತಂಟಗಳ ನಡುವೆ ಹಣಾಹಣಿ ನಡೆದು ಅದರಲ್ಲಿ 4 ತಂಡಗಳು ಸೆಮಿಫೈನಲ್ಲಿಗೆ ತೇರ್ಗಡೆಯಾಗುತ್ತಿದ್ದವು. ನಂತರ ಫೈನಲ್ ನಡೆಯಲಿತ್ತು. ದಿನಗಳೆದಂತೆಲ್ಲ ಕಬ್ಬಡ್ಡಿ ಆಟದ ರೋಚಕತೆ ವಿನಯಚಂದ್ರನ ಅರಿವಿಗೆ ಬರಲು ಆರಂಭವಾಗಿತ್ತು.
                   ವಿನಯಚಂದ್ರ ಹಾಗೂ ತಂಡ ಹೊಟೆಲಿಗೆ ಬಂದಿಳಿದ ನಂತರ ಇಲ್ಲಿ ಜಾಧವರ ಬಳಿ ಹೇಳಿ ಸೂರ್ಯನ್ ನನ್ನು ತನ್ನ ರೂಮ್ ಮೇಟ್ ಮಾಡಿಕೊಂಡ. ಬಂದವನೆ ಹೊಟೆಲಿನಲ್ಲಿ ತಿಂಡಿ ತಿಂದು ಫ್ರಶ್ ಆದ. ಅರೆರಾತ್ರಿಯಲ್ಲಿ ಎದ್ದು ಹೊರಟಿದ್ದರಿಂದ ನಿದ್ದೆ ಬಾಕಿಯಿದ್ದ ಕಾರಣ ಚಿಕ್ಕದೊಂದು ನಿದ್ದೆ ಮಾಡಬೇಕೆಂದು ಹಾಸಿಗೆಯಲ್ಲಿ ಅಡ್ಡಾದವನಿಗೆ ಸಮಯ ಜಾರಿದ್ದೇ ತಿಳಿಯಲಿಲ್ಲ. ಎಚ್ಚರಾಗುವ ವೇಳೆಗೆ ಸೂರ್ಯನ್ ಇರಲಿಲ್ಲ. ಎಲ್ಲಿ ಹೋದನೋ ಪುಣ್ಯಾತ್ಮ ಎಂದು ಹಲುಬಿಕೊಂಡು ಕೋಣೆಯನ್ನು ಹುಡುಕಿದ. ಸೂರ್ಯನ್ ಸುಳಿವಿರಲಿಲ್ಲ.
                 ಸೀದಾ ಹೊರ ಬಂದು ಹೊಟೆಲಿನ ಹೊರಭಾಗದಲ್ಲಿ ಅಡ್ಡಾಡಿದಂತೆ ಮಾಡಿದನಾದರೂ ಯಾಕೋ ಮನಸ್ಸು ಮಂಕಾಗಿತ್ತು. ಮತ್ತೆ ರೂಮೊಳಗೆ ಹೋದವನೇ ಅಲ್ಲಿದ್ದ ಟಿ.ವಿ.ಯನ್ನು ಹಚ್ಚಿದ. ಟಿ.ವಿಯಲ್ಲಿ ಯಾವುದೋ ಚಾನಲ್ಲಿನಲ್ಲಿ ಹೆಸರಾಂತ ಅಥ್ಲಿಟ್ ಸೈಕಲಿಂಗ್ ಪಟು ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಜೀವನದ ಕುರಿತು ಚಿತ್ರಣ ಬಿತ್ತರವಾಗುತ್ತಿತ್ತು. ನೋಡುತ್ತ ನೋಡುತ್ತ ತನ್ನ ನೆನಪಿನಾಳಕ್ಕೆ ಜಾರಿದ.
                 ಎಲ್ಲರೂ ನಡೆದ ದಾರಿಯಲ್ಲಿ ತಾನು ನಡೆಯಬಾರದು. ಬೇರೆಯದೇ ಆದ ಒಂದು ದಾರಿಯಲ್ಲಿ ಸಾಗಿ ಕೆಲವರನ್ನಾದರೂ ತನ್ನ ದಾರಿಯಲ್ಲಿ ಕರೆದುಕೊಂಡು ಬರಬೇಕು ಎನ್ನುವುದು ವಿನಯಚಂದ್ರನ ಭಾವನೆ. ಓರಗೆಯ ಹುಡುಗರು ಕ್ರಿಕೆಟ್ ಬ್ಯಾಟನ್ನು ಎತ್ತಿಕೊಂಡು ಮೈದಾನಗಳಲ್ಲಿ ಓಡತೊಡಗಿದ್ದರೆ ಈತ ಮಾತ್ರ ಕಬ್ಬಡ್ಡಿ ಕಬ್ಬಡ್ಡಿ ಎನ್ನತೊಡಗಿದ್ದುದು ಹಲವರಿಗೆ ವಿಚಿತ್ರವಾಗಿತ್ತು. ಕಬ್ಬಡ್ಡಿ ಆಡುವ ವಿನಯಚಂದ್ರ ಸಮಾ ಇಲ್ಲ ಎಂದು ಮಾತನಾಡುತ್ತಿದ್ದರೂ ಆ ಬಗ್ಗೆ ವಿನಯಚಂದ್ರ ತಲೆಕೆಡಿಸಿಕೊಂಡಿರಲಿಲ್ಲ.
                  ಮನೆಯಲ್ಲಿ ತಾನು ಬೆಳೆದ ಪರಿಸರ ಸಸ್ಯಾಹಾರದ್ದಾದದ್ದರಿಂದ ಚಿದಂಬರ ಅವರು ಮೊಟ್ಟಮೊದಲು ಎಗ್ ರೈಸ್ ತಿನ್ನಲು ಹೇಳಿದಾಗ ಮುಖ ಕಿವಿಚಿದ್ದ ವಿನಯಚಂದ್ರ. ಆದರೆ ಆತನ ಆಟಕ್ಕೆ ಮೊಟ್ಟೆಯನ್ನ ಪೂರಕವಾಗಿತ್ತಾದ್ದರಿಂದ ಅದನ್ನು ರೂಢಿಸಿಕೊಂಡಿದ್ದ. ಈಗೀಗ ಮೊಟ್ಟೆಯನ್ನ ಆತನ ಪರಮ ಇಷ್ಟದ ತಿಂಡಿಯಾಗಿತ್ತು. ಕಬ್ಬಡ್ಡಿಯ ಕಾರಣದಿಂದಲೇ ತಾನು ಭಾರತದ ಹಲವಾರು ರಾಜ್ಯಗಳಿಗೆ ತಿರುಗಿದ್ದೂ ವಿನಯಚಂದ್ರನ ನೆನಪಿಗೆ ಬಂದಿತು. ಪಶ್ಚಿಮ ಬಂಗಾಳಕ್ಕೆ ಬಂದಿದ್ದ ಆತ ಅಲ್ಲಿನ ಗಡಿಯಲ್ಲೊಮ್ಮೆ ನಿಂತು ಬಾಂಗ್ಲಾದೇಶವನ್ನು ನೋಡಿದ್ದ. ಭೂಮಿ ಒಂದೇ ಥರಾ ಇದೆ.. ನೋಡಲಿಕ್ಕೆ ಎಂತದ್ದೂ ವ್ಯತ್ಯಾಸ ಇಲ್ಲವಲ್ಲಾ ಎಂದುಕೊಂಡಿದ್ದ. ಅದ್ಯಾರೋ ಒಬ್ಬಾತ ಎದುರಿಗಿದ್ದ ಗಡಿಯನ್ನು ತೋರಿಸಿ ಅದೋ ನೋಡಿ ಆ ಬೆಟ್ಟ ಕಾಣ್ತದಲ್ಲಾ ಅಲ್ಲಿಂದ ಬಾಂಗ್ಲಾದೇಶ ಆರಂಭವಾಗುತ್ತದೆ..ಎಂದು ಹೇಳಿದ್ದ. ಮುಂದೊಂದಿನ ಬಾಂಗ್ಲಾಕ್ಕೆ ಹೋಗಬೇಕು ಎಂದು ಆಗಲೇ ಅಂದುಕೊಂಡಿದ್ದ. ಅದು ರೂಪದಲ್ಲಾಗುತ್ತದೆ ಎಂಬ ಭಾವನೆ ಖಂಡಿತ ಇರಲಿಲ್ಲ ಬಿಡಿ.
                  `ಯಾವುದೇ ದೇಶಕ್ಕೆ ಬೇಕಾದರೂ ಹೋಗು ನೀನು. ಅಲ್ಲಿನ ಮಣ್ಣುಗಳೆಲ್ಲ ಒಂದೆ... ನೀ ಹೋದ ದೇಶದಲ್ಲಿ ನಮ್ಮ ದೇಶದ ಪ್ರಕೃತಿ, ವಾತಾವರಣವನ್ನು ನೀನು ಕಲ್ಪಿಸಿಕೊಳ್ಳುತ್ತ ಹೋಗ್ತೀಯಾ ವಿನು.. ನೀನು ಹೋದಕಡೆಯಲ್ಲಿಯೂ ನಿಮ್ಮೂರಿನಂತಹ ಊರಿದೆಯಾ ಎಂದು ಹುಡುಕಲು ಆರಂಭ ಮಾಡುತ್ತೀಯಾ' ಎಂದು ತಮ್ಮದೇ ಊರಿನಿಂದ ವಿದೇಶಕ್ಕೆ ಹೋಗಿ ನೆಲೆಸಿರುವ ಒಬ್ಬ ವ್ಯಕ್ತಿ ಹೇಳಿದ್ದ. ಅದೆಲ್ಲವೂ ವಿನಯಚಂದ್ರನಿಗೆ ನೆನಪಾಯಿತು.
                  ಬಾಂಗ್ಲಾದೇಶದ ಸರಹದ್ದಿಗೆ ಬಂದ ನಂತರ ಕೋಚ್ ಜಾಧವ್ ಅವರು ಎಲ್ಲಾ ಆಟಗಾರರಿಗೆ ಬಾಗ್ಲಾದೇಶದ ಸಿಮ್ ಕಾರ್ಡನ್ನು ನೀಡಿದ್ದರು. ತಕ್ಷಣ ತನ್ನ ಮನೆಗೆ ಪೋನಾಯಿಸಿ ಮಾತನಾಡಿದ. ಬಾಂಗ್ಲಾದೇಶಕ್ಕೆ ತಾನು ಸುರಕ್ಷಿತವಾಗಿ ಬಂದಿರುವುದನ್ನು ಹೇಳಿದಾಗ ಮನೆಯ ಸದಸ್ಯರೆಲ್ಲ ಸಂತಸಪಟ್ಟರು. ಚಿದಂಬರ ಅವರಿಗೂ ದೂರವಾಣಿ ಕರೆ ಮಾಡಿದ. ಅವರು ಉಭಯಕುಶಲೋಪರಿಯ ಜೊತೆಗೆ ಸಲಹೆಗಳನ್ನೂ ನೀಡಿದರು. ಸಂಜಯನಿಗೆ ಅಪರೂಪಕ್ಕೆಂಬಂತೆ ಕರೆ ಮಾಡಿದ.
ಸಂಜಯ `ಬಾಂಗ್ಲಾದಲ್ಲಿ ಕನ್ನಡಿಗನ ವಿಜಯ ಯಾತ್ರೆ..' ಎನ್ನುವ ತಲೆಬರಹದ ಸುದ್ದಿ ತಯಾರಿಸಲು ನಾನು ತುದಿಗಾಲಲ್ಲಿದ್ದೇನೆ. ಯಶಸ್ಸು ನಿನ್ನಿಂದ ಬರಲಿ ಎಂದು ಹಾರೈಸಿದ.
                  ಮಾತನಾಡುತ್ತ ಬಾಂಗ್ಲಾದೇಶದ ಸುಂದರಿಯರ ಬಗ್ಗೆ, ಅಲ್ಲಿನ ಹಿಂದೂ ಹುಡುಗಿಯರ ಬಗ್ಗೆ, ಅತ್ಯಲ್ಪ ಸಂಖ್ಯೆಯಲ್ಲಿದ್ರೂ ಚನ್ನಾಗಿರುವ ಬೆಂಗಾಲಿ ಬ್ರಾಹ್ಮಣರ ಬಗ್ಗೆ ಸಂಜಯ ವಿವರಗಳನ್ನು ನೀಡಿದ. ವಿನಯಚಂದ್ರ ಅದಕ್ಕೆ ಪ್ರತಿಯಾಗಿ ಉತ್ತರಿಸುತ್ತ ಅಂತವರು ಸಿಕ್ಕತೆ ಖಂಡಿತ ಮಾತನಾಡಿಸುತ್ತೇನೆ ಎಂದೂ ಹೇಳಿದ.
                  `ಬರಿ ಮಾತನಾಡಿಸಬೇಡ ಮಾರಾಯಾ.. ಅವರ ಬಗ್ಗೆ ಹೆಚ್ಚು ತಿಳಿದುಕೊ.. ನೀನು ಭಾರತಕ್ಕೆ ಮರಳಿದ ನಂತರ ನಮ್ಮ ಪತ್ರಿಕೆಗೆ ಬಾಂಗ್ಲಾದೇಶದ ಹಿಂದೂಗಳ ಪರಿಸ್ಥಿತಿಯ ಬಗ್ಗೆ ಒಂದು ಸುಂದರ ಲೇಖನವನ್ನೂ ಬರೆದುಕೊಡು..' ಎಂದು ತಾಕೀತು ಮಾಡಿದ.
                   `ಖಂಡಿತ..' ಎಂದವನಿಗೆ ತಾನು ಬರಹಗಳನ್ನು ಬರೆಯದೇ ಎಷ್ಟು ಕಾಲವಾಯ್ತಲ್ಲ ಎಂದುಕೊಂಡ...ಟಿ.ವಿಯಲ್ಲಿ ಆರ್ಮಸ್ಟ್ರಾಂಗ್ ಬಗ್ಗೆ ಬರುತ್ತಿದ್ದ ವೀಡಿಯೋ ಮುಗಿದಿತ್ತು. 20ಕ್ಕೂ ಹೆಚ್ಚು ಬಾರಿ ಟೂರ್ ಡಿ ಪ್ರಾನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವನು ಲ್ಯಾನ್ಸ್ ಆರ್ಮಸ್ಟ್ರಾಂಗ್. ವೃಷಣದ ಕ್ಯಾನ್ಸರ್ ಗೆ ತುತ್ತಾಗಿದ್ದರೂ ಮತ್ತೆ ಎದ್ದು ಬಂದು ವಿಜಯ ದುಂಧುಬಿ ಭಾರಿಸಿದವನು ಆತ. ಕೊನೆಯಲ್ಲಿ ಮಾತ್ರ ಉದ್ದೀಪನ ಮದ್ದು ಸೇವನೆ ಮಾಡಿದ್ದು ನಿಜವೆಂದು ಸಾಬೀತಾದಾಗ ತನ್ನೆಲ್ಲ ಪದಕಗಳನ್ನೂ ವಾಪಾಸು ನೀಡಿದವನು ಆತ. ಆತನ ಜೀವನ ಕಥೆಯನ್ನು ನೋಡಿ ಕ್ಷಣಕಾಲ ಕಸಿವಿಸಿಗೊಂಡ ವಿನಯಚಂದ್ರ. ಆ ಕಾರ್ಯಕ್ರಮದ ನಂತರ ಟಿ.ವಿಯಲ್ಲಿ ಇನ್ನೇನೋ ಬೆಂಗಾಲಿ ನರ್ತನ ಶುರುವಾಗಿತ್ತು.. ಹೊಟೆಲ್ ರೂಮ್ ತಡಕಾಡಿದವನಿಗೆ ಒಂದಿಷ್ಟು ಖಾಲಿಹಾಳೆಗಳು ಸಿಕ್ಕವು. ಪೆನ್ ಕೈಗೆತ್ತಿಕೊಂಡವನೇ ಅಕ್ಷರಗಳನ್ನು ಪೋಣಿಸಲು ಶುರುಮಾಡಿಕೊಂಡ..
ಹಾಗೆ ಸುಮ್ಮನೇ ಹಾಳೆಯ ಮೇಲೆ..
`ನಿನ್ನ ಪ್ರೀತಿಗೆ ಒಳ್ಳೆಯವನಲ್ಲ..
ನಿಜ ಗೆಳತಿ
ಒಳ್ಳೆಯವ ನಲ್ಲ..'
ಎಂದು ಬರೆದ.. ಯಾಕೋ ಮನಸ್ಸು ಖುಷಿಗೊಂಡಂತಾಯಿತು. ತನ್ನನ್ನೇ ತಾನು ಭೇಷ್ ಎಂದುಕೊಳ್ಳುವಷ್ಟರಲ್ಲಿ `ಸಾರಿ ಯಾರ್.. ಈ ಹುಡುಗೀರು.. ಎಲ್ಲೋದ್ರೂ ನನ್ನನ್ನು ಕಾಡ್ತಾರೆ.. ಏನ್ ಮಾಡೋದು.. ಹೊರಗಡೆ ಗಾರ್ಡನ್ನಿನಲ್ಲಿ ಅಡ್ಡಾಡಲು ಹೋಗಿದ್ದೆ..' ಎಂದುಕೊಳ್ಳುತ್ತ ಒಳಬಂದ ಸೂರ್ಯನ್..
                 ವಿನಯಚಂದ್ರನಿಗೆ ಒಮ್ಮೆ ರಸಭಂಗವಾದಂತಾಯಿತಾದರೂ ಸುಮ್ಮನಾದ. ಸೂರ್ಯನ್ ಈತನ ಕೈಲ್ಲಿನ ಹಾಳೆ ಕಿತ್ತುಕೊಂಡ. `ವಾಟ್ ಈಸ್ ದಿಸ್..' ಎಂದ..
`ಹೆ.. ಹೆ.. ಕನ್ನಡದಲ್ಲಿ ಏನೋ ಒಂದು ಸುಮ್ಮನೆ ಗೀಚಿದ್ದೇನೆ..' ಎಂದ..
`ಏನಪ್ಪಾ ಅದು.. ನಂಗೆ ಗೊತ್ತಾಗಬಾರದು ಎಂತ ಹಿಂಗೆ ಮಾಡಿದ್ದೀಯಾ..?..'
                  `ಹಂಗೇನಿಲ್ಲ ಮಾರಾಯಾ.. ತಾಳು ಅದನ್ನು ಹಿಂದಿಗೆ ಅನುವಾದಿಸಿ ಹೇಳುತ್ತೇನೆ..' ಎಂದು ವಿನಯಚಂದ್ರ ಹಿಂದಿಯಲ್ಲಿ ಉಸುರಿದ. ಸೂರ್ಯನ್ ಹಿಂದಿಯ ಅವತರಣಿಕೆಯ ಆ ಸಾಲುಗಳನ್ನು ಕೇಳಿ ಖುಷಿಯಾಗಿ `ನೀನು ಬರೀತಿಯಾ.. ಮೊದಲೇ ಹೇಳಿದ್ದರೆ ಸುಮಾರಷ್ಟು ಪ್ರೇಮಪತ್ರಗಳನ್ನು ಬರೆಸಿಕೊಳ್ಳಬಹುದಿತ್ತಲ್ಲ ಮಾರಾಯಾ.. ಎಂತಾ ಛಾನ್ಸು ತಪ್ಪಿಹೋಯಿತು.. ಇರ್ಲಿ ಬಿಡು.. ಹಿಂಗೆ ಬರೀತಾ ಇರು.. ಬರೆದಿದ್ದನ್ನು ನನಗೆ ಕೊಡು.. ನಾನು ಹೇಳಿದಾಗಲೆಲ್ಲ ನೀನು ಬರೆದುಕೊಡು. ನಂಗೆ ಹೇಳು.. ನಾನು ಅದರಿಂದ ಒಂದಷ್ಟು ಹುಡುಗಿಯರನ್ನು ಸಂಪಾದಿಸಿಕೊಳ್ಳುತ್ತೇನೆ..' ಎಂದು ಕಣ್ಣು ಮಿಟುಕಿಸಿದ.
                ವಿನಯಚಂದ್ರ ಪೆಚ್ಚುನಗೆ ಬೀರೀದ. ಅಷ್ಟರಲ್ಲಿ ರೂಮಿನ ಬಾಗಿಲು ಸದ್ದಾಯಿತು. ವಿನಯಚಂದ್ರ `ಯಾರು..' ಎಂದ. ಹುಡುಗಿಯೊಬ್ಬಳ ಧ್ವನಿ ಕೇಳಿಸಿತು. ಹೋಗಿ ಬಾಗಿಲು ತೆರೆದ.. ಬಾಗಿಲ ಎದುರಲ್ಲಿ ಒಬ್ಬಾಕೆ ನಿಂತಿದ್ದಳು. ಪಕ್ಕಾ ಬೆಂಗಾಲಿ ಕಾಟನ್ ಸೀರೆಯನ್ನುಟ್ಟ ಯುವತಿ. ಈಗತಾನೆ ಸ್ವರ್ಗದಿಂದಿಳಿದು ಬಂದಳೋ ಎನ್ನುವಷ್ಟು ಚನ್ನಾಗಿದ್ದಳು. ಬಿಳಿಬಣ್ಣದ ಸೀರೆ, ಚಿನ್ನದ ಬಣ್ಣದ  ಅಂಚಿನಲ್ಲಿ ಮತ್ತಷ್ಟು ಚನ್ನಾಗಿ ಕಾಣುತ್ತಿದ್ದಳು. ಬೆಂಗಾಲಿಯರು ಯಾವು ಯಾವುದೋ ವಿಚಿತ್ರ ಸೀರೆಗಳನ್ನು ಧರಿಸುತ್ತಾರೆ ಎಂದುಕೊಳ್ಳುತ್ತಿದ್ದ ವಿನಯಚಂದ್ರನಿಗೆ ಬೆಂಗಾಲಿ ಸೀರೆಗೆ ಈ ಹುಡುಗಿಯಿಂದ ಮತ್ತಷ್ಟು ಮೆರಗು ಬಂದಂತಾಗಿದೆ ಎಂದುಕೊಂಡ.
                ಬೆಂಗಾಲಿಗಳು ಚನ್ನಾಗಿರುತ್ತಾರೆ. ಆದರೆ ಬಿಳಿ ಬಣ್ಣದ ಸೀರೆ ಉಡುತ್ತಾರೆ. ತಥ್.. ಬಿಳಿ ಬಣ್ಣದ ಮೇಲೆ ಅದೇನೇನೋ ಬಗೆ ಬಗೆಯ ಚಿತ್ತಾರಗಳು. ನಮ್ ಕಡೆ ಬಿಳಿ ಸೀರೆ ಉಟ್ಟರೆ ಬೇರೆಯದೇ ಅರ್ಥವಿದೆ. ಆದರೆ ಈ ಹುಡುಗಿ ಬಿಳಿ ಸೀರೆ ಉಟ್ಟರೂ ಚನ್ನಾಗಿ ಕಾಣುತ್ತಾಳಲ್ಲಾ ಎಂದುಕೊಂಡ ವಿನಯಚಂದ್ರ.
                ಅರ್ಧಕ್ಕೆ ನಿಂತ ಕವಿತೆ ಇನ್ನೇನು ಹೊರಬರಬೇಕು ಎಂದು ತವಕಿಸುವಂತಿತ್ತು. ಬಾಗಿಲ ಎದುರು ನಿಂತವಳನ್ನು ಹಾಗೆಯೇ ದಿಟ್ಟಿಸುತ್ತಿದ್ದ. ಎದುರಿದ್ದಾಕೆ ಕಸಿವಿಸಿಗೊಂಡಿರಬೇಕು. ಆದರೆ ವಿನಯಚಂದ್ರನ ಮನಸ್ಸಿಗೆ ಅದು ಗೊತ್ತಾಗಲಿಲ್ಲ. ವಿನಯಚಂದ್ರನ ಮನಸ್ಸಿನಲ್ಲಿ ತರಂಗಗಳೆದ್ದಿದ್ದವು. ಅವನಿಗೆ ಅದು ಅರ್ಥವಾಗುತ್ತಿರಲಿಲ್ಲ. `ವಿನು.. ಯಾರೋ ಅದು..' ಎಂದು ಸೂರ್ಯನ್ ಹಿಂದಿನಿಂದ ಕೂಗದಿದ್ದರೆ ವಿನಯಚಂದ್ರ ಇನ್ನೆಷ್ಟು ಹೊತ್ತು ಹಾಗೆ ಅವಳನ್ನು ನೋಡುತ್ತ ನಿಲ್ಲುತ್ತಿದ್ದನೋ..

(ಮುಂದುವರಿಯುತ್ತದೆ..)

Thursday, February 6, 2014

ಬ್ರಹ್ಮಚಾರಿಯ ಮಗಳು (ಕಥೆ)-ಭಾಗ-1

          ನಾನು ಹಾಗೂ ಅಂಬಿಕಾ ಪ್ರೀತಿಸಲು ಆರಂಭಿಸಿ ಹೆಚ್ಚೂ ಕಡಿಮೆ ನಾಲ್ಕೈದು ವಸಂತಗಳು ಸರಿದುಹೋಗಿದ್ದವು. ಹರಟೆ, ಜಗಳ, ಪಿಸುಮಾತು, ಮೌನ, ಕಾಡುವಿಕೆ, ಚೇಷ್ಟೆ ಮುಂತಾದ ಹಲವಾರು ಸಂಗತಿಗಳು ನಮ್ಮ ಪ್ರೇಮದ ನಡುವೆ ಇಣುಕಿದ್ದವು. ಅವಳಿಗೆ ನಾನು, ನನಗೆ ಅವಳು ಎಂಬಂತೆ ಬದುಕಿದ್ದೆವು. ನಮ್ಮ ಪ್ರೇಮದಲ್ಲಿ ಅನುಮಾನದ ಲವಲೇಶವೂ ಈ ಅವಧಿಯಲ್ಲಿ ಕಂಡುಬಂದಿರಲಿಲ್ಲ. ಆದರೆ ಮೊನ್ನೆ ಜಯಂತ ಬಂದು ನನ್ನ ಬಳಿ `ಅಲ್ಲಾ ಮಾರಾಯಾ.. ನೀನು ಪ್ರೀತಿಸ್ತಾ ಇರೋ ಹುಡುಗಿಯ ಹಿನ್ನೆಲೆಯೇನಾದರೂ ನಿನಗೆ ಗೊತ್ತಿದೆಯಾ? ನಮ್ಮ ಕಡೆಗಳಲ್ಲೆಲ್ಲ ಅವಳನ್ನು ಬ್ರಹ್ಮಚಾರಿಯ ಮಗಳು ಎಂದೇ ಕರೆಯುತ್ತಾರೆ. ನೀನು ಅವಳ ಕುಲ ಗೋತ್ರ ನೋಡದೆ ಪ್ರೀತಿ ಮಾಡಿದ್ದೀಯಲ್ಲ ಮಾರಾಯಾ.. ಆಕೆಯ ಹಿನ್ನೆಲೆ ಗೊತ್ತಿದೆಯಾ?' ಎಂದು ಹೇಳಿ ಮನಸ್ಸಿನೊಳಗೆ ಅನುಮಾನದ ಬೀಜವನ್ನು ಬಿತ್ತಿದ್ದ.
           ಜಯಂತನ ಬಿತ್ತಿದ ಅನುಮಾನದ  ಬೀಜಕ್ಕೆ ನಾನು ಮೊದಲು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಒಂದೆರಡು ದಿನ ಕಳೆದಂತೆ ಅದು ಹೆಮ್ಮರವಾಗಿ ಬಿಡಲು ಆರಂಭಿಸಿತ್ತು. ಆದರೆ ಅವಳ ಬಳಿ ಈ ಕುರಿತು ಕೇಳುವುದು ಹೇಗೆ ಎಂಬುದು ಗೊತ್ತಾಗಿರಲಿಲ್ಲ. ನನ್ನಲ್ಲಿ ಮೂಡಿದ್ದ ಅನುಮಾನವೂ ಹೆಮ್ಮರವಾಗುತ್ತಲಿತ್ತು. ಮನಸ್ಸೇ ಹೀಗೆ. ಒಮ್ಮೆ ಅನುಮಾನ ಮೊಳೆಯಿತೆಂದಾದರೆ ಅದು ಪರಿಹಾರವಾದಂತೂ ಸುಮ್ಮನಾಗುವುದಿಲ್ಲ. ಆದರೆ ನಾನು ಅಂಬಿಕಾಳ ಬಳಿ ವಿಷಯವನ್ನು ಪ್ರಸ್ತಾಪ ಮಾಡುವುದು ಹೇಗೆ ಎಂಬ ಗೊಂದಲಕ್ಕೆ ಬಿದ್ದಿದ್ದೆ. ನನ್ನ ಭಾವನೆ ತಿಳಿದ ಆಕೆ ಅದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬಹುದು ಎನ್ನುವ ಆಲೋಚನೆಯೂ ಮನದಲ್ಲಿ ಮೂಡಿತು.
            ನಾವು ಪ್ರೀತಿಸಲು ಆರಂಭಿಸಿ ಇಷ್ಟು ವರ್ಷಗಳು ಕಳೆದಿದ್ದರೂ ನಾನು ಆಕೆಯ ಹಿನ್ನೆಲೆಯನ್ನೂ ಆಕೆ ನನ್ನ ಹಿನ್ನೆಲೆಯನ್ನೂ ಎಂದಿಗೂ ಕೇಳುವ ಗೋಜಿಗೆ ಹೋಗಿರಲಿಲ್ಲ. ಅವಳಾಗಿಯೇ ಹೇಳಿದರೆ ನಾನು ಕೇಳುವುದು ಅಥವಾ ನಾನಾಗಿಯೇ ಹೇಳಿದರೆ ಅವಳು ಕೇಳುವುದು ಎನ್ನುವ ಭಾವನೆಯಿಂದ ಇಬ್ಬರೂ ಸುಮ್ಮನಿದ್ದೆವು.  ನಾನಾಗಿಯೇ ನನ್ನ ಕುಟುಂಬದ ವಿವರಗಳನ್ನು ಅವಳ ಬಳಿ ಹೇಳಿದ್ದೆನಾದರೂ ಅವಳು ತನ್ನ ಕುಟುಂಬದ ಕುರಿತು ಎಂದಿಗೂ ಹೇಳಿರಲಿಲ್ಲ. ನನಗೂ ಅಷ್ಟೆ ಅವಳು ಮುಖ್ಯವಾಗಿದ್ದಳೇ ಹೊರತು ಅವಳ ಕುಟುಂಬವಾಗಿರಲಿಲ್ಲ. ಆದರೆ ಜಯಂತನ ಮಾತುಗಳು ನನ್ನಲ್ಲಿ ಬೇರೆಯ ಭಾವನೆಗಳನ್ನು ಹುಟ್ಟಿಸಿದ್ದವು. ಬ್ರಹ್ಮಚಾರಿಗೆ ಮಗಳಾ..? ಮಗಳಿರಲು ಸಾಧ್ಯವೇ? ಇನ್ನೇನಾದರೂ ಹೆಚ್ಚೂ ಕಡಿಮೆ ಆಗಿದೆಯಾ..? ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದವು. ನನಗೆ ಸುಮ್ಮನಿರಲು ಸಾಧ್ಯವೇ ಆಗಲಿಲ್ಲ. ನಾನು ಅವಳಿದ್ದಲ್ಲಿ ಹೊರಟೆ.

**
            ನಮ್ಮೂರಿನ ಬಸ್ಸಿನ ರಶ್ಶಿನಲ್ಲಿ ಜೋತಾಡುತ್ತ ನಿಂತಿದ್ದ ನಾನು ನನ್ನೆದುರಿನ ಸೀಟಿನಲ್ಲಿ ಕುಳಿತಿದ್ದ ಅಂಬಿಕಾಳನ್ನು ಅದಕ್ಕೂ ಮೊದಲೇ ಹಲವು ಸಾರಿ ನೋಡಿದ್ದೆನಾದರೂ ಹೆಚ್ಚಿನ ಗಮನ ಹರಿಸಿರಲಿಲ್ಲ. ಕಾಲೇಜಿನ ದಿನಗಳಾದ್ದರಿಂದ ನನ್ನ ಗೆಳೆಯರು ಅವಳನ್ನು ಕಂಡು ಹಲವಾರು ಬಾರಿ ಕಾಟ ಕೊಟ್ಟಿದ್ದರು. ಆ ದಿನಗಳಲ್ಲಿ ನಾನು ಹುಡುಗಿಯರ ಬಳಿ ಮಾತನಾಡುತ್ತೇನೆ ಎನ್ನುವ ಆರೋಪಗಳನ್ನು ಹೊತ್ತಿದ್ದರಿಂದ ಇವಳನ್ನು ಮಾತನಾಡಿಸಿ ಇವಳ ಹೆಸರನ್ನು ಕೇಳಬೇಕು ಎನ್ನುವ ಸವಾಲನ್ನು ನನ್ನ ಗೆಳೆಯರು ಮುಂದಿಟ್ಟಿದ್ದರು. ಹುಂಭ ದೈರ್ಯದಿಂದ ಆಗಬಹುದು ಎಂದಿದ್ದೆ.
            ಹಲವು ದಿನಗಳು ಕಳೆದಿದ್ದರೂ ಆಕೆಯನ್ನು ಮಾತನಾಡಿಸುವ ಧೈರ್ಯ ನನಗೆ ಬಂದಿರಲಿಲ್ಲ. ಆದರೆ  ನಾನು ಬಸ್ಸಿನ ರಶ್ಶಿನಲ್ಲೂ ಅವಳನ್ನು ಗಮನಿಸಿದ್ದೆ. ಆಕೆಯೂ ನನ್ನನ್ನು ಗಮನಿಸಿ ಕಿರುನಗೆ ಎಸೆದಿದ್ದಳು. ನನಗೆ ಒಮ್ಮೆ ಅಚ್ಚರಿ ಹಾಗೂ ಆಘಾತ ಎರಡೂ ಒಟ್ಟಿಗೆ ಆಗಿತ್ತು. `ಹಾಯ್..' ಎಂದಿದ್ದೆ. `ನಮಸ್ತೆ..' ಎಂದವಳು `ನೀವು ಅವರಲ್ವಾ.. ನಿಮ್ಮ ಕಥೆಗಳನ್ನು ಓದ್ತಾ ಇರ್ತೀನಿ.. ಬಹಳ ಚನ್ನಾಗಿರ್ತವೆ..' ಎಂದು ಹೇಳಿದ್ದಳು. ಅಷ್ಟೇ ಅಲ್ಲದೇ ತನ್ನ ಪಕ್ಕದ ಸೀಟನ್ನು ನನಗಾಗಿ ಹಿಡಿದುಕೊಂಡು ನನಗೆ ನೀಡಿದ್ದಳು. ಆಕೆಯ ಪಕ್ಕ ಕುಳಿತಾಗಲೇ ನನಗೆ ಅವಳ ಕುರಿತು ಮೋಹ ಬೆಳೆದಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ. ತೀರಾ ಹತ್ತಿರದಿಂದ ಕುಳಿತು ಅವಳ ಮುಖವನ್ನು ನಾನು ಗಮನಿಸಿದ್ದೆ. ಯಾಕೋ ಆ ಮುಖದ ಮೇಲೆ ಆಕೆಯಿಟ್ಟುಕೊಂಡಿದ್ದ ಹಳೆಯ ಮೇಲಿನ ಚಿಕ್ಕದೊಂದು ಗೋಪಿಚಂದನದ ಬಿಂದು ನನ್ನನ್ನು ಬಿಟ್ಟು ಬಿಡದೇ ಕಾಡಿಬಿಟ್ಟತು. ನಾನೂ ಒಂದೆರೆಘಳಿಗೆ ನನ್ನನ್ನೇ ಮರೆತು ಆ ಬಿಂದುವನ್ನು ದಿಟ್ಟಿಸಿದ್ದೆ. ಆಕೆ ನನ್ನಬಳಿ ಪ್ರಶ್ನಾರ್ಥಕವಾಗಿ ನೋಡಿದ್ದಳು. ನಾನು ಕಸಿವಿಸಿಗೊಂಡು ಮುಖ ತಿರುಗಿಸಿದ್ದೆ. ನಾ ಕೇಳದಿದ್ದರೂ ಅವಳು ತನ್ನ ಪರಿಚಯವನ್ನು ಹೇಳಿಕೊಂಡಿದ್ದಳು. ನಾನು ನನ್ನ ಪ್ರವರ ಹೇಳುವ ವೇಳೆಗೆ ಆಕೆಯಿಳಿಯುವ ಸ್ಥಳ ಬಂದಿತ್ತು.
             ಅಲ್ಲಿಂದಾಚೆಗೆ ನನಗೂ ಅವಳಿಗೂ ಯಾವುದೋ ನಂಟು ಬೆಳೆಯಿತು. ಕಾಲೇಜಿನಲ್ಲಿ, ಕಾಲೇಜಿನ ದಾರಿಯಲ್ಲೆಲ್ಲ ನಾವು ಸಿಕ್ಕಾಗ ದೀರ್ಘ ಮಾತಿಗೆ ನಿಲ್ಲುತ್ತಿದ್ದೆವು. ಮಾತುಗಳ ನಂಟು ಮೊದಲು ನನ್ನಲ್ಲೇ ಪ್ರೇಮದ ಛಾಯೆಯನ್ನು ಮೂಡಿಸಿದ್ದು. ಕಾಲೇಜಿನಲ್ಲಿ ನಾವು ಇತರರಿಗೆ ಅಸೂಯೆ ಮೂಡುವಷ್ಟು ಮಾತನಾಡುತ್ತಿದ್ದೆವು. ನಮ್ಮ ನಡುವಿನ ಬಾಂಧವ್ಯ ದಿನದಿಂದ ದಿನಕ್ಕೂ ಬಲವಾಗುತ್ತಲೇ ಸಾಗುತ್ತಿತ್ತಾದರೂ ನಾನು ಅವಳ ಬಳಿಯಲ್ಲಿ ನನ್ನ ಮನಸ್ಸಿನ ಭಾವನೆಯನ್ನು ಹೇಳಿಕೊಳ್ಳಲೇ ಇಲ್ಲ. ನನ್ನ ಭಾವನೆಗಳನ್ನು ಹೇಳಿ, ಅವಳು ಅದನ್ನು ವಿರೋಧಿಸಿ ಎಲ್ಲಿ ನಮ್ಮ ಗೆಳೆತನಕ್ಕೂ ಕುತ್ತು ಬಂದು ಹೋಗುತ್ತದೆಯೋ ಎನ್ನುವ ದುಗುಡ ನನ್ನನ್ನು ಕಾಡಿದ ಕಾರಣ ನನ್ನ ಪ್ರೀತಿಯನ್ನು ಮನಸ್ಸಿನಲ್ಲೇ ಬೆಳೆಸಿಕೊಂಡಿದ್ದೆ.
             ನನ್ನ ಮನದಾಳದ ಭಾವನೆಗಳು ಮಿತ್ರ ಸಂಜಯನಿಗೆ ತಿಳಿದಿತ್ತು. ಆತನಿಗಂತೂ ನಮ್ಮಿಬ್ಬರ ಮಾತುಕತೆ ಮಜವನ್ನು ಕೊಟ್ಟಿದ್ದರೂ ನಾನು ನನ್ನ ಭಾವನೆಗಳನ್ನು ಹೇಳಲಾಗದೇ ಪಡಿಪಾಟಲು ಪಡುತ್ತಿರುವುದನ್ನು ಗಮನಿಸಿ ಖುಷಿ ಪಟ್ಟಿದ್ದೂ ಇದೆ. ಹೀಗಿದ್ದಾಗಲೇ ಒಂದು ದಿನ ಆತ ನನ್ನ ಭಾವನೆಗಳನ್ನು ಅವಳ ಬಳಿ ಹೇಳಿಬಿಟ್ಟಿದ್ದ. ನನಗೆ ಒಮ್ಮೆ ಬಾಂಬ್ ಬಿದ್ದಂತಾಗಿತ್ತು ಬಾಳಿನಲ್ಲಿ.
             ಮರುದಿನ ನಾನು ಅವಳಿಂದ ದೂರವುಳಿಯಬೇಕು ಎನ್ನುವ ಕಾರಣಕ್ಕಾಗಿ ಕಾಲೇಜಿಗೆ ಹೋಗಿರಲಿಲ್ಲ. ಅದರ ಮರುದಿನ ಹೋದೆ. ಹೋದವನು ಉದ್ದೇಶಪೂರ್ವಕವಾಗಿ ಅವಳಿಂದ ಕಣ್ತಪ್ಪಿಸಿಕೊಳ್ಳತೊಡಗಿದ್ದೆ.  ಅವಳೂ ನನ್ನನ್ನು ಹುಡುಕಿರಬೇಕು. ಸಂಜಯನ ಬಳಿಯೂ ನನ್ನನ್ನು ಹುಡುಕುವಂತೆ ಹೇಳಿರಬೇಕು. ಸಂಜಯ ಲೈಬ್ರರಿ ಮೂಲೆಯಲ್ಲಿ ಯಾರಿಗೂ ಕಾಣದಂತೆ ಕುಳಿತಿದ್ದ ನನ್ನನ್ನು ಹುಡುಕಿ ಬಂದಿದ್ದ. ಬಂದವನೇ `ಮಾರಾಯಾ.. ನಿನ್ನ ಹುಡುಕುವ ಉಸಾಬರಿ ಬೇಡ ನಂಗೆ..' ಎಂದು ಹೇಳುತ್ತ ತುಂಟ ನಗೆ ನಕ್ಕಿದ್ದ.
            ಸಂಜಯನಿಗೆ ಚೆಲ್ಲಾಟ.. ನನಗೆ ಪ್ರಾಣಸಂಕಟ ಎನ್ನುವಂತಾಗಿತ್ತು. ಮಾಡುವ ಕಿತಾಪತಿ ಮಾಡಿ ಈಗ ನಗುತ್ತಿದ್ದಾನೆ, ಹಿಡಿದು ಬಡಿದುಬಿಡೇಕು ಎನ್ನಿಸಿಬಿಟ್ಟಿತ್ತು ಒಮ್ಮೆ. ಕಷ್ಟಪಟ್ಟು ಸಮಾಧಾನ ಮಾಡಿಕೊಂಡಿದ್ದೆ. ಆತ ಹೇಳಿದರೂ ನಾನು ಅವಳಿಗೆ ಸಿಕ್ಕಿರಲಿಲ್ಲ. ನಾಲ್ಕೈದು ದಿನವಾದರೂ ಅವಳ ದೃಷ್ಟಿಯಿಂದ ನಾನು ತಪ್ಪಿಸಿಕೊಳ್ಳುತ್ತಲೇ ಇದ್ದೆ. ಅವಳೂ ಹುಡುಕಾಡಿರಬೇಕು. ಕೊನೆಗೊಂದು ದಿನ ನಾನು ಬರುವುದನ್ನೇ ಕಾಯುತ್ತ ಕಾಲೇಜು ಬಾಗಿಲಲ್ಲಿ ನಿಂತಿದ್ದಳು. ನಾನು ದೂರದಿಂದ ಕಂಡವನೇ ಪಕ್ಕಕ್ಕೆ ಸರಿದು ತಪ್ಪಿಸಿಕೊಳ್ಳಲು ಯತ್ನಿಸಿದೆ. `ನಿಲ್ಲೋ ಮಾರಾಯಾ.. ನಿನ್ ಹತ್ರ ಮಾತಾಡಬೇಕು.' ಎಂದಳು.. ನಾನಾಗಲೇ ಬೆವರಿ, ಬೆದರಿ ನೀರಾಗಿದ್ದೆ.
             `ಏನ್ ಮಾರಾಯಾ.. ಇಸ್ಟ್ ದಿನ ಆಯ್ತು..  ಎಲ್ಲೋಗಿದ್ದೆ..? ಎಲ್ಲಂತ ಹುಡುಕೋದು ನಿನ್ನ? .. ಯಾರ್ಯಾರನ್ನು ಬಿಟ್ಟು ಹುಡುಕಿಸೋದು ನಿನ್ನ ? ಪೇಪರಿನಲ್ಲಿ ಕಾಣೆಯಾಗಿದ್ದಾರೆ ಅಂತ ಕೊಡಬೇಕೆನೋ ಅಂದುಕೊಂಡಿದ್ದೆ..' ಎಂದಾಗ ನಾನು ಪೆಚ್ಚು ನಗೆ ಬೀರಿದ್ದೆ.
             `ಏನೋ ಸುದ್ದಿ ಕೇಳಿದ್ನಲ್ಲಾ..' ನೇರವಾಗಿ ಅವಳು ಕೇಳಿದ್ದಳು.. ನಾನು ಬೆಚ್ಚಿದ್ದೆ. ನಾನು ಏನಿಲ್ಲ ಎಂದು ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳುವುದರೊಳಗಾಗಿ ನನ್ನ ಕಣ್ಣಿನಲ್ಲಿ ಕಣ್ಣನಿಟ್ಟು ಮಾತಿಗೆ ಶುರುಹಚ್ಚಿಕೊಂಡಿದ್ದಳು.
              `ಏನೋ.. ನಿನ್ ಮನಸ್ಸಿನ ಭಾವನೆಗಳಿಗೆ ಬೇರೊಬ್ಬರು ಧ್ವನಿಯಾಗ್ಬೇಕಾ..? ನಿಂಗೆ ಅನ್ನಿಸಿದ್ದನ್ನು ಇನ್ಯಾರೋ ಬಂದು ಹೇಳಬೇಕಾ..? ಯಾಕೆ ನೀನೇ ಹೇಳೋದಿಲ್ಲ..? ನೀನೆ ನೇರವಾಗಿ ಬಂದು ಹೇಳಿದ್ರೆ ಏನಾಗ್ತಿತ್ತು..? ನಾ ಏನಾದ್ರೂ ಹೇಳ್ ಬಿಡ್ತೀನಿ ಅನ್ನೋ ಭಯವಿತ್ತಾ..? ಕೋತಿ..' ಎಂದಳು. ನಾನು ಮತ್ತೊಮ್ಮೆ ಪೆಚ್ಚಾಗಿದ್ದೆ.
               `ನಿನ್ನಲ್ಲಿ ಮೂಡಿದ ಭಾವನೆ ನನ್ನಲ್ಲೂ ಇತ್ತು ಕಣೋ.. ಆದರೆ  ನನಗೂ ಹೇಳಿಕೊಳ್ಳಲು ಏನೋ ಒಂಥರಾ ಆಗ್ತಿತ್ತು. ಒಳ್ಳೆ ಸಮಯಕ್ಕೆ ಕಾಯ್ತಾ ಇದ್ದೆ. ಆ ದಿನ ಸಂಜಯ ಬಂದು ಹೇಳಿದಾಗ ನಾನು ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಕುಣಿದಾಡಿದ್ದೆ. ನನ್ನ ಮನಸ್ಸಿನ ಭಾವನೆ ಅವನಿಗೂ ಗೊತ್ತಾಗಿತ್ತು. ಆತನೇ ನಿನ್ನ ಬಳಿ ಹೇಳಿರಾತ್ರೇನೋ ಅಂದುಕೊಂಡಿದ್ದೆ. ಆದರೆ ನಿನ್ನನ್ನು ನೋಡಿದ ಮೇಲೆ ಹಾಗೆ ಹೇಳಿಲ್ಲ ಅನ್ನೋದು ಗೊತ್ತಾಯ್ತು ಬಿಡು. ಮತ್ತೆ.. ನಿನ್ನ ಭಾವನೆಗಳನ್ನು ಇನ್ನೊಬ್ಬರ ಬಳಿ ಹೇಳಿ ಅವರ ಮೂಲಕ ನಾನು ತಿಳಿದುಕೊಳ್ಳುವಂತೆ ಮಾಡಬೇಡ ಮಾರಾಯಾ..' ಎಂದು ಹೇಳಿ ನಕ್ಕಿದ್ದಳು ಅಂಬಿಕಾ..
                ನನ್ನ ಪ್ರೀತಿಗೆ ಅವಳು ಒಪ್ಪಿದಳಾ.. ಬಿಟ್ಟಳಾ..? ಗೊಂದಲ ಇನ್ನಷ್ಟು ಜಾಸ್ತಿಯಾಗಿತ್ತು.. ಅರ್ಥವಾಗದವನಂತೆ `ನನ್ನಲ್ಲಿ ಮೂಡಿದ ಭಾವನೆಗೆ ನಿನ್ನ ಉತ್ತರ..?' ಎಂದು ಕೇಳಿದ್ದೆ.. `ಇನ್ನೆಷ್ಟು ಸಾರಿ ಹೇಳಬೇಕೋ ಕೋತಿ ನಿಂಗೆ.. ಅರ್ಥವಾಗೋದಿಲ್ವಾ.. ಹೂಂ ಹೂಂ ಹೂಂ..' ಎಂದು ಹೇಳಿದಾಗ ಅವಳನ್ನೊಮ್ಮೆ ತಬ್ಬಿ ಮುದ್ದಾಡಬೇಕೆನ್ನಿಸುವಷ್ಟು ಸಂತೋಷವಾಗಿತ್ತು ನನಗೆ.. ಸುತ್ತಮುತ್ತ ನೋಡಿ ಸುಮ್ಮನಾಗಿದ್ದೆ.
                 ಆ ನಂತರದ ದಿನಗಳು ನಮ್ಮ ಪಾಲಿಗೆ ಅತ್ಯಂತ ಹರ್ಷದಾಯಕವಾಗಿದ್ದವು. ಪ್ರೇಮದಲ್ಲಿ ನಾವು ಮಿಂದೆದ್ದಿದ್ದೆವು. ಆದರೆ ಯಾವುದೇ ಕಾರಣಕ್ಕೂ ನಾನಾಗಿಯೇ ಅವಳ ಬಳಿ ಅವಳ ಹಿನ್ನೆಲೆಯನ್ನು ಕೇಳಿರಲಿಲ್ಲ. ಅವಳಾದರೂ ಹೇಳುತ್ತಾಳೆಂದುಕೊಂಡಿದ್ದೆ ಹೇಳಿರಲಿಲ್ಲ. ಹುಡುಗಿಯ ಎದುರು ಹುಡುಗರು ಹಲವು ಸಾರಿ ಭಾವನಾತ್ಮಕವಾಗಿ ಬೆತ್ತಲಾಗುತ್ತಾರೆ ಎಂಬ ಮಾತಿದೆ. ನಾನು ನನ್ನ ಮನಸ್ಸಿನ ಎಲ್ಲ ಭಾವನೆಗಳನ್ನೂ ಅವಳೆದುರು ತೆರೆದಿಟ್ಟಿದ್ದೆ. ನನ್ನದೇ ಎಂಬಂತಹ ಗುಟ್ಟು ಏನೊಂದೂ ಇರಲಿಲ್ಲ. ನನ್ನ ಮನೆಗೆ ನಾನು ಅನೇಕ ಸಾರಿ ಅವಳನ್ನು ಕರೆದೊಯ್ದಿದ್ದೆ. ಅವಳೂ ನನ್ನನ್ನು ಅವಳ ಮನೆಗೆ ಕರೆದೊಯ್ದಿದ್ದಳು. ಮನೆಯಲ್ಲಿ ಅವಳಿಗೆ ಅಪ್ಪನಿದ್ದ. ತಾಯಿಯಿರಲಿಲ್ಲ. ತಾಯಿಯ ಕುರಿತು ಕೇಳಿದಾಗ ಮೌನವಾಗಿದ್ದಳು. ನಾನು ಅವಳ ಮನದ ಭಾವನೆಯನ್ನು ಅರಿತು ಮತ್ತೆ ಪ್ರಶ್ನಿಸಲು ಹೋಗಿರಲಿಲ್ಲ.
                ಈಗ ಜಯಂತನ ಮಾತುಗಳು ಮತ್ತೆ ನನ್ನನ್ನು ಕಾಡಲು ಆರಂಭಿಸಿದ್ದವು. ತಾಯಿಯಿಲ್ಲ ತನಗೆ ಎಂದು ಅವಳು ಸುಳ್ಳು ಹೇಳಿದಳಾ..? ಅಥವಾ ಬೇಕಂತಲೇ ನನ್ನಿಂದ ವಿಷಯವನ್ನು ಮುಚ್ಚಿಟ್ಟಳಾ..? ಬ್ರಹ್ಮಚಾರಿಯ ಮಗಳು ಎಂದರೆ ಏನರ್ಥ..? ಬ್ರಹ್ಮಚಾರಿಗೆ ಮಕ್ಕಳಿರಲು ಸಾಧ್ಯವೇ..? ಎಂದೆಲ್ಲ ಆಲೋಚಿಸಿದೆ. ಏನಾದರಾಗಲಿ ಅವಳ ಬಳಿ ಈ ಕುರಿತು ಕೇಳಲೇಬೇಕು ಎಂದುಕೊಂಡು ಅಂದು ಹೊರಟಿದ್ದೆ. ಏನು ಕಾರಣವೋ.. ಆದಿನ ಅವಳು ನನಗೆ ಸಿಗಲೇ ಇಲ್ಲ. ಅನುಮಾನದ ಮನಸ್ಸಿಗೆ ಪ್ರತಿಯೊಂದೂ ಅನುಮಾನವಾಗಿಯೇ ಕಾಣುತ್ತದಂತೆ.. ನನಗೂ ಈಕೆ ಆ ದಿನ ಸಿಗದೇ ಇದ್ದುದು ಉದ್ದೇಶಪೂರ್ವಕದಂತೆ ಅನ್ನಿಸಿತು. ಮರುದಿನ ಸಿಕ್ಕಳು. ಸಿಕ್ಕ ತಕ್ಷಣ ಮೊದಲು ಕೇಳಿದ್ದೇ ಈ ಕುರಿತು.
                `ಅಲ್ಲಾ ಕಣೇ.. ನಿನ್ನನ್ನು ಎಲ್ಲರೂ ಬ್ರಹ್ಮಚಾರಿಯ ಮಗಳು ಅಂತ ಕರೀತಾರಂತೆ.. ಯಾಕೆ ಹೀಗೆ..?' ಎಂದು ಕೇಳಿದೆ.
                `ನನ್ನೆದುರು ನಗುತ್ತ ಬಂದ ಆಕೆಯ ಮುಖ ಒಮ್ಮೆಲೇ ಮುದುಡಿತು. ನಾನು ಮುಂದುವರಿದು ಕೇಳಿದೆ. `ಬ್ರಹ್ಮಚಾರಿಯ ಮಗಳಾ..? ಎಂತಾ ಹೆಸರು ಮಾರಾಯ್ತಿ.. ಮಜಾ ಇದೆ ನೋಡು.. ಬ್ರಹ್ಮಚಾರಿಗೆ ಮಗಳಿರಲು ಸಾಧ್ಯವೇ..? ಬ್ರಹ್ಮಚಾರಿಗೆ ಮಗಳಿದ್ದಾಳೆ ಎಂದರೆ ಅವನೆಂತ ಬ್ರಹ್ಮಚಾರಿಯಾಗಲು ಸಾಧ್ಯ..? ಬ್ರಹ್ಮಚಾರಿ ಹಾಗೂ ಮಗಳು.. ಎಂತಾ ವಿತ್ರ ಅಲ್ವಾ..? ಹಿಂಗಂದ್ರೆ ಬ್ರಹ್ಮಚಾರಿ ವ್ಯಕ್ತಿತ್ವದ ಬಗ್ಗೆ ಅನುಮಾನ ಹುಟ್ಟುತ್ತದಲ್ಲ.. ನಿಂಗೆ ಬ್ರಹ್ಮಚಾರಿ ಮಗಳು ಅಂತ ಕರೀತಾರಂತೆ.. ಯಾಕೆ..? ಏನೋ ಅನುಮಾನ ಮೂಡ್ತಾ ಇದೆಯಲ್ಲ..' ಎಂದು ಕೇಳಿದೆ.. ಎಂದಿನ ಸಲಿಗೆ.. ಖುಶಾಲಿಯಿಂದ ಮಾತಾಡಿದ್ದೆ.. ಸ್ವಲ್ಪ ಉಢಾಫೆಯೂ ಇತ್ತೆನ್ನಿ..
               ಆಕೆ ಏನೊಂದೂ ಮಾತಾಡಲಿಲ್ಲ. ಮುಖ ಕಪ್ಪಾಗಿತ್ತು. ನನ್ನನ್ನು ಕೈಹಿಡಿದುಕೊಂಡವಳೇ ಸೀದಾ ಎಳೆದುಕೊಂಡು ಹೋದಳು.. ನಾನು ಆಕೆಯ ಹಿಂದೆ ನಡೆದುಕೊಂಡು ಹೋದೆ.. ಎಲ್ಲಿಗೆ ಕರೆದೊಯ್ಯುತ್ತಿದ್ದಾಳೆ ನಾನು ಕೇಳಲಿಲ್ಲ.. ಕೇಳುವ ಮನಸ್ಸಾಗಲಿಲ್ಲ.. ಅಪರೂಪಕ್ಕೆ ಯಾಕೋ ನನಗೆ ಭಯವಾಯಿತು.. ಮೌನವಾಗಿ ನಡೆಯುತ್ತಿದ್ದ ಅವಳನ್ನು ಹಿಂಬಾಲಿಸಿದೆ. ಮನಸ್ಸಿನೊಳಗೇ ಅವಳು ಅಳುತ್ತಿದ್ದಳಾ..? ಗೊತ್ತಾಗಲಿಲ್ಲ..

(ಮುಂದುವರಿಯುತ್ತದೆ..)  

Wednesday, February 5, 2014

My Heart

My Heart is full of
Pother and Pain.
It is also full of pine.
And sweet memory rain ||4||

My heart is a black den
Bad luck is its wilkin.
And it is a large desert
It is full of small sands.  ||8||

But my heat wants a
Smile and sweet love
And also friendship
And praise with like  ||12||





** (ಇದು ನನ್ನ ಇಂಗ್ಲೀಷ್ ನ ಮೊದಲ ಕವಿತೆ. ಖಂಡಿತವಾಗಿಯೂ ಈ ಕವಿತೆ ಹೇಗಿದೆಯೋ ಗೊತ್ತಿಲ್ಲ. ಕಾಲೇಜಿಗೆ ಹೋಗುವಾಗ ನಮ್ಮ ಇಂಗ್ಲೀಷ್ ಪ್ರೊಫೆಸರ್ ಒಬ್ಬರಿಗೆ ಕೊಟ್ಟಿದ್ದೆ. ಅಭಿಪ್ರಾಯ ತಿಳಿಸಲು ಹೇಳಿದ್ದೆ. ಇದುವರೆಗೂ ಅವರ ಅಭಿಪ್ರಾಯಕ್ಕೆ ಕಾಯುತ್ತಲೇ ಇದ್ದೇನೆ. ಕನ್ನಡ ಮೀಡಿಯಮ್ಮಿನ ಹುಡುಗನೊಬ್ಬ ಇಂಗ್ಲೀಷ್ ಕವಿತೆ ಬರೆದರೆ...ಇದು ಅದೇ.. ಖಂಡಿತ ಕವಿತೆಯಲ್ಲಿ ಸಾಕಷ್ಟು ತಪ್ಪುಗಳಿವೆ ನನಗೆ ಗೊತ್ತಿದೆ.. ನಿಮ್ಮ ಅಭಿಪ್ರಾಯ ಬರಲಿ.)
(ಕವಿತೆ ಬರೆದಿದ್ದು 28-01-2007ರಂದು ದಂಟಕಲ್ಲಿನಲ್ಲಿ)