Tuesday, September 25, 2018

ಪ್ರೀತಿಯ ಎರಡು ಕಿರುಗತೆಗಳು

ಪ್ಯಾಂಟು-ಪ್ರೀತಿ

`ಪ್ರೀತಿ ಅಂದರೆ ಜೀನ್ಸ್ ಪ್ಯಾಂಟಿನ ಥರಾ ಕಣೋ..' ಅವಳಂದಳು
`ಯಾಕೆ..ಹಾಗೆ..?' ನಾನು ಕೇಳಿದೆ..
`ಜೀನ್ಸ್ ಪ್ಯಾಂಟ್ ನೋಡು ಎಷ್ಟು ರಫ್ & ಟಫ್. ಅಂತ.. ಎಷ್ಟೇ ಸಾರಿ ಹಾಕಿದ್ರೂ ಹಾಳಾಗೋಲ್ಲ. ಕೊಳಕಾದ್ರೂ ತೊಂದ್ರೆ ಇಲ್ಲ.. ಮತ್ತೆ ಮತ್ತೆ ಹಾಕ್ಕೋಬಹುದು.. ಒಂಥರಾ ಖುಷಿ ಕೊಡುತ್ತೆ... ಪ್ರೀತಿ ಕೂಡ ಹಾಗೇ ಅಲ್ವಾ..' ಅವಳೆಂದಳು..
`ಆದ್ರೆ ಜೀನ್ಸು ಹರಿಯಬಾರದ ಜಾಗದಲ್ಲೇ ಹರಿಯುತ್ತಲ್ಲೇ...ಅದಕ್ಕೆ ಹೊಲಿಗೆ ಕೂಡ ಬಹಳ ಕಷ್ಟ ಮಾರಾಯ್ತಿ..' ಎಂದೆ..
`ತೂ.. ಹೋಗೋ' ಎಂದಳು..
`ಪ್ರೀತಿ ಅಂದರೆ ಫಾರ್ಮಲ್ಸ್ ಪ್ಯಾಂಟ್ ಥರಾ ಕಣೆ...' ಅಂದೆ.
`ಓಹೋ...' ಅಂದವಳು `ಹೇಗೆ..?' ಅಂದಳು..
`ಆ ಪ್ಯಾಂಟುಗಳು ಎಷ್ಟು ಡೀಸೆಂಟ್ ಅಲ್ವಾ..? ನೋಡಿದ ತಕ್ಷಣ ಏನೋ ಗೌರವ ಮೂಡುತ್ತದೆ. ಮತ್ತೆ ಮತ್ತೆ ಫಾರ್ಮಲ್ಸ್ ಹಾಕಬೇಕು ಎನ್ನಿಸುತ್ತದೆ...' ಎಂದೆ.
`ಆದರೆ..' ಎಂದ ಅವಳು `ನನ್ನಂತಹ ಮಾಸ್ ನವರಿಗೆ ಫಾರ್ಮಲ್ಸ್ ಇಷ್ಟ ಆಗೋದಿಲ್ಲ ಕಣೋ..' ಎಂದಳವಳು..
ನಾನು ಆಲೋಚಿಸಿದೆ.. ಕೊನೆಗೆ ಹೇಳಿದೆ.
`ಬಿಡು.. ಪ್ರೀತಿ ಜೀನ್ಸ್ ಬೇಕಾದರೂ ಆಗಿರಲಿ.. ಫಾರ್ಮಲ್ಸ್ ಬೇಕಾದರೂ ಆಗಿರಲಿ. ಆಯ್ಕೆ ನಮ್ಮದೇ ಅಲ್ಲವಾ..? ಎರಡನ್ನೂ ಪ್ರಯತ್ನಿಸಿದರಾಯಿತು..' ಎಂದೆ.. ಕಣ್ಣುಮಿಟುಕಿಸಿದೆ..
ಒಮ್ಮೆ ಕೈಯನ್ನು ಚಿವುಟಿದಳು..
ಹಾಯ್ ಎಂದೆ.. ನಕ್ಕಳು..

-----------------

ಚಂದಮಾಮ

ನಾನು ನಿಂಗೋಸ್ಕರ ಬಾನಿನ ಚಂದಮಾಮನನ್ನೇ ಕೈಯಲ್ಲಿ ಹಿಡಿದು ತಂದುಕೊಡುತ್ತೇನೆ...' ಅದೊಂದು ಸಿನಿಮಾದಲ್ಲಿ ಹೀರೋ ಹೇಳುತ್ತಿದ್ದಂತೆ ಅವಳು ಕೇಳಿದಳು `ನೀನೂ ನಂಗೋಸ್ಕರ ಚಂದಮಾಮನನ್ನು ತರುತ್ತೀಯಾ..?'
ನಾನೆಂದೆ `ಊಹೂಂ..' ಅವಳ ಕಣ್ಣಲ್ಲಿ ಹನಿಗೂಡಿತ್ತು... ಅದು ಭೂಮಿಗಿಳಿಯುವ ಮೊದಲೇ ಹೇಳಿದ್ದೆ..
`ಚಂದಮಾಮನನ್ನು ತರುವುದು ಅಸಾಧ್ಯ ಎನ್ನೋದು ನಿಂಗೂ ಗೊತ್ತು ನಂಗೂ ಗೊತ್ತು... ಅದರ ಬದಲು ಒಂದು ಕೆಲಸ ಮಾಡೋಣ.. ನಾನು-ನೀನು ಇಬ್ಬರೂ ಸೇರಿ ಚಂದಮಾಮನ ನಾಡಿಗೊಂದು ಯಾನ ಮಾಡೋಣ... ಅಲ್ಲಿ ನಾನು ನೀನು ಇಬ್ಬರೇ ಇದ್ದುಬಿಡೋಣ...' ಎಂದೆ.
ಕಣ್ಣೀರು ಇಂಗಿ ಆನಂದಭಾಷ್ಪ ಸುರಿದಿತ್ತು. ಬೆಚ್ಚಗೆ ಅವಳು ತಬ್ಬಿಕೊಂಡಿದ್ದಳು..

ಭಾವಗಳು


ಹಳೆಯ ಡೈರಿಗೆ ಒರಲೆ ಹಿಡಿದಿದೆ
ನೆನಪು ಮಾಸಿದೆ ಮನದಲಿ|...
ಬದುಕು ಹಳಸಿದೆ ನಗುವ ಮರೆತಿದೆ
ನಲಿವು ಅಡಗಿದೆ ಎದೆಯಲಿ||

ನೂರು ಕಾಲದ ಕನಸು ಕರಗಿದೆ
ತುಕ್ಕು ಹಿಡಿದಿದೆ ಭಾವಕೆ|
ನಿಶೆಯ ಕೂಗಿಗೆ ಉಸಿರು ನಡುಗಿದೆ
ಭಯವು ಹೆಚ್ಚಿದೆ ತನುವಲಿ||

ಹಳೆಯ ಜಾಗದಿ ಹೊಸತು ಮುಡಿದೆ
ಕವಿತೆ ಹುಟ್ಟಿದೆ ಚಿತ್ತದಿ|
ಮನದಿ ಹೀಗೆಯೆ ಮಧುರ ಭಾವವು
ಚಣದಿ ಮೂಡಿದೆ ಅರಿಯದೆ||

Thursday, September 20, 2018

ಬಂಡೂಲ (ನಾನು ಓದಿದ ಪುಸ್ತಕಗಳು-೪)


ನಾನು ಇಷ್ಟಪಟ್ಟು ಕೈಗೆತ್ತಿಕೊಂಡ ಪುಸ್ತಕ ಬಂಡೂಲ. ಆದರೆ ಕಷ್ಟಪಟ್ಟು ಓದಿ ಮುಗಿಸಿದ ಪುಸ್ತಕ ಇದು ಎಂದರೆ ತಪ್ಪಾಗಲಿಕ್ಕಿಲ್ಲ.
ಬಿಲ್ಲಿ ವಿಲಿಯಮ್ಸ್ ಎಂಬ ಆನೆ ಮಾನವನ ಕುರಿತು ಇಂಗ್ಲೀಷಿನಲ್ಲಿ ವಿಕಿ ಕಾನ್ಸ್ ಟೆಂಟೇನ್ ಕ್ರೂಕ್ ಬರೆದಿರುವ ಪುಸ್ತಕವನ್ನು ರಾಜ್ಯಶ್ರೀ ಕುಳಮರ್ವ ಅವರು ಕನ್ನಡಕ್ಕೆ ತಂದಿದ್ದಾರೆ.
೧೯೧೫ರಿಂದ ೧೯೪೫ರ ವರೆಗಿನ ಕಾಲಘಟ್ಟದಲ್ಲಿನ ಸನ್ನಿವೇಶಗಳನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಮಾನವ ಹಾಗೂ ಆನೆಯ ಸಂಬಂಧವನ್ನು ಅವಿನಾಭಾವವಾಗಿ ತೆರೆದಿಡುವ ಕೆಲಸವನ್ನು ಪುಸ್ತಕ ಮಾಡುತ್ತದೆ. ೧೯೨೦ರ ದಶಕದಲ್ಲಿ ತೇಗದ ಮರದ ಉದ್ದಿಮೆಗಾಗಿ ನಮ್ಮ ದೇಶದ ಪಕ್ಕದಲ್ಲೇ ಇರುವ ಬರ್ಮಾಕ್ಕೆ ಆಗಮಿಸುವ ಬಿಲ್ಲಿ ವಿಲಿಯಮ್ಸ್ ಅಥವಾ ಎಲಿಫೆಂಟ್ ಬಿಲ್, ಆ ನಾಡಿನಲ್ಲಿ ಒಂದಾಗುವ ಅಂಶಗಳನ್ನು ಕ್ರುಕ್ ಬಹಳ ಸವಿಸ್ತಾರವಾಗಿ ತಿಳಿಸಿದ್ದಾರೆ.
೧೯೨೦ರ ದಶಕದ ಭಾರತ, ಆ ಸಂದರ್ಭದಲ್ಲಿನ ಬರ್ಮಾ, ಅಲ್ಲಿನ ಬೌದ್ಧ ಧರ್ಮ, ಆನೆಗಳು, ತೇಗದ ಮರಗಳಿಗಾಗಿ ಬ್ರಿಟಿಷ್ ಕಂಪನಿಗಳು ಮಾಡುವ ಕಾರ್ಯಗಳು ಇತ್ಯಾದಿಗಳ ಕುರಿತು ಹೆಚ್ಚಿನ ಮಾಹಿತಿಗಳು ಈ ಪುಸ್ತಕದಲ್ಲಿ ಲಭ್ಯವಾಗುತ್ತವೆ. ಅದೇ ರೀತಿ ೧೯೩೯ರಿಂದ ೧೯೪೫ರ ಅವಧಿಯಲ್ಲಿ ನಡೆದ ೨ನೇ ಮಹಾಯುದ್ಧದ ಸಂದರ್ಭದ ಘಟನೆಗಳೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ವಿವರಿಸಲ್ಪಟ್ಟಿದೆ.
ವಿಶ್ವದ ಕ್ಲಿಷ್ಟ ಭಾಷೆಯಲ್ಲಿ ಒಂದು ಬರ್ಮೀಸ್. ಅದನ್ನು ಕಲಿಯುವ ಬಿಲ್ಲಿ, ತದ ನಂತರ ತನ್ನ ಕುತೂಹಲವನ್ನು ಆನೆಗಳ ಕಡೆಗೆ ತೋರಿಸುವುದು, ಬರ್ಮಾದ ನೂರಾರು ಆನೆಗಳ ಜತೆ ಒಡನಾಡುವುದು, ಅವುಗಳ ದೇಖರೇಖಿ ನೋಡಿಕೊಳ್ಳುವುದು, ಖಾಯಿಲೆಗಳಿಗೆ ಔಷಧಿ ಒದಗಿಸುವುದು, ಆಸ್ಪತ್ರೆ ತೆರೆಯುವುದು ಇವೆಲ್ಲ ಇಷ್ಟವಾಗುತ್ತವೆ. ಬಂಡೂಲ ಎಂಬ ಮಹಾ ದೈತ್ಯ ಆನೆ ಬಲ್ಲಿಯ ಒಡನಾಡಿಯಾಗುವುದು, ಆತನನ್ನು ಆನೆ ಹಾಗೂ ಆನೆಯನ್ನು ಆತ ಕಾಪಾಡುವುದೂ ಕೂಡ ಪುಸ್ತಕದ ಪ್ರಮುಖ ಅಂಶಗಳಲ್ಲಿ ಒಂದು.
ಪುಸ್ತಕ ಬರೆದ ವಿಕ್ಕಿಯವರು ಹೇಳಿಕೊಳ್ಳುವಂತೆ ಬಿಲ್ಲಿ ವಿಲಿಯಮ್ಸ್ ಆತ್ಮಕಥೆ ಬರೆಯುವ ಸಂದರ್ಭದಲ್ಲಿ ಮೂರ್ನಾಲ್ಕು ವರ್ಷ ಹೋಂ ವರ್ಕ್ ಮಾಡಿಕೊಂಡಿದ್ದರಂತೆ. ಬಿಲ್ಲಿ ವಿಲಿಯಮ್ಸ್ ಓಡಾಡಿದ ಸ್ಥಳಗಳಲ್ಲಿ ತಾವೂ ಓಡಾಟ ಮಾಡಿದ್ದರಂತೆ. ನೂರಾರು ಜನರನ್ನು ಸಂದರ್ಶನ ಮಾಡಿದ್ದರಂತೆ. ಈ ಕಾರಣದಿಂದ ಪುಸ್ತಕ ಬಹು ಸುದೀರ್ಘವಾಗಿದೆ.
ಇದನ್ನು ಕನ್ನಡಕ್ಕೆ ಅನುವಾಅದಿಸಿದ್ದು ನಮ್ಮದೇ ಕಾಸರಗೋಡಿನ ರಾಜ್ಯಶ್ರೀ ಕುಳಮರ್ವ. ರಾಜ್ಯಶ್ರೀ ಅವರೇ ಹೇಳುವಂತೆ ಇದು ತಮ್ಮ ಮೊಟ್ಟ ಮೊದಲ ಅನುವಾದದ ಪುಸ್ತಕವಂತೆ. ಬಿ. ಆರ್. ಶಂಕರ್ ಅನುವಾದ ಸಾಹಿತ್ಯ ಮಾಲೆ ಅಡಿಯಲ್ಲಿ ಛಂದ ಪುಸ್ತಕವು ಪ್ರಕಟಿಸಿದೆ. ಅನಾಮತ್ತು ೪೫೦ ಪುಟಗಳ ಪುಸ್ತಕ.
ರಾಜಜ್ಯಶ್ರೀಯವರದ್ದು ಮೊದಲ ಅನುವಾದಿತ ಪುಸ್ತಕವಾದ್ದರಿಂದ ಸ್ವಲ್ಪ ಮಾಫಿಯನ್ನು ನೀಡಬಹುದು. ಆದರೆ ಪುಸ್ತಕವನ್ನು ಬಹುವಾಗಿ ಎಳೆದಂತೆ ಅನ್ನಿಸುತ್ತದೆ. ಸಾಹಸಮಯ ಅಂಶವನ್ನು ತೀರಾ ಸಾಮಾನ್ಯವಾಗಿ ಹೇಳಲಾಗಿದೆಯೇನೋ ಅನ್ನಿಸುತ್ತದೆ. ಇನ್ನೂ ರೋಚಕವಾಗಿ ಕಟ್ಟಿಕೊಡಬಹುದಿತ್ತು. ಬಹುಶಃ ಇದು ಮೂಲ ಲೇಖಕಿ ವಿಕಿಯವರದ್ದೇ ತಪ್ಪಿರಬಹುದು. ಆದರೆ ರಾಜ್ಯಶ್ರೀಯವರು ಮೊದ ಮೊದಲ ಅಧ್ಯಾಯಗಳಲ್ಲಿ ಪಿನ್ ಟು ಪಿನ್ ಅನುವಾದಕ್ಕೆ ಯತ್ನಿಸಿದ್ದರಿಂದ ಓದುವಾಗ ಕೊಂಚ ಸಮಸ್ಯೆ ಆಗುತ್ತದೆ.
ರಾಜ್ಯಶ್ರಿಯವರು ೧೯೦೦ರ ಕಾಲದ ಪುಸ್ತಕ ಅನುವಾದ ಮಾಡಿದ್ದರಿಂದ, ಅದೇ ಕಾಲದ ಕನ್ನಡ ಬಳಕೆಗೆ ಯತ್ನಿಸಿರುವುದು ವಿಚಿತ್ರ ಎನ್ನಿಸುತ್ತದೆ. ಇನ್ನು ಕನ್ನಡಕ್ಕೆ ಅನುವಾದಿಸಿ ತಂದ ಸಂದರ್ಭದಲ್ಲಿ ಕನಿಷ್ಟ ೧೫೦ ಪುಟಗಳನ್ನು ಕಡಿಮೆ ಮಾಡಬಹುದಿತ್ತು. ಹಲವು ಅಂಶಗಳನ್ನು ಸುದೀರ್ಘ ಗೋಳಿಸಿದ್ದು, ಪುಸ್ತಕವನ್ನು ಸರಾಗಿ ಓದುವಲ್ಲಿ ಹಿನ್ನಡೆಯನ್ನು ಉಂಟುಮಾಡುತ್ತದೆ. ಈ ಕಾರಣದಿಂದಲೇ ನಾನು ಈ ಪುಸ್ತಕವನ್ನು ಇಷ್ಟಪಟ್ಟು ತೆಗೆದುಕೊಂಡರೂ ಕಷ್ಟಪಟ್ಟು ಓದಿ ಮುಗಿಸಿದೆ. (ಸಾಮಾನ್ಯವಾಗಿ ೧ ವಾರ ಅಥವಾ ೧೦ ದಿನಗಳ ಅಂತರದಲ್ಲಿ ದೊಡ್ಡ ಪುಸ್ತಕಗಳನ್ನು ಓದುವ ನಾನು ಈ ಪುಸ್ತಕ ಓದಲು ತೆಗೆದುಕೊಂಡಿದ್ದು ಬರೋಬ್ಬರಿ ೩ ತಿಂಗಳು)
ಮೂರು ಪ್ರಮುಖ ಭಾಗಗಳಾಗಿ ವಿಂಗಡನೆಯಾಗಿರುವ ಈ ಪುಸ್ತಕದಲ್ಲಿ ಮೂರನೇ ಭಾಗದಲ್ಲಿ ವೇಗ ಪಡೆದುಕೊಳ್ಳುತ್ತದೆ. ಬಹುಶಃ ಮೂರನೇ ಭಾಗಕ್ಕೆ ಬರುವ ವೇಳೆಗೆ ರಾಜ್ಯಶ್ರೀಯವರು ಅನುವಾದದಲ್ಲಿ ಪಳಗಿರಬೇಕು. ಮೊದಲೆರಡು ಭಾಗಗಳಲ್ಲಿ ನಿಧಾನವಾಗುವ ಓದು ಮೂರನೇ ಭಾಗದಲ್ಲಿ ಸರಾಗವಾಗುತ್ತದೆ. ರಾಜ್ಯಶ್ರೀಯವರು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೃತಿಗಳನ್ನು ಕನ್ನಡಕ್ಕೆ ತರಲಿ. ಆದರರೆ ಅನುವಾದದ ಸಂದರ್ಭದಲ್ಲಿ ಕೊಂಚ ಗಮನ ಹರಿಸಲಿ ಎನ್ನುವುದು ನನ್ನ ಚಿಕ್ಕ ಸಲಹೆ.

ವಿಚಿತ್ರ:
ಈ ಪುಸ್ತಕದಲ್ಲಿ ಜಪಾನಿಯರ ಕ್ರೌರ್ಯ, ಯುದ್ಧ ಇತ್ಯಾದಿಗಳನ್ನು ಸಾಕಷ್ಟು ವಿವರಿಸಲಾಗಿದೆ. ಓರ್ವ ಬ್ರಿಟೀಷ್ ಲೇಖಕಿಯಾಗಿ ವಿಕಿ ಕ್ರೂಕ್ ಜಪಾನಿಯರನ್ನು ಕಟ್ಟಿಕೊಡುತ್ತಾರೆ. ನಾವು ನಮ್ಮ ಇತಿಹಾಸಗಳಲ್ಲಿ ನೋಡಿದಂತೆ, ಬರ್ಮಾ, ಮಿಜೋರಾಮ್, ಮಣಿಪುರ ಇತ್ಯಾದಿ ಕಡೆಗಳಲ್ಲಿ ನಮ್ಮ ಹೆಮ್ಮೆಯ ಸುಭಾಷರು ಭಾರತದ್ದೇ ಫೌಜಿಗಳ ದಂಡು ಕಟ್ಟಿಕೊಂಡು ಸ್ವಾತಂತ್ರ್ಯ ಯುದ್ಧ ಮಾಡಿದರು ಎನ್ನುವುದನ್ನು ಕೇಳುತ್ತೇವೆ. ಆದರೆ ಬಂಡೂಲ ಪುಸ್ತಕದಲ್ಲಿ ಸುಭಾಷರ ಕುರಿತು ಒಂದೇ ಒಂದು ಅಂಶವೂ ಇಲ್ಲದಿರುವುದು ವಿಚಿತ್ರ. ಬರ್ಮಾ ಹಾಗೂ ಭಾರತದ ಗಡಿಯಲ್ಲಿ ಯುದ್ಧಗಳ ನಡುವೆ ಸಿಕ್ಕಿಕೊಳ್ಳುವ ಬಿಲ್ಲಿ ವಿಲಿಯಮ್ಸ್ ಕೂಡ ಸುಭಾಷರ ಬಗ್ಗೆ ಮಾತನಾಡುವುದಿಲ್ಲ. ಇದು ಬಿಲ್ಲಿ ವಿಲಿಯಮ್ಸ್, ಕ್ರುಕ್ ಅವರ ಉದ್ದೇಶ ಪೂರ್ವಕ ಕೆಲಸವೋ ಅಥವಾ ಆ ಸಂದರ್ಭದ ಯುದ್ಧಗಳನ್ನು ಬ್ರಿಟೀಷರು ವರ್ಸಸ್ ಜಪಾನಿಯರು ಎಂದೇ ಬಿಂಬಿಸಿದ್ದೋ ಗೊತ್ತಿಲ್ಲ. ಈ ಪುಸ್ತಕದಲ್ಲಿ ಸುಭಾಷರ ಹೋರಾಟಗಳನ್ನು ಉಲ್ಲೇಖಿಸಿದ್ದರೆ, ಅಂದಿನ ಕಾಲದ ಇನ್ನೊಂದು ಮಜಲು ತೆರೆದುಕೊಳ್ಳುತ್ತಿತ್ತು.
ಇನ್ನು ಪುಸ್ತಕದ ಹೆಸರು ಬಂಡೂಲ ಎಂದಿದ್ದರೂ, ಬಂಡೂಲ ಎಂಬ ಆನೆಯ ಉಲ್ಲೇಖ ಬಹಳ ಕಡಿಮೆ ಇದೆ. ಬಂಡೂಲನ ಸಾಹಸಗಳನ್ನು ಇನ್ನಷ್ಟು ತೆರೆದಿಡಬಹುದಿತ್ತೇನೋ.

ಅಂದಹಾಗೆ ಈ ಪುಸ್ತಕಕ್ಕೆ ೩೨೦ ರೂಪಾಯಿ ದರ ಇದೆ.
ಸಾಹಸ ಪುಸ್ತಕಗಳು, ಪ್ರಾಣಿಗಳು ಅದರಲ್ಲಿಯೂ ಆನೆಗಳ ಕುರಿತು ಆಸಕ್ತಿ ಇರುವವರು ತಪ್ಪದೇ ಓದಬೇಕು.

Wednesday, September 19, 2018

ಅಧಃಪತನದತ್ತ ಶ್ರೀಲಂಕಾ ಕ್ರಿಕೆಟ್ ತಂಡ

ಹಿಂದೊಮ್ಮೆ ವೆಸ್ಟ್  ಇಂಡೀಸ್ ಎಂದರೆ ಸಾಕು, ದೈತ್ಯ ಆಟಗಾರರು, ಭಯಗೊಳಿಸುವ ವೇಗ, ಅಬ್ಬರದ ಆಟ ನೆನಪಾಗುತ್ತಿತ್ತು. ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಹಲವು ದಶಕಗಳ ಕಾಲ ಪಾರಮ್ಯ ಮೆರೆದ ವಿಂಡೀಸ್ ತದನಂತರ ಅಧಃಪತನದ ಹಾದಿಯನ್ನು ಹಿಡಿದಿದ್ದು ಎಲ್ಲರಿಗೂ ತಿಳಿದಿದ್ದೇ. ಇದೀಗ ಶ್ರೀಲಂಕಾ ಕ್ರಿಕೆಟ್ ತಂಡ ಕೂಡ ಅಧಃಪತನದ ಹಾದಿ ಹಿಡಿದಿದೆಯೇ ಎನ್ನುವ ಅನುಮಾನಗಳು ಮೂಡಲಾರಂಭಿಸಿದೆ.
ಕಳೆದ ಹಲವು ಸರಣಿಗಳನ್ನು ಗಮನಿಸಿದಾಗ ಶ್ರೀಲಂಕಾದ ಪ್ರದರ್ಶನ ಅಷ್ಟಕ್ಕಷ್ಟೇ ಎಂಬಂತಾಗಿದೆ. ಸಾಲು ಸಾಲು ಸೋಲುಗಳು, ಕಳಪೆ ಆಟದ ಪ್ರದರ್ಶನ ತಂಡದ ಮರ್ಯಾದೆಯನ್ನು ಹರಾಜು ಮಾಡುತ್ತಿದೆ. ಚಿಕ್ಕ-ಪುಟ್ಟ ತಂಡಗಳ ವಿರುದ್ಧವೂ ಶ್ರೀಲಂಕಾ ಸೋಲನ್ನು ಅನುಭವಿಸುತ್ತಿರುವುದು ತಂಡದ ಕ್ರಿಕೆಟ್ ವೈಭವ ಪಾತಾಳಕ್ಕೆ ಇಳಿಯುತ್ತಿರುವುದರ ದ್ಯೋತಕವೆಂಬಂತೆ ಭಾಸವಾಗುತ್ತಿದೆ.
ವಿಂಡೀಸ್ ದೈತ್ಯರಂತೆಯೇ ಒಂದಾನೊಂದು ಕಾಲದಲ್ಲಿ ವಿಶ್ವವನ್ನು ಆಳಿದ ತಂಡ ಶ್ರೀಲಂಕಾ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಶ್ರೀಲಂಕಾ ಸೋಲುಗಳ ಸುರಿಮಳೆಯಲ್ಲಿ ಹೈರಾಣಾಗಿದೆ. ಇದೀಗ ಗಾಯದ ಮೇಲೆ ಬರೆ ಎಂಬಂತೆ ಅ್ಫಘಾನಿಸ್ಥಾನದ ವಿರುದ್ಧ ಏಷ್ಯಾ ಕಪ್‌ನಲ್ಲಿ ಸೋಲನ್ನು ಅನುಭವಿಸುವ ಮೂಲಕ ಆಘಾತಕಾರಿಯಾಗಿ ಪಂದ್ಯಾವಳಿಯಿಂದ ಹೊರಹಾಕಲ್ಪಟ್ಟಿದೆ.
ಒಂದು ಬಲಿಷ್ಠ ತಂಡ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವ ತಂಡಗಳ ಎದುರು ಸೋಲುತ್ತಿರುವುದು ಇದೇ ಮೊದಲೇನಲ್ಲ. ವಿಶ್ವದ ಹಲವಾರು ತಂಡಗಳು ಬಲಿಷ್ಠ ತಂಡಗಳನ್ನು ಸೋಲಿಸುವುದರ ಮೂಲಕ ಅಚ್ಚರಿಯ ಲಿತಾಂಶಗಳನ್ನ ಹಲವಾರು ಬಾರಿ ನೀಡಿವೆ. ಆದರೆ,  ಶ್ರೀಲಂಕಾ ತಂಡ ಇದಕ್ಕೆ ಹೊರತಾಗಿದೆ.
1996ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿದ್ದ ತಂಡ ಶ್ರೀಲಂಕಾ. ಅರ್ಜುನ್ ರಣತುಂಗಾ, ಅರವಿಂದ ಡಿ. ಸಿಲ್ವಾ, ಚಾಮಿಂಡಾ ವಾಸ್, ಮರ್ವಾನ್ ಅಟ್ಟಪಟ್ಟು,  ಮುತ್ತಯ್ಯ ಮುರಳೀಧರನ್, ಸನತ್ ಜಯಸೂರ್ಯ, ತಿಲಕರತ್ನೆ ದಿಲ್ಶಾನ್, ಕುಮಾರ ಸಂಗಕ್ಕಾರ, ಮಹೇಲಾ ಜಯವರ್ಧನೆ  ಹೀಗೆ ಹಲವು ದಿಗ್ಗಜ ಆಟಗಾರರನ್ನು ವಿಶ್ವ ಕ್ರಿಕೆಟ್‌ಗೆ ನೀಡಿದ ದೇಶ ಶ್ರೀಲಂಕಾ. 1992ರಲ್ಲಿ ಟೆಸ್ಟ್ ಕ್ರಿಕೆಟ್ ಮಾನ್ಯತೆಯನ್ನು ಪಡೆದ ಶ್ರೀಲಂಕಾ ಪಾಲಿಗೆ 1996 ರಿಂದ 1999ರ ವರೆಗಿನ ಕಾಲವನ್ನು ಕ್ರಿಕೆಟ್‌ನ ಉನ್ನತಿಯ ಸಮಯ ಎಂದೇ ಕರೆಯಲಾಗುತ್ತದೆ. 2000ದಿಂದ 2012ರವರೆಗೂ ಕೂಡ ಶ್ರೀಲಂಕಾ ವಿಶ್ವ ಕ್ರಿಕೆಟಿನಲ್ಲಿ ಸಾಕಷ್ಟು ಉತ್ತಮ ಪ್ರದರ್ಶನವನ್ನೇ ನೀಡುತ್ತ ಬಂದಿತ್ತು. ಆದರೆ ತದನಂತರ ನಡೆದಿದ್ದು ಮಾತ್ರ ಮಹಾ ಕುಸಿತ ಎಂದೇ ಹೇಳಲಾಗುತ್ತದೆ.
ಒಂದಾನೊಂದು ಕಾಲದಲ್ಲಿ ಶ್ರೀಲಂಕಾ ತಂಡದ ಆರಂಭಿಕ ಆಟಗಾರರಾಗಿದ್ದ ಸನತ್ ಜಯಸೂರ್ಯ, ಏಕದಿನ ಕ್ರಿಕೆಟ್ ಮಾದರಿಯನ್ನೇ ಬದಲಾಯಿಸಿದವರು. 30 ಯಾರ್ಡ್ ಸರ್ಕಲ್‌ನಲ್ಲಿ, ಪವರ್‌ಪ್ಲೇ ಅವಧಿಯಲ್ಲಿ ಭಾರಿ ಹೊಡೆತವನ್ನು ಭಾರಿಸುವ ಮೂಲಕ ಏಕದಿನ ಕ್ರಿಕೆಟ್‌ನ ಯೋಜನೆಗಳನ್ನು ಬದಲಾಯಿಸಿದವರು. ಕೌಶಲ್ಯಯುಕ್ತ ನಾಯಕತ್ವ ಹೊಂದಿದ್ದ ರಣತುಂಗಾ, ಮಧ್ಯಮ ಕ್ರಮಾಂಕದ ಆಪದ್ಭಾಂಧವ ಅರವಿಂದ ಡಿಸಿಲ್ವಾ, ವಿಶ್ವದ ಅತ್ಯಂತ ಹೆಚ್ಚು ವಿಕೆಟ್ ಕಬಳಿಸಿದ ಮುರಳೀಧರನ್, ವೇಗದ ಮೂಲಕ ಎದುರಾಳಿಗಳ ನಡುಮುರಿಯುತ್ತಿದ್ದ ವಾಸ್, ಹೆಸರಾಂತ ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ, ಮಾಜಿ ನಾಯಕ ಮಹೇಲಾ ಜಯವರ್ಧನೆ. ಇಂತಹ ಖ್ಯಾತನಾಮದ ದಿಗ್ಗಜರನ್ನು ಪಡೆದಿದ್ದ ತಂಡ ಇದೀಗ ಹೇಳ ಹೆಸರಿಲ್ಲದಂತೆ ಸೋಲುತ್ತಿದೆ. ನಿನ್ನೆ ಮೊನ್ನೆ ಕ್ರಿಕೆಟ್ ಆಡಲು ಆರಂಭಿಸಿದವರ ವಿರುದ್ಧ ಹೀನಾಯವಾಗಿ ಸೋತು ಮುಖಭಂಗ ಎದುರಿಸುತ್ತಿದೆ.
ಜಯವರ್ಧನೆ ಹಾಗೂ ಸಂಗಕ್ಕಾರ ಯಾವಾಗ ನಿವೃತ್ತಿ ಘೋಷಿಸಿದರೋ, ಅಂದಿನಿಂದ ತಂಡದ ವನತಿ ಆರಂಭವಾಯಿತು ಎಂದೇ ಹೇಳಬಹುದು. ಹಲವು ಸೋಲುಗಳು ತಂಡವನ್ನು ಕಂಗೆಡಿಸಿದವು.

ಕಳಪೆ ಸರಾಸರಿ
ಏಕದಿನ ಆಡುವ ದೇಶಗಳ ಜೊತೆಗೆ ಶ್ರೀಲಂಕಾದ ಗೆಲುವಿನ ಸರಾಸರಿ ಕೇವಲ ಶೇ 27ರಷ್ಟು. ಶ್ರೀಲಂಕಾ 2016 ರಿಂದ ಇಲ್ಲಿಯತನಕ 9 ದ್ವಿಿಪಕ್ಷೀಯ ಸರಣಿಗಳನ್ನು ಸೋತು ಕೇವಲ ಒಂದೇ ಒಂದು  ಸರಣಿಯನ್ನು ಗೆದ್ದಿದೆ. ಅದೂ ಕೂಡ  ಇತ್ತೀಚೆಗಷ್ಟೇ ಟೆಸ್ಟ್  ಆಡಲು ಆರಂಭಿಸಿರುವ ಐರ್ಲೆಂಡ್ ವಿರುದ್ಧ. ಶ್ರೀಲಂಕಾ 2016ರಿಂದ ಈಚೆಗೆ ಬರೋಬ್ಬರಿ ಮೂರು ಬಾರಿ 5-0 ಅಂತರದಲ್ಲಿ ವೈಟ್‌ವಾಶ್ ಆಗಿದೆ.  ತವರಿನಲ್ಲೇ ಜಿಂಬಾಬ್ವೆ ವಿರುದ್ದ 3-2 ಅಂತರದಲ್ಲಿ ಸರಣಿ ಸೋತು ಅವಮಾನಕ್ಕೀಡಾಗಿದ್ದೂ ಹಸಿರಾಗಿದೆ.


ಪ್ರಯೋಗ, ಭ್ರಷ್ಟಾಚಾರ
ಕಳೆದ 2 ವರ್ಷದಲ್ಲಿ 20 ಹೊಸ ಆಟಗಾರರಿಗೆ ತಂಡದಲ್ಲಿ  ಸ್ಥಾನ ಕಲ್ಪಿಸಲಾಗಿದೆ. ಇದು  ಶ್ರೀಲಂಕಾ ತಂಡದ ಅತಂತ್ರ ಪರಿಸ್ಥಿಿತಿಗೆ ಉದಾಹರಣೆ. ಜತೆಗೆ ಆಡಳಿತ ಮಂಡಳಿಯ ಭ್ರಷ್ಟಾಚಾರ  ತಾಂಡವವಾಡುತ್ತಿದ್ದು, ತಂಡದ ಹೀನಾಯ ಸ್ಥಿತಿಗೆ ಇನ್ನಷ್ಟು ಕಾರಣವಾಗಿದೆ. ಹೀಗಾಗಿಯೇ ಶ್ರೀಲಂಕಾ ಕ್ರಿಕೆಟ್ ಆಡಳಿತ ಮಂಡಳಿಯಲ್ಲೂ ಎಲ್ಲವೂ ಸರಿಯಿಲ್ಲ ಎಂದು ಇತ್ತೀಚೆಗಷ್ಟೇ ಮುರಳೀಧರನ್ ಕಿಡಿ ಕಾರಿದ್ದರು. ಅಷ್ಟೇ ಅಲ್ಲ ಆಡಳಿತ ಮಂಡಳಿ ಮುಂದಿಟ್ಟಿದ್ದ ಹುದ್ದೆಯನ್ನು ತ್ಯಜಿಸಿದ್ದರೂ ಕೂಡಾ.

ಶ್ರೀಲಂಕಾ ತಂಡ ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಅಭಿಮಾನಿಗಳ ಪಾಲಿಗೆ ಲಂಕಾ ತಂಡ ಎಂಬುದು ಕೇವಲ ನೆನಪಾಗಿಯಷ್ಟೇ ಉಳಿಯಲಿದೆ. ಅಭಿಮಾನಿಗಳ ಪಾಲಿನಲ್ಲಿ ಅಚ್ಚಳಿಯದ ರೀತಿಯಲ್ಲಿ ಸ್ಥಾನ ಪಡೆದಿರುವ ಶ್ರೀಲಂಕಾ ಇನ್ನೊಮ್ಮೆ ಕ್ರಿಕೆಟ್ ಜಗತ್ತಿನಲ್ಲಿ ಎದ್ದುನಿಲ್ಲಲಿ ಎನ್ನುವುದು ಅಭಿಮಾನಿಗಳ ಆಶಯ.

Tuesday, September 18, 2018

ಮನುಷ್ಯರನ್ನೆ ನಾಯಿಗಳಂತೆ ಕಾಣುವ ಮುಖ್ಯಮಂತ್ರಿಗಳಲ್ಲಿ ಸೂಕ್ಷ್ಮ ಸಂವೇದನೆಗೆ ಜಾಗವಿದೆಯೇ?

ಅವು ಎಷ್ಟು ಅನ್ಯೋನ್ಯ ಎಂದರೆ, ಗಂಡು ಹಾಗೂ ಹೆಣ್ಣು ಹಕ್ಕಿ ಎರಡೂ ಕೂಡಿ ಸರಿಯಾದ ಪೊಟರೆ ಒಂದನ್ನು ಹುಡುಕಿ ಗೂಡು ಕಟ್ಟುತ್ತವೆ. ಆ ಗೂಡಿನಲ್ಲಿ ಹೆಣ್ಣು ಹಕ್ಕಿ ಮೊಟ್ಟೆ ಇಟ್ಟು ಕಾವಿಗೆ ಕೂತರೆ, ಗಂಡು ಹಕ್ಕಿ ಆ ಪೊಟರೆಯ ಸುತ್ತ ರಕ್ಷಣಾ ಕವಚದ ರೂಪದಲ್ಲಿ ಮಣ್ಣಿನ ಪ್ಲಾಸ್ಟರ್ ಮಾಡಲು ಮುಂದಾಗುತ್ತದೆ. ತನ್ನ ಕೊಕ್ಕಿನ ಮೂಲಕ ಹಸಿ ಮಣ್ಣನ್ನು ಕಿತ್ತು ತಂದು ಅದನ್ನು ಪೊರೆಯ ಸುತ್ತ ನಿಧಾನವಾಗಿ ಮೆತ್ತುತ್ತದೆ. ಪೊಟರೆಯೊಳಗೆ ಹೆಣ್ಣು ಹಕ್ಕಿ ಇರುವಂತೆಯೇ ಮಣ್ಣಿನ ಪ್ಲಾಸ್ಟರ್ ಮಾಡುವ ಗಂಡು ಹಕ್ಕಿ, ಕೊನೆಗೆ ಆಹಾರ ತರಲು ಮುಂದಾಗುತ್ತದೆ. ಪ್ರತಿ ದಿನ, ಪ್ರತಿ ಕ್ಷಣ ನೂರಾರು ಕಿಲೋಮೀಟರ್ ಹಾರಾಟ ಮಾಡಿ, ಅಲೆದಾಟ ನಡೆಸಿ ಆಹಾರ ಅರಸಿ ಬರುವ ಗಂಡು ಹಂಕ್ಕಿ, ಆ ಪ್ಲಾಸ್ಟರ್ ಮಧ್ಯದಲ್ಲಿರುವ ಚಿಕ್ಕದೊಂದು ಕಿಂಡಿಯ ಮೂಲಕ ಹೆಣ್ಣು ಹಕ್ಕಿಗೆ ಆಹಾರವನ್ನು ತಂದುಕೊಡುತ್ತದೆ.
ಹೀಗೆ ಒಂದೆರಡು ದಿನವಲ್ಲ, ತಿಂಗಳುಗಳ ಕಾಲ ಮಾಡುತ್ತದೆ. ಯಾವಾಗ ಮೊಟ್ಟೆ ಒಡೆದು ಮರಿಗಳು ಬೆಳೆದು ರೆಕ್ಕೆ ಬಲಿಯುತ್ತದೆಯೋ ಆಗ ಗಂಡು ಹಕ್ಕಿಯೇ ಪ್ಲಾಸ್ಟರ್ ಒಡೆದು ಗೃಹಬಂಧನದಿಂದ ಬಿಡಿಸುತ್ತದೆ. ಒಂದು ವೇಳೆ ಆಹಾರ ತರಲಿಕ್ಕೆ ಹೋದ ಗಂಡು ಹಕ್ಕಿ ಬೇಟೆಗಾರರಿಗೋ, ಇತರ ಪ್ರಾಣಿ ಪಕ್ಷಿಗಳ ದಾಳಿಗೋ ಬಲಿಯಾದರೆ, ಪೊಟರೆಯೊಳಕ್ಕೆ ಬಂಧಿಯಾದ ಹಕ್ಕಿ ಅಲ್ಲೇ ಉಪವಾಸ ಬಿದ್ದು ಸಾಯುತ್ತದೆ. ಇಂತಹದ್ದೊಂದು ವಿಶಿಷ್ಟ ಜೀವನ ಕ್ರಮವನ್ನು ಲಕ್ಷಾಂತರ ವರ್ಷಗಳಿಂದ ಬೆಳೆಸಿಕೊಂಡು ಬಂದು, ಮನುಷ್ಯರಿಗೂ ಆದರ್ಶಪ್ರಾಯವಾಗಿರುವ ಹಕ್ಕಿಯೇ ಹಾರ್ನಬಿಲ್.
ಮಂಗಟ್ಟೆ ಎಂದು ಕನ್ನಡದಲ್ಲಿ ಕರೆಸಿಕೊಳ್ಳುವ ಹಾರ್ನಬಿಲ್ ಗಳು ಅಳಿವಿನ ಅಂಚಿನಲ್ಲಿರುವ ಪಕ್ಷಿಗಳು. ಭಾರತದಲ್ಲಿ ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮೀಝೋರಾಂ, ಮಣಿಪುರಗಳನ್ನು ಬಿಟ್ಟರೆ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವಂತಹ ಅಪರೂಪದ ಪಕ್ಷಿ. ಕರ್ನಾಟಕದ ದಾಂಡೇಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾತ್ರ ಇರುವ ವಿಶಿಷ್ಟ ಪಕ್ಷಿ.
ಗ್ರೇಟ್ ಮಲಬಾರ್ ಗ್ರೇ ಹಾರ್ನಬಿಲ್ ಎಂದು ಆಂಗ್ಲ ಭಾಷೆಯಲ್ಲಿ ಕರೆಸಿಕೊಳ್ಳುವ ಮಂಗಟ್ಟೆಗಳು ಅವುಗಳ ಆಕರ್ಷಕ ಬಣ್ಣಗಳು, ಹಾಗೂ ಆಕಾರದಿಂದ ಎಲ್ಲರನ್ನೂ ಸೆಳೆಯುತ್ತವೆ. ಈ ಹಾರ್ನಬಿಲ್ ಗಳು ಅವುಗಳ ವಿಶಿಷ್ಟ ರಚನೆಯ ಕೊಕ್ಕುಗಳಿಂದಲೇ ಇನ್ನಷ್ಟು ಆಕರ್ಷಕವಾಗಿ ಕಾಣುತ್ತವೆ. ಆದರೆ ಹಾರ್ನಬಿಲ್ ಗಳ ಆಕಾರ, ಅದರ ಆಕರ್ಷಕ ಪುಕ್ಕಗಳು, ಕೊಕ್ಕುಗಳ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬೇಟೆಗಾರರಿಗೆ ಬಲಿಯಾಗುತ್ತಿವೆ.
ಒಮ್ಮೆಲೆ ಮೂರು-ನಾಲ್ಕು ಮೊಟ್ಟೆಗಳನ್ನು ಇಡುವ ಹಾರ್ನಬಿಲ್ ಗಳು ಬದುಕಿಗಾಗಿ ದಿನಂಪ್ರತಿ ಹೋರಾಟವನ್ನು ನಡೆಸುತ್ತಿವೆ. ಆಹಾರದ ಅಭಾವ, ಪ್ರಾಕೃತಿಕ ಸಮಸ್ಯೆ, ಹಾವು, ಹದ್ದುಗಳಂತಹ ಕಾಡುವ ಶತ್ರುಗಳು, ಯಾವ ಕ್ಷಣದಲ್ಲಿ ಯಾವ ಬೇಟೆಗಾರನ ಬಂದೂಕಿನ ಏಟಿಗೆ ಬಲಿಪಶು ಆಗಬೇಕೋ ಎಂಬ ಆತಂಕದ ನಡುವೆಯೇ ಗುಟುಕು ಜೀವ ಹಿಡಿದುಕೊಂಡಿವೆ.
ಗುಂಪು ಗುಂಪಾಗಿ ವಾಸ ಮಾಡುವ ಹಾರ್ನಬಿಲ್ ಏಕಪತ್ನಿ ವೃತಸ್ಥ. ಗುಬ್ಬಿಗಳಂತೇ ಇವು, ಒಂದು ಸಂಗಾತಿ ಮರಣಿಸಿದರೆ ಇನ್ನೊಂದನ್ನು ಹುಡುಕಿ ಹೋಗುವುದಿಲ್ಲ. ಬದಲಾಗಿ ಜತೆಗಾರ ಹಕ್ಕಿಯ ನೆನಪಿನಲ್ಲೇ ಪ್ರಾಣ ಬಿಡುತ್ತವೆ. ಗಂಡು ಹಕ್ಕಿ ಸತ್ತರೆ ಹೆಣ್ಣು ಹಕ್ಕಿ ಹಾಗೂ ಹೆಣ್ಣು ಹಕ್ಕಿ ಸತ್ತರೆ ಗಂಡು ಹಕ್ಕಿ, ಒಬ್ಬಂಟಿಯಾಗಿ ಉಳಿದು, ಕೊನೆಗೆ ಸಾಯುತ್ತವೆ. ಹಾರ್ನಬಿಲ್ ಸಣ್ಣಪುಟ್ಟ ಕಾಡುಗಳಲ್ಲಿ ವಾಸ ಮಾಡುವುದೇ ಇಲ್ಲ. ಈ ಹಾರ್ನಬಿಲ್ ವಾಸ ಮಾಡುವ ಕಾಡುಗಳು ಅತ್ಯಂತ ಸಮೃದ್ಧವಾದುದು ಎಂದೇ ಹೆಸರಾಗಿದೆ. ಮಾನವನ ಹಸ್ತಕ್ಷೇಪವನ್ನು ಎಳ್ಳಷ್ಟೂ ಸಹಿಸದ ಇವು, ದಟ್ಟ ಕಾನನದ ನಡುವೆ ಎಲ್ಲೋ ಜೀವನ ನಿರ್ವಹಣೆ ಮಾಡುತ್ತವೆ.
ರಾಮಪತ್ರೆ, ಕಾಸರಕನ ಹಣ್ಣು, ಕಾಡು ಹಣ್ಣುಗಳನ್ನು ತಿಂದು ಜೀವಿಸುವ ಹಾರ್ನಬಿಲ್ ತನ್ನ ಆಹಾರ ಹುಡುಕಿಕೊಂಡು ದಿನವೊಂದಕ್ಕೆ ಏನಿಲ್ಲವೆಂದರೂ ಕನಿಷ್ಠ ೧೬೦ಕ್ಕೂ ಹೆಚ್ಚು ಕಿಲೋಮೀಟರ್ ಗಳಷ್ಟು ದೂರ ಹಾರಾಟ ಮಾಡುತ್ತವೆ. ಇವುಗಳ ಆಹಾರ ಸಣ್ಣ ಕಾಡುಗಳಲ್ಲಿ ದೊರಕುವುದಿಲ್ಲ. ದಟ್ಟ, ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ಸಾಧ್ಯವಿಲ್ಲದಂತಹ ಕಾಡುಗಳಲ್ಲೇ ಬೆಳೆಯುವುದರಿಂದ, ತಾನು ಗೂಡು ಕಟ್ಟಿದ ಕಾಡಿನಿಂದ ಬಹುದೂರದ ಇನ್ನೊಂದು ದಟ್ಟಾರಣ್ಯಕ್ಕೆ ಹಾರಾಟ ಮಾಡಿ, ಬೇಟೆ ಹಾಗೂ ಆಹಾರವನ್ನು ಅರಸಿ, ಅದೇ ದಿನ ಮತ್ತೆ ತನ್ನ ಸ್ವಸ್ಥಾನಕ್ಕೆ ಮರಳುತ್ತವೆ. ತಜ್ಞರ ಅಧ್ಯಯನದ ಪ್ರಕಾರ ದಾಂಡೇಲಿಯಲ್ಲಿ ಗೂಡು ಕಟ್ಟಿದ ಹಾರ್ನಬಿಲ್, ಆಹಾರವನ್ನು ಹುಡುಕಿ ಶರಾವತಿ ನದಿಯ ಗೇರುಸೊಪ್ಪೆಯ ಮೌನ ಕಣಿವೆ ಪ್ರದೇಶದವರೆಗೂ ಪ್ರತಿದಿನ ಹಾರಾಟ ನಡೆಸುತ್ತದಂತೆ.
ಇವುಗಳ ಪುಕ್ಕಗಳು ಅದೃಷ್ಟದ ಸಂಕೇತ ಎನ್ನುವ ಮೂಢ ನಂಬಿಕೆ ಇತ್ತು. ಅಲ್ಲದೇ ಇವುಗಳ ಕೊಕ್ಕುಗಳು ಔಷಧೀಯ ಗುಣಗಳನ್ನು ಹೊಂದಿದೆ ಎನ್ನುವ ಮಾತುಗಳೂ ಇದ್ದವು. ಈ ಕಾರಣದಿಂದಲೇ ಬೇಟೆಗಾರರು ಇವನ್ನು ಬೇಟೆಯಾಡುತ್ತಾರೆ. ಅಲ್ಲದೇ ಇವನ್ನು ಹಿಡಿದು ಕಳ್ಳ ಸಾಗಾಣಿಕೆ ಮಾಡುವವರ ಸಂಖ್ಯೆಗೂ ಹೆಚ್ಚಿದೆ. (ನಾಗಾಲ್ಯಾಂಡ್ ನಲ್ಲಿ ಹಾರ್ನಬಿಲ್ ಹಬ್ಬವೇ ನಡೆಯುತ್ತದೆ. ಈ ಸಂದರ್ಭದಲ್ಲಿ ನಾಗಾಲ್ಯಾಂಡಿನ ಗ್ರಾಮಗಳ ಜನರು, ಹಾರ್ನಬಿಲ್ ಪುಕ್ಕಗಳಿಂದ ತಯಾರಿಸಿದ ವಿಚಿತ್ರ ಹಾಗೂ ವಿಶಿಷ್ಟ ಬಗೆಯ ಧಿರಿಸನ್ನು ಧರಿಸುತ್ತಾರೆ. ಇದು ಅದೃಷ್ಟದ ಸಂಕೇತ ಹಾಗೂ ಸಮಾಜದಲ್ಲಿನ ಹೆಸರುಗಳಿಗೂ ಕಾರಣವಾಗುತ್ತದೆ ಎನ್ನುವ ನಂಬಿಕೆ ಇದೆ.) ಅಲ್ಲದೇ ಹಾರ್ನಬಿಲ್ ಗಳಿಗೆ ಪೂರಕವಾದ ಆಹಾರಗಳೂ ಸಿಗುತ್ತಿಲ್ಲ. ಈ ಕಾರಣಗಳಿಂದ ಹಾರ್ನಬಿಲ್ ಅಳಿವಿನ ಅಂಚಿನಲ್ಲಿದೆ.
ಹಿಂದೆ ಬಿ. ಎಸ್. ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾರ್ನಬಿಲ್ ಗಳ ಮಹತ್ವವನ್ನು ಅರಿತು, ದಾಂಡೇಲಿಯನ್ನು ಹಾರ್ನಬಿಲ್ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲದೇ ಹಾರ್ನಬಿಲ್ ಗಳ ಪ್ರಮುಖ ಆಹಾರವಾದ ರಾಮಪತ್ರೆ ಈ ಮುಂತಾದ ಮರಗಳನ್ನು ಬೆಳೆಸಲು ಅನುವಾಗುವಂತೆ ಸಾಕಷ್ಟು ಅನುದಾನವನ್ನೂ ಘೋಷಣೆ ಮಾಡಿದ್ದರು. ಆ ನಂತರದಲ್ಲಿ ದಾಂಡಡೇಲಿಯ ಪ್ರದೇಶದಲ್ಲಿ ಹಾರ್ನಬಿಲ್ ಸಂರಕ್ಷಿತ ಅರಣ್ಯ ಪ್ರದೇಶ ಎನ್ನುವ ಬೋರ್ಡುಗಳೂ ಕಾಣಿಸಿಕೊಂಡವು. ಆದರೆ ದಿನಗಳೆಂದಂತೆ ಹಾರ್ನಬಿಲ್ ಸಂರಕ್ಷಣೆ ಎನ್ನುವುದು ಕಡತಕ್ಕೆ ಮಾತ್ರ ಸೀಮಿತವಾಯಿತು. ಯಡಿಯೂರಪ್ಪ ಘೋಷಣೆ ಮಾಡಿದ ಅನುದಾನ ಅವರ ಅಧಿಕಾರಾವಧಿಯ ನಂತರದ ದಿನಗಳಲ್ಲಿ ಎಲ್ಲಿಗೆ ಹೋಯಿತೋ ಗೊತ್ತಿಲ್ಲ. ಹಾರ್ನಬಿಲ್ ಗಳಿಗೆ ಅಗತ್ಯವಾದ ರಾಮಪತ್ರೆಯ ಗಿಡಗಳನ್ನು ಬೆಳೆಸುವುದು ಕಡತಗಳಿಗೆ ಮಾತ್ರ ಸೀಮಿತವಾಯಿತು.
ಯಡಿಯೂರಪ್ಪರ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ಧರಾಮಯ್ಯರಿಗಂತೂ ಹಾರ್ನಬಿಲ್ ಗಳಂತಹ ಪಕ್ಷಿಗಳ, ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಕುರಿತು ಚಿಂತಿಸಲು ಸಮಯವೇ ಇರಲಿಲ್ಲ ಬಿಡಿ. ಅವರು ಅವುಗಳನ್ನೆಲ್ಲ ಕಡೆಗಣನೆ ಮಾಡಿ, ಧರ್ಮ, ಮತ, ಜಾತಿ, ಸಮಾಜ, ಅಹಿಂದ ಹೀಗೆ ಹಲವು ಮಾರ್ಗಗಳನ್ನು ಹಿಡಿದು ಹೊರಟರು. ಇನ್ನು ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿಗಳಿಗಂತೂ ಇಂತದ್ದೊಂದು ಪಕ್ಷಿ ಸಂಕುಲ ಇದೆ ಎನ್ನುವುದನ್ನು ಮತ್ತೆ ಮತ್ತೆ ತಿಳಿಸಿಹೇಳಬೇಕೇನೋ. ಬಿಡಿ.
ಯಡಿಯೂರಪ್ಪರು ಹಾರ್ನಬಿಲ್ ಗೆ ಮೀಸಲು ಜಾಗವನ್ನೇನೋ ಘೋಷಣೆ ಮಾಡಿದರು, ಆದರೆ ಕುಮಾರಸ್ವಾಮಿ ಹಕ್ಕಿಗಳಿಗೆ ಸಂಬಂಧಿಸಿದಂತೆ, ತಮ್ಮ ಪಕ್ಷಕ್ಕೆ ಮತ ಹಾಕದ ಪ್ರದೇಶದಲ್ಲಿದೆ. ಆದ್ದರಿಂದ ಅವುಗಳ ಕುರಿತು ತಾನೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಹೇಳೀದರೂ ಆಶ್ಚರ್ಯವಿಲ್ಲ.
ಮುಖ್ಯಮಂತ್ರಿಗಳಾದವರಿಗೆ ಸೂಕ್ಷ್ಮ ಸಂವೇದನೆ ಇರಬೇಕು. ರಾಜ್ಯದ ಜನರ ಕಡೆಗೆ ಇರುವಷ್ಟು ಉತ್ತಮ ಭಾವನೆಗಳನ್ನು ಪ್ರಾಣಿ, ಪಕ್ಷಿಗಳ ಕಡೆಗೂ ತೋರ್ಪಡಿಸಬೇಕು. ಯಾವುದೇ ವಿಷಯದ ಕುರಿತು ತ್ವರಿತವಾಗಿ ಸ್ಪಂದನೆ ಮಾಡುವ ಗುಣ ಬೆಳೆಸಿಕೊಂಡಿರಬೇಕು. ಆದರೆ ಇಂದಿನ ಮುಖ್ಯಮಂತ್ರಿಗಳು ಹಾಗೂ ಅವರ ಬಳಗ ಮನುಷ್ಯರನ್ನೇ ಪ್ರಾಣಿಗಳ ರೀತಿಯಲ್ಲಿ ಕಾಣುತ್ತಿದ್ದಾರೆ. ನೆರೆ ಸಂತ್ರಸ್ಥರಿಗೆ ಆಹಾರವನ್ನೇ ನಾಯಿಗಳಿಗೆ ಎಸೆದಂತೆ ಎಸೆಯುವ ಮಂತ್ರಿಗಳನ್ನು ಹೊಂದಿರುವ ಮುಖ್ಯಮಂತ್ರಿಗಳಿಗೆ ಹಾರ್ನಬಿಲ್ ಗಳಂತಹ ನಿಷ್ಪಾಪಿ ಪಕ್ಷಿಗಳು, ಅಳಿವಿನ ಅಂಚಿನಲ್ಲಿರುವ ಜೀವಿ ಜಗತ್ತು ಕಾಣಲು ಸಾಧ್ಯವೇ? ಮೈತ್ರಿಯ ಮೆಟ್ಟಿಲಲ್ಲಿ ಒಂದ ಕಾಲು ಇಟ್ಟು ಗಟ್ಟಿ ನಿಲ್ಲಲ್ಲು ಹೆಣಗಾಡುತ್ತಿರುವ ಮುಖ್ಯಮಂತ್ರಿಗಳು ಹಾಗೂ ಅವರ ಪಕ್ಷದ ಜತೆಗಾರರಿಂದ ಅರಣ್ಯ ಸಂರಕ್ಷಣೆ, ಪಕ್ಷಿಗಳ ಉದ್ಧಾರ ಎನ್ನುವುದು ಕನಸೇ ಸರಿ.