Tuesday, November 26, 2024

ಬರಬಳ್ಳಿ ಬಸ್ಸಿನ ಪ್ರಯಾಣದಲ್ಲಿ ಅನಾವರಣಗೊಳ್ಳುತ್ತಿದ್ದ ಅಚ್ಚರಿಯ ಲೋಕ

ನಮ್ಮ ಬಾಲ್ಯವನ್ನು ಹಸಿರಾಗಿ ಇರಿಸಿರುವುದರಲ್ಲಿ ಬರಬಳ್ಳಿಯ ಪಾತ್ರ ಬಹಳ ದೊಡ್ಡದು. ಬರಬಳ್ಳಿಯ ನೆನಪುಗಳು ಈಗಲೂ ಮನಸ್ಸಿನಲ್ಲಿ ನೆನಪಿನ ತರಂಗಗಳನ್ನು ಏಳಿಸುತ್ತಿರುತ್ತವೆ. ರಜಾ ಬಂತೆಂದರೆ ಸಾಕು ನಾನು, ಕಾನಲೆಯಿಂದ ಗಿರೀಶಣ್ಣ, ಗುರಣ್ಣ, ತಂಗಿ ಸುಪರ್ಣರೆಲ್ಲ ಬರಬಳ್ಳಿಗೆ ಓಡುತ್ತಿದ್ದೆವು. ಬೇಸಿಗೆಯ ರಜಾದಲ್ಲಿ ಬರಬಳ್ಳಿಯಲ್ಲಿ ನಮ್ಮ ಪಾರುಪತ್ಯ ನಡೆಯುತ್ತಿತ್ತು. ಇಂತಹ ಬರಬಳ್ಳಿಗೆ ದಿನಕ್ಕೆ ಒಂದೋ ಎರಡೋ ಬಸ್ಸುಗಳು ಹೋಗುತ್ತಿದ್ದವು. ಆ ಬಸ್ಸುಗಳೇ ನಮ್ಮನ್ನು ಬರಬಳ್ಳಿಗೆ ತಲುಪಿಸುತ್ತಿತ್ತು. ಹೀಗೆ
ಬರಬಳ್ಳಿಗೆ ತೆರಳುವ ಬಸ್ಸಿನ ಕಥೆಯನ್ನೇ ನಾನು ನಿಮಗೆ ಹೇಳಲು ಹೊರಟಿದ್ದು.
ಬರಬಳ್ಳಿಗೆ ನನಗೆ ನೆನಪಿರುವ ಹಾಗೆ ಮದ್ಯಾಹ್ನ ೧ ಗಂಟೆಗೆ ಯಲ್ಲಾಪುರದಿಂದ ಒಂದು ಬಸ್ಸು ಹಾಗೂ ಸಂಜೆ ೫ ಗಂಟೆಗೆ ಒಂದು ಬಸ್ಸು ಇತ್ತು. ವಾಪಾಸ್‌ ಬರಬಳ್ಳಿಯಿಂದ ಮುಂಜಾನೆ ೯ ರ ವೇಳೆಗೆ ಬರುವ ಬಸ್ಸು ಹಾಗೂ ಸಂಜೆ ೪ ಗಂಟೆಗೆ ಯಲ್ಲಾಪುರಕ್ಕೆ ತೆರಳುವ ಬಸ್ಸುಗಳಿರುತ್ತಿದ್ದವು. ಕಾಳಿ ನದಿಯ ಕೊಡಸಳ್ಳಿ ಅಣೆಕಟ್ಟು ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳುವ ವೇಳೆಗೆ ಮೂರು ಬಸ್ಸುಗಳು ಆಗಿದ್ದಿರಬಹುದೇನೋ ಎಂಬ ನೆನಪು. ಈ ಬಸ್ಸುಗಳ ಸಮಯವನ್ನೇ ಹುಡುಕಿ ನಾವು ಬರಬಳ್ಳಿಗೆ ಹೋಗುತ್ತಿದ್ದೆವು.
೧೯೯೦ರ ದಶಕದ ಕಥೆಯನ್ನು ನಾನು ಹೇಳಲು ಹೊರಟಿರುವುದು. ಆಗ ಯಲ್ಲಾಪುರದಲ್ಲಿ ಬಸ್‌ ಡಿಪೋ ಇರಲಿಲ್ಲ. ಬರಬಳ್ಳಿ ಇರಲಿ ಅಥವಾ ಯಲ್ಲಾಪುರದ ಗ್ರಾಮೀಣ ಬಸ್ಸುಗಳು ಇರಲಿ ಅವೆಲ್ಲ ಶಿರಸಿಯಿಂದಲೇ ಬರಬೇಕಿತ್ತು. ಶಿರಸಿಯಿಂದ ಬಸ್‌ ಬಂದರಷ್ಟೇ ಯಲ್ಲಾಪುರದ ಗ್ರಾಮೀಣ ಭಾಗಗಳಿಗೆ ಬಸ್‌ ಬಿಡುತ್ತಿದ್ದರು. ಶಿರಸಿಯಿಂದ ಬಸ್‌ ಬಂದಿಲ್ಲ ಎಂದಾದರೆ ಯಲ್ಲಾಪುರದ ಗ್ರಾಮೀಣ ಭಾಗಗಳಿಗೆ ಬಸ್‌ ಕ್ಯಾನ್ಸಲ್‌ ಆಗುತ್ತಿತ್ತು. ಮದ್ಯಾಹ್ನ ೧ ಗಂಟೆಗೆ ಯಲ್ಲಾಪುರದಿಂದ ಬಿಡುವ ಬಸ್ಸೂ ಕೂಡ ಶಿರಸಿಯಿಂದಲೇ ಬರಬೇಕಿತ್ತು. ಇನ್ನೂ ಮಜವಾದ ಸಂಗತಿ ಎಂದಾದರೆ ಶಿರಸಿಯಿಂದ ಯಲ್ಲಾಪುರಕ್ಕೆ ಹಾಗೂ ಅಲ್ಲಿಂದ ಬರಬಳ್ಳಿಗೆ ಬರುವ ಬಸ್‌ ಸಾಗರದಿಂದ ಹೊರಡುತ್ತಿತ್ತು. ಮುಂಚಿನ ದಿನ ರಾತ್ರಿ ವೇಳೆಗೆ ಸಾಗರ ತೆರಳುವ ಬಸ್‌ ಸಾಗರದಲ್ಲಿ ಹಾಲ್ಟ್‌ ಮಾಡಿ, ಮರುದಿನ ಸಾಗರದಿಂದ ಹೊರಟು ನಂತರ ಶಿರಸಿಗೆ ಬಂದು ಅಲ್ಲಿಂದ ಯಲ್ಲಾಪುರಕ್ಕೆ ಬಂದು ಆ ನಂತರ ಬರಬಳ್ಳಿಗೆ ಬರುತ್ತಿತ್ತು.
ಬರಬಳ್ಳಿಗೆ ಹೋಗುವ ಬಸ್‌ ಸಾಗರದಿಂದ ಬರುತ್ತದೆ ಎಂಬ ವಿಷಯವನ್ನು ಹೇಗೋ ತಿಳಿದುಕೊಂಡಿದ್ದ ಅಪ್ಪ, ನನ್ನನ್ನೂ, ನನ್ನ ತಂಗಿಯನ್ನೂ, ಅಮ್ಮನನ್ನೂ ಕಾನಸೂರಿನ ತನಕ ಕರೆದುಕೊಂಡು ಬಂದು ಆ ಬಸ್ಸನ್ನು ಹತ್ತಿಸುತ್ತಿದ್ದರು. ಕೆಲವೊಮ್ಮೆ ಕಾಕತಾಳೀಯವೋ ಎನ್ನುವಂತೆ ಅದೇ ಬಸ್ಸಿನಲ್ಲಿ ಕಾನಲೆಯಿಂದ ಬಂದ ಗಿರೀಶಣ್ಣ, ಗುರಣ್ಣರೂ, ಕಾನಲೆ ದೊಡ್ಡಮ್ಮರೂ ಇರುತ್ತಿದ್ದರು. ಅವರಿಗೆ ಅಮ್ಮ ಮೊದಲೆ ಪತ್ರ ಬರೆದು ಇಂತ ದಿನ ಹೋಗುತ್ತಿದ್ದೇವೆ ಎಂಬ ವಿಷಯ ತಿಳಿಸುತ್ತಿದ್ದಳೋ ಏನೋ? ಗೊತ್ತಿಲ್ಲ. ಆದರೆ ಕಾನಸೂರಿನಲ್ಲಿ ಬಸ್‌ ಹತ್ತುವ ವೇಳೆಗೆ ಗೀರೀಶಣ್ಣ ಬಸ್ಸಿನಲ್ಲಿ ಇದ್ದು ನಮ್ಮನ್ನು ಮಾತನಾಡಿಸುತ್ತಿದ್ದ ಕ್ಷಣಗಳು ಇನ್ನೂ ನೆನಪಿದೆ.
ಕಾನಸೂರಿನಲ್ಲೆಲ್ಲ ರಶ್‌ ಆಗಿರುತ್ತಿದ್ದ ಬಸ್‌ ಶಿರಸಿಯಲ್ಲಿ ಒಮ್ಮೆಗೇ ಖಾಲಿಯಾಗುತ್ತಿತ್ತು. ಶಿರಸಿ ಬಸ್‌ ನಿಲ್ದಾಣದಲ್ಲಿ ಜನವೋ ಜನ. ಅವರೆಲ್ಲ ಕಿಡಕಿಯಿಂದ ಟವೇಲ್‌, ಬ್ಯಾಗ್‌ ಇತ್ಯಾದಿಗಳನ್ನು ತೂರಿಸಿ ಸೀಟ್‌ ಬುಕ್‌ ಮಾಡುವುದರೊಳಗೆ ನಾನು, ಗಿರೀಶಣ್ಣರಾದಿಯಾಗಿ ನಮ್ಮ ಪಟಾಲಂ ಡ್ರೈವರ್‌ ಸೀಟಿನ ಪಕ್ಕದ ಉದ್ದನೆಯ ಸೀಟಿನಲ್ಲಿ ಆಸೀನರಾಗುತ್ತಿದ್ದೆವು.
ಕೆಲವು ಸಂದರ್ಭದಲ್ಲಿ ಬಸ್ಸಿಗೆ ಕ್ಯಾಬಿನ್‌ ಇರುತ್ತಿತ್ತು. ಅಂದರೆ ಈಗಿನಂತೆ ಡ್ರೈವರ್‌ ಪಕ್ಕದಲ್ಲಿ ಉದ್ದನೆಯ ಸೀಟ್‌ (ಈಗಿನ ಬಸ್ಸುಗಳಲ್ಲಿ ಸೀಟ್‌ ನಂಬರ್‌ ೪೬, ೪೭,೪೮) ಇರುತ್ತಿರಲಿಲ್ಲ. ಡ್ರೈವರ್‌ಗಳಿಗೆ ಪ್ರಯಾಣಿಕರು ತೊಂದರೆ ಕೊಡಬಾರದೆಂದು ದೊಡ್ಡ ಕ್ಯಾಬಿನ್‌ ಮಾಡಿ ಜಾಲರಿಯನ್ನು ಹೊಡೆದು ಖಾಲಿ ಬಿಡುತ್ತಿದ್ದರು. ಆ ಕ್ಯಾಬಿನ್‌ ಒಳಗೆ ಒಂದು ಸೀಟ್‌ ಡ್ರೈವರ್‌ ಮಲಗಲು ಅನುಕೂಲವಾಗುವಂತೆ ಇರುತ್ತಿತ್ತು. ಹಳೆಯ ಕಾಲದ ಉದ್ದನೆಯ ಗೇರ್‌ ಬಹುತೇಕ ಕ್ಯಾಬಿನ್‌ ತುಂಬಿಸುತ್ತದೆಯೇನೋ ಎನ್ನಿಸುವಂತಿತ್ತು. ಈ ಗೇರುಗಳನ್ನು ಹಾಕುವಾಗ ಕಿರ್ರೋ ಎನ್ನುವ ಶಬ್ದ ಕಿವಿಗೆ ಬೀಳುತ್ತಿತ್ತು. ಶಿರಸಿಯಲ್ಲಿ ಬಸ್‌ ಖಾಲಿಯಾಗುತ್ತಿದ್ದಂತೆಯೇ ಕ್ಯಾಬಿನ್‌ ಇರುವ ಬಸ್ಸಿನಲ್ಲಿ ನಾವು ಡ್ರೈವರ್‌ ಹಿಂಭಾಗದ ಮೂರು ಜನ ಕೂರುವ ಸೀಟಿನಲ್ಲಿ ವಿರಾಜಮಾನರಾಗುತ್ತಿದ್ದೆವು. ಕ್ಷಣಮಾತ್ರದಲ್ಲಿ ಬಸ್‌ ಭರ್ತಿಯಾದ ಬಸ್‌ ಶಿರಸಿಯಿಂದ ೧೦ ಗಂಟೆಯೋ, ೧೦.೩೦ಕ್ಕೋ ಯಲ್ಲಾಪುರ ಕಡೆಗೆ ಪ್ರಯಾಣ ಬೆಳೆಸುತ್ತಿತ್ತು.
ಬಸ್‌ ಡ್ರೈವರ್‌ ಪಕ್ಕದ ಸೀಟಿನಲ್ಲಿ, ಡ್ರೈವರ್‌ ಹಿಂಭಾಗದಲ್ಲಿ ಕುಳಿತಿರುತ್ತಿದ್ದ ನಮಗಂತೂ ಕಾಣಿಸುವ ದೃಶ್ಯ ವೈಭವಗಳು ಆಹಾ. ಅಂಕುಡೊಂಕಿನ ರಸ್ತೆ, ಡ್ರೈವರ್‌ ಬಸ್‌ ಚಲಾಯಿಸುತ್ತಿದ್ದ ವೈಖರಿಗೆ ತಲೆದೂಗುತ್ತ ಆಗೀಗ ನಮ್ಮ ನಮ್ಮಲ್ಲೆ ಮಾತಾಡಿಕೊಳ್ಳುತ್ತ, ಜಗಳ ಕಾಯುತ್ತ ಸಾಗುತ್ತಿದ್ದೆವು. ತಾರಗೋಡ, ಭೈರುಂಭೆ, ಉಮ್ಮಚಗಿ ದಾಟಿ ಮಂಚೀಕೇರಿ ಬರುವ ತನಕ ನಮ್ಮ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗುತ್ತಿತ್ತು. ಎಷ್ಟು ಸಾಗಿದರೂ ಯಲ್ಲಾಪುರವೇ ಬರುವುದಿಲ್ಲವಲ್ಲ ಎಂದು ಆಗೀಗ ಗೊಣಗುತ್ತ, ಮಧ್ಯ ಮಧ್ಯದಲ್ಲಿ ತೂಕಡಿಸುತ್ತ, ಕಿರು ನಿದ್ದೆ ಮಾಡುತ್ತ ಏಳುತ್ತಿದ್ದೆವು. ಅಮ್ಮ-ದೊಡ್ಡಮ್ಮ ನಿರಾತಂಕವಾಗಿ, ಬಿಡುವಿಲ್ಲದಂತೆ ಮಾತಾಡುತ್ತ ಬರುತ್ತಿದ್ದರು. ʼಇನ್ನೇನು ಮಂಚೀಕೇರಿ ದಾಟಿ ಬೇಡ್ತಿ ಸೇತುವೆ ಬಂತೆಂದರೆ ಧಿಗ್ಗನೆ ಎದ್ದು ಕುಳಿತುಕೊಳ್ಳುತ್ತಿದ್ದೆವು.
ಬೇಡ್ತಿ ನದಿ ಸೇತುವೆ ಅಂದಿನಿಂದ ಇಂದಿನವರೆಗೂ ನಮಗೊಂದು ವಿಸ್ಮಯವೇ. ಅಂಕುಡೊಂಕಿನ ಇಳುಕಲನ್ನು ಹಾದು ಬಂದು ಉದ್ದನೆಯ ಆದರೆ ಅಗಲದಲ್ಲಿ ಸಣ್ಣದಾಗಿರುವ ಈ ಸೇತುವೆಯ ಮೇಲೆ ಬಸ್‌ ಸಾಗುತ್ತಿದ್ದಾಗ ಬೇಡ್ತಿನದಿಯಲ್ಲಿ ನೀರಿದೆಯೇ ಎಂದು ನೋಡುವ ತವಕ ನಮಗೆಲ್ಲ. ಅಘನಾಶಿನಿಯಲ್ಲಿ ಎಂತಹ ಸಮಯದಲ್ಲೂ ನೀರು ಬತ್ತುವುದಿಲ್ಲ ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಮೂಡುತ್ತಿದ್ದಂತೆಯೇ ಪಕ್ಕದಲ್ಲಿದ್ದ ಗಿರೀಶಣ್ಣ ಶರಾವತಿ ನದಿ ಎಷ್ಟು ದೊಡ್ಡ ಗೊತ್ತಾ.. ಅದರಲ್ಲಿ ಅಷ್ಟು ನೀರಿದೆ, ಇಷ್ಟು ನೀರಿದೆ ಎನ್ನುತ್ತಿದ್ದ. ಬೇಡ್ತಿ ಸೇತುವೆಯ ಕೆಳಗೆ ಬತ್ತಿದ ನದಿ, ಖಾಲಿ ಖಾಲಿ ಕಲ್ಲು ಹಾಸು ನಮ್ಮನ್ನು ಎಷ್ಟು ನಿರಾಸೆಗೊಳಿಸುತ್ತಿತ್ತೆಂದರೆ ಛೇ.. ಇದನ್ನು ಯಾರಾದರೂ ನದಿ ಎನ್ನುತ್ತಾರಾ? ನೀರಿಲ್ಲದ ಈ ನದಿಗೆ ಯಾಕಾದರೂ ಸೇತುವೆ ಕಟ್ಟುತ್ತಾರೋ ಎನ್ನಿಸುತ್ತಿತ್ತು. ಮಳೆಗಾಲದಲ್ಲಿ ಬೇಡ್ತಿಯ ಅಬ್ಬರ ನಮಗೇನು ಗೊತ್ತಿತ್ತು ಹೇಳಿ..
ಬೇಡ್ತಿ ನದಿ ದಾಟಿದ್ದೇ ತಡ ನಮಗೆ ಉತ್ಸಾಹ ಬರುತ್ತಿತ್ತು. ಯಾವಾಗ ಉಪಳೇಶ್ವರ ದಾಟಿದೆವೋ ನಾವು ಕೂತಲ್ಲಿ ಕೂರುತ್ತಿರಲಿಲ್ಲ.. ನಿಂತಲ್ಲಿ ನೀಲ್ಲುತ್ತಿರಲಿಲ್ಲ. ಇನ್ನೇನು ಯಲ್ಲಾಪುರ ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ದೊಡ್ಡ ಎಪಿಎಂಸಿ ನಮ್ಮನ್ನು ಚಕಿತಗೊಳಿಸುತ್ತಿತ್ತು. ಬೆಳಿಗ್ಗೆ ತಿಂಡಿ ತಿಂದ ನಂತರ ನಾವೇನೂ ತಿಂದಿಲ್ಲ ಎನ್ನುವುದು ನೆನಪಾಗುತ್ತಿದ್ದಂತೆ ಹಸಿವೂ ಕಾಡುತ್ತಿತ್ತು. ಇನ್ನೇನು ಯಲ್ಲಾಪುರ ಬಂದೇ ಬಿಡ್ತಲ್ಲ.. ಅಜಮಾಸು ೧೨ ಗಂಟೆಯೋ ಹನ್ನೆರಡೂ ಕಾಲೋ ಆಗಿರುತ್ತಿತ್ತು. ಮತ್ತೊಮ್ಮೆ ಯಲ್ಲಾಪುರದಲ್ಲಿ ಬಸ್‌ ಖಾಲಿ ಖಾಲಿ.. ಆದರೆ ಬಸ್‌ನಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನರು ಯಲ್ಲಾಪುರದಲ್ಲಿ ಕಾಯುತ್ತಿರುತ್ತಾರೆ ಎನ್ನುವುದು ನಮಗೆ ಅಲ್ಲಿಗೆ ಹೋದ ನಂತರವೇ ಗೊತ್ತಾಗುತ್ತಿದ್ದುದು.
ರಶ್ಶಿನ ನಡುವೆ ಸೀಟಿನಲ್ಲಿ ಬ್ಯಾಗ್..‌ ಕರ್ಚೀಫ್‌ ಟವೇಲ್‌ ಎಲ್ಲ ಇಟ್ಟು ನಾವು ಬಸ್ಸಿನಿಂದ ಇಳಿಯುತ್ತಿದ್ದೆವು. ಅಲ್ಲಿರುವ ಬಸ್‌ ಸ್ಟ್ಯಾಂಡಿನ ಕ್ಯಾಂಟೀನಿನಲ್ಲಿ ಇಡ್ಲಿಯೋ, ಬನ್‌ ತಿಂದು ಕಷಾಯ ಕುಡಿದರೆ ನಮ್ಮ ಹೊಟ್ಟೆ ತಂಪಾಗುತ್ತಿತ್ತು. ಮತ್ತೆ ರಶ್‌ ಇರುವ ಬಸ್ಸಿನಲ್ಲಿ ಒದ್ದಾಡಿ ಗುದ್ದಾಡಿ ನಮ್ಮ ಸೀಟ್‌ ಇರುವ ಜಾಗಕ್ಕೆ ಬರುವ ವೇಳೆಗೆ ಉಸ್ಸಪ್ಪಾ ಎನ್ನಿಸುತ್ತಿತ್ತು.
ಅಪ್ಪನ ಜತೆ ಬರಬಳ್ಳಿಗೆ ಹೋಗುವಾಗ ಹೀಗೆ ಆಗುತ್ತಿರಲಿಲ್ಲ. ಯಾವು ಯಾವುದೋ ಬಸ್‌, ಟೆಂಪೋಗಳ ಮೂಲಕ ಯಲ್ಲಾಪುರಕ್ಕೆ ಅಪ್ಪ ನಮ್ಮನ್ನು ಕರೆದುಕೊಂಡು ಬರುತ್ತಿದ್ದ. ಯಲ್ಲಾಪುರದಲ್ಲಿ ಬರಬಳ್ಳಿ ಬಸ್‌ ಈಗ ಬರುತ್ತೆ, ಆಗ ಬರುತ್ತೆ ಎಂದು ನಾವು ಕಾಯುತ್ತ ಹೈರಾಣಾಗುತ್ತಿದ್ದೆವು. ಒಂದು ವೇಳೆ ಬರಬಳ್ಳಿಗೆ ಹೋಗುವ ಬಸ್‌ ಯಲ್ಲಾಪುರ ನಿಲ್ದಾಣಕ್ಕೆ ಬಂದೇ ಬಿಟ್ಟಿತು ಅಂದ್ಕೊಳ್ಳಿ ಮೊದಲು ಸೀಟ್‌ ಹಿಡಿಯುವುದಕ್ಕೆ ಓಡುತ್ತಿದ್ದೆವು. ಆಗ ನನ್ನ ತಂಗಿ ಪುಟ್ಟ (ಐದು ವರ್ಷ) ಇದ್ದಳೇನೋ. ಅಪ್ಪ ಆಕೆಯನ್ನು ಬಸ್ಸಿನ ಗ್ಲಾಸ್‌ ತೆಗೆದು ಕಿಟಕಿ ಮೂಲಕ ಒಳಕ್ಕೆ ಕಳಿಸುತ್ತಿದ್ದ. ಆಕೆ ಸೀಟ್‌ ಹಿಡಿದುಕೊಳ್ಳುತ್ತಿದ್ದಳು.
******
ನಲವತ್ತು ಜನ ಹಿಡಿಯುವ ಯಲ್ಲಾಪುರ-ದೇಹಳ್ಳಿ-ಬರಬಳ್ಳಿ ಬಸ್ಸಿನಲ್ಲಿ ಕನಿಷ್ಟವೆಂದರೂ ಅರವತ್ತು ಜನರು ತುಂಬಿರುತ್ತಿದ್ದರು. ಉಸಿರಾಡಲೂ ಜಾಗವಿಲ್ಲವೇನೋ ಎಂಬಂತಾಗುತ್ತಿತ್ತು. ಇನ್ನೂ ಎಷ್ಟು ಹೊತ್ತಿಗೆ ಬಸ್‌ ಹೊರಡುತ್ತೆ? ಎಂಬ ಕಾತುರ, ರೇಜಿಗೆ ಎಲ್ಲ ಓಟ್ಟೊಟ್ಟಿಗೆ ಆಗುತ್ತಿತ್ತು. ಅಮ್ಮ-ದೊಡ್ಡಮ್ಮನಿಗಂತೂ ಬರಬಳ್ಳಿಯ ನೆಂಟರು, ಸಂಬಂಧಿಕರ ಬಳಗವೇ ಬಸ್ಸಿನಲ್ಲಿ ಸಿಕ್ಕು ಉಭಯಕುಶಲೋಪರಿಗಳು ಬಿಡುವಿಲ್ಲದಂತೆ ನಡೆಯುತ್ತಿದ್ದವು. ಬಸ್ಸಿನಲ್ಲಿ ಸಿಗುವ ಗುಡ್ಡೆ ನರಸಿಂಹಣ್ಣ, ಬಾರೆ ಶಿವರಾಮ ಭಾವ, ಗುಡ್ಡೆಮನೆಯ ವಿಶ್ವೇಶ್ವರ (ಮಾವ), ಜಪದಮನೆ ಡಾಕ್ಟರು, ಡಿ ಎನ್.‌ ಗಾಂವ್ಕಾರ್‌, ಪಾಟೀಲ ರಾಮಣ್ಣ ಹೀಗೆ ಇನ್ನೂ ಹಲವರು ಬಸ್ಸಿನಲ್ಲಿ ಸಿಕ್ಕಿ ʻಅರೇ ಗಂಗೂ.. ಯಾವಾಗ ಬೈಂದೆ.. ಉದಿಯಪ್ಪಾಗ ಮನಿಂದ ಹೊರಟಿದ್ಯ..ʼ ಎಂದು ಕೇಳುವಾಗ ನಮಗಂತೂ ಬಸ್ಸಿನ ತುಂಬೆಲ್ಲ ನಮ್ಮವರೇ ಇದ್ದಾರಲ್ಲ ಎನ್ನಿಸುತ್ತಿತ್ತು. ಯಲ್ಲಾಪುರದಿಂದ ಬಿಸಗೋಡ, ದೇಹಳ್ಳಿ, ಕಟ್ಟಿಗೆ, ಸಾತೊಡ್ಡಿ ಮಾರ್ಗವಾಗಿ ಬರಬಳ್ಳಿಗೆ ತೆರಳುವ ಬಸ್‌ ಸಂಖ್ಯೆ. **** ಎಂದರೆ ಮೈಕಿನಲ್ಲಿ ಹೇಳುತ್ತಿದ್ದಂತೆ ಇನ್ನೇನು ಬಸ್‌ ಹೊರಡುತ್ತದೆ ಎನ್ನುವ ಸಮಾಧಾನ ನಮಗೆ. ಅಷ್ಟೆರಲ್ಲಿ ಒಬ್ಬ ಕುಳ್ಳನೆಯ ಆದರೆ ಸದೃಢ ಗಾತ್ರದ ವ್ಯಕ್ತಿ ಐಸ್‌ ಕ್ಯಾಂಡಿ ಗಾಡಿಯನ್ನು ತಳ್ಳಿಕೊಂಡು ಬರುತ್ತಿದ್ದ. ಅದನ್ನು ಕೊಡಿಸೆಂದು ನಾವು ಹರಪೆ ಮಾಡುತ್ತಿದ್ದೆವು. ನಮ್ಮ ಹಟಕ್ಕೆ ಮಣಿದು ಕೊನೆಗೂ ಐಸ್ಕ್ರೀಂ ಕೊಡಿಸುತ್ತಿದ್ದರು.
ಸುಡುಬಿಸಿಲಿನ ಮದ್ಯಾಹ್ನದ ಒಂದು ಗಂಟೆ ಸಮಯವನ್ನು ಮೀರುವ ವೇಳೆಗೆ ಬಸ್‌ ಡ್ರೈವರ್‌ ಬಸ್ಸಿಗೆ ಹತ್ತಿಕೊಂಡು ಎರಡು ಸಾರಿ ಹಾರನ್‌ ಭಾರಿಸಿ ನಾವು ಹೊರಡುತ್ತಿದ್ದೇವೆ, ಎಲ್ಲರೂ ಹತ್ತಿಕೊಳ್ಳಿ ಎಂದು ಸಾರುತ್ತಿದ್ದಂತೆಯೇ ಎಲ್ಲರೂ ಓಡಿ ಬಂದು ಬಸ್‌ ಏರುತ್ತಿದ್ದರು. ಬಸ್ಸಿನ ತುಂಬೆಲ್ಲ ನಮ್ಮ ನೆಂಟರ ಬಲಗವೇ ಇರುತ್ತಿದ್ದುದರಿಂದ ನಮ್ಮ ಟಿಕೆಟನ್ನು ಯಾರು ತೆಗೆಸಿದರೋ.. ಕಂಡಕ್ಟರ್‌ ಬಳಿ ಅಮ್ಮ-ದೊಡ್ಡಮ್ಮ ಹಣ ಕೊಡಲು ಹೋದಾಗ ನಿಮ್ಮ ಟಿಕೆಟ್‌ ಮಾಡಿ ಆಗಿದೆ ಎನ್ನುತ್ತಿದ್ದರು. ಅಮ್ಮ-ದೊಡ್ಡಮ್ಮ ಬಸ್ಸಿನಲ್ಲಿ ಹಿಂದೆ ತಿರುಗಿ ನೋಡಿದರೆ ಯಾವುದೋ ನೆಂಟರು ತಲೆಯಾಡಿಸಿ, ಸನ್ನೆ ಮಾಡುತ್ತಿದ್ದರು.
ಯಲ್ಲಾಪುರದಲ್ಲಿ ಇನ್ನೂ ಹೈವೆ ಆಗಿರದ ಸಮಯ ಅದು. ವಾಹನಗಳೆಲ್ಲ ಈಗಿನ ಸಂತೆ ಜಅದ ಮೂಲ ಬಸ್‌ ನಿಲ್ದಾಣದ ಬಳಿ ಬಂದೇ ಸಾಗುತ್ತಿತ್ತು. ಯಲ್ಲಾಪುರ ನಿಲ್ದಾಣದಿಂದ ನಿಧಾನವಾಗಿ ಹೊರಡುವ ಬಸ್‌ ಕಿರು ರಸ್ತೆಯಲ್ಲಿ ಸಾಗಿ ಮುಂದಡಿ ಇಡುತ್ತಿದ್ದಂತೆಯೆ ಅಗೋ ಜೋಡುಕೆರೆ, ಅಲ್ಲಿ ನೋಡು ಹೋಲಿ ರೋಜರಿ ಹೈಸ್ಕೂಲು.. ಆ ಹೈಸ್ಕೂಲಿಗೆ ಕಟ್ಟಿಕೊಂಡ ಜೇನು ನೋಡು.. ಅರೆರೆ ಸಾತೊಡ್ಡಿ ಜೋಗಕ್ಕೆ ಎಷ್ಟು ದೊಡ್ಡ ಬೋರ್ಡ್‌ ಹಾಕಿದ್ದಾರಲ್ಲ.. ಎಂಬ ಮಾತುಗಳೊಡನೆ ಬಸ್ಸಿನೊಳಗಿದ್ದ ನಾವು ಮುಂದಕ್ಕೆ ಸಾಗುತ್ತಿದ್ದೆವು. ಬಸ್‌ ಹುಬ್ಬಳ್ಳಿ ರಸ್ತೆಯಿಂದ ತಿರುಗಿ ಬಿಸಗೋಡ್‌ ರಸ್ತೆ ಹಿಡಿಯುವ ವೇಳೆಗಾಗಲೇ ಪಕ್ಕದಲ್ಲಿದ್ದ ಗಿರೀಶಣ್ಣ ʻಸಾತೋಡ್ಡಿಗೆ ಯಾಕೆ ಸಾತೊಡ್ಡಿ ಜೋಗ ಅಂತ ಹಾಕಿದ್ದಾರೆ. ಅದು ಸಾತೊಡ್ಡಿ ಜಲಪಾತ ಅಲ್ಲವಾ? ಜೋಗ ಅಂದ್ರೆ ಜೋಗ ಜಲಪಾತ ಮಾತ್ರ.. ಯಲ್ಲಾಪುರದವರು ಎಲ್ಲ ಜಲಪಾತಗಳಿಗೂ ಜೋಗ ಎನ್ನುತ್ತಾರೆ.. ಆದರೆ ಜಲಪಾತ ಅಂತ ಕರೀಬೇಕಲ್ಲವಾ..ʼ ಎಂಬ ತರ್ಕವನ್ನು ನಮ್ಮೆದುರು ಹೂಡುತ್ತಿದ್ದ. ಹೌದಿರಬಹುದು ಎಂದುಕೊಂಡು ನಾವು ಸುಮ್ಮನಾಗುತ್ತಿದ್ದೆವು. ಆದರೆ ಈಗ ಗೊತ್ತಾಗಿದ್ದೆಂದರೆ ಸಾತೊಡ್ಡಿ ಜಲಪಾತಕ್ಕೆ ಮಿನಿ ಜೋಗಜಲಪಾತ ಎಂಬ ಹೆಸರಿದೆ ಎನ್ನುವುದು. ಬಿಡಿ ಆಗ ಗೊತ್ತಿದ್ದಿದ್ದರೆ ಗಿರೀಶಣ್ಣನ ಎದುರು ವಾದ ಮಾಡಬಹುದಿತ್ತು!
ಫುಲ್‌ ಪ್ಯಾಕ್‌ ಆಗಿದ್ದ ಬಸ್‌ ಅದ್ಯಾವುದೋ ದೇವಸ್ಥಾನವನ್ನು ದಾಟಿ ಕಾರೆಮನೆ ಕ್ರಾಸ್‌ ದಾಟಿ ಮುಂದಕ್ಕೆ ಹೊರಟಿತು. ಅಲ್ಲೆಲ್ಲೋ ಬಸ್‌ ಬರಬಳ್ಳಿಗೆ ಹೋಗುವ ರಸ್ತೆ ಬಿಟ್ಟು ಪಕ್ಕಕ್ಕೆ ಹೊರಳಿಕೊಂಡಾಗ ನಮ್ಮ ಮನದಲ್ಲೇನೋ ಗಾಬರಿ. ಅರೆ ಇದೆಲ್ಲೋ ಬೇರೆ ಕಡೆ ಹೊರಟಿತಲ್ಲ! ಆ ಬಸ್‌ ಸೀದಾ ಬಿಸಗೋಡ್‌ಗೆ ಹೋಗುತ್ತಿತ್ತು. ಅಲ್ಲಿ ಆಗ ದೊಡ್ಡ ಮ್ಯಾಂಗನಿಸ್‌ ಗಣಿ ಇತ್ತು. ಅಲ್ಲಿ ರಾಜ್ಯದ, ಹೊರ ರಾಜ್ಯದ ಕಾರ್ಮಿಕರೆಲ್ಲ ಕೆಲಸ ಮಾಡುತ್ತಿದ್ದರು. ಅಲ್ಲಿ ತೆಗೆದ ಮ್ಯಾಂಗನಿಸ್‌ ಅದಿರನ್ನು ಬೇರೆ ದೇಶಕ್ಕೆಲ್ಲ ರಫ್ತು ಮಾಡುತ್ತಿದ್ದರಂತೆ. ಬೀಸಗೋಡಿಗೆ ಹೋಗಿ ಅಲ್ಲೊಂದು ಸರ್ಕಲ್‌ನಲ್ಲಿ ಸುತ್ತು ಹಾಕಿ ನಿಲ್ಲುತ್ತಿತ್ತು. ಅರ್ಧಕ್ಕರ್ಧ ಬಸ್‌ ಖಾಲಿಯಾಗುತ್ತಿದ್ದಂತೆ ಮರಳಿ ನಾಲ್ಕೈದು ಕಿಲೋಮೀಟರ್‌ ಸಾಗಿ ಬರಬಳ್ಳಿಗೆ ತೆರಳುವ ಮಾರ್ಗ ಹಿಡಿಯುತ್ತಿತ್ತು. ನಮ್ಮ ಜಿವಾದ ಪ್ರಯಾಣ ಈಗ ಶುರುವಾಗುತ್ತಿತ್ತು.
ಬೀಸಗೋಡ್‌ ಕ್ರಾಸಿನಿಂದ ಬರಬಳ್ಳಿಗೆ ೧೮ ಕಿಲೋಮೀಟರ್.‌ ರಸ್ತೆಯಂತೂ ಅಬ್ಬಬ್ಬಾ ದೇವರೆ.. ಎನ್ನುವಂತಿತ್ತು. ಎರಡು ಗಂಟೆಯಿರಬೇಕು ಆನಗೋಡ್‌ ದಾಟಿ ಬಸ್‌ ದೇಹಳ್ಳಿ ತಲುಪಿದ ತಕ್ಷಣ ಡ್ರೈವರ್‌ ಬಸ್‌ ಇಳಿದು ನಾಪತ್ತೆಯಾಗುತ್ತಿದ್ದ. ಕಂಡಕ್ಟರ್‌ ʻಹತ್‌ ನಿಮಿಷ ಟೈಮಿದೆ.. ಹೊಟ್ಟೆಗೆ ಹಾಕೋರು ಹಾಕ್ಕೋಳ್ಳಿ..ʼ ಎನ್ನುತ್ತಿದ್ದ. ಮದ್ಯಾಹ್ನದ ಬಸ್‌ ಅಲ್ವಾ.. ಡ್ರೈವರ್‌ ದೇಹಳ್ಳಿಯಲ್ಲಿ ಊಟಕ್ಕೆ ಹೋಗುತ್ತಿದ್ದ. ದೇಹಳ್ಳಿಯಲ್ಲಿ ಕೆಲವರು ಹೊಟೆಲ್‌ಗೆ ಹೋದರೂ ನಾವು ಬಸ್ಸಿನಲ್ಲೇ ಕುಳಿತಿರುತ್ತಿದ್ದೆವು. ಅದೇ ವೇಳೆಗೆ ಬಳಗಾರದಿಂದ ಬರುವ ಇನ್ನೊಂದು ಬಸ್‌ ನಮಗೆ ಸಿಕ್ಕು, ಆ ಬಸ್ಸಿನ ಡ್ರೈವರ್‌ ಕೂಡ ಊಟಕ್ಕೆ ಇಳಿದು ಹೋಗುವ ಕಾರ್ಯವೂ ನಡೆಯುತ್ತಿತ್ತು.
ಹದಿನೈದೋ-ಇಪ್ಪತ್ತೋ ನಿಮಿಷದಲ್ಲಿ ಊಟ ಮುಗಿಸುತ್ತಿದ್ದ ಡ್ರೈವರ್‌ ಬಸ್ಸನ್ನು ಏರಿ ಮತ್ತೆ ಹಾರನ್‌ ಭಾರಿಸುತ್ತಿದ್ದ. ಎಲ್ಲರೂ ಬಸ್‌ ಏರಿ ಬಸ್‌ ಹೊರಡುತ್ತಿತ್ತು. ಅಲ್ಲಿಂದ ಶುರು ನೋಡಿ ದೊಡ್ಡ ಈಳಿಜಾರು ರಸ್ತೆ. ಕೆಲವು ಕಿಲೋಮೀಟರ್‌ ಅಂತರದಲ್ಲಿ ಗಣೇಶಗುಡಿ ಎಂಬ ಊರು ಸಿಗುತ್ತಿತ್ತು. ಇಲ್ಲೊಂದು ಗಣೇಶನ ದೇವಸ್ಥಾನ ಇರುವ ಕಾರಣ ಗಣೇಶಗುಡಿ ಎಂದೇ ಹೆಸರಾದ ಊರು ಅದು. ಆಗ ಗಣೇಶಗುಡಿಯ ತನಕ ಟಾರು ರಸ್ತೆ ಇತ್ತು. ಅಲ್ಲಿಂದ ಮುಂದೆ ಸಂಪೂರ್ಣ ಖಡಿ ರಸ್ತೆ. ಗಣೇಶಗುಡಿಯ ತನಕ ಮಳೆಗಾಲದಲ್ಲೂ ಬಸ್‌ ಬರುತ್ತಿತ್ತು. ಆ ನಂತರ ಏನಿದ್ದರೂ ಡ್ರೈವರ್‌ ಮರ್ಜಿ. ಡ್ರೈವರ್‌ ಗೆ ಮನಸ್ಸಿರದಿದ್ದರೆ ಗಣೇಶಗುಡಿಯಲ್ಲಿಯೇ ಬಸ್‌ ವಾಪಾಸದರೂ ಆಗಬಹುದಿತ್ತು. ಕೆಲವೊಮ್ಮೆ ಪ್ರಯಾಣಿಕರೆಲ್ಲ ಡ್ರೈವರ್‌ ಬಳಿ ಕಾಡಿ ಬೇಡಿ ದಮ್ಮಯ್ಯ ದಾತಾರ ಹಾಕಿ ಬಸ್ಸನ್ನು ಮುಂದೆ ಬಿಡಿಸಿಕೊಂಡು ಹೋಗಿರುವ ಸಂದರ್ಭಗಳೂ ಇತ್ತು. ನಮ್ಮ ಪುಣ್ಯಕ್ಕೆ ಬಸ್‌ ಗಣೇಶಗುಡಿಯಲ್ಲಿ ವಾಪಾಸ್‌ ಯಾವತ್ತೂ ಆಗಿರಲಿಲ್ಲ.
ಮೊದಲೇ ನಿಧಾನಗತಿಯಲ್ಲಿದ್ದ ಬಸ್‌ ಕಚ್ಚಾ ರಸ್ತೆ ಶುರುವಾದ ಕೂಡಲೇ ಇನ್ನಷ್ಟು ನಿಧಾನವಾಗುತ್ತಿತ್ತು. ಕಟ್ಟಿಗೆ ಊರಿಗೆ ಬರುವ ವೇಳೆಗೆ ಅದೆಷ್ಟು ಸ್ಲೋ ಎಂದರೆ ಗಂಟೆಗೆ ಕನಿಷ್ಟ ಎಂಟು ಕಿಲೋಮೀಟರ್‌ ಇರಬಹುದೇನೋ ಅನ್ನಿಸುತ್ತಿತ್ತು. ಅದೆಷ್ಟು ಕರ್ವಿಂಗುಗಳು.. ಅದೆಷ್ಟು ಭಯಾನಕ ಇಳಿಜಾರು.. ರಸ್ತೆ ಪಕ್ಕದಲ್ಲಿ ಅಲ್ಲೆಲ್ಲೋ ಕಾಣುತ್ತಿದ್ದ ದೈತ್ಯ ಬಂಡೆಗಲ್ಲು.. ಈ ಕಲ್ಲು ಈಗ ಬಿದ್ದರೆ ಏನ್‌ ಮಾಡೋದು,, ಈ ಮರ ಈಗ ಬಿದ್ದರೆ ಏನಾಗಬಹುದು... ಹೀಗೆ ನಾನಾ ಆಲೋಚನೆಗಳು.. ಉರಿಬಿಸಿಲಾದರೂ ದಟ್ಟ ಮರಗಳ ಕಾರಣ ಸೂರ್ಯನ ಕಿರಣಗಳು ಭೂಮಿಗೆ ಆಗೊಮ್ಮೆ ಈಗೊಮ್ಮೆ ಬೀಳುತ್ತಿದ್ದವು. ಅಲ್ಲೆಲ್ಲೋ ಶಿವಪುರ ಎಂಬ ಬೋರ್ಡನ್ನು ಕಂಡೆವು. ಅರೇ ಶಿವಪುರ ಬೋರ್ಡಿನ ಮೇಲೊಂದು ಶಿವಲಿಂಗದ ಚಿತ್ರ ಬಿಡಿಸಿದ್ದಾರಲ್ಲ! ಎಂಬ ಅಚ್ಚರಿ.. ʻಅಮ್ಮ ಶಿವಪುರ ಎಲ್ಲಿ..ʼ ಎಂದು ಕೇಳಿದರೆ ʻಮಗಾ ಅದು ಕಾಳಿ ನದಿಯ ಆಚೆ ದಡದಲ್ಲಿದೆ.. ಅಲ್ಲಿಗೆ ಹೋಗೋದು ಕಷ್ಟ.. ದೋಣಿ ದಾಟಿ ಹೋಗಬೇಕು..ʼ ಎಂಬ ಉತ್ತರ ಅಮ್ಮನಿಂದ ಬರುತ್ತಿತ್ತು.
ಘಟ್ಟವನ್ನು ಇಳಿದಂತೆಲ್ಲ ಬಸ್‌ ಡ್ರೈವರ್‌ ಅಕ್ಕಪಕ್ಕದ ದೊಡ್ಡ ದೊಡ್ಡ ಮರಗಳು ಉರುಳಿ ಬಿದ್ದುದನ್ನು ನೋಡಿ ʻಎಂತ ನಾಟಾ ಬಿದ್ದಿದೆ ಮಾರಾಯಾ.. ವಾಪಾಸ್‌ ಬರುವಾಗ ಬಸ್ಸಲ್ಲಿ ಹಾಕ್ಕೊಂಡು ಹೋಗ್ವಾ..?ʼ ಎಂದು ಕಂಡಕ್ಟರ್‌ ಬಳಿ ತಮಾಷೆಯಿಂದ ಹೇಳುತ್ತಿದ್ದ. ಕೆಲವು ಸಾರಿ ಅತಿಯಾದ ಸೆಖೆಯ ಕಾರಣ ಬಸ್‌ ಡ್ರೈವರ್‌ ತನ್ನ ಮೇಲಂಗಿ ಕಳಚಿ ಬನಿಯನ್‌ ಹಾಕಿಕೊಂಡೇ ವಾಹನ ಚಾಲನೆ ಮಾಡಿದ್ದೂ ಇದೆ.
ಅಂತೂ ಇಂತೂ ಸಾತೊಡ್ಡಿಗೆ ಬಸ್‌ ಬರುವ ವೇಳೆಗೆ ಮೂರೂವರೆ-ಮೂರು ಮುಕ್ಕಾಲು ದಾಟುತ್ತಿತ್ತು. ಬೇಸಿಗೆಯ ಕೆಲವು ತಿಂಗಳುಗಳನ್ನು ಬಿಟ್ಟರೆ ಉಳಿದ ಹೆಚ್ಚಿನ ತಿಂಗಳುಗಳು ಸಾತೊಡ್ಡಿಯ ತನಕ ಮಾತ್ರ ಬಸ್‌ ಬರುತ್ತಿತ್ತು. ಆ ಸಂಮಯದಲ್ಲೆಲ್ಲ ಯಲ್ಲಾಪುರ-ಸಾತೊಡ್ಡಿ-ಯಲ್ಲಾಪುರ ಎಂಬ ಹೆಸರಿನೊಂದಿಗೆ ಬಸ್‌ ಓಡಾಟ ಮಾಡುತ್ತಿತ್ತು. ಸಾತೊಡ್ಡಿಯ ತನಕ ಬಸ್‌ ಹೋಗುತ್ತಿದ್ದ ಸಂದರ್ಭದಲ್ಲಿ ಅಲ್ಲಿಂದ ಬರಬಳ್ಳೀಯ ತನಕ ನಮಗೆಲ್ಲ ಕಾಲ್ನಡಿಗೆ ಅನಿವಾರ್ಯವಾಗಿತ್ತು. ಬಿಸಿಲಿನಿಂದ ಕಾದು ಬಿಸಿಯಾದ ಉಸುಕು ಮಣ್ಣಿನಿಂದ ಒಡಗೂಡಿದ ರಸ್ತೆಯಲ್ಲಿ ಕನಿಷ್ಟ ೨-೩ ಕಿಲೋಮೀಟರ್‌ ನಡೆದು ಬರಬಳ್ಳಿಗೆ ತಲುಪಬೇಕಿತ್ತು. ಹೆಜ್ಜೆ ಇಟ್ಟರೆ ಪಾದ ಮುಚ್ಚುವಷ್ಟು ಧೂಳಿನ ರಸ್ತೆ. ಸಾತೊಡ್ಡಿಯಿಂದ ಕೆಲವೆ ಮಾರು ದೂರದಲ್ಲಿ ಸಾತೊಡ್ಡಿ ಜಲಪಾತದ ಹಳ್ಳಕ್ಕೆ ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಲಾಗುತ್ತಿತ್ತು. ಈ ಸೇತುವೆ ನಿರ್ಮಾಣವಾದಾಗ ಬಸ್‌ ಬರಬಳ್ಳಿ ತಲುಪುತ್ತಿತ್ತು. ಇಲ್ಲವಾದಲ್ಲಿ ಸಾತೊಡ್ಡಿಯಲ್ಲೇ ಬಸ್‌ ವಾಪಾಸಾಗುತ್ತಿತ್ತು. ಈ ಹಳ್ಳಬನ್ನು ದಾಟಿ ರಸ್ತೆ ಪಕ್ಕ ಕೊಂಚ ದೂರದಲ್ಲಿ ಹರಿಯುತ್ತಿದ್ದ ಕಪ್ಪು ಬಣ್ಣದ ಕಾಳಿ ನದಿಯನ್ನು ನೋಡುತ್ತ, ಇನ್ನೊಂದು ಕಡೆ ದೈತ್ಯ ಬಂಡೆಗಲ್ಲುಗಳ ಬೆಟ್ಟವನ್ನು ಕಣ್ತುಂಬಿಕೊಳ್ಳುತ್ತ ನಾವು ಹೋಗುತ್ತಿದ್ದೆವು. ಅಲ್ಲೆಲ್ಲೋ ಒಂದು ಕಡೆ ಬಾರೆ ಶಿವರಾಮ ಭಾವನ ಮನೆ ಇತ್ತು. ಅಲ್ಲೊಂದು ಕಡೆ ರಸ್ತೆ ಕೊಡಸಳ್ಳಿ ಕಡೆಗೆ ಕವಲಾಗುತ್ತಿತ್ತು. ದಟ್ಟ ಬೇಸಿಗೆಯಲ್ಲಿ ಬರಬಳ್ಳಿ ಬಸ್‌ ಮುಂದಕ್ಕೆ ಕೊಡಸಳ್ಳಿ ತನಕವೂ ಹೋಗಿ ಬರುತ್ತಿತ್ತೆನ್ನಿ.
ಬಾರೆ ಶಿವರಾಮ ಭಾವನ ಮನೆ ನಂತರ ಒಂದು ಕಿರುಹಳ್ಳ ಇದ್ದು ಅದನ್ನು ದಾಟುವ ಬಸ್‌ ತೋಟದ ಪಕ್ಕದಲ್ಲಿನ ಕಚ್ಚಾ ರಸ್ತೆಯಲ್ಲಿ ಏದುಸಿರು ಬಿಡುತ್ತ ಬರಬಳ್ಳಿ ಬಲಮುರಿ ಗಣಪತಿ ದೇವಸ್ಥಾನದ ಅಂಗಳಕ್ಕೆ ಬಂದು ನಿಲ್ಲುವ ಹೊತ್ತಿಗೆ ನಮಗಂತೂ ಸ್ವರ್ಗ ಕೈಗೆ ಸಿಕ್ಕ ಅನುಭವ. ಸ್ಥಳೀಯರ ಪಾಲಿಗೆ ಮೊಠ ಎಂದು ಕರೆಸಿಕೊಂಡ ದೇವಸ್ಥಾನದ ಬಳಿ ಡ್ರೈವರ್‌ ಇಳಿದು ಕೆಲಕಾಲ ವಿಶ್ರಮಿಸಿ, ಸ್ಥಳೀಯರೊಂದಿಗೆ ಹರಟೆ ಹೊಡೆದು ನಂತರ ಗಣಪತಿ ದೇವಸ್ಥಾನಕ್ಕೆ ತೆರಳಿ ಗಂಟೆ ಹೊಡೆದು ನಮಿಸಿ ವಾಪಾಸ್‌ ಯಲ್ಲಾಪುರ ಕಡೆಗೆ ತೆರಳುತ್ತಿದ್ದ.
ಯಲ್ಲಾಪುರ ಪಟ್ಟಣದಿಂದ ೩೧-೩೩ ಕಿಲೋಮೀಟರ್‌ ದೂರದ ಬರಬಳ್ಳಿಗೆ ಬಂದು ಹೋಗುತ್ತಿದ್ದ ಈ ಬಸ್‌ ಬಹಳಷ್ಟು ಜನರ ಪಾಲಿಗೆ ಅನಿವಾರ್ಯ ಸಂಪರ್ಕ ಸೇತು ಆಗಿತ್ತು. ಹೊರ ಜಗತ್ತಿನ ಜೊತೆಗೆ ಸಂಪರ್ಕ ಕಲ್ಪಿಸುತ್ತಿದ್ದ ಏಕೈಕ ಸಾಧನ ಎನ್ನಿಸಿಕೊಂಡಿತ್ತು. ಒಮ್ಮೆಯಂತೂ ಬರಬಳ್ಳಿಯಲ್ಲಿನ ಮಹಿಳೆಯೊಬ್ಬರಿಗೆ ಹೆರಿಗೆ ಅವಧಿ ಮೀರಿ, ಅನಿವಾರ್ಯವಾಗಿ ಆಸ್ಪತ್ರೆಗೆ ಹೋಗಬೇಕಾದ ಸಂದರ್ಭದಲ್ಲಿ ಆ ಮನೆಯ ನಿವಾಸಿಗಳು ಮಧ್ಯರಾತ್ರಿ ಡ್ರೈವರನ್ನು ಎಬ್ಬಿಸಿ ಬಸ್ಸಿನಲಿ ಕೂರುವಷ್ಟು ಜನರ ದುಡ್ಡನ್ನು ಕಟ್ಟಿ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಕುರಿತು ಹಿರಿಯರಿಂದ ನಾನು ಕೇಳಿದ್ದೇನೆ.
ಒಮ್ಮೊಮ್ಮೆ ಮುರಲಿ, ಇನ್ನೊಮ್ಮೆ ರಾಘವೇಂದ್ರ ಮುಂತಾದ ಹೆಸರಿನ ಡ್ರೈವರುಗಳು ಬರಬಳ್ಳಿಗೆ ಬರುತ್ತಿದ್ದರು. ಹೆಚ್ಚಿನವರು ಬಯಲು ಸೀಮೆಯವರು. ಕಾಡನ್ನೇ ನೋಡಿರದ ಅವರು ದಾರಿಯಲ್ಲಿ ನಮಗಿಂತ ಹೆಚ್ಚು ಬೆರಗು, ಅಚ್ಚರಿಯೊಂದಿಗೆ ಬಸ್‌ ಚಾಲನೆ ಮಾಡುತ್ತಿದ್ದುದು ಇನ್ನೂ ನೆನಪಿದೆ. ಇದೆಂತಹ ಕಾಡಿಗೆ ಬಂದೆನಪ್ಪಾ ಎಂದು ಅಲವತ್ತುಕೊಂಡ ಒಂದೆರಡು ಡ್ರೈವರುಗಳು ನಂತರದ ಸಂದರ್ಭದಲ್ಲಿ ಬರಬಳ್ಳಿ ಟ್ರಿಪ್‌ ತಪ್ಪಿಸಿಕೊಂಡಿದ್ದರ ಬಗ್ಗೆಯೂ ಕೇಳಿದ್ದೆ.
ಬರಬಳ್ಳಿ ದೇವಸ್ಥಾನದ ಬಳಿ ನಾವು ಇಳಿದಿದ್ದೇ ತಡ, ಅಲ್ಲಿಂದ ಅರ್ಧ ಕಿಲೋಮೀಟರ್‌ ದೂರದಲ್ಲಿದ್ದ ಗುಡ್ಡೆಮನೆ ಎಂಬ ಅಜ್ಜನ ಮನೆಗೆ ಪೇರಿ ಕೀಳುತ್ತಿದ್ದೆವು. ಅದೂ ಕೂಡ ಹೇಗೇ ಅಂತೀರಾ, ಬರಬಳ್ಳಿ ಬಸು ಬರುತ್ತಲ್ಲ.. ಥೇಟು ಅದನ್ನು ಅನುಕರಿಸುತ್ತ ಸಾಗುತ್ತಿದ್ದೆವು. ಡ್ರೈವರ್‌ ಬಸ್‌ ಚಾಲನೆ ಮಾಡುತ್ತಿದ್ದ ಬಗೆಯನ್ನು ನಾವೂ ಅನುಕರಿಸಿ, ನಾವೂ ಅಂಗಿಯನ್ನು ಕಳಚಿ ಬಾಯಲ್ಲಿ ʻಬುರ್...‌ ಎನ್ನುತ್ತ... ಆಗಾಗ ಪಾಂವ್..‌ ಪಾಂವ್‌ ಎಂಬ ಹಾರನ್ನು ಹಾಕುತ್ತ ಸಾಗುತ್ತಿದ್ದುದು ಇನ್ನೂ ನೆನಪಿನಲ್ಲಿದೆ. ಅಜ್ಜನಮನೆ ತಲುಪುವ ವೇಳೆಗೆ ಬಸ್ಸಿಗಾದಷ್ಟೇ ಸುಸ್ತು ನಮಗೂ ಆಗಿರುತ್ತಿತ್ತು. ಬೆಳಿಗ್ಗೆ ಹೊರಟ ನಾವು ಹಗಲು ಪೂರ್ತಿ ಪ್ರಯಾಣ ಮಾಡಿ ಬಹುತೇಕ ಸಾಯಂಕಾಲದ ವೇಏಗೆ ಅಜ್ಜನಮನೆ ತಲುಪುತ್ತಿದ್ದೆವು.
ಇದು ನಮ್ಮ ಪಾಲಿನ ಬರಬಳ್ಳಿ ಬಸ್ಸಿನ ಪ್ರಯಾಣದ ನೆನಪು. ಈ ಬರಬಳ್ಳಿ ಬಸ್ಸು ಕೊಡಸಳ್ಳಿ ಡ್ಯಾಂ ಪೂರ್ಣಗೊಂಡು ಬರಬಳ್ಳಿ ಎಂಬ ಸ್ವರ್ಗದ ನಡುವೆ ಇದ್ದ ಊರು ಮುಳುಗುವ ತನಕವೂ ಬರುತ್ತಿತ್ತು. ಈಗ ಊರು ನೀರಿನಡಿಯಲ್ಲಿದೆ. ಬಸ್ಸು ನಮ್ಮ ನೆನಪಿನಲ್ಲಿ ಆಗೀಗ ಸುಳಿಯುತ್ತಿರುತ್ತದೆ.

Monday, November 18, 2024

ಯಕ್ಷಗಾನ-ತಾಳಮದ್ದಲೆಯ ಸ್ವಾರಸ್ಯಕರ ಘಟನೆಗಳು

1960ರ ದಶಕದ ಚಳಿಗಾಲದ ಒಂದು ಸಂಜೆ. ಆಗತಾನೆ ಕರ್ಕಿ ಮೇಳದವರು ಆಟ ಮುಗಿಸಿ ಊರ ಕಡೆ ಹೊರಟಿತ್ತು. ಆಗೆಲ್ಲ ನಡೆದುಕೊಂಡೇ ಊರು ತಲುಪುವುದು ವಾಡಿಕೆ. ಮುಂದಿನ ಆಟ ಎಲ್ಲೋ, ಯಾವಾಗಲೋ ಎಂದು ಮೇಳದ ಮೇಲ್ವಿಚಾರಕರು ಮಾತಾಡಿಕೊಳ್ಳುತ್ತ ಸಾಗಿದ್ದರು. ನಿಧಾನವಾಗಿ ಸೂರ್ಯ ಕಂತಿದ್ದ.
ಬಹಳ ದೂರ ನಡೆದುಕೊಂಡು ಹೋಗುತ್ತಿದ್ದ ವೇಳೆಗಾಗಲೇ ಸಂಪೂರ್ಣ ಕತ್ತಲಾಗಿತ್ತು. ಇನ್ನೂ ತಮ್ಮ ತಮ್ಮ ಊರು ತಲುಪುವುದು ತುಂಬಾ ದೂರ ಉಳಿದಿತ್ತು. ಹೀಗಿದ್ದಾಗ ಅದ್ಯಾವುದೋ ಒಂದು ಊರಿನ ಹೊರವಲಯ, ಅಲ್ಲೊಬ್ಬರು ಮಹನೀಯರು ಈ ಮೇಳದವರನ್ನು ಎದುರಾದರು. ಊಭಯಕುಶಲೋಪರಿಯೆಲ್ಲ ನಡೆಯಿತು.
ಎದುರಾದ ಆಗಂತುಕರು ಮೇಳದ ಬಳಿ ಎಲ್ಲಿಂದ ಬಂದಿದ್ದು, ಎಲ್ಲಿಗೆ ಹೋಗುತ್ತಿದ್ದೀರಿ ಎಂದೆಲ್ಲ ವಿಚಾರಿಸಿದರು. ಅದಕ್ಕೆ ಮೇಳದವರು ತಮ್ಮ ಕಥೆಯನ್ನೆಲ್ಲ ಹೇಳಿದರು. ಕೊನೆಗೆ ಅಲ್ಲಿ ಸಿಕ್ಕ ಆಗಂತುಕರು, ʻತಮ್ಮೂರಿನಲ್ಲೂ ಒಂದು ಆಟ ಆಡಿʼ ಎಂದರು.
ಮೇಳದವರು ʻಆಟಕ್ಕೆ ಸ್ಥಳ ಬೇಕು.. ಜನ ಎಲ್ಲ ಬರಬೇಕಲ್ಲʼ ಎಂದರು.
ʻಜಾಗ ಎಲ್ಲ ತಯಾರಿದೆ.. ಜನರೂ ಬರುತ್ತಾರೆ. ನೀವು ವೇಷ ಕಟ್ಟಿಕೊಳ್ಳುವ ವೇಳೆಗೆ ಎಲ್ಲ ವ್ಯವಸ್ಥೆ ಮಾಡುತ್ತೇವೆ..ʼ ಎಂದರು ಆ ವ್ಯಕ್ತಿ.
ಎಲ್ಲರೂ ಒಪ್ಪಿಕೊಂಡು, ಆ ಆಗಂತುಕನ ಹಿಂಬಾಲಿಸಿ ಮುನ್ನಡೆದರು. ಅರ್ಧ ಫರ್ಲಾಂಗಿನಷ್ಟು ದೂರ ಸಾಗಿದ ನಂತರ ಅಲ್ಲೊಂದು ಕಡೆ ಯಕ್ಷಗಾನದ ಆಟ ನಡೆಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮೇಳದ ಮಹನೀಯರು ಮೆಚ್ಚುಗೆ ಸೂಚಿಸಿ, ವೇಷ ಕಟ್ಟಲು ಹೊರಟರು.
ಕೆಲ ಸಮಯದಲ್ಲಿ ವೇಷ ಕಟ್ಟಿ ಮುಗಿಯಿತು. ಭಾಗವತರು ಹಾಡಲು ಶುರುಮಾಡಿದರು.
ಕೆಲ ಸಮಯದ ತನಕ ಆಟ ಸಾಂಗವಾಗಿ ನೆರವೇರಿತು. ಅಷ್ಟರಲ್ಲಿ ಮುಖ್ಯ ಪಾತ್ರಧಾರಿಯ ಪ್ರವೇಶವೂ ನಡೆಯಿತು. ಚಂಡೆಯ ಸದ್ದು ಮುಗಿಲು ತಲುಪುವಂತಿತ್ತು. ಆರ್ಭಟದೊಂದಿಗೆ ಮುಕ್ಯ ಪಾತ್ರಧಾರಿ ರಂಗವನ್ನು ಪ್ರವೇಶಿಸಿದ್ದಲ್ಲದೇ ಮಂಡಿಕುಣಿತವನ್ನೂ ಶುರು ಹಚ್ಚಿಕೊಂಡರು.
ಪಾತ್ರಧಾರಿಯ ಆರ್ಭಟ ಹೇಗಿತ್ತೆಂದರೆ ವೇದಿಯ ಮುಂದೆ ಕುಳಿತು ಆಟವನ್ನು ನೋಡುತ್ತಿದ್ದವರೆಲ್ಲ ಒಮ್ಮೆಲೆ ಆವೇಶ ಬಂದವರಂತೆ ಕುಣಿಯಲು ಶುರು ಮಾಡಿದರು. ಕ್ಷಣಕ್ಷಣಕ್ಕೂ ಪಾತ್ರಧಾರಿಯ ಕುಣಿತ ಹೆಚ್ಚಾಯಿತು. ಭಾಗವತರ ಭಾಗವತಿಕೆ, ಚಂಡೆಯ ಸದ್ದು ಹೆಚ್ಚಿದಂತೆಲ್ಲ ನೋಡುತ್ತಿದ್ದ ಜನಸಮೂಹ ಕೂಡ ಜೋರು ಜೋರಾಗಿ ಕುಣಿಯ ಹತ್ತಿದರು.
ಭಾಗವತಿಕೆ ಮಾಡುತ್ತಿದ್ದ ಭಾಗವತರು ಈ ಜನಸಮೂಹದ ನರ್ತನವನ್ನು ನೋಡಿದವರೇ ದಂಗಾಗಿ ಹೋದರು.
ʻಇದೇನಿದು ಈ ರೀತಿ ಜನರು ಕುಣಿಯುತ್ತಿದ್ದಾರಲ್ಲʼ ಎಂದು ಒಮ್ಮೆ ವಿಸ್ಮಯವಾದರೂ ನಿಜವಾದ ಕಾರಣ ತಿಳಿದು ದಂಗಾಗಿ ಹೋದರು.
ತಕ್ಷಣವೇ ʻಗಂಟು ಮೂಟೆಯ ಕಟ್ಟಿರೋ..ʼ ಎಂದು ಜೋರಾಗಿ ಪದ ಹಾಡಲು ಶುರು ಮಾಡಿದರು.
ಇದುವರೆಗೂ ಸರಿಯಾಗಿ ಹಾಡುತ್ತಿದ್ದ ಭಾಗವತರು ಇದೇನು ಹೊಸದಾಗಿ ಗಂಟು ಮೂಟೆಯ ಕಟ್ಟಿರೋ ಎನ್ನುವ ಪದ ಹಾಡುತ್ತಿದ್ದಾರಲ್ಲ ಎನ್ನುವ ಅನುಮಾನದಲ್ಲಿ ಪಾತ್ರಧಾರಿಗಳು ಭಾಗವತರನ್ನು ನೋಡಲು ಆರಂಭಿಸಿದರು.
ಆಗ ಭಾಗವತರು
ʻಹಿಂದು ಮುಂದಿನ ಪಾದ
ಕೊಂದು ತಿನ್ನುವ ಮೊದಲು
ಗಂಟು ಮೂಟೆಯ ಕಟ್ಟಿರೋ..ʼ ಎಂದು ಇನ್ನೊಮ್ಮೆ ರಾಗವಾಗಿ ಹಾಡಿದರು. ಆಗಲೂ ಪಾತ್ರಧಾರಿಗಳಿಗೆ ಅರ್ಥವಾಗಿರಲಿಲ್ಲ.
ಭಾಗವತರು ಮತ್ಯೊಮ್ಮೆ
'ಗಮನಿಸಿ ಕೇಳೊರೋ
ಹಿಂದು ಮುಂದಿನ ಪಾದ
ಕೊಂದು ತಿನ್ನುವ ಮೊದಲು
ಗಂಟು ಮೂಟೆಯ ಕಟ್ಟಿರೋ..' ಎಂದು ಹಾಡಿದರು.
ತಕ್ಷಣವೇ ಎಚ್ಚೆತ್ತ ಎಲ್ಲರೂ ಕೈಗೆ ಸಿಕ್ಕಿದ್ದನ್ನು ಕಟ್ಟಿಕೊಂಡು, ಗಂಟು ಮೂಟೆ ಕಟ್ಟಿಕೊಂಡು ಓಡಲು ಆರಂಭಿಸಿದರು.
ಭಾಗವತರ ಪದಕ್ಕೆ ಕುಣಿಯುತ್ತಿದ್ದ ಭೂತಗಳ ಗುಂಪು ಊರ ಹೊರಗಿನ ಸ್ಮಷಾನದಲ್ಲಿ ಬಹಳ ಹೊತ್ತಿನ ತನಕ ಕುಣಿಯುತ್ತಲೇ ಇತ್ತು.

(ಹಿರಿಯರು ಅನೇಕ ಸಾರಿ ಹೇಳಿದ್ದ ಈ ಕಥೆ.. ಯಲ್ಲಾಪುರ ಭಾಗದಲ್ಲಿ ಪ್ರಚಲಿತದಲ್ಲಿದೆ. ಪ್ರತಿಯೊಬ್ಬರೂ ಈ ಕಥೆ ನಿಜವೆಂದೇ ಹೇಳುತ್ತಾರೆ. ಹೀಗಾಗಿ ನಾನು ಕೇಳಿದ ಕಥೆಯನ್ನು ಯಥಾವತ್ತಾಗಿ ಇಲ್ಲಿಟ್ಟಿದ್ದೇನೆ. ಯಾರಿಗಾದರೂ ಈ ಬಗ್ಗೆ ಗೊತ್ತಿದ್ದರೆ ಸವಿಸ್ತಾರವಾಗಿ ತಿಳಿಸಿ)



********************

ತೊಂಭತ್ತರ ದಶಕದಲ್ಲಿ ನಡೆದ ಕತೆ ಇದು

ಆಗಿನ ದಿನಗಳಲ್ಲಿ ಕನ್ನಡ ಶಬ್ದಗಳ ಮದ್ಯ ಚಿಕ್ಕ ಚಿಕ್ಕ ಇಂಗ್ಲೀಷ್‌ ಶಬ್ದಗಳ ಬಳಕೆ ದಣಿ ದಣೀ ಶುರುವಾಗುತ್ತಿದ್ದ ಸಮಯ.
ಯಲ್ಲಾಪುರದ ಯಾವುದೋ ಒಂದು ಊರಿನಲ್ಲಿ ತಾಳಮದ್ದಲೆ ಸಂಭ್ರಮ. ರಾತ್ರಿ ಇಡೀ ತಾಳಮದ್ದಲೆ ನಡೆಯುವ ಸಂಭ್ರಮ. ತಾಳಮದ್ದಲೆಯನ್ನು ಸವಿಯುವ ಸಲುವಾಗಿ ಇಡಿಯ ಊರಿಗೆ ಊರೆ ನಲಿದಿತ್ತು. ಶ್ರೀಕೃಷ್ಣ ಸಂಧಾನದ ಪ್ರಸಂಗ.
ಶ್ರೀಕೃಷ್ಣ ಸಂಧಾನಕ್ಕಾಗಿ ವಿಧುರನ ಮನೆಗೆ ಬಂದು, ನಂತರ ದುರ್ಯೋಧನನ ಸಭೆಯಲ್ಲಿ ಸಂಧಾನದ ಮಾತುಕತೆಯನ್ನೆಲ್ಲ ಆಡಿ ಮುಗಿದಿತ್ತು. ಕೃಷ್ಣ-ದುರ್ಯೋಧನನ ಪಾತ್ರಧಾರಿಗಳೆಲ್ಲ ಭಾರಿ ಭಾರಿಯಾಗಿ ತಮ್ಮ ವಾಗ್ಝರಿಯನ್ನು ಹರಿಸಿದ್ದರು.
ಶ್ರೀಕೃಷ್ಣ ದುರ್ಯೋಧನನ ಜತೆ ಸಂಧಾನ ವಿಫಲವಾಗಿ ತೆರಳಿದ ನಂತರ ದುರ್ಯೋಧನ ವಿಧುರನನ್ನು ಜರಿಯುವ ಸಂದರ್ಭ ಬಂದಿತ್ತು. ಶ್ರೀಕೃಷ್ಣ ದುರ್ಯೋಧನನ ಸಭೆಗೆ ಮೊದಲು ಬರದೇ ವಿಧುರನ ಮನೆಗೆ ಹೋಗಿದ್ಯಾಕೆ ಎಂದೆಲ್ಲ ಪ್ರಶ್ನಿಸಿ ನಾನಾ ರೂಪದಿಂದ ವಿಧುರನನ್ನು ಬೈದು ಆಗಿತ್ತು.
ಇದರಿಂದ ಮನನೊಂದ ವಿಧುರ ಆಪತ್ಕಾಲದಲ್ಲಿ ಕೌರವರ ರಕ್ಷಣೆಗಾಗಿ ಇರಿಸಿದ್ದ ಬಿಲ್ಲು-ಬಾಣಗಳನ್ನು ಮುರಿದು ಹಾಕುವ ಸಂದರ್ಭವೂ ಬಂದಿತ್ತು. ಸಭಾಸದರೆಲ್ಲ ಬಹಳ ಆಸಕ್ತಿಯಿಂದ ತಾಳಮದ್ದಲೆಯನ್ನು ಸವಿಯುತ್ತಿದ್ದರು.
ಭಾಗವತರ ಹಾಡುಗಾರಿಕೆ, ಪಾತ್ರಧಾರಿಗಳ ವಾದ-ಪ್ರತಿವಾದಗಳೆಲ್ಲ ಉತ್ತಮವಾಗಿ ನಡೆಯುತ್ತಿದ್ದವು. ನೋಡುಗರು ವಾಹ್‌ ವಾಹ್‌ ಎನ್ನುವಂತೆ ತಾಳಮದ್ದಲೆ ಸಾಗುತ್ತಿತ್ತು.
ಹೀಗಿದ್ದಾಗಲೇ ದುರ್ಯೋಧನನ ಮಾತುಗಳಿಗೆ ವಿಧುರ ಉತ್ತರ ನೀಡಬೇಕು. ಆದರೆ ಆ ಸಂದರ್ಭದಲ್ಲಿ ವಿಧುರನಿಗೆ ಮಾತನಾಡಲು ಆಗುತ್ತಲೇ ಇಲ್ಲ. ಆತನಿಗೆ ತಾನು ಏನು ಮಾತನಾಡಬೇಕು ಎನ್ನುವುದು ಮರೆತು ಹೋಗಿದೆ. ವಾಸ್ತವದಲ್ಲಿ ವಿಧುರನ ಪಾತ್ರಧಾರಿ ʻಹೌದು.. ಹೌದು..ʼ ಎನ್ನಬೇಕಿತ್ತು. ಆದರೆ ಆ ಮಾತು ಮರೆತು ಹೋಗಿದೆ.
ದುರ್ಯೋಧನ ಎರಡು ಸಾರಿ ತನ್ನ ಮಾತನ್ನಾಡಿದರೂ ವಿಧುರನಿಂದ ಉತ್ತರ ಬರಲೇ ಇಲ್ಲ. ಕೊನೆಗೆ ದುರ್ಯೋಧನ ಪಾತ್ರಧಾರಿ ಭಾಗವತರಿಗೆ ಸನ್ನೆ ಮಾಡಿದ್ದಾಯ್ತು. ಭಾಗವತರು ವಿಧುರನ ಪಾತ್ರಧಾರಿ ಕಡೆ ನೋಡಿ ಹಾಡಿನ ರೂಪದಲ್ಲಿ ಎಚ್ಚರಿಸಿದರು.
ಕೊನೆಗೆ ಎಚ್ಚೆತ್ತುಕೊಂಡ ವಿಧುರನ ಪಾತ್ರಧಾರಿ ʻYes Yes..' ಎಂದ. ಕನ್ನಡದ ತಾಳಮದ್ದಲೆಯಲ್ಲಿ ಇಂಗ್ಲೀಷ್‌ ಶಬ್ದ ಬಂದಿದ್ದು ಪ್ರೇಕ್ಷಕರಾದಿಯಾಗಿ ಎಲ್ಲರಿಗೂ ಒಮ್ಮೆ ಅಚ್ಚರಿಯಾಗಿತ್ತು. ಇದೇನಿದು ಎಂದು ಆಲೋಚನೆ ಶುರು ಮಾಡಲು ಆರಂಭಿಸಿದ್ದರು.
ತಕ್ಷಣವೇ ಭಾಗವತರು ʻ ವಿಧುರ ಯೆಸ್‌ ಎಂದ....ʼ ಎಂದು ರಾಗವಾಗಿ ಹಾಡಲು ಶುರು ಮಾಡಿದರು.
ಈ ಪ್ರಸಂಗ ಮುಗಿದ ಕೆಲವು ದಿನಗಳವರೆಗೂ ವಿಧುರ ಯೆಸ್‌ ಎಂದ ಎನ್ನುವ ಸಂಗತಿ ಜನರ ಬಾಯಲ್ಲಿ ಚರ್ಚೆಯಾಗುತ್ತಲೇ ಇತ್ತು. ತಾಳಮದ್ದಲೆಯ ಸವಿಯನ್ನುಂಡವರು ಆಗೀಗ ಈ ಸನ್ನಿವೇಶದ ಕುರಿತು ತಮಾಷೆಯಾಗಿ ಮಾತನಾಡಿಕೊಳ್ಳುತ್ತಿದ್ದುದೂ ಜಾರಿಯಲ್ಲಿತ್ತು. ಯಲ್ಲಾಪುರದ ಕೆಲವರಿಗೆ ಈಗಲೂ ವಿಧುರ ಯೆಸ್‌ ಎಂದ ಎನ್ನುವ ತಾಳಮದ್ದಲೆಯ ಸನ್ನಿವೇಶ ನೆನಪಾಗಬಹುದು. ಯಲ್ಲಾಪುರದ ಭಾಗದ ಜನರಿಗೆ ಈ ಬಗ್ಗೆ ಜಾಸ್ತಿ ಗೊತ್ತಿದ್ದರೆ ತಿಳಿಸಿ.
ಇಂತಹ ಯಕ್ಷಗಾನ ಹಾಗೂ ತಾಳಮದ್ದಲೆಯ ತಮಾಷೆಯ ಸನ್ನಿವೇಶಗಳಿದ್ದರೆ ನೀವೂ ತಿಳಿಸಿ

Sunday, July 2, 2023

ಪಾರು (ಕಥೆ ಭಾಗ-2 )

ಬರಬಳ್ಳಿ ಗುಡ್ಡ ಬೆಟ್ಟಗಳ ನಡುವೆ ಅರಳಿನಿಂತ ಊರು ಎನ್ನುವುದನ್ನು ಆಗಲೇ ಹೇಳಿದೆನಲ್ಲ. ವಿಶಾಲ ಜಾಗದಲ್ಲಿ 400 ರಷ್ಟು ಕುಟುಂಬಗಳು ಕೃಷಿಯನ್ನು ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಡಿಕೆ ಇವರ ಜೀವನದ ಆಧಾರವಾಗಿದ್ದರೆ, ಜಮೀನಿನಲ್ಲಿ ಬೆಳೆಯುವ ಬೃಹತ್ ಗಾತ್ರದ ತೆಂಗು ಇವರ ಬದುಕಿನ ಆಹಾರವನ್ನು ಪೂರೈಸುತ್ತಿತ್ತು.

ದೂರದಲ್ಲಿ ಕರಿಬಣ್ಣದ ಕಾಳಿ ಹರಿದು ಹೋಗುತ್ತಿತ್ತು. ಊರಿಗೂ ಕಾಳಿ ನದಿಗೂ ನಡುವೆ ವಿಶಾಲವಾದ ಗದ್ದೆ ಬಯಲಿತ್ತು. ಬೈಲುಗದ್ದೆ ಎಂದೇ ಕರೆಸಿಕೊಂಡ ಈ ಗದ್ದೆಯ ಬಯಲು ಸಾತೊಡ್ಡಿ ಹಳ್ಳದಿಂದ ಕಳಚೆಯ ತನಕವೂ ಇತ್ತು. ಇಲ್ಲಿ ಪ್ರಮುಖವಾಗಿ ಭತ್ತವನ್ನು ಬೆಳೆಯುತ್ತಿದ್ದರು.

ಗಣಪತಿ ಭಟ್ಟರು, ಚಿದಂಬರ, ನಾರಾಯಣ, ಶಂಕರ ಮುಂತಾದ ತನ್ನ ಜತೆಗಾರರ ಜೊತೆಗೆ ಈ ವಿಸ್ತಾರವಾದ ಬಯಲುಗಡ್ಡೆಯನ್ನು ದಾಟಿದರು. ಸೀದಾ ಕಾಳಿ ನದಿಯ ತೀರಕ್ಕೆ ಬಂದರು.

ಚಿಕ್ಕ ಚಿಕ್ಕ ನದಿಗಳನ್ನು ಸುಲಭವಾಗಿ ದಾಟಬಹುದು. ಆದರೆ ದೊಡ್ಡ ದೊಡ್ಡ ನದಿಗಳನ್ನು ದಾಟುವುದು ಸುಲಭವಲ್ಲ. ಆಳವಾಗಿ ಹಾಗೂ ವೇಗವಾಗಿ ಹರಿಯುವ ಈ ನದಿಯನ್ನು ದಾಟಲು ದೋಣಿಯ ಅವಲಂಬನೆ ಅತ್ಯಗತ್ಯ. ಆದರೆ ಕೆಲವು ನದಿಗಳಲ್ಲಿ ಕೆಲವು ಕಡೆ ನದಿಯ ಹರಿವು ಬೇರೆ ರೀತಿಯಲ್ಲಿರುತ್ತವೆ. ಎಲ್ಲ ಕಡೆಗಳಲ್ಲಿ ಆಳವಾಗಿ ಹರಿಯುವ ನದಿಯು ಭೌಗೋಲಿಕ ರಚನೆಗೆ ಅನುಗುಣವಾಗಿ ತನ್ನ ಅಳವನ್ನು ಕಳೆದುಕೊಂಡು ವಿಸ್ತಾರವಾಗಿ ಹರಿಯುತ್ತವೆ. ಇಂತಹ ಸ್ಥಳಗಳಲ್ಲಿ ಸೆಳವು ಕೂಡ ಕಡಿಮೆ ಇರುತ್ತದೆ. ಇಂತಹ ಜಾಗವನ್ನು ಪಾರು ಎಂದು ಕರೆಯುತ್ತಾರೆ.

ಕಾಳಿ ನದಿಯಲ್ಲಿಯೂ ಹಲವು ಕಡೆಗಳಲ್ಲಿ ನದಿಯನ್ನು ದಾಟಲು ಅನುಕೂಲವಾಗುವಂತೆ ಪಾರುಗಳಿದ್ದವು. ಶಾಟ ಶತಮಾನಗಳಿಂದ ಸ್ಥಳೀಯರು ಇಂತಹ ಪಾರುಗಳನ್ನು ದಾಟಿ ನದಿಯ ಇನ್ನೊಂದು ತೀರಕ್ಕೆ ಹೋಗುತ್ತಿದ್ದರು. ಗಣಪತಿ ಭಟ್ಟರು ಅವರ ಜತೆಗಾರರ ಜೊತೆಗೆ ನಸುಕಿನಲ್ಲಿ ಈ ಪಾರಿನ ಜಾಗಕ್ಕೆ ಬಂದರು.

ಕರಿ ಕಾಳಿಯಲ್ಲಿನ ಪಾರನ್ನು ಕೆಲವು ನಿಮಿಷಗಳ ಅಂತರದಲ್ಲಿ ದಾಟಿ ನದಿಯಾಚೆಗಿನ ಪ್ರದೇಶಕ್ಕೆ ತೆರಳಿದ್ದರು. ಭಟ್ಟರ ಬಳಗ ಇನ್ನೂ ಹೋಗುವ ದೂರ ಬಹಳಷ್ಟಿತ್ತು. ಮುಂದಿನ ಒಂದು ತಾಸುಗಳ ನಡಿಗೆಯ ಮೂಲಕ ಕೊಡಸಳ್ಳಿಯನ್ನು ಹಾದು ಹೋಗಿದ್ದರು.

ಸೂರ್ಯ ಬಾನಂಚಿನಲ್ಲಿ ಮೂಡಿ ಮೊದಲ ಕಿರಣಗಳು ಭೂಮಿಗೆ ಬೀಳುವ ವೇಳೆಗಾಗಲೇ ಗಣಪತಿ ಭಟ್ಟರ ಬಳಗ ಬೀರ್ಕೋಲ್ ತಲುಪಿಯಾಗಿತ್ತು.

``ಇಲ್ಲಿಂದಾಚೆಗೆ ಹೆಬ್ಬಗುಳಿ, ದೇವಕಾರು, ಬಾಳೆಮನೆ.. ಆಮೇಲೆ ಸೋಮವಾರ ಸಂತೆ ಬಯಲು.. ಅಲ್ಲಿಂದ ಸ್ವಲ್ಪದೂರ ಹೋದರೆ ಬಸ್ಸು ಸಿಕ್ತು.. ಆಮೇಲೆ ನೇಸರ ನೆತ್ತಿಗೇರುವ ಹೊತ್ತಿಗೆಲ್ಲ ಕಾರವಾರ ಹೋಗುಲಾಗ್ತು..'' ಎಂದು ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತ ಹೊರಟವರು ತಮ್ಮೂರಿನಿಂದ ಆಗಲೇ ಹತ್ತಾರು ಕಿಲೋಮೀಟರ್ ದೂರವನ್ನು ಸವೆಸಿದ್ದರು.

ಸೋಮವಾರ ಸಂತೆಯನ್ನು ತಲುಪುವ ವೇಳೆಗಾಗಲೇ ಅಲ್ಲಿ ನಿಂತಿದ್ದ ಕೆಂಪುಬಸ್ಸು ಎರಡು ಸಾರಿ ಪೊಂ ಪೊಂ ಎಂದು ಸದ್ದು ಮಾಡಿ ಹೋರಾಡಲು ಅನುವಾಗಿತ್ತು. ತುಸು ಓಡುತ್ತಲೇ ಬಸ್ಸನ್ನೇರಿದರು.

``ವಾಪಾಸ್ ಬರಕಿದ್ರೆ ದೇವಕಾರು ಗೌಡಂದಿಕ್ಕಳ ಮನೆಗೆ ಹೋಗಿ ಬರುವ. ನಮ್ಮನೆ ಬೆಳ್ಳಿ, ಕೆಂಪಿ, ಕೆಂಚಿ, ಸರಸು ಎಲ್ಲ ಎಂತ ಮಾಡ್ತಿದ್ದು ನೋಡ್ಕಂಡು ಬರುವ'' ಎಂದು ಭಟ್ಟರು ಶಂಕರನ ಬಳಿ ಹೇಳಿದ್ದರು.

``ಗಣಪಣ್ಣ, ಗೌಡಂದಿಕ್ಕಳ ಬಳಿ ಎಷ್ಟು ದನ ಹೊಡೆದುಹಾಕಿದ್ಯೋ..'' ಶಂಕರ ಕೇಳಿದ್ದ.

``ನಿತ್ಯ ಪೂಜೆಗೆ ಎರಡು ಕಾಲ್ನಡೆ ಇಟಕಂಡು, ಬಾಕಿ ಎಲ್ಲ ದೇವಕಾರು ಬಯಲಿಗೆ ಹೊಡೆದಿಕ್ಕಿದೆ ನೋಡು'' ಭಟ್ಟರು ಉತ್ತರ ನೀಡಿದ್ದರು.

ಜಾನುವಾರುಗಳನ್ನು ಸಾಕಿ ಸಲಹುವ ನಿಟ್ಟಿನಲ್ಲಿ ಬರಬಳ್ಳಿಗೂ, ದೇವಕಾರು, ಹೆಬ್ಬಗುಳಿ ಹಾಗೂ ಕೈಗಾಕ್ಕೂ ವಿಶೇಷ ಸಂಬಂಧವಿತ್ತು. ಪ್ರತಿ ಬೇಸಿಗೆಯ ವೇಳೆಗೆ ಕೈಗಾ, ಹೆಬ್ಬಗುಳಿ ಹಾಗೂ ದೇವಕಾರಿನ ಗೌಡರು ಭುಜದ ಮೇಲೆ ದೊಡ್ಡ ಬಡಿಗೆಯನ್ನು ಕಟ್ಟಿಕೊಂಡು ಅದರ ಊದ್ದಕ್ಕೆ ವಿವಿಧ ಗಾತ್ರಗಳ ಮಡಿಕೆಯನ್ನು ತ್ತೋಗುಬಿಟ್ಟುಕೊಂಡು ಬರುತ್ತಿದ್ದರು. ಬರಬಳ್ಳಿ ಹಾಗೂ ಸುತ್ತಲಿನ ಊರುಗಳಲ್ಲಿ ಈ ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದರು. ಅದರ ಜೊತೆಗೆ ವಿವಿಧ ಬಗೆಯ ತರಕಾರಿ, ಮೆಣಸು, ಮದ್ದುಗಳನ್ನು ಕೂಡ ತಂದು ಮಾರಾಟ ಮಾಡಿ ಕೊಂಚ ಕಾಸು ಮಾಡಿಕೊಳ್ಳುತ್ತಿದ್ದರು. 

ವಾಪಸು ಹೋಗುವಾಗ ಬರಬಳ್ಳಿಗರ ಮಲೆನಾಡು ಗಿಡ್ಡ ತಳಿಯ ರಾಸುಗಳನ್ನು ಹೊಡೆದುಕೊಂಡು ಹೋಗುತ್ತಿದ್ದರು. ಈ ದನಗಳು ಮುಂದಿನ ಆರು-ಎಂಟು ತಿಂಗಳುಗಳ ಕಾಲ ದೇವಕಾರು, ಹೆಬ್ಬಗುಳಿ, ಕೈಗಾ ಗೌಡರುಗಳ ಕೊಟ್ಟಿಗೆಯಲ್ಲಿ ಜೀವನ ಸವೆಸಬೇಕಿತ್ತು. ಅವುಗಳನ್ನು ನೋಡಿಕೊಳ್ಳುವ ಜೊತೆಗೆ ಈ ದನಗಳ ಸಂತಾನೋತ್ಪತ್ತಿ ಕಾರ್ಯ ಮಾಡಿಸಿ, ಅವುಗಳು ಕರು ಹಾಕುವ ತನಕದ ಕಾರ್ಯ ಈ ಗೌಡರದ್ದಾಗಿತ್ತು. ಇದಕ್ಕೆ ಪ್ರತಿಯಾಗಿ ಬರಬಳ್ಳಿಗರು ದುಡ್ಡು ಕೊಡುತ್ತಿದ್ದರು. ಅಲ್ಲದೆ ಗಂಡುಗರು ಹುಟ್ಟಿದರೆ ಅದನ್ನು ಉಚಿತವಾಗಿ ಗೌಡರಿಗೆ ನೀಡುತ್ತಿದ್ದರು. ಹೆಣ್ಣು ಕರು ಹಾಕಿದರೆ ವಿಶೇಷ ಬಳುವಳಿ ಕೂಡ ಸಿಗುತ್ತಿತ್ತು. ಇದರ ಜೊತೆಗೆ ಈ ಜಾನುವಾರುಗಳ ಸಗಣಿ, ಗೊಬ್ಬರಗಳು ಗೌಡರ ಪಾಲಿಗೆ ವಿಶೇಷ ಆದಾಯ ತರುತ್ತಿದ್ದವು. ತಮ್ಮ ತೋಟಕ್ಕೆ ಇವುಗಳನ್ನು ಬಳಸುವ ಜೊತೆಗೆ ಗೊಬ್ಬರ ಮಾರಾಟ ಮಾಡಿ ಆದಾಯವನ್ನು ಮಾಡಿಕೊಳ್ಳುತ್ತಿದ್ದರು.

ಇಷ್ಟಲ್ಲದೆ ಬರಬಳ್ಳಿಗರ ಎತ್ತುಗಳು, ಹೋರಿಗಳನ್ನೂ ಈ ಗೌಡರು ಸಾಕುತ್ತಿದ್ದರು. ಬೇಸಿಗೆ ವೇಳೆಗೆ ಬರಬಳ್ಳಿಗೆ ಎಡತಾಕುವ ಗೌಡರುಗಳು ಬಯಲುಗದ್ದೆಯನ್ನು ಹೂಡುವ ಕಾರ್ಯವನ್ನೂ ಕೈಗೊಳ್ಳುತ್ತಿದ್ದರು. ಹೀಗೆ ಬರಬಳ್ಳಿಗರ ಪಾಲಿಗೆ ಕೈಗಾ, ಹೆಬ್ಬಗುಳಿ, ದೇವಕಾರು ಗ್ರಾಮದ ನಿವಾಸಿಗಳು ಅನಿವಾರ್ಯವಾಗಿದ್ದರು. ಆ ಗ್ರಾಮಗಳವರಿಗೆ ಬರಬಳ್ಳಿಯವರೂ ಕೂಡ ಅಷ್ಟೇ ಅಗತ್ಯವಾಗಿದ್ದರು. ಪರಸ್ಪರ ಸಹಕಾರ ಶತ ಶತಮಾನಗಳಿಂದ ಬೆಳೆದುಬಂದಿತ್ತು.

ಗುಡ್ಡೆ ಗಣಪತಿ ಭಟ್ಟರ ಹತ್ತಾರು ಕಾಲ್ನಡೆಗಳನ್ನು ದೇವಕಾರಿನ ಗೌಡನೊಬ್ಬ ಹೊಡೆದುಕೊಂಡು ಹೋಗಿದ್ದ. ಹೀಗಾಗಿ ಭಟ್ಟರ ಮನೆಯಲ್ಲಿ ನಿತ್ಯ ಪೂಜೆಗೆ ಹಾಲು, ಹೈನಿಗಾಗಿ ಒಂದೆರಡು ಆಕಳುಗಳು ಮಾತ್ರ ಇದ್ದವು. ಭಟ್ಟರದ್ದೇ ಎಡಿಎ ಒಂದು ಎತ್ತಿನ ಜೋಡಿಯೂ ದೇವಕಾರಿನ ಬಯಲು ಸೇರಿತ್ತು. ಕಾರವಾರದಿಂದ ವಾಪಸು ಬರುವಾಗ ದೇವಕರಿಗೆ ತೆರಳಿ ತಮ್ಮ ಮನೆಯ ರಾಸುಗಳನ್ನು ನೋಡಿ ಬರಬೇಕು ಎಂದು ಭಟ್ಟರು ಅಂದುಕೊಂಡಿದ್ದರು. ಆದರೆ ಹೀಗೆ ಭಟ್ಟರು ದೇವಕರಿಗೆ ಹೋಗಿ ಬರಬೇಕು ಎಂದು ನಿಶ್ಚಯಿಸಿದ್ದೆ ಅವರ ಬದುಕಿನಲ್ಲಿ ಎಂದೂ ಮರೆಯಲಾಗದ ಅಪರೂಪದ ಘಟನೆಗೆ ಸಾಕ್ಷಿಯಾಗಲಿತ್ತು..


(ಮುಂದುವರಿಯುತ್ತದೆ..)

Thursday, June 1, 2023

ಪಾರು (ಕಥೆ)

``ಸಾವಿತ್ರಿ, ನಾಳೆ ಆನು ಕಾರವಾರಕ್ಕೆ ಹೋಗಿ ಬರ್ತಿ. ಮಠದಗಡ್ಡೆದು ಕಾಗದಪತ್ರದ ಕೆಲಸ ಇದ್ದು ಬಿಲ್ಯ. ಉದಿಯಪ್ಪಾಗ ಹೋಗಿ ಕಾರವಾರದ ಕಲೆಕ್ಟರ್ ಕಚೇರಿಯಲ್ಲಿ ಕೆಲಸ ಮುಗ್ಸಿ ಬರ್ತೆ. ನಾಳೆ ಕಾರವರದಲ್ಲೇ ಉಳ್ಕಂಬುದು ಬಂದ್ರು ಬಂತು ಬಿಲ್ಯ. ನಾಡಿದ್ದು ಸಂಜೇಗೆಲ್ಲ ಮನಿಗೆ ಬರ್ತಿ'' ಎಂದು ಮಡದಿ ಅಮ್ಮಕ್ಕಳ ಬಳಿ ಗಣಪತಿ ಭಟ್ಟರು ಹೇಳುವ ವೇಳೆಗಾಗಲೇ ಬಾನಿನಲ್ಲಿ ಕತ್ತಲಾಗಿತ್ತು.

ಮರುದಿನ ಮುಂಜಾನೆ ನಾಲ್ಕಕ್ಕೆಲ್ಲ ಎದ್ದು ಕಾರವಾರದ ಕಡೆಗೆ ಹೊರಡುವ ಪತಿಯ ಬೆಳಗಿನ ಆಸ್ರಿಗೆಗಾಗಿ ತಯಾರಿ ಮಾಡುವಲ್ಲಿ ಅಮ್ಮಕ್ಕ ತೊಡಗಿಕೊಂಡಳು. ಭಟ್ಟರು ಸಾಯಿಂಕಾಲದ ಅನುಷ್ಠಾನಕ್ಕೆ ತೆರಳಿದರು.

ಮರುದಿನದ ಕಾರವಾರದ ಕಡೆಗಿನ ಭಟ್ಟರ ಪ್ರಯಾಣ, ಅವರ ಬದುಕಿನ ಅನೂಹ್ಯವಾದ ಘಟನೆಯೊಂದಕ್ಕೆ ಸಾಕ್ಷಿಯಾಗಲಿದೆ ಎನ್ನುವುದರ ಸಣ್ಣ ಕುರುಹೂ ಕೂಡ ಅವರಿಗಿರಲಿಲ್ಲ. ಬದುಕಿನಲ್ಲಿ ಹಲವು ತಿರುವುಗಳನ್ನು ಕಂಡಿದ್ದ ಭಟ್ಟರು ಇನ್ನೊಂದು ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಲಿದ್ದರು. 


******


ಭರತಖಂಡ ಭಾರತವರ್ಷಕ್ಕೆ ಹಸಿರ ಸೀರೆಯನ್ನು ಉಟ್ಟಂತೆ ಹಾದುಹೋಗಿದೆ ಪಶ್ಚಿಮ ಘಟ್ಟಗಳ ಸಹ್ಯಾದ್ರಿಯ ಸಾಲು. ಈ ಸಹ್ಯಾದ್ರಿಯ ಮಡಿಲಿನಲ್ಲಿ ಕರಿಬಣ್ಣವನ್ನು ಹೊಂದಿ ಮೈಮನಗಳಲ್ಲಿ ಭಯವನ್ನು ಹುಟ್ಟಿಸುತ್ತ ಹರಿದುಹೋಗುತ್ತಿದೆ ಕಾಳಿನದಿ. 

ಜೋಯಿಡಾದ ಕಾಡಿನ ನಡುವೆಯೆಲ್ಲೋ ಹುಟ್ಟಿ ಕಡವಾಡದ ಬಳಿ ಸಮುದ್ರ ಸೇರುವ ಮೊದಲು ಅದೆಷ್ಟೋ ಪ್ರದೇಶಗಳನ್ನು ಬಳಸಿ, ಹಾದು ಹೋಗುವ ಕಾಳಿನದಿ ಸಾವಿರಾರು ಕುಟುಂಬಗಳ ಪಾಲಿಗೆ ಜೀವ ನದಿಯೂ ಹೌದು. ಮಳೆಗಾಲದಲ್ಲಿ ಅದೆಷ್ಟೋ ಜನರ ಬದುಕುಗಳನ್ನು ದುರ್ಭರ ಮಾಡಿದ ಕಣ್ಣೀರ ನದಿಯೂ ಹೌದು. ಇಂತಹ ಕರಿ ಕಾಳಿ ನದಿಯ ಆಗ್ನೇಯ ದಿಕ್ಕಿನ ದಡದಲ್ಲಿ ಇರುವ ಊರು ಬರಬಳ್ಳಿ. ಮೂರು ದಿಕ್ಕುಗಳಲ್ಲಿ ಎತ್ತರದ ಘಟ್ಟ, ದಟ್ಟ ಕಾಡು. ಇನ್ನೊಂದು ಕಡೆಯಲ್ಲಿ ಕಾಳಿ ನದಿ. ಅಡಿಕೆ, ತೆಂಗು ಮುಖ್ಯ ಬೆಳೆಗಳಾದರೂ, ಕೆಲವರು ಭತ್ತ ಬೆಳೆಯುತ್ತಾರೆ. ಮಾವು ಹಲಸುಗಳು ಹುಲುಸಾಗಿ ಬೆಳೆಯುತ್ತವೆ. ಹಣ್ಣು ಹಂಪಲುಗಳಿಂದ ತುಂಬಿಕೊಂಡು, ಎಂದೂ ಬರಿದಾಗದಂತಹ ಹಳ್ಳಿ. ಸಾತೊಡ್ಡಿಯಿಂದ ಹಿಡಿದು ಕೊಡಸಳ್ಳಿಯ ತನಕ ಬೆಳೆದು ನಿಂತಿದ್ದ ಊರು ಅದು.

ದಟ್ಟ ಕಾಡಿನ ನಡುವೆ ನಾಲ್ಕೈದು ಕಿಲೋಮೀಟರುಗಳಷ್ಟು ಅಗಲವಾಗಿ ಹಬ್ಬಿ 400 ಕುಟುಂಬಗಳನ್ನು ಹೊಂದಿರುವ ಈ ಬರಬಳ್ಳಿಯ ಆರಾಧ್ಯದೈವ ಬಲಮುರಿ ಗಣಪತಿ. ಭಕ್ತಿಯಿಂದ ಬೇಡಿಕೊಂಡವರನ್ನು ಸದಾಕಾಲ ಹರಸುವ, ಕಾಪಾಡುವ ದೇವರು.

ಈ ಬಲಮುರಿ ಗಣಪತಿಗೆ ನಿತ್ಯಪೂಜೆ ಗಣಪತಿ ಭಟ್ಟರ ಕೈಯಿಂದಲೇ ನಡೆಯಬೇಕಿತ್ತು. ದೇವಸ್ಥಾನದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದ ಗುಡ್ಡೇಮನೆಯಿಂದ ಆಗಮಿಸುವ ಗಣಪತಿ ಭಟ್ಟರು ದಿನನಿತ್ಯ ಶಾಸ್ತ್ರೋಕ್ತವಾಗಿ ಪೂಜಿಸುತ್ತಿದ್ದರು.

ಜೀವನದ ಮಧ್ಯಘಟ್ಟವನ್ನು ತಲುಪಿದ್ದ ಗಣಪತಿ ಭಟ್ಟರ ಮಡದಿಯೇ ಅಮ್ಮಕ್ಕ. ಭಟ್ಟರು ತಮ್ಮ ಮಡದಿಯನ್ನು ಪ್ರೀತಿಯಿಂದ ಸಾವಿತ್ರಿ ಎಂದೇ ಸಂಬೋಧಿಸುತ್ತಿದ್ದರು. ಈ ದಂಪತಿಗಳಿಗೆ ಪರಮೇಶ್ವರ, ಶಂಕರ ಹಾಗೂ ಮೂಕಾಂಬಿಕಾ ಎನ್ನುವ ಮೂವರು ಮಕ್ಕಳು. ಇವರಲ್ಲಿ ಪರಮೇಶ್ವರನಿಗೆ ನಾಲ್ಕೈದು ವರ್ಷ ವಯಸ್ಸಾಗಿದ್ದರೆ, ಪರಮೇಶ್ವರನಿಗಿಂತ ಶಂಕರ ಒಂದೂವರೆ ವರ್ಷ ಚಿಕ್ಕವನು. ಶಂಕರನಿಗಿಂತ ಎರಡು ವರ್ಷ ಚಿಕ್ಕವಳಾದ ಮೂಕಾಂಬಿಕೆ ಆಗಿನ್ನೂ ಅಂಬೆಗಾಲಿಡುತ್ತಿದ್ದ ಕೂಸು. ಗಣಪನ ಪೂಜೆ, ಮಠದಗದ್ದೆಯಲ್ಲಿ ದುಡಿತ, ಗುಡ್ಡೇಮನೆಯಲ್ಲಿ ಸಂಸಾರ ಹೀಗೆ ಸಾಗುತ್ತಿದ್ದಾಗಲೇ ತುರ್ತು ಕಾಗದಪತ್ರದ ಜರೂರತ್ತು ಗಣಪತಿ ಭಟ್ಟರಿಗೆ ಒದಗಿಬಂದಿತ್ತು. ಅದಕ್ಕಾಗಿ ಕಾರವಾರಕ್ಕೆ ಹೊರಟಿದ್ದರು.


****


ಮುಂಜಾನೆ ನಾಲ್ಕಕ್ಕೆಲ್ಲ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಆಸ್ರಿಗೆ ಕುಡಿದು, ಮಡದಿ ಕಟ್ಟಿಕೊಟ್ಟ ತುತ್ತಿನ ಚೀಲವನ್ನು ಗಂಟಿನಲ್ಲಿ ಹಾಕಿ ಭುಜಕ್ಕೇರಿಸಿ ಬರಿಗಾಲಿನಲ್ಲಿ ಮನೆಯಿಂದ ಹೋರಾಟ ಗಣಪತಿ ಭಟ್ಟರು ಕಾರವಾರವನ್ನು ತಲುಪಲು ಹರಸಾಹಸ ಪಡಬೇಕಿತ್ತು.

ಕಾರವಾರಕ್ಕೆ ತಾವೂ ಬರುತ್ತೇವೆ, ತುರ್ತಿನ ಕೆಲಸವಿದೆ ಎಂದು ಹೇಳಿದ್ದರಿಂದ ತಮ್ಮದೇ ಊರಿನ ಚಿದಂಬರ, ನಾರಾಯಣ ಹಾಗೂ ಇನ್ನಿತರರ ಮನೆಯ ಕಡೆ ಭಟ್ಟರು ಎಡತಾಕಿದರು. ದಟ್ಟಕಾಡಿನ ನಡುವೆ, ಕಾಡುಪ್ರಾಣಿಗಳ ಹಾವಳಿಯ ನಡುವೆ ಒಬ್ಬರೇ ಸಾಗುವುದಕ್ಕಿಂತ ಗುಂಪಾಗಿ ತೆರಳುವುದು ಲೇಸು ಎನ್ನುವ ಕಾರಣಕ್ಕಾಗಿ ಭಟ್ಟರು ತಮ್ಮ ಸಹವರ್ತಿಗಳ ಜತೆ ಸೇರಿದ್ದರು.


(ಮುಂದುವರಿಯುವುದು)

Thursday, August 18, 2022

ಗಾಳಿಪಟ-2 ಮೂಲಕ ಮತ್ತೆ ಮೋಡಿ ಮಾಡಿದ ಯೋಗರಾಜ್ ಭಟ್-ಗಣೇಶ್(ನಾನು ನೋಡಿದ ಚಿತ್ರಗಳು -7)

ಇತ್ತೀಚಿನ ದಿನಗಳಲ್ಲಿ ನೋಡಲೇಬೇಕು ಅನ್ನಿಸಿ ಕಾದು ಕಾದು ನೋಡಿದ ಸಿನಿಮಾ ಅಂದರೆ ಅದು ಗಾಳಿಪಟ 2. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಷನ್ ಚಿತ್ರ ಎನ್ನುವುದು ಈ ಚಿತ್ರದ ಕಡೆಗೆ ಇದ್ದ ಮೊದಲ ಕಾರಣವಾಗಿದ್ದರೆ, ಗಾಳಿಪಟ ಸಿನಿಮಾದ ಮೊದಲ ಭಾಗಕ್ಕೆ ಸಿಇಕ್ವೆಲ್ ಬರುತ್ತಿದೆ ಎನ್ನುವುದು ಇನ್ನೊಂದು ಕಾರಣ.

ಸಿನಿಮಾದಲ್ಲಿ ಬಹಳಷ್ಟು ಇಷ್ಟವಾದವು. ಕೆಲವಷ್ಟು ಕಷ್ಟವಾದವು. ಸಿನಿಮಾದಲ್ಲಿ ನಮಗೆ ಇಷ್ಟವಾಗಲು ಹಲವು ಸಂಗತಿಗಳಿವೆ. ಅದರಲ್ಲಿ ಮೊದಲನೆಯದು ಯೋಗರಾಜ್ ಭಟ್ ಅವರ ನವಿರಾದ ಚಿತ್ರಕಥೆ. ಸರಳ ಕಥಾ ಹಂದರ. 

ಮೊದಲ ಭಾಗದಲ್ಲಿ ಮುಗಿಲು ಪೇಟೆಯನ್ನು ನೋಡಿದ್ದ ನಾವು ಇಲ್ಲಿ ನೀರು ಕೋಟೆಯನ್ನು ನೋಡುತ್ತೇವೆ, ಅದೇ ರೀತಿ ಟರ್ಕಿ ದೇಶದ ಹಿಮದ ಸಾಲಿನ ಮೇಲೆ ಓಡಾಡುತ್ತೇವೆ. ನೀರು, ಐಸು, ಆಗೊಮ್ಮೆ ಈಗೊಮ್ಮೆ ಬರುವ ಬೆಂಗಾಡಿನ ಪ್ರದೇಶ ಇವೆಲ್ಲವೂ ಸೆಳೆಯುತ್ತವೆ. ಆದರೆ ಸಿನಿಮಾದ ಮೊದಲರ್ಧ ಸ್ವಲ್ಪ ಸುದೀರ್ಘವಾಯಿತು ಎನ್ನಿಸುತ್ತದೆ. ಅಲ್ಲದೆ ಮೊದಲಾರ್ಧದಲ್ಲಿ ಬ್ಯಾಕ್ ಟು ಬ್ಯಾಕ್ ಬರುವ ಹಾಡುಗಳು ಕಥೆಯ ಓಟಕ್ಕೆ ಸ್ವಲ್ಪ ಕಡಿವಾಣ ಹಾಕುತ್ತದೆ.

ಗಣೇಶ್ ಹಾಗೂ ದಿಗಂತ್ ಕಾಲೇಜಿಗೆ ಮರಳಿ ಬರಲು ಕಾರಣಗಳಿದ್ದವು. ಆದರೆ ಪವನ್ ಯಾಕೆ ಬಂದರು ಎನ್ನುವುದು ಗೊತ್ತಾಗಲಿಲ್ಲ. ಚಿತ್ರ ಆರಂಭವಾಗಿ ಕೆಲವೇ ನಿಮಿಷಗಳಾದ ಮೇಲೆ ಗಣೇಶ್ ನಾಯಕಿಯನ್ನು ಪಟಾಯಿಸಲು ನದಿಯಲ್ಲಿ ಈಜು ಬರದಂತೆ ನಟಿಸುವ ಸನ್ನಿವೇಶವೊಂದಿದೆ. ಪಕ್ಕದಲ್ಲೇ ಸೇತುವೆ ಇದ್ದರೂ ನಾಯಕ, ನಾಯಕಿ ನದಿಯೊಳಕ್ಕೆ ಇಳಿದು ದಾಟಲು ಹೊರಟಿದ್ದು ಸ್ವಲ್ಪ ವಿಚಿತ್ರ ಅನ್ನಿಸಿತು. 

ಇನ್ನು ಹಾಡುಗಳಂತೂ ಆಹಾ. ಜಯಂತ್ ಕಾಯ್ಕಿಣಿ ಬರೆದ ನೀನು ಬಗೆಹರಿಯದ ಹಾಡು, ನಾನಾಡದ ಮತ್ತೆಲ್ಲವ ಕದ್ದಾಲಿಸು ಹಾಗೂ ಯೋಗರಾಜ್ ಭಟ್ಟರು ಬರೆದ ನಾವು ಬದುಕಿರಬಹುದು ಪ್ರಾಯಶಃ ಈ ಹಾಡುಗಳಂತೂ ಪದೇ ಪದೇ ಗುನುಗುವಂತೆ ಮಾಡುತ್ತವೆ. ಭಟ್ಟರು ಬರೆದ ದೇವ್ಲೇ ದೇವ್ಲೇ ಹಾಡಂತೂ ಪಡ್ಡೆ ಹುಡುಗರ ಪಾಲಿಗೆ ಒಳ್ಳೆಯ ಕಿಕ್ ನೀಡುತ್ತದೆ. ಹಾಗೆಯೆ ಎಕ್ಸಾಂ ಕುರಿತಾದ ಹಾಡು ಸಹ ಇಷ್ಟವಾಗುತ್ತವೆ. ಗಣೇಶ್ ಮಗ ವಿಹಾನ್ ದು ಇಲ್ಲಿ ಚಿಕ್ಕ ಪಾತ್ರ. ಒಳ್ಳೆಯ ಎಂಟ್ರಿ. ಇನ್ನು ವಿಜಯ್ ಸೂರ್ಯ ಮಾತ್ರ ಸರ್ಪ್ರೈಸ್ ಎಂಟ್ರಿ.

ಸಿನಿಮಾ ಲೊಕೇಷನ್ನುಗಳು ಬಹಳ ಚನ್ನಾಗಿದೆ. ಕುದುರೆಮುಖ, ಟರ್ಕಿ ಇತ್ಯಾದಿ ಸ್ಥಳಗಳು ಕಣ್ಣಿಗೆ ಮುದ ನೀಡುತ್ತವೆ. ಆದರೆ ಚಿತ್ರದಲ್ಲಿ ಜೋಗ ಜಲಪಾತವನ್ನು ಸುಮ್ಮನೆ ಮೂರು ಸೆಕೆಂಡ್ ಕಾಲ ತೋರಿಸಿದರು ಅಷ್ಟೇ. ಜೋಗ ಜಲಪಾತವಲ್ಲದೆ ಬೇರೆ ಯಾವುದೇ ಜಲಪಾತ ತೋರಿಸಿದ್ದರೂ ಯಾವೂದೇ ನಷ್ಟವಿರಲಿಲ್ಲ. 

ಕಾರಣಾಂತರಗಳಿಂದ ಕಾಲೇಜಿಗೆ ಬಂದು ಕನ್ನಡ ಕಲಿಯಲು ಮುಂದಾಗುವ ಮೂವರು ಯುವಕರು, ಅವರಿಗೊಬ್ಬ ಕನ್ನಡ ಲೆಕ್ಚರು, ಆ ಲೆಕ್ಚರ್ ಗೆ ಒಬ್ಬ ಕಾಣೆಯಾದ ಮಗ.. ಇಂತಹ ಕಥಾ ಹಂದರದಲ್ಲಿ ಸಾಕಷ್ಟು ಟ್ವಿಸ್ಟ್ ಇದೆ. ನಗೆಯ ಚಿಲುಮೆಯೇ ಇದೆ. ಭಾವನಾತ್ಮಕ ಸನ್ನಿವೇಶಗಳಿವೆ, ತಾಯಿಯ ಪ್ರೀತಿ ಇದೆ. ಗುರು - ಶಿಷ್ಯರ ಅವಿನಾಭಾವ ಸಂಬಂಧವೂ ಇದೆ. ಎರಡು ಮೂರು ಸಾಧಾರಣ ಚಿತ್ರಗಳನ್ನು ಮಾಡಿದ್ದ ಯೋಗರಾಜ ಭಟ್ಟರು ಇನ್ನೊಮ್ಮೆ ಒಳ್ಳೆಯ ಕಥೆಯ ಮೂಲಕ ಮರಳಿ ಬಂದಿದ್ದಾರೆ. 

ಇನ್ನು ನಟನೆ ವಿಷಯಕ್ಕೆ ಬಂದರೆ ಹಲವಾರು ಫುಲ್ ಮಾರ್ಕ್ಸ್ ಪಡೆಯುತ್ತಾರೆ. ಕನ್ನಡ ಲೆಕ್ಚರ್ ಪಾತ್ರಧಾರಿ ಅನಂತ್ ನಾಗ್ ಅಂತೂ ವಾಹ್.. ಅವರ ಅಭಿನಕ್ಕೆ ಸಾಟಿಯೇ ಇಲ್ಲ. ಇನ್ನು ಗಣೇಶ್. ಇಂದಿನ ತಮ್ಮ ನಗಿಸುವ, ನಗಿಸುತ್ತಲೇ ಅಳಿಸುವ ಪಾತ್ರದಲ್ಲಿ ಮತ್ತೊಮ್ಮೆ ಮೋದಿ ಮಾಡಿದ್ದಾರೆ. ಗಂಭೀರ ಪಾತ್ರದಲ್ಲಿ ಪವನ್ ಇಷ್ಟವಾಗುತ್ತಾರೆ. ಗಣೇಶ್ ಅಂತಹ ಕಚಗುಳಿ ನಟರು ಇದ್ದರೂ ಸಿನಿಮಾದಲ್ಲಿ ಅತ್ಯಂತ ಹೆಚ್ಚು ನಗಿಸುವವರು ದಿಗಂತ್. ದಿಗಂತ್ ಅವರನ್ನು ಅಘೋರಿ ರೂಪದಲ್ಲಿ ನೋಡುವುದೇ ಮಜಾ. ದಿಗಂತ್ ತೆರೆಯ  ಮೇಲೆ ಇದ್ದಷ್ಟು ಹೊತ್ತು ನಗುವಿಗೆ ನಗುವಿಗೆ ಕೊರತೆಯೇ ಇಲ್ಲ. ರಂಗಾಯಣ  ರಘು, ಸುಧಾ ಬೆಳವಾಡಿ, ಪದ್ಮಜಾ, ಶ್ರೀನಾಥ್ ಅವರುಗಳು ಬಹಳ ಇಷ್ಟವಾಗುತ್ತಾರೆ. ಬುಲೆಟ್ ಪ್ರಕಾಶ್ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯರಾದ ವೈಭವೀ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. 

ಪ್ಯಾನ್ ಇಂಡಿಯಾ, ಬಾಲಿವುಡ್, ಟಾಲಿವುಡ್, ಕಾಲಿವುಡ್ ಇತ್ಯಾದಿ ಸಿನಿಮಾಗಳಗಳ ಅಬ್ಬರಗಳ ನಡುವೆ ಅಚ್ಚ ಕನ್ನಡದ ಸಿನಿಮಾ ಬಹಳ ಇಷ್ಟವಾಗುತ್ತದೆ. ಈ ನೋಡುಗರಿಗಂತೂ ಪೈಸೆ ವಸೂಲ್ ಪಕ್ಕಾ. ಸಾಧ್ಯವಾದರೆ ಸಿನಿಮಾ ಮಂದಿರಗಳಿಗೆ ತೆರಳಿ ಈ ಚಿತ್ರ ವೀಕ್ಷಿಸಿ.