Wednesday, October 30, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 1

ಆತ್ಮೀಯರೇ..,
ತಿರುಗಾಟವೇ ನನ್ನ ಬದುಕು..
ಅಲ್ಲಿ ಇಲ್ಲಿ.. ಹಾಗೆ ಸುಮ್ಮನೆ ತಿರುಗಾಡುತ್ತಿರುವುದು..
ಪ್ರಸ್ತುತ ಕಾಲೇಜು ಫೈನಲ್ ಇಯರ್ ಆಗಿದ್ದಾಗ ನಾನು ನಮ್ಮ  ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನ ಚದುರಂಗ ತಂಡದ ಕ್ಯಾಪ್ಟನ್ ಆಗಿ ಬಸವನ ಬಾಗೇವಾಡಿಗೆ ಹೋಗಿದ್ದರ ಪ್ರವಾಸ ಕಥನ..
ಅಲ್ಲೇನೇನಾಯ್ತು ಎನ್ನುವುದನ್ನು ಇಲ್ಲಿಟ್ಟಿದ್ದೇನೆ..
ಇಲ್ಲಿ ಬರುವ ಪಾತ್ರಗಳು 8+1 ಹಾಗೂ ಇತರೆ ಇತರೆ.. ಇವರು ನನ್ನ ಜೊತೆ ಹೋದವರು.
ಉಳಿದವರು ಹೀಗೆ ಬಂದು ಹಾಗೆ ಹೋಗುತ್ತಾರಾದರೂ ನೆನಪಿನ್ನಲಿ ಉಳಿಯುತ್ತಾರೆ.
9 ಜನರೂ 9 ಮುಖಗಳಂತೆ ತಮ್ಮ ವಿಶಿಷ್ಟ ಮ್ಯಾನರಿಸಮ್ಮಿನಿಂದ ಸದಾಕಾಲ ಕಾಡಬಲ್ಲರು.
ನಾನು ಹೊರಟಿದ್ದು ಚೆಸ್ ಆಟದ ಕಾರಣಕ್ಕಾಗಿ. ಒಂದು ವಾರದ  ಈ ಪ್ರವಾಸದ ರಸ-ರುಚಿ-ಸ್ವಾದ, ಹಾಸ್ಯ-ಸಿಟ್ಟು-ಸೆಡವು ಇವುಗಳೆಲ್ಲದರ ಬಹುರೂಪ ನಿಮ್ಮೆದುರು.
ಓದಿ, ಖುಷಿಪಡಿ, ಎಂಜಾಯ್ ಮಾಡಿ.. ಆ ನಂತರ ನಿಮ್ಮದೊಂದು ಚಿಕ್ಕ ಅನಿಸಿಕೆ ಕೊಡಿ..


**
17-09-2007, ಸೋಮವಾರ
             ಮುಂಚಿನ ದಿನ ರಾತ್ರಿಯೇ ನಾನು-ಕಿಟ್ಟು ದೋಸ್ತ ರಾಘವನ ರೂಮಿನಲ್ಲಿ ಉಳಿದುಕೊಂಡ ಕಾರಣದಿಂದ ನಾವು ಬಸ್ ಸ್ಟಾಂಡಿಗೆ ಲೇಟಾಗಿ ಬರುವ ಸಂಭವವೇ ಇರಲಿಲ್ಲ. ಬೆಳಿಗ್ಗೆ ಐದಕ್ಕೇ ಎದ್ದು, ದಡಬಡಿಸಿ ತಯಾರಾಗಿ , ನನ್ನ ಅಶ್ವಿನಿ ಸರ್ಕಲ್ಲಿನ ರೂಮಿಗೆ ಬಂದು ಕುಳಿತು ಅಲ್ಲೊಂದರ್ಧ ಘಂಟೆ ಹಾಗೆ ಸುಮ್ಮನೇ ಚೆಸ್ ಆಡಿದೆವು. ಆದಿನ ರಾಘವ ಹಾಗೂ ಕಿಟ್ಟು ಅದ್ಭುತ ಫಾರ್ಮಿನಲ್ಲಿದ್ದರು. ಪರಿಣಾಮ ಗೆಲುವಿನ ಮೇಲೆ ಗೆಲುವು ಸಾಧಿಸುತ್ತಾ ಹೋದರು. ನಾನು ಸೋತು-ಸೋತು ಸುಣ್ಣವಾಗಿ ಹೋದೆ.
ಬೆಳಿಗ್ಗೆ ಏಳೂವರೆಗೆ ಬಸ್ ನಿಲ್ದಾಣದಲ್ಲಿರಬೇಕಾಗಿದ್ದ ನಾವು ಹತ್ತು ನಿಮಿಷ Late  ಆಗಿ ಹೋದೆವು. ಆಗಲೇ ಅಲ್ಲಿಗೆ ಬಂದಿದ್ದ ನವೀನ ಪಾವಸ್ಕರ `ಏನ್ರೋ..ಏಳೂವರೆಗೆ ಅಂದ್ರೆ ಈಗ ಬರೋದೇನು? ನಾನು ಏಳೂವರೆಯಿಂದ್ಲೇ ಕಾಯ್ತಾ ಇದ್ದೀನಿ..' ಎಂದು ವಟಗುಡಲು ಪ್ರಾರಂಭಿಸಿದ್ದ.
              ಆದರೆ ಬರಬೇಕಿದ್ದ ಮಹಿಳಾ ಮಣಿಗಳಿನ್ನೂ ಬಂದೇ ಇರಲಿಲ್ಲ. ಪವಿತ್ರಳೊಬ್ಬಳು ಮಾತ್ರ ಬಂದಿದ್ದಳು. ಉಳಿದವರು ಒಬ್ಬೊಬ್ಬರಾಗಿ ಬರುತ್ತಿದ್ದರು. ಮುಖ್ಯವಾಗಿ ನಮ್ಮ ತಂಡದ ಮ್ಯಾನೇಜರ್ ಆಗಿದ್ದ ಕಾಲೇಜಿನ ದೈಹಿಕ ಶಿಕ್ಷಕ ಎನ್. ಎಚ್. ಗೌಡರೇ ಬಂದಿರಲಿಲ್ಲ.
             ಅಂತೂ ಎಲ್ಲರೂ ಬಂದು ತಲುಪುವ ವೇಳೆಗೆ ಗಂಟೆ ಎಂಟನ್ನು ದಾಟಿ ಹದಿನೈದು ನಿಮಿಷವನ್ನು ಹೆಚ್ಚಿಗೆ ನುಂಗಿತ್ತು. ನಾನು, ಕಿಟ್ಟು, ರಾಘವ ಅವರಿಗಂತೂ ಇವರು ಇಸ್ಟು ಲೇಟಾಗಿ ಬರ್ತಾರೆ ಅಂತ ಗೊತ್ತಿದ್ದರೆ ನಾವುನ್ನೂ ನಾಲ್ಕೈದು ಮ್ಯಾಚ್ ಆಡಿ ಬರುತ್ತಿದ್ದೆವು ಎಂದು ಕೊಂಡೆವು.. ಕಿಟ್ಟು ಅಂತೂ ಚಿಕ್ಕದಾಗಿ `ಛೇ.. ವಿನಯನ್ನ  ಇನ್ನೊಂದೆರಡು ಮ್ಯಾಚಲ್ಲಿ ಹೊಡೆಯಲಾಗ್ತಿತ್ತು..' ಎಂದಾಗ ನನಗೆ ಹಾಗೂ ರಾಘುವಿಗೆ ನಗುವ ಬುಗ್ಗೆಯೇ ಹೊಮ್ಮಿತ್ತು.
          ಆಗಲೇ ನಮ್ಮ ಗೌಡರು ಹುಬ್ಬಳ್ಳಿಗೆ ಲಟ್ಟು ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ನಮ್ಮನ್ನು ಕರೆದೊಯ್ಯಲು ಅನುವಾದರು. ಅವರ ಜೊತೆಗೆ ಹೌದೆನ್ನಲು ಪಾವಸ್ಕರನಿದ್ದ. ನನಗೆ ಹಾಗೂ ಕಿಟ್ಟುವಿಗೆ ಶಿರಸಿಯಲ್ಲಿ ಆಗಿನ ಕಾಲಕ್ಕೆ ಚನ್ನಾಗಿದ್ದ `ಸಾಮ್ರಾಟ್' ಬಸ್ಸಿನಲ್ಲಿ ಹೋಗುವ ಆಸೆ.
          `ಸರ.. ಸಾಮ್ರಾಟ ಬಸ್ಸಿಗೆ ಹೋಗೋಣ್ರೀ..' ಅಂದರೆ ಗೌಡರು ಒಲ್ಲೆ ಎಂದರು. ನಮ್ಮ ಮನದಾಳವನ್ನು ತಕ್ಷಣ ಅರಿತ ರಾಘವ `ಸರ್ ನೀವು ಸಾಮ್ರಾಟ್ ಬಸ್ಸಿಗೆ ಹೋಗೋದೇ ಒಳ್ಳೇದು. ಯಾಕಂದ್ರೆ ಅದು ವೀಡಿಯೋ ಕೋಚ್ ಬಸ್ಸು. ಜೊತೆಗೆ ಕೆಎಸ್ಸಾರ್ಟಿಸಿಗಿಂತ 2 ರು. ಕಡಿಮೆ ರೇಟು.' ಎಂದ.
          ಒಂದು ತಲೆಗೆ ಎರಡು ರುಪಾಯಿಯಂತೆ 9 ತಲೆಗೆ 18 ರುಪಾಯಿ ಉಳಿಯುತ್ತದೆ ಎಂದು ಆಲೋಚನೆ ಮಾಡಿ ತಲೆ ಓಡಿಸಿದ ನಾಗಭೂಷಣ ಗೌಡರು ರಾಘವನ ಸಲಹೆಗೆ ಜೈ ಎಂದು ನಮ್ಮನ್ನು ಸಾಮ್ರಾಟ್ ಬಸ್ಸು ಹತ್ತಿಸಿದರು.
         ನಾನು, ನವೀನ ಪಾವಸ್ಕರ, ಆನಂದ ನಾಯ್ಕ, ಕೃಷ್ಣ ಮೂರ್ತಿ ದೀಕ್ಷಿತ, ಪೂರ್ಣಿಮಾ ಹೆಗಡೆ ವಾನಳ್ಳಿ, ಪೂರ್ಣಿಮಾ ಬೆಂಗ್ರೆ ಭಟ್ಕಳ, ತೃಪ್ತಿ ಹೆಗಡೆ, ಪವಿತ್ರಾ ಹೆಗಡೆ ಹಾಗೂ ನಾಗಭೂಷಣ ಗೌಡರನ್ನು ಹೊಂದಿದ ಬಸ್ಸು ಶಿರಸಿಯನ್ನು ಬಿಡುವ ಹೊತ್ತಿಗೆ ರಾಘವ ನಮಗೆ ಟಾಟಾ ಮಾಡಿ ಶುಭವಿದಾಯ ಹೇಳಿಯಾಗಿತ್ತು. ಸಮಯ ಆಗಲೇ 8.30ನ್ನೂ ಮೀರಿ ಮುಂದಕ್ಕೆ ಟಿಕ್ಕೆನ್ನುತ್ತಿತ್ತು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ-ವಿಶಿಷ್ಟ ಸಾಮ್ರಾಟ್ ಬಸ್ಸು ಹಾಗೂ ದೋಸ್ತರ ದಂಡು)

Sunday, October 27, 2013

ಮದ್ವೆ ಮಾಡ್ಕ್ಯಳೇ..,


ಯಮ್ಮನೆ ಮಾಣಿ ಚೋಲೋ ಇದ್ದ
ಮದ್ವೆ ಮಾಡ್ಕೈಳೇ ಕೂಸೆ,
ಯಮ್ಮನೆ ಮಾಣಿ ಚೊಲೋ ಇದ್ದ
ಮದ್ವೆ ಮಾಡ್ಕ್ಯಳೇ ||

ಅಮೇರಿಕಾದಲ್ಲಿ ಜ್ವಾಬ್ ನಲ್ಲಿದ್ದ
ಮದ್ವೆ ಮಾಡ್ಕ್ಯಳೇ ಕೂಸೆ,
ಐವತ್ತು ಸಾವ್ರ ಸಂಬ್ಳ ಬತ್ತು
ಮದ್ವೆ ಮಾಡ್ಕ್ಯಲೇ ||

ಕಾರು, ಗೀರು ಬಂಗ್ಲೆ ಇದ್ದು
ಮದ್ವೆ ಮಾಡ್ಕ್ಯಳೇ ಕೂಸೆ,
ಆಳು, ಕಾಳು ಜೋರೇ ಇದ್ದ
ಮದ್ವೆ ಮಾಡ್ಕ್ಯಳೇ ||

ಜಮೀನಂತೂ ರಾಶಿ ಇದ್ದು
ಮದ್ವೆ ಮಾಡ್ಕ್ಯಳೇ ಕೂಸೆ,
ಹವ್ಯಕರಲ್ಲಿ ಹೆಣ್ಣು ಕಡಿಮೆ
ಮದ್ವೆ ಮಾಡ್ಕ್ಯಳೇ ||

ಯಮ್ಮನೆ ಮಾಣಿ ಭಾರಿ ಶುಭಗ
ಚಟ ಮಾಡ್ತ್ನಿಲ್ಯೇ ಕೂಸೆ
ಜೂಜಾಡ್ತ್ನಿಲ್ಲೆ, ಕುಡೀತ್ನಿಲ್ಲೆ
ಓಸಿ ಆಡ್ತ್ನಿಲ್ಲೆ ||

ಯಮ್ಮನೆ ಮಾಣಿ ಶಿಸ್ತಾಗಿದ್ದ
ಮದ್ವೆ ಮಾಡ್ಕ್ಯಳೇ ಕೂಸೆ,
ಸದಾ ನಿನ್ನ ಸೇವೆ ಮಾಡ್ತ
ಮದ್ವೆ ಮಾಡ್ಕ್ಯಳೇ ||

ವಾರಕ್ಕೊಮ್ಮೆ ಸೀರೆ ತತ್ತ
ಮದ್ವೆ ಮಾಡ್ಕ್ಯಳೇ ಕೂಸೆ,
ತಿಂಗ್ಳಿಗೊಂದು ನೆಕ್ಲೆಸ್ ತತ್ತಾ
ಮದ್ವೆ ಮಾಡ್ಕ್ಯಳೇ ||

ಕಪ್ಪಗಿದ್ರೂ ಒಪ್ಪಾಗಿದ್ದ
ಮದ್ವೆ ಮಾಡ್ಕ್ಯಳೇ ಕೂಸೆ
ಬದುಕಿನ ಪೂರ್ತಿ ಪ್ರೀತಿ ಮಾಡ್ತ
ಮದ್ವೆ ಮಾಡ್ಕ್ಯಳೇ ||

(ಇದೊಂದು ಹವ್ಯಕ ಟಪ್ಪಾಂಗುಚ್ಚಿ ಗೀತೆ. ಹವ್ಯಕರಲ್ಲಿ ಹೆಣ್ಣು ಕಡಿಮೆ. ಹುಡುಗ ಎಷ್ಟೇ ಸಕಲಗುಣ ಸಂಪನ್ನರಾದರೂ ಹವ್ಯಕ ಹುಡುಗಿಯರು ಕ್ಯಾತೆ ತೆಗೆದು ಬೇಡವೆನ್ನುತ್ತಾರೆ. ಗಂಡಿನ ತಂದೆ-ತಾಯಿ ಹುಡುಗಿಯ ಬಳಿ ಬಂದು ಮದ್ವೆ ಮಾಡ್ಕ್ಯಳೇ ಎಂದು ಗೋಗರೆದು, ಮಗನ ಗುಣಗಾನ ಮಾಡಿ ಮದುವೆ ಮಾಡಿಕೋ ಎನ್ನುವ ಹಾಸ್ಯಮಿಶ್ರಿತ ಗೀತೆ.

Friday, October 25, 2013

ಮೆಚ್ಚಿನ ಮಾಸ್ತರು(ಕಥೆ)

    ಅಂದು ಸಂಜೆ ನಾನು ನನ್ನ ಆಫೀಸು ಕೆಲಸ ಮುಗಿಸಿ ಮನೆಗೆ ಬಂದು ಸೇರುತ್ತಿದ್ದ ಹಾಗೆಯೇ ನನ್ನ ಮೊಬೈಲ್ ರಿಂಗಣಿಸತೊಡಗಿತು. ನಾನು ಅದನ್ನು ಲಗುಬಗೆಯಿಂದ ಎತ್ತಿಕೊಂಡು `ಹಲೋ' ಎಂದೆ..
    ಆ ಕಡೆಯಿಂದ `ನಾನು ಸಂತೋಷ..' ಎಂದ.
    `ಏನ್ ಸಮಾಚಾರ ಸಂತೋಷ..? ಚನ್ನಾಗಿದ್ದೀಯಾ..? ಹೇಗಿದ್ದೀಯಾ..' ಎಂಬಿತ್ಯಾದಿ ಉಭಯಕುಶಲೋಪರಿ ಸಾಂಪ್ರತಗಳೆಲ್ಲ ನಡೆದವು.
    ಕೊನೆಗವನು `ನೀನು ಅರ್ಜೆಂಟಾಗಿ ಇಲ್ಲಿಗೆ ಬಾ.. ನಮ್ಮೆಲ್ಲರ ಪ್ರೀತಿ ಪಾತ್ರರಾದ ತ್ಯಾಗರಾಜ ಸರ್ ಅವರು ತೀರಿಕೊಂಡರು. ನೀನು ಬೇಗ ಹೊರಡು ಬಾ..' ಎಂದು ಪೋನಿಟ್ಟ.
    ನನಗೆ ಒಮ್ಮೆಲೆ ದಿಗ್ಭ್ರಾಂತಿಯಾಯಿತು. ತ್ಯಾಗರಾಜ ಮಾಸ್ತರರು ನನ್ನ ಹೈಸ್ಕೂಲು ಹಾಗೂ ಜೀವನದಲ್ಲಿ ಸಿಕ್ಕ ಅತ್ಯಂತ ಪ್ರೀತಿ ಪಾತ್ರ ಮಾಸ್ತರರಾಗಿದ್ದರು. ಅವರು ನನಗಷ್ಟೇ ಅಲ್ಲದೇ ಹೈಸ್ಕೂಲಿನ ಪುಂಡ ಹುಡುಗರಿಗೆಲ್ಲ ಗುರುವಿನಂತಿದ್ದ ಸಂತೋಷನಂತಹ ಹಲವರಿಗೂ ಅಚ್ಚುಮೆಚ್ಚಿನ ಗುರುಗಳಾಗಿದ್ದರು.
    ನಾನು ಲಗುಬಗೆಯಿಂದ ಕೈಗೆ ಸಿಕ್ಕ ಬಟ್ಟೆಗಳನ್ನು ಬ್ಯಾಗಿನಾಳಕ್ಕೆ ತುರುಕಿ ತಯಾರಾಗಿ ಬೆಂಗಳೂರಿನಿಂದ ಶಿರಸಿಯ ಕಡೆಗೆ ಹೊರಡುವ ಬಸ್ಸನ್ನು ಹತ್ತಿ ಕುಳಿತೆ. ಕುಳಿತ ಘಳಿಗೆಯಿಂದ ನನ್ನ ಮನದ ಭಿತ್ತಿಯ ಮೇಲೆ ತ್ಯಾಗರಾಜ ಮಾಸ್ತರರ ನೆನಪು ಒಂದರಹಿಂದೊಂದರಂತೆ ಮೂಡಿಬರಲಾರಂಭಿಸಿತು.
    *****
    ತ್ಯಾಗರಾಜ್ ಸರ್ ನನ್ನ ಅತ್ಯಂತ ಪ್ರೀತಿಪಾತ್ರ ಗುರುಗಳು. ಹಾಗೆಯೇ ನಾನೂ ಕೂಡ ಅವರ ಅತ್ಯಂತ ಪ್ರೀತಿ ಪಾತ್ರ ವಿದ್ಯಾರ್ಥಿಯಾಗಿದ್ದೆ. ಅವರು ತಮ್ಮ ವೃತ್ತಿ ಬದುಕಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳನ್ನು ಕಂಡಿದ್ದರೂ ಅವರ ಒಲವು ಮಾತ್ರ ನನ್ನ ಮೇಲಿತ್ತು.
    ಹೈಸ್ಕೂಲಿನಲ್ಲಿ ಅವರು ಇಂಗ್ಲೀಷ್ ವಿಷಯದ ಶಿಕ್ಷಕರಾಗಿದ್ದರು. ಇಂಗ್ಲೀಷಿನಲ್ಲಿ ಅವರು ಹೆಚ್ಚು ಪಾಂಡಿತ್ಯ ಗಳಿಸಿಕೊಂಡಿದ್ದರು. ಅವರು ಇಂಗ್ಲಿಷೀನ ಬಹುತೇಕ ಎಲ್ಲಾ ಪುಸ್ತಕಗಳನ್ನು ಓದಿಕೊಂಡಿದ್ದರೇನೋ ಎನ್ನುವ ನಂಬಿಕೆ ನನ್ನದಾಗಿತ್ತು. ಪ್ರತಿಯೊಂದೂ ಸಮಯದಲ್ಲಿ ಅವರು ತಮ್ಮ ಕೈಯಲ್ಲಿ ಇಂಗ್ಲೀಷಿನ ಯಾವುದಾದರೊಂದು ಪುಸ್ತಕವನ್ನು ಹಿಡಿದು ಓದುತ್ತಿದ್ದರು. ಇಲ್ಲವಾದರೆ ಕೈಯಲ್ಲೊಂದು ಚಿಕ್ಕ ರೇಡಿಯೋ ಹಿಡಿದು ಬಿಬಿಸಿಯನ್ನೋ ವಾಯ್ಸ್ ಆಫ್ ಅಮೇರಿಕಾವನ್ನೋ ರಷ್ಯನ್ ಚಾನಲ್ಲನ್ನೋ ಹಾಕಿಕೊಂಡು ಕೇಳುತ್ತಿದ್ದರು. ಅವರ ಇಂಗ್ಲೀಷ್ ಪಾಂಡಿತ್ಯ ಎಷ್ಟಿತ್ತೆಂದರೆ ಒಮ್ಮೆ ಬಿಬಿಸಿಯ ನ್ಯೂಸ್ ನಲ್ಲಿ ಒಂದು ತಪ್ಪನ್ನು ಕಂಡುಹಿಡಿದು, ಬಿಬಿಸಿಯವರಿಗೆ ಪತ್ರ ಬರೆದು ಅವರಿಂದ ಪ್ರಶಂಸೆಯನ್ನೂ ಪಡೆದುಕೊಂಡಿದ್ದರು.
    ನಾನು ಹೈಸ್ಕೂಲಿಗೆ ಸೇರಿದ ಹೊಸತರಲ್ಲಿ ಮಾತೃಭಾಷಾ ಪ್ರವೀಣ ಎಂಬ ಹೆಸರನ್ನು ಪಡೆದುಕೊಂಡಿದ್ದೆ. ನನಗೆ ಇಂಗ್ಲೀಷ್ ಎಂದರೆ ಕಬ್ಬಣಕ್ಕಿಂತ ಗಟ್ಟಿಯಾಗಿದ್ದ ಕಡಲೆಯಾಗಿತ್ತು. ಈ ಮಾಸ್ತರರು ನನಗೆ ಇಂಗ್ಲೀಷಿನ ಕಡೆಗಿದ್ದ ಭಯ, ಅನ್ಯಮನಸ್ಕತೆಯನ್ನು ಹೋಗಲಾಡಿಸಿ ಇಂಗ್ಲೀಷು ಸುಲಭವಾಗಿಸಿದ್ದರು.
    ಸರಿಯಾಗಿ ಇಂಗ್ಲೀಷಿನ ಪುಸ್ತಕವನ್ನೂ ಕೊಂಡು ಓದಲು ನನಗೆ ಕಷ್ಟವಾಗುತ್ತಿದ್ದ ಸಮಯದಲ್ಲಿ ಅವರು ತಮ್ಮಲ್ಲಿದ್ದ ಶೇಕ್ಸ್ಪೀಯರ್, ಮ್ಯಾಥ್ಯೂ ಅರ್ನಾಲ್ಡ್, ಚಾರ್ಲ್ಸ್ ಲ್ಯಾಂಬ್, ಜಾನ್ ಕೀಟ್ಸ್, ವೈ, ಬಿ. ಯೇಟ್ಸ್ ಮುಂತಾದ ಇಂಗ್ಲೀಷಿನ ಮಹಾಮಹಿಮರ ಪುಸ್ತಕಗಳನ್ನು ನನಗೆ ತಂದುಕೊಟ್ಟು, ಕಷ್ಟಪಟ್ಟು ಓದುವಂತೆ ಮಾಡಿ ಅವುಗಳನ್ನು ಕೊಡುಗೆಯಾಗಿ ನೀಡಿದರು.
    ನಂತರದ ದಿನಗಳಲ್ಲಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನನ್ನನ್ನು ಓದಿಸಿದರು ಎಂದರೂ ತಪ್ಪಾಗಲಿಕ್ಕಿಲ್ಲ. ಅವರು ತಮಗೆ ಸ್ವಂತ ಮಕ್ಕಳನ್ನು ಹೊಂದಿಲ್ಲದೇ ಇದ್ದ ಕಾರಣ ನನ್ನನ್ನು ಸ್ವಂತ ಮಗನಂತೆ ಸಾಕಿದರು. ಜೊತೆ ಜೊತೆಯಲ್ಲಿ ನನ್ನ ತಂದೆ ತಾಯಿಗಳಿಗೂ ಸಾಕಷ್ಟು ಸಹಾಯ ಮಾಡಿದ್ದರು.
    ನಂತರ ನಾನು ಓದಿ ಬಿ.ಎಸ್ಸಿ, ಎಂ.ಎಸ್ಸಿ ಮುಂತಾದ ಹಲವಾರು ಡಿಗ್ರಿಗಳ ಸರದಾರನಾದೆ. ಜೊತೆಗೆ ಬೆಂಗಳೂರಿನ ಒಂದು ದೊಡ್ಡದೊಂದು ಕಂಪನಿ ಉದ್ಯೋಗ ನೀಡುತ್ತೇನೆಂದು ಕೈಬೀಸಿ ಕರೆಯಿತು. ಹುಂ ಅಂದ ತಕ್ಷಣ ಕೈಚಾಚಿ ನನ್ನನ್ನು ಕರೆದು ಸೆಳೆದು ತೆಕ್ಕೆಯೊಳಗೆ ಮುಳುಗಿಸಿಬಿಟ್ಟಿತು. ನಾನು ಉದ್ಯೋಗಲೋಕದಲ್ಲಿ ಹೆಚ್ಚು ಹೆಚ್ಚು ತೊಡಗಿಕೊಂಡಂತೆಲ್ಲ ಮೆಚ್ಚಿನ ಮಾಸ್ತರು ದೂರದೂರವಾಗತೊಡಗಿದರು. ಅವರ ಒಡನಾಟ ತಪ್ಪಿತು. ನನಗೆ ಇಷ್ಟೆಲ್ಲ ಸಹಾಯಗಳನ್ನು ಮಾಡಿದ್ದ ತ್ಯಾಗರಾಜ ಮಾಸ್ತರು ಜಗತ್ತಿನ ಎಲ್ಲಾ ಭಾಷೆಗಳನ್ನೂ ಕಲಿಯಬೇಕೆಂಬ ಮಹೋನ್ನತ ಉದ್ದೇಶವನ್ನು ಹೊಂದಿದ್ದರು.
    ನಾನು ಸಾಗುತ್ತಿದ್ದ ಬಸ್ಸಿನ ಡ್ರೈವರ್ ಒಮ್ಮೆ ಇದ್ದಕ್ಕಿದ್ದಂತೆ ಬ್ರೇಕ್ ಒತ್ತಿದ. ನಾನು ಮೋಡದಿಂದ ಮಳೆಹನಿ ಭೂಮಿ ಜಾರಿ ಇಳಿವಂತೆ ಒಮ್ಮೆ ನೆನಪಿನ ಲೋಕದಿಂದ ವಾಸ್ತವಕ್ಕೆ ದಡಾರನೆ ಬಂದು ಬಿದ್ದೆ. ನೋಡಿದರೆ ಬಸ್ಸು ಅರಸೀಕೆರೆಯನ್ನು ದಾಟಿತ್ತು. ಯಾವುದೋ ಹೆರುಗೊತ್ತಿಲ್ಲದ ಊರಿನಲ್ಲಿ ತಿಂಡಿಗಾಗಿ ನಿಂತಿತ್ತು.
    ಬಸ್ಸು ಮತ್ತೆ ಮುಂದಕ್ಕೆ ಚಲಿಸಿದಂತೆಲ್ಲ ನಾನು ಮತ್ತೆ ನೆನಪಿನ ಅಂಗಣದೊಳಕ್ಕೆ ಪಯಣ ಮಾಡಿದೆ. ಹಲವಾರು ಉತ್ತಮ ಗುಣಗಳ ಖಜಾನೆಯಾಗಿದ್ದ ತ್ಯಾಗರಾಜ ಮಾಸ್ತರರಲ್ಲಿ ಕೆಲವೊಂದು ಅವಗುಣಗಳೂ ಇದ್ದವು.
    ಅವರಲ್ಲಿದ್ದ ಮುಖ್ಯ ತೊಂದರೆಯೆಂದರೆ ಮರೆಗುಳಿತನವಾಗಿತ್ತು. ಅತಿಯಾದ ಮರೆವು ಅವರನ್ನು ಕಾಡುತ್ತಿತ್ತು. ಅತಿಯಾಗಿ ಓದಿದ ಕಾರಣದಿಂದಲೇ ಈ ಮರೆವು ತ್ಯಾಗರಾಜ ಮಾಸ್ತರರನ್ನು ಆವರಿಸಿಕೊಂಡಿದೆ ಎಂದು ಕೆಲವರು ಹೇಳುತ್ತಿದ್ದರು. ಇವರ ಮರೆಗುಳಿತನ ಆಗಲೇ ಹೈಸ್ಕೂಲಿನಲ್ಲಿ ವರ್ಡ್ ಫೇಮಸ್ಸಾಗಿತ್ತು. ಇವರ ಮರೆಗುಳಿತನ ಹೇಗಿತ್ತೆಂದರೆ ಒಮ್ಮೆ ಅವರು ತಮ್ಮ ಮೋಟಾರ್ ಬೈಕಿನಲ್ಲಿ ಸಾಗುತ್ತಿದ್ದು. ಬೈಕಿಗೆ ಬ್ರೇಕ್ ಹಾಕಲು ಮರೆತುಹೋದ ಪರಿಣಾಮ ಎದುರಿನ ಬಂಡೆಗಲ್ಲಿಗೆ ಢಿಕ್ಕಿಕೊಟ್ಟು ಬಿದ್ದು ಆಸ್ಪತ್ರೆಯ ಪಾಲಾಗಿದ್ದರು.
    ಇನ್ನೊಂದು ಅವರಲ್ಲಿನ ಮುಖ್ಯ ಸಮಸ್ಯೆ ಎಂದರೆ ರೋಗಗಳ ಕಡೆಗಿದ್ದ ಅಪಾರ ಭಯ. ಅದರಲ್ಲೂ ಮುಖ್ಯವಾಗಿ ಕ್ಯಾನ್ಸರ್ ಮಹಾಮಾರಿಯ ಕುರಿತು ಅವರಿಗೆ ವಿಪರೀತ ಭಯವಿತ್ತು. ಯಾವುದೇ ಹೊಸ ರೋಗ ಪತ್ತೆಯಾದರೂ ಮೊದಲು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದರು. ಕ್ಯಾನ್ಸರನ್ನಂತೂ ಅವರು ಭೂತ ಎಂದೇ ಕರೆಯುತ್ತಿದ್ದರು.
    ಕ್ಯಾನ್ಸರಿನ ಕುರಿತು ಭಯದ ಕಾರಣದಿಂದಲೇ ಅವರು ತಮ್ಮ ಜೀವಮಾನದಲ್ಲೇ ಉಗುರಿಗೆ ಬಣ್ಣ ಹಚ್ಚಲಿಲ್ಲ. ಮುಖಕ್ಕೆ ಪೌಡರನ್ನೂ, ದೇಹಕ್ಕೆ ಸೆಂಟನ್ನೂ ಪೂಸಿಕೊಳ್ಳುತ್ತಿರಲಿಲ್ಲ. ಅಷ್ಟೇ ಏಕೆ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಸಾಪ್ಟ್ ಡ್ರಿಂಕ್ ಗಳನ್ನೂ ಬಳಸುತ್ತಿರಲಿಲ್ಲ. ಮೊಬೈಲ್ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂದುಕೊಂಡು ಮೊಬೈಲನ್ನು ದೂರವಿಟ್ಟಿದ್ದರು. ಯಾವುದೇ ರಾಸಾಯನಿಕ ವಸ್ತುಗಳನ್ನೂ ಬಳಕೆ ಮಾಡುತ್ತಿರಲಿಲ್ಲ. ಅತಿಯಾಗಿ ಎಕ್ಸರೇ ಮಾಡಿಸಿಕೊಂಡರೆ ಮುಂದೊಂದು ದಿನ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು ಎಂದು ಎಲ್ಲೋ ಓದಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಅತಿಯಾಗಿ ಪೋಟೋ ತೆಗೆಸಿಕೊಂಡರೆ ಕ್ಯಾನ್ಸರ್ ಬರುತ್ತದೆ ಎನ್ನುತ್ತಿದ್ದರು. ಅಷ್ಟೇ ಅಲ್ಲದೇ ಪೋಟೋ ತೆಗೆಸಿಕೊಳ್ಳಲೂ ಹಿಂದೇಟು ಹಾಕಿದ ಅನೇಕ ಸಂದರ್ಭಗಳು ನನಗಿನ್ನೂ ನೆನಪಿದೆ. ನನ್ನ ಎಸ್ಸೆಸ್ಸೆಲ್ಸಿ ಬೀಳ್ಕೊಡುಗೆ ಸಮಾರಂಭದ ಪೋಟೋವೂ ಅದರಲ್ಲೊಂದು. ಅಷ್ಟರ ಜೊತೆಗೆ ಎಲ್ಲೇ ಕ್ಯಾನ್ಸರ್ ಕುರಿತು ಅಥವಾ ಇತರ ರೋಗಗಳ ಕುರಿತು ಮಾಹಿತಿ ಕಾರ್ಯಾಗಾರ, ಅರಿವು ಮೂಡಿಸುವ ಕಾರ್ಯಕ್ರಮವಿದ್ದರೆ ಅಲ್ಲಿ ತಪ್ಪದೇ ಪಾಲ್ಗೊಳ್ಳುತ್ತಿದ್ದರು.
    ಹೀಗೆ ನನ್ನ ನೆನಪಿನ ನೌಕೆ ತಂಗಾಳಿಯಲೆಗೆ ಎದುರಾಗಿ ಸಾಗುತ್ತಿದ್ದ ವೇಳೆಯಲ್ಲೇ ನಾಣು ಇಳಿಯಬೇಕಾದ ಕೊನೆಯ ನಿಲ್ದಾಣ ಬಂದೇಬಿಟ್ಟಿತು. ನಾನು ಲಗುಭಗೆಯಿಂದ ಇಳಿದು ತ್ಯಾಗರಾಜ ಮಾಸ್ತರರ ಮನೆಯ ಕಡೆಗೆ ನಡೆದೆ.
    ಅವರ ಮನೆಯ ಅಂಗಳದಲ್ಲಿ ನೀರವ ಮೌನ ತುಂಬಿತ್ತು. ಮಾಸ್ತರರ ಹಲವರು ಬಂಧು ಮಿತ್ರರಿರಬೇಕು. ಸೇರಿದ್ದರು. ನನ್ನೆಡೆಗೆ ಎಲ್ಲರ ಕಣ್ಣು ಕುತೂಹಲ, ಸೇರಿದಂತೆ ಹಲವು ಭಾವನೆಗಳಿಂದ ಅವರೆಲ್ಲ ನೋಡುವ ವೇಳೆಗೆ ನಾನು ಅಂಗಳ ದಾಟಿ ಮುಂದಡಿಯಿಟ್ಟಿದ್ದೆ. ಅಲ್ಲೊಂದು ಕಡೆ ತ್ಯಾಗರಾಜ ಮಾಸ್ತರರ ಹೆಂಡತಿ ರೋಧಿಸುತ್ತಿದ್ದಳು. ಅತ್ತು ಅತ್ತು ಕಣ್ಣು ಕೆಂಪಾಗಿದ್ದವು. ತಲೆಗೂದಲು ಕೆದರಿತ್ತು. ಮತ್ತೊಂದು ಕಡೆಯಲ್ಲಿ `ಸಂತೋಷ' ನಿಂತುಕೊಂಡಿದ್ದ. ನಡುವಲ್ಲಿ ತ್ಯಾಗರಾಜ ಮಾಸ್ತರರು ಅಚೇತನರಾಗಿದ್ದರು. ಮಾಸ್ತರರ ನಿಶ್ಚಲ ದೇಹ ಭೂಮಿಯ ಮೇಲೆ ಅಂಗಾತ ಒರಗಿತ್ತು.
    ನಾನು ಸಂತೋಷನ ಬಳಿ ಹೋಗಿ ಏನೇನಾಯ್ತು ಎಂದು ಕೇಳಿದೆ.
    ಅದಕ್ಕೆ ಸಂತೋಷ `ಅವರಿಗೆ ಕ್ಯಾನ್ಸರ್ ಇತ್ತಂತೆ ಮಾರಾಯಾ..' ಎಂದ.
    ನನಗೊಮ್ಮೆ ದಿಗ್ಭ್ರಾಂತಿಯಾಯಿತು. ನಾನು `ಏನು..? ಕ್ಯಾನ್ಸರ್..?' ಎಂದು ತೊದಲುತ್ತಾ ಉದ್ಘರಿಸಿ `ನನಗೇಕೆ ಹೇಳಲಿಲ್ಲ..' ಎಂದೆ.
    `ಅವರಿಗೆ ಕ್ಯಾನ್ಸರ್ ಬಂದು ಬಹಳ ವರ್ಷವಾಗಿತ್ತಂತೆ. ಮೊನ್ನೆ ಬಹಳ ಹೆಚ್ಚಾಗಿತ್ತು. ನಾನು ನಿನಗೆ ಸುದ್ದಿ ತಿಳಿಸಬೇಕೆಂದು ಹೊರಟಾಗ ಮಾಸ್ತರರೇ ಬೇಡ ಎಂದರು'.. ಎಂದು ತಿಳಿಸಿದ.
    ನನಗಂತೂ ಒಂದು ಕ್ಷಣ ಗಗನವೇ ಹರಿದುಬಿದ್ದಂತೆ ಅನ್ನಿಸತೊಡಗಿತು. ಆಕ್ಷಣದಲ್ಲಿ ನನಗೆ ಆಗುತ್ತಿದ್ದುದು ದುಗುಡವೋ, ಭಯವೋ, ಆಶ್ಚರ್ಯವೋ, ಕೌತುಕವೋ, ಉದ್ವೇಗವೋ, ದುಮ್ಮಾನವೋ.. ಬಗೆಹರಿಯಲಿಲ್ಲ. ಏನಾಗುತ್ತಿದೆ ಎನ್ನುವುದೇ ಅರ್ಥವಾಗಲಿಲ್ಲ. ಕಣ್ಣು ಕತ್ತಲಿಟ್ಟಂತಾಯಿತು.
    ಕೊನೆಗೆ ಸಂತೋಷ ನನ್ನ ಬಳಿ `ನೀನು ಮಾಸ್ತರರ ಚಿತೆಗೆ ಬೆಂಕಿ ಇಡಬೇಕಂತೆ..ಇದು ಅವರ ಕೊನೆಯ ಆಸೆಯಾಗಿತ್ತು..' ಎಂದ.
    ಆಗ ನನಗೆ ಎಲ್ಲವೂ ಅರ್ಥವಾಯಿತು. ಅವರೇಕೆ ಕ್ಯಾನ್ಸರ್ ಬಗ್ಗೆ ಅಷ್ಟು ಭಯ ಹೊಂದಿದ್ದು, ಕ್ಯಾನ್ಸರ್ ಕುರಿತ ಕಾರ್ಯಕ್ರಮಗಳಿಗೆಲ್ಲ ತೆರಳುತ್ತಿದ್ದರು ಎಂಬುದು. ರೋಗಗಳ ಕುರಿತು ಅವರು ಹೊಂದಿದ್ದ ಭಯದ ಮೂಲ ಕಾರಣವೂ ನನಗೆ ಅರಿವಾಗಿತ್ತು. ನಾನು ಮನಸ್ಸಿನಲ್ಲಿಯೇ ಕ್ಯಾನ್ಸರ್ ಭೂತವನ್ನು ಹಳಿಯಲಾರಂಭಿಸಿದೆ. ಎಂತೆಂತಹ ಮಹಾನ್ ವ್ಯಕ್ತಿಗಳನ್ನು ಬಲಿ ತೆಗೆದುಕೊಂಡಿತಲ್ಲಾ ಈ ಕ್ಯಾನ್ಸರ್ ಭೂತ.. ಕೊನೆಗೆ ನನ್ನ ಪ್ರೀತಿಯ ತ್ಯಾಗರಾಜ ಮಾಸ್ತರರನ್ನೂ ಬಿಡಲಿಲ್ಲವಲ್ಲ ಎಂದು ಬಹಳ ಖೇದವುಂಟಾಯಿತು.
    ಕೊನೆಗೆ ದುಃಖದ ನಡುವೆಯೇ ಅವರ ಚಿತೆಗೆ ನಾನೇ ಅಗ್ನಿಸ್ಪರ್ಷ ಮಾಡಿದೆ. ದುಃಖದ ನಡುವೆಯೂ ಗುರುವಿನ ಋಣ ತೀರಿಸಿದ, ತನ್ಮೂಲಕ ಗುರುದಕ್ಷಿಣೆ ಸಲ್ಲಿಸಿದ ತೃಪ್ತಿ ಸಿಕ್ಕಿತು. ಕ್ಷಣ ಕ್ಷಣಕ್ಕೂ ಚಿತೆಯ ಬೆಂಕಿ ಗಗನಮುಖಿಯಾಗುತ್ತಿತ್ತು. ಅಗ್ನಿ ಜ್ವಾಲೆಯಲ್ಲಿ ಕ್ಯಾನ್ಸರ್ ಭೂತದ ರುದ್ರನರ್ತನ ವಿಕಟಾಟ್ಟಹಾಸದಿಂದ ಮೆರೆಯುತ್ತಿರುವಂತೆ ಕಂಡು ಬೆನ್ನಿನ ಆಳದಲ್ಲಿ ಚುಳ್ಳೆಂದಿತು.
    ನಾನು ಆ ನಂತರ
    ಗುರು ಬ್ರಹ್ಮ, ಗುರುರ್ವಿಷ್ಣು..
    ಗುರುದೇವೋ ಮಹೇಶ್ವರಃ
    ಗುರು ಸಾಕ್ಷಾತ್ ಪರಬ್ರಹ್ಮ,
    ತಸ್ಮೈ ಶ್ರೀ ಗುರವೇ ನಮ:
ಎಂದು ಹೇಳುತ್ತಾ ಅಲ್ಲಿಂದ ಹಿಂದಿರುಗಲಾರಂಭಿಸಿದೆ.



********

(ಬರೆದಿದ್ದು 11-05-2005ರಂದು ದಂಟಕಲ್ಲಿನಲ್ಲಿ)..

Thursday, October 24, 2013

ಎಂಟು ವಸಂತಗಳಾಚೆ




ಎಂಟು ವಸಂತಗಳಾಚೆ
ಮತ್ತೊಮ್ಮೆ ಅಲ್ಲಿಗೆ ಹೋಗಿದ್ದೆ |
ದ್ವಾರಕೆಯಂತಹ ನಾಡಿಗೆ
ಮುಳುಗಿ ಹೋದ ಊರಿಗೆ,
ನನ್ನ ಅಮ್ಮನ ತೌರಿಗೆ ||

ಹೋದೊಡನೆಯೇ ಕಂಡಿದ್ದೇನು?
ಕಣ್ಣ ಮುಂದಿಡೀ ನೀರು
ಕೊನೆಮೊದಲಿಲ್ಲದ ಜಲ |
ಅಲ್ಲಲ್ಲಿ ತಲೆಯುರುಳಿದ
ಅಡಿಕೆ ಮರಗಳ ಬೊಡ್ಡೆ,
ಲಡ್ಡಾದ ತೆಂಗು, ಬಯಲಾದ ಕಾಡು ||

ನಲಿ ನಲಿದು ಬಾಲ್ಯವ
ಕಳೆದಲ್ಲೀಗ ತುಂಬಿರುವುದು
ನೀರು, ನೀರು ಹಾಗೂ ಬರೀ ನೀರು |
ಅಳಿದುಳಿದಂತೆ ಕಾಣುವುದೋ
ಅಲ್ಲಲ್ಲಿ ದ್ವೀಪ, ನರಕದ ಕೂಪ ||

ಹೆಸರೇನೋ ಇತ್ತು ಬರಬಳ್ಳಿ
ಸುತ್ತಲೂ ವನರಾಶಿ ಗಿಡ, ಮರ ಬಳ್ಳಿ
ತುಂಬಿತ್ತು ಜನ, ಧನ
ನಲಿದಿತ್ತು ಮನೆ, ಮನ ||

ಒಂದೆಡೆ ನೇರ ನಿಂತ ಸಹ್ಯಾದ್ರಿ
ಮತ್ತೊಂದೆಡೆ ರೌದ್ರ ಕರಿಕಾಳಿ |
ನಟ್ಟನಡುವಲಿ ಊರಿತ್ತು ಅಲ್ಲಿ
ಮುಗ್ಧ ಜನ ಮನದಿ ನಲಿವಿತ್ತಲ್ಲಿ ||

ಈಗಲೋ ಉಳಿದಿದ್ದು ಮಾತ್ರ
ಕಳೆದ ಹಳೆ ನೆನಪು, ಕರಿ ನೀರು
ಸ್ಪೂರ್ತಿಯಿಲ್ಲದ ಬಾಳು
ಜೊತೆಗೆ ಕೊನೆಯಿಲ್ಲದ ನೀರು ||

ದಾರಿಯೊಳು ಸಿಗುವ `ಕಳಚೆ'
ಹೊಳಪ ಕಳಚಿತ್ತು |
ಪಕ್ಕದ ಕೊಡಸಳ್ಳಿಯೋ
ಎಲ್ಲರ ಪಾಲಿಗೆ ಆಗಿತ್ತೊಂದು
ಬೆಂಕಿಯ ಕೊಳ್ಳಿ ||

ಊರ ವಾಸಂತಿಕೆರೆ ಒಬ್ಬಂಟಿಯಾಗಿತ್ತು,
ಉಕ್ಕೇರಿದ ಕಾಳಿಯಲೆ ಊರ ನುಂಗಿತ್ತು |
ನನ್ನನ್ನುಳಿಸಲು ವೈದ್ಯರಿದ್ದರು
ಈ ಊರುಳಿಸಲು ವೈದ್ಯರಿಲ್ಲ
ಜೊತೆಗೆ ಯಾರೂ ಇಲ್ಲ ||

ಪಕ್ಕದ ಸಾತೋಡ್ಡಿ ಎಂದೋ ಓಡಿಹೋಯ್ತು
ಭಾಗಿನಕಟ್ಟಾಕ್ಕೆ ಭಾಗಿನಕೊಟ್ಟಾಯ್ತು |
ಯಾರದೋ ದಾಹಕ್ಕೆ, ಆಸೆ, ಆಮಿಷಕ್ಕೆ
ಮುಗ್ಧ ಮನಸ್ಸುಗಳು ಬಲಿಯಾಯ್ತು ||

ಹಸಿರು ಸ್ವರ್ಗ ದೇವಕಾರ
ದೇವರ ಪಾದ ಸೇರಿತ್ತು
ಹಸಿರು ಶಿವಪುರ ನರಕವಾಗಿತ್ತು..
ದೂರದ ಕೈಗಾ ಮತ್ತೆ ಮತ್ತೆ ಕಾಡಿತ್ತು ||

ಇಂದು ನನ್ನೆದುರು ನಿಂತಿದ್ದು
ಹಳೆ ನೆನಹುಗಳ ಬಿಂಬ
ಸಿಗದ ಕಾಲ, ಕಳೆದ ಕ್ಷಣ
ಎಲ್ಲವೂ ನೀರಿನಡಿ. ನಿರ್ನಾಮ.
ಮತ್ತೆ ಹುಡುಕಿದರೆ ಎದುರು ಬರೀ ನೀರು ||

ಎಂಟು ವಸಂತಗಳಾಚೆ
ಲೋಕವೇ ಬದಲು |
ನಲಿವಿದ್ದ ಜಾಗದಲಿ
ತುಂಬಿದೆಯೋ ನೋವು |
ಭುವಿಯಿದ್ದ ಜಾಗದಲ್ಲಿ ಪೂರ್ತಿ
ಕರಿಕಾಳಿ ನೀರು |
ಜನರಿಲ್ಲ, ಜೀವ ಕುರುಹಿಲ್ಲ
ಮಸಣವಾಗಿದೆ ಬದುಕು ||

ಅಂತೂ ಆಗಿದೆ ಮುಳುಗಡೆ
ಭುವಿಗೂ, ಭಾವನೆಗಳಿಗೂ
ಕಳೆದುಹೋಗಿದೆಯೆಲ್ಲವೂ
ನೀರಿನಡಿ, ನೆನಪು
ಮರಳುವುದಿಲ್ಲ ಬಾಳ್ವೆ
ಮರುಗುವುದೊಂದೆ, ಜೊತೆಗೆ ಮೆಲುಕು ||

( ನನ್ನ ಅಜ್ಜನಮನೆಯಾದ ಯಲ್ಲಾಪುರ ತಾಲೂಕಿನ ಬರಬಳ್ಳಿ, ಅದು ಕಾಳಿ ನದಿಗೆ ಕಟ್ಟಲಾದ ಕೊಡಸಳ್ಳಿ ಅಣೆಕಟ್ಟಿನಲ್ಲಿ ಮುಳುಗಿ ಹೋಗಿ ಎಂಟು ವರ್ಷಗಳ ನಂತರ ನೋಡಿ ನೋವಿನೊಂದಿಗೆ ಬರೆದಿದ್ದು. ಆಗ ನನ್ನ ಮನಸ್ಸಿಗಾದ ಅನುಭವ. ನಿಮ್ಮ ಮುಂದೆ. ಕಳೆದ ಬಾಲ್ಯ, ಬಾಲ್ಯದ ಹುಡುಗಾಟ, ಒದ್ದಾಟ, ಬರಬಳ್ಳಿಯೆಂಬ ಜಗತ್ತು ಈಗಲೂ ಕಾಡುತ್ತಿದೆ. )
(ನಾನು, ಗಿರೀಶ್ ಕಲ್ಲಾರೆ, ಗುರುಪ್ರಸಾದ್, ಪ್ರಶಾಂತ ಭಟ್, ಅರುಣ ಭಟ್, ಯೋಗೀಶ್, ಶಶಿಧರ, ಗಣಪಣ್ಣ ಇತ್ಯಾದಿಗಳಿಗೆಲ್ಲ ಬರಬಳ್ಳಿಯೇ ಲೋಕವಾಗಿದ್ದ ಒಂದು ಕಾಲವಿತ್ತು. ನಾನು, ಗಿರೀಶ, ಗುರು ಇವರೆಲ್ಲ ರಜಾ ಸಿಕ್ಕಾಗ ಬರಬಳ್ಳಿಗೆ ಓಡಿಬರುತ್ತಿದ್ದೆವು. ಬೇಸಿಗೆ ರಜಾ ಬರಬಳ್ಳಿಯ ಉರಿಬಿಸಿಲು ಕಾಡುತ್ತಿತ್ತಾದರೂ ಬಹಳ ಇಷ್ಟವಾಗುತ್ತಿತ್ತು. ಈಜು ಕಲಿತ ವಾಸಂತಿಕೆರೆ, ರಕ್ತದ ಬೆಲೆ ತಿಳಿಸಿದ ಉದ್ದಬ್ಬಿಯ ಉಂಬಳಗಳು, ತಾಕತ್ತಿದ್ದರೆ ಒಂದೇ ಗುಟುಕಿಗೆ ಕುಡಿ ನೋಡೋಣ ಎಂದು ಸವಾಲು ಹಾಕುವಂತಿದ್ದ ಕಳಚೆಯ ಶೀಯಾಳಗಳು, ಸಕ್ಕರೆ, ಜೇನುತುಪ್ಪಕ್ಕಿಂತ ಸಿಹಿಯಾಗಿದ್ದ ಅಜ್ಜನಮನೆಯ ದೊಡ್ಡ ಮಾವಿನ ಹಣ್ಣುಗಳು, ಆರಿಸಿ ಆರಿಸಿ ತಿನ್ನುತ್ತಿದ್ದ ಗಿಳಿ ತಿಂದ ಪೇರಲೆಗಳು, ಬರಬಳ್ಳಿ ದೇವಸ್ತಾನದ ಬಳಿಯಲ್ಲಿದ್ದ ಗೃಂಥಾಲಯದಿಂದ ತಂದು ಓದಿದ್ದ ರಕ್ತರಾತ್ರಿ, ಕಂಬನಿಯ ಕುಯಿಲು, ಬರಬಳ್ಳಿಯ ಬಲಮುರಿ ಗಣಪನ ಕುರಿತಿದ್ದ ನಂಬಿಕೆ-ಮೂಢ ನಂಬಿಕೆಗಳು......ಇವೆಲ್ಲ ಬರಬಳ್ಳಿಯ ಕುರಿತಾದ ಒಂದು ನೆನಪಿನ ಹಂದರಗಳು..
ಅದೇ ರೀತಿ ಕೊಡಸಳ್ಳಿ ಡ್ಯಾಮಿಗಾಗಿ ನಡೆದ ಮರಗಳ ಮಾರಣಹೋಮ, ಮುಳುಗಿದ ಭೂಮಿ, ಅದೇ ಸಮಯದಲ್ಲಿ ನಾನು ಅಲ್ಲಿ ಮಂತ್ರ ಕಲಿಯುತ್ತಿದ್ದೆ. ದಣೀ ಉಪನಯನವಾಗಿತ್ತು. ಭಾವ ಗಣಪಣ್ಣ ಹುಳಸೇಬರಲಿನೊಂದಿಗೆ ಗಣಪತಿ ಉಪನಿಷತ್ತು, ಮುಂತಾದವುಗಳನ್ನು ಕಲಿಸುತ್ತಿದ್ದರೆ ಪಕ್ಕದ ಜಮೀನಿನಲ್ಲಿ ದೊಡ್ಡ ಮರಗಳನ್ನು ಕಡಿದುರುಳಿಸಿದ ಸದ್ದು ಎದೆಯನ್ನು ಝಲ್ಲೆನ್ನಿಸುತ್ತಿದ್ದವು.. ದೈತ್ಯ ಮರದ ದಿಮ್ಮಿಗಳನ್ನು ಎಳೆಯಲಾರದೇ ಘೀಳಿಡುತ್ತಿದ್ದ ಆನೆಗಳು.. ಬಾರುಕೋಲಿನ ಹೊಡೆತಕ್ಕೆ ಯಮಗಾತ್ರದ ಕೋಣಗಳು ಬೆದರುವ ಬಗೆಯೆಲ್ಲ ಮನದಲ್ಲಿ ಏನೇನೋ ಭಾವನೆಗಳನ್ನು ಮೂಡಿಸಿ ಕಣ್ಣೀರುಗರೆಯುತ್ತಿದ್ದವು.. ನಾನು ಮಂತ್ರ ಕಲಿತು ಅಲ್ಲಿಂದ ಹೊರಟು ಬಂದ ವಾರಕ್ಕೆಲ್ಲ ಸುದ್ದಿ ಬಂದಿತ್ತು ನೋಡಿ ಡ್ಯಾಂ ಬಾಗಿಲು ಹಾಕಿದರು ಬರಬಳ್ಳಿ ಮುಳುಗಿತು ಅಂತ.. ಕರುಳು ಕಲಸಿ ಬಂದಿತ್ತು.. ಅಂತಹ ಭಾವನಾತ್ಮಕ ಊರನ್ನು ಅದು ಮುಳುಗಿದ 8 ವರ್ಷಗಳ ನಂತರ ನೋಡಿ ಬಂದೆ.. ಆಗ ಆದ ಅನುಭವಕ್ಕೆ ಶಬ್ದಗಳು ಸಾಲುವುದಿಲ್ಲ..ಭಾವನೆಗಳು ಬಾಳುವುದಿಲ್ಲ.. )
(15-10-2006, ದಂಟಕಲ್ಲಿನಲ್ಲಿ)
 

Monday, October 21, 2013

ಮಾರಿಕಾಂಬೆಯ ತಂಗಿ...

ಹಳ್ಳಿಗಾಡಿನಲ್ಲಿ ಹುಡುಕಿದರೆ ನೂರಾಉ ದೇವರು-ದಿಂಡರು ಸಿಗಬಲ್ಲವು. ವಿಶಿಷ್ಟ-ವಿಚಿತ್ರ  ಆಚರಣೆಯ ದೇವಳಗಳಿರುತ್ತವೆ...ಹಲವರು ನಡೆದುಕೊಂಡು ಹರಕೆ ಹೊತ್ತುಕೊಂಡು ದೇವರನ್ನು ಸಾಕಷ್ಟು ಶಕ್ತಿವಂತರನ್ನಾಗಿ ಮಾಡುತ್ತಾರೆ..
ಇಂತಹ ಒಂದು ಶಕ್ತಿ ದೇವತೆ, 
ಕುಚಗುಂಡಿಯ ಅಮ್ಮನೋರು..

ಸರತಿಯಲ್ಲಿ ಶಿರಸಿ ಮಾರಿಕಾಂಬೆಗೆ ತಂಗಿಯಾಗಬೇಕಂತೆ...
ಸಾಗರದ ಮಾರಮ್ಮ, ಹುಕ್ಕಳಿ ಅಮ್ಮನೋರುಗಳು ಈಕೆಯ ಸೋದರಿಯರೇ ಹೌದೆಂದು ಹೇಳಲಾಗುತ್ತದೆ.

ವರುಷಕ್ಕೊಮ್ಮೆ ಸುತ್ಪತಮುತ್ತಲ ಊರುಗಳಿಗೆ ಪಲ್ಲಕ್ಕಿಯಲ್ಲಿ ಬಂದು ಹೋಗುತ್ತಾಳೆ...
ಹಿತ್ತಲಕೈ, ಯಲೂಗಾರು, ಬೇಣದ ಮನೆ, ಸಂಕದ ಮನೆ, ಇವುಗಳೆಲ್ಲ ಅಮ್ಮನೋರು ಸಾಗುವ ಮಾರ್ಗಗಳಾಗಿದ್ದವಂತೆ.. ಮುಂಚೆ ನಮ್ಮೂರಿಗೂ ಬರುತ್ತಿದ್ದಳಂತೆ... ಈಗ ಬರುತ್ತಿಲ್ಲ.. ಆದರೂ ಸುತ್ತ ಮುತ್ತಲ ಹೆಗಡೆಮನೆ, ಹಿತ್ತಲಕೈಗೆ ಹೋಗಿ ಬರುತ್ತಾಳೆ...

ಅಂದ ಹಾಗೆ ಹಿತ್ತಲಕೈ ಈ ಅಮ್ಮನೋರ ತವರು ಮನೆ ಎಂಬ ಮಾತಿದೆ.
ವರುಷಕ್ಕೊಂದು ಕಾರ್ತೀಕ...
ದೊಡ್ಡಹಬ್ಬದಲ್ಲಿ ವಾರು, ಸೀರೆ ಪಡೆವ ಹಬ್ಬ, ಸಂಪ್ರದಾಯಗಳಿವೆ...
ಆಗೊಮ್ಮೆ ಈಗೊಮ್ಮೆ ಭಾಗಿನ ಪಡೆಯುತ್ತಾಳೆ...


ಸಿದ್ದಾಪುರ ತಾಲೂಕಿನ ಕೋಡ್ಸರ/ಯಲುಗಾರು ಸೀಮೆಯ ಕುಚಗುಂಡಿಯ ಕೆರಿಯ ನ ಮನೆಯ ಆವರಣದಲ್ಲಿ ಈ ಅಮ್ಮ ನೆಲೆಸಿದ್ದಾಳೆ...
ಚಿಕ್ಕ ಪುಟ್ಟ ಉಪದ್ರವಗಳ ಹಿಂದೆ ಅಮ್ಮನ ಕೈ ಇದೆ.
ಅದಕ್ಕೆ ಪ್ರತಿಯಾಗಿ ಚಿಕ್ಕಪುಟ್ಟ ಹರಕೆಗಳನ್ನು ಲಂಚದ ರೂಪದಲ್ಲಿ ಕೊಟ್ಟರೆ ಅಮ್ಮ ಫುಲ್ ಖುಷ್..
ಚಿಕ್ಕಮಕ್ಕಳ ಬಾಲಗ್ರಹ, ಸಿಡುಬು, ಕಜ್ಜಿ, ಅಲರ್ಜಿ, ಹಲ್ಲು ಹುಟ್ಟದಿದ್ದರೆ ಹೀಗೆ ಅನೇಕ ಸಮಸ್ಯೆಗಳಿಗೆ ಅಮ್ಮನ ಬಳಿ ಹೇಳಿಕೊಂಡರೆ ಪರಿಹಾರ ಲಭ್ಯ...

ಕೆರಿಯ ಅಥವಾ ಕೆರಿಯನ ಮನೆಯವರು, ಆತನ ಅಣ್ಣ ಚೌಡ ಈ ಮುಂತಾದವರೇ ಅಮ್ಮನನ್ನು ಪೂಜಿಸಬೇಕೆಂಬ ಹಿಂದಿನಕಾಲದಿಂದ ಬಂದ ನಿಯಮಗಳಿವೆ...
ಕೋಳಿ ಕಡಿಯಲಾಗುತ್ತದೆಯಾದರೂ ಅಪರೂಪಕ್ಕೆ ಮಾತ್ರ... ಅಂದರೆ ಕೆರಿಯನ ಮನೆಗೆ ನೆಂಟರು ಬಂದರೆ ಕೋಳಿ ಕಡಿಯಲಾಗುತ್ತದೆ... ಅಥವಾ ಅಮ್ಮನ ಹಬ್ಬದ ಸಂದರ್ಭದಲ್ಲಿ ಕೋಳಿ ಕಡಿದರೆ ಕೆರಿಯನ ಮನೆಗೆ ನೆಂಟರು ಬಂದಿರುತ್ತಾರೆ/ಬಂದೇ ಬರುತ್ತಾರೆ.
ಊರಿನ ತುದಿಯಲ್ಲಿ ಕಲ್ಯಾಣೇಶ್ವರನಿದ್ದಾನೆ.. ಶಕ್ತಿಯಲ್ಲಿ ಆತನ ಸಮನಲ್ಲವಾದರೂ ಅಮ್ಮನಿಗೆ ತನ್ನದೇ ಆದ ಭಕ್ತಗಣಗಳಿದ್ದಾರೆ..
ಪ್ರೀತಿಯಿಂದ ನಡೆದುಕೊಳ್ಳುವವರೂ ಇದ್ದಾರೆ...

ಈ ಅಮ್ಮನೋರನ್ನು ನೋಡಲು ಬರುವವರು ಶಿರಸಿಯಿಂದ ಬಾಳೇಸರ ಬಸ್ಸಿಗೆ ಬಂದು ಕೋಡ್ಸರದಲ್ಲಿ ಇಳಿದು ಸನಿಹದ ರಸ್ತೆಯಲ್ಲಿ ಕುಚಗುಂಡಿಯತ್ತ ಬರಬಹುದು. ಇಲ್ಲವಾದರೆ ಶಿರಸಿಯಿಂದ ಅಡ್ಕಳ್ಳಿ ರಸ್ತೆಯ ಮೂಲಕ ದಂಟಕಲ್ ಹಾದು ಕುಚಗುಂಡಿಗೆ ಬರಬಹುದು. ಕುಚಗುಂಡಿಯಲ್ಲಿ ಕೆರಿಯಾನ ಮನೆಯನ್ನು ಕೇಳಿದರೆ ಮಾಹಿತಿ ನೀಡುತ್ತಾರೆ.  ಒಮ್ಮೆ ನೋಡಿ ಹೋಗಬಹುದಾದಂತಹ ತಾಣ..

ಕುಚಗುಂಡಿಯಲ್ಲೊಂದು ಚಿಕ್ಕದಾದ ಚೊಕ್ಕದಾದ ಕಲ್ಯಾಣೇಶ್ವರ ಜಲಪಾತವಿದೆ. ಪಿಕ್ ನಿಕ್ ಸ್ಥಳ.. ವಾರಾಂತ್ಯಕ್ಕೆ ಮುದ ನೀಡಬಹುದು..
ಹಾಗಾದರೆ ಯಾಕೆ ತಡ..?

ಕುಚಗುಂಡಿ ಅಮ್ಮ....
ಕಾಪಾಡಮ್ಮಾ....

ಹೀಗೆನ್ನುತ್ತಾ ಒಮ್ಮೆ ಬಂದು ಹೋಗಿ...