Sunday, February 15, 2015

ಅಘನಾಶಿನಿ ಕಣಿವೆಯಲ್ಲಿ-12

(ದಂಟಕಲ್ಲಿನಲ್ಲಿರುವ ಆನೆಕಲ್ಲು)
                ಮತ್ತೆ ಕೆಲ ಘಳಿಗೆಯಾಚೆಯಲ್ಲಿಯೇ ಶಿರಸಿ ನಗರಿ ಬಂದಿತ್ತು. ಕ್ಯಾಮರಾ ಸೇರಿದಂತೆ ಅಗತ್ಯ ವಸ್ತುಗಳನ್ನು ಶಿರಸಿಯಲ್ಲಿ ಖರೀದಿ ಮಾಡಲಾಯಿತು. ಪ್ರದೀಪ ಯಾರಿಗೂ ತಿಳಿಯದಂತೆ ಚಿಕ್ಕದೊಂದು ಚಾಕುವನ್ನು ಕೊಂಡನಾದರೂ ವಿನಾಯಕನ ಸೂಕ್ಷ್ಮದೃಷ್ಟಿಗೆ ಅದು ಬಿದ್ದಿತ್ತು. ಗಮನಿಸಿಯೂ ಗೊತ್ತಿಲ್ಲದಂತೆ ಇದ್ದುಬಿಟ್ಟಿದ್ದ.
                ಮತ್ತೆ ಒಂದು ತಾಸಿನ ಒಳಗಾಗಿ ಅಘನಾಶಿನಿ ಗರ್ಭದ ದಂಟಕಲ್ಲಿನ ಹಾದಿಯನ್ನು ಹಿಡಿದಾಗಿತ್ತು. ಕಚ್ಚಾ ರಸ್ತೆಯನ್ನು ವಾಹನ ಸಾಕಷ್ಟು ವೇಗದಿಮದಲೇ ಹಾದುಬಿಟ್ಟಿತು. ಅಂಕುಡೊಂಕಿನ ದಾರಿಯಲ್ಲಿ ಬಿಂಕದ ಸಿಂಗಾರಿಯಾಗಿ, ಜಂಪು, ರಂಪಿನೊಂದಿಗೆ ಗಾಡಿ ಸಾಗಿತು. ಕಾಡು-ಕಾಡಿನ ಮೃಗ ಕೀಟಗಳ ಉಲಿ, ಬಳ್ಳಿಗಳ ಬಳುಕು, ರಸ್ತೆಯ ಧೂಳು, ನಿರಭ್ರಮೌನ ಇವರನ್ನು ಸ್ವಾಗತಿಸಿತು.
                ದೇವಿಮನೆ, ಅರಬೈಲು, ಬಡಾಳ ಮುಂತಾದ ಘಟ್ಟಗಳನ್ನು ನೆನಪಿಸುವ, ಅವುಗಳಂತೆ ಅಂಕು-ಡೊಂಕಿನ ರಸ್ತೆ ದಂಟಕಲ್ ಗೆ ತೆರಳುವ ಮಾರ್ಗದ ಮಧ್ಯವೂ ಇರುವುದನ್ನು ನೋಡಿ ವಿಜೆತಾ ವಿಸ್ಮಯ ಪಟ್ಟಳು. ಹಾಗೆಯೇ ಅವಳ ಕೈಯಲ್ಲಿನ ಮೊಬೈಲಿನ ಸಿಗ್ನಲ್ ಕೂಡ ಕಟ್ಟಾಯಿತು. ಸಮಯ ಸರಿದಂತೆ ಗಾಡಿಯೊಳಗಿನ ಸದ್ದು ಕೂಡ ತಣ್ಣಗಾಯಿತು. ದಂಟಕಲ್ ಸಮೀಪದ ಗುಡ್ಡೇತಲೆ, ಜಾರಾಬೊಂಡಿ, ಕಾನುಬೈಕ್ಲು, ಹೆಣಸುಟ್ಟ ಮುರ್ಕಿ ಈ ಮುಂತಾದ ನಾಮಾಂಕಿತ ಸ್ಥಳ ಹಾದಾಯಿತು. ಅವುಗಳಿಗೆಲ್ಲ ವಿನಾಯಕನ ಲೈವ್ ಕಾಮೆಂಟರಿಯೂ ದೊರೆಯಿತು. ಅಂತೂ ದಂಟಕಲ್ ಎಂಬ ನಿಸರ್ಗದ ಮಧ್ಯದ ಸುಂದರ ಊರಿನ ಅಂಗಳ ತಲುಪುವ ವೇಳೆಗೆ ಗವ್ವೆನ್ನುವ ಕತ್ತಲು, ಕಿರ್ರೆನ್ನುವ ಜೀರುಂಡೆಗಳ ಕೂಗು ಇವರ ಜೊತೆಗೆ ತೇಲಿ ತೇಲಿ ಬಂದಿತು. ಗಾಡಿಯ ಹಾರನ್ನು ಮನೆಯ ಬಹುತೇಕರಿಗೆ ಕೇಳಿಸಿ, ಬಾಗಿಲಲ್ಲಿ ಇಣುಕಿ, ಪರಿಚಿತರನ್ನು ನೋಡಿ ನಗುಸೂಸಿ, ಅಪರಿಚಿತ ಮುಖ ನೋಡಿ ಕುತೂಹಲ ಪಟ್ಟಿದ್ದೂ ಆಯಿತು.
               ಮನೆಯ ಯಜಮಾನರಾದ ಶ್ರೀಕಂಠ ಹೆಗಡೆಯವರು ಬಂದು `ಯಾರು..?' ಎಂಬಂತೆ ನೋಡಿದರು. ಪರಿಚಿತರನ್ನು ಕಾಣಲಾಗಿ ಸಂತಸ ಪಟ್ಟರು. ಭವ್ಯ ಮನೆ, ಎದುರಿಗಿರುವ ಅಟ್ಟ, ಪಕ್ಕದ ಕೊಟ್ಟಿಗೆ, ಸಾಕಷ್ಟು ದೊಡ್ಡದಾದ ಅಂಗಳ, ಪಕ್ಕದಲ್ಲಿ ಕುತೂಹಲದಿಂದೊಡಗೂಡಿದ ಒಂದೆರಡು ಮನೆ ಕತ್ತಲೆಯಲ್ಲಿ ವಿಜೇತಾಳಿಗೆ ಕಂಡಿದ್ದಿಷ್ಟು. ವಿನಾಯಕ ಎಲ್ಲರನ್ನೂ ಒಳಕ್ಕೆ ಕರೆದೊಯ್ದ. ಇಲ್ಲಿ ಮತ್ತೆ ಪರಿಚಯ ಪ್ರಕ್ರಿಯೆ ಮುಗಿಯಿತು. ಶ್ರೀಕಂಠ ಹೆಗಡೆಯವರು ಮನೆಯ ಯಜಮಾನರಾದರೆ ಗೋದಾವರಿ ಮನೆಯ ಆರದ ದೀಪ. ಸರ್ವೇಶ್ವರ ಹೆಗಡೆ ಶ್ರೀಕಂಠ ಹೆಗಡೆಯವರ ತಂದೆ. ಸ್ನೇಹಾ ವಿನಾಯಕನ ತಂಗಿ. ಮತ್ತೊಬ್ಬ ಚಿಕ್ಕ ಹುಡುಗ ರಾಜೀವ ಇಷ್ಟು ಜನ ಮನೆಯ ಸದಸ್ಯರೆಂಬುದು ತಿಳಿಯಿತು. ರಾಜೀವ ಆ ಮನೆಯಲ್ಲಿ ಓದುವುದಕ್ಕಾಗಿ ಉಳಿದುಕೊಂಡ ಹುಡುಗನಾಗಿದ್ದ.
               ಮನೆಯ ಒಳಗಣ ಜಗುಲಿ ಬಹು ವಿಶಾಲವಾಗಿತ್ತು. ನೂರಾರು ಜನರ ಹಿಡಿಯುವಂತಿದ್ದ ಅಲ್ಲಿ ಬಹು ಹಳೆಯ ಕಾಲದ ಆಕರ್ಷಕ ಕೆತ್ತನೆಯಿಂದ ತುಂಬಿ ನಿಂತಿರುವ ಕಂಬ ಎಲ್ಲರನ್ನೂ ಸೆಳೆಯಿತು. ಅಲ್ಲಿ ಪರಿಚಯ ಕಾರ್ಯಕ್ರಮವೂ ನಡೆಯಿತು. ಗೋದಾವರಿಯವರು ಎಲ್ಲರಿಗೂ `ಆಸರಿಗೆ' ಎಂದಾಯಿತು. ಸೇವನೆಯೂ ಮುಗಿಯಿತು.
               ವಿಜೇತಾಳಿಗಾಗಿಯೇ ವಿನಾಯಕ ಆ ಮನೆಯ ಮಹಡಿಯ ಮೇಲೆ ಒಂದು ಕೋಣೆಯನ್ನು ತೋರಿಸಿ ಆಕೆಯ ಲಗೇಜನ್ನು ಅಲ್ಲಿಯೇ ಇರಿಸಿ ಬಂದ. ಮಹಡಿಯೂ ಕೂಡ ಸಾಕಷ್ಟು ವಿಶಾಲವಾಗಿತ್ತು. ಇಡೀ ಮಹಡಿಯ ಮೂಲೆಯಲ್ಲಿ ಎರಡು ಕೋಣೆಗಳಿದ್ದವಾದರೂ ಒಂದು ಕೋಣೆಯಲ್ಲಿ ಸಾಕಷ್ಟು ಗುಜರಿ ವಸ್ತುಗಳನ್ನು ಪೇರಿಸಿ ಇಟ್ಟಿರುವುದು ಕಾಣಿಸುತ್ತಿತ್ತು. ಮಹಡಿಯ ತುಂಬ ಅಡಿಕೆ  ಚೀಲಗಳನ್ನೂ ಇಡಲಾಗಿತ್ತು.
                 ಸಂಜೆಯ ವೇಳೆಗೆ ಊಟ ಮುಗಿಸಿ, ತಕ್ಕಮಟ್ಟಿಗೆ ಸುಸ್ತಾಗಿದ್ದ ಎಲ್ಲರೂ ಹಾಸಿಗೆಯ ಮೇಲೆ ದಬಾರನೆ ಉರುಳಿಕೊಂಡರು. ವಿಜೇತಾಳಿಗೆ ಯಾಕೋ ಆ ರೂಮು ಬಹಳ ಸೆಳೆದುಬಿಟ್ಟಿತ್ತು. ಇಡಿಯ ಕೋಣೆಯಲ್ಲಿ ಹಲವಾರು ವಿಶಿಷ್ಟ ವಸ್ತುಗಳಿದ್ದವು. ಕೋಣೆಯ ಒಂದೆಡೆಯಲ್ಲಿ ಒಂದೆರಡು ಬೀರುಗಳೂ ಇದ್ದವು. ಒಂದೆಡೆ ಹಳೆಯ ಕೆತ್ತನೆಯ ಗಟ್ಟುಮುಟ್ಟಾದ ಮಂಚವೊಂದಿತ್ತು. ಅದಕ್ಕೆ ಎದುರಾಗಿದ್ದ ಗೋಡೆ ಖಾಲಿಯಿತ್ತು. ಅದು ಸಂಪೂರ್ಣವಾಗಿ ಬಿಳಿ ಬಣ್ಣದಿಂದ ಆವೃತವಾಗಿತ್ತು. ಹಾಗೆಯೇ ಅದು ನೋಡುಗರನ್ನು ಮತ್ತೆ ಮತ್ತೆ ಸೆಳೆಯುತ್ತಿತ್ತು. ಪತ್ರಿಕೆ, ಬಂದ ಕೆಲಸ, ಇಂತಹ ವಿಷಯಗಳ ಬಗ್ಗೆಯೇ ಆಲೋಚಿಸುತ್ತಾ ಹಾಸಿಗೆಗೆ ಒರಗಿದವಳಿಗೆ ಅದ್ಯಾವ ಮಾಯೆಯಲ್ಲಿ ನಿದ್ದೆ ಬಂದಿತ್ತೋ ತಿಳಿಯಲಿಲ್ಲ.
                 ಯಾವುದೋ ಜಾವದಲ್ಲಿ ಆಕೆಗೆ ಮತ್ತೆ ಥಟ್ಟನೆ ಎಚ್ಚರಾಯಿತು. ನಿರಭ್ರ ಮೌನವೇ ಮೆರೆಯುತ್ತಿದ್ದ ಆ ನಿಶೆಯಲ್ಲಿ ಆಗಾಗ `ಟಕ್.. ಟಾಕ್..' ಎಂದು ಏನನ್ನೋ ಕಡಿಯುತ್ತಿದ್ದ ಶಬ್ದ ಅಲೆ ಅಲೆಯಾಗಿ ತೇಲಿಬರುತ್ತಿತ್ತು. `ಅದೇನಿರಬಹುದು..?' ಎಂಬ ಕುತೂಹಲದ ಎಳೆ ಆಕೆಯ ಮನದ ಭಿತ್ತಿಯಲ್ಲಿ ಒಮ್ಮೆ ಮಿಂಚಿ ಮರೆಯಾಯಿತಾದರೂ, ಆ ಕುರಿತು ಹೆಚ್ಚಿಗೆ ಆಲೋಚನೆ ಮಾಡಲು ನಿದ್ದೆ ಬಿಡಲಿಲ್ಲ. ಒರಗಿಕೊಂಡು ಆಲಿಸುತ್ತಿದ್ದವಳಿಗೆ ಮತ್ತೆ ನಿದ್ದೆ.
                ಹಾಗಾದರೆ ಆಕೆಗೆ ಕೇಳಿದ ಶಬ್ದವೇನು? ಅದರ ಹಿನ್ನೆಲೆ ಏನಿರಬಹುದು? ಅದರ ಮೂಲ ಯಾವುದು? ವಿಜೇತಾ ಇದರ ಮೂಲವನ್ನು ತಿಳಿಯಲು ಪ್ರಯತ್ನಿಸಬೇಕಿತ್ತೆ? ಆ ಶಬ್ದ ಇಲ್ಲೇನಾದರೂ ತಿರುವು ನೀಡಬಹುದೇ? ಯೋಚಿದಂತೆಲ್ಲ ಪ್ರಶ್ನೆಗಳೇ ಧುತ್ತೆಂದು ಕಾಡಿತು.

****11****

            ಬೆಳಿಗ್ಗೆ ಇದ್ದಕ್ಕಿದ್ದಂತೆ ಮೊಬೈಲ್ ರಿಂಗಣಿಸಲು ಆರಂಭಿಸಿದಾಗ ವಿಜೇತಾ ಧಡ್ಡನೆ ಎದ್ದು ಕುಳಿತಳು. ನಿನ್ನೆ ಸಂಜೆ ಬರುವಾಗ ಮೊಬೈಲ್ ಸಿಗ್ನಲ್ ಕಟ್ಟಾಗಿತ್ತು. ತಮ್ಮೂರಿನ ಫಾಸಲೆಯಲ್ಲಿ ಒಂದೋ ಎರಡೋ ಕಡೆಗಳಲ್ಲಿ ಮಾತ್ರ ಮೊಬೈಲ್ ಸಿಗ್ನಲ್ ಸಿಗುತ್ತದೆ ಎಂದು ವಿನಾಯಕ ಹೇಳಿದ್ದ ನೆನಪು. ಆದರೆ ಈ ಕೋಣೆಯಲ್ಲಿ ಮೊಬೈಲ್ ರಿಂಗಾಗುತ್ತಿದೆಯಲ್ಲ ಎಂದುಕೊಂಡು ಮೊಬೈಲ್ ನೋಡಿದವಳಿಗೆ ಅಚ್ಚರಿ. ಮೊಬೈಲಿನಲ್ಲಿ ಸಿಗ್ನಲ್ಲಿನ ಮುೂರು ಕಡ್ಡಿಗಳನ್ನು ತೋರಿಸುತ್ತಿತ್ತು. ಅಬ್ಬಾ.. ಈ ಕುರಿತು ವಿನಾಯಕನ ಬಳಿ ಮಾತನಾಡಬೇಕು ಎಂದುಕೊಂಡಳು. ನವೀನಚಂದ್ರ ಅವರು ಪೋನ್ ಮಾಡಿದ್ದರು. ಬಂದ ಕೆಲಸ ಏನಾಯಿತೆಂಬ ಬಗ್ಗೆ ಮಾತನಾಡಿದರು. ಅರ್ಧಗಂಟೆಗಳ ಕಾಲ ಪೋನಿನಲ್ಲಿ ಮಾತನಾಡಿದ ವಿಜೇತಾ ಇನ್ನೇನು ಮೊಬೈಲ್ ಇಡಬೇಕೆನ್ನುವಷ್ಟರಲ್ಲಿ ಕೆಳಮನೆಯಿಂದ ಬುಲಾವ್ ಬಂದಿತು. ಮೈಮುರಿಯುತ್ತಾ ಹೊರಟಳು ವಿಜೇತಾ.
               ಮಹಡಿಯ ಮನೆಯಿಂದ ಕೆಳಕ್ಕೆ ಇಳಿಯುತ್ತಿದ್ದಂತೆಲ್ಲ `ತೆಳ್ಳೇವು, ಕಾಯಿ ಚಟ್ನಿಯ ಗಮ್ಮೆನ್ನುವ ಕಂಪು ಮೂಗಿಗೆ ಬಡಿಯಲಾರಂಭಿಸಿತು. ಈಕೆ ಅಡುಗೆ ಮನೆಗೆ ಹೋಗುವ ವೇಳೆಗಾಗಲೇ ಅಡುಗೆ ಮನೆಯಲ್ಲಿ ಉದ್ದನೆಯ ಸಾಲಿಲ್ಲಿ ಕುಳಿತ ಮನೆಯ ಸದಸ್ಯರು ಅಲ್ಲಿ ತಯಾರು ಮಾಡಿದ್ದ `ಮೊಗೆಕಾಯಿ ತಳ್ಳೇವು' ತಿನ್ನುವುದರಲ್ಲಿ ಒಬ್ಬರಗೊಬ್ಬರು ಸ್ಪರ್ಧೆಗೆ ಬಿದ್ದಿದ್ದಾರೋ ಎಂಬಂತೆ ಮಾಡುತ್ತಿದ್ದರು. ಪ್ರದೀಪ ಎಷ್ಟೋ ತೆಳ್ಳೇವು ತಿಂದ ಶಾಸ್ತ್ರ ಮಾಡಿ ಏಳಲು ಪ್ರಯತ್ನಿಸಿದಾಗ ಅಲ್ಲೇ ಇದ್ದ ಸರ್ವೇಶ್ವರ ಹೆಗಡೆಯವರು `ತಮಾ.. ನೀ ಎಂತಾ.. ಮಾರಾಯ.. ಬರಿ ನಾಲ್ಕು ತೆಳ್ಳೇವಿಗೆ ಟುಸ್ಸಾಗೋದ್ಯನಾ? ನಿನ್ ವಯಸ್ನಲ್ಲಿ ಆನು ಕನಿಷ್ಟ 12 ತೆಳ್ಳೆವ್ ತಿಂತಿದ್ದಿ ಗೊತ್ತಿದ್ದನಾ..' ಎಂದು ಹೇಳಿದವರೇ ಪ್ರದೀಪನನ್ನು ಮತ್ತೆ ಕೂರಿಸಿ ಮತ್ತೆರಡು ತೆಳ್ಳೇವನ್ನು ಹಾಕಿದರು. ಪ್ರದೀಪ ಕಕ್ಕಾಬಿಕ್ಕಿಯಾಗಿದ್ದ. ಆತನ ಪಾಡು ನೋಡಿ ವಿಜೇತಾಳಿಗೆ ನಗು ಬಂದಿತು. ನಂತರ ಆಕೆಯೂ ತಳ್ಳೇವು ತಿನ್ನುವವರ ಸಾಲಿಗೆ ಸೇರಿ ಕುಳಿತುಕೊಂಡಳು.
(ಅಘನಾಶಿನಿ ನದಿಗೆ ಅಡ್ಡಲಾಗಿ ದಂಟಕಲ್ಲಿನಲ್ಲಿ ಯುವಕರು ನಿರ್ಮಿಸುವ ಕಾಲುಸಂಕ)
              ತಿಂಡಿ ಮುಗಿಯಿತು. ರಾತ್ರಿ ಕನಸಿನಲ್ಲಿ ನಡೆದಂತಿದ್ದ ಆ ವಿಚಿತ್ರ ಘಟನೆಯ ಬಗ್ಗೆ ವಿಜೇತಾ ಕೇಳಬೇಕು ಎಂದುಕೊಂಡಿದ್ದಳು. ಆದರೆ ಯಾಕೋ ಆ ಮಾತು ಗಂಟಲಿನಲ್ಲಿಯೇ ಉಳಿದುಬಿಟ್ಟಿತು.
              ಆ ನಂತರ ಊರು ತಿರುಗಬೇಕೆಂಬ ಹಂಬಲ ಎಲ್ಲರಿಗೆ ಮೊದಲಾಯಿತು. ವಿನಾಯಕ ಸ್ಥಳೀಯನಾಗಿದ್ದರಿಂದ ಆ ಗುಂಪಿಗೆ ಆತ ನಾಯಕನಾದ. ಜೊತೆಗೆ ಪುಟ್ಟ ಹುಡುಗ ರಾಜೀವನೂ ಬಂದ. ಯಾಕೋ ಎಲ್ಲರಿಗೂ ಊರಿನ ಇತರ ಮನೆಗಳಿಗೆ ಹೋಗಬೇಕು ಎನಿಸಲಿಲ್ಲ. ಹಾಗಾಗಿ ವಿನಾಯಕ ಅವರನ್ನೆಲ್ಲ ಕಾಡು-ಮೇಡು ಸುತ್ತಿಸಲು ಹೊರಟ. ವಿನಾಯಕನ ಜೊತೆಗೆ ಸಾಗುತ್ತಿದ್ದ ವಿಕ್ರಂ, ವಿಷ್ಣು, ಪ್ರದೀಪ, ವಿಜೇತಾ, ರಮ್ಯಾ, ರಾಜೀವ ಇವರೆಲ್ಲ ಸಾಗುತ್ತಿದ್ದರೆ ಆ ಊರಿಗೆ ಊರೇ ಇದ್ಯಾವ ದಂಡು ಇಲ್ಲಿಗೆ ಬಂದು ಅಟಕಾಯಿಸಿತು ಎಂದುಕೊಂಡಿತು.
               ಮೊದಲು ತನ್ನ ಮನೆಯ ಜಮೀನನ್ನು ತೋರಿಸುತ್ತೇನೆ ಎಂದು ಹೇಳಿದ ವಿನಾಯಕ ಒಂದೆರಡು ಅಂಕುಡೊಂಕಿನ ದಾರಿಯಲ್ಲಿ ಹಲ-ಕೆಲ ಗುಡ್ಡ ಬೆಟ್ಟಗಳನ್ನು ಹತ್ತಿಳಿಸಿಕೊಂಡು ಬಂದು ಅದೊಂದು ವಿಶಾಲವಾದ ಗದ್ದೆ ಬಯಲಿನ ಕಡೆಗೆ ಕರೆದುಕೊಂಡು ಬಂದ. ವಿಶಾಲವಾದ ಗದ್ದೆಯ ಪಕ್ಕದಲ್ಲಿ ಆಗಸದ ಕಡೆಗೆ ಚಾಚಿ ನಿಂತಿದ್ದ ಅಡಿಕೆ, ತೆಂಗಿನ ಮರಗಳು ಎಲ್ಲರನ್ನೂ ಸ್ವಾಗತಿಸಿದವು. ಅದ್ಯಾವಾಗಲೋ ತೋಟಕ್ಕೆ ಬಂದು ಅಲ್ಲಿ ಆಳುಗಳಿಂದ ತೆಂಗಿನ ಕಾಯಿಗಳನ್ನು ಕೀಳಿಸುತ್ತಿದ್ದ ಶ್ರೀಕಂಠ ಹೆಗಡೆಯವರು `ಬರ್ರ ತಮಾ... ಕುಂತ್ಗಳಿ..' ಎಂದವರೇ ಎಲ್ಲರಿಗೂ ಸೀಯಾಳಗಳನ್ನು ಕೀಳಿಸಿಕೊಟ್ಟರು.
               ಅಷ್ಟರಲ್ಲಿ ಅಲ್ಲಿಗೆ `ಹೋಯ್.. ಹೆಗುಡ್ರು.. ಹನಿ ಇಲ್ ಬನ್ನಿ.. ಈ ತೆಂಗಿನ ಮರಕ್ಕೆ ತುಂಬಿ ಹುಳ ಹೊಡದದೆ ನೋಡಿ...' ಎನ್ನುವ ಧ್ವನಿ ಕೇಳಿ ಬಂದಿತು. ಶ್ರೀಕಂಠ ಹೆಗಡೆಯವರು `ಯಾರಾ ಅದು ದ್ಯಾವನನಾ.. ಆ ತೆಂಗಿನ ಮರ ಸೊಯ್ಸಾ.. ತುಂಬೆ ಹೊಡೆದಿದ್ದನ್ನು ಸರಿ ಮಾಡು..' ಎಂದು ಹೇಳಿ ಆತನ ಧ್ವನಿ ಕೇಳಿದ ಕಡೆಗೆ ಹೊರಟರು. ಅವರಿಬ್ಬರಲ್ಲಿ ಏನೋ ಮಾತುಕತೆ ನಡೆಯಿತು. ಹಿಂತಿರುಗಿ ಬಂದ ಹೆಗಡೆಯವರು ಎಲ್ಲರ ಬಳಿ `ಅಂವ ದ್ಯಾವ ಹೇಳಿ.. ಯಮ್ಮನೆ ಆಳುಮಗ. ಒಳ್ಳೆಯ ಕೆಲಸದ ಆಳು. ಜೇನು ಕೊಯ್ಯುವುದು, ಮೀನು ಹಿಡಿಯುವುದು, ತೆಪ್ಪ ಮಾಡುವುದು, ಕೊನೆ ಕೊಯ್ಯುವುದು, ಬೇಡೆ ಮಾಡೋದು ಇವೆಲ್ಲ ದ್ಯಾವನ ಕೆಲಸಗಳು..' ಎಂದು ಹೇಳಿ ಮುಗಿಸುತ್ತಿದ್ದಂತೆ ದ್ಯಾವ ಅಲ್ಲಿ ಹಾಜರಾಗಿ `ಸುಮ್ಮನಿರ್ರಾ ಹೆಗಡ್ರು,, ನನ್ನ ಬಗ್ಗೆ ಎಂತಾ ಹೇಳ್ತಿ...' ಎಂದು ನಾಚಿ ನೀರಾದ. ಕಪ್ಪಾಗಿದ್ದ ಆತನ ಮುಖ ನಾಚಿಕೆಯಿಂದ ಮತ್ತಷ್ಟು ಕಪ್ಪಾಯಿತು. ಪೆಕರ ಪೆಕರನಂತೆ `ಯಾರು ಇವ್ರು..?'ಎಂದು ಕೇಳಿದ.
               ಎಲ್ಲರ ಪರಿಚಯ ಆದ ನಂತರ `ಕಾಡನ್ನ ನೋಡ್ಲಿಕ್ಕೆ ಅಲ್ಲಿಂದ ಇಲ್ಲಿಗೆ ಬಂದ್ರಾ.. ನಿಮಗೆಂತಕ್ಕೆ ಹ್ವಾರ್ಯ ಇಲ್ಲ ಹೇಳಿ..' ಎಂದ. ಆತ ಇವರ ರಿಸರ್ಚ್ ಎಂದರೆ ಕಾಡು ನೋಡೋದಷ್ಟೆ ಎಂದುಕೊಂಡಿರಬೇಕು.
               ಮರಳಿ ಸಂಜೆಯ ವೇಳೆಗೆ ಆ ಊರಿನ ಜೀವನ್ಮುಖಿ ನದಿ ಅಘನಾಶಿನಿಯೆಡೆಗೆ ಕರೆದೊಯ್ದ ವಿನಾಯಕ. ಊರಿನಿಂದ ಕೇವಲ ಅರ್ಧ ಕಿಲೋಮೀಟರಿನಾಚೆ ಹರಿಯುತ್ತಿದ್ದಳು ಆಕೆ. ನದಿಯ ಇಕ್ಕೆಲಗಳಲ್ಲಿ ಹಸಿರು ತೋಟ, ಗದ್ದೆ, ವಾಟೆಯ ಮಟ್ಟಿಗಳು ತುಂಬಿಕೊಂಡಿದ್ದವು. ಇವೆಲ್ಲವನ್ನೂ ದಾಟಿ ಬಂದವರಿಗೆ ತಣ್ಣಗೆ ಹರಿಯುವ ಅಘನಾಶಿನಿ ಬಳುಕಯತ್ತಾ ಹರಿಯುತ್ತಿದ್ದುದು ಕಾಣಿಸಿತ್ತು. ಅಕ್ಕಪಕ್ಕದಲ್ಲೆಲ್ಲ ಬಂಡೆಗಳ ಹಂದರ. ಜೊತೆಯಲ್ಲಿಯೇ ಶಬ್ದ ಸಹಿತವಾಗಿ ಓಡಿದಂತೆ ಹರಿಯುತ್ತಿದ್ದ ನದಿ. ನದಿಯ ಒಂದು ಕಡೆಯಲ್ಲಿ ದಂಟಕಲ್ಲಿನ ಯುವಕರು ಹಾಕಿದ್ದ ಕಾಲು ಸಂಕ. ಇವಿಷ್ಟು  ಮೊದಲ ನೋಟಕ್ಕೆ ಅವರಿಗೆ ಕಾಣಿಸಿದ್ದ ದೃಶ್ಯ ವೈಭವ.
                 ಎಲ್ಲರೂ ಒಂದೊಂದು ಕಡೆಗೆ ಹೋಗಿ ಕುಳಿತರು. ವಿನಾಯಕ ಆ ನದಿಯನ್ನೇ ಮುತ್ತಿಕ್ಕುವಂತಿದ್ದ ಒಂದು ಬಂಡೆಗಲ್ಲನ್ನು ಏರಿ ಕುಳಿತ. ಹುಡುಗ ರಾಜೀವನಾಗಲೇ ಪ್ರದೀಪನೊಂದಿಗೆ ಗೆಳೆತನ ಬೆಳೆಸಿಬಿಟ್ಟಿದ್ದ. ಅವರಿಬ್ಬರೂ ಸಿಕ್ಕಾಪಟ್ಟೆ ಹರಟೆ ಕೊಚ್ಚಲು ಆರಂಭಿಸಿಬಿಟ್ಟಿದ್ದರು.
              ರಮ್ಯಾ, ವಿಜೇತಾರು ನೀರಿನಲ್ಲಿ ಕಾಲನ್ನು ಇಳಿಬಿಟ್ಟು ನೀರಾಟಕ್ಕೆ ತೊಡಗಿಕೊಂಡಿದ್ದರು. ವಿಕ್ರಂ, ವಿಷ್ಣು ಅವರದ್ದೇ ಆದ ಲೋಕದಲ್ಲಿ ತಾವಿದ್ದರು. ರಾಜೀವ ಇದ್ದಕ್ಕಿದ್ದಂತೆ ದೊಡ್ಡದಾಗಿ ಎಲ್ಲರಿಗೂ ಕೇಳಿಸುವಂತೆ `ನಮ್ ವಿನಾಯ್ಕಣ್ಣ ೀ ಕಲ್ಲಿನ ಬಗ್ಗೆ ಒಂದ್ ಬರಹ ಬರದ್ದಾ.. ಅದಕ್ಕೆ ಪ್ರಶಸ್ತಿ ಬಂಜು..' ಎಂದ.
              ತಕ್ಷಣ ಎಲ್ಲರೂ ಆ ಪ್ರಬಂಧದ ಬಗ್ಗೆ, ಬರಹದ ಬಗ್ಗೆ ಕೇಳಲಾರಂಭಿಸಿದರು. ಮೊದಲು ನಾಚಿಕೊಂಡನಾದರೂ ಕೊನೆಗೆ ಹೇಳಲು ಆರಂಭಿಸಿದ ವಿನಾಯಕ. `ಆ ಬರಹದ ಹೆಸರು ಅಘನಾಶಿನಿ ತೀರದ ಮೌನ ತಪಸ್ವಿಯ ನೆತ್ತಿಯ ಮೇಲೆ ಕುಳಿತು.. ಅಂತ. ಈ ಕಲ್ಲಿಗೆ ನಮ್ಮೂರಿನಲ್ಲಿ ಎಲ್ಲರೂ ಆನೆ ಕಲ್ಲು ಅಂತಾನೇ ಕರೆಯೋದು. ಅದರ ಬಗ್ಗೆ ಬರೆದಿದ್ದು ಆ ಬರಹ. ಈ ಕಲ್ಲಿನ ಮೇಲೆಯೇ ಕುಳಿತು ಬರೆದಿದ್ದು ಅದು. ನಾನು ಈ ಕಲ್ಲಿನ ಮೇಲೆ ಕುಳಿತು ಒಂದು ದಿನದಲ್ಲಿ ಅದೇನೇನನ್ನು ಅನುಭವಿಸಿದ್ದೆನೋ ಅವೆಲ್ಲವನ್ನೂ ಸುಮ್ಮನೆ ಅಕ್ಷರ ರೂಪಕ್ಕೆ ಇಳಿಸುತ್ತ ಹೋದೆ. ಖಂಡಿತವಾಗಿಯೂ ಅದೊಂದು ಉತ್ತಮ ಬರಹವಾಗುತ್ತದೆ ಎಂಬ ನಿರೀಕ್ಷೆ ನನಗೆ ಇರಲಿಲ್ಲ. ಸುಮ್ಮನೆ ಬರೆಯುತ್ತ ಹೋದೆ. ಯಾವುದೋ ಪ್ರಶಸ್ತಿಗೆ ಬರಹ ಆಹ್ವಾನಿಸಿದ್ದರು. ಕಳಿಸಿದ್ದೆ. ಅದಕ್ಕೆ ಬಹುಮಾನ ಬಂದಿತ್ತಷ್ಟೇ..' ಎಂದ.

(ಮುಂದುವರಿಯುತ್ತದೆ)

No comments:

Post a Comment