ಟ್ರೆಕ್ಕಿಂಗ್ ಹೋಗೋದು ಎಂದರೆ ಅಪಾರ ಹುಚ್ಚನ್ನು ಬೆಳೆಸಿಕೊಂಡಿದ್ದ ಸಿಂಧು ತಾನು ಕೊನೆಯ ಸಾರಿ ಟ್ರೆಕ್ಕಿಂಗ್ ಗೆ ಹೋಗಿ ಎಷ್ಟು ಕಾಲವಾಯಿತು ಎಂದು ಆಲೋಚಿಸತೊಡಗಿದ್ದಳು. ಐದಾರು ವರ್ಷಗಳ ಹಿಂದೆ ಬುರುಡೆ ಜಲಪಾತಕ್ಕೆ ಹೋಗಿದ್ದಲ್ವಾ? ಅಷ್ಟರ ನಂತರ ತನ್ನ ಬದುಕಿನಲ್ಲಿ ಏನೆಲ್ಲಾ ನಡೆದುಹೋಯಿತು ಎಂದುಕೊಂಡಳು ಸಿಂಧು. ಮತ್ತೆ ಎಲ್ಲಿಗಾದರೂ ಟ್ರೆಕ್ಕಿಂಗ್ ಮಾಡಲೇಬೇಕು. ಮನಸ್ಸು ಚಡಪಡಿಸಿತ್ತು. ಎಲ್ಲಿಗೆ ಹೋಗೋದು? ಜೊತೆಗೆ ಯಾರಿದ್ದಾರೆ? ಕಳೆದೈದು ವರ್ಷಗಳಲ್ಲಿ ಜೊತೆಯಲ್ಲಿ ಎಷ್ಟೆಲ್ಲ ಜನರು ಒಡನಾಡಿಯಾಗಿದ್ದಾರೆ. ಆದರೆ ಮನಸ್ಸು ಮಾತ್ರ ಒಬ್ಬಂಟಿಯಾಗಿತ್ತಲ್ಲ. ಈಗ ಮತ್ತೆ ಟ್ರೆಕ್ಕಿಂಗ್ ಹೋಗಬೇಕು ಎಂದುಕೊಂಡರೆ ಯಾರು ಬರ್ತಾರೆ ಎಂದುಕೊಳ್ಳುತ್ತಿದ್ದಂತೆ ಪೋನು ರಿಂಗಣಿಸಿತ್ತು.
`ದೇಹಕೆ ಉಸಿರೆ ಸದಾ ಭಾರ...
ಇಲ್ಲ ಆಧಾರ...' ಚೆಂದದ ರಿಂಗ್ ಟೋನ್. ಮತ್ತೆ ಕೇಳಬೇಕೆನ್ನಿಸುವಂತದ್ದು. ಅದ್ಯಾವುದೋ ಪರಿಚಯದ ನಂಬರ್ ಕಂಡಂತೆ ಕಂಡಿತು. ನೋಡಿದರೆ ದಿಗಂತ್.
`ಹಾಯ್..' ಎಂದಳು ಸಿಂಧು.
`ಹಲೋ.. ಹೇಗಿದ್ಯೆ..?' ದಿಗಂತ್
`ಫುಲ್ ಅರಾಮು.. ನೀನು?'
`ನಾನೂ ನಿನ್ನಷ್ಟೇ ಅರಾಮಿದ್ದೇನೆ.. ಏನ್ ಮಾಡ್ತಾ ಇದ್ದೀಯಾ?'
`ಬೋರು.. ಏನಾದರೂ ಮಾಡಬೇಕೆಂಬ ಆಲೋಚನೆ ಮನಸ್ಸಿನಲ್ಲಿ ಮೂಡುತ್ತಿದೆ...'
`ಹೇಯ್... ಟ್ರೆಕ್ಕಿಂಗ್ ಗೆ ಹೋಗೋಣ್ವಾ..?' ದಿಗಂತ ಕೇಳಿದ್ದ.
`ಖಂಡಿತ... ಆದ್ರೆ ಎಲ್ಲಿಗೆ ಹೋಗೋದು..?' ಸಿಂಧು ಕೇಳಿದ್ದಳು. ರೋಗಿ ಬಯಸಿದ್ದು ಹಾಲು ಅನ್ನ.. ವೈದ್ಯ ಹೇಳಿದ್ದೂ ಅದೆ ಎನ್ನುವಂತೆ ಆಯಿತವಳಿಗೆ. ಮನಸ್ಸು ಹಕ್ಕಿಯಂತೆ ಖುಷಿ ಖುಷಿ.
`ಬುರುಡೆ ಜಲಪಾತಕ್ಕೆ ಹೋಗಿಬರೋಣ.. ಬಹಳ ದಿನವಾಯ್ತಲ್ಲವಾ..?' ದಿಗಂತ ಹೇಳಿದ್ದ.
ಸಿಂಧುಗೆ ಮನಸ್ಸು ಒಮ್ಮೆ ಕನಲಿ ಹಳೆಯ ನೆನಪುಗಳೆಲ್ಲ ಕಣ್ಣೆದುರು ಬಂದಂತಾಯಿತು. ಸಾವರಿಸಿಕೊಂಡು ` ಹುಂ... ಆದ್ರೆ ಯಾವತ್ತು ಹೋಗೋದು..?'
`ಹೇಳ್ತೀನಿ.. ತಯಾರಾಗಿರು...' ಪೋನ್ ಕಟ್ ಮಾಡಿದ. ದಿಗಂತನ ಮನಸ್ಸು ಹಸಿರಾಗಿತ್ತು. ಸಿಂಧು ಮನಸ್ಸು ಹಳೆ ನೆನಪಿನ ಹೊಳೆಗೆ ಜಾರಿತ್ತು. ದಿಗಂತನೇ ಹಿಂಗೆ.. ಯಾವಾಗ್ಲೂ ಸರ್ ಪ್ರೈಸ್ ಕೊಡ್ತಾ ಇರ್ತಾನೆ ಎಂದುಕೊಂಡಳು ಸಿಂಧು. ಆವತ್ತು ತಾನು ನೋಡಿದ ದಿಗಂತನಿಗೂ ಇವತ್ತಿನ ದಿಗಂತನಿಗೂ ಸ್ವಲ್ಪವೂ ಬದಲಾವಣೆಯಾಗಿಲ್ಲ. ಅಂದಿನ ಹಾಗೇ ಇದ್ದಾನೆ ಎಂದುಕೊಂಡಳು.
**
ದಿಗಂತ ಸಿಂಧುವನ್ನು ಮೊದಲಬಾರಿ ಕಂಡಿದ್ದು 6-8 ವರ್ಷಗಳ ಹಿಂದೆ. ಅಚಾನಕ್ಕಾಗಿ ಸಿಕ್ಕಿದ್ದ. ಕಾಲೇಜಿನಲ್ಲಿ. ಪರಮ ಓದುಗುಳಿಯಿರಬೇಕು. ಒಂದಿನ ಲೈಬ್ರರಿಯಲ್ಲಿ ಸಿಂಧುಗೆ ಅದ್ಯಾವುದೋ ಇಂಗ್ಲೀಷ್ ಕಾದಂಬರಿಯೊಂದು ಬೇಕಿತ್ತು. ಕಾಲೇಜಿನಲ್ಲಿದ್ದ ಕಾದಂಬರಿಗಳ ಲೀಸ್ಟಿನಲ್ಲಿ ಆ ಹೆಸರಿದ್ದರೂ ಹುಡುಕಾಡಿದ ಸಿಂಧುಗೆ ಅದು ಸಿಕ್ಕಿರಲಿಲ್ಲ. ಯಾರು ತೆಗೆದುಕೊಂಡು ಹೋಗಿದ್ದಾರಪ್ಪಾ ಎಂದು ನೋಡಿದಾಗ ದಿಗಂತ್ ಹೆಸರು ಬರೆದಿತ್ತು. ಅವನೆಲ್ಲಿ ಸಿಗುತ್ತಾನೆ ಎಂದುಕೊಂಡವಳಿಗೆ ಅಲ್ಲೇ ಮುಖದ ಮುಂದೆ ಪುಸ್ತಕ ಹಿಡಿದು ಓದುತ್ತಿದ್ದ ವ್ಯಕ್ತಿಯೊಬ್ಬ ಕಾಣಿಸಿದ್ದ. ಅವಳಿಗೆ ಬೇಕಾಗಿದ್ದ ಕಾದಂಬರಿಯೇ ಅದು. ಬಹುಶಃ ದಿಗಂತ ಎಂಬಾತ ಇವನೇ ಇರಬೇಕು ಎಂದುಕೊಂಡು ಹೋಗಿ ಮಾತನಾಡಿಸಿದ್ದಳು. ಅದೇನೋ ಹೇಳುತ್ತಾರಲ್ಲ ಹಾಗಾಯಿತು ಕಥೆ. ಅವನೇ ದಿಗಂತನಾಗಿದ್ದ. ಮತ್ತು ಅವಳಿಗೆ ಬೇಕಾಗಿದ್ದ ಪುಸ್ತಕವನ್ನು ಅವನೇ ಹಿಡಿದುಕೊಂಡು ಕುಳಿತಿದ್ದ. ಸಿಂಧುವಿಗೆ ಪುಸ್ತಕ ಬೇಕೇ ಬೇಕಿತ್ತು. ಕೇಳಲು ಮುಜುಗರ. ಯಾರೋ ಹೊಸಬ. ಹೇಗೆ ಕೇಳಲಿ ಎಂದುಕೊಂಡವಳು ಕೊನೆಗೊಮ್ಮೆ ದಿಗಂತನ ಬಳಿ ಕೇಳಿಯೇ ಬಿಟ್ಟಳು.
ಯಾರಿವಳು ಇದ್ದಕ್ಕಿದ್ದಂತೆ ತನ್ನತ್ತ ಬಂದು ತಾನು ಓದುತ್ತಿದ್ದ ಪುಸ್ತಕವನ್ನು ಕೇಳಿದಾಕೆ ಎಂದು ವಿಸ್ಮಿತಗೊಂಡಿದ್ದ ದಿಗಂತ್. ಒಮ್ಮೆ ತಬ್ಬಿಬ್ಬಾಗಿದ್ದವನು ಕೊನೆಗೆ ಆಕೆಯ ಮಾತಿನ ಮೋಡಿಗೆ ಮರುಳಾಗಿ ಪುಸ್ತಕವನ್ನು ಅವಳಿಗೆ ಕೊಟ್ಟುಬಿಟ್ಟಿದ್ದ. ಪರಿಚಿತಗೊಂಡಿದ್ದ ಆಕೆ ನಂತರ ಸ್ನೇಹಿತೆಯಾಗಿ ಆಪ್ತಳಾಗಿದ್ದಳು. ಇಬ್ಬರೂ ಓದುಗುಳಿಗಳಾಗಿದ್ದ ಕಾರಣ ಪುಸ್ತಕದ ನೆಪದಲ್ಲಿ ಪರಿಚಯ, ಸ್ನೇಹವಾಗಿ ಆತ್ಮೀಯತೆಯ ಸೇತುವೆ ಬೆಳೆದಿತ್ತು. ಕಾಲೇಜು ದಿನಗಳಲ್ಲಿ ಹತ್ತಿರಾಗಿದ್ದರು.
ಮೊದ ಮೊದಲಿನ ಮಾತುಕತೆ ನಂತರ ಆಪ್ತತೆಯನ್ನು ಹುಟ್ಟುಹಾಕಿತ್ತು. ಓದಿನಂತೆಯೇ ಇನ್ನೊಂದು ವಿಷಯವೂ ಅವರಿಬ್ಬರಲ್ಲೂ ಸಮಾನ ಆಸಕ್ತಿಗೆ ಕಾರಣವಾಗಿದ್ದವು. ಅದೇ ಟ್ರೆಕ್ಕಿಂಗ್. ಕಾಡು, ಗುಡ್ಡ, ಬೆಟ್ಟ, ನದಿ, ಕಣಿವೆಗಳಲ್ಲೆಲ್ಲ ಅಡ್ಡಾಡುವುದು, ಏಳುತ್ತ ಬೀಳುತ್ತ ಗುಡ್ಡ ಬೆಟ್ಟಗಳ ನಡುವೆ ಕಳೆದು ಹೋದಂತೆ ಅಲೆಯುವುದು ಇಬ್ಬರಿಗೆ ಬಹು ಇಷ್ಟವಾದ ಸಂಗತಿಯಾಗಿದ್ದವು. ಬಾನೆತ್ತರದ ಕಲ್ಲುಬಂಡೆಗಳು, ಎತ್ತರದ ಪರ್ವತಗಳನ್ನು ಏರುವುದು, ತಳವೇ ಕಾಣದಂತಹ ಕಣಿವೆಯಾಳಕ್ಕೆ ಇಳಿಯುವುದೆಂದರೆ ಇಬ್ಬರಿಗೂ ಜೀವಕ್ಕಿಂತ ಹೆಚ್ಚು ಇಷ್ಟ ಎಂಬಂತಾಗಿದ್ದವು.
ಇಬ್ಬರಿಗೂ ಟ್ರೆಕ್ಕಿಂಗ್ ಎಂದರೆ ಇಷ್ಟ ಎನ್ನುವುದು ಮೊದಲು ಗೊತ್ತಾಗಿದ್ದೇ ದಿಗಂತ ಕಾಲೇಜಿನಲ್ಲಿ ಟ್ರೆಕ್ಕಿಂಗ್ ಟ್ರಿಪ್ ಇಟ್ಟಾಗ. ಉಂಚಳ್ಳಿ ಜಲಪಾತದಿಂದ ಇಳಿದು ನದಿಗುಂಟ ಸಾಗಿ ಹಾಗೆಯೇ ಬುರುಡೆ ಜಲಪಾತದ ಕವಲಿನಲ್ಲಿ ಹಾದು ಅದೇ ಜಲಪಾತದ ಪಕ್ಕದಿಂದ ಮೇಲೇರಿ ಬರುವ ಟ್ರಿಪ್ಪನ್ನು ಇಟ್ಟಿದ್ದ. ಹೀಗೊಂದು ಟ್ರಿಪ್ಪಿನ ವಿಷಯದ ಬಗ್ಗೆ ಆಸಕ್ತರು ಪಾಲ್ಗೊಳ್ಳಬಹುದು ಎಂದು ಹೇಳಿ ನೊಟೀಸ್ ಬೋರ್ಡಿಗೆ ಹಾಕಿದ ಅರೆಘಳಿಗೆಯಲ್ಲಿ ಸಿಂಧು ತಾನು ಬರುತ್ತೇನೆಂದು ದಿಗಂತನ ಬಳಿ ಹರಪೆ ಬಿದ್ದಿದ್ದಳು. ದಿಗಂತ ಖುಷಿಯಿಂದ ಒಪ್ಪಿಕೊಂಡಿದ್ದ. 12 ಜನರು ಟ್ರಿಪ್ಪಿಗೆ ಹೆಸರನ್ನು ನೊಂದಾಯಿಸಿದ್ದರಾದರೂ ದಿಗಂತ ಅಳೆದು ತೂಗಿ 6 ಜನರನ್ನು ಆಯ್ಕೆ ಮಾಡಿದ್ದ. 6 ಜನರಲ್ಲಿ ಸಿಂಧುವನ್ನು ಸೇರಿ ಇಬ್ಬರು ಹುಡುಗಿಯರು. ನಾಲ್ವರು ಹುಡುಗರು.
ಒಂದು ಶುಭ ಮುಂಜಾನೆ ಆರುಗಂಟೆಗೆಲ್ಲಾ 6 ಜನರ ತಂಡ ಉಂಚಳ್ಳಿ ಜಲಪಾತವನ್ನು ತಲುಪಿತ್ತು. ಆರು ಜನರ ಪೈಕಿ ಬಹುತೇಕರು ತಿಂಡಿ, ವಗೈರೆಗಳನ್ನು ಹೊತ್ತಿದ್ದರು. ದಿಗಂತ ಟ್ರೆಕ್ಕಿಂಗಿಗೆ ಅನುಕೂಲವಾಗುವಂತಹ ಸಕಲ ಸರಂಜಾಮುಗಳನ್ನೂ ತಂದಿದ್ದ. ಉಂಚಳ್ಳಿ ಜಲಪಾತದ ಎದುರಿನಲ್ಲಿರುವ ವೀಕ್ಷಣಾ ಗೋಪುರದಲ್ಲಿ ಜಲಪಾತವನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿಯೇ ದಿಗಂತ ಎಲ್ಲರ ಬಳಿ ಹೇಳಿದ್ದ. ಉಂಚಳ್ಳಿ ಜಲಪಾತದ ಬುಡಕ್ಕೆ ಮೊದಲು ಇಳಿಯುವುದು. ಇದಕ್ಕೆ ಕನಿಷ್ಟ ಒಂದು ತಾಸು ಸಮಯ ಬೇಕೇ ಬೇಕಾಗುತ್ತದೆ. ಜಲಪಾತದ ಬಳಿ ನಾವು ಒಂದು ತಾಸು ಮಾತ್ರ ಉಳಿದುಕೊಳ್ಳುವುದು. ನಂತರ ಮುಂದಕ್ಕೆ ಸಾಗಲೇಬೇಕು. ಅಲ್ಲಿಂದ ನದಿಯಲ್ಲೇ ನಾಲ್ಕು ಕಿ.ಮಿ ಸಾಗಿ ಎಡಕ್ಕೆ ಹೊರಳಿದರೆ ಅಘನಾಶಿನಿಗೆ ಉಪನದಿಯೊಂದು ಬಂದು ಸೇರುತ್ತದೆ. ಈ ಕವಲಿನಲ್ಲಿ ಮೂರ್ನಾಲ್ಕು ಕಿ.ಮಿ ಸಾಗಿದರೆ ಬುರುಡೆ ಜಲಪಾತ ಸಿಗುತ್ತದೆ. ಇದನ್ನು ನಾವು ಏರಬೇಕು. ಮದ್ಯಾಹ್ನ ಬುರುಡೆ ಜಲಪಾತದ ಬುಡದಲ್ಲಿ ನಾವು ಊಟ ಮಾಡಬೇಕು. ಈ ಜಲಪಾತವನ್ನೇರುವುದು ಬಹಳ ಕಠಿಣವಾದ ಕೆಲಸಗಳಲ್ಲೊಂದು. ಇದುವರೆಗೂ ಕೆಲವೇ ಕೆಲವು ಜನರು ಮಾತ್ರ ಕೆಳಗಿನಿಂದ ಮೇಲಕ್ಕೆ ಹತ್ತಿದ್ದಾರೆ. ಕನಿಷ್ಟ ನಾಲ್ಕು ತಾಸುಗಳಾದರೂ ಇದಕ್ಕೆ ಬೇಕೇ ಬೇಕು. ನಂತರ ಜಲಪಾತದಿಂದ 9 ಕಿ.ಮಿ ನಡೆದು ಬಸ್ಸನ್ನು ಹತ್ತಿ ಮರಳಿ ಊರಿಗೆ ಹೋಗಬೇಕು. ಕೊನೆಯ ಸಾರಿ ಹೇಳುತ್ತಿದ್ದೇನೆ. ಯಾರಿಗಾದರೂ ಇಷ್ಟವಿಲ್ಲ. ಅಥವಾ ಭಯ ಅಂತಿದ್ದರೆ ಮರಳಿ ಹೋಗಿಬಿಡಿ ಎಂದು ಹೇಳಿದ್ದ.
ಕರಾರುವಾಕ್ ಕಾರ್ಯ, ಸಮಯನಿಗದಿ, ಖಡಕ್ ಮಾತಿನ ದಿಗಂತ ಹಾಗೂ ಆತನ ನಡೆನುಡಿ ಸಿಂಧುವಿಗೆ ಬಹಳ ಖುಷಿಯೆನ್ನಿಸಿದ್ದೇ ಆವಾಗ. ಯಾಕೋ ಈತ ಬಹಳ ಕುತೂಹಲವಾದ ವ್ಯಕ್ತಿತ್ವವನ್ನು ಹೊಂದಿದ್ದಾನೆ ಎಂದುಕೊಂಡಳು. ಕೆಲ ಕ್ಷಣದಲ್ಲಿಯೇ ಟ್ರೆಕ್ಕಿಂಗ್ ಆರಂಭಗೊಂಡಿತು. ಬಾನಂಚಿನಲ್ಲಿ ಇನ್ನೂ ಸೂರ್ಯ ಮೂಡಿರಲಿಲ್ಲ. ತಂಪು ತಂಗಾಳಿ ಹಿತವಾಗಿ ಬೀಸುತ್ತಿತ್ತು. ಉತ್ಸಾಹದ ಚಿಲುಮೆಯೊಂದಿಗೆ ಉಂಚಳ್ಳಿ ಜಲಪಾತದ ಬುಡಕ್ಕೆ ಹೊರಟರು. ಸವೆದ ಹಾದಿ ಕಷ್ಟಪಡಬೇಕಿರಲಿಲ್ಲ. ಇಳಿದಿಳಿದು ಹೋದಂತೆಲ್ಲ ಮನಸು ಖುಷಿಯನ್ನು ಹೊಂದುತ್ತಿತ್ತು. ಅಲ್ಲಲ್ಲಿ ದಾರಿ ಪಕ್ಕದ ಗಿಡಗಳು ದಾರಿಗೆ ಮುತ್ತಿಕೊಂಡಿದ್ದವು. ಬೆಳಗಿನ ಜಾವದಲ್ಲಿ ಸುರಿದ ಇಬ್ಬನಿ ಮೈ ಮನಸ್ಸುಗಳಿಗೆ ತಾಕಿ ಮತ್ತಷ್ಟು ಹುಚ್ಚನ್ನು ಮನದಾಳದಲ್ಲಿ ಕೆಣಕಿಬಿಟ್ಟಂತಾಯಿತು. ಇಪ್ಪತ್ತೋ ಇಪ್ಪತ್ತೈದೋ ನಿಮಿಷದಲ್ಲಿ ಯಾವುದೇ ಕಷ್ಟವನ್ನು ಅನುಭವಿಸದೇ ಸರಾಗವಾಗಿ ಅಘನಾಶಿನಿ ಕಣಿವೆಗೆ ಇಳಿದುಬಿಟ್ಟಿದ್ದರು. ಅಲ್ಲಿಂದ ಒಂದು ಕಿ.ಮಿ ದೂರವನ್ನು ಜಲಪಾತದ ಕಡೆಗೆ ಸಾಗಬೇಕಿತ್ತು. ಜಲಪಾತದ ಬುಡಕ್ಕೆ ತೆರಳಿ ಧುಮ್ಮಿಕ್ಕುವ ಉಂಚಳ್ಳಿ ಜಲಪಾತದ ನೀರಿಗೆ ತಲೆಯನ್ನೊಡ್ಡುವ ಉದ್ದೇಶ ಎಲ್ಲರ ಮನಸ್ಸಿನಲ್ಲಿಯೂ ಇತ್ತು. ನಿಧಾನವಾಗಿ ತೆರಳಿದರು.
ಬಂಡೆಯಿಂದ ಬಂಡೆಗೆ ಹಾರುತ್ತ, ಏರುತ್ತ, ಇಳಿಯುತ್ತ, ಹತ್ತಲಾಗದ ಬಂಡೆಗಳನ್ನು ಸುತ್ತಿ ಬಳಸುತ್ತ ಚಾರಣಿಗರು ತೆರಳಿದರು. ಪದೆ ಪದೆ ಅಘನಾಶಿನಿಯ ಕಿಂಕಿಣಿ ನಿನಾದ ಕಿವಿಯನ್ನು ಮೆಲ್ಲಗೆ ತಟ್ಟುತ್ತಿತ್ತು. ಕಣ್ಣಿಗೆ ಬೀಳುತ್ತಿದ್ದರೂ ಬಹುಬೇಗನೆ ಹತ್ತಿರ ಬರುತ್ತಿಲ್ಲ ಉಂಚಳ್ಳಿಯ ಕೆಪ್ಪ ಜೋಗ ಎಂಬುದು ಎಲ್ಲರ ಮನಸ್ಸಿನಲ್ಲಿರುವ ಹುಸಿಮುನಿಸಾಗಿತ್ತು. ನದಿ ಕಣಿವೆಯಲ್ಲಿ ನಡೆಯುವುದು ಬಹಳ ಕಷ್ಟ. ಒಂದು ಕಿ.ಮಿ ನಡೆದು ಹೋಗಲು ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ ಎನ್ನುವುದು ಎಲ್ಲರ ಅನುಭವವಾಗಿತ್ತು. ಮತ್ತೊಮ್ಮೆ ಅದು ಸಾಬೀತಾಯಿತು. ಕೆಪ್ಪಜೋಗದ ತಳವನ್ನು ತಲುಪುವ ವೇಳೆಗೆ ಜಲಪಾತದ ತುದಿಯನ್ನು ನೇಸರ ಮುಟ್ಟಿ ಮುಟ್ಟಿ ನೋಡುತ್ತಿದ್ದ. ಚಿನ್ನದ ಎಳೆ ಎಳೆಗಳು ಜಲಪಾತದ ತುತ್ತ ತುದಿಯನ್ನು ಮುತ್ತಿಕ್ಕುತ್ತಿವೆಯೇನೋ ಎಂಬಂತೆ ಕಾಣುತ್ತಿದ್ದವು. ಸೂರ್ಯನ ಕಿರಣಗಳು ಜಲಪಾತದ ಕಾಲ ಬುಡವನ್ನು ತಲುಪಲು ಏನಿಲ್ಲವೆಂದರೂ ಮೂರ್ನಾಲ್ಕು ತಾಸುಗಳೇ ಬೇಕಾಗಬಹುದು ಎಂದುಕೊಂಡರು ಎಲ್ಲರೂ.
`ಇಲ್ಲೇ ತಿಂಡಿ ತಿಂದು ಮತ್ತೆ ವಾಪಾಸಾಗೋಣ, ಇದೇ ಕಣಿವೆಯಾಳದಲ್ಲಿ ಮೂರ್ನಾಲ್ಕು ಕಿ.ಮಿ ನಡೆಯಬೇಕಾಗುತ್ತದೆ..' ಎಂದ ದಿಗಂತ. ಎಲ್ಲರೂ ಬ್ಯಾಗನ್ನು ಇಳಿಸಿ ತಿಂಡಿಗಳನ್ನು ಹರವಿಕೊಂಡರು. ತಂಡದ ಸದಸ್ಯರು ತಂದಿದ್ದ ತಿಂಡಿಗಳಲ್ಲಿ ಕೆಲವನ್ನು ತಿಂದು ಉಳಿದವುಗಳನ್ನು ಮುಂದೆ ಬೇಕಾಗುತ್ತದೆ ಎಂದು ಇಟ್ಟುಕೊಂಡರು. `ಕೇವಲ ಅರ್ಧಗಂಟೆಯ ಸಮಯವಿದೆ. ನದಿಯಲ್ಲಿ ಈಜಾಡಬಹುದು, ಜಲಪಾತದ ಧಾರೆಗೆ ತಲೆಯನ್ನೊಡ್ಡಿ ನಿಲ್ಲಬಹುದು. ಅರ್ಧಗಂಟೆಗಿಂತ ಒಂದು ನಿಮಿಷವೂ ತಡವಾಗುವಂತಿಲ್ಲ. ಹುಷಾರಾಗಿರ್ರಪ್ಪಾ..' ಎಂದು ಮತ್ತೊ್ಮೆ ದಿಗಂತ ಹೇಳುವುದರೊಳಗೆ ಎಲ್ಲರೂ ನೀರಿಗಿಳಿದಾಗಿತ್ತು.
(ಮುಂದುವರಿಯುತ್ತದೆ..)