ನಾನು ಚಿತ್ರ ವಿಮರ್ಷೆ ಮಾಡದೇ ಬಹಳ ದಿನಗಳಾಗಿತ್ತು.. ಇದನ್ನು ವಿಮರ್ಷೆ ಎನ್ನಿ ಅಥವಾ ಸ್ವಗತ ಎನ್ನಿ.. ಏನೆಂದು ಕರೆದೂ ಅಡ್ಡಿಯಿಲ್ಲ ... ಇತ್ತೀಚೆಗೆ ಎರಡು ಚಿತ್ರಗಳನ್ನು ಎಡಬಿಡದೇ ನೋಡಿದೆ... ಯಾಕೋ ಹಂಚಿಕೊಳ್ಳದೇ ಹೋದರೆ ಮನಸ್ಸಿಗೆ ತೃಪ್ತಿ ಸಿಗೋದಿಲ್ಲ ಎನ್ನಿಸುತ್ತದೆ.. ಇರಡೂ ಚಿತ್ರಗಳೂ ಬಿಡುಗಡೆಗೊಂಡು ತಿಂಗಳಾಯಿತು.. ನಾನು ನೋಡಿದ್ದು ಲೇಟಾಯಿತು.. ಲೇಟಾಗಿದ್ದಕ್ಕೆ ನಗಬಹುದು.. ಇರಲಿ ಬಿಡಿ..
ಭಾಗ್ ಮಿಲ್ಖಾ ಭಾಗ್ ಹಾಗೂ ಚನ್ನೈ ಎಕ್ಸ್ ಪ್ರೆಸ್.. ಇವುಗಳೇ ನಾನು ನೋಡಿದ ಎರಡು ಸಿನಿಮಾಗಳು.. ಎರಡೂ ವಿಭಿನ್ನ ಕಥೆಗಳು.. ಬಾಕ್ಸ್ ಆಫೀಸಿನಲ್ಲಿ ಹೆಸರು ಗಳಿಸಿ, ಹಣ ಬಾಚಿಕೊಂಡವುಗಳು.. ಇವೆರಡರ ಬಗ್ಗೆ ಹೇಳಲೇಬೇಕು..
ಭಾಗ್ ಮಿಲ್ಖಾ.. ಬಹಳ ಒಳ್ಳೆಯ ಸಿನಿಮಾ.. ಬಹಳಷ್ಟು ಚಿತ್ರಗಳನ್ನು ನಾನು ನೋಡಿದ್ದೇನೆ, ನೋಡುತ್ತೇನೆ.. ಆದರೆ ಇತ್ತೀಚೆಗೆ ನೋಡಿದ ಒಳ್ಳೆಯ ಸಿನಿಮಾಗಳ ಸಾಲಿನಲ್ಲಿ ಭಾಗ್ ಮಿಲ್ಖಾ ಕೂಡ ಒಂದು..
ಸಿನಿಮಾ ನೋಡುವ ವರೆಗೂ ಮಿಲ್ಖಾ ಸಿಂಗ್ ಕುರಿತು ನನ್ನಲ್ಲಿ ಒಳ್ಳೆಯ ಅಭಿಪ್ರಾಯವಿರಲಿಲ್ಲ.. ಹೀಗೆ ಹೇಳಿದರೆ ತಪ್ಪಾಗಬಹುದು.. ಮಿಲ್ಖಾ ಸಿಂಗ್ ಜೀವನದ ಕುರಿತು ಅಷ್ಟೇನೂ ಗೊತ್ತಿರಲಿಲ್ಲ.. ಸುಮ್ನೇ ಬಿಲ್ಡಪ್ ಕೊಡ್ತಾರೆ ಎಂದುಕೊಂಡು ಮಿಲ್ಖಾ ಬಗ್ಗೆ ತಿಳಿದುಕೊಳ್ಳುವ ಆಲೋಚನೆಯನ್ನೂ ಮಾಡಿರಲಿಲ್ಲ.. ಇಂತಹ ಸಂದರ್ಭಗಳಲ್ಲಿ ನಾನು ಅನೇಕ ಪತ್ರಿಕೆಗಳಲ್ಲಿ ಚಿತ್ರದ ಕುರಿತು ಒಳ್ಳೆಯ ವಿಮರ್ಷೆಗಳನ್ನು ಓದಿದೆ.. ಅದಕ್ಕೂ ಮಿಗಿಲಾಗಿ ಫರ್ಹಾನ್ ಚಿತ್ರ ಎಂಬ ಕುತೂಹಲವಿತ್ತು.. ಸೀದಾ ಸಾದಾ ಚಿತ್ರಗಳಲ್ಲಿ ಆತ ನಟನೆ ಮಾಡುವುದಿಲ್ಲ ಎಂಬುದೂ ನನ್ನ ಮತ್ತೊಂದು ಭಾವನೆಯಾಗಿತ್ತು.. ಟಾಕೀಸುಗಳಲ್ಲಿ ಚಿತ್ರ ನೋಡಲು ಮನಸ್ಸಾಗಲಿಲ್ಲ.. ವೀಡಿಯೋ ಸಿಕ್ಕಿತು..
ಅಫ್ಕೋರ್ಸ್.. 3 ಗಂಟೆ 15-20 ನಿಮಿಷ ಸಿಸ್ಟಂ ಎದುರಿನಿಂದ ಅಲ್ಲಾಡಲಿಲ್ಲ.. ಚಿತ್ರ ಬಿಡದೇ ಕಾಡಿತು.. ಇಷ್ಟವಾಯಿತು.. ವಿಶ್ವದಾಖಲೆಗಳು ಎಂದ ಕೂಡಲೇ ಅಮೇರಿಕಾ, ಕೀನ್ಯಾ, ಇಥಿಯೋಪಿಯಾ, ಚೀನಾ, ರಷಿಯಾ ಹೀಗೆ ವಿದೇಶಗಳತ್ತ ನೋಡುತ್ತಿದ್ದ, ನೋಡುತ್ತಿರುವ ಸಂದರ್ಭದಲ್ಲಿ ಅಥ್ಲೆಟಿಕ್ಸ್ ನಲ್ಲಿ ಭಾರತೀಯನೊಬ್ಬ ವಿಶ್ವದಾಖಲೆ ಮಾಡಿದ್ದಾನೆಂದರೆ ನಿಜಕ್ಕೂ ಆಸಮ್...
ಚಿತ್ರದಲ್ಲಿ ಇಷ್ಟವಾಗಿದ್ದು ಫರ್ಹಾನ್ ನ ಮನೋಜ್ನ ನಟನೆ.. ಹಲವು ಸಾರಿ ಮಿಲ್ಖಾನಂತೆ ಕಾಣುವ ಆತನನ್ನು ಬಿಟ್ಟರೆ ಚಿತ್ರಕ್ಕೆ ಮತ್ಯಾರೂ ಹೊಂದಿಕೆಯೂ ಆಗೋದಿಲ್ಲವೇನೋ ಎನ್ನುವಂತಹ ನಟನೆ.. ಹೀಗೆ ಬಂದು ಕ್ಷಣಕಾಲ ಮನಸ್ಸಿನಲ್ಲಿ ಅಚ್ಚಳಿಯದ ಗಾಯ ಮಾಡಿ ಹೋಗುವ ಸೋನಂ ಕಪೂರ್ ಕೂಡ ಇಷ್ಟವಾಗುತ್ತಾಳೆ.. ಮುಗ್ಧತನದ ಭಾರತೀಯನನ್ನು ಇಷ್ಟಪಟ್ಟು ಕಾಡುವ ಆಸ್ಟ್ರೇಲಿಯನ್ ಹುಡುಗಿ, ದಕ್ಷಣ ಭಾರತೀಯ ಮಿಲಿಟರಿ ಅಧಿಕಾರಿ ಪರ್ಫೆಕ್ಟ್ ಪ್ರಕಾಶ್ ರೈ, ದೇವ್ ಗಿಲ್.. ಹೀಗೆ ಚಿತ್ರದಲ್ಲಿ ಸಾಲು ಸಾಳು ಬೆರಗುಗಳು.. ಜೊತೆಗೆ 1950-60ರ ದಶಕದ ಭಾರತವನ್ನು ಕಟ್ಟಿಕೊಡುವ ಬಗೆ.. ಭಾರತ-ಪಾಕ್ ವಿಭಜನೆ.. ಎಲ್ಲ ಇಷ್ಟವಾಯಿತು.. ಜೀವ ಉಳಿಸಿಕೊಳ್ಳಲು ಓಡುವ, ಹೊಟ್ಟೆಪಾಡಿಗಾಗಿ ಓಡುವ, ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವ, ಹಾಲಿಗಾಗಿ ಓಡುವ, ಮಿಲಿಟರಿ ಮಾರ್ಚ್ ಫಾಸ್ಟಿನಲ್ಲಿ ಓಡುವ, ಅವಳನ್ನು ಕಾಡುವ ಸಲುವಾಗಿ ಓಡುವ ಮಿಲ್ಖಾ ಹೊಸ ಭಾವನೆಯನ್ನೇ ಕಟ್ಟಿಕೊಟ್ಟಿದ್ದಾನೆ.. ಅದರಲ್ಲೂ ಕೊಟ್ಟಕೊನೆಯಲ್ಲಿ ಪಾಕಿಸ್ತಾನದ ಖಾಲೀದ್ ನನ್ನು ಸೋಲಿಸುವ ಬಗೆಇದೆಯಲ್ಲ.. ಒಮ್ಮೆ ಸಿಳ್ಳೆ ಹಾಕಿ ಕುಣಿಯಬೇಕೆನ್ನಿಸುತ್ತದೆ..
ಹಲವು ಯುವಕರು ಮಿಲ್ಖಾನನ್ನು ನೋಡಿ ಇಂಪ್ರೆಸ್ ಆಗಿದ್ದಾರೆ.. ಅಲ್ಲಾ.. ಆ ನೆಹರೂ ಪಾತ್ರದಾರಿ ರಾಕೇಶ್ ಓಂ ಪ್ರಕಾಶ್ ಮೆಹ್ರಾಗೆ ಅದೆಲ್ಲಿ ಸಿಕ್ಕರೋ.. ನೆಹರೂ ಅಂತೆ ಕಾಣುತ್ತಾರೆ.. ತುಂಬ ಮಜವನ್ನಿಸಿತು.. 5 ದಶಕಗಳ ಹಿಂದಿನ ಕಥೆಯನ್ನು ಇಂದಿನ ದಿನಮಾನಕ್ಕೆ, ಎಲ್ಲೂ ಇತಿಹಾಸ ತಿರುಚದಂತೆ, ಲೋಪವಾಗದಂತೆ ಕಟ್ಟಿಕೊಟ್ಟ ನಿರ್ದೇಶಕರಿಗೆ, ಕಥಾ ಹಂದರವನ್ನು ತೆರೆದಿಟ್ಟವರಿಗೆ ನಮಸ್ಕಾರವೆನ್ನಲೇಬೇಕು..
ಉರಿಯುವ ಮರಳಲ್ಲಿ ಓಡುವ ಬಾಲಕ ಮಿಲ್ಖಾ, ವಿಭಜನೆಯ ದಗೆಯಲ್ಲೂ ಆತನ ಪ್ರೀತಿಯ ಅಕ್ಕನನ್ನು ಹಾಸಿಗೆಗೆ ಕೆಡವಿಕೊಂಡು ಅನುಭವಿಸುವ ವ್ಯಕ್ತಿ, ಅದನ್ನು ಕಂಡು ಖುಷಿ ಪಡುವ ಮಿಲ್ಖಾನ ಕುಟುಂಬದವರು, ಮಿಲ್ಕಾ ಸಿಟ್ಟಿಗೇಳುವ ಬಗೆ, ಕಳ್ಳತನ, ದರೋಡೆ, ಕಾಲಿಗೆ ಕಲ್ಲು ಚುಚ್ಚಿದ್ದರೂ ಓಡಿ ಸೋಲುವ ಆತನನ್ನು ಸೆಲೆಕ್ಟ್ ಮಾಡುವು ಅಧಿಕಾರಿಗಳು.. ಹೀಗೆ ಎಷ್ಟೊಂದು ಚಿಕ್ಕ ಚಿಕ್ಕ ಸನ್ನಿವೇಶಗಳನ್ನು ಕಟ್ಟಿಕೊಡುತ್ತಾರೆ ನಿರ್ದೇಶಕರು.. ಸಾಮಾನ್ಯರಿಗೆ ಚಿತ್ರ ಸ್ವಲ್ಪ ಸ್ಲೋ ಅನ್ನಿಸಬಹುದು.. ಆದರೆ ವ್ಯಕ್ತಿ ಚಿತ್ರ ಕಟ್ಟಿಕೊಡುವಾಗ ಚಿಕ್ಕ ಚಿಕ್ಕ ಸಂಗತಿಗಳನ್ನೂ ಹೇಳುವ ಅಗತ್ಯವಿರುವುದರಿಂದ ನಿಧಾನವಾದರೂ ತೊಂದರೆಯಿಲ್ಲ ಸಿನಿಮಾ ಬೋರಾಗುವುದಿಲ್ಲ.. ಸಿನೆಮಾದಲ್ಲಿ 2-3 ಹಾಡಿದೆ.. ಹವನ ಕರೇಂಗೆ ಹಾಡು ಟಪ್ಪಾಂಗುಚ್ಚಿಯಾಗಿ ನೆನಪಾಗುತ್ತದೆ.. ಸೋನಂ ಜೊತೆ ಡ್ಯೂಯೆಟ್ ನೆನಪಾಗುವುದಿಲ್ಲ.. ಇನ್ನೊಂದು ಭಾಗ್ ಮಿಲ್ಖಾ ಹಾಡು .. ಕೇಳುವಂತಿದೆ..
ಹೊಸ ಹುಮ್ಮಸ್ಸು ಪಡೆಯುವ ವ್ಯಕ್ತಿಗಳಿಗೆ ನೋಡಲೇಬೇಕು ಎನ್ನಿಸುವ ಸಿನೆಮಾ.. ಜೀವನದಲ್ಲಿ ಎಲ್ಲಾ ಮುಗೀತು ಅಂದುಕೊಂಡವರಿಗೆ ಒಮ್ಮೆ ತೋರಿಸಬಹುದು..
ಭಾಗ್ ಜೊತೆ ಜೊತೆಯಲ್ಲಿಯೇ ನೋಡಿದ ಇನ್ನೊಂದು ಸಿನೆಮಾ ಶಾರುಕ್ ನ ಚನ್ನೈ ಎಕ್ಸ್ ಪ್ರೆಸ್.. ಅರ್ಧ ತಮಿಳು ಅರ್ಧ ಹಿಂದಿಯ ಸಿನೆಮಾ ಪಕ್ಕಾ ಕಮರ್ಷಿಯಲ್.. ಹಾಸ್ಯದ ಎಳೆ, ಲವ್ ಸ್ಟೋರಿ, ಮುಂಗಾರುಮಳೆ, ಎರಡು ತೆಲಗು ಸಿನಿಮಾ ಎರಡು ತಮಿಳು, ಮಲೆಯಾಳಿ ಸಿನಿಮಾಗಳನ್ನು ಸೇರಿಸಿದರೆ ಒಂದು ಚನ್ನೈ ಎಕ್ಸ್ ಪ್ರೆಸ್ ಕಥೆ ಲಭ್ಯವಾಗುತ್ತದೆ.. ಹಣಗಳಿಕೆಯ ಮೂಲ ಕಾರಣದಿಂದ ತಮಿಳನ್ನು ಬಳಸಿಕೊಂಡು, ಅವರ ಹಾವ ಭಾವವನ್ನು ಅನುಕರಿಸುವಂತೆ ಮಾಡಿ ಎಲ್ಲೋ ಒಂದು ಕಡೆ ತಮಿಳು ಅಥವಾ ದಕ್ಷಿಣ ಭಾರತೀಯರನ್ನು ಶಾರುಕ್ ಲೇವಡಿ ಮಾಡುತ್ತಿದ್ದಾನಾ ಎನ್ನುವ ಭಾವನೆ ಆಗೊಮ್ಮೆ ಈಗೊಮ್ಮೆ ಹಾದು ಹೋಗುತ್ತದೆ.. ಸಿನೆಮಾ ಚನ್ನಾಗಿದೆ.. ಹಾಗೆಂದ ಮಾತ್ರಕ್ಕೆ 2-3 ಸಾರಿ ಹೋಗಿ ನೋಡುವಂತಹ ಸಿನೆಮಾ ಇದಲ್ಲ.. ಒಮ್ಮೆ ನೋಡಿ ನಕ್ಕು, ಆ ನಗುವನ್ನು ಥಿಯೇಟರಿನಲ್ಲಿಯೇ ಬಿಟ್ಟು ಹೊರಬರಬಹುದಾದಂತಹ ಸಿನೆಮಾ..
ಚಿತ್ರದಲ್ಲಿ ಇಷ್ಟಪಡುವಂತಹ ಅನೇಕ ಅಂಶಗಳಿವೆ.. ಥಟ್ಟನೆ ಮುಂಗಾರು ಮಳೆಯಲ್ಲಿ ನೋಡಿದ್ದೇನೆ, ಮೈನಾದಲ್ಲಿ ನೋಡಿದ್ದೇನೆ ಅನ್ನಿಸುವ ಸನ್ನಿವೇಶಗಳಿವೆ.. ಅಲ್ಲೊಮ್ಮೆ ಬರುವ ಜಲಪಾತ ನಮ್ಮ ಧೂದ್ ಸಾಗರವನ್ನು ನೆನಪಿಸುತ್ತದೆ.. ಅಚ್ಚರಿ, ಬೆರಗನ್ನು ಮೂಡಿಸುತ್ತದೆ.. ದೀಪಿಕಾ ಪಡುಕೋಣೆ ಪಕ್ಕಾ ತಮಿಳರ ಹುಡುಗಿಯಂತೆ `ಛಲೋ..' ಎಂದಿದ್ದಾಳೆ.. ಶಾರುಕ್ ಎಂದಿನಂತೆ .. ಉಳಿದವರು ನೆನಪಾಗುತ್ತಾರೆ.. ಆದರೆ ತಮಿಳು, ತೆಲಗು ಸಿನೆಮಾಗಳಂತೆ ಅಬ್ಬರದ ಫೈಟಿಂಗ್, ಕತ್ತಿಯಲ್ಲಿ ಹೊಡೆದ ತಕ್ಷಣ ಕಾರು ಪಲ್ಟಿಯಾಗುವುದು, ಮುಂತಾದ ಅತಿಮಾನುಶ ಶಕ್ತಿಗಳನ್ನು ಹಿಂದಿ ಚಿತ್ರರಂಗ ಎರವಲು ಪಡೆಯುತ್ತಿರುವುದು/ಕದಿಯುತ್ತಿರುವುದು ಅಲ್ಲಿಯ ಕ್ರಿಯೇಟಿವಿಟಿಗೆ ಹಿಡಿದ ಕೈಗನ್ನಡಿ ಎಣ್ನಬಹುದು. ಚನ್ನೈ ಎಕ್ಸ್ ಪ್ರೆಸ್ ಹಾಗೂ ಚಿಪಕ್ ಚಿಪಕ್ ಕೆ ಹಾಡು ನೆನಪಾಗುತ್ತವೆ..
ಹಿಂದಿ ಚಿತ್ರರಂಗದಲ್ಲಿ ದುಬಾರಿ ಸೆಟ್ಟುಗಳನ್ನು ನೋಡಿದವರಿಗೆ ದಕ್ಷಿಣ ಭಾರತದ ಹಸಿರು ಹಿನ್ನೆಲೆಯ ದೃಶ್ಯಾವಳಿ ಇಷ್ಟವಾಗುತ್ತವೆ.. ಫೈಟಿಂಗು ಚನ್ನಾಗಿದೆ.. ಕಾಮನ್ ಮ್ಯಾನಿನ ಕರಾಮತ್ತು ಬಾಕ್ಸಾಫಿಸಿನಲ್ಲಿ ಕರಾಮತ್ತು ಮಾಡಿದೆ.. ಆದರೆ ಭಾಗ್ ನಂತೆ ಸ್ಫೂರ್ತಿ ನೀಡುವಂತಹ ಯಾವುದೇ ಕಥೆ ಇದರದ್ದಲ್ಲ.. ಸರಳ ಲವ್ ಸ್ಟೋರಿ.. ನಿರೂಪಣೆ ಚನ್ನಾಗಿದೆ.. ಕನ್ನಡಿಗ ರೋಹಿತ್ ಶೆಟ್ಟಿ ಉತ್ತಮ ಡಬ್ಬಿಂಗ್ ನಿರ್ದೆಶಕರೆಂಬ ಬಿರುದನ್ನು ಸುಲಭವಾಗಿ ಪಡೆದುಕೊಳ್ಳಬಹುದು..
ಇದು ನನಗನಿಸಿದ್ದು.. ಸಿನೆಮಾ ನೀವು ನೋಡಿ ಬರಬಹುದು.. ಎರಡರ ಕುರಿತು ಅಭಿಪ್ರಾಯವನ್ನೂ ಹೇಳಬಹುದು..