ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 3
ಮಾಸಿಲ ಮಣಿಯಿಂದ ಕಣ್ಣೆತ್ತಿ ನೋಡಿದರೆ ದೂರದಲ್ಲಿ ಊಟಿಯ ಗಿರಿಶಿಖರಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ...
ಬಾನು ಚುಂಬಿಸಿದಂತೆ ಕಾಣು ಈ ಗಿರಿಶಿಖರಗಳ ಮರೆಯಿಂದ ಸೂರ್ಯ ಆಣುಕುತ್ತಾನೆ..
ಆಗ ಕಾಣುವ ದೃಶ್ಯ ಚಿತ್ತಾರ ವರ್ಣನೆಗೆ ನಿಲುಕದ್ದು..
ಇಲ್ಲಿ ಕೊಂಚ ಮಾಸಿಲಮಣಿಯ ರಸ್ತೆಯ ಬಗ್ಗೆ ಹೇಳಬೇಕು...
ಮೈಸೂರಿನಿಂದ ಊಟಿಗೆ ಹೋಗುವುದಾದರೆ ಮುಖ್ಯವಾಗಿ ಇರುವುದು ರಾಷ್ಟ್ರೀಯ ಹೆದ್ದಾರಿ.. ಬಂಡಿಪುರದಿಂದ ಮಧುಮಲೈ ಅರಣ್ಯಕ್ಕೆ ಪ್ರವೇಶ ಮಾಡುವಾಗ ಒಂದು ಡಾಂಬರು ರಸ್ತೆ ಸಾಗುತ್ತದೆ.. ಇದು ಮಾಸಿಲಮಣಿಯ ಮೂಲಕ ಊಟಿಗೆ ಹೋಗುತ್ತದೆ.. ರಾಷ್ಟ್ರೀಯ ಹೆದ್ದಾರಿಯ ಮೂಲಕ ಘಟ್ಟ ಹತ್ತಿದರೆ 65-70 ಕಿ.ಮಿ ದೂರ. ಆದರೆ ಮಾಸಿಲ ಮಣಿಯದ್ದು ಶಾರ್ಟ್ ಕಟ್ ರಸ್ತೆ.. 36-40 ಕಿ.ಮಿಗೆ ಊಟಿ ಕಾಣಬಲ್ಲದು..
ರಸ್ತೆ ಚನ್ನಾಗಿದೆ ಎಂದು ಯಾರೋ ಹೇಳಿದರು..
ನಾವು ಹೊರಟೆವು..
ಅದು ನೋಡಿದರೆ ಯದ್ವಾತದ್ವಾ ಘಟ್ಟ...
36 ಕಿ.ಮಿ ಏರುವಷ್ಟರಲ್ಲಿ 70 ಕಿ.ಮಿ ಸುತ್ತಿಬಂದಷ್ಟೇ ಅನುಭವವಾಗುತ್ತದೆ.. ಹೆಚ್ಚೂ ಕಡಿಮೆ 65 ಡಿಗ್ರಿ ಕೋನದಲ್ಲಿ ಏರಬೇಕು..
ಹತ್ತಿರ ಹತ್ತಿರ 70ಕ್ಕೂ ಹೆಚ್ಚು ಹೇರ್ ಪಿನ್ ತಿರುವುಗಳು.. ಟೆರ್ರಿಬಲ್...
ನಮ್ಮ ಹುಚ್ಚುಖೋಡಿಗೆ ಇದೆಲ್ಲಾ ಎಲ್ಲಿ ತಾಗ್ತದೆ ಹೇಳಿ...
ಸಿನೆಮಾ ಇದ್ದಿದ್ದು ತ್ರೀ ಈಡಿಯೆಟ್ಸ್ ಆದರೂ ನಾವು ಫೋರ್ ಈಡಿಯೆಟ್ಸ್ ಹೊರಟಿದ್ದೆವು...
ಏನೋ ಥ್ರಿಲ್ಲು... ಮನಸ್ಸು ಫ್ರಿಲ್ಲು...
ಮಂಗದ ಜೊತೆಗೆ ಮಂಗನಾಟ...
ಮಾಸಿಲಮಣಿಯಲ್ಲಿ ಚಾ ಕುಡಿದ ಸುದ್ದಿ ಆಗಲೆ ಹೇಳಿದ್ದೇನೆ...
ಇಬ್ಬನಿ ತಬ್ಬಿದ ಇಳೆಯಲ್ಲಿ...4-5 ಕಿ.ಮಿ ಸಾಗಿದೆವು...ಅಲ್ಲೊಂದು ಸೇತುವೆ...
ಮಂಗಗಳ ಸಾಲು..
ರಸ್ತೆಗಡ್ಡಲಾಗಿ ನಿಂತಿದ್ದವು...
ನಾವು ಗಾಡಿ ನಿಲ್ಲಿಸಿದೆವು..
ಮಂಗಗಳು ಮುಗಿಬಿದ್ದಿದ್ದವು..
ಓಡಿಸಿದೆವಾದರೂ ಒಂದು ಮಂಗ ಅಲ್ಲಾಡಲೇ ಇಲ್ಲ...
ಸುತ್ತೆಲ್ಲ ಕಾಡು..
ನಾವು ನಿಂತದ್ದು ಸೇತುವೆಯ ಮೇಲೆ...
ಬೈಕಿನ ಹಾರನ್ ಸದ್ದಿಗೆ ಮಂಗ ಹೆದರಲಿಲ್ಲ...
ನಮ್ಮಂತವರನ್ನು ಅದೆಷ್ಟು ಜನರನ್ನು ಕಂಡಿತ್ತೋ...
ಹಫ್ತಾ ವಸೂಲಿಗೆ ನಿಂತು ಬಿಟ್ಟಿತ್ತು ಅನ್ನಿಸುತ್ತದೆ.. ನಮ್ಮ ಕೈಯಲ್ಲಿ ಏನೆಂದರೆ ಏನೂ ಇರಲಿಲ್ಲ.. ಅದು ತಿನ್ನುವಂತದ್ದು...
ಇದೊಳ್ಳೆ ಗ್ರಾಚಾರಕ್ಕೆ ಬಂತಲ್ಲಾ ಸಿವಾ ಅಂದ್ಕೊಂಡೆವು...
ಮಂಗ ದಾರಿಯನ್ನು ಬಿಡುತ್ತಿಲ್ಲ...
ನಾವು ಬೈಕಿಂದ ಇಳಿದೆವು..
ಮೋಹನ ಫುಲ್ ಜೋಷಲ್ಲಿದ್ದ..
ಕೈತೋಳು ಮಡಿಸುತ್ತಲೂ ಇದ್ದ...
ಹಿಂದೆ ಕಿಟ್ಟು ಕ್ಯಾಮರಾ ರೆಡಿ ಇಟ್ಕೊಂಡಿದ್ದ...
ನಾನು ಕಾಮೆಂಟರಿ ಹೇಳಬೇಕಾ.. ಸುದ್ದಿ ಬರೆಯಲು ರೆಡಿ ಆಗಬೇಕಾ.. ಅನ್ನೋ ಗೊಂದಲದಲ್ಲಿದ್ದೆ..
ಮಂಗಕ್ಕೂ ಮೋಹನನಿಗೂ ಮಾರಾಮಾರಿ ಗ್ಯಾರಂಟಿ ಅಂದ್ಕೊಂಡಿದ್ದೆವು..
ಮೋಹನ ಬರುವ ಸ್ಟೈಲಿಗೆ ಮಂಗ ಗುರ್ ಎಂದಿತು..
ಒಮ್ಮೆ ಹಿಂದೇಟು ಹಾಕಿದ..
`ಸಾಯ್ಲಪಾ.. ಇದೊಳ್ಳೆ ಗ್ರಾಚಾರ ಬಂತಲೋ ಮಾರಾಯಾ..' ಅಂದ...
ಮಾರಾಮಾರಿಗೆ ಮುಗಿಯುವುದಿಲ್ಲ ಪ್ರಕರಣ ಅನ್ನಿಸಿತು..
ರಾಜಿ ಪಂಚಾಯ್ತಿಗೆ ಮಾಡುವುದೊಂದೆ ಬಾಕಿ...
ಇಳಿದು ರಸ್ತೆ ಪಕ್ಕದಲ್ಲಿ ಹೋಗಿ ನಿಂತೆವು.. ಸೇತುವೆ ತಡೆಗೋಡೆಯಬಳಿ ಆಪ್ತ ಸಮಾಲೋಚನೆ ಸಾಗಿತು..
ಮಂಗಕ್ಕೂ ಕುತೂಹಲ ಅನ್ನಿಸ್ತು.. ಸೀದಾ ಬಂದು ನಮ್ಮ ನಡುವೆ ಕುಳಿತಿತು..
ರಾಘವ ಸಿಕ್ಕಿದ್ದೇ ಛಾನ್ಸು ಅಂದುಕೊಂಡು ಪೋಟೋ ತೆಗೆದ...
ಮಂಗನ ಜೊತೆಗೂ ಫೋಟೋ ಸೆಷನ್ನು... ಮುಗಿಯಿತು...
ಮಂಗ ಪೋಟೋಕ್ಕೆ ಪೋಸು ಕೊಟ್ಟು... ಸುಮ್ಮನೆ ಹೋಯಿತು...
ಮಂಗನ ಭಾಷೆ ನಮೆಗ ಬರೋದಿಲ್ಲವಲ್ಲ...
`ಕಂಜೂಸಿ ನನ್ಮಕ್ಕಳು..' ಅಂತ ಬೈದಿರಬೇಕು... ಇನ್ನೇನೇನು.. `ಎ..' ಸರ್ಟಿಪೀಕೇಟ್ ಡೈಲಾಗುಗಳನ್ನು ಹೊಡೆಯಿತೋ.. ನಮಗೆ ಅರ್ಥವಾಗಲಿಲ್ಲ... ಮಂಗಕ್ಕೆ ಮಂಗನಾಟಕ್ಕೆ ಸಲಾಮು ಹೊಡೆದು ಮುಂದಕ್ಕೆ ಹೊರಟೆವು...
****
ಅಲ್ಲಿಂದ ಮುಂದೆ ಶುರುವಾದದ್ದು ಊಟಿಯ ಘಟ್ಟ..
ಅಂಕುಡೊಂಕಿನ ಹಾದಿ...
ಎಂಟೆದೆಯ ಭಂಟರೆಂಬ ಪೋಸಿನಲ್ಲಿ ನಾವು ಹತ್ತಲು ಗಾಡಿಯನ್ನು ಗುರ್ರೆನ್ನಿಸಿದೆವು...
ಎಷ್ಟೇ ಎಕ್ಸಲರೇಟರ್ ವತ್ತಿದರೂ ಗಾಡಿಯ ಕಿಲೋಮೀಟರ್ ಕಡ್ಡಿ 5-10ಕ್ಕಿಂತ ಜಾಸ್ತಿಯನ್ನು ತೋರಿಸುತ್ತಿರಲಿಲ್ಲ..
ಹೊಸ ಗಾಡಿಯಾದರೂ ಉಬ್ಬಸ ಬಿಡುತ್ತದೆಯೇ..
ಆಗಾಗ ಇಂಜಿನ್ನನ್ನು ತಣಿಸಲು 5 ನಿಮಿಷಗಳ ಬಿಡುವು...
ಅಲ್ಲೆಲ್ಲೋ...
ಬಾನಿನಿಂದ ಮುತ್ತಿನ ನೀರ ಹನಿ ಕೆಳಗಿಳಿದು ಬರುತ್ತಿತ್ತು...
ಹಣೆಯ ಮೇಲೆ ವಿಭೂತಿಯಂತೆ ನೀಳ...
ಬಿಳಿ ಮುತ್ತುಗಳು...
ದೂರದಲ್ಲಿ ಜುಳು ಜುಳು ನಿನಾದ...
ತಮಿಳು ಭಾಷೆಯಲ್ಲಿ ಜಲಪಾತದ ಹೆಸರು ಬರೆದಿತ್ತು...
ಈ ಜಲಪಾತಕ್ಕೆ ಎಂತಾ ಹೆಸರು ಎಂದು ತಲೆ ಕೆರೆದುಕೊಳ್ಳುವಷ್ಟರಲ್ಲಿ ಆಂಗ್ಲರು `ಕಲ್ಲಟ್ಟಿ ಫಾಲ್ಸ್...' ಎಂದು ಬರೆದಿಟ್ಟಿದ್ದೂ ಕಂಡಿತು..
ತಮಿಳರಿಗೆ ಬೈದು...
ಇಂಗ್ಲೀಷಿನವರಿಗೆ ಥ್ಯಾಂಕ್ಸುಗಳನ್ನು ಹೇಳಿ ಮುಂದೆ ಹೆಜ್ಜೆ ಹಾಕಿದೆವು...
ಏರಿದಂತೆಲ್ಲ... ತೂಕ ಕಳೆದುಕೊಳ್ಳುತ್ತ ಹೋದೆವೇನೋ ಅನ್ನುವ ಅನುಭವ..
ನಾವು ಚಿಕ್ಕವರಾದಂತೆ... ಕಾಡುವ ಭಾವ..
ಮನಸ್ಸು ಉಲ್ಲಾಸಂಗಾ ಉತ್ಸಾಹಂಗಾ...
ಮೇಲೆರಿ ಒಮ್ಮೆ ಹಿಂತಿರುಗಿ ನೋಡಿದರೆ ನಾವು ಬಂದ ಜಾಗದ ಸುಳಿವೇ ಇಲ್ಲ..
ಮೋಡ ಮುತ್ತಿಕ್ಕಿ ಸಂಪೂರ್ಣ ಪ್ರದೇಶವನ್ನು ತನ್ನ ತೆಕ್ಕೆಯೊಳಗೆ ಸೆಳೆದು ಬಚ್ಚಿಟ್ಟುಕೊಂಡಿದೆ...
ಚಿಕ್ಕ ಚಿಕ್ಕ ಮನೆಗಳು ಕಾಣುತ್ತಿತ್ತು..
ಹೂಕೋಸು, ಎಲೆಕೋಸು, ಚಹಾ ಗಿಡಗಳ ಪ್ಲಾಂಟೇಷನ್ನುಗಳು ಕಾಣತೊಡಗಿದೆವು...
ವಾಸ್ತುಪ್ರಕಾರ ಊಟಿಗೆ ಬಂದಂತಾಯಿತು.. ಎಂದುಕೊಂಡೆವು...
ಬಂಡೆಗಲ್ಲಿನ ಗುಡ್ಡ, ಒಂದಕ್ಕಿಂತ ಒಂದು ದೊಡ್ಡದು.. ಅದರ ಎದುರು ನಾವು ಇರುವೆಯಂತವರು ಎನ್ನಿಸುವಂತಹ ದೈತ್ಯದೇಹಿ ಗುಡ್ಡಗಳು... ಒಂದೊಂದು ಗುಡ್ಡಕ್ಕೂ ಅಲ್ಲಿ ನೋಡಲೆ.. ಇಲ್ಲಿ ನೋಡಲೆ ವಾಹ್... ಸೂಪರ್ರ ಎನ್ನವು ಉದ್ಗಾರ..
ನಾವು ಚಳಿಗಾಲ ಸೂರ್ಯನ ಬಿಸಿಲಿಗೆ ಮೈ ಒಡ್ಡಿ ನಿಲ್ಲುತ್ತೇವೆ..
ಹವ್ಯಕರು ಅದನ್ನು ಬಿಸಿಲು ಕಾಸುವುದು ಎನ್ನುತ್ತಾರೆ..
ಊಟಿಯ ಜನರು ಬಿಸಿಲು ಕಾಯಿಸುತ್ತ ರಸ್ತೆ ಪಕ್ಕ ನಿಂತಿದ್ದರೆಂದರೆ ಊಹಿಸಿಕೊಳ್ಳಿ ಚಳಿಯ ಅಗಾಧತೆ ಎಷ್ಟಿರಬಹುದೆಂದು..
ಅಷ್ಟರಲ್ಲಿ ನಾವು ಬಿಟ್ಟು ಬಂದಿದ್ದ ರಾಷ್ಟ್ರೀಯ ಹೆದ್ದಾರಿ ಸುತ್ಹಾಕಿಕೊಂಡು ಬಂದಿದ್ದು.. ಅದನ್ನು ಹಿಡಿದು ಹೊರಟೆವು...
ಅಲ್ಲೆಲ್ಲೋ.. ಎತ್ತೆತ್ತರದ ನೀಲಗಿರಿ ಮರಗಳು...
ಮೂಗಿನ ತುಂಬ ನೀಲಗಿರಿಯ ಕಂಪು..
ಜೊತೆ ಜೊತೆಗೆ ಮೆಂಥಾಲನ್ನು ಹಾಕಿದಂತಹ ತಂಪು ತಂಗಾಳಿ ನಮ್ಮ ಮೂಗಿನ ಮೂಲಕ ನಮ್ಮ ಹೃದಯವನ್ನು ನಾಟಿ ಹಾಯೆನಿಸಿತಯ,,,..
ರಸ್ತೆಗೆ ಫ್ಲೆವರ್ಸುಗಳನ್ನು ಹಾಕಿದ್ದರು..
ಟಾರು ರಸ್ತೆಯಲ್ಲ.. ಇಂಗ್ಲೆಂಡೋ.. ನೆದರ್ಲೆಂಡೋ...
ಯಾವುದೋ ಕೌಂಟಿಯನ್ನು ನೆನಪಿಗೆ ತಂದವು...
ಊಟಿಯ ಸರಹದ್ದಿಗೆ ಬಂದಿದ್ದರೂ ಊಟಿಯ ನಗರದೊಳಗೆ ನಾವುನ್ನೂ ಕಾಲಿರಿಸಿರಲಿಲ್ಲ...
ಅದಿನ್ನೂ ಬೋರ್ಡುಗಳ ಮೂಲಕ ಹೀಗೆ ಬನ್ನಿ.. ಹೀಗೆ ಬನ್ನಿ ಎಂದು ಹೇಳುತ್ತಲೇ ಇತ್ತು...
---
ತಮಿಳರಿಗೆ ಲೆಕ್ಖ ಬರೋದಿಲ್ವಾ ಸಾರ್...
ಈ ತಮಿಳರಿಗೆ ಲೆಕ್ಖ ಸರಿಯಾಗಿ ಬರೋದಿಲ್ಲವೇ ಅನ್ನುವ ಅನುಮಾನ ಊಟಿಗೆ ಹೋಗುವಾಗ ನಮಗೆ ಆಯಿತು..ಕಿಲೋಮೀಟರು ಕಲ್ಲುಗಳಲ್ಲೆಲ್ಲ ತಪ್ಪು ತಪ್ಪು ಲೆಕ್ಖ..
ಒಂದು ಕಡೆ ಊಟಿ 10 ಕಿ.ಮಿ ಎಂದು ಬರೆಯುತ್ತಾರೆ.. ಮತ್ತೆ ನಾಲ್ಕೈದು ಕಿ.ಮಿ ಹಾದು ಬಂದ ನಂತರ ಊಟಿಯ ದೂರ 12 ಕಿಮಿ ಆಗಿರುತ್ತದೆ..
ದಾರಿ ಸಾಗಿದಂತೆಲ್ಲ ಖರ್ಚಾಗಬೇಕು ತಾನೆ.. ಆದರೆ ತಮಿಳಿಗರ ಲೆಕ್ಖ ಹೆಚ್ಚಾಗಿತ್ತು..
ನಾಲ್ಕೈದು ಕಡೆಗಳಲ್ಲಿ ಇಂತಹ ಅನುಭವ ಆದ ನಂತರ ನಮಗೆ ಲೆಕ್ಖ ಬರೋದಿಲ್ಲ ಎನ್ನುವುದು ಕನ್ ಫರ್ಮ್ ಆಯಿತು...
ಇತ್ತೀಚೆಗೆ ಜಯಲಲಿತಾ ಮು.ಮಂ ಆದ ನಂತರ ಕಾವೇರಿ ವಿಷಯದಲ್ಲಿ ಎಷ್ಟು ನೀರು ಕೊಟ್ಟರೂ ಕಡಿಮೆ ಎಂದಳಲ್ಲಾ.. ಆಗ ಪಕ್ಕಾ ಆಯ್ತು ನೋಡಿ.. ತಮಿಳಿಗರ ಲೆಕ್ಖ ಹಾಕುವ ರೀತಿ...
ಅವರಿಗೊಂಡು ವಣಕ್ಕಂ ಹೇಳುತ್ತ ನಾವು ಒಣಗಿದೆವು...
(ಮುಂದುವರಿಯುತ್ತದೆ...)