`ಅಜ್ಜಾ.. ನಮ್ ಅಘನಾಶಿನಿ ಹೊಳಿಗೆ ಅಣೆಕಟ್ಟು ಹಾಕ್ತ್ವಡಾ..'
ಎಂದು ಶಾಲೆಯಿಂದ ಓಡೀಡಿ ಬರುತ್ತಲೇ ಮೊಮ್ಮಗ ಒಂದೇ ಉಸುರಿಗೆ ಹೇಳಿದಾಗ ವಿಘ್ನೇಶ್ವರ ಹೆಗಡೆಯವರಿಗೆ ಒಮ್ಮೆಲೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಆಯಿತು. ಅದೇನೋ ತಳಮಳ.. ತಾನು ಕೇಳಿದ ವಿಷಯ ನಿಜವೋ, ಸುಳ್ಳೋ ಎಂದು ತಿಳಿಯಲು ಮತ್ತೊಮ್ಮೆ ಮೊಮ್ಮಗನನ್ನು ಏನೆಂದು ಕೇಳಿದರು.
ಅದಕ್ಕವನು `ಅಜ್ಜಾ.. ನಮ್ಮ ಈ ಅಘನಾಶಿನಿ ನದಿಗೆ ಅಣೆಕಟ್ಟು ಕಟ್ತ್ವಡಾ.. ಅದಕ್ಕಾಗಿ ಸರ್ವೆ ಎಲ್ಲಾ ನಡೀತಾ ಇದ್ದಡಾ.. ಅಣೆಕಟ್ಟಿಂದ ನಮ್ಮೂರೆಲ್ಲಾ ಮುಳುಗಿ ಹೋಗ್ತಡಾ..' ಎಂದ.
`ಮಳ್ಳ ಹುಡ್ರು.. ಯಂತದ್ದೋ ಸುದ್ದಿ ಕೇಳ್ಕ್ಯಬತ್ತ.. ಇಲ್ಲಿ ಬಂದು ಇನ್ನೆಂತೆಂತದ್ನೋ ಹೇಳ್ತ.. ಯಾರು ಹೇಳಿದ್ವಾ ನಿಂಗೆ ಇದ್ನಾ..' ಎಂದು ತುಸು ಸಿಟ್ಟಿನಿಂದಲೇ ಕೇಳಿದರು ಹೆಗಡೆಯವರು.
`ಅಜ್ಜಾ ಯಂಗಳ ಶಾಲೆಲ್ಲಿ ಮಾಸ್ತರ್ರು, ಹುಡುಗ್ರು ಎಲ್ಲಾ ಮಾತಾಡ್ಕ್ಯತ್ತಾ ಇದ್ದಿದ್ದ.. ನಿನ್ನೆಯಾ ಟೀ.ವಿ.. ತೋರ್ಸಿದ್ವಡಾ..' ಎಂದ ಮೊಮ್ಮಗ.
ಒಮ್ಮೆಲೆ ದಿಗ್ಭ್ರಾಂತಿಯಾದರೂ ಸಾವರಿಸಿಕೊಂಡು ಮೊಮ್ಮಗ ಹೇಳಿದ ವಿಷಯವನ್ನು ಕೇಳಲೋ ಅಥವಾ ಇತರರಲ್ಲಿ ಚರ್ಚಿಸಲೋ ಎಂಬಂತೆ ಅವರು ನಿಧಾನವಾಗಿ ತಮ್ಮ ದೊಡ್ಡ ಮನೆಯ ಚಿಕ್ಕ ಪ್ರಧಾನಬಾಗಿಲನ್ನು ದಾಟಿ ಹೆಬ್ಬಾಗಿಲನ್ನು ಹಾದು ಹೊರಬಂದರು. ಅಲ್ಲಿಯೇ ಸ್ವಲ್ಪ ದೂರದಲ್ಲಿ ಹಲವು ಹಿರಿಯ ಜೀವಿಗಳ ವಿಹಾರ, ಮಾತಿನ ತಾಣವಾಗಿದ್ದ ಅಶ್ವತ್ಥ ಮರದ ಚಾವಡಿ ಕಟ್ಟೆಯ ಬಳಿಗೆ ಸಾಗಿದರು.
**
ಉತ್ತರ ಕನ್ನಡ ಕನ್ನಡ ನಾಡಿನ ಹೆಮ್ಮೆಯ ಕಿರೀಟಕ್ಕೊಂದು ಮುಕುಟಮಣಿ. ಅಂತಹ ಮುಕುಟದಲ್ಲಿರುವ ಜಿಲ್ಲೆಯ ತುಂಬ ಮಲೆನಾಡಿನ ಸೆರಗು ಹಾಸಿಬಿದ್ದಿದೆ. ಅಂತಹ ಮಲೆನಾಡಿನ ಒಂದು ಪುಟ್ಟ ಊರು ದಂಟಕಲ್. ಐದಾರು ಮನೆಗಳಿರುವ ಈ ಊರಿಗೆ ತಾಯಿ ಅಘನಾಶಿನಿಯೇ ಜೀವದ ಸೆಲೆ. ಇಂತಹ ಊರಿನಲ್ಲಿರುವ ದೊಡ್ಡ ಮನೆಯ ಯಜಮಾನರೇ ವಿಘ್ನೇಶ್ವರ ಹೆಗಡೆಯವರು. ಯಜಮಾನಿಕೆಗೆ ತಕ್ಕ ಗಾಂಭೀರ್ಯ, ನಡೆ-ನುಡಿ, ಕಠೋರತೆ ಅವರದ್ದು. ಕರುಣೆ, ಮೃದು, ಪ್ರೀತಿ ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕುತ್ತಿತ್ತು. ಯವ್ವನದಲ್ಲಿ ಹುಲಿಯಂತೆ ಅಬ್ಬರಿಸಿದ್ದ ಹೆಗಡೆಯವರು ವಯೋಸಹಜವಾಗಿ ಮೆತ್ತಗಾಗಿದ್ದರು.
ನಿಧಾನವಾಗಿ ಅವರು ಸಾಗುವ ವೇಳೆಗೆ ಆ ಚಾವಡಿ ಕಟ್ಟೆಯಲ್ಲಿ ಆಗಲೇ ನಾಲ್ಕಾರು ಮುದಿ ಜೀವಗಳು ಆಗಮಿಸಿ ತಮ್ಮ ಎಂದಿನ ಮಾತುಕಥೆಯಲ್ಲಿ ತೊಡಗಿಕೊಂಡಿದ್ದರು. ವಿಘ್ನೇಶ್ವರ ಹೆಗಡೆಯವರು ನಿಧಾನವಾಗಿ ಚಾವಡೀಕಟ್ಟೆಯನ್ನು ತಲುಪುವ ವೇಳೆಗಾಗಲೇ ಪಕ್ಕದ ಮನೆಯ ಮಧುಕೇಶ್ವರಜ್ಜ `ಈ ಸರ್ಕಾರದವ್ಕೆ ಬ್ಯಾರೆ ಕೆಲ್ಸವೇ ಇಲ್ಲೆ.. ಕೆ.ಇ.ಬಿ.ಯವ್ಕಂತೂ ತಲೆನೇ ಸರಿಯಿಲ್ಲೆ.. ಬ್ಯಂಗ್ಳೂರು, ದಿಲ್ಲಿ, ಬಾಂಬೆ ಪಟ್ನಕ್ಕೆಲ್ಲಾ ಕರೇಂಟು ಕೊಡವು ಹೇಳಿ.. ಬಂಗಾರದ ಪವನ ಸರದಂತಾ ನಮ್ಮೂರನ್ನಾ.. ಚಿನ್ನದ ಬೆಳೆ ಕೊಡುವ ನಮ್ಮ ಭೂಮಿನ ಮುಳುಗಸ್ತ.. ಇದು ಒಳ್ಳೇದಕ್ಕೆ ಬಂದ ಬುದ್ದಿಯಲ್ಲಾ..' ಎಂದು ಜೋರಾಗಿ ಹೇಳುತ್ತಿರುವುದು ಕೇಳಿಸಿತು.
ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ವಿಘ್ನೇಶ್ವರ ಹೆಗಡೆಯವರು ಈ ಮಾತಿಗೆ ಪ್ರತಿಯಾಗಿ `ಬಹುಶಃ ನಮ್ಮ ಈ ಹೊಳಿಗೆ ಅಣೆಕಟ್ಟು ಕಟ್ತ್ವಿಲ್ಲೆ ಕಾಣ್ತಾ.. ಈ ಸುದ್ದಿ ಸುಳ್ಳಾಗಿಕ್ಕು ಅನಿಸ್ತು..' ಎಂದು ಹೇಳಿದರು.
ಆಗ ಅಲ್ಲಿಯೇ ಇದ್ದ ವಿಘ್ನೇಶ್ವರ ಹೆಗಡೆಯವರ ಹಿರಿಯ ಮಗ ಸುಬ್ರಾಯ..`ಅಯ್ಯೋ.. ಇಲ್ಯಾ ಅಪ್ಪಯ್ಯಾ.. ಕಟ್ಟಿನ ಕೆಲ್ಸ ಶುರುವಾಗೋಜಡಾ.. ಬುಲ್ಡೋಜರೆಲ್ಲಾ ಮಾನಿಹೊಳೆಗೆ ಬಂದಿಗಿದಡ.. ಕೆಲಸಗಾರರೆಲ್ಲಾ ಬಂದಿಗಿದ್ವಡಾ.. ನಾಳೆನೋ, ನಾಡಿದ್ದೋ ನಮ್ಮ ಬದಿಗೆಲ್ಲಾ ನೀರಿನ ಮಟ್ಟ ಅಳೆಯಲೆ ಬತ್ವಡಾ.. ಥೋ.. ನಮ್ಮನ್ನೂ ಆ ಕಾಳಿ ನದಿ ಕಟ್ಟಿನ ಟೈಮಲ್ಲಿ ಮಾಡ್ದಾಂಗೆ ಮಾಡ್ತ್ವ ಯಂತದೇನ..' ಎಂದು ಭೀತರಾಗಿ ನುಡಿಯುತ್ತಿದ್ದಂತೆ ವಿಘ್ನೇಶ್ವರ ಹೆಗಡೆಯವರ ಎದೆಯಾಳದ ಧಿಗಿಲು ಹೆಚ್ಚಾಯಿತು.
`ಅಲ್ದಾ.. ಇಲ್ಲಿ ಮುಳ್ಸಿರೆ.. ಎಲ್ಲಿ ಜಮೀನು ಕೊಡ್ತ್ವಾ..? ಅದೆಂತಾದ್ರೂ ಹೇಳಿದ್ವಾ..? ನಮಗೆ ಪರಿಹಾರ ಕೊಡ್ತ್ವಾ?..' ಎಂದು ಕೇಳಿದ ಹಿಂದಿನಮನೆಯ ಮಾಬ್ಲಜ್ಜ.
ಅದಕ್ಕೆ ಪ್ರತಿಯಾಗಿ ಅಲ್ಲಿಯೇ ಇದ್ದ ಗಣಪಜ್ಜ 'ಹೂಂ.. ಕೋಡ್ತ..ಕೋಡ್ತ.. ಯಲ್ಲಾದ್ರೂ ಬೈಲಸೀಮೆ ಬದಿಗೆ ಜಮೀನು ಕೊಡ್ತ.. ಪರಿಹಾರ ಹೇಳಿ ಕೊಡ್ತ ಅದು ನಮ್ಮ ಹೂಸಿಗೂ ಸಮಾ ಆಗ್ತಿಲ್ಲೆ..' ಎಂದು ಸಿಟ್ಟಿನಿಂದ ನುಡಿದ.
`ಇಂತಾ ಜಮೀನಿನ ಬದ್ಲು ಯಂತಾ ಬೋಳು ಗುಡ್ಡೆ ಕೊಡ್ತ್ವ ಯಂತದೇನ..? ಇಸ್ಟೆಲ್ಲಾ ಬೆಳೆದಿದ್ನಾ ಚೋಲೋ ಇದ್ದ ಜಮೀನು ಬಿಟ್ಟಿಕ್ಕೆ ಹೋಗಿ ಎಲ್ಲಿ ಹೋಗಿ ಹ್ಯಾಂಗೆ ದುಡಿಯವೇನ..' ಎಂದು ಸ್ವಗತದಲ್ಲೇ ಉಸುರಿದ ಮಾಬ್ಲಜ್ಜ.
ಅಣೆಕಟ್ಟು ಹಾಗೂ ಅದರ ಕುರಿತು ಇನ್ನೂ ಹಲವು ಚರ್ಚೆಗಳು ನಡೆಯಿತು. ಮೊದಲೇ ಭೀತಿಯಲ್ಲಿದ್ದ ವಿಘ್ನೇಶ್ವರ ಹೆಗಡೆಯವರು ಮತ್ತೆ ಮತ್ತೆ ಈ ಚರ್ಚೆಯನ್ನೇ ಕೇಳಿ ಕೇಳಿ ಬೇಸರ ಬಂದ ಅವರು ಅಲ್ಲಿಂದೆದ್ದು ಬೇರೆ ಕಡೆಗೆ ಸಾಗಿದರು. ಆಗಲೇ ಅವರ ಮನಸ್ಸಿನೊಳಗಿದ್ದ ಭೀತಿಯ ಭೂತ ಬೃಹದಾಕಾರವಾಗಿ ಕುಣಿಯತೊಡಗಿತ್ತು.
ಅಲ್ಲಿಯೇ ಸ್ವಲ್ಪ ದೂರದಲ್ಲಿ ಅಂಗಳದಲ್ಲಿ ಹಾಕಿದ್ದ ಅಟ್ಟದ ಕೆಳಗಿನ ತಂಪಿನ ಪ್ರದೇಶದಲ್ಲಿ ಹಲವು ಜನರು ಸೇರಿ ಚಾಲಿ ಸುಲಿಯುತ್ತಿದ್ದರು. ಮೇಲಿನ ಮನೆಯ ಸುಶೀಲಕ್ಕ, ಮಾದಕ್ಕ, ಗದ್ದೇಮನೆಯ ನಾಗರತ್ನ, ಹೊಸಮನೆಯ ನಾಗವೇಣಿ, ಕಮಲಕ್ಕ, ದೊಡ್ಡಮನೆಯ ಮಂಕಾಳಕ್ಕ, ಪಕ್ಕದ ಮನೆಯ ಮಾಲಕ್ಷ್ಮಕ್ಕ ಮುಂತಾದ ನಾಮಾಂಕಿತರು ಹಲವು ಸುದ್ದಿಗಳನ್ನು ಹೇಳುತ್ತಾ ಚಾಲಿ ಸುಲಿಯುವುದರಲ್ಲಿ ನಿರತರಾಗಿದ್ದರು. ವಿಘ್ನೇಶ್ವರ ಹೆಗಡೆಯವರು ಅತ್ತ ಹೋಗಿ ನೋಡಿದರೆ ಅಲ್ಲಿಯೂ ಅಣೆಕಟ್ಟೆಯ ಸುದ್ದಿಯೇ ಚರ್ಚೆಯಾಗುತ್ತಿತ್ತು.
ಚಾವಡಿ ಕಟ್ಟೆಯಲ್ಲಿಯೇ ಬೇಸರ, ಭೀತಿಯನ್ನು ಹೊಂದಿದ್ದ ವಿಘ್ನೇಶ್ವರ ಹೆಗಡೆಯವರ ಮನದಾಳದ ಭೀತಿ ಈಗ ದ್ವಿಗುಣಗೊಂಡಿತು. ತುಮುಲ ಇಮ್ಮಡಿಸಿತು. `ಜೀವವಿರುವ ವರೆಗೆ ಅಘನಾಶಿನಿ ನದಿಗೆ ಅಣೆಕಟ್ಟನ್ನು ಕಟ್ಟಲು ಬಿಡಬಾರದು..' ಎಂದು ಅವರು ಆಗಲೇ ಮನಸ್ಸಿನಲ್ಲಿ ನಿರ್ಧರಿಸಿಕೊಂಡರು. ಆದರೂ ಅವರ ಮನಸ್ಸು ಏಕಾಂತ ಹಾಗೂ ಶಾಂತತೆಯನ್ನು ಬಯಸುತ್ತಿತ್ತು. ಬಾಲ್ಯದಿಂದಲೂ ಅವರಿಗೆ ಎಲ್ಲ ರೀತಿಯ ಸುಖ, ಶಾಂತಿ, ಸಮಾಧಾನಗಳನ್ನು ನೀಡಿದ್ದ, ನೀಡುತ್ತಿದ್ದ ಅಘನಾಶಿನಿ ದಡದ ಕಡೆಗೆ ಸಾಗಿದರು.
ಮನೆಯ ಮುಂದಿನ ಅಂಗಳದ ಆಚೆಗಿನ ತೋಟವನ್ನು ದಾಟಿಬಂದು, ಗದ್ದೆಯ ಪಕ್ಕದಲ್ಲಿ ಹಾದುಹೋಗಿ, ಚಿಕ್ಕಂದಿನಿಂದಲೂ ಕುಳಿತುಕೊಳ್ಳುತ್ತಿದ್ದ ಆನೆಕಲ್ಲಿನ ಮೇಲೇರಿ ವಿಶ್ರಮಿಸಿಕೊಳ್ಳಲಾರಂಭಿಸಿದರು. ಅವರಿಗೆ ಆಗ ಒಂದೊಂದಾಗಿ ಕಳೆದು ಹೋದ ಜೀವನದ ಕ್ಷಣಗಳು ನೆನಪಾಗಲಾರಂಭಿಸಿದವು.
ಚಿಕ್ಕಂದಿನಲ್ಲಿ ಅಘನಾಶಿನಿ ನದಿಯಲ್ಲಿ ಈಜಿದ್ದು, ಆಡಿದ್ದು, ಮಳೆಗಾಲದಲ್ಲಿ ಉಕ್ಕೇರಿ ಹರಿದು ಹೋಗುವ ವೇಳೆಗೆ ತಮ್ಮ ಪಾಲಿನ ಗದ್ದೆ ಹಾಗೂ ತೋಟವನ್ನು ನದಿ ನೀರು ಮುಳುಗಿಸಿದ್ದು, ಅದಕ್ಕೆ ಅರಶಿಣ, ಕುಂಕುಮ ಹಾಕಿ ಭಾಗಿನ ನೀಡಿ `ಅಮ್ಮಾ.. ತೊಂದ್ರೆ ಕೊಡಡಾ...' ಹೇಳಿ ಬೇಡಿಕೊಂಡಿದ್ದು, ಹಲವಾರು ವರ್ಷಗಳ ಹಿಂದೆ ಭೀಖರವಾದ ಬರಗಾಲ ಬಂದಾಗ ಈ ನದಿಯೇ ಆಸರೆಯಾದದ್ದು. ಎಲ್ಲವೂ ನೆನಪಾಯಿತು. ತಲೆತಲಾಂತರಗಳಿಂದ ಕಾಣುತ್ತಿದ್ದ ಈ ನದಿಗೆ ಕೆಲ ವರ್ಷಗಳ ಹಿಂದೆ ಮಾರಿಗದ್ದೆ ಯೋಜನೆಯ ಮೂಲಕ ಶಿರಸಿಗೆ ನೀರು ಕೊಂಡೊಯ್ಯುವ ಕಾಮಗಾರಿ ಪ್ರಾರಂಭವಾದಾಗ ಜನರೆಲ್ಲ ಸೇರಿ ಹೋರಾಟ ಮಾಡಿದ್ದನ್ನೂ, ತಾನು ಮುಂದಾಳಾಗಿದ್ದನ್ನೂ ನೆನಪು ಮಾಡಿಕೊಂಡರು. ಆಗ ವಿಫಲವಾಗಿದ್ದ ಹೋರಾಟದಿಂದ ಬಹಳ ನೊಂದಿದ್ದ ಹೆಗಡೆಯವರು ಅಣೆಕಟ್ಟಿನ ಸುದ್ದಿಯನ್ನು ಕೇಳಿ ಕ್ರೋಧವನ್ನು ಹೊಂದಿದರು. ಹೀಗೆ ಹಲವಾರು ಘಟನಾವಳಿಗಳ ಸಾಲನ್ನು ನೆನಪು ಮಾಡಿಕೊಂಡು ಅಣೆಕಟ್ಟಿನ ಕಾರ್ಯವನ್ನು ಹೇಗೆ ನಿಲ್ಲಿಸಬೇಕೆಂದು ಯೋಚಿಸುತ್ತಿದ್ದ ಅವರಿಗೆ ಸಮಯ ಜಾರಿಹೋದದ್ದೇ ತಿಳಿಯಲಿಲ್ಲ.
ಅತಿಯಾದ ದುಃಖದಿಂದ ಅವರು, ಅತಿಭಾವುಕ ಪ್ರಕೃತಿಯೊಂದಿಗೆ ಮಾತನಾಡುವಂತೆ ನದಿಯೊಂದಿಗೆ ಮಾತನಾಡಲಾರಂಭಿಸಿದರು. ನದಿಯ ನೀರಿನಲ್ಲಿ ತಮ್ಮ ಪ್ರತಿಬಿಂಬವನ್ನು ತಾವೇ ನೋಡಿಕೊಳ್ಳುತ್ತ `ಅಮ್ಮಾ.. ಅಘನಾಶಿನಿ.. ನೀ ಮಾಡಿದ ಉಪ್ಕಾರಾನಾ ಆನು ಹ್ಯಾಂಗೆ ಮರೆಯಲಿ..? ನೀ ಯಂಗೆ ಅನ್ನ ಕೊಟ್ಟೆ, ಸುಖ, ಶಾಂತಿ, ಸಮೃದ್ಧಿ, ಐಶ್ವರ್ಯ ಎಲ್ಲಾ ಕೊಟ್ಟೆ. ಯನ್ನ ಜಮೀನಿಗೆ ನೀರು ಕೊಟ್ಟು ನಂದನವನ ಮಾಡಿದೆ.. ಆದರೆ ನಿನ್ನನ್ನು ಕಾಪಾಡಲು ಯನ್ಕೈಲಿ ಆಗ್ತಾ ಇಲ್ಲೆ..ಎಂತಾ ಮಾಡವ್ವು..' ಎಂದು ಹೇಳಲಾರಂಭಿಸಿದರು. ಇದ್ದಕ್ಕಿದ್ದಂತೆ ಆವೇಶ ಬಂದವರಂತೆ `ಇಲ್ಲೆ.. ಆನು ನಿಂಗೆ ಕಟ್ಟು ಹಾಕಲು ಬಿಡ್ತ್ನಿಲ್ಲೆ..ಅದೆಂತದೇ ಬರ್ಲಿ ಆನು ಎದುರು ನಿಂತ್ಕಂಬವ್ನೇಯಾ..' ಎಂದು ಬಡಬಡಿಸಲಾರಂಭಿಸಿದ ಅವರು ಮುಸ್ಸಂಜೆಯ ಜೀರುಂಡೆಗಳ ಕಿರ್ರೋ ಎಂಬ ಧ್ವನಿಯನ್ನು ಕೇಳಿ ವಾಸ್ತವಕ್ಕೆ ಮರಳಿದರು. ಆಗಲೇ ಅವರು `ಹೇಗಾದರಾಗಲಿ.. ಈ ಅಣೆಕಟ್ಟನ್ನು ನಿಲ್ಲಿಸಬೇಕು. ಇದಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ..' ಎಂದು ಮನದಲ್ಲೇ ನಿರ್ಧರಿಸಿ ಮನೆಯಕಡೆಗೆ ದಾರಿಯನ್ನು ಹಿಡಿದು ಹೊರಟರು.
**
ಇದಾಗಿ ಮೂರ್ನಾಲ್ಕು ವಸಂತಗಳು ಸರಿದುಹೋದವು. ಅಷ್ಟರಲ್ಲಾಗಲೇ ಹಲವು ಹಣ್ಣೆಲೆಗಳು ಉದುರಿದ್ದವು. ಹೊಸ ಚಿಗುರುಗಳು ಉದಯಿಸಿದ್ದವು. ಅಘನಾಶಿನಿ ಅಣೆಕಟ್ಟೆಯ ವಿರುದ್ಧದ ಹೋರಾ ಒಂದು ಸಮಯದಲ್ಲಿ ಉಗ್ರವಾಗ, ಈಗ ವಿಫಲತೆಯ ಹಾದಿಯಲ್ಲಿ ಸಾಗುತ್ತಿತ್ತು. ಅಣೆಕಟ್ಟೆ ನಿರ್ಮಾಣದ ಕಾರ್ಯವೂ ಪೂರ್ಣಗೊಳ್ಳುವ ಹಂತದಲ್ಲಿತ್ತು. ಅಘನಾಶಿನಿ ಕಣಿವೆಯ ತುಂಬ ದೊಡ್ಡ ದೊಡ್ಡ ಯಂತ್ರಗಳು ಸದ್ದು ಮಾಡುತ್ತಿದ್ದವು. ದೊಡ್ಡ ದೊಡ್ಡ ಬುಲ್ಡೋಜರುಗಳು ನದಿಯ ದಡದಗುಂಟ ಹಸಿ ಹಸಿರಾಗಿದ್ದ ಸಾಲು ಸಾಲಿನ ದೈತ್ಯ ಅಪ್ಪೆಯ ಮರಗಳನ್ನು ಬುಡಕತ್ತರಿಸುವ ಕಾರ್ಯದಲ್ಲಿ ನಿರತವಾಗಿದ್ದವು. ಅಷ್ಟಲ್ಲದೇ ತೋಟಗಳೂ ಯಂತ್ರಗಳ ಬಾಯಿಗೆ ನುಗ್ಗಾಗುತ್ತಿದ್ದವು.
ಅಘನಾಶಿನಿ ಅಣೆಕಟ್ಟು ವಿರೋಧಿ ಚಳುವಳಿಯ ನಾಯಕರಲ್ಲಿ ಒಬ್ಬರಾಗಿದ್ದ ವಿಘ್ನೇಶ್ವರ ಹೆಗಡೆಯವರ ಮನೆಯಾಗಲೇ ಅವರ 5 ಮಕ್ಕಳಲ್ಲಿ ಹಿಸೆಯೂ ಆಗಿಹೋಗಿತ್ತು. ಸರ್ಕಾರ ಎಲ್ಲರಿಗೂ ಪರಿಹಾರದ ಹಣವನ್ನೂ, ಬೇರೆಡೆಗೆ ಜಮೀನನ್ನೂ ನೀಡಿತ್ತು. ಹಲವರು ಆಗಲೇ ಊರನ್ನೂ ಬಿಟ್ಟು ಸಾಗಿದ್ದರು.
ವಿಘ್ನೇಶ್ವರ ಹೆಗಡೆಯವರ ಮಕ್ಕಳೂ ಸಹ ಊರಿನಿಂದ ಬೇರೆಡೆಗೆ ಹೊರಡುವ ಸನ್ನಾಹದಲ್ಲಿದ್ದರು. ಮಕ್ಕಳು ತಮ್ಮ ತಂದೆಯನ್ನು ಆಗಲೇ ಒಪ್ಪಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಮಕ್ಕಳ ಒತ್ತಾಯಕ್ಕೆ ಮೊದ ಮೊದಲು ವಿರೋಧವನ್ನೇ ಮಾಡಿದರು ಹೆಗಡೆಯವರು. ಯಾರು ಏನು ಹೇಳಿದರೂ ಈ ಊರನ್ನು ಬಿಟ್ಟು ಬೇರೆ ಕಡೆಗೆ ಹೋಗಲಾರೆ ಎಂದುಕೊಂಡಿದ್ದ ಅವರು ಕೊನೆಗೊಮ್ಮೆ ಮಕ್ಕಳ ಒತ್ತಾಯಕ್ಕೆ ಕಟ್ಟುಬಿದ್ದು ಊರನ್ನು ಬಿಟ್ಟು ಹೋಗಲು ಒಪ್ಪಿದರು.
**
ಆ ದಿನ ಊರನ್ನು ಬಿಟ್ಟು ಹೋಗಲು ಒಳ್ಳೆಯ ದಿನ ಎಂದು ವಿಘ್ನೇಶ್ವರ ಹೆಗಡೆಯವರು ಭಾವಿಸಿದ್ದರು. ಮೊದಲೇ ಮನೆಯ ಸಾಮಾನು ಸರಂಜಾಮುಗಳನ್ನೆಲ್ಲ ಬೇರೆಡೆಗೆ ಸಾಗಿಸಿಯಾಗಿತ್ತು. ಮನೆಯ ಸದಸ್ಯರು ಬೇರೆಯ ಕಡೆಗೆ ಸಾಗುವುದು ಮಾತ್ರ ಬಾಕಿ ಉಳಿದಿತ್ತು.
ಆ ದಿನ ಮನೆಯಲ್ಲಿ ಪೂಜೆ ಎಂಬಂತೆ ಏನೋ ಒಂದು ಚಿಕ್ಕ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಿದ್ದರು. ಮದ್ಯಾಹ್ನದ ವೇಳೆಗೆ ಧಾರ್ಮಿಕ ವಿಧಿವಿಧಾನಗಳೆಲ್ಲ ಮುಗಿದು ಬೇರೆಡೆಗೆ ಹೋಗಲು ವಾಹನವೂ ಬಂದಾಗಿತ್ತು.
ಎಲ್ಲರೂ ಹೊರಡುವ ತರಾತುರಿಯಲ್ಲಿದ್ದಾಗ `ಈಗ ಬಂದೆ..' ಎನ್ನುತ್ತಾ ವಿಘ್ನೇಶ್ವರ ಹೆಗಡೆಯವರೊಬ್ಬರೇ ಅಘನಾಶಿನಿ ದಡದಲ್ಲಿನ ಆನೆಕಲ್ಲಿನ ಕಡೆಗೆ ಸಾಗಿದರು.
ಅಲ್ಲಿ ಕುಳಿತೊಮ್ಮೆ ನದಿಯ ನೀರನ್ನೇ ತದೇಕ ಚಿತ್ತದಿಂದ ದಿಟ್ಟಿಸುತ್ತಾ `ಯನ್ನ ಕ್ಷಮಿಸಿಬಿಡು ತಾಯಿ.. ನಿಂಗೆ ಕಟ್ಟೋ ಅಣೆಕಟ್ಟನ್ನು ನಿಲ್ಸಲೆ ಯನ್ನ ಕೈಲಿ ಆಜಿಲ್ಲೆ.. ಆನು ಅದಕ್ಕೆ ಶತಪ್ರಯತ್ನ ಮಾಡಿದಿ.. ಆದರೆ ಯಂತಾ ಮಾಡಿದ್ರೂ ಯನ್ನ ಕೈಲಿ ಆಜೇ ಇಲ್ಲೆ.. ಯನ್ನ ಪ್ರಯತ್ನಗಳೆಲ್ಲ ವಿಫಲವಾಗೋತು. ಆನು ಸೋತೋಗ್ಬಿಟಿ.. ಈಗ ಎಲ್ಲಾರೂ ಯನ್ನ ಈ ಊರು ಬಿಟ್ಟಿಕ್ಕೆ ಹೋಗು ಹೇಳ್ತಾ ಇದ್ದ. ಈಗಲೂ ಆನು ಯಂತಾ ಮಾಡವ್ವು ಹೇಳಿ ಯಂಗೆ ಗೊತ್ತಾಗ್ತಾ ಇಲ್ಲೆ.. ಹರಿಯೋ ನೀರಿಗೆ ತಡೆ ಹಾಕ್ಲಾಗ ಹೇಳಿ ಹೇಳ್ತ.. ಆದರೂ ನಿಂಗೆ ಕಟ್ಟು ಹಾಕ್ತಾ ಇದ್ದ.. ಅವ್ವುಕೆ ಗ್ಯಾರಂಟಿ ಒಳ್ಳೇದಾಗ್ತಿಲ್ಲೆ..' ಎಂದು ಆರ್ತರಾಗಿ ನುಡಿದರು.
ಹಾಗೆಯೇ ಸ್ವಲ್ಪ ಹೊತ್ತು ಭಾವುಕರಾಗಿದ್ದ ಅವರು ಕೊಂಚ ಹೊತ್ತು ಆಲೋಚಿಸಿದ ನಂತರ ದೊಡ್ಡ ದನಿಯಲ್ಲಿ `ಇಲ್ಲೆ.. ಆನು ಈ ಊರು ಬಿಟ್ಟಿಕ್ಕೆ ಹೋಗ್ತ್ನಿಲ್ಲೆ.. ಈ ಭೂಮಿಲ್ಲೇ ಆನು ಇರ್ತಿ.. ಆನು ಬದುಕಿದ್ದು ಇಲ್ಲೇಯಾ.. ಸಾಯೋದೂ ಇಲ್ಲೇಯಾ.. ಯಂಗೆ ಇಷ್ಟೆಲ್ಲ ಉಪ್ಕಾರ ಮಾಡಿದ ನದೀನ ಬಿಟ್ಟು ಆನು ಎಲ್ಲಿಗೂ ಹೋಗ್ತ್ನಿಲ್ಲೆ..' ಎಂದು ಹೇಳುವ ವೇಳೆಗಾಗಲೇ ಅವರ ಕಣ್ಣಿನಿಂದ ಒಂದೆರಡು ಹನಿ ನೀರು ಪಟ ಪಟನೆ ನದಿ ನೀರಿಗೆ ಉದುರಿತು. ಆ ನದಿ ನೀರು ನದಿಯಲ್ಲಿ ಬಿದ್ದು ನದಿಯ ಜಿಳು ಜುಳು ನಾದದೊಂದಿಗೆ ಸೇರಿ ಕಿಂಕಿಣಿಯಾಗಿ ಸಾಗುತ್ತಿದ್ದಾಗ ವಿಘ್ನೇಶ್ವರ ಹೆಗಡೆಯವರ ಉಸಿರು ಸ್ಥಬ್ಧವಾಯಿತು. ದೇಹ ನಿಶ್ಚಲವಾಯಿತು. ಅವರು ಲೋಕದ ಪಾಲಿಗೆ ಮುಗಿದ ಅಧ್ಯಾಯವಾದರು. ಮರೆಯದ ಆದರ್ಶವಾದರು.
**
(ಈ ಕತೆಯನ್ನು ಬರೆದಿದ್ದು 20-09-2005ರಂದು ದಂಟಕಲ್ಲಿನಲ್ಲಿ)
(ಶಿರಸಿಯ ಲೋಕಧ್ವನಿ ಪತ್ರಿಕೆಯಲ್ಲಿ ಈ ಕಥೆ ಪ್ರಕಟಗೊಂಡಿದೆ. ಇದೇ ಕಥೆಯ ಒಂದು ಎಳೆಯನ್ನಾದರಿಸಿ ನಾವು ಮಾಡಿ, ಆಡಿ ತೋರಿಸಿದ ನಾಟಕ ಕರ್ನಾಟಕ ವಿವಿಯಲ್ಲಿ ಬಹುಮಾನ ಗಳಿಸಿದೆ.)