Sunday, October 6, 2013

ಪ್ರೇಮಪತ್ರ -6 ಪ್ರೀತಿಯ ಓಲೆ

ಪ್ರೀತಿಯ ಗೆಳೆಯಾ..,
    ಅದೆಷ್ಟು ಬಗೆಯಿಂದ ಬೇರೆ ಬೇರೆ ಚಿಂತನೆಗಳ ಕಡೆಗೆ ನನ್ನನ್ನು ನಾನು ತೊಡಗಿಸಿಕೊಂಡರೂ ನಿನ್ನ ನೆನಪೇ ನನ್ನತ್ತ ಸುಳಿದುಬರುತ್ತಿದೆ. ಏನೇ ಮಾಡಿದರೂ ನನ್ನ ಕಣ್ಣೆದುರು ನೀನೇ ಸುಳಿದು ಬರುತ್ತೀಯಾ.., ನೆನಪಾಗ್ತೀಯಾ.. ಪದೇ ಪದೆ ಕಾಡ್ತೀಯಾ.. ಯಾಕೋ ಗೊತ್ತಿಲ್ಲ ಗೆಳೆಯಾ, ನಿನ್ನ ಮಡಿಲ ಮೇಲೆ ನನ್ನ ತಲೆಯನ್ನಿಟ್ಟು ನಲಿಯಬೇಕೆಂಬ ಆಸೆ ಮನದೊಳಗೆ ತುಂಬಿಕೊಂಡಿದೆ.. ಹಾಗೇ ಸುಮ್ಮನೆ ಕನ್ಣು ಮುಚ್ಚಿಕೊಂಡು ಯಾವುದೋ ಭಾವಗೀತೆಯನ್ನು ಗುನುಗಬೇಕು ಎನ್ನಿಸುತ್ತಿದೆ..
    ಬಹುದಿನಗಳಾಯ್ತಲ್ಲೋ ಗೆಳೆಯಾ.., ಕಾಲೇಜಿನಲ್ಲಿ ನಿನ್ನ ಮುಖ ಕಂಡು.. ಎಲ್ಲಿಗೆ ಹೋಗಿಬಿಟ್ಯೋ?? ಪ್ರತಿದಿನ ನಿನ್ನದೇ ನೆನಪು ನೆರಳಿನಲ್ಲಿ, ಕನಸು-ಕನವರಿಕೆಯಲ್ಲಿ ಕಾಲೇಜಿಗೆ ಎಡತಾಕುತ್ತಿದ್ದೇನೆ.. ಅಲ್ಲಿ ನಿನ್ನ ಬಿಂಬವನ್ನು ಕಾಣದೇ ಮುದುಡುತ್ತಿದ್ದೇನೆ..? ಯಾಕೋ ಶಂಕೆ ಮನದಲಿ.. ಕಾಣದ ಭೀತಿ ಎದೆಯಲ್ಲಿ ಎನ್ನುವಂತಾಗಿದೆ..
    ನಾನು ಪ್ರೀತಿಗೆ ಬಿದ್ದು ಅದೆಷ್ಟು ದಿನ ಸಂದಿತೋ.., ಅಂದಿನಿಂದ ಯಾಕೋ ನಿನ್ನ ಒಡನಾಟ ತಪ್ಪಿಯೇ ಹೋಗಿದೆ ಕಣೋ.. ನೀನು ಯಾವಾಗ ನನ್ನ ಕಣ್ಣೆದುರು ಕಾಣುತ್ತಿದ್ದೆಯೋ ಆಗೆಲ್ಲಾ ನಾನು ಹೂವಿನಂತಾಗುತ್ತಿದ್ದೆ ಮತ್ತೆ ಮತ್ತೆ ಅರಳುತ್ತಿದ್ದೆ ನಿನ್ನೆಡೆಗೆ ಹೊರಳುತ್ತಿದ್ದೆ. ಮುಖ ಕಂಡರೆ ಸಾಕಿತ್ತು ಸೋರ್ಯನತ್ತ ತಿರುಗುವ ಸೂರ್ಯಕಾಂತಿಯಂತೆ ಗೆಲುವಾಗುತ್ತಿದ್ದೆ.. ಚುಕ್ಕಿಯ ಜಿಂಕೆಮರಿಯಾಗುತ್ತಿದ್ದೆ.. ಹೊಟ್ಟೆತುಂಬಾ ಹಾಲುಕುಡಿದು ಧುತ್ತನೆ ಎದ್ದೋಡಿ ಬಿದ್ದೋಡಿ ಸೆಳೆಯುವಂತಹ `ಪುಟ್ಟಿಕರು'ವಾಗುತ್ತಿದ್ದೆ..
    ಅದೇನಾಯ್ತು ನಿಂಗೆ..? ಕಾಲೇಜಿನಲ್ಲಿ ನಿನ್ನ ಸುಳಿವಿಲ್ಲ. ಪ್ರತಿದಿನ ನೀನು ಹಾಯ್ದು ಬರುತ್ತಿದ್ದ ಜಾಗಗಳತ್ತ ಕಣ್ಣು ಹಾಯಿಸಿದರೆ ಅಲ್ಲೆಲ್ಲ ನೀನಿಲ್ಲ..? ನೀನೆಲ್ಲಿ.? ಯಾಕೋ ಏನೊಂದೂ ಗೊತ್ತಾಗುತ್ತಿಲ್ಲ.. ಮನಸ್ಸಿನಲ್ಲಿ ನೂರೊಂದು ಪ್ರಶ್ನೆಗಳ ಸುಳಿ.. ಅದ್ಯಾವ ಕೇಡು ಬಂದು ಕಾಡಿತು..? ನಿನ್ನ ಇರವೇ ಇಲ್ಲವಲ್ಲ..
    ಗೆಳೆಯಾ..
    ನೀನು ಇರದಿರುವ ಈ ಕ್ಷಣವನ್ನು ನಾನು ಬಹಳ ಬೇಸರದಿಂದ ಅನುಭವಿಸುತ್ತಿದ್ದೇನೆ.. ನನಗ್ಯಾಕೋ ಒಂದು ಕ್ಷಣವನ್ನೂ ಕಳೆಯಲಾಗುತ್ತಿಲ್ಲ.. ನೀನಿಲ್ಲದ ಒಂದು ಘಳಿಗೆಯೂ ನನಗೆ ವರುಷದಂತೆ ಕಾಣುತ್ತಿದೆ. ನಿನ್ನ ಕಡೆಗೆ ಕನಸನ್ನು ಕಂಡು ಕಂಡು ನಲಿಯುತ್ತಿದ್ದ ನಾನು ಇಂದೇಕೋ ಕಮರುತ್ತಿದ್ದೇನೆ..
    ನೀನಿಲ್ಲದ ಲೈಬ್ರರಿ ಎದುರಿನ ಕಟ್ಟೆ ಖಾಲಿ ಖಾಲಿಯಾಗಿ ಕುಂತಿದೆ. ಕಾಲೇಜಿನ ಪ್ರತಿ ಕೋಣೆಯಲ್ಲಿಯೂ ನಿನಗಾಗಿ ಇಣುಕು ಹಾಕಿದರೆ ಮೂಲೆಯಲ್ಲಿರುವ ಸಿಸಿ ಟಿವಿಗಳು ನನ್ನನ್ನು ಅಣಕಿಸುತ್ತಿವೆ.. ಆ ಭಟ್ಟರ ಕ್ಯಾಂಟೀನಿನ ಹೊಸ ಸಪ್ಲೈಯರ್ ಹುಡುಗ ವಿಸ್ಮಿತನಾಗಿ ನನ್ನನ್ನು ನೋಡುತ್ತಿದ್ದಾನೆ. ಕಾಲೇಜು ಎದುರಿಗಿನ ಹಸಿರು ವೃಕ್ಷ ಸಮೂಹವಂತೂ ಸುಳಿದು ತರುವ ಗಾಳಿ ನೀನಿಲ್ಲ ನೀನಿಲ್ಲ ಎಂದಂತೆ ಅನ್ನಿಸುತ್ತಿದೆ.. ಯಾಕೋ ಇವೆಲ್ಲದರಲ್ಲಿಯೂ ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ..
    ಹೇಳದೇ ಕಾರಣ ಹೋದೆಯಾ ನೀ ದೂರ..?
    ನಿನ್ನ ಜೊತೆಗಿನ ಆ ದೋಸ್ತರ ಸಮೂಹ ಕಾಣುತ್ತಿದೆ.. ಆ ಗುಂಪಿನ ನಡುವೆ ನೀನಿಲ್ಲ.. ನೀನೆಲ್ಲಿ ಎಂದು ಅವರ ಬಳಿ ಕೇಳಲು ನಗೆ ಮುಜುಗರ, ನಾಚಿಕೆ.. ಅವ್ಯಕ್ತ ಭಯ.. ನಮ್ಮ ನಡುವೆ ಆಗಾಗ ಕಂಡು ಸೆಳೆಯುತ್ತಿದ್ದ ನೀನು ಇಲ್ಲದ ಈ ಸಂದರ್ಭ ಯಾಕೋ ನನ್ನನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ...
    ನಿನ್ನ ಮನೆಯ ಪರಿಸ್ಥಿತಿ ನನಗೆ ಅಸ್ಪಷ್ಟವಾಗಿ ಗೊತ್ತಿದೆ. ನಿಮ್ಮೂರಿನ ಆ ನಿನ್ನ ಪರಿಷಯದ ಹುಡುಗಿ ಯಾವಾಗಲೋ ಮಾತಿನ ಮಧ್ಯ ಹೇಳಿದಂತಹ ನೆನಪು.. ಸಮಸ್ಯೆಗಳ ಸುಳಿಯಲ್ಲಿ ಕೊಚ್ಚಿಹೋದೆಯಾ ಗೆಳೆಯಾ.? ಸಮಸ್ಯೆ ಕಾಡಿ ಕಾಡಿ ಕಾಲೇಜನ್ನೇ ಬಿಟ್ಟೆಯಾ...? ಅಥವಾ ಊರನ್ನೇ ಬಿಟ್ಟೆಯಾ..? ಮತ್ತೀನ್ನೇನಾದರೂ ಮಾಡಿಕೊಂಡೆಯಾ..? ದೇವರೆ ಹಾಗಾಗದಿರಲಿ..
    ನೀನು ಇಲ್ಲದ ಈ ಕಾಲವನ್ನು ನನ್ನ ಬಳಿ ಸಹಿಸಿಕೊಳ್ಳಲಾಗುತ್ತಿಲ್ಲ.. ಹಾಳಾದ್ದು ನಿನ್ನ ಬಳಿ ಮೊಬೈಲ್ ಇದೆಯೋ ಇಲ್ಲವೋ ಎನ್ನುವುದೂ ನನಗೆ ಗೊತ್ತಿಲ್ಲ ನೋಡು.. ಮೋಸ್ಟ್ ಲಿ ಇಲ್ಲ ಅನ್ಸುತ್ತೆ ಬಿಡು.. ಬಿಡು ಅದಕ್ಕೆ ಈ ರೀತಿ ಪತ್ರ ಬರೆಯುತ್ತಿದ್ದೇನೆ.. ನಿನಗೆ ತಲುಪುತ್ತದೆಯೋ ಇಲ್ಲವೋ ಗೊತ್ತಿಲ್ಲ.. ಆದರೆ ಬರೆದು ನನ್ನಲ್ಲಿಯಂತೂ ಇಟ್ಟುಕೊಳ್ಳುತ್ತಿದ್ದೇನೆ..
    ಐ ಮಿಸ್ ಯೂ ಗೆಳೆಯಾ.. ಎಲ್ಲಿದ್ದರೂ ಬೇಗ ಬಾ ಪ್ಲೀಸ್..

ಇಂತಿ ನಿನ್ನ
ಪ್ರೀತಿ

Thursday, October 3, 2013

ನನ್ನ ಕವನ


ನನ್ನ ಕವನ ತೊದಲು ನುಡಿ
ಬಿರಿದು ಹೊರಗೆ ಬಂದಿದೆ
ಈ ನಲಿವ ಜಗದ ಚೆಲುವ
ಕಂಡು ಬಾಯಿ ಬಿಟ್ಟಿದೆ..!!


ಕೌತುಕ ಭಯ ಭೀತಿಗಳೆಡೆ
ನನ್ನ ಕವನ ಸಿಲುಕಿದೆ
ಹಲ ಕೆಲವು ಪ್ರೀತಿ ನುಡಿಯ
ಕೇಳ ಬಯಸಿ ಕಾದಿದೆ ||

ಗಾನ ನೃತ್ಯ ನಟನೆಗಳನು
ನನ್ನ ಕವನ ಬಯಸಿದೆ
ನೂರಾರು ಕನಸುಗಳ
ಬಯಸಿ ಬೆನ್ನು ಹತ್ತಿದೆ
||

ನೂರಾರು ರಸ ನಿಮಿಷವ
ಕವನ ಬಳಸಿಕೊಂಡಿದೆ
ನನ್ನ ಎದೆಯ ಆಳದಿಂದ
ಕೊನರಿ ಹೊರಗೆ ಬಂದಿದೆ ||

(ಬರೆದಿದ್ದು ದಂಟಕಲ್ಲಿನಲ್ಲಿ, 25-09-2005ರಂದು, 
ಈ ಕವಿತೆಯನ್ನು ಪ್ರಕಟಿಸಿದ ಲೋಕಧ್ವನಿ ಪತ್ರಿಕೆಯ ಬಳಗಕ್ಕೆ ಧನ್ಯವಾದಗಳು)

Sunday, September 29, 2013

ಗುಡ್ಡೇತೋಟದ ಕೋಟೆ ವಿನಾಯಕ

ಗುಡ್ಡೇತೋಟದ ಕೋಟೆ ವಿನಾಯಕ ದೇವಸ್ಥಾನ ಸಿದ್ದಾಪುರ ತಾಲೂಕಿನ ಹೆಸರಾಂತ ಕ್ಷೇತ್ರಗಳಲ್ಲೊಂದು. ಇಡಗುಂಜಿಯ ಗಣಪನಷ್ಟೇ ಶಕ್ತಿಯನ್ನು ಹೊಂದಿರುವ ಈ ದೇವಸ್ಥಾನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ.
    ಸಿದ್ದಾಪುರ ತಾಲೂಕಿನ ಹಸರಗೋಡ ಗ್ರಾ.ಪಂ ವ್ಯಾಪ್ತಿಯ ಗುಡ್ಡೇತೋಟದಲ್ಲಿರುವ ಕೋಟೆ ವಿನಾಯಕನ ದೇವಸ್ಥಾನ ಇತಿಹಾಸ ಪ್ರಸಿದ್ಧವಾದುದು. ಬೇಡಿದ್ದನ್ನು ಕೊಡುವ ಗಣಪನ ಸನ್ನಿಧಿ ಭಕ್ತರ ಮನದ ಇಚ್ಛೆಯನ್ನು ಪೂರೈಸುತ್ತದೆ. ಶ್ರೀಕ್ಷೇತ್ರ ಇಡಗುಂಜಿಗೆ ಹೋಗಲು ಸಾಧ್ಯವಾಗದಿದ್ದವರು ಗುಡ್ಡೇತೋಟದ ಗಣಪನ ದರ್ಶನ ಮಾಡಿ ಬಂದರೆ ಧನ್ಯರಾಗುತ್ತಾರೆ ಎನ್ನುವ ನಂಬಿಕೆಗಳೂ ಇವೆ.
    ಸಹ್ಯಾದ್ರಿಯ ದಡ್ಡ ಕಾಡಿನ ಮಧ್ಯದಲ್ಲಿರುವ ಸುಂದರ ದೇವಾಲಯ ಗುಡ್ಡೇತೋಟ. ಪುಟ್ಟ ಊರು. ಹೆಸರಿಗೆ ತಕ್ಕಂತೆ ಗುಡ್ಡದ ಮೇಲೆ ದೇವಸ್ಥಾನವಿದೆ. ದೇವಸ್ಥಾನವನ್ನು ತಲುಪುವಾಗ ಬಹುದೊಡ್ಡ ಗುಡ್ಡವನ್ನು ಹತ್ತಿಳಿಯಬೇಕು. ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಂತಹ ದಡ್ಡ ಕಾಡಿನ ಪ್ರದೇಶದಲ್ಲಿರುವ ದೇವಸ್ಥಾನ ನಿಸರ್ಗ ಸೌಂದರ್ಯದಲ್ಲೂ ಸಮೃದ್ಧವಾಗಿದೆ. ಶ್ರದ್ಧಾ ಭಕ್ತಿಯ ತಾಣವಾಗಿರುವ ಗುಡ್ಡೇತೋಟದಲ್ಲಿ ಹರಕೆಯನ್ನು ಹೊತ್ತುಕೊಂಡರೆ ಬಹುಬೇಗನೇ ಈಡೇರುತ್ತವೆ. ಹರಕೆಯ ರೂಪದಲ್ಲಿ ಗಂಟೆಯನ್ನು ಅರ್ಪಣೆ ಮಾಡಬೇಕು. ಆಗ ಗಣಪ ಬೇಡಿದ್ದನ್ನು, ಇಷ್ಠಾರ್ಥಗಳನ್ನು ಪೂರೈಸುತ್ತಾನೆ ಎನ್ನುವ ಭಾವನೆ ದೇವಸ್ಥಾನಕ್ಕೆ ನಡೆದುಕೊಳ್ಳುವ ಭಕ್ತಸಮೂಹದ್ದಾಗಿದೆ.
    ಸಾವಿರಾರು ವರ್ಷ ಪ್ರಾಚೀನವಾದ ದೇಗುಲದಲ್ಲಿ ಚಿಕ್ಕದಾದ ಆಕರ್ಷಕ ಮೂರ್ತಿ, ಸುಂದರ ಪಾಣಿಪೀಠ ಗುಡ್ಡೇತೋಟದ ಗಣಪನ ವಿಶೇಷತೆಯಾಗಿದೆ. ದೇವಸ್ಥಾನದ ಎದುರು ಭಾಗದಲ್ಲಿರುವ ಬಸವನ ಮೂರ್ತಿ ಆಗಮಿಸುವ ಭಕ್ತರ ಮನಸ್ಸಿನಲ್ಲಿ ವಿಸ್ಮಯವನ್ನು ಮೂಡಿಸುತ್ತದೆ. ಈಶ್ವರನ ದೇವಸ್ಥಾನದಲ್ಲಿ ಶಿವಲಿಂಗವನ್ನು ನೋಡುತ್ತಿರುವ ಬಸವನ ಮೂರ್ತಿ ಎಲ್ಲ ಕಡೆ ಕಾಣಸಿಕ್ಕರೆ ಗುಡ್ಡೇತೋಟದಲ್ಲಿ ಗಣಪನನ್ನು ಬಸವ ನೋಡುತ್ತಿದೆ. ಈ ಬಸವ ಬಾಳೂರಿನ ಗೌಡನ ಸೂಚಕ ಎಂದು ಹೇಳಲಾಗುತ್ತದೆ. ಸಿದ್ದಾಪುರ ತಾಲೂಕಿನ ಹೂವಿನಮನೆಯ ಕೋಟೆಗುಡ್ಡೆ ಎಂಬಲ್ಲಿದ್ದ ಈ ದೇವಸ್ಥಾನವನ್ನು ಸೋದೆಯ ಅರಸರ ಪಾಳೆಯಗಾರರಾಗಿದ್ದ ಬಾಳೂರ ಗೌಡರು ಗುಡ್ಡೇತೋಟದಲ್ಲಿ ನಿರ್ಮಿಸಿದರು ಎಂಬ ಪ್ರತೀತಿಯಿದೆ.
    ಚುನಾವಣಾ ಗಣಪ ಎಂಬ ಹೆಸರಿನಿಂದಲೂ ಖ್ಯಾತಿಯಾಗಿರುವ ಈ ದೇವ ಸನ್ನಿಧಿಗೆ ಪೂಜೆ ಸಲ್ಲಿಸಿದವರಿಗೆ ಚುನಾವಣೆಯಲ್ಲಿ ಟಿಕೆಟ್ ಲಭಿಸುತ್ತದೆ ಎನ್ನುವ ಮಾತುಗಳಿವೆ. ಪೂಜೆ ಸಲ್ಲಿಸಿದವರು ಚುನಾವಣೆಯಲ್ಲಿ ಗೆಲುವನ್ನೂ ಕಂಡಿದ್ದಾರೆ. ದೇವಸ್ಥಾನದಲ್ಲಿ ಕಾರ್ತೀಕ ಬಹುಳ ದ್ವಾದಶಿಯಂದು ದೇವಕಾರ್ಯ ನಡೆಯುತ್ತದೆ. ಅದೇ ದಿನ ಸಂಜೆ ದೀಪೋತ್ಸವ ಅದ್ಧೂರಿಯಾಗಿ ನಡೆಯುತ್ತದೆ. ದೀಪೋತ್ಸವದ ಸಂದರ್ಭದಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಸಾವಿರ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿ ಭಾವದಲ್ಲಿ ಮೈಮರೆಯುತ್ತಾರೆ. ದೀವಗಿ ಆಶ್ರಮದ ರಾಮಾನಂದ ಸ್ವಾಮೀಜಿಯವರ ದಿವ್ಯ ಆಶೀರ್ವಾದದಲ್ಲಿ ಚಂದ್ರಶಾಲೆ ನಿರ್ಮಾಣಗೊಂಡಿದೆ. ಇದು ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳ ಉಪಯೋಗಕ್ಕೆ ಅನುಕೂಲ ಕಲ್ಪಿಸಿದೆ.
    ಈ ದೇವಸ್ಥಾನ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ದಟ್ಟಡವಿಯ ನಡುವಿನಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣಪನ ಆಲಯಕ್ಕೆ ಹೋಗಲು ಸಮರ್ಪಕ ಸಂಚಾರ ವ್ಯವಸ್ಥೆಯಿಲ್ಲ. ಇರುವ ರಸ್ತೆಯಲ್ಲಿ ಮಳೆಗಾಲದಲ್ಲಿ ಹೋಗಲು ಹರಸಾಹಸ ಪಡಬೇಕಿದೆ. ರಸ್ತೆಯನ್ನು ಡಾಂಬರೀಕರಣಗೊಳಿಸುವ ಬದಲು ಇರುವ ರಸ್ತೆಯನ್ನು ಸುಸ್ಥಿತಿಯಲ್ಲಿಡಬೇಕಾಗಿದೆ. ಅಕ್ಕಪಕ್ಕದಲ್ಲಿ ನೀರುಕಾಲುವೆಯನ್ನು ಮಾಡಿಕೊಡಬೇಕಾಗಿದೆ. ಎರಡು ವರ್ಷಗಳ ಹಿಂದೆ ಕಾನಸೂರು ತಟ್ಟಿಕೈ ರಸ್ತೆಯ ಹಿತ್ಲಕೈನಿಂದ ಕಂಚಿಮನೆಗೆ ಕಚ್ಚಾರಸ್ತೆ ನಿರ್ಮಾಣ ಮಾಡಲಾಗಿದೆ. ಯೋಜನೆಯ ಪ್ರಕಾರ ಕಂಚಿಮನೆ ಕಚ್ಚಾರಸ್ತೆಯ ಜೊತೆ ಜೊತೆಯಲ್ಲಿ ಗುಡ್ಡೇತೋಟದ ದೇವಸ್ಥಾನಕ್ಕೂ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆಯಿತ್ತು. ಸ್ಥಳೀಯರು ಈ ಕುರಿತು ಆಗ್ರಹಿಸಿದ್ದರೂ ಕೂಡ ಅದನ್ನು ಕಡೆಗಣಿಸಲಾಗಿದೆ. ಯೋಜನೆ ಅನುಷ್ಠಾನವನ್ನು ಕಡೆಗಣಿಸಿದ್ದರಿಂದಾಗಿ ದೇವಸ್ಥಾನಕ್ಕೆ ಹೋಗಿಬರುವ ಭಕ್ತಾದಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಈಗಲಾದರೂ ಸಂಬಂಧಪಟ್ಟ ಇಲಾಖೆಯವರು ರಸ್ತೆ ಕಾಮಗಾರಿ ಕೈಗೊಳ್ಳುತ್ತಾರಾ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.



++++++++++++++

    ದೇವಸ್ಥಾನಕ್ಕೆ ಸರ್ವಋತು ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂಬುದು ನಮ್ಮ ಹಲವು ವರ್ಷಗಳ ಬೇಡಿಕೆ. ಈ ಕುರಿತು ಹಸರಗೋಡ ಪಂಚಾಯತಕ್ಕೆ ಹಲವು ಬಾರಿ ಅರ್ಜಿ ನೀಡಿದ್ದೇವೆ. ಆದರೆ ಇದುವರೆಗೂ ರಸ್ತೆಯನ್ನು ಸಮರ್ಪಕವಾಗಿ ಮಾಡಲಾಗಿಲ್ಲ. ಇದರಿಂದಾಗಿ ಸಂಚಾರ ದುಸ್ತರವಾಗಿದೆ. ದೇವಸ್ಥಾನಕ್ಕೆ ದಿನಂಪ್ರತಿ ಹಲವಾರು ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಸಂಪರ್ಕಕ್ಕಾಗಿ ಶಿರಸಿ-ಅಡ್ಕಳ್ಳಿ-ತಟ್ಟೀಕೈ ನಡುವೆ ಸಂಚರಿಸುವ ಬಸ್ಸುಗಳನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರ ವಾಸ್ತವ್ಯಕ್ಕಾಗಿ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ದೂರದ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಅಂತವರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳ ಕುರಿತಂತೆ ಕಾರ್ಯಕ್ರಮ ರೂಪಿಸಬೇಕಾಗಿದೆ.

ದತ್ತಾತ್ರೇಯ ಭಟ್ಟ
ಅರ್ಚಕರು, ಗುಡ್ಡೇತೋಟ

Wednesday, September 25, 2013

ಚನ್ನೈ ಎಕ್ಸ್ ಪ್ರೆಸ್ ನಲ್ಲಿ ಭಾಗ್ ಮಿಲ್ಖಾ ಭಾಗ್

ನಾನು ಚಿತ್ರ ವಿಮರ್ಷೆ ಮಾಡದೇ ಬಹಳ ದಿನಗಳಾಗಿತ್ತು.. ಇದನ್ನು ವಿಮರ್ಷೆ ಎನ್ನಿ ಅಥವಾ ಸ್ವಗತ ಎನ್ನಿ.. ಏನೆಂದು ಕರೆದೂ ಅಡ್ಡಿಯಿಲ್ಲ ... ಇತ್ತೀಚೆಗೆ ಎರಡು ಚಿತ್ರಗಳನ್ನು ಎಡಬಿಡದೇ ನೋಡಿದೆ... ಯಾಕೋ ಹಂಚಿಕೊಳ್ಳದೇ ಹೋದರೆ ಮನಸ್ಸಿಗೆ ತೃಪ್ತಿ ಸಿಗೋದಿಲ್ಲ ಎನ್ನಿಸುತ್ತದೆ.. ಇರಡೂ ಚಿತ್ರಗಳೂ ಬಿಡುಗಡೆಗೊಂಡು ತಿಂಗಳಾಯಿತು.. ನಾನು ನೋಡಿದ್ದು ಲೇಟಾಯಿತು.. ಲೇಟಾಗಿದ್ದಕ್ಕೆ ನಗಬಹುದು.. ಇರಲಿ ಬಿಡಿ..

ಭಾಗ್ ಮಿಲ್ಖಾ ಭಾಗ್ ಹಾಗೂ ಚನ್ನೈ ಎಕ್ಸ್ ಪ್ರೆಸ್.. ಇವುಗಳೇ ನಾನು ನೋಡಿದ ಎರಡು ಸಿನಿಮಾಗಳು.. ಎರಡೂ ವಿಭಿನ್ನ ಕಥೆಗಳು.. ಬಾಕ್ಸ್ ಆಫೀಸಿನಲ್ಲಿ ಹೆಸರು ಗಳಿಸಿ, ಹಣ ಬಾಚಿಕೊಂಡವುಗಳು.. ಇವೆರಡರ ಬಗ್ಗೆ ಹೇಳಲೇಬೇಕು..
ಭಾಗ್ ಮಿಲ್ಖಾ.. ಬಹಳ ಒಳ್ಳೆಯ ಸಿನಿಮಾ.. ಬಹಳಷ್ಟು ಚಿತ್ರಗಳನ್ನು ನಾನು ನೋಡಿದ್ದೇನೆ, ನೋಡುತ್ತೇನೆ.. ಆದರೆ ಇತ್ತೀಚೆಗೆ ನೋಡಿದ ಒಳ್ಳೆಯ ಸಿನಿಮಾಗಳ ಸಾಲಿನಲ್ಲಿ ಭಾಗ್ ಮಿಲ್ಖಾ ಕೂಡ ಒಂದು..
ಸಿನಿಮಾ ನೋಡುವ ವರೆಗೂ ಮಿಲ್ಖಾ ಸಿಂಗ್ ಕುರಿತು ನನ್ನಲ್ಲಿ ಒಳ್ಳೆಯ ಅಭಿಪ್ರಾಯವಿರಲಿಲ್ಲ.. ಹೀಗೆ ಹೇಳಿದರೆ ತಪ್ಪಾಗಬಹುದು.. ಮಿಲ್ಖಾ ಸಿಂಗ್ ಜೀವನದ ಕುರಿತು ಅಷ್ಟೇನೂ ಗೊತ್ತಿರಲಿಲ್ಲ.. ಸುಮ್ನೇ ಬಿಲ್ಡಪ್ ಕೊಡ್ತಾರೆ ಎಂದುಕೊಂಡು ಮಿಲ್ಖಾ ಬಗ್ಗೆ ತಿಳಿದುಕೊಳ್ಳುವ ಆಲೋಚನೆಯನ್ನೂ ಮಾಡಿರಲಿಲ್ಲ.. ಇಂತಹ ಸಂದರ್ಭಗಳಲ್ಲಿ ನಾನು ಅನೇಕ ಪತ್ರಿಕೆಗಳಲ್ಲಿ ಚಿತ್ರದ ಕುರಿತು ಒಳ್ಳೆಯ ವಿಮರ್ಷೆಗಳನ್ನು ಓದಿದೆ.. ಅದಕ್ಕೂ ಮಿಗಿಲಾಗಿ ಫರ್ಹಾನ್ ಚಿತ್ರ ಎಂಬ ಕುತೂಹಲವಿತ್ತು.. ಸೀದಾ ಸಾದಾ ಚಿತ್ರಗಳಲ್ಲಿ ಆತ ನಟನೆ ಮಾಡುವುದಿಲ್ಲ ಎಂಬುದೂ ನನ್ನ ಮತ್ತೊಂದು ಭಾವನೆಯಾಗಿತ್ತು.. ಟಾಕೀಸುಗಳಲ್ಲಿ ಚಿತ್ರ ನೋಡಲು ಮನಸ್ಸಾಗಲಿಲ್ಲ.. ವೀಡಿಯೋ ಸಿಕ್ಕಿತು..
ಅಫ್ಕೋರ್ಸ್.. 3 ಗಂಟೆ 15-20 ನಿಮಿಷ ಸಿಸ್ಟಂ ಎದುರಿನಿಂದ ಅಲ್ಲಾಡಲಿಲ್ಲ.. ಚಿತ್ರ ಬಿಡದೇ ಕಾಡಿತು.. ಇಷ್ಟವಾಯಿತು.. ವಿಶ್ವದಾಖಲೆಗಳು ಎಂದ ಕೂಡಲೇ ಅಮೇರಿಕಾ, ಕೀನ್ಯಾ, ಇಥಿಯೋಪಿಯಾ, ಚೀನಾ, ರಷಿಯಾ ಹೀಗೆ ವಿದೇಶಗಳತ್ತ ನೋಡುತ್ತಿದ್ದ, ನೋಡುತ್ತಿರುವ ಸಂದರ್ಭದಲ್ಲಿ ಅಥ್ಲೆಟಿಕ್ಸ್ ನಲ್ಲಿ ಭಾರತೀಯನೊಬ್ಬ ವಿಶ್ವದಾಖಲೆ ಮಾಡಿದ್ದಾನೆಂದರೆ ನಿಜಕ್ಕೂ ಆಸಮ್...
ಚಿತ್ರದಲ್ಲಿ ಇಷ್ಟವಾಗಿದ್ದು ಫರ್ಹಾನ್ ನ ಮನೋಜ್ನ ನಟನೆ.. ಹಲವು ಸಾರಿ ಮಿಲ್ಖಾನಂತೆ ಕಾಣುವ ಆತನನ್ನು ಬಿಟ್ಟರೆ ಚಿತ್ರಕ್ಕೆ ಮತ್ಯಾರೂ ಹೊಂದಿಕೆಯೂ ಆಗೋದಿಲ್ಲವೇನೋ ಎನ್ನುವಂತಹ ನಟನೆ.. ಹೀಗೆ ಬಂದು ಕ್ಷಣಕಾಲ ಮನಸ್ಸಿನಲ್ಲಿ ಅಚ್ಚಳಿಯದ ಗಾಯ ಮಾಡಿ ಹೋಗುವ ಸೋನಂ ಕಪೂರ್ ಕೂಡ ಇಷ್ಟವಾಗುತ್ತಾಳೆ.. ಮುಗ್ಧತನದ ಭಾರತೀಯನನ್ನು ಇಷ್ಟಪಟ್ಟು ಕಾಡುವ ಆಸ್ಟ್ರೇಲಿಯನ್ ಹುಡುಗಿ, ದಕ್ಷಣ ಭಾರತೀಯ ಮಿಲಿಟರಿ ಅಧಿಕಾರಿ ಪರ್ಫೆಕ್ಟ್ ಪ್ರಕಾಶ್ ರೈ, ದೇವ್ ಗಿಲ್.. ಹೀಗೆ ಚಿತ್ರದಲ್ಲಿ  ಸಾಲು ಸಾಳು ಬೆರಗುಗಳು.. ಜೊತೆಗೆ 1950-60ರ ದಶಕದ ಭಾರತವನ್ನು ಕಟ್ಟಿಕೊಡುವ ಬಗೆ.. ಭಾರತ-ಪಾಕ್ ವಿಭಜನೆ.. ಎಲ್ಲ ಇಷ್ಟವಾಯಿತು.. ಜೀವ ಉಳಿಸಿಕೊಳ್ಳಲು ಓಡುವ, ಹೊಟ್ಟೆಪಾಡಿಗಾಗಿ ಓಡುವ, ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವ, ಹಾಲಿಗಾಗಿ ಓಡುವ, ಮಿಲಿಟರಿ ಮಾರ್ಚ್ ಫಾಸ್ಟಿನಲ್ಲಿ ಓಡುವ, ಅವಳನ್ನು ಕಾಡುವ ಸಲುವಾಗಿ ಓಡುವ ಮಿಲ್ಖಾ ಹೊಸ ಭಾವನೆಯನ್ನೇ ಕಟ್ಟಿಕೊಟ್ಟಿದ್ದಾನೆ.. ಅದರಲ್ಲೂ ಕೊಟ್ಟಕೊನೆಯಲ್ಲಿ ಪಾಕಿಸ್ತಾನದ ಖಾಲೀದ್ ನನ್ನು ಸೋಲಿಸುವ ಬಗೆಇದೆಯಲ್ಲ.. ಒಮ್ಮೆ ಸಿಳ್ಳೆ ಹಾಕಿ ಕುಣಿಯಬೇಕೆನ್ನಿಸುತ್ತದೆ..
ಹಲವು ಯುವಕರು ಮಿಲ್ಖಾನನ್ನು ನೋಡಿ ಇಂಪ್ರೆಸ್ ಆಗಿದ್ದಾರೆ.. ಅಲ್ಲಾ.. ಆ ನೆಹರೂ ಪಾತ್ರದಾರಿ ರಾಕೇಶ್ ಓಂ ಪ್ರಕಾಶ್ ಮೆಹ್ರಾಗೆ ಅದೆಲ್ಲಿ ಸಿಕ್ಕರೋ.. ನೆಹರೂ ಅಂತೆ ಕಾಣುತ್ತಾರೆ.. ತುಂಬ ಮಜವನ್ನಿಸಿತು.. 5 ದಶಕಗಳ ಹಿಂದಿನ ಕಥೆಯನ್ನು ಇಂದಿನ ದಿನಮಾನಕ್ಕೆ, ಎಲ್ಲೂ ಇತಿಹಾಸ ತಿರುಚದಂತೆ, ಲೋಪವಾಗದಂತೆ ಕಟ್ಟಿಕೊಟ್ಟ ನಿರ್ದೇಶಕರಿಗೆ, ಕಥಾ ಹಂದರವನ್ನು ತೆರೆದಿಟ್ಟವರಿಗೆ ನಮಸ್ಕಾರವೆನ್ನಲೇಬೇಕು..
ಉರಿಯುವ ಮರಳಲ್ಲಿ ಓಡುವ ಬಾಲಕ ಮಿಲ್ಖಾ, ವಿಭಜನೆಯ ದಗೆಯಲ್ಲೂ ಆತನ ಪ್ರೀತಿಯ ಅಕ್ಕನನ್ನು ಹಾಸಿಗೆಗೆ ಕೆಡವಿಕೊಂಡು ಅನುಭವಿಸುವ ವ್ಯಕ್ತಿ, ಅದನ್ನು ಕಂಡು ಖುಷಿ ಪಡುವ ಮಿಲ್ಖಾನ ಕುಟುಂಬದವರು, ಮಿಲ್ಕಾ ಸಿಟ್ಟಿಗೇಳುವ ಬಗೆ, ಕಳ್ಳತನ, ದರೋಡೆ, ಕಾಲಿಗೆ ಕಲ್ಲು ಚುಚ್ಚಿದ್ದರೂ ಓಡಿ ಸೋಲುವ ಆತನನ್ನು ಸೆಲೆಕ್ಟ್ ಮಾಡುವು ಅಧಿಕಾರಿಗಳು.. ಹೀಗೆ ಎಷ್ಟೊಂದು ಚಿಕ್ಕ ಚಿಕ್ಕ ಸನ್ನಿವೇಶಗಳನ್ನು ಕಟ್ಟಿಕೊಡುತ್ತಾರೆ ನಿರ್ದೇಶಕರು.. ಸಾಮಾನ್ಯರಿಗೆ ಚಿತ್ರ ಸ್ವಲ್ಪ ಸ್ಲೋ ಅನ್ನಿಸಬಹುದು.. ಆದರೆ ವ್ಯಕ್ತಿ ಚಿತ್ರ ಕಟ್ಟಿಕೊಡುವಾಗ ಚಿಕ್ಕ ಚಿಕ್ಕ ಸಂಗತಿಗಳನ್ನೂ ಹೇಳುವ ಅಗತ್ಯವಿರುವುದರಿಂದ ನಿಧಾನವಾದರೂ ತೊಂದರೆಯಿಲ್ಲ ಸಿನಿಮಾ ಬೋರಾಗುವುದಿಲ್ಲ.. ಸಿನೆಮಾದಲ್ಲಿ 2-3 ಹಾಡಿದೆ.. ಹವನ ಕರೇಂಗೆ ಹಾಡು ಟಪ್ಪಾಂಗುಚ್ಚಿಯಾಗಿ ನೆನಪಾಗುತ್ತದೆ.. ಸೋನಂ ಜೊತೆ ಡ್ಯೂಯೆಟ್ ನೆನಪಾಗುವುದಿಲ್ಲ.. ಇನ್ನೊಂದು ಭಾಗ್ ಮಿಲ್ಖಾ ಹಾಡು .. ಕೇಳುವಂತಿದೆ..
ಹೊಸ ಹುಮ್ಮಸ್ಸು ಪಡೆಯುವ ವ್ಯಕ್ತಿಗಳಿಗೆ ನೋಡಲೇಬೇಕು ಎನ್ನಿಸುವ ಸಿನೆಮಾ.. ಜೀವನದಲ್ಲಿ ಎಲ್ಲಾ ಮುಗೀತು ಅಂದುಕೊಂಡವರಿಗೆ ಒಮ್ಮೆ ತೋರಿಸಬಹುದು..

ಭಾಗ್ ಜೊತೆ ಜೊತೆಯಲ್ಲಿಯೇ ನೋಡಿದ ಇನ್ನೊಂದು ಸಿನೆಮಾ ಶಾರುಕ್ ನ ಚನ್ನೈ ಎಕ್ಸ್ ಪ್ರೆಸ್.. ಅರ್ಧ ತಮಿಳು ಅರ್ಧ ಹಿಂದಿಯ ಸಿನೆಮಾ ಪಕ್ಕಾ ಕಮರ್ಷಿಯಲ್.. ಹಾಸ್ಯದ ಎಳೆ, ಲವ್ ಸ್ಟೋರಿ, ಮುಂಗಾರುಮಳೆ, ಎರಡು ತೆಲಗು ಸಿನಿಮಾ ಎರಡು ತಮಿಳು, ಮಲೆಯಾಳಿ ಸಿನಿಮಾಗಳನ್ನು ಸೇರಿಸಿದರೆ ಒಂದು ಚನ್ನೈ ಎಕ್ಸ್ ಪ್ರೆಸ್ ಕಥೆ ಲಭ್ಯವಾಗುತ್ತದೆ.. ಹಣಗಳಿಕೆಯ ಮೂಲ ಕಾರಣದಿಂದ ತಮಿಳನ್ನು ಬಳಸಿಕೊಂಡು, ಅವರ ಹಾವ ಭಾವವನ್ನು ಅನುಕರಿಸುವಂತೆ ಮಾಡಿ ಎಲ್ಲೋ ಒಂದು ಕಡೆ ತಮಿಳು ಅಥವಾ ದಕ್ಷಿಣ ಭಾರತೀಯರನ್ನು ಶಾರುಕ್ ಲೇವಡಿ ಮಾಡುತ್ತಿದ್ದಾನಾ ಎನ್ನುವ ಭಾವನೆ ಆಗೊಮ್ಮೆ ಈಗೊಮ್ಮೆ ಹಾದು ಹೋಗುತ್ತದೆ.. ಸಿನೆಮಾ ಚನ್ನಾಗಿದೆ.. ಹಾಗೆಂದ ಮಾತ್ರಕ್ಕೆ 2-3 ಸಾರಿ ಹೋಗಿ ನೋಡುವಂತಹ ಸಿನೆಮಾ ಇದಲ್ಲ.. ಒಮ್ಮೆ ನೋಡಿ ನಕ್ಕು, ಆ ನಗುವನ್ನು ಥಿಯೇಟರಿನಲ್ಲಿಯೇ ಬಿಟ್ಟು ಹೊರಬರಬಹುದಾದಂತಹ ಸಿನೆಮಾ..
ಚಿತ್ರದಲ್ಲಿ ಇಷ್ಟಪಡುವಂತಹ ಅನೇಕ ಅಂಶಗಳಿವೆ.. ಥಟ್ಟನೆ ಮುಂಗಾರು ಮಳೆಯಲ್ಲಿ ನೋಡಿದ್ದೇನೆ, ಮೈನಾದಲ್ಲಿ ನೋಡಿದ್ದೇನೆ ಅನ್ನಿಸುವ ಸನ್ನಿವೇಶಗಳಿವೆ.. ಅಲ್ಲೊಮ್ಮೆ ಬರುವ ಜಲಪಾತ ನಮ್ಮ ಧೂದ್ ಸಾಗರವನ್ನು ನೆನಪಿಸುತ್ತದೆ.. ಅಚ್ಚರಿ, ಬೆರಗನ್ನು ಮೂಡಿಸುತ್ತದೆ.. ದೀಪಿಕಾ ಪಡುಕೋಣೆ ಪಕ್ಕಾ ತಮಿಳರ ಹುಡುಗಿಯಂತೆ `ಛಲೋ..' ಎಂದಿದ್ದಾಳೆ.. ಶಾರುಕ್ ಎಂದಿನಂತೆ .. ಉಳಿದವರು ನೆನಪಾಗುತ್ತಾರೆ.. ಆದರೆ ತಮಿಳು, ತೆಲಗು ಸಿನೆಮಾಗಳಂತೆ ಅಬ್ಬರದ ಫೈಟಿಂಗ್, ಕತ್ತಿಯಲ್ಲಿ ಹೊಡೆದ ತಕ್ಷಣ ಕಾರು ಪಲ್ಟಿಯಾಗುವುದು, ಮುಂತಾದ ಅತಿಮಾನುಶ ಶಕ್ತಿಗಳನ್ನು ಹಿಂದಿ ಚಿತ್ರರಂಗ ಎರವಲು ಪಡೆಯುತ್ತಿರುವುದು/ಕದಿಯುತ್ತಿರುವುದು ಅಲ್ಲಿಯ ಕ್ರಿಯೇಟಿವಿಟಿಗೆ ಹಿಡಿದ ಕೈಗನ್ನಡಿ ಎಣ್ನಬಹುದು.  ಚನ್ನೈ ಎಕ್ಸ್ ಪ್ರೆಸ್ ಹಾಗೂ ಚಿಪಕ್ ಚಿಪಕ್ ಕೆ ಹಾಡು ನೆನಪಾಗುತ್ತವೆ..
ಹಿಂದಿ ಚಿತ್ರರಂಗದಲ್ಲಿ ದುಬಾರಿ ಸೆಟ್ಟುಗಳನ್ನು ನೋಡಿದವರಿಗೆ ದಕ್ಷಿಣ ಭಾರತದ ಹಸಿರು ಹಿನ್ನೆಲೆಯ ದೃಶ್ಯಾವಳಿ ಇಷ್ಟವಾಗುತ್ತವೆ.. ಫೈಟಿಂಗು ಚನ್ನಾಗಿದೆ.. ಕಾಮನ್ ಮ್ಯಾನಿನ ಕರಾಮತ್ತು ಬಾಕ್ಸಾಫಿಸಿನಲ್ಲಿ ಕರಾಮತ್ತು ಮಾಡಿದೆ.. ಆದರೆ ಭಾಗ್ ನಂತೆ ಸ್ಫೂರ್ತಿ ನೀಡುವಂತಹ ಯಾವುದೇ ಕಥೆ ಇದರದ್ದಲ್ಲ.. ಸರಳ ಲವ್ ಸ್ಟೋರಿ.. ನಿರೂಪಣೆ ಚನ್ನಾಗಿದೆ.. ಕನ್ನಡಿಗ ರೋಹಿತ್ ಶೆಟ್ಟಿ ಉತ್ತಮ ಡಬ್ಬಿಂಗ್ ನಿರ್ದೆಶಕರೆಂಬ ಬಿರುದನ್ನು ಸುಲಭವಾಗಿ ಪಡೆದುಕೊಳ್ಳಬಹುದು..

ಇದು ನನಗನಿಸಿದ್ದು.. ಸಿನೆಮಾ ನೀವು ನೋಡಿ ಬರಬಹುದು.. ಎರಡರ ಕುರಿತು ಅಭಿಪ್ರಾಯವನ್ನೂ ಹೇಳಬಹುದು..

Wednesday, September 18, 2013

ಆಶಯ


ಜಾರಿಬಿಡಲಿ ಕಣ್ಣಬಿಂದು
ನೋವ ಮರೆಸುವಲ್ಲಿ
ಚಿಮ್ಮಿ ಬರಲಿ ನಗುವ ಬುಗ್ಗೆ
ನೋವ ನಗಿಸುವಲ್ಲಿ..||

ಕಳೆದಾಗಿದೆ ನೂರು ಕಷ್ಟ
ಮುಂದೆ ಇರಲಿ ನಲಿವ ಬೆಟ್ಟ
ಬಾಳಬುತ್ತಿ ಅರಳೋಮುನ್ನ
ಜಾರಿ ಬಿಡಲಿ ಕಣ್ಣಬಿಂದು..||

ನಲಿವು ಬಾಳ ಸ್ವಪ್ನದಂತೆ
ಮನವ ಮೆರೆಸುತಿರುವುದು
ನೂರು ನೋವು ಎದುರುಬರಲಿ
ನಲಿವು ಹಿಂದೆ ಬರುವುದು..||

(ಇದನ್ನು ಬರೆದಿದ್ದು 23-10-2006ರಂದು ದಂಟಕಲ್ಲಿನಲ್ಲಿ )
(ಈ ಕವಿತೆಯನ್ನು ತಂಗಿ ಸುಪರ್ಣ ಹಾಗೂ ಪೂರ್ಣಿಮಾ ಅವರು ರಾಗ ಹಾಕಿ ಹಾಡಿದ್ದಾರೆ.. ಅವರಿಗೆ ಧನ್ಯವಾದಗಳು..)
(ಕವಿತೆಯನ್ನು ಆಕಾಶವಾಣಿ ಕಾರವಾರದಲ್ಲಿ 23-01-2008ರಂದು ವಾಚಿಸಲಾಗಿದೆ. 
ಜೂನ್-ಜುಲೈ 2009ರ ಚೈತ್ರರಶ್ಮಿಯಲ್ಲಿ ಪ್ರಕಟವಾಗಿದೆ)