ಕಬ್ಬಡ್ಡಿ ಕ್ಯಾಚಿಂಗ್ ನ ಸಾಂದರ್ಭಿಕ ಚಿತ್ರ |
ಭಾರತದ ಈಶಾನ್ಯ ರಾಜ್ಯಗಳು ಹಾಗೂ ಇತರ ಪ್ರದೇಶಗಳ ನಡುವಣ ಜಾಗ ಕೋಳಿಕತ್ತು. ಈಶಾನ್ಯ ಭಾಗಗಳನ್ನು ಭಾರತದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಭಾಗವೂ ಹೌದು. ಒಂದು ಕಡೆಗೆ ಬಾಂಗ್ಲಾದೇಶ, ಇನ್ನೊಂದು ಕಡೆಗೆ ನೇಪಾಳವನ್ನು ಹೊಂದಿರುವ ಕೋಳಿಕತ್ತಿನ ಪ್ರದೇಶ 22 ಕಿಲೋಮೀಟರ್ ಅಗಲವಾಗಿದೆ. ಪಶ್ಚಿಮ ಬಂಗಾಲ ರಾಜ್ಯದಲ್ಲಿರುವ ಈ ಪ್ರದೇಶದಲ್ಲಿ 2 ಹೈವೆಗಳು ಹಾಗೂ ಒಂದು ರೈಲು ಮಾರ್ಗ ಹಾದುಹೋಗಿದೆ. ಚಿಕನ್ಸ್ ನೆಕ್ ಎಂದು ಕರೆಯುವ ಈ ಸ್ಥಳವನ್ನು ಭಯೋತ್ಪಾದಕರು ಆಕ್ರಮಿಸಿದರೆ ಈಶಾನ್ಯ ಭಾರತ ಪ್ರದೇಶ ಇತರ ಭಾಗದಿಂದ ಸಂಪರ್ಕವನ್ನೇ ಕಳೆದುಕೊಂಡು ಬಿಡುತ್ತದೆ. ಅನೇಕ ಸಾರಿ ಇಂತಹ ಕೆಲಸಕ್ಕೂ ಭಯೋತ್ಪಾದಕರು ಕೈಹಾಕಿದ್ದರು ಎಂಬುದನ್ನು ವಿನಯಚಂದ್ರ ನೆನಪು ಮಾಡಿಕೊಂಡ. ಯಾಕೋ ನೆನಪು ಮಾಡಿಕೊಂಡಂತೆ ಮನಸ್ಸಿನಲ್ಲಿ ಅದೇನೋ ತಳಮಳ ಉಂಟಾಯಿತು. ಸಿಟ್ಟೂ ಹುಟ್ಟಿತು.
ಮರಳಿ ಢಾಕಾವನ್ನು ತಲುಪುವ ವೇಳೆಗೆ ಸಂಜೆಯಾಗುತ್ತಿತ್ತು. ಇನ್ನು ಮೂರೇ ದಿನದಲ್ಲಿ ಕಬ್ಬಡ್ಡಿ ವಿಶ್ವಕಪ್ ನಡೆಯಲಿದೆ. ಅದಕ್ಕೆ ತಾಲೀಮು ಜೋರಾಗಬೇಕು. ವಿಶ್ವ ಚಾಂಪಿಯನ್ನರು ತಮ್ಮಲ್ಲೇ ವಿಶ್ವಕಪ್ಪನ್ನು ಉಳಿಸಿಕೊಳ್ಳಬೇಕು. ಹೀಗಾಗಿ ಜಾಧವ್ ಅವರು ಸ್ಪಷ್ಟವಾಗಿ ತಿಳಿಸಿಬಿಟ್ಟಿದ್ದರು. ಹೀಗಾಗಿ ಇನ್ನುಳಿದ ದಿನಗಳಲ್ಲಿ ಜಾಲಿ ಬದುಕನ್ನು ಕಡಿಮೆ ಮಾಡಿ ಗಂಭೀರವಾಗಿ ಪ್ರಯತ್ನ ನಡೆಸಬೇಕಿತ್ತು.
ವಿನಯಚಂದ್ರನಿಗೆ ಕಾಂತಾಜಿ ದೇವಾಲಯ ಪ್ರವಾಸ ಸಂತೋಷವನ್ನು ನೀಡಿತ್ತು. ಮಧುಮಿತಾ ಆಪ್ತಳಾಗಿದ್ದಳು. ಮಧುಮಿತಾಳಿಗೂ ವಿನಯಚಂದ್ರ ಆಪ್ತನಾಗಿದ್ದ. ಇಬ್ಬರೂ ಮೊಬೈಲ್ ನಂಬರನ್ನು ಕೊಟ್ಟು ತೆಗೆದುಕೊಂಡಿದ್ದರು. ಮೆಸೇಜುಗಳು, ದೂರವಾಣಿ ಕರೆಗಳೂ ಆಗಾಗ ನಡೆಯಲಾರಂಭವಾಗಿತ್ತು. ಸೂರ್ಯನ್ ಇವನ್ನು ಗಮನಿಸಿದ್ದ. `ಅನ್ಯಾಯವಾಗಿ ಹಾಳಾಗಿಬಿಟ್ಟೆಯಲ್ಲೋ..' ಎಂದು ವಿನಯಚಂದ್ರನನ್ನೂ ಆಗಾಗ ಛೇಡಿಸುತ್ತಿದ್ದ. ವಿನಯಚಂದ್ರ ಹಾಗೂ ಮಧುಮಿತಾಳ ನಡುವೆ ಗಾಢವಾಗಿದ್ದ ಬಂಧವನ್ನು ಸೂರ್ಯನ್ ಖುಷಿಯಿಂದ ಗಮನಿಸಿದ್ದ.
***
ನೋಡ ನೋಡುತ್ತಿದ್ದಂತೆ ಕಬ್ಬಡ್ಡಿ ವಿಶ್ವಕಪ್ ಬಂದೇ ಬಿಟ್ಟಿತು. ಉದ್ಘಾಟನಾ ದಿನವೂ ನಡೆಯಿತು. ಉದ್ಘಾಟನಾ ಸಮಾರಂಭದ ಸಮಯದಲ್ಲಿ ಬಾಂಗ್ಲಾದೇಶದ ಸೈಕಲ್ ರಿಕ್ಷಾದಲ್ಲಿ ಆಟಗಾರರನ್ನು ಮೈದಾನಕ್ಕೆ ಕರೆತಂದಿದ್ದೂ ಆಯಿತು. ಉದ್ಘಾಟನಾ ಕಾರ್ಯಕ್ರಮವೂ ವಿಜ್ರಂಭಣೆಯಿಂದ ನಡೆಯಿತು. ಕ್ರಿಕೆಟ್ ಆಟದ ಕಾರಣವೋ ಏನೋ ಉದ್ಘಾಟನಾ ಸಮಾರಮಭವೂ ಕೂಡ ಆ ಕ್ರೀಡೆಯ ಹಾದಿಯಲ್ಲಿಯೇ ಸಾಗಿತ್ತು. ಕ್ರಿಕೆಟ್ ವಿಶ್ವಕಪ್ ನಡೆದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಪ್ರದಾಯಗಳೆಲ್ಲ ಕಬ್ಬಡ್ಡಿ ವಿಶ್ವಕಪ್ ಸಂದರ್ಭದಲ್ಲೂ ಮರುಕಳಿಸಿದಂತಾದವು.
ಭಾರತದ ಮೊದಲ ಪಂದ್ಯ ನ್ಯೂಝಿಲ್ಯಾಂಡ್ ವಿರುದ್ಧ ಇತ್ತು. ನ್ಯೂಝಿಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವಿನಯಚಂದ್ರನಿಗೆ ಆಡುವ ಅವಕಾಶವೂ ಸಿಕ್ಕಿತು. ಟಾಸ್ ಗೆದ್ದು ರೈಡಿಂಗನ್ನು ಆರಿಸಿಕೊಂಡ ತಂಡ ಉತ್ತಮ ಆರಂಭವನ್ನೇ ಪಡೆಯಿತು. ತಂಡದ ಹಿರಿಯ ಆಟಗಾರರಲ್ಲೊಬ್ಬರಾಗಿದ್ದ ಮಹಾರಾಷ್ಟ್ರದವನು ಮೊದಲು ರೈಡಿಂಗಿಗೆ ಹೋದ. ಉತ್ತಮ ರೈಡಿಂಗಿನ ಪರಿಣಾಮ ಒಂದಂಕ ಸಿಕ್ಕಿತು.
ನ್ಯೂಝಿಲ್ಯಾಂಡ್ ತಂಡದ ರೈಡಿಂಗ್ ಆರಂಭವಾಗಿತ್ತು. ವಿನಯಚಂದ್ರ ಏಳು ಜನ ಆಟಗಾರರ ಪೈಕಿ ಮಧ್ಯದಲ್ಲಿ ನಿಂತಿದ್ದ. ವಿನಯಚಂದ್ರ ಒಳ್ಳೆಯ ಕ್ಯಾಚರ್. ಆಗಿದ್ದರೂ ಕೂಡ ಆರಂಭಿಕ ಪಂದ್ಯದಲ್ಲಿ ಆತನನ್ನು ಒಂದು ಬದಿಯಲ್ಲಿ ನಿಲ್ಲಿಸುವುದು ಬೇಡ ಎಂಬ ಜಾಧವ್ ಅವರ ನಿರ್ಣಯದಂತೆ ಮಧ್ಯದಲ್ಲಿ ನಿಂತಿದ್ದ. ವಿನಯಚಂದ್ರನ ಎರಡೂ ಕಡೆಗಳಲ್ಲಿ ತಲಾ ಮೂವರಿದ್ದರು. ಹಿರಿಯ ಆಟಗಾರರಂತೂ ಹುಲಿಯಂತೆ ಅಬ್ಬರದ ಆಟವನ್ನಾಡುತ್ತಿದ್ದರು. ಮೊದಲ ಪಂದ್ಯವಾಗಿದ್ದ ಕಾರಣ ವಿನಯಚಂದ್ರ ಕೊಂಚ ನರ್ವಸ್ ಆದಂತೆ ಕಂಡುಬಂದನಾದರೂ ಫಸ್ಟ್ ಟೆಕ್ನಿಕಲ್ ಟೈಮೌಟ್ ವೇಳೆಗೆಲ್ಲ ಸರಿಯಾಗಿಬಿಟ್ಟ. ಮೊದಲ ಎರಡು ನಿಮಿಷಗಳಲ್ಲಿಯೇ ಭಾರತ ತಂಡದ ಆಟಗಾರರು ಅಬ್ಬರಿಸಿದರು. 6-0 ದಿಂದ ಮುನ್ನಡೆಯನ್ನು ಪಡೆದುಕೊಂಡರು. ವಿನಯಚಂದ್ರನಿಗೆ ರೈಡಿಂಗ್ ಹಾಗೂ ಕ್ಯಾಚಿಂಗ್ ಎರಡೂ ಅವಕಾಶ ಲಭ್ಯವಾಗಲಿಲ್ಲ.
ಮತ್ತೆ ಆಟ ಆರಂಭವಾಯಿತು. ಸಂಪೂರ್ಣವಾಗಿ ಭಾರತವೇ ಮೇಲುಗೈ ಸಾಧಿಸಿತು. ಮೊದಲರ್ಧ ಮುಗಿಯಬೇಕು ಎನ್ನುವಾಗ ವಿನಯಚಂದ್ರ ರೈಡಿಂಗಿಗೆ ಹೋಗಬೇಕು ಎಂಬ ನಿರ್ಧಾರ ಬಂದ ಕಾರಣ ರೈಡಿಂಗಿಗೆ ತೆರಳಿದ. ಹೋದವನೆ ಮೊದಲಿಗೆ ಮಿಡಲ್ ಲೈನ್ ಮುಟ್ಟಿ, ಬೋನಸ್ ಲೈನಿನತ್ತ ಹೆಜ್ಜೆ ಹಾಕಿದ. ತಕ್ಷಣವೇ ನ್ಯೂಝಿಲ್ಯಾಂಡ್ ಆಟಗಾರರು ಇವನತ್ತ ನುಗ್ಗಿ ಬರಲು ಯತ್ನಿಸಿದರು. ವಿನಯಚಂದ್ರ ಹಿಂದಕ್ಕೆ ತಿರುಗಿದ. ಮತ್ತೊಮ್ಮೆ ವಿನಯಚಂದ್ರ ದಾಳಿ ನಡೆಸಿ, ಕಾಲು ಬೀಸಿ ಯಾರಾದರೂ ಒಬ್ಬರು ಬಲಿ ಬೀಳುತ್ತಾರೇನೋ ಎಂದುಕೊಂಡ. ಯಾರೂ ಬಲಿಯಾಗಲಿಲ್ಲ. ಕೊನೆಗೊಮ್ಮೆ ವಾಪಾಸಾದ.
`ಥೋ ರೈಡಿಂಗ್ ವೇಸ್ಟಾಯಿತಲ್ಲ..' ಎಂದು ಮನದಲ್ಲಿಯೇ ವಿನಯಚಂದ್ರ ಎಂದುಕೊಳ್ಳುವಷ್ಟರಲ್ಲಿ ತಂಡದ ಹಿರಿಯ ಆಟಗಾರರು ಬಂದು `ವೆಲ್ ರೈಡಿಂಗ್..' ಎಂದರು. ಮೊದಲರ್ಧದ ವೇಳೆಗೆ 10-0ದಿಂದ ಭಾರತ ಅಮೋಘ ಮುನ್ನಡೆಯಲ್ಲಿತ್ತು.
ಬಿಡುವು ಸಿಕ್ಕಾಗ ವಿನಯಚಂದ್ರ ಸುತ್ತ ನೋಡಿದ. ಪ್ರೇಕ್ಷಕರ ಸಾಲಿನಲ್ಲೆಲ್ಲೋ ಮಧುಮಿತಾಳನ್ನು ಕಂಡಂತಾಗಿ ಹುರುಪುಗೊಂಡ. ದೊಡ್ಡ ಕ್ರೀಡಾಂಗಣದಲ್ಲಿ ಮೂರು ಕಡೆಗಳಲ್ಲಿ ಏಕ ಕಾಲಕ್ಕೆ ಕಬ್ಬಡ್ಡಿ ಪಂದ್ಯಗಳು ನಡೆಯುತ್ತಿದ್ದವು. ಮೈದಾನದಲ್ಲಿ ಕೆಲವು ಜನರಿದ್ದರು. ಇದೇ ಕ್ರಿಕೆಟ್ ಪಂದ್ಯಾವಳಿಯಾಗಿದ್ದರೆ ಜನರೆಲ್ಲ ತುಂಬಿ ತುಳುಕುತ್ತಿದ್ದರಲ್ಲ ಎಂದುಕೊಂಡ. ದ್ವಿತೀಯಾರ್ಧ ಆಟ ಆರಂಭವಾಯಿತು. ಭಾರತ ತಂಡ ತನ್ನ ಯೋಜನೆಯಂತೆ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಿತು. ಹಿರಿಯ ಆಟಗಾರರಂತೂ ಒಂದೊಂದು ರೈಡಿಂಗಿನಲ್ಲೂ ಎರಡು ಬಲಿಯಂತೆ ಪಡೆದುಕೊಂಡು ಬರತೊಡಗಿದರು. ಇದೇ ವೇಳೆ ಭಾರತದ ಒಂದೆರಡು ಪಾಯಿಂಟುಗಳೂ ಹೋದವು. ತೊಂದರೆಯಿರಲಿಲ್ಲ. ಆಟ ಮುಗಿಯಲು ಕೊನೆಯ ಎರಡು ನಿಮಿಷವಿದೆ ಎನ್ನುವಾಗ ಭಾರತ ತಂಡ ನ್ಯೂಝಿಲ್ಯಾಂಡಿನ ವಿರುದ್ಧ 24-3 ರಿಂದ ಅಮೋಘ ಮುನ್ನಡೆಯಲ್ಲಿತ್ತು. ಈಗ ಭಾರತ ತಂಡ ಟೆಕ್ನಿಕಲ್ ಟೈಮೌಟ್ ಪಡೆಯಿತು. ಜಾಧವ್ ಅವರು ವಿನಯಚಂದ್ರನ ಬಳಿ ಕ್ಯಾಚರ್ ಆಗಿ ಆಡು ಎಂದರು. ವಿನಯಚಂದ್ರನಿಗೆ ಏಕಕಾಲದಲ್ಲಿ ಖುಷಿ ಹಾಗೂ ಅಳುಕು ಎರಡೂ ಮೂಡಿತು.
ಮತ್ತೆ ಆಟ ಆರಂಭವಾದಾಗ ವಿನಯಚಂದ್ರ ಕ್ಯಾಚರ್ ರೂಪದಲ್ಲಿ ನಿಂತಿದ್ದ. ಇನ್ನೊಂದು ತುದಿಯಲ್ಲಿ ಸೂರ್ಯನ್ ಕೂಡ ಇದ್ದ. ಆಟ ಸಾಗಿತು. ಭಾರತೀಯ ಆಟಗಾರರು ರೈಡಿಂಗಿಗೆ ಹೋದಾಗಲೆಲ್ಲ ನ್ಯೂಜಿಲೆಂಡಿಗರನ್ನು ಬಡಿದುಕೊಂಡು ಬರುತ್ತಲೇ ಇದ್ದರು. ಸೂರ್ಯನ್ ಎರಡು ಕ್ಯಾಚ್ ಪಡೆದಿದ್ದರೂ ವಿನಯಚಂದ್ರನಿಗೆ ಸಾಧ್ಯವಾಗಲಿಲ್ಲ. ಮತ್ತೊಬ್ಬ ನ್ಯೂಜಿಲೆಂಡಿಗ ರೈಡಿಂಗಿಗೆ ಬಂದ. ಈ ಸಾರಿ ಏನಾದರಾಗಲಿ ಇವನನ್ನು ಹಿಡಿದು ಬಲಿ ಹಾಕಲೇಬೇಕು ಎಂದುಕೊಂಡ ವಿನಯಚಂದ್ರ. ಕಿವೀಸ್ ರಾಷ್ಟ್ರದ ಬಿಳಿ ದಾಂಡಿಗ ಅದಕ್ಕೆ ಅವಕಾಶವನ್ನೇ ನೀಡದಂತೆ ಪದೆ ಪದೆ ಮೇಲೇರಿ ಬರುತ್ತಿದ್ದ. ಸೂರ್ಯನ್ ಕೂಡ ಹಿಡಿಯಲಾಗದಂತಾಗಿದ್ದ. ಕೊನೆಗೊಮ್ಮೆ ಮಿಡಲ್ ಲೈನ್ ದಾಟಿ ಬೋನಸ್ ಲೈನ್ ಹತ್ತಿರ ಆ ದಾಂಡಿಗ ನುಗ್ಗಿಬಂದ. ಸರಿಯಾಗಿ ಸಿಕ್ಕಿತು ಸಮಯ ಎಂದುಕೊಂಡು ವಿನಯಚಂದ್ರ ರಪಕ್ಕನೆ ಆ ದಾಂಡಿಗನ ಕಾಲನ್ನು ಹಿಡಿದು ಕೆಡವಿದ.
ಆದೇ ಸಮಯದಲ್ಲಿ ಆ ದಾಂಡಿಗನೂ ಕೊಸರಾಡಿ ಕೊಂಚ ವಿನಯಚಂದ್ರನನ್ನು ಎಳೆದುಕೊಂಡೇ ಗಡಿಯತ್ತ ತೆರಳುತ್ತಿದ್ದ. ವಿನಯಚಂದ್ರನಿಗೆ ತಾನು ಔಟಾಗುವುದು ಗ್ಯಾರಂಟಿ, ಹಿಡಿದ ಬಲಿ ಹುಸಿ ಹೋಯಿತು ಎಂದುಕೊಂಡ. ಇನ್ನೇನು ಗಡಿ ಮುಟ್ಟಿ ತಾನು ಔಟಾಗಬೇಕು ಎನ್ನುವಷ್ಟರಲ್ಲಿ ಪಕ್ಕದ ಇನ್ನೊಬ್ಬ ಹಿರಿಯ ಆಟಗಾರ ಆಂಧ್ರದವನು ವಿನಯಚಂದ್ರನ ಸಹಾಯಕ್ಕೆ ಬಂದು ನ್ಯೂಝಿಲ್ಯಾಂಡಿನ ದಾಂಡಿಗನನ್ನು ಹಿಡಿದೇಬಿಟ್ಟ. `ರೈಡರ್ ಔಟ್.. ಪಾಯಿಂಟು ಟು ಇಂಡಿಯಾ..' ಎಂದು ಅಂಪಾಯರ್ ಘೋಷಣೆ ಮಾಡುವ ವೇಳೆಗೆ ವಿನಯಚಂದ್ರನಿಗೆ ಆನಂದ ಭಾಷ್ಪ ಬರುವುದೊಂದೆ ಬಾಕಿ.
ಮೊದಲ ಬಲಿ ಖುಷಿ ಕೊಟ್ಟಿತ್ತು. ಕೊನೆಗೆ ಪಂದ್ಯದಲ್ಲಿ ಭಾರತ ಅಮೋಘ ವಿಜಯ ಪಡೆದಿತ್ತು. 38-7ರ ಭಾರಿ ಅಂತರದಿಂದ ನ್ಯೂಝಿಲೆಂಡನ್ನು ಬಗ್ಗು ಬಡಿದು ವಿಜಯ ಪತಾಕೆ ಹಾರಿಸಿತ್ತು. ವಿನಯಚಂದ್ರ ಈ ವಿಜಯದಲ್ಲಿ ತನ್ನದೂ ಒಂದು ಗರಿಯಿದೆಯಲ್ಲ ಎಂದು ಸಂತಸಪಟ್ಟ. ಆಟದ ಅಂಕಣದಿಂದ ಮರಳಿ ಮೊಬೈಲ್ ಕೈಗೆತ್ತಿಕೊಳ್ಳುವ ವೇಳೆಗೆ `ವೆಲ್ ಪ್ಲೇ ವಿನು.. ಗುಡ್.. ಕಂಗ್ರಾಟ್ಸ್.. ಐ ಲೈಕ್ ಇಟ್..' ಎಂಬ ಮೆಸೇಜ್ ಇನ್ ಬಾಕ್ಸಿನಲ್ಲಿ ಕೂತಿತ್ತು. ಮಧುಮಿತಾಳಿಂದ.
ಆರಂಭದ ದಿನ, ಮೊದಲ ಪಂದ್ಯದಲ್ಲಿ ಗೆಲುವನ್ನು ಪಡೆದ ಭಾರತ ತಂಡ ತನ್ನ ವಿಜಯ ಯಾತ್ರೆಗೆ ಮುನ್ನುಡಿ ಬರೆಯುತ್ತಿತ್ತು. ಸಂಜೆ ಆಟದ ಕುರಿತು ಚರ್ಚೆ ನಡೆಯಿತು. ಎಲ್ಲ ಆಟಗಾರರ ಉತ್ತಮ ಆಟ ಹಾಗೂ ಕೆಟ್ಟ ಆಟದ ಕುರಿತು ಚರ್ಚೆ ನಡೆದವು. ಮೊಟ್ಟ ಮೊದಲ ಬಾರಿಗೆ ವಿನಯಚಂದ್ರನಿಗೆ ಜಾಧವ್ ಅವರ ಗಂಭೀರತೆಯ ಅರ್ಥವಾಯಿತು. ಇಷ್ಟು ದಿನ ಸ್ನೇಹಿತರಂತೆ ಇದ್ದ ಜಾಧವ್ ಅವರು ಆಟಗಾರರ ತಪ್ಪುಗಳನ್ನು ಹೇಳುವ ಸಂದರ್ಭದಲ್ಲಿ ಖಡಾಖಂಡಿತವಾಗಿ ಕಡ್ಡಿ ತುಂಡು ಮಾಡಿದಂತೆ ಹೇಳುತ್ತಿದ್ದುದನ್ನು ನೋಡಿ ವಿನಯಂಚಂದ್ರ ಒಮ್ಮೆ ವಿಸ್ಮಯಗೊಂಡ.
`ವಿನಯಚಂದ್ರ.. ಯಾಕ್ರೀ ಆ ರೀತಿ ನರ್ವಸ್ ಆಗ್ತೀರಿ..? ಸ್ವಲ್ಪ ಗಟ್ಟಿಯಾಗಿರಿ.. ಮುಂದಿನ ಪಂದ್ಯದಲ್ಲಿ ಅಳುಕು ಬೇಡ.. ಆಮೇಲೆ ಸಮಯ ನೋಡಿ ಕ್ಯಾಚ್ ಮಾಡಿ.. ಯಾಕೋ ಬಹಳ ಗಡಿಬಿಡಿ ಮಾಡಿದಿರಿ.. ರೆಡ್ಡಿ ಸರಿಯಾದ ಸಮಯಕ್ಕೆ ಬರದಿದ್ದರೆ ಒಂದಂಕ ಹೋಗ್ತಿತ್ತು.. ಇನ್ನುಮುಂದೆ ಯಾಮಾರಬೇಡಿ..' ಎಂದು ತಾಕೀತು ಮಾಡಿದರು.
ಒಂದೇ ಒಂದು ಅಂಕಕ್ಕೂ ಜಾಧವ್ ಅವರು ಎಷ್ಟೆಲ್ಲ ಮಹತ್ವ ನೀಡುತ್ತಾರಲ್ಲ ಎಂದುಕೊಂಡ ವಿನಯಚಂದ್ರ. ಮುಂದಿನ ಆಟಗಳಲ್ಲಿ ಸರಿಯಾಗಿರಬೇಕು. ಯಾವುದೇ ಸಣ್ಣಪುಟ್ಟ ತಪ್ಪುಗಳಿಗೂ ಅವಕಾಶವನ್ನು ನೀಡಬಾರದು. ತನ್ನಿಂದ ಯಡವಟ್ಟು ಕಡಿಮೆಯಾಗಬೇಕು ಎಂದುಕೊಂಡ ವಿನಯಚಂದ್ರ. ಮರಳಿ ಹೊಟೆಲಿಗೆ ಬರುವ ವೇಳೆಗೆ ಮಧುಮಿತಾ ಕಾಯುತ್ತಿದ್ದಳು.
`ಇನ್ನೂ ರೂಮಿಗೆ ಹೋಗಿಲ್ಲವಾ..' ವಿನಯಚಂದ್ರ ಪ್ರಶ್ನಿಸಿದ.
`ಇಲ್ಲ..' ಎಂದವಳ ಧ್ವನಿಯಲ್ಲಿ ಯಾವುದೋ ಅಳುಕು ಎದ್ದು ಕಾಣಿಸುತ್ತಿತ್ತು.
`ಯಾಕೆ.. ಏನಾಯ್ತು..?' ಎಂದು ಅನುಮಾನದಿಂದ ಪ್ರಶ್ನಿಸಿದ ವಿನಯಚಂದ್ರ.
`ಯಾಕೂ ಇಲ್ಲ..'
`ಏನೋ ಇದೆ ಹೇಳು...' ಒತ್ತಾಯಿಸಿದ. ಮಧುಮಿತಾ ನಿಧಾನವಾಗಿ ಹೇಳಿದಳು.
`ನಮ್ಮೂರಲ್ಲಿ ಗಲಾಟೆ ಆರಂಭವಾಗಿದೆಯಂತೆ.. ನಮ್ಮ ಊರಿನ ಎರಡು ಮನೆಗಳನ್ನು ಸುಟ್ಟು ಹಾಕಿದ್ದಾರಂತೆ.. ನಮ್ಮ ಮನೆಯ ಮೇಲೂ ಧಾಳಿ ಮಾಡಬಹುದಾ ವಿನೂ.. ಯಾಕೋ ಭಯವಾಗುತ್ತಿದೆ..' ಎಂದಳು.
ವಿನಯಚಂದ್ರನಿಗೆ ಮೊದಲಿಗೆ ಆಕೆ ಏನು ಹೇಳುತ್ತಿದ್ದಾಳೆ ಎನ್ನುವುದು ಅರ್ಥವಾಗದಿದ್ದರೂ ನಂತರ ತಿಳಿಯಿತು. ಹಿಂದೂಗಳ ಮನೆಯ ಮೇಲೆ ಬಾಂಗ್ಲಾದಲ್ಲಿ ಮತ್ತೊಮ್ಮೆ ದಾಳಿಯ ಪರ್ವ ಆರಂಭಗೊಂಡಂತಿತ್ತು.
`ಏನೂ ಆಗುವುದಿಲ್ಲ.. ಸುಮ್ಮನಿರು. ನಾವು ನಂಬಿದ ದೇವರಿದ್ದಾನೆ.. ತಲೆಬಿಸಿ ಮಾಡ್ಕೋ ಬೇಡ.. ಮನೆಗೆ ಪೋನ್ ಮಾಡಿದ್ಯಾ..?'
`ಹುಂ ಮಾಡಿದ್ದೆ.. ಅಪ್ಪ-ಅಮ್ಮ ತುಂಬ ಭಯಗೊಂಡಿದ್ದಾರೆ. ಯಾವಾಗ ಮನೆಗೆ ಬೆಂಕಿ ಹಚ್ಚುತ್ತಾರೋ, ಮನೆಯೊಳಗಿದ್ದಂತೆ ಧಗಧಗಿಸುವ ಬೆಂಕಿತಮ್ಮನ್ನು ಸುಟ್ಟು ಹಾಕುತ್ತದೋ ಎಂದು ಹೆದರಿಕೆಯಿಂದ ಇದ್ದೇವೆ ಎಂದು ಹೇಳಿದರು. ಯಾಕೋ ತುಂಬ ಸಂಕಟವಾಗುತ್ತಿದೆ. ಏನೂ ಆಗೋದಿಲ್ಲ ಅಲ್ಲವಾ ವಿನೂ..'
`ಖಂಡಿತ ಏನೂ ಆಗೋದಿಲ್ಲ.. ನೋಡು ನಾಳೆ ನಮಗೆ ಪಂದ್ಯವಿಲ್ಲ. ನಾನು ನಿನ್ನ ಜೊತೆಗೆ ಬರುತ್ತೇನೆ. ನಿಮ್ಮ ಮನೆಗೆ ಹೋಗಿ ಬರೋಣ. ಸಾಧ್ಯವಾದರೆ ನಿಮ್ಮ ಮನೆ ಮಂದಿಯನ್ನು ಢಾಕಾಕ್ಕೆ ಕರೆತಂದುಬಿಡೋಣ.. ನಾನೂ ಬೇಕಾದರೆ ನಿಮ್ಮ ಮನೆ ಮಂದಿಯ ಜೊತೆಗೆ ಮಾತಾಡುತ್ತೇನೆ..' ಎಂದ.
ಸಮಾಧಾನ ಪಟ್ಟುಕೊಂಡ ಮಧುಮಿತಾ ಮನೆಗೆ ಮತ್ತೊಮ್ಮೆ ಪೋನಾಯಿಸಿದಳು. ಮನೆಯವರ ಜೊತೆ ಮಾತಾಡಿದ ನಂತರ ವಿನಯಚಂದ್ರನಿಗೆ ಕೊಟ್ಟಳು. ವಿನಯಚಂದ್ರ ಅಳುಕಿನಿಂದಲೇ ಮಾತಾಡಿದ. ಮಾತನಾಡಿದವನು ಬಹುಶಃ ಮಧುಮಿತಾಳ ಅಪ್ಪನಿರಬೇಕು. ವಿನಯಚಂದ್ರ ತನ್ನ ಪರಿಚಯವನ್ನು ಹೇಳಿಕೊಂಡು ಹುಷಾರಾಗಿರುವಂತೆ ಹೇಳಿದ. ಮನೆಯವರು ಬೆಂಕಿಯ ಬಾಣಲೆಯಲ್ಲಿ ಬದುಕುತ್ತಿದ್ದಂತೆ ಅನ್ನಿಸಿತು. ಪೋನಿಟ್ಟು ಮತ್ತೊಮ್ಮೆ ಮಧುಮಿತಾಳನ್ನು ಸಮಾಧಾನ ಮಾಡಿ ರೂಮಿಗೆ ಕಳಿಸುವ ವೇಳೆಗೆ ವಿನಯಚಂದ್ರನಿಗೆ ಹೈರಾಣಾಗಿಬಿಟ್ಟಿತು.
ಮರುದಿನ ಮಧುಮಿತಾಳ ಮನೆಗೆ ಹೋಗಿ ಮನೆ ಮಂದಿಯನ್ನು ಬೇರೆಯ ಕಡೆಗೆ ಕಳಿಸಬೇಕು, ಇಲ್ಲವಾದರೆ ಢಾಕಾಕ್ಕೆ ಕರೆತರಬೇಕು ಎಂದು ಆಲೋಚಿಸಿದ ವಿನಯಚಂದ್ರ ಈ ವಿಷಯವನ್ನು ಜಾಧವ್ ಅವರಿಗೆ ತಿಳಿಸೋಣ ಎಂದುಕೊಂಡು ಅವರ ರೂಮಿನತ್ತ ತೆರಳಿದ. ಅವರಿಗೂ ವಿಷಯವನ್ನು ತಿಳಿಸಿದ. ಮರುದಿನ ಯಾವುದೇ ಪಂದ್ಯಗಳಿರಲಿಲ್ಲ. ವಿನಯಚಂದ್ರನ ಮಾತಿಗೂ ಜಾಧವ್ ಅವರು ಒಪ್ಪಿಗೆ ಸೂಚಿಸಲಿಲ್ಲ. ಮಧುಮಿತಾಳ ಮನೆಗೆ ಹೋಗಿ ಬಾ ಎಂದೂ ಹೇಳಲಿಲ್ಲ. ವಿನಯಚಂದ್ರ ಮತ್ತೊಮ್ಮೆ ಒತ್ತಾಯ ಮಾಡಿದಾಗ ಮಾತ್ರ ತಾನೂ ನಿಮ್ಮ ಜೊತೆಗೆ ಬರುವುದಾಗಿ ತಿಳಿಸಿದರು. ವಿನಯಚಂದ್ರ ಖುಷಿಪಟ್ಟ. ಮರುದಿನ ಮಧುಮಿತಾಳ ಮನೆಗೆ ಹೋಗಲು ತಯಾರಾಗಿದ್ದ.
(ಮುಂದುವರಿಯುತ್ತದೆ..)
No comments:
Post a Comment