Wednesday, December 5, 2012

ಉ.ಕ ರೋಧನ : ಭಾಗ-2

ಉ.ಕ ರೋಧನ ಭಾಗ-2

ಉತ್ತರಕನ್ನಡದ ಕುರಿತು ಬರೆದ ಮತ್ತಷ್ಟು ಚೌಪದಿಗಳು


ಒಡಲ ವ್ಯಥೆ

ನನ್ನ ಉ.ಕದೆಡೆಗೆ ಬರೆದಷ್ಟೂ ಮುಗಿಯವು.,
ಬಂದ ಯೋಜನೆಗಳು ಬಂದಷ್ಟೂ ನಿಲ್ಲವು..|
ವನ, ಅರಣ್ಯ, ಭೂ ಸಂಪತ್ತುಗಳೇ ಇದರ ಒಡಲು
ಕತ್ತರಿಸಿ ಕೊಲ್ಲಲಾಗುತ್ತಿದೆ ಪ್ರತಿದಿನವೂ ಇದರ ಕೊರಳು||

ಕುತ್ತು-ಯೋಗ
ನನ್ನ ಉ.ಕಕ್ಕೆ ಬಂತೊಂದು ಹೊಸ ಕುತ್ತು
ಅಂತೆ ಕಾರವಾರ ಮರಾಠಿಗರ ಸ್ವತ್ತು|
ಎಲ್ಲದರ ಜೊತೆಗೆ ಇದು ಹೊಸದೊಂದು ರೋಗ
ಒಟ್ಟಿನಲ್ಲಿ ಉ.ಕ ಸಿಕ್ಕವನಿಗೆ ರಾಜಯೋಗ||

ಒಡಲು-ಗುಂಡಿ
ನನ್ನ ಉ.ಕವೆ ಒಂದು ಪ್ರೀತಿಯ ಒಡಲು
ಭೋರ್ಗರೆಯುತ್ತಿರುತ್ತದೆ ಕಾರವಾರದ ಕಡಲು
ನೋಡಲು ಸುಂದರ ಕಣೆ ಆ ಊರು ತದಡಿ
ಉಷ್ಣ ಸ್ಥಾವರಕ್ಕಾಗಿ ನಡೆದಿದೆ ಗಂಡಾಗುಂಡಿ||

ನದಿ-ಬೇರು
ನನ್ನ ಉ.ಕವೆ ಒಂದು ಗಮ್ಯ ನದಿ
ಕಟ್ಟಿದರು ಅಣೆಕಟ್ಟು ಹಲವು ಬದಿ
ಕುಡಿ ಕುಡಿದು ಬತ್ತಿದರೂ ಶುಭ್ರ ನೀರು
ಕಡಿಯುವುದ ಬಿಡಲಿಲ್ಲ ಇದರ ಬೇರು||

ಗೋವಾದ ಆಸೆ
ನನ್ನ ಉಕದ ಮೇಲೆ ಎಲ್ಲರಿಗೆ ಕಣ್ಣು
ಗೋವಾವೂ ಬಯಸುತಿದೆ ಇದರ ಮಣ್ಣು|
ಏನಿರಲಿ ಇದರ ಸಂಪತ್ತು ಮಾತ್ರ ಇಷ್ಟ
ಕೇಳುವವರು ಮಾತ್ರ ಇಲ್ಲ ನನ್ನೊಡಲ ಕಷ್ಟ||

ಸಂಪತ್ತಿಗಾಗಿ
ನನ್ನ ಉಕವು ಎಂದೂ ಕನ್ನಡದ ಸ್ವತ್ತು
ಗೋವಾ, ರಾಷ್ಟ್ರದಿಂದ ಬರುತ್ತಿದೆ ಇದಕೆ ಕುತ್ತು|
ಈ ನಾಡೇ ಒಂದು ಸುಂದರ ವನಸಿರಿ
ಸಂಪತ್ತುಗಳೇ ಇದರೊಡಲಿಗೆ ಮಾರಿ||

ನಿಸರ್ಗ ಗಮ್ಯ ಉತ್ತರಕನ್ನಡದ ಕುರಿತು ಬರೆದಷ್ಟೂ ಕಡಿಮೆ ಕಣ್ರೀ.. ಬರೆ ಬರೆದಂತೆಲ್ಲ ಭಾರವಾದ ನಿಟ್ಟುಸಿರು ಮನದಲ್ಲಿ ಮೂಡಿತ್ತದೆ. ಯೋಜನೆಗಳು ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಇದೆ. ಆದರೆ ಇರುವ ಯೋಜನೆಗಳೆಲ್ಲ ಮಾರಕ.. ಹಾನಿಕಾರಕ.. ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಕೈಗಾ, ಮೀನುಗಾರರನ್ನು ಒಕ್ಕಲೆಬ್ಬಿಸಿದ ಸೀಬರ್ಡ್, ಅಡಿಕೆ ಬೆಳೆಗಾರರ ಒಡಲಿಗೆ ಕೊಳ್ಳಿ ಇಡಲು ತವಕಿಸುತ್ತಿರುವ ಅಣೇಕಟ್ಟುಗಳೆಂಬ ಗುಮ್ಮ... ಒಂದೇ ಎರಡೇ... ಬರೆದಷ್ಟೂ ಮುಗಿಯೋದಿಲ್ಲ... ಇಂತಹ ಹತಾಶೆಯ ಸಂದರ್ಭದಲ್ಲಿ ಹುಟ್ಟಿದ ಕೆಲವು ಸಾಲಿಗಳಿಲ್ಲಿವೆ.. ಓದಿ ನೋಡಿ..

Monday, December 3, 2012

ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್...

ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್...

ಇವನಿಗೆ ನೀವು ಸಹಾಯ ಮಾಡ್ತೀರಾ...??

ಆತನಿಗಿನ್ನೂ ಹದಿನಾಲ್ಕು ವರ್ಷ. ಶಾಲೆಗೆ ಹೋಗುತ್ತಾ, ಆಟವಾಡುತ್ತ ಬದುಕಬೇಕಿದ್ದ ವಯಸ್ಸು. ಆದರೆ ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್ ಭೂತ ಆತನ ಜೀವನವನ್ನೆ ತಿಂದು ಹಾಕುತ್ತಿದೆ.
    ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾ.ಪಂ ವ್ಯಾಪ್ತಿಯ ಧನಗನಹಳ್ಳಿಯ ನಿವಾಸಿಯಾದ ಹಜರತ್ ಅಲಿಯ ಪುತ್ರ ನೌಶಾದ್ ಅಲಿ ಎಂಬ ಬಾಲಕನಿಗೆ ಕ್ಯಾನ್ಸರ್ ಕಾಯಿಲೆ ಬಂದಿದ್ದು, ಜೀವನವನ್ನೇ ಮಂಕಾಗಿಸಿದೆ. ಕಾಯಿಲೆಯಿಂದಾಗಿ ಶಾಲೆಗೆ ಹೋಗಲಾಗದೇ, ಇತರ ಮಕ್ಕಳ ಜೊತೆ ಆಡಲಾಗದೇ ದಿನಗಳನ್ನು ಕಳೆಯುವಂತಹ ಪರಿಉಸ್ಥಿತಿ ಎದುರಾಗಿದೆ.
    ಕ್ಯಾನ್ಸರ್ ಪೀಡಿತ ಬಾಲಕ ಶಾಲೆಗೆ ಹೋಗುತ್ತಿದ್ದರೆ ಇಷ್ಟರ ವೇಳೆಗೆ 9ನೇ ತರಗತಿಯಲ್ಲಿ ಓದುತ್ತಿದ್ದ. ಆದರೆ ವಿಧಿಯಾಟದ ಪರಿಣಾಮ ಆತ ಶಾಲೆಗೆ ಹೋಗುವುದನ್ನು ಮೊಟಕುಗೊಳಿಸಿದೆ. ಮನೆಯಲ್ಲಿ ಕಡುಬಡತನದ ಕಾರಣ ತಂದೆ ಹಜರತ್ ಅಲಿ ಮಗನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಹಣ ಹೊಂದಿಕೆ ಮಾಡಲಾಗದೇ ಕಷ್ಟಪಡುತ್ತಿದ್ದಾರೆ.
    ಕಳೆದ ಒಂದು ವರ್ಷದ ಹಿಂದೆ ಆಟವಾಡುತ್ತಿದ್ದ ನೌಶಾದ್ ಇದ್ದಕ್ಕಿದ್ದಂತೆ ಜಾರಿಬಿದ್ದ. ಬಿದ್ದ ಪರಿಣಾಮ ಆತನ ಎದೆಯ ಭಾಗಕ್ಕೆ ಬಲವಾದ ಹೊಡೆತ ಬಿದ್ದು ಅಲ್ಲೊಂದು ದೊಡ್ಡ ಗಡ್ಡೆಯಾಯಿತು. ಅದಕ್ಕೆ ಪ್ರಾಥಮಿಕ ಚಿಕಿತ್ಸೆಯನ್ನೂ ಕೊಡಿಸಲಾಯಿತು. ಪ್ರಾರಂಭದಲ್ಲಿ ಚಿಕ್ಕದಾಗಿದ್ದ ಗಡ್ಡೆ ಒಂದೆರಡು ದಿನಗಳಲ್ಲಿಯೇ ದೊಡ್ಡದಾಗಲು ಪ್ರಾರಂಭಿಸಿತು. ಜೊತೆಗೆ ಜ್ವರವೂ ಬಂದ ಪರಿಣಾಮ ನೌಶಾದ್ ಅಲಿಯನ್ನು ತಂದೆ ತಾಯಿಯರು ಶಿರಸಿಯ ಒಂದೆರಡು ಆಸ್ಪತ್ರೆಗೆ ಕರೆದುಕೊಂಡು ಹೋದರು.
    ಶಿರಸಿ ಪಟವರ್ಧನ್ ಆಸ್ಪತ್ರೆಯಲ್ಲಿ ಮೊದಲು ಪರೀಕ್ಷೆ ಮಾಡಲಾಯಿತು. ನಂತರ ಬಳಗಂಡಿ ವೈದ್ಯರನ್ನು ಸಂಪಕರ್ಿಸಿದರೂ ಪರಿಣಾಮ ಕಾಣಲಿಲ್ಲ. ಕೊನೆಗೆ ಡಾ. ದಿನೇಶ್ ಶೆಟ್ಟಿ ಅವರ ಬಳಿಯೂ ಚಿಕಿತ್ಸೆ ಕೊಡಿಸಲಾಯಿತು. ಈ ಆಸ್ಪತ್ರೆಗಳಲ್ಲಿ ಗಡ್ಡೆಯ ನೀರನ್ನು ತೆಗೆದು ಕಳಿಸಿದರಾದರೂ ಮತ್ತೆ ಕೆಲವು ದಿನಗಳಲ್ಲಿ ಗಡ್ಡೆ ಊದಿಕೊಂಡಿತು. ಇದರಿಂದ ಪರೀಕ್ಷೆ ಮಾಡಿದ ವೈದ್ಯರು ನೌಶಾದ್ನನ್ನು ಉನ್ನತ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿಗೆ ಕರೆದೊಯ್ಯುವಂತೆ ತಿಳಿಸಿದರು. ಅಲ್ಲಿ ಪರೀಕ್ಷೆ ಮಾಡಿಸಿದಾಗ ಆಡುವ ಹುಡುಗ ನೌಶಾದ್ಗೆ ಕ್ಯಾನ್ಸರ್ ಮಾರಿ ಇರುವುದು ತಪಾಸಣೆಯಲ್ಲಿ ಪತ್ತೆಯಾಯಿತು.
   ಇಲ್ಲಿಯವರೆಗೂ ಎಲ್ಲ ಮಕ್ಕಳಂತೆ ಆಟವಾಡಿ, ಓದಿಕೊಂಡು ನಲಿಯುತ್ತಿದ್ದ ನೌಶಾದ್ ಬಾಳಿನಲ್ಲಿ ಕತ್ತಲೆಯ ಪುಟಗಳು ಆರಂಭವಾದವು. ಹುಬ್ಬಳ್ಳಿಯಲ್ಲಿ ನೂರಾರು ತರಹೇವಾರಿ ಪರೀಕ್ಷೆಗಳು, ಚಿಕಿತ್ಸೆಗಳನ್ನು ಮಾಡಲಾಯಿತು. ಅದೆಷ್ಟೋ ಬಗೆಯ ಇಂಜೆಕ್ಷನ್ಗಳನ್ನು ಕೊಡಲಾಯಿತು. ಕೊನೆಗೊಮ್ಮೆ ಹುಬ್ಬಳ್ಳಿಯ ವೈದ್ಯರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದರು. ಬಾಲಕ ನೌಶಾದ್ ಅಲಿ ಈಗ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
    ಇದುವರೆಗೂ ನೌಶಾದ್ನನ್ನು ಕನಿಷ್ಟ ಏಳು ಬಾರಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಕರೆದಿಕೊಂಡು ಹೋಗಿ ಬರಲಾಗಿದೆ. ಏಳು ಸಾರಿಯೂ ಭಾರಿ ಬೆಲೆಯ ಇಂಜೆಕ್ಷನ್ಗಳನ್ನು ನೀಡಲಾಗಿದೆ. ಒಂದೊಂದು ಚುಚ್ಚುಮದ್ದಿಗೂ 3 ರಿಂದ 5 ಸಾವಿರ ರು. ಖಚರ್ಾಗುತ್ತದೆ. ಒಮ್ಮೆ ಬೆಂಗಳೂರಿಗೆ ಹೋಗಿಬಂದರೆ ಕನಿಷ್ಟ 15 ಸಾವಿರ ರು. ಖಚರ್ಾಗಿರುತ್ತದೆ. ಮಗನ ಚಿಕಿತ್ಸೆಯ ಸಲುವಾಗಿಯೇ ಮನೆಯಲ್ಲಿದ್ದ ಕುರಿಮಂದೆಯನ್ನು ಮಾರಾಟ ಮಾಡಲಾಗಿದೆ. ಜೊತೆಗೆ ಕುಟುಂಬವನ್ನು ಸಾಕಬೇಕಾಗಿದ್ದ ಬಾಡಿಗೆ ಆಟೋವನ್ನೂ ಇದೀಗ ಮಾರಾಟ ಮಾಡಿ ನೌಶಾದ್ಗೆ ಅವರ ತಂದೆ ಹಜರತ್ ಅಲಿ ಚಿಕಿತ್ಸೆ ಕೊಡಿಸಿದ್ದಾರೆ.

    ನೌಶಾದ್ಗೆ ಈಗಾಗಲೇ ಕಿಮೋಥೆರಪಿಯನ್ನು ಮಾಡಲಾಗಿದೆ. ಅಲ್ಲದೇ 5 ಸಾವಿರ ರು.ಗಳ 5 ಚುಚ್ಚುಮದ್ದನ್ನು ನೀಡಲಾಗಿದೆ. ನೌಶಾದ್ಗೆ ಈಗ ಆಪರೇಶನ್ ಮಾಡುವ ಅಗತ್ಯವಿದೆ. ಅದಕ್ಕೆ 1.5 ಲಕ್ಷ ರು. ಮೊತ್ತದ ಅವಶ್ಯಕತೆಯಿದೆ. ಅದನ್ನು ಕಟ್ಟಿದರೆ ಶಸ್ತ್ರಚಿಕಿತ್ಸೆ ಮಾಡುವುದಾಗಿ ಕಿದ್ವಾಯಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ನೌಶಾದ್ನ ತಂದೆ ಹಜರತ್ ಅಲಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
    ಹಜರತ್ ಅಲಿ ಮಗನ ಶಸ್ತ್ರ ಚಿಕಿತ್ಸೆಗಾಗಿ ಅಗತ್ಯವಿರುವ ಹಣಕ್ಕಾಗಿ ಹಲವು ಜನರ ಬಳಿ ಅಂಗಲಾಚಿದ್ದಾರೆ. ಅಷ್ಟೇ ಅಲ್ಲದೆ ರಾಜಕಾರಣಿಗಳ ಮನೆಯ ಬಾಗಿಲನ್ನೂ ತಟ್ಟಿ ಬಂದಿದ್ದಾರೆ. ಆದರೆ ಯಾರಿಂದಲೂ ಸಹಾಯವಾಗಿಲ್ಲ. ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರು 25 ಸಾವಿರ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣವನ್ನು ಕೊಡಿಸಿದ್ದಾರೆ (ಈ ಹಣವನ್ನು ಕೊಡಿಸಲು ಮೂರು-ನಾಲ್ಕು ತಿಂಗಳು ಸತಾಯಿಸಲಾಗಿದೆ ಎಂಬುದು ಹಜರತ್ ಅಲಿಯ ಹೇಳಿಕೆ..!!). ಇನ್ನೂ ಕೆಲವು ಸಂಸ್ಥೆಗಳು ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದಾರಾದರೂ ಹಣವನ್ನು ನೀಡಲು ಮುಂದಾಗಿಲ್ಲ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಹಜರತ್ ಅಲಿ ಕುಟುಂಬ ನೌಶಾದ್ ಅಲಿಗೆ ಚಿಕಿತ್ಸೆ ನೀಡುವುದು ಹೇಗೆ ಎನ್ನುವ ಚಿಂತೆಯಲ್ಲಿ ತೊಡಗಿದೆ.
    ಕುಟುಂಬದ ಪಾಲಿಗೆ ರೇಷನ್ ಕಾರ್ಡಿದ್ದರೂ ನಾಟ್ ವ್ಯಾಲಿಡ್ ಎಂದು ತೋರಿಸುತ್ತಿರುವುದರಿಂದ ಬೇಳಗಾವಿಯಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಅಡಿಯಲ್ಲಿ ನಡೆಸಬೇಕಿದ್ದ ಚಿಕಿತ್ಸೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ಶಿರಸಿಯ ತಹಶೀಲ್ದಾರರು ಈ ಕುರಿತು ರೇಶನ್ಕಾರ್ಡ್ ವ್ಯಾಲಿಡ್ ಆಗಿದೆ ಎಂದು ಬರವಣಿಗೆಯ ಮೂಲಕ ಬರೆದುಕೊಟ್ಟಿದ್ದರೂ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಹಣವಿಲ್ಲದೇ ಚಿಕಿತ್ಸೆ ಹೇಗೆ ಕೊಡಿಸುವುದೋ ತಿಳಿಯದಾಗಿದ್ದು, ಬಾಲಕನ ಬದುಕು ಬರ್ಭರವಾಗಿದೆ.
    ಸಮಾಜಮುಖಿ ವ್ಯಕ್ತಿಗಳು, ಸಹೃದಯಿಗಳು ನೌಶಾದ್ ಅಲಿಯ ಚಿಕಿತ್ಸೆಗಾಗಿ ಧನಸಹಾಯ ಮಾಡಬೇಕೆಂದು ತಂದೆ ಹಜರತ್ ಅಲಿ ಕೇಳಿಕೊಂಡಿದ್ದಾರೆ. ಬಾಲಕನಿಗೆ ಸಹಾಯ ಮಾಡಲು ಇಚ್ಛಿಸುವವರು ಇಂಡಿಯನ್ ಓವರ್ಸಿಸ್ ಬ್ಯಾಂಕ್ನ ದಾಸನಕೊಪ್ಪ ಶಾಖೆಯಲ್ಲಿ ತೆರೆಯಲಾಗಿರುವ ನೌಶಾದ್ ಅಲಿಯ ಸೇವಿಂಗ್ಸ್ ಖಾತೆ ನಂ. 029501000008062 ಈ ನಂಬರಿಗೆ ಹಣವನ್ನು ನೀಡಬಹುದಾಗಿದೆ. ಈ ಕುರಿತು ನೌಶಾದ್ ಅಲಿಯ ತಂದೆ ಹಜರತ್ ಅಲಿಯನ್ನು 9741579371 ಈ ದೂರವಾಣಿ ಸಂಖ್ಯೆಯ ಮೂಲಕ ಸಂಪಕರ್ಿಸಬಹುದಾಗಿದೆ.
ನೌಶಾದ್ ನ ಸ್ವಗತ...

(ನೌಶಾದ್ ಅಲಿಯನ್ನು ಮಾತನಾಡಿಸುವ ಸಲುವಾಗಿ ಅವನ ಮನೆಗೆ ಹೋದಾಗ ಆತ ಹೇಳಿದ್ದು..)



    ಒಂದು ವರ್ಷದ ಹಿಂದೆ ಶಾಲೆಗೆ ರಜಾ ಇದ್ದಾಗ ಕುರಿ ಕಾಯಲು ಹೋಗಿದ್ದೆ. ಆಗ ಜಾರಿ ಬಿದ್ದೆ. ಆಮೇಲೆ ಪರೀಕ್ಷೆ ಮಾಡಿದಾಗ ನನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಯ್ತು. ಈಗ ಪ್ರತಿ ತಿಂಗಳು ಕಿಮೋಥೆರಪಿಗಾಗಿ ಬೆಂಗಳೂರಿಗೆ ಹೋಗಿ ಬರುತ್ತಿದ್ದೇನೆ. ಪ್ರತಿ ಸಾರಿ ಹೋದಾಗಲೂ 15 ದಿನ ಆಸ್ಪತ್ರೆಯಲ್ಲಿರಬೇಕು. ಚುಚ್ಚುಮದ್ದುಗಳನ್ನು ಕೊಡುತ್ತಾರೆ. ಅದನ್ನು ಕೊಟ್ಟಾಗ ಆಗುವ ಯಾತನೆಯನ್ನು ಹೇಳಲು ಆಗುವುದಿಲ್ಲ. ಆ ಚುಚ್ಚುಮದ್ದು ಕೊಟ್ಟ ನಂತರ 1 ತಿಂಗಳವರೆಗೆ ತೊಂದರೆಯಿಲ್ಲ. ಆಮೇಲೆ ಮತ್ತೆ ದೇಹದಲ್ಲಿ ತೊಂದರೆಗಳು ಕಾಣಿಸಲು ಶುರುವಾಗುತ್ತವೆ. ಮತ್ತೆ ಚಿಕಿತ್ಸೆಗೆ ಓಡಬೇಕು. ಒಂದು ಸಾರಿ ಆಸ್ಪತ್ರೆಗೆ ಹೋದಾಗಲೂ 10 ಸಾವಿರಕ್ಕಿಂತ ಹೆಚ್ಚು ಖಚರ್ಾಗುತ್ತದೆ ಎಂದು ನಮ್ಮ ಅಬ್ಬಾ ಹೇಳುತ್ತಾರೆ. ನನಗಾಗಿ ನನ್ನ ಅಬ್ಬಾ ಕುರಿಮಂದೆಯನ್ನು ಮಾರಿದರು. ನಮಗೆಲ್ಲ ಜೀವನಾಧಾರವಾಗಿದ್ದ ಬಾಡಿಗೆ ರಿಕ್ಷಾವನ್ನೂ ಮಾರಿದ್ದಾರೆ. ಆದರೆ ನನ್ನ ಚಿಕಿತ್ಸೆಗೆ ಇನ್ನೂ ಬಹಳ ಹಣಬೇಕಾಗುತ್ತದಂತೆ. ಯಾರಾದ್ರೂ ಸಹಾಯ ಮಾಡಬಹುದಲ್ವಾ? ಆಪರೇಶನ್ ಆಗಿ ಮತ್ತೆ ಎಲ್ಲ ಮಕ್ಕಳ ಜೊತೆ ಓಡಿ, ಆಡಿ ಖುಷಿಯಿಂದ ಇರಬಹುದಲ್ವಾ. ಯಾರಾದ್ರೂ ನನಗೆ ಸಹಾಯ ಮಾಡ್ತಾರಲ್ವಾ? 
--
ಈ ಬರಹದಲ್ಲಿ  ನೌಶಾದ್ ಅಲಿಯ ಅಕೌಂಟ್  ನಂಬರ್ ನೀಡಿದ್ದೇನೆ.. ಯಾರಾದ್ರೂ ಸಹಾಯ ಮಾಡುವ ಮನಸ್ಸು ಉಳ್ಳವರು ಮಾಡಬಹುದು... ಹಜರತ್ ಅಲಿಯ ದೂರವಾಣಿ ಸಂಖ್ಯೆಯೂ ಇದೆ ಸಂಪರ್ಕ ಮಾಡಬಹುದು...

Sunday, December 2, 2012

ಉಕರೋಧನ

ಉಕರೋಧನ


ಉತ್ತರಕನ್ನಡದ ಕುರಿತು ಬರೆದ ಒಂದಷ್ಟು ಚೌಪದಿಗಳು
ಯೋಜನೆಗಳ ಭಾರದಲ್ಲಿ ನಲುಗುತ್ತಿರುವ ಉತ್ತರಕನ್ನಡದ ಕುರಿತು ನಾಲ್ಕು ಸಾಲುಗಳ ಸಾಂತ್ವನ... ಚೌಪದಿಗಳ ಬ್ರಹ್ಮ ದಿನಕರ ದೇಸಾಯಿ ನನ್ನ ಈ ಚುಟುಕುಗಳಿಗೆ ಸ್ಫೂರ್ತಿಯ ಸೆಲೆ. ಅವರಿಗೆ ಧನ್ಯವಾದ.

ಅಳಲು

ಏರುತಿದೆ ತದಡಿಯ ಬಿಸಿ
ಜೀವ ಜನತೆ ಕಸಿಬಿಸಿ|
ಉತ್ತರಕನ್ನಡ ಹೋಗುತಿದೆ ಸೂರೆ
ಉಳಿಸುವವರಿಲ್ಲವಲ್ಲೇ ನೀರೆ..||

ಶಿಶುವಿನ ಗೋಳು

ನನ್ನ ಉತ್ತರಕನ್ನಡ ಪ್ರೀತಿಯ ಶಿಶು
ಹಲವು ಯೋಜನೆಗಳಿಗದೇ ಬಲಿಪಶು|
ಎಲ್ಲ ಜನರಿಗೆ ಇದು ನೀಡಿದರೂ ಕೂಳು
ಕೇಳುವವರಿಲ್ಲವಾಯ್ತಲ್ಲೇ ಇದರ ಗೋಳು..||

ಕವನದ ವ್ಯಥೆ

ನನ್ನ ಉ.ಕ ಒಂದು ಸುಂದರ ಕವನ
ಬಹು ಯೋಜನೆಗಳೇ ಇದರ ಚರಣ|
ದುಃಖ ಕಥೆ ಹೇಳುತಿದೆ ಪ್ರತಿಯೊಂದೂ ಪ್ಯಾರಾ
ಮುಗಿದುಹೋಗುತ್ತಿದೆ ಇದರ ಸಂಪತ್ತು ಪೂರಾ..|||

ಸೀರೆಯಂತೆ ಬದುಕು

ನನ್ನ ಉ.ಕವೆ ಒಂದು ರೇಶಿಮೆಯ ಸೀರೆ
ನಾಜೂಕು, ಜೋಪಾನ. ಇರಬೇಕು ನೀರೆ.|
ಛಂದವಿದ್ದರೆ ಅದು ಉಳಿಸುವುದು ಮಾನ
ಹರಿದು ಹೋದರೆ ನಿನ್ನ ಬದುಕೇ ಊನ||

ಮುತ್ತು ಕಾಶ್ಮೀರ

ನನ್ನ ಉಕವೆ ಒಂದು ಕಡಲ ಮುತ್ತು
ಬೆಸ್ತನ ತೀಟೆಯ ಬೇಟೆಗೆ ಬಲಿಯಾಗಿ ಬಿತ್ತು.|
ಈ ನಾಡೇ ಒಂದು ಮಿನಿ ಕಾಶ್ಮೀರ
ಪ್ರತಿಯೊಂದು ಭಾಗ ಎಂದೆಂದೂ ಅಸ್ಥಿರ|||

ಕಣ್ಣು-ಬೇನೆ

ನನ್ನ ಉ.ಕವೆ ಒಂದು ತೀಕ್ಷ್ಣ ಕಣ್ಣು
ನೂರೆಂಟು ಯೋಜನೆಗಳೇ ಅದರ ಹುಣ್ಣು|
ಜೊತೆಗೆ ಕಾಡುತಿವೆ ಹಲವೆಂಟು ಬೇನೆ
ಏನು ಮಾಡುವುದು ಇದಕೆ ಇಲ್ಲವಲ್ಲ ಕೊನೆ||


ಕಾಲೇಜು ಓದುತ್ತಿದ್ದ ದಿನಗಳಲ್ಲಿ ಬರೆದಿದ್ದ ಈ ಚುಟುಕಗಳನ್ನು ಶಿರಸಿಯ ಪತ್ರಕರ್ತ, ಕದಂಬವಾಣಿ, ನಾಗರೀಕ, ಕರ್ಮವೀರ, ಉತ್ತರಕನ್ನಡ ಜಿಲ್ಲಾ ವಾರ್ತಾ ಸಂಚಯ ಈ ಮುಂತಾದ ಅನೇಕ ಪತ್ರಿಕೆಗಳು ಪ್ರಕಟಿಸಿದ್ದವು. ಅದಕ್ಕೆ ಕಾರಣೀಭೂತರಾದವರಿಗೆ ಧನ್ಯವಾದಗಳು-ವಿನಯ್ ದಂಟಕಲ್

Friday, November 30, 2012

ನಿನ್ನ ನೆನಪು ಬಂದಾಗಲೆಲ್ಲ...



ನಿನ್ನ ನೆನಪು ಬಂದಾಗಲೆಲ್ಲ
ಬೇಸಿಗೆಯಲ್ಲೂ ಮಳೆ
ಬರುತ್ತದೆ ಗೆಳತೀ, ಕೊರೆವ
ಚಳಿಯೂ ಹಿತವೆನ್ನಿಸುತ್ತದೆ..||

ನಿನ್ನ ನೆನಪು ಬಂದಾಗಲೆಲ್ಲ
ಭಾವಗಳು ಹಾಡಾಗುತ್ತವೆ, ಗೆಳತೀ
ಮನಸುಗಳು ಹೂವಾಗುತ್ತವೆ..||

ನಿನ್ನ ನೆನಪು ಬಂದಾಗಲೆಲ್ಲ
ಕಣ್ಣೀರಿಗೂ ಅರ್ಥ ಬರುತ್ತದೆ ಗೆಳತೀ,
ಪ್ರತಿ ಮಾತೂ ವ್ಯರ್ಥವೆನ್ನಿಸುತ್ತದೆ...||

ನಿನ್ನ ನೆನಪು ಬಂದಾಗಲೆಲ್ಲ, ಸುಪ್ತ
ಪ್ರೀತಿಯ ಶೋಕಗೀತೆ ನೆನಪಾಗುತ್ತದೆ ಗೆಳತಿ,
ಕಂಡ ಕನಸುಗಳೆಲ್ಲ ಸದ್ದಿಲ್ಲದೇ ಕರಗುತ್ತವೆ...||

ನಿನ್ನ ನೆನಪು ಬಂದಾಗಲೆಲ್ಲ
ಉಸಿರು ಭಾರವೆನ್ನಿಸುತ್ತದೆ ಗೆಳತಿ,
ಸಂಗೀತದ ಮೋಡಿ ಚಿತ್ತ ಕಲಕುತ್ತಿದೆ..||

ನಿನ್ನ ನೆನಪುಬಂದಾಗಲೆಲ್ಲ, ಮತ್ತದೆ
ಪ್ರೀತಿ ಸೆಳೆಯುತ್ತದೆ ಗೆಳತೀ, ಈ
ಹೃದಯ ಪದೇ ಪದೆ ಹಿಂಡುತ್ತದೆ..
ಕಣ್ಣು ಮಂಜಾಗುತ್ತಿದೆ...||

(ಬರೆದಿದ್ದು: ದಂಟಕಲ್ನಲ್ಲಿ 09-02-2008ರಂದು)
(ವಿ.ಸೂ : ಮೇಲೆ ಹಾಕಿರೋ ಪೋಟೋವನ್ನು 4 ವರುಷದ ಹಿಂದೆ ಜೋಗ ಜಲಪಾತದ ತಳಭಾಗದಲ್ಲಿ ನಾನು ತೆಗೆದಿದ್ದು. ಜೋಗದ ಚಿತ್ರವನ್ನು ತೆಗೆಯೋಣ ಅಂತ ಕ್ಲಿಕ್ಕಿಸಿದ್ದು. ಕೊನೆಗೆ ಪ್ರಿಂಟ್ ಹಾಕಿಸಿದಾಗಲೇ ಇಷ್ಟು ಸುಂದರವಾಗಿ ಮೂಡಿಬಂದಿದ್ದು ಗೊತ್ತಾದದ್ದು. ಮಿತ್ರರಾದ ರಾಘವ, ಕೃಷ್ಣಮೂರ್ತಿ ಇವರು ಈ ಚಿತ್ರವನ್ನು ಚೆನ್ನಾಗಿ ವಿಮರ್ಷೆ ಮಾಡಿದ್ದಾರೆ. ಇದು ಹೇಗಿದೆ ಎಂಬುದನ್ನು ತಾವು ಹೇಳಬೇಕು.)

Thursday, November 29, 2012

ಕನಸಿನ ಪ್ರಶ್ನೆಗೆ ಉತ್ತರವಾಗಿ : ಪ್ರೇಮ ಪತ್ರ-2

ಪ್ರೇಮ ಪತ್ರ-2

ಕನಸಿನ ಪ್ರಶ್ನೆಗೆ ಉತ್ತರವಾಗಿ


ಒಲವಿನ ಗೆಳತಿ..,
    ನೀನ್ಯಾಕೆ ನನ್ನ ಮನಸ್ಸನ್ನು ಈ ಪರಿಯಲ್ಲಿ ಆವರಿಸಿದ್ದೀಯಾ? ಅದ್ಯಾಕೆ ನೀನು ನನ್ನೆದೆಯಾಳದ ಕೋಟೆಯೊಳಗೆ ಅವಿತುಕೊಂಡು ಹಗಲಿರುಳೂ ಮನದ ತುಂಬ ಪರಿತಾಪ ಮೂಡುವಂತೆ ಮಾಡುತ್ತೀಯಾ? ಬೆಳಗ್ಗಿನಿಂದ ಸಂಜೆಯ ತನಕ ಮಾಡಬಹುದಾಗಿದ್ದ ಎಲ್ಲ ಕೆಲವನ್ನೂ ಬದಿಗೊತ್ತಿ ಮಾತಾಡಿದ್ದು, ಕಾಡು ಹರಟೆ ಹೊಡೆದಿದ್ದು ನಿನಗಿನ್ನೂ ಸಾಕು ಎನ್ನಿಸಲಿಲ್ಲವೇ..? ಮತ್ಯಾಕೆ ನೀನು ನನ್ನ ಕನಸಲ್ಲಿ ಬಂದು ಮತ್ತೆ ಮತ್ತೆ ತಟ್ಟಿ ತಟ್ಟಿ ಎಬ್ಬಿಸುತ್ತೀಯಾ..? ಪದೇ ಪದೆ ಕನವರಿಸುವಂತೆ ಮಾಡುತ್ತೀಯಾ..?
    ನಿನ್ನೆ ಏನಾಯ್ತು ಗೊತ್ತಾ..? ಬೆಳಿಗ್ಗೆ ಎದ್ದ ಕೂಡಲೇ ಕನ್ನಡಿಯೊಳಗೆ ಇಣುಕಿದೆ. ಮುಖದ ಮೇಲೆ ಹಸಿ ಹಸಿ ಮೊಡವೆ. ಹಣ್ಣಾಗುವ ಲಕ್ಷಣಗಳನ್ನು ತೋರಿಸ್ತಾ ಇದೆ.! ಆ ತಕ್ಷಣ ನನಗೆ ಸುದೀಪನ `ಮೈ ಆಟೋಗ್ರಾಫ್' ಸಿನಹೆಮಾದಲ್ಲಿ ಆತನ ತಾಯಿ ಅವನ ಬಳಿ `ನಿನ್ನ ಮೇಲೆ ಯಾವುದೋ ಹುಡುಗಿಯ ಕಣ್ಣು ಬಿದ್ದಿರಬೇಕು' ಎಂದು ಹೇಳಿದ ಡೈಲಾಗ್ ನೆನಪಾಯ್ತು. ನನ್ನ ಮುಖದ ಮೇಲೆ ಎದ್ದಿರುವ ಮೊಡವೆಗೆ ಒಡತಿ ನೀನೇ ಬಿಡು. ಅದರಲ್ಲಿ ಎರಡು ಮಾತಿಲ್ಲ.
    ಹೇಯ್ ಮರೆತೇ ಬಿಟ್ಟಿದ್ದೆ ನೋಡು.. ನಾನು ಕೊಡಿಸಿದ್ನಲ್ಲಾ.. ಕ್ರೀಂ ಕಲರಿನ ಟೆಡ್ಡಿ ಬೇರ್. ನಿನ್ನ ಬೆಚ್ಚನೆಯ ತಬ್ಬುಗೆಯಲ್ಲಿ ಹಿತವಾಗಿ ಮಲಗಿದೆಯೇನೋ ಅಲ್ವಾ? ಏನು..? ಇನ್ನೂ ಮಲಗಿಲ್ವಾ? ಅದೂ ಕೂಡ ನೆನಪಿನ ಊಟೆಯಲ್ಲಿ ಮಿಂದೇಳ್ತಾ ಇರಬಹುದು ಬಿಡು..
    ಈಗಂತೂ ನಿನ್ನ ನೆನಪು ಅದ್ಯಾವಪರಿ ನನ್ನನ್ನು ಹಿಂಡಿ ಹಿಪ್ಪೆ ಮಾಡ್ತಾ ಇದೆ ಗೊತ್ತಾ..ಯಾವಾಗ ನಿಶೆ ಕಳೆದು ಬಾನಂಚಿನಲ್ಲಿ ಭಾಸ್ಕರ ಮೂಡಿ ಮೊದಲ ಕಿರಣಗಳು ಭೂಮಿಯನ್ನು ಚುಂಬಿಸುತ್ತದೆಯೋ ಎಂಬುದನ್ನು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದೇನೆ. ಯಾಕಂದ್ರೆ ಬೆಳಕು ಹರಿದರೆ ಸಾಕು ನಾನು ಓಡೋಡಿ ಬಂದು ನಿನ್ನನ್ನು ಕಾಣುತ್ತೇನೆ. ಮಾತಾಡುತ್ತೇನೆ. ಮೌನವನ್ನು ಸೀಳುತ್ತೇನೆ.. ಅಲ್ವಾ.. ಹಾಗೇ ನೀನು ಕಂಡೊಡನೆ ತುಟಿಯಂಚಿನಲ್ಲಿ ತುಂಟದೊಂದು ಕಿರುನಗೆಯನ್ನು ಎಸೆಯುತ್ತೀಯಲ್ಲಾ ಅದನ್ನು ಯಾವಾಗ ಕಾಣುತ್ತೀನೋ ಎಂಬ ತವಕ ನನ್ನ ಮನದೊಳಗೆ. ಹಾಳಾದ ಸಂಜೆ.. ಯಾಕೆ ಇಷ್ಟು ಲೇಟಾಗಿ ಸರಿಯುತ್ತಿದೆಯೋ..
    ಟೈಮಿಗಂತೂ ಸೆನ್ಸೇ ಇಲ್ಲ. ಯಾವಾಗ ಓಡಬೇಕೋ ಆಗ ಓಡೋದೆ ಇಲ್ಲ. ಟಕಾ ಟಕಾ.. ಅಂತ ನಿಧಾ......ನ ಓಡ್ತಾ ಇದೆ. ಅದಕ್ಕೇನು ಗೊತ್ತು ನನ್ನ ಪರಿತಾಪ..? ಪ್ರೀತಿಯ ಬಗ್ಗೆ ಆ ಮಿಷೀನಿಗೆ ಅರಿವಾದರೂ ಹೇಗಿರಬೇಕು ಹೇಳು. ಸಮಯದ ಕೈಗೊಂಬೆ ಅದು. ಟೈಂ ತೋರಿಸೋ ಭರದಲ್ಲಿ ತಾನು ಪ್ರೀತಿ ಎಂಬ ವಿಸ್ಮಯವನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬುದನ್ನೂ ಗೊತ್ತು ಮಾಡಿಕೊಳ್ಳಲಾಗದಂತಹ ವಿಚಿತ್ರ ಯಂತ್ರ ಅದು. ಹೋಗ್ಲಿ ಬಿಡು. ಅದಕ್ಕೇ ಅಂದು ಏನು ಪ್ರಯೋಜನ..?
    ಹಾಂ.. ಮರೆತಿದ್ದೆ ನೋಡು. ನಾಳೆ ಬರುವಾಗ ಖಂಡಿತವಾಗಿಯೂ ಆ ಪುಟ್ಟ ನವಿಲುಗರಿಯನ್ನು ತರುತ್ತೇನೆ. ನವಿಲುಗರಿಯಾ ಅದು.. ಊಹುಂ ಅಲ್ಲ. ನವಿಲುಗರಿಯ ಮರಿ ಎನ್ನಬಹುದು. ನೀನು ನನ್ನ ಮನೆಗೆ ಬಂದಿದ್ದಾಗ, ನಿನ್ನ ಸಂಗಡ ಗುಡ್ಡೇ ತೋಟ ಗಣೇಶನ ದೇವಳಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಸಿಕ್ಕಿತ್ತು. ಚಕ್ಕನೆ ಎತ್ತಿಕೊಂಡು ನಿನಗೆ ಕೊಟ್ಟಿದ್ದೆ. ದಾರಿಯಲ್ಲೆಲ್ಲಾದರೂ ಕಳೆದುಹೋದೀತು.. ಮನೆಯ ತನಕ ನೀನೆ ಇಟ್ಟುಕೋ ಎಂದವಳಿಗೆ ಕೊನೆಗೆ ಮರೆತು ಹೋಗಿತ್ತು. ಕಡೆಗೊಮ್ಮೆ ನೆನಪಾಗಿ ಕೊಡು ಎಂದು ಕಾಡಿದ್ದೆಯಲ್ಲ. ನಾಳೆ ಮಿಸ್ ಮಾಡದೇ ತರುತ್ತೇನೆ. ಅದು ನನ್ನ ಕಬೋರ್ಡಿನಲ್ಲಿ ಮಿನುಗುತ್ತಾ ಕುಳಿತಿದೆ. ಅದೆಷ್ಟೋ ವರ್ಣಗಳ ಚಿಕ್ಕ ಚುಲ್ಟಾರಿ ನವಿಲುಗರಿಗೂ ನಾಳೆ ನಿನ್ನನ್ನು ತಲುಪುವ ತವಕ.
    ಆಯ್ತು.. ಆಯ್ತು... ಖಂಡಿತ ಹಾಗೇ ಮಾಡ್ತೀನಿ.. ನೀ ಹೇಳಿದ ಹಾಗೆಯೇ ಆ ಹಸಿರು ಬಣ್ಣದ ಟಿ-ಷರ್ಟ್ ಹಾಕಿಕೊಂಡೇ ಬರ್ತೀನಿ. ಕಾಲೇಜಿನ ಟ್ರಿಪ್ ಸಂದರ್ಭದಲ್ಲಿ ಶಿವಮೊಗ್ಗೆಯ ಯಾವುದೋ ಬಝಾರಿನಲ್ಲಿ ನನಗಾಗಿ ನೀನು ಕೊಂಡು ತಂದ ಷರ್ಟ್ ಅದು. ನನ್ನ ಜೀವಾಳವೂ ಹೌದು. ಬೆನ್ನಮೇಲೊಂದು ದೊಡ್ಡ ಅಕ್ಷರಗಳಲ್ಲಿ ಬರೆದ ಯು ಕ್ಯಾನ್ ವಿನ್ ಎಂಬ ಬರಹ.. ಎದುರು ಭಾಗದಲ್ಲಿ ಚಿಕ್ಕ ಗಿಟಾರಿನ ಚಿತ್ರ.. ಯಾಕೆ ನಿನಗೆ ಇಂತಹ ವಿಶಿಷ್ಟ ಟೇಸ್ಟು ಅಂತ ಅರ್ಥ ಆಗ್ತಾ ಇಲ್ಲ. ವಿಭಿನ್ನ ಇಂಟರೆಸ್ಟಿನ ನಿನ್ನ ಈ ಟೀಷರ್ಟ್ ನನ್ನ ಪಾಲಿನ ಅಮೂಲ್ಯ ಆಸ್ತಿ. ಇದನ್ನು ಬಹಳ ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತೇನೆ.
    ಸಾಕು.. ಸಾಕು.. ಇನ್ನು ಸಾಕು ಮಾಡ್ತೀನಿ.. ರಾತ್ರಿ ಒಂದೋ ಎರಡೂ ಆಯ್ತು ಇರಬೇಕು ಗಂಟೆಗಳು. ಮನೆಯ ಮಹಡಿಯ ಮೇಲೆ ಕುಳಿತವನಿಗೆ ದೂರದಲ್ಲೆಲ್ಲೋ ಸುಟ್ರನಕ್ಕಿ ಕಿಟ್ಟನೆ ಕಿರುಚಿದ ಅನುಭವಗಳು. ನೀರವತೆ.. ನಾಳೆ ಸಿಗುವ ಮೊದಲು ಈ ಏಕಾಂತ ಪರಿಹಾರಕ್ಕಾಗಿ ಸುಮ್ಮನಿರಲಾರದೇ ಬರೆದ ಬರಹ ಇದು. ಬೇಸರಿಸದಿರು ಮನವೇ. ಇನ್ನು ಹೆಚ್ಚು ಬರೆಯಲಾರೆ ಗೆಳತಿ..
    ನಿನ್ನ ಸವಿ ನೆನಪೆ ಮನದಲ್ಲಿ ಆರಾಧನೆ...
    ....ಪ್ರೀತಿಯ ಉಪಾಸನೆ..

    ನಾಳೆ ಬೆಳಗ್ಗೆ ಮುಂಜಾನೆ ಬಂದು ನಿನ್ನನ್ನು ಕಂಡು ಇದನ್ನು ಕೊಟ್ಟಾಗ ನಿನ್ನ ಮನದಲ್ಲಿ ಮೂಡುವ ಭಾವನೆಗಳನ್ನು ನಾನು ಗಮನಿಸಬೇಕು. ಆಗ ಮಾತ್ರ ನನಗೆ ಏನೋ ಒಂಥರಾ.. ಟಿಡ್ಡಿ ಬೇರ್ ಜೊತೆ ಬೆಚ್ಚಗಿರು. ನಾಳೆ ಸಿಗುತ್ತೇನೆ.
    ಮಿಸ್ ಯೂ..

ಇಂತಿ ನಿನ್ನವ