ಎಡಕಲ್ಲು ಗುಡ್ಡದ ವೈಭವ ನೋಡಬೇಕೆಂದರೆ ಅದರ ಬುಡಕ್ಕೆ ಹೋಗಿ ನೇರಾ ಆಕಾಶದೆತ್ತರಕ್ಕೆ ತಲೆಯೆತ್ತಬೇಕು.. ಆಹಾ.. ಅದೆಂತಹ ದೃಶ್ಯ ಚಿತ್ತಾರ...ದೈತ್ಯ ಬಂಡೆಯ ಎಡಕಲ್ಲಗುಡ್ಡ ನಮಗೆ ಯಾಕೋ ಆರಂಭದಲ್ಲಿಯೇ ಭ್ರಮ ನಿರಸನವನ್ನು ಉಂಟು ಮಾಡಿತು...
ತಲೆಯ ಮೇಲೆ ಸುಡುತ್ತಿದ್ದ ಸೂರ್ಯನ ಆರ್ಭಟ ಅದಕ್ಕೆ ಪ್ರಮುಖ ಕಾರಣವೇನೋ..
ನಾನು, ರಾಘು, ಕಿಟ್ಟು, ಮೋಹನ ಟ್ಯೂಬ್ ತೂತಾದ ಟೈರಿನಂತೆ ನಿಧಾನವಾಗಿ ಗುಡ್ಡವನ್ನೇರತೊಡಗಿದೆವು..
ಮುಂದೆ ಹಾಗೂ ಹಿಂದೆ ಹುಡುಗಿಯರ ಹಿಂಡಿದ್ದರಿಂದ ನಮಗೆ ಕೊಂಚ ಉತ್ಸಾಹ ಬಂದಿತ್ತು.. ಅಷ್ಟೇ..
ಆದಿ ಮಾನವರು ಚಿತ್ರ ಬಿಡಿಸಿದ್ದಾರಂತೆ ಎನ್ನುವ ಮಾಹಿತಿ ಅದೆಲ್ಲಿಂದಲೋ ನಮ್ಮ ಬಳಿ ತೂರಿ ಬಂದಿತು..
ನಾವು ಅಲ್ಲಿ ದೊಡ್ಡ ಕಣ್ಣು ಮಾಡಿಕೊಂಡು ನೋಡಿದರೂ ಆದಿಮಾನವರ ಬರಹದ ಕುರುಹುಗಳು ಕಾಣಲಿಲ್ಲ..
ಸಿಮೆಂಟಿನ ದಾರಿ, ಕಬ್ಬಿಣದ ಹಿಡಿಕೆಗಳಿದ್ದವು..
ಇದು ಆದಿಮಾನವನ ಕೆಲಸವಲ್ಲ.. ಆಧುನಿಕ ಮಾನವನ ಕೆಲಸ ಎಂಬುದು ಖಾತ್ರಿಯಾಯಿತು..
ಎಡಕಲ್ಲು ಗುಡ್ಡಕ್ಕೆ ಸಾವಿರಾರು ಜನರು ಬರುತ್ತಾರೆ... ನಾವು ಮೇಲೆ ನೋಡಿದರೆ ಗುಡ್ಡದ ತುದಿಯಲ್ಲಿ ಇರುವೆಗಳಂತೆ ಜನರು ಕಂಡರು..
ನಾವೂ ಅಷ್ಟೇ ಇರುವೆಗಳಂತೆ ನಿಧಾನವಾಗಿ ಏರುತ್ತಿದ್ದೆವು..
ಏರಲು ಹಾಗೂ ಇಳಿಯಲು ಇದ್ದುದು ಒಂದೇ ದಾರಿಯಾದ್ದರಿಂದ ಆಗಾಗ ಟ್ರಾಫಿಕ್ ಜ್ಯಾಂ ಆಗುತ್ತಿತ್ತು...
ಅರ್ಧಮರ್ಧ ಏರುವ ವೇಳೆಗೆ ಮೈಯೆಲ್ಲ ಬೆವರಿನ ತೊಪ್ಪೆ.. ನಮ್ಮ ಕೆಳಗೆ ಇದ್ದವರೂ ಅಷ್ಟೇ ಏದುಸಿರಿನಿಂದ ಹತ್ತುತ್ತಿದ್ದರು..
ಅಂತೂ ಇಂತೂ ಮೇಲೇರಿದರೆ ದೊಡ್ಡದೊಂದು ಗುಹೆ..
ಮತ್ತೆ ಎಡಕಲ್ಲು ಗುಡ್ಡದ ಚಂದ್ರಶೇಖರ್, ಜಯಂತಿ ನೆನಪಾಗಿ `ವಿರಹ....'
ಖಂಡಿತ ಇದು ಆದಿ ಮಾನವನ ಕಾಲದ ಜಾಗ ಹೌದು...
ಗುಹೆಯ ಒಳಗೆಲ್ಲ ಅದೆಷ್ಟೋ ವರ್ಷಗಳ BC ಕಾಲದ್ದು.. 4-5 ಸಹಸ್ರ ವರ್ಷಗಳಿಗಿಂತ ಪುರಾತನ ಚಿತ್ರಗಳು ಬಂಡೆಯ ಮೇಲೆ ಕೆತ್ತನೆಯಾಗಿದ್ದವು,,,
ಹಲವು ಗಳು ಮಳೆ ಗಾಳಿ ಪ್ರವಾಸಿಗರ ಅಬ್ಬರಕ್ಕೆ ಕರಗಿದ್ದವು, ವಿರೂಪಗೊಂಡಿದ್ದವು...
ಮತ್ತಷ್ಟು ಚನ್ನಾಗಿದ್ದವು... ಚಿತ್ರಗಳನ್ನು ನೋಡಿ ನಮ್ಮ ನಮ್ಮಲ್ಲೇ ಅಂದಾಜು ಮಾಡಲು ಯತ್ನಿಸಿದೆವು..
`ಅದೋ ನೋಡಿ.. ಆ ಮೂರು ಚಿತ್ರಗಳ ಅರ್ಥ.. ನಾನು ಹೇಳ್ತೇನೆ ಎಂದು ರಾಘು ಮುಂದಾದ..
ಬಡ್ಡೀಮಕ್ಕಳಾ... ಇದ್ದ ಸಮಯ ಹಾಳ್ ಮಾಡ್ಕೊಂಡು ಇಲ್ಲಿಗೆ ಬಂದ್ರಾ... ವಯನಾಡು ಚನ್ನಾಗಿದೆ ಅಂದವರ ಬಾಯಿಗೆ ಮಣ್ಣು ಹಾಕಾ..' ಅಂತ ಬರೆದಿದೆ ಕಣೋ ಎಂದ... ನಾವು ತಲೆಯನ್ನು ಹೌದೌದು ಎಂದು ಹಾಕಬೇಕೆಂದುಕೊಳ್ಳುವಷ್ಟರಲ್ಲಿ ಆತ ಹೇಳಿದ ಮಾತಿನ ಅರ್ಥವಾಗಿ ಪೆಚ್ಚಾದೆವು...
ದೈತ್ಯ ಬಂಡೆ .. ನಮ್ಮ ಯಾಣಕ್ಕಿಂತ ಒಂದೆರಡುಪಟ್ಟು ದೊಡ್ಡದು..
ಸಮಾ ಮಧ್ಯದಲ್ಲಿ ಗುಹೆ..
ಆ ನಂತರವೂ ಗುಡ್ಡ ಏರುವುದು ಬಾಕಿ ಉಳಿಯುತ್ತದೆ..
ಇಲ್ಲೊಂದ್ನಾಲ್ಕು ಪೋಟೋಗಳನ್ನು ಕ್ಲಿಕ್ ಎನ್ನಿಸಿ ಮತ್ತೆ ಮೇಲೇರುವ ಹವಣಿಕೆ ನಮ್ಮದು..
ಟ್ರಾಫಿಕ್ ಜ್ಯಾಂ ನಿರಂತರ ಸಾಗಿತ್ತು..
ಬಿಸಿಲು, ಟ್ರಾಫಿಕ್ಕುಗಳು ನಮ್ಮನ್ನು ಮತ್ತಷ್ಟು ಹಣ್ಣು ಮಾಡಿದೆವು..
ಗುಡ್ಡವೇರುವ ಮುನ್ನ ಹೊಟ್ಟೆಯೊಳಗೆ ಇಳಿದಿದ್ದ ಕೋಲ್ಡು ಆಗಲೇ ಕರಗಿ ಉಪ್ಪು ಬೆವರಾಗಿ ಹೊರಬಿದ್ದಾಗಿತ್ತು..
ಅಂತೂ ಇಂತೂ
ಓಡೋಡಿ ಮುಟ್ಟಿದ ಬೆಟ್ಟದ ತುದಿಯಲ್ಲಿ ಏನಿದೆ ಬಟ್ಟಾ ಬಯಲು....!!!
ನಮ್ಮಲ್ಲಿ ಗುಡ್ಡದ ತುದಿಗೆ ನಿಂತು ಕೆಳಗೆ ನೋಡಿದರೆ ಹಸಿರು ಸಾಲು ಕಾಣುತ್ತದೆ.. ಮನಸ್ಸು ಹಸಿಯಾಗುತ್ತದೆ..
ಆದರೆ ಅಲ್ಯಾಕೋ ಹಾಗಾಗಲೇ ಇಲ್ಲ..
ಯಾಣ ಮತ್ತೆ ನೆನಪಾಯಿತು..
ಯಾಣದಲ್ಲಿಯೂ ಮೆಟ್ಟಿಲು ಮಾಡಿ ಅದರ ತುದಿಯನ್ನು ಮುಟ್ಟಿದರೆ ಯಡಕಲ್ಲು ಗುಡ್ಡಕ್ಕಿಂತ ಹೆಚ್ಚು ವರ್ಡ್ ಫೇಮಸ್ಸಾಗಬಹುದಲ್ಲವಾ ಅನ್ನಿಸಿತಾದರೂ ಬಾಯ್ಬಿಟ್ಟು ಹೇಳಲಿಲ್ಲ..
ಎಡಕಲ್ಲು ಗುಡ್ಡ ಯಾಕೋ ನಮಗೆ ಪರಮ ನಿರಾಸೆಯನ್ನು ಉಂಟು ಮಾಡಿತು..
ಏನೆಲ್ಲಾ ಅಂದುಕೊಂಡಿದ್ದೆವು... ಊಹೂಂ.. ಏನೇನೂ ಅನ್ನಿಸಲಿಲ್ಲ...
ಇದನ್ನು ನೋಡೋಕೆ ಇಷ್ಟು ಕಷ್ಟ ಪಡಬೇಕಿತ್ತಾ... ಅನ್ನಿಸಿತು..
ಜೋಭದ್ರ ಮುಖವನ್ನು ಮಾಡಿಕೊಂಡು ಗುಡ್ಡವಿಳಿದು ಬಂದೆವು...
ಹಸಿವು ಬಾಯಾರಿಕೆ ಕಾಡುತ್ತಿತ್ತು..
ಬಾಯಲ್ಲಿ ಶಾಪ... ವಯನಾಡು ಹಾಗಿದೆಯಂತೆ... ಹೀಗಿದೆಯಂತೆ ಎಂಬ ನಮ್ಮ ಕಲ್ಪನೆಗಳೆಲ್ಲ ಕರಗಿ ನೀರಾಗಿದ್ದವು..
ಅಷ್ಟೇ ಅಲ್ಲದೇ ಅಲ್ಲಿ ಸುತ್ತಮುತ್ತ ಇನ್ನೇನನ್ನೂ ನೋಡಬೇಕು ಎನ್ನಿಸಲೇ ಇಲ್ಲ.. ನಮ್ಮ ುತ್ಸಾಹವನ್ನು ಒಂದೇಟಿಗೆ ಢಮ್ಮಾರ್ ಎನ್ನಿಸಿತು ಗುಡ್ಡ.. ಗುಡ್ಡಕ್ಕೆ ಝೈ...
ನಾವು ಕೆಳಗೆ ಇಳಿದಂತೆ ಮ,ತ್ತೆ ಹತ್ತೆಂಟು ಟೆಂಪೋಗಳು, ಜೀಪುಗಳು ಜನರನ್ನು ಒಯ್ಯುತ್ತಿದ್ದವು..
ಅವರ ಬಳಿ ಯಾಕ್ ಸುಮ್ನೇ ವೇಸ್ಟ್ ಮಾಡ್ಕೋತೀರಿ ಟೈಮನ್ನಾ,... ಎನರ್ಜಿಯನ್ನಾ ಅನ್ನೋಣ ಎನ್ನಿಸಿತು...
ಆದರೂ ಅನುಭವಿಸಿಲಿ ಬಿಡಿ ಎಂದು ಸುಮ್ಮನಾದೆವು..
ಅವರವರ ಟೇಸ್ಟು ಅವರವರಿಗೆ.. ಸದಾ ಗುಡ್ಡ ಬೆಟ್ಟದ ಮಡಿಲಲ್ಲೇ ಇರುವ ನಮಗೆ ಇದು ಅಷ್ಟು ಇಷ್ಟವಾಗದಿರಬಹುದು.. ಅವರಿಗೆ ಹೀಗಾಗದೇ ಇರಬಹುದಲ್ಲ ಎನ್ನುವ .....ರೇ ಗಳು ನೆನಪಿಗೆ ಬಂದು ಸುಮ್ಮನಾಗಿದ್ದು ಹೆಚ್ಚು..
ಮುಂದ..?
ಎನ್ನುವ ಪ್ರಶ್ನೆ ಮೂಡುವ ಮುನ್ನ ನಮ್ಮ ವಾಹನ ನಿಲ್ಲಿಸಿದ್ದ ಸ್ಥಳದ ಬಳಿಯಿದ್ದ ಹೊಟೆಲಿಗೆ ಧಾಳಿ ಇಟ್ಟು ತಂಪು ಪಾನೀಯ ಎಳನೀರಿಗೆ ಮೊರೆ ಹೋದದ್ದಾಯಿತು.. 20-25 ರು. ಹೇಳಿದ...
ರೇಟೆ ಜಾಸ್ತಿಯಾಯಿತೆನ್ನುವ ಉರಿ ಬಿದ್ದರೂ ಜಗಳವಾಡಲು ತ್ರಾಣವಿರಲಿಲ್ಲ..
ಗುಡ್ಡದ ಸುತ್ತಮುತ್ತ ನಿಜಕ್ಕೂ ಒಳ್ಳೊಳ್ಳೆಯ ತಾಣಗಳಿದ್ದವು.. ಒಂದೆರಡು ಜಲಪಾತ, ಟೀ ಎಸ್ಟೇಟುಗಳಿದ್ದವು..
ಆದರೆ ನಮ್ಮ ತ್ರಾಣವಿರಲಿಲ್ಲ..
ವಯನಾಡು, ಬಿಸಿಲು ನಮಗೆ ಬೇಸರ ತಂದಿತ್ತು..
ಮರಳೋಣ ಎಂದು ನಮ್ಮಲ್ಯಾರೋ ಹೇಳಿದ್ದನ್ನು ಬೇಡ ಎನ್ನುವ ಮನಸ್ಸೂ ಕೂಡ ಯಾರಿಗೂ ಇರಲಿಲ್ಲ.. ಮರಳಿ ಹೊರಟೆವು...
ಸುಲ್ತಾನ್ ಬತ್ತೇರಿಗೆ ಬರುವ ವೇಳೆಗೆ ಹೊಟ್ಟೆಯೊಳಗಿನ ಹುಳಗಳೆಲ್ಲ ಸತ್ತುಹೋದಂತಹ ಅನುಭವ...
ಸುಲ್ತಾನ್ ಬತ್ತೇರಿಯಲ್ಲಿ ಶುದ್ದ ಸಸ್ಯಾಹಾರಿ ಹೊಟೆಲುಗಳು ಸಿಗಬೇಕಲ್ಲ ಮಾರಾಯ್ರೆ..
ರಣ ಬಿಸಿಲಿನಲ್ಲಿ ಹೊಟೆಲ್ ಹುಡುಕಲು ತ್ರಾಣವಿಲ್ಲ..
10 ನಿಮಿಷ ಹುಡುಕಿದ ಮೇಲೆ ಸಸ್ಯಾಹಾರಿ ಹೊಟೆಲು ಲಭ್ಯ.. ಊಟ ಮಾಡಿ ಹೊರಡುವ ವೇಳೆಗೆ ಸೂರ್ಯ ಕೊಂಚ ತಣ್ಣಗಾಗುತ್ತಿದ್ದ..
ಮುಂದೇನು ಮಾಡೋದು..? ಮಾನಂತವಾಡಿಗೆ ಹೋಗೋಣ್ವಾ..? ಮಂಜಿಲ ಬೆಟ್ಟ ಎಂದು ಫೇಮಸ್ಸಾಗಿರುವ ಮಂದಾಲಬಟ್ಟಕ್ಕೆ ಹೋಗೋದಾ..? ಚರ್ಚೆಗೆ ಸ್ಪಷ್ಟ ಉತ್ತರ ಸಿಗಲಿಲ್ಲ..
ವಾಪಾಸಾಗೋಣ ಎನ್ನುವ ಉತ್ತರಕ್ಕೆ ಬಹುಮತ ಲಭ್ಯವಾದ ಕಾರಣ ಹಾಗೆಯೇ ಮಾಡೋಣ ಎಂದೆವು..
ಕಲ್ಲಿಕೋಟೆ -ಬೆಂಗಳೂರು ಹೈವೆ ಹಿಡಿದು ಹೊರೆಟೆವು..
ದಾರಿ ಕಳೆಯಲು ಏನೂ ಇಲ್ಲವೇ..? ಹಸಿರು ಕಾನನದ ದಾರಿಯಾದರೂ ಎಡಕಲ್ಲು ಗುಡ್ಡದ ಎಫೆಕ್ಟು ಭೀಕರವಾಗಿತ್ತು..
ನಾನು ಮೋಹನ ಒಂದು ಬೈಕಿನಲ್ಲಿ.. ಕಿಟ್ಟು ರಾಘು ಇನ್ನೊಂದರಲ್ಲಿ..
ಒಮ್ಮೆ ನಾವು ಮುಂದೆ.. ಇನ್ನೊಮ್ಮೆ ಅವರು...
ಅದೆಲ್ಲೋ ಒಂದು ಕಡೆ.. ಇನ್ನೂ ಕೇರಳದ ಫಾಸಲೆಯಲ್ಲೇ ಇದ್ದೆವು..
ಒಂದು ಬೈಕಿನಲ್ಲಿ ಯಾರೋ ಒಬ್ಬ ಮಧ್ಯವಯಸ್ಕ ಕಾಲೇಜು ಹುಡುಗಿಯನ್ನು ಬೈಕಿನ ಮೇಲೆ ಕರೆದೊಯ್ಯುತ್ತಿದ್ದ.. ನಾನು-ಮೋಹನ ಅವರ ಬೆನ್ನು ಬಿದ್ದೆವು..
ನಾವು ಮುಂದಕ್ಕೆ ಹೋಗೋದಿಲ್ಲ..
ಅವರಿಗೂ ಮುಂದಕ್ಕೆ ಬಿಡೋದಿಲ್ಲ..
ತರಹೇವಾರಿ ಡೈಲಾಗುಗಳನ್ನು ಹೊಡೆಯುತ್ತ ಸಾಗಿದೆವು..
ಕೊನೆಗೊಮ್ಮೆ ಆತನಿಗೆ ಸಿಟ್ಟು ಬಂದಿರಬೇಕು..
ಮಲೆಯಾಳಿಯಲ್ಲಿ ಏನೇನೋ ಕಾಂಜಿ ಪೀಂಜಿ ಅಂದ..
ನಾವು ಓವರ್ರ್ ಸ್ಪೀಡಿನಲ್ಲಿ ಮುಂದಕ್ಕೆ ಹೋದೆವು..
ಆತ ಸುಮ್ಮನೆ ಹಿಂದುಳಿದ..
10-15 ಕಿ.ಮಿ ಹೀಗೆ ಸಾಗಿದ ನಂತರ ಅಲ್ಲೊಂದು ಅಂಗಡಿ ಬಳಿ ರಾಘು-ಕಿಟ್ಟು ನಿಂತಿದ್ದರು..
ಅವರಿಗೆ ನಮ್ಮ ಸ್ಟೋರಿ-ಕಥೆಯನ್ನು ಹೇಳಿದಾಗ ಸ್ಮೈಲೋ ಸ್ಮೈಲು..
ಅಂಗಡಿಯಲ್ಲಿ ಬಾಳೆ ಹಣ್ಣು ಇತ್ಯಾದಿ ಇತ್ಯಾದಿಯನ್ನು ಕೊಂಡು ಮುಂದಡಿಯಿಟ್ಟರೆ ಅಭಯಾರಣ್ಯ ಆರಂಭ..
ಅಭಯಾರಣ್ಯವಿದೆ ಎನ್ನುವುದರ ಕುರುಹಾಗಿ ಎಚ್ಚರಿಕೆ ಬೋರ್ಡುಗಳಿದ್ದವು..
ಅಭಯಾರಣ್ಯ ಹಾಯ್ದ ಮೇಲೆ ಅಲ್ಲೆಲ್ಲೋ ಕರ್ನಾಟಕ-ಕೇರಳ ಬಾರ್ಡರ್ ಚೆಕ್ ಪೋಸ್ಟ್ ಸಿಕ್ಕಿತು.. ಅದನ್ನು ದಾಟಿದ ನಂತರ ಏನೋ ಭಯಂಕರ ಹುಮ್ಮಸ್ಸು...
ಸೂರ್ಯ ಇಳಿಮುಖನಾಗುತ್ತಿದ್ದ..ನಮಗೆ ಕಣ್ಣಲ್ಲಿ ನಿದ್ದೆ ಎಳೆದೆಳೆದು ಬರುತ್ತಿತ್ತು...
ಅಲ್ಲೊಂದು ಕಡೆ ಅಭಯಾರಣ್ಯದ ನಡುವೆ ಬೈಕು ನಿಲ್ಲಿಸಿ ಪಕ್ಕದ ಮೋರಿಯ ಕಟ್ಟೆಯ ಮೇಲೆ ಪಾಚಿಕೊಂಡಾಗ ನಿದ್ದೆಯೆಂಬ ಮಾಯೆ...ಅದ್ಯಾವಾಗಲೋ ಎಚ್ಚರಾಗಿ ಹೊರಡಬೇಕೆನ್ನುವಷ್ಟರಲ್ಲಿ ಯಾರೋ ಒಬ್ಬ ಪುಣ್ಯಾತ್ಮ ಬಂದು ಇಲ್ಲಿ ಮಲಗಬಾರದು ಕಾಡು ಪ್ರಾಣಿಗಳು ಬರುತ್ತವೆಂದೂ ಎಚ್ಚರಿಕೆ ನೀಡಿದ.. ಸರಿಯೆಂದು ಹೊರಟೆವು...
ಮುಂದೆ ಬಂದಂತೆಲ್ಲ ಕಾಡು ದಟ್ಟವಾಯಿತು..
ಅಲ್ಲೊಂದು ಕಡೆ ಒಂದು ಭಾಗದಲ್ಲಿ ಕೆರೆಯಿತ್ತು..
ಮತ್ತೊಂದು ಕಡೆ ಫಾರೆಸ್ಟ್ ಹೌಸ್.. ಒಂದಿಷ್ಟು ಜನ ನಿಂತು ನೋಡುತ್ತಿದ್ದರು.. ಮತ್ತಷ್ಟು ಜನ ಪೋಟೋ ಕ್ಲಿಕ್ಕಿಸುವಲ್ಲಿ ನಿರತರಾಗಿದ್ದರು.. ಕೆರೆಯ ಬದಿಯಲ್ಲಿ ಆನೆ ನಿಂತಿತ್ತು..
ನಾವು ಅದನ್ನು ನೋಡಿ ಮುನ್ನಡೆಯುವಷ್ಟರಲ್ಲಿ ಅಲ್ಲಿದ್ದ ಜನರು ಏಕೋ ಏನೋ ಕೋಗಿದರು..
ನಾವು ಅದರ ಕಡೆಗೆ ಗಮನ ಹರಿಸದೇ ಮುನ್ನಡೆದೆವು..
ಅಲ್ಲೆಲ್ಲೋ ರಸ್ತೆಯ ಪಕ್ಕದಲ್ಲಿ ಆನೆಯ ಕೂಗುವಿಕೆ.. ಗೀಳಿಡುತ್ತಿತ್ತು..
ನಾನು ಮೋಹನ ಮುಂದಕ್ಕಿಟ್ಟರೆ ಅಲ್ಲೊಂದು ಮರಿಯಾನೆ.. ನಮ್ಮೆದುರಿನಲ್ಲಿ 50 ಮೀಟರ್ ಫಾಸಲೆಯಲ್ಲಿತ್ತು.. ಅಲ್ಲೊಂದು ಮಂಗ ಆನೆಯ ಎದುರು ಕೀಟಲೆ ಮಾಡಿತೇನೋ.. ರಪ್ಪನೆ ಎತ್ತೆಸೆದು ಮಟ್ಯಾಶ್ ಮಾಡಿ ಮತ್ತೆ ಘೀಳಿಟ್ಟಿತು..
ನಾವು ಮುಂದಕ್ಕೆ ಹೋಗುವುದೋ ಬೇಡವೋ ಗೊಂದಲ..
ಹಿಂದಿದ್ದವರು ಕೂಗಿದರು.. ರೊಯ್ಯನೆ ಗಾಡಿ ತಿರುಗಿಸುವಷ್ಟರಲ್ಲಿ ಆನೆ ನಮ್ಮತ್ತ ನುಗ್ಗುವ ರೀತಿ ಮಾಡಿತು..
ಮೀಟರುಗಟ್ಟಲೆ ದೂರದಲ್ಲಿ ನಾವು ಬಚಾವ್..
ಅಲ್ಲಿದ್ದ ಫಾರೆಸ್ಟ್ ಒಬ್ಬಾತ ಬಯ್ಗುಳ ಸುರಿಸುವಷ್ಟರಲ್ಲಿ ರಾಘು-ಕಿಟ್ಟು ಬಂದರು..
ಅವರಿಗೆ ಹಿಂಗಿಂಗೆ.. ಹಿಂಗಿಂಗೆ ಎಂದು ಹೇಳುವಷ್ಟರಲ್ಲಿ ಅವರಿಂದಲೂ ಮಂತ್ರಾಕ್ಷತೆ..
ಅಲ್ಲಿ ಆನೆಯಿದೆ ಎನ್ನುವುದು ನಮಗೆಂತ ಕನಸೆ..? ಎಂಬ ಪ್ರಶ್ನೆಗೆ ಉತ್ತರವೇ ಸಿಗಲಿಲ್ಲ..
ಇರ್ಲಿ ಬಿಡಿ..
ಆ ಆನೆಮರಿಗೆ ಅದ್ಯಾವಾಗಲೋ ಪ್ರವಾಸಿಗರ ಜೀಪೋಂದು ಡಿಕ್ಕಿ ಹೊಡೆದಿತ್ತಂತೆ...ಸದಕ್ಕೆ ಸಿಟ್ಟಿತ್ತು..
ಸೋ ಕಂಡಕಂಡವರ ಮೇಲೆ ಎಗರಿ.. ಮೈಮೇಲೆ ಬರುತ್ತಿತ್ತು...
ಮಂಗನ ಕಥೆ ಮಟ್ಯಾಶಿಗೂ ಅದೇ ಕಾರಣ..
ಸುಮಾರು ಹೊತ್ತಾದ ಮೇಲೆ ವಾತಾವರಣ ತಿಳಿಯಾಯಿತು..
ನಾವು ಎಸ್ಕಾರ್ಟಿನಲ್ಲಿ ಕೆಲ ದೂರ ಹೊರಟೆ ಬಂಡಿಪುರ ಅರಣ್ಯದಿಂದ ಹೊರ ಬೀಳುವ ವೇಳೆಗೆ ಸೂರ್ಯ ಪಶ್ಚಿಮ ದಿಕ್ಕಲ್ಲಿ ಸವಾರಿ ಹೊರಟಿದ್ದರೂ ಬೆವರೋ ಬೆವರು...
ಮುಂದೆ ಮತ್ತೆ ಯಥಾ ಪ್ರಕಾರ ಗುಂಡ್ಲುಪೇಟೆಯನ್ನು ಹಾಯ್ದು ಬಂದೆವು..
ಅಲ್ಲೆಲ್ಲೋ ಒಂದು ಕಡೆ ಕಲ್ಲಂಗಡಿ ಹಣ್ಣನ್ನು ಕಂಡಿದ್ದೇ ನಮ್ಮ ನಾಲಿಗೆಯಲ್ಲಿ ಚವುಳು ನೀರು..
ಕೊಂಡೆವು..
ರಸ್ತೆ ಪಕ್ಕ ಗಾಡಿ ನಿಲ್ಲಿಸಿ ಅಲ್ಲೊಬ್ಬರ ಹೊಲದ ಪಕ್ಕ ಹಣ್ಣು ತಿನ್ನಲು ಕುಳಿತರೆ ಹೊಲದೊಡೆಯ ಬಂದವನೇ ಏನ್ ಸಾ ಬೆಂಗ್ಲೂರಾ ಎಂದ.. ಹುಂ ಅಂದೆವು.. ಉಸಾರು.. ರಾತ್ರಿ ಇಲ್ಲೆ ಉಳ್ಕಂಡ್ ಬಿಡಬ್ಯಾಡಿ.. ಕಾಡು ಪ್ರಾಣಿಗಳು ಬತ್ತಾವೆ.. ಅಂದ.. ಹುಂದ ಅಂದೆವು.. ಹಾವೈತೆ ಸಾ. ಎಂದ.. ಹುಂ ಅಂದೆವು.. ಮತ್ತೂ ಇನ್ನೇನೇನೋ ಹೇಳುವವನಿದ್ದ.. ನಾವು ಆತನ ಭಯ ಹುಟ್ಟಿಸುವ ಮಾತುಗಳಿಗೆ ಬಗ್ಗೋದಿಲ್ಲ ಎಂದಾಗ ಸಾರ್ ನಮ್ ಹೊಲದಿಂದ ಬೇಗ ಹೊಂಟೋಗಿ ಎನ್ನುವ ದಯನೀಯ ಮಾತಿಗೆ ಆಯ್ತು ಎಂದೆವು.. ನಮಗೆ ನಾಲ್ಕು ಹಿತನುಡಿ ಆಡಿರ್ತಕ್ಕಂತ ಆತನಿಗೆ ಒಂದೆರಡು ಹೋಳು ಕಲ್ಲಂಗಡಿ ನೀಡಿದ ನಂತರ ಾತ ಸಮಾಧಾನ ಪಟ್ಟನೆಂದು ಕಾಣ್ತದೆ..
ನಾವು ಮುಂದಕ್ಕೆ ಹೊರಡುವ ವೇಳಗೆ ಕತ್ತಲಾವರಿಸಿತ್ತು..
ಮೈಸೂರಿನಲ್ಲಿ ಊಟ ಮಾಡಿ ಬೆಂಗಳೂರಿನ ಹಾದಿ ಹಿಡಿವಾಗ ಜಾವ ಸುಮಾರಾಗಿತ್ತು..
ಮರುದಿನದ ಆಫಿಸಿನ ಕೆಲಸ ಮತ್ತೆ ಮನಸ್ಸಿನಲ್ಲಿ ಕೊರೆಯುತ್ತಿತ್ತು...
ಹೋಗಿ ಬಂದ ಟ್ರಿಪ್ಪಿನ ಖುಷಿಯೂ ಸಮತೂಕದಲ್ಲಿತ್ತು..
(ಮುಗಿಯಿತು)