|
(ಹುಲಿಯ ಸಾಂದರ್ಭಿಕ ಚಿತ್ರ) |
`ಭತ್ತಗುತ್ತಿಗೆ ಗುಡ್ಡದ ತಲೆಯ ಮುರ್ಕಿ ಇದ್ದಲಾ ಅಲ್ಲೊಂದು ದೊಡ್ ಮರ ಇದ್ದು ಅಲ್ಲೇಯಾ
ಆನು ಹುಲಿ ಹೊಡದಿದ್ದು..' ಎಂದು ಐದನೆಯ ಬಾರಿಯೋ, ಆರನೆಯ ಬಾರಿಯೋ ರಂಗಪ್ಪಜ್ಜ ಹೇಳಿದಾಗ ಈ ವಿಷಯದ
ಗತಿ ಕಾಣಸದೇ ಸೈ ಎಂದುಕೊಂಡು ಆತ ಹುಲಿ ಹೊಡೆದ ಜಾಗವನ್ನು ನೋಡಿ ಬರುವಾ ಎಂದು ಹೊರಟೆ.
ನಾನು ಆ ಜಾಗವನ್ನು ನೋಡಲು ಆತ ಹುಲಿ ಹೊಡೆದಿದ್ದೇನೆ ಎಂದು ಹೇಳಿದ್ದೊಂದೆ ಕಾರಣವಿರಲಿಲ್ಲ. ಇನ್ನೊಂದು ಪ್ರಮುಖ ಕಾರಣವೂ ಇತ್ತು. ನಮ್ಮೂರ ಸುತ್ತಮುತ್ತಲೆಲ್ಲ `ರಂಗಪ್ಪಜ್ಜ ಹುಲಿ ಹೊಡೆದ್ಹಾಂಗೆ..' ಎಂಬ ಗಾದೆಮಾತು ಚಾಲ್ತಿಯಲ್ಲಿತ್ತು. ನಮ್ಮೆದುರಿನ ರಂಗಪ್ಪಜ್ಜ ಗಾದೆ ಮಾತಾಗಿ ಪ್ರಚಲಿತದಲ್ಲಿದ್ದಾಗ ಆತ ಹುಲಿ ಹೊಡೆದಿದ್ದು ಹೌದಿರಬೇಕು ಎಂದುಕೊಂಡು ಹೊರಡಲು ಅನುವಾಗಿದ್ದೆ.
ಹುಲಿ ಹೊಡೆಯುವುದು ಸಾಮಾನ್ಯವೇ..? ಇಲಿಯನ್ನು ಕೊಲ್ಲಲು ಹಲವರು ಹೆದರುವ ಇಂದಿನ ದಿನಮಾನದಲ್ಲಿ ಹುಲಿ ಹೊಡೆಯುವುದು ಅಂದರೆ ಸುಲಭವೇನಲ್ಲ ಬಿಡಿ. ರಂಗಪ್ಪಜ್ಜ ಇಂತಹ ಸಾಹಸ ಮಾಡಿದ್ದಾನೆ ಎಂದಾಗಲೆಲ್ಲ ಒಳಗೊಳಗೆ ಖುಷಿ. ಚಿಕ್ಕಂದಿನಿಂದ ರಂಗಪ್ಪಜ್ಜ ಎದುರು ಬಂದಾಗಲೆಲ್ಲ ಅನೇಕ ಸಾರಿ `ರಂಗಪ್ಪಜ್ಜ .. ಹುಲಿ ಹೊಡೆದಿದ್ನಡಾ ಮಾರಾಯಾ..' ಎಂದು ಹೇಳುವ ಮೂಲಕ ರಂಗಪ್ಪಜ್ಜ ನೆಂದರೆ ಕನ್ನಡ ಚಿತ್ರರಂಗದ ವಿಲನ್ನೇ ಇರಬೇಕು ಎಂದು ಅನೇಕರು ನನ್ನಲ್ಲಿ ಭೀತಿಯನ್ನು ಹುಟ್ಟುಹಾಕಿದ್ದರು.
ಅದಕ್ಕೆ ತಕ್ಕಂತೆ ಸದಾ ಕಿಲಾಡಿ ಮಾಡುವ ನಮ್ಮ ವಿರುದ್ಧ ರಂಗಪ್ಪಜ್ಜ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿದ್ದ. ಆಗಾಗ ತನ್ನ ಊರುಗೋಲಿನಿಂದ ಬಾಸುಂಡೆ ಬರುವಂತೆ ಬಡಿದಿದ್ದೂ ಇದೆ. ಇಂತಹ `ರಂಗಪ್ಪಜ್ಜ ಹುಲಿ ಹೊಡೆದಿದ್ನಡಾ..' ಎಂದು ನಮ್ಮೂರ ಹಿರಿಯರ ಆದಿಯಾಗಿ ಹೇಳುತ್ತಿದ್ದ ಮಾತು ಚಿಕ್ಕಂದಿನಲ್ಲಿ ಭಯವನ್ನು ಹುಟ್ಟಿಸಿದರೂ ದೊಡ್ಡವನಾದ ಮೇಲೆ ಕುತೂಹಲಕ್ಕೆ ಕಾರಣವಾಗಿತ್ತು.
ದೊಡ್ಡವನಾದಂತೆಲ್ಲ ರಂಗಪ್ಪಜ್ಜ ನ ಮೇಲಿದ್ದ ಭಯ ದೂರವಾಗಿತ್ತು. ಅಷ್ಟರಲ್ಲಿ ವಯಸ್ಸಾಗಿದ್ದ ರಂಗಪ್ಪಜ್ಜ ತನ್ನ ಸಿಟ್ಟು ಸೆಡವನ್ನು ದೂರ ಮಾಡಿಕೊಂಡು ಪರಿಸ್ಥಿತಿಗೆ ತಕ್ಕಂತೆ ಅಸಹಾಯಕತೆಯನ್ನು, ಸೌಮ್ಯ ಸ್ವಭಾವವನ್ನೂ ಹೊಂದಿದ್ದ. ನಾನೂ ಕಾಲೇಜಿಗೆ ಹೋಗಿ ಬರುತ್ತಿದ್ದೆನಾದ್ದರಿಂದ ಆಗಾಗ ಮಾತಿಗೆ ಸಿಕ್ಕು `ಹ್ವಾ..ಶಿರಸಿಂದ ಬರಕಿದ್ರೆ ಸಂಯುಕ್ತ ಕರ್ನಾಟಕ ತಗಂಡು ಬಾರಾ..ಓದಕಾಗಿತ್ತು..' ಎಂದು ಹೇಳುವ ರಂಗಪ್ಪಜ್ಜ ಮಾತಿಗೆ ಪೀಠಿಕೆ ಹಾಕುತ್ತಿದ್ದ. ನಾನೂ ಮೊದ ಮೊದಲು ಭಯದಿಂದ ಮಾತನಾಡುತ್ತಿದ್ದೆ. ಕೊನೆ ಕೊನೆಗೆ ಮಾತು ಆಪ್ತವಾಗುವ ಹಂತಕ್ಕೆ ಬಂದಿತ್ತು. ಇಂತಹ ಮಾತಿನ ಒಂದು ದಿನ ನಾನು ಕುತೂಹಲ ತಡೆಯಲಾರದೇ `ರಂಗಪ್ಪಜ್ಜಾ.. ನೀನು ಹುಲಿ ಹೊಡೆದಿದ್ಯಡಲಾ..ಯಂಗೆ ಆ ಕಥೆ ಹೇಳಾ..' ಎಂದು ಮಾತಿಗೆಳೆದಿದ್ದೆ.
ತನ್ನ ಯವ್ವನದಲ್ಲಿ ಹುಲಿಯಂತೆಯೇ ಅಬ್ಬರದಿಂದ ಮೆರೆದಿದ್ದ ರಂಗಪ್ಪಜ್ಜ ನ ಬಳಿ ಆತನ ಯವ್ವನದ ದಿನಗಳ ಬಗ್ಗೆ ನಾನು ಹೇಳು ಎಂದಾಗ ಆತ ಬಿಡುತ್ತಾನೆಯೇ..? ವಯಸ್ಸಾದ ಮೇಲೆ ಆತನಿಗೂ ಹೊತ್ತು ಹೋಗಬೇಕು. ಮನೆಯಲ್ಲಿ ಮಾತುಕೆಳುತ್ತಿದ್ದವರೆಲ್ಲ ಈಗ ದೊಡ್ಡವರಾಗಿದ್ದಾರೆ. ಆತನಿಗೆ ಮಾತನಾಡಲು ಒಬ್ಬರು ಬೇಕಿತ್ತು. ಅದೇ ಸಮಯಕ್ಕೆ ನಾನು ಸಿಕ್ಕು ಕೇಳಿದೆ. `ತಡಿಯಾ ತಮಾ ಚಾ ಕುಡ್ಕತ್ತ ಮಾತಾಡನಾ..' ಎಂದು ಹೇಳಿ ಮೊಟ್ಟ ಮೊದಲನೇ ಸಾರಿ ತಾನು ಹುಲಿ ಹೊಡೆದ ಕಥೆಯನ್ನು ಹೇಳಲು ಶುರು ಮಾಡಿದ್ದ. ತೊಂಭತ್ತು ವಸಂತಗಳನ್ನು ಮೀರಿದ್ದ ರಂಗಪ್ಪಜ್ಜ ತನ್ನ ಇಪ್ಪತ್ತರ ಹರೆಯದಲ್ಲಿ ಮಾಡಿದ್ದ ಸಾಹಸದ ವಿವರವನ್ನು ಕೇಳಲು ನಾನು ಅವರ ಮನೆಯ ಖುರ್ಚಿಯ ತುದಿಯಲ್ಲಿ ಚೂಪಗೆ ಕುಂತಿದ್ದೆ.
**
`ನಂಗಾಗ ಇಪ್ಪತ್ತೋ ಇಪ್ಪತ್ತೈದೋ.. ಸಮಾ ನೆನಪಿಲ್ಲೆ.. ಆಗ ಆನು ಅಂದ್ರೆ ಸುತ್ತಮುತ್ತಲೆಲ್ಲ ಭಯಂಕರ ಹೆದರ್ತಿದ್ದ. ಉರಾಉರಿ ಕಾಲ.. ಯನ್ನ ಉರಾಉರಿ ನೋಡಿ ಎಷ್ಟ್ ಜನ ಯನ್ನ ಅಪ್ಪಯ್ಯನ ಕೈಲಿ ಬಂದ್ ಪುಕಾರು ಹೇಳಿದ್ವೇನ. ಯನ್ನ ಅಪ್ಪಯ್ಯನೂ ಅಷ್ಟೇ ಅಬ್ಬರದ ಮನುಷ್ಯ ಆಗಿದ್ದ. ಅದಕಾಗೇ ಆ ದಿನಗಳಲ್ಲಿ ಆನು ಬಹಳಷ್ಟು ಹಾರಾಡಿದ್ರೂ ಅಂವ ಯಂಗೆ ಎಂತದ್ದೂ ಮಾಡ್ತಿದ್ನಿಲ್ಲೆ..' ಎಂದ.
`ಹೂಂ.. ಹೂಂ..'ನಾನು
'ಈಗ ಯಂಗೆ ತೊಂಭತ್ತಾತ ಮಾರಾಯಾ.. ಯಂಗೆ ಇಪ್ಪತ್ತು ವರ್ಷದ ಆಜು ಬಾಜಲ್ಲಿ ನಡೆದಿದ್ದು ಅಂದ್ರೆನಿಂಗೆಂತದಾದ್ರೂ ತಲಿಗೆ ಹೋಗ್ಲಕ್ಕ..? ಆಗಿನ ಕಾಲ, ಹೆಂಗಿತ್ತು ಗೊತ್ತಿದ್ದ.. ಈ ಊರಿದ್ದಲಾ ಇದರ ಸುತ್ತಮುತ್ತ ಈಗ ಬೋಳು ಗುಡ್ಡ ಕಾಣ್ತಲಾ.. ಆಗೆಲ್ಲಾ ಬರೀ ಕಾನೇ ಇದ್ದಿತ್ತಾ.. ಈಗ ಯಮ್ಮನೆ ಕೊಟ್ಗೆ ಇದ್ದಲಾ ಅಲ್ಲೀವರಿಗೆ ಹುಲಿ ಬಂದು ದನ-ಕರ ಎಲ್ಲಾ ಹೊತ್ಕಂಡು ಹೋಗ್ತಿತ್ತು ಹುಲಿ. ಹುಲಿಯ ಅಬ್ಬರಕ್ಕೆ ದನಗಳ ಜೊತೆಗೆ ಜನಗಳೂ ಬೆಚ್ಚಿ ಬಸವಳಿದು ಬಿಟ್ಟಿದಿದ್ದ ಒಂದು ಕಾಲದಲ್ಲಿ.. ಬ್ರಿಟೀಷರ ಕಾಲ ಬೇರೆ ನೋಡು...' ಎಂದರು.
ನಾನು ಅವರು ಹೇಳಿದಂತೆಲ್ಲ ಕಣ್ಮುಂದೆ ಎಪ್ಪತ್ತು ವರ್ಷಗಳ ಹಿಂದಿನ ಚಿತ್ರಣ ಅಂದರೆ 1930-40ರ ದಶಕದ ಚಿತ್ರಣವನ್ನು ಕಟ್ಟಿಕೊಳ್ಳುತ್ತ ಹೋದೆ. ಅವರು ಹುಲಿಯನ್ನು ರೌಧ್ರ ಭಯಂಕರವಾಗಿ ಚಿತ್ರಿಸುತ್ತ ಹೋದರು. ನನ್ನ ಕಣ್ಣಮುಂದೆ ಹುಲಿಯೆಂದರೆ ರೌದ್ರ ಎನ್ನಿಸಲೇ ಇಲ್ಲ. ಅಂದಿನ ಹಾಗೆ ಹುಲಿ ಕಣ್ಣೆದುರಿಗೆ ಬಂದು ಎಡತಾಕಿ ಹಾಯ್ ಹೇಳಿ ಹೋಗುವುದಿಲ್ಲ ನೋಡಿ. ಹುಲಿಯ ಭಯವೂ ಇಲ್ಲವಲ್ಲ. ಅದಕ್ಕೆ ಹುಲಿಯೆಂದರೆ ಬಹುತೇಕ ದಂತಕಥೆಯಂತೆ, ಚಿಕ್ಕಮಕ್ಕಳ ಪಾಲಿಗೆ ಆಟಿಕೆಯಂತೆ ಅನ್ನಿಸಿತು. ಅದಕ್ಕೆ ತಕ್ಕಂತೆ ಚಿತ್ರಣ ಕೂಡ.
`ಯಂಗವ್ವು ನಿನ್ನಾಂಗಿದ್ದ ಕಾಲ ಅದು. ಬ್ರಿಟೀಷ್ ರೂಲಿತ್ತು. ಈಗಿನ ಹಾಂಗೆ ಹುಲಿ ಬೇಟೆ ನಿಷೇಧ ಇತ್ತಿಲ್ಲೆ. ಮತ್ತೊಂದ್ ವಿಷ್ಯ ಅಂದ್ರೆ ಆಗ ಬ್ರಿಟೀಷರೇ ಹುಲಿ ಹೊಡೆಯಲೆ ಅಡ್ಡಿಲ್ಲೆ ಹೇಳಿ ಹೇಳಿದಿದ್ದ. ಹುಲಿ ಹೊಡೆದು ಅದರ ಬಾಲ ತಂದು ಪಟೇಲನ ಬಳಿ ತೋರಿಶಿದವ್ಕೆ ಇನಾಮೂ ಸಿಕ್ತಿತ್ತು. ನಮ್ಮೂರಲ್ಲೂ ಹುಲಿ ಕಾಟ ಇತ್ತಲಾ.. ಹುಲಿ ಹೊಡಿಯದೇ ಸೈ..ಅಂದಕಂಡಿ..ಬಂದೂಕು ಬೇಕು ಹೇಳಿ ಅಪ್ಪಯ್ಯನ ಹತ್ರೆ ಕೇಳದು ಹೆಂಗೆ..? ತಲೆಬಿಶಿ ಶಿಕ್ಕಾಪಟ್ಟೆ ಆಗೋತು. ಅಪ್ಪಯ್ಯನ ಹತ್ರ ಕೇಳಿರೆ ಎಲ್ಲಾದ್ರೂ ಬೈದು ಸುಮ್ಮಂಗಿರಾ.. ನೀ ಹುಲು ಉಸಾಬರಿಗೆ ಹೋಗದು ಬ್ಯಾಡಾ.. ಹೇಳಿ ಹೇಳಿದ್ರೆ ಎನ್ನುವ ಹೆದ್ರಿಕೆ ಇತ್ತು.. ಕೊನಿಗೂ ಬಿಟ್ಟಿದ್ನಿಲ್ಲೆ.. ಕೇಳ್ದಿ ಹೇಳಾತು.. ಅಪ್ಪಯ್ಯ ಅಡ್ಡಿಲ್ಲೆ ಅಂದ್ ಬಿಟ್ನಾ..
ಈಗಿನ ಹಾಂಗೆ ಬಸ್ಸಿತ್ತಿಲ್ಯಲಾ..ಅದೇ ಖುಷಿಯಲ್ಲಿ ಶಿರಸಿಗೆ ನೆಡ್ಕಂಡು ಹೋಗಿ ಬಂದೂಕು ತಗಂಡ್ ಬಂದಿ.. ತಗಾ.. ಇದೇ ಇಲ್ನೋಡು.. ಇದೇ ಬಂದೂಕು..' ಎಂದು ಗಪ್ಪಜ್ಜ ಬಂದೂಕು ತೋರಿಸಿದಾಗ ರಂಗಪ್ಪಜ್ಜ ಹುಲಿ ಹೇಗೆ ಹೊಡೆದಿರಬಹುದು ಎನ್ನುವ ಕಲ್ಪನೆ ಮನದಲ್ಲಿ ಮೂಡಿ ರೋಮಾಂಚನ..
ಹಳೇ ತೇಗದ ಮರದ ದೊಡ್ಡ ಹಿಡಿಕೆ ಹೊಂದಿದ್ದ ಬಂದೂಕು ಅದು. 70 ವರ್ಷ ಹಿಂದಿಂದು ಬೇರೆ. ಈಗತಾನೆ ಎಣ್ಣೆ ಹಾಕಿ ಒರೆಸಿ ಇಟ್ಟಿದ್ದರೋ ಎನ್ನುವಂತೆ ಮಿಂಚುತ್ತಿತ್ತು. ತಗಳಾ.. ಹೇಳಿ ಕೊಟ್ಟಿದ್ದ.. ಎತ್ತಿಕೊಂಡೆ.. ರಾವಣ ಬಿಲ್ಲನ್ನೆತ್ತಲೂ ಅಷ್ಟು ಕಷ್ಟಪಟ್ಟಿದ್ದನೋ ಇಲ್ಲವೋ.. ಅದರ ಭಾರಕ್ಕೆ ಒಮ್ಮೆ ಆಯ ತಪ್ಪಿದೆ.. `ತಮಾ.. ನಿಂಗೆ ಎತ್ತಲೆ ಆಗ್ತಿಲ್ಲೆ.. ನೋಡು.. ಆಗ ಯಂಗವ್ವು ಇದನ್ನ ವಂದೇ ಕೈಯಲ್ಲಿ ಹಿಡಕಂಡು ಬೇಟೆ ಮಾಡ್ತಿದ್ಯ.. ಹುಲಿ ಹೊಡೆದಿದ್ದೂ ಇದರಲ್ಲೇಯಾ.. ಅಂದ್ರೆ ನೀ ನಂಬ್ತಿಲ್ಲೆ..' ಎಂದಾಗ ನನಗಂತೂ ವಿಸ್ಮಯ.
ಆತ ಮುಂದುವರಿದ..
`ಒಂದು ಚಳಿಗಾಲ ಹುಲಿಗೆ ಗತಿ ಕಾಣ್ಸವು ಹೇಳಿ ಆನು ಬಂದೂಕು ತಂದಿಟ್ಟು ತಿಂಗಳು ಗಟ್ಟಲೆ ಆಗಿತ್ತು.. ಆದರೆ ಎಲ್ಲೋ ಅದಕ್ಕೆ ಸೂಟು ಸಿಕ್ಕಿತ್ತು ಕಾಣ್ತು.. ಹುಲಿಯ ಪತ್ತೇನೆ ಇಲ್ಲೆ.. ಅಪ್ಪಯ್ಯಂತೂ ರಂಗಪ್ಪ ಬಂದೂಕು ತಗಬಂಜಾ ಹೇಳಿ ಹುಲಿಗೆ ಗೊತ್ತಾಗೋಜು ಕಾಣ್ತು.. ಹುಲಿ ಇತ್ಲಾಗೆ ಮಕಾನೆ ಹಾಕಿದ್ದಿಲ್ಲೆ ಹೇಳಿ ಹೇಳಲೆ ಶುರು ಮಾಡಿದ್ದ. ವಾರಕ್ಕೆ ಎರಡು ಸಾರಿಯಾದರೂ ಬಂದು ಕೊಟ್ಗೆ ಮೇಲೆ ದಾಳಿ ಮಾಡ್ತಾ ಇದ್ದಿದ್ ಹುಲಿ ಎತ್ಲಾಗ್ ಹೋತು ಅನ್ನೋ ತಲೆಬಿಸಿ... ಹಿಂಗೆ ಸ್ವಲ್ಪ ದಿನ ಆದ್ಮೇಲೆ ಒಂದಿನ ಮೂರು ಸಂಜೆ ಹೊತ್ತಲ್ಲಿ ನಮ್ಮೂರ್ ಜೀಡೆಹೊಂಡ ಇದ್ದಲಾ ಅಲ್ಲಿ ಹುಲಿ ಗಂವ್ ಅಂತಾ.. ಹೋ ಬಂತು ಹುಲಿ ಅಂದ್ಕಂಡಿ.. ಮೈಯೆಲ್ಲಾ ಚುರು ಚುರುಗುಡಲೆ ಹಿಡತ್ತು.. ಹುಲಿ ಹೊಡೆಯವ್ವು ಹೇಳಿ ಒಂಥರಾ ಖುಷಿ.. ಬಂದೂಕು ಎತ್ತಿ ಲೋಡು ಮಾಡಿಟ್ಗಂಡಿ..
ಸುಮಾರ್ ಹೊತ್ತಾತು..ಜೀಡೆ ಹೊಂಡದಲ್ಲಿ ಕೂಗೋ ಹುಲಿ ಮನೆ ಹತ್ರ ಬತ್ತೇ ಇಲ್ಲೆ.. ಯಂಗಂತೂ ಯದೆಯಲ್ಲಿ ಢವ ಢವ.. ರಾತ್ರಿ ಎಂಟ್ ಗಂಟೆ ಆದ್ರೂ ಹುಲಿ ಬಪ್ಪ ಲಕ್ಷಣನೇ ಇಲ್ಲೆ .. ಈ ಹುಲಿಗೆ ಹುಲಿ ಹಿಡಿಲಿ ಹೇಳಿ ಬೈದು ದಣೀ ಬಂದು ಊಟಕ್ ಕುಂತಿದ್ದಿದ್ದಿ.. ಕ್ವಟ್ಗೇಲಿ ದನ ಕರ ಎಲ್ಲಾ ಹುಯ್ಯಲೆಬ್ಸಿಬಿಟ್ಟ.. ಓಹೋ ಹುಲಿ ಬಂಜು ಅಂದ್ಕಂಡಿ.. ಅದಕ್ ಸರಿಯಾಗಿ ಅಪ್ಪಯ್ಯ.. ತಮಾ ಕೊಟ್ಗಿಗೆ ಹುಲಿ ಬಂಜು ಕಾಣ್ತು.. ನೋಡು.. ಎಂದ.. ಅಲ್ಲೆಲ್ಲೋ ಇಟ್ಟಿದ್ದು ಲಾಟನ್ ಹಿಡ್ಕಂಡು ಕ್ವಟ್ಗಿಗೆ ಹೋದ್ರೆ ಹೌದು.. ಹುಲಿ ಬಂಜು..'
ಎಂದು ನಿಟ್ಟುಸಿರಿಟ್ಟರು.. ನನಗೆ ಮುಂದೇನಾಯ್ತು ಅನ್ನುವ ಕುತೂಹಲ.. ಆಮೇಲೆ ಎಂದೆ.. ತಡಿಯಾ ತಮಾ ವಂದಕ್ಕೆ ಹೋಗಿ ಬತ್ತಿ ಎಂದ ರಂಗಪ್ಪಜ್ಜ .. ನನಗೆ ಸಿನೆಮಾ ಮಧ್ಯ ಇಂಟರ್ವಲ್ ಬಂದಂಗಾಯ್ತು.. ವಂದಕ್ಕೆ ಹೋದ ರಂಗಪ್ಪಜ್ಜ ವಾಪಾಸು ಬರುವುದರೊಳಗಾಗಿ ಬಂದೂಕನ್ನು ನೋಡಿ ಅದರ ಭಾರದ ಕಾರಣ ಉಸಾಬರಿ ಬ್ಯಾಡ ಎಂದು ಅದನ್ನು ದೂರಕ್ಕಿಟ್ಟಿದ್ದೆ.. ಅವರ ಮನೆಯ ಗೋಡೆಯ ಮೇಲೆ ಹತ್ತು ಹಲವು ತರಹೇವಾರಿ ಕ್ಯಾಲೆಂಡರುಗಳಿದ್ದರೂ ಅಲ್ಲೊಂದು ಕಡೆಗೆ ಪ್ಲಾಸ್ಟಿಕ್ ಹೂವಿನ ಹಾರ ಹಾಕಿದ ಒಂದು ಪೋಟೋ ಹಾಗೂ ಅದರ ಕೆಳಭಾಗದಲ್ಲಿದ್ದ ತಾಮ್ರಪಟ ಕಣ್ಣಿಗೆ ಕಂಡಿತು. ಹತ್ತಿರ ಹೋಗಿ ನೋಡಿದೆ. ಅದು ರಂಗಪ್ಪಜ್ಜ ನ ಅಪ್ಪಯ್ಯನ ಪೋಟೋ ಹಾಗೂ ಆತ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಭಾರತ ಸರ್ಕಾರ ನೀಡಿದ ಗೌರವ ಫಲಕವಾಗಿತ್ತು.. ಅದರಲ್ಲಿ ಬರೆದಿದ್ದ ಇಂಗ್ಲೀಷ್ ಹಾಗೂ ಹಿಂದಿ ಅಕ್ಷರಗಳನ್ನು ಹೆಕ್ಕಿ ಹೆಕ್ಕಿ ಓದಿ ಮುಗಿಸುವುದರೊಳಗಾಗಿ ಒಂದು ನಂಬರ್ ಕಾರ್ಯ ಮುಗಿಸಿ ಬಂದ ರಂಗಪ್ಪಜ್ಜ ಅವರ ಮನೆಯ ಕಾಲಮಣೆ ಮೇಲೆ ಕುಳಿತು ಮಾತಿಗೆ ತೊಡಗಿದ್ದರು.
`ತಮಾ... ಕವಳ ಹಾಕ್ತ್ಯನಾ..ತಗಾ..' ಎಂದು ಕವಳದ ಬಟ್ಟಲನ್ನು ನನ್ನ ಮುಂದಕ್ಕೆ ಹಿಡಿದರು. ನಾನು ಕವಳ ಹಾಕ್ತ್ನಿಲ್ಲೆ..' ಎಂದೆ. `ತಮಾ.. ಅಡಿಕೆ ಬೆಳೆಗಾರ ಆಕ್ಯಂಡು ನೀನು ಕವಳ ಹಾಕ್ತ್ನಿಲ್ಲೆ ಅಂದ್ರೆ ಬೆಳೆಗಾರರಿಗೆ ಮೋಸ ಮಾಡಿದಾಂಗೆ ಆಗ್ತಾ.. ನಾವು ಬೆಳೆದಿದ್ದು ನಾವೇ ತಿನ್ನದಿಂದ್ರೆ ಹೆಂಗೆ..? ಕವಳ ಹಾಕಡಿ, ಭಂಗಿ ಪಾನಕ ಕುಡಿಯಡಿ.. ನಿಂಗವ್ವು ಈಗಿನವ್ವು ಇಂತದ್ದು ಮಾಡದೇ ಅದೆಂತಾ ನಮನಿ ಬಾಳ್ವೆ ಮಾಡತ್ರೋ..' ಎಂದು ಛೇಡಿಸಿದರು. ನಾನು ನಾಚಿಕೆಯಿಂದ ತಲೆತಗ್ಗಿಸಿದೆ.
`ಎಲ್ಲಿ ತಂಕಾ ಹೇಳಿದ್ನಾ..' ಎಂದು ಕೇಳಿದಾಗ `ಕೊಟ್ಟಿಗೆಯಲ್ಲಿ ಹುಲಿ ಅಬ್ಬರ'ದ ಬಗ್ಗೆ ನೆನಪು ಮಾಡಿದೆ.
`ಕೊಟ್ಗೇಲಿ ಯನ್ನ ಕೈಯಲ್ಲಿದ್ದ ಲಾಟೀನಿನ ಬೆಳಕು ಆಮೇಲೆ ಬ್ಯಾಟರಿ ಲೈಟಿಗೆ ಎಂತದ್ದೂ ಸರಿ ಕಾಣ್ತಾ ಇತ್ತಿಲ್ಲೆ. ಮಸುಬು ಮಸುಬಾಗಿ ಕಾಣ್ತಾ ಇತ್ತು. ಹುಲಿಯದ್ದಾ ಬೇರೆ ಎಂತ್ರದ್ದೋ ಗೊತ್ತಾಜಿಲ್ಲೆ.. ಗ್ವರ್ ಗುಡದೊಂದು ಕೇಳತಿತ್ತು. ಸದ್ದು ಬಂದ್ ಬದಿಗೆ ಬಂದೂಕು ಗುರಿ ಇಟ್ಟು ಢಂ.. ಅನ್ನಿಸಿದಿ.. ಬಂದೂಕಿನಿಂದ ಗುಂಡು ಹಾರುವಾಗ ಒಂದ್ ಸಾರಿ ಬಂದೂಕು ಹಿಂದೆ ವದ್ಚು ನೋಡು.. ಯನ್ನ ಭುಜ ನಾಕ್ ದಿನ ಕೆಂಪಗೆ ಆಕ್ಯಂಡು ಇತ್ತು..ಇಡೀ ಅಘನಾಶಿನಿ ಕಣಿವೆಯಲ್ಲಿ ಅದರ ಶಬ್ದ ಗುಡ್ಡದಿಂದ ಗುಡ್ಡಕ್ಕೆ ಬಡಿದು ಪ್ರತಿಫಲನ ಆಗುತ್ತಿತ್ತು.. ಯಾರಾದ್ರೂ ಶಬ್ದ ಕೇಳಿ ಹೆದರ್ಕಂಡಿರ್ಲಕ್ಕೂ ಸಾಕು.. ಗುಂಡು ಹೊಡೆ ಮೇಲೆ ಎಂತದೋ ಓಡಿ ಹೋದಾಂಗೆ ಅನುಭವ ಆತು. ಹೆಂಗಿದ್ರೂ ಹುಲಿ ಬಿದ್ದಿರ್ತು ತಗಾ.. ಅಂದ್ಕಂಡಿ.. ಲಾಟೀನ್ ಬೆಳಕು ದೊಡ್ಡದು ಮಾಡಿ ನೋಡಿದ್ರೆ ಕೊಟಗೇಲಿ ಎಂತದೂ ಕಂಡಿದ್ದಿಲ್ಲೆ.. ಸುಮಾರ್ ಹೊತ್ತು ಹುಡುಕಿದಿ.. ಊಹೂಂ.. ಕತ್ಲೆಲ್ಲಿ ಯಂತದೂ ಕಂಡಿದ್ದಿಲ್ಲೆ..ಸಾಯ್ಲಿ ಇದು ಹೇಳಿ ಬೈಕ್ಯಂಡು ಆವತ್ತು ಮನಗಿ ಬೆಳಗು ಹಾಯಿಸಿದಿ ನೋಡು..' ಎಂದ ರಂಗಪ್ಪಜ್ಜ ..
ನನಗೆ ಕುತೂಹಲ ಇಮ್ಮಡಿಸಿತ್ತು...`ಮುಂದೆಂತಾ ಆತಾ..? ಹುಲಿ ಬಿದ್ದಿತ್ತಾ..?.. ನೀ ಬಾಲ ಕಿತ್ಕಂಡು ಹೋಗಿ ಪಟೇಲಂಗೆ ಕೊಟ್ಯಾ..?' ಗಡಬಡೆಯಿಂದ ಕೇಳಿದೆ. `ತಡ್ಯಾ ತಮಾ.. ಸಾವಕಾಶ ಹೇಳ್ತಿ.. ಯಂಗೆ ವಯಸ್ಸಾತು.. ಇಷ್ಟೆಲ್ಲ ಜೋರು ಹೇಳಲಾಗ್ತಿಲ್ಲೆ.. ಎಂದು ಮತ್ತೊಂದು ಕವಳವನ್ನು ಹೊಸೆಯತೊಡಗಿದರು.
`ಬೆಳಿಗ್ಗೆ ಎಲ್ಲಾ ಏಳದಕ್ಕಿಂತ ಮುಂಚೆ ಎದ್ದು ನೋಡಿದ್ರೆ ಕ್ವಟ್ಗೆಲಲ್ಲ.. ಅದರ ಸುತ್ತಮುತ್ತಲೆಲ್ಲೂ ಹುಲಿ ಬಿದ್ದ ಕುರುಹು ಇಲ್ಲೆ. ಆ ಗುಂಡು ಹೊಡೆದಿದ್ದು ಎಂತಾ ಆಗಿಕ್ಕು ಹೇಳಿ ಹುಡುಕಾಡದಿ.. ಕ್ವಟ್ಗೆ ಕಂಭಕ್ಕೆ ತಾಗಿತ್ತು. ಆದರೆ ಇಡೀ ಕೊಟ್ಗೆ ತುಂಬಾ ನೆತ್ತರು ಹರಕಂಡು ಇತ್ತು. ಅರೇ ಹುಲಿಗೆ ಗುಂಡು ತಾಗಿಕ್ಕಾ.. ಅಂದ್ಕಂಡ್ರೆ ಒಂದು ಹಂಡಾ ಪಟ್ಟೆ ದನೀಕರ ರಾತ್ರಿ ಹುಲಿ ಬಾಯಿಗೆ ಸಿಕ್ಕು ಸತ್ತುಬಿದ್ದಕಂಡು ಇತ್ತು. ರಾತ್ರಿ ಹುಲಿ ಆ ದನಿಕರದ ಕುತ್ಗಿಗೆ ಬಾಯಿ ಹಾಕಿತ್ತು.. ಅದು ಕಚ್ಚಿದ ಜಾಗದಿಂದ ನೆತ್ತರು ರಾಶಿ ಹರಿದು ಹೋಗಿತ್ತು.. ಕರ ಸತ್ತಬಿದ್ದಿತ್ತು.. ಓಹೋ ರಾತ್ರಿ ಬಂದ ಗ್ವರ ಗ್ವರ ಶಬ್ದ ಇದೇಯಾ ಅಂದಕಂಡಿ..ಥೋ.. ಯಮ್ಮನೆ ಕೊಟ್ಗಿಗೆ ಬಂದು ದನಿಕರ ಕೊಂದಿದ್ದಲಾ ಹುಲಿ.. ಇದರ ಬಿಟ್ರೆ ಸುಖ ಇಲ್ಲೆ ಅಂದ್ಕಂಡು ಕೋವಿ ಎತ್ಗಂಡು ಹೊಂಟಿ.. ಎಲ್ಲೇ ಹೋದ್ರೂ ಆ ಹುಲಿ ಕೊಲ್ಲದೇಯಾ.. ಅಷ್ಟರ ಮೇಲೆ ಆ ಮನಿಗೆ ಬರ್ತಿ ಹೇಳಿ ಅಪ್ಪಯ್ಯಂಗೆ ಹೇಳಿ ಅಂವ ಉತ್ರ ಕೊಡದ್ರೋಳಗೆ ಹೊರಟಿದ್ದಿ.. ಆಸ್ರಿಗೆನೂ ಕುಡದಿದ್ನಿಲ್ಯಾ ಆವತ್ತು ಮಾರಾಯಾ..' ಎಂದ ರಂಗಪ್ಪಜ್ಜ..
`ಹುಲಿ ಸಾಮಾನ್ಯವಾಗಿ ಹಿಂಗೇ ಹೋಗಿಕ್ಕು ಹೇಳಿ ಜಾಡು ಹಿಡದು ಹೊಂಟಿ. ಅದು ಮುತ್ಮುರ್ಡ್ ಬದಿಗೆ ಹೋಗಿತ್ತು. ಆನೂ ಅದೇ ಹಾದಿ ಕೂಡದಿ.. ಮುತ್ಮೂರ್ಡ್ ಹತ್ರಕ್ಕೆ ಹೋಪಕಿದ್ರೆ ಯನ್ನ, ಸುಬ್ಬಜ್ಜ ಇದ್ನಲಾ.. ಅಂವ ಕಂಡ..ಎಂತದಾ ರಂಗ.. ಕೋವಿ ಹಿಡಕಂಡು ಹೊಂಟಿದ್ದೆ.. ಯತ್ಲಾಗೆ ಹೊಂಟಿದ್ಯಾ..? ಎಂದ.. ಆನು ಹುಲಿ ಸುದ್ದಿ ಹೇಳಿ ಹಿಂಗಿಂಗೆ ಅಂದಿ.. ಅಂವ ಹೌದಾ ಮಾರಾಯಾ.. ಮದ್ಯರಾತ್ರಿಯಪ್ಪಗೆ ಬಂದಿತ್ತಾ.. ಅದು ಬಾಳಗಾರ ದಿಕ್ಕಿಗೆ ಹೋದಾಂಗಾಜು ನೋಡು.. ಅಂದ.. ಆ ಇನ್ನೇನು ಹೊರಡವ್ವು ಹೇಳಿ ಇದ್ದಾಗ ಸುಬ್ಬಜ್ಜ ತಡಿಯಾ.. ಆನು ಬತ್ತಿ... ಅಲ್ಲಿಗೆ ಹೋಪನ.. ಆ ಹುಲಿಗೆ ಒಂದ್ ಗತಿ ಕಾಣಿಸದೇ ಇದ್ರೆ ನಮಗೆ ಉಳಿಗಾಲ ಇಲ್ಲೆ.. ಎಂದ ತನ್ನತ್ರ ಇದ್ದಿದ್ದ ಕೋವೀನು ತಗಂಡು ಬಂದ..ಯಂಗಳ ಸವಾರಿ ಬಾಳಗಾರ ಬದಿಗೆ ಹೊಂಟ್ಚು.. ಅಲ್ಲಿಗೆ ಹೋಗಿ ಕೇಳದಾಗ ಬೆಳಗಿನ ಜಾವದಲ್ಲಿ ಹುಲಿ ಕೂಗಿದ್ದು ಕೇಳಿದ್ಯ ಅಂದ.. ಬಂದಳಿಕೆ ಬದಿಗೆ ಹೋಗಿಕ್ಕು ನೋಡು ಅಂದ.. ಬಂದಳಿಕೆಗೆ ಬಂದ್ರೆ ಅವರ ಮನೆಯಲ್ಲಿ ಒಂದ್ ದನ ಹಿದಡು ಎಳಕಂಡು ಹೋಗಿತ್ತಡಾ ಹುಲಿ.. ಯಂಗಂತೂ ಪಿತ್ಥ ನೆತ್ತಿಗೆ ಏರಿದಂತಾತು.. ಸಿಟ್ಟು ಸಿಕ್ಕಾಪಟ್ಟೆ ಬಂತು.. ಸುಬ್ರಾಯಾ.. ಇವತ್ತು ಈ ಹುಲಿ ಬಿಡಲಾಗ್ದಾ.. ಎಂದೆ... ಸುಬ್ಬಜ್ಜನೂ ಹೌದಾ.. ಎಂದ' ಮತ್ತೊಮ್ಮೆ ತನ್ನ ಮಾತಿನ ಸರಣಿಗೆ ನಿಲುಗಡೆ ನೀಡಿದ ರಂಗಪ್ಪಜ್ಜ .. ಇಂವ ಇಂತಕ್ಕೆ ಜೋರಾಗಿ ಓಡ್ತಾ ಇರೋ ಬಾಳೆಸರ ಬಸ್ಸು ಆಗಾಗ ನಿತ್ಕಂಡ ಹಾಂಗೆ ನಿತ್ಕತ್ತ ಅಷ್ಟ್ ಅಷ್ಟ್ ಹೊತ್ತೊಗೆ ಸುಮ್ಮನಾಗ್ತಾ ಎಂದು ನನ್ನ ಮನಸ್ಸಿನಲ್ಲಿ ಮೂಡಿದರೂ ಕೇಳಿಲು ಹೋಗಲಿಲ್ಲ.
`ಬಂದಳಿಕೆಯಲ್ಲಿ ದನವನ್ನು ಎಳಕಂಡ್ ಹೋಗಿದ್ ಹುಲಿ ಅಲ್ಲಿಂದ ಭತ್ತಗುತ್ತಿಗೆ ಹೋಗುವ ಹಾದಿ ಮಧ್ಯದ ದೊಡ್ಡ ಮುರ್ಕಿ ಹತ್ರ ಇರೋ ಮರದ ಹತ್ತಿರ ದನದ ದೇಹ ವಗದಿಕ್ ಹೋಗಿತ್ತು. ಸುಮಾರ್ ಹೊತ್ತು ಯಂಗ ಅಲ್ಲಿ ಸುಳಿದಾಡಿದ್ರೂ ಹುಲಿ ಪತ್ತೆಯಾಜಿಲ್ಲೆ.. ಕೊನೆಗೆ ಬಂದಳಿಕೆಗೆ ವಾಪಸ್ ಹೋಗಿ ಊಟ ಮುಗಿಸ್ಕಂಡು ಮತ್ತೆ ವಾಪಸ್ ಬಂದು ಮರ ಹತ್ತಿ ಕುತ್ಗಂಡ್ಯ. ಮದ್ಯಾಹ್ನ ಆತು, ಸಾಯಂಕಾಲ ಆದ್ರೂ ಹುಲಿ ಪತ್ತೇನೇ ಇಲ್ಲೆ. ಈ ಹುಲಿ ಹಿಂದ್ ಹೋಪ ಸಾವಾಸ ಸಾಕ್ರೋ.. ಹೇಳಿ ಅನಿಶಿ ಹೋತು. ಹಗೂರ್ಕೆ ಸೂರ್ಯನೂ ಕಂತತಾ ಇದ್ದಿದ್ದ.. ಕಪ್ಪಾಪ್ಲೆ ಆಗ್ತಾ ಇತ್ತು. ಯಂಗಕ್ಕಿಗೆ ಮರ ಇಳಿಯಲೆ ಒಂಥರಾ ಆಪಲೆ ಹಿಡತ್ತು. ಹಂಗೆ ಹೇಳಿ ಅಲ್ಲೇ ಕುತ್ಗಂಡು ಇಪ್ಪಲೂ ಆಗ್ತಿಲ್ಲೆ.. ಹಿಂಗೆ ಸುಮಾರ್ ಹೊತ್ತಾತು. ಕೊನಿಗೆ ಸುಮಾರ್ ಕಪ್ಪಾಗ್ತಾ ಇದ್ದು ಹೇಳ ಹೊತ್ತಿಗೆ ಬಂತು ನೋಡು ಹುಲಿ.. ಅನಾಮತ್ತು 8 ಅಡಿ ಉದ್ದ ಇತ್ತು. ಎಂತಾ ಗಾಂಭೀರ್ಯದಲ್ಲಿ ಅದು ನೆಡ್ಕಂಡು ಬಂತು ಅಂದ್ರೆ.. ಆಹಾ.. ಅದು ಸೀದಾ ದನದ ಹತ್ರಕ್ಕೆ ಬಂತು. ಯಂಗಂತೂ ಮೈ ರೋಮೆಲ್ಲಾ ನೆಟ್ಟಗಾಗಿತ್ತು. ಮೊದಲನೇ ಸಾರಿ ಹುಲಿ ಹೊಡೆತಾ ಇದ್ದಿದ್ನಲಾ.. ಜೊತಿಗೆ ನಿನ್ನೆ ರಾತ್ರಿ ಹಾರಿಸಿದ ಈಡು ಹುಸಿಯಾಗಿತ್ತಲಾ.. ಕೋವಿ ನೆಟ್ಟಗ್ ಮಾಡ್ಕಂಡು ಗುರಿ ಹಿಡದಿ. ಮತ್ತೂ ಹತ್ರಕ್ಕೆ ಬಂತು. ಹಂಗೇ ಢಂ. ಅನ್ಸಿದಿ. ಪಕ್ಕದಲ್ಲಿ ಕುತ್ಗಂಡ್ ಇದ್ದಿದ್ದ ಸುಬ್ಬಜ್ಜ ಒಂದ್ ಸಾರಿ ಕುಮಟಿ ಬಿದ್ದಿದ್ದ. ಮೈಯೆಲ್ಲಾ ಥರಗುಡ್ತಾ ಇತ್ತು. ಹುಲಿಗೆ ಗುಂಡು ತಾಗಿತ್ತು. ಬಿದ್ದಿದ್ದು ಕಾಣ್ತಾ ಇತ್ತು. ಯಾವ್ದಕ್ಕೂ ಇರಲಿ, ಎಲ್ಲಾರೂ ಜೀಂವ ಇದ್ದಿಕ್ಕು ಹೇಳಿ ಇನ್ನೊಂದು ಕೋವಿ ಲೋಡು ಮಾಡ್ಕ್ಯಂಡಿ. ಸುಮಾರ್ ಹೊತ್ತಾತು.. ಹುಲಿ ಬಿದ್ಕಂಡಿದ್ದು ಮಿಸುಕಾಡಿದ್ದಿಲ್ಲೆ.. ಇನ್ನೇನು ಇಳಿಯವು ಹೇಳ ಹೊತ್ತಲ್ಲಿ ಆ ಹುಲಿ ಹತ್ರಕ್ಕೆ ಎಂತದೋ ಅಲ್ಲಾಡಿದ ಹಂಗಾತು. ಸರಿಯಾಗಿ ನೋಡಿದ್ರೆ ಎರಡು ಹುಲಿಮರಿ..' ಎಂದು ಹೇಳಿ ಸುಮ್ಮನಾದ ರಂಗಪ್ಪಜ್ಜ ..
ಮುಂದೇನಾಯ್ತು ಎಂಬ ಕುತೂಹಲ ನನಗೆ.. ಹುಲಿ ಹೊಡೆದ ಎನ್ನುವ ವಿಷಯವೇನೋ ತಿಳಿಯುತು. ಹುಲಿಮರಿಯನ್ನೂ ಹೊಡೆದ್ನಾ? `ಮುಂದೆಂತ ಆತು..?' ಕುತೂಹಲ ತಡೆಯಲಾಗದೇ ಕೇಳಿದೆ.
`ಆವಾಗ್ಲೆ ಹೇಳಿದ್ನಲಾ.. ಮಧ್ಯ ಬಾಯಿ ಹಾಕಡಾ ಹೇಳಿ.. ಸ್ವಲ್ಪ ಸಂಪ್ರನ್ಶಕತ್ತಿ ತಡಿ..' ಅಂದ. ನಾನು ಸುಮ್ಮನೆ ಕುಳಿತೆ.
`ಹ್ವಾ ರಂಗಪ್ಪಾ... ಹೆಣ್ಣು ಹುಲಿಯಾಗಿತ್ತು ಕಾಣ್ತಾ ಹೊಡೆದಿದ್ದು.. ಮರೀನೂ ಇದ್ದಲಾ.. ಹೊಡೆಯದೇಯನಾ..? ಎರಡಿದ್ದು ಎಂದು ಕೇಳಿದ ಪಕ್ಕದಲ್ಲಿದ್ದ ಸುಬ್ಬಜ್ಜ. ಮರಿ ಪಾಪದ್ದಲಾ ಬಿಟ್ಹಾಕನನಾ..? ಆನು ಕೇಳಿದಿ.. ಬ್ಯಾಡದಾ ರಂಗಪ್ಪಾ.. ಹಾವು ಸಣ್ಣದಿದ್ರೂ ದೊಡ್ಡದಿದ್ರೂ ವಿಷನೇ ಅಲ್ದನಾ.. ಹಂಗೇಯಾ ಹುಲಿನೂವಾ ಮಾರಾಯಾ.. ಮರಿ ಇದ್ರೂ ಸೇಡಿಟ್ಕತ್ತಡಾ.. ಮುಂದೆ ದೊಡ್ಡಾಗಿ ತ್ರಾಸು ಕೊಡ್ತ್ವಿಲ್ಯನಾ..? ಒಂದ್ ಹುಲಿ ಒಂದ್ ಬಾಲ ಒಂದೇ ಇನಾಮು ಸಿಕ್ತಿತ್ತಲಾ.. ಈಗ ಇವೆರಡನ್ನೂ ಕೊಂದ್ರೆ ಮೂರು ಹುಲಿ, ಮೂರು ಬಾಲ, ಮೂರು ಇನಾಮು ಸಿಕ್ತಲಾ.. ಹೊಡಿಯಾ ಗುಂಡ.. ಎಂದ. ಯಂಗೆ ಮನಸಿತ್ತಿಲ್ಲೆ.. ಕೊನಿಗೆ ಹ್ಯಾಂಗಂದ್ರೂ ಕೋವಿ ಲೋಡಾಕ್ಕಂಡಿತ್ತು ಒಂದ್ ಮರಿಗೆ ಹೊಡದಿ. ಅದನ್ನು ನೋಡಿ ಇನ್ನೊಂದು ತಪಶ್ಗ್ಯಂಡ್ ಹೋಪಲೆ ನೋಡಚು.. ಸುಬ್ಬಜ್ಜನ ಕೈಲಿದ್ದ ಬಂದೂಕಿಂದ ಅವನೂ ಗುಂಡು ಹೊಡೆದ ಅದೂ ಬಿತ್ತು.. ಸುಮಾರ್ ಹೊತ್ತು ಬಿಟ್ಟು ಯಂಗವ್ ಮರ ಇಳಿದ್ಯ. ಅಷ್ಟೊತ್ತಿಗೆ ಯಂಗಳ ಕೋವಿ ಸದ್ದು ಕೇಳಿ ಹುಲಿ ಹೊಡೆದಿಕ್ಕು ಹೇಳಿ ಭತ್ತಗುತ್ತಿಗೆ, ಬಂದಳಿಕೆಯಿಂದ ಒಂದೆರಡು ಜನ ಬಪ್ಪಲೆ ಹಿಡದ. ಆನು ಹುಲಿ ಹತ್ತಿರಕ್ಕೆ ಹೋಗಿ ನೋಡದಿ. ಎಂತಾ ಹುಲಿ ಗೊತ್ತಿದ್ದ. ಅಗಲಕ್ಕಿತ್ತು.. ಉದ್ದವೂ ಇತ್ತು. ಮರಿಗಳು ಚಂದಿದ್ವಾ.. ಆದ್ರೆ ಅವನ್ ಹೊಡೆದಿದ್ದಕ್ಕೆ ಯಂಗೆ ಬೇಜಾರಾಗೋತು.. ಅಷ್ಟೊತ್ತಿಗೆ ಯಲ್ಲಾ ಬಂದಿದ್ವಲಾ... ಯಂಗಳನ್ ಹೊಗಳಲೆ ಹಿಡಿದ್ವಾ.. ಹುಲಿ ಬೇಟೆಯಂತೂ ಆತು.. ಮುಂದಿನ ಕೆಲಸ ಮಾಡಕಾತು ಹೇಳಿ ಅಲ್ಲಿದ್ದವ್ಕೆ ಹೇಳದಿ. ಎಂತೆಂತೋ ತಂದ. ಹುಲಿ ಬಾಲ ತಗಂಡು ಹೊಂಟ್ಯ. ಕೊನಿಗೆ ಇನಾಮೂ ಸಿಕ್ತು. ಹುಲಿ ಚರ್ಮ ಇದ್ದಾ..' ಎಂದ ರಂಗಪ್ಪಜ್ಜ .
`ಯಂಗೆ ಹುಲಿ ಬಾಲ ನೋಡಕಾಗಿತ್ತಲಾ.. ತೋರಿಸ್ತ್ಯಾ..?' ಎಂದ ತಕ್ಷಣ ಇದ್ದಕ್ಕಿದ್ದಂತೆ ರೇಗಿದ ರಂಗಪ್ಪಜ್ಜ ` ಎಂತದಾ.. ಮಧ್ಯ ಮಾತಾಡಡಾ ಹೇಳಿದ್ನಲಾ.. ಅದೆಂತಾ ಮಧ್ಯ ಮಧ್ಯ ಕಚಪಚ ಹಲುಬ್ತ್ಯಾ? ಸುಮ್ನೆ ಕುತ್ಗ ನೋಡನ' ಎಂದ.. ಮುಂದುವರಿದು `ಹುಲಿ ಬಾಲ ಇತ್ತಾ.. ಮೊನ್ನೆ ಮೊನ್ನೆವರೆಗೂ ಇತ್ತು. ಯನ್ನ ಮಗ ಬೆಂಗಳೂರಲ್ಲಿದ್ನಲಾ.. ಅಂವ ಬೇಕು ಹೇಳಿ ತಗಂಡ್ ಹೋದ..' ಅಂದ ರಂಗಪ್ಪಜ್ಜ..
`ನೀ ಬೇಕಾದ್ರೆ ಒಂದ್ ಸಾರಿ ಭತ್ತಗುತ್ತಿಗೆ ಗೆ ಹೋಗ್ ಬಾರಾ.. ಆ ಹುಲಿ ಹೊಡೆದ ಜಾಗ ನೋಡ್ಕ್ಯಂಡ್ ಬಾ.. ದೊಡ್ ಮರ ಇದ್ದು.. ಭತ್ತಗುತ್ತಿಗೆ ಹೊಳೆ ಇದ್ದಲಾ ಅದಕ್ಕಿಂತ ಸ್ವಲ್ಪ ಮೇಲೆ ಆಗ್ತಾ.. ಅಲ್ಲೊಂದು ಯತ್ನಗಾಡಿ ರಸ್ತೆ ಇತ್ತು ಆಗ. ಅಲ್ಲೇ ಆಗ್ತು. ಆಗ ರಾಶಿ ಕಾಡಿತ್ತಾ.. ಕೊನಿಗೆ ಎಲ್ಲಾ ಬೋಳು ಹರಸಿಗಿದ. ಆನು ಮರ ಹತ್ತಗ್ಯಂಡು ಗುಂಡು ಹೊಡೆದ ಮರ ಇದ್ದ, ಕಡದಿಗಿದ್ವ ಗೊತ್ತಿಲ್ಲೆ.. ನೀ ನೋಡ್ಕ್ಯಂಡು ಬಾ.. ಯಂಗೂ ಹೇಳು ಹೀಗ ಅಲ್ಲಿ ಹ್ಯಾಂಗಿದ್ದು ಹೇಳಿ ಎಂದು ಸುಮ್ಮನಾದ.
ನಾನು ಹೋಗಿ ನೋಡಿಕೊಂಡು ಬರಬಹುದಲ್ಲ ಎಂದುಕೊಂಡು ಭತ್ತಗುತ್ತಿಗೆ ಕಡೆಗೆ ಹೊರಟಿದ್ದೆ.
**
|
ಹುಲಿ ಚರ್ಮದ ಸಾಂದರ್ಭಿಕ ಚಿತ್ರ |
ನಮ್ಮೂರಿನಿಂದ ನಾನು ಸೀದಾ ಭತ್ತಗುತ್ತಿಗೆಯ ಹಾದಿ ಹಿಡಿದಿದ್ದೆ. ರಂಗಪ್ಪಜ್ಜ ಅಲ್ಲಿ ಎತ್ತಿನಗಾಡಿ ರಸ್ತೆ ಇತ್ತು ಹೇಳಿದ್ದನಾದರೂ ಈಗ ಕಾಲ ಬದಲಾಗಿದೆ 70 ವರ್ಷದ ನಂತರ ರಸ್ತೆ ಕನಿಷ್ಟ ಟಾರನ್ನಾದರೂ ಕಂಡಿರುತ್ತದೆ ಎಂದುಕೊಂಡು ನನ್ನ ಬೈಕನ್ನೆತ್ತಿಕೊಂಡು ಹೊರಟೆ.
ನಿಜ ಎಲ್ಲವೂ ಬದಲಾಗಿದ್ದವು. ರಂಗಪ್ಪಜ್ಜ ಹೇಳಿದ್ದ ದಡ್ಡ ಕಾಡು ಅಲ್ಲಿರಲಿಲ್ಲ. ಕಾಡು ಕಡಿದು ಅವೆಲ್ಲವೂ ಕರಡದ ಬ್ಯಾಣಗಳಾಗಿದ್ದವು. ಕರೂರು, ಹಳದೋಟ ಬಂದಳಿಕೆಗಳನ್ನು ದಾಟಿ ಮುನ್ನಡೆದೆ. ಬಾಳಗಾರಿಗೆ ಹೋಗುವ ಕ್ರಾಸು ಕೂಡ ಸಿಕ್ಕಿತು. ಅಜ್ಜ ಹೇಳಿದ್ದು ಇದೇ ಜಾಗ ಇರಬೇಕು ಎಂದುಕೊಂಡು ಗಾಡಿಯಿಂದಿಳಿದು ಅಕ್ಕಪಕ್ಕ ನೋಡಲಾರಂಭಿಸಿದೆ. ಊಹೂಂ ಅಲ್ಲೆಲ್ಲೂ ಆತ ಹೇಳಿದ ದೈತ್ಯ ಮರ ಕಾಣಲಿಲ್ಲ.. ಇನ್ನೊಂದು ಸ್ವಲ್ಪ ಮುಂದೆ ಇರಬೇಕು ಎಂದು ಹೋದೆ.. ಅಲ್ಲೂ ಕಾಣಲಿಲ್ಲ. ಗಂಟೆಗಟ್ಟಲೆ ಮರಕ್ಕಾಗಿ ಹುಡುಕಾಡಿದರೂ ಮರ ನನ್ನ ಕಣ್ಣಿಗೆ ಬೀಳಿಲಿಲ್ಲ.. ಎಲ್ಲೋ ಹಾದಿ ತಪ್ಪಿ ಬಂದೆ ಅನ್ನಿಸಿತು. ರಂಗಪ್ಪಜ್ಜ ನ ಬಾಯಲ್ಲಿ 70 ವರ್ಷದ ಹಿಂದೆ ನಡೆದ ಕಥೆಯನ್ನು ಕೇಳಿ ಈಗ ಅದನ್ನು ಹುಡುಕುವ ವಿಚಿತ್ರ ಸಾಹಸಕ್ಕೆ ಮುಂದಾಗಿದ್ದನ್ನು ನೋಡಿ ನನಗೆ ನಗು ಬಂದಿತು.
ಹೀಗೆ ಹುಡುಕುತ್ತಿದ್ದಾಗ ಸ್ಥಳೀಯರೊಬ್ಬರು ಬಂದರು. ಬಂದಳಿಕೆಯವರೋ, ಬಾಳಗಾರಿನವರೋ ಅಥವಾ ಹತ್ತಿರದ ಯಾವುದೋ ಊರಿನವರೋ ಇರಬೇಕು. ನಾನು ಮರವನ್ನು ಹುಡುಕುತ್ತಲೇ ಇದ್ದೆ.. ಬಂದವರೇ `ಯಾರ್ರಾ ಅದು..? ಅಲ್ಲೆಂತಾ ಮಾಡ್ತಾ ಇದ್ರಾ..? ಹೋಯ್..' ಎಂದು ಗದರಿಸಿ ಕೇಳಿದರು.
ನಾನು ಅವರ ಬಳಿ ಬಂದು ರಂಗಪ್ಪಜ್ಜ ಹೇಳಿದ ಕಥೆಯನ್ನು ಹಿಂಗಿಂಗೆ ಎಂದು ಯಥಾವತ್ತು ಹೇಳಿದೆ.. ಅವರು ಒಮ್ಮೆ ನಕ್ಕು.. `ನಿಂಗೆ ಈ ಕಥೆಯನ್ನು, ಆ ಜಾಗವನ್ನು ನೋಡವ್ವು ಹೇಳಾದ್ರೆ ಭತ್ತಗುತ್ತಿಗೆಗೆ ಹೋಗು.. ಅಲ್ಲಿಯವ್ಕೆ ಗೊತ್ತಿದ್ದು..' ಎಂದು ಹೇಳಿಕಳಿಸಿದರು. ಅರೇ ರಂಗಪ್ಪಜ್ಜ ಅಷ್ಟು ಬಿಡಿಸಿ ಬಿಡಿಸಿ ಮರ ಇರುವ ಜಾಗವನ್ನು ಹೇಳಿದ್ದರೂ ಯಾಕೆ ಅವರು ಭತ್ತಗುತ್ತಿಗೆಗೆ ಕಳಿಸುತ್ತಿದ್ದಾರೆ ಎಂದು ನನಗೆ ಅನ್ನಿಸಿತಾದರೂ ಬಾಯಿ ಬಿಟ್ಟು ಕೇಳಲಿಲ್ಲ. ಗಾಡಿಯನ್ನು ಅತ್ತಕಡೆಗೆ ಓಡಿಸಿದೆ.
ಭತ್ತಗುತ್ತಿಗೆ ಹೊಳೆ ಸಿಕ್ಕಿತು. ಹೊಳೆಗೆ ಸೇತುವೆಯೂ ಆಗಿತ್ತು. ಸೇತುವೆ ದಾಟುತ್ತಿದ್ದಂತೆ ಎಡಕ್ಕೆ ತಿರುಗಿದೆ.. ಸನಿಹದಲ್ಲಿಯೇ ಒಂದು ಮನೆ ಸಿಕ್ಕಿತು. ನಾನು ಅಲ್ಲಿಗೆ ಹೋಗಿ `ವಿಷಯ ಹೀಗಿದೆ.. ಜಾಗ ನೋಡಬೇಕಿತ್ತು..' ಎಂದು ಹೇಳಿದೆ.. ಮನೆಯೊಳಗಿನಿಂದ ಬಂದ ಹಿರಿಯರೊಬ್ಬರು ನನ್ನ ಮಾತನ್ನು ಕೇಳಿ ನಗಲಾರಂಭಿಸಿದರು.
`ತಮಾ ನೀನು ಆ ರಂಗಪ್ಪಜ್ಜ ಹೇಳಿದ್ದು ಕೇಳಕಂಡು ಇಲ್ಲಿ ಹುಡಿಕ್ಯಂಡು ಬಂದಿದ್ದು ಸಾಕು..' ಎಂದು ಹೇಳಿ `ಬಾ ಯನ್ ಜೊತಿಗೆ ತೋರಸ್ತಿ..' ಹೇಳಿ ಮುನ್ನಡೆದರು. ನಾನು ಹಿಂಬಾಲಿಸಿದೆ.
ಅವರು ಭತ್ತಗುತ್ತಿಗೆ ಮುರ್ಕಿಯ ಕಡೆಗೆ ಹೋಗುವುದನ್ನು ಬಿಟ್ಟು ತಮ್ಮ ತೋಟದ ಕಡೆಗೆ ನನ್ನನ್ನು ಕರೆದೊಯ್ದರು. ಅಲ್ಲೊಂದು ಕಡೆಗೆ ಒಂದು ಸ್ವಾಂಗೆ ಅಟ್ಟಲಿತ್ತು. ಅದನ್ನು ತೋರಿಸಿ `ನೋಡಾ ತಮಾ.. ಅಲ್ಲೇಯಾ ಹುಲಿ ಹೊಡೆದಿದ್ದು..' ಅಂದರು. ನಾನು ಬೆಪ್ಪನಂತೆ `ಮತ್ತೆ ರಂಗಪ್ಪಜ್ಜ ಅದೆಂತದೋ ದೊಡ್ಡ ಮರದ ಸುದ್ದಿ ಹೇಳಿದಿದ್ದ..' ಅಂದೆ
`ಹುಲಿ ಹೊಡೆದಿದ್ದು ರಂಗಪ್ಪಜ್ಜ ಹೇಳಿ ಯಾರಾ ಹೇಳಿದ್ದು ನಿಂಗೆ..?' ಎಂದು ಕೇಳಿದರು.
`ಅವರೇ ಹೇಳಿದ್ದು..ಅದ್ಕಾಗೆ ಬಂದಿ..' ಎಂದೆ..
`ಆ ರಂಗಪ್ಪಜ್ಜ ನನಾ.. ಅಂವ ಹೇಳಿದ್ದು ಕೇಳ್ಕಂಡು ಬಂಜ್ಯಲಾ.. ಹುಲಿ ಇಲ್ಲಿ ಹೊಡೆದಿದ್ದು ಹೌದು.. ಆದರೆ ರಂಗಪ್ಪಜ್ಜ ಅಲ್ದಾ.. ಮುತ್ಮುರ್ಡು ಸುಬ್ಬಜ್ಜ ಮಾರಾಯಾ.. ಸುಬ್ಬಜ್ಜನ ಜೊತಿಗೆ ಈ ರಂಗಪ್ಪಜ್ಜ ಇದ್ದಿದ್ದ.. ಈ ಸ್ವಾಂಗೆ ಅಟ್ಲ ಮೇಲಿಂದಾನೆ ಹೆಣ್ಣು ಹುಲಿ ಮತ್ತು ಅದರ ಎರಡು ಮರಿಗಳನ್ನು ಗುಂಡಚ್ಚಿ ಕೊಂದಿದ್ದು. ಈ ಸುತ್ತಮುತ್ತಲ ಫಾಸಲೆಯಲ್ಲಿ ತ್ರಾಸು ಕೊಡ್ತಾ ಇದ್ದ ಹುಲಿ ಹೊಡೆದಿದ್ದಕ್ಕೆ ಸುಬ್ಬಜ್ಜಂಗೆ ಸನ್ಮಾನವನ್ನೂ ಮಾಡಿದಿದ್ದ.. ಯಾರಾದ್ರೂ ಸರಿಯಾಗಿ ಗೊತ್ತಿದ್ದವ್ ಇದ್ರೆ ಕೇಳು.. ಸುಬ್ಬಜ್ಜ ಗುಂಡು ಹೊಡೆದಿದ್ದನ್ನು ನೋಡ್ಕ್ಯಂಡು ನಿಂಗಳೂರ ರಂಗಪ್ಪಜ್ಜ ಬೆಚ್ಚಿ ಬಿದ್ದು ಎರಡ್ ದಿನ ಜ್ವರ ಮಾಡಿದಿದ್ನಡಾ ಗೊತ್ತಿದ್ದಾ.. ಜ್ವರ ಮಾಡಿ ಎದ್ದಂವ ತಾನೇ ಹುಲಿ ಹೊಡದ್ದಿ ಹೇಳಿ ಹೇಳ್ಕತ್ತ ತಿರುಗಿದ್ದ.. ರಂಗಪ್ಪಜ್ಜ ಹಿಂಗೆ ಹೇಳ್ಕಂಡು ತಿರುಗಾಡಿದ್ದ ಹೇಳದು ಯಂಗಳ ಕಿವಿಗೂ ಬಿದ್ದಿತ್ತು.. ಬಹಳಷ್ಟ್ ಜನ ನಿನ್ನಾಂಗೆ ಇಲ್ಲಿಗೆ ಬಂದು ಜಾಗ ಹುಡುಕದವ್ವೂ ಇದ್ದ. ಆದ್ರೆ 70 ವರ್ಷ ಆದ ಮೇಲೆ ಬಂದು ನೋಡ್ತಾ ಇದ್ದಂವ ನೀನೆ ಇರವು..' ಎಂದರು ಅವರು.
`ಹೌದಾ..? ರಂಗಪ್ಪಜ್ಜ ಹಂಗಾದ್ರೆ ಯನ್ನತ್ರೆ ಹೇಳಿದ್ದು ಸುಳ್ಳಾ..? ಮತ್ತೆ ಅಂವ ಬಂದೂಕು ತೋರಿಸಿದ್ದು, ಹುಲಿ ಬಾಲ ಮಗನ ಹತ್ರ ಎದ್ದು ಹೇಳಿದ್ದು ಎಲ್ಲಾ ಸುಳ್ಳಾ?..' ಎಂದು ತಬ್ಬಿಬ್ಬಾಗಿ ಕೇಳಿದೆ..
`ತಮಾ ಎಲ್ಲಾದನ್ನೂ ನೀನು ರಾಶಿ ನಂಬ್ ತೆ ಕಾಣ್ತು.. ಬಂದೂಕು ತೋರ್ಸಿದ್ದಾ ಹೇಳಿ ಅಂವನೇ ಹುಲಿ ಹೊಡೆದಿದ್ದು ಹೇಳಿ ನೀನು ಬಂದ್ ಬಿಡ್ತ್ಯಾ? ಯಮ್ಮನೇಲೂ ಬಂದೂಕಿದ್ದು ಬಾ ತೋರಿಸ್ತಿ. ಕೋವಿ ತೋರ್ಸಿಗ್ಯಂಡು ಆನೂ ಅಂತದ್ದೆ ಒಂದು ಚಂದದ ಕಥೆ ಹೇಳ್ತಿ ಬಾ.. ' ಎಂದರು. ನಾನು ಬೆಪ್ಪಾಗಿ `ಮತ್ತೆ ಹುಲಿ ಬಾಲ ಇದ್ದಿದ್ದು..' ಅಂದೆ.
`ಅಯ್ಯೋ ಮಳ್ಳೆ... ಹುಲಿ ಬಾಲ ತಗಂಡು ಹೋಗಿ ಪಟೇಲಂಗೆ ಕೊಡಕಾಗಿತ್ತು. ಅಂವ ಅದನ್ನು ಬ್ರಿಟೀಷ್ ಆಫೀಸರಂಗೆ ಕಳಿಸ್ತಿದ್ದ.. ಅದನ್ನು ವಾಪಾಸು ಕೊಡ್ತಿದ್ವಿಲ್ಲೆ.. ಆದರೆ ಹುಲಿ ಚರ್ಮ ಸುಲಕಂಡು ಬರ್ಲಕ್ಕಾಗಿತ್ತು. ಅಂವ ಹುಲಿ ಬಾಲ ಮಗನ ಕೈಲಿದ್ದು ಹೇಳಿ ಹೇಳ್ದಾ ನೀನು ನಂಬ್ ದೆ.. ಥೋ.. ' ಎಂದರು.
ಆಗ ನನಗೆ ರಂಗಪ್ಪಜ್ಜನ ಬಳಿ ಹುಲಿ ಬಾಲದ ವಿಷಯ ಕೇಳಿದಾಗ ಇದ್ದಕ್ಕಿದ್ದಂತೆ ರೇಗಿದ್ದು ನೆನಪಾಯಿತು. ಓಹೋ ಇದನ್ನು ಕೇಳಿದ್ದಕ್ಕೆ ಸಿಟ್ಟಾದನಲ್ಲಾ ಅನ್ನಿಸಿತು. ನನಗೆ ಭತ್ತಗುತ್ತಿಗೆಯಲ್ಲಿ ಮಾಹಿತಿ ನೀಡಿದ ಆ ಮಹಾನುಭಾವರು `ನೀ ಬೇಕಾದ್ರೆ ಸುಬ್ಬಜ್ಜನ ಮನೆಗೆ ಹೋಗಿ ನೋಡಾ.. ಅವರ ಮನೆಲ್ಲಿ ಎರಡು ಮರಿಗಳದ್ದು ಆಮೇಲೆ ಒಂದ್ ಹುಲಿದು ಚರ್ಮ ಇದ್ದು. ಸುಬ್ಬಜ್ಜ ಬದುಕಿದ್ರೆ ಈ ವಿಷಯದ ಬಗ್ಗೆ ಮಾತಾಡ್ಲಕ್ಕು.. ಹೋಗು ..' ಅಂದರು.
ನಾನು ರಂಗಪ್ಪಜ್ಜ ನ ಬೇಟೆಯ ಜಾಗ ಹುಡುಕಲು ಹೋಗಿ ನಿಜವಾಗಿಯೂ ನಡೆದದ್ದೇನು ಎಂದು ಅರಿತುಕೊಂಡು ಬಂದಂತಾಗಿತ್ತು. ಅದ್ ಸರಿ ರಂಗಪ್ಪಜ್ಜ ಹುಲಿ ಹೊಡೆದಾಂಗೆ ಹೇಳಿ ಗಾದೆ ಮಾತು ಬೆಳೆದಿದ್ದು ಎಂತಕ್ಕೆ ಎಂದು ಆಲೋಚಿಸಿದಾಗ ಆ ಗಾದೆ ಆತನ ಶೌರ್ಯವನ್ನು ತೋರಿಸುತ್ತದೆ ಎನ್ನುವುದರ ಬದಲಾಗಿ ಆತನ ಬಗ್ಗೆ ಎಲ್ಲರೂ ಉಢಾಫೆಯಾಗಿ ಗಾದೆಯನ್ನು ಬೆಳೆಸಿದ್ದು ಎಂದು ಅರಿವಾಯಿತು. ಎಲಾ ರಂಗಪ್ಪಜ್ಜ ... ಎಂದುಕೊಂಡು ಮನೆಗೆ ಮರಳಿದೆ.