Monday, December 10, 2012

ನೀನು ಇಲ್ಲದ ವೇಳೆ : ಪ್ರೇಮ ಪತ್ರ-3

ಪ್ರೇಮ ಪತ್ರ-3

ನೀನು ಇಲ್ಲದ ವೇಳೆ

         ಅದೆಷ್ಟು ಸಹಸ್ರ ಸಾರಿ ನಾನು ನಿನ್ನನ್ನು ಮಿಸ ಮಾಡ್ಕೊಂಡಿದ್ದೀನಿ ಗೊತ್ತಾ..! ನಿನ್ನ ನೆನಪು ಬಂದಾಗಲೆಲ್ಲ ಜೊತೆಯಲ್ಲಿ ನೀನಿರಬೇಕಿತ್ತು ಕಣೆ ಅಂದ್ಕೊಂಡಿದ್ದೀನಿ. ಆಗೆಲ್ಲ ನಿನ್ನ ನೆನಪು ನನ್ನ ಕೈ ಹಿಡಿದಿದೆ.
    ಬೆಳಗಿನ ಮುಂಜಾನೆಯ ಸಂದರ್ಭದಲ್ಲಿ ಜಿಮ್ಮಿನಲ್ಲಿ ವರ್ಕೌಟ್ ಮಾಡುವಾಗ, ಸೆಮಿಸ್ಟರ್ ಮುಗಿದ ನಂತರ ಸಿಗುವ 15-20 ದಿನಗಳ ಬಿಡುವಿನ ವೇಳೆಯಲ್ಲಿ, ಸಂಜೆಯ ತಿಳಿ ಬೆಳಕಿನ ಓಡಾಟದಲ್ಲಿ, ಕಲ ಕಲನೆ ಹರಿಯುವ ಅಘನಾಶಿನಿಯ ಆಳದೊಡಲಿಗೆ ಧುಡುಮ್ಮನೆ ಜಿಗಿಯುವ ವೇಳೆಯಲ್ಲಿ, .. ಇನ್ನೂ ಅದೆಷ್ಟೋ ವೇಲೆಯಲ್ಲಿ ನಂಜೊತೆ ನೀನೂ ಇದ್ದಿದ್ರೆ ಅದೆಷ್ಟು ಹಿತವಾಗಿರ್ತಿತ್ತು.. ನನ್ನ ಜೊತೆ ನೀನು ಹೆಜ್ಜೆ ಹಾಕಿದ್ರೆ ಅದೆಷ್ಟು ಸೊಗಸಾಗಿತರ್ಿತ್ತು ಅಂತೆಲ್ಲಾ ಅಂದುಕೊಂದಿದ್ದೇನೆ.
    ನೀನು ನನ್ನ ಮನದಾಳದೊಳಗೆಲ್ಲೋ ಬಿಲ ತೋಡಿಕೊಂಡು ಕುಳಿತಿದ್ದೀಯಾ. ಹಾಗಾಗಿಯೇ ನೀನು ಬರಿ ನೆನಪಿಗೆ ಮಾತ್ರ ಬರ್ತೀಯಾ.. ಹಲೋ ಅಂದ್ರೆ ಮಾತಿಗೆ ಸಿಗೋಲ್ಲ.. ಸುಮ್ ಸುಮ್ನೆ `ಕಾಲ್ ಮಾಡು' ಅಂತೀಯಾ.. ಕಾಲ್ ಮಾಡಿದ್ರೆ ವಿಷಯವೇ ಇಲ್ಲ.. ಬರೀ ಕಾಡು ಹರಟೆ. ಮತ್ತೆ... ಮತ್ತೆ.. ಅನ್ನುವ ಶಬ್ದ ನಮ್ಮ ಒಂದು ಸಾರಿಯ ಸಂಬಾಷಣೆಯಲ್ಲಿ ಅದೆಷ್ಟೋ ಸಹಸ್ರ ಸಾರಿ ಇಣುಕಿ ಹೋಗುತ್ತೆ ಅಲ್ವಾ? ಬಿಡು.. ನೀನು ಅರಾಮಾಗಿ ಇದ್ದೀಯೇನೋ.. ನನಗೆ ನೆಮ್ಮದಿಯಿಂದೆ ನಿದ್ದೆ ಮಾಡೋಕಾದ್ರೂ ಬಿಡ್ತೀಯಾ ..? ಇಲ್ಲ.. ಕನಸ್ಸಿನಲ್ಲಿ ಬಂದುಯ ಕಾಡ್ತೀಯಾ.. !! ನಿಂಗೇನೋ ತುಂಟಾಟ. ತುಂಟ, ತಲರ್ೆ ಕ್ಷಣ. ಆದರೆ ನನ್ನ ಮನದ ಬೇಗುದಿ ನಿಂಗೆ ಹೇಗೆ ಅರ್ಥ ಆಗ್ಬೇಕು ಹೇಳು..
    ಆ ನಿನ್ನ ನಗು.. ಮನಸಾರೆ ಸಿನೆಮಾದಲ್ಲಿ ಐಂದ್ರಿತಾ ರೇ ತಿರುವುತ್ತಿದ್ದಳಲ್ಲ ಅಂತಹ ಮುಂಗುರುಳು ತಿರುಗಿಸುವಿಕೆ.. ಸುಮ್ಮನೆ ನಕ್ಕಂತೆ ಮಾಡುವ ಬಗೆ.. ಸಿಟ್ಟು ಬಂದಾಗ ರಂಗೇರುವ ಕೆನ್ನೆ ಇವೆಲ್ಲವನ್ನೂ ನಾನು ಅದೆಷ್ಟು ಮಿಸ್ ಮಾಡ್ಕೊಳ್ತಾ ಇದ್ದೀನಿ ಗೊತ್ತಾ.. ನಿನ್ನ ಬಯಕೆ ತುಂಬಿದ ಕಣ್ಣುಗಳನ್ನು ನನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುವ ಆಸೆ. ಅದಕ್ಕಾಗಿ ಕಾತರಿಸಿ ಕುಳಿತಿದ್ದೇನೆ..
    ದೋಸ್ತರೆಲ್ಲಾ ನಿನ್ನ ನೆನಪಿನ ಬಗ್ಗೆ ನಾನು ಹೇಳುವುದನ್ನು ಕೇಳಿ ನಗ್ತಾ ಇದ್ದಾರೆ. ಆದರೆ ಅವರೂ ಲವ್ ಮಾಡಿದವರೇ ಅಲ್ವಾ.. ಅವರ ಸಂಗತಿ ಬಂದಕೂಡ್ಲೇ ಗಂಭೀರವಾಗೋದನ್ನು ನೋಡಬೇಕು. ಮಜವಾಗಿರುತ್ತದೆ. ಹೇಯ್ ಇನ್ನೊಂದ್ವಿಷ್ಯ, ನಾನು ಕವನ ಬರೀದೆ ಅದೆಷ್ಟು ದಿನ ಆಗಿತ್ತು ಗೊತ್ತಾ. ಬಹು ದಿನಗಳೇ ಸರಿದಿದ್ದವು. ನಿನ್ನ ನೆನಪು ಸವಿ ಸುಖದ ಸಾನ್ನಿಧ್ಯ, ಸಾಂಗತ್ಯ ನನ್ನನ್ನು ಮತ್ತೆ ಮತ್ತೆ ಬರೆಯಲು ಪ್ರೇರೇಪಿಸುತ್ತಿದೆ. ಕವನ ಕಟ್ಟುವಂತೆ ಮಾಡುತ್ತಿದೆ.
    ಗೆಳತೀ, ಯಾಕ್ಹೀಗೆ..?
    ನೀನೆಂಬ ಭೃಂಗವೆದೆಯ
    ಗೂಡಿಗೆ ಕಿಂಡಿಕೊರೆದು
    ನಿನ್ನ ನೆನಪನ್ನೇ ಭದ್ರವಾಗಿಸಿದೆಯಲ್ಲಾ...!!

ಹೀಗಾಗಿಬಿಟ್ಟಿದೆ ನನ್ನ ಬದುಕು.
    ಓ ಹಲ್ಕಟ್ಟು ಕೂಸೆ.. ಯಾವತ್ತು ಮತ್ತೆ ನನ್ನೆದುರು ಬರ್ತೀಯಾ? ಅದ್ಯಾವಾಗ ಬಂದು ನನ್ನ ಬಳಿ ಮಾತಾಡ್ತೀಯಾ ಅಂತ ಕಾದಿದ್ದೇನೆ.ನಿನ್ನನ್ನ ಭೇಟಿ ಮಾಡಿ ಮಾತಾಡುವ ಸವಿ ಘಳಿಗೆ ಅದೆಷ್ಟು ಬೇಗ ಬರುತ್ತೋ.. ಅಂತ ನನ್ನ ಕಣ್ಣ ಮುಂದೆರಡು ಭೂತಗನ್ನಡಿಗಳನ್ನು ಸಿಕ್ಕಿಸಿಕೊಂಡು ಕಾಯುತ್ತಿದ್ದೇನೆ. ಸವಿ ನೆನಪುಗಳು ಕರಗುವುದರೊಳಗೆ ಸಿಕ್ಕಿಬಿಡು ಮಾರಾಯ್ತಿ.
    ನಿಜ ಹೇಳಬೇಕೆಂದರೆ ನನ್ನ ಬದುಕಿಗೆ ನೀನೆಂಬುದು ಚೈತನ್ಯದ ಚಿಲುಮೆ. ನೀನು ಸಿಕ್ಕಾಗಲೆಲ್ಲ ನನ್ನ ಬದುಕೆಂಬ ಮೊಬೈಲಿನ ಬ್ಯಾಟರಿ ರೀಚಾರ್ಜ್ ಆದಹಂಗೆ ಅನ್ನಿಸುತ್ತದೆ. ನೀನು ಬಹಳ ಕಾಲ ಸಿಕ್ಕದೇ ಇದ್ದರೆ ಒಂದು ರೀತಿಯ ಮಂಕು ಆವರಿಸುತ್ತದೆ. ನೀನು ಸಿಕ್ಕಿಲ್ಲ ಅಂದರೆ ಯಾಕೋ ದಿನವೆಂಬದು ಯಾವಾಗಲೂ ಇಳಿ ಸಂಜೆಯ ಥರಾ ಕಾಣಿಸ್ತದೆ ನೋಡು. ನನ್ನ ಪಾಲಿಗೆ ಖುಷಿ ಕೊಡುವ ಅಘನಾಶಿನಿ ನದಿಯೂ ನನ್ನ ಬೇಸರ ಕಂಡು ಬೇಜಾರು ಮಾಡಿಕೊಳ್ಳುತ್ತದೆ. ಅದೇ ನೀನು ಸಿಕ್ಕ ದಿನ ಮಾತ್ರ ನನ್ನ ಉಲ್ಲಾಸ ಕಂಡು ತನಗೆ ಏನೋ ಆಯ್ತೆಂಬಂತೆ ಮತ್ತಷ್ಟು ಜುಳು ಜುಳು ಸದ್ದಿನೊಂದಿಗೆ ಕಾಕಾಲ ಗದ್ದೆಯ ಕಡೆಗೆ ನನ್ನ ಅಘನಾಶಿಸಿ ಹರಿದುಹೋಗುತ್ತಾಳೆ.
    ಇರ್ಲಿ ಬಿಡು. ನಾನೆಂದರೆ ಹೀಗೆ. ಭಾವುಕ. ನೀನು ಸಿಕ್ಕಿದ ಕೂಡಲೇ ಸೆಮಿಸ್ಟರ್ ರಜೆಯಲ್ಲಿ ಪಡೆದುಕೊಂಡ ಎಲ್ಲ ಅನುಭವಗಳ ಮೂಟೆಯನ್ನು ನಿನ್ನೆದುರಿಗೆ ಬಿಚ್ಚಿಡಬೇಕು. ದೇವಿಕೆರೆ ಏರಿಯ ಸಿಂಡೀಕೆಟ್ ಬ್ಯಾಂಕಿನ ಎದುರು ಸಿಗ್ತದಲ್ಲಾ ಬೇಯಿಸಿದ ಸೇಂಗಾ.. ಅದನ್ನು ತಿನ್ನುತ್ತಾ ನೀನು ಕೇಳಬೇಕು. ಬೇಗನೆ ಸಿಗು... ನಾನಂತೂ ಕಾಯ್ತಾ ಇರ್ತೀನಿ... ಅಲ್ಲಿಯವರೆಗೂ
    ನೀನೆಂದರೆ ನನ್ನೊಳಗೆ..
    ಏನೋ ಒಂದು ಸಂಚಲನ..

ಈ ಹಾಡು ಗುನುಗುತಾ ಇರ್ತೀನೀ.. ಬೇಗ ಬಾ ಪ್ಲೀಸ್..

ಇಂತಿ ನಿನ್ನವ
ಸೃಜನ

Sunday, December 9, 2012

ಹರಿಯುತಿರಲಿ ಅಂತರಗಂಗೆ

ಹರಿಯುತಿರಲಿ ಅಂತರಗಂಗೆ


ಹರಿಯುತಿರಲಿ ಎಂದೂ ಹೀಗೆ
ಬಾಳ ಅಂತರಗಂಗೆ
ಬತ್ತದಿರಲಿ ಕೊನೆಯ ತನಕ
ಅಂತರಾಳದ ತುಂಗೆ ||1||

ಕೊನೆಯ ತನಕ ತುಂಬಿಬರಲಿ
ಹೊಸತು ಹರಿವ ನೀರು
ಕೊಚ್ಚಿ ಕೊಚ್ಚಿ ಹೋಗುತಿರಲಿ
ಅಂತರಂಗದ ಕೆಸರು ||2||

ಈ ಗಂಗೆಗೆ ಉಸಿರಾಗಲಿ
ಭುವಿ-ಭಾನು-ಚೇತನಾ
ನೋವು-ದುಃಖ-ಬವಣೆಯೆಡೆಗೆ
ಮಿಡಿಯುತಿರಲಿ ಸ್ಪಂದನಾ ||3||

ಗಂಗೆಯೊಳಗೆ ಜನಿಸಿಬರಲಿ
ಶತ ಕನಸಿನ ಮೀನುಮರಿ
ಕನಸೆಲ್ಲವೂ ನನಸಾಗಲಿ
ಕರಗದಿರಲಿ ಜಾರಿ ||4||

ನಿಲ್ಲದಿರಲಿ ಅಂತರಗಂಗೆ
ಎಂದೂ ಹರಿಯುತಿರಲಿ
ಭಾವ-ಜೀವ-ಸ್ಫುರಿಸುತಿರಲಿ
ಎಂದೂ ನಲಿಯುತಿರಲಿ ||5||

ಒಂದು ಅಂತರಾತ್ಮದ ಕವಿತೆ.. ಭಾವಗಳು ಸ್ಪುರಿಸಿ ಕವಿತೆಯಾಗಿ ಹೊರ ಬರುತ್ತವೆ.. ಅಂತಹ ಭಾವನಾತ್ಮಕ ದಿನದಲ್ಲಿ ಬರೆದ ಕವಿತೆ ಇದು.
ದಂಟಕಲ್ಲಿನಲ್ಲಿ ಬರೆದ ಈ ಕವಿತೆ  ಹುಟ್ಟಿದ್ದು 28-11-2007ರಂದು

Saturday, December 8, 2012

ಉ.ಕ ರೋಧನ : ಭಾಗ-3

ಉ.ಕ ರೋಧನ ಭಾಗ-3

ಉತ್ತರಕನ್ನಡದ ಕುರಿತು ಬರೆದ ಮತ್ತಷ್ಟು ಚೌಪದಿಗಳು


ಗೂಡಿನ ವ್ಯಥೆ

ನನ್ನ ಉ,ಕವೊಂದು ಬೆಚ್ಚನೆಯ ಗೂಡು
ಈಗೀಗ ಆಗುತ್ತಿದೆ ಕಸದ ಬೀಡು|
ಒಡಲೊಳಗೆ ಕುದಿಯುತ್ತಿದೆ ಕೈಗಾ
ನಾಶಮಾಡಲು ಸಿದ್ಧವಾಗುತ್ತಿದೆ ಬೇಗ||

ಗುಬ್ಬಿಯ ಮೇಲೆ

ನನ್ನ ಉ.ಕವೊಂದು ಹಕ್ಕಿಮರಿ ಗುಬ್ಬಿ
ಯಾರೂ ಆದರಿಸಿಲ್ಲ ಬಾಚಿ ಹಿಡಿದು ತಬ್ಬಿ|
ತ್ಯಾಗಿಯಿದು, ಎಂದೆಂದೂ ಹಿಡಿದಿಲ್ಲ ಶಸ್ತ್ರ
ತೂಗುತಿದೆ ಇದರ ಮೇಲೆ ಯೋಜನೆಗಳ ಬ್ರಹ್ಮಾಸ್ತ್ರ||

ಪ್ರಾಣ-ಹರಣ

ನನ್ನ ಉ.ಕವೊಂದು ಯುಗಪುರುಷರ ನಾಡು
ಜೊತೆಗೆ ಉಂಟಲ್ಲ ಗಮ್ಯತೆಯ ಕಾಡು|
ಹಲವು ಮೃಗಜಂತುಗಳೇ ಇದರ ಮಾನ
ಎಲ್ಲವೂ ಕಳೆದುಕೊಳ್ಳುತ್ತಿವೆ ಈಗ ಪ್ರಾಣ||

ಪುಸ್ತಕದ ಕಥೆ

ನನ್ನ ಉ.ಕವೊಂದು ಹಳೇ ಪುಸ್ತಕ
ಓದಿದರೆ ಜ್ಞಾನ ತುಂಬುವುದು ಮಸ್ತಕ|
ತಿಂದುಬಿಟ್ಟಿದೆ ಅಲ್ಲಲ್ಲಿ ಹುಳವಿದರ ಪೇಜು
ಕಣ್ಣೆತ್ತಿ ನೋಡುವವರಿಲ್ಲ ಇದರ ಗೋಜು||

ಮೂರ್ತಿಯ ಕಥೆ

ಉತ್ತರಕನ್ನಡವೊಂದು ಸುಂದರ ಮೂರ್ತಿ
ಇದುವೇ ನನ್ನ ಕವನಕ್ಕೆ ಸ್ಫೂರ್ತಿ|
ಸುತ್ತೆಲ್ಲ ಹಬ್ಬಿಹುಸು ಭವ್ಯ ಮಲೆನಾಡು
ಇಂಚಿಂಚೂ ಸೂರೆಹೋಗುತ್ತಿದೆ ಇಲ್ಲಿಯ ಕಾಡು||

ಸಂಗೀತ-ರೋಗ

ನನ್ನ ಉ.ಕವೊಂದು ಸಂಗೀತದ ರಾಗ
ಆದರೆ ಅದಕ್ಕೆ ಹಿಡಿದಿದೆ ಹೊಸದೊಂದು ರೋಗ|
ಆಲಾಪನೆ ಮಾಡಿದರೆ ಬಾಯಲ್ಲಿ ಕೆಮ್ಮು
ಎದೆಯೊಳಗೆ ಕಟ್ಟಿದೆ ನೋವೆಂಬ ದಮ್ಮು||

 (ಉತ್ತರಕನ್ನಡದ ಬಗ್ಗೆ ಎಷ್ಟು ಬರೆದರೂ ಕಡಿಮೆ ನೋಡಿ... ಅದೊಂಥರಾ ಗಣಿ.. ಬಗೆದಷ್ಟೂ ಕಾಲಿಯಾಗುವುದಿಲ್ಲ.. ಆದರೆ ಯೋಜನೆಗಳ ಬಲಾತ್ಕಾರಕ್ಕೆ ಬಲಿಯಾಗುತ್ತಿರುವ ನನ್ನ ಜಿಲ್ಲೆಯ ಕುರಿತು ಇನ್ನೊಂದಷ್ಟು ಹನಿಗಳು...)

Wednesday, December 5, 2012

ಕತ್ತೆ ಹೇಳಿದ ಭವಿಷ್ಯ

ಕತ್ತೆ ಹೇಳಿದ ಭವಿಷ್ಯ

    ಬಹುತೇಕ ಎಲ್ಲರ ಬದುಕಿನಲ್ಲೂ ಇಂತಹ ಫನ್ನಿ ಅನ್ನಿಸೋ ಸಂದರ್ಭಗಳು ಬಂದೇ ಬಂದಿರ್ತವೆ. ಮಸ್ತ್ ತಮಾಶೆಯ, ಮುಜುಗರ ಉಂಟುಮಾಡಿದ, ವಿಲಕ್ಷಣವಾದ, ವಿಚಿತ್ರ ಅನ್ನಿಸುವ ಇಂತಹ ಘಟನೆಗಳು ಬಾಳ ಗೋಡೆಯಲ್ಲಿ ಹಾಗೇ ಸುಮ್ಮನೆ ಬಂದು ಸಂತಸ ನೀಡಿ ಹೋಗಿರುತ್ತದೆ. ಇಂತವುಗಳಿದ್ದರೇ ಬಾಳು ಸಮರಸ ಎನ್ನಬಹುದು.
    ನನ್ನ ಬಾಳಿನಲ್ಲಿ ನಡೆದ ಒಂದು ವಿಲಕ್ಷಣ ಘಟನೆಯನ್ನು ಹೇಳಬೇಕು. ಇದು ವಿಲಕ್ಷಣವೋ, ತಮಾಶೇಯೋ.. ಏನೋ ಒಂದು. ನಾನು 3 ನೇ ಕ್ಲಾಸೋ ಅಥವಾ ನಾಲ್ಕೋ ಏನೋ ಇರಬೇಕು. ಆಗ ನಡೆದಿದ್ದು. ಅದನ್ನು ನಿಮ್ಮೆದುರು ಹೇಳಲೇ ಬೇಕು... ಬಿಕಾಸ್ ಇಟ್ ಈಸ್ ಸೋ ಫನ್ನಿ ಯು ನೋ..(ಇಲ್ಲಿ ನೀವು.. ಮ್ಯಾಚ್ ಮುಗಿದ ನಂತರ ಪ್ರೆಸೆಂಟೇಶನ್ ಸೆರೆಮನಿಯಲ್ಲಿ ಮಾತನಾಡುವ ಧೋನಿ ಸ್ಟೈಲ್ ನೆನಪು ಮಾಡ್ಕೊಳ್ಳಿ..)
    ಸುಮಾರು 15-18 ವರ್ಷಗಳ ಹಿಂದಿನ ಕಥೆ. ಶಿರಸಿಯಲ್ಲಿ ಆ ವರ್ಷ ಜಾತ್ರೆಯ ಸಡಗರ. ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆ ಬಂತೆಂದರೆ ಆಗ ನಮಗೆಲ್ಲ ಹೊಸದೊಂದು ಲೋಕ ಅನಾವರಣವಾಗುತ್ತಿತ್ತು. ಪ್ರತಿ ಸಾರಿಯೂ ಜಾತ್ರೆ ಅಂದರೆ ನನಗೆ ನಿಂತಲ್ಲಿ ನಿಲ್ಲೋಕಾಗೋಲ್ಲ.. ಕುಂತಲ್ಲಿ ಕೂರೋಕಾಗೋಲ್ಲ.. ತುಂಡುಗುಪ್ಪಳದವನಾದ ನನಗೆ ಜಾತ್ರೆಗೆ ಹೋಗಿ, ಪೀಪಿಳಿ ತಂದು ಪುಂಯ್ ಅಂತ ಊದಿ, ಒತ್ತಿದರೆ ಪೆಕ್ ಪೆಕ್ ಅನ್ನೀ ಕುನ್ನಿ ಗೊಂಬೆಯನ್ನು ತಂದು ಎರಡೇ ದಿನಕ್ಕೆ ಅದನ್ನು ಹಾಳುತೆಗೆಯದಿದ್ದರೆ ನನಗೆ ಸಮಾಧಾನವೇ ಇರುತ್ತಿರಲಿಲ್ಲ. ಅಷ್ಟರ ಜೊತೆಗೆ ಜಾತ್ರೆ ತಿರುಗಬೇಕು, ಸರ್ಕಸ್ ನೋಡಬೇಕು, ತೊಟ್ಟಿಲು(ಜಾಯಿಂಟ್ ವೀಲ್) ಹತ್ತಬೇಕು, ಟೊರ ಟೊರದ ಮೇಲೆ ತಲೆ ತಿರುಗುವಂತೆ ಕುಣಿಯಬೇಕು ಎಂಬೆಲ್ಲ ನೂರೆಂಟು ಕನಸುಗಳ ಗುಚ್ಛ.
    ಜಾತ್ರೆಗೆ 15 ದಿನ ಇದೆ ಎನ್ನುವಾಗಲೇ ಮನೆಯಲ್ಲಿ ಹರಪೆ ಪ್ರಾರಂಭವಾಗುತ್ತಿತ್ತು. ಶಾಲೆಯಲ್ಲಿ ಜಾತ್ರೆಗೆಂತಲೇ ಒಂದೆರಡು ದಿನ ಕಳ್ಳ ಬೀಳುವುದು ಖಾಯಂ ಆಗಿತ್ತು. ಬಿಡಿ ನಮ್ಮ ತಾರಾ ಮೇಡಮ್ಮು (ಪ್ರೀತಿಯಿಂದ ತಾರಕ್ಕೋರು) ಅಂತಹ ನಮ್ಮ ತಪ್ಪನ್ನು ಮಾಫಿ ಮಾಡ್ತಿದ್ದರು. ಜಾತ್ರೆ ಬಂತೆಂದರೆ ಅಪ್ಪನಿಗೆ ನನ್ನ ಹಾಗೂ ತಂಗಿಯ ರಗಳೆಯನ್ನು ತಡೆಯಲು ಆಗುತ್ತಲೇ ಇರಲಿಲ್ಲ. ಓದಿನ ಸಂದರ್ಭಗಳಲ್ಲಿ ಅಮ್ಮ ನಮ್ಮನ್ನು ಹಿಡಿದು ಬಡಿದು, ಬಯ್ಯುತ್ತಿದ್ದರೂ ಇಂತಹ ವಿಷಯಗಳಲ್ಲೆಲ್ಲ ಪಕ್ಷಾಂತರ ಮಾಡುವ ಅಮ್ಮ ನಮ್ಮನ್ನು ಸಪೋರ್ಟ್ ಮಾಡಿ `ಒಂಚೂರು ಅವ್ರನ್ನ ಜಾತ್ರಿಗೆ ಕರ್ಕಂಡು ಹೋಗಿಬಂದ್ರೆ ಬತ್ತಿಲ್ಯನು..? ' ಎಂದು ಕೇಳುತ್ತಿದ್ದಳು. ಆಗ ಅಪ್ಪನಿಗೆ ಅನಿವಾರ್ಯವಾಗಿಬಿಡುತ್ತಿತ್ತು.
    ಸರಿ ಆ ವರ್ಷ ಅಪ್ಪ ಜಾತ್ರೆಗೆ ಕರೆದುಕೊಂಡು ಹೋದ. ಅದೇನು ಕಾರಣವೋ ತಂಗಿ ನನ್ನ ಜೊತೆಗೆ ಬಂದಿರಲಿಲ್ಲ. ಗತ್ತಾಗಿ ಜಾತ್ರೆ ತಿರುಗಿದೆ. ಸಂಜೆ ಟೈಮಿನ ರಶ್ಶಲ್ಲಿ ಮಾರಿಕಾಂಬಾ ಗದ್ದುಗೆಗೆ ಬಂದು ದೇವರಿಗಡ್ಡ ಬಿದ್ದಿದ್ದು ಆಗಿತ್ತು. ಹಣ್ಣು ಕಾಯಿ ಮಾಡಿಸುವಾಗ ಅಲ್ಲಿನ ಗಬ್ಬು ವಾಸನೆ ತಾಳಲಾರದೇ ಹೊಟ್ಟೆ ತೊಳೆಸಿ ಬಂದಂತಾಗಿ ಅಪ್ಪನ ಬಳಿ `ಇದೆಂತಕ್ ಹಿಂಗೆ ಗಬ್ಬು ವಾಸನೆ..? ' ಅಂತ ಕೇಳಿದ್ದಕ್ಕೆ `ಅದೆ ಅಲ್ಲಿ ಕಾಯಿ ವಡಿತ್ವಲಾ.. ಅದು ಅಷ್ಟು ವಾಸನೆ ಬರ್ತಾ ಇದ್ದು' ಎಂದು ಅಪ್ಪ ಹೇಳಿದ್ದಿನ್ನೂ ನೆನಪಿದೆ.
    ಸರಿ ಮುಂದೆ ಜಾತ್ರೆ ಪೇಟೆ ಎಂದು ಕರೆಸಿಕೊಳ್ಳುವ ಬೀಡಕಿ ಬಯಲು ಸುತ್ತಾಡಿ, ಬಳೆ ಪೇಟೆಯಲ್ಲಿ ತಿರುಗಿ, ನಟರಾಜ ರೋಡಿನಲ್ಲಿ ಉದ್ದಾನುದ್ದಕ್ಕೆ ಎರಡೆರಡು ಬಾರಿ ಓಡಾಡಿ, ತೊಟ್ಟಿಲು ಹತ್ತಿ, ಸರ್ಕಸ್ ನಡೆಯುವ ಕೋಟೆಕೆರೆಯ ಗದ್ದೆ ಬಯಲಿಗೆ ಹೋಗಿ ಬಂದದ್ದಾಯ್ತು. ಅಷ್ಟರ ವೇಳಗೆ ಅಪ್ಪನ ಜೇಬೂ ಸುಮಾರು ಬರಿದಾಗಿರಬೇಕು, ಸಿಡಿಮಿಡಿ ಪ್ರಾರಂಭವಾಗಿತ್ತಲ್ಲದೆ `ನೀ ಹಿಂಗೆ ರಗಳೆ ಮಾಡ್ತಾ ಇದ್ರೆ ಜಾತ್ರೆ ಪೇಟೆಲಿ ಬಿಟ್ಟಿಕ್ಕೆ ಹೋಗ್ತಿ ಹಾ..' ಎಂಬ ತಾಕೀತುಗಳೂ ಶುರುವಾಗಿದ್ದವು. ಎಲ್ಲ ಆಯಿತು. ಕೊನೆಯದಾಗಿ `ಭವಿಷ್ಯ ಹೇಳುವ ಕತ್ತೆಯನ್ನು ನೋಡುವ ಅಂತ ಅಪ್ಪನಿಗೆ ಹರಪೆ ಬಿದ್ದೆ. ಅಪ್ಪನಿಗೆ ಸಿಟ್ಟು ಬಂದರೂ, ಬಯ್ಯುತ್ತಲೆ ಕರೆದೊಯ್ದ.
    ಒಳಗಡೆ ದೊಡ್ಡ ವರ್ತುಲಾಕಾರದಲ್ಲಿ ಒಂದು ನಾಯಿ ಹಾಗೂ ಒಂದು ಕತ್ತೆ ಇದ್ದವು. ಅವುಗಳ ಮಾಲಿಕನೋ ಅಥವಾ ಗಾರ್ಡಿಯನ್ನೋ.. ಯಾರೋ ಒಬ್ಬಾತ ಕನ್ನಡ ಹಾಗೂ ಹಿಮದಿ ಭಾಷೆಯಲ್ಲಿ ಏನೇನೋ ಹೇಳುತ್ತಿದ್ದ, ಪ್ರಶ್ನೆಗಳನ್ನು ಕೇಳುತ್ತಿದ್ದ. ಆತನ ಮಾತನ್ನು ಕೇಳುತ್ತಿದ್ದ ಅವುಗಳು ಪ್ರಶ್ನೆಗೆ ಉತ್ತರ ಎಂಬಂತೆ ವ್ಯಕ್ತಿಗಳ ಮುಂದೆ ಹೋಗಿ ನಿಲ್ಲುತ್ತಿದ್ದವು. `ಅತ್ಯಂತ ಉದ್ದದ ವ್ಯಕ್ತಿ ಯಾರು ತೋರಿಸು..?' ಯಾರ ತಲೆಯಲ್ಲಿ ಅತ್ಯಂತ ಕಡಿಮೆ ಕೂದಲಿವೆ..? ಯಾರಿಗೆ ಅತ್ಯಂತ ಹೆಚ್ಚು ವಯಸ್ಸಾಗಿದೆ..? ಯಾರು ಅತ್ಯಂತ ಕುಳ್ಳರು..? ಹೀಗೆ ನೂರಾರು ಪ್ರಶ್ನೆಗಳನ್ನು ಕೇಳಿದ್ದಕ್ಕೆ ಕತ್ತೆ ಅಂತಹ ವ್ಯಕ್ತಿಗಳ ಮುಂದೆ ಹೋಗಿ ನಿಲ್ಲುತ್ತಿತ್ತು. ಅಂತಹ ಭವಿಷ್ಯ ಸುಮಾರು ಸತ್ಯವೂ ಆಗಿರುತ್ತಿದ್ದು ನನ್ನ ವಿಸ್ಮಯಕ್ಕೆ ಕಾರಣವಾಗಿತ್ತು.
    ಕೊನೆಗೊಮ್ಮೆ ಆ ಹಿಂದಿವಾಲಿ `ಈ ಗುಂಪಿನಲ್ಲಿರುವ ಅತ್ಯಂತ ಬುದ್ಧಿವಂತ ಹಾಗೂ ಚೂಟಿ ಹುಡುಗ ಯಾರು..?' ಎಂದು ಕೇಳಿದಳು. ಕತ್ತೆಗೆ ಬಹುಶಃ ತಲೆಕೆಟ್ಟಿತ್ತೇನೋ.. ಸೀದಾ ನನ್ನ ಎದುರು ಬಂದು ನಿಂತೇಬಿಟ್ಟಿತು. ನಾನೊಮ್ಮೆ ಕಕ್ಕಾಬಿಕ್ಕಿ. ಅಕ್ಕ-ಪಕ್ಕ, ಹಿಂದೆ ಮುಂದೆ ಎಲ್ಲ ನೋಡಿದೆ. ಕತ್ತೆ ನಿಂತಿದ್ದು ನನ್ನ ಬಳಿಯೇ. ನನಗೆ ಖುಷಿಯಾಗಬೇಕಿತ್ತು. ಊಹುಂ.. ಆಗಲಿಲ್ಲ. ಅವರ ಎದುರು ಮರ್ಯಾದೆಯೇ ಹೋದಂತಾಯಿತು. ಈ ಕತ್ತೆಯ ಬದಲು ಆ ನಾಯಿ ಆದ್ರೂ ನನ್ನೆದುರು ಬಂದು ನಿಲ್ಲಬಾರದಿತ್ತಾ.. ಅಂದುಕೊಂಡಿದ್ದಿದೆ.. ಕತ್ತೆ ಭವಿಷ್ಯ ನಿಜವೇ ಎಂದೆಲ್ಲಾ ಆಲೋಚನೆಗಿಟ್ಟುಕೊಂಡೆ ನಾನು. ಕತ್ತೆ ಭವಿಷ್ಯ ನುಡಿಯುವಷ್ಟು ಬುದ್ಧಿವಂತನೆ ನಾನು.. ಎಂಬ ಕ್ವಶ್ಚನ್ ಮಾರ್ಕ್ ಎದೆಯೊಳಗೆ..
    ಆ ಸಂದರ್ಭದಲ್ಲಿ ನಾನು ಹಾಗೆ ಚಿಂತಿಸಿದ್ದಕ್ಕೂ ಕಾರಣ ಇದೆ ನೋಡಿ... ಶಾಲೆಯಲ್ಲಿ ನಾನೆಂದರೆ ಬಹಳ ತಂಟೆಕೋರ, ಕಿಲಾಡಿ ಹುಡುಗ ಎಂಬ ಕುಖ್ಯಾತಿ ಇತ್ತು. `ಇಂವ ಓದಿದ್ರೆ ಜೋರಿದ್ದಿದ್ದ..' ಎಂಬ ಮಾತುಗಳು ನಮ್ಮ ಮಾಸ್ತರರಾದ ಸಿ. ಎಂ. ಹೆಗಡೆ ಅವರಿಂದ ನಾಲ್ಕಾರು ಬಾರಿ ಕೇಳಿದ್ದವು. ವಿಚಿತ್ರವೆಂದರೆ ನಾನು ಚನ್ನಾಗಿ ಓದುತ್ತಿದ್ದೆ. ಚನ್ನಾಗಿ ಬರೆಯುತ್ತಿದೆ. ಪಬ್ಲಿಕ್ ಪರೀಕ್ಷೆಯಲ್ಲಿ ಒಳ್ಳೆಯ ಮಾಕ್ಸರ್ುಗಳು ಬಿದ್ದು ಪಾಸಾಗಿದ್ದೇನೆ. ಆದರೆ ಶಾಲೆಯ ಟೆಸ್ಟುಗಳಲ್ಲಿ ಮಾತ್ರ ಪಾಸಿಗಿಂತ ಒಂದಂಕಿ ಮೇಲೆ ಇರುತ್ತಿದ್ದೆ.. ಅಂದರೆ ಸಕರ್ಾರದ ಲೆಕ್ಕದಲ್ಲಿ ಬಡತನ ರೇಖೆ ಅಂತಾರಲ್ಲ.. ಅಂತಹ ಮಾರ್ಜಿನ್ ಲೈನು. (ಇದಕ್ಕೆ ಕಾರಣ ಕೊನೆಗೆ ಗೊತ್ತಾಗಿದ್ದೆಂದರೆ ಮಾಸ್ತರ್ರು ಮಾಡುತ್ತಿದ್ದ ಹಕ್ಕಿಕತ್ತು ಅಂತ ಕೊನೆಗೆ ಗಿತ್ತಾಯಿತು.. ಅದನ್ನು ಇನ್ನೊಮ್ಮೆ ಹೇಳುವಾ.. ಆ ಸಂಗತಿ ಮಜವಾಗಿದೆ.,.)
    ಸರಿ ಕತ್ತೆ ಭವಿಷ್ಯ ಹೇಳಿತಲ್ಲ. ಇನ್ಯಾರಿದ್ದಾರ್ರೀ ನನ್ನ ಸಾಟಿ.. ಅದೆಂತದ್ದೂ ಹಮ್ಮು-ಬಿಮ್ಮು.. ತಲೆಯ ಮೇಲೆ. ಅಂದಿನಿಂದ ಪುಸ್ತಕ ಹಿಡಿಯುವುದು ಅರ್ಧಕ್ಕರ್ಧ ಬಂದಾಗಿತ್ತು. ಅಪ್ಪ-ಅಮ್ಮ ಬಯ್ದಾಗಲೆಲ್ಲ ಕತ್ತೆ ಭವಿಷ್ಯ ಹೇಳಿದ್ದನ್ನೇ ನೆನಪು ಮಾಡುತ್ತಿದ್ದೆ. ನನ್ನ ಬೆಲೆ ನಿಮಗೆ ಗೊತ್ತಾಗಲಿಲ್ಲ.. ಕತ್ತೆಗೆ ಗೊತ್ತಾಯಿತು ಎಂದು ಹೇಳುತ್ತಿದ್ದೆ. ಅಪ್ಪ-ಅಮ್ಮ ಅದೆಷ್ಟು ನಕ್ಕಿದ್ದರೋ. ಅವರ ನಗುವಿನ ಕಾರಣ ನನಗೆ ಆಗ ತಿಳಿದೇ ಇರಲಿಲ್ಲ.
    ಮುಂದಿನ ಪರಿಣಾಮ ಕೇಳಿ ಇನ್ನೂ ಮಜಬೂತಾಗಿದೆ. ಸರಿ ಆ ವರ್ಷ ಕತ್ತೆಯ ಭವಿಷ್ಯದ ನಶೆ ಯಾವ ರೀತಿ ಕೆಲಸ ಮಾಡ್ತಪ್ಪಾ ಅಂದ್ರೆ ಪಾಸಾಗಿದ್ದೇ ಪುಣ್ಯ ಎಂಬಂತಾಗಿತ್ತು. ಓದಿಗೆ ತಿಲಾಂಜಲಿ ಕೊಟ್ಟಿದ್ದೆ. ಕತ್ತೆ ಭವಿಷ್ಯ ನನ್ನನ್ನು ಮಳ್ಳು ಮಾಡಿತ್ತು. ಬಿಡಿ.. ಈ ಸಂಗತಿ ನನಗೆ ಈಗಲೂ ನೆನಪಾಗ್ತಾ ಇರ್ತದೆ. ಕತ್ತೆಯ ಭವಿಷ್ಯ ನನ್ನ ಪಾಲಿಗೆ ಗ್ರೇಡೋ..? ಡಿ.ಗ್ರೇಡೋ... ಊಹೂಂ.. ಒಂದೂ ತಿಳಿದಿಲ್ಲ. ಕತ್ತೆ ಭವಿಷ್ಯ ಹೇಳಿತ್ತು. ಹಿಂಗಾಗಿತ್ತು. ಅನ್ನೋ ಸುಂದರ ಸಂದರ್ಭ ನೆನಪಿದೆ. ಇದಕ್ಕಾಗಿ ಹೆಮ್ಮೆ ಪಡಲೋ, ಕತ್ತೆ ಭವಿಷ್ಯ ಹೇಳ್ ಬಿಡ್ತು.. ತಥ್ ನನ್ಮಗಂದು... ಅಂತ ವ್ಯಥೆ ಪಡಬೇಕೋ... ಊಹೂಂ ಏನೋಂದು ಗೊತ್ತಾಗಲಿಲ್ಲ.
    ಇಂತಹ ಮಜಬೂತು ಸಂಗತಿಗಳು ನಿಮ್ಮಲ್ಲೂ ಅನೇಕ ಇರುತ್ತವೆ. ಅವೆಲ್ಲ ಏಕಾಕಿತನದಲ್ಲಿ ನೆನಪಾದಾಗ ಕೊಡುವ ಅನುಭೂತಿ ಇದೆಯಲ್ಲ.. ಆಹ್.. ಅದೆಷ್ಟು ಮಜಬೂತು ಅಂತೀರಿ... ಹೋಗ್ಲಿ ಬಿಟ್ಹಾಕಿ.. ಇದು ಹ್ಯಾಂಗಿದೆ ಅನ್ನೋದನ್ನು ಹೇಳಿ ..

ಉ.ಕ ರೋಧನ : ಭಾಗ-2

ಉ.ಕ ರೋಧನ ಭಾಗ-2

ಉತ್ತರಕನ್ನಡದ ಕುರಿತು ಬರೆದ ಮತ್ತಷ್ಟು ಚೌಪದಿಗಳು


ಒಡಲ ವ್ಯಥೆ

ನನ್ನ ಉ.ಕದೆಡೆಗೆ ಬರೆದಷ್ಟೂ ಮುಗಿಯವು.,
ಬಂದ ಯೋಜನೆಗಳು ಬಂದಷ್ಟೂ ನಿಲ್ಲವು..|
ವನ, ಅರಣ್ಯ, ಭೂ ಸಂಪತ್ತುಗಳೇ ಇದರ ಒಡಲು
ಕತ್ತರಿಸಿ ಕೊಲ್ಲಲಾಗುತ್ತಿದೆ ಪ್ರತಿದಿನವೂ ಇದರ ಕೊರಳು||

ಕುತ್ತು-ಯೋಗ
ನನ್ನ ಉ.ಕಕ್ಕೆ ಬಂತೊಂದು ಹೊಸ ಕುತ್ತು
ಅಂತೆ ಕಾರವಾರ ಮರಾಠಿಗರ ಸ್ವತ್ತು|
ಎಲ್ಲದರ ಜೊತೆಗೆ ಇದು ಹೊಸದೊಂದು ರೋಗ
ಒಟ್ಟಿನಲ್ಲಿ ಉ.ಕ ಸಿಕ್ಕವನಿಗೆ ರಾಜಯೋಗ||

ಒಡಲು-ಗುಂಡಿ
ನನ್ನ ಉ.ಕವೆ ಒಂದು ಪ್ರೀತಿಯ ಒಡಲು
ಭೋರ್ಗರೆಯುತ್ತಿರುತ್ತದೆ ಕಾರವಾರದ ಕಡಲು
ನೋಡಲು ಸುಂದರ ಕಣೆ ಆ ಊರು ತದಡಿ
ಉಷ್ಣ ಸ್ಥಾವರಕ್ಕಾಗಿ ನಡೆದಿದೆ ಗಂಡಾಗುಂಡಿ||

ನದಿ-ಬೇರು
ನನ್ನ ಉ.ಕವೆ ಒಂದು ಗಮ್ಯ ನದಿ
ಕಟ್ಟಿದರು ಅಣೆಕಟ್ಟು ಹಲವು ಬದಿ
ಕುಡಿ ಕುಡಿದು ಬತ್ತಿದರೂ ಶುಭ್ರ ನೀರು
ಕಡಿಯುವುದ ಬಿಡಲಿಲ್ಲ ಇದರ ಬೇರು||

ಗೋವಾದ ಆಸೆ
ನನ್ನ ಉಕದ ಮೇಲೆ ಎಲ್ಲರಿಗೆ ಕಣ್ಣು
ಗೋವಾವೂ ಬಯಸುತಿದೆ ಇದರ ಮಣ್ಣು|
ಏನಿರಲಿ ಇದರ ಸಂಪತ್ತು ಮಾತ್ರ ಇಷ್ಟ
ಕೇಳುವವರು ಮಾತ್ರ ಇಲ್ಲ ನನ್ನೊಡಲ ಕಷ್ಟ||

ಸಂಪತ್ತಿಗಾಗಿ
ನನ್ನ ಉಕವು ಎಂದೂ ಕನ್ನಡದ ಸ್ವತ್ತು
ಗೋವಾ, ರಾಷ್ಟ್ರದಿಂದ ಬರುತ್ತಿದೆ ಇದಕೆ ಕುತ್ತು|
ಈ ನಾಡೇ ಒಂದು ಸುಂದರ ವನಸಿರಿ
ಸಂಪತ್ತುಗಳೇ ಇದರೊಡಲಿಗೆ ಮಾರಿ||

ನಿಸರ್ಗ ಗಮ್ಯ ಉತ್ತರಕನ್ನಡದ ಕುರಿತು ಬರೆದಷ್ಟೂ ಕಡಿಮೆ ಕಣ್ರೀ.. ಬರೆ ಬರೆದಂತೆಲ್ಲ ಭಾರವಾದ ನಿಟ್ಟುಸಿರು ಮನದಲ್ಲಿ ಮೂಡಿತ್ತದೆ. ಯೋಜನೆಗಳು ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಇದೆ. ಆದರೆ ಇರುವ ಯೋಜನೆಗಳೆಲ್ಲ ಮಾರಕ.. ಹಾನಿಕಾರಕ.. ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಕೈಗಾ, ಮೀನುಗಾರರನ್ನು ಒಕ್ಕಲೆಬ್ಬಿಸಿದ ಸೀಬರ್ಡ್, ಅಡಿಕೆ ಬೆಳೆಗಾರರ ಒಡಲಿಗೆ ಕೊಳ್ಳಿ ಇಡಲು ತವಕಿಸುತ್ತಿರುವ ಅಣೇಕಟ್ಟುಗಳೆಂಬ ಗುಮ್ಮ... ಒಂದೇ ಎರಡೇ... ಬರೆದಷ್ಟೂ ಮುಗಿಯೋದಿಲ್ಲ... ಇಂತಹ ಹತಾಶೆಯ ಸಂದರ್ಭದಲ್ಲಿ ಹುಟ್ಟಿದ ಕೆಲವು ಸಾಲಿಗಳಿಲ್ಲಿವೆ.. ಓದಿ ನೋಡಿ..