Wednesday, June 4, 2014

ಏಳು ಹನಿಗವಿತೆಗಳು

ಪ್ರೀತಿ

ಬತ್ತಲಾರದ ಚಿಲುಮೆ
ಧಾವಂತದೊಲುಮೆ |
ಮರೆಯದ ಮಧುರಾನುಭೂತಿ
ಪರಸ್ಪರರ ಅರಿವೆ ||

ಭಗ್ನ

ಕೆಲವರು ಎಷ್ಟು
ಪ್ರಯತ್ನಿಸಿದರೂ
ಬಯಸಿದುದು
ಸಿಗಲಾರದು |
ರಾಧೆ, ಭಾಮೆಗಿಂತ
ಹೆಚ್ಚಾಗಿ
ಕೃಷ್ಣನನ್ನು
ಪ್ರೀತಿಸಿದ್ದಳು ||

ಆವರಣ

ನನ್ನೆದೆಯೊಳಗೆ ಒಂದೇ ತಾಳ, ಬಡಿತ |
ಅದೇ ಆವೇಗ, ಅದೇ ನಿನಾದ ||
ಯಾಕಂದ್ರೆ ಅಲ್ಲಿದ್ದುದು
ನೀ ಕುಣಿದು ಬಿಟ್ಟುಹೋದ
ನಿನ್ನ ಕಾಲುಗೆಜ್ಜೆ ||

ಸೂರ್ಯನ ಪ್ರೀತಿ

ಆ ಒಬ್ಬಂಟಿ ಸೂರ್ಯನಿಗೆ
ಪ್ರೀತಿ ಎಂದರೇನು ಗೊತ್ತು?
ಸುಕೋಮಲೆ ಭೂಮಿಯ
ಸುಡತೊಡಗಿದ, ಆಕೆ ಎದ್ದು
ದೂರ ಓಡಿಬಂದಳು |
ಈಗ ಪರಿತಾಪಿ ಸೂರ್ಯ
ಅವಳನ್ನೇ ಸುತ್ತುತ್ತಾ
ಪ್ರೇಮ ಯಾಚಿಸುತ್ತಿದ್ದಾನೆ ||

ಸೋಲು-ಗೆಲುವು

ಒಬ್ಬ ವ್ಯಕ್ತಿ ಗೆದ್ದರೆ
ಅವನ ಕಡೆಗೆ ಎಲ್ಲರೂ |
ಸುತ್ತ ಮುತ್ತ ಹಾರ-ಜೈಕಾರ
ಕೂಗುತ್ತಾರೆ ಜನರು |
ಆದರೆ ಸೋತವನೆಡೆಗೆ ಮಾತ್ರ
ತಿರುಗಿ ನೋಡುವುದಿಲ್ಲ ಯಾರೂ ||

ಪದ

ಕವಿತೆಯ ಬಲಭುಜ
ಸುಮಧುರ ಹಾಡು |
ಹಾಡಿದರೆ ಕವಿತೆ
ಆಗುವುದು ಜನಪದ,
ಇಲ್ಲವಾದಲ್ಲಿ ಅದು ಬರಿ
ಪುಸ್ತಕದೊಳಗಿನ ಪದ ||

ಅರ್ಜುನ

ತನ್ನ ಕಾರ್ಯಸಾಧನೆಗಾಗಿ
ಸ್ತ್ರೀವೇಷವನ್ನೂ ಕೂಡ
ಹಾಕಿದರೂ, ಎಲ್ಲರಿಗೆ ಮೋಸ
ಮಾಡಿದರೂ, ಭಬ್ರುವಾಹನನನ್ನು
ಜಾರಿಣಿಯ ಮಗನೆಂದು ಜರಿದಾತ ||

Tuesday, June 3, 2014

Funny ಹನಿಗಳು

ಗಾಂಧಿ-ಬ್ರಾಂದಿ

ಗಾಂಧಿ ಗಾಂಧಿ ಎಂದು
ಸದಾಕಾಲ ಗಾಂಧಿಯನ್ನು
ನೆನೆಯುತ್ತಿದ್ದ ಆ ಮಂತ್ರಿಗೆ, 
ಗಾಂಧಿ ಜಯಂತಿಯ ದಿನ
ನೆನಪಾಗಿದ್ದು ಮಾತ್ರ ಬ್ರಾಂದಿ ||

ಬಳುವಳಿ

ಈಗೀಗ ಮುಖ್ಯವಾಗಿ
ತಂದೆಯಿಂದ ಮಗನಿಗೆ
ಬಳುವಳಿಯಾಗಿ ಬರುವುದು
ಎರಡೇ ಎರಡು |
ಪಿತ್ರಾರ್ಜಿತ ಆಸ್ತಿ ಹಾಗೂ
ಪಿತ್ರಾರ್ಜಿತ ಸಾಲ ||

ಡಬ್ಬಲ್ಲು ಮೀನಿಂಗು

ಸ್ವಾಮಿ, ಪದಗಳ ನಡುವೆ
ಗ್ಯಾಪು ಕೊಟ್ಟರೆ ಮೀನಿಂಗೇ
ಚೇಂಜಂತೆ, ಅಲ್ವಾ! ಹೌದು
ಮುಖಕ್ಕೆ ಮಂಗಳಾರತಿ ಎತ್ತಿದರು
ಈ ಮಾತು ಸರಿ !! ಅದೇ ಹೀಗೆ
ಮುಖಕ್ಕೆ ಮಂಗಳ-ಆರತಿ
ಎತ್ತಿದರು ಎಂದರೆ ಮೀನಿಂಗು
ಡಬ್ಬಲ್ಲೇ ಅಲ್ವೇ ||

ಮಂಗಳಾರತಿ

ಮಂಗಳ-ಆರತಿಯರ ನಡುವೆ
ಬಿದ್ದ ಪುಂಡನಿಗೆ ಅವರಿಬ್ಬರು
ಚನ್ನಾಗಿ ಉಗಿದು, ಮುಖಕ್ಕೆ
ಮಂಗಳಾರತಿ ಎತ್ತಿದರು ||

ಬಾರಿ

ಅತ್ತೆಗೊಂದು ಬಾರಿ
ಸೊಸೆಗೊಂದು ಬಾರಿ
ಆದರೆ ಬಡವನ
ಪಾಲಿಗೆ ಇರುವುದೊಂದೇ
ದುಬಾರಿ ||

ಪವರ್ರು

ಪತಿ-ಪತ್ನಿಯರಲ್ಲಿ
ಹೆಂಡತಿಯೇ ಗಟ್ಟಿ |
ಪತಿಗೆ ಧಮ್ಮಿದ್ದರೆ
ಆಸ್ಪತ್ರೆಗೆ ಅಟ್ಟಿ ||

Monday, June 2, 2014

ಆಗಂತುಕ ಪ್ರೇಮಿ

(ಚಿತ್ರಕೃಪೆ : ವಿನಾಯಕ ಹೆಗಡೆ)
ದೂರದಿಂದ ಬಂದನವ
ನನ್ನೆದೆಯ ಕದ ತೆರೆದ
ಪಂಜರದ ಬದುಕಿಂದ
ಹೊರಗೆಲ್ಲೋ ಸೆಳೆದ |

ಬಂದ ಹೊಸ ಚಣದಲ್ಲಿ
ನಗುವೆರಡ ತಂದ
ತೆರೆದನಲ್ಲಾ ಇಂದು
ನೂರು ಮನಗಳ ಬಂಧ ||

ಮೊದಮೊದಲು ಆಗಂತುಕ
ನಡುನಡುವೆ ಮಿತ್ರ
ಬದುಕು ನೀಡುವ ಜೀವಿ
ಕೊನೆಗೊಮ್ಮೆ ಪ್ರೇಮಿ ||

ಆಗಂತುಕನ ರೂಪ
ಮನದಲ್ಲಿ ಕಡೆದಿದೆ ಶಿಲ್ಪ
ಆಗಲೇ ಮನ ನಿಲ್ಲದಲ್ಲ
ನಾನು ನಾನಾಗಿ ಉಳಿದಿಲ್ಲ ||

ಒಮ್ಮೆ ಒಲವಿನ ಪ್ರೇಮಿ
ಮತ್ತೊಮ್ಮೆ ಆಗಂತುಕ
ಆಗಿ ಹೋದರೆ ದ್ರೋಹಿ
ನೀನೊಬ್ಬನೇ ಘಾತುಕ ||

**
(ಈ ಕವಿತೆಯನ್ನು ಬರೆದಿದ್ದು 02-03-2006ರಂದು ದಂಟಕಲ್ಲಿನಲ್ಲಿ)
(ವಿನಾಯಕ ಹೆಗಡೆ ಚಿತ್ರ ಕೊಟ್ಟಿದ್ದು... ಥ್ಯಾಂಕ್ಸು..)

Sunday, June 1, 2014

ಬೆಂಗಾಲಿ ಸುಂದರಿ-13


                   ಬಾಗಿಲು ತೆಗೆದ ಸೂರ್ಯನ್ ಮಧುಮಿತಾಳನ್ನು ನೋಡಿ ಪೆಕರನಂತೆ ನಿಂತುಬಿಟ್ಟ. ಒಮ್ಮೆ ಹಲ್ಲುಕಿರಿದು `ವಿನಯಚಂದ್ರ ಸ್ನಾನಕ್ಕೆ ಹೋಗಿದ್ದಾನೆ.. ಬರ್ತಾನೆ ಕೂತಿರಿ..' ಎಂದ. ಆತನಿಗೆ ಮುಂದೆ ಮಾತು ಹೊರಡಲಿಲ್ಲ. ಸುಮ್ಮನೆ ಅತ್ತ-ಇತ್ತ ನೋಡುತ್ತಾ ನಿಂತ. ಮಧುಮಿತಾಳೂ ಸುಮ್ಮನುಳಿದಿದ್ದಳು.
                ಹತ್ತು ನಿಮಿಷದಲ್ಲಿ ವಿನಯಚಂದ್ರ ಸ್ನಾನ ಮುಗಿಸಿ ಬಂದ. ಮಧುಮಿತಾಳನ್ನು ಕಂಡು ಒಮ್ಮೆ ಅವಾಕ್ಕಾದರೂ ಸಾವರಿಸಿಕೊಂಡು `ಯಾವಾಗ ಬಂದಿದ್ದು..' ಎಂದ. `ಈಗಷ್ಟೇ..' ಎಂದವಳ ಕಣ್ಣಲ್ಲಿ ಕೃತಜ್ಞತೆಯ ಭಾವ ಮೂಡಿತ್ತು. `ಮತ್ತೆ ಮನೆಯವರೆಲ್ಲ ಅಪಾರ್ಟ್ ಮೆಂಟ್ ಸೇರಿಕೊಂಡರಾ..? ಈಗ ಏನೂ ತೊಂದರೆಯಿಲ್ಲ ತಾನೆ..' ವಿನಯಚಂದ್ರನೇ ಕೇಳಿದ.
               `ಇಲ್ಲ.. ಎಲ್ಲ ಅರಾಮಾಗಿದ್ದಾರೆ. ಅದನ್ನೇ ಹೇಳಿ ಹೋಗೋಣ ಎಂದು ಬಂದೆ. ಥ್ಯಾಂಕ್ಸ್.. ಸಹಾಯ ಮಾಡಿದ್ದಕ್ಕೆ.. ನಿಜಕ್ಕೂ ನೀವು ಸಹಾಯ ಮಾಡದಿದ್ದರೆ ಇಷ್ಟು ಹೊತ್ತಿಗೆ ಅದೇನು ಭಾನಗಡಿ ಆಗುತ್ತಿತ್ತೋ..'
               `ಇದಕ್ಕೆಲ್ಲ ಎಂತ ಥ್ಯಾಂಕ್ಸ್.. ಆಪ್ತರಾದವರು ಇಷ್ಟೂ ಮಾಡದಿದ್ದರೆ ಹೇಗೆ..?'
               `ಹುಂ.. ಆದರೂ...'
               `ಹಾಗೇನಿಲ್ಲ.. ಭಯ ಬೇಡ. ಏನಾದರೂ ತೊಂದರೆ ಆದರೆ ತಿಳಿಸು. ನಾನಿದ್ದೇನೆ. ಜಾಧವ್ ಸರ್ ಇದ್ದಾರೆ.. ಸಹಾಯಕ್ಕೆ ಯಾವಾಗಲೂ ನಾವು ಸಿದ್ಧ'
               `ದೊರೆ... ನಾನೂ ಇದ್ದೇನಪ್ಪಾ.. ನನ್ನನ್ನು ಮರೆತುಬಿಡಬೇಡ ಮಾರಾಯಾ..' ಸೂರ್ಯನ್ ಮಧ್ಯ ಬಾಯಿಹಾಕಿ ಹೇಳಿದ. `ನಿನ್ನನ್ನು ಮರೆಯಲಿಕ್ಕೆ ಎಲ್ಲಿ ಆಗ್ತದೋ ಮಾರಾಯಾ...' ಎಂದ ವಿನಯ ಚಂದ್ರ ಪ್ರತಿಯಾಗಿ.
                `ಮನೆಯವರೆಲ್ಲ ನಿನ್ನ ಗುಣಗಾನ ಮಾಡುತ್ತಿದ್ದಾರೆ. ಒಮ್ಮೆ ಕರೆದುಕೊಂಡು ಬಾ ಮಾತಾಡೋಣ ಅಂತಿದ್ದಾರೆ.  ನಿನಗೆ ಧನ್ಯವಾದ ಹೇಳಬೇಕಂತೆ.. ಅಮ್ಮ ಅಂತೂ ನಿನ್ನನ್ನು ಬಹಳ ಗೌರವಿಸಲು ಆರಂಭಿಸಿದ್ದಾಳೆ..' ಎಂದಳು ಮಧುಮಿತಾ.
              ವಿನಯಚಂದ್ರ ನಾಚಿದ. `ಖಂಡಿತ ಬರ್ತೀನಿ. ನಾಡಿದ್ದು ಮ್ಯಾಚಿದೆ. ಮುಗಿದ ನಂತರ ಬರ್ತೀನಿ. ಹೇಳು ಮನೆಯಲ್ಲಿ.. ಹಾಂ ಮರೆತಿದ್ದೆ ನೋಡು, ನೀನು ಹಾಗೂ ನಿನ್ನ ಕುಟುಂಬ ಇಲ್ಲಿ ಉಳಿದರೆ ಸಮಸ್ಯೆ ಹೆಚ್ಚು. ಅದಕ್ಕೆ ಭಾರತಕ್ಕೆ ಕರೆದೊಯ್ಯೋಣ ಅನ್ನುವ ಆಲೋಚನೆ ಮಾಡಿದ್ದೆವಲ್ಲ.. ಏನಂದ್ರು ಮನೆಯಲ್ಲಿ? ಪಾಸಿಟಿವ್ ಉತ್ತರ ಬಂದಿತಾ'
               `ನಾವು ಯಾವತ್ತೋ ಆಲೋಚನೆ ಮಾಡಿದ್ವಿ. ಆದರೆ ಅದು ಸಾಧ್ಯವಾಗಿರಲಿಲ್ಲ. ನಾವೀಗ ಭಾರತಕ್ಕೆ ಬರ್ತೇವೆ ಅಂದರೆ ನಮಗೆ ಅಗತ್ಯದ ದಾಖಲೆಗಳು, ಕಾಗದಪತ್ರಗಳು ಸಿಗುತ್ತಾ? ಭಾರತದ ಪೌರತ್ವ ಪಡೆದುಕೊಳ್ಳಬೇಕಲ್ಲ ನಾವು..ನಂಗಂತೂ ಅದೇ ಆಲೋಚನೆ' ಎಂದಳು ಮಧುಮಿತಾ.
                 `ಅದಕ್ಕೆ ಸೂರ್ಯನ್ ವ್ಯವಸ್ಥೆ ಮಾಡ್ತೀನಿ ಅಂದಿದ್ದಾನೆ. ಸಮಸ್ಯೆಯಿಲ್ಲ. ನೀವು ತಯಾರಾಗಿ. ಮನೆಯಲ್ಲಿ ಹೇಳಿ. ಬಾಂಗ್ಲಾದಲ್ಲಿ ನಿಮಗೆ ಜಮೀನು, ಮನೆ ಇದೆಯಲ್ಲ. ಅವನ್ನು ಮಾರಾಟ ಮಾಡೋದು ಒಳ್ಳೆಯದು. ಮತ್ತೆ ಬಾಂಗ್ಲಾದೇಶಕ್ಕೆ ಮರಳುವ ಸಾಧ್ಯತೆಗಳಿಲ್ಲ. ನಿನ್ನ ತಂದೆಯ ಬಳಿ ಹೇಳು. ಈ ಕುರಿತು ಮಾತನಾಡು. ಆದಷ್ಟು ಬೇಗ ನೀವು ಬಾಂಗ್ಲಾದಿಂದ ಭಾರತಕ್ಕೆ ಬಂದು ನೆಲೆಸಬಹುದು'
                `ನಮ್ಮದು ಜಮೀನು ಜಾಸ್ತಿಯಿಲ್ಲ. ಎಕರೆಗೂ ಕಡಿಮೆ ಜಮೀನಿದೆ. ಮನೆಯಿದೆ. ಹಳೆಯ ಮನೆ. ಅವನ್ನು ಮಾರಾಟ ಮಾಡಿದರೆ ಒಂದೋ ಎರಡೋ ಲಕ್ಷ  ಸಿಗಬಹುದು. ಹೇಳ್ತೀನಿ ಮನೆಯಲ್ಲಿ. ಏನು ಮಾಡ್ತಾರೋ ನೋಡೋಣ.' ಎಂದಳು ಮಧುಮಿತಾ.
               ಮಾತು ಸಾಗಿದಂತೆಲ್ಲ ಇವರ ನಡುವೆ ತಾನೇಕೆ ಇರಬೇಕು ಎಂದುಕೊಂಡು ಸೂರ್ಯನ್ ರೂಮಿನಿಂದ ಹೊರಕ್ಕೆ ಹೋದ. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೇ ಉಳಿದರು. ವಿನಯಚಂದ್ರನ ಕೈಯನ್ನು ತನ್ನೆರಡೂ ಕೈಗಳಿಂದ ಹಿಡಿದ ಮಧುಮಿತಾ ಮತ್ತೊಮ್ಮೆ ಧನ್ಯವಾದ ಹೇಳಿದಳು. ವಿನಯಚಂದ್ರ ಮುಜುಗರದಿಂದ ಕೈ ಬಿಡಿಸಿಕೊಂಡ.
               `ವಿನೂ.. ನಿನ್ನ ಬಳಿ ಮಾತನಾಡಬೇಕು. ಆದರೆ ಇಲ್ಲಿ ಮಾತನಾಡುವುದು ಅಸಾಧ್ಯ. ಎಲ್ಲಾದರೂ ಹೊರಗೆ ಹೋಗಿ ಮಾತಾಡೋಣ. ನಾಳೆ ಆಗಬಹುದಾ? ಸಿಕ್ತೀಯಾ?'
               ಆಶ್ಚರ್ಯದಿಂದ ವಿನಯಚಂದ್ರ `ಮಾತಾಡೋದಾ..? ಖಂಡಿತ.. ನಾಳೆ ಆಗಬಹುದು. ಬಹುಶಃ ನಾಳೆ ಮದ್ಯಾಹ್ನನ ಸಮಯದಲ್ಲಿ ನಮಗೆ ಪ್ರಾಕ್ಟೀಸ್ ಕಡಿಮೆ ಇರುತ್ತದೆ. ಆಗ ಹೊರಗೆಲ್ಲಾದರೂ ಹೋಗೋಣ. ನಾನು ಜಾಧವ್ ಅವರ ಬಳಿ ಒಪ್ಪಿಗೆ ಪಡೆದುಕೊಳ್ಳುತ್ತೇನೆ. ನನಗೂ ನಿನ್ನ ಬಳಿ ಮಾತನಾಡುವುದಿದೆ.' ಎಂದ
                ಮತ್ತರ್ಧ ತಾಸು ಕಳೆದ ನಂತರ ಮಧುಮಿತಾ ಮರಳಿದಳು. ಸೂರ್ಯನ್ ಬಂದವನೇ ವಿನಯಚಂದ್ರನ ಕಾಲೆಳೆಯಲು ಆರಂಭಿಸಿದ. ಸೂರ್ಯನ್ ಬಳಿ ವಿನಯಚಂದ್ರ ಎಲ್ಲ ಸಂಗತಿಗಳನ್ನೂ ತಿಳಿಸಿದ. ಸೂರ್ಯನ್ ಕೂಡ ಒಮ್ಮೆ ಚಕಿತನಾದ. `ಹೌದು ಅವಳೇನೋ ಮಾತನಾಡೋದಿದೆ ಅಂದ್ಲು ಸರಿ. ನಿಂಗೇನು ಮಾತಾಡೋದಿದೆ ಅಂತದ್ದು..? ಏನು ಪ್ರಪೋಸ್ ಮಾಡೋವ್ನಿದ್ದೀಯಾ..?' ಥಟ್ಟನೆ ಕೇಳಿದ.
             ಒಮ್ಮೆ ವಿನಯಚಂದ್ರ ಅವಾಕ್ಕಾದ. ಆದರೆ ಮಾತಾಡಲಿಲ್ಲ. `ಹೇಳೋ ಮಾರಾಯಾ.. ಏನಾದರೂ ಸಲಹೆಗಳಿದ್ದರೆ ಕೊಡೋಣ...ನನ್ನ ಬಳಿಯೂ ಮುಚ್ಚುಮರೆ ನಾ?' ಎಂದ ಸೂರ್ಯನ್. ವಿನಯಚಂದ್ರ `ಮಾತನಾಡಬೇಕು ನಿಜ. ಮಧುಮಿತಾಳ ಬಗ್ಗೆ ಮನಸ್ಸಿನಲ್ಲಿ ಪ್ರೀತಿ ಇರೋದೂ ನಿಜ. ನಾವಿಬ್ಬರೂ ಆಪ್ತರು ನಿಜ. ಅವಳ ಮನೆಯಲ್ಲಿ ನನ್ನ ಬಗ್ಗೆ ಗೌರವ, ಪ್ರೀತಿ, ನಂಬಿಕೆ ಎಲ್ಲವೂ ಇದೆ. ಆದರೆ ನಾನು ಈ ಸಮಯದಲ್ಲಿ ಅವಳ ಬಳಿ ಪ್ರೀತಿಸ್ತಾ ಇದ್ದೀನಿ ಅಂದರೆ ಸರಿಯಾಗುತ್ತಾ? ಸಹಾಯದ ನೆಪದಲ್ಲಿ ಪ್ರೀತಿಯ ಬಲೆ ಬೀಸುತ್ತಿದ್ದಾನೆ ಅಂದುಕೊಳ್ಳುವುದಿಲ್ಲವಾ? ಏನ್ ಮಾಡಲೋ ಸೂರ್ಯ..' ಮನಸ್ಸಿನ ಭಾವನೆಗಳನ್ನು ಕೇಳಿಯೇ ಬಿಟ್ಟಿದ್ದ.
               `ಅಂತಹ ಸಮಸ್ಯೆ ಆಗಲಿಕ್ಕಿಲ್ಲ ವಿನೂ. ನನಗನ್ನಿಸುತ್ತೆ ನಿನ್ನ ಬಗ್ಗೆ ಅವಳಿಗೂ ಪ್ರೀತಿಯಿದೆ. ನೀನು ಅವಳ ಬಳಿ ಕೇಳೋದರಲ್ಲಿ ತಪ್ಪಿಲ್ಲ. ಒಪ್ಪಿಕೊಂಡರೆ ಓಕೆ. ಇಲ್ಲವೆಂದರೆ ತಪ್ಪೇನೂ ಆಗೋದಿಲ್ವಲ್ಲಾ.. ಒಂದು ವೇಳೆ ಆಕೆ ಒಪ್ಪದೇ ಇದ್ದರೆ ಗೆಳೆಯರಾಗಿಯೇ ಇದ್ದುಬಿಡಬಹುದು'
               `ನಾನು ಕೇಳಿದ್ದೇ ತಪ್ಪೆಂದು ಮುನಿದು ಕುಳಿತರೆ..?'
               `ಹಂಗೇನೂ ಆಗೋದಿಲ್ಲ.. ಕೇಳು ಮಾರಾಯಾ.. ಸಹಾಯಕ್ಕೆ ಬರಬೇಕಾ..?'
               `ಹ್ಯೆ ಹ್ಯೆ... ಬೇಡ ಬೇಡ.. ಆದರೆ ಅವಳು ಏನೋ ಮಾತಾಡಬೇಕು ಅಂದಿದ್ದಾಳಲ್ಲ.. ನೋಡೋಣ' ವಿನಯಚಂದ್ರನ ಅನುಮಾನಗಳು ಮುಗಿದಿರಲಿಲ್ಲ.
                `ಯಾರಿಗ್ಗೊತ್ತು ವಿನೂ.. ಅವಳೂ ನಿನ್ನ ಬಳಿ ಪ್ರೀತಿಯ ವಿಷಯವನ್ನೇ ಕೇಳಬಹುದಲ್ಲ.. ಯಾಕೆ ಸುಮ್ಮನೆ ನಕಾರಾತ್ಮಕವಾಗಿಯೇ ಮಾತಾಡ್ತೀಯಾ.. ಅವಳೇ ನಿನ್ನ ಬಳಿ ಬಂದು ಪ್ರೀತಿಸ್ತೀಯಾ ಅಂತ ಕೇಳಿದ್ಲು ಅಂತಿಟ್ಕೋ.. ಆಗ..?'
               `ಹುಂ.. ಹಾಗಾದರೆ ತೊಂದರೆಯಿಲ್ಲ.. ನೋಡೋಣ.. ನಾಳೆ ಏನಾಗುತ್ತೋ ಅಂತ..'
               `ಶುಭವಾಗಲಿ ಗೆಳೆಯಾ...'

**

           ಕುತೂಹಲ, ಭಯ, ಆತಂಕ, ರೋಮಾಂಚನ ಮುಂತಾದ ಭಾವನೆಗಳೊಂದಿಗೆ ಆ ದಿನ ರಾತ್ರಿ ಕಳೆದು ಬೆಳಗಾಯಿತು. ಹೇಗೋ ಏನೋ ಎನ್ನುವ ಅಂಶ ಮಧುಮಿತಾ ಹಾಗೂ ವಿನಯಚಂದ್ರ ಇಬ್ಬರನ್ನೂ ಕಾಡಿತು. ಗೊಂದಲದಲ್ಲಿಯೇ ವಿನಯಚಂದ್ರ ಕಬ್ಬಡ್ಡಿ ಪ್ರಾಕ್ಟೀಸಿನಲ್ಲಿ ಪಾಲ್ಗೊಂಡ. ತರಬೇತಿಯನ್ನು ಮಾಡುತ್ತಿದ್ದರೂ ವಿನಯಚಂದ್ರನ ಮನಸ್ಸು ಇನ್ನೆಲ್ಲೋ ಇತ್ತು. ಮದ್ಯಾಹ್ನದ ವೇಳೆಗೆ ಹೊಟೆಲಿಗೆ ಆಗಮಿಸಿದ ಮಧುಮಿತಾ ಬೆಂಗಾಲಿಯ ನೀಲಿ ಅಂಚಿನ ಸೀರೆಯುಟ್ಟುಕೊಂಡಿದ್ದಳು. ಪ್ರತಿ ದಿನಕ್ಕಿಂತ ಮಾದಕವಾಗಿ ಕಾಣುತ್ತಿದ್ದಳು. ಬಿಳಿಯ ಬಣ್ಣದ್ದಾದರೂ ಸೀರೆ ಆಕರ್ಷಕವಾಗಿತ್ತು. ಸೀರೆಯುಟ್ಟ ಮಧುಮಿತಾ ಮುದ್ದಾಗಿ ಕಾಣುತ್ತಿದ್ದಳು. ಕೆಲವರು ಸೀರೆಯುಟ್ಟರೆ ಬಹಳ ಸುಂದರವಾಗಿ ಕಾಣುತ್ತಾರೆ ಎಂದುಕೊಂಡ ವಿನಯಚಂದ್ರ. ಸೀರೆಯನ್ನು ಉಡುವುದೂ ಒಂದು ಕಲೆ. ಜಗತ್ತಿನಲ್ಲಿ ಸೀರೆಯಷ್ಟು ಮಾದಕ, ಶೃಂಗಾರಮಯ ಉಡುಗೆ ಇನ್ನೊಂದಿಲ್ಲ. ಚನ್ನಾಗಿ ಉಟ್ಟರೆ ಎಂತಹ ವ್ಯಕ್ತಿಯನ್ನೂ ಮರುಳು ಮಾಡಬಲ್ಲದು ಸೀರೆ ಎಂದುಕೊಂಡ.!!

(ಮುಂದುವರಿಯುತ್ತದೆ.)

ನಿವೇದನೆ

(ರೂಪದರ್ಶಿ: ಅನುಷಾ ಹೆಗಡೆ)
ನಿನ್ನ ನೆನಪು ಮುಷ್ಟಿ ಬಿಗಿದು
ನನ್ನೆದೆಯ ಗೂಡನ್ನು ತಟ್ಟಿ
ತೆರೆದಾಗಲೆಲ್ಲಾ ನನ್ನೊಳಗೆ
ಮೂಡಿತ್ತು ಪ್ರೀತಿಯ
ಸವಿಯಾದ ವೇದನೆ |

ಆಗೆಲ್ಲಾ ಮನಸ್ಸು ನಿನಗೆ
ಕಾದು, ಪರಿತಪಿಸಿ, ಬಯಸಿ
ಭಾವನೆಗಳ ಬದಲಿಗಾಗಿ
ಬಯಸಿತ್ತೊಂದು ನಿವೇದನೆ |

ಜೊತೆಗೆ ನಿನ್ನೆಡೆಗೆ ಕನಸು ಕಂಡು
ಬಾಚಿ ತಬ್ಬಿ ಹಿಡಿಯಲು
ಪ್ರಯತ್ನಿಸಿ ಸೋತಾಗಲೆಲ್ಲಾ ಆಹ್..!!
ಅದೇನು ನೀ-ವೇದನೆ !?!


**
(ಈ ಕವಿತೆಯನ್ನು ಬರೆದಿದ್ದು 28-12-2006ರಂದು ದಂಟಕಲ್ಲಿನಲ್ಲಿ)
(ಕವಿತೆಗೆ ರೂಪದರ್ಶಿಯಾಗಿ ಪೋಟೋ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ ಅನುಷಾಂಗೆ ಧನ್ಯವಾದಗಳು)