Saturday, February 28, 2015

ಮಲೆನಾಡಿನಲ್ಲೊಂದು ಅಪರೂಪದ ಕೆಂಡ ಹಾಯುವ ಕಾರ್ಯಕ್ರಮ

ಕೆಂಡದ ಮೇಲೆ ನಡೆಯುವುದು ಬಯಲು ಸೀಮೆಯಲ್ಲಿ ಸರ್ವೇ ಸಾಮಾನ್ಯ. ಜಾತ್ರೆಗಳಲ್ಲಿ ಕೆಂದ ಮೇಲೆ ನಡೆಯುವ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಮಲೆನಾಡಿನಲ್ಲಿ ಇದು ಅಪರೂಪ. ಇಂತಹ ಅಪರೂಪದ ಕಾರ್ಯಕ್ರಮ ಸಿದ್ದಾಪುರ ತಾಲೂಕಿನ ಸರಕುಳಿಯಲ್ಲಿ ನಡೆಯಿತು.
ಮೇಲಿನ ಸರಕುಳಿ ಗ್ರಾಮದಲ್ಲಿ ಪ್ರತಿ ವರ್ಷ ಗ್ರಾಮದೇವಿಯ ಸನ್ನಿಧಾನದಲ್ಲಿ ಪರಿವಾರ ದೇವತೆಗಳಿಗೆ ವಾರ್ಷಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುಂಜಾನೆ ಪರಿವಾರ ದೇವತೆಗಳ ಪೂಜೆಯಿಂದ ನಡೆದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಇಡೀ ದಿನ ಮುಂದುವರಿದವು. ಮೇಲಿನ ಸರಕುಳಿಯಲ್ಲದೇ ತಟ್ಟೀಕೈ, ಕೆರೆಗದ್ದೆ, ಕಂಚೀಮನೆ, ತ್ಯಾರಗಲ್, ಗೋಳಿಕಟ್ಟಾ, ಮುಚುಗುಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.
                    ಕಳೆದ ಐದು ವರ್ಷಗಳಿಂದ ತಟ್ಟಿಕೈ ಬಳಿಯ ಮೇಲಿನ ಸರಕುಳಿ ಗ್ರಾಮದಲ್ಲಿ ಗ್ರಾಮದೇವಿಯ ವಾರ್ಷಿಕೋತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಕೆಂಡ ಹಾಯುವುದು ನಿಯಮಿತವಾಗಿ ನಡೆಯುತ್ತ ಬಂದಿದೆ. ಮಲೆನಾಡಿನಲ್ಲಿ ಅಪರೂಪ ಎನ್ನಿಸುವ ಕೆಂಡ ಹಾಯುವ ಕಾರ್ಯಕ್ರಮವನ್ನು ನೋಡುವ ಸಲುವಾಗಿಯೇ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಧಗ ಧಗನೆ ಉರಿಯುವ ಕೆಂಡದ ಮೇಲೆ ಯುವಕರು ನಡೆದುಕೊಂಡು ಹೋಗುತ್ತಿದ್ದರೆ ಸೇರಿದ್ದ ಜನರೆಲ್ಲ ದೇವರನ್ನು ಪ್ರಾರ್ಥಿಸುತ್ತ ನಿಲ್ಲುತ್ತಾರೆ. ದೇವರಿಗೆ ನಮಿಸಿ ತಮ್ಮನ್ನು ಕಷ್ಟಗಳಿಂದ ಪಾರುಮಾಡುವಂತೆ ಬೇಡಿಕೊಳ್ಳುತ್ತಾರೆ.
  ಪುರೋಹಿತರ ಸಾನ್ನಿಧ್ಯದಲ್ಲಿ ಚಂಡಿಕಾ ಪಾರಾಯಣ ನಡೆದ ನಂತರ ಮೇಲಿನ ಸರಕುಳಿ ಗ್ರಾಮದಲ್ಲಿಯೇ ಇರುವ 16 ದೇವ ಗಣಗಳನ್ನು ಊರಿನ ತುಂಬೆಲ್ಲ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು. ಸ್ಥಳೀಯ ಸುಬ್ರಹ್ಮಣ್ಯ ಕಟ್ಟೆಯ ಮೇಲೆ ದೇವರನ್ನು ಕೂರಿಸಿ ಹಲವಾರು ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಳ್ಳಲಾಯಿತು. ನಂತರ ಕೆಂಡ ಹಾಯುವ ಸಲುವಾಗಿ ದೊಡ್ಡ ಕಟ್ಟಿಗೆಯ ರಾಶಿಗೆ ಅಗ್ನಿಸ್ಪರ್ಷ ಮಾಡಲಾಯಿತು. ಬೆಂಕಿಯ ಜ್ವಾಲೆ ಬಾನೆತ್ತರಕ್ಕೆ ಚಾಚುತ್ತಿರುವ ಸಂದರ್ಭದಲ್ಲಿಯೇ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮಗಳೂ ನಡೆದವು.
ಅನ್ನ ಸಂತರ್ಪಣೆಯ ನಂತರ ಕೆಂಡ ಹಾಯುವ ಕಾರ್ಯಕ್ರಮ ನಡೆಯಿತು. ಮೆರವಣಿಗೆಯ ಸಂದರ್ಭದಲ್ಲಿ ದೇವರ ಗಣಗಳ ಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಬಂದಿದ್ದ 16 ಜನ ಯುವಕರೂ ಸೇರಿದಂತೆ 20ಕ್ಕೂ ಅಧಿಕ ಜನರು ಉರಿಯುವ ಕೆಂಡದ ಮೇಲೆ ನಡೆದರು. ಉರಿವ ಕೆಂಡದ ಮೇಲೆ ನಡೆಯುವುದನ್ನು ಅದೆಷ್ಟೋ ಭಕ್ತರು ಕಣ್ತುಂಬಿಕೊಂಡರು. ಸ್ಥಳೀಯ ಗ್ರಾಮದೇವಿಯ ಮಹಿಮೆಯನ್ನು ಕೊಂಡಾಡಿದರು. ನಂತರ ಭಕ್ತರ ಶ್ರೇಯೋಭಿವೃದ್ಧಿಗಾಗಿ ಆಶ್ಲೇಷಾ ಬಲಿ ಹಾಗೂ ನಾಗಾರಾಧನೆ ಕಾರ್ಯಕ್ರಮಗಳು ನಡೆದವು. ನಡುರಾತ್ರಿ 2 ಗಂಟೆಯವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಮೇಲಿನ ಸರಕುಳಿಯಲ್ಲಿ ಕೆಂಡ ಹಾಯುವ ಕಾರ್ಯಕ್ರಮಕ್ಕೆ ಶತಮಾನಗಳ ಇತಿಹಾಸವಿದೆ. ಸ್ಥಳೀಯರ ಪ್ರಕಾರ ಹಿಂದೆ ಇದೇ ಊರಿನಲ್ಲಿ ಅದ್ಧೂರಿಯಾಗಿ ಕೆಂಡ ಹಾಯುವ ಕಾರ್ಯಕ್ರಗಳು ನಡೆಯುತ್ತಿದ್ದವಂತೆ.
                 ಗ್ರಾಮದೇವಿಗೆ ಭವ್ಯವಾದ ದೇವಸ್ಥಾನವಿದ್ದು ಮೂರ್ನಾಲ್ಕು ದಿನಗಳ ಕಾಲ ಅದ್ಧೂರಿ ಉತ್ಸವ ನಡೆಯುತ್ತಿತ್ತಂತೆ. ಆದರೆ ಕಾಲಾನಂತರದಲ್ಲಿ ದೇವಸ್ಥಾನ ಜೀರ್ಣವಾಯಿತು. ಕ್ರಮೇಣ ಗ್ರಾಮದಲ್ಲಿ ನಡೆಯುತ್ತಿದ್ದ ಉತ್ಸವಗಳೂ ನಿಂತು ಹೋದವು. ಆ ನಂತರ ಊರಿನಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸಿದವು. ಸಮಸ್ಯೆಗಳ ಪರಿಹಾರಾರ್ಥವಾಗಿ ಐದು ವರ್ಷಗಳ ಹಿಂದೆ ದೇವಸ್ಥಾನವನ್ನು ಮತ್ತೆ ಜೀರ್ಣೋದ್ಧಾರ ಮಾಡಲಾಗಿದೆ. ನಂತರ ನಿಯಮಿತವಾಗಿ ಕೆಂಡ ಹಾಯುವ ಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅದ್ಧೂರಿಯಾಗಿ ಉತ್ಸವ ನಡೆಸಲಾಗುತ್ತದೆ. ಎರಡು ದಿನಕ್ಕೂ ಹೆಚ್ಚಿನ ಕಾಲ ಕಾರ್ಯಕ್ರಮಗಳನ್ನು ಏರ್ಪಡಿಸುವ ಆಲೋಚನೆ ಇಟ್ಟುಕೊಳ್ಳಲಾಗಿದೆ ಎಂದು ಹೇಳುತ್ತಾರೆ.
ಕಷ್ಟಗಳ ಪರಿಹಾರಕ್ಕೆ, ಸಮಸ್ಯೆಗಳಿಂದ ಬಿಡುಗಡೆ ಪಡೆಯುವ ಸಲುವಾಗಿ ನಡೆಯುವ ಕೆಂಡ ಹಾಯುವ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರ್ನಾಲ್ಕು ಕಡೆಗಳಲ್ಲಷ್ಟೇ ನಡೆಯುತ್ತದೆ. ಕೆಂಡ ಹಾಯ್ದರೆ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಈ ಆಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೆಂಡ ಹಾಯುವವರು ವಿಶೇಷ ಆವೆಶಕ್ಕೂ ಒಳಗಾಗುತ್ತಾರೆ. ವಿಚಿತ್ರ ಅಭಿನಯ ಮಾಡುತ್ತ, ಸ್ವರಗಳನ್ನು ಹೊರಡಿಸುತ್ತಾ ಕೆಂಡವನ್ನು ಹಾಯುತ್ತಾರೆ. ಇಂತಹ ಅನೇಕ ಸಂಗತಿಗಳಿಗೆ ಸರಕುಳಿಯಲ್ಲಿ ನಡೆದ ಕಾರ್ಯಕ್ರಮ ಸಾಕ್ಷಿಯಾಯಿತು.

***

ನಮ್ಮ ಊರಿನಲ್ಲಿ ನಡೆಯುವ ಕೆಂಡ ಹಾಯುವ ಕಾರ್ಯಕ್ರಮ ಬಹು ವಿಶಿಷ್ಟವಾದುದು. ಇಲ್ಲಿ ಯುವಕರು ಮಾತ್ರ ಕೆಂಡ ಹಾಯುತ್ತಾರೆ. ಕೆಂಡ ಹಾಯುವವರಿಗೆ ವಿಶಿಷ್ಟವಾದ ನಿಯಮಗಳಿವೆ. ಯಾರು ಕೆಂಡ ಹಾಯುತ್ತಾರೋ ಅಂತಹ ವ್ಯಕ್ತಿಗಳು ಕನಿಷ್ಟ ಒಂದು ವಾರದಿಂದ ಮಾಂಸ ಹಾಗೂ ಮದ್ಯದಿಂದ ದೂರವಿರಬೇಕು. ಶುದ್ಧ ಸಸ್ಯಾಹಾರ ಸೇವನೆ ಮಾಡಬೇಕು. ತಣ್ಣೀರಿನ ಸ್ನಾನ ಕೈಗೊಳ್ಳಬೇಕು. ಧಾರ್ಮಿಕ ಪೂಜೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಯಾರು ಈ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವುದಿಲ್ಲವೋ ಅವರಿಗೆ ಶಿಕ್ಷೆಯಾಗುತ್ತದೆ ಎನ್ನುವ ನಂಬಿಕೆ ಇದೆ. ನಿಮಯ ಪಾಲನೆ ಮಾಡದಿರುವವರಿಗೆ ಕೆಂಡ ಹಾಯಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ಕೆಂಡ ಹಾಯುವ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ.
ವೆಂಕಟ್ರಮಣ ಅನಂತ ಗೌಡ
ಮೇಲಿನ ಸರಕುಳಿ

Wednesday, February 25, 2015

ಅಘನಾಶಿನಿ ಕಣಿವೆಯಲ್ಲಿ-13

                 `ಚನ್ನಾಗಿದೆ ಅದರ ಟೈಟಲ್ಲು..' ಎಂದರು ಎಲ್ಲರೂ. `ಒಂದ್ ಸಾರಿ ನಮಗೆಲ್ಲ ಓದಲಿಕ್ಕೆ ಕೊಡು...' ಎಂದರು ಕೆಲವರು. ವಿಜೇತಾ ವಿನಾಯಕನಲ್ಲಿದ್ದ ಬರಹದ ಶೈಲಿ,  ಆತನ ಬಾವುಕ ಪ್ರಪಂಚ, ಪ್ರತಿಯೊಂದನ್ನೂ ತನ್ನದೇ ಆದ ಬೆರಗಿನ ದೃಷ್ಟಿಯಲ್ಲಿ ನೋಡುವ ಆತನ ವ್ಯಕ್ತಿತ್ವವನ್ನು ಕಂಡು ವಿಸ್ಮಯಪಟ್ಟಳು. ಕೊನೆಗೆ ಇವನ ಜೊತೆಗೆ ಒಮ್ಮೆ ಒಬ್ಬಂಟಿಯಾಗಿ ಮಾತನಾಡಬೇಕು. ಹಾಗೆಯೇ ಇವನ ಒಳಗಿನ ವ್ಯಕ್ತಿತ್ವವನ್ನು ಕೊಂಚ ತಿಳಿದುಕೊಳ್ಳಬೇಕು ಎಂದು ಆಲೋಚಿಸಿದಳು.
                 ಅವರ ಅರಿವಿಗೆ ಬಾರದಂತೆ ಅಘನಾಶಿನಿ ಎಲ್ಲರ ಮನಸ್ಸಿನಲ್ಲಿ ಮೆರೆದಳು.. ಬಿಡದೇ ಸೆಳೆದಳು. ಆವರಿಸಿಕೊಂಡಳು. ಪ್ರದೀಪ ಆ ನದಿಗೆ ಅಡ್ಡಲಾಗಿ ಹಾಕಲಾಗಿದ್ದ ಹಗರುದಬ್ಬೆಯ ಕಾಲುಸಂಕದ ಮೇಲೆ ಕುಳಿತು ಕನಸು ಕಾಣಲಾರಂಭಿಸಿದ್ದ. ರಾಜೀವ ಸುಮ್ಮನೆ ನೀರಿಗೆ ಕಲ್ಲೆಸೆಯಲಾರಂಭಿಸಿದ್ದ. ದಡದ ಮೇಲಿದ್ದ ಚಪ್ಪಟೆ ಕಲ್ಲುಗಳನ್ನು ತಂದು ಕಾಲು ಡೊಂಕು ಮಾಡಿಕೊಂಡು ರಪ್ಪನೆ ಎಸೆಯುತ್ತಿದ್ದ ರಾಜೀವ. ಕಲ್ಲು ಕಪ್ಪೆಯಂತೆ ಕುಪ್ಪಳಿಸಿ ಕುಪ್ಪಳಿಸಿ ಆರೆಂಟು ಸಾರಿ ಎಗರಿ ಎದುರು ದಂಡೆಗೆ ಹೋಗಿ ಹಾರಿ ಹಾರಿ ಬೀಳುತ್ತಿದ್ದರೆ ತನ್ನೊಳಗೆ ಖುಷಿ ಪಡುತ್ತಿದ್ದ. ವಿನಾಯಕ ತಾನಾಯಿತು ತನ್ನ ಕಾವ್ಯಲೋಕವಾಯಿತು ಎಂಬಂತಾದ. ವಿಜೇತಾ ತನ್ನ ಡಿಎಸ್ಎಲ್ಆರ್ ಕ್ಯಾಮರಾದಲ್ಲಿ ಸುತ್ತಮುತ್ತಲ ಪ್ರಕೃತಿಯ, ರಾಜೀವನ ಕಲ್ಲೆಸೆಯುವ ಆಟವನ್ನು ಕ್ಲಿಕ್ಕಿಸಿದ್ದಲ್ಲದೇ ಕ್ಯಾಮರಾದ ಹಸಿವೆಯನ್ನು ಕಡಿಮೆ ಮಾಡಲು ಆರಂಭಿಸಿದ್ದಳು. ರಮ್ಯಾ ವಿಕ್ರಮ ಹಾಗೂ ವಿಷ್ಣುವಿನ ಜೊತೆಗೆ ಕೀಟಲೆಗೆ ಇಳಿದಿದ್ದಳು. ಬಾನ ಭಾಸ್ಕರ ಮಾತ್ರ ಇವರೆಲ್ಲರನ್ನೂ ನೋಡಿ ಪಶ್ಚಿಮದ ಕಡೆಗೆ ಇಳಿಯುತ್ತ ಎಲ್ಲರಿಗೂ ಶುಭ ವಿದಾಯವನ್ನು ಕೋರುತ್ತಿದ್ದ. ತಾರಕೆಗಳು ಮಿಣುಕು ಮಿಣುಕಾಗಿ ಕಣ್ಣು ಹೊಡೆಯಲು ಆರಂಭಿಸಿದ್ದವು.
             
***

               `ದಿನಗಳು ಸುಮ್ಮನೆ ಓಡಿ ಹೋಗ್ತಿದೆ ವಿಜೇತಾ..ನಾವಿನ್ನೂ ನಮ್ಮ ಕಾರ್ಯವನ್ನು ಆರಂಭಿಸಿಯೇ ಇಲ್ಲ. ಹೀಗೆ ಆದ್ರೆ ಹೇಗೆ?' ಎಂದು ವಿಕ್ರಮ ಕೇಳಿದ.
               `ನಾನೂ ಈ ಬಗ್ಗೆ ಆಲೋಚನೆ ಮಾಡ್ತಿದ್ದೇನೆ ವಿಕ್ರಮ್. ನನಗೆ ನಮ್ಮ ಜೊತೆಗಿರುವ ದಂಡು ಸುಖಾ ಸುಮ್ಮನೆ ದೊಡ್ಡದಾಗ್ತಾ ಇದೆಯೇನೋ ಅನ್ನಿಸಲು ಆರಂಭಿಸಿದೆ. ನಮ್ಮ ಕೆಲಸವನ್ನು ಗಂಭೀರವಾಗಿ ಮಾಡಲಿಕ್ಕೇ ಆಗ್ತಾ ಇಲ್ಲ. ತರಲೆ ಮಾತು.. ಹರಟೆ ಇಷ್ಟರಲ್ಲೇ ನಮ್ಮ ಕೆಲಸ ಕಳೆದು ಹೋಗುತ್ತಿದೆ. ಏನೂ ಪ್ರೊಗ್ರೆಸ್ ಆಗ್ತಾ ಇಲ್ಲ ನಾವು ಬಂದ ಕೆಲಸದಲ್ಲಿ...' ಎಂದಳು ವಿಜೇತಾ.
           `ಹೌದು.. ನಿಜ... ನನಗೂ ಒಂದೆರಡು ಸಾರಿ ಹಾಗೇ ಅನ್ನಿಸಿದೆ. ಈ ಪ್ರದೀಪನ ತರ್ಲೆ, ವಿಷ್ಣುವಿನ ಸಿಟ್ಟು, ರಮ್ಯಾಳ ಕಿರಿಕಿರಿ ಸಾಕು ಅನ್ನಿಸಿಬಿಟ್ಟಿದೆ. ಇದ್ದುದರಲ್ಲಿಯೇ ವಿನಾಯಕ ಪರವಾಗಿಲ್ಲ. ತಾನಾಯಿತು, ತನ್ನ ಪಾಡಾಯಿತು ಎಂದುಕೊಂಡು ಸುಮ್ಮನಿರುತ್ತಾನೆ.'
            `ಹೌದು ವಿಕ್ರಂ. ಮರೆತಿದ್ದೆ ಕಣೋ. ನಿನ್ನೆ ರಾತ್ರಿ ಯಾಕೋ ನಂಗೆ ಇದ್ದಕ್ಕಿದ್ದಂತೆ ಎಚ್ಚರಾಯ್ತು. ಆಗ ಈ ಊರಿನ ಆಚೆಯ ಕಾಡಿನಲ್ಲಿ ಅದೇನೋ ಸದ್ದಾಗ್ತಿತ್ತು. ಬಹುಶಃ ಮರ ಕಡಿಯುತ್ತಿರಬಹುದು. ಬಹಳ ಹೊತ್ತಿನ ತನಕ ಕೇಳ್ತಾ ಇತ್ತು ಅದು. ಯಾಕೋ ಬೆಳಿಗ್ಗೆ ಹೇಳಬೇಕು ಅಂತ ಅನ್ನಿಸಿದ್ದರೂ ಹೇಳಲಿಕ್ಕಾಗಿರಲಿಲ್ಲ ನೋಡು..' ಎಂದಳು ಆಕೆ.
             `ನಿಜ.. ನಿನ್ನೆ ನನಗೂ ಕೇಳಿತ್ತು. ಅದ್ಯಾರೋ ತಮ್ಮ ಮನೆಗಾಗಿ ಮರ ಕಡಿದು ಸಾಗಿಸ್ತಾ ಇರಬೌದು..' ಎಂದು ಉತ್ತರಿಸಿದ ವಿಕ್ರಂ.
             `ಇದೇನಿದು ಇಷ್ಟು ಆರಾಮಾಗಿ ಹೇಳ್ತಾ ಇದೀಯಾ ನೀನು... ಮರ ಕಡಿಯೋದು ತಪ್ಪಂತ ಗೊತ್ತಿಲ್ವಾ ನಿಂಗೆ..'
             `ಗೊತ್ತು.. ಆದ್ರೆ ಒಂದ್ ಮಾತು ಹೇಳ್ತೀನಿ ನೋಡು.. ಈ ಭಾಗದಲ್ಲೆಲ್ಲ ಮುಖ್ಯವಾಗಿ ಎರಡು ಥರದ ಜನರಿದ್ದಾರೆ. ಒಬ್ಬರು ಅತೀ ಶ್ರೀಮಂತರು. ಮತ್ತೊಬ್ಬರು ಬಡವರು. ಶ್ರೀಮಂತರು ಹಣ-ಲಂಚದ ಸಹಾಯದಿಮದ ಕಳ್ಳನಾಟಾ ಕೊಯ್ಯಿಸಿ ಅರಾಮಾಗಿ ಇರ್ತಾರೆ. ಆದ್ರೆ ಬಡವರು ಏನ್ಮಾಡಬೇಕು? ಅದಕ್ಕೇ ಈ ಥರಾ.. ಆದರೆ ಬಡವರು ಮಾತ್ರ ತಮ್ಮ ಮನೆಗಳಿಗಾಗಿ ಮಾತ್ರ ನಾಟಾ ಕೊಯ್ಯಿಸಿಕೊಳ್ಳುತ್ತಾರೆ. ಆದರೆ ಶ್ರೀಮಂತರು ಹಾಗಲ್ಲ. ದುರಾಸೆ. ಕಳ್ಳ ನನ್ನ ಮಕ್ಕಳಿಗೆ. ಅನೇಕ ಸಾರಿ ಅರಣ್ಯ ಇಲಾಖೆಯವರನ್ನೂ ಕೈಯೊಳಗೆ ಮಾಡಿಕೊಂಡು ತಮ್ಮ ಕೆಲಸ ಪೂರೈಸಿಕೊಳ್ಳತಾರೆ ಅವರು..' ಎಂದ. ಇದನ್ನು ಕೇಳಿ ವಿಜೇತಾ ಒಮ್ಮೆ ನಿಟ್ಟುಸಿರಿಟ್ಟಳು. ಕೊನೆಗೆ ವಿಕ್ರಂ ಅಲ್ಲಿನ ಶ್ರೀಮಂತರ ಅಧಿಕಾರ ಲಾಲಸೆ, ಹಣಕ್ಕಾಗಿ ಬಾಯ್ಬಿಡುವ ಅವರ ನೀಚತನ, ಮಾಡುವ ಅಡ್ಡಕಸುಬು ಇವೆಲ್ಲವನ್ನೂ ಸವಿವರವಾಗಿ ಹೇಳಿದ. ಹಾಗೆಯೇ ಬಡವರು ಜೀವನ ನಡೆಸಲು ಕಷ್ಟ ಪಡುವ ಬಗೆ, ಹೋರಾಟ ಇವುಗಳನ್ನೂ ಸಾಧ್ಯಂತವಾಗಿ ವಿವರಿಸಿದ.
              ಕೊನೆಯಲ್ಲಿ ಮಾತು ಮತ್ತೆ ತಾವು ಮಾಡಬೇಕೆಂದುಕೊಂಡಿದ್ದ ಕೆಲಸದ ಕಡೆಗೆ ಸಾಗಿತು. ಕೊನೆಗೆ ಮರುದಿನ ಶಿರಸಿಯ ಪೊಲೀಸ್ ಠಾಣೆಗೆ ಹೋಗಿ ಬರುವುದು ಎಂದು ನಿರ್ಧಾರ ಮಾಡಿಕೊಂಡರು. ಇವರೀರ್ವರ ಮಾತು-ಕತೆ ಮುಗಿಯುವ ವೇಳೆಗೆ ಆ ಮನೆಯಲ್ಲಿ ರಾತ್ರಿಯ ಊಟಕ್ಕೆ ಬುಲಾವ್ ಬಂದಿತ್ತು.

***

             `ನೋಡಿ.. ಆ ದಂಟಕಲ್ಲಿಗೆ ಯಾರೋ ನಾಲ್ಕು ಜನ ಬೇರೆ ಊರಿನವರು ಬಂದಿದ್ದಾರಂತೆ. ಬಂದವರೇ ಕಾಡು ತಿರುಗುತ್ತಿದ್ದಾರಂತೆ. ಕಾಡನ್ನು ನೋಡುವ ಆಸೆಯಂತೆ. ಅವರ್ಯಾರು..? ಯಾಕೆ ಬಂದಿದ್ದಾರೆ ಅಂತೆಲ್ಲ ಕೂಡಲೇ ಮಾಹಿತಿ ಪಡೆಯಬೇಕು. ನಮ್ಮೂರ ಬಳಿ ಅವರ್ಯಾಕೆ ಬಂದರು ಅಂತ...' ಎಂದು ಮುಖ್ಯಸ್ಥನಂತಿದ್ದ ಒಬ್ಬಾತ ಹೇಳಿದ.
            ಅದಕ್ಕೆ ಪ್ರತಿಯಾಗಿ ಮತ್ತೊಬ್ಬ `ಬಿಡಿ.. ಇದಕ್ಕೆಲ್ಲಾ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಎಲ್ಲಿಗೋ ಯಾರೋ ಬಂದಿರ್ತಾರೆ.. ಸರ್ಕಾರ ಅದೇನೇನೋ ರಿಸರ್ಚ್.. ಮಣ್ಣು-ಮಸಿ ಅಂತೆಲ್ಲಾ ಹಾಕಿಕೊಂಡಿರುತ್ತದೆ.. ಇವರೂ ಹಾಗೇ.. ದಂಟಕಲ್ಲಿಗೆ ಅದೇ ಕಾರಣಕ್ಕೆ ಬಂದಿರ್ತಾರೆ.. ಇಷ್ಟಕ್ಕೂ ದಂಟಕಲ್ಲಿಗೆ ಅವರು ಬಂದರೆ.. ನಮಗೇನು ಸಮಸ್ಯೆ..?' ಎಂದ.
            `ಹಂಗಲ್ಲಪ್ಪಾ.. ಅವರ್ಯಾರೋ ಮಂಗಳೂರಿನ ಕಡೆಯವರಂತೆ. ಇಲ್ಲಿಗೆ ಅದೇನೋ ರಿಸರ್ಚಿಗೆ ಬಂದಿದ್ದಾರೆ ಎನ್ನುವುದು ನನಗೂ ಗೊತ್ತಿದೆ. ಅದೇನು ರಿಸರ್ಚಿರಬಹುದು ಎನ್ನುವ ಕುರೂಹಲ ನನಗೂ ಇದೆ. ಅಷ್ಟೇ. ಹಾಂಗೇ.. ಈ ರಿಸರ್ಚು ಅಂದ್ರೆ ಯಾರು ಬಂದು ಇಲ್ಲಿನ ಸರ್ವೆ ಮಾಡ್ಕೊಂಡು ಹೋಗ್ತಾರೋ ಅಂತ..' ಎಂದ ಆ ಮುಖ್ಯಸ್ಥ.
          `ಅಂದ್ರೆ ನೀನು ಏನ್ ಹೇಳ್ತಾ ಇರೋದು..?'
          `ನೋಡು.. ಬೇಡ್ತಿ-ಅಘನಾಶಿನಿ ಕಟ್ಟು ಹಾಕ್ತಾರೆ ಅನ್ನೋದು ಹಳೆಯ ಸುದ್ದಿ. ಈಗೀಗ ಅದೇನೋ ಮಿನಿ ಡ್ಯಾಂ ಆಗ್ತದಂತೆ. ಏನೇನೋ ಗಾಳಿ ಸುದ್ದಿಗಳು. ಅದರ ಬಗ್ಗೆಯೇ ಇವರೂ ಸರ್ವೆಗೆ ಬಂದಿರಬಹುದು. ಅಣೆಕಟ್ಟು ಹಾಕೋದ್ರಿಂದ ಅದೆಷ್ಟು ಭೂಮಿ-ಕಾಡು-ಜಮೀನು ಮುಳುಗಡೆ ಆಗ್ತದೆ ಅಂತ ಲೆಕ್ಖ ಹಾಕಲಿಕ್ಕೆ ಬಂದಿರಬಹುದಲ್ಲವಾ..?'
           `ಅದಕ್ಕಾಗಿ ಬಂದಿರಬಹುದು ಅಂತ ಹೇಗೆ ಹೇಳ್ತಿದ್ದೀರಿ?' ಇದು ಮತ್ತೊಬ್ಬನ ಪ್ರಶ್ನೆ.
           `ಸಾಮಾನ್ಯವಾಗಿ ರಿಸರ್ಚ್ ಮಾಡೋದು ಇಂತಹ ಕಾರಣಗಳಿಗಾಗಿಯೇ ಅಲ್ವೇ..'
           `ಬಿಡು.. ಅವ್ರು ಯಾವುದಕ್ಕೇ ಬಂದಿರಲಿ. ಮುಳುಗಡೆ ಆಗೇ ಆಗ್ತದೆ ಅನ್ನೋವಾಗ ನಾವು ಈ ಬಗ್ಗೆ ತಲೆ ಕೆಡಿಸಿಕೊಂಡರೆ ಆಯ್ತಪ್ಪಾ..' ಎನ್ನುವಲ್ಲಿಗೆ ಆ ಕಟ್ಟೆ ಪಂಚಾಯ್ತಿಯ ಮಾತು ಮುಗಿದಿತ್ತು.
             ಇದು ದಂಟಕಲ್ಲಿಗೆ ಆಗಮಿಸಿದ ವಿಕ್ರಮನ ತಂಡದ ಬಗ್ಗೆ ಪಕ್ಕದೂರು ಅರ್ಥೈಸಿದ ರೀತಿ. ಆ ಜನರ ಮಾತುಗಳು ಅಘನಾಶಿನಿಯ ಅಣೆಕಟ್ಟಿಗಾಗಿಯೇ ರಿಸರ್ಚು ನಡೆಯುತ್ತಿದೆ ಎನ್ನುವಂತೆ ಬಿಂಬಿತವಾಗಿದ್ದವು.

****

                ಮುಂಜಾನೆ ಎದ್ದು ವಿಕ್ರಮ್, ವಿಜೇತಾರು, ವಿನಾಯಕನ ಜೊತೆ ಮಾಡಿಕೊಂಡು ವಾಹನವನ್ನೇರಿ ಶಿರಸಿಗೆ ಹೊರಡಲು ಅನುವಾದರು. ಪ್ರದೀಪ ತಾನೂ ಬರುವೆನೆಂದ. ವಿಧಿಯಿಲ್ಲದೇ ಆತನನ್ನೂ ಶಿರಸಿಗೆ ಕರೆದೊಯ್ಯಬೇಕಾಯಿತು. ವಿಷ್ಣು ಮಾತ್ರ ದಂಟಕಲ್ಲಿನಲ್ಲಿಯೇ ಉಳಿದುಕೊಂಡಿದ್ದ.
                ಶಿರಸಿಗೆ ಬಂದ ಗುಂಪು ಮೊದಲು ಕೊಳ್ಳಬೇಕೆಂದುಕೊಂಡಿದ್ದ ಕೆಲ ವಸ್ತುಗಳನ್ನು ಕೊಂಡಿತು. ವಿಜೇತಾ-ವಿಕ್ರಮರಿಗೆ ಪ್ರದೀಪ ಪೊಲೀಸ್ ಠಾಣೆಗೆ ಬರುವುದು ಬೇಡವಾಗಿತ್ತು. ಹೀಗಾಗಿ ಆತನನ್ನು ವಿನಾಯಕನ ಜೊತೆ ಶಿರಸಿಯ ಶ್ರೀ ಅಧಿದೇವತೆಯಾದ ಮಾರಿಕಾಂಬೆಯನ್ನು ನೋಡಿ ಬರುವಂತೆ ಹೇಳಿ ಕಳುಹಿಸಿದರು. ಇವರೀರ್ವರೂ ಅದೇನೇನೋ ಸಬೂಬನ್ನು ಹೇಳಿ ಪೊಲೀಸ್ ಠಾಣೆಗೆ ಹೋದರು.
              ಪ್ರಾರಂಭದಲ್ಲಿ ಪೊಲೀಸ್ ಠಾಣೆಯಲ್ಲಿ ಇನ್ ಸ್ಪೆಕ್ಟರ್ ವಿಕ್ರಂ- ವಿಜೇತಾರೊಂದಿಗೆ ಸರಿಯಾಗಿ ವರ್ತಿಸಲಿಲ್ಲ. ಕೊನೆಗೆ ವಿಕ್ರಮ್ ಹಾಗೂ ವಿಜೇತಾರು ತಾವು ಖಾಸಗೀ ಪತ್ತೇದಾರರು ಎಂದು ಹೇಳಿದಾಗ ಅಧಿಕಾರಿ ಇವರ ಸಹಾಯಕ್ಕೆ ಬಂದು ಶಿರಸಿಯಲ್ಲಿ ನಡೆದ ಘಟನೆಗಳ ಮಾಹಿತಿಯನ್ನು ನೀಡಲಾರಂಭಿಸಿದರು. `ಇತ್ತೀಚೆಗೆ ಶಿರಸಿಯಲ್ಲಿ ನಿಗೂಢ ಗುಂಪೊಂದು ಕಾಣಿಸಿಕೊಂಡಿದೆಯಾದರೂ ಅದಕ್ಕೆ ಹದಿನೈದು-ಇಪ್ಪತ್ತು ವರ್ಷಗಳ ಇತಿಹಾಸವಿದೆ. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಆ ಗುಂಪು ಮತ್ತಷ್ಟು ಪ್ರಭಲವಾಗಿದೆ. ಕೊಲೆ-ದರೋಡೆ-ಕಳ್ಳತನ-ಸ್ಮಗ್ಲಿಂಗು ಇತ್ಯಾದಿಗಳು ಆ ಗುಂಪಿನ ಮುಖ್ಯ ದಂಧೆ. ಜೊತೆಗೆ ಆ ಗುಂಪು `ಎಸ್' ಮಾರ್ಕಿನ ಮೂಲಕ ಪ್ರಸಿದ್ಧವಾಗಿದೆ. ಈ ಭಾಗದಲ್ಲೆಲ್ಲ ಆ ಗುಂಪಿಗೆ ಸೂರ್ಯನ ಕುದುರೆ ಎಂದೇ ಹೆಸರು. ಅವರು ತಮ್ಮ ಕೆಲಸಕ್ಕೆ ಸೂರ್ಯಶಿಖಾರಿ ಎಂದು ಕರೆದುಕೊಳ್ಳುತ್ತಾರೆ ಎಂದು ಪೊಲೀಸ್ ಅಧಿಕಾರಿ ದೀರ್ಘ ವಿವರಣೆಯನ್ನು ನೀಡಿದ.
              ವಿಕ್ರಂ ಹಾಗೂ ವಿಜೇತಾರಿಗೆ ಪೊಲೀಸ್ ಅಧಿಕಾರಿ ನೀಡಿದ ಈ ಮಾಹಿತಿಯೊಂದ ತಮ್ಮ ಕೆಲಸಕ್ಕೆ ಸ್ವಲ್ಪವಾದರೂ ಅನುಕೂಲವಾಗಬಹುದು ಎನ್ನಿಸಿತು. ಹಾಗೆಯೇ ಇವರು ಮೊದಲೊಮ್ಮೆ ಹಿಡಿದಿದ್ದ ಹಾಗೂ ಆತನ ನಿಘೂಡ ಹತ್ಯೆಯ ಬಗ್ಗೆ ಕೇಳಿದರು. ಅಧಿಕಾರಿ ಆ ವ್ಯಕ್ತಿ ಸೂರ್ಯಗುದುರೆ ಗುಂಪಿಗೆ ಸೇರಿದ ವ್ಯಕ್ತಿಯೆಂದೂ ಆತನನ್ನು ಬಂಧಿಸಿದ ನಂತರ ಅವನ ಕೊಲೆ ನಡೆಯಿತೆಂದೂ ಕೊಲೆಗಾರನ ಸುಳಿವು ಸಿಕ್ಕಿಲ್ಲವೆಂದೂ ತಿಳಿಸಿದರು.
              ಯಾಕೋ ವಿಕ್ರಮ ಹಾಗೂ ವಿಜೇತಾರಿಗೆ ಪೊಲೀಸ್ ಇಲಾಖೆಯ ದಿವ್ಯ ನಿರ್ಲಕ್ಷ್ಯತನ-ನಿಧಾನ ತನಿಖೆ ಹೇಸಿಗೆ ಹುಟ್ಟಿಸಿತು. ಕೊನೆಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡ ನಂತರ ವಿಜೇತಾ ಹಾಗೂ ವಿಕ್ರಮರು ವಾಪಾಸು ಹೊರಟರು. ಇನ್ನೇನು ಐದು ರಸ್ತೆ ಸರ್ಕಲ್ ದಾಟಿ ಬಸ್ ನಿಲ್ದಾಣದ ಬಳಿ ಬರುತ್ತಿದ್ದಂತೆಯೇ ವಿನಾಯಕ ಎದುರಾದ. ಮುಖದಲ್ಲಿ ಗಾಭರಿ ತುಂಬಿತ್ತು. ತಕ್ಷಣ ಇವರಿಬ್ಬರೂ `ಏ... ಏನಾಯ್ತು..?' ಎಂದರು.

(ಮುಂದುವರಿಯುತ್ತದೆ..)

Tuesday, February 24, 2015

ಅಮ್ಮನೆಂದರೆ

ಅಮ್ಮನೆಂದರೆ
ಬರೀ ಎರಡಕ್ಷರವಲ್ಲ|
ಈ ಪ್ರಪಂಚವ ನೋಡೆಂದು
ಕಣ್ಣು ತೆರೆಸಿ, ಜೀವ ನೀಡಿದಾಕೆ ||

ಅಮ್ಮನೆಂದರೆ
ಬರೀ ಜೀವಿಯಲ್ಲ
ಕಣ್ಣಿಗೆ ಕಾಣುವ, ಪ್ರೀತಿಯ ನೀಡುವ
ಈ ಬಾವ ಲೋಕದ ದೇವರಾಕೆ ||

ಅಮ್ಮನೆಂದರೆ
ಬರೀ ಹೆಣ್ಣಲ್ಲ
ಬಿದ್ದಾಗಲೆತ್ತುವ, ಗೆದ್ದಾಗ ನಲಿವ
ಹೆಂಗರುಳು, ಹೆಣ್ಮನಸು ಆಕೆ ||

ಅಮ್ಮನೆಂದರೆ
ಬರೀ ಭೂಮಿಯಲ್ಲ
ಬರಡಲ್ಲೂ ಜೀವ ಸ್ಫುರಿಸಿ
ಜೀವ ನಿಡುವ ದಾತೆ ಆಕೆ ||

ಅಮ್ಮನೆಂದರೆ
ಬರೀ ಪದಗಳು ಸಾಲಲಿಲ್ಲ
ಆಕೆಯ ಗುಣ ಹೊಗಳಲು
ಅಷ್ಟು ಮೇಲಂತೆ ಆಕೆ ||

ಅಮ್ಮನೆಂದರೆ
ಬರೀ ಅಮ್ಮನಲ್ಲ
ಬಾಳಿನ ಪ್ರೇಮ, ಬದುಕಿಗೆ ಧಾಮ
ನಿಲುಕದ ಆಸೀಮ ಆಕೆ  ||

***

(ಈ ಕವಿತೆಯನ್ನು ಬರೆದಿರುವುದು 25-08-2006ರಂದು ದಂಟಕಲ್ಲಿನಲ್ಲಿ)

Saturday, February 21, 2015

ದಿವ್ಯಾ

ದಿವ್ಯಾ..
ಕಾಣದ ಊರಲ್ಲಿದ್ದರೂ
ಪ್ರತಿರೂಪ-ಕಲ್ಪನೆ
ಮನದೊಳಗೆ ಭವ್ಯ |

ಬದುಕು, ಬರಹ
ನಿತ್ಯ-ನವ್ಯ,
ಇರದಿರಲಿ ಅಪಸವ್ಯ |

ದಿವ್ಯಾ...
ಪಕ್ವ ಮನದ ಒಂದು
ಚಿಕ್ಕ ಪರಿಕಲ್ಪನೆ..|
ಆಕೆ ಅಗ್ನಿ ದಿವ್ಯವೋ,
ಜಲವೋ ಜೊತೆಗೆ
ಮೆರೆವ ಕಾಳೋರಗವೋ..
ಕೈಯೊಳಗೆ ಹಿಡಿದು
ಗೆಲ್ಲಬಲ್ಲೆನಾ, ನಾನರಿಯೆ |

ಅಲ್ಲ..
ಅರ್ಥೈಸಬಲ್ಲೊಂದು
ಸ್ಪಷ್ಟ ಕಾವ್ಯ |
ಹೊರಗೆ ನಗುವ ಪರದೆ
ಒಡಲೊಳಗೆ ಏನುಂಟು
ನಿಘೂಡ ಭವಿತವ್ಯ |

ಹೆಣ್ಣು-ಹೊನ್ನು-ಮಣ್ಣು
ದಿವ್ಯ ದರ್ಶನ |

ಸ್ಪಷ್ಟ ಮುಖವಾಡದ
ಹಿಂದೆ ಅರ್ಥವಾಗದ
ಬಯಕೆ-ಆಸೆ |

ದಿವ್ಯ..
ದೂರದ ಜಗತ್ತಿನಲ್ಲಿಹೆ..
ಎಂದಿಗೂ ದಿವ್ಯ|
ಕಾಣದ ಕಣ್ಣಿಗೆ ಭವ್ಯ |

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಎಂಬ ಗಾದೆ ಮಾತು ಸತ್ಯ ||

***

(ಈ ಕವಿತೆಯನ್ನು ಬರೆದಿರುವುದು 11-03-2007ರಂದು ದಂಟಕಲ್ಲಿನಲ್ಲಿ)
(ಕಾಲೇಜು ದಿನಗಳಲ್ಲಿ ಪತ್ರ ಮೈತ್ರಿಯ ಮೂಲಕ ಗೆಳತಿಯಾಗಿದ್ದಾಕೆ ದಿವ್ಯಾ. ಆಕೆ ಅದೊಂದು ದಿನ ತನ್ನ ಬಗ್ಗೆ ಒಂದು ಕವಿತೆ ಬರೆಯಲು ಸಾಧ್ಯವಾ ಎಂದು ಕೇಳಿದ್ದಳು. ಆಕೆಯನ್ನು ಮುಖತಃ ಎಂದೂ ನೋಡದ ನಾನು ಆಕೆಯ ಬರವಣಿಗೆ ಹಾಗೂ ಪೋಟೋ ನೋಡಿ ಸುಮ್ಮನೆ ಬರೆದ ಕವಿತೆ ಇದು. ವಾವ್.. ಸೂಪರ್ರಾಗಿದೆ ಮಾರಾಯಾ... ಎನ್ನುವ ಕಾಂಪ್ಲಿಮೆಂಟ್ ಆ ದಿನಗಳಲ್ಲಿ ದಿವ್ಯಾಳಿಂದ ಸಿಕ್ಕಿದೆ. ಈಗಲೂ ಆಪ್ತ ಗೆಳತಿಯಾಗಿ ಆಗಾಗ ಪೋನ್ ಮಾಡುತ್ತ, ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಹರಟೆಗೆ ಸಿಗುವ ಗೆಳತಿ ದಿವ್ಯಾ.. ನನ್ನ ಬೆಂಗಳೂರಿನ ದಿನಗಳಲ್ಲಿ ಆಕೆ ಸಿಕ್ಕು, ಮಾತನಾಡಿದ್ದೇವೆ. ಹರಟೆ ಕೊಚ್ಚಿದ್ದೇವೆ. ಒಂಚೂರು ದಪ್ಪ ಆಗು ಮಾರಾಯಾ.. ಎಂದು ಹೇಳಿದ ಆಕೆ, ನಾನು ದಪ್ಪಗಾಗುವ ಆಸಾಮಿಯಲ್ಲ ಎಂದು ತಿಳಿದುಕೊಂಡಾಕೆ. ಎಲೆಕ್ಟ್ರಾನಿಕ್ ಸಿಟಿ, ಗಾರೆ ಬಾವಿ ಪಾಳ್ಯ.. ಮುಂತಾದ ಪ್ರದೇಶಗಳಲ್ಲಿ ಆಕೆಯೊಡನೆ ಸುತ್ತಾಡಿದ ದಿನಗಳು ನೆನಪಿನಲ್ಲಿದೆ. ಆಕೆಯ ಕುರಿತು ಬರೆದ ಕವಿತೆಯಾದರೂ ಆಕೆಯ ಒಪ್ಪಿಗೆ ಇಲ್ಲದೇ ಬ್ಲಾಗ್ ಗೆ ಅಪ್ ಡೇಟ್ ಮಾಡುತ್ತಿದ್ದೇನೆ. ಇಂತಹ ಗೆಳತಿ ನೂರ್ಕಾಲ ಸುಖವಾಗಿ ಬಾಳಲಿ..)

Sunday, February 15, 2015

ಅಘನಾಶಿನಿ ಕಣಿವೆಯಲ್ಲಿ-12

(ದಂಟಕಲ್ಲಿನಲ್ಲಿರುವ ಆನೆಕಲ್ಲು)
                ಮತ್ತೆ ಕೆಲ ಘಳಿಗೆಯಾಚೆಯಲ್ಲಿಯೇ ಶಿರಸಿ ನಗರಿ ಬಂದಿತ್ತು. ಕ್ಯಾಮರಾ ಸೇರಿದಂತೆ ಅಗತ್ಯ ವಸ್ತುಗಳನ್ನು ಶಿರಸಿಯಲ್ಲಿ ಖರೀದಿ ಮಾಡಲಾಯಿತು. ಪ್ರದೀಪ ಯಾರಿಗೂ ತಿಳಿಯದಂತೆ ಚಿಕ್ಕದೊಂದು ಚಾಕುವನ್ನು ಕೊಂಡನಾದರೂ ವಿನಾಯಕನ ಸೂಕ್ಷ್ಮದೃಷ್ಟಿಗೆ ಅದು ಬಿದ್ದಿತ್ತು. ಗಮನಿಸಿಯೂ ಗೊತ್ತಿಲ್ಲದಂತೆ ಇದ್ದುಬಿಟ್ಟಿದ್ದ.
                ಮತ್ತೆ ಒಂದು ತಾಸಿನ ಒಳಗಾಗಿ ಅಘನಾಶಿನಿ ಗರ್ಭದ ದಂಟಕಲ್ಲಿನ ಹಾದಿಯನ್ನು ಹಿಡಿದಾಗಿತ್ತು. ಕಚ್ಚಾ ರಸ್ತೆಯನ್ನು ವಾಹನ ಸಾಕಷ್ಟು ವೇಗದಿಮದಲೇ ಹಾದುಬಿಟ್ಟಿತು. ಅಂಕುಡೊಂಕಿನ ದಾರಿಯಲ್ಲಿ ಬಿಂಕದ ಸಿಂಗಾರಿಯಾಗಿ, ಜಂಪು, ರಂಪಿನೊಂದಿಗೆ ಗಾಡಿ ಸಾಗಿತು. ಕಾಡು-ಕಾಡಿನ ಮೃಗ ಕೀಟಗಳ ಉಲಿ, ಬಳ್ಳಿಗಳ ಬಳುಕು, ರಸ್ತೆಯ ಧೂಳು, ನಿರಭ್ರಮೌನ ಇವರನ್ನು ಸ್ವಾಗತಿಸಿತು.
                ದೇವಿಮನೆ, ಅರಬೈಲು, ಬಡಾಳ ಮುಂತಾದ ಘಟ್ಟಗಳನ್ನು ನೆನಪಿಸುವ, ಅವುಗಳಂತೆ ಅಂಕು-ಡೊಂಕಿನ ರಸ್ತೆ ದಂಟಕಲ್ ಗೆ ತೆರಳುವ ಮಾರ್ಗದ ಮಧ್ಯವೂ ಇರುವುದನ್ನು ನೋಡಿ ವಿಜೆತಾ ವಿಸ್ಮಯ ಪಟ್ಟಳು. ಹಾಗೆಯೇ ಅವಳ ಕೈಯಲ್ಲಿನ ಮೊಬೈಲಿನ ಸಿಗ್ನಲ್ ಕೂಡ ಕಟ್ಟಾಯಿತು. ಸಮಯ ಸರಿದಂತೆ ಗಾಡಿಯೊಳಗಿನ ಸದ್ದು ಕೂಡ ತಣ್ಣಗಾಯಿತು. ದಂಟಕಲ್ ಸಮೀಪದ ಗುಡ್ಡೇತಲೆ, ಜಾರಾಬೊಂಡಿ, ಕಾನುಬೈಕ್ಲು, ಹೆಣಸುಟ್ಟ ಮುರ್ಕಿ ಈ ಮುಂತಾದ ನಾಮಾಂಕಿತ ಸ್ಥಳ ಹಾದಾಯಿತು. ಅವುಗಳಿಗೆಲ್ಲ ವಿನಾಯಕನ ಲೈವ್ ಕಾಮೆಂಟರಿಯೂ ದೊರೆಯಿತು. ಅಂತೂ ದಂಟಕಲ್ ಎಂಬ ನಿಸರ್ಗದ ಮಧ್ಯದ ಸುಂದರ ಊರಿನ ಅಂಗಳ ತಲುಪುವ ವೇಳೆಗೆ ಗವ್ವೆನ್ನುವ ಕತ್ತಲು, ಕಿರ್ರೆನ್ನುವ ಜೀರುಂಡೆಗಳ ಕೂಗು ಇವರ ಜೊತೆಗೆ ತೇಲಿ ತೇಲಿ ಬಂದಿತು. ಗಾಡಿಯ ಹಾರನ್ನು ಮನೆಯ ಬಹುತೇಕರಿಗೆ ಕೇಳಿಸಿ, ಬಾಗಿಲಲ್ಲಿ ಇಣುಕಿ, ಪರಿಚಿತರನ್ನು ನೋಡಿ ನಗುಸೂಸಿ, ಅಪರಿಚಿತ ಮುಖ ನೋಡಿ ಕುತೂಹಲ ಪಟ್ಟಿದ್ದೂ ಆಯಿತು.
               ಮನೆಯ ಯಜಮಾನರಾದ ಶ್ರೀಕಂಠ ಹೆಗಡೆಯವರು ಬಂದು `ಯಾರು..?' ಎಂಬಂತೆ ನೋಡಿದರು. ಪರಿಚಿತರನ್ನು ಕಾಣಲಾಗಿ ಸಂತಸ ಪಟ್ಟರು. ಭವ್ಯ ಮನೆ, ಎದುರಿಗಿರುವ ಅಟ್ಟ, ಪಕ್ಕದ ಕೊಟ್ಟಿಗೆ, ಸಾಕಷ್ಟು ದೊಡ್ಡದಾದ ಅಂಗಳ, ಪಕ್ಕದಲ್ಲಿ ಕುತೂಹಲದಿಂದೊಡಗೂಡಿದ ಒಂದೆರಡು ಮನೆ ಕತ್ತಲೆಯಲ್ಲಿ ವಿಜೇತಾಳಿಗೆ ಕಂಡಿದ್ದಿಷ್ಟು. ವಿನಾಯಕ ಎಲ್ಲರನ್ನೂ ಒಳಕ್ಕೆ ಕರೆದೊಯ್ದ. ಇಲ್ಲಿ ಮತ್ತೆ ಪರಿಚಯ ಪ್ರಕ್ರಿಯೆ ಮುಗಿಯಿತು. ಶ್ರೀಕಂಠ ಹೆಗಡೆಯವರು ಮನೆಯ ಯಜಮಾನರಾದರೆ ಗೋದಾವರಿ ಮನೆಯ ಆರದ ದೀಪ. ಸರ್ವೇಶ್ವರ ಹೆಗಡೆ ಶ್ರೀಕಂಠ ಹೆಗಡೆಯವರ ತಂದೆ. ಸ್ನೇಹಾ ವಿನಾಯಕನ ತಂಗಿ. ಮತ್ತೊಬ್ಬ ಚಿಕ್ಕ ಹುಡುಗ ರಾಜೀವ ಇಷ್ಟು ಜನ ಮನೆಯ ಸದಸ್ಯರೆಂಬುದು ತಿಳಿಯಿತು. ರಾಜೀವ ಆ ಮನೆಯಲ್ಲಿ ಓದುವುದಕ್ಕಾಗಿ ಉಳಿದುಕೊಂಡ ಹುಡುಗನಾಗಿದ್ದ.
               ಮನೆಯ ಒಳಗಣ ಜಗುಲಿ ಬಹು ವಿಶಾಲವಾಗಿತ್ತು. ನೂರಾರು ಜನರ ಹಿಡಿಯುವಂತಿದ್ದ ಅಲ್ಲಿ ಬಹು ಹಳೆಯ ಕಾಲದ ಆಕರ್ಷಕ ಕೆತ್ತನೆಯಿಂದ ತುಂಬಿ ನಿಂತಿರುವ ಕಂಬ ಎಲ್ಲರನ್ನೂ ಸೆಳೆಯಿತು. ಅಲ್ಲಿ ಪರಿಚಯ ಕಾರ್ಯಕ್ರಮವೂ ನಡೆಯಿತು. ಗೋದಾವರಿಯವರು ಎಲ್ಲರಿಗೂ `ಆಸರಿಗೆ' ಎಂದಾಯಿತು. ಸೇವನೆಯೂ ಮುಗಿಯಿತು.
               ವಿಜೇತಾಳಿಗಾಗಿಯೇ ವಿನಾಯಕ ಆ ಮನೆಯ ಮಹಡಿಯ ಮೇಲೆ ಒಂದು ಕೋಣೆಯನ್ನು ತೋರಿಸಿ ಆಕೆಯ ಲಗೇಜನ್ನು ಅಲ್ಲಿಯೇ ಇರಿಸಿ ಬಂದ. ಮಹಡಿಯೂ ಕೂಡ ಸಾಕಷ್ಟು ವಿಶಾಲವಾಗಿತ್ತು. ಇಡೀ ಮಹಡಿಯ ಮೂಲೆಯಲ್ಲಿ ಎರಡು ಕೋಣೆಗಳಿದ್ದವಾದರೂ ಒಂದು ಕೋಣೆಯಲ್ಲಿ ಸಾಕಷ್ಟು ಗುಜರಿ ವಸ್ತುಗಳನ್ನು ಪೇರಿಸಿ ಇಟ್ಟಿರುವುದು ಕಾಣಿಸುತ್ತಿತ್ತು. ಮಹಡಿಯ ತುಂಬ ಅಡಿಕೆ  ಚೀಲಗಳನ್ನೂ ಇಡಲಾಗಿತ್ತು.
                 ಸಂಜೆಯ ವೇಳೆಗೆ ಊಟ ಮುಗಿಸಿ, ತಕ್ಕಮಟ್ಟಿಗೆ ಸುಸ್ತಾಗಿದ್ದ ಎಲ್ಲರೂ ಹಾಸಿಗೆಯ ಮೇಲೆ ದಬಾರನೆ ಉರುಳಿಕೊಂಡರು. ವಿಜೇತಾಳಿಗೆ ಯಾಕೋ ಆ ರೂಮು ಬಹಳ ಸೆಳೆದುಬಿಟ್ಟಿತ್ತು. ಇಡಿಯ ಕೋಣೆಯಲ್ಲಿ ಹಲವಾರು ವಿಶಿಷ್ಟ ವಸ್ತುಗಳಿದ್ದವು. ಕೋಣೆಯ ಒಂದೆಡೆಯಲ್ಲಿ ಒಂದೆರಡು ಬೀರುಗಳೂ ಇದ್ದವು. ಒಂದೆಡೆ ಹಳೆಯ ಕೆತ್ತನೆಯ ಗಟ್ಟುಮುಟ್ಟಾದ ಮಂಚವೊಂದಿತ್ತು. ಅದಕ್ಕೆ ಎದುರಾಗಿದ್ದ ಗೋಡೆ ಖಾಲಿಯಿತ್ತು. ಅದು ಸಂಪೂರ್ಣವಾಗಿ ಬಿಳಿ ಬಣ್ಣದಿಂದ ಆವೃತವಾಗಿತ್ತು. ಹಾಗೆಯೇ ಅದು ನೋಡುಗರನ್ನು ಮತ್ತೆ ಮತ್ತೆ ಸೆಳೆಯುತ್ತಿತ್ತು. ಪತ್ರಿಕೆ, ಬಂದ ಕೆಲಸ, ಇಂತಹ ವಿಷಯಗಳ ಬಗ್ಗೆಯೇ ಆಲೋಚಿಸುತ್ತಾ ಹಾಸಿಗೆಗೆ ಒರಗಿದವಳಿಗೆ ಅದ್ಯಾವ ಮಾಯೆಯಲ್ಲಿ ನಿದ್ದೆ ಬಂದಿತ್ತೋ ತಿಳಿಯಲಿಲ್ಲ.
                 ಯಾವುದೋ ಜಾವದಲ್ಲಿ ಆಕೆಗೆ ಮತ್ತೆ ಥಟ್ಟನೆ ಎಚ್ಚರಾಯಿತು. ನಿರಭ್ರ ಮೌನವೇ ಮೆರೆಯುತ್ತಿದ್ದ ಆ ನಿಶೆಯಲ್ಲಿ ಆಗಾಗ `ಟಕ್.. ಟಾಕ್..' ಎಂದು ಏನನ್ನೋ ಕಡಿಯುತ್ತಿದ್ದ ಶಬ್ದ ಅಲೆ ಅಲೆಯಾಗಿ ತೇಲಿಬರುತ್ತಿತ್ತು. `ಅದೇನಿರಬಹುದು..?' ಎಂಬ ಕುತೂಹಲದ ಎಳೆ ಆಕೆಯ ಮನದ ಭಿತ್ತಿಯಲ್ಲಿ ಒಮ್ಮೆ ಮಿಂಚಿ ಮರೆಯಾಯಿತಾದರೂ, ಆ ಕುರಿತು ಹೆಚ್ಚಿಗೆ ಆಲೋಚನೆ ಮಾಡಲು ನಿದ್ದೆ ಬಿಡಲಿಲ್ಲ. ಒರಗಿಕೊಂಡು ಆಲಿಸುತ್ತಿದ್ದವಳಿಗೆ ಮತ್ತೆ ನಿದ್ದೆ.
                ಹಾಗಾದರೆ ಆಕೆಗೆ ಕೇಳಿದ ಶಬ್ದವೇನು? ಅದರ ಹಿನ್ನೆಲೆ ಏನಿರಬಹುದು? ಅದರ ಮೂಲ ಯಾವುದು? ವಿಜೇತಾ ಇದರ ಮೂಲವನ್ನು ತಿಳಿಯಲು ಪ್ರಯತ್ನಿಸಬೇಕಿತ್ತೆ? ಆ ಶಬ್ದ ಇಲ್ಲೇನಾದರೂ ತಿರುವು ನೀಡಬಹುದೇ? ಯೋಚಿದಂತೆಲ್ಲ ಪ್ರಶ್ನೆಗಳೇ ಧುತ್ತೆಂದು ಕಾಡಿತು.

****11****

            ಬೆಳಿಗ್ಗೆ ಇದ್ದಕ್ಕಿದ್ದಂತೆ ಮೊಬೈಲ್ ರಿಂಗಣಿಸಲು ಆರಂಭಿಸಿದಾಗ ವಿಜೇತಾ ಧಡ್ಡನೆ ಎದ್ದು ಕುಳಿತಳು. ನಿನ್ನೆ ಸಂಜೆ ಬರುವಾಗ ಮೊಬೈಲ್ ಸಿಗ್ನಲ್ ಕಟ್ಟಾಗಿತ್ತು. ತಮ್ಮೂರಿನ ಫಾಸಲೆಯಲ್ಲಿ ಒಂದೋ ಎರಡೋ ಕಡೆಗಳಲ್ಲಿ ಮಾತ್ರ ಮೊಬೈಲ್ ಸಿಗ್ನಲ್ ಸಿಗುತ್ತದೆ ಎಂದು ವಿನಾಯಕ ಹೇಳಿದ್ದ ನೆನಪು. ಆದರೆ ಈ ಕೋಣೆಯಲ್ಲಿ ಮೊಬೈಲ್ ರಿಂಗಾಗುತ್ತಿದೆಯಲ್ಲ ಎಂದುಕೊಂಡು ಮೊಬೈಲ್ ನೋಡಿದವಳಿಗೆ ಅಚ್ಚರಿ. ಮೊಬೈಲಿನಲ್ಲಿ ಸಿಗ್ನಲ್ಲಿನ ಮುೂರು ಕಡ್ಡಿಗಳನ್ನು ತೋರಿಸುತ್ತಿತ್ತು. ಅಬ್ಬಾ.. ಈ ಕುರಿತು ವಿನಾಯಕನ ಬಳಿ ಮಾತನಾಡಬೇಕು ಎಂದುಕೊಂಡಳು. ನವೀನಚಂದ್ರ ಅವರು ಪೋನ್ ಮಾಡಿದ್ದರು. ಬಂದ ಕೆಲಸ ಏನಾಯಿತೆಂಬ ಬಗ್ಗೆ ಮಾತನಾಡಿದರು. ಅರ್ಧಗಂಟೆಗಳ ಕಾಲ ಪೋನಿನಲ್ಲಿ ಮಾತನಾಡಿದ ವಿಜೇತಾ ಇನ್ನೇನು ಮೊಬೈಲ್ ಇಡಬೇಕೆನ್ನುವಷ್ಟರಲ್ಲಿ ಕೆಳಮನೆಯಿಂದ ಬುಲಾವ್ ಬಂದಿತು. ಮೈಮುರಿಯುತ್ತಾ ಹೊರಟಳು ವಿಜೇತಾ.
               ಮಹಡಿಯ ಮನೆಯಿಂದ ಕೆಳಕ್ಕೆ ಇಳಿಯುತ್ತಿದ್ದಂತೆಲ್ಲ `ತೆಳ್ಳೇವು, ಕಾಯಿ ಚಟ್ನಿಯ ಗಮ್ಮೆನ್ನುವ ಕಂಪು ಮೂಗಿಗೆ ಬಡಿಯಲಾರಂಭಿಸಿತು. ಈಕೆ ಅಡುಗೆ ಮನೆಗೆ ಹೋಗುವ ವೇಳೆಗಾಗಲೇ ಅಡುಗೆ ಮನೆಯಲ್ಲಿ ಉದ್ದನೆಯ ಸಾಲಿಲ್ಲಿ ಕುಳಿತ ಮನೆಯ ಸದಸ್ಯರು ಅಲ್ಲಿ ತಯಾರು ಮಾಡಿದ್ದ `ಮೊಗೆಕಾಯಿ ತಳ್ಳೇವು' ತಿನ್ನುವುದರಲ್ಲಿ ಒಬ್ಬರಗೊಬ್ಬರು ಸ್ಪರ್ಧೆಗೆ ಬಿದ್ದಿದ್ದಾರೋ ಎಂಬಂತೆ ಮಾಡುತ್ತಿದ್ದರು. ಪ್ರದೀಪ ಎಷ್ಟೋ ತೆಳ್ಳೇವು ತಿಂದ ಶಾಸ್ತ್ರ ಮಾಡಿ ಏಳಲು ಪ್ರಯತ್ನಿಸಿದಾಗ ಅಲ್ಲೇ ಇದ್ದ ಸರ್ವೇಶ್ವರ ಹೆಗಡೆಯವರು `ತಮಾ.. ನೀ ಎಂತಾ.. ಮಾರಾಯ.. ಬರಿ ನಾಲ್ಕು ತೆಳ್ಳೇವಿಗೆ ಟುಸ್ಸಾಗೋದ್ಯನಾ? ನಿನ್ ವಯಸ್ನಲ್ಲಿ ಆನು ಕನಿಷ್ಟ 12 ತೆಳ್ಳೆವ್ ತಿಂತಿದ್ದಿ ಗೊತ್ತಿದ್ದನಾ..' ಎಂದು ಹೇಳಿದವರೇ ಪ್ರದೀಪನನ್ನು ಮತ್ತೆ ಕೂರಿಸಿ ಮತ್ತೆರಡು ತೆಳ್ಳೇವನ್ನು ಹಾಕಿದರು. ಪ್ರದೀಪ ಕಕ್ಕಾಬಿಕ್ಕಿಯಾಗಿದ್ದ. ಆತನ ಪಾಡು ನೋಡಿ ವಿಜೇತಾಳಿಗೆ ನಗು ಬಂದಿತು. ನಂತರ ಆಕೆಯೂ ತಳ್ಳೇವು ತಿನ್ನುವವರ ಸಾಲಿಗೆ ಸೇರಿ ಕುಳಿತುಕೊಂಡಳು.
(ಅಘನಾಶಿನಿ ನದಿಗೆ ಅಡ್ಡಲಾಗಿ ದಂಟಕಲ್ಲಿನಲ್ಲಿ ಯುವಕರು ನಿರ್ಮಿಸುವ ಕಾಲುಸಂಕ)
              ತಿಂಡಿ ಮುಗಿಯಿತು. ರಾತ್ರಿ ಕನಸಿನಲ್ಲಿ ನಡೆದಂತಿದ್ದ ಆ ವಿಚಿತ್ರ ಘಟನೆಯ ಬಗ್ಗೆ ವಿಜೇತಾ ಕೇಳಬೇಕು ಎಂದುಕೊಂಡಿದ್ದಳು. ಆದರೆ ಯಾಕೋ ಆ ಮಾತು ಗಂಟಲಿನಲ್ಲಿಯೇ ಉಳಿದುಬಿಟ್ಟಿತು.
              ಆ ನಂತರ ಊರು ತಿರುಗಬೇಕೆಂಬ ಹಂಬಲ ಎಲ್ಲರಿಗೆ ಮೊದಲಾಯಿತು. ವಿನಾಯಕ ಸ್ಥಳೀಯನಾಗಿದ್ದರಿಂದ ಆ ಗುಂಪಿಗೆ ಆತ ನಾಯಕನಾದ. ಜೊತೆಗೆ ಪುಟ್ಟ ಹುಡುಗ ರಾಜೀವನೂ ಬಂದ. ಯಾಕೋ ಎಲ್ಲರಿಗೂ ಊರಿನ ಇತರ ಮನೆಗಳಿಗೆ ಹೋಗಬೇಕು ಎನಿಸಲಿಲ್ಲ. ಹಾಗಾಗಿ ವಿನಾಯಕ ಅವರನ್ನೆಲ್ಲ ಕಾಡು-ಮೇಡು ಸುತ್ತಿಸಲು ಹೊರಟ. ವಿನಾಯಕನ ಜೊತೆಗೆ ಸಾಗುತ್ತಿದ್ದ ವಿಕ್ರಂ, ವಿಷ್ಣು, ಪ್ರದೀಪ, ವಿಜೇತಾ, ರಮ್ಯಾ, ರಾಜೀವ ಇವರೆಲ್ಲ ಸಾಗುತ್ತಿದ್ದರೆ ಆ ಊರಿಗೆ ಊರೇ ಇದ್ಯಾವ ದಂಡು ಇಲ್ಲಿಗೆ ಬಂದು ಅಟಕಾಯಿಸಿತು ಎಂದುಕೊಂಡಿತು.
               ಮೊದಲು ತನ್ನ ಮನೆಯ ಜಮೀನನ್ನು ತೋರಿಸುತ್ತೇನೆ ಎಂದು ಹೇಳಿದ ವಿನಾಯಕ ಒಂದೆರಡು ಅಂಕುಡೊಂಕಿನ ದಾರಿಯಲ್ಲಿ ಹಲ-ಕೆಲ ಗುಡ್ಡ ಬೆಟ್ಟಗಳನ್ನು ಹತ್ತಿಳಿಸಿಕೊಂಡು ಬಂದು ಅದೊಂದು ವಿಶಾಲವಾದ ಗದ್ದೆ ಬಯಲಿನ ಕಡೆಗೆ ಕರೆದುಕೊಂಡು ಬಂದ. ವಿಶಾಲವಾದ ಗದ್ದೆಯ ಪಕ್ಕದಲ್ಲಿ ಆಗಸದ ಕಡೆಗೆ ಚಾಚಿ ನಿಂತಿದ್ದ ಅಡಿಕೆ, ತೆಂಗಿನ ಮರಗಳು ಎಲ್ಲರನ್ನೂ ಸ್ವಾಗತಿಸಿದವು. ಅದ್ಯಾವಾಗಲೋ ತೋಟಕ್ಕೆ ಬಂದು ಅಲ್ಲಿ ಆಳುಗಳಿಂದ ತೆಂಗಿನ ಕಾಯಿಗಳನ್ನು ಕೀಳಿಸುತ್ತಿದ್ದ ಶ್ರೀಕಂಠ ಹೆಗಡೆಯವರು `ಬರ್ರ ತಮಾ... ಕುಂತ್ಗಳಿ..' ಎಂದವರೇ ಎಲ್ಲರಿಗೂ ಸೀಯಾಳಗಳನ್ನು ಕೀಳಿಸಿಕೊಟ್ಟರು.
               ಅಷ್ಟರಲ್ಲಿ ಅಲ್ಲಿಗೆ `ಹೋಯ್.. ಹೆಗುಡ್ರು.. ಹನಿ ಇಲ್ ಬನ್ನಿ.. ಈ ತೆಂಗಿನ ಮರಕ್ಕೆ ತುಂಬಿ ಹುಳ ಹೊಡದದೆ ನೋಡಿ...' ಎನ್ನುವ ಧ್ವನಿ ಕೇಳಿ ಬಂದಿತು. ಶ್ರೀಕಂಠ ಹೆಗಡೆಯವರು `ಯಾರಾ ಅದು ದ್ಯಾವನನಾ.. ಆ ತೆಂಗಿನ ಮರ ಸೊಯ್ಸಾ.. ತುಂಬೆ ಹೊಡೆದಿದ್ದನ್ನು ಸರಿ ಮಾಡು..' ಎಂದು ಹೇಳಿ ಆತನ ಧ್ವನಿ ಕೇಳಿದ ಕಡೆಗೆ ಹೊರಟರು. ಅವರಿಬ್ಬರಲ್ಲಿ ಏನೋ ಮಾತುಕತೆ ನಡೆಯಿತು. ಹಿಂತಿರುಗಿ ಬಂದ ಹೆಗಡೆಯವರು ಎಲ್ಲರ ಬಳಿ `ಅಂವ ದ್ಯಾವ ಹೇಳಿ.. ಯಮ್ಮನೆ ಆಳುಮಗ. ಒಳ್ಳೆಯ ಕೆಲಸದ ಆಳು. ಜೇನು ಕೊಯ್ಯುವುದು, ಮೀನು ಹಿಡಿಯುವುದು, ತೆಪ್ಪ ಮಾಡುವುದು, ಕೊನೆ ಕೊಯ್ಯುವುದು, ಬೇಡೆ ಮಾಡೋದು ಇವೆಲ್ಲ ದ್ಯಾವನ ಕೆಲಸಗಳು..' ಎಂದು ಹೇಳಿ ಮುಗಿಸುತ್ತಿದ್ದಂತೆ ದ್ಯಾವ ಅಲ್ಲಿ ಹಾಜರಾಗಿ `ಸುಮ್ಮನಿರ್ರಾ ಹೆಗಡ್ರು,, ನನ್ನ ಬಗ್ಗೆ ಎಂತಾ ಹೇಳ್ತಿ...' ಎಂದು ನಾಚಿ ನೀರಾದ. ಕಪ್ಪಾಗಿದ್ದ ಆತನ ಮುಖ ನಾಚಿಕೆಯಿಂದ ಮತ್ತಷ್ಟು ಕಪ್ಪಾಯಿತು. ಪೆಕರ ಪೆಕರನಂತೆ `ಯಾರು ಇವ್ರು..?'ಎಂದು ಕೇಳಿದ.
               ಎಲ್ಲರ ಪರಿಚಯ ಆದ ನಂತರ `ಕಾಡನ್ನ ನೋಡ್ಲಿಕ್ಕೆ ಅಲ್ಲಿಂದ ಇಲ್ಲಿಗೆ ಬಂದ್ರಾ.. ನಿಮಗೆಂತಕ್ಕೆ ಹ್ವಾರ್ಯ ಇಲ್ಲ ಹೇಳಿ..' ಎಂದ. ಆತ ಇವರ ರಿಸರ್ಚ್ ಎಂದರೆ ಕಾಡು ನೋಡೋದಷ್ಟೆ ಎಂದುಕೊಂಡಿರಬೇಕು.
               ಮರಳಿ ಸಂಜೆಯ ವೇಳೆಗೆ ಆ ಊರಿನ ಜೀವನ್ಮುಖಿ ನದಿ ಅಘನಾಶಿನಿಯೆಡೆಗೆ ಕರೆದೊಯ್ದ ವಿನಾಯಕ. ಊರಿನಿಂದ ಕೇವಲ ಅರ್ಧ ಕಿಲೋಮೀಟರಿನಾಚೆ ಹರಿಯುತ್ತಿದ್ದಳು ಆಕೆ. ನದಿಯ ಇಕ್ಕೆಲಗಳಲ್ಲಿ ಹಸಿರು ತೋಟ, ಗದ್ದೆ, ವಾಟೆಯ ಮಟ್ಟಿಗಳು ತುಂಬಿಕೊಂಡಿದ್ದವು. ಇವೆಲ್ಲವನ್ನೂ ದಾಟಿ ಬಂದವರಿಗೆ ತಣ್ಣಗೆ ಹರಿಯುವ ಅಘನಾಶಿನಿ ಬಳುಕಯತ್ತಾ ಹರಿಯುತ್ತಿದ್ದುದು ಕಾಣಿಸಿತ್ತು. ಅಕ್ಕಪಕ್ಕದಲ್ಲೆಲ್ಲ ಬಂಡೆಗಳ ಹಂದರ. ಜೊತೆಯಲ್ಲಿಯೇ ಶಬ್ದ ಸಹಿತವಾಗಿ ಓಡಿದಂತೆ ಹರಿಯುತ್ತಿದ್ದ ನದಿ. ನದಿಯ ಒಂದು ಕಡೆಯಲ್ಲಿ ದಂಟಕಲ್ಲಿನ ಯುವಕರು ಹಾಕಿದ್ದ ಕಾಲು ಸಂಕ. ಇವಿಷ್ಟು  ಮೊದಲ ನೋಟಕ್ಕೆ ಅವರಿಗೆ ಕಾಣಿಸಿದ್ದ ದೃಶ್ಯ ವೈಭವ.
                 ಎಲ್ಲರೂ ಒಂದೊಂದು ಕಡೆಗೆ ಹೋಗಿ ಕುಳಿತರು. ವಿನಾಯಕ ಆ ನದಿಯನ್ನೇ ಮುತ್ತಿಕ್ಕುವಂತಿದ್ದ ಒಂದು ಬಂಡೆಗಲ್ಲನ್ನು ಏರಿ ಕುಳಿತ. ಹುಡುಗ ರಾಜೀವನಾಗಲೇ ಪ್ರದೀಪನೊಂದಿಗೆ ಗೆಳೆತನ ಬೆಳೆಸಿಬಿಟ್ಟಿದ್ದ. ಅವರಿಬ್ಬರೂ ಸಿಕ್ಕಾಪಟ್ಟೆ ಹರಟೆ ಕೊಚ್ಚಲು ಆರಂಭಿಸಿಬಿಟ್ಟಿದ್ದರು.
              ರಮ್ಯಾ, ವಿಜೇತಾರು ನೀರಿನಲ್ಲಿ ಕಾಲನ್ನು ಇಳಿಬಿಟ್ಟು ನೀರಾಟಕ್ಕೆ ತೊಡಗಿಕೊಂಡಿದ್ದರು. ವಿಕ್ರಂ, ವಿಷ್ಣು ಅವರದ್ದೇ ಆದ ಲೋಕದಲ್ಲಿ ತಾವಿದ್ದರು. ರಾಜೀವ ಇದ್ದಕ್ಕಿದ್ದಂತೆ ದೊಡ್ಡದಾಗಿ ಎಲ್ಲರಿಗೂ ಕೇಳಿಸುವಂತೆ `ನಮ್ ವಿನಾಯ್ಕಣ್ಣ ೀ ಕಲ್ಲಿನ ಬಗ್ಗೆ ಒಂದ್ ಬರಹ ಬರದ್ದಾ.. ಅದಕ್ಕೆ ಪ್ರಶಸ್ತಿ ಬಂಜು..' ಎಂದ.
              ತಕ್ಷಣ ಎಲ್ಲರೂ ಆ ಪ್ರಬಂಧದ ಬಗ್ಗೆ, ಬರಹದ ಬಗ್ಗೆ ಕೇಳಲಾರಂಭಿಸಿದರು. ಮೊದಲು ನಾಚಿಕೊಂಡನಾದರೂ ಕೊನೆಗೆ ಹೇಳಲು ಆರಂಭಿಸಿದ ವಿನಾಯಕ. `ಆ ಬರಹದ ಹೆಸರು ಅಘನಾಶಿನಿ ತೀರದ ಮೌನ ತಪಸ್ವಿಯ ನೆತ್ತಿಯ ಮೇಲೆ ಕುಳಿತು.. ಅಂತ. ಈ ಕಲ್ಲಿಗೆ ನಮ್ಮೂರಿನಲ್ಲಿ ಎಲ್ಲರೂ ಆನೆ ಕಲ್ಲು ಅಂತಾನೇ ಕರೆಯೋದು. ಅದರ ಬಗ್ಗೆ ಬರೆದಿದ್ದು ಆ ಬರಹ. ಈ ಕಲ್ಲಿನ ಮೇಲೆಯೇ ಕುಳಿತು ಬರೆದಿದ್ದು ಅದು. ನಾನು ಈ ಕಲ್ಲಿನ ಮೇಲೆ ಕುಳಿತು ಒಂದು ದಿನದಲ್ಲಿ ಅದೇನೇನನ್ನು ಅನುಭವಿಸಿದ್ದೆನೋ ಅವೆಲ್ಲವನ್ನೂ ಸುಮ್ಮನೆ ಅಕ್ಷರ ರೂಪಕ್ಕೆ ಇಳಿಸುತ್ತ ಹೋದೆ. ಖಂಡಿತವಾಗಿಯೂ ಅದೊಂದು ಉತ್ತಮ ಬರಹವಾಗುತ್ತದೆ ಎಂಬ ನಿರೀಕ್ಷೆ ನನಗೆ ಇರಲಿಲ್ಲ. ಸುಮ್ಮನೆ ಬರೆಯುತ್ತ ಹೋದೆ. ಯಾವುದೋ ಪ್ರಶಸ್ತಿಗೆ ಬರಹ ಆಹ್ವಾನಿಸಿದ್ದರು. ಕಳಿಸಿದ್ದೆ. ಅದಕ್ಕೆ ಬಹುಮಾನ ಬಂದಿತ್ತಷ್ಟೇ..' ಎಂದ.

(ಮುಂದುವರಿಯುತ್ತದೆ)

Saturday, February 14, 2015

ಮಾತಾಡು ಮಲ್ಲಿಗೆ

ಮಾತಾಡು ನನ್ನ ಮಲ್ಲಿಗೆಯೇ
ಆ ಬದುಕು ಬರಡಾಗಿಸುವ
ಮೌನವೋಡಿಸಲೊಮ್ಮೆ |
ಆ ಗ್ರೀಷ್ಮದುರಿಯ ಬೆಂದು ತಿನ್ನುವ
ಬಿಸಿಲೆಡೆಗೆ ತಂಪಾಗಲೊಮ್ಮೆ |

ಬತ್ತಿ ಹೋದ ಒಡಲ ಭಾವನೆಗಳು
ಚಿಗಿತು ಹಸಿರಾಗಿ ನಳನಳಿಸಲೊಮ್ಮೆ |
ಮನ ಕೊರೆವೇಕಾಂತವ ಹಿಡಿದು
ಬಡಿದು ಓಡಿಸಲೊಮ್ಮೆ |
ಖಾಲಿಯಾಗಿರುವ ಕವಿಮನಕ್ಕೆ
ಸ್ಪೂರ್ತಿಯಾಗಿ ಕವನ ಬರೆಸಲೊಮ್ಮೆ ||

ಮಾತಾಡು ನನ್ನ ಮಲ್ಲಿಗೆಯೇ
ಹೆಚ್ಚೆಲ್ಲ ನುಡಿ ಬೇಡ |
ಒಂದೆರಡು ನುಡಿ ಸಾಕು. ಇಷ್ಟು
ದಿನಗಳ ಕಾಯುವಿಕೆಗೆ, ಕಾತರಿಕೆಗೆ
ಮೌನವ ಮರೆಸುವಿಕೆಗೆ |
ಸ್ಪರ್ಷ ಬೇಡ, ಮುತ್ತೂ ಬೇಡ
ನಿನ್ನ ಮಧುರ ಮಾತೆರಡಷ್ಟೇ ಸಾಕು |
ಜೊತೆಗಷ್ಟು ಬೆಚ್ಚ ನಗು, ನಟ್ಟ ನೋಟ
ಅಷ್ಟು ಸಾಕು, ಅಷ್ಟೇ ಸಾಕು ||

***
(ಈ ಕವಿತೆಯನ್ನು ಬರೆದಿರುವುದು 02-09-2006ರಂದು ದಂಟಕಲ್ಲಿನಲ್ಲಿ)

Thursday, February 12, 2015

ಅಘನಾಶಿನಿ ಕಣಿವೆಯಲ್ಲಿ-11

                ಇವತ್ತು ಎಪ್ರೀಲ್ 11. ಈ ಒಂದು ದಿನವೇ ಎಷ್ಟೆಲ್ಲ ಘಟನೆಗಳು ನಡೆದುಬಿಟ್ಟವಲ್ಲ. ಗಿರ ಗಿರಪತ್ಥರ್ ನೋಡಿದ್ದು, ಲಾಲಗುಳಿ ಜಲಪಾತ ದರ್ಶನ, ಸಿದ್ಧಿಯ ಜೊತೆಗಿನ ಮಾತು-ಕಥೆ, ಆ ವಿಷ್ಣುವಿಗೆ ಹಾವು ಕಚ್ಚಿದ್ದು, ಆತನ ವೃತ್ತಾಂತ, ಎಲ್ಲಕ್ಕಿಂತ ಮಿಗಿಲಾಗಿ ತನ್ನ ಅಪ್ಪ ಹೇಳಿದ ಸುದ್ದಿ, ವಿಜೇತಾಳ ವೃತ್ತಾಂತ ಇತ್ಯಾದಿಗಳ ಬಗ್ಗೆ ಯೋಚಿಸಿದ. ಎಲ್ಲವನ್ನೂ ತನಗಾಗಿ, ತನ್ನ ಮಗನಿಗಾಗಿ ಎಂಬ ಧೋರಣೆಯ ತನ್ನ ಅಪ್ಪ ಮಾಡುತ್ತಿದ್ದ ಈ ಕೆಲಸ, ಅದನ್ನೂ ತನಗೆ ಹೇಳದೇ ಇದ್ದುದು, ಜೊತೆಗೆ ಕೆಲಸ ಮಾಡುತ್ತಿದ್ದರೂ ತಾನು ಮೊದಲೇ ಪರಿಚಯದವಳು ಎಂಬುದನ್ನು ತಿಳಿಸದ ವಿಜೇತ, ಕೆಟ್ಟವನಂತೆ ಕಾಣಿಸಿಕೊಳ್ಳುತ್ತ ಒಳ್ಳೆಯದನ್ನೇ ಮಾಡುತ್ತಿದ್ದ ವಿಷ್ಣು, ಜೊತೆಗೆ ನಿಘೂಡ ವ್ಯಕ್ತಿತ್ವದ ಪ್ರದೀಪ ಇವರೆಲ್ಲರಿಂದ ತನಗೆ ಏನೋ ದೊಡ್ಡ ಗುಟ್ಟು ತಿಳಿಯುವುದು ಇರಬೇಕು. ಅದೆಲ್ಲವನ್ನೂ ಎಲ್ಲರೂ ಸೇರಿ ಮುಚ್ಚಿಟ್ಟಿದ್ದಾರಾ ಎಂದೆಲ್ಲ ಆಲೋಚಿಸಿದ.
                  ಹೀಗೆ ಯೋಚಿಸುತ್ತಿದ್ದ ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಗೆ ವಿಜೇತಾ ಬಂದಳು. ಆಕೆ ಬಂದವಳೇ `ಏನಪ್ಪಾ.. ಏನನ್ನೋ ಆಲೋಚನೆ ಮಾಡುತ್ತಿರೋ ಹಾಗಿದೆ..? ಏನಾದರೂ ಸಮಸ್ಯೆ ಆಗಿದೆಯಾ?' ಎಂದಳು.
                  `ಏನಿಲ್ಲಾ ನವೀನಚಂದ್ರ ಅವರು ವಹಿಸಿರುವ ಆ ಸ್ಮಗ್ಲಿಂಗ್ ಗುಂಪನ್ನು ಹುಡುಕೋ ಬಗ್ಗೆ ಎಲ್ಲಾ ಯೋಚನೆ ಮಾಡ್ತಾ ಇದ್ದೀನಿ. ನಾನು ಇಲ್ಲಿಗೆ ಬಂದಿದ್ದೇ ಇದಕ್ಕಾಗಿ. ಆದರೆ ಇಲ್ಲಿ ಮತ್ತಿನ್ನೇನೋ ಆಗ್ತಾ ಇದೆ. ನಾನು ಬಂದ ಕೆಲಸವೇ ಮರೆತು ಹೋಗುವಂತಾಗುತ್ತಿದೆ..' ಎಂದ ಅಸಹನೆಯಿಂದ ವಿಕ್ರಂ.
                   ` ಹೇಯ್.. ತಲೆ ಕೆಡಿಸಿಕೊಳ್ಳಬೇಡ ಮಾರಾಯಾ.. ಎಲ್ಲಾನೂ ಯಾವಾಗ ಆಗಬೇಕೋ.. ಅದೇ ಆಗುತ್ತೆ.. ನೀನು ಸುಮ್ನೆ ಗೊಂದಲ ಮಾಡ್ಕೋತಿದಿಯಾ ಅಷ್ಟೆ..' ಎಂದಳು ವಿಜೇತಾ.
                   `ಆದರೆ ನನ್ನ ಪ್ರಯತ್ನ ನಾನು ಮಾಡಲೇಬೇಕಲ್ಲ. ನಮ್ ಹೊಣೆಗಾರಿಕೆಯನ್ನೂ ಮರೀಬಾರದಲ್ಲ..'
                   `ನಿಂಗೊತ್ತಾ.. ನಾವು ನಿಂಗೆ ಈ ಕೆಲಸ ವಹಿಸಿರುವುದನ್ನು ಕೇಳಿದ ನಿಮ್ಮ ತಂದೆ ನವೀನಚಂದ್ರರ ಜೊತೆ ಗಲಾಟೆ ಮಾಡಿದ್ರು. ನಿನಗೆ ಇದರಿಂದ ಏನಾದ್ರೂ ತೊಂದ್ರೆ ಆದ್ರೆ ಎನ್ನೋ ಹಾಗೆ ವರ್ತಿಸಿದ್ರು. ಅದಕ್ಕಾಗ್ಲೇ ಒಂದ್ ಸಾರಿ ನಿನ್ಹತ್ರ ನವೀನಚಂದ್ರರು ಈ ಕೇಸಿನ ಬಗ್ಗೆ ಮುಂದುವರಿಯಬೇಡ ಎಂದಿದ್ದು..'
                   `ಏನು.. ಹೀಗೆಲ್ಲಾ ನಡೆದಿತ್ತಾ? ನಂಗ್ಯಾಕೆ ಹೇಳಲಿಲ್ಲ.. ಅಷ್ಟಕ್ಕೂ ನನ್ನಪ್ಪ ಯಾಕೆ ಹೀಗ್ಮಾಡಿದ?'
                  `ನೋಡು ವಿಕ್ರಂ. ನಮ್ಮ ಹೆತ್ತವರು ಎಷ್ಟೇ ನಮ್ಮನ್ನು ಬೈದರೂ, ಅದು ತೋರಿಕೆಗೆ ಮಾತ್ರ. ನಮ್ಮ ಮಕ್ಕಳು ಒಳ್ಳೆಯವರಾಗಬೇಕು, ಅವರು ಜೀವನದಲ್ಲಿ ಮುಂದೆ ಬರಬೇಕು. ಅವರಿಗೆ ಯಾವುದೇ ಕಷ್ಟಗಳು ಬರಬಾರದು ಎಂದೆಲ್ಲಾ ಅಂದ್ಕೊಂಡಿರ್ತಾರೆ. ಮಕ್ಕಳಿಗಾಗಿ ಎಷ್ಟೇ ಕಷ್ಟವನ್ನು ತಾವು ಎದುರಿಸೋಕೆ ತಯಾರಾಗಿರ್ತಾರೆ. ಈ ಕಾರಣಕ್ಕಾಗಿಯೇ ನಿನ್ನ ತಂದೆ ಈ ರೀತಿ ಮಾಡಿದ್ದು..'
                  `ಆದ್ರೂ ನಂಗೆ ಇದೆಲ್ಲ ಅರ್ಥಾನೇ ಆಗೋದಿಲ್ಲ. ಎಲ್ಲಾರ ಥರಹ ಇಲ್ಲಿ ಇಲ್ಲ. ಯಾವುದೋ ಮೂಲೆಯ ಹಳ್ಳಿಯೊಂದರಿಂದ ಅಲ್ಲಿರುವ ಓರ್ವ ವ್ಯಕ್ತಿ ತಾನು ಯಾವುದೇ ಇಂಗ್ಲೀಷ್ ಗಳಂತಹ ಭಾಷಾಜ್ಞಾನ ಜೊತೆಗೆ ಆತ ಯಾರನ್ನೂ, ದೊಡ್ಡ ಊರನ್ನೂ ನೋಡದೇ ಹೀಗೆಲ್ಲ ಮಾಡ್ಲಿಕ್ಕೆ ಸಾಧ್ಯವಾ?'
                  `ನೋಡು ವಿಕ್ರಂ. ನಮ್ಮ ಜನರ ಬಗ್ಗೆ ಒಂದ್ಮಾತು ಹೇಳಬೇಕು. ಅದೇನೆಂದ್ರೆ ನಮ್ಮ ಜನ ಏನೂ ಗೊತ್ತಿಲ್ಲದಿದ್ದರೂ ತನ್ನಿಂದ ತಾನೇ ಅವರಿಗೆ ಅದರ ಅರಿವಿರುತ್ತದೆ. ಯಾವುದೇ ಜ್ಞಾನ ಇಲ್ಲದಿದ್ದರೂ ಅವರು ಎಲ್ಲಿ, ಏನನ್ನು ಬೇಕಾದರೂ ಸಾಧಿಸಬಲ್ಲ, ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರ್ತಾರೆ ನೆನಪಿಟ್ಕೋ.. ನಮ್ಮ ಹಳ್ಳಿಗರು ಯಾರಿಗೂ ಕಮ್ಮಿಯಿಲ್ಲ. ಅವರ ಜ್ಞಾನ ದೇಸೀ ಜ್ಞಾನ ಜಗತ್ತಿನಲ್ಲೇ ಶ್ರೇಷ್ಟವಾದುದು. ಅಂತವರು ಮನಸ್ಸು ಮಾಡಿದರೆ ಇನ್ನೆಂತದ್ದಾದರೂ ಸಾಧನೆ ಮಾಡಬಲ್ಲರು..'
                  `ಅದಿರ್ಲಿ ನೋಡೋಣ ಮುಂದೇನಾಗುತ್ತೆ ಅಂತ. ಬಹುಶಃ ನಾಳೆ ಅಥವಾ ನಾಡಿದ್ದು ನಾವು ಇಲ್ಲಿಂದ ಹೊರಡಬೇಕಾಗುತ್ತದೆ. ಶಿರಸಿ ನಮ್ಮ ಕಾರ್ಯಸ್ಥಾನ. ಹಾಗಾಗು ಶಿರಸಿಯ ಕಡೆಗೆ ನಾವು ಹೋಗಲೇಬೇಕು. ಶಿರಸಿಗೆ ಹತ್ತಿರದ ಊರಾದ ದಂಟಕಲ್ ಗೆ ಹೋಗೋಣ. ಅಲ್ಲಿ ಉಳಿದುಕೊಂಡೇ ನಾವೆಲ್ಲ ಕೆಲಸ ಮುಂದುವರಿಸೋಣ. ಮುಖ್ಯವಾಗಿ ನಾವು ಇನ್ನು ಮೊದಲಿನ ಹಾಗೆ ಇರಲು ಸಾಧ್ಯವಿಲ್ಲ. ಹೆಜ್ಜೆ ಹೆಜ್ಜೆಗೆ ಅಪಾಯ ಬಂದರೂ ಬರಬೌದು. ಜೊತೆಗೆ ಆ ನವೀನಚಂದ್ರರು ಹೇಳಿದಂತೆ ಯಾವುದಾದರೂ ರಿಸರ್ಚಿನವರು ಅಂಡ್ಕೊಂಡು ಹೋಗೋಣ. ಈ ವಿಷ್ಯಾನ ಕೇವಲ ವಿನಾಯಕನಿಗೆ ಮಾತ್ರ ತಿಳಿಸಬೇಕು. ಉಳಿದವರ್ಯಾರಿಗೂ ಗೊತ್ತಾಗಬಾರದು. ತಿಳೀತಾ..?'
                   `ಸರಿ ಯಾವ ರಿಸರ್ಚಿನೋರು ಅಂತಾ ಹೋಗೋದು..?'
                   `ಉಂ ಇದ್ದೇ ಇದೆಯಲ್ಲ ಉತ್ತರ ಕನ್ನಡದ ಕಾಡು ಮೃಗಗಳು ಹಾಗೂ ಜೀವ ವೈವಿಧ್ಯದ ಪರಿವೀಕ್ಷಣೆಯ ಹೆಸರು ಹೇಳಿದರಾಯ್ತು..'
                   `ಹುಂ.. ಒಳ್ಳೆ ಐಡಿಯಾ.. ಸರಿ ಹಾಗೇ ಮಾಡೋಣ..' ಎನ್ನುವಲ್ಲಿಗೆ ಆಗಲೇ ಹೊತ್ತು ಮದ್ಯರಾತ್ರಿಯನ್ನು ಮೀರಿತ್ತು. ಇಬ್ಬರೂ ಮಾತು ಮುಗಿಸಿ ನಿದ್ರೆಯ ಕಡೆಗೆ ಜಾರಿದರು.

***10***

                `ಮೊದ್ಲು ಯಾಣಕ್ಕೆ.. ಆ ನಂತ್ರ ಬೇರೆ ಕಡಿಗೆ..' ಎಂದು ಕಿರುಚಿದಳು ರಮ್ಯ.
                 `ಊಹೂ.. ಅದೆಲ್ಲಾ ಆಗ್ತಿಲ್ಲೆ.. ಮೊದಲು ಬನವಾಸಿ.. ನಂತರ ಯಾಣ.. ಆಮೇಲೆ ಸಹಸ್ರಲಿಂಗ..'ಎಂದು ಹೇಳಿದ ವಿನಾಯಕ.
                 `ಶ್.. ಸುಮ್ನಿರಿ ಎಲ್ಲರೂ.. ಮೊದಲು ದಂಟ್ಕಲ್ಲಿಗೆ ಹೋಗೋಣ. ಆ ನಂತ್ರ ಬೇರೆ ಕಡೆಗೆ. ನಾವು ಮುಖ್ಯವಾಗಿ ರಿಸರ್ಚಿಗೆ ಬಂದಿದದ್ದು. ಹಾಗಾಗಿ ಮೇರೆ ಕಡೆಗೆಲ್ಲಾ ನಿಧಾನವಾಗಿ ಹೋಗಿ ಬಂದರಾಯ್ತು' ಎಂದ ವಿಕ್ರಂ
                  `ಸರಿ ಹಾಗೇ ಆಗ್ಲಿ..' ಎಲ್ಲರ ಒಪ್ಪಿಗೆಯೂ ಸಿಕ್ಕೇ ಬಿಟ್ಟಿತು. ಜೊತೆಗೆ ಎಲ್ಲರೂ ದಂಟಕಲ್ಲಿಗೆ ಸಾಗಲು ಅಗತ್ಯ ವಸ್ತುಗಳನ್ನು ಸಂಗ್ರಹಿಸತೊಡಗಿದರು. ಆ ದಿನ ಮದ್ಯಾಹ್ನವೇ ದಂಟಕಲ್ ಗೆ ತೆರಳಲು ಮುಹೂರ್ತವನ್ನು ಹುಡುಕತೊಡಗಿದರು.
                 ಅಂತೂ ಕಣ್ಣೀರುಮನೆಗೆ ಬಂದು ಐದಾರಿ ದಿನ ಕಳೆದ ನಂತರ ಅಂದು ಅಂದರೆ ಎಪ್ರಿಲ್ 12ರಂದು ದಂಟಕಲ್ಲಿನೆಡೆಗೆ ಸಾಗಲು ಅವಸರಿಸಿದರು.
                 ವಿಕ್ರಂ, ವಿನಾಯಕ, ವಿಜೇತಾ, ರಮ್ಯ, ಪ್ರದೀಪ ಮದ್ಯಾಹ್ನದ ಉರಿಬಿಸಿಲ ಹೊತ್ತಿನೊಳು ಹೊರಡಲುಪಕ್ರಮಿಸಿದಾಗ ಅಲ್ಲಿಗೆ ಬಂದ ವಿಷ್ಣು ತಾನೂ ಬರುವೆನೆಂದ. ಬೇಡವೆಂದರೂ ಆತನ ಹಠಕ್ಕೆ ಎಲ್ಲರೂ ಕೊನೆಗೆ ಒಪ್ಪಿಗೆ ನೀಡಲೇಬೇಕಾಯಿತು. ಕೊನೆಗೊಮ್ಮೆ ಎಲ್ಲರೂ ಹೊರಟರು. ಅವರೆಲ್ಲರೂ ಹೊರಡಲು ಮುಂದಡಿಯಿಡುತ್ತಿದ್ದಾಗಲೇ ವಿಕ್ರಮನ ತಾಯಿಗೆ ಏತಕ್ಕೋ ಒಮ್ಮೆ ಬಲಗಣ್ಣು ಅದುರಲಾರಂಭಿಸಿತ್ತು. ಆದರೆ ಅವರು ಅದನ್ನು ಯಾರಲ್ಲೂ ಹೇಳಲಿಲ್ಲ.
                ಸಾಮಾನ್ಯವಾಗಿ ಗಂಡಸರಿಗೆ ಎಡಗಣ್ಣು ಅದುರಿದರೆ, ಹೆಂಗಸರಿಗೆ ಬಲಗಣ್ಣು ಅದುರಿದರೆ ಅವು ಬರಲಿರುವ ಅಪಾಯದ, ಕೇಡಿನ ಮುನ್ಸೂಚನೆ ಎಂಬ ನಂಬಿಕೆ ಜನಸಾಮಾನ್ಯರಲ್ಲಿದೆ. ಇದು ಬಹುತೇಕ ಸತ್ಯವಾಗಿದೆ ಕೂಡ. ಹಾಗಾದರೆ ಈ ಅದುರುವಿಕೆ ಮುಂದೆ ಬರುವ ಅಪಾಯದ ಮುನ್ನುಡಿಯಾ? ಅಥವಾ ಇಂದಿನ ವೈಜ್ಞಾನಿಕ ಅಧ್ಯಯನಿಗಳು ಹೇಳುವ ಪ್ರಕಾರ ನರಗಳ ಮಿಡಿತವಾ? ಈ ಬಗ್ಗೆ ಯೋಚನೆ ಮಾಡಿದಷ್ಟೂ ನಿಘೂಡವೇ ಮೆರೆದು ನಿಲ್ಲುತ್ತದೆ.

*****

                ಇತ್ತ ಬೇಣದಗದ್ದೆಯ ಸುಬ್ಬಣ್ಣನಿಗೆ ಅದೇಕೋ ಎಡಗಣ್ಣು ಅದುರುತ್ತಿತ್ತು. ಸ್ವಭಾವತಃ ಸಂಪ್ರದಾಯ ವಿರೋಧಿಯಾದ ಆತ ಆಗ ಇದನ್ನು ನಂಬುವ ಗೋಜಿಗೇನೂ ಹೋಗಲಿಲ್ಲ. ಅವನ ಪ್ರಕಾರ ಇದೊಂದು ನರಗಳ ಸ್ಪಂದನ-ಪ್ರತಿಸ್ಪಂದನ. ಹಾಗಾಗಿ ಆತ ಇದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ತಾನು ಮಾಡ್ತಾ ಇರುವ ಕೆಲಸ ತನ್ನ ಅಣ್ಣನಿಗೆ ಗೊತ್ತಾಗಲೇ ಬಾರದು ಎಂದು ಮತ್ತಷ್ಟು ಜಾಗರೂಕನಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ.

****

             ಅಂತೂ ಇಂತೂ ಹೊರಟ ಪಯಣ ನಿಧಾನವಾಗಿ ಯಲ್ಲಾಪುರವನ್ನು ದಾಟಿ ಮುಂದೆ ಸಾಗಿತು. ಕಾರಿನಲ್ಲಿ ವಿಕ್ರಂ, ಪ್ರದೀಪ, ವಿನಾಯಕ, ವಿಜೇತಾ, ರಮ್ಯ, ವಿಷ್ಣು ಇಷ್ಟು ಜನರು ಕಾಡು ಹರಟೆಗಳ ಜೊತೆಗೆ ಸಾಗುತ್ತಿದ್ದರು. ಪ್ರದೀಪನ ಹಾಸ್ಯ, ವಿನಾಯಕನ ಕವನಗಳ ಲಾಸ್ಯದ ಜೊತೆಗೆ ಇದ್ದವರಿಗೆ ಚಲಿಸಿದ ಮಾರ್ಗದ ಅರಿವೇ ಆಗಲಿಲ್ಲ. ಅವರು ಹಾದು ಬರುತ್ತಿದ್ದ ಯಲ್ಲಾಪುರ-ಶಿರಸಿ ಮಾರ್ಗದಲ್ಲಿ ಬಹುತೇಕ ಬಂದಂತೆ ವಿಕ್ರಮ ಒಮ್ಮೆಲೆ ಕಾರು ನಿಲ್ಲಿಸಿದ. ಎಲ್ಲರೂ ಏಕೆಂದು ಕೇಳಲಾಗಿ ಅದು ಹುಳಗೋಳವೆಂದೂ, ಸನಿಹದಲ್ಲೇ ಸಹಸ್ರಲಿಂಗವೆಂಬ ಅದ್ಭುತ ತಾಣವಿದೆಯೆಂದೂ ನೋಡಿ ಬರುವಾ ಎಂದೂ ತಿಳಿಸಿದ. ಎಲ್ಲರಿಂದ ಒಪ್ಪಿಗೆ ಸಿಗಲಾಗಿ ಅತ್ತ ಸಾಗಿದರು. ಅಂಕುಡೊಂಕಿನ ದಾರಿಯನ್ನು ಕ್ರಮಿಸಿದ ಕಾರು ಕೊನೆಗೊಮ್ಮೆ ಸಹಸ್ರಲಿಂಗದ ಬಾಯಿ ತಲುಪಿತು.
              ಸುತ್ತಲೂ ಕಾನನದ ಕರಿ ಮಟ್ಟಿಗಳು.ಕೆಳಗಡೆ ನಿತ್ಯ ಸಂಜೀವಿನಿಯಾದ ಶ್ಯಾಮಲ ನದಿ ಶಾಲ್ಮಲೆ ಜುಳು ಜುಳು ಸದ್ದನ್ನು ಮಾಡುತ್ತಾ ಹರಿಯುತ್ತಿದ್ದಳು. ಕಾರಿನಿಂದಿಳಿದ ಎಲ್ಲರೂ ಮೆಟ್ಟಿಲನ್ನು ಓಡುತ್ತಲೇ ಇಳಿದರು. ಆ ನದಿಯ ಒಡಲನ್ನು ಬಹುಬೇಗನೇ ನೋಡುವ ತವಕ ಅವರಿಗಿತ್ತು. ನದಿ ತಟಾಕದಲ್ಲಿ ಅವರಿಗೆ ಕಾಣಿಸಿದ್ದು ಕಾಲಿಟ್ಟ ಕಡೆಯಲ್ಲೆಲ್ಲ ಶಿವಲಿಂಗ. ಅದ್ಯಾವ ಶಿಲ್ಪಿ ಅದ್ಯಾವ ಕಾರಣಕ್ಕೆ ಕೆತ್ತಿದ್ದನೋ.. ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದವು ಲಿಂಗಗಳು. ಪುಟ್ಟ ಪುಟ್ಟ ಲಿಂಗಗಳಿಂದ ಹಿಡಿದು ಬೃಹತ್ ಗಾತ್ರದ ಲಿಂಗಗಳು ಅಲ್ಲಿದ್ದವು.
              ಮೊದಲು ಓಡಿದ ಪ್ರದೀಪ ಅಲ್ಲಿಯೇ ಇದ್ದ ಬೃಹತ್ ನಂದಿಯನ್ನು ಕಂಡ. ಕಂಡವನೇ ಭವ್ಯವಾದ ನಂದಿಯ ಮೇಲೆ ಹತ್ತಿ ಕುಳಿತುಕೊಂಡ. ಆತನ ಮನಸ್ಸು ಮಗುವಂತಾಗಿತ್ತು.. ಕುದುರೆ ಸವಾರನಂತೆ ಕುಳಿತು `ಹೇಯ್... ಪೋಟೋ ತೆಗಿರ್ರೋ...' ಎಂದು ಕೂಗಿದ. ಯಾರೋ ಕ್ಯಾಮರಾವನ್ನು ಕ್ಲಿಕ್ಕಿಸಿದರು. ವಿಕ್ರಮನಂತೂ ಕೂಡಲೇ `ಬಸವನ ಮೇಲೊಬ್ಬ ಕೋಲೇಬಸವ..' ಎಂದ. ನಗು ಬುಗ್ಗೆಯಾಗಿ ಹರಡಿ, ಚಿಮ್ಮಿತು.
              ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಶಿಲ್ಪಿಯ ಉಳಿಯೇಟಿಗೆ ಬೆನ್ನೊಡ್ಡಿ ಸುಂದರ ದೃಶ್ಯ ಕಾವ್ಯವಾಗಿ ಮೈತಳೆದಿದ್ದ ಸಹಸ್ರಲಿಂಗ ಶಾಲ್ಮಲೆಯ ರಮ್ಯ ನಿನಾದಕ್ಕೂ, ರೌದ್ರ ಆರ್ಭಟಕ್ಕೂ ಹಿಡಿದ ಇರುಳ ಸೂಡಿಯಾಗಿತ್ತು. ಅಲ್ಲಲ್ಲಿ ಸವೆದ ಲಿಂಗಗಳು, ಒಡೆದ ಕಲ್ಲುಗಳು, ಚೆಲ್ಲಾಪಿಲ್ಲಿಯಾಗಿದ್ದ ಭಗ್ನ ಮೂರ್ತಿಗಳು ವಿನಾಯಕನ ಕಣ್ಣಲ್ಲಿ ನೀರು ತರಿಸಿದವು. ಅದ್ಯಾರೋ ಪ್ರೇಮಿಗಳು ಒಂದಿಷ್ಟು ಕಲ್ಲಿನ ಮೇಲೆ ತನ್ನ ಹಾಗೂ ತನ್ನ ಪ್ರೇಯಸಿಯ ಹೆಸರುಗಳನ್ನು ಕೆತ್ತಿ ವಿಕಾರ ಮಾಡಿದ್ದರು. ತಮ್ಮ ಅಜ್ಞಾನವನ್ನು, ಕೆಟ್ಟ ಸಂಸ್ಕೃತಿಯನ್ನು ಕಾರಿಕೊಂಡಿದ್ದರು.
               ಸಹಸ್ರಲಿಂಗದ ಸಹಸ್ರಬಿಂಬ ಛಿದ್ರ ವಿಛಿದ್ರದ ರೂಪದಲ್ಲಿ ಅಲ್ಲಿ ಕಾಣಿಸಲು ಆರಂಭವಾಗಿತ್ತು. ಸ್ತ್ರೀ ಲಲನೆಯರೋ ಆಗಲೇ ಶಾಲ್ಮಲೆಯ ನೀರಿನಲ್ಲಿ ಕಾಲನ್ನು ಇಳಿಬಿಟ್ಟು ಆಗಲೇ ಹರಟೆ ಕೊಚ್ಚಲು ಆರಂಭಿಸಿದ್ದರು. ಸೂರ್ಯ ಪಶ್ಚಿಮದ ಹೆಬ್ಬಾಗಿಲಿನ ಮೂಲಕ ಸಹ್ಯಾದ್ರಿಯ ಮನೆ-ಮನವನ್ನು ಕೊನೆಯ ಸಾರಿಯೆಂಬಂತೆ ನೋಡಿ ಅಸ್ತಮಿಸುತ್ತಿದ್ದ. ಎಲ್ಲರೂ ಲಗುಬಗೆಯಿಂದ ಮರಳುವಾಗಲೇ ಸಂಜೆಯ ಕಣ್ಣೋಟ ರಸ್ತೆಯ ಮೇಲೆ ಹರಡಿತ್ತು.

(ಮುಂದುವರಿಯುತ್ತದೆ)

Thursday, February 5, 2015

ಜನಪದ-ಹೊಸಪದ

ಹೊಸದಯ್ಯ ಹೊಸತು
ತಾನಿ ತಂದಾನ..
ಹೊಸ ಹೊಸತು ಬದುಕೇ
ಕೋಲಣ್ಣಕೋಲೆ ||

ವಾಟ್ಸಾಪ್ ನಲ್ಲಿ ನಾನು ಬರ್ತಿನಿ
ಟ್ವೀಟರಲ್ಲಿ ನೀನು ಬಾರೋ
ಚಾಟಿಂಗ್ ಮಾಡ್ತಾ
ಮಾತನಾಡೋಣ ||

ಅಚ್ಚುಮೆಚ್ಚು ಪ್ರೀತಿ ಹುಚ್ಚು
ಆದ ಮೇಲೆ ಹುಚ್ಚು ಹೆಚ್ಚು
ಸದಾ ಕಾಲ
ಎಂಜಾಯ್ ಮಾಡೋಣ ||

ಫಲ್ಸರ್ನಲ್ಲಿ ನಾನು ಬರ್ತಿನಿ
ಸ್ಕೂಟಿಯಲ್ಲಿ ನೀನು ಬಾರೆ
ಟ್ರಿಪ್ಪು ಮಾಡ್ತ
ಮಾತನಾಡೋಣ ||

ನಲ್ಲಿ ನೀರಿಗ್ ನಾನು ಬರ್ತೀನಿ
ಹಾಲು ಹಾಕೋಕ್ ನೀನು ಬಾರೋ
ಸೈಲೆಂಟಾಗಿ
ಮಾತನಾಡೋಣ ||

ಹೊಸದಯ್ಯ ಹೊಸತೋ
ತಾನ ತಂದನಾ..
ಹೊಸ ಹೊಸತು ಬದುಕೇ
ಕೋಲಣ್ಣಕೋಲೆ ||

***
ವಿ. ಸೂ : ಚಲುವಯ್ಯ ಚಲುವೋ ತಾನಿತಂದಾನ ಅಂತ ಒಂದು ಜಾನಪದ ಗೀತೆಯಿದೆ.. ನನ್ನ ಬಹಳ ಇಷ್ಟದ ಜಾನಪದ ಗೀತೆ ಇದು.. ಇದೇ ಗೀತೆಯನ್ನು ಇಂದಿನ ಕಾಲಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಬದಲಾಯಿಸಿ ಬರೆದಿದ್ದೇನೆ. ಯಾರೋ ಜಾನಪದ ಕವಿ ಪುಣ್ಯಾತ್ಮ ಇದನ್ನು ಬರೆದಿದ್ದಾನೆ. ಆತನಿಗೆ ಶರಣು ಶರಣಾರ್ಥಿ. ಆತನ ಬಳಿ ಕ್ಷಮೆ ಕೋರುತ್ತಿದ್ದೇನೆ. ಸುಮ್ಮನೆ ತಮಾಷೆಗೆಂಬಂತೆ ನಾನು ಬರೆದಿರುವ ಈ ಕವಿತೆ ನಿಮ್ಮ ಮುಂದೆ.
ಈ ಕವಿತೆ ಬರೆದಿದ್ದು ಶಿರಸಿಯಲ್ಲಿ ಫೆ.5, 2014ರಂದು.