`ನಾನು ಏನ್ ಮಾಡಿದ್ದೆ ಅಂತ ನನ್ನ ಮಾತನಾಡಿಸಲಿಕ್ಕೆ ಬಂದ್ಯೋ.. ಹೋಗ್ ಹೋಗು.. ಬೇರೆ ಏನಾದರೂ ಕೆಲಸ ನೋಡ್ಕೋ ಹೋಗ್..' ಎಂದು ದೇವಮ್ಮ ನನ್ನನ್ನು ಗದರಿದಾಗ ನಾನು ಒಮ್ಮೆ ಪೆಚ್ಚಾಗಿದ್ದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿಯ ಬಳಿ ನಾನು ಹೋಗಿ ಬಂದ ಕಾರಣವನ್ನು ತಿಳಿಸಿದಾಗ ಒಮ್ಮೆಲೆ ಸಾರಾ ಸಗಟಾಗಿ ನನ್ನ ಕೋರಿಕೆಯನ್ನು ತಿರಸ್ಕರಿಸಿದ್ದರು ದೇವಮ್ಮ. ಆದರೂ ಮನಸ್ಸಿನಲ್ಲಿ ಏನೋ ಒಂದು ಆಶಾವಾದ. ದೇವಮ್ಮನವರು ಗದರಿದ್ದರೂ ನಾನು ಅಲ್ಲಾಡದೇ ಕುಳಿತಿದ್ದೆ.
95-96 ವರ್ಷದ ದೇವಮ್ಮನವರನ್ನು ನಾನು ಮಾತನಾಡಿಸಲು ತೆರಳಿದ್ದರ ಹಿಂದೆ ಮೂರ್ನಾಲ್ಕು ಕಾರಣಗಳಿದ್ದವು. ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿಯೇ ದೇವಮ್ಮನವರು ಬದುಕಿರುವ ಹಿರಿಯ ವ್ಯಕ್ತಿ ಎಂಬುದು ಒಂದು ಕಾರಣವಾಗಿದ್ದರೆ, ಸ್ವಾತಂತ್ರ್ಯ ಹೋರಾಟದಲ್ಲಿ ದೇವಮ್ಮನವರ ಕುರಿತು ನಾನು ಯಾವುದೋ ಒಂದು ಪುಸ್ತಕದಲ್ಲಿ ಓದಿದ್ದೆ. ಅದರ ಅನ್ವಯ ಸ್ವಾತಂತ್ರ್ಯ ಹೋರಾಟದಲ್ಲಿ ದೇವಮ್ಮನವರು ಪಾಲ್ಗೊಂಡ ಬಗ್ಗೆ ವಿವರಗಳನ್ನು ಪಡೆದು ಅದನ್ನು ಸಾಕ್ಷ್ಯಚಿತ್ರ ಮಾಡಬೇಕೆಂದು ಹೊರಟಿದ್ದೆ.
ದೇವಮ್ಮನವರನ್ನು ಭೇಟಿ ಮಾಡುವ ಮೊದಲು ನನ್ನಲ್ಲಿ ಅನೇಕ ಕಲ್ಪನೆಗಳಿದ್ದವು. ಸ್ವಾತಂತ್ರ್ಯ ಹೋರಾಟ ಮಾಡಿದ್ದ ಹಲವರನ್ನು ನಾನು ಕಂಡಿದ್ದೆ. ಅವರೆಲ್ಲರೂ ಪುರುಷರಾಗಿದ್ದರು. ಬಿಳಿಯ ಧೋತಿ. ಅಷ್ಟೇ ಶುಭ್ರ ಜುಬ್ಬಾ, ತಲೆಯ ಮೇಲೆ ಬಿಳಿಯ ಟೊಪ್ಪಿಗೆ ಹಾಕಿಕೊಂಡು ಠಾಕು, ಠೀಕಾಗಿ ನಡೆದು ಬರುತ್ತಿದ್ದ ಅದೆಷ್ಟೋ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ನಾನು ನೋಡಿ ಮನದಣಿಯೆ ವಂದಿಸಿದ್ದೆ. ಕಣ್ಣು ಮಂಜಾಗಿದ್ದರೂ, ಕೈಕಾಲುಗಳಲ್ಲಿ ತ್ರಾಣ ಇಲ್ಲದೇ ಇದ್ದರೂ ಯಾರ ಸಹಾಯವೂ ಇಲ್ಲದೇ ಸ್ವಾಭಿಮಾನದಿಂದ ನಡೆದು ಬರುತ್ತಿದ್ದ ಹಿರಿಯ ಜೀವಗಳನ್ನು ಕಣ್ತುಂಬಿಕೊಂಡು ಅವರ ಪಾದಕ್ಕೆರಗಿದ್ದೆ. ಆದರೆ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರು ಹೇಗಿರಬಹುದು ಎನ್ನುವುದು ನನಗೆ ಖಂಡಿತವಾಗಿಯೂ ತಿಳಿದಿರಲಿಲ್ಲ. ಅಲ್ಲೊಬ್ಬರು ಇದ್ದಾರಂತೆ, ಇಲ್ಲೊಬ್ಬರು ಇದ್ದಾರಂತೆ, ಯಾರಿಗೋ ಸ್ವಾತಂತ್ರ್ಯ ಹೋರಾಟಗಾರರ ಪೆನ್ಶನ್ ಬರುತ್ತದಂತೆ ಎಂಬ ಮಾಹಿತಿಗಳನ್ನಷ್ಟೇ ಕೇಳಿ ತಿಳಿದಿದ್ದೆ. ದೇವಮ್ಮನವರ ಬಗ್ಗೆ ತಿಳಿದಾಗ ನಾನು ಒಮ್ಮೆಲೆ ಬಾನೆತ್ತರಕ್ಕೆ ನೆಗೆದು ಖುಷಿಯಿಂದ ಅವರನ್ನು ಮಾತನಾಡಿಸುವುದೇ ಸರಿಯೆಂದುಕೊಂಡು ತಯಾರಾಗಿದ್ದೆ.
ದೇವಮ್ಮ ದೇವತೆಯಂತೆ ಕಾಣಬಹುದೇ? ಖಾದಿ ಸೀರೆಯನ್ನು ಉಟ್ಟು ಗತ್ತಿನಿಂದ ಬರಬಹುದೇ? ಎಂಬೆಲ್ಲ ಭಾವನೆಗಳು ನನ್ನ ಮನದಲ್ಲಿ ಕುಣಿದಾಡುತ್ತಿದ್ದವು. ಇದೇ ಆಲೋಚನೆಯಲ್ಲಿಯೇ ದೇವಮ್ಮನವರ ಮನೆಯ ಬಾಗಿಲನ್ನು ತೆಗೆದಾಗ ದೇವಮ್ಮನ ಮೊಮ್ಮಕ್ಕಳ್ಯಾರೋ ಇರಬೇಕು ಬಾಗಿಲು ತೆಗೆದಿದ್ದರು. ನಾನು ಅವರ ಬಳಿ ಬಂದ ವಿಷಯವನ್ನು ಹೇಳಿದಾಗ ಅವರು ನನ್ನ ಬಳಿ `ಒಂದು ನಿಮಿಷ, ನಿಂತ್ಕೊಂಡಿರಿ..' ಎಂದು ಒಳಹೋಗಿದ್ದರು.
ಅವರು ಒಳಹೋದ ಅರ್ಧ ಗಳಿಗೆಯಲ್ಲಿ ಆ ಮನೆಯ ಕತ್ತಲೆಯ ಆಳದಲ್ಲಿ ದೊಡ್ಡ ಧ್ವನಿಯಲ್ಲಿ ನನ್ನ ಬಳಿ ಮಾತನಾಡಿದ ವ್ಯಕ್ತಿ `ಯಾರೋ ಬಂದಿದ್ದಾರೆ, ನಿಮ್ಮನ್ನು ಮಾತನಾಡಿಸಬೇಕಂತೆ. ಅದೇನೋ ಸಾಕ್ಷ್ಯಚಿತ್ರ ಮಾಡ್ತಾರಂತೆ..' ಎಂದು ಕೂಗುತ್ತಿದ್ದುದು ಕಿವಿಗೆ ಬಿದ್ದಿತ್ತು. ಅದಕ್ಕೆ ಪ್ರತಿಯಾಗಿ ಕ್ಷೀಣ ಧ್ವನಿಯೊಂದು ಏನೋ ಮಾತನಾಡಿದ್ದು ಅಸ್ಪಷ್ಟವಾಗಿ ನನ್ನ ಕಿವಿಗೆ ಬಿದ್ದಿತ್ತು. ಏನೋ ಕಸಿವಿಸಿ ನನ್ನೊಳಗೆ ಆ ಕ್ಷಣದಲ್ಲಿ ಮೂಡಿದ್ದು ಸುಳ್ಳಲ್ಲ. ನನ್ನನ್ನು ನಿಲ್ಲಿಸಿ ಹೋದ ವ್ಯಕ್ತಿ ಮರಳಿ ಬಂದು `ಒಳಗೆ ಬನ್ನಿ. ಕುಳಿತುಕೊಳ್ಳಿ. ' ಎಂದರು.
ದೇವಮ್ಮ ಅಜ್ಜಿಯ ಆಹ್ವಾನಕ್ಕಾಗಿ ಕಾಯುತ್ತ ಕುಳಿತಿದ್ದ ನಾನು ಮನೆಯನ್ನೆಲ್ಲ ಗಮನಿಸತೊಡಗಿದ್ದೆ. ದೊಡ್ಡ ಹಳೆಯ ಕಾಲದ ಮನೆ. ಆರು ಅಡಿ ಅಗಲದ ಮಣ್ಣಿನ ಗೋಡೆ. ದಪ್ಪ ದಪ್ಪನೆಯ ತೇಗದ ಮರದ ಕಂಬಗಳು. ಯಾವ ಶತಮಾನದಲ್ಲಿ ಕಟ್ಟಿದ್ದರೋ ಏನೋ. ಸಾಕಷ್ಟು ಕೋಣೆಗಳು ಆ ಮನೆಗಿದ್ದರೂ ಮನೆಯ ಮಧ್ಯದಲ್ಲಿ ಒಂದು ಆಟದ ಅಂಗಳ. ಅಲ್ಲೊಂದಷ್ಟು ಹೂಗಿಡಗಳನ್ನು ಬೆಳೆಸಲಾಗಿತ್ತು. ಗೋಡೆಯ ಮೇಲೆಲ್ಲ ಹಳೆಯ ಕಾಲದ ರೇಖಾಚಿತ್ರಗಳು. ಯಾರ್ಯಾರೋ ಹಿರಿಯರನ್ನು ಆ ಚಿತ್ರಗಳು ಬೆಡಗಿನಿಂದ ಮೂಡಿಸಿದ್ದವು. `ಒಳಗೆ ಬರಬೇಕಂತೆ..' ಅಜ್ಜಿಯಿಂದ ತಾರನ್ನು ತಂದ ವ್ಯಕ್ತಿ ನನ್ನ ಬಳಿ ಹೇಳಿದ್ದರು. ಅವರ ಹಿಂದೆ ನಾನು ಹೆಜ್ಜೆ ಹಾಕಿದೆ.
ಕತ್ತಲೆಯ ಆಳದಲ್ಲಿ ಅಜ್ಜಿ ದೇವಮ್ಮ ಕುಳಿತಿದ್ದರು. ಬೆಳಕು ಬರದಂತಹ ಕೋಣೆ ಅದಾಗಿತ್ತಾದರೂ ನಾವು ಬಂದ ಬಾಗಿಲಿನಿಂದ ಮಸುಕಾದ ಬೆಳಕು ಕೋಣೆಯೊಳಕ್ಕೆ ಇಣುಕುತ್ತಿತ್ತು. ಅಲ್ಲೊಂದು ಹಳೆಯ ಮಂಚದ ಮೇಲೆ ಕುಳಿತಿದ್ದರು ದೇವಮ್ಮ. ನಾನು ಹೋದ ಕೂಡಲೇ `ನೀ ಯಾರಾ?' ಎಂದರು. ನಾನು ಏನೋ ಹೇಳಲು ಮುಂದಾದೆ. ಆದರೆ ನನ್ನ ಜೊತೆ ಬಂದಿದ್ದ ವ್ಯಕ್ತಿ `ಅವರಿಗೆ ಕಿವಿ ಕೇಳಿಸುವುದಿಲ್ಲ. ಅವರ ಬಳಿ ಹೋಗಿ ದೊಡ್ಡದಾಗಿ ಹೇಳಿ..' ಎಂದರು. ನಾನು ದೇವಮ್ಮನವರ ಹತ್ತಿರ ಹೋಗಿ `ನಾನು ವಿನಯ..' ಎಂದೆ. `ನೀನು ವಿನಯನಾ? ಯಾರ ಮನೆ ನಿನಗೆ..' ಮತ್ತೆ ಕೇಳಿದ್ದರು ದೇವಮ್ಮ. `ದಂಟಕಲ್ ಸುಬ್ಬಣ್ಣನ ಮಗ ನಾನು..' ಎಂದೆ. `ಸುಬ್ಬಣ್ಣ ಅಂದರೆ ಯಾರಾ? ಇಗ್ಗಣ್ಣನ ಮಗನಾ?' ಅಜ್ಜಿ ಮತ್ತೆ ಕೇಳಿದ್ದರು. `ಹು.. ಹೌದು..' ಎಂದೆ. `ಇಗ್ಗಜ್ಜ.. ಬಹಳ ಒಳ್ಳೆಯ ಮನುಷ್ಯ.. ಇಗ್ಗಜ್ಜನ ಹಿರಿ ಮೊಮ್ಮಗ ನೀನು ಹೇಳಾತು.. ಅಲ್ದನಾ..?' ಎಂದರು ದೇವಮ್ಮ. ನಮ್ಮ ನಡುವೆ ಆಪ್ತತೆ ಬೆಳೆಯುತ್ತಿತ್ತು. ನಾನು ಬಂದ ಕಾರ್ಯವನ್ನು ಸಾಂಗವಾಗಿ ಮಾಡಲು ಇದು ಅನುಕೂಲ ಮಾಡಿಕೊಡುತ್ತಿತ್ತು. ಹೀಗಾಗಿ ಅಜ್ಜಿಯ ಬಳಿ ನನ್ನ ಮನೆಯ, ಅಜ್ಜನ ವಿಷಯಗಳನ್ನೆಲ್ಲ ಮಾತನಾಡಿದೆ.
`ನಿಂಗ್ ಎಂತಾ ಬೇಕು? ಅದೆಂತದ್ದೋ ಮಾಡ್ತ್ಯಡಾ..?' ಎಂದರು ದೇವಮ್ಮ. `ಏನಿಲ್ಲ ಅಜ್ಜಿ ನೀವು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಅಂತ ಕೇಳದಿ. ಅದ್ಕೆ ನಿಮ್ಮ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನ, ಸ್ವಾತಂತ್ರ್ಯ ಹೋರಾಟಗಳ ಕುರಿತಾದ ವಿವರಗಳನ್ನು ಸಂಗ್ರಹಿಸೋಣ ಅಂತ ಬಂಜಿ. ಅದನ್ನ ವೀಡಿಯೋ ಮಾಡಿ ಇಟ್ಕಳವು ಅಂತ ಬಂಜಿ..' ಎಂದೆ.
`ಅದರಿಂದ ಎಂತಾ ಆಗ್ತಾ.. ಸ್ವಾತಂತ್ರ್ಯ ಬಂತು.. ಈಗಿನವ್ಕೆ ಅದರ ಬೆಲೆ ಎಲ್ಲಾ ಗೊತ್ತಿಲ್ಯಲಾ ತಮಾ.. ನಾನು ಆ ಕಥೆನೆಲ್ಲಾ ಹೇಳಿದ್ರೆ ಯಾರು ಕೇಳ್ತ್ವಾ? ನಿಂಗ್ ಬೇರೆ ಹ್ವಾರ್ಯ ಇಲ್ಲೆ ಕಾಣಿಸ್ತು ನೋಡು. ಬೇರೆ ಎಂತಾದ್ರೂ ಮಾಡು..' ದೇವಮ್ಮನ ದನಿಯಲ್ಲಿ ಅದೇನೋ ಬೇಸರವಿತ್ತು. ನಾನು ಪಟ್ಟು ಬಿಡದೇ ಮತ್ತೆ ಮತ್ತೆ ಕೇಳಿದೆ. ಅಜ್ಜಿಯೂ ಮೊಂಡು ಹಠ ಮಾಡುತ್ತಿದ್ದರು. ಹೇಗಾದರೂ ಆಗಲಿ, ಅಜ್ಜಿಯ ಬಾಯಿಂದ ಆಕೆಯ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಕೇಳಿ, ಅದನ್ನು ದಾಖಲಿಸಿಕೊಂಡು ಹೋಗುವುದೇ ಸೈ ಎಂದು ಕುಳಿತಿದ್ದೆ.
ನಾನು ಬಿಡುವವನಲ್ಲ ಅನ್ನಿಸಿರಬೇಕು ಅಜ್ಜಿಗೆ. ಕೊನೆಗೊಮ್ಮೆ ಅಜ್ಜಿಯೇ ಸೋತರು. `ಎಂತಾ ಹೇಳವಾ ನಿಂಗೆ.. ನಂಗೆ ಎಲ್ಲಾ ಮರ್ತೋಗ್ತಾ ಇದ್ದು. ಸರಿ ನೆನಪಿಲ್ಲೆ..' ಎನ್ನುತ್ತಿದ್ದಂತೆಯೇ ನಾನು `ನೆನಪಿದ್ದಷ್ಟನ್ನ ಹೇಳಿ..' ಎಂದೆ. `ಆತೋ.. ಅಂತೂ ನೀ ಬಿಡಂವ ಅಲ್ಲ ಹೇಳಾತು..' ಎಂದು ಬೊಚ್ಚು ಬಾಯಿಯಲ್ಲಿ ನಕ್ಕರು.
`ತಮಾ.. ನಂಗೀಗ 95 ವರ್ಷದ ಮೇಲಾತು. ನೋಡು 80 ವರ್ಷದ ಹಿಂದೆ ಎಲ್ಲ ಶುರು ಆತು ಅಂದ್ಕ. ಆಗ ಭಾರತದಲ್ಲಿ ಎಲ್ಲ ಕಡೆ ಫಿರಂಗಿಯವ್ ಇದ್ದಿದ್ದ. ಬಿಳಿ ಬಿಳಿ ಮುಷಡಿಯವ್ವು. ನಾನು ಸಣ್ಣಕ್ಕಿದ್ದಾಗ ಯನ್ ಅಪ್ಪಯ್ಯ ಈ ಬ್ರಿಟೀಷರ ಕಥೆ ಹೇಳತಿದ್ದಾ. ಆವಾಗ ಆನು ಯನ್ ತಮ್ಮ ಬಿಟ್ಟ ಕಣ್ ಬಿಟ್ಟಂಗೆ, ಬಾಯಿ ಕಳಕಂಡು ಕೇಳತಿದ್ಯಾ. ಯಾರೋ ಗೋಖಲೆ ಅಂತ ಇದ್ರಡಾ, ಬಾಲಗಂಗಾಧನಾಥ ತಿಲಕ್ ಅಂತ ಇದ್ರಡಾ.. ಸ್ವರಾಜ್ಯ ಹೋರಾಟ ಹೇಳಿ ಶುರು ಹಚ್ಚಕಂಜ್ರಡ, ಅದ್ಯಾರೋ ಗಾಂಧೀಜಿ ಹೇಳಿ ಇದ್ರಡ ಅಂತೆಲ್ಲ ಹೇಳತಿದ್ದ.. ಅಪ್ಪಯ್ಯ ಹೇಳತಿದ್ದ ಕಥೆಗಳೇ ಯನ್ನ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ..' ಎಂದು ದೇವಮ್ಮ ಶುರು ಮಾಡಿದ್ದರು. ನಾನು ಸದ್ದಿಲ್ಲದಂತೆ ನನ್ನ ನೈಟ್ ವಿಷನ್ ಕ್ಯಾಮರಾ ತೆಗೆದು ಅಜ್ಜಿಯ ವಿವರಗಳನ್ನೆಲ್ಲ ದಾಖಲಿಸಲು ಆರಂಭಿಸಿದ್ದೆ.
`ಅಪ್ಪಯ್ಯ ಹೇಳುತ್ತಿದ್ದ ಕಥೆಗಳನ್ನೆಲ್ಲ ಕೇಳಿ ಕೇಳಿ ಯಂಗೂ, ತಮ್ಮಂಗೂ ಎಂತಾದ್ರೂ ಮಾಡವು ಅನ್ನಿಸ್ತಿತ್ತು. ಆದರೆ ಆವಾಗೆಲ್ಲ ಯಂಗಕ್ಕಿಗೆ ಸಣ್ಣವಯಸ್ಸು ನೋಡು. ಯಂಗಂತೂ 10-15 ವರ್ಷ. ತಮ್ಮ ಯನ್ನಕ್ಕಿಂತ ಇನ್ನೂ ಎರಡು ವರ್ಷ ಸಣ್ಣವ. ಬಾಯಲ್ಲಿ ನಂಗವ್ ಹಾಂಗ್ ಮಾಡಿ ಬಿಡ್ತ್ಯ ಹಿಂಗ್ ಮಾಡಿ ಬಿಡ್ತ್ಯ ಹೇಳಿ ಹೇಳಕತ್ತ ಇರ್ತಿದ್ಯ. ಆದರೆ ಎಂತಾ ಮಾಡವು ಅಂತ ಇಬ್ರಿಗೂ ಗೊತ್ತಿತ್ತಿಲ್ಲೆ. ಮನೆಯಲ್ಲಿ ಆವಾಗ ನಾನೇ ದೊಡ್ಡವ. ಹಿಂಗಾಗಿ ಆನು ಎಂತಾ ಹೇಳತ್ನೋ ಹಂಗೆ ತಮ್ಮ ಮಾಡ್ತಿದ್ದ. ಸ್ವಾತಂತ್ರ್ಯ ಹೋರಾಟದಲ್ಲಿ ನಂಗವ್ವೂ ಪಾಲ್ಗೊಳ್ಳವು ಹೇಳಿ ಇತ್ತು. ಆದರೆ ಹೆಂಗೆ ಅಂತ ಗೊತ್ತಿಲ್ಲೆ. ಎಲ್ಲಾ ಹರತಾಳದ ಕಥೆಗಳನ್ನ ಹೇಳ್ತಾ ಇದ್ರೆ ನಂಗಕ್ಕಿಗೆ ಮೈಯೆಲ್ಲ ರೋಮಾಂಚನ. ಯಾರೋ ಬೋಲೋ ಭಾರತ ಮಾತಾ ಕಿ.. ಎಂದರೆ ಎಲ್ಲರಿಗಿಂತ ಮೊದಲು ಜೈ ಎನ್ನುವವರು ಯಂಗವ್ವೇ ಆಗಿದ್ಯ. ಹಿಂಗಿದ್ದಾಗ ಆವತ್ತೊಂದಿನ ನಮ್ಮೂರಲ್ಲಿ ಒಬ್ರು ಸ್ವಾತಂತ್ರ್ಯ ಹೋರಾಟಗಾರರು ಬಂದಿದ್ದರು. ಅವರ ಭಾಷಣ ಇತ್ತು. ನಮ್ಮೂರಲ್ಲಿ ಜನರನ್ನ ಹುರಿದುಂಬಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಅಣಿಗೊಳಿಸೋದು ಅವರ ಉದ್ದೇಶ ಆಗಿತ್ತು. ಆ ಭಾಷಣ ಕಾರ್ಯಕ್ರಮಕ್ಕೆ ನಾನು-ತಮ್ಮ ಇಬ್ರೂ ಹೋಗವು ಅಂತ ಅಂದಕಂಡ್ಯ. ತಂಗೀ.. ನಿಂಗಕ್ಕಿಗೆ ಇದರ ಉಸಾಬರಿ ಬ್ಯಾಡ. ಯಂಗವ್ವು ದೊಡ್ಡವ್ ಇದ್ಯ. ಯಂಗವ್ ಇದ್ನೆಲ್ಲಾ ನೋಡಕತ್ಯ. ನಿಂಗವ್ ಮನೆಬದಿಗೆ ಇರಿ ಅಂತ ಅಪ್ಪಯ್ಯ ತಾಕೀತು ಮಾಡಿಬಿಟ್ಟಿದ್ದ.. ಅಪ್ಪಯ್ಯನ ಕಣ್ಣುತಪ್ಪಿಸಿ ಹೋಗವು ಅಂತ ನಾನು-ತಮ್ಮ ನಿರ್ಧಾರ ಮಾಡಿದ್ಯ..' ಎಂದು ಅಜ್ಜಿ ಮಾತು ನಿಲ್ಲಿಸಿದಳು. ಒಮ್ಮೆ ತಾವು ಕುಳಿತಿದ್ದ ಹಾಸಿಗೆಯಿಂದ ಏಳಲು ಯತ್ನಿಸಿದರು. ಸಾಧ್ಯವಾಗಲಿಲ್ಲ. `ತಮಾ.. ಇಲ್ ಬಾ.. ಸ್ವಲ್ಪ ಯನ್ನ ಕೈ ಹಿಡ್ಕ ನೋಡನ..' ಎಂದರು. ನಾನು `ಅಜ್ಜಿಯನ್ನು ಹಿಡಿದುಕೊಂಡೆ. ನಿಧಾನವಾಗಿ ಎದ್ದು ನಿಂತ ಅಜ್ಜಿ.. ಕೋಣೆಯಿಂದ ಹೊರಕ್ಕೆ ನನ್ನನ್ನು ಹಿಡಿದುಕೊಂಡೇ ಬಂದಳು. ಬಂದವಳೇ ಸೀದಾ ಹೊರಗಡೆ ಇದ್ದ ಬಾಂಕಿನ ಮೇಲೆ ಕುಳಿತು ಅಲ್ಲೇ ಇದ್ದ ಎಲೆಬಟ್ಟಲಿಗೆ ಕೈ ಹಾಕಿದಳು. ನಾನು ಮೌನವಾಗಿ ಅಜ್ಜಿಯನ್ನು ಗಮನಿಸುತ್ತ ನಿಂತೆ.
`ಅಪ್ಪಯ್ಯ ಭಾಷಣ ಕೇಳಲು ಹೋಗಿದ್ದ. ಆನು-ತಮ್ಮ ಹಿತ್ಲಾಕಡೆ ಬಾಗಿಲಿಂದ ಸೀದಾ ಭಾಷಣ ನಡೆತಾ ಇದ್ದಿದ್ ಜಾಗಕ್ಕೆ ಹೊಂಟ್ಯ. ನಂಗವ್ ಹೋಗೋ ಹೊತ್ತಿಗೆ ಅಲ್ಲಿ ಮಾತು ಶುರುವಾಗಿ ಹೋಗಿತ್ತು. ಎಂತಾ ಮಾತು ಹೇಳ್ತೆ.. ನಮ್ಮೂರ್ನವ್ ಅಲ್ದೆ ಅಚ್ಚಿಚ್ಚೆ ಊರ್ನವ್ವೂ ಬಂದಿದ್ದ. ದೇವಸ್ಥಾನ ಕಟ್ಟೆ ಮೇಲೆ ನಿಂತಕಂಡಿದ್ದ ವ್ಯಕ್ತಿ ಎಷ್ಟು ಗಟ್ಟಿಯಾಗಿ ಮಾತಾಡ್ತಾ ಇದ್ದಿದ್ರು ಅಂದ್ರೆ ಆಹಾ.. ಆನು-ತಮ್ಮ ಇಬ್ರೂ ಮೈಮರೆತುಬಿಟ್ಟಿದಿದ್ಯ.. ಹಿಂಗೇ ಮಾತು ನಡೀತಾ ಇತ್ತು. ಆವಾಗ್ಲೇ ನಂಗಳ ಹಿಂದಿಂದ ದೊಡ್ಡ ಶಬ್ದ ಕೇಳಚು..' ಎಂದ ಅಜ್ಜಿ ಚಿಕ್ಕದೊಂದು ನಿಟ್ಟುಸಿರು ಬಿಟ್ಟಳು. ನನಗೆ ಕುತೂಹಲ ಶುರುವಾಗಿತ್ತು.
(ಮುಂದುವರಿಯುತ್ತದೆ )