Thursday, April 18, 2019

ಅನುರಕ್ತ (ಕಥೆ-6)


ಮೇಲ್ನೋಟಕ್ಕೆ ಸೀದಾ ಸಾದಾ ಹಳ್ಳಿಯಂತೆ ಕಂಡಿತು ವಿಜೋಯ್ ನಗರ. ನಾವು ಮುಂದೆ ಮುಂದಕ್ಕೆ ಹೆಜ್ಜೆ ಇಟ್ಟಂತೆಲ್ಲ ಬಿಸಿಲು ಕಾಯಿಸಿಕೊಳ್ಳುತ್ತಿದ್ದ, ಜಾಗಿಂಗ್ ಮಾಡುತ್ತಿದ್ದ, ವ್ಯಾಯಾಮ ಮಾಡುತ್ತಿದ್ದ ನಿವೃತ್ತ ಮಿಲಿಟರಿ ಅಧಿಕಾರಿಗಳು ಕಾಣಿಸಿಕೊಂಡರು. ನಾವು ಅಪರಿಚಿತರಾಗಿದ್ದರೂ ಆಶ್ನಾಳನ್ನು ನಮ್ಮ ಜತೆ ನೋಡಿ ಕುತೂಹಲಯುಕ್ತ ನಗುವನ್ನು ಅವರು ಮುಖದ ಮೇಲೆ ತೋರ್ಪಡಿಸಿ ಮುಂದಕ್ಕೆ ಸಾಗುತ್ತಿದ್ದರು.

ನಮ್ಮನ್ನು ನಡೆಸಿಕೊಂಡು ಹೋಗುತ್ತಿದ್ದ ಆಶ್ನಾ ಯಾವು ಯಾವುದೋ ರಸ್ತೆಯಲ್ಲಿ, ಅಂಕುಡೊಂಕಾಗಿ ನಮ್ಮನ್ನು ಸುತ್ತಿಸಿ ಒಂದು ಮನೆಯ ಎದುರು ನಮ್ಮನ್ನು ಕರೆದೊಯ್ದು ಅಸ್ಸಾಮಿ ಭಾಷೆಯಲ್ಲಿ ದೊಡ್ಡದಾಗಿ ಕರೆದಳು. ಮನೆಯಿಂದ ಮಧ್ಯಮ ವಯಸ್ಸಿನ ಒಬ್ಬರು ವ್ಯಕ್ತಿ ಹೊರಬಂದು ಆಶ್ನಾಳ ಕಡೆಗೆ ಸಂಭ್ರಮದಿಂದ ನೋಡಿದರು. ಆಶ್ನಾ ಹಾಗೂ ವ್ಯಕ್ತಿಯ ನಡುವೆ ಕೊಂಚ ಮಾತುಕತೆ ನಡೆಯಿತು. ನಂತರ ನಮ್ಮ ಕಡೆಗೆ ಅವರು ತಿರುಗಿದರು. ಆಶ್ನಾ ವ್ಯಕ್ತಿಗೆ ನಮ್ಮ ಪರಿಚಯ ಮಾಡಿಕೊಟ್ಟರು. ನಂತರ ಮನೆಯೊಳಕ್ಕೆ ನಾವು ಕಾಲಿರಿಸಿದೆವು.

ಮನೆಯ ಕೆಲವು ಸದಸ್ಯರು ಹೊರಕ್ಕೆ ಬಂದರು. ಒಂದುಬ್ಬರು ನಮಗೆ ಅದೇನೇನೋ ತಿಂಡಿಯನ್ನೋ, ಬೇರೆ ಇನ್ನೇನನ್ನೋ ತಂದುಕೊಟ್ಟರು. ಆಶ್ನಾ ಅದೆಲ್ಲವನ್ನೂ ತೆಗೆದುಕೊಳ್ಳುವಂತೆ ಹೇಳಿ ಒಳಕ್ಕೆ ನಡೆದಳು. ನಾವು ಮೌನವಾಗಿ ಅವರು ಕೊಟ್ಟಿದ್ದನ್ನು ತಿನ್ನುತ್ತ ಕುಳಿತೆವು.

ಮನೆಯ ವ್ಯಕ್ತಿಗಳು ನಮ್ಮ ಬಳಿ ಬಂದು ಅಸ್ಸಾಮಿ ಭಾಷೆಯಲ್ಲಿ ಮಾತನಾಡುತ್ತಿದ್ದರಾದರೂ ನಮಗೆ ಸರಿಯಾಗಿ ಅರ್ಥವಾಗಲಿಲ್ಲ. ನಾವು ನಗುವಿನ ಮೂಲಕವೋ, ತಲೆ ಅಲ್ಲಾಡಿಸುವ ಮೂಲಕವೋ ಉತ್ತರ ನೀಡಿದೆವು. ಕೆಲ ಸಮಯದ ನಂತರ ವಾಪಾಸು ಬಂದ ಆಶ್ನಾ ಮನೆಯ ಎಲ್ಲ ಸದಸ್ಯರನ್ನು ನನಗೆ ಪರಿಚಯಿಸಿದಳು. ನಾವು ಎಲ್ಲಿಂದ ಬಂದೆವು ಎಂಬುದನ್ನೂ, ಯಾಕಾಗಿ ಬಂದಿದ್ದೇವೆ ಎಂಬುದನ್ನೂ ಹೇಳಿದಳು. ಮನೆಯ ಕೆಲವು ವ್ಯಕ್ತಿಗಳು ನಾವು ಬಂದ ಕಾರಣವನ್ನು ಕೇಳಿ ನಮ್ಮನ್ನು ವಿಚಿತ್ರವಾಗಿ ನೋಡಲು ಆರಂಭಿಸಿದರು. ಅಲ್ಲಿಂದ ಇಲ್ಲಿಗೆ ಯಾವುದೋ ಸಂದರ್ಭದಲ್ಲಿ ಪ್ರೀತಿಸಿದ ಹುಡುಗಿಯನ್ನು ಹುಡುಕಿ ಬಂದಿದ್ದಾನಲ್ಲ. ಇವನ್ಯಾರೋ ತಿಕ್ಕಲು ಸ್ವಭಾವದವನಿರಬೇಕು ಎಂದುಕೊಂಡಿದ್ದಾರೇನೋ ಅಂದುಕೊಂಡೆ.

`ನಿಮಗೆ ಇನ್ನೊಬ್ಬ ಪ್ರಮುಖ ವ್ಯಕ್ತಿಯನ್ನು ಪರಿಚಯ ಮಾಡಿಕೊಡಬೇಕು..’ ಎಂದಳು ಆಶ್ನಾ.
ನಾವು ಕುತೂಹಲದಿಂದ ನೋಡುತ್ತಿದ್ದಾಗಲೇ `ಬನ್ನಿ ಒಳಕ್ಕೆ..’ ಎಂದು ಕರೆದೊಯ್ದಳು.
ಕೋಣೆಯೊಂದರ ಒಳಕ್ಕೆ ಸಂಜಯ ಕಾಲಿರಿಸಿದ. ಅವನ ಹಿಂದೆ ಹೋದ ನಾನು ಒಮ್ಮೆ ಬೆಚ್ಚಿ ಬಿದ್ದು ನಿಂತೆ. ನಾನು ನೋಡುತ್ತಿರುವುದು ಸುಳ್ಳೋ, ಸತ್ಯವೋ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಿದ್ದಂತೆಯೇ ಆಶ್ನಾ `ಈಕೆ ನನ್ನ ಅಮ್ಮ..’ ಎಂದು ಪರಿಚಯಿಸಿದಳು.
ರೂಮಿನಲ್ಲೊಂದು ಮಂಚವಿತ್ತು. ಆ ಮಂಚದ ಮೇಲೆ ಕೃಷಕಾಯ ಮಹಿಳೆಯೊಬ್ಬಳು ಕುಳಿತಿದ್ದಳು. ಕಣ್ಣಿನ ಸುತ್ತ ಕಪ್ಪು ಕಲೆಗಳು ಗಾಢವಾಗಿದ್ದವು. ಕೆನ್ನೆಗಳು ಇಳಿ ಬಿದ್ದಿದ್ದವು. ಆದರೆ ಕಣ್ಣಿನಲ್ಲಿ ಮಾತ್ರ ಅದೇನೋ ಬೆಳಕು. ಆಕೆಯೂ ನಮ್ಮನ್ನು ನೋಡಿದಳು. ಆಕೆಗೂ ನನ್ನನ್ನು ನೋಡಿ ಅಚ್ಚರಿಯಾಗಿತ್ತು.
ನಾನು ಯಾರನ್ನು ಹುಡುಕಿ ಬಂದಿದ್ದೆನೋ, ಅಸ್ಸಾಮಿನ ತುಂಬೆಲ್ಲ ಹುಡುಕಾಡಲು ಯತ್ನಿಸಿದ್ದೆನೋ ಅವಳೇ, ವಿದ್ಯುಲ್ಲತಾ ಅಲ್ಲಿ ಕುಳಿತಿದ್ದಳು. ಆಕೆಯದೇಹ ಆಕೆಯ ಮಾತನ್ನು ಕೇಳುತ್ತಿರಲಿಲ್ಲ. ಸಾವಿನ ಕದವನ್ನು ತೆರೆಯುತ್ತ ಕಷ್ಟಪಟ್ಟು ಜೀವಿಸಿದ್ದಳು. ಬಹುಶಃ ನಾನು ಬರುತ್ತೇನೆ ಎಂದು ಭಾವಿಸಿಯೇ ಆಕೆ ಜೀವ ಹಿಡಿದಿದ್ದಳೇನೋ ಎನ್ನಿಸಿತು.
`ವಿನೂ… ನೀನು… ಕೊನೆಗೂ ಬಂದೆಯಾ…’ಕಣ್ಣರಳಿಸಿ ಕೇಳಿದಳು.
ನನ್ನ ಬಾಯಿಂದ ಮಾತು ಹೊರಡಲಿಲ್ಲ. ಅಚ್ಚರಿಯಿಂದ ವಿದ್ಯುಲ್ಲತಾಳ ಮಾತು ಕೇಳಿದ ಆಶ್ನಾ `ಅಮ್ಮಾ.. ಇವರು ನಿಮಗೆ ಮೊದಲೇ ಗೊತ್ತಿತ್ತಾ?’ ಎಂದಳು. ವಿದ್ಯುಲ್ಲತಾ ಮಾತಾಡಲಿಲ್ಲ. ಕಣ್ಣಲ್ಲಿ ನೀರು ಸುರಿಯಲಾರಂಭಿಸಿತ್ತು. ನನಗೂ ದುಃಖ ಉಮ್ಮಳಿಸಿತ್ತು.
`ನೀನು ಬಂದೇ ಬರುತ್ತೀಯಾ ಎನ್ನುವುದು ನನಗೆ ಗೊತ್ತಿತ್ತು… ಆದರೆ ಇಷ್ಟ ತಡವಾಗಿ ಬರುತ್ತೀಯಾ ಎನ್ನುವುದು ಗೊತ್ತಿರಲಿಲ್ಲ…’ ಎಂದು ಉಸಿರೆಳೆಯುತ್ತಾ ಹೇಳಿದಳು ವಿದ್ಯುಲ್ಲತಾ.
`ಏನಿದು? ಏನಾಯಿತು ವಿದ್ಯುಲ್ಲತಾ?’ ಎಂದು ಹೇಳಿದವನೇ ಆಕೆಯ ಬಳಿ ಹೋಗಿ ಆಕೆಯ ಮಂಚದ ಮೇಲೆ ಕಳಿತು ಹಿತವಾಗಿ ಭುಜ ನೇವರಿಸಿದೆ. ಆಕೆ ನನ್ನ ಭುಜಕ್ಕೆ ಒರಗಿಕೊಂಡಳು.
`ನಿನ್ನ ಬಿಟ್ಟು ಬಂದ ನಂತರ ಏನೇನೋ ಆಗೋಯ್ತು ವಿನು. ಅಸ್ಸಾಮಿಗೆ ಮರಳಿದಾಗಲೇ ಈಕೆ ನನ್ನ ಗರ್ಭದಲ್ಲಿ ಬೆಳೆಯುತ್ತಿರುವುದು ಅರಿವಾಯಿತು. ಇದನ್ನು ಕೇಳಿ ನನ್ನ ಮನೆಯವರೆಲ್ಲ ಕೆಂಡಾಮಂಡಲರಾದರು. ನನ್ನನ್ನು ಹೊಡೆದು, ಬಡಿದು ಮಾಡಿದರು. ಅಬಾರ್ಷನ್ ಮಾಡಿಸಲು ಯತ್ನಿಸಿದರು. ಆದರೆ ನಾನು ಒಪ್ಪದೇ ಉಳಿಸಿಕೊಂಡೆ. ಆಮೇಲೆ ನನ್ನ ಮನೆಯವರು ಮರ್ಯಾದೆಗೆ ಅಂಜಿ ನನ್ನ ಸಮೇತ ಅಸ್ಸಾಮಿನಿಂದ ಇಲ್ಲಿಗೆ ವಲಸೆ ಬಂದರು. ಇಲ್ಲಿ ನಾನು ಆಶ್ನಾಳಿಗೆ ಜನ್ಮ ಕೊಟ್ಟೆ. ನಂತರ ನನ್ನ ಬದುಕು ಸಂತಸದ ಅಲೆಯಲ್ಲಿ ತೇಲುತ್ತಿತ್ತು. ನಾನು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತ ಬದುಕು ಸಾಗಿಸುತ್ತಿದ್ದೆ. ಹೀಗಿದ್ದಾಗಲೇ ಒಮ್ಮೆ ನಾನು ಎಚ್ಚರ ತಪ್ಪಿ ಬಿದ್ದಿದ್ದೆ..’ ಎಂದು ಉಸಿರೆಳೆದುಕೊಂಡಳು ವಿದ್ಯುಲ್ಲತಾ.
`ಎಚ್ಚರ ಬಂದಾಗ ನಾನು ಮಿಲಿಟರಿಯವರೇ ನಡೆಸುವ ಆಸ್ಪತ್ರೆಯಲ್ಲಿದ್ದೆ. ಪರೀಕ್ಷೆ ನಡೆಸಿದಾಗ ನನಗೆ ಬ್ಲಡ್ ಕ್ಯಾನ್ಸರ್ ಇದೆ ಎನ್ನುವುದು ತಿಳಿದುಬಂತು. ಆ ನಂತರ ನನ್ನ ಬದುಕು ಹೀಗಾಯಿತು ನೋಡು. ಆ ಪ್ರತಿ ಕ್ಷಣದಲ್ಲಿಯೂ ನೀನು ಬರ್ತೀಯಾ ಅಂತ ಕಾಯುತ್ತಿದ್ದೆ. ಒಳಮನಸ್ಸು ನೀನು ಬರಲ್ಲ ಎನ್ನುತ್ತಿತ್ತು. ಆದರೆ ಕೊನೆಗೂ ಬಂದೆಯಲ್ಲ. ನಾನು ಧನ್ಯ ನಾನು ಧನ್ಯ…’ ಎಂದು ಹಲುಬಿದಳು ವಿದ್ಯುಲ್ಲತಾ.
`ಸಮಾಧಾನ ಮಾಡ್ಕೊ ವಿದ್ಯುಲ್ಲತಾ…’ ಎಂದೆ.
ಆಕೆ ಸುಮ್ಮನಾಗಲಿಲ್ಲ. ಹತ್ತಿರದಲ್ಲಿಯೇ ಇದ್ದ ಆಶ್ನಾಳನ್ನು ಕರೆದು `ನೋಡು, ನೀನು ಅಪ್ಪನ ಬಗ್ಗೆ ವಿಚಾರಿಸಿದಾಗೆಲ್ಲ ನಾನು ಸರಿಯಾಗಿ ಉತ್ತರ ನೀಡುತ್ತಿರಲಿಲ್ಲವಲ್ಲಾ.. ಈಗ ಹೇಳ್ತೇನೆ ನೋಡು. ಇವರೇ ನಿನ್ನ ಅಪ್ಪ.. ನೀನು ಅಪ್ಪ ಇಲ್ಲದ ವ್ಯಕ್ತಿಯಲ್ಲ.. ಇವರೇ, ಇವರೇ ನಿನ್ನ ತಂದೆ..’ ಎಂದು ನನ್ನ ಕಡೆಗೆ ತೋರಿಸಿದಾಗ ಆಶ್ನಾ ಅವಾಕ್ಕಾಗಿದ್ದಳು. ನನ್ನ ಕಣ್ಣಲ್ಲೂ, ವಿದ್ಯುಲ್ಲತಾಳ ಕಣ್ಣಲ್ಲೂ, ಆಶ್ನಾಳ ಕಣ್ಣಲ್ಲೂ ನೀರಿತ್ತು. ಇದೆಲ್ಲವನ್ನು ನೋಡುತ್ತಿದ್ದ ಸಂಜಯನ ಕಣ್ಣಲ್ಲೂ ನೀರಿನ ಹನಿಗಳು ಮೂಡಿದ್ದವು.
`ನೋಡು ವಿನೂ, ನಿನ್ನ ನೆನಪಿಗಾಗಿ, ನಿನ್ನ ಪವಿತ್ರ ಪ್ರೀತಿಯ ಸಲುವಾಗಿ ಇವಳಿಗೆ ಆಶ್ನಾ ಎಂಬ ಹೆಸರಿಟ್ಟಿದ್ದೇನೆ. ಆಶ್ನಾ ಎಂದರೆ ಪವಿತ್ರ ಪ್ರೀತಿಯ ಪ್ರತೀಕ, ಪವಿತ್ರ ಪ್ರೀತಿಯಲ್ಲಿ ನಂಬಿಕೆ ಉಳ್ಳವಳು ಎಂದರ್ಥ.. ನೋಡು ಇನ್ನು ನನಗೆ ಯಾವುದೇ ನಿಶ್ಚಿಂತೆಯಿಲ್ಲ. ನನ್ನ ಮಗಳಿಗಿನ್ನೂ ನೀನಿದ್ದೀಯ. ಇನ್ನು ಯಾವುದೇ ಕ್ಷಣದಲ್ಲಿಯೂ ನಾನು ನಿಶ್ಚಿಂತೆಯಿಂದ ಕಣ್ಮುಚ್ಚಬಹುದು.. ಸಾರ್ಥಕವಾಯಿತು ನನ್ನ ಬದುಕು.. ‘ ಹಲುಬುತ್ತಲೇ ಇದ್ದಳು ವಿದ್ಯುಲ್ಲತಾ.
ನನ್ನಲ್ಲಿ ಮಾತಿರಲಿಲ್ಲ. ನಾನು ಆಕೆಯ ಭುಜವನ್ನು, ತಲೆಯನ್ನು ನೇವರಿಸುತ್ತಲೇ ಇದ್ದೆ.

-------

ಇದಾಗಿ ಐದಾರು ದಿನಗಳ ನಂತರ ವಿದ್ಯುಲ್ಲತಾ ಕಣ್ಮುಚ್ಚಿದಳು. ಕೊನೆಯ ಹಂತದಲ್ಲಿದ್ದ ಬ್ಲಡ್ ಕ್ಯಾನ್ಸರ್ ವಿದ್ಯುಲ್ಲತಾಳನ್ನು ಆಪೋಷನ ತೆಗೆದುಕೊಂಡಿತ್ತು. ನಮ್ಮಲ್ಲಿನ ದುಃಖ ಹೇಳತೀರದಾಗಿತ್ತು. ಅದೇ ವಿಜೋಯ್ ನಗರದಲ್ಲಿ ನಾನು ಹಾಗೂ ಆಶ್ನಾ ಜೊತೆಯಾಗಿ ಆಕೆಯ ಚಿತೆಗೆ ಅಗ್ನಿ ಸ್ಪರ್ಷ ಮಾಡಿದೆವು. ನನ್ನ ವಿದ್ಯುಲ್ಲತಾ ಅಗ್ನಿಯಲ್ಲಿ ಲೀನವಾಗಿದ್ದಳು. ಸಿಕ್ಕಿಯೂ ಸಿಗದಂತೆ ಮಾಯವಾಗಿದ್ದಳು.
ಆಕೆಯ ಅಂತ್ಯ ಸಂಸ್ಕಾರ ಮುಗಿದ ಎರಡನೇ ದಿನಕ್ಕೆ ನಾನು ಹಾಗೂ ಸಂಜಯ ವಿಜೋಯ್ ನಗರದಿಂದ ದಿಬ್ರುಘಡಕ್ಕೆ ಹೋಗುವ ವಿಮಾನವನ್ನು ಏರಿದ್ದೆವು. ನಮ್ಮ ಜತೆಯಲ್ಲಿ ಆಶ್ನಾ ಕೂಡ ಇದ್ದಳು. ನನ್ನ ಭುಜಕ್ಕೊರಗಿ ಕಣ್ಣೀರುಗರೆಯುತ್ತಿದ್ದ ಆಕೆಯನ್ನು ಹೇಗೆ ಸಮಾಧಾನ ಮಾಡುವುದು ಎನ್ನುವುದೇ ತಿಳಿಯಲಿಲ್ಲ.
ದಿಬ್ರುಘಡದಲ್ಲಿ ಇಳಿದ ಸಂದರ್ಭದಲ್ಲಿಯೇ ನನ್ನಾಕೆ ಪೋನ್ ಮಾಡಿದ್ದಳು. ಆಕೆಗೆ ನಡೆದ ವಿಷಯವನ್ನೆಲ್ಲ ತಿಳಿಸಿದೆ. ಆಕೆ ನಿಟ್ಟುಸಿರು ಬಿಟ್ಟು ಬನ್ನಿ, ಇಬ್ಬರ ದಾರಿಯನ್ನು ಎದುರು ನೋಡುತ್ತಿರುತ್ತೇನೆ ಎಂದಳು. ನಾವು ದಿಬ್ರುಘಡದಿಂದ ಗುವಾಹಟಿಗೆ ಬಂದು ಬೆಂಗಳೂರಿಗೆ ಬರುವ ವಿಮಾನವನ್ನೇರಿದೆವು.
`ನಿಮ್ಮ ಕಡೆಗೆ ಅದೇನೋ ಆತ್ಮೀಯ ಭಾವ ಮೂಡಿತ್ತು. ಆ ಸಂದರ್ಭದಲ್ಲೆಲ್ಲ ನಿಮ್ಮಂತಹ ಅಪ್ಪ ನನಗಿದ್ದರೇ ಎಂದುಕೊಳ್ಳುತ್ತಿದ್ದೆ. ಕೊನೆಗೊಮ್ಮೆ ನೀವೇ ನನ್ನ ಅಪ್ಪ ಎನ್ನುವುದು ತಿಳಿದಾಗ ನನ್ನ ಮನಸ್ಸಿನಲ್ಲಿ ಸಂತೋಷ, ಸಿಟ್ಟು ಎಲ್ಲವೂ ಮೂಡಿತು. ನೀವು ಸಿಕ್ಕಿದ್ದಕ್ಕೆ ಖುಷಿ, ಇಷ್ಟು ದಿನ ಅಪ್ಪ ಇದ್ದೂ ಇಲ್ಲದಂತಾಗು ಮಾಡಿದ್ದ ನಿಮ್ಮ ಕುರಿತು ಸಿಟ್ಟು ಮೂಡಿತು. ನಾನು ಅಪ್ಪ-ಅಮ್ಮ ಇಬ್ಬರ ಜತೆಗೂ ಖುಷಿಯಾಗಿ ಕಳೆಯೋಣ ಅಂತ ಅಂದುಕೊಂಡಿದ್ದೆ.. ಆದರೆ ಆಗ ಅಮ್ಮ ಇದ್ದಳು ನೀನಿರಲಿಲ್ಲ. ಈಗ ನೀನಿದ್ದೀಯಾ.. ಅಮ್ಮ ಇಲ್ಲ…’ ಎಂದು ಆಶ್ನಾ ಗದ್ಗದಿತವಾಗಿ ಹೇಳುತ್ತಲೇ ಇದ್ದಳು. ನನ್ನಲ್ಲಿ ಮಾತುಗಳಿರಲಿಲ್ಲ.

(ಮುಗಿಯಿತು)


Thursday, April 11, 2019

ಅನುರಕ್ತ (ಕಥೆ-5)


ಅದ್ಯಾವುದೋ ಮಾಯೆಯಲ್ಲಿ ಆಶ್ನಾ ನನಗೆ ಆಪ್ತಳಾಗಿದ್ದಳು. ಅವಳ ಕಡೆಗೆ ಹೇಳಿಕೊಳ್ಳಲಾಗದಂತಹ ಭಾವವೊಂದು ಬೆಳೆದು ನಿಂತಿತ್ತು. ಜೀಪ್ ನಲ್ಲಿ ಆಕೆ ನನ್ನ ಪಕ್ಕದಲ್ಲಿಯೇ ಕುಳಿತಿದ್ದಳು. ಬಿಟ್ಟೂ ಬಿಡದಂತೆ ನನ್ನ ಬಳಿ ಮಾತನಾಡುತ್ತಿದ್ದಳು. ನಾನು ಆಕೆಯ ಧ್ವನಿಗೆ ಕಿವಿಯಾಗಿದ್ದೆ. ಆಕೆಯ ಮನೆ, ಕುಟುಂಬ, ಅಮ್ಮ, ಅವಿಭಕ್ತ ಕುಟುಂಬ ಹೀಗೆ ಹಲವು ಸಂಗತಿಗಳನ್ನು ನನ್ನೆದುರು ಸವಿಸ್ತಾರವಾಗಿ ತಿಳಿಸಿದ್ದರು. ಅಸ್ಸಾಮಿ ಸಂಸ್ಕೃತಿ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ, ಅರುಣಾಚಲ ಪ್ರದೇಶ ಹೀಗೆ ಅಸ್ಸಾಮಿನ ಸುತ್ತಲೂ ಇರುವ ರಾಜ್ಯಗಳು ಹೇಗೆ ವಿಭಿನ್ನವಾಗಿದೆ, ಅಲ್ಲಿನ ಜನಜೀವನಗಳ ಕುರಿತೆಲ್ಲ ತಿಳಿಸಿದ್ದಳು. ನನ್ನ ಜತೆ ಜತೆಯಲ್ಲಿಯೇ ಇದ್ದ ಸಂಜಯ ಕೂಡ ಇವೆಲ್ಲವನ್ನೂ ತಿಳೀಯುತ್ತಿದ್ದ.
ನಮ್ಮನ್ನು ಕರೆದೊಯ್ಯುತ್ತಿದ್ದ ಜೀಪು ಪತ್ರ ಗಾಂವ್ ಗೂ ಸ್ವಲ್ಪ ಮೊದಲು ಬ್ರಹ್ಮಪುತ್ರಾ ನದಿಯನ್ನು ದಾಟಿತು. ಅದೆಷ್ಟೋ ಮೈಲಿಗಳಷ್ಟು ಅಗಲವಾಗಿ ಹರಿಯುತ್ತಿದ್ದ ಬ್ರಹ್ಮಪುತ್ರಾ ನದಿಗೆ ಭಾರತ ಸರ್ಕಾರ ಸದೃಢ ಸೇತುವೆಯನ್ನು ನಿರ್ಮಾಣ ಮಾಡಿತ್ತು. ನಂತರ ದಿಬ್ರುಘಡ, ಲಹೋವಾಲ್, ಚಬುವಾ ಮೂಲಕ ತಿನ್ಸುಕಿಯಾಗೆ ಆಗಮಿಸಿದೆವು. ಮುಂದೆ ಮುಂದೆ ಹೋದಂತೆಲ್ಲ ಅಸ್ಸಾಮಿ ಸಂಸ್ಕೃತಿಯ ಅನಾವರಣವಾಗತೊಡಗಿತು. ಮತ್ತೆ ಮುಂದುವರೆದ ನಮ್ಮ ಪಯಣ ಮಾಕುಮ್, ದೂಂ ದೂಮಾ, ಕಾಕೋಪತ್ಥರ್, ಚುಟ್ ಡಿರಾಕ್ ಗಾಂವ್, ನವಜ್ಯೋತಿ, ಮಹದೇವಪುರ, ನಮಸಿ, ಎಂಥೇಮ್ ಗೆ ಬರುವ ವೇಳೆಗೆ ನಮ್ಮ ಜೀಪಿನ ಡ್ರೈವರ್ ನಾವು ಇಲ್ಲಿಂದ ಕಚ್ಚಾ ಮಾರ್ಗ ಹಿಡಿದು ಸಾಗಬೇಕೆಂದೂ, ನದಿಯೊಂದರ ದಡದ ಮೇಲೆ ನಮ್ಮ ಪ್ರಯಾಣ ಸಾಗುತ್ತದೆ ಎಂದೂ ತಿಳಿಸಿದ.
ಮುಂದಿನ ಪ್ರಯಾಣ ದುರ್ಗಮವಾಗಿರುವುದರಿಂದ ಸಾಕಷ್ಟು ಆಹಾರವನ್ನು ಕಟ್ಟಿಕೊಳ್ಳುವಂತೆ ಹೇಳೀದ್ದ. ನಾವು ಸಜ್ಜಾದೆವು. ಹಲವು ವಸ್ತುಗಳನ್ನು ಕೊಂಡೆವು. ನಂತರ ಮತ್ತೆ ಹೊರಟ ನಮ್ಮ ಜೀಪ್ ಪಿಯೋಂಗ್, ಧಿಯುನ್, ಲೆವಂಗ್ ಮೂಲಕ ಕ್ಯಾಂಪ್ ನಮ್ದಾಪಾಕ್ಕೆ ಆಗಮಿಸಿತು. ಅಲ್ಲಿ ನಮ್ಮ ಡ್ರೈವರ್ ನಮ್ಮನ್ನು ಇಳಿಯುವಂತೆ ಹೇಳಿದ. ನಮ್ಮ ಜೀಪು ಇಲ್ಲಿಗೆ ಮಾತ್ರ ಸೀಮಿತ. ಮುಂದೆ ನಮ್ಮ ಜೀಪು ಹೋಗೋದಿಲ್ಲ ಎಂದ. ಆಶ್ನಾಳೂ ಅದಕ್ಕೆ ದನಿಗೂಡಿಸಿದಳು. ನಾನು ಹಾಗೂ ಸಂಜಯ ಪ್ರಶ್ನಾರ್ಥಕವಾಗಿ ನೋಡಿದೆವು.
`ಅದೋ ಅಲ್ಲಿ ಕಾಣ್ತಾ ಇದೆಯಲ್ಲ ಅದೇ ನವೋದಿಹಾಂಗ್ ನದಿ. ಈ ನದಿಗೆ ಇನ್ನೂ ಸೇತುವೆ ಕಟ್ಟಿಲ್ಲ. ನಾವು ಈನದಿಯನ್ನು ದೋಣಿಯೊಂದರ ಮೂಲಕ ಸಾಗಬೇಕು. ಅದರ ಆಚೆಗೆ ಕಚ್ಚಾ ರಸ್ತೆಯಿದೆ. ಆ ರಸ್ತೆಯಲ್ಲಿ ನಾವು ನಡೆದು ಹೋಗಬೇಕು. ನಮ್ಮ ಅದೃಷ್ಟ ಚನ್ನಾಗಿದ್ದರೆ ಆ ದಡದಲ್ಲಿ ಯಾವುದಾದರೂ ವಾಹನ ಸಿಗಬಹುದು…’ ಎಂದಳು. ನವುಬ್ಬರೂ ತಲೆಯಲ್ಲಾಡಿಸಿದೆವು.
ದೋಣಿಯೊಂದರ ಮೂಲಕ ನದಿ ದಾಟಿದವರನ್ನು ಸ್ವಾಗತಿಸಿದ್ದು ಬರ್ಮಾದ ಇರವಾಡಿ ನಡಿಯವರೆಗೂ ಸುದೀರ್ಘವಾಗಿ, ಸಮೃದ್ಧವಾಗಿ ಹಬ್ಬಿ ನಿಂತಿದ್ದ ದಟ್ಟ ಕಾಡು. ಅಲ್ಲಲ್ಲಿ ನಡು ನಡುವೆ ಚಿಕ್ಕ ಚಿಕ್ಕ ಗದ್ದೆಗಳಿದ್ದವು. ಮಧ್ಯ ಮಧ್ಯದಲ್ಲೆಲ್ಲೋ ಅರಣ್ಯ ಇಲಾಖೆಯ ಬಂಗಲೆಗಳಿದ್ದವು. ಕಚ್ಚಾ ರಸ್ತೆಯೊಂದು ನಿರ್ಜನವಾಗಿ ಹಾದು ಹೋಗಿತ್ತು. ನಾವು ಆ ರಸ್ತೆಯಲ್ಲಿ ನಡೆಯಲು ಆರಂಭಿಸಿದೆವು. ದಟ್ಟ ಕಾಡಿನ ನಡುವೆ ಸಾಗುತ್ತಿದ್ದ ನಮಗೆ ಹಕ್ಕಿಗಳ ಚಿಲಿಪಿಲಿ ಗಾನ ಕಿವಿಗೆ ಬೀಳುತ್ತಿತ್ತು. ಆಗೊಮ್ಮೆ ಈಗೊಮ್ಮೆ ಒಂದೆರಡು ದ್ವಿಚಕ್ರ ವಾಹನಗಳು ಆ ಮಾರ್ಗದಲ್ಲಿ ಸಾಗುತ್ತಿದ್ದವಾದರೂ ಕಾರು, ಜೀಪಿನಂತಹ ವಾಹನಗಳ ಸುಳಿವು ಮಾತ್ರ ಇರಲೇ ಇಲ್ಲ.
`ವಿಜೋಯ್ ನಗರದಲ್ಲಿ ದೊಡ್ಡ ವಾಹನಗಳು, ಸರ್ಕಾರಿ ಸಾರಿಗೆ ಇಲ್ಲವಾ..?’ ನಾನು ಆಶ್ನಾಳನ್ನು ಕೇಳಿದ್ದೆ.
`ರಸ್ತೆ ಸಂಪರ್ಕವೇ ಸರಿಯಾಗಿಲ್ಲದ ವಿಜೋಯ್ ನಗರದಲ್ಲಿ ವಾಹನಗಳೇ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ಯಾವುದೋ ಹೆಲಿಕಾಪ್ಟರ್ ಮೂಲಕ ಕೆಲವೇ ಕೆಲವು ಬೆರಳೆಣಿಕೆಯಷ್ಟು ವಾಹನಗಳನ್ನು ಅಲ್ಲಿನ ಶ್ರೀಮಂತರು ಇಟ್ಟುಕೊಂಡಿದ್ದಾರೆ ಅಷ್ಟೇ. ಇನ್ನೂ ವಿಶೇಷ ಸಂಗತಿ ಹೇಳಬೇಕೆಂದರೆ ವಿಜೋಯ್ ನಗರಕ್ಕೆ ಸಂಪೂರ್ಣ ರಸ್ತೆ ಸಂಚಾರ ಇಲ್ಲವೇ ಇಲ್ಲ. ಈಗ ನಾವು ನಡೆದುಕೊಂಡು ಹೋಗುತ್ತಿರುವ ರಸ್ತೆ ಕೂಡ ಸಂಪೂರ್ಣವಾಗಿ ಅಲ್ಲಿಗೆ ತಲುಪುವುದಿಲ್ಲ..’ ಎಂದಾಗ ನಾನು ಹಾಗೂ ಸಂಜಯ ಸ್ವಲ್ಪ ಚಿಂತೆಗೆ ಈಡಾಗಿದ್ದು ಸುಳ್ಳಲ್ಲ.
`ನಾವೀಗ ಬಂದೆವಲ್ಲ ನಾಮ್ದಾಪಾ.. ಅಲ್ಲಿಂದ ವಿಜೋಯ್ ನಗರಕ್ಕೆ ನಡೆದೇ ಹೋಗುತ್ತಾರೆ ಎಲ್ಲ. ಮೂರು ದಿಕ್ಕಿನಿಂದ ಮ್ಯಾನ್ಮಾರ್ ನಿಂದು ಸುತ್ತುವರಿದಿರುವ ವಿಜೋಯ್ ನಗರಕ್ಕೆ ಹತ್ತಿರದ ನಗರ ಎಂದರೆ ಮ್ಯಾನ್ಮಾರಿನ ಪುಟಾವೋ. ಇದು 40 ಕಿಮಿ ದೂರದಲ್ಲಿದೆ. ಭಾರತದ ಹಯೂಲಿಯಾಂಗ್ ಹಾಗೂ ಮಿಯಾವೋ ಹತ್ತಿರದ ಪ್ರಮುಖ ಪಟ್ಟಣಗಳು. ಮಿಯಾವೋ ತನಕ ರೈಲು ಸಂಪರ್ಕ ಇದೆ. ಮಿಯಾವೋಗೂ ವಿಜೋಯ್ ನಗರಕ್ಕೂ ಅಜಮಾಸು 150 ಕಿಲೋಮೀಟರ್ ದೂರ. ಇನ್ನೂ ಮಜಾ ಅಂದರೆ ಅಸ್ಸಾಂಗೆ ಹತ್ತಿರವಾದರೂ ಈ ಊರು ಅರುಣಾಚಲ ಪ್ರದೇಶದಲ್ಲಿದೆ.. ವಿಜೋಯ್ ನಗರ ಎನ್ನುವುದು ಆರು ಚಿಕ್ಕ ಚಿಕ್ಕ ಊರುಗಳ ಗ್ರಾಮಗುಚ್ಛ. ಅಜಮಾಸು 4500 ಜನರು ಇಲ್ಲಿ ವಾಸವಾಗಿದ್ದಾರೆ. ದಿಬ್ರುಘಡದಿಂದ ವಿಮಾನ ಸಂಪರ್ಕ ಸೌಲಭ್ಯ ಇದೆ. ಅಂದಹಾಗೆ ಇಲ್ಲಿ ಒಂದು ಕೆಜಿ ಉಪ್ಪಿಗೆ 150 ರೂಪಾಯಿ.. ಗೊತ್ತಾ ’ ಎಂದಳು ಆಶ್ನಾ.
`ಅಷ್ಟೆಲ್ಲ ದುಬಾರಿಯಾ..?’ ಎಂದೆ.
`ರಸ್ತೆ ಸಂಪರ್ಕ ಸಮರ್ಪಕವಾಗಿ ಇಲ್ಲದೇ ಇರುವುದು, ಸೇರಿ ಹಲವು ಕಾರಣದಿಂದ ಇಷ್ಟು ದುಬಾರಿ. ಇಲ್ಲಿರುವ ಅಂಗಡಿಗಳೂ ಕೆಲವೇ ಕೆಲವು ಮಾತ್ರ. ಅಂದಹಾಗೆ ಈ ಊರಿನಲ್ಲಿ 5ರಲ್ಲೊಬ್ಬರು ಅಸ್ಸಾಂ ರೈಫಲ್ಸ್ ಗೆ ಸೇರಿದ ನಿವೃತ್ತ ಸೈನಿಕರು. ಈ ಕಾರಣದಿಂದಲೇ ನಿವೃತ್ತ ಅಧಿಕಾರಿಗಳ ಸ್ವರ್ಗ ಎನ್ನುವ ಖ್ಯಾತಿ ಈ ಊರಿಗಿದೆ. ಈ ವಿಜೋಯ್ ನಗರಕ್ಕೆ ಸ್ಥಳೀಯವಾಗಿ ದೌಡಿ ಎಂದು ಕರೆಯುತ್ತಾರೆ…’ ಸಮಗ್ರವಾಗಿ ಮಾಹಿತಿ ನೀಡಿದ್ದಳು ಆಶ್ನಾ. ಆಕೆ ನೀಡುತ್ತಿದ್ದ ಮಾಹಿತಿಯಿಂದ ನಮಗೆ ಇನ್ನಷ್ಟು ಅಚ್ಚರಿಯಾಗಿತ್ತು.
`ಸರಿ ನಾವೀಗ ಎಷ್ಟು ದಿನಗಳ ಕಾಲ ನಡೆದರೆ ವಿಜೋಯ್ ನಗರ ಸಿಗುತ್ತದೆ?’ ಸಂಜಯ ಕುತೂಹಲದಿಂದ ಕೇಳಿದ್ದ.
`ವೇಗವಾಗಿ ನಡೆದರೆ ಮೂರು ದಿನ ಸಾಕು…’ ಎಂದವಳೇ.. `ಭಯವಾಯ್ತಾ..ತುಂಬ ದೂರ ಅನ್ನಿಸುತ್ತಿದೆಯಾ?’ ಎಂದಳು.
`ಇಲ್ಲ ಇಲ್ಲ.. ಹಾಗೇನಿಲ್ಲ. ಸುಮ್ಮನೆ ಕೇಳಿದೆ..’ ಎಂದ ಸಂಜಯ.
`ಅಂದರೆ ಕನಿಷ್ಟ ಎರಡು ರಾತ್ರಿಗಳನ್ನು ಕಾಡಿನಲ್ಲೇ ಕಳೆಯಬೇಕು ಅಲ್ಲವಾ..? ನಾನು ಕೇಳಿದೆ.
`ಹಾಗೇನಿಲ್ಲ, ನಡುವೆ ನಡುವೆ ಒಂದೆರಡು ಗ್ರಾಮಗಳಿವೆ. ಅಲ್ಲಿ ಚರ್ಚ್ ಗಳೂ ಇವೆ. ಅಲ್ಲೆಲ್ಲಾದರೂ ಉಳಿದುಕೊಳ್ಳಬಹುದು.. ‘ ಎಂದಳು ಆಶ್ನಾ.
ನಡೆದು ನಡೆದು ಸಂಜೆಯಾಗುವ ವೇಳೆಗೆ ಯಾವುದೋ ಒಂದು ಊರು ಸಿಕ್ಕಿತು. ಅದು ಊರೆಂದರೆ ಊರಲ್ಲ. ಇದ್ದುದು ಒಂದೋ ಎರಡೋ ಮನೆ. ಯಾವುದೋ ಬುಡಕಟ್ಟು ಜನಾಂಗದವರಿರಬೇಕು. ಆಶ್ನಾ ಯಾವುದೋ ಭಾಷೆಯಲ್ಲಿ ಮಾತನಾಡಿದಳು. ನಮಗೆ ರಾತ್ರಿಗೆ ಉಳಿಯಲು ಅವಕಾಶ ಸಿಕ್ಕಿತ್ತು. ಅದೇನೋ ಆಹಾರವನ್ನೂ ಅವರು ತಂದುಕೊಟ್ಟರು. ನಾವು ತಿಂದು ಮುಗಿಸಿದೆವು.
ರಾತ್ರಿಯನ್ನು ಅಲ್ಲೇ ಕಳೆದು ಮರುದಿನ ಮುಂಜಾನೆ ಮತ್ತೆ ನಮ್ಮ ಪಯಣ ಮುಂದುವರಿಸಿದೆವು. ಮತ್ತೊಂದು ರಾತ್ರಿಯನ್ನು ಮಾರ್ಗ ಮಧ್ಯದಲ್ಲಿ ಕಳೆದು ಮೂರನೇ ದಿನದ ವೇಳೆಗೆಲ್ಲ ವಿಜೋಯ್ ನಗರವನ್ನು ನಾವು ತಲುಪಿದಾಗ ನಿಸರ್ಗ ಮಡಿಲಿನ ಊರು ನಮ್ಮನ್ನು ಸ್ವಾಗತಿಸಿತ್ತು. ಭಾರತದಲ್ಲೇ ಮೊಟ್ಟಮೊದಲು ಸೂರ್ಯೋದಯವಾಗುವ ಹಳ್ಳಿಗೆ ನಾವು ಕಾಲಿರಿಸಿದ್ದೆವು.

(ಮುಂದುವರಿಯುವುದು…)

Wednesday, April 3, 2019

ಅನುರಕ್ತ (ಕಥೆ-4)

ನಿಜಕ್ಕೂ ನನಗೆ ಅಲ್ಲಿಂದ ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ.


`ಸರ್ ನೀವು ಹುಡುಕುತ್ತಿರುವ ವ್ಯಕ್ತಿಯ ಕುರಿತು ಪೋಟೋ ಏನಾದರೂ ಇದೆಯಾ? ಇತರ ಮಾಹಿತಿ ಇದ್ದರೆ ಹೇಳೀ..’ ಎಂದಳು ಆಶ್ನಾ.
ನನ್ನ ಬಳಿ ಫೋಟೋ ಇರಲಿಲ್ಲ… ಆಶ್ನಾಳ ಬಳಿ ಅದನ್ನೇ ಹೇಳಿದೆ.
ಆಕೆ ನನ್ನನ್ನು ವಿಚಿತ್ರವಾಗಿ ನೋಡಿದವಳೇ, ಓಹೋ.. ಕಷ್ಟವಿದೆ ಹುಡುಕೋದು.. ಎಂದಳು.
`ಅಂದಹಾಗೆ ಇದು ದಾಮ್ವೇ ಅಥವಾ ದೆಮ್ಚೇ ಅಲ್ಲ. ಇದರ ಸರಿಯಾದ ಉಚ್ಛಾರ ದೆಮಾಜಿ ಅಂತ. ದೆಮಾಜಿ ಇದೆಯಲ್ಲ ಇದು ಸಾಕಷ್ಟು ದೊಡ್ಡ ಜಿಲ್ಲೆ. ನೀವು ಮನೆ ಮನೆಗೂ ಹೋಗಿ ಹುಡುಕೋದು ಅಸಾಧ್ಯವೇ ಸರಿ. ಹೋಗಲಿ ನಿಮ್ಮ ಬಳಿ ಅಡ್ರೆಸ್ ಇದೆಯಾ… ‘ ಸ್ವಲ್ಪ ಸಿಟ್ಟಿನಿಂದಲೇ ಕೇಳಿದ್ದಳು ಆಶ್ನಾ.
ಚಿಕ್ಕ ಹುಡುಗಿಗೆ ಅರ್ಥವಾದ ಅಂಶ ನಮಗೆ ಅರ್ಥವಾಗಲಿಲ್ಲ ಎಂದು ಪೆಚ್ಚೆನಿಸಿತು.
`ಇರು..’ ಎಂದವನೇ ನನ್ನ ಬ್ಯಾಗಿನಲ್ಲಿದ್ದ ಪತ್ರವೊಂದನ್ನು ತೆಗೆದೆ. ವಿದ್ಯುಲ್ಲತಾ ಆ ಪತ್ರದಲ್ಲಿ ಬರೆದಿದ್ದ ಸಾಳುಗಳನ್ನು ಓದಿದೆ.
`ವಿನು… ನನ್ನ ಮನೆ ದೆಮಾಜಿಯಿಂದ ಮುಂದೆ ನಾಲ್ಕೈದು ಕಿಲೋಮೀಟರ್ ಫಾಸಲೆಯಲ್ಲಿದೆ. ಬೋಂಗಾಲ್ ಮರಿ ಹರಿ ಮಂದಿರದಿಂದ ಮುಂದಕ್ಕೆ ಬಂದರೆ ಮಾಟಿಕುಲಾ ಪೋಸ್ಟ್ ಆಫೀಸ್ ಸಿಗುತ್ತದೆ. ಅದನ್ನು ಹಾದು ಬರೂಹಾ ಘಾಟ್ ಎಂಬ ನೀರಿನ ಕೊಳವೊಂದಿದೆ. ಅಲ್ಲಿಂದ ಮುಂದೆ ಬಂದರೆ ಬೋಟುವಾ ಮುಖ್ ಮಿರಿ ಎಂಬ ಊರು ಸಿಗುತ್ತದೆ. ಅಲ್ಲೇ ಇದೆ ನನ್ನ ಮನೆ. ಊರಿನ ಮಗ್ಗುಲಿನಲ್ಲಿಯೇ ಬ್ರಹ್ಮಪುತ್ರಾ ನದಿಯ ಉಪ ನದಿಯೊಂದು ಹರಿದುಹೋಗುತ್ತದೆ. ಅಲ್ಲೇ ಇದೆ ನನ್ನ ಮನೆ. ಮನೆಗೆ ಕೆಂಪು ಬಣ್ಣ ಬಳಿದಿದ್ದಾರೆ. ದೊಡ್ಡ ಮನೆ. ಆ ಸುತ್ತಮುತ್ತಲಿನಲ್ಲಿ ಇರುವ ದೊಡ್ಡ ಮನೆ ಅಂದರೆ ನಮ್ಮ ಮನೆ… ಎಂದು ಬರೆದಿದ್ದಳು.
ಇದನ್ನು ಕೇಳಿದ ಆಶ್ನಾ… ಇಷ್ಟು ಮಾಹಿತಿ ಇದೆಯಲ್ಲ ಇದೇ ಸಾಕು ಬನ್ನಿ.. ಎಂದು ಮತ್ತೆ ಜೀಪು ಹತ್ತಿಸಿದಳು.
ಸೀದಾ ಬೋಟುವಾ ಮುಖ್ ಮಿರಿಯತ್ತ ಗಾಡಿ ಓಡಿಸುವಂತೆ ಹೇಳಿದಳು. ಅವಳ ಚುರುಕುತನ ಮತ್ತೊಮ್ಮೆ ನನ್ನ ಹಾಗೂ ಸಂಜಯನನ್ನು ಸೆಳೆದಿತ್ತು. ಅಂಕುಡೊಂಕಿನ ದಾರಿಯಲ್ಲಿ ಜೀಪು ಸಾಗುತ್ತಿತ್ತು. ಆಶ್ನಾ ಒಂದಿಬ್ಬರ ಬಳಿ ಅಸ್ಸಾಮಿ ಭಾಷೆಯಲ್ಲಿಯೇ ಕೇಳೀದಳು. ಸೀದಾ ಹೋಗಿ ಒಂದು ಕಡೆ ಜೀಪು ನಿಂತಿತು. ಮುಂದಕ್ಕೆ ನದಿಯೊಂದು ಹರಿಯುತ್ತಿತ್ತು. ರಸ್ತೆ ಅಲ್ಲಿಗೆ ಕೊನೆಗೊಂಡಿತ್ತು.
ಜೀಪು ಇಳಿದವಳೇ ಅಲ್ಲಿ ಒಂದಿಬ್ಬರ ಬಳಿ ಆಶ್ನಾ ಕೇಳಿದಳು. ಅವರು ಪಡೆದ ಮಾಹಿತಿಯನ್ನು ಆದರಿಸಿ ಒಂದಷ್ಟು ಕಡೆ ನಮ್ಮನ್ನು ಕರೆದೊಯ್ದಳು. ಅಲ್ಲಿ ಇಲ್ಲಿ ಒಂದೆರಡು ಮನೆಗಳನ್ನು ಹಾದ ನಂತರ ಕೆಂಪು ಬಣ್ಣದ ದೊಡ್ಡ ಮನೆ ನಮ್ಮೆದುರು ಕಾಣಿಸಿತು. ನಾನು ಭಯ, ಆತಂಕ, ಕುತೂಹಲಗಳೊಂದಿಗೆ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದೆ.
ಆದರೆ ಮನೆಯ ಮುಂದೆ ಹೋಗಿ ನಿಂತಾಗ ನಮಗೆ ಇನ್ನಷ್ಟು ಅಚ್ಚರಿ ಕಾಣಿಸಿತ್ತು.
ದೊಡ್ಡ ಬಾಗಿಲಿನ ಮನೆ ಅದಾಗಿದ್ದರೂ, ಅದಕ್ಕೆ ಹಾಕಿದ್ದ ಅಷ್ಟೇ ದೊಡ್ಡದಾದ ಬೀಗ ನಮ್ಮನ್ನು ಸ್ವಾಗತಿಸಿತು. `ಏನಿದು..?’ ಎಂದು ಪ್ರಶ್ನಾರ್ಥಕವಾಗಿ ನಾನು ಆಶ್ನಾಳನ್ನು ನೋಡಿದೆ. ನನ್ನ ಮನಸ್ಸಿನ ಭಾವನೆಯನ್ನು ಅರಿತವಳಂತೇ ಆಕೆ ಸೀದಾ ಪಕ್ಕದ ಮನೆಗೆ ಹೋಗಿ, `ಈ ಮನೆಯವರೆಲ್ಲಿ’ ಎಂದು ವಿಚಾರಿಸಿದಳು.
ಅದಕ್ಕೆ ಅವರು ಏನೇನೋ ಉತ್ತರವನ್ನು ಹೇಳೀದರು. ತದನಂತರ ಆಶ್ನಾ ನನ್ನ ಬಳಿ ಬಂದು `ಈ ಮನೆಯವರು 12-13 ವರ್ಷಗಳ ಹಿಂದೆ ಬೀಗ ಹಾಕಿ ಹೋದರಂತೆ. ಹೋಗುವ ಮುನ್ನ ಯಾರಿಗೋ ಮನೆ ಮಾರಿದರಂತೆ.. ಮನೆಯನ್ನು ಕೊಂಡವರು ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿದ್ದಾರೆ ಅಷ್ಟೇ..’ ಎಂಬ ಮಾಹಿತಿ ನೀಡಿದಳು.
`ಯಾಕೆ ಮನೆ ಬಿಟ್ಟರು? ಎಲ್ಲಿಗೆ ಹೋದರು? ಕೇಳು ಪ್ಲೀಸ್..’ ಎಂದೆ.
ಆಶ್ನಾ ಮತ್ತೆ ಹೋಗಿ ಮಾತನಾಡಿದಳು.
ಮರಳಿ ಬಂದವಳೇ `ಈ ಮನೆಯಲ್ಲಿ ಒಬ್ಬಳು ಹುಡುಗಿ ಇದ್ದಳಂತೆ. ಅವಳಿಗೆ ಮದುವೆ ಆಗಿರಲಿಲ್ಲವಂತೆ.. ಆಕೆ ಗರ್ಭಿಣಿಯಾಗಿದ್ದಳಂತೆ. ಮನೆಯಲ್ಲಿ ಬಹಳ ದಿನಗಳ ಕಾಲ ಗಲಾಟೆ ನಡೆಯಿತಂತೆ. ಅವಿಭಕ್ತ ಕುಟುಂಬ ಒಡೆದು ಚೂರು ಚೂರಾಯಿತಂತೆ. ಆ ಹುಡುಗಿಗೆ ಮನೆಯವರು ಸಾಕಷ್ಟು ಹೊಡೆದು, ಬಡಿದು ಮಾಡಿದರಂತೆ. ಅಬಾರ್ಷನ್ ಮಾಡಿಸಿಕೋ ಎಂದರಂತೆ. ಆದರೆ ಆಕೆ ಮಾಡಿಸಿಕೊಳ್ಳಲಿಲ್ಲವಂತೆ. ಕೊನೆಗೆ ಮರ್ಯಾದೆಗೆ ಅಂಜಿ ಈ ಮನೆಯವರು ಎತ್ತಲೋ ಹೋದರಂತೆ. ಆ ಹುಡುಗಿಯನ್ನೂ ಅವರು ಕರೆದೊಯ್ದರಂತೆ. ಆಮೇಲೆ ಅವರನ್ನು ಈ ಸುತ್ತಮುತ್ತ ಯಾರೂ ನೋಡಿಲ್ಲ. ಎಲ್ಲಿಗೆ ಹೋಗಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ.. ಬದುಕಿದ್ದಾರೋ ಇಲ್ಲವೋ ಅದೂ ಗೊತ್ತಿಲ್ಲ..’ ಎಂದಳು.
ನನಗೆ ಒಮ್ಮೆ ತಲೆಯೆಲ್ಲ ತಿರುಗಿದಂತಾಯಿತು. ಛೇ.. ಎಂತ ಆಗೋಯ್ತು… ಪ್ರೀತಿಸಿದ್ದ, ಪ್ರೀತಿಯ ಉತ್ತುಂಗದಲ್ಲೇ ಆಕೆಯನ್ನು ತೊರೆದಿದ್ದ, ಇದೀಗ ಮತ್ತೆ ಹುಡುಕಿ ಬಂದಿದ್ದ ನನಗೆ ಆಕೆಯ ದರ್ಶನ ಭಾಗ್ಯ ಇಲ್ಲದಾಯಿತೇ ಎಂದುಕೊಂಡು ಆ ಮನೆಯ ಕಟ್ಟೆಯ ಮೇಲೆ ಕುಳಿತೆ. ಕಣ್ಣಲ್ಲಿ ನನಗೆ ಅರಿವಿಲ್ಲದಂತೆಯೇ ನೀರು ಬರಲಾರಂಭಿಸಿತ್ತು.
ಆಶ್ನಾಳಿಗೆ ಏನನ್ನಿಸಿತೋ ಏನೋ.. ಸೀದಾ ಬಂದು ನನ್ನ ಪಕ್ಕ ಕುಳಿತಳು. ಬಂದವಳೇ ನನ್ನ ಕೈ ಹಿಡಿದುಕೊಂಡು, `ನೀವು ಹುಡುಕಿ ಬಂದ ವ್ಯಕ್ತಿ ಯಾರು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನಿಮಗೆ ಆಕೆ ಎಷ್ಟು ಅನಿವಾರ್ಯ ಆಗಿದ್ದಳು ಎನ್ನುವುದು ನನಗೆ ಅರ್ಥವಾಗುತ್ತಿದೆ..’ ಎಂದಳು.
`ಹು… ನಾನವಳನ್ನು ಪ್ರೀತಿಸಿದ್ದೆ.. ಅವಳು ನನ್ನ ಮೈ-ಮನಗಳನ್ನು ತುಂಬಿದ್ದಳು. ಆದರೆ ಯಾವುದೋ ಹೊತ್ತಿನಲ್ಲಿ ನಮಗರಿವಿಲ್ಲದಂತೆ ಏನೇನೋ ಆಗೋಯ್ತು. ನಂತರ ನಾನೂ ಪರಿಸ್ಥಿತಿಯ ಕಟ್ಟಿಗೆ ಬಿದ್ದು ಬಿಟ್ಟೆ. ಆಕೆ ನನ್ನಿಂದ ದೂರ ಬಂದಳು. ನಾನು ಆಕೆಯ ಪಾಲಿಗೆ ಮೋಸಗಾರನಾಗಿಬಿಟ್ಟೆ. ಆದರೆ ನಾನು ಮೋಸ ಮಾಡಿಲ್ಲ, ದಶಕಗಳು ಉರುಳಿದರೂ ನನ್ನ ಮನದಲ್ಲಿ ಶಾಶ್ವತವಾಗಿ ನೀನು ಉಳಿದಿದ್ದೀಯಾ ಎಂದು ಹೇಳುವ ಕಾರಣಕ್ಕಾಗಿ ಇಲ್ಲಿಯವರೆಗೂ ಹುಡುಕಿ ಬಂದೆ. ಆದರೆ ಅವಳನ್ನು ನೋಡುವ ಭಾಗ್ಯ ನನಗಿಲ್ಲವಾಯಿತೇ.. ನನ್ನನ್ನು ಕ್ಷಮಿಸು ಎಂದು ಹೇಳುವ ಅವಕಾಶ ನನಗೆ ಸಿಗದಾಯಿತೆ…’ ಎಂದು ಹಲುಬಿದೆ.
`ಸರ್…’ ಎಂದವಳೇ ನನ್ನ ತಲೆಯನ್ನೊಮ್ಮೆ ನೇವರಿಸಿದ ಆಕೆ, `ನಿಮ್ಮನ್ನು ನೋಡಿದರೆ ಬಹಳ ಮರುಕ ಉಂಟಾಗುತ್ತಿದೆ. ತಿಳಿದೋ, ತಿಳಿಯದೆಯೋ ನೀವು ತಪ್ಪು ಮಾಡಿದ್ದಿರಿ, ಅದಕ್ಕೆ ಪಶ್ಚಾತ್ತಾಪವನ್ನೂ ಪಟ್ಟಿದ್ದೀರಿ. ನಿಮ್ಮ ಮನಸ್ಸಿನಲ್ಲಿ ಯಾವುದೇ ದೋಷ ಇರಲಿಲ್ಲ ಎನ್ನುವುದಕ್ಕೆ ಈ ನಿಮ್ಮ ಕಣ್ಣೀರು ಸಾಕ್ಷಿಯಾಗಿದೆ. ಅಳಬೇಡಿ… ಎದೆಗುಂದಬೇಡಿ.. ಓಳ್ಳೆಯದಾಗುತ್ತದೆ…’ ಎಂದಳು.
ನನಗೆ ಸಮಾಧಾನವಾಗಲಿಲ್ಲ. ನಾನು ಸುಮ್ಮನೇ ಇದ್ದೆ. ಆಕೆಯೂ ಮೌನವಾಗಿಯೇ ಇದ್ದಳು. ಎಷ್ಟೋ ಹೊತ್ತಿನ ನಂತರ ಸಂಜಯ ನನ್ನ ಬಳಿ ಬಂದು… `ಹೊರಡೋಣ ದೋಸ್ತ… ಇಲ್ಲಿ ಇನ್ನು ಉಳಿದು ಮಾಡುವಂತದ್ದೇನಿಲ್ಲ…’ ಎಂದ.
ಸರಿ ಎಂದು ನಾನು ತಯಾರಾದೆ. ಹೀಗಿದ್ದಾಗಲೇ ಆಶ್ನಾ… ನನ್ನ ಬಳಿ ತಿರುಗಿದಳು. `ನಾನು ಇಲ್ಲಿಯವರೆಗೂ ಬಂದಿದ್ದೇನೆ.. ನನ್ನ ಮನೆ ಇಲ್ಲಿಂದ ನೂರು-ನೂರೈವತ್ತು ಕಿಲೋಮೀಟರ್ ದೂರದಲ್ಲಿದೆ. ನಾನು ಅಲ್ಲಿಗೆ ಹೋಗಿ ಬರಲೇ?.. ನೀವು ಬರುವಿರಾ?’ ಎಂದಳು.
`ನೀನು ಹೋಗಿ ಬರುವುದು ಸರಿ.. ಆದರೆ ನಾವ್ಯಾಕೆ ಬರೋದು..?’ ಸಂಜಯ ಕೇಳಿದ್ದ,
`ನಾನು ಅನೇಕ ಜನರನ್ನು ನೋಡಿದ್ದೇನೆ. ಅದೆಷ್ಟೋ ಜನರಿಗೆ ಗೈಡ್ ಆಗಿಯೂ ಕೆಲಸ ಮಾಡಿದ್ದೇನೆ. ಎಲ್ಲರೂ ಅಸ್ಸಾಂ ನೋಡಲು ಬರುತ್ತಿದ್ದರು. ಅರುಣಾಚಲ ಸುತ್ತಲು ಬರುತ್ತಿದ್ದರು. ತವಾಂಗ್ ನೋಡಲು ಹೋಗುತ್ತಿದ್ದರು. ಮಣಿಪುರವೋ, ಮಿಜೋರಾಮ್, ತ್ರಿಪುರಾ, ನಾಗಾಲ್ಯಾಂಡಿಗೆ ಹೋಗುತ್ತಿದ್ದರು. ಆದರೆ ನೀವು, ನಿಮ್ಮ ಗತಕಾಲದ ಗೆಳತಿಯನ್ನು, ಪ್ರೇಯಸಿಯನ್ನು ಹುಡುಕಿಕೊಂಡು ಬಂದಿದ್ದೀರಿ. ಅವಳು ಸಿಗದೇ ವಿಲಿ ವಿಲಿ ಒದ್ದಾಡುತ್ತಿದ್ದೀರಿ. ಸಿಗದೇ ಹತಾಶೆಗೆ ಒಳಗಾಗಿದ್ದೀರಿ. ನನಗೆ ಯಾಕೋ ನಿಮ್ಮ ನಡೆ ನುಡಿ ಮೊದಲಿಗೆ ವಿಚಿತ್ರವೆನ್ನಿಸಿದರೂ ಈಗ ಗೌರವ, ಆದರದ ಭಾವ ಹುಟ್ಟಿಸಿದೆ. ಅದೇನೋ ವಿಶಿಷ್ಟ ವ್ಯಕ್ತಿತ್ವ ನಿಮ್ಮದು…’ ಎನ್ನುತ್ತಿದ್ದಂತೆ ಸಂಜಯ ನಗಲು ಆರಂಭಿಸಿದ..
`ನಗಬೇಡಿ.. ನಿಜ ಹೇಳಿದೆ ನಾನು.. ನಾನು ಪ್ರತಿ ಸಾರಿ ಮನೆಗೆ ಹೋದಾಗಲೂ ಆ ಸಂದರ್ಭದಲ್ಲಿ ನಾನು ಯಾರ್ಯಾರನ್ನು ಭೇಟಿ ಮಾಡುತ್ತೀನೋ ಅದನ್ನೆಲ್ಲ ನನ್ನ ಮನೆಯವರ ಎದುರು, ನನ್ನ ಅಮ್ಮನ ಎದುರು ಹೇಳುತ್ತೇನೆ. ಅವರು ಅದನ್ನೆಲ್ಲ ಅರಳಿದ ಕಣ್ಗಳೊಂದಿಗೆ ಕೇಳುತ್ತಾರೆ. ಪ್ರತಿ ಸಾರಿಯೂ ನೀನು ಅವರನ್ನು ಕರೆದುಕೊಂಡು ಬರಬೇಕಿತ್ತು, ಇವರನ್ನು ಕರೆದುಕೊಂಡು ಬರಬೇಕಿತ್ತು ಎನ್ನುತ್ತಾರೆ. ಈಗ ನಾವು ಹೇಗೂ ಇಲ್ಲಿಯತನಕ ಬಂದಿದ್ದೇವೆ.. ಅಲ್ಲಿಗೆ ಹೋಗಿ ಬರೋಣವೇ…’ ಎಂದಳು. ಅವಳ ಧ್ವನಿಯಲ್ಲಿ ಅದೇನೋ ಯಾಚನೆಯಿತ್ತು, ಪ್ರೀತಿ, ಆತ್ಮೀಯತೆ ಇತ್ತು.
`ಅದ್ಸರಿ, ಯಾವುದು ನಿಮ್ಮೂರು…’ ಎಂದು ಸಂಜಯ ಕೇಳಿದ್ದ.
`ವಿಜೋಯ್ ನಗರ..’ ಎಂದಳು ಆಕೆ..
`ವಿಜೋಯ್ ನಗರ….’ ಎಂದವನೇ… `ವಾವ್… ಎಂತಹ ಊರು ಅದು…’ ಎಂದು ಉದ್ಗರಿಸಿ ಸಂಜಯ `ನಡಿ ಹೋಗೋಣ..’ ಎಂದ.
ಆಶ್ನಾಳ ಕಣ್ಣು ಅರಳಿತು.
ನಾನು ಅಚ್ಚರಿಯಿಂದ `ಏನಪ್ಪಾ ವಿಶೇಷ..’ ಎಂದೆ.
ಅದಕ್ಕೆ ಸಂಜಯ `ಅಯ್ಯೋ ಈ ವಿಜೋಯ್ ನಗರ ಇದೆಯಲ್ಲ… ಎಂತಹ ಅದ್ಭುತ ಊರು ಅಂತೀಯ.. ಭಾರತದಲ್ಲಿ ಮೊಟ್ಟ ಮೊದಲು ಸೂರ್ಯೋದಯ ಕಾಣುವುದು ಇದೇ ಊರಿನಲ್ಲಂತೆ. ಈ ಊರಿನಲ್ಲಿ ವೃದ್ಧರ ಸಂಖ್ಯೆ ಜಾಸ್ತಿ ಇದೆಯಂತೆ. ಅಲ್ಲದೇ ಅವರಲ್ಲಿ ಹೆಚ್ಚಿನವರು ಸೈನ್ಯದಿಂದ ನಿವೃತ್ತಿ ಆದವರು. ಪ್ರಕೃತಿ ಸೌಂದರ್ಯದ ಖನಿಯಾದ ಈ ಊರಿಗೆ ಹೋಗಲು ರಸ್ತೆ ಮಾರ್ಗವೇ ಇಲ್ಲ. ವಿಮಾನದ ಮೂಲಕ ಹೋಗಬೇಕಷ್ಟೇ…’ ಎಂದ.
ಅಷ್ಟರಲ್ಲಿ ಆಶ್ನಾ `ಈಗ ಊರಿಗೆ ಕಚ್ಚಾ ರಸ್ತೆ ಮಾಡಿದ್ದಾರೆ… ಅದರಲ್ಲಿ ಹೋಗಬಹುದು..’ ಎಂದಳು. ನಾನು ಸರಿ ಎಂದು ಒಪ್ಪಿಕೊಂಡೆ.
ಇಷ್ಟೆಲ್ಲ ಆಗುವ ವೇಳೆಗೆ ಸೂರ್ಯ ಅದಾಗಲೇ ಪಶ್ಚಿಮದ ದಿಗಂತದಲ್ಲಿ ಅಸ್ತಂಗತನಾಗುತ್ತಿದ್ದ.
`ಸರ್ ನಾಳೆ ಮುಂಜಾನೆ ಹೊರಡೋಣ… ರಾತ್ರಿ ಪ್ರಯಾಣ ಕಷ್ಟ..’ ಎಂದಳು ಆಶ್ನಾ. ಸರಿ ಎಂದು ನಾವಿಬ್ಬರೂ ತಲೆಯಲ್ಲಾಡಿಸಿದೆವು. ಸೀದಾ ದೆಮಾಜಿಗೆ ಮರಳಿ ಅಲ್ಲೊಂದು ಚಿಕ್ಕ ಹೊಟೆಲಿನಲ್ಲಿ ರೂಮು ಮಾಡಿ ವಿರಮಿಸಲು ಮುಂದಾದೆವು.
ಊಟದ ನಂತರ ಸಂಜಯ ಹಾಸಿಗೆಗೆ ತೆರಳಿದ. ಅಷ್ಟರಲ್ಲಿ ನನ್ನ ಪೋನು ರಿಂಗಣಿಸಿತ್ತು. ಅತ್ತಲಿಂದ ನನ್ನಾಕೆ `ಸಿಕ್ಕಿದ್ಲಾ..?` ಎಂದಳು. ನಾನು ನಡೆದ ವಿಷಯವನ್ನೆಲ್ಲ ಹೇಳಿದೆ. ಆಕೆ ಕೂಡ ನಿಟ್ಟುಸಿರು ಬಿಟ್ಟು `ಹೋಗಲಿ ಬಿಡಿ…’ ಎಂದಳು.
ಆಕೆ ಪೋನ್ ಇಟ್ಟ ನಂತರ ನನಗೆ ನಿದ್ದೆಯೇ ಬರಲಿಲ್ಲ. ಹೀಗಾಗಿ ನಾನು ಹೊಟೆಲಿನಿಂದ ಹೊರಗೆ ಬಂದು ಕುಳಿತೆ. ಸದ್ದಿಲ್ಲದೇ ನನ್ನ ಹಿಂದೆ ಬಂದಿದ್ದ ಆಶ್ನಾ ನನ್ನ ಪಕ್ಕ ಬಂದು `ನಿದ್ದೆ ಬಂದಿಲ್ಲವ..’ ಎಂದಳು. `ಊಹೂ..’ ಅಂದೆ.
`ಆತ್ಮೀಯರು ಇಲ್ಲವಾದಾಗ ಹೀಗೆಯೇ ಅನ್ನಿಸುತ್ತದೆ… ನನಗೂ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ…’ ಎಂದಳು ಕ್ಷೀಣವಾಗಿ.
`ಯಾಕಮ್ಮಾ… ಏನಾಯ್ತು? ಓದುತ್ತಿರುವ ಹುಡುಗಿ ನೀನು.. ನಿನಗೆ ಅದೇನು ಚಿಂತೆ?’ ಎಂದೆ.
ದೀರ್ಘ ನಿಟ್ಟುಸಿರು ಬಿಟ್ಟ ನಂತರ ಆಶ್ನಾ.. `ಮನೆಯಲ್ಲಿ ನನಗೆ ಎಲ್ಲವೂ ಇದೆ. ಎಲ್ಲರೂ ನನ್ನನ್ನು ಬಹಳ ಪ್ರೀತಿಸುತ್ತಾರೆ.. ಕೇಳಿದ್ದನ್ನು ಕೊಡಿಸುತ್ತಾರೆ. ನಾನು ಚನ್ನಾಗಿ ಓದಬೇಕು, ತದನಂತರ ನಮ್ಮೂರಿಗೆ ಮರಳಿ ಶಿಕ್ಷಕಿಯಾಗಿ, ಶಾಲೆಯನ್ನು ಆರಂಭಿಸಬೇಕು… ಇಂತದ್ದೇ ಕನಸು ನನ್ನ ಅಮ್ಮನದ್ದು. ನಾವು ಖುಷ್ ಖುಷಿಯಿಂದಲೇ ಇದ್ದೆವು. ಆದರೆ ಅಮ್ಮನಿಗೆ ನಾಲ್ಕೈದು ವರ್ಷಗಳಿಂದ ಸತತ ಕೆಮ್ಮು.. ಪರೀಕ್ಷೆ ಮಾಡಿದರೆ ಶ್ವಾಸಕೋಶದ ಕ್ಯಾನ್ಸರ್ ಎನ್ನುವುದು ಗೊತ್ತಾಯಿತು.. ತದನಂತರ ನಮ್ಮ ಬದುಕೇ ನರಕದ ಕಡೆಗೆ ಹೊರಳಿತು…’ ಎಂದಳು.
ನಾನು ತಲೆ ಕೊಡವಿದೆ. `ಅಮ್ಮ ಆಗಲೂ, ಈಗಲೂ ನನ್ನನ್ನು ಬಹಳ ಪ್ರೀತಿಸುತ್ತಾಳೆ. ಆದರೂ ನನಗೆ ಅಪ್ಪ ಇರಬೇಕಿತ್ತು ಅನ್ನಿಸುತ್ತಿದೆ. ನೀವು ನಿಮ್ಮ ಆತ್ಮೀಯರನ್ನು ಕಳೆದುಕೊಂಡು ದುಃಖ ಪಡ್ತಿದ್ದೀರಲ್ಲ.. ನಾನು ಅಪ್ಪನನ್ನು ಕಳೆದುಕೊಂಡು ಅಷ್ಟೇ ದುಃಖವನ್ನು ಅನುಭವಿಸುತ್ತಿದ್ದೇನೆ. ಅಕ್ಕರೆಯ ಅಮ್ಮ ನನ್ನ ಬದುಕಿನಲ್ಲಿದ್ದಾರೆ. ಧೈರ್ಯದ ಅಪ್ಪನೇ ಇಲ್ಲ. ಪ್ರೀತಿಸುವ ಅಮ್ಮ ಇದ್ದಾಳೆ. ಗದರಿಸುವ, ಗದರಿಕೆಯ ಬೆನ್ನಲ್ಲೇ ಮುದ್ದುಗರೆಯುವ ಅಪ್ಪ ಇಲ್ಲ. ಛೇ.. ಅಪ್ಪ ಇರಬೇಕಿತ್ತು… ಅಪ್ಪನ ನೆನಪಿನಲ್ಲಿಯೇ ಪ್ರತಿ ದಿನ ನನಗೆ ನಿದ್ದೆಯೇ ಬರುತ್ತಿಲ್ಲ…’ ಎಂದಳು.
ನನ್ನಲ್ಲಿ ಉತ್ತರವಿರಲಿಲ್ಲ. ಸುಮ್ಮನೆ ಅವಳ ಮುಖವನ್ನು ಹಿಡಿದು ನನ್ನ ಒದೆಗೆ ಒರಗಿಸಿಕೊಂಡೆ. ಅದೇನೋ ಆತ್ಮೀಯ ಭಾವ ನಮ್ಮನ್ನು ಕಾಡಿದ್ದು ಸುಳ್ಳಲ್ಲ. ಆ ರಾತ್ರಿಯಿಡೀ ಹಾಗೆಯೇ ಕುಳಿತಿದ್ದೆವು. ಆಕೆ ನನ್ನ ಎದೆಗೊರಗಿಯೇ ನಿದ್ದೆಗೆ ಜಾರಿದ್ದಳು. ಅವಳ ಭುಜವನ್ನು ಬಾಚಿ ಹಿಡಿದಿದ್ದ ನನಗೂ ಹಾಗೆಯೇ ನಿದ್ದೆ ಬಂದಿತ್ತು. ಅವಳ ಕೈ ನನ್ನ ಕೈಯನ್ನು ಭದ್ರವಾಗಿ ಹಿಡಿದಿತ್ತು.
ಬೆಳಿಗ್ಗೆ ಸಂಜಯ ನಮ್ಮನ್ನು ತಟ್ಟಿ ಎಬ್ಬಿಸಿದಾಗಲೇ ನಮಗೆ ಎಚ್ಚರವಾಗಿದ್ದು.. ಪ್ರಾತರ್ವಿಧಿ ಮುಗಿದ ನಂತರ ನಮ್ಮ ಅಂದಿನ ಪಯಣ ಆರಂಭವಾಗಿತ್ತು. ವಿಜೋಯ್ ನಗರ ಎಂಬ ಪ್ರಕೃತಿಯ ಸುಂದರ ಸೃಷ್ಟಿಯ ಕಡೆಗೆ ನಮ್ಮ ಪಯಣ ಹೊರಟಿತ್ತು.

Monday, April 1, 2019

ಅನುರಕ್ತ (ಕಥೆ-3)


ಜೀಪು ಗುವಾಹಟಿಯಿಂದ 410 ಕಿಲೋಮೀಟರ್ ದೂರದ ದಾಮ್ಚೆ ಕಡೆಗೆ ಹೊರಟಿತು. ವಿಶಾಲವಾಗಿ ಹರಿಯುತ್ತಿದ್ದ ಬ್ರಹ್ಮಪುತ್ರಾ ನದಿಯ ಪಕ್ಕದಲ್ಲಿನ ರಸ್ತೆಯಲ್ಲಿ ಜೀಪು ಸಾಗುತ್ತಿತ್ತು. ಜೀಪನ್ನು ಏರಿದ ನಂತರ ನಮಗೆ ಸುಮ್ಮನೇ ಹೊತ್ತು ಹೋಗಲಿಲ್ಲ.
ಆಶ್ನಾಳನ್ನು ಸಂಜಯ ಮಾತಿಗೆ ಎಳೆದ. ಹಿಂದಿ ಹಾಗೂ ಇಂಗ್ಲೀಷಿನಲ್ಲಿ ನಾವು ಕೇಳುತ್ತಿದ್ದ ಪ್ರಶ್ನೆಗಳಿಗೆ ಆಶ್ನಾ ಚುಟುಕಾಗಿ ಹಾಗೂ ಚುರುಕಾಗಿ ಉತ್ತರ ನೀಡುತ್ತಿದ್ದಳು. ಆಕೆಯ ಬಳಿ ಸಂವಹನ ನಡೆಸಿದ ನಂತರ ಆಕೆ ಹೈಸ್ಕೂಲು ಓದುತ್ತಿರುವವಳೆಂದೂ, ಆಗ ತಾನೇ ಪ್ರಾಥಮಿಕ ಶಾಲೆ ಮುಗಿಸಿರುವವಳೆಂದೂ ತಿಳಿಯಿತು. ಹೊಟ್ಟೆ ಪಾಡಿಗೆ ಹಾಗೂ ಹೊಸ ಹೊಸ ಜನರನ್ನು ಪರಿಚಯ ಮಾಡಿಕೊಳ್ಳುವ, ತಿಳಿದುಕೊಳ್ಳುವ ಸಲುವಾಗಿ ಗೈಡ್ ಆಗಿ ಕೆಲಸ ಮಾಡುತ್ತಿದ್ದೇನೆಂದೂ ಹೇಳಿದಳು.
ನಾನು ಹಾಗೂ ಸಂಜಯ ಆಕೆಯ ಬಳಿ ಮಾತನಾಡಿದಂತೆಲ್ಲ ಆಕೆ ನಮಗೆ ಅಸ್ಸಾಮಿನ ಸಂಸ್ಕೃತಿ, ಜನಪದ ಇತ್ಯಾದಿಗಳನ್ನೆಲ್ಲ ತಿಳಿಸುತ್ತ ಹೋದಳು. ಚಿಕ್ಕ ಹುಡುಗಿ ಎಷ್ಟೆಲ್ಲ ತಿಳಿದುಕೊಂಡಿದ್ದಾಳಲ್ಲ ಎನ್ನಿಸಿತು ನನಗೆ.
`ಆಶ್ನಾ… ನಿನ್ ಹೆಸರು ಬಹಳ ವಿಶಿಷ್ಟವಾಗಿದೆ. ಏನಿದರ ಅರ್ಥ..?’ ಎಂದು ಕೇಳಿದೆ.
ಆಶ್ನಾ ಅದಕ್ಕೆ ಇಂಗ್ಲೀಷಿನಲ್ಲಿಯೇ Beloved, Devoted to Love, Friend, The one to be acknowledged or praised; beloved; devoted to love ಎನ್ನುವ ಅರ್ಥವಿದೆ ನನ್ನ ಹೆಸರಿಗೆ ಎಂದಳು. ನಾನು ಅಚ್ಚರಿ ಪಟ್ಟೆ. ನನಗರಿವಿಲ್ಲದಂತೆ `ಅರ್ಥ ಎಷ್ಟು ಚನ್ನಾಗಿದೆ ಅಲ್ಲವಾ…’ ಎಂದೆ ಕನ್ನಡದಲ್ಲಿ.
ಆಕೆ ತಕ್ಷಣವೇ `ಕನ್ನಡ್…’ ಎಂದಳು.
ನಾನು ಹಾಗೂ ಸಂಜಯ ಇಬ್ಬರೂ `ಹೌದು..’ ಎಂದೆವು.
`ಯಾಕೆ ನಿಂಗೆ ಕನ್ನಡ ಬರುತ್ತಾ?’ ಸಂಜಯ ಕೇಳಿದ್ದ.
`ಹು… ಥೋಡಾ ಥೋಡಾ…’ ಎಂದಳು ಆಶ್ನಾ.
`ಹೇಗೆ? ಕನ್ನಡ ಹೇಗೆ ಗೊತ್ತು ನಿಂಗೆ?’ ಅಚ್ಚರಿಯಿಂದಲೇ ಕೇಳಿದ್ದೆ ನಾನು.
`ನಾನು ಕನ್ನಡ ಕಲಿತಿದ್ದೇನೆ. ಅಲ್ಪ, ಸ್ವಲ್ಪ.. ಹೀಗೆ ಯಾರಾದರೂ ಬಂದಾಗ ಮಾತನಾಡಲು ಬೇಕಾಗುತ್ತದೆ ಎನ್ನುವ ಕಾರಣಕ್ಕೆ.. ಕಲಿತಿದ್ದೇನೆ.. ಇನ್ನೂ ಕೆಲವು ಭಾಷೆಗಳು ಬರುತ್ತವೆ ನನಗೆ… ‘ ಎಂದು ಆಶ್ನಾ ಹೇಳಿದಾಗ ನಾವು ಮತ್ತಷ್ಟು ಅಚ್ಚರಿಗೆ ಒಳಗಾಗಿದ್ದೆವು.
`ಯಾವ್ಯಾವ ಭಾಷೆ ಬರುತ್ತೆ ನಿಂಗೆ..?’ ಎಂದು ಕೇಳಿದೆ.
`ಹಿಂದಿ, ಇಂಗ್ಲೀಷ್, ಅಸ್ಸಾಮಿ, ಬೋಡೋ, ಮಣಿಪುರಿ, ಬೆಂಗಾಲಿ, ಕನ್ನಡ..’ ಎಂದಳು ಆಶ್ನಾ.
`ಇಷ್ಟೆಲ್ಲ ಹೇಗೆ? ಯಾವಾಗ ಕಲಿತೆ?’
`ನಮ್ಮದು ಅಸ್ಸಾಮ್. ಸಹಜವಾಗಿ ಮಾತ್ರಭಾಷೆ ಅಸ್ಸಾಮ್, ಜತೆಗೆ ಇಲ್ಲಿನ ಎಲ್ಲರಿಗೂ ಬೆಂಗಾಲಿ ಬಂದೇ ಬರುತ್ತೆ. ಬೆಂಗಾಲಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರಲ್ಲ. ಅವರ ಜತೆ ಮಾತನಾಡಬೇಕಲ್ಲ.. ಜತೆಗೆ ನಮ್ಮ ಈಶಾನ್ಯ ರಾಜ್ಯದಲ್ಲಿ ಅಲ್ಲಿನ ಸ್ಥಳೀಯ ಭಾಷೆಗಳನ್ನು ಸಹಜವಾಗಿಯೇ ನಾವು ಮಾತನಾಡುತ್ತೇವೆ. ಮಣಿಪುರಿ, ಮಿಜೋ, ಬೋಡೋ ಹೀಗೆ ಹಲವು. ಇವು ಆಡುನುಡಿಯಂತೆ. ನಾನೂ ಕಲಿತೆ.. ಇನ್ನು ಹಿಂದಿ, ಇಂಗ್ಲೀಷ್ ಶಾಲೆಯಲ್ಲಿ ಕಲಿಸಿದರು. ನಾನು ಸ್ವಲ್ಪ ಚನ್ನಾಗಿ ಕಲಿತುಕೊಂಡೆ…’ ಎಂದಳು ಆಶ್ನಾ..
`ಅದು ಸರಿ… ಕನ್ನಡ.. ಕನ್ನಡ ಹೇಗೆ ಕಲಿತದ್ದು..?’ ನಾನು ಕುತೂಹಲದಿಂದ ಕೇಳಿದ್ದೆ. ಯಾವುದೋ ಅಸ್ಸಾಮಿ ಹುಡುಗಿ ಕನ್ನಡ ಮಾತನಾಡಿದ್ದು ನನಗೂ ಸಂಜಯನಿಗೂ ತೀವ್ರ ಅಚ್ಚರಿಯನ್ನು ತಂದಿದ್ದಲ್ಲದೇ ಆಕೆಯ ಬಗ್ಗೆ ಕುತೂಹಲವನ್ನು ಹುಟ್ಟು ಹಾಕಿತ್ತು.
`ಯಾಕೋ ಗೊತ್ತಿಲ್ಲ.. ಹೀಗೆ ಒಂದು ದಿನ ಶಾಲೆಯಲ್ಲಿ ಶಿಕ್ಷಕರು ಏನನ್ನೋ ಕಲಿಸುತ್ತಿದ್ದಾಗ ಕನ್ನಡ ಎನ್ನುವ ಭಾಷೆ ಇದೆ, ಅದು ದಕ್ಷಿಣ ಭಾರತದ್ದು… ಭಾರತದ ಅಧಿಕೃತ ಭಾಷೆಗಳಲ್ಲಿ ಒಂದು ಎಂದರು. ತಮಿಳು, ತೆಲಗು, ಮಲೆಯಾಳಂ ಕುರಿತೂ ಅವರು ಹೇಳಿದ್ದರಾದರೂ, ಅವುಗಳ ಕುರಿತು ಗಮನ ಹೋಗಲಿಲ್ಲ. ಕನ್ನಡದ ಬಗ್ಗೆ ಅಲ್ಲಿ, ಇಲ್ಲಿ ಅಂತರ್ಜಾಲದಲ್ಲಿ ಹುಡುಕಿ ತಿಳಿದೆ. ಒಂದಷ್ಟು ಸಾರಿ ಕೆಲವು ಕನ್ನಡದವರು ಇಲ್ಲಿ ಪ್ರವಾಸಕ್ಕೆ ಬಂದಿದ್ದರು. ಅವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರ ಬಳಿ ನಾನು ಕಲಿತೆ…’ ಎಂದಳು ಆಶ್ನಾ.
ನಮಗೆ ಆಶ್ನಾಳ ಬಗ್ಗೆ ವಿಶೇಷ ಗೌರವ ಹುಟ್ಟಿತು. ಚಿಕ್ಕ ಹುಡುಗಿ ಎಷ್ಟೆಲ್ಲ ತಿಳಿದಿದ್ದಾಳ್ಲ, ಏನೆಲ್ಲ ಕಲಿತುಕೊಂಡಿದ್ದಾಳಲ್ಲ.. ಎಂದುಕೊಂಡೆ.
`ಸರಿ ನಿನ್ನ ಕುಟುಂಬದ ಬಗ್ಗೆ ಹೇಳು..’ ನಾನು ಕೇಳಿದೆ.
`ನಮ್ಮದು ಬಹು ದೊಡ್ಡ ಕುಟುಂಬ.. ಅಮ್ಮ, ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಹೀಗೆ ಹಲವರು ಇದ್ದಾರೆ… ಅವಿಭಕ್ತ ಕುಟುಂಬ ನಮ್ಮದು..’ ಎಂದಳು.
`ನಿನ್ನ ತಂದೆ… ಏನು ಮಾಡುತ್ತಿದ್ದಾರೆ? ಯಾವ ಊರು ನಿನ್ನದು?’ ಎಂದೆ.
`ನನ್ನ ತಂದೆ…. ನನ್ನ ತಂದೆ… ನನಗೆ ತಂದೆ ಇಲ್ಲ…’ ಎಂದು ಕ್ಷೀಣವಾಗಿ ಹೇಳಿದಳು. ಛೇ… ಪಾಪ… ಎಂದು ಗೊಣಗಿದ ಸಂಜಯ. ನನಗೂ ಒಂಥರಾ ಅನ್ನಿಸಿತು.
`ನಿನ್ನ ತಾಯಿ…?’ ಎಂದೆ
`ಆಕೆ ಊರಿನಲ್ಲಿದ್ದಾರೆ. ಅರುಣಾಚಲ ಪ್ರದೇಶದ ವಿಜೋಯ್ ನಗರ ಎಂಬಲ್ಲಿ ನನ್ನ ಮನೆ ಇದೆ. ಅಲ್ಲಿ ಎಲ್ಲ ವಾಸಿಸುತ್ತಿದ್ದಾರೆ.’ ಎಂದಳು.
`ತಾಯಿ ಏನು ಮಾಡುತ್ತಾರೆ..’ ಎಂದೆ
`ಅವರಿಗೆ ಹುಷಾರಿಲ್ಲ. ಅದೇನೋ ಖಾಯಿಲೆ ಆಕೆಯನ್ನು ಬಾಧಿಸುತ್ತಿದೆ. ಒಂದೆರಡು ವರ್ಷಗಳಾದವು ಆಕೆ ಹಾಸಿಗೆ ಹಿಡಿದು… ‘ ಎಂದಾಗ ನಮ್ಮ ಮನಸ್ಸಿನಲ್ಲಿ ಉಂಟಾದ ಆಘಾತ ಅಷ್ಟಿಷ್ಟಲ್ಲ. ನಾನು ಹಾಗೂ ಸಂಜಯ ಇಬ್ಬರೂ ಮೌನವಾಗಿ ಮುಖ ಮುಖ ನೋಡಿಕೊಂಡು ನಿಟ್ಟುಸಿರು ಬಿಟ್ಟೆವು.
ತದನಂತರದಲ್ಲಿ ಆಕೆ ನಮ್ಮ ಜೀಪು ಪ್ರತಿ ಊರನ್ನು ಹಾದು ಹೋಗುವಾಗಲೂ ಆ ಊರಿನ ವಿಶೇಷತೆಗಳು, ಅಲ್ಲಿನ ಸಂಪ್ರದಾಯ, ಸಂಸ್ಕೃತಿ, ಆಚರಣೆ ಹೀಗೆ ಹೇಳುತ್ತಲೇ ಹೋದಳು. ಈಗ ಸೌಮ್ಯವಾಗಿ ಹರಿಯುವ ಬ್ರಹ್ಮಪುತ್ರಾ ನದಿ ಮಳೆಗಾಲದಲ್ಲಿ ರೌದ್ರಾವತಾರ ತಾಳಿ ಇಕ್ಕೆಲಗಳ ಅದೆಷ್ಟೋ ಕಿಲೋಮೀಟರ್ ಗಳನ್ನು ಆಪೋಶನ ತೆಗೆದುಕೊಳ್ಳುವುದು ಇತ್ಯಾದಿಗಳ ಬಗ್ಗೆ ಕೂಡ ಸವಿಸ್ತಾರವಾಗಿ ಹೇಳಿದಾಗ ನನಗೆ ಆಕೆಯ ಕುರಿತು ಮೂಡಿದ್ದ ಗೌರವದ ಭಾವನೆ ಇನ್ನಷ್ಟು ಹೆಚ್ಚಿತು.
ಗುವಾಹಟಿಯಿಂದ ಹೊರಟಿದ್ದ ನಮ್ಮ ಜೀಪು ಬೆಜೇರಾ, ಸಿಪಾಜಾರ್, ಮಂಗಲ್ ದೋಯಿ, ರೋವ್ಟಾ, ಓರಾಂಗ್, ಸಿರಾಜುಲಿ ಮೂಲಕ ತೇಜ್ಪುರಕ್ಕೆ ಬಂದಿತ್ತು. ಅಲ್ಲಿ ಊಟ ಮಾಡಿದೆವು… ತದನಂತರ ಮುಂದುವರಿದೆವು. ದಾಮ್ವೆ ಹತ್ತಿರ ಬಂದಂತೆಲ್ಲ ನನ್ನೆದೆ ಇನ್ನಷ್ಟು ವೇಗವಾಗಿ ಹೊಡೆದುಕೊಳ್ಳಲು ಆರಂಭಿಸಿತ್ತು.
ತೇಜ್ಪುರದ ನಂತರ ನಮ್ಮ ಜೀಪು ದಲೈಬಿಲ್, ಬೆಹಲಿ, ಗೋಹ್ಪುರ್, ಬಿಹ್ಪುರ್, ನಾರ್ತ್ ಲಖೀಮ್ಪುರ, ಗೋಗಾಮುಖ್ ಗಳನ್ನು ಹಾದು ದಾಮ್ವೇ/ದಾಮ್ಚೇಯನ್ನು ತಲುಪಿತು.
ಅಲ್ಲಿ ಜೀಪು ಇಳಿಯುತ್ತಿದ್ದ ಹಾಗೆ ಆಶ್ನಾ ನನ್ನ ಬಳಿ ` ಸರ್ ಇದು ದಾಮ್ವೇ ಅಥವಾ ದಾಮ್ಚೇ ಅಲ್ಲ.. ಇದನ್ನು ದೇಮ್ಜಿ ಎಂದು ಕರೆಯುತ್ತಾರೆ..’ ಎಂದಳು. ನಂತರ ನಿಮಗೆ ಎಲ್ಲಿ ಹೋಗಬೇಕು ಹೇಳಿ ಎಂದಳು. ನಾನು ತಬ್ಬಿಬ್ಬಾದೆ..

(ಮುಂದುವರಿಯುವುದು)

Sunday, March 31, 2019

ಅನುರಕ್ತ (ಕಥೆ-2)



ನಂತರ ಆಕೆ ಇದ್ದಕ್ಕಿದ್ದಂತೆ ನಾಪತ್ತೆಯಾದಳು. ನಾನು ಆತಂಕಕ್ಕೆ ಈಡಾದೆ. ಆಕೆ ನಾಪತ್ತೆಯಾದ ಹಲವು ದಿನಗಳ ನಂತರ ಆಕೆಯಿಂದ ಒಂದು ಪತ್ರ ಬಂತು. ಅದರಲ್ಲಿ ಆಕೆ ತಾನು ಊರಿಗೆ ಮರಳಿದ್ದೇನೆಂದೂ, ತನ್ನ ತಂದೆಗೆ ವಿಷಯ ಗೊತ್ತಾಗಿ ಬಲವಂತದಿಂದ ಕರೆದುಕೊಂಡು ಬಂದಿದ್ದಾರೆಂದೂ ತಿಳಿಸಿದ್ದಳು. ನಾನು ಒಮ್ಮೆ ನಿರಾಳನಾದರೂ ತದನಂತರದಲ್ಲಿ ಸ್ವಲ್ಪ ಬೇಜಾರೇ ಆಗಿತ್ತು.
ಅದೇ ಪತ್ರದಲ್ಲಿ, ತಂದೆ ತನ್ನನ್ನು ಬೇರೊಂದು ಮದುವೆಗೆ ಒತ್ತಾಯ ಮಾಡುತ್ತಿದ್ದಾರೆಂದೂ, ತಾನದಕ್ಕೆ ಒಪ್ಪಿಲ್ಲವೆಂದೂ, ನನಗಾಗಿ ಕಾಯುತ್ತಿರುತ್ತೇನೆ ಎಂದೂ ತಿಳಿಸಿದ್ದಳು. ಅಲ್ಲದೇ ಆಕೆಯ ಗರ್ಭಿಣಿಯಾದ ವಿಷಯವನ್ನೂ ತಿಳಿಸಿದ್ದಳು. ನನಗೆ ಅದು ಆತಂಕಕ್ಕೆ ಈಡುಮಾಡಿತ್ತು.
ನಾನಿನ್ನೂ ಬದುಕಿನಲ್ಲಿ ನೆಲೆ ಕಂಡುಕೊಂಡಿರಲಿಲ್ಲ. ಓದು ಆಗತಾನೆ ಮುಗಿದಿತ್ತು. ಆದರೆ ಜೀವನ ನಡೆಸಲು ಯಾವುದೇ ಉದ್ಯೋಗವೂ ಸಿಕ್ಕಿರಲಿಲ್ಲ. ನಾನು ಉದ್ಯೋಗಕ್ಕಾಗಿ ಹಲವು ಕಂಪನಿಗಳಿಗೆ ನನ್ನ ಸ್ವವಿವರಗಳನ್ನು ಕಳಿಸಿದ್ದೆ. ಹಲವು ಸಂದರ್ಶನಗಳನ್ನೂ ಎದುರಿಸಿದ್ದೆ. ಆಕೆ ನಂತರದ ದಿನಗಳಲ್ಲಿ ಮತ್ತೂ ಕೆಲವು ಪತ್ರಗಳನ್ನು ಬರೆದಿದ್ದಳು. ನಾನು ಒಂದೆರಡು ಸಾರಿ ಉತ್ತರ ಕೊಟ್ಟರೂ ನಂತರದಲ್ಲಿ ಅವುಗಳನ್ನು ನಿರ್ಲಕ್ಷ್ಯ ಮಾಡಿದ್ದೆ.
ಹೀಗಿದ್ದಾಗಲೇ ನನಗೆ ಜಾಬ್ ಕೂಡ ಸಿಕ್ಕಿತು. ಆ ನಂತರದಲ್ಲಿ ಆಕೆ ನನ್ನ ಮನಸ್ಸಿನಿಂದ ಕಾರಣವಿಲ್ಲದೇ ದೂರಾಗತೊಡಗಿದಳು. ಬಹುಶಃ ನನಗೆ ಉದ್ಯೋಗ ಸಿಕ್ಕಿತ್ತಲ್ಲ. ಹಾಗಾಗಿ ಅದರಲ್ಲಿ ಬ್ಯುಸಿಯೂ ಆಗಿದ್ದೂ ಕಾರಣವಾಗಿರಬೇಕು. ಒಟ್ಟಿನಲ್ಲಿ ನನಗೆ ಅವಳ ನೆನಪು ಮರೆಯತೊಡಗಿತ್ತು. ಆಕೆ ಮಾತ್ರ ಪತ್ರಗಳ ಮೇಲೆ ಪತ್ರಗಳನ್ನು ಬರೆಯುತ್ತಲೇ ಇದ್ದಳು. ಪ್ರತಿ ಪತ್ರದ ಕೊನೆಯಲ್ಲಿಯೂ ನಾನು ಸದಾ ನಿನಗಾಗಿ ಕಾಯುತ್ತಲೇ ಇರುತ್ತೇನೆ ಎನ್ನುವ ಸಾಲುಗಳಿರುತ್ತಿದ್ದವು. ಆಮೇಲೆ ಕೆಲವು ದಿನಗಳ ನಂತರ ಆಕೆಯಿಂದ ಪತ್ರ ಬರುವುದು ನಿಂತು ಹೋಯಿತು. ನನಗೆ ಆಗ ಆತಂಕವಾದರೂ ದಿನಕಳೆದಂತೆಲ್ಲ ನಾನು ಅವಳ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ.
ಆ ಸಂದರ್ಭದಲ್ಲೇ ನನಗೆ ಮನೆಯಲ್ಲಿ ಹೆಣ್ಣು ನೋಡಲು ಆರಂಭಿಸಿದ್ದರು. ಮನೆಯವರಿಗೆ ಕೊನೆಗೆ ಒಬ್ಬ ಹುಡುಗಿ ಇಷ್ಟವಾಗಿ ನನ್ನ ಬಳಿ ಕೇಳೀದ್ದರು. ನಾನು ಮೊದ ಮೊದಲು ಬೇಡ ಎಂದರೂ ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು ಮದುವೆಗೆ ಒಪ್ಪಿಕೊಂಡೆ. ಶುಭ ಮುಹೂರ್ತ ಒಂದರಲ್ಲಿ ನನಗೆ ಮದುವೆಯೂ ಆಯಿತು. ಮದುವೆಯ ನಂತರದ ಒಂದೆರಡು ವರ್ಷಗಳಲ್ಲಿ ನಮ್ಮ ಬದುಕಿನ ಘಳಿಗೆ ಬಹಳ ರಸಮಯವಾಗಿತ್ತು. ಆ ಸಂದರ್ಭದಲ್ಲೆಲ್ಲೂ ಅವಳು ನನಗೆ ನೆನಪಾಗಲೇ ಇಲ್ಲ. ದಿನ ಕಳೆಯಿತು, ತಿಂಗಳುಗಳು ಉರುಳಿದವು. ಒಂದು ಆರಾಯಿತು. ಆರು ಹನ್ನೆರಡಾಯಿತು. ನೋಡ ನೋಡುತ್ತ ವರ್ಷಗಳೂ ಸಂದವು. ನಮ್ಮ ಬದುಕು ಕಳೆಯುತ್ತಲೇ ಇತ್ತು. ಆದರೆ ನಮಗೆ ಎಲ್ಲ ಸಂತಸದ ನಡುವೆ ಕೂಡ ಒಂದು ಕೊರಗು ಕಾಡುತ್ತಲೇ ಇತ್ತು. ನಮಗೆ ಮಕ್ಕಳಾಗಿರಲಿಲ್ಲ.
ಮದುವೆಯಾದ ಹೊಸತರಲ್ಲಿ ಈಗ ಬೇಡ, ಈಗ ಮಕ್ಕಳು ಬೇಡ ಎಂದುಕೊಂಡೆವು. ಆಮೇಲಾಮೇಲೆ ಮಕ್ಕಳ ಆಸೆ ಹೆಚ್ಚಾಯಿತು. ಮದುವೆಯಾಗಿ ದಶಕಗಳು ಕಳೆಯುತ್ತ ಬಂದವು. ಆಗ ಮಕ್ಕಳನ್ನು ಮಾಡಿಕೊಳ್ಳೋಣ ಎಂದುಕೊಂಡರೆ ಊಹೂ.. ಆಗಲೇ ಇಲ್ಲ. ಕೊನೆಗೊಮ್ಮೆ ವೈದ್ಯರನ್ನು ಭೇಟಿ ಮಾಡಿದೆವು. ಆಗ ವೈದ್ಯರು ನನ್ನಾಕೆಗೆ ಮಕ್ಕಳಾಗುವುದಿಲ್ಲ ಎಂದು ಹೇಳಿದಾಗ ನನಗೆ ಆಕಾಶವೇ ಒಮ್ಮೆ ಧರೆಗೆ ಇಳಿದು ಬಂದಿತ್ತು. ತದನಂತರದಲ್ಲಿ ನಮ್ಮ ಬದುಕು ಯಾಂತ್ರಿಕವಾಗಿ ಸಾಗುತ್ತಿತ್ತು.
ಊಟ, ತಿಂಡಿ, ನಿದ್ದೆ, ಸಹಜೀವನ, ಮಿಲನ, ಉದ್ಯೋಗ ಇವುಗಳೆಲ್ಲ ಅದರ ಪಾಡಿಗೆ ಅದು ನಡೆದು ಹೋಗುತ್ತಿದ್ದವು. ನನ್ನಾಕೆ ಕೂಡ ಒಂದೆರಡು ಸಾರಿ ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯೋಣವಾ ಎಂದೂ ಕೇಳಿದ್ದಳು. ಅದಕ್ಕೆ ನಾನು ಯಾವುದೇ ಉತ್ತರವನ್ನೂ ನೀಡಿರಲಿಲ್ಲ. ಇಬ್ಬರ ಮನಸ್ಸಿನಲ್ಲಿಯೂ ಕೊರಗಂತೂ ಇದ್ದೇ ಇತ್ತು.
ಹೀಗೆ ಬದುಕು ಸಾಗುತ್ತಿದ್ದ ಸಂದರ್ಭದಲ್ಲಿ ವಿದ್ಯುಲ್ಲತಾ ನೆನಪಾಗಿದ್ದಳು. ಇದೀಗ 13-14 ವರ್ಷಗಳಾದ ಮೇಲೆ ಈಗ ವಿದ್ಯುಲ್ಲತಾಳ ನೆನಪು ನನ್ನ ಬಿಡದೇ ಕಾಡುತ್ತಿದೆ. ಆಕೆ ಹೇಗಿದ್ದಾಳೋ, ಏನು ಮಾಡುತ್ತಿದ್ದಾಳೋ ಎನ್ನುವುದು ನನ್ನ ಒಂದೇ ಸಮನೆ ಕಾಡುತ್ತಿದೆ. ಒಮ್ಮೆ ಆಕೆಯನ್ನು ನೋಡಬೇಕೆಂಬ ತುಡಿತ ಹೆಚ್ಚುತ್ತಿದೆ. ಅವಳನ್ನು ನೋಡಬೇಕು, ಹೇಗಿದ್ದೀಯಾ ಅಂತ ಕೇಳಬೇಕು, ಯಾಕೋ ಆ ದಿನಗಳಲ್ಲಿ ನಾನು ನಿನ್ನನ್ನು ದೂರ ಮಾಡಿಕೊಳ್ಳಬಾರದಿತ್ತು ಅಂತೆಲ್ಲ ಹೇಳಬೇಕು ಅನ್ನಿಸುತ್ತಿದೆ ಗೆಳೆಯಾ… ನನ್ನ ತಪ್ಪಿಗೆಲ್ಲ ಕ್ಷಮೆ ಕೇಳಬೇಕು ಅನ್ನಿಸುತ್ತಿದೆ… ಎಂದು ಸಂಜಯನ ಬಳಿ ಒಂದೇ ಉಸಿರಿಗೆ ಹೇಳಿದೆ.
ಸಂಜಯ ಒಮ್ಮೆ ತಲೆ ಕೊಡವಿಕೊಂಡ.
ಆ ದಿನಗಳಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ನೀನು ತಪ್ಪಂತೂ ಮಾಡಿದ್ದೆ ದೋಸ್ತ… ಆಗಲೇ ನೀನು ಇದನ್ನು ಸರಿಪಡಿಸಿಕೊಳ್ಳಬೇಕಿತ್ತು… ಎಂದ…
ಹೇಗೆ ಮಾಡಬೇಕಿತ್ತು ದೋಸ್ತ? ಅಪ್ಪ ಅಮ್ಮನ ಮಾತಿಗೆ ಕಟ್ಟು ಬಿದ್ದಿದ್ದೆನಲ್ಲ. ವಿದ್ಯುಲ್ಲತಾಳಿಗಿಂತ ಅವರೇ ಮುಖ್ಯವಾಗಿದ್ದರಲ್ಲ… ಎಂದು ನಿಡುಸುಯ್ದೆ.
ಹ್ಮ್… ಅದೂ ಹೌದು.. ಆಗ ಮಾಡಿದ್ದು ಆವಾಗಿನದ್ದು.. ಅದರ ಸರಿ-ತಪ್ಪುಗಳ ಲೆಕ್ಕಾಚಾರ ಈಗ ಮಾಡುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ ಬಿಡು… ಅದ್ ಸರಿ, ನಿನ್ನ ಮನೆಯವಳಿಗೆ ವಿದ್ಯುಲ್ಲತಾಳ ಬಗ್ಗೆ ಗೊತ್ತಾ… ಎಂದು ಕೇಳಿದ ಸಂಜಯ..
ಹು… ತೀರಾ ಇತ್ತೀಚೆಗೆ ಅವಳಿಗೆ ವಿದ್ಯುಲ್ಲತಾಳ ಬಗ್ಗೆ ಹೇಳಿದೆ. ಮೊದಲ ಸಾರಿ ಸಿಟ್ಟಾದಳು, ಮಾತು ಬಿಟ್ಟಳು. ಆ ನಂತರದಲ್ಲಿ ಅವಳಿಗೆ ಆ ದಿನಗಳ ಬದುಕು, ವಾಸ್ತವವನ್ನು ವಿಸ್ತಾರವಾಗಿ ತಿಳಿಸಿದೆ. ಅರ್ಥ ಮಾಡಿಕೊಂಡಳು. ನಾನು ಈಗ ಅಸ್ಸಾಮಿಗೆ ಹೊರಟಿದ್ದೀನಲ್ಲ, ಅದಕ್ಕೆ ಪ್ರಮುಖ ಕಾರಣಕರ್ತೆ ಅವಳೇ.. ಒಮ್ಮೆ ಹೋಗಿ ನೋಡಿ ಬನ್ನಿ ಎಂದಳು. ಸಾಧ್ಯವಾದರೆ ಆಕೆಯನ್ನು ಕರೆದುಕೊಂಡು ಬನ್ನಿ ಎಂದಳು… ಹೀಗಾಗಿ ಹೊರಟಿದ್ದೇನೆ ನೋಡು ಎಂದೆ..
ನಿನ್ನಾಕೆ ಬಹಳ ದೊಡ್ಡ ಮನಸ್ಸಿನವಳು… ಎಂದ ಸಂಜಯ..

--
ಇದಾಗಿ ಎರಡೂವರೆ ದಿನಗಳ ನಂತರ ನಮ್ಮನ್ನು ಹೊತ್ತಿದ್ದ ರೈಲು ಆಂಧ್ರ, ಒಡಿಶಾ, ಕೋಲ್ಕತ್ತಾ, ಸಿಲಿಗುರಿ ಮುಂತಾದ ಊರುಗಳನ್ನು ದಾಟಿ ಅಸ್ಸಾಮನ್ನು ತಲುಪಿತು. ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿಯೇ ಅತ್ಯಂತ ದೊಡ್ಡ ಮಹಾನಗರವಾದ ಗುವಾಹಟಿಯನ್ನು ನಾವು ತಲುಪಿದ್ದೆವು.
`ಇಲ್ಲಿಂದ ಎಲ್ಲಿಗೆ ಹೋಗೋದು..?’ ಎಂದು ಕೇಳಿದ್ದ ಸಂಜಯ.
ಸತ್ಯವಾಗಿ ಹೇಳಬೇಕು ಎಂದರೆ ನನಗೆ ಎಲ್ಲಿಗೆ ಹೋಗಬೇಕು ಎನ್ನೋದು ಗೊತ್ತಿಲ್ಲ… ಎಂದೆ.
ವಾಟ್.. ಎಂದು ಬೆಚ್ಚಿ ಬಿದ್ದ ಸಂಜಯ, ನಿಂಗೆ ಮಂಡೆ ಸಮಾ ಇಲ್ಲೆ ಎಂದು ಬೈದ. ಇಲ್ಲಿವರೆಗೆ ಬಂದ ಮೇಲೆ ಎಲ್ಲಿಗೆ ಹೋಗೋದು ಅಂತ ಕೇಳ್ತೀಯಲ್ಲ ಎಂದು ಸಿಟ್ಟಿನಿಂದ ನನಗೆ ಬಯ್ಯಲು ಆರಂಭಿಸಿದ.
ಇರು ಮಾರಾಯಾ.. ಆಕೆ ಬರೆದ ಪತ್ರದಲ್ಲಿ ಯಾವುದೋ ಊರಿನ ಹೆಸರನ್ನು ಹೇಳಿದ್ದಳು. ಆದರೆ ಅದು ಮರೆತು ಹೋಗಿದೆ. ಅದೇನೋ ದಾಮ್ವೇ ಅಂತಲೋ, ದಾಮ್ಚೇ ಅಂತಲೋ ಏನೋ ಒಂದು ಹೆಸರು ಹೇಳಿದ್ದಳು. ಬ್ರಹ್ಮಪುತ್ರಾ ನದಿಯ ಪಕ್ಕದಲ್ಲಿದೆ ನಮ್ಮೂರು ಅಂತ ಹೇಳೀದ್ದಳು ಎಂದೆ.
ತಥ್.. ಇಂವನ ನಂಬಿಕೊಂಡು ಇಲ್ಲಿಗೆ ಬಂದೆ. ಇಂವನಿಗೆ ಸರಿಯಾದ ಅಡ್ರೆಸ್ಸೇ ಗೊತ್ತಿಲ್ಲ.. ಹಲ್ಕಟ್ ನನ್ಮಗ.. ಅಂತ ಸಂಜಯ ಬೈದವನೇ, ಸರಿ ಮುಂದೆ ಏನು ಮಾಡೋದು ಅಂದ.
ಇಲ್ಲಿ ಸ್ಥಳೀಯ ಗೈಡ್ ಗಳು ಸಿಕ್ತಾರಂತೆ. ಅವರನ್ನು ಕರೆದುಕೊಂಡು ದಾಮ್ವೇಯೋ ದಾಮ್ಚೇಯೋ ಏನೋ ಒಂದು ಊರಿದೆಯಲ್ಲ ಅಲ್ಲಿಗೆ ಹೋಗೋಣ. ಆಕೆಯನ್ನು ಹುಡುಕೋಣ.. ಎಂದೆ.
ಇದು ಆಗಿ, ಹೋಗುವ ಮಾತಲ್ಲ… ಎಂದ ಸಂಜಯ..
ಮಾಡೋಣ ಮಾರಾಯಾ, ನನಗ್ಯಾಕೋ ಆಕೆಯನ್ನು ಹುಡುಕುತ್ತೇವೆ, ನಾನು ಅವಳನ್ನು ಭೇಟಿಯಾಗುತ್ತೇನೆ ಎಂಬ ದೃಢ ನಂಬಿಕೆ ಹೊಂದಿದ್ದೇನೆ. ಮೊದಲು ಇಲ್ಲಿ ಗೈಡ್ಗಳನ್ನು ಒದಗಿಸುವ ಸ್ಥಳಕ್ಕೆ ಹೋಗೋಣ ನಡಿ.. ಎಂದೆ.
ಗೊಣಗುತ್ತಲೇ ನನ್ನ ಜತೆ ಬಂದ ಸಂಜಯ. ನಾನು ಗುವಾಹಟಿಯ ಪ್ರಮುಖ ಬೀದಿಯಲ್ಲಿರುವ, ಟೂರಿಸ್ಟ್ ಆಫೀಸಿಗೆ ಹೋದೆ. ಅಲ್ಲಿದ್ದ ವ್ಯಕ್ತಿ ಮೊದಲು ಅಸ್ಸಾಮಿಯಲ್ಲಿ ಮಾತನಾಡಿದ, ನಂತರ ಬೆಂಗಾಲಿಯಲ್ಲಿ ಮಾತನಾಡಿದ. ನಾವು ಹಿಂದಿ ಹಾಗೂ ಇಂಗ್ಲೀಷಿನಲ್ಲಿ ಮಾತನಾಡಲು ಆರಂಭಿಸಿದ ಕೂಡಲೇ ಆತನೂ ಹಿಂದಿ ಹಾಗೂ ಇಂಗ್ಲೀಷ್ ಶುರುಹಚ್ಚಿಕೊಂಡ. ನಾನು ಅವನ ಬಳಿ ದಾಮ್ವೇ ಎನ್ನುವ ಊರಿಗೆ ಹೋಗಬೇಕೆಂದೂ, ಯಾರಾದರೂ ಸ್ಥಳೀಯ ಭಾಷೆ ಹಾಗೂ ಹಿಂದಿ-ಇಂಗ್ಲೀಷ್ ಭಾಷೆ ಗೊತ್ತಿರುವ ಗೈಡ್ ಇದ್ದರೆ ಬೇಕೆಂದೂ ಹೇಳಿದೆ.
ಆತ ಯಾರು ಯಾರಿಗೂ ಪೋನ್ ಮಾಡಿದ. ಹಲವು ಕಡೆ ಪೋನ್ ಮಾಡಿದ ನಂತರ ನಮ್ಮ ಕಡೆ ತಿರುಗಿ `ನೋಡಿ ಒಬ್ಬರು ಸಿಕ್ಕಿದ್ದಾರೆ. ಅವರು ವೃತ್ತಿಪರ ಗೈಡ್ ಅಲ್ಲ. ಪ್ರೌಢಶಾಲೆ ಓದುತ್ತಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಗೈಡ್ ಆಗಿ ಕೆಲಸ ಮಾಡ್ತಾರೆ. ಅವರಿಗೆ ಐದಾರು ಭಾಷೆಗಳು ಬರುತ್ತವೆ. ಅವರನ್ನು ನಿಮ್ಮ ಜತೆ ಕಳಿಸಬಹುದು. ಆದರೆ ನಿಮ್ಮ ಜತೆ ಗೈಡ್ ಆಗಿ ಬರುತ್ತಿರುವವರು ಒಬ್ಬಳು ಹುಡುಗಿ. ನೀವು ಆಕೆಯ ಜತೆಯಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು.. ಹಾಗೆ ಹೀಗೆ ಎಂದೆಲ್ಲ ಉದ್ದನೆಯ ಭಾಷಣ ಬಿಗಿದ.
ಸರಿ.. ಕಳಿಸಿ ಎಂದೆ. ನಂತರ ಹಲವಾರು ಫಾರ್ಮುಗಳಿಗೆ ಸಹಿ ಹಾಕಿಸಿಕೊಂಡ. ಮುಂಗಡ ಹಣ ಕೊಡಿ ಎಂದ. ಎಲ್ಲವನ್ನೂ ಕೊಟ್ಟೆವು. ತದನಂತರ ಅಸ್ಸಾಮಿನ ಒಂದು ಮ್ಯಾಪ್ ಕೊಟ್ಟು ನಿಮ್ಮ ಅನುಕೂಲಕ್ಕಿರಲಿ ಇದು ಎಂದ.
ಇದಾಗಿ ಒಂದು ತಾಸಿನ ನಂತರ ಒಬ್ಬ ಬಾಲಕಿ ನಾವಿದ್ದ ಆಫೀಸಿನ ಬಳಿ ಬಂದಳು. ಬಂದವಳೇ ಆ ಆಫೀಸಿನಲ್ಲಿದ್ದ ವ್ಯಕ್ತಿಯ ಬಳಿ ಕೆಲವು ಸಮಯ ಮಾತನಾಡಿದಳು. ತದನಂತರ ನಮ್ಮ ಬಳಿ ತಿರುಗಿ ಮುಗುಳ್ನಕ್ಕಳು. ನಾವೂ ಪ್ರತಿಯಾಗಿ ನಕ್ಕೆವು.
ಹಾಯ್.. ಮೈ ನೇಮ್ ಈಸ್ ಆಶ್ನಾ.. ಎಂದಳು.
ನಾವು ಪರಿಚಯ ಮಾಡಿಕೊಂಡೆವು. ಬನ್ನಿ ಎಂದು ಇಂಗ್ಲೀಷಿನಲ್ಲಿಯೇ ಹೇಳಿ ಗುವಾಹಟಿಯ ಬೀದಿಯಲ್ಲಿ ನಡೆಯತೊಡಗಿದಳು. ನಾವು ಹಿಂಬಾಲಿಸಿದೆವು.
ಹೈಸ್ಕೂಲು ಓದುತ್ತಿರುವ ಬಾಲಕಿಯಂತೆ ಕಾಣುತ್ತಿದ್ದ ಆಕೆ ಅಸ್ಸಾಮಿಗರಂತೆ ತೆಳ್ಳಗಿದ್ದಳು. ಚುರುಕಾಗಿದ್ದಳು. `ನಾವು ಬಸ್ಸಿನಲ್ಲಿ ಹೋಗೋದಾ..? ಅಥವಾ ಇನ್ಯಾವುದಾದರೂ ಗಾಡಿ ಮಾಡಿಸಬೇಕಾ ಎಂದು ಕೇಳೀದಳು. ಆಕೆಯ ಇಂಗ್ಲೀಷು ಸ್ಫುಟವಾಗಿತ್ತು. ನಾನು ಆಕೆಯ ಇಂಗ್ಲೀಷಿಗೆ ತಲೆದೂಗಿದೆ.
ಬಸ್ಸು, ಇತರ ವಾಹನಗಳ ಕುರಿತು ಮಾತು ಕತೆ ನಡೆಸಿದ ನಾವು ತದನಂತರ ಒಂದು ಜೀಪನ್ನು ಬಾಡಿಗೆಗೆ ಪಡೆದು ಹೋಗೋಣ ಎಂದು ನಿರ್ಧರಿಸಿದೆವು. ಇನ್ನೊಂದು ಟ್ರಾವೆಲ್ ಆಫೀಸಿಗೆ ಹೋಗಿ ಜೀಪನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಹೊರಟೆವು..
ಇಲ್ಲಿಂದ ನಮ್ಮ ಬದುಕು ಇನ್ನೊಂದು ಮಗ್ಗುಲಿನತ್ತ ಹೊರಟಿತ್ತು..

(ಮುಂದುವರಿಯುವುದು…)