Wednesday, April 2, 2014

ಕಾದಂಬರಿಯ ನಡುವೆ (ಕಥೆ)


                ಹರೆಯದ ಹುಮ್ಮಸ್ಸಿನಲ್ಲಿ ಆತ ಇದ್ದಕ್ಕಿದ್ದಂತೆ ಹುಕಿಗೆ ಬಿದ್ದು ಬರೆಯಲು ಆರಂಭಿಸಿದ. ಬರೆಯುವ ತುಡಿತ ಆತನನ್ನು ಅತಿಯಾಗಿ ಕಾಡಿದ ಪರಿಣಾಮ ಆತ ಬರವಣಿಗೆಯನ್ನು ಶುರುಮಾಡಿದ್ದ.
                  ಬರೆಯಲು ಪೆನ್ನು ಹಾಳೆಗಳನ್ನು ಎತ್ತಿಟ್ಟುಕೊಂಡವನಿಗೆ ಏನು ಬರೆಯಬೇಕೆಂಬುದು ಆರಂಭದಲ್ಲಿಯೇ ಸಮಸ್ಯೆಯಾಗಿ ಕಾಡಿತು. ಕವಿತೆ ಯಾಕೋ ಹಿಡಿಸಲಿಲ್ಲ. ಪ್ರಬಂಧಗಳನ್ನು ಬರೆಯಲು ಮನಸ್ಸಾಗಲಿಲ್ಲ. ಕತೆ ಬರೆಯೋಣ ಎಂದರೆ ತನ್ನಲ್ಲಿ ಸಿಕ್ಕಾಪಟ್ಟೆ ಸರಕಿದೆ ಕಥೆಯಲ್ಲಿ ಪೂರ್ತಿ ಹೇಳಹೊರಟರೆ ಅಸ್ಪಷ್ಟವಾಗುತ್ತದೆ ಎಂದುಕೊಂಡ. ಕಾದಂಬರಿಯೇ ತನ್ನ ಪಾಲಿಗೆ ಸರಿ, ಕಾದಂಬರಿಯನ್ನೇ ಬರೆದುಬಿಡೋಣ ಎಂದುಕೊಂಡು `ಕಾದಂಬರಿಯ ನಡುವೆ' ಎಂದು ಹೆಸರನ್ನಿಟ್ಟುಬಿಟ್ಟ.
                  ಕಾದಂಬರಿಗೊಬ್ಬ ನಾಯಕನನ್ನು ಚಿತ್ರಿಸಿದ. ಆತನ ವ್ಯಕ್ತಿಯ ಜನನ, ತುಂಟತನದ ಬಾಲ್ಯ, ಓದು, ಆಟ, ತರಲೆ ಇತ್ಯಾದಿಗಳನ್ನು ಆರಂಭದಲ್ಲಿ ಒಳಗೊಂಡ ಕಾದಂಬರಿ ಸರಾಗವಾಗಿ ಮುಂದಕ್ಕೋಡಿತು ಕಾದಂಬರಿಕಾರನ ಮನಸ್ಸಿನಂತೆ. ಕಾದಂಬರಿಕಾರ ಹರೆಯದಲ್ಲಿದ್ದ ಕಾರಣ ಹರೆಯದ ವರೆಗೂ ಕಾದಂಬರಿಗೆ ತೊಡಕುಂಟಾಗಲಿಲ್ಲ. ಹದಿವಯಸ್ಸಿನ ತುಮುಲಗಳು, ಕಾಡುವ ಹುಡುಗಿಯರ ಆಕರ್ಷಣೆ, ಕುಡಿನೋಟದಲ್ಲಿ ಹುಡುಗಿಯರನ್ನು ಸೆಳೆದಿದ್ದು, ಅವರಿಂದ ಮಾರುತ್ತರ ಬಂದಿದ್ದು, ನಡು ನಡುವೆ ಓಡು ಮುಂದಕ್ಕೆ ಸಾಗಿದ್ದು ಇತ್ಯಾದಿಗಳೆಲ್ಲವನ್ನೂ ತನ್ನ ಕಾದಂಬರಿಯಲ್ಲಿ ಬರೆದ.
                 ಕಾಲೇಜು ಜೀವನ, ಹುಡುಗಿಯೊಬ್ಬಳ ಪ್ರೇಮಪಾಶದಲ್ಲಿ ಬಂಧಿಯಾಗಿದ್ದು, ಮನಸ್ಸಿನೊಡನೆ ಆಟವಾಡಿದ್ದೆಲ್ಲವೂ ಕಾದಂಬರಿಯಲ್ಲಿನ ಸಾಲುಗಳಾದವು, ಜೀವಂತಿಕೆಯ ಸಂಕೇತದಂತಾದವು. ಕಾದಂಬರಿಯ ಆರಂಭದಲ್ಲಿ  ಹುಮ್ಮಸ್ಸಿತ್ತು. ಸರಾಗವಾಗಿ ಓಡಿತು. ಹಲವಾರು ಪುಟಗಳು ಜೀವತಳೆದವು. ಸರಸರನೆ ಪಾತ್ರಗಳು ಸರಿದುಹೋದವು. ಇದ್ದಕ್ಕಿದ್ದಂತೆ ಕಾದಂಬರಿಕಾರನಿಗೆ ಏನನ್ನಿಸಿತೋ ಏನೋ ಕಾದಂಬರಿ ಬರವಣಿಗೆಯನ್ನು ನಿಲ್ಲಿಸಿಬಿಟ್ಟ. ಏನು ಮಾಡಿದರೂ ಕಾದಂಬರಿ ಬರೆಯಲು ಮನಸ್ಸಾಗುತ್ತಿಲ್ಲ ಎನ್ನುವ ಭಾವ ಕಾಡಿತ್ತು. ಪರಿಣಾಮ ಕಾದಂಬರಿಗೆ ಅರ್ಧವಿರಾಮ ಬಿದ್ದಿತ್ತು.
                ಈ ನಡುವೆ ಕಾದಂಬರಿಕಾರನ ಹರೆಯ ನಿಧಾನಕ್ಕೆ ಸರಿದುಹೋಯಿತು. ಬದುಕಿನ ಒತ್ತಡಗಳು ಆತನ ತಲೆಯನ್ನೇರಿದವು. ಜೀವನದ ಕಡಲಿನಲ್ಲಿ ಈಜುವ ಸಾಹಸದಲ್ಲಿ ಆತ ಸಿಲುಕಬೇಕಾಯಿತು. ಹಾಗೂ ಹೀಗೂ ಬದುಕಿನಲ್ಲೊಂದು ದಡವನ್ನೂ ಮುಟ್ಟಿದ. ಬದುಕಿನ ತೊಳಲಾಟಗಳ ನಡುವೆ ಕಾದಂಬರಿಯ ಬರವಣಿಗೆ ಅರ್ಧಕ್ಕೆ ನಿಂತುಹೋಯಿತು. ಮತ್ತೊಮ್ಮೆ ನೆನಪಾದಾಗ ಕಾದಂಬರಿಯ ಸಾಲುಗಳಲ್ಲಿ ಬದುಕು, ನಿರ್ವಹಣೆ, ಉದ್ಯೋಗ ಪಡೆಯುವ ತೊಳಲಾಟ, ಮನೆ ಮಂದಿಯನ್ನು ಸಾಕುವ ಕೆಲಸ, ಬದುಕಿನ ಹೋರಾಟಗಳನ್ನೆಲ್ಲ ಬರೆದ. ಅಷ್ಟರಲ್ಲಿ ಆತನ ಮದುವೆಯಾಯಿತು.
                 ಮದುವೆಯ ನಂತರದ ಸವಿ ಜೀವನದಲ್ಲಿ ಕಾದಂಬರಿಕಾರನಿಗೆ ಕಾದಂಬರಿ ಬರೆಯುವುದು ನೆನಪಾಗಲೇ ಇಲ್ಲ. ನಾಲ್ಕೈದು ವಸಂತಗಳು ಹಾಗೆ ಸುಮ್ಮನೆ ಜರುಗಿದವು. ಮದುವೆಯಾದ ತರುವಾಯ ಮಕ್ಕಳೂ ಆದವು. ಕಾದಂಬರಿಕಾರ ಸಂಸಾರದಲ್ಲಿ ಬಿದ್ದಿದ್ದ. ಮಕ್ಕಳು ನಿಧಾನವಾಗಿ ದೊಡ್ಡವರಾಗತೊಡಗಿದಾಗ ಮತ್ತೊಮ್ಮೆ ಆತನಿಗೆ ಕಾದಂಬರಿ ಬರೆಯುವುದು ನೆನಪಾಯಿತು. ಮತ್ತೆ ಬರೆಯಲಾರಂಭಿಸಿದ. ಬರವಣಿಗೆ ಕಾದಂಬರಿಕಾರನ ಬದುಕಿನಂತೆಯೇ ಮದುವೆ, ಮಕ್ಕಳು ಹಾಗೂ ಸಂಸಾರದತ್ತ ಹೊರಳಿತು. ಬದುಕಿನಲ್ಲಿ ಸಂಸಾರದ ಚಿತ್ರಣವನ್ನು ಸಾಲುಗಳಾಗಿ ಮೂಡಿಸಿದ ಕಾದಂಬರಿಕಾರ. ಕಾದಂಬರಿ ದೀರ್ಘವಾಗುತ್ತಿತ್ತು. ಬದುಕಿನ ಮಜಲುಗಳನ್ನೆಲ್ಲ ಆಪೋಶನ ತೆಗೆದುಕೊಳ್ಳುತ್ತ ಬೆಳೆಯುತ್ತಿತ್ತು. ಕಾದಂಬರಿಕಾರನ ಮಕ್ಕಳು ದೊಡ್ಡವರಾದರು. ಆತನ ತಲೆಯಲ್ಲಿ ನಿಧಾನವಾಗಿ ಹಣ್ಣು ಹಣ್ಣು ಕೂದಲು ಕಾಣಿಸಿಕೊಳ್ಳತೊಡಗಿತು. ಅಕ್ಷರದ ರೂಪ ಪಡೆಯಬೇಕಿದ್ದ ನೀಲಿಯನ್ನು ತನ್ನ ಬೆಳ್ಳಗಾದ ಕೂದಲಿಗೆ ಹಚ್ಚಿಕೊಳ್ಳುತ್ತಿದ್ದಂತೆಯೇ ಮತ್ತೊಮ್ಮೆ ಕಾದಂಬರಿ ನೆನಪಾಯಿತು.
                 ಹೀಗಿರುತ್ತಲೇ ಮಕ್ಕಳು ಓದು ಮುಗಿಸಿದರು. ದೂರದೂರಿನಲ್ಲೆಲ್ಲೋ ಉದ್ಯೋಗವೂ ಸಿಕ್ಕಿತು. ಹಕ್ಕಿಗಳಂತೆ ಮಕ್ಕಳು ಹಾರಿ ಹೋದರು. ಮನೆಯಲ್ಲಿ ಕಾದಂಬರಿಕಾರ ಹಾಗೂ ಆತನ ಮಡದಿ ಇಬ್ಬರೇ ಉಳಿದರು. ಜೊತೆ ಜೊತೆಯಲ್ಲಿಯೇ ಕಾದಂಬರಿಕಾರನ ಮಕ್ಕಳಿಗೆ ಮದುವೆಯೂ ಆಯಿತು. ನೋಡ ನೋಡುತ್ತಿದ್ದಂತೆಯೇ ಕಾದಂಬರಿಕಾರನನ್ನು ಮುಪ್ಪು ಆವರಿಸಿತು. ಈ ಸಂದರ್ಭದಲ್ಲಿ ಕಾದಂಬರಿ ಅರ್ಧಕ್ಕೆ ನಿಂತಿರುವುದು ಅರಿವಾಗಿ ಮತ್ತೊಮ್ಮೆ ಅಕ್ಷರಗಳನ್ನು ಪೋಣಿಸಲಾರಂಭಿಸಿದ. ಶ್ರಮದ ಬದುಕು ಕಾದಂಬರಿಕಾರನಿಗೆ ಅಸಾಧ್ಯವಾಗಿತ್ತು. ಬರವಣಿಗೆಯೇ ಆತನ ಪಾಲಿಗೆ ಗೆಳೆಯ-ಗೆಳತಿ ಹಾಗೂ ಬದುಕಾಗಿತ್ತು. ಹೀಗಿರುವಾಗಲೇ ಕಾದಂಬರಿಕಾರನ ಹೆಂಡತಿಯೂ ಇದ್ದಕ್ಕಿದ್ದಂತೆ ತೀರಿಕೊಂಡಳು. ಕಾದಂಬರಿಕಾರ ಈ ಎಲ್ಲ ಅಂಶಗಳನ್ನೂ ತನ್ನ ಕಾದಂಬರಿಯಲ್ಲಿ ಸೇರಿಸಿದ.
                  ಹೀಗಿರುವಾಗ ಒಂದು ದಿನ ಕಾದಂಬರಿಕಾರನಿಗೆ ತನ್ನ ಕಾದಂಬರಿಯನ್ನು ಮುಗಿಸಬೇಕು ಎನ್ನುವ ಆಲೋಚನೆಯೂ ಬಂದಿತು. ಕಥಾನಾಯಕನ ಪಾತ್ರಕ್ಕೆ ಅಂತ್ಯವನ್ನೂ ಹಾಡಬೇಕು, ಕಾದಂಬರಿ ದೀರ್ಘವಾಯಿತು ಎಂದುಕೊಂಡ. ಹಾಗೆಯೇ ಒಂದು ದಿನ ಕಾದಂಬರಿಯನ್ನೂ ಮುಕ್ತಾಯಗೊಳಿಸಿದ. ಮುಕ್ತಾಯಗೊಳಿಸಿದ ಕೆಲವು ಘಳಿಗೆಯಲ್ಲಿ ಕಾದಂಬರಿಕಾರನೂ ತನ್ನ ಬದುಕನ್ನು ನಿಲ್ಲಿಸಿದ.
                 ಕಾದಂಬರಿಕಾರ ಸತ್ತ ನಂತರ ಆತನ ಮಕ್ಕಳು ಆತ ಬರೆದಿದ್ದ ಕಾದಂಬರಿಯನ್ನು ಪ್ರಕಟಿಸಿದರು. ಜೀವನದಲ್ಲಿ ಜೀವನದ ಬಗ್ಗೆ ಬರೆದಿದ್ದ ಏಕೈಕ ಕಾದಂಬರಿ ಜಗದ್ವಿಖ್ಯಾತವಾಗಿತ್ತು. ಹಿಂದೆಂದೂ ಮಾಡದಂತಹ ದಾಖಲೆಗಳನ್ನು ಆ ಕಾದಂಬರಿ ಮಾಡಿತು. ಕಥಾನಾಯಕನನ್ನು ನೆಪವಾಗಿಸಿಕೊಂಡು ತನ್ನ ಬದುಕನ್ನೇ ಚಿತ್ರಿಸಿಕೊಂಡಿದ್ದ ಕಾದಂಬರಿಕಾರ. ತನ್ಮೂಲಕ ಮರೆಯಲಾಗದ ಕಾದಂಬರಿಯನ್ನು ಕೊಟ್ಟಿದ್ದ ಆತ. ಕಾದಂಬರಿಗೆ ಸಾಹಿತ್ಯ ಲೋಕದ ಹಲವಾರು ಪ್ರಶಸ್ತಿಗಳು ಬಂದವು. ವಿಮರ್ಷಕರಂತೂ ಈ ಶತಮಾನದ ಅಪರೂಪದ ಕೃತಿ, ಜೀವನದಲ್ಲಿ ಒಮ್ಮೆ ಓದಲೇಬೇಕಾದಂತಹದ್ದು ಎಂದೆಲ್ಲ ಹೇಳಿಬಿಟ್ಟರು. ಕಾದಂಬರಿಯ ನಡುವೆ ಪಾತ್ರವಾಗಿ, ಮರೆಯಲಾಗದ ಪಾತ್ರವನ್ನು ಚಿತ್ರಿಸಿದ ಕಾದಂಬರಿಕಾರ ಅಮರನಾಗಿದ್ದ.  ಕಾದಂಬರಿ ಜಗದ್ವಿಖ್ಯಾತವಾಗಿತ್ತು.

**

No comments:

Post a Comment