Thursday, May 30, 2013

ಮಿಡಿ-ಮಿನಿ ಕಥೆಗಳು

ಮಿನಿ ಕಥೆಗಳು...
 ಒಂದೆರಡು ಮಾತುಗಳು :
ಹಾಗೆ ಸುಮ್ಮನೆ ಬರೆದಿದ್ದು... ಇವು ನ್ಯಾನೋ ಕಥೆಗಳ ಜಾತಿಗೆ ಸೇರುತ್ತವಾ.. ಗೊತ್ತಿಲ್ಲ..
ಸುಮ್ಮ ಸುಮ್ಮನೆ ನೀನು ಉದ್ದುದ್ದ ಕಥೆಗಳನ್ನು ಬರೀತಿಯಾ.. ಎಳೀತೀಯಾ ಅಂತ ಯಾರೋ ಭಯಂಕರ ಕಾಮೆಂಟು ಮಾಡಿದ್ದರು..
ಚಿಕ್ಕ ಕಥೆ ಬರೆಯಲು ಬರುತ್ತದಾ ಎಂದು ಪ್ರಯತ್ನ ಮಾಡಿದಾಗ ಹೊರಬಿದ್ದದ್ದು... ಓದ್ಹೇಳಿ..

=========================================

ಸೇಡು

ಅವಳನ್ನು ತಿರಸ್ಕರಿಸಿ ಅವಳ ಮೇಲೆ ಸೇಡು ತೀರಿಕೊಳ್ಳಬೇಕೆಂದು ಹವಣಿಸಿದ್ದೆ...
ಮರೆಯಲು ಯತ್ನಿಸಿದಂತೆಲ್ಲ ನೆನಪಾಗಿ ಕಾಡಿದಳು..


**

ಭೀತಿ

ಯಾವುದೇ ಮದುವೆ ದಿಬ್ಬಣಗಳು ಕಂಡರೂ... ಬೋರ್ಡುಗಳು ಕಣ್ಣಿಗೆ ಬಿದ್ದರೂ...
ಮನಸ್ಸು ದೇವರೆ ಅಲ್ಲಿ ಅವಳ ಹೆಸರು ಕಾಣದಿರಲಿ... ಎಂದು ಯಾಚಿಸುತ್ತದೆ..

**

ಮೌನ..

ಗಂಡನನ್ನು ಬಯ್ಯುತ್ತಿದ್ದ ನೇತ್ರಕ್ಕನ ಬಾಯಿ ಕೊನೆಗೂ ಬಂದಾಯಿತು...
ಮಣ್ಣಾದಳು...ಹೆಣ್ಣಾದಳು..

***


ದುರ್ವಿಧಿ

ಭವಿಷ್ಯ ಹೇಳುವುದೇ ಅನ್ನ ಎಂದುಕೊಂಡಿದ್ದವನಿಗೆ ಸಾಡೇಸಾತ್ ಶನಿ ಹಿಡಿದದ್ದು ಗೊತ್ತಾಗಲೇ ಇಲ್ಲ..

****

ದೂರಾಲೋಚನೆ

ಅವಳಿಗೆ ಇಷ್ಟ ಅನ್ನುವ ಕಾರಣಕ್ಕಾಗಿ ಅವನು ಮನೆಯ ಜಮೀನಿನ ತುಂಬ ಪಪ್ಪಾಯಿ ಗಿಡಗಳನ್ನು ಹಚ್ಚಿದ. ಅದು ದೊಡ್ಡದಾಗಿ ಬೆಳೆದು ಹಣ್ಣು ನೀಡುವ ಹೊತ್ತಿಗೆ ಅವಳು ಅವನನ್ನು ಬಿಟ್ಟು ಹೋದಳು.
ಅವನೀಗ ಪಪ್ಪಾಯಿ ವ್ಯಾಪಾರಿ.
ಕೈಯಲ್ಲಿ ಝಣ ಝಣ ರುಪಾಯಿ.


**
ಅಭಿಮಾನಿ

ನನ್ನ ಗೆಳತಿ ಬಿಟ್ಟೂ ಬಿಡದೆ ಕಾಡಿಸಿ ನಿನಾಸಂ ಸತೀಶನ ಸಿನೆಮಾಗಳನ್ನು ತೋರಿಸಿದಳು..
ಅವಳ ಒತ್ತಾಯಕ್ಕೆ ನೋಡಿದೆ. ಅವಳ ಬಿಟ್ಟು ಹೋದಳು..
ನಾನು ಸತೀಶನ ಫ್ಯಾನ್ ಆಗಿಬಿಟ್ಟೆ.

Tuesday, May 28, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 2

(ಎಂದೋ ಅರ್ಧ ಬರೆದಿಟ್ಟಿದ್ದ ನಮ್ಮ ಪ್ರವಾಸ ಕಥನಕ್ಕೆ ಮರು ಚಾಲನೆ.. ಈ ಪ್ರವಾಸ ಹೊರಟಿದ್ದು ನಾನು, ಕಿಟ್ಟು, ರಾಘವ ಹಾಗೂ ಮೋಹನ.. ಅದರ ಸಂತಸದ ಝಲಕ್ ಇಲ್ಲಿದೆ.)
(ಇಲ್ಲಿಯವರೆಗೆ.. ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆಗೆ ಬಂದಿದ್ದನ್ನು ಈ ಮೊದಲೇ ಹೇಳಿದ್ದೇನೆ.. ಹಳೆಯ ಪೋಸ್ಟನ್ನು ನೋಡಿ)

ಡವ ಡವ ನಡುಕವ..

ಮರುದಿನ ಮುಂಜಾನೆ 4 ಗಂಟೆಗೆಲ್ಲಾ ಎದ್ದು ಗುಂಡ್ಲುಪೇಟೆಯನ್ನು ಬಿಟ್ಟೆವು..
ರಾತ್ರಿ ಬಂಡಿಪುರ ಅರಣ್ಯದ ಬಾಗಿಲು ಮುಚ್ಚುತ್ತಾರೆ. ನಂತರ ಅದನ್ನು ತೆರೆಯುವುದು ಮುಂಜಾನೆಯೇ..
ಬೆಳಗಿನ ಕಾನನದ ನಿಸರ್ಗ ಸೌಂದರ್ಯವನ್ನು ಮಿಸ್ ಮಾಡ್ಕೋಬಾರದು ಎನ್ನುವ ದೃಷ್ಟಿಯಿಂದ ನಾವು ಮುಂಜಾನೆ ಹೊರಟೆವು.. ಅದಲ್ಲದೆ ಬಂಡಿಪುರ ಅರಣ್ಯ ತನಿಖಾ ಠಾಣೆಯಲ್ಲಿ ಸಾಕಷ್ಟು ಟ್ರಾಫಿಕ್ ಕೂಡ ಇರುತ್ತದೆಂಬುದು ನಮ್ಮ ಮುಖ್ಯ ಕಾರಣವಾಗಿತ್ತು.
ನಾವು ಅರಣ್ಯದ ಗೇಟ್ ತಲುಪುವ ವೇಳೆಗೆ ಆಗಲೇ ಗಂಟೆ ಐದನ್ನೂ ದಾಟಿತ್ತು..
ಮಧ್ಯದಲ್ಲಿ ಚಳಿ ನಡುಕ ಶುರುವಾಯಿತು ನೋಡಿ...
 ಹಲ್ಲು ಕಟ ಕಟ.. ಕೈಕಾಲು ಥರ ಥರ...
ಮೋಹನನಿಗೆ ಬೈಕ್ ಹೊಡೆಯುವ ಮನಸ್ಸೇ ಇಲ್ಲ..
ಅಲ್ಲೆಲ್ಲೋ ಒಂದು ಕಡೆ ಬೈಕ್ ನಿಲ್ಲಿಸಿದೆವು...
ರಸ್ತೆ ಪಕ್ಕದ ದರಕು, ಇತ್ಯಾದಿ ಸೇರಿಸಿ ಬೆಂಕಿ ಹಾಕಿಯೇಬಿಟ್ಟೆವು...
ಚಳಿ ಕಾಸಿದ ನಂತರವೇ ನಮ್ಮ ಕೈಗಳಿಗೆ ಜೀವ ಬಂದಿದ್ದು,,,!!!

ಅದ್ಯಾವುದೋ ಕಡೆ ಸೂರ್ಯ ನಿಧಾನವಾಗಿ ಬೆಳಗನ್ನು ಪಸರಿಸುತ್ತಿದ್ದ..
ಗುಂಡ್ಲುಪೇಟೆಯಿಂದ ಬಂಡಿಪುರದ ಕಡೆಗೆ ಹೋಗುವಾಗ ಬಲಭಾಗದಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕಾಣುತ್ತದೆ..
ಬಾನನ್ನು ಮುಟ್ಟಿದಂತೆ ಕಾಣುವ ಬೆಟ್ಟದ ಬೆಡಗು ಮೂಕ ವಿಸ್ಮಿತಗೊಳಿಸುತ್ತದೆ..
ನಾನು ಹಾಗೂ ಕಿಟ್ಟು ಇಬ್ಬರೂ ಅದೆಷ್ಟು ಬೆರಗುಗೊಂಡೆವೆಂದರೆ.. ಪದಗಳೇ ಸಾಲುತ್ತಿಲ್ಲ..
ರಾಘುವಿನ ಟಿವಿಎಸ್ ಎಕ್ಸಿಡಿ.. ಹಾಗೂ ಮೋಹನನ ವಿಕ್ಟರ್... ಝುಂ ಅನ್ನುತ್ತಿತ್ತು..

ಇಬ್ಬನಿ ಮಾಲೆ ಮಾಲೆಯಾಗಿ ಇಳಿಯುತ್ತಲಿತ್ತು....
10-15 ಮೀಟರ್ ದೂರದ ಇದುರು ಭಾಗ ಕಾಣುತ್ತಲೇ ಇಲ್ಲ...
ಇದೇ ಕಾರಣಕ್ಕೆ ಎದುರು ಬದಿ ಯಾರೇ ಬಂದರೂ ನಮಗೆ ಕಾಣುತ್ತಲೇ ಇರಲಿಲ್ಲ...
ಫೆ.19ರ ದಿನ..
ಇಬ್ಬನಿಯ ಕಾರಣದಿಂದಲೇ  ನಮಗೆ ಬಂಡಿಪುರದ ಕಾನನ ಸೌಂದರ್ಯ ಕೊಂಚ ತಪ್ಪಿಹೋಯಿತೆಂದರೂ ತಪ್ಪಿಲ್ಲ...
ಮುಂದೆ ಸಾಗಿದಂತೆ.. ಅದೊಂದು ಊರು.. ತಮಿಳಿನಲ್ಲಿ ಬರೆದಿತ್ತು ಹೆಸರು..
ಮಧುಮಲೆ ಅರಣ್ಯ ವ್ಯಾಪ್ತಿಯ ಒಳಗಿದೆ...
ಎದುರು ಭಾಗದಲ್ಲಿ ಒಂದು ದೈತ್ಯ ಆನೆ ನಿಂತಿದೆ....

ನನಗೆ ಏನೂ ಅನ್ನಿಸಲಿಲ್ಲ... ರಾಘುವಿನ ಬೈಕೇರಿ ಕುಳಿತಿದ್ದ ಕಿಟ್ಟು ಒಮ್ಮೆ ಹೌಹಾರಿದ್ದ...
ನಾನು, ರಾಘು ಆಗಲೇ ಅಧೇ ಮಾರ್ಗದಲ್ಲಿ ಊಟಿಗೆ ಒಂದು ಟ್ರಿಪ್ ಹಾಕಿ ಬಂದಿದ್ದರಿಂದ ಆ ಆನೆಯನ್ನು ಅದ್ಯಾವಾಗಲೋ ನೋಡಿದ್ದೆವು..
ಕಿಟ್ಟುವಿನ ಹೌಹಾರಿಕೆ ಕಂಡು ನನಗಂತೂ ಒಳಗೊಳಗೆ ನಗು...
ರಾಘವನ ಕ್ಯಾಮರಾ ಕಿಟ್ಟುವಿನ ಕೈಲಿತ್ತು...
ಬೈಕು ಚಲಿಸುತ್ತಿದ್ದಂತೆಯೇ ಪೋಟೋ ತೆಗೆಯುತ್ತಿದ್ದ...

ನಡುವೆ ತಮಿಳುನಾಡು ರಾಜ್ಯದ ಚೆಕ್ ಪೋಸ್ಟ್..
ಎಲ್ಲ ವಾಹನಗಳನ್ನೂ ಚೆಕ್ ಮಾಡುತ್ತಿದ್ದರು..
ನಾನು ರಾಘುವಿನ ಬೈಕ್ ಹೊಡೆಯುತ್ತಿದ್ದೆ..
ಹೆಲ್ ಮೆಟ್ ಹಾಕಿರಲಿಲ್ಲ..
ಹಿಂದೆ ಕುಳಿತ ರಾಘು ಹಾಕಿದ್ದ..
ಅಲ್ಲಿದ್ದ ಪೊಲೀಸ್ ಅಧಿಕಾರಿ ನನ್ನನ್ನು ನಿಲ್ಲಿಸಿ ಹೆಲ್ ಮೆಟ್ ಎಂದ...
ರಾಘುವನ್ನು ತೋರಿಸಿದೆ...
ಡೋಂಟ್ ಕ್ಯಾರ್ ಎಂದ...ಅಧಿಕಾರಿ..
ಪೇಪರ್ ಜಾಬಿತ್ತಲ್ಲ... ಪ್ರೆಸ್ ಕಾರ್ಡ್ ತೋರಿಸಿದೆ...
ಸಂಯುಕ್ತ ಕರ್ನಾಟಕದ ಜಾಬಿನಲ್ಲಿದ್ದ ಕಾಲ...
ಕನ್ನಡ ಪತ್ರಿಕೆ ಕಾರ್ಡು ತೋರಿಸಿದ್ದೇ ತಡ.. ಮತ್ತಷ್ಟು ಸಿಟ್ಟು ಏರಿತು ಅನ್ನಿಸುತ್ತದೆ...
ಸಿಟ್ಟಾಗಿ ಫೈನ್ ಹಾಕಿಯೇ ಬಿಟ್ಟ..

ಕಿಟ್ಟು.. ನಿನ್ನ ಜರ್ನಲಿಸಂ ಜಾಣತನ ಇಲ್ಲಿ ತೋರಿಸಬೇಡ ಮಾರಾಯ ಎಂದ..
ಒಂಥರಾ ಎನ್ನಿಸಿತು ನನಗೆ...ಅವಮಾನ..
ಝಾಡಿಸೋಣ ಎನ್ನಿಸಿಕೊಂಡರೂ ಸುಮ್ಮನಾದೆ..

ಅರ್ಣಯವಲಯ ದಾಟಿ ಕೊಂಚ ಮುಂದಕ್ಕೆ ಹೋದಂತೆ ರಸ್ತೆಯಲ್ಲಿ ಮಾರ್ಗ ಬದಲಾಯಿಸಬೇಕು...
ರಾಷ್ಟ್ರೀಯ ಹೆದ್ದಾರಿಯನ್ನು ಪಕ್ಕಕ್ಕೆ ಬಿಟ್ಟು ಇನ್ನೊಂದು ಸೀದಾ ಸಾದಾ ಹಾದಿಯಲ್ಲಿ ಹೋಗಬೇಕು..
ಆ ಮಾರ್ಗ ಹಿಡಿದೆವು.. ಊಟಿಗೆ ಮಾಸಿಲಮಣಿಯ ಮಾರ್ಗದಲ್ಲಿ ಹೋಗುವಂತಹ ದಾರಿ ಅದು.
ನಡುವೆಯೆಲ್ಲೋ ಹುಲಿ ರಕ್ಷಿತಾರಣ್ಯದ ಬೋರ್ಡಿತ್ತು...

ಕರ್ನಾಟಕ ಸರ್ಕಾರ ದ ಚಿತ್ರವೂ ಇತ್ತು... ಅರೆ ತಮಿಳುನಾಡಿನಿಂದ ಮತ್ತೆ ಕರ್ನಾಟಕಕ್ಕೆ ಬಂದೆವೆ..? ಎಂದು ಕೊಂಡೆವು...
ಸ್ವಲ್ಪ ಹೊತ್ತಿನ ನಂತರ ಮಾಸಿಲ ಮಣಿ ಎನ್ನುವ ಕರ್ನಾಟಕ ವ್ಯಾಪ್ತಯ ಊರು ಸಿಕ್ಕಿತು. ಸಂಪೂರ್ಣ ತಮಿಳರೇ ಇದ್ದ, ತಮಿಳು ಬೋರ್ಡುಗಳೇ ಇರುವ ಕರ್ನಾಟಕದ ಊರು.. ಸರಿಯಾಗಿ ಅಭಿವೃದ್ಧಿ ಮಾಡಿದ್ದರೆ ತಾಲೂಕಾ ಕೇಂದ್ರವಾಗಬಹುದಿತ್ತು.. ಅಂತಹ ಊರದು... ಕರ್ನಾಟಕದ ಯಾವುದೇ ರಾಜಕಾರಣಿ ಆ ಊರಿಗೆ ಹೋಗಿದ್ದಿಲ್ಲವೇನೋ... ಇಬ್ಬನಿಯ ಹಾಲೆಯೊಳಗೆ ಹುದುಗಿಹೋಗಿತ್ತು...

ಅಲ್ಲಿ ಹೋಗಿ ಹೊಟೆಲೊಂದನ್ನು ಹುಡುಕಿ ಬಿಸ್ಸಿ ಬಿಸ್ಸಿ ಮಸಾಲೆ ಟೀ ಕುಡಿದು .. ತಿಂಡಿ ತಿಂದೆವು... ಸೂರ್ಯ ಇಣುಕಿದ್ದ..
ಯಾವುದೋ ಕಲ್ಲುಬಂಡೆಯ ಮೇಲೆ ಆಡೊಂದು ಬಿಸಿಲು ಕಾಯಿಸುತ್ತಿತ್ತು...
ಕಿಟ್ಟು ಕ್ಯಾಮರಾ ಹಿಡಿದ...

ತಕ್ಷಣ ಎದ್ದು ನಿಂತ ಆಡು.. ಮೈ ಕೊಡವಿ.. ಮೊಖವನ್ನೊಮ್ಮೆ ತಿರುಗಿ ಪೋಸ್ ಕೊಟ್ಟಿತು... ಪೋಟೋ ತೆಗೆದ ಕಿಟ್ಟು ಥ್ಯಾಂಕ್ಸ್ ಎಂದರೆ ಆಡು ಕೇಳುತ್ತದೆಯೇ..? ಬೆನ್ನತ್ತಿತು... ಕೊನೆಗೆ ಬಾಳೆ ಹಣ್ಣಿನ ಹಪ್ತಾ ವಸೂಲಿ ಮಾಡಿ ಜಾಗ ಖಾಲಿ ಮಾಡಿತು...

ಮಾಸಿಲಮಣಿಯಲ್ಲಿ ನಮ್ಮದೂ ಪೋಟೋ ಸೆಷನ್ ನಡೆಯಿತು...
ಬೈಕೇರಿ ಊಟಿಯ ಗುಡ್ಡವನ್ನು ಹತ್ತಲು ಅನುವಾಗಿ ಹೊರಟೆ..
(ಮುಂದುವರಿಯುತ್ತದೆ..)



ವಿಸ್ಮಯಗಳ ಗೂಡು ಈ ಮಲೆನಾಡು ಭಾಗ -3

    ಮಲೆನಾಡಿಗೆ ಮಲೆನಾಡೇ ಸಾಟಿ. ಇಲ್ಲಿನ ವೃಕ್ಷ ಸಂಕುಲ, ಪಕ್ಷಿ, ಮೃಗ ಸಮೂಹ ಇವುಗಳಿಗೆ ಮಲೆನಾಡನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಇಲ್ಲಿನ ಕಾನನ-ತಾಣಗಳೆಲ್ಲ ನಿತ್ಯ ಹಸಿರು ಹಸಿರು.
    ಮಲೆನಾಡೇ ಹಾಗೆ ದೂರದಿಂದ ನೋಡಿದರೆ ಅರ್ಥವೇ ಆಗದು. ಒಳಹೊಕ್ಕರೆ ವಿಸ್ಮಯ ಲೋಕ. ಇಲ್ಲಿ ಸಿಕಾಡಗಳ ಮಧುರಾತಿ ಮಧುರ ಉಲಿಯಿದೆ. ರಕ್ತ ಹೀರುವ ಉಂಬಳಗಳ ಜೊತೆಯಿದೆ. ವಿಶಿಷ್ಟ ಎನ್ನಿಸುವ ಬಸವನ ಹುಳುಗಳಿವೆ. ಮಂಗಟ್ಟೆ ಹಕ್ಕಿಯ ಶ್ರೀಮಂತ ತಾಣವೂ ಇದೇ ಮಲೆನಾಡು. ಇಲ್ಲಿ ಬಣ್ಣಬಣ್ಣಗಳ ಅಣಿಬೆಗಳಿವೆ. ಮಿಗಿಲಾಗಿ ಹಸುರು ಎಲೆಯನ್ನೂ ಮರೆಸುವ ಹಸುರುಳ್ಳೆ ಹಾವಿದೆ. ಪ್ರೀತಿಯ, ದುರ್ಬೀನಿಗೆ ಮಾತ್ರ ಕಾಣಿಸುವಂತಹ ದಾಟುಬಳ್ಳಿ ಹಾವಿದೆ.
    ಜೊತೆ ಜೊತೆಗೆ ಇಲ್ಲಿ ನಮ್ಮನ್ನೇ ಆಕರ್ಷಿಸಬಲ್ಲಂತಹ ನಿಸರ್ಗ ಧಾಮಗಳಿವೆ. ಜಲಪಾತಗಳಿವೆ. ಮಹಾರಾಷ್ಟ್ರದಿಂದ ಕೇರಳದವರೆಗೆ ಹಬ್ಬಿರುವ ಪಶ್ಚಿಮ ಘಟ್ಟದ ಸೆರಗಿನಲ್ಲಿಯೇ ಇರುವ ಮಲೆನಾಡು ಎಂದರೆ ಮಲೆಗಳ ನಾಡು. ಭೂದೇವಿಯ ಮೊಲೆ ನಾಡು. ಇದೇ ಜೀವಸದೃಷ ಅಮೃತಸವಿಯನ್ನೂ, ಜೀವರಸವನ್ನೂ ಹಿಡಿದಿಟ್ಟ ತಾಣ.
    ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಮಲೆನಾಡಿಗೆ ಕಿರೀಟದಂತೆ ಕಂಡರೆ ಬಳುಕುವ ನದಿಗಳು ಹಳ್ಳಗಳು ಮಲೆನಾಡಿನ ಆಭರಣಗಳು. ಅಲ್ಲಲ್ಲಿ ಕಾಣುವ ಜಲಪಾತ ಆಭರಣದ ಹೊಳೆಯುವ ಮಣಿಗಳು. ಹಸಿರು ಕಾನನವೇ ಮಲೆನಾಡಿನ ಸೀರೆ. ಗಿರಿ ಕಂದರಗಳು ಮೇಳೈಸಿ, ಮೆರೆವ ಈ ನಾಡೇ ವಿಸ್ಮಯಗಳ ಗೂಡು. ಭುವಿಯ ಸ್ವರ್ಗ. ಬೊಮ್ಮನ ಕಲ್ಪನೆಯ ಪ್ರದೇಶ.
    ಯಾಕೋ ಗೊತ್ತಿಲ್ಲ....
    ಹುಟ್ಟುವಿಯಾದರೆ
    ಇಲ್ಲೇ ಇನ್ನು...
    ಈ ಮಲೆನಾಡಲ್ಲೇ ಅನ್ನು...
    ಎಂದು ಹಾಡೋಣ ಅನ್ನಿಸುತ್ತಿದೆ. ಕವಿ ದಿನಕರದ ಹಾಡುಗಳು ಹಾಗೇ ಸುಮ್ಮನೆ ಕಿವಿಯ ಮೇಲೆ ಸುಳಿದು ಹೋಗುತ್ತವೆ..
    ಬ್ರಹ್ಮ ಪುರಸೊತ್ತು ಸಿಕ್ಕಾಗ ಬಿಡಿಸಿದ ಚಿತ್ರವೇ ಮಲೆನಾಡು ಇರಬೇಕು. ಅಷ್ಟು ಸುಂದರವಾಗಿದೆ. ಸೊಗಸಾಗಿ ಮೂಡಿಬಂದಿದೆ. ಈ ನಾಡಿನಲ್ಲಿ ಭೀಮ, ಪರಶುರಾಮ ಅಡ್ಡಾಡಿದ್ದಾರಂತೆ. ಅಲ್ಲಲ್ಲಿ ಕುರುಹಗಳನ್ನು ಬಿಟ್ಟುಹೊಗಿದ್ದು ಈಗಲೂ ನಮಗೆ ಕಾಣಸಿಗುತ್ತದೆ. ದೇವತೆಗಳು ಇಲ್ಲೆಲ್ಲೋ ಬಂದು ಅಡಗಿ ಕುಳಿತಂತೆ ನಮಗೆ ಭಾಸವಾಗುತ್ತದೆ.
    ಇಲ್ಲಿ ನಿಸರ್ಗ ಮಾತೆ ನಿಂತು ಮೆರೆದಿದ್ದಾಳೆ. ಮೆರೆದು ನಲಿದಿದ್ದಾಳೆ. ನಲಿದು ಕುಣಿದಿದ್ದಾಳೆ. ಕುಣಿದು ದಣಿದಿದ್ದಾಳೆ. ದಣಿದು ಮೈಚೆಲ್ಲಿ ಮಲಗಿಬಿಟ್ಟಿದ್ದಾಳೆ. ಆಕೆಗೆ ಎಚ್ಚರವೇ ಇಲ್ಲ. ಅಂತಹ ಮೈಮರೆವಿನಲ್ಲಿಯೂ ಚೆಲುವು ಚೆಲ್ಲಿ ನಿಂತಿದೆ..
    ಯಾಕೋ ಗೊತ್ತಿಲ್ಲ.. ಇಂತಹ ಮಲೆನಾಡಿನ ನಡುವೆ ಕಳೆದುಹೋಗಬೇಕು ಎನ್ನಿಸುತ್ತಿದೆ. ಗವ್ವೆನ್ನುವ ಕಾಡುಗಳು, ಟ್ವಂಯ್ ಟ್ವಂಯ್ ಎಂದು ಕೂಗುವ ಸಿಕಾಡಗಳ ಸದ್ದಿನ ನಡುವೆ ನನ್ನನ್ನೇ ನಾನು ಮರೆತು ಬಿಡಬೇಕು ಎನ್ನಿಸುತ್ತಿದೆ. ಅದ್ವಾವನೋ ಅಧಿಕಾರಿ.. ಬ್ರಿಟೀಷರವನು.. ಉತ್ತರಕನ್ನಡದ ಕಾಡುಗಳನ್ನೆಲ್ಲ ಪಾದಯಾತ್ರೆಯ ಮೂಲಕ ಸುತ್ತಿದ್ದನಂತೆ.. ನನಗೂ ಅದೇ ಆಸೆ.. ಶಿವಾನಂದ ಕಳವೆಯಂತೆ ಮತ್ತೊಮ್ಮೆ ಕಾಡು ಮೇಡಿನ ಜಾಡು ಹಿಡಿದು ಸಾಗಬೇಕು.. ಆಗಾಗ ಕಣ್ಣೆದುರು ಬರುವ ಮೃಗ ಸಮೂಹಕ್ಕೆ ಹಾಯ್ ಹೇಳಿ ಬರಬೇಕು..ಅನ್ನಿಸುತ್ತಿದೆ..
    ಭಯವಾಗುತ್ತಿದೆ.. ವಿಸ್ಮಯಗಳ ಗೂಡಿಗೆ ಯಾರದ್ದೂ ದೃಷ್ಟಿ ತಾಗಿದಂತಿದೆ. ಒಂದಾದ ಮೇಲೆ ಒಂದರಂತೆ ಯೋಜನೆಗಳ ಶಾಪ ಬಂದೆರಗುತ್ತಿದೆ. ಯೋಜನೆಗಳ ಭಾರಕ್ಕೆ ಕಾಳಿ ನದಿ ಸುಸ್ತಾಗಿದೆ. ಭದ್ರಾ ಬಣ್ಣಕಳೆದುಕೊಂಡಿದ್ದಾಳೆ. ತುಂಗಿ ಅಳುತ್ತಿದ್ದಾಳೆ. ಶರಾವತಿಯ ಚೆಲುವು ಮರೆತಿದೆ. ಇನ್ನುಳಿದವುಗಳು ಅಘನಾಶಿನಿ, ನೇತ್ರಾವತಿ, ಗಂಗಾವಳಿ.. ಮುಂತಾದ ಮೂರೋ ನಾಲ್ಕೋ ನದಿಗಳು... ಅವುಗಳ ಕಡೆಗೂ ಆಡಳಿತ ಶಾಹಿಗಳ ಕಣ್ಣು ಬಿದ್ದಂತಿದೆ. ಅಘನಾಶಿನಿಗೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆಗೆ ತೊಡಗುವ ಹವಣಿಕೆ ಅವರದ್ದು. ನೇತ್ರಾವತಿಯನ್ನೇ ತಿರುಗಿಸಿ ಬಿಡುವ ಹೂಟವೂ ಅವರದ್ದು. ಆದರೆ ಬಲಿಯಾಗುವುದು ಮಾತ್ರ ಮಲೆನಾಡು. ಇಲ್ಲಿನ ಜೀವಿ ಸಂಕುಲ.
    ಈಗಲೇ ಹಲವಾರು ಯೋಜನೆಗಳಿಂದ ಬೆಂದಿದೆ ಮಲೆನಾಡು. ಇನ್ನೆಷ್ಟು ಯೋಜನೆಗಳು ಬೇಕೋ.. ಮಲೆನಾಡಿನ ಒಡಲು ಭೂದೇವಿಯ ಗುಡಿ. ಅದನ್ನು ಹಾಳುಮಾಡುವ ಯತ್ನ ನಡೆಯುತ್ತಿದೆ. ಅಧಿಕಾರ ಶಾಹಿಗಳಿಗೆ ಧಿಕ್ಕಾರ ಹೇಳೋಣ. ಮಲೆನಾಡಿನ ಮಡಿಲಲ್ಲಿ ನನಗೆ ವಾಸಸ್ಥಾನ ನೀಡಿ ಪೋಷಿಸುತ್ತಿರುವಾಕೆಗೆ ಥ್ಯಾಂಕ್ಸ್ ಹೇಳೋಣ.

Monday, May 27, 2013

ಅಂತರ



ಗೊತ್ತಿರಬಹುದು...
ಬಹುತೇಕ ಪ್ರೇಮದ
ಚಲನ ಚಿತ್ರಗಳೆಲ್ಲವೂ
ಮದುವೆಯೊಂದಿಗೆ ಕೊನೆಯಾಗುತ್ತವೆ...!!!

ಆದರೆ, ಮದುವೆಯ ನಂತರದ ದೃಶ್ಯ
ಇಲ್ಲವೇ ಇಲ್ಲ...! ಯಾಕೀಥರಾ..?
ಏಕೆಂದರೆ.., ಪ್ರೇಮ ಚಿತ್ರಗಳೆಲ್ಲ
ಸಂತೋಷದಾಯಕ.. ಸಿಹಿ ಕನಸು..!!
ಆದರೆ ಮದುವೆಯ ಕಥೆ
ಹಾಗಲ್ಲ.. ಕಠು ವಾಸ್ತವ..!!

ಹೀಗಾಗಿ, ಪ್ರೇಮ ಚಿತ್ರವನ್ನು
ಸುಲಭವಾಗಿ ನಿರ್ಮಿಸುವಾತರು
ಮದುವೆ ಕಥೆಗೆ ಮಾತ್ರ
ಹೋಗಲಾರರು..!! ಏಕಂದರೆ ಅದು
ಕಹಿ, ಭಯಾನಕ..!!

ಇದೇ ಪ್ರೇಮಕ್ಕೂ-ಸಂಸಾರಕ್ಕೂ
ನಡುವಿರುವ ವ್ಯತ್ಯಾಸ.. ಅಂತರ..!

=
(ಇದನ್ನು ಬರೆದಿದ್ದು ದಂಟಕಲ್ಲಿನಲ್ಲಿ ದಿನಾಂಕ 16-05-2008ರಂದು)

Saturday, May 25, 2013

ಕನಸೆಂಬ ಭ್ರಮಿತ ಮಾಯಾಲೋಕದಲ್ಲಿ ಒಂದು ಸುತ್ತು..

ಕನಸೆಂಬ ಭ್ರಮಿತ ಮಾಯಾಲೋಕದಲ್ಲಿ 

ಒಂದು ಸುತ್ತು..

ಬೇಕಾದರೆ ನೀವು ನೆನಪಿಟ್ಕೊಂಡು ನೋಡಿ. ನಿಮ್ಮ ಬಳಿ ಜಪ್ಪಯ್ಯ ಅಂದ್ರೂ ಆಗೋದಿಲ್ಲ. ಅದೇನು ಅಂದ್ರೆ ರಾತ್ರಿ ಮಲಗಿದಾಗ ಕನಸಿನ ಮಧ್ಯೆ ಯಾವುದೋ ಹಾವೋ, ಹುಲಿಯೋ ನಿಮ್ಮನ್ನು ಬೆನ್ನಟ್ಟಿ ಬರ್ತಿದೆ ಎನ್ನುವಾಗ ಓಡಿ ಹೋಗಲು ಯತ್ನಿಸುವುದು. ಊಹೂಂ.. ಆಗುವುದೇ ಇಲ್ಲ. ಹಾಗೆಂದು ರಾತ್ರಿ ಬೀಳುವ ಕನಸಿನಲ್ಲಿ ನಾವು ನಡೆದಾಡಬಹುದು. ಆದರೆ ಓಡಲು ಮಾತ್ರ ಆಗುವುದೇ ಇಲ್ಲ.. ಕಾಲು ಕಟ್ಟಿಹಾಕಿದಂತಹ ಅನುಭವ. ಜಪ್ಪಯ್ಯ ಅಂದರೂ ಓಡಲಿಕ್ಕೆ ಆಗುವುದೇ ಇಲ್ಲ.. ಕನಸಿನಲ್ಲಿ ಕಾಲು ಬರುವುದೇ ಇಲ್ಲ..
    ಇಂತಹ ಚಿತ್ರ ವಿಚಿತ್ರ, ವಿಲಕ್ಷಣ ಅನುಭವವನ್ನು ನೀಡುವ ಕನಸೆಂಬ ಭ್ರಮಿತ ಮಾಯಾಲೋಕದಲ್ಲಿ ಸುತ್ತು ಹಾಕಿದಾಗ ಅದು ನಮ್ಮನ್ನು ಸೂಜಿಗಲ್ಲು ಸೆಳೆಯುವಂತೆ ಸೆಳೆಯುತ್ತದೆ. ಈ ಮನದಾಳದ ಗರ್ಭದೊಳಗಿನ ಕನಸುಗಳಲ್ಲಿ ಕೆಲವು ಮಧುರವಾಗಿದ್ದರೆ, ಸಂತಸವನ್ನು ಉಂಟುಮಾಡುವಂತಿದ್ದರೆ ಉಳಿದ ಹಲವು ಭೀಖರತೆಯಿಂದ ಕೂಡಿರುತ್ತದೆ. ರೌದ್ರಮಯವಾದುದು ಹಲವು. ಕೆಲವು ಅರ್ಥವತ್ತಾದರೆ ಮತ್ತೆ ಕೆಲವುಗಳಿಗೆ ತಲೆಬುಡವಿರುವುದಿಲ್ಲ.
    ನಮಗೆ ಬೀಳುವ ಕನಸುಗಳಲ್ಲಿ ಶೇ.99ರಷ್ಟು ನೆನಪಿನಲ್ಲಿ ಉಳಿಯುವುದಿಲ್ಲವೆಂದು ಯಾವುದೋ ಮಾನಸಿಕ ಶಾಸ್ತ್ರಜ್ಞರು ಹೇಳಿದ್ದಾರೆ. ನೆನಪಿರುವ ಕನಸುಗಳೇ ದಿನಕ್ಕೆ ಐಆದಾರು ಇರುತ್ತವೆ. ಅಂದರೆ ನಮಗೆ ಒಂದು ದಿನದಲ್ಲಿ ಅದೆಷ್ಟು ಕನಸು ಬೀಳಬಹುದು ಎಂಬುದನ್ನು ನೀವೇ ಊಹೆ ಮಾಡಿ ನೋಡಿ..!!
    ಇಂತಹ ಕನಸುಗಳಲ್ಲೇ ನಾನು ಮತ್ತೊಂದೆರಡು ಅನುಭವಗಳನ್ನು ಪಡೆದಿದ್ದೇನೆ. ಅದೇನೆಂದರೆ ಕೆಲವು ಸಲ ಕನಸು ಬಿದ್ದಿರುತ್ತದೆ. ಆ ನಂತರ ಎಷ್ಟೋ ಕಾಲದ ನಂತರ ಆ ಘಟನೆ ನಮ್ಮ ಬದುಕಿನಲ್ಲಿ ನಿಜವಾಗಿಯೂ ಘಟಿಸುತ್ತದೆ. ಇಂತಹ ಕನಸುಗಳು ನಾವು ನೋಡಿರದ ನಮ್ಮ ಭವಿತವ್ಯವನ್ನು ಮುಂಚಿತವಾಗಿ ತಿಳಿಸುವ ಕೆಲಸವನ್ನು ಮಾಡುತ್ತವೆ. ಬಲ್ಲವರು ಇದನ್ನು ಸಿಕ್ಸ್ತ್ ಸೆನ್ಸ್ ಎನ್ನಬಹುದೇನೋ.. ಕೆಲವು ಸಲ ನಿದಿರೆಯ ಮಧ್ಯ ಸುಳಿದು ಬರುವ ಈ ಕನಸುಗಳು ಮುಂದಾಗುವ ದುರಂತಕ್ಕೆ ಮುನ್ಸೂಚನೆ ನೀಡಿದ್ದೂ ಇದೆ.
    ಕನಸಿನ ಕುರಿತು ಕೆಲವು ಮೂಢ ನಂಬಿಕೆಗಳೂ ಇವೆ. ಆದರೆ ಆ ಮೂಢನಂಬಿಕೆಗಳು ಸತ್ಯವಾಗಿದ್ದೂ ಇವೆ. ಅದೆಂದರೆ ನಮ್ಮ ಹಿರಿಯರು ಕನಸಿನಲ್ಲಿ ನಮ್ಮ ಹಲ್ಲು ಉದುರಿದಂತೆ ಕಂಡರೆ ಹಿರಿಯರು ಸಾಯುತ್ತಾರೆಂದು ದವಡೆ ಹಲ್ಲು ಬಿದ್ದರೆ ನಮ್ಮ ಕುಟುಂಬದವರೆಂದು ಹೇಳುತ್ತಾರೆ. ಎಡ ದವಡೆ ಹಲ್ಲಾದರೆ ತಾಯಿಯ ಕುಟುಂಬದವರು, ಬಲ ದವಡೆ ಹಲ್ಲಾದರೆ ತಂದೆಯ ಕುಟುಂಬದವರು ಎನ್ನುವ ನಂಬಿಕೆಗಳಿವೆ. ಹಲ್ಲುಗಳು ಹಾಳಾದಂತೆ ಕಂಡರೆ ಕುಟುಂಬಸ್ತರು ಖಾಯಿಲೆ ಬೀಳುತ್ತಾರೆ ಎನ್ನುವುದರ ಸೂಚನೆ ಎಂದು ಹೇಳುವವರನ್ನು ಕೇಳಿದ್ದೇನೆ. ಮುಂದಿನ ಬಾಚಿ ಹಲ್ಲು ಉದುರಿದಂತೆ ಕಂಡರೆ ತಂದೆ ತಾಯಿ ಸಾವಿನ ಮುನ್ಸೂಚನೆ ಎನ್ನುವವರಿದ್ದಾರೆ. ತೆಂಗಿನ ಮರ ಬಿದ್ದಂತೆ ಕಂಡರೆ ಊರಿನಲ್ಲಿ ಅತ್ಯಂತ ಹಿರಿಯರು ಸಾವನ್ನಪ್ಪುವುದು, ಹುಲಿ ಕಂಡರೆ ಅದೃಷ್ಟದ ಸಂಕೇತ, ದನ ಕಂಡರೆ ಶುಭ, ಹೋರಿ ಹೊರುತ್ತ ಬಂದಂತೆ ಕಂಡರೆ ದುಷ್ಟ ಗೃಹಗಳ ಕಾಟಹೀಗೆ ಅನೇಕ ಬಗೆಯ ನಂಬಿಕೆಗಳನ್ನು ಹೇಳಿದವರನ್ನು ಕಂಡಿದ್ದೇನೆ. ವಿಚಿತ್ರವೋ, ಕಾಕತಾಳೀಯವೋ ಮತ್ತೇನೆನ್ನಬೇಕೋ ಗೊತ್ತಿಲ್ಲ.. ಇವುಗಳಲ್ಲಿ ಕೆಲವಷ್ಟು ನಿಜವಾಗಿದೆ.
    ನನ್ನ ನೆನಪಿನಲ್ಲಿ ಉಳಿದಂತಹ ಕೆಲವು ವಿಶಿಷ್ಟ, ವಿಕ್ಷಿಪ್ತ, ವಿಚಿತ್ರ ಕನಸುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಸ್ವಾರಸ್ಯ ತರಬಹುದು ಓದಿ. ಒಮ್ಮೆ ಒಂದು ದಿನ ಇದ್ದಕ್ಕಿದ್ದಂತೆ ನಾನು ಓದುತ್ತಿದ್ದ ಹೈಸ್ಕೂಲನ್ನೇ ನಾನು ಬಿಟ್ಟು ಬಿಟ್ಟಿದ್ದೆ. ಖುಷಿ ಆಗಿ ಬಿಟ್ಟಿತ್ತು. ಆಗ.. ಮುಂಜಾನೆ ಯಾರೋ ನನ್ನನ್ನು ಎಚ್ಚರಿಸಿದಾಗಲೇ ಇದು ನನ್ನ ಕನಸು ಎಂಬ ಅರಿವು ನನಗಾದದ್ದು.
    ಇನ್ನೊಮ್ಮೆ ನನ್ನನ್ನು ಬೆನ್ನಟ್ಟಿಕೊಂಡು ಬಂದ ಹಾವೊಂದು ನನ್ನನ್ನು ಕಚ್ಚಿಬಿಟ್ಟಿತು. ಓಡಲು ಕಾಲೇ ಬರದಂತಾದ ನಾನು ಆ ಕ್ಷಣವೇ ಸತ್ತುಹೋದೆ. ಮತ್ತೆ ಯಥಾ ಪ್ರಕಾರ ಬೆಳಗಿನ ಸವಿ ಮುಂಜಾವಿನಲ್ಲಿ ಅಮ್ಮ ನನ್ನನ್ನು ಎಬ್ಬಿಸಿದಾಗಲೇ ನಾನು ವಾಸ್ತವಕ್ಕೆ ಇಳಿದಿದ್ದು. ಬೆಳಿಗ್ಗೆ ನನ್ನನ್ನು ಎಬ್ಬಿಸಲು ಅಮ್ಮ ಒಂದೆರಡು ಕೂಗು ಹಾಕಿದಾಗಲೆಲ್ಲ `ನಾನು ಸತ್ತು ಹೋಗಿದ್ದೇನೆ ನನ್ನನ್ನು ಯಾರೂ ಕರೆಯಬೇಡಿ.. ನಾನು ಮರಳಿ ಬರುವುದಿಲ್ಲ..' ಎಂದು ಕನವರಿಸಿಬಿಟ್ಟಿದ್ದೆನಂತೆ.. ಈಗಲೂ ಅಮ್ಮ ಇದನ್ನು ಹೇಳಿ ನಗುತ್ತಿರುತ್ತಾಳೆ.
    ಇದು ಕೇವಲ ಒಂದೆರಡು ಉದಾಹರಣೆಗಳಷ್ಟೆ. ಇವನ್ನು ನೆನಪಿನ ಬುತ್ತಿಯಿಂದ ಮೊಗೆದಷ್ಟೂ ಮತ್ತೆ ಮತ್ತೆ ಕೊನೆಯಿಲ್ಲದಂತೆ ನಮಗೆ ಸಿಗುತ್ತಲೇ ಇರುತ್ತವೆ. ಇಷ್ಟರ ನಡುವೆ ಮರೆತಿದ್ದ ವಿಷಯ ಎಂದರೆ ಕಸನುಗಳು ಬೆಳಗಿನ ಜಾವದಲ್ಲಿ ಮಾತ್ರ ಮೂಡುವಂತದ್ದಲ್ಲ. ಅದು ರಾತ್ರಿಯಿಡೀ ಬಿದ್ದಿರುತ್ತವೆ. ಆದರೆ ನಮಗೆ ನೆನಪಿರುವ ಕನಸುಗಳು ಬೆಳಗಿನ ಜಾವದಲ್ಲಿ ಬಿದ್ದಂತವುಗಳು ಮಾತ್ರ. ಕನಸು ಪೂರ್ತಿಯಾಗುವುದರೊಳಗೆ ನಮ್ಮನ್ನು ಎಚ್ಚರಿಸಿದರೆ ಅವು ನೆನಪಿನಲ್ಲಿ ಉಳಿಯುತ್ತವೆ ಎಂದು ಹೇಳುತ್ತಾರೆ. ಇದು ನಿಜವಿರಬೇಕು. ಬೆಳಗಿನ ಜಾವದಲ್ಲಿ ಸವಿಗನಸು ಕಾಣುತ್ತಿರುವಾಗಲೇ ಯಾರಾದರೂ ನಮ್ಮನ್ನು ಎಚ್ಚರಿಸುತ್ತಾರೆ. ಕನಸು ನೆನಪಿರುತ್ತದೆ.
    ಇನ್ನೂ ಒಂದು ಮುಖ್ಯ ಸಂಗತಿ ಹೇಳಲೇ ಬೇಕು. ಅರ್ಧ ಆಗಿದ್ದಾಗ ಅಥವಾ ಕನಸು ಪೂರ್ತಿಯಾದಾಗ ಎಚ್ಚರಾದಾಗ ನಮಗೆ ಕನಸು ನೆನಪಿನಲ್ಲಿರುತ್ತದೆ ಎಂದೆನಲ್ಲ ಇದೊಂಥರಾ ಕಂಪ್ಯೂಟರಿನಲ್ಲಿ ಒಂದು ಪ್ರೋಗ್ರಾಂ ಸೇವ್ ಮಾಡಿದ ನಂತರವೇ ಇನ್ನೊಂದಕ್ಕೆ ಹೋಗಬೇಕಲ್ಲಾ ಹಾಗೆ. ಮನುಷ್ಯ ನಿದಿರೆ ಎಂಬ ಮದಿರೆಯ ತೆಕ್ಕೆಗೆ ಜಾರಿದ ಕೂಡಲೇ ಕನಸ್ಸೆಂಬ ಶರಾಬು ನಮ್ಮನ್ನು ಅಮಲುಗಡಲಲ್ಲಿ ಮುಳುಗಿಸಿಬಿಡುತ್ತದೆ. ಇದೊಂಥರಾ ಚಲನಚಿತ್ರವಿದ್ದಂತೆ.. ಮನಸ್ಸೆಂಬ ಪ್ರೊಜೆಕ್ಟರಿನ ಮೂಲಕ ಹಾದು ಬರುವ ಕನಸು ಕಣ್ಣಿನ ಪರದೆಯ ಮೇಲೆ ಮೂಡಿ ಓಡಾಡುತ್ತವೆ..
    ಇನ್ನೊಂದ್ವಿಷಯ.. ನಿಮ್ಮಲ್ಯಾರಿಗೆ ಈ ಅನುಭವ ಆಗಿದೆಯೋ ಗೊತ್ತಿಲ್ಲ.. ನಾವು ಕನಸ್ಸನ್ನು ಕಾಣುತ್ತಿದ್ದಾಗ ಕನಸಿನಲ್ಲಿ ಯಾರೋ ಏನನ್ನೋ ಹೇಳಿದರು ಅಥವಾ ಬೈದರು ಎಂದು ಇಟ್ಟುಕೊಳ್ಳಿ.. ಹೊರಗೆ ಅದೇ ಘಟನೆ ಜರುಗಿರುತ್ತದೆ.. ಅಂದರೆ ಹಗಲು ವೇಳೆ ಯಾವುದಾದರೂ ಜನಜಂಗುಳಿ ವಾತಾವರಣದಲ್ಲಿ ಮಲಗಿದ್ದರೆ ನಮ್ಮ ಕನಸ್ಸಿನಲ್ಲಿ ಆ ಜನಜಂಗುಳಿಯ ಮಾತುಗಳು ಕನಸ್ಸಿನಲ್ಲಿಯ ಪಾತ್ರಗಳಿಗೆ ತಕ್ಕಂತೆ ಆಡುತ್ತಿರುತ್ತವೆ.. ಹೊರಗೆ ಯಾರೋ ಆಡಿದ ಮಾತು ಕನಸ್ಸಿನಲ್ಲಿಯ ಪಾತ್ರಗಳ ಬಾಯಿಯ ಮೂಲಕ ಬಂದಂತಹ ವಿಚಿತ್ರ ಅನುಭವ ನೀಡುತ್ತವೆ..
    ಇಂತಹ ಅನುಭವಗಳು ನನಗಾಗಿವೆ.. ನನಗೆ ಮಾತ್ರವಲ್ಲ ನಿಮ್ಮಲ್ಲಿ ಕೆಲವರಿಗೂ ಆಗಿರಬಹುದು.. ಹಗಲುಗನಸ ಹೊರತಾಗಿ ನಿಮಗೆ ಅನೇಕ ವಿಶಿಷ್ಟ, ವಿಕ್ಷಿಪ್ತ, ವಿಚಿತ್ರ ಕನಸುಗಳು ಎಡಬಿಡದೇ ನಿಮ್ಮ ಮನಸನ್ನು ಕಾಡಿರಲೂಬಹುದು.  ಇಂತಹ ಕನಸಿನ ಬುತ್ತಿಯನ್ನು ನೀವು ನಿಮ್ಮ ಆತ್ಮೀಯರಲ್ಲಿ ಅಥವಾ ಇನ್ಯಾರಲ್ಲಿಯೋ ಹಂಚಿಕೊಂಡಾಗ ಮಾತ್ರ ಅದೊಂದು ಹೊಸದಾದ ರಸಘಟ್ಟವನ್ನು ಕಟ್ಟಿಕೊಡಬಲ್ಲದು. ನವಿರು ಭಾವನೆಯನ್ನು ಇದು ಕಟ್ಟಿಕೊಟ್ಟು ರಸಸ್ವಾದ ನೀಡಬಲ್ಲದು.. ನೆನಪಿಟ್ಟು ಹೇಳಿನೋಡಿ... ಅದರ ಮಜಾನೇ ಬೇರೆ.