Thursday, July 30, 2015

ಅಘನಾಶಿನಿ ಕಣಿವೆಯಲ್ಲಿ-24

             `ಪ್ರದೀಪ.. ಏನಾಯ್ತು? ಇದೇನು ಮೈ, ಕೈ ಎಲ್ಲ ರಕ್ತಮಯವಾಗಿದೆ?' ಎಂದು ಎಲ್ಲರೂ ಕೇಳಲಾರಂಭಿಸಿದ್ದರು. ಪ್ರದೀಪ ಸುಧಾರಿಸಿಕೊಳ್ಳುತ್ತ ಕುಳಿತ. ರಾಮುವನ್ನು ಕೆಳಕ್ಕೆ ಇಳಿಸಿದ. ರಾಮು ಕುಂಟುತ್ತ ಓಡಲು ಸಾಗಿ ಬಿದ್ದುಕೊಂಡಿತು. ವಿನಾಯಕ ಕೂಡಲೇ ಒಳಹೋಗಿ ರಾಮುವಿಗಾಗಿ ಪಶು ಚಿಕಿತ್ಸಾಲಯದಿಂದ ತಂದಿದ್ದ ಔಷಧಿಯನ್ನು ಹಚ್ಚಿದ. ರಾಮು ನೋವಿನಿಂದ ನರಳಿತು. ವಿನಾಯಕ ಔಷಧಿ ಹಚ್ಚುವ ವೇಳೆ ಆತನ ಕೈಯನ್ನು ಹಾಗೂ ಮುಖವನ್ನೂ ನೆಕ್ಕಿತು. ರಾಮುವಿನ ಕಾಲಿಗೆ ಕೊಡಲಿಯ ಏಟು ತಾಗಿದ್ದ ಜಾಗದಲ್ಲಿ ರಕ್ತ ಬರುತ್ತಲೇ ಇತ್ತು. ಪ್ರದೀಪ ರಕ್ತಮಯವಾಗಿದ್ದ ಅಂಗಿಯನ್ನು ಬಿಚ್ಚಿ, ಕೈ, ಕಾಲುಗಳನ್ನು ತೊಳೆದುಕೊಂಡು ಬಂದ. ಆದರೂ ರಕ್ತದ ವಾಸನೆ ಹೋಗುತ್ತಿಲ್ಲ ಎನ್ನಿಸಿ ಕಿರಿಕಿರಿಯಾದಂತೆ ಆಯಿತು.
             ನಡುರಾತ್ರಿಯಲ್ಲಿ ಎಚ್ಚರವಾಗಿದ್ದ ಪ್ರತಿಯೊಬ್ಬರೂ ಪ್ರದೀಪನ ಮಾತಿಗಾಗಿ ಕಾದು ಕುಳಿತಿದ್ದರು. ಪ್ರದೀಪ ಏನು ಹೇಳಬಹುದು ಎನ್ನುವ ಕುತೂಹಲ ಎಲ್ಲರದ್ದೂ. ಕತ್ತಲಲ್ಲಿ ಹುಂಭತನ ಮಾಡಿ ಕಾಡುಗಳ್ಳರನ್ನು ನೋಡಲು ಹೋಗಿದ್ದ ವಿಷಯವನ್ನು ಈಗಾಗಲೇ ವಿನಾಯಕ, ವಿಜೇತಾ, ವಿಷ್ಣು ಹಾಗೂ ವಿಕ್ರಮರು ಹೇಳಿದ್ದರು. ಆ ನಂತರ ಏನಾಯಿತು? ಕಾಡಿನಲ್ಲಿ ಕೇಳಿಸಿದ್ದ ಆಕ್ರಂದನ ಯಾರದ್ದು ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ. ಪ್ರದೀಪ ಹೇಳಲಿ ಎಂದುಕೊಂಡು ಕಾದರು.
           ಪ್ರದೀಪ ನಿಧಾನವಾಗಿ ಹೇಳಲು ಆರಂಭಿಸಿದ. ವಿಜೇತಾಳನ್ನು ಮುಂದಕ್ಕೆ ಕಳುಹಿಸಿ ತಾನು ಮರಗಳ್ಳನಿಗಾಗಿ ಕಾಯುತ್ತ ನಿಂತಿದ್ದ ವಿಷಯ ಸೇರಿದಂತೆ, ತಾನೊಬ್ಬ ಮರಗಳ್ಳನಿಗೆ ಹೊಡೆದಿದ್ದು, ಆತ ಕೂಗಿಕೊಂಡು ಓಡಿಹೋಗಿದ್ದು, ಇನ್ನೊಬ್ಬನ ಬೆನ್ನಟ್ಟಿದ್ದು, ವಾಪಾಸು ಬರುವಾಗ ರಾಮು ಸಿಕ್ಕಿದ್ದು, ಆಮೇಲೆ ಕಾಡಿನಲ್ಲಿ ದಾರಿ ತಪ್ಪಿದ್ದು ಎಲ್ಲವನ್ನೂ ಹೇಳಿದ. ಪ್ರದೀಪ ಒಂದೊಂದಾಗಿ ವಿಷಯವನ್ನು ಹೇಳುತ್ತಿದ್ದರೆ ಕೇಳುಗರ ಮೈಮೇಲಿನ ರೋಮಗಳೆಲ್ಲ ಮೆಟ್ಟಗಾಗಿದ್ದವು. ಆತಂಕದಿಂದ ಪ್ರತಿಯೊಬ್ಬರೂ ಥರಗುಡುತ್ತಿದ್ದರು. ಮುಂದೇನು ಕಾದಿದೆಯೋ ಭಗವಂತಾ ಎಂದುಕೊಂಡು ಕಾಯುತ್ತಿದ್ದರು. ಖಂಡಿತವಾಗಿಯೂ ಮುಂದೇನೋ ಅಪಾಯ ಕಾದಿದೆ ಎಂದುಕೊಂಡು ಆತಂಕ ಪಟ್ಟುಕೊಂಡರು.
           ಆದರೆ ಪ್ರದೀಪ ಮಾತ್ರ ನಿರಾಳನಾಗಿದ್ದ. ಮರಗಳನ್ನು ಕಡಿದು ಸಾಗಿಸುತ್ತಿದ್ದ ತಂಡಕ್ಕೆ ತಾನು ಸರಿಯಾದ ಉತ್ತರ ಕೊಟ್ಟಿದ್ದೇನೆ. ಪಾಠ ಕಲಿಸಿದ್ದೇನೆ ಎಂದುಕೊಂಡ. ವಿಕ್ರಮ ಹಾಗೂ ವಿಜೇತಾರ ಬಳಿ ಸನ್ನೆ ಮಾಡಿದ ಪ್ರದೀಪ `ನಿಮ್ಮ ಬಳಿ ಮಾತನಾಡಬೇಕಿದೆ..' ಎಂದು ಹೇಳಿದವನೇ ಮಹಡಿಯೇರಿದ. ಪ್ರತಿಯೊಬ್ಬರೂ ತಮ್ಮ ತಮ್ಮ ಸ್ವಸ್ಥಾನಕ್ಕೆ ಮರಳಿದರು. ವಿಕ್ರಮ, ವಿಜೇತಾರು ಪ್ರದೀಪನನ್ನು ಹಿಂಬಾಲಿಸಿದರು. ವಿನಾಯಕ ಕೂಡ ಜೊತೆಗೆ ಬಂದ.
           ಮಹಡಿಯಲ್ಲಿ ಕೋಣೆಯೊಳಕ್ಕೆ ನಾಲ್ವರೂ ಹೋದರು. ಕೋಣೆಯ ಬಾಗಿಲು ಹಾಕಿದ ಪ್ರದೀಪ ಮಾತನಾಡಲು ಆರಂಭಿಸಿದ. `ನೋಡಿ.. ನಾನು ಹೊಡೆದ ಹೊಡೆತಕ್ಕೆ ಖಂಡಿತವಾಗಿಯೂ ಒಬ್ಬಾತ ಸತ್ತಿರುವುದು ಖಾತ್ರಿಯಾಗಿದೆ. ರಾಮು ಇನ್ನೊಬ್ಬನಿಗೆ ಗಾಯ ಮಾಡಿದೆ. ರಾಮುವಿನ ಅಬ್ಬರ ನೋಡಿದರೆ ಅದು ಮಾಡಿದ್ದ ಗಾಯ ಬಹಳ ದೊಡ್ಡದು ಎನ್ನಬಹುದೇನೋ. ನಾವು ಇನ್ನು ಹುಷಾರಾಗಿರಬೇಕು. ನಾಳೆ ನಿಮ್ಮಲ್ಲಿ ಯಾರಾದರೂ ಪೊಲೀಸರಿಗೆ ಮಾಹಿತಿ ನೀಡಿ. ವಿಜೇತಾ ನೀನು ಕ್ಲಿಕ್ಕಿಸಿರುವ ಪೋಟೋಗಳನ್ನು ಜೋಪಾನವಾಗಿ ಇಟ್ಟುಕೋ. ಸ್ಥಳೀಯ ಫಾರೆಸ್ಟ್ ಅಧಿಕಾರಿಗಳಿಗೂ ತಿಳಿಸಿಬಿಡಿ.. ವಿಷಯ ಹಿಂಗಿಂಗ್ ಇದೆ ಅಂತ..' ಎಂದು ಅಧಿಕಾರಿಯುತವಾಗಿ ನುಡಿದ.
             ಪ್ರದೀಪನ ಮಾತಿನ ಗತ್ತು ಎಲ್ಲರಲ್ಲಿಯೂ ಅಚ್ಚರಿ ತಂದಿತ್ತು. ಮರಗಳ್ಳರ ಜೊತೆಗೆ ಕಾದಾಟ ನಡೆಸಿದ ನಂತರ ಇರಬೇಕಾಗಿದ್ದ ಭಯದ ಲವಲೇಶವೂ ಆತನಿಗಿದ್ದಂತೆ ಅನ್ನಿಸಲಿಲ್ಲ. ಇಂತಹ ಅದೆಷ್ಟೋ ಘಟನೆಗಳನ್ನು ತಾನು ಎದುರಿಸಿದ್ದೇನೆ. ಯಾವುದೇ ತೊಂದರೆಯಿಲ್ಲ ಎಂಬಂತೆ ಆತ ಮಾತನಾಡುತ್ತಿರುವುದು ಅಚ್ಚರಿಗೆ ಕಾರಣವಾಗಿತ್ತು. ಮುಂದೇನು ಮಾಡಬೇಕು ಎನ್ನುವುದನ್ನು ಆತ ನಿರ್ದೇಶನದ ಮೂಲಕ ತಿಳಿಸುತ್ತಿದ್ದರೆ ಕೇಳುತ್ತಿದ್ದವರು ಮಾತ್ರ ಅವಾಕ್ಕಾಗಿದ್ದರು. ಪ್ರದೀಪ ಸಾಮಾನ್ಯನೇನಲ್ಲ. ನಮ್ಮಂತೆ ಸಾಧಾರಣ ವ್ಯಕ್ತಿಯೂ ಅಲ್ಲ. ಈತ ರೌಡಿಯೇ, ಅಥವಾ ಬೇರೆ ಇನ್ನೇನಾದರೂ ಆಗಿದ್ದಾನೆಯೇ? ಎಂದೆಲ್ಲ ಚಿಂತಿಸಿದರು.
           `ವಿಕ್ರಂ. ನೀವು ಯಾವ ಕಾರಣಕ್ಕಾಗಿ ಇಲ್ಲಿಗೆ ಬಂದಿದ್ದೀರಿ ಎನ್ನುವ ಮಾಹಿತಿ ನನಗಿದೆ. ನಿಮ್ಮ ಸಹಾಯಕ್ಕೆ ನಾನು ಸದಾ ಸಿದ್ದನಿದ್ದೇನೆ. ಸೂರ್ಯಶಿಖಾರಿ ಗುಂಪಿನ ಬೆನ್ನತ್ತಿ ಬಂದಿರುವುದು ನನ್ನ ಗಮನಕ್ಕಿದೆ. ನಿಮ್ಮ ಜೊತೆಗೆ ಬರುವಾಗಲೇ ನನಗೆ ಇದರ ಮಾಹಿತಿ ಸಿಕ್ಕಿತ್ತು. ಆದರೆ ಇಲ್ಲಿಗೆ ಬಂದ ನಂತರ ನಿಮ್ಮ ತನಿಖಾ ಕೆಲಸ ಹಳಿ ತಪ್ಪುತ್ತಿರುವುದು ನನಗೆ ಗೊತ್ತಾಗುತ್ತಿದೆ. ನೀವು ಮಾಡಬೇಕಾದ ಕೆಲಸ ಯಾವುದೂ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವುದೂ ತಿಳಿದಿದೆ. ನೀವು ಒಪ್ಪಿದರೆ ನಿಮಗೆ ನಾನು ಸಹಾಯ ಮಾಡಬಲ್ಲೆ ನೋಡಿ..' ಎಂದು ಹೇಳಿದ ಪ್ರದೀಪ.
            ಪ್ರದೀಪನ ಮಾತನ್ನು ಕೇಳಿ ವಿಕ್ರಮ ಹಾಗೂ ವಿಜೇತಾ ಬೆಚ್ಚಿ ಬಿದ್ದರು. ಪ್ರದೀಪನ ಮೇಲಿದ್ದ ಗುಮಾನಿ ಜೋರಾಯಿತು. `ನೀನು ಸಹಾಯ ಮಾಡುವುದಾದರೆ ನಮ್ಮ ಅಭ್ಯಂತರ ಇಲ್ಲ. ಆದರೆ ಅದಕ್ಕೆ ಮೊದಲು ನೀನು ಯಾರು ಎನ್ನುವುದನ್ನು ನಮಗೆ ತಿಳಿಸು. ನಮ್ಮ ಬಗ್ಗೆ ಮಾಹಿತಿ ತಿಳಿಯಲು ಹೇಗೆ ಸಾಧ್ಯ? ಸಾಮಾನ್ಯನಾಗಿದ್ದರೆ ನಿನಗೆ ಈ ವಿಷಯವೆಲ್ಲ ತಿಳಿಯುತ್ತಿರಲಿಲ್ಲ ಅಲ್ಲವೇ.. ಮೊದಲು ನಿನ್ನ ಬಗ್ಗೆ ಹೇಳು..' ಎಂದು ವಿಕ್ರಮ ಪಟ್ಟು ಹಾಕುವವನಂತೆ ಕೇಳಿದ.
            `ನಿಮಗೆ ನಾನು ಯಾರು? ಏನು ಮಾಡುತ್ತಿದ್ದೇನೆ ಎನ್ನುವುದು ಮುಂದೆ ಗೊತ್ತಾಗುತ್ತದೆ. ಈಗಲೇ ಅದರ ಬಗ್ಗೆ ಕುತೂಹಲ ಬೇಡ. ಸಮಯ, ಸಂದರ್ಭ ಎಲ್ಲ ಉತ್ತರವನ್ನೂ ನೀಡುತ್ತದೆ. ನಾನು ಪ್ರದೀಪ ಎನ್ನುವುದು ನಿಜ. ನಿಮಗೆ ನಾನು ಏನು ಮಾಡುತ್ತಿದ್ದೇನೆ ಎನ್ನುವುದು ಕುತೂಹಲವಾಗಿಯೇ ಇರಲಿ. ಅಷ್ಟು ತ್ವರಿತವಾಗಿ ನನ್ನ ಬಗ್ಗೆ ಮಾಹಿತಿ ಬೇಕು ಎಂದರೆ ನಾನು ಒಬ್ಬ ಪ್ರೈವೇಟ್ ಡಿಟೆಕ್ಟಿವ್ ಎಂದುಕೊಳ್ಳಿ. ಆದರೆ ಖಂಡಿತ ನಾನು ಪ್ರೈವೆಟ್ ಡಿಟೆಕ್ಟಿವ್ ಎನ್ನುವುದು ನಿಜವಲ್ಲ. ಸಧ್ಯಕ್ಕಿಷ್ಟು ಸಾಕು..' ಎಂದ. ಉಳಿದವರಿಗೆ ಏನು ಹೇಳಬೇಕು ಎನ್ನುವುದು ಗೊತ್ತಾಗದೇ ಸುಮ್ಮನೇ ಉಳಿದಿದ್ದರು.
               `ವಿನು, ವಿಕ್ರಂ. ನಾಳೆ ನೀವು ಮಾಡಬೇಕಾದ ಕೆಲಸ ಸಾಕಷ್ಟಿದೆ. ನಾನು ಹೊಡೆದ ಏಟಿಗೆ ಒಬ್ಬಾತ ಸತ್ತಿರುವುದು ಗ್ಯಾಂರಂಟಿ. ನಾಳೆ ಮುಂಜಾನೆಯೇ ಎದ್ದು ನಾವು ಕಾಡಿಗೆ ಹೋಗಿ ನೋಡೋಣ. ನಾನು ಹೊಡೆದು ಹಾಕಿದವನ ಹೆಣ ಅಲ್ಲಿಯೇ ಇದ್ದರೆ ಆತನ ಚಹರೆ ಗೊತ್ತಾಗುತ್ತದೆ. ಆದರೆ ಕಾಡುಗಳ್ಳರು ಆತನ ಹೆಣವನ್ನು ಅಲ್ಲಿಯೇ ಇಡುವುದರ ಬಗ್ಗೆ ನನಗೆ ನಂಬಿಕೆ ಇಲ್ಲ. ಖಂಡಿತವಾಗಿಯೂ ಅವರು ಅದನ್ನು ಹೊತ್ತೊಯ್ದು ನಾಪತ್ತೆ ಮಾಡಿರುತ್ತಾರೆ. ಒಂದು ವೇಳೆ ಅವರು ನಾಪತ್ತೆ ಮಾಡಿದ್ದರೆ ನಾವೆಲ್ಲ ಸೇರಿ ಸುತ್ತಮುತ್ತಲ ಊರುಗಳಲ್ಲಿ ಯಾರು ಮರಣ ಹೊಂದಿದ್ದಾರೆ ಎನ್ನುವುದನ್ನು ಪತ್ತೆ ಮಾಡೋಣ. ಆಗ ನಮಗೆ ಏನಾದರೂ ಲಿಂಕ್ ಸಿಗಬಹುದು. ಹಾದಿ ತಪ್ಪುತ್ತಿರುವ ನಿಮ್ಮ ತನಿಖಾ ಕೆಲಸಕ್ಕೆ ಈ ಹುಡುಕಾಟ ಏನಾದರೂ ಪ್ರಯೋಜನವನ್ನು ತಂದುಕೊಡಬಹುದು' ಎಂದ. ಎಲ್ಲರೂ ತಲೆಯಾಡಿಸಿದರು.
            `ಇನ್ನೊಂದು ಪ್ರಮುಖ ಕೆಲಸವನ್ನು ನಾವು ಮಾಡಬೇಕಾಗಿದೆ. ನಮ್ಮ ರಾಮು ಇದೆಯಲ್ಲ ಅದು ನಮಗೊಂದು ಪೂರಕ ಕೆಲಸವನ್ನು ಮಾಡಿದೆ. ಅದು ಕಳ್ಳಸಾಗಾಣಿಕೆ ಮಾಡುವವನ ಕಾಲಿಗೆ ಕಚ್ಚಿದೆ. ಹೀಗೆ ಕಚ್ಚಿದ ವ್ಯಕ್ತಿಯನ್ನೂ ಹುಡುಕೋಣ. ಖಂಡಿತವಾಗಿಯೂ ಆತ ಈ ಊರಿನ ಸುತ್ತಮುತ್ತಲ ಫಾಸಲೆಯಲ್ಲಿ ಎಲ್ಲಾದರೂ ಇರಲೇಬೇಕು. ನಾವು ಹುಡುಕುವ ಸಂದರ್ಭದಲ್ಲಿ ಯಾರೂ ಕೂಡ ನಮಗೆ ನಾಯಿ ಕಚ್ಚಿದೆ ಎಂದು ಮಾಹಿತಿ ನೀಡುವುದಿಲ್ಲ. ಆದರೆ ಯಾರ ಕಾಲಿಗೆ ಗಾಯವಾಗಿದೆ ಎಂದು ಹುಡುಕೋಣ. ಗಾಯವಾದವರು ಒಬ್ಬರಿಗಿಂತ ಜಾಸ್ತಿ ಇದ್ದರೆ ಎಲ್ಲರನ್ನೂ ವಿಚಾರಿಸೋಣ. ಒಬ್ಬ ಒದ್ದರೆ ಆತನನ್ನು ಹಿಡಿದುಕೊಂಡು ಬರೋಣ. ಪ್ರಶ್ನೆ ಕೇಳೋಣ. ನಮಗೆ ಮುಂದೆ ಏನಾದರೂ ಪ್ರಯೋಜನಕ್ಕೆ ಬರಬಹುದು..' ಎಂದ ಪ್ರದೀಪ.
            ಪ್ರದೀಪನ ಮಾತುಗಳು ಎಷ್ಟು ನಿಖರವಾಗಿತ್ತೆಂದರೆ ಉಳಿದವರಿಗೆ ಬೇರೆ ಪ್ರಶ್ನೆಗಳನ್ನು ಕೇಳಲು ಅವಕಾಶವೇ ಇರಲಿಲ್ಲ. ಖಡಕ್ ಮಾತುಗಳು ಎಲ್ಲರ ಮನಸ್ಸಿನಲ್ಲಿಯೂ ನಾಟಿದ್ದವು. ಅಷ್ಟರಲ್ಲಾಗಲೇ ಬೆಳಗಿನ ಇನ್ನೊಂದು ಜಾವ ಆರಂಭಗೊಂಡಿತ್ತು. ಚಿಕ್ಕದೊಂದು ಗುಕ್ಕಿನ ನಿದ್ದೆಗೆ ಎಲ್ಲರೂ ಶರಣಾದರು. ಬೆಳಕು ಇನ್ನೂ ಹರಿದಿರಲಿಲ್ಲ. ಅಷ್ಟರಲ್ಲಾಗಲೇ  ಎಲ್ಲರೂ ಎದ್ದು, ಮುಂದಿನ ಕೆಲಸದಲ್ಲಿ ನಿರತರಾದರು. ವಿನಾಯಕನಾಗಲೇ ಪೊಲೀಸರಿಗೆ ಹಾಗೂ ಫಾರೆಸ್ಟ್ ಆಫೀಸರುಗಳಿಗೆಲ್ಲ ಪೋನ್ ಮಾಡಿದ್ದ. ಅವರು ಬರಲು ಇನ್ನೂ ಸಮಯವಿತ್ತು. ಅಷ್ಟರಲ್ಲಿ ರಾತ್ರಿ ಘಟನೆ ನಡೆದ ಸ್ಥಳವನ್ನು ನೋಡಿಕೊಂಡು ಬರೋಣ ಎಂದು ಹೊರಟರು ಎಲ್ಲರೂ.
           ಊರ ಹಿಂದಿನ ಕಡಿದಾದ ಗುಡ್ಡವನ್ನು ಏರಿ ಕಾಡಿನ ಒಳಹೊಕ್ಕವರಿಗೆ ರಾತ್ರಿ ನಡೆದಿದ್ದ ಘಟನೆಗಳೆಲ್ಲ ಕಣ್ಣಮುಂದೆ ಬರಲಾರಂಭಿಸಿದ್ದವು. ರಾತ್ರಿ ಮರಗಳ್ಳರನ್ನು ನೋಡಲು ಹೋಗಿದ್ದು, ಅವರು ಬೆನ್ನಟ್ಟಿದ್ದೆಲ್ಲ ಹಸಿ ಹಸಿಯಾಗಿದ್ದವು. ಇವರು ಸಾಗಿದ ಮಾರ್ಗದಲ್ಲಿ ಇವರ ಓಡಾಟಕ್ಕೆ ಪ್ರತಿಯಾಗಿ ಬಾಗಿದ್ದ ಗಿಡಗಳೆಲ್ಲ ಇನ್ನೂ ನೇರವಾಗಿರಲಿಲ್ಲ. ಅಲ್ಲೊಂದು ಕಡೆ ರಕ್ತದ ಕಲೆ ಬಿದ್ದಿತ್ತು. ಪ್ರದೀಪ ಕೂಡಲೇ ಜಾಗೃತನಾದ. ಇಲ್ಲೇ ಎಲ್ಲೊ ಒಂದು ಕಡೆ ತಾನು ಹೊಡೆದಿದ್ದು, ಮರಗಳ್ಳ ಬಿದ್ದಿರಬಹುದು ಎಂದು ಎಲ್ಲರನ್ನೂ ಅತ್ತ ಕಡೆಗೆ ಕರೆದೊಯ್ದ.
          ಆ ಜಾಗದಲ್ಲಿ ರಕ್ತದ ಕಲೆಗಳಿದ್ದವೇ ಹೊರತು ಯಾವುದೇ ವ್ಯಕ್ತಿಯ ಸವ ಇರಲಿಲ್ಲ. ಮರಗಳ್ಳರು ಪ್ರದೀಪನ ಏಟಿಗೆ ಪ್ರಾಣ ಬಿಟ್ಟಿದ್ದ ವ್ಯಕ್ತಿಯ ದೇಹವನ್ನು ಆಗಲೇ ಹೊತ್ತೊಯ್ದು ಬಿಟ್ಟಿದ್ದರು. ಹೊತ್ತೊಯ್ಯುವಾಗ ರಕ್ತದ ಹನಿಗಳು ಬಿದ್ದಿರಲೇಬೇಕಲ್ಲ ಎಂದುಕೊಂಡ ಪ್ರದೀಪ. ರಕ್ತದ ಕಲೆ ಬಿದ್ದಲ್ಲಿ ಹೋದರೆ ಏನಾದರೂ ಸಿಗಬಹುದಲ್ಲ ಎಂದುಕೊಂಡ. ಇವರು ಕಾಡಿನೊಳಕ್ಕೆ ಹೊರಟು, ಗುಡ್ಡವನ್ನು ಏರಿ ಬಂದಿದ್ದ ಮಾರ್ಗಕ್ಕೆ ವಿರುದ್ಧ ದಿಕ್ಕಿನಲ್ಲಿ ರಕ್ತದ ಕಲೆಗಳು ಬಿದ್ದಿದ್ದವು. ಪ್ರದೀಪ ಆ ಜಾಡನ್ನು ಹಿಡಿದು ಹೊರಟ. ಪ್ರದೀಪನನ್ನು ಉಳಿದವರು ಹಿಂಬಾಲಿಸಿದ್ದರು. ಕಾಡಿನಲ್ಲಿಯೇ ಹಲವಾರು ಸುತ್ತು ಬಳಸಿನ ಮಾರ್ಗದ ಮೂಲಕ ಸಾಗಿದ್ದರು. ರಕ್ತದ ಕಲೆ ಮೊದ ಮೊದಲು ಬಹಳ ಬಿದ್ದಿತ್ತು. ಕೊನೆ ಕೊನೆಗೆ ಹನಿಗಳು ಕಡಿಮೆಯಾಗಿದ್ದವು.
           ಕಾಡಿನ ವಿವಿಧ ಕಡೆಗಳಲ್ಲಿ ಸಾಗಿ ಕೊನೆಗೊಮ್ಮೆ ರಸ್ತೆಯ ಬಳಿ ಬಂದ ನಂತರ ಇದಕ್ಕಿದ್ದಂತೆ ರಕ್ತದ ಹನಿಗಳು ಕಾಣೆಯಾಗಿದ್ದವು. ರಕ್ತದ ಹನಿ ಕಾಣೆಯಾದ ಜಾಗದಲ್ಲಿ ಯಾವುದೋ ವಾಹನದ ಟೈರಿನ ಅಚ್ಚುಗಳಿದ್ದವು. ಅಂದರೆ ಹೊಡೆತ ತಿಂದು ಸತ್ತಿದ್ದವನನ್ನು ವಾಹನದ ಮೇಲೆ ಹಾಕಿಕೊಂಡು ಹೋಗಿರುವುದು ಖಾತ್ರಿಯಾಗಿತ್ತು. ವಾಹನದ ಗಾಲಿಯ ಅಚ್ಚನ್ನು ಆದರಿಸಿ ಹೋಗೋಣವೇ ಎಂದುಕೊಂಡವರಿಗೆ ಪೊಲೀಸ್ ಹಾಗೂ ಫಾರೆಸ್ಟ್ ಅದಿಕಾರಿಗಳಿಗೆ ಪೋನ್ ಮಾಡಿರುವುದು ನೆನಪಾಯಿತು. ಇಷ್ಟು ಹೊತ್ತಿಗೆ ಅವರೆಲ್ಲ ಬಂದಿರುತ್ತಾರೆ. ಮಾಹಿತಿ ನೀಡಬೇಕು ಎನ್ನುವುದು ನೆನಪಾಗಿ ವಾಪಾಸಾದರು. ಅಷ್ಟರಲ್ಲಾಗಲೇ ಸೂರ್ಯ ಬಾನಂಚಿನಿಂದ ಮೇಲಕ್ಕೆ ಏರಿ ಬಂದಿದ್ದ.
          `ವಿನು.. ನಾವು ಮನೆಗೆ ವಾಪಾಸಾದ ನಂತರ ನಮ್ಮೂರ ಬಳಿ ಯಾವುದಾದರೂ ವಾಹನ ಬಂದ ಸದ್ದನ್ನು ಕೇಳಿದ್ದೆಯಾ?' ಪ್ರದೀಪ ಪ್ರಶ್ನಿಸಿದ್ದ.
             `ಇಲ್ಲ. ಕೇಳಿಸಲಿಲ್ಲ ಮಾರಾಯಾ.' ಎಂದ ವಿನಾಯಕ
             `ಓಹ್.. ಹೌದಾ. ಹಾಗಾದರೆ ನಾವು ಈಗ ಹೋಗಿಬಂದ ದಾರಿ ಇನ್ನೆಲ್ಲಿಗೆ ಸಾಗುತ್ತದೆ?'
             `ಹಾ. ಅದು ನಮ್ಮೂರಿಗೆ ಸಂಪರ್ಕ ಕಲ್ಪಸುವ ಇನ್ನೊಂದು ರಸ್ತೆ. ಬಾಳೇಸರ ರಸ್ತೆಯಿಂದ ಲಿಂಕ್ ಇದೆ. ಆ ಮಾರ್ಗದಲ್ಲಿ ಬಂದರೆ ನಾವು ಬಂದಿರುವ ಈ ಕಾಡನ್ನು ಸುತ್ತು ಹಾಕಿ ನಮ್ಮೂರಿಗೆ ಬರಬೇಕು. ಬಹುಶಃ ವಾಹನ ಬಂದಿದ್ದರೆ ಬಾಳೇಸರ ರಸ್ತೆಯತ್ತ ಸಾಗಿರಬೇಕು.' ಎಂದು ಉತ್ತರ ನೀಡಿದ್ದ ವಿನಾಯಕ. ವಾಪಾಸಾಗುವ ವೇಳೆಗೆ ಪೊಲೀಸರು ಹಾಗೂ ಫಾರೆಸ್ಟ್ ಅಧಿಕಾರಿಗಳು ಬಂದಿದ್ದರು.

(ಮುಂದುವರಿಯುತ್ತದೆ)

No comments:

Post a Comment