Friday, August 21, 2015

ಪರಿವರ್ತನೆ (ಕಥೆ)

              ನನ್ನ ಹೊಚ್ಚ ಹೊಸ ಬೈಕು ಮೊಟ್ಟ ಮೊದಲ ಬಾರಿಗೆ ಪಂಚರ್ ಆಗಿದ್ದಾಗ ನಾನು ನಮ್ಮೂರಿನ ಪಂಚರ್ ಕಟ್ಟುವ ಅಮಿರ್ ಖಾನ್ ನ ಮೊರೆ ಹೋಗಿದ್ದೆ. ಬಹುಶಃ ಈ ಪಂಚರ್ ದೆಸೆಯಿಂದಲೇ ನನಗೆ ಅಮೀರ್ ಖಾನ್ ಪರಿಚಯ ಆಗಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ. ನನ್ನ ಯಮಭಾರದ ಗಾಡಿಯನ್ನು ತಳ್ಳಿಕೊಂಡು ಅಮೀರ್ ಖಾನ್ ನ ಪಂಚರ್ ಅಂಗಡಿಯ ವರೆಗೆ ಏದುಸಿರು ಬಿಡುತ್ತಾ ಹೋಗುವ ವೇಳೆಗೆ ಅಂಗಡಿಯಲ್ಲಿ ಅಮೀರ್ ಖಾನ್ ಇರಲಿಲ್ಲ. ಅಂಗಡಿಗೆ ತಾಗಿಕೊಂಡಂತೆ ಇದ್ದ ಮನೆಯಲ್ಲಿ ಆತನ ಬೇಗಂ ಇದ್ದಳು. ಅವರ ಬಳಿ ಅಮೀರ್ ಖಾನ್ ಇದ್ದಾನಾ ಎಂದು ಕೇಳಿ, ಈಗ ಬರುತ್ತಾರೆ ಇರಿ ಎನ್ನುವ ಉತ್ತರ ಕೇಳಿ ಕಾಯುತ್ತ ಕುಳಿತಿದ್ದೆ. ಕೆಲ ಹೊತ್ತಿನಲ್ಲಿ ಅಮೀರ್ ಖಾನ್ ಬಂದಿದ್ದ.
            ಮೊಟ್ಟ ಮೊದಲ ಪಂಚರ್ ಅನ್ನು ಸರಿಮಾಡಿಕೊಟ್ಟಿದ್ದ ಅಮಿರ್ ಖಾನ್ ನಂತರದ ದಿನಗಳಲ್ಲಿ ನನ್ನ ತೀರಾ ಪರಿಚಯದ ವ್ಯಕ್ತಿಗಳಲ್ಲಿ ಒಬ್ಬನಾಗಿ ಬದಲಾಗಿದ್ದ. ನಮ್ಮೂರಿನ ರಸ್ತೆ ಹೇಳಿ-ಕೇಳಿ ಮಣ್ಣು ರಸ್ತೆ. ಅಭಿವೃದ್ಧಿ ಪರ ಭಾಷಣ ಮಾಡುವ ರಾಜಕಾರಣಿಗಳ ಮಾತಿಗೆ ನುಜ್ಜುಗುಜ್ಜಾಗಿ ಮತ್ತಷ್ಟು ಹಾಳಾಗಿದ್ದ ನಮ್ಮೂರ ರಸ್ತೆಯಲ್ಲಿ ಗಾಡಿ ಓಡಿಸುವುದು ಯಮಯಾತನೆಯ ಕೆಲಸವೇ ಹೌದಾಗಿತ್ತು. ಇಂತಹ ರಸ್ತೆಯಲ್ಲಿ ನನ್ನ ಗಾಡಿ ಪದೇ ಪದೆ ಪಂಚರ್ ಆಗುತ್ತಿತ್ತು. ಆಗೆಲ್ಲ ನಾನು ಅಮೀರ್ ಖಾನ್ ಮೊರೆ ಹೋಗುತ್ತಿದ್ದೆ. ಆತ ಪಂಚರ್ ಸರಿಪಡಿಸಿಕೊಡುತ್ತಿದ್ದ. ಹೀಗೆ ನಾನು ಪದೇ ಪದೆ ಅವನ ಮೊರೆ ಹೋದ ಕಾರಣ ಆತ ನನ್ನ ಪರಿಚಿತನಾದ. ಕೊನೆ ಕೊನೆಗೆ ಆತ ಅದೆಷ್ಟು ಪರಿಚಿತನಾಗಿದ್ದನೆಂದರೆ ತನ್ನ ಮನೆಯ ಸಮಸ್ಯೆಗಳನ್ನೂ ಹೇಳಿಕೊಳ್ಳುವಷ್ಟು ಆಪ್ತನಾಗಿ ಬದಲಾಗಿದ್ದ.
             ಅಮೀರ್ ಖಾನ್ ಗೆ ಬಹುಃ 45-50 ವರ್ಷ ವಯಸ್ಸಾಗಿರಬೇಕು. ಮೂವರು ಹೆಂಡತಿಯರು ಹಾಗೂ 11 ಜನ ಮಕ್ಕಳು ಅಮೀರ್ ಖಾನ್ ನ ಆಸ್ತಿ. ಆಮೀರ್ ಭಾಯ್.. ಇಷ್ಟೆಲ್ಲ ಮಕ್ಕಳನ್ನು ಹೇಗೆ ಸಾಕ್ತೀಯಾ? ಕಷ್ಟ ಆಗೋಲ್ಲವಾ ಎಂದು ನಾನು ಕೇಳಿದ್ದೆ. ಅಲ್ಲಾಹು ಕರುಣಿಸಿದ್ದಾನೆ.. 11 ಇರಲಿ ಅಥವಾ 20 ಇರಲಿ. ಅವರನ್ನು ಸಾಕುತ್ತೇನೆ. ತೊಂದರೆಯಿಲ್ಲ. ಸ್ವಲ್ಪ ದೊಡ್ಡವರಾಗುವ ವರೆಗೆ ಕಷ್ಟವಾಗುತ್ತದೆ. ಆ ಮೇಲೆ ಅವರ ಕೆಲಸವನ್ನು ಅವರೇ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದ ಅಮೀರ್ ಖಾನನ ಮೊದಲ ಮಗ ಖಾದರ್ ಆಗಲೇ ಇನ್ನೊಂದು ಮೆಕಾನಿಕ್ ಅಂಗಡಿಯನ್ನೂ ಆರಂಭಿಸಿದ್ದ. ಇಂತಹ ಅಮೀರ್ ಖಾನ್ ನ ಕಿರಿಯ ತಮ್ಮ ಸಲ್ಮಾನ್.
              ಸಲ್ಮಾನ್ ಹಾಗೂ ಆಮೀರ್ ಎಂದರೆ ಆ ಊರಿನಲ್ಲಿ ಎಲ್ಲರಿಗೂ ಪ್ರೀತಿ ಹಾಗೂ ಅಕ್ಕರೆ. ಊರಿನಲ್ಲಿ ಪಂಚರ್ ಅಂಗಡಿ ಹಾಗೂ ಮೆಕಾನಿಕ್ ಅಂದರೆ ಇವರಿಬ್ಬರೇ ಎಂಬ ಕಾರಣವೂ ಅಕ್ಕರೆ ಹಾಗೂ ಪ್ರೀತಿಗೆ ಪ್ರಮುಖ ಕಾರಣವಾಗಿತ್ತು. ಇದ್ದವರ ಪೈಕಿ ಸಲ್ಮಾನ್ ಎಲ್ಲರ ಜೊತೆ ಬೆರೆಯುವಂತಹ ವ್ಯಕ್ತತ್ವದವನಾಗಿದ್ದರೆ, ಆಮೀರ್ ಸ್ವಲ್ಪ ಗುಮ್ಮನ ಗುಸ್ಕ. ಮನೆಯಲ್ಲಿ ಮಾತ್ರ ಅವಳಿಗಳೇನೋ ಎನ್ನುವಂತೆ ಬೆಳೆದಿದ್ದವರು ಅವರು. ಸಲ್ಮಾನ್ ಗೆ ಮೂವರು ಹೆಂಡತಿಯರು. ಆರು ಮಕ್ಕಳು. ಸಲ್ಮಾನ್ ಆತ್ಮೀಯತೆಯ ಪ್ರತೀಕ. ಆದರೆ ಆಮೀರ್ ಸ್ವಲ್ಪ ಸಿಡುಕ. ಬಡತನ ಹಾಸುಹೊಕ್ಕಾಗಿದ್ದರೂ ಇವರಿಗೆ ಮಾತ್ರ ಯಾವುದೇ ಕುಂದನ್ನು ಉಂಟುಮಾಡಿರಲಿಲ್ಲ. ಆದರೆ ಧರ್ಮದ ವಿಷಯ ಬಂದರೆ ಮಾತ್ರ ಸಲ್ಮಾನ್ ಅಪ್ಪಟ ಕರ್ಮಠರು ಎಂದರೆ ತಪ್ಪಾಗಲಿಕ್ಕಿಲ್ಲ.
             ಆಮೀರ್ ಗೂ ಧರ್ಮಪ್ರೇಮ ಅಲ್ಪ-ಸ್ವಲ್ಪ ಇತ್ತು. ಆದರೆ ತಾನಾಯಿತು ತನ್ನ ಕೆಲಸವಾಯಿತು ಎಂದುಕೊಳ್ಳುತ್ತಿದ್ದವನಿಗೆ ಧರ್ಮದ ಬಗ್ಗೆ ಹೆಚ್ಚಿಗೆ ಆಲೋಚನೆ ಮಾಡಲು ಸಮಯವೇ ಇರಲಿಲ್ಲ. ತಾನು ಮಾಡುವ ಕೆಲಸದಲ್ಲಿಯೇ ಧರ್ಮ, ದೇವರು ಅಡಗಿದ್ದಾನೆ ಎಂದುಕೊಂಡಿದ್ದವನು ಆಮೀರ್. ಆದರೆ ಅಪರೂಪಕ್ಕೊಮ್ಮೆ ಮಸೀದಿಗೆ ಹೋಗಿ ನಮಾಜ್ ಮಾಡಿ, ಖುರಾನ್ ಪಠಣವನ್ನೂ ಮಾಡಿ ಬರುತ್ತಾನೆ. ಆದರೆ ಸಲ್ಮಾನ್ ಹಾಗಲ್ಲ. ಎಷ್ಟಕ ಕರ್ಮಠ ಎಂದರೆ ದಿನಕ್ಕೆ ಐದು ಬಾರಿ ಸಮಯಕ್ಕೆ ಸರಿಯಾಗಿ ನಮಾಜ್ ಮಾಡುತ್ತಿದ್ದ. ಅಷ್ಟೇ ಏಕೆ ಮನೆಗೂ ಆಗಾಗ ಮೌಲ್ವಿಗಳನ್ನು ಕರೆಸಿ ಪ್ರವಚನಗಳನ್ನು ಮಾಡಿಸುತ್ತಿದ್ದ.
              ನನ್ನ ಹಾಗೂ ಸಲ್ಮಾನ್ ನ ನಡುವೆ ಆಗಾಗ ಧರ್ಮದ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದವು. ನಾನು ನನ್ನ ಧರ್ಮವನ್ನು ಸಮರ್ಥನೆ ಮಾಡಿ ಕೊಂಡರೆ ಆತ ಅವನ ಧರ್ಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ. ನಾವು ವಾದ ಮಾಡುವ ಸಂದರ್ಭದಲ್ಲಿ ಅನೇಕ ಜನರೂ ಸೇರಿ ಗಲಾಟೆ ನಡೆಯುತ್ತಿದೆಯೋ ಎನ್ನುವಂತಹ ವಾತಾವರಣವೂ ಮೂಡುತ್ತಿದ್ದವು. ಮೊದ ಮೊದಲಿಗೆಲ್ಲ ಆರೋಗ್ಯಕರ ಚರ್ಚೆಗೆ ಮುಂದಾಗುತ್ತಿದ್ದ ಸಲ್ಮಾನ್ ಕೊನೆ ಕೊನೆಗೆ ನನ್ನ ಪಟ್ಟುಗಳನ್ನು ತಾಳಲಾರದೇ ವ್ಯಗ್ರನೂ ಆಗುತ್ತಿದ್ದ. ಒಂದೆರಡು ಸಾರಿ ನಾವು ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಸಿಟ್ಟಿಗೆದ್ದು ನನ್ನ ಮೇಲೇರಿ ಬಂದಿದ್ದೂ ಇತ್ತು. ಕೊನೆಗೆ ಯಾವಾಗಲೋ ಶಾಂತನಾದಾಗ `ಮಾಫ್ ಕರೋ ಭಾಯ್..' ಎಂದು ಆಲಿಂಗನ ಮಾಡಿಕೊಂಡು ಕ್ಷಮೆ ಕೋರುತ್ತಿದ್ದ. ನನಗಂತೂ ಕಸಿವಿಸಿಯಾಗುತ್ತಿತ್ತು. ಕ್ಷಮೆಕೋರಿ ದೂರ ಹೋದರೂ ಆತನ ಬಟ್ಟೆಗೆ ಪೂಸಿಕೊಂಡಿದ್ದ ಅತ್ತರಿನ ವಾಸನೆ ಅದೆಷ್ಟೋ ತಾಸುಗಳ ಕಾಲ ಅಲ್ಲಿಯೇ ಘಂಮ್ಮೆನ್ನುತ್ತಿತ್ತು.
               ಹೀಗಿದ್ದಾಗಲೇ ಈ ಅಣ್ಣತಮ್ಮಂದಿರಿಗೆ ಮೆಕ್ಕಾಕ್ಕೆ ಹೋಗುವ ಹುಚ್ಚು ಹತ್ತಿ ಬಿಟ್ಟಿತ್ತು. ಮೆಕ್ಕಾಕ್ಕೆ ಹೋಗುವ ಕಾರಣಕ್ಕಾಗಿಯೇ ಅಣ್ಣ-ತಮ್ಮಂದಿರಿಬ್ಬರೂ ನನ್ನ ಬೆನ್ನು ಬಿದ್ದು ಬಿಟ್ಟಿದ್ದರು. ಸರ್ಕಾರ ಕೊಡ ಮಾಡುವ ಸಬ್ಸಿಡಿಯನ್ನು ಇಬ್ಬರೂ ಪಡೆದುಕೊಳ್ಳಬೇಕೆನ್ನುವ ಸಲುವಾಗಿ ಅವರು ನನ್ನ ಮೊರೆ ಹೋಗಿದ್ದರು. ನಾನು ನನ್ನ ಪರಿಚಯದವರನ್ನು ಬಳಸಿಕೊಂಡು ಸಬ್ಸಿಡಿ ಕೊಡಿಸುವ ಜವಾಬ್ದಾರಿಯಿತ್ತು. ಜೊತೆಯಲ್ಲಿ ಮೆಕ್ಕಾಕ್ಕೆ ಹೋಗುವ ಸಲುವಾಗಿ ಪಾಸ್ ಪೋರ್ಟ್ ಮಾಡಿ ವೀಸಾ ಕ್ಕೆ ಪ್ರಯತ್ನಿಸುವುದನ್ನೂ ನಾನು ಮಾಡಿಕೊಡಬೇಕಿತ್ತು. ನನಗೆ ತಿಂಗಳಾನುಗಟ್ಟಲೆ ದುಂಬಾಲು ಬಿದ್ದಿದ್ದ ಅವರನ್ನು ನಾನು ಆ ಸಂದರ್ಭದಲ್ಲಿಯೇ ಹೆಚ್ಚು ಗಮನಿಸಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ.
              ಆಮೀರ್ ಹಾಗೂ ಸಲ್ಮಾನ್ ಇಬ್ಬರೂ ಒಂದೇ ಧರ್ಮದವರಾಗಿದ್ದರೂ ಸಾಕಷ್ಟು ಭಿನ್ನರೂ ಕೂಡ ಹೌದು. ಇಬ್ಬರೂ ಒಂದೇ ತಾಯಿಯ ಮಕ್ಕಳಾಗಿದ್ದರೂ ಅವರ ಗುಣದಲ್ಲಿ ಮಾತ್ರ ಅದ್ಯಾವ ಪತಿಯ ಭಿನ್ನತೆಯಿತ್ತೆಂದರೆ ನಾನು ಬಹಳ ಅಚ್ಚರಿ ಪಟ್ಟುಕೊಂಡಿದ್ದೆ. ಆಮೀರ್ ಸೌಮ್ಯ ವ್ಯಕ್ತಿತ್ವದವನಾಗಿದ್ದರೆ ಸಲ್ಮಾನ್ ಮಾತ್ರ ಬೇಗನೆ ರೊಚ್ಚಿಗೇಳುತ್ತಿದ್ದ. ಸಿಟ್ಟಿನ ಪ್ರವೃತ್ತಿಯ ಸಲ್ಮಾನ್ ನನ್ನು ಸಂಭಾಳಿಸುವುದು ಕಷ್ಟದ ಕೆಲಸವಾಗಿತ್ತು. ನೋಡಲಿಕ್ಕೆ ಇಬ್ಬರೂ ಅವಳಿಯೇನೋ ಅನ್ನುವಂತೆ ಕಾಣಿಸುತ್ತಿದ್ದರು. ಆದರೆ ಇಬ್ಬರ ಮನಸ್ಥಿತಿಯೂ ಬೇರೆ ಬೇರೆಯಾಗಿತ್ತು. ಮೆಕ್ಕಾಕ್ಕೆ ಹೋಗುವ ಸಲುವಾಗಿ ಅವರಿಬ್ಬರ ಪಾಸ್ ಪೋರ್ಟ್ ತಯಾರಿಸಲು ನಾನು ಪ್ರಯತ್ನಿಸಿದ್ದೇನೋ ನಿಜ. ಆದರೆ ಆ ದಾಖಲೆ ಪತ್ರಗಳು ರೂಪುಗೊಳ್ಳಲು ಕೆಲ ಸಮಯ ತಗುಲಿದ್ದವು. ಆಗೆಲ್ಲ ತಮ್ಮ ಸಲ್ಮಾನ್ ನನ್ನ ಬಳಿ ಬಂದು ಕೂಗಾಡಿ ಹೋಗಿದ್ದ. ಬೇಕಂತಲೇ ಪಾಸ್ ಪೋರ್ಟ್ ನಿಧಾನವಾಗಿ ಆಗುತ್ತಿದೆ. ನಾವು ಮೆಕ್ಕಾಕ್ಕೆ ಹೋಗಬಾರದು ಎನ್ನುವ ಉದ್ದೇಶ ಇದ್ದ ಹಾಗಿದೆ ಹಾಗೆ ಹೀಗೆ ಎನ್ನುವಂತೆಲ್ಲ ಗಲಾಟೆ ಮಾಡಿದ್ದ. ನಾನು ಆತನನ್ನು ಸಮಾಧಾನ ಪಡಿಸಲು ಹೈರಾಣಾಗಿದ್ದೆ. ಆದರೆ ಆಮೀರ್ ಬಂದು ತಮ್ಮನನ್ನು ಸಮಾಧಾನ ಮಾಡಿ ಕರೆದೊಯ್ದಿದ್ದ.
                ಕೊನೆಗೊಂದು ದಿನ ಪಾಸ್ ಪೋರ್ಟ್ ಆಗಿಯೇ ಬಿಟ್ಟಿತು. ಆ ದಿನ ಮಾತ್ರ ಸಲ್ಮಾನ್ ನನ್ನ ಬಳಿ ಬಂದು ಖುಷಿಯಿಂದ ಹೇಳಿಕೊಂಡಿದ್ದ. ಮೆಕ್ಕಾಕ್ಕೆ ಹೋಗಿ ಧರ್ಮೋಪದೇಶ ಪಡೆದುಕೊಂಡು ಬಂದು ನಮ್ಮೂರಿನಲ್ಲಿ ತಾನೊಂದು ಮೌಲ್ವಿಯಾಗುತ್ತೇನೆ ನೋಡುತ್ತಿರಿ ಎಂದು ಹೇಳಿದ್ದ ಸಲ್ಮಾನ್ ಸ್ವಲ್ಪ ವ್ಯಗ್ರನಾಗಿಯೂ ಮಾತನಾಡಿದ್ದ. ಪಾಸ್ ಪೋರ್ಟ್ ಸಿಕ್ಕಿದ್ದಾಗಿದೆ. ಇನ್ನೇಕೆ ನಿನ್ನ ಹಂಗು ಬೇಕು ಎನ್ನುವಂತಿತ್ತು ಸಲ್ಮಾನ್ ನ ವರಸೆ. ನಾನು ಹೆಚ್ಚು ಮಾತನಾಡದೇ ಸುಮ್ಮನುಳಿದಿದ್ದೆ. ಯಥಾಪ್ರಕಾರ ಆಮಿರ್ ಬಂದು ನನ್ನ ಬಳಿ ಕ್ಷಮೆ ಕೋರಿ ಹೋಗಿದ್ದ ಎನ್ನಿ.
              ಇದಾಗಿ ಹಲವು ದಿನಗಳು ಕಳೆದಿದ್ದವು. ಅಣ್ಣ-ತಮ್ಮಂದಿರ ಸುದ್ದಿ ಇರಲಿಲ್ಲ. ಬಹುಶಃ ಹಜ್ ಯಾತ್ರೆಗೆ ಹೋಗಿದ್ದಾರೇನೋ ಅಂದುಕೊಂಡಿದ್ದೆ. ತಿಂಗಳುಗಟ್ಟಲೆ ದಿನಗಳನ್ನು ಕಳೆದ ನಂತರ ಅದೊಂದು ದಿನ ಆ ಅಣ್ಣ-ತಮ್ಮಂದಿರಿ ಸಿಕ್ಕಿದ್ದರು. `ಏನ್ರಪ್ಪಾ.. ನಾಪತ್ತೆಯಾಗಿದ್ದಿರಿ..? ಯಾವ ಕಡೆ ಹೋಗಿದ್ರಿ?' ಎಂದು ಕೇಳಿದ್ದೆ. ಕೊನೆಗೆ ಅವರ ಪೈಕಿ ಸಲ್ಮಾನ್ ಖುಷಿಯಿಂದ ಮಾತನಾಡಿದ್ದ. ಆದರೆ ಆಮೀರ್ ಮಾತನಾಡಿರಲಿಲ್ಲ. ಸಲ್ಮಾನ್ ನನ್ನ ಬಳಿ ಹಜ್ ಯಾತ್ರೆಗೆ ಹೋಗಿ ಬಂದೆವೆಂದೂ ಹಾಜಿಗಳೆನ್ನಿಸಿಕೊಂಡೆವೆಂದೂ ಹೇಳಿದ್ದ. ಫಾಸಪೋರ್ಟ್ ಮಾಡಿಸಿಕೊಡಲು ನಾನು ಸಹಾಯ ಮಾಡಿದ್ದಕ್ಕಾಗಿಯೇ ಹಜ್ ಯಾತ್ರೆ ಸಾಧ್ಯವಾಯಿತು ಎಂದೂ ಹೇಳಿದ್ದ. ಯಾವಾಗಲೂ ನನ್ನ ಬಳಿ ಪ್ರೀತಿಯಿಂದ ಮಾತನಾಡಿ, ಖುಷಿಯಿಂದ ಕಳೆಯುತ್ತಿದ್ದ ಆಮೀರ್ ನನ್ನನ್ನು ಮಾತನಾಡಿಸದೇ ಸಿಟ್ಟಿನ ಮುಖಭಾವದಿಂದ ಹೋಗಿದ್ದು ನನಗೆ ವಿಚಿತ್ರವೆನ್ನಿಸಿತ್ತು. ನನ್ನ ಜೊತೆಗೆ ಸದಾಕಾಲ ಜಗಳಕ್ಕೆ ನಿಲ್ಲುತ್ತಿದ್ದ ಸಲ್ಮಾನ್ ಹಳೆಯ ಕಾಲದ ಯಾವುದೋ ಮಿತ್ರನಂತೆ ಮಾತನಾಡಿದ್ದು, ಆದರಿಸಿದ್ದು ಕೂಡ ಅಚ್ಚರಿಗೆ ಕಾರಣವಾಗಿತ್ತು.
               ನಂತರದ ದಿನಗಳಲ್ಲಿ ಮಾತ್ರ ಬಹಳ ವಿಚಿತ್ರ ಘಟನೆಗಳು ಜರುಗಿದ್ದವು. ಆಮೀರ್ ಹಾಗೂ ಸಲ್ಮಾನ್ ವಾಸವಾಗಿದ್ದ ಊರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಮೊದಲು ಸಲ್ಮಾನ್ ಯಾವ ರೀತಿಯಲ್ಲಿ ತನ್ನ ಧರ್ಮದ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದ್ದನೋ ಈಗ ಆಮೀರ್ ಅದೇ ಕೆಲಸಕ್ಕೆ ಮುಂದಾಗಿದ್ದ. ಸಲ್ಮಾನ್ ತನ್ನ ಚೌಕಟ್ಟಿನ ಅಡಿಯಲ್ಲಿ ಕೆಲಸ ಮಾಡುತ್ತಿದ್ದನಾದರೂ, ವಾದಕ್ಕೆ ಸೀಮಿತನಾಗಿದ್ದನಾದರೂ ಆಮೀರ್ ಮಾತ್ರ ಇನ್ನೂ ಹಲವಾರು ಹೆಜ್ಜೆ ಮುಂದಕ್ಕೆ ಸಾಗಿದ್ದ. ಆತ ಯಾರ ಮಾತನ್ನೂ ಕೇಳದೇ ಇರುವ ಹಂತವನ್ನು ತಲುಪಿದ್ದ. ಅದಕ್ಕೆ ಬದಲಾಗಿ ಸಲ್ಮಾನ್ ಮಾತ್ರ ಸಾಮಾಜಿಕವಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಆರಂಭಿಸಿದ್ದ.
           
***

              ಅದೊಂದು ದಿನ ಬೆಳಿಗ್ಗೆ ಇದ್ದಕ್ಕಿದ್ದಂತೆ ನನಗೆ ಸುದ್ದಿಯೊಂದು ಬಂದಿತ್ತು. ಆಮೀರ್ ಖಾನ್ ಮನೆಯ ಮೇಲೆ ಭಯೋತ್ಪಾದನಾ ನಿಗ್ರಹ ದಳದವರು ಧಾಳಿ ಮಾಡಿದ್ದಾರೆ. ಆಮೀರ್ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಬಂದೂಕುಗಳು, ಪಿಸ್ತೂಲುಗಳು ಸಿಕ್ಕಿವೆಯಂತೆ. ಮನೆಯ ಯಜಮಾನನಾದ ಆಮೀರ್ ಹಾಗೂ ಆತನ ತಮ್ಮ ಸಲ್ಮಾನ್ ಇಬ್ಬರನ್ನೂ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರಂತೆ ಎಂಬ ಸುದ್ದಿ ಕೇಳಿಬಂದಿತ್ತು. ಅದಾದ ಮರುದಿನವೇ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ನನ್ನ ಮನೆಯ ಕದವನ್ನೂ ತಟ್ಟಿದ್ದರು. ನಾನು ಈಗ ಮಾತ್ರ ಭಯಗೊಂಡಿದ್ದೆ. ಅಧಿಕಾರಿಗಳು ನನ್ನನ್ನು ಸೀದಾ ಅವರ ಕಚೇರಿಗೆ ಕರೆದೊಯ್ದಿದ್ದರು. ಸದಾ ಧರ್ಮದ ಪರವಾಗಿ ಮಾತನಾಡಿ ಗಲಾಟೆಗೆ ತಯಾರಾಗುತ್ತಿದ್ದ ಸಲ್ಮಾನ್ ಏನೋ ಭಾನಗಡಿ ಮಾಡಿರಬೇಕು ಎಂದುಕೊಂಡಿದ್ದೆ.
             ಕರೆದೊಯ್ದವರೇ ನನ್ನ ಬಳಿ ಕೇಳಿದ್ದಿಷ್ಟು. ಆಮೀರ್ ಹಾಗೂ ಸಲ್ಮಾನ್ ಇಬ್ಬರೂ ಹಜ್ ಯಾತ್ರೆ ಮಾಡಲು ಅನುಕೂಲವಾಗುವಂತೆ ಪಾಸಪೋರ್ಟ್ ಮಾಡಿಸಿಕೊಟ್ಟಿದ್ದು, ಅದಕ್ಕೆ ಸಹಾಯ ಮಾಡಿದ್ದು ನಾನಾಗಿದ್ದೆ. ಅದನ್ನು ಯಾವ ಕಾರಣಕ್ಕೆ ಮಾಡಿಸಿಕೊಟ್ಟಿದ್ದೆಂದು ಕೇಳಿದ್ದರು. ನಾನು ಎಲ್ಲ ವಿವರಗಳನ್ನೂ ಹೇಳಿದ್ದೆ. ಕೊನೆಗೆ ನನ್ನ ಮಾತನ್ನು ಅವರು ನಂಬಿದರೋ ಬಿಟ್ಟರೋ ಎನ್ನುವುದು ಗೊತ್ತಾಗಲಿಲ್ಲ. ಆದರೆ ನನ್ನನ್ನು ವಾಪಾಸು ಹೋಗುವಂತೆ ಹೇಳಿದ್ದರಿಂದ ನಾನು ನಿರಾಳನಾಗಿದ್ದೆ. ಹೋಗುವ ಮುನ್ನ ಅಧಿಕಾರಿಗಳ ಬಳಿ ಬಂಧನಕ್ಕೊಳಪಟ್ಟಿರುವ ಆಮೀರ್ ಹಾಗೂ ಸಲ್ಮಾನ್ ಅವರನ್ನು ಮಾತನಾಡಿಸಬಹುದೇ ಎಂದು ಹೇಳಿದ್ದೆ. ಅದಕ್ಕವರು ಸಾಕಷ್ಟು ಫಾರ್ಮುಗಳ ಮೇಲೆ ಸಹಿ ಹಾಕಿಸಿಕೊಂಡು ಒಪ್ಪಿಗೆ ಸೂಚಿಸಿದ್ದರು.
          ದೊಡ್ಡ ಜೈಲಿನಲ್ಲಿ ಎರಡು ಪ್ರತ್ಯೇಕ ಕೋಣೆಗಳಲ್ಲಿ ಆಮೀರ್ ಹಾಗೂ ಸಲ್ಮಾನ್ ರನ್ನು ಕೂಡಿ ಹಾಕಲಾಗಿತ್ತು. ಅವರು ಇದ್ದ ಸ್ಥಿತಿಯನ್ನು ಗಮನಿಸಿದರೆ ಸತ್ಯವನ್ನು ಬಾಯಿ ಬಿಡಿಸುವ ಸಲುವಾಗಿ ಸಾಕಷ್ಟು ಚಿತ್ರಹಿಂಸೆ ನೀಡಿರುವುದು ಗಮನಕ್ಕೆ ಬರುತ್ತಿತ್ತು. ನಾನು ಸೀದಾ ಆಮೀರ್ ಇದ್ದ ಕೋಣೆಯತ್ತ ಹೋದೆ. ಆಮೀರನಿಗೆ ನಾನು ಬರುತ್ತಿರುವುದು ಕಾಣಿಸಿತ್ತು. ಆದರೆ ನನ್ನ ಜೊತೆಗೆ ಮಾತನಾಡಲು ಸಿದ್ಧನಿರದ ಆಮೀರ್ ಮುಖ ತಿರುಗಿಸಿಕೊಂಡ. ಕೊನೆಗೆ ಸಲ್ಮಾನ್ ಬಳಿಗೆ ಹೋದೆ. ಸಲ್ಮಾನ್ ನನ್ನನ್ನು ನೋಡಿದವನೇ ಕಣ್ಣಿನಲ್ಲಿ ನೀರು ತಂದುಕೊಂಡು `ಮಾಫ್ ಕರೋ. ನಾನು ಏನೂ ಧೋಖಾ ಮಾಡಿಲ್ಲ. ನನ್ನನ್ನು ಇಲ್ಲಿ ಸುಮ್ಮನೇ ಸಿಕ್ಕಿಸಿದ್ದಾರೆ. ಹೇಗಾದರೂ ಮಾಡಿ ನನ್ನನ್ನು ಬಿಡಿಸಿ ಮಾರಾಯ್ರೇ..' ಎಂದು ಹಲುಬಲು ಆರಂಭಿಸಿದ. ನನಗೆ ಮತ್ತೆ ವಿಚಿತ್ರವೆನ್ನಿಸಿತ್ತು.
            `ಏನಾಗುತ್ತದೋ ಗೊತ್ತಿಲ್ಲ. ಆದರೆ ಇದೆಲ್ಲ ಹೇಗಾಯಿತು? ಇದಕ್ಕೆಲ್ಲ ಏನು ಕಾರಣ? ನಿಮ್ಮ ಮನೆಯಲ್ಲಿ ಭಯೋತ್ಪಾದಕ ವಸ್ತುಗಳು ಸಿಗುತ್ತವೆ ಎಂದರೆ ಹೇಗೆ ಸಾಧ್ಯ? ನೋಡಿ ನಿಮಗೆ ಪಾಸ್ ಪೋರ್ಟ್ ಮಾಡಿಸಿಕೊಡಲು ಸಹಾಯ ಮಾಡಿದ ನನ್ನ ತಲೆಗೂ ಇದು ಸುತ್ತಿಕೊಳ್ಳುತ್ತಿದೆ..' ಎಂದು ಸಿಟ್ಟಿನಿಂದ ನುಡಿದೆ.
            `ಭಾಯ್.. ಇದು ನನ್ನ ಕೆಲಸವಲ್ಲ ಭಾಯ್. ಇದಕ್ಕೂ ನನಗೂ ಏನೂ ಸಂಬಂಧವಿಲ್ಲ. ಇದೆಲ್ಲ  ಆಮೀರ್ ನ ಕೆಲಸ. ನಾನು ಯಾವುದಕ್ಕೂ ಸಂಬಂಧ ಇಲ್ಲದವನು. ಆದರೆ ಆಮೀರ್ ನಿಂದಾಗಿ ನಾನೂ ಈಗ ಜೈಲುಪಾಲಾಗುವ ಪರಿಸ್ಥಿತಿ ಬಂದಿತು. ಅವನಿಂದಲೇ ನಿಮಗೂ ಕೆಟ್ಟ ಹೆಸರು ಬಂದಿತು ನೋಡಿ.. ಛೇ..' ಎಂದು ತಲೆ ಕೊಡವಿದ ಸಲ್ಮಾನ್.
            `ಆಮೀರ್..? ಆತ ಹೀಗೆ ಮಾಡಿದನಾ? ಹೇಗೆ ಸಾಧ್ಯ? ಮತ್ತೆ ಆಗ ಅಷ್ಟೆಲ್ಲ ಒಳ್ಳೆಯವನಾಗಿದ್ದನಲ್ಲ.. ಹಜ್ ಯಾತ್ರೆ ಮಾಡಿದ ನಂತರ ಏನಾಯಿತು ನಿಮಗೆ?' ಎಂದು ಅಚ್ಚರಿ, ದುಗುಡ ಹಾಗೂ ಕುತೂಹಲದಿಂದ ಕೇಳಿದ್ದೆ.
           `ಅಯ್ಯೋ ಅದೊಂದು ದೊಡ್ಡ ಕಥೆ. ಹಜ್ ಯಾತ್ರೆಗೆ ಮುನ್ನ ನಾನು ಉಗ್ರವಾದ ಆಲೋಚನೆಗಳನ್ನು ಹೊಂದಿದ್ದೇನೋ ನಿಜ. ನನ್ನಣ್ಣ ಆಮೀರ್ ಒಳ್ಳೆಯವನಾಗಿದ್ದಿದ್ದೂ ನಿಜ. ಆದರೆ ಅಲ್ಲಿಗೆ ಹೋದ ಮೇಲೆಯೇ ನಮ್ಮಲ್ಲಿ ಬದಲಾವಣೆಗಳು ಜರುಗಿದ್ದು ನೋಡಿ. ಹೇಗೋ ಇದ್ದ ಆತ ಹೇಗೋ ಆದ. ಮತ್ತೆ ಇನ್ನು ಹೇಗೋ ಇದ್ದ ನಾನು ಹೀಗೆ ಆಗಿದ್ದೇನೆ ನೋಡಿ..' ಎಂದು ಹಲುಬಿದ ಸಲ್ಮಾನ್.
           `ಅರ್ಥವಾಗುತ್ತಿಲ್ಲ.. ಬಿಡಿಸಿ ಹೇಳು ಮಾರಾಯಾ.' ಎಂದೆ ನಾನು
           `ನಿಮ್ಮ ಧರ್ಮದಲ್ಲಿ ಕಾಶೀ ಯಾತ್ರೆಯನ್ನು ಹೇಗೆ ಮಾಡುತ್ತೀರೋ ಹಾಗೆ ನಮ್ಮ ಧರ್ಮದಲ್ಲಿ ಮೆಕ್ಕಾ ಯಾತ್ರೆ ಮಾಡುತ್ತೇವೆ. ಕಾಶಿ ನಿಮಗೆ ಪವಿತ್ರ. ನಮಗೆ ಮೆಕ್ಕಾ ಹಾಗೂ ಮದೀನಾ ಯಾತ್ರೆ. ಇದನ್ನೇ ಹಜ್ ಯಾತ್ರೆ ಎಂದು ಕರೆಯಲಾಗುತ್ತದೆ. ಹಜ್ ಯಾತ್ರೆ ಮಾಡಿದವರನ್ನು ಹಾಜಿ ಎಂದೂ ಹೇಳಲಾಗುತ್ತದೆ. ಹೀಗೆ ಹಜ್ ಯಾತ್ರೆಗೆ ನಮ್ಮಂತೆ ಕೋಟ್ಯಂತರ ಜನರು ದೇಶ ವಿದೇಶಗಳಿಂದ ಬರುತ್ತಾರೆ. ನಾವು ಕೂಡ ಹೋದ್ವಿ. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಅಲ್ಲಿಂದಲೇ ಎಲ್ಲ ಬದಲಾಗಿದ್ದು ನೋಡಿ.' ಎಂದ ಸಲ್ಮಾನ್. `ಅಂದರೆ? ಏನಾಯಿತು ಅಲ್ಲಿ?' ನಾನು ನಡುವೆ ಬಾಯಿ ಹಾಕಿ ಕೇಳಿದೆ.
            `ಅಲ್ಲಿ ಎಲ್ಲಾ ರಾಷ್ಟ್ರಗಳ ಜನರೂ ಬರುತ್ತಾರೆ ಎಂದೆನಲ್ಲ. ಅಣ್ಣ ಆಮೀರ್ ಗೆ ಹೇಗೋ ಗೊತ್ತಿಲ್ಲ ಪಾಕಿಸ್ತಾನದಿಂದ ಬಂದಿದ್ದ ಕೆಲವು ಭಯೋತ್ಪಾದಕರ ಪರಿಚಯವಾಗಿಬಿಟ್ಟಿತ್ತು. ಸೌಮ್ಯನಾಗಿ, ಎಲ್ಲರಿಗೂ ಬೇಕಾಗಿ ಜೀವಿಸುತ್ತಿದ್ದ ಆತನ ತಲೆಯನ್ನು ಭಯೋತ್ಪಾದಕರು ವ್ಯವಸ್ಥಿತವಾಗಿ ತಿರುಗಿಸಿಬಿಟ್ಟಿದ್ದರು. ಪರಿಣಾಮವಾಗಿ ಆತನ ತನ್ನ ಧರ್ಮವನ್ನು ಬಿಟ್ಟು ಉಳಿದೆಲ್ಲ ಧರ್ಮವನ್ನೂ ದ್ವೇಷಿಸುವ ಹಂತಕ್ಕೆ ತಲುಪಿದ್ದ. ಧರ್ಮದ ಸ್ಥಾಪನೆಗಾಗಿ ಧರ್ಮಯುದ್ಧ ಮಾಡಲೂ ಸಿದ್ಧ ಎಂದು ಹೇಳುವ ಮಟ್ಟಕ್ಕೆ ಆತ ಬಂದು ತಲುಪಿದ್ದ. ಇದೇ ಕಾರಣಕ್ಕೆ ಈಗ ಆತ ಯಾರ ಬಳಿಯೂ ಹೆಚ್ಚು ಮಾತನಾಡುವುದಿಲ್ಲ. ಎಲ್ಲರನ್ನೂ ದ್ವೇಷ ಮಾಡುತ್ತಾನೆ. ಎಲ್ಲರ ಮೇಲೂ ಕೆಂಡ ಕಾರುತ್ತಾನೆ. ಇದೀಗ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿ ಇರಿಸಿಕೊಳ್ಳುವುದಕ್ಕೂ ಇದೇ ಕಾರಣ. ಈಗ ನೋಡಿ ಇದು ಎಲ್ಲಿಗೆ ಬಂದು ತಲುಪಿದೆ ಅಂತ..' ಎಂದ ಸಲ್ಮಾನ್.
            ನನ್ನಲ್ಲಿ ಅಚ್ಚರಿಯಿತ್ತು. ಎಲ್ಲರನ್ನೂ ಸ್ನೇಹದಿಂದ ಕಾಣುತ್ತಿದ್ದ, ಎಲ್ಲಾ ಧರ್ಮದವರನ್ನೂ ಪ್ರೀತಿಯಿಂದ ಸಲಹುತ್ತಿದ್ದ ಆಮೀರ್ ನಲ್ಲಿ ಇಂತಹ ಬದಲಾವಣೆಯಾಗಿದೆ ಎಂದರೆ ಸಾಮಾನ್ಯವೇನಲ್ಲ. ಆಮೀರ್ ಉಗ್ರನಾದ ಎನ್ನುವುದನ್ನು ನನ್ನ ಮನಸ್ಸು ಹೇಗೆ ನಂಬಲು ತಯಾರಿರಲಿಲ್ಲವೋ ಅದೇ ರೀತಿ ಉಗ್ರ ಗುಣಗಳನ್ನು ಹೊಂದಿದ್ ಸಲ್ಮಾನ್ ಹೇಗೆ ಸೌಮ್ಯನಾದ ಎನ್ನುವುದನ್ನೂ ನಂಬಲು ಸಿದ್ಧವಿರಲಿಲ್ಲ. ಕುತೂಹಲ ತಡೆಯಲಾಗದೇ ಕೇಳಿಯೂಬಿಟ್ಟೆ. `ಹಾಗಾದರೆ ನೀನು ಇಷ್ಟೆಲ್ಲ ಸುಮ್ಮನಾಗಲು, ನಿನ್ನೊಳಗಿನ ಉಗ್ರ ಗುಣಗಳು ಕಾಣೆಯಾಗಲು ಕಾರಣ ಏನು? ನಿನಗೂ ಉಗ್ರರ ಗುಂಪು ಸಿಗಲಿಲ್ಲವಾ? ನಿನ್ನನ್ನು ಮನಃಪರಿವರ್ತನೆ ಮಾಡಲು ಅವರು ಪ್ರಯತ್ನಿಸಲಿಲ್ಲವಾ?' ಎಂದು ಕೇಳಿದೆ.
            ಒಮ್ಮೆ ನಕ್ಕ ಸಲ್ಮಾನ್ `ಭಾಯ್.. ನಿಮ್ಮ ಧರ್ಮದಲ್ಲಿ ನೀವು ಕಾಶಿಗೆ ಹೋಗುತ್ತೀರಾ. ಕಾಶಿಗೆ ಹೋಗಿ ಬಂದವರನ್ನು ಸರಿಯಾಗಿ ಮಾತನಾಡಿಸಿದರೆ ಅವರಲ್ಲಿ ಅದೇನೋ ಒಂದು ರೀತಿಯ ಭಾವ ಕಾಡುತ್ತಿರುತ್ತದೆ. ಬೌದ್ಧುಕವಾಗಿ ಔನ್ನತ್ಯ ಸಾಧಿಸಿರುತ್ತಾರೆ. ತಾವು ಇದುವರೆಗೂ ಮಾಡಿದ್ದು ಸಾಕು. ಇನ್ನಾದರೂ ಸಮಾಜಮುಖಿಯಾಗೋಣ, ಜನರಿಗೆ ಒಳ್ಳೆಯದನ್ನು ಮಾಡೋಣ ಎಂದುಕೊಂಡು ಜೀವನ ನಡೆಸುತ್ತಾರೆ. ನನಗೂ ಕೂಡ ಹಾಗೆಯೇ ಆಯಿತು. ನಮ್ಮ ಧರ್ಮದ ಅತ್ಯುನ್ನತ ಕ್ಷೇತ್ರಕ್ಕೆ ಹೋದ ನನಗೆ ಎಲ್ಲ ಆಸೆಗಳೂ ಸಂಪೂರ್ಣವಾಗಿ ಕರಗಿಬಿಟ್ಟವು. ಯಾಕೋ ನಾನು ಇದುವರೆಗೂ ಸುಮ್ಮನೇ ಧರ್ಮ-ಧರ್ಮ ಎಂದು ಹೊಡೆದಾಟ ಮಾಡುತ್ತಿದ್ದೆ. ಆದರೆ ಅದರಿಂದ ನನಗೆ ಸಿಕ್ಕಿದ್ದೇನು ಎನ್ನಿಸಿತು. ಸಮಾಜದಿಂದಲೂ ದೂರವಾದೆ. ನನ್ನನ್ನು ಕಂಡರೆ ಎಲ್ಲರೂ ಹೆದರಲು ಆರಂಭಿಸಿದರು. ನಾನು ನನ್ನ ಮನೆಯಲ್ಲಿರುವ ನನ್ನ ಧರ್ಮದ ಗೃಂಥವನ್ನು ಅದೆಷ್ಟು ಸಹಸ್ರ ಸಾರಿ ಓದಿದ್ದೆನೊ. ಆದರೆ ಅದರಲ್ಲಿನ ವಾಕ್ಯಗಳು ಸಂಪೂರ್ಣ ಅರ್ಥವಾಗಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಹೀಗಾಗಿ ಧರ್ಮ ಹಾಗೆ ಹೇಳುತ್ತಿದೆ, ಹೀಗೆ ಹೇಳುತ್ತದೆ ಎಂದೆಲ್ಲ ವಾದಿಸುತ್ತಿದೆ. ಆದರೆ ಯಾತ್ರೆಗೆ ಹೋದ ನನಗೆ ಒಬ್ಬ ಪ್ರಸಿದ್ದ ಮೌಲ್ವಿಗಳ ದರ್ಶನ ಭಾಗ್ಯ ಸಿಕ್ಕಿತು. ಅವರು ನನಗೆ ನನ್ನ ಧರ್ಮದ ಗೃಂಥದ ಎಳೆ ಎಳೆಯನ್ನೂ ಸಂಪೂರ್ಣವಾಗಿ ವಿವರಿಸಿದರು. ನನ್ನ ಧರ್ಮ ಉಗ್ರವಾದುದಲ್ಲ. ಯುದ್ಧ ಮಾಡಿ ಎಂದು ಹೇಳುವುದಿಲ್ಲ. ಬದಲಾಗಿ ಪ್ರೀತಿಯನ್ನು ಹಂಚಿ ಎಂದು ಹೇಳುತ್ತದೆ ಎಂದರು. ನಾನು ಎಷ್ಟು ತಪ್ಪು ಮಾಡುತ್ತಿದ್ದೆ ಎನ್ನುವುದು ಅರಿವಾಯಿತು. ತಕ್ಷಣವೇ ನಾನು ಬದಲಾಗಲು ನಿರ್ಧಾರ ಮಾಡಿದೆ. ನನ್ನೊಳಗಿನ ಉಗ್ರ ಹಾಗೇ ಕಾಣೆಯಾಗಿದ್ದ..' ಎಂದ ಸಲ್ಮಾನ್.
               ನನ್ನಲ್ಲಿ ಅಚ್ಚರಿಯಿತ್ತು. ಆತನೇ ಮುಂದುವರೆದ `ನನಗೂ ಅನೇಕ ಜನರು ಬಂದು ಹಾಗೆ ಮಾಡು ಹೀಗೆ ಮಾಡು ಎಂದರು. ಭಯೋತ್ಪಾದಕ ಸಂಘಟನೆಗೆ ಸೇರಲು ಆಹ್ವಾನವನ್ನೂ ನೀಡಿದ್ದರು. ಆದರೆ ಅವರ ಬಳಿ ನಾನು ಪ್ರೀತಿಯ ಪಾಠವನ್ನು ಹೇಳಿದೆ. ಇದರಿಂದಾಗಿ ಯಾತ್ರೆಯ ಮಧ್ಯದಲ್ಲಿಯೇ ನನ್ನ ಮೇಲೆ ಹಲ್ಲೆಯೂ ನಡೆಯಿತು. ಆದರೆ ಮೌಲ್ವಿಗಳ ಸಹಾಯದಿಂದ ನಾನು ಬದುಕಿದೆ. ಆದರೆ ನನ್ನಣ್ಣ ಸಂಪೂರ್ಣವಾಗಿ ಅವರ ವಶಕ್ಕೆ ಸಿಲುಕಿದ್ದ. ಆತನನ್ನು ಬದಲಾಯಿಸಲು ಪ್ರಯತ್ನಿಸಿ ಸೋತು ಹೋದೆ. ಮುಂದೊಂದು ದಿನ ಶಸ್ತ್ರಾಸ್ತ್ರಗಳನ್ನೂ ತಂದು ಇರಿಸಿದ. ಇದನ್ನು ನಾನು ಉಗ್ರವಾಗಿ ವಿರೋಧ ಮಾಡಿದ್ದೆ. ಆದರೆ ಅಣ್ಣ ನನ್ನ ಮಾತು ಕೇಳಲಿಲ್ಲ. ಕೊನೆಗೊಂದು ದಿನ ನಾನೇ ಭಯೋತ್ಪಾದನೆ ನಿಗ್ರಹ ದಳದವರಿಗೆ ಮಾಹಿತಿಯನ್ನೂ ನೀಡಿದೆ. ಈಗ ನೋಡಿ ದಳದ ಅಧಿಕಾರಿಗಳು ನನ್ನ ಮಾತನ್ನು ಕೇಳುತ್ತಿಲ್ಲ. ನಾನೇ ಮಾಹಿತಿ ನೀಡಿದವನು ಎಂದರೂ ನಂಬುತ್ತಿಲ್ಲ. ನನ್ನನ್ನೂ ಭಯೋತ್ಪಾದಕ ಎಂಬಂತೆ ಕಾಣುತ್ತಿದ್ದಾರೆ' ಎಂದ.
             ಸಲ್ಮಾನ್ ಇಂತಹದ್ದೊಂದು ಮಾಹಿತಿ ನೀಡುತ್ತಾನೆ ಎಂದು ನಾನು ಖಂಡಿತವಾಗಿಯೂ ಅಂದಾಜು ಮಾಡಿರಲಿಲ್ಲ. ದೇಶದಾದ್ಯಂತ ಇರುವ ನಮ್ಮದೇ ದೇಶದ ಗುಪ್ತಚರರು ಈ ಅಣ್ಣತಮ್ಮಂದಿರ ಮೇಲೆ ಕಣ್ಣಿರಿಸಿದ್ದರು. ಅವರ ತನಿಖೆಗೆ ಸಿಕ್ಕಿಬಿದ್ದಿದ್ದಾರೆ ಎಂದುಕೊಂಡಿದ್ದೆ. ಆದರೆ ಸಲ್ಮಾನ್ ಮಾಹಿತಿ ನೀಡಿದ್ದಾನೆ ಎನ್ನುವುದು ನನ್ನಲ್ಲಿ ಶಾಕ್ ನೀಡಿತ್ತು. ಸಲ್ಮಾನ್ ಇಂತಹ ಕೆಲಸ ಮಾಡಿದ್ದಾನೆ ಎನ್ನುವುದು ನನ್ನ ನಿರೀಕ್ಷೆಗೆ ನಿಲುಕದ ಸಂಗತಿಯಾದ್ದರಿಂದ ಒಮ್ಮೆ ಬೆಚ್ಚಿದ್ದೆ. ನಾನು ಮಾತುಕತೆಗೆ ಆಡಲು ಬಂದಾಗ ನನ್ನ ಜೊತೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯೊಬ್ಬ ಬಂದಿದ್ದ. ಆತ ನಮ್ಮ ಮಾತುಕತೆಗಳನ್ನೆಲ್ಲ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಸಲ್ಮಾನನ ಮಾತನ್ನು ಕೇಳಿ ಆತನಿಗೂ ಒಮ್ಮೆ ಅಚ್ಚರಿಯಾಗಿದ್ದು ಮುಖಭಾವದಿಂದ ಕಾಣುತ್ತಿತ್ತು.
             `ಒಳ್ಳೆಯ ಕೆಲಸ ಮಾಡಿದ್ದೀಯಾ ಸಲ್ಮಾನ್ ಭಾಯ್. ನಿಜಕ್ಕೂ ನಿನ್ನ ದೇಶಪ್ರೇಮ, ಪ್ರೀತಿಯ ಪಾಠ ಮೆಚ್ಚುವಂತದ್ದು. ನಾನು ಅಧಿಕಾರಿಗಳ ಬಳಿ ಹೇಳುತ್ತೇನೆ. ನನ್ನ ಮಾತನ್ನು ಕೇಳಿದರೆ ಆಯಿತು. ಇಲ್ಲವಾದರೆ ಮುಂದೆ ಏನಾಗುತ್ತದೆಯೋ ನೋಡೋಣ. ಆದರೆ ನೀನು ಹೇಳಿದ ಮಾತುಗಳಿದೆಯಲ್ಲ. ಇದನ್ನು ಜಗತ್ತು ಅನುಸರಿಸಿದರೆ ಮಾತ್ರ ಎಷ್ಟು ಒಳ್ಳೆಯದು ಅಲ್ಲವಾ. ದ್ವೇಷದಿಂದ, ಭಯದಿಂದ ಜಗತ್ತನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರೀತಿಯಿಂದ ಮಾತ್ರ ಸಾಧ್ಯವಿದೆ. ನನಗೆ ಅರ್ಥವಾಗುತ್ತದೆ. ನಿನಗೆ ಅರ್ಥವಾಗುತ್ತದೆ. ಆದರೆ ಜಗತ್ತಿಗೆ ಮಾತ್ರ ಇದು ಅರ್ಥವಾಗುತ್ತಿಲ್ಲ ನೋಡು.' ಎಂದೆ. ಮುಂದಿನ ಕೆಲ ಘಳಿಗೆಯಲ್ಲಿ ಆತನ ಜೊತೆ ಮಾತುಕತೆಯೂ ನಡೆಯಿತು. ಅಷ್ಟರಲ್ಲಿ ನನ್ನ ಜೊತೆಗೆ ಇದ್ದ ಅಧಿಕಾರಿ ಸನ್ನೆ ಮಾಡಿದ. ಮಾತು ಸಾಕು ಎನ್ನುವಂತೆ ಹೇಳಿ ನನ್ನನ್ನು ಹೊರಕ್ಕೆ ಹೋಗುವಂತೆ ತಿಳಿಸಿದ. ನಾನು ಸಲ್ಮಾನನನ್ನು ಬೀಳ್ಕೊಟ್ಟೆ. ಸಲ್ಮಾನನ ಕೋಣೆ ದಾಟಿ ಆಮೀರ್ ಇದ್ದ ಕೋಣೆಯ ಬಳಿ ಬಂದಾಗ ಇದ್ದಕ್ಕಿದ್ದಂತೆ ಆಮೀರ್ `ಧರ್ಮಯುದ್ಧ ಶಾಶ್ವತ. ಧರ್ಮಯುದ್ಧಕ್ಕೆ ಜಯವಾಗಲಿ.' ಎಂದು ದೊಡ್ಡದಾಗಿ ಕೂಗಿದ. ನಾನು ಬೆಚ್ಚಿಬಿದ್ದು ಹೊರಕ್ಕೆ ಬಂದಿದ್ದೆ.

****

            ಇದಾಗಿ ಒಂದು ವಾರ ಕಳೆಯುವಷ್ಟರಲ್ಲಿ ಅಚ್ಚರಿಯ ಸುದ್ದಿಯೊಂದು ಬಂದಿತ್ತು. ಜೈಲಿನಲ್ಲಿ ಸಲ್ಮಾನ್ ತನ್ನ ಅಣ್ಣ  ಆಮೀರನನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಅಚ್ಚರಿಯಿಂದ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳ ಬಳಿ ಕೇಳಿದಾಗ `ಉಗ್ರನ ಮನಸ್ಸು ಪರಿವರ್ತನೆಗೆ ಪ್ರಯತ್ನ ಮಾಡಿದ್ದ ಸಲ್ಮಾನ್. ಅದರೆ ಆಮೀರ್ ಆ ಮಾತಿಗೆ ಬೆಲೆ ಕೊಡಲಿಲ್ಲ. ಕೊನೆಗೆ ಇಂತಹ ಉಗ್ರ ಮನೋಭಾವದವನು ಇರುವುದಕ್ಕಿಂತ ಸಾಯುವುದೇ ಒಳ್ಳೆಯದು. ಆತನನ್ನು ಸಾಯಿಸಿದರೆ ಜಗತ್ತಿನಲ್ಲಿ ಅದೆಷ್ಟೋ ಅಮಾಯಕರು ನಿಶ್ಚಿಂತೆಯಿಂದ ಇರುತ್ತಾರೆ ಎಂದು ಎಂದು ಪತ್ರ ಬರೆದು ಆಮೀರನನ್ನು ಹತ್ಯೆ ಮಾಡಿದ್ದ. ಅಲ್ಲದೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ನೋಡಿ..' ಎಂದಿದ್ದರು.
            ಒಂದು ಯಾತ್ರೆ ಇಬ್ಬರಲ್ಲೂ ಎಂತಹ ಬದಲಾವಣೆ ತಂದಿತಲ್ಲ. ಸೌಮ್ಯನಾಗಿದ್ದವನು ಉಗ್ರನಾದ. ಉಗ್ರನಾದವನು ಸೌಮ್ಯಭಾವವನ್ನು ಹೊಂದಿದ. ಒಬ್ಬ ಹಿಂಸೆಯ ಹಾದಿ ಹಿಡಿದರೆ ಇನ್ನೊಬ್ಬ ಪ್ರೀತಿಯ ಹೂವನ್ನು ಮುಡಿದ. ಎಂತಹ ಬದಲಾವಣೆಗಳಲ್ಲವಾ ಎಂದುಕೊಂಡೆ. ಸಲ್ಮಾನ್ ಹಾಗೂ ಆಮೀರ್ ಸಹೋದರರ ಈ ರೀತಿಯ ಬದಲಾವಣೆಗಳು ನನ್ನಲ್ಲೂ ತರಂಗಗಳನ್ನು ಎಬ್ಬಿಸಿದ್ದವು.

        

Thursday, August 20, 2015

ಟೀಂ ಇಂಡಿಯಾಗೆ ಟೆಸ್ಟ್

            ಒಂದಾನೊಂದು ಕಾಲದ ಕ್ರಿಕೆಟ್ ಲೋಕದ ನಂಬರ್ 1 ಟೆಸ್ಟ್ ರಾಂಕಿನ ರಾಷ್ಟ್ರ ಭಾರತ ಇದೀಗ ಬಕ್ಕಾಬೋರಲು ಬಿದ್ದಿದೆ. ಒಂದರ ಹಿಂದೆ ಒಂದರಂತೆ ಸೋಲುಗಳನ್ನು ಕಾಣಲು ಆರಂಭಿಸಿದೆ. ಡ್ರಾ ಸಾಧಿಸಿಕೊಳ್ಳುವಂತಹ ಪಂದ್ಯಗಳಲ್ಲಿಯೂ ಸೋಲನ್ನು ಕಾಣುವ ಮೂಲಕ ಮಾನ ಹರಾಜು ಮಾಡಿಕೊಳ್ಳುತ್ತಿದೆ. ಇನ್ನು ವಿದೇಶಿ ನೆಲದಲ್ಲಂತೂ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಸಾಕಪ್ಪಾ ಸಾಕು ಎನ್ನಿಸುವಂತಹ ದಯನೀಯ ಸ್ಥಿತಿಗೆ ತಲುಪಿದೆ. ಇಂತಹ ಸೋಲಿಗೆ ಕಾರಣಗಳನ್ನು ಹುಡುಕಿದರೆ ಅನೇಕ ಸಂಗತಿಗಳು ಹೊರಬೀಳುತ್ತವೆ.
           ದಶಕಗಳ ಹಿಂದೆ ಭಾರತ ಕ್ರಿಕೆಟ್ ತಂಡ ಟೆಸ್ಟ್ ರಾಂಕಿಂಗಿನಲ್ಲಿ ಮೊದಲ ಸ್ಥಾನವನ್ನು ಎಡತಾಕುತ್ತಿತ್ತು. 2007-08ರ ಆಜೂಬಾಜಿನಲ್ಲಿ ಮೊದಲ ಸ್ಥಾನದಲ್ಲಿದ್ದು ನಂತರ ಒಂದೆರಡು ವರ್ಷಗಳ ವರೆಗೂ ಅದೇ ಸ್ಥಾನವನ್ನು ಕಾಪಾಡಿಕೊಂಡಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಭಾರತದ ಪರಿಸ್ಥಿತಿ ಅಯ್ಯೋ ಪಾಪ ಎನ್ನಿಸಲು ಆರಂಭವಾಗಿದೆ. ಸಾಲು ಸಾಲು ಸೋಲುಗಳು ತಂಡದ ಆತ್ಮಸ್ಥೈರ್ಯವನ್ನೇ ಕಂಗೆಡಿಸಿಬಿಟ್ಟಿದೆ. ಆಷ್ಟ್ರೇಲಿಯಾದಂತಹ ದೈತ್ಯ ಕ್ರಿಕೆಟ್ ತಂಡವನ್ನು ಅದರ ನೆಲದಲ್ಲಿಯೇ ಸೋಲಿಸಿದ್ದ ಭಾರತ ತಂಡ ಇದೇನಾ ಎಂದು ಅನುಮಾನಿಸುವಷ್ಟರ ಮಟ್ಟಿಗೆ ಭಾರತದ ಟೆಸ್ಟ್ ಕ್ರಿಕೆಟ್ ತಳಕಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
          ಗಂಗೂಲಿ, ದ್ರಾವಿಡ್, ತೆಂಡೂಲ್ಕರ್, ಲಕ್ಷ್ಮಣ್ ಇವರಂತಹ ದೈತ್ಯರು ಭಾರತೀಯ ತಂಡದಲ್ಲಿ ಇದ್ದಷ್ಟು ಕಾಲ ತಂಡಕ್ಕೆ ಸೋಲೆಂಬುದೇ ಇರುತ್ತಿರಲಿಲ್ಲ. ಸೋಲಿನ ಸಂದರ್ಭದಲ್ಲೆಲ್ಲ ಡ್ರಾ ಆದರೂ ಸಾಧಿಸಿಕೊಳ್ಳುತ್ತಿತ್ತು. ಕನಿಷ್ಟ ಮೂರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆಲ್ಲುವ ಮೂಲಕ ಟೆಸ್ಟ್ ಕ್ರಿಕೆಟ್ ನ ರಾಜನಾಗಿ ಮೆರೆಯುತ್ತಿತ್ತು. ಆದರೆ ಅಂತಹ ತಂಡ ಇದೀಗ ಸೋಲನ್ನು ತಪ್ಪಿಸಿಕೊಳ್ಳಲಾಗದೇ ವಿದೇಶಿ ನೆಲದಲ್ಲಿ ಮುಗ್ಗರಿಸುತ್ತಿದೆ.
           ಭಾರತ ಕ್ರಿಕೆಟ್ ತಂಡದ ಗುಣಮಟ್ಟ ಚನ್ನಾಗಿಲ್ಲ, ಅನುಭವದ ಕೊರತೆ ಈ ಮುಂತಾದ ಮಾತುಗಳು ಸದಾಕಾಲ ಚಾಲ್ತಿಯಲ್ಲಿದೆ. 2000ದಿಂದ ಆರಂಭಗೊಂಡ ಭಾರತೀಯ ಟೆಸ್ಟ್ ಕ್ರಿಕೆಟ್ ನ ಸುವರ್ಣಯುಗ 2011ರ ವರೆಗೂ ನಿರಾತಂಕವಾಗಿ ಮುಂದುವರಿದಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಕಾರಣಗಳು ಹಲವಾರು. ಸೆಹವಾಗ್ ಅವರ ಆರಂಭಿಕ ಆಟ. ಮಧ್ಯಮ ಕ್ರಮಾಂಕದಲ್ಲಿ ಮಾತ್ರವಲ್ಲ ಆಪತ್ತಿನ ಸಂದರ್ಭದಲ್ಲಿ ತಂಡವನ್ನು ಬೆನ್ನಿಗೆ ಕಟ್ಟಿಕೊಂಡು ಆಡುತ್ತಿದ್ದ ರಾಹುಲ್ ದ್ರಾವಿಡ್, ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್, ಕಲಾತ್ಮಕ ಆಟಗಾರ ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಅವರುಗಳು ಬ್ಯಾಟಿಂಗಿನ ಮೂಲಕ ಭಾರತ ಟೆಸ್ಟ್ ತಂಡವನ್ನು ರಕ್ಷಣೆ ಮಾಡುತ್ತಿದ್ದರೆ ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಸ್ಪಿನ್ ಮೂಲಕ ಬೌಲಿಂಗ್ ಮುಂದಾಳುಗಳಾಗಿದ್ದರು. ನಡು ನಡುವೆ ಜಹೀರ್ ಖಾನ್ ಕೂಡ ಮಿಂಚುತ್ತಿದ್ದರು. ಜಾವಗಲ್ ಶ್ರೀನಾಥ್ ಕೂಡ ಆ ದಶಕದ ಮೊದಲ ಭಾಗದಲ್ಲಿ ಬೌಲಿಂಗ್ ಸಾರಥ್ಯ ವಹಿಸಿಕೊಂಡಿದ್ದವರೇ. ಆದರೆ ಇಂತಹ ಆಟಗಾರರು ನಿವೃತ್ತಿಯಾದ ನಂತರ ಭಾರತ ತಂಡದಲ್ಲಿ ಕಾಣಿಸಿಕೊಂಡ ಶೂನ್ಯತೆ ಇನ್ನೂ ಭರ್ತಿಯಾಗಿಲ್ಲ ಎನ್ನುವುದು ದುರಂತ.


ಸೂಕ್ತ ಆರಂಭಿಕ ಆಟಗಾರರ ಕೊರತೆ :
          ಭಾರತದ ಟೆಸ್ಟ್ ಇತಿಹಾಸದಲ್ಲಿ ತ್ರಿಶತಕ ದಾಖಲಿಸಿದ ಏಕೈಕ ಆಟಗಾರ ವೀರೇಂದ್ರ ಸೆಹ್ವಾಗ್. ಸ್ಲಿಪ್ ನಲ್ಲಿ ಕ್ಯಾಚ್ ಕೊಟ್ಟು ಔಟಾಗುತ್ತಾರೆ, ಬೇಗನೆ ಔಟಾಗುತ್ತಾರೆ ಈ ಮುಂತಾದ ಅಪವಾದಗಳಿದ್ದರೂ ಕೂಡ ಸೆಹ್ವಾಗ್ ಆಡುತ್ತಿದ್ದಷ್ಟು ಕಾಲ ಭಾರತದ ಟೆಸ್ಟ್ ತಂಡ ಆತ್ತಮ ಆರಂಭವನ್ನು ಪಡೆಯುತ್ತಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಸೆಹ್ವಾಗ್ ಹೊರತು ಪಡಿಸಿದರೆ ಇನ್ನೊಂದು ತುದಿಯಲ್ಲಿ ಸದೃಢ ಆರಂಭಿಕ ಆಟಗಾರನಿರಲಿಲ್ಲ ಎನ್ನುವುದನ್ನು ಬಿಟ್ಟರೆ ತಂಡ ಉತ್ತಮ ಆರಂಭವನ್ನೇ ಪಡೆಯುತ್ತಿತ್ತು. ಆದರೆ ಈಗ ಗಮನಿಸಿದರೆ ಅಂತಹ ಆರಂಭಿಕ ಆಟಗಾರರ ಕೊರತೆಯನ್ನು ತಂಡ ಎದುರಿಸುತ್ತಲೇ ಇದೆ. ಆಡುವ ಕಸುವಿದ್ದರೂ ಸೆಹ್ವಾಹ್ ರನ್ನು ಕಡೆಗಣಿಸಲಾಗಿದೆ. ಮುರುಳಿ ವಿಜಯ್ ಆಸ್ಟ್ರೇಲಿಯಾ ನೆಲಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಇನ್ನು ಶಿಖರ್ ಧವನ್ ಒಂದು ಪಂದ್ಯದಲ್ಲಿ ಶತಕ ಭಾರಿಸಿ ನಾಲ್ಕು ಪಂದ್ಯದಲ್ಲಿ ಎರಡಂಕಿ ಮೊತ್ತ ಬಾರಿಸಲು ತಿಣುಕಾಡುತ್ತಾರೆ. ಹೊಸ ಹುಡುಗರ ಪೈಕಿ ಕೆ. ಎಲ್. ರಾಹುಲ್ ಭರವಸೆ ಮೂಡಿಸಿದ್ದಾರಾದರೂ ಅನುಭವ ಸಾಲದು. ರಹಾನೆ, ರೋಹಿತ್ ಶರ್ಮಾ ಅವರಂತಹ ಆಟಗಾರರು ಆಗೀಗ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಪ್ರಯೋಗಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಅಪಸವ್ಯಗಳಿಂದಾಗಿ ಭಾರತ ಟೆಸ್ಟ್ ತಂಡಕ್ಕೆ ಉತ್ತಮ ಆರಂಭವೇ ದೊರಕುತ್ತಿಲ್ಲ.

ನಿರ್ವಹಣೆ ಕೊರತೆಯಲ್ಲಿ ಮಧ್ಯಮಕ್ರಮಾಂಕ :
          ಕೆಲವು ವರ್ಷಗಳ ಹಿಂದೆ ಭಾರತದ ಮಧ್ಯಮ ಕ್ರಮಾಂಕವನ್ನು ಗಮನಿಸಿ. ಒನ್ ಡೌನ್ ಆಟಗಾರ ರಾಹುಲ್ ದ್ರಾವಿಡ್ ಸದಾಕಾಲ ತಂಡದ ಆಪದ್ಬಾಂಧವನಾಗಿ ರಕ್ಷಣೆಗೆ ಧಾವಿಸುತ್ತಿದ್ದ. ನಂತರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಂಡವನ್ನು ಉಳಿಸುತ್ತಿದ್ದ. ಇಷ್ಟರ ಜೊತೆಗೆ ಪಿಳಿ ಪಿಳಿ ಕಣ್ಣು ಬಿಡುತ್ತ ಗಂಗೂಲಿ ಕೂಡ ರಕ್ಷಣೆ ಮಾಡುತ್ತಿದ್ದ. ಇವರೆಲ್ಲರೂ ಫೇಲಾದರು ಎಂದರೆ ಅವನೊಬ್ಬನಿದ್ದ ವಿವಿಎಸ್. ಲಕ್ಷ್ಮಣ್. ಎಂತಹ ತಂಡವೇ ಇರಲಿ, ಬಾಲಂಗೋಚಿಗಳನ್ನು ಕಟ್ಟಿಕೊಂಡಾದರೂ ಸರಿ ತಂಡವನ್ನು ದಡ ಮುಟ್ಟಿಸುತ್ತಿದೆ. ಆದರೆ ಈಗ ಏನಾಗಿದೆ ನೋಡಿ. ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ಹೆಸರು ಗಳಿಸಿದ ಆಟಗಾರರೇ ಇದ್ದಾರೆ. ಕೋಹ್ಲಿ, ಪೂಜಾರಾ, ರಹಾನೆ, ರೋಹಿತ್ ಶರ್ಮಾ ಅವರಂತಹ ಆಟಗಾರರು ಇದ್ದಾರೆ. ಇವರ ಪೈಕಿ ವಿರಾಟ್ ಕೋಹ್ಲಿ ಸಾಕಷ್ಟು ಚನ್ನಾಗಿ ಆಡುತ್ತಿದ್ದಾರೆ. ಆದರೆ ಇದೀಗ ನಾಯಕನ ಅವತಾರ ತೊಟ್ಟಿರುವ ಕೋಹ್ಲಿಯಲ್ಲಿ ಏಕದಿನದ ಆಟದ ಅನುಭವ ಸಾಕಷ್ಟಿದೆ. ಅದು ಟೆಸ್ಟ್ ಆಟಕ್ಕೆ ಸಾಲದು. ಅಲ್ಲದೇ ಕೋಹ್ಲಿಯ ಸಿಟ್ಟಿನ ಮನೋಭಾವ ಕೂಡ ಟೆಸ್ಟ್ ಪಂದ್ಯಕ್ಕೆ ಹಿಡಿಸುವುದಿಲ್ಲ. ಟೆಸ್ಟ್ ಏನಿದ್ದರೂ ಶಾಂತ ಸ್ವಭಾವವನ್ನು ಬಯಸುತ್ತದೆ. ಈ ನಿಟ್ಟಿನಲ್ಲಿ ಕೊಹ್ಲಿ ಇನ್ನೂ ಪಳಗಬೇಕಾದದ್ದು ಸಾಕಷ್ಟಿದೆ.
            ದ್ರಾವಿಡ್ ನಂತರ ಯಾರು ಎಂಬ ಪ್ರಶ್ನೆ ಉದ್ಭವವಾದಾಗ ಎಲ್ಲರ ಕಣ್ಣಿಗೆ ಬಿದ್ದಿದ್ದು ಚೆತೆಶ್ವರ ಪೂಜಾರ. ಅದಕ್ಕೆ ತಕ್ಕಂತೆ ಪೂಜಾರಾ ಟೆಸ್ಟ್ ಪಂದ್ಯದಲ್ಲಿ ಸ್ವದೇಶದಲ್ಲಿ ಯಾವಾಗ ಶತಕಗಳ ಮೇಲೆ ಶತಕ ಬಾರಿಸಿದರೋ ತಂಡಕ್ಕೆ ಮತ್ತೊಬ್ಬ ದ್ರಾವಿಡ್ ಸಿಕ್ಕ ಎಂದುಕೊಂಡವರು ಹಲವರು. ದ್ರಾವಿಡ್ ಸಾಧನೆಯನ್ನೇ ಮರೆಯುವಂತೆ ಹುಯ್ಯಲಿಟ್ಟು ಪೂಜಾರಾನನ್ನು ಆಕಾಶಕ್ಕೆ ಏರಿಸಿದವರು ಮಾಧ್ಯಮದ ಜನರು. ಆದರೆ ಅದೇ ಪೂಜಾರಾ ವಿದೇಶಿ ನೆಲದಲ್ಲಿ ಒಂದಂಕಿ, ಎರಡಂಕಿಗೆ ಔಟಾಗತೊಡಗಿದಾಗ ಮಾತ್ರ ಎಂತಹ ಆಟಗಾರನನ್ನು ದ್ರಾವಿಡ್ ಗೆ ಹೋಲಿಸಿದೆವು ಛೇ ಎಂದುಕೊಂಡವರು ಹಲವರು. ಚೆತೇಶ್ವರ ಪೂಜಾರರಲ್ಲಿ ಪ್ರತಿಭೆಯಿದೆ. ಆದರೆ ವಿದೇಶಿ ನೆಲದಲ್ಲಿ ಈ ಪ್ರತಿಭೆ ಸೋತು ಸುಣ್ಣವಾಗುತ್ತಿದೆ. ಸ್ವದೇಶಕ್ಕಷ್ಟೇ ಸೀಮಿತವಾಗಿರುವ ಈ ಪ್ರತಿಭೆ ವಿದೇಶದ ನೆಲದಲ್ಲಿ ಉತ್ತಮವಾಗಿ ಆಡಿದಾಗ ಮಾತ್ರ ತಂಡಕ್ಕೆ ನಂಬಿಕಸ್ಥನಾಗಬಲ್ಲ.
             ದ್ರಾವಿಡ್ ಗರಡಿಯಲ್ಲಿ ಪಳಗಿರುವ ಅಜಿಂಕ್ಯಾ ರಹಾನೆಗೆ ಪ್ರತಿಭೆಯಿದೆ. ಪಂದ್ಯದಲ್ಲಿ ದೀರ್ಘಕಾಲ ನೆಲಕಷ್ಷಿ ಆಡಬಲ್ಲ ಸಾಮರ್ಥ್ಯವೂ ಇದೆ. ಆದರೆ ನಾಯಕನ ಅಥವಾ ತಂಡದ ನಿರ್ಧಾರಕ್ಕೆ ಬಲಿಯಾಗಬೇಕಾಗುತ್ತದೆ. ಒಮ್ಮೆ ಆರಂಭಿಕನಾಗಿ, ಇನ್ನೊಮ್ಮೆ ಒನ್ ಡೌನ್, ಮತ್ತೊಮ್ಮೆ ಸೆಕೆಂಡ್ ಡೌನ್, ಐದನೇ ಕ್ರಮಾಂಕ, ಆರನೇ ಕ್ರಮಾಂಕ ಹೀಗೆ ಕ್ರಮಾಂಕ ಬದಲಾವಣೆಯ ಪ್ರಯೋಗದಿಂದಾಗಿ ರಹಾನೆಯ ಆಟವೇ ಹಾಳಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ದ್ರಾವಿಡ್ ಗರಡಿಯಲ್ಲಿ ಪಳಗಿದ ಆಟಗಾರ ಎಂಬ ಮಾತ್ರಕ್ಕೆ ದ್ರಾವಿಡ್ ಹೇಗೆ ವಿವಿಧ ಪ್ರಯೋಗಗಳಿಗೆ ಬಲಿಯಾದರೋ ಅದೇ ರೀತಿ ರಹಾನೆಯನ್ನೂ ಪ್ರಯೋಗಕ್ಕೆ ಒಳಪಡಿಸುತ್ತಿರುವುದು ಸರಿಯಲ್ಲ. ರಹಾನೆಗೆ ಸೂಕ್ತವೆನ್ನಿಸಿದ ಕ್ರಮಾಂಕದಲ್ಲಿ ಆಡಲು ಬಿಟ್ಟರೆ ಮುಂದಿನ ದಿನಗಳಲ್ಲಿ ಆತ ಖಂಡಿತವಾಗಿಯೂ ಭಾರತ ಟೆಸ್ಟ್ ತಂಡದ ಆಪದ್ಭಾಂಧವನಾಗಲು ಸಾಧ್ಯವಿದೆ.
            ರೋಹಿತ್ ಶರ್ಮಾ ಬಗ್ಗೆ ಹೇಳುವುದಕ್ಕಿಂತ ಹೇಳದೇ ಇರುವುದೇ ಒಳ್ಳೆಯದು. ಕಾಮೆಂಟರಿ ಹೇಳುವವರ ಬಾಯಲ್ಲಿ ರೋಹಿತ್ ಒಬ್ಬ ಪ್ರತಿಭೆಯ ಖನಿ. ಆದರೆ ಐಪಿಎಲ್, ಹಾಗೂ ಟಿ20 ಪಂದ್ಯಗಳಲ್ಲಿ ಮಾತ್ರ ಸದಾ ಫಾರ್ಮಿನಲ್ಲಿರುವ ರೋಹಿತ್  ಏಕದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ ಪಂದ್ಯಗಳಿಗಿಂತ ಆಡದೇ ಇರುವ ಪಂದ್ಯಗಳೇ ಅಧಿಕ. ಟೆಸ್ಟ್ ಪಂದ್ಯಗಳಲ್ಲಂತೂ ಪ್ರಥಮ ಪಂದ್ಯದಲ್ಲಿ ಶತಕ ಬಾರಿಸಿದ್ದೇ ಸಾಧನೆ. ಆ ನಂತರದ ಎಲ್ಲ ಪಂದ್ಯಗಳಲ್ಲಿಯೂ ರೋಹಿರ್ ಟುಸ್ ಪಟಾಕಿಯೇ. ಇಂತಹ ಆಟಗಾರರಿಗೆ ಪದೇ ಪದೆ ಅವಕಾಸಕೊಡುವುದಕ್ಕಿಂತ ಕೇದಾರ್ ಜಾಧವ್, ಕರುಣ್ ನಾಯರ್, ಮನೀಶ್ ಪಾಂಡೆ ಅವರಂತಹ ಆಟಗಾರರಿಗೆ ಅವಕಾಶ ಕೊಟ್ಟು ನೋಡುವುದು ಉತ್ತಮ.
       
ಅವಾಂತರಕ್ಕೆಲ್ಲ ಧೋನಿಯೇ ಹೊಣೆಯೇ?
             ಹೀಗೊಂದು ಅನುಮಾನ ಎಲ್ಲರಲ್ಲೂ ಕಾಡಿದರೆ ತಪ್ಪಾಗಲಿಕ್ಕಿಲ್ಲ. ಧೋನಿ ಭಾರತ ತಂಡದ ಕ್ಯಾಪ್ಟನ್ ಆಗುವ ಮೊದಲು ತಂಡಕ್ಕೆ ಖಾಯಂ ಕೀಪರ್ ಇರಲಿಲ್ಲ ಎನ್ನುವುದು ನಿಜ. ಪಾರ್ಟ್ ಟೈಂ ಆಗಿದ್ದ ದ್ರಾವಿಡ್ ಆಗೀಗ ಕೀಪಿಂಗ್ ಕೆಲಸ ಮಾಡುತ್ತಿದ್ದ. ಜೊತೆಗೆ ಅಜಯ್ ರಾತ್ರ, ಪಾರ್ಥಿವ್ ಪಟೇಲ್ ಮುಂತಾದವರು ಅನೇಕ ಪಂದ್ಯಗಳನ್ನು ಆಡಿದ್ದರೂ ರೆಗ್ಯೂಲರ್ ಕೀಪರ್, ಬ್ಯಾಟ್ಸಮನ್ ಆಗಿ ನೆಲೆನಿಂತು ತಂಡದ ಸಾರಥ್ಯವನ್ನೂ ವಹಿಸಿಕೊಂಡಿದ್ದು ಧೋನಿ. ಏಕದಿನ ಹಾಗೂ ಟಿ20ಯಲ್ಲಿ ಧೋನಿಯ ಸಾಧನೆ ಆಕಾಶದೆತ್ತರ. ಆದರೆ ಟೆಸ್ಟ್ ನಲ್ಲಿ ಮಾತ್ರ ಅಷ್ಟಕ್ಕಷ್ಟೆ. ತನ್ನ ಚಾಣಾಕ್ಷತೆಯಿಂದ ಆರಂಭಿಕ ದಿನಗಳಲ್ಲಿ ಉತ್ತಮ ಸಾಧನೆಗೆ ಕಾರಣವಾದ ಧೋನಿ ಕೊನೆ ಕೊನೆಗೆ ತನ್ನ ವಿಫಲ ಪ್ರಯೋಗದಿಂದಾಗಿಯೇ ಇಂದಿನ ಕಳಪೆ ಸಾಧನೆಗೂ ಕಾರಣ ಎಂದರೆ ತಪ್ಪೇನಲ್ಲ ಬಿಡಿ. ತನ್ನ ನಂಬಿಗಸ್ತರು ಎನ್ನುವ ಕಾರಣಕ್ಕೆ ಕೆಲಸಕ್ಕೆ ಬಾರದ ರವೀಂದ್ರ ಜಡೇಜಾ, ಅಶ್ವಿನ್ ಅವರನ್ನು ಪದೇ ಪದೆ ಟೆಸ್ಟ್ ಪಂದ್ಯಗಳಲ್ಲಿ ಅವಕಾಶ ಕೊಟ್ಟ. ಟೆಸ್ಟ್ ನಲ್ಲಿ ವಿಫಲ ಎಂಬ ಅಪಖ್ಯಾತಿಯಿದ್ದರೂ ಸುರೇಶ್ ರೈನಾ ತಂಡದಲ್ಲಿ ಸ್ಥಾನ ಪಡೆದ. ಬದಲಾಗಿ ಉತ್ತಮ ಆಟ ಆಡುತ್ತಿದ್ದ ಗೌತಮ್ ಗಂಭೀರ್, ಸೆಹ್ವಾಗ್, ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಅವರನ್ನು ತಂಡದಿಂದ ದೂರವಿಟ್ಟ ಎನ್ನುವ ಆರೋಪವನ್ನೂ ಮುಡಿಗೇರಿಸಿಕೊಂಡಿರುವುದು ಸುಳ್ಳಲ್ಲ. ಇಂತಹ ವಿಫಲ ಪ್ರಯೋಗಗಳಿಂದ ಧೋನಿ ಕೊನೆಗೆ ತಂಡದ ಸಾರಥ್ಯ ಮಾತ್ರವಲ್ಲಿ ತಂಡದಿಂದಲೂ ಹೊರ ಬಿದ್ದ. ಕೆಲವು ಗೆಲುವುಗಳನ್ನು ಕಂಡಿದ್ದರೂ ವಿದೇಶದಲ್ಲಿ ಸತತವಾಗಿ ಸೋಲುಗಳನ್ನು ಅನುಭವಿಸಿದ್ದು ಧೋನಿಗೆ ಮುಳುವಾಯಿತು. ಪ್ರತಿಭೆಯಿದ್ದ ಸಂಜೂ ಸ್ಯಾಮ್ಸನ್, ವೃದ್ಧಿಮಾನ್ ಸಾಹಾ ಅವರಂತಹ ಆಟಗಾರರಿಗೆ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗಳಿಗೆ ಹೆಚ್ಚುವಿಯಾಗಿ ತಂಡದಲ್ಲಿ ಸೇರಿಸಿಕೊಂಡು ಆರಂಭಿಕರೋ ಅಥವಾ ಇನ್ಯಾವುದೋ ಸ್ಥಾನದಲ್ಲಿ ಆಡಿಸುವ ಮೂಲಕ ಅವರನ್ನು ಬೆಳೆಸಬಹುದಾಗಿದ್ದರೂ ಅವರೆಲ್ಲರನ್ನು ದೂರವಿಟ್ಟ ಎನ್ನುವ ಆರೋಪಗಳು ಎಲ್ಲರ ಬಾಯಲ್ಲಿ ಕೇಳಿಬರುತ್ತಲಿದೆ.

ಮಾಗಬೇಕಿರುವ ಸ್ಪಿನ್ನರುಗಳು :
            ಅನಿಲ್ ಕುಂಬ್ಳೆಯ ನಂತರದ ದಿನಗಳಲ್ಲಿ ಭಾರತದ ಸ್ಪಿನ್ನರುಗಳು ಹೆಸರು ಗಳಿಸಲೇ ಇಲ್ಲ. ಕುಂಬ್ಳೆ ಸಮಕಾಲೀನರಾಗಿ ಖ್ಯಾತಿ ಪಡೆದ ಹರ್ಭಜನ್ ಸಿಂಗ್ ನಂತರದ ದಿನಗಳಲ್ಲಿ ಫಾರ್ಮ್ ಕಳೆದುಕೊಂಡರು. ಅಷ್ಟೇ ಅಲ್ಲ ತಂಡದಿಂದಲೂ ಹೊರಬಿದ್ದಿದ್ದರು. ಇದೀಗ ಮತ್ತೆ ತಂಡಕ್ಕೆ ವಾಪಾಸಾಗಿದ್ದರೂ ಮೊದಲಿನ ಚಾರ್ಮ್ ಉಳಿದಿಲ್ಲ. ಅಶ್ವಿನ್ ಇದ್ದವರ ಪೈಕಿ ಪರವಾಗಿಲ್ಲ. ಆದರೂ ಅಗತ್ಯವಿದ್ದಾಗ ವಿಫಲರಾಗುತ್ತಾರೆ ಎನ್ನುವ ಆರೋಪವಿದೆ. ಮಿಶ್ರಾರಲ್ಲಿ ಪ್ರತಿಭೆಯಿದ್ದರೂ ಅವರನ್ನು ಕಡೆಗಣಿಸಲಾಗಿತ್ತು. ಇದೀಗ ಅವಕಾಶ ಸಿಕ್ಕಿರುವುದು ಉತ್ತಮ ಬೆಳವಣಿಗೆ. ಓಝಾರಿಗೆ ಇನ್ನೊಂದು ಅವಕಾಶ ನೀಡಬಹುದು. ಆದರೆ ರವೀಂದ್ರ ಜಡೇಜಾ ಅಗತ್ಯವಿಲ್ಲ. ಬದಲಾಗಿ ಶ್ರೇಯಸ್ ಗೋಪಾಲ್, ಅಕ್ಷರ್ ಪಟೇಲ್, ಪರ್ವೇಜ್ ರಸೂಲ್ ರಂತಹ ಸ್ಪಿನ್ನರ್ ಗಳನ್ನು ಬೆಳೆಸಬಹುದಾಗಿದೆ.

ವೇಗದ ಬೌಲರ್ ಗಳಿಗೆ ಅನುಭವದ ಕೊರತೆ :
           ಸದಾಕಾಲ ಗಾಯಗೊಂಡೇ ಇರುವ ಜಾಹೀರ್ ಖಾನ್ ಇನ್ನು ಕ್ರಿಕೆಟ್ ಗೆ ಮರಳಿದಂತೆಯೇ. ಅವರ ನಂತರ ಮುಂದಾಳುವಾಗುವ ನೆಹ್ರಾ ನಿರ್ವಹಣೆ ಕೊರತೆಯಿಂದ ಬಳಲಿದರು. ಇಶಾಂತ್ ಶರ್ಮಾ ಕೆಲವು ಪಂದ್ಯಗಳಲ್ಲಿ ಮಾತ್ರ ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ. ತಮ್ಮ ಉದ್ದದ ಕೂದಲಿಗೆ ಕೊಟ್ಟ ಗಮನವನ್ನು ಬೌಲಿಂಗಿಗೆ ಕೊಟ್ಟಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗುತ್ತಿದ್ದರು. ವೇಗದ ಬೌಲಿಂಗಿಗೆ ಗಮನ ಕೊಡುವ ವರುಣ್ ಆರನ್ ಹಾಗೂ ಉಮೇಶ್ ಯಾದವ್ ಇನ್ನಷ್ಟು ಮಾಗಿದರೆ ಉತ್ತಮ ಆಟ ಸಾಧ್ಯವಿದೆ.

            ಕ್ರೀಡಾ ಜ್ಯೋತಿ (ಬೇಕನ್) ಒಂದು ಕೈಯಿಂದ ಇನ್ನೊಂದು ಕೈಗೆ ಬದಲಾವಣೆಯಾಗುತ್ತಲೇ ಇರಬೇಕು. ಒಬ್ಬನೇ ವ್ಯಕ್ತಿ ಎಷ್ಟು ದೂರ ಅದನ್ನು ಕೊಂಡೊಯ್ಯಲು ಸಾಧ್ಯ? ಆದರೆ ಭಾರತ ಕ್ರಿಕೆಟ್ ತಂಡದಲ್ಲಿ ಬೇಕನ್ ಬದಲಾವಣೆ ಆಗಲೇ ಇಲ್ಲ. ಸೌರವ್ ಗಂಗೂಲಿಯಿಂದ ಆರಂಭಗೊಂಡ ನಿವೃತ್ತಿಯ ಕುಂಬ್ಳೆ, ದ್ರಾವಿಡ್, ಲಕ್ಷ್ಮಣ್, ತೆಂಡೂಲ್ಕರ್ ಮೂಲಕ ವರ್ಷಕ್ಕೊಬ್ಬರಂತೆ ನಿವೃತ್ತಿಯ ಹಾದಿಯನ್ನು ಹಿಡಿದರು. ಈ ಆಟಗಾರರಿಗೆ ಸಮರ್ಥವಾಗಿ ಇನ್ನೊಬ್ಬ ಆಟಗಾರ ಹುಟ್ಟಿಕೊಳ್ಳಲೇ ಇಲ್ಲ. ಅಂತಹ ಆಟಗಾರರನ್ನು ಬೆಳೆಸುವ ಕಾರ್ಯಕ್ಕೆ ಬಿಸಿಸಿಐ ಕೂಡ ಮುಂದಾಗಲಿಲ್ಲ. ಪರಿಣಾಮವಾಗಿ ಭಾರತದ ಟೆಸ್ಟ್ ಕ್ರಿಕೆಟ್ ತಂಡ ಇಂದು ಹೀನಾಯ ಸ್ಥಿತಿಗೆ ತಲುಪಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
             ದಶಕದ ಹಿಂದೆ ಭಾರತ ತಂಡದಲ್ಲಿ ಒಂದೆರಡು ಸ್ಥಾನಗಳಲ್ಲಿ ಕೊರತೆಯಿತ್ತು. ಆಗ ಬೇರೆ ಯಾರಾದರೂ ಉತ್ತಮ ಆಟಗಾರನಿಗೆ ಅವಕಾಶ ಕೊಟ್ಟಿದ್ದರೆ ಇಂದಿನ ಇಂತಹ ದುರಂತದ ಸ್ಥಿತಿ ಕೊಂಚ ಕಡಿಮೆಯಾಗುತ್ತಿತ್ತೇನೋ. ಈಗ ತಂಡದಲ್ಲಿ ಇರುವ ಬಹುತೇಕರು 28-30 ವರ್ಷದ ಆಜೂಬಾಜಿನಲ್ಲಿದ್ದಾರೆ. ಒಂದಿಬ್ಬರು 22 ರಿಂದ 26 ವರ್ಷದ ಎಡಬಲದಲ್ಲಿದ್ದಾರೆ. ಹೀಗಿದ್ದಾಗ ತಂಡದಲ್ಲಿ ಕೆಲವು ಪ್ರಯೋಗ ಮಾಡಲೇಬೇಕು. 18 ರಿಂದ 20 ವರ್ಷದೊಳಗಿನ ಯುವ ಆಟಗಾರರಿಗೆ ಅಪರೂಪಕ್ಕಾದರೂ ಅವಕಾಶ ನೀಡಲೇಬೇಕು. ಒಬ್ಬ ಸಂಜೂ ಸ್ಯಾಮ್ಸನ್, ಕರುಣ್ ನಾಯರ್, ಮನೀಶ್ ಪಾಂಡೆ, ಕೇದಾರ ಜಾಧವ್ ಮಂದೀಪ್ ಸಿಂಗ್ ಅವರಂತಹ ಆಟಗಾರರಿಗೆ ಆಗೀಗ ಅವಕಾಶ ಕೊಡುವ ಮೂಲಕ ಅಗತ್ಯ ಬಿದ್ದಾಗ, ಯಾರಾದರೂ ದಿಢೀರ್ ನಿವೃತ್ತಿ ಘೋಷಿಸಿದಾಗ ಅನುಕೂಲಕ್ಕೆ ಬರುತ್ತಾರೆ.
             ಆಷ್ಟ್ರೇಲಿಯಾ ತಂಡವನ್ನು ಗಮನಿಸಿ. ಅಲ್ಲಿ ತಂಡದ ಕ್ಯಾಪ್ಟನ್ ಆಗುತ್ತಾನೆ ಎಂದೇ ಆಟಗಾರನನ್ನು ರೂಪಿಸುತ್ತಾರೆ. ಸ್ಟೀವ್ ವಾ ಇದ್ದಾಗಲೇ ಪಾಂಟಿಂಗ್ ರನ್ನು ಕ್ಯಾಪ್ಟನ್ ರೀತಿ ಬೆಳೆಸಿದರು. ಪಾಂಟಿಂಗ್ ಕಾಲದಲ್ಲಿ ಮೈಕಲ್ ಕ್ಲಾರ್ಕ್ ಅವರನ್ನು ಬೆಳೆಸಿದರು. ಕ್ಲಾರ್ಕ್ ಕಾಲದಲ್ಲೇ ಸ್ಟೀವನ್ ಸ್ಮಿತ್ ಅವರನ್ನು ಬೆಳೆಸಿದ್ದರು. ಇದೀಗ ಕ್ಲಾರ್ಕ್ ನಿವೃತ್ತಿಯಾಗಿದ್ದಾರೆ. ಆದರೆ ಸ್ಟೀವನ್ ಸ್ಮಿತ್, ಕ್ಲಾರ್ಕ್ ಜಾಗವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಅಂತಹ ವಾತಾವರಣ ಭಾರತ ಕ್ರಿಕೆಟ್ ತಂಡದಲ್ಲಿಯೂ ರೂಪುಗೊಳ್ಳಬೇಕಿದೆ. ಹೀಗಾದಾಗ ಮಾತ್ರ ತಂಡದಲ್ಲಿ ಶೂನ್ಯಭಾವ ಕಾಡುವುದನ್ನು ತಡೆಯಬಹುದಾಗಿದೆ. ಅದೇನೇ ಇರಲಿ ಭಾರತ ತಂಡದಲ್ಲಿ ಇರುವವರೆಲ್ಲ ಯುವಕರು. ಅನುಭವವನ್ನು ಇದೀಗತಾನೆ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಪಂದ್ಯಗಳು ಬೇಕಾಗಬಹುದು. ಆದರೆ ಒಮ್ಮೆ ಅನುಭವ ಪಡೆದು ಲಯಕ್ಕೆ ಮರಳಿದರೆ ಮಾತ್ರ ಉತ್ತಮ ಫಲಿತಾಂಶವನ್ನು ನೀಡಬಲ್ಲರು. ಇನ್ನೊಂದು ದಶಕಗಳ ಕಾಲ ಭಾರತದ ಕ್ರಿಕೆಟ್ ತಂಡಕ್ಕೆ ಉತ್ತಮ ಭವಿಷ್ಯವಿದೆ. ಆದರೆ ಕ್ರಿಕೆಟ್ ಬೇಕನ್ ಅನ್ನು ಸದಾಕಾಲು ಮುಂದುವರಿಯುವಂತೆ ನೋಡಿಕೊಂಡಾಗ ಮಾತ್ರ ಗೆಲುವಿನ ಸರಣಿಯನ್ನೂ ಮುಂದುವರಿಸಬಹುದು. ಇಲ್ಲವಾದಲ್ಲಿ ಸಾಲು ಸಾಲು ಸೋಲು ಸದಾಕಾಲ ಇದ್ದರೂ ಅಚ್ಚರಿ ಪಡಬೇಕಿಲ್ಲ ಬಿಡಿ.            

Wednesday, August 19, 2015

ಹುಡುಕು

ಕಣ್ಣೀರ ಮಳೆಯಲ್ಲಿ
ಮಿಂದೆದ್ದು ಬಂದಾಗ
ಸಿಕ್ಕಿತಲ್ಲ ಮನಕೆ
ಒಂದು ಶಾಂತಿ |

ಬೇಸರದ ಒಡಲಿಂದ
ಜಿಗಿದು ಹೊರ ಬಂದಾಗ
ಮಿಡಿಯಿತಲ್ಲಾ ಮನದಿ
ಸಂತಸದ ತಂತಿ |

ಭಯದ ಕೋಟೆಯನೀಗ
ಸೀಳಿ ಹೊರಬಂದಾಗ
ಮೂಡಿತಲ್ಲಾ ಮನದಿ
ಹೊಸತೊಂದು ಶಕ್ತಿ |

ಕಷ್ಟಗಳ ಸೆಳವಿಂದ
ಈಜಿ ಹೊರಬಂದಾಗ
ದೊರಕಿತಲ್ಲಾ ಜೀವ
ಜೀವಕ್ಕೆ ಮುಕ್ತಿ |

ದುಃಖವು ಕರಗಿದೊಡೆ
ಸಂತಸ ಮೂಡಿದೊಡೆ
ಹುಡುಕಿತಲ್ಲಾ ಮನವು
ಕವನಕ್ಕೆ ಸ್ಪೂರ್ತಿ ||


*****

(ಈ ಕವಿತೆಯನ್ನು ಬರೆದಿರುವುದು 08-12-2005ರಂದು ದಂಟಕಲ್ಲಿನಲ್ಲಿ)

Tuesday, August 18, 2015

ಮಾರ್ಗಸೂಚಿ

               ವಾಯವ್ಯ ಕರ್ನಾಟಕ ರಸ್ತೆ ಸಾರಿ ಸಂಸ್ಥೆ ಜನೋಪಯೋಗಿ ಕಾರ್ಯ ನಿರ್ವಹಣೆಗೆ ಹೆಸರುವಾಸಿಯಾಗಿದೆ. ಹಳ್ಳಿಹಳ್ಳಿಗಳಿಗೆ ಸರ್ಕಾರಿ ಸಾರಿಗೆಯನ್ನು ಓಡಿಸುವ ಮೂಲಕ ಜನಸಾಮಾನ್ಯರ ಮನಸ್ಸಿನಲ್ಲಿ ನೆಲೆನಿಂತಿದೆ. ದೂರದ ಊರುಗಳಿಗೂ ಬಸ್ಸುಗಳನ್ನು ಓಡಿಸುವ ಮೂಲಕ ಜನಸಂಪರ್ಕಕ್ಕೆ ದಾರಿ ಮಾಡಿಕೊಟ್ಟಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಾಕಷ್ಟು ಬಸ್ ಸೇವೆಗಳನ್ನು ನೀಡುವ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದೆ. ಜಿಲ್ಲೆಯಲ್ಲಿ ದಾಂಡೇಲಿ, ಹಳಿಯಾಳ ಹಾಗೂ ಜೋಯಿಡಾ ಪ್ರದೇಶಗಳನ್ನು ಹೊರತು ಪಡಿಸಿದರೆ ಉಳಿದೆಲ್ಲ ಕಡೆಗಳಲ್ಲಿಯೂ ಶಿರಸಿಯನ್ನು ಕೇಂದ್ರಸ್ಥಾನವನ್ನಾಗಿಸಿಕೊಂಡು ಸಾರಿಗೆ ಸಂಸ್ಥೆ ಕೆಲಸ ಮಾಡುತ್ತಿದೆ. ದಿನವಹಿ ಸಾವಿರಾರು ಬಸ್ಸುಗಳನ್ನು ರಸ್ತೆಯಲ್ಲಿ ಓಡಿಸುವ ಮೂಲಕ ಖ್ಯಾತಿ ಗಳಿಸಿಕೊಂಡಿದೆ. ಈಗಾಗಲೂ ನೂರಾರು ಮಾರ್ಗಗಳಲ್ಲಿ ಬಸ್ಸುಗಳು ಓಡಾಟ ನಡೆಸುತ್ತಿವೆ. ಇನ್ನೂ ಹಲವಾರು ಮಾರ್ಗಗಳಲ್ಲಿ ಬಸ್ಸುಗಳನ್ನು ಓಡಿಸುವ ಅಗತ್ಯವಿದೆ. ಸಾರಿಗೆ ಸಂಸ್ಥೆ ಓಡಿಸಬಹುದಾದ ಕೆಲವೊಂದು ಮಾರ್ಗಗಳನ್ನು ನಾನು ಗಮನಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ಮಾರ್ಗಗಳ ಬಗ್ಗೆ ಶಿರಸಿಯ ಸಾರಿಗೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಲಿದ್ದೇನೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ಪಟ್ಟಿ ಮಾಡುತ್ತ ಹೋಗಿದ್ದೇನೆ. ಸುಮ್ಮನೇ ಗಮನಿಸಬಹುದು.

* ಶಿರಸಿ-ಸಿದ್ದಾಪುರ-ಜೋಗ ಜಲಪಾತ
           ಶಿರಸಿಯಿಂದ ಸಿದ್ದಾಪುರ ಮೂಲಕ ವಿಶ್  ವಿಖ್ಯಾತವಾದ ಜೋಗ ಜಲಪಾತಕ್ಕೆ ತೆರಳಲು ಕೇವಲ ಒಂದು ಅಥವಾ ಎರಡು ಬಸ್ಸುಗಳು ಮಾತ್ರ ದಿನಂಪ್ರತಿ ಓಡಾಟ ಮಾಡುತ್ತಿವೆ. ಬದಲಾಗಿ ಪ್ರತಿ ಒಂದೂವರೆ ಗಂಟೆಗೆ ಒಂದು ಬಸ್ಸಿನಂತೆ ಅಥವಾ ಎರಡು ತಾಸಿಗೊಂದರಂತೆ ಬಸ್ಸುಗಳನ್ನು ಓಡಿಸಿದರೆ ಉತ್ತಮ. ಸಾಗರ, ಶಿವಮೊಗ್ಗದಿಂದ ಪ್ರತಿ 10 ಅಥವಾ 15 ನಿಮಿಷಕ್ಕೊಂದರಂತೆ ಬಸ್ಸುಗಳು ಜೋಗ ಜಲಪಾತಕ್ಕೆ ಓಡಾಟ ಮಾಡುತ್ತವೆ. ಇದರಲ್ಲಿ ಖಾಸಗಿ ಬಸ್ಸುಗಳದ್ದು ಸಿಂಹಪಾಲು. ನಡು ನಡುವೆ ಸರ್ಕಾರಿ ಬಸ್ಸುಗಳೂ ಓಡಾಟ ಮಾಡುತ್ತಿವೆ. ಈ ಕಾರಣದಿಂದಲೇ ಜೋಗಜಲಪಾತಕ್ಕೆ ಶಿವಮೊಗ್ಗ ಅಥವಾ ಆ ಭಾಗದಿಂದ ಬರುವ ಪ್ರವಾಸಿಗರ ಸಂಖ್ಯೆ ಸಾಕಷ್ಟು ಸಂಖ್ಯೆಯಲ್ಲಿದೆ. ಆದರೆ ಜೋಗಜಲಪಾತದ ಒಂದು ಭಾಗ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಆದರೆ ಉತ್ತರ ಕನ್ನಡದ ವಿವಿಧ ಪ್ರದೇಶಗಳಿಂದ ಜೋಗಕ್ಕೆ ತರಳಲು ಅದರಲ್ಲೂ ವಿಶೇಷವಾಗಿ ಶಿರಸಿ, ಯಲ್ಲಾಪುರ, ಮುಂಡಗೋಡ ಹಾಗೂ ಪಕ್ಕದ ಹುಬ್ಬಳ್ಳಿ, ಬೆಳಗಾವಿಗಳಿಂದ ಬಂದು ಹೋಗಿ ಮಾಡಲು ನೇರವಾಗಿ ಬಸ್ಸುಗಳೇ ಇಲ್ಲ. ಶಿರಸಿಯಿಂದ ದಿನಕ್ಕೆ ಒಂದೋ ಅಥವಾ ಎರಡೋ ಬಸ್ಸುಗಳು ಮಾತ್ರ ಓಡಾಟ ಮಾಡುತ್ತಿವೆ. ಬಸ್ ಸೌಕರ್ಯ ಸಮರ್ಪಕವಾಗಿ ಇಲ್ಲದ ಕಾರಣ ಈ ಭಾಗದ ಪ್ರವಾಸಿಗರು ಖಾಸಗಿ ವಾಹನವನ್ನು ಮಾಡಿಕೊಂಡು ಜೋಗಜಲಪಾತ ವೀಕ್ಷಣೆ ಮಾಡುತ್ತಿದ್ದಾರೆ. ಹುಬ್ಬಳ್ಳಿಯಿಂದ ಬರುವವರಿಗಂತೂ ನೇರವಾದ ಬಸ್ಸು ಇಲ್ಲವೇ ಇಲ್ಲ. ಶಿರಸಗೆ ಬಂದು ಅಲ್ಲಿಂದ ಸಿದ್ದಾಪುರ ಮೂಲಕ ತಾಳಗುಪ್ಪಕ್ಕೆ ಹೋಗಿ ಅಲ್ಲಿಂದ ಜೋಗಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಬದಲಾಗಿ ಹುಬ್ಬಳ್ಳಿಯಿಂದ ಒಂದೆರಡು ಬಸ್ಸುಗಳನ್ನು ನೇರವಾಗಿ ಜೋಗ ಜಲಪಾತಕ್ಕೆ ಓಡಿಸಿದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಅಲ್ಲದೇ ಸಂಸ್ಥೆಯ ಆದಾಯವೂ ಹೆಚ್ಚಾಗಬಲ್ಲದು. 60 ಕಿ.ಮಿ ಅಂತರದ ಮಾರ್ಗ ಇದಾಗಿದೆ.

* ಬನವಾಸಿ-ಶಿರಸಿ-ಜೋಗಜಲಪಾತ/ ಬನವಾಸಿ-ಚಂದ್ರಗುತ್ತಿ-ಸಿದ್ದಾಪುರ-ಜೋಗ ಜಲಪಾತ
          ಪ್ರವಾಸೋದ್ಯಮದ ಅಭಿವೃದ್ಧಿಯನ್ನೇ ಪ್ರಮುಖ ಅಂಶವನ್ನಾಗಿಟ್ಟುಕೊಂಡು ಈ ಮಾರ್ಗವನ್ನು ಜಾರಿಗೆ ತರಬಹುದು. ಪ್ರವಾಸಿಗರನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಬನವಾಸಿ-ಶಿರಸಿ-ಸಿದ್ದಾಪುರ ಜೋಗಜಲಪಾತ ನಡುವೆ ದಿನವಹಿ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದು ಬಸ್ಸುಗಳನ್ನು ಓಡಿಸಿದರೆ ಉತ್ತಮ. ಇದಲ್ಲದೇ ಬನವಾಸಿ-ಹರೀಶಿ-ಚಂದ್ರಗುತ್ತಿ-ಸಿದ್ದಾಪುರ-ಜೋಗ ಜಲಪಾತ ನಡುವೆ ಬಸ್ಸುಗಳನ್ನು ಓಡಿಸಿದರೆ ಜನಸ್ನೇಹಿಯೂ ಆಗುತ್ತದೆ, ಪ್ರವಾಸಿ ತಾಣಗಳಾದ ಬನವಾಸಿ, ಚಂದ್ರಗುತ್ತಿ ಹಾಗೂ ಜೋಗಜಲಪಾತಗಳನ್ನು ಸಂಪರ್ಕಿಸಬಹುದಾಗಿದೆ. ಈ ಮಾರ್ಗದಿಂದ ಉತ್ತರ ಕನ್ನಡ ಜಿಲ್ಲೆಯ ಬನವಾಸಿ, ಸಿದ್ದಾಪುರ ಪ್ರದೇಶಗಳ ಜನರಿಗೆ ಅನುಕೂಲವಾಗುತ್ತದೆ. ಅಷ್ಟೇ ಅಲ್ಲ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ, ಹರೀಶಿ ಭಾಗಗಳ ಜನರಿಗೂ ಅನುಕೂಲವಾಗಲಿದೆ. ಬನವಾಸಿ-ಸಿರಸಿ-ಜೋಗಜಲಪಾತ ಮಾರ್ಗ 82 ಕಿ.ಮಿ ದೂರದ್ದಾಗಿದ್ದರೆ ಬನವಾಸಿ-ಚಂದ್ರಗುತ್ತಿ-ಜೋಗ ಮಾರ್ಗ 75ರಿಂದ 80 ಕಿ.ಮಿ ದೂರದ್ದಾಗಿದೆ.

* ಶಿರಸಿ-ಜೋಗಜಲಪಾತ- ಭಟ್ಕಳ
            ಇದು ಅಪರೂಪದ ಮಾರ್ಗ. ಭಟ್ಕಳ ಸಾರಿಗೆ ಘಟಕ ಹಾಗೂ ಶಿರಸಿ ಸಾರಿಗೆ ಘಟಕಗಳು ಒಟ್ಟಾಗಿ ಈ ಮಾರ್ಗದ ಮೂಲಕ ಬಸ್ಸುಗಳನ್ನು ಓಡಿಸಿದರೆ ಉತ್ತಮ. ಶಿರಸಿ-ಸಿದ್ದಾಪುರ-ಜೋಗಜಲಪಾತ-ಕಾರ್ಗಲ್-ಕೂಗಾರ ಘಟ್ಟ-ನಾಗವಳ್ಳಿ-ಭಟ್ಕಳ ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸುವುದರಿಂದ ಭಟ್ಕಳ ಭಾಗದ ಜನರು ಜೋಗ ಜಲಪಾತವನ್ನು ವೀಕ್ಷಣೆ ಮಾಡಲು ಅನುಕೂಲವಾಗಲಿದೆ. ಈ ಮಾರ್ಗದಿಂದಾಗಿ ಉತ್ತರ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಯ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಜೋಗದಿಂದ ಭಟ್ಕಳ ಮಾರ್ಗದಲ್ಲಿ ಕೆಲವು ಖಾಸಗಿ ಬಸ್ಸುಗಳು ಓಡಾಟ ನಡೆಸುತ್ತವೆ. ಅಲ್ಲದೇ ದಿನಕ್ಕೆ ಮೂರೋ ನಾಲ್ಕೋ ಸರ್ಕಾರಿ ಬಸ್ಸುಗಳು ಮಾತ್ರ ಓಡಾಡುತ್ತವೆ. ಈ ಭಾಗದ ಜನರಿಗೆ ಬಸ್ಸುಗಳ ಸೌಕರ್ಯದ ಅನಿವಾರ್ಯತೆಯಿದೆ. ಶಿರಸಿಯಿಂದ ಬೆಳಿಗ್ಗೆ 2 ಬಸ್ಸುಗಳು, ಸಂಜೆ 2 ಬಸ್ಸುಗಳು (ಒಂದೊಂದೊಂದು ಬಸ್ಸು ಓಡಿಸಬಹುದು) ಅದೇ ರೀತಿ ಭಟ್ಕಳದಿಂದಲೂ ತಲಾ ಎರಡೆರಡು ಬಸ್ಸುಗಳನ್ನು ಓಡಿಸಿದರೆ ಉತ್ತಮ. ಜೋಗಕ್ಕೆ ತೆರಳುವ ಪ್ರವಾಸಿಗರಿಗೂ ಇದರಿಂದ ಅನುಕೂಲವಾಗಲಿದೆ. ಈ ಮಾರ್ಗದ ಮೂಲಕ ಬಸ್ಸುಗಳನ್ನು ಓಡಿಸಿದರೆ ಸರಿಸುಮಾರು 130 ಕಿಲೋಮೀಟರ್ ಅಂತರ.

* ಕುಮಟಾ-ಸಿದ್ದಾಪುರ-ಸೊರಬ
         ಕುಮಟಾ ಹಾಗೂ ಸೊರಬಗಳ ನಡುವೆ ನೇರವಾಗಿ ಸಂಪರ್ಕ ಕಲ್ಪಿಸಲು ಈ ಮಾರ್ಗ ಸಹಕಾರಿಯಾಗಲಿದೆ. ಸೊರಬದ ಜನರು ಕುಮಟಕ್ಕೆ ತೆರಳಬೇಕೆಂದರೆ ಶಿರಸಿಗೆ ಬಂದು ಹೋಗಬೇಕಾದ ಅನಿವಾರ್ಯತೆಯಿದೆ. ಅಥವಾ ಸಿದ್ದಾಪುರಕ್ಕೆ ಬಂದು ಹೋಗಬೇಕಾಗುತ್ತದೆ. ಇದರ ಬದಲಾಗಿ ಕುಮಟಾದಿಂದ ಸಿದ್ದಾಪುರ ಮಾರ್ಗವಾಗಿ ಸೊರಬದ ವರೆಗೆ ನೇರವಾಗಿ ಬಸ್ಸುಗಳನ್ನು ಓಡಿಸಿದರೆ ಅನುಕೂಲವಾಗುತ್ತದ. ಸಿದ್ದಾಪುರದಿಂದ ಸೊರಬ ಭಾಗದ ಜನರಿಗೆ ಹೇಗೆ ಈ ಬಸ್ಸು ಸಹಕಾರಿಯೋ ಅದೇ ರೀತಿ ಸಿದ್ದಾಪುರದಿಂದ ಕುಮಟಾಕ್ಕೆ ತೆರಳುವ ಜನಸಾಮಾನ್ಯರಿಗೂ ಇದು ಉಪಯೋಗಕಾರಿ. ಈ ಮಾರ್ಗದ ನಡುವೆ 110 ಕಿ.ಮಿ ಅಂತರವಿದೆ.

* ಶಿರಸಿ-ಸಿದ್ದಾಪುರ-ಜೋಗಜಲಪಾತ-ಹೊನ್ನಾವರ
           ದೂರದ ಲೆಕ್ಖದಲ್ಲಿ ಹೇಳುವುದಾದರೆ ಈ ಮಾರ್ಗ ಸುತ್ತುಬಳಸಿನದ್ದಾಗಿದೆ. ಶಿರಸಿಯಿಂದ ಕುಮಟಾ ಮೂಲಕ ಹೊನ್ನಾವರ ತಲುಪುವುದು ಸುಲಭದ ಮಾರ್ಗ. ಆದರೆ ಸಿದ್ದಾಪುರ ಜೋಗ ಜಲಪಾತದ ಮೂಲಕ ಹೊನ್ನಾವರಕ್ಕೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದೊಂದು ಬಸ್ಸುಗಳನ್ನು ಓಡಿಸಿದರೆ ಶಿರಸಿ ಹಾಗೂ ಹೊನ್ನಾವರದ ಪ್ರವಾಸಿಗರಿಗೆ ಜೋಗ ಜಲಪಾತಕ್ಕೆ ತೆರಳುವುದು ಅನುಕೂಲಕರ. ಅಲ್ಲದೇ ಮಾವಿನಗುಂಡಿ, ಬಂಗಾರಮಕ್ಕಿ, ಗೇರುಸೊಪ್ಪಾ ಈ ಮುಂತಾದ ಪ್ರದೇಶಗಳ ಜನಸಾಮಾನ್ಯರಿಗೆ ಅನುಕೂಲಕರವಾಗಿದೆ. ಈ ಮಾರ್ಗದ ಮೂಲಕ ಸಾಗಿದರೆ ಎರಡೂ ಸ್ಥಳಗಳ ನಡುವಿನ ಅಂತರ 140ರಿಂದ 150 ಕಿ.ಮಿ ಆಗುತ್ತದೆ.

* ಶಿರಸಿ-ಯಾಣ-ಅಂಕೋಲಾ
         ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಮಾರ್ಗ ಇದಾಗಿದೆ. ಶಿರಸಿ ಹಾಗೂ ಅಂಕೋಲಾ ನಡುವಿನ ಈ ಮಾರ್ಗದ ಅಂತರ 65 ರಿಂದ 70 ಕಿ.ಮಿ. ಮಾರ್ಗ ಮಧ್ಯದಲ್ಲಿ ಲೋಕವಿಖ್ಯಾತಿ  ಗಳಿಸಿರುವ ಯಾಣ ಹಾಗೂ ವಿಭೂತಿ ಜಲಪಾತಗಳನ್ನು ಬೆಸೆಯಬಹುದಾಗಿದೆ. ಅಲ್ಲದೇ ಮತ್ತೀಘಟ್ಟ, ದೇವನಳ್ಳಿ, ಅಚವೆ, ವಡ್ಡಿ ಘಟ್ಟಗಳು ಸಿಗುತ್ತವೆ. ಈ ಎಲ್ಲ ಊರುಗಳಿಗೆ ಈ ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸುವುದು ಅನುಕೂಲ ಕಲ್ಪಿಸುತ್ತದೆ. ಮತ್ತಿಘಟ್ಟಾ, ದೇವನಳ್ಳಿ ಈ ಮುಂತಾದ ಭಾಗಗಳ ಜನರು ಜಿಲ್ಲಾ ಕೇಂದ್ರವಾದ ಕಾರವಾರಕ್ಕೆ ತೆರಳಲು ಸಿರಸಿಗೆ ಆಗಮಿಸುವುದೂ ತಪ್ಪುತ್ತದೆ. ಅಲ್ಲದೇ ಸಿರಸಿಯಿಂದ ಕಾರವಾರಕ್ಕೆ ಈಗ ದೇವಿಮನೆ ಘಟ್ಟದ ಮೂಲಕ ಮಾರ್ಗವಿದ್ದು 120 ಕಿ.ಮಿ ಅಂತರವಿದೆ. ಆದರೆ ಯಾಣ ಮೂಲಕ ಬಸ್ ಓಡಿಸಿದರೆ ಕನಿಷ್ಟ 10ರಿಂದ 15 ಕಿಮಿ ಉಳಿತಾಯವಾಗಲಿದೆ. ಮಾರ್ಗಮಧ್ಯದಲ್ಲಿ ವಡ್ಡಿ ಘಟ್ಟ ಸಿಗುತ್ತದೆ. ಈ ಘಟ್ಟದಲ್ಲಿ ರಸ್ತೆಯನ್ನು ಸರಿಪಡಿಸಿಕೊಂಡರೆ ಸಂಚಾರ ಸುಗಮವಾಗುತ್ತದೆ. ಇದೇ ಮಾರ್ಗದಲ್ಲಿಯೇ ಸಂಚಾರ ವಿಸ್ತರಿಸಿ ಸಿರಸಿ-ಯಾಣ-ಗೋಕರ್ಣಕ್ಕೂ ಬಸ್ ಓಡಿಸಬಹುದಾಗಿದೆ. ಶೈವ ಕ್ಷೇತ್ರಗಳಾದ ಯಾಣ ಹಾಗೂ ಗೋಕರ್ಣಗಳನ್ನು ಇದರಿಂದ ಬೆಸೆಯಬಹುದಾಗಿದೆ. ಇದಲ್ಲದೇ ಶಿರಸಿ-ಯಾಣ-ಅಂಕೋಲಾ-ಕಾರವಾರ ನಡುವೆ ಬಸ್ಸುಗಳನ್ನೂ ಓಡಿಸಬಹುದಾಗಿದೆ. ಜನಸಾಮಾನ್ಯರಿಗೆ ಈ ಮಾರ್ಗ ಬಹು ಉಪಯೋಗಿ. ಈ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿತ್ತ ಹರಿಸಬೇಕಾಗಿದೆ.

* ಶಿರಸಿ-ಧೋರಣಗಿರಿ-ಗುಳ್ಳಾಪುರ-ಅಂಕೋಲಾ
         ಶಿರಸಿ ತಾಲೂಕಿನ ಹುಲೇಕಲ್, ವಾನಳ್ಳಿ, ಜಡ್ಡೀಗದ್ದೆ, ಕಕ್ಕಳ್ಳಿ, ದೋರಣಗಿರಿ, ಅಂಕೋಲಾ ತಾಲೂಕಿನ ಸುಂಕಸಾಳ, ಹೆಗ್ಗಾರ, ವೈದ್ಯಹೆಗ್ಗಾರ, ಗುಳ್ಳಾಪುರ ಈ ಭಾಗದ ಜನಸಾಮಾನ್ಯರಿಗೆ ಅನುಕೂಲವಾಗುವ ಈ ಮಾರ್ಗ ಸಾರಿಗೆ ಇಲಾಖೆಗೆ ಹೇರಳ ಆದಾಯವನ್ನು ತರಬಲ್ಲದು. ಹುಲೇಕಲ್, ವಾನಳ್ಳಿ ಭಾಗದ ಜನಸಾಮಾನ್ಯರು ಜಿಲ್ಲಾ ಕೇಂದ್ರ ಕಾರವಾರಕ್ಕೆ ತೆರಳಲು ಸಿರಸಿಯನ್ನು ಸುತ್ತು ಬಳಸುವುದು ಇದರಿಂದ ತಪ್ಪುತ್ತದೆ. ಶಿರಸಿಯಿಂದ ಗುಳ್ಳಾಪುರಕ್ಕೆ 45 ರಿಂದ 50 ಕಿ.ಮಿ ದೂರವಿದೆ. ಅಲ್ಲಿಂದ ಅಂಕೋಲಾ 50 ಕಿಮಿ ಫಾಸಲೆಯಲ್ಲಿದೆ. 100 ಕಿ.ಮಿ ಅಂತರದ ಮಾರ್ಗ ಇದಾಗಿದೆ. ಬೆಳಿಗ್ಗೆ ಹಾಗೂ ಸಂಜೆ ಈ ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸುವುದು ಉತ್ತಮ. ಇದೇ ಮಾರ್ಗದಲ್ಲಿ ಈ ಹಿಂದೆ ಶಿರಸಿ-ದೋರಣಗಿರಿ-ಗುಳ್ಳಾಪುರ-ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ದಿನಕ್ಕೆ ಒಂದು ಬಸ್ ಓಡಾಟ ಮಾಡುತ್ತಿತ್ತು. ಈ ಬಸ್ ಸಂಚಾರವನ್ನು ಪುನಾರಂಭ ಮಾಡಬೇಕಾದ ಅಗತ್ಯವೂ ಇದೆ. ಸೋಂದಾದಿಂದ ಹುಲೇಕಲ್, ವಾನಳ್ಳಿ, ಗುಳ್ಳಾಪುರ, ಯಲ್ಲಾಪುರ, ಶಿರಸಿ ಮೂಲಕ ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಸ್ಸೊಂದು ಓಡಾಟ ಮಾಡುತ್ತಿತ್ತು. ಈ ಮಾರ್ಗವನ್ನು ನಂತರದ ದಿನಗಳಲ್ಲಿ ನಿಲ್ಲಿಸಲಾಯಿತು. ಈ ಮಾರ್ಗ ಸರ್ವಋತುವಾಗಿರದ ಕಾರಣ ಸಂಚಾರ ನಿಲ್ಲಿಸಲಾಯಿತು. ಮಾರ್ಗವನ್ನು ಸರ್ವಋತು ಮಾಡುವುದರ ಜೊತೆಗೆ ಇಂತಹ ಬಸ್ ಸಂಚಾರ ಪುನಾರಂಭ ಮಾಡುವುದರಿಂದ ಶಿರಸಿಗರಿಗೆ ಮಾತ್ರವಲ್ಲ, ಕೊಡಸಳ್ಳಿ ಅಣೆಕಟ್ಟೆ ನಿರಾಶ್ರಿತರಿಗೆ, ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿನ ಜನರಿಗೆ ಅನುಕೂಲವಾಗಲಿದೆ. ಕೊಡಸಳ್ಳಿ ಅಣೆಕಟ್ಟೆಯಿಂದ ನಿರಾಶ್ರಿತರಾದ ಜನರು ಶಿರಸಿಗೆ ಬರಬೇಕೆಂದರೆ ಯಲ್ಲಾಪುರವನ್ನು ಸುತ್ತುಬಳಸುವುದು ತಪ್ಪುತ್ತದೆ. ಸರಿಸುಮಾರು 35 ರಿಂದ 40 ಕಿ.ಮಿ ಉಳಿತಾಯವಾಗಲಿದೆ. ಅಲ್ಲದೇ ಇದೇ ಮಾರ್ಗದಲ್ಲಿ ದೋರಣಗಿರಿಯಿಂದ ಹೆಗ್ಗಾರ-ಹಳವಳ್ಳಿ-ಕಮ್ಮಾಣಿ ಬಳಿ ಬಂದು ಹಿಲ್ಲೂರಿನ ಮೂಲಕ ಅಂಕೋಲಾಕ್ಕೆ ಸಂಪರ್ಕವನ್ನೂ ಕಲ್ಪಿಸಿದರೆ ಈ ಎಲ್ಲ ಭಾಗಗಳ ಜನಸಾಮಾನ್ಯರಿಗೆ ಬಹು ಅನುಕೂಲವಾಗಲಿದೆ.

* ಸಿದ್ದಾಪುರ-ನಿಲ್ಕುಂದ-ಕುಮಟಾ
         ಸಿದ್ದಾಪುರ ಮೂಲಕ ನಿಲ್ಕುಂದ ಹಾಗೂ ಬಂಡಲದ ಮೂಲಕ ಕುಮಟಾಕ್ಕೆ ಬಸ್ ಸಂಚಾರವನ್ನು ಆರಂಭಿಸಿದರೆ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುತ್ತದೆ. ಸಿದ್ದಾಪುರದಿಂದ ಈ ಮಾರ್ಗದಲ್ಲಿ 70ರಿಂದ 80 ಕಿಮಿ ಅಂತರದಲ್ಲಿ ಕುಮಟಾ ಸಿಗುತ್ತದೆ. ಮಾರ್ಗ ಮದ್ಯದಲ್ಲಿ ಕೋಲಸಿರ್ಸಿ, ಬಿದ್ರಕಾನ್, ಹೆಗ್ಗರಣಿ, ಹಾರ್ಸಿಕಟ್ಟಾ, ನಿಲ್ಕುಂದ, ಕಂಚೀಕೈ, ಬಂಡಲ, ಮಾಸ್ತಿಹಳ್ಳ ಈ ಮಾರ್ಗದ ಜನರಿಗೆ ಅನುಕೂಲವಾಗುತ್ತದೆ. ಇಲಾಖೆ ಸಿದ್ದಾಪುರ-ನಿಲ್ಕುಂದ-ಬಂಡಲ-ಕುಮಟಾ-ದೊಡ್ಮನೆ-ಸಿದ್ದಾಪುರದ ಮೂಲಕ ಬಸ್ ಓಡಿಸಿದರೆ ಬಸ್ ರೌಂಡ್ ಸಿಕ್ಕಂತಾಗುತ್ತದೆ. ದಿನಕ್ಕೆರಡು ಸಾರಿ ಬಸ್ ಓಡಿಸುವುದು ಅನುಕೂಲಕರ.

* ಯಲ್ಲಾಪುರ-ಸೋಂದಾ-ಹುಲೇಕಲ್- ಶಿರಸಿ
          ಈ ಮಾರ್ಗದ ಮೂಲಕ 10-15 ಕಿಮಿ ಸುತ್ತು ಬಳಸಿದರೂ ಜನಸಾಮಾನ್ಯರಿಗೆ ಅನುಕೂಲಕರ ಹಾಗೂ ಇಲಾಖೆಗೆ ಆದಾಯ ತರುವಾ ಮಾರ್ಗ ಇದಾಗಿದೆ. ಯಲ್ಲಾಪುರದಲ್ಲಿ ಸೋಂದಾ ಸ್ವರ್ಣವಲ್ಲಿ ಮಠಕ್ಕೆ ನಡೆದುಕೊಳ್ಳುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗೆ ನೇರವಾಗಿ ಬಸ್ ಸೌಕರ್ಯ ಸಿಕ್ಕಂತಾಗುತ್ತದೆ. ಅಲ್ಲದೇ ಮಾರ್ಗಮಧ್ಯದ ವಾದೀರಾಜಮಠ ಹಾಗೂ ಸ್ವಾದಿ ಜೈನಮಠಗಳಿಗೂ ಜನಸಾಮಾನ್ಯರು ಹೋಗಿ ಬರಬಹುದಾಗಿದೆ. ಸಾಗರ ಹಾಗೂ ಸಿರಸಿ ನಡುವೆ ಪ್ರತಿ ದಿನ ಮುಂಜಾನೆ ಬಸ್ಸೊಂದಿದೆ. ಪೋಸ್ಟಲ್ ಕಾರ್ಯಕ್ಕೆ ಬಳಕೆಯಾಗುವ ಈ ಬಸ್ ಸಾಗರದಿಂ 7 ಗಂಟೆಗೆ ಹೊರಟು ತಾಳಗುಪ್ಪ, ಕಾರ್ಗಲ್, ಜೋಗ, ಮಾವಿನಗುಂಡಿ, ಸಿದ್ದಾಪುರ, ಕೋಲಸಿರ್ಸಿ, ಹಾರ್ಸಿಕಟ್ಟಾ, 16ನೇ ಮೈಲಕಲ್ ಮೂಲಕ ಸಿರಸಿಗೆ ಬರುತ್ತದೆ. ಈ ಮಾರ್ಗ ಬಹು ದೀರ್ಘವಾದುದುದಾದರೂ ಜನಸಾಮಾನ್ಯರಿಗೆ ಬಹು ಉಪಯೋಗಿಯಾಗಿದೆ. ಕಾಲೇಜು, ಶಾಲೆಗಳ ವಿದ್ಯಾರ್ಥಿಗಳಿಗಂತೂ ಈ ಬಸ್ಸು ಬಹು ಅನುಕೂಲ ಕಲ್ಪಿಸಿದೆ. ಅದೇ ರೀತಿ ಯಲ್ಲಾಪುರ-ಸೋಂದಾ-ಶಿರಸಿ ಬಸ್ ಓಡಿಸಿದರೆ ಅನುಕೂಲವಾಗುತ್ತದೆ.

* ಶಿರಸಿ-ಜೋಗಜಲಪಾತ-ಕೂಗಾರ-ನಾಗೋಡಿ-ಕೊಲ್ಲೂರು
           ಶಿರಸಿಯಿಂದ ಕೊಲ್ಲೂರಿಗೆ ಬಸ್ ಸಂಚಾರವೇ ಇಲ್ಲ. ದಶಕಗಳ ಹಿಂದೆ ಕೊಲ್ಲೂರಿಗೆ ಶಿರಸಿಯಿಂದ ಬಸ್ ಓಡಾಟ ಮಾಡುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಈ ಬಸ್ ಸಂಚಾರ ನಿಲ್ಲಿಸಲಾಯಿತು. ಆದರೆ ಶಿರಸಿಯಿಂದ ಜೋಗ ಜಲಪಾತ, ಕೂಗಾರ, ನಾಗೋಡಿ  ಮೂಲಕ ಕೊಲ್ಲೂರಿಗೆ ಬಸ್ ಸಂಚಾರ ಆರಂಭಿಸಿದರೆ ಕೊಲ್ಲೂರಿಗೆ ಶಿರಸಿ, ಸಿದ್ದಾಪುರ ಭಾಗದ ಜನಸಾಮಾನ್ಯರು ಕೊಲ್ಲೂರು ಮೂಕಾಂಬಿಕೆ ದರ್ಶನವನ್ನು ಸುಲಭವಾಗಿ ಕೈಗೊಳ್ಳಬಹುದಾಗಿದೆ. 150 ರಿಂದ 160 ಕಿಮಿ ದೂರದ ಈ ಮಾರ್ಗದಿಂದ ಹೇರಳ ಆದಾಯ ಸಾಧ್ಯವಿದೆ. ಜೋಗಜಲಪಾತಕ್ಕೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಜೋಗದಿಂದ ಬಸ್ ಸಂಚಾರ ಕಡಿಮೆಯಿರುವ ಕೂಗಾರ, ಮಾಗೋಡ, ನಾಗೋಡಿಗಳಿಗೆ ಹಾಗೂ ಈ ಮಾರ್ಗ ಮಧ್ಯದ ಜನಸಾಮಾನ್ಯರಿಗಂತೂ ಈ ಬಸ್ ಸಂಚಾರದಿಂದ ಬಹಳ ಉಪಕಾರಿಯಾಗುತ್ತದೆ. ಈ ಮಾರ್ಗ ಸ್ವಲ್ಪ ಸುತ್ತು ಬಳಸಿನ ದಾರಿಯೂ ಹೌದು. ನಾಗೋಡಿಯ ಬಳಿಯಲ್ಲಿ ಕೊಡಚಾದ್ರಿಯೂ ಇರುವುದರಿಂದ ಕೊಡಚಾದ್ರಿಗೆ ತೆರಳುವ ಪ್ರವಾಸಿಗರಿಗೂ ಈ ಮಾರ್ಗ ಉಪಕಾರಿ. ಈ ಮಾರ್ಗವಲ್ಲದೇ ಕೊಲ್ಲೂರಿಗೆ ಸಾಗರ-ಸಿಗಂದೂರು ಮೂಲಕವೂ ಬಸ್ ಸಂಚಾರವನ್ನೂ ಕೈಗೊಳ್ಳಬಹುದಾಗಿದೆ. ಈ ಮಾರ್ಗವೂ ಆದಾಯವನ್ನು ತರಬಲ್ಲದಾಗಿದೆ. ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುತ್ತದೆ. ಸಾಗರದ ಸಾರಿಗೆ ಘಟಕದ ಸಹಯೋಗವಿದ್ದರೆ ಈ ಮಾರ್ಗದಲ್ಲಿ ಬಸ್ ಓಡಿಸುವುದು ಸುಲಭ. ದಿನಕ್ಕೆ ಒಂದು ಅಥವಾ ಎರಡು ಬಸ್ಸುಗಳನ್ನು ಓಡಿಸುವುದು ಅನುಕೂಲಕರ.

*ಶಿರಸಿ-ಸಾಗರ-ಹೊಸನಗರ-ರಾಮಚಂದ್ರಾಪುರಮಠ
           ಶಿರಸಿ ಹಾಗೂ ಸಿದ್ದಾಪುರಗಳಲ್ಲಿ ರಾಮಚಂದ್ರಾಪುರ ಮಠಕ್ಕೆ ನಡೆದುಕೊಳ್ಳುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಈ ಬಸ್ ಸಂಚಾರ ಉಪಕಾರಿ. ಈಗಿನ ಪರಿಸ್ಥಿತಿಯಲ್ಲಿ ಶಿರಸಿ, ಸಿದ್ದಾಪುರ ಪ್ರದೇಶದ ಜನರು (ವಿಶೇಷವಾಗಿ ಹವ್ಯಕರು) ರಾಮಚಂದ್ರಾಪುರ ಮಠಕ್ಕೆ ತೆರಳಬೇಕೆಂದರೆ ನೇರವಾಗಿ ಬಸ್ ಸೌಕರ್ಯವಿಲ್ಲ. ಸಾಗರ, ಹೊಸನಗರಗಳಲ್ಲಿ ಬಸ್ ಬದಲಾಯಿಸುವ ಅನಿವಾರ್ಯತೆಯಿದೆ. ಬದಲಾಗಿ ಶಿರಸಿಯಿಂದ ನೇರವಾಗಿ ಬಸ್ ಸೌಕರ್ಯ ಒದಗಿಸಿದರೆ ಅನುಕೂಲವಾಗಬಲ್ಲದು. ದಿನಕ್ಕೊಂದು ಅಥವಾ ಎರಡು ಬಸ್ ಓಡಿಸುವುದು ಉತ್ತಮ. ಮುಂದಿನ ದಿನಗಳಲ್ಲಿ ಸ್ವರ್ಣವಲ್ಲಿ ಮಠದಿಂದ ರಾಮಚಂದ್ರಾಪುರ ಮಠದ ನಡುವೆ ಬಸ್ ಸಂಚಾರವನ್ನೂ ಒದಗಿಸಬಹುದಾಗಿದೆ. ಆದಾಯದ ದೃಷ್ಟಿಯಿಂದ ಈ ಬಸ್ ಸಂಚಾರ ಬಹು ಉತ್ತಮ. ಸಿರಸಿಯಿಂದ ಅಜಮಾಸು 140 ರಿಂದ 160 ಕಿಮಿ ಅಂತರದಲ್ಲಿ  ರಾಮಚಂದ್ರಾಪುರ ಮಠವಿದೆ. ಸಾರಿಗೆ ಇಲಾಖೆ ತ್ವರಿತವಾಗಿ ಈ ಬಸ್ ಸಂಚಾರ ಕೈಗೊಳ್ಳುವ ಬಗ್ಗೆ ಚಿತ್ತ ಹರಿಬಹುದಾಗಿದೆ. ಜೊತೆಯಲ್ಲಿ ಸಿರಸಿಯಿಂದ ತೀರ್ಥಹಳ್ಳಿ ಮೂಲಕ ಶೃಂಗೇರಿಗೆ ದಿನಕ್ಕೊಂದು ಬಸ್ ಓಡಿಸಬಹುದು. ರಾತ್ರಿ ಬಸ್ ಆದರೆ ಉತ್ತಮ. ಸಂಜೆ ಹೊರಟು ಬೆಳಗಿನ ಜಾವ ಶೃಂಗೇರಿ ತಲುಪುವಂತಹ ಮಾರ್ಗ ಇದಾಗಿದೆ.

          ಜೊತೆಯಲ್ಲಿ ಹುಬ್ಬಳ್ಳಿ-ಮುಂಡಗೋಡ-ಬನವಾಸಿ (ಚಂದ್ರಗುತ್ತಿಗೆ ವಿಸ್ತರಣೆ ಮಾಡಬಹುದು),  ಮುಂಡಗೋಡ-ಬನವಾಸಿ( ಪ್ರತಿ 1 ಅಥವಾ 2 ತಾಸಿಗೊಮ್ಮೆ), ಯಲ್ಲಾಪುರ-ಮುಂಡಗೋಡ-ಬನವಾಸಿ, ಮುಂಡಗೋಡ-ಬನವಾಸಿ-ಸೊರಬ, ಶಿರಸಿ-ಕ್ಯಾಸಲ್ ರಾಕ್ (ದಿನಕ್ಕೆ 1 ಅಥವಾ 2 ಬಸ್, ವಾರಾಂತ್ಯದಲ್ಲಿ ಹೆಚ್ಚುವರಿ ಬಸ್), ಯಲ್ಲಾಪುರದಿಂದ ಕ್ಯಾಸಲ್ ರಾಕ್ ಈ ಮಾರ್ಗದಲ್ಲಿ ಬಸ್ ಓಡಿಸಬಹುದಾಗಿದೆ. ತನ್ಮೂಲಕ ಸಾರಿಗೆ ಇಲಾಖೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕಾರ್ಯ ನಿರ್ವಹಣೆ ಮಾಡಲಿದೆ. ಜೊತೆಯಲ್ಲಿ ಹೇರಳ ಆದಾಯವನ್ನು ಗಳಿಸಿಕೊಳ್ಳಬಹುದಾಗಿದೆ.

             ಇವಿಷ್ಟು ನನ್ನ ಗಮನಕ್ಕೆ ಬಂದ ಮಾರ್ಗಸೂಚಿಯಾಗಿದೆ. ಇದು ಶಿರಸಿ ಹಾಗೂ ಸಿದ್ದಾಪುರವನ್ನು ಗಮನದಲ್ಲಿ ಇರಿಸಿಕೊಂಡು ಆಲೋಚಿಸಿದ ಮಾರ್ಗಗಳು. ಮುಂದಿನ ದಿನಗಳಲ್ಲಿ ಯಲ್ಲಾಪುರ, ದಾಂಡೇಲಿ, ಹಳಿಯಾಳ, ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ ಹಾಗೂ ಹೊನ್ನಾವರಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮಾರ್ಗಸೂಚಿ ನೀಡುವ ಕೆಲಸವನ್ನು ಮಾಡುತ್ತೇನೆ. ಸಾರಿಗೆ ಇಲಾಖೆಯ ಗಮನಕ್ಕೆ ಈ ಮಾರ್ಗಗಳ ಬಗ್ಗೆ ತಿಳಿಸಲಾಗುತ್ತದೆ. ಸಾರಿಗೆ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸುತ್ತಾರೆ ಎನ್ನುವ ಆಶಾಭಾವ ನಮ್ಮದಾಗಿದೆ.  
           


Thursday, August 13, 2015

ಒಲವಿನ ಗೆಳೆಯ

ಗೆಳೆಯ ನಿನ್ನೆಯ ಬೆಡಗು ಬೆರಗು
ನನ್ನ ಮನದಲಿ ಕುಣಿದಿದೆ
ಆಸೆ ಬಣ್ಣದಿ ಪ್ರೇಮ ಕುಂಚವು
ಹೊಸತು ಚಿತ್ರವ ಬಿಡಿಸಿದೆ ||

ನಿನ್ನ ಎದೆಗೆ ಒರಗಿ ನಿಂತು
ಹೃದಯ ಬಡಿತ ಕೇಳಲೇ
ಕೈಯ ಒಳಗೆ ಕೈಯ ಇಟ್ಟು
ನಾಡಿ ಮಿಡಿತವ ಅರಿಯಲೇ ||

ನಾನು ನೀನು ಮನಸ ಕೊಟ್ಟು
ಜನುಮ ಜನುಮವೆ ಕಳೆದಿದೆ
ಕಾಲ ಕಾಲಕೆ ಪ್ರೀತಿ ಮಳೆಯು
ಧಮನಿ ಧಮನಿಯ ತೊಯ್ದಿದೆ ||

ನಿನ್ನ ಹಾದಿಯ ನಡುವೆ ನಾನು
ಹೆಜ್ಜೆ ಹೆಜ್ಜೆಗೂ ಇಣುಕಲೇ
ಕೈಯ ಹಿಡಿದು ಮನಸು ಮಿಡಿದು
ಬದುಕಿನುದ್ದಕೂ ಸಾಗಲೇ ||

*****

(ಈ ಕವಿತೆಯನ್ನು ಬರೆದಿರುವುದು 13-08-2015ರಂದು ಶಿರಸಿಯಲ್ಲಿ)