`ಸಂಜಯ ನಿಂಗೆ ನಾನು ನಮ್ಮ ಕಾಲೇಜು ಬದುಕು ಮುಗಿದ ನಂತರ ಹೈದರಾಬಾದ್ ನಲ್ ಇದ್ದಿದ್ದು ಗೊತ್ತಿದ್ದು ಅಲ್ದಾ?' ಎಂದು ನಾನು ಕೇಳಿದ್ದೆ. `ಹೌದೋ ಮಾರಾಯಾ.. ಅದ್ಯಾವ್ದೋ ಎಂಎನ್ಸಿಲಿ ಕೆಲಸ ಸಿಕ್ಕಿದ್ದು ಹೇಳಿ ಒಂದೋ ಎರಡೋ ವರ್ಷ ಇದ್ದಿದ್ದೆ ಅಲ್ದನಾ..' ಸಂಜಯ ಹೇಳಿದ್ದ.
`ಹೌದು.. ಎರಡು ವರ್ಷ ಇದ್ದೆ. ಅದಾಗಿ ಹತ್ತು ವರ್ಷವೇ ಕಳೆದು ಹೋಯ್ತು ನೋಡು..' ಅಂದೆ. ಸಂಜಯ ತಲೆ ಅಲ್ಲಾಡಿಸಿದ್ದ.
ನಮ್ಮ ಕಾಲೇಜು ಬದುಕು ಮುಗಿಸಿ ಅನಾಮತ್ತು 13-14 ವರ್ಷಗಳು ಕಳೆದ ಮೇಲೆ ಒಂದು ದಿನ ಇದ್ದಕ್ಕಿದ್ದಂತೆ ಸಂಜಯನಿಗೆ ನಾನು ಪೋನಾಯಿಸಿದ್ದೆ. ಆಗೀಗ ಪೋನ್ ಮುಖಾಂತರ ನಮ್ಮ ನಿರಂತರ ಸಂಭಾಷಣೆ ಇತ್ತಾದರೂ, ಈಗಿತ್ತಲಾಗಿ ಅದು ಕಡಿಮೆಯೇ ಆಗಿ ಹೋಗಿತ್ತು. ಅಪರೂಪದಲ್ಲಿ ಅಪರೂಪ ಎನ್ನುವಂತೆ ನಾನು ಪೋನ್ ಮಾಡಿದ್ದ ಸಂದರ್ಭದಲ್ಲಿ ಖಾಸಾ ಮಿತ್ರ ಸಂಜಯ ಖುಷಿ ಪಟ್ಟುಕೊಂಡೇ ಪೋನ್ ಎತ್ತಿದ್ದ.
ಆತನ ಬಳಿ ನಾನು `ಕೂಡಲೇ ಹೊರಟು ಬೆಂಗಳೂರಿಗೆ ಬಾ.. ಅಸ್ಸಾಂಗೆ ಹೋಗೋದಿದೆ. ಕನಿಷ್ಟ 15 ದಿನದ ಪಯಣ. ನಿನಗೆ ಸೀಟ್ ಬುಕ್ ಮಾಡಿದ್ದೇನೆ ಎಂದಿದ್ದೆ. ಇದ್ದಕ್ಕಿದ್ದಂತೆ ಅಸ್ಸಾಂಗೆ ಹೋಗೋಣ ಬಾ ಎಂದು ನಾನು ಹೇಳಿದ್ದನ್ನು ಕೇಳಿ ಹೌಹಾರಿದ ಮಿತ್ರ ಮೊದಲಿಗೆ ಆಗೋದಿಲ್ಲ ಎಂದನಾದರೂ ಕೊನೆಗೆ ನನ್ನ ಬೇಡಿಕೆಗೆ, ಒತ್ತಾಯಕ್ಕೆ ಒಪ್ಪಿಕೊಂಡು ಬಂದಿದ್ದ.
ಯಶವಂತಪುರದಿಂದ ಅಸ್ಸಾಂನ ದಿಬ್ರುಘಡ ನಿಲ್ದಾಣ ತಲುಪುವ ಕಾಮಾಖ್ಯಾ ಎಕ್ಸ್ ಪ್ರೆಸ್ ರೈಲು ಮೂರನೇ ಸಾರಿ ಕೂಗುವ ವೇಳೆಗಾಗಲೇ ನಾನು ಸಂಜಯ ನಮ್ಮ ಸೀಟಿನಲ್ಲಿ ಕುಳಿತು ಹರಟೆಯನ್ನು ಕೊಚ್ಚಲು ಆರಂಭಿಸಿದ್ದೆವು. ಅಜಮಾಸು ಮೂರೂವರೆ ಸಹಸ್ರ ಕಿಲೋಮೀಟರುಗಳ ದೂರದ ಪ್ರಯಾಣ ಆರಂಭವಾಗುವ ವೇಳೆಗಾಗಲೇ ನಾನು ಅಸ್ಸಾಂನಲ್ಲಿ ಎಲ್ಲೆಲ್ಲಿಂದ ಎಲ್ಲೆಲ್ಲಿಗೆ ಹೋಗಬೇಕು ಎಂದು ಆಲೋಚಿಸ ಹತ್ತಿದ್ದೆ. ಕರ್ನಾಟಕವನ್ನು ದಾಟಿ, ಆಂಧ್ರದಲ್ಲಿ ಹಾದು, ಒಡಿಶಾವನ್ನು ತಲುಪಿ ಅಲ್ಲಿಂದಾಚೆಗೆ ಪಶ್ಚಿಮ ಬಂಗಾಳದಲ್ಲೆಲ್ಲ ಸುತ್ತಾಡಿದ ರೈಲು ಸೀದಾ ಸಿಲಿಗುರಿಯ ಮೂಲಕ ಅಸ್ಸಾಂ ಕಡೆಗೆ ಚುಕು ಬುಕು ಎನ್ನುತ್ತಿತ್ತು. ಸುದೀರ್ಘ ಪಯಣ ಅದು. ಮೂರು ದಿನಗಳ ಕಾಲ ಸಹನೆಯಿಂದ ಸಹಿಸಿಕೊಳ್ಳಬೇಕೆಂಬಂತಹ ಪಯಣ.
`ಅಲ್ದೋ ಮಾರಾಯಾ... ಯಾವ್ದೋ ಫ್ಲೈಟ್ ಬುಕ್ ಮಾಡ್ಕಂಡು ಹೋಗಿದ್ರೆ ಮೂರ್ನಾಲ್ಕು ತಾಸಲ್ಲಿ ಅಸ್ಸಾಂಗೆ ಹೋಗ್ಲಕ್ಕಾಗಿತ್ತಲಾ...' ಎಂದು ಸಂಜಯ ಹೇಳಿದ್ದ.
`ನಿಂಗೊತ್ತಿದ್ದಲಾ.. ಬೇರೆ ಬೇರೆ ಪ್ರದೇಶಗಳನ್ನ ನೋಡೋದು ಅಂದ್ರೆ ನಂಗಿಷ್ಟ ಅಂತ.. ರೈಲಲ್ಲು ಹೋದ್ರೆ ಸಮಯ ಹೆಚ್ಚಾದ್ರೂ ಅಡ್ಡಿಲ್ಲೆ, ಬೇರೆ ಬೇರೆ ರಾಜ್ಯ, ಅಲ್ಲಿನ ಜನರನ್ನು ನೋಡ್ಲಕ್ಕು ಅಂತ ಈ ಥರ ಮಾಡಿದ್ದಿ ನೋಡು.. ಈ ಭಾರತೀಯ ರೈಲು ಅನ್ನೋದು ಸಾವಿರ ಸಂಸ್ಕೃತಿಗಳ ಸಂಗಮ. ಇದರಲ್ಲಿ ಸಿಗೋ ಮಜಾ ವಿಮಾನದಲ್ಲಿ ಸಿಕ್ತಿಲ್ಲೆ..' ಎಂದಿದ್ದಕ್ಕೆ ಸಂಜಯ ತಲೆಯಾಡಿಸಿ ಕಿರುನಗೆ ಸೂಸಿದ್ದ.
`ನೀ ಏನೋ ಇದ್ದಕ್ಕಿದ್ದಂತೆ ಪೋನ್ ಮಾಡ್ಕಂಡ ಬಾ ಅಂದೆ.. ಆನು ಹೇಳಿದ್ನಿಲ್ಲೆ ಕೇಳಿದ್ನಿಲ್ಲೆ ಬಂದ್ ಬಿಟ್ಟಿ... ಅಸ್ಸಾಂಗೆ ಹೋಪದು ಹೇಳಿ ಅಷ್ಟೇ ನೀ ಹೇಳಿದ್ದು... ಆನಂತೂ ಎಲ್ಲಿಗ್ ಹೋಪದು, ಎಂತಕ್ಕೆ ಏನೂ ಕೇಳದ್ದೇ ಹೊಂಟಿದ್ದಿ ನೋಡು... ಕೊನೆಕೊಯ್ಲು ಮುಗದ್ದು, ಅಡಕೆ ಸೊಲಿಯಲೆ ಜನ ಬಂಜ.. ದನ ಬೇರೆ ಕರಾ ಹಾಕಿದ್ದು. ಆದರೂ ನಾನು ನೀ ಹೇಳಿದ್ದೆ ಹೇಳಿ ಸಿಕ್ಕಿದ್ ಬಸ್ ಹತ್ಕಂಡು ಬಂಜಿ ನೋಡು.. ಏನ್ ನಿನ್ ಕಥೆ.. ಎಂತಕ್ ಅಸ್ಸಾಂಗೆ ಹೊಮಟಾಜು ಎಂತತದೂ ಅಂತ್-ಪಾರ್ ಹರಿತಾ ಇಲ್ಲೆ ನಂಗೆ.. ಈಗಾದ್ರೂ ಹೇಳು ಮಾರಾಯಾ.. ನಾವ್ ಎಂತಕ್ ಅಲ್ಲಿಗೆ ಹೊಂಟಾಜು? ನೀ ಬೇರೆ ಒಬ್ನೆ ಹೊಂಟಿದ್ದೆ. ನಿನ್ ಹೆಂಡ್ತಿನ ಮನೆಲ್ ಬಿಟ್ಟಿಕ್ ಬಂಜ್ಯಾ?' ಎಂದು ಸಂಜಯ ಒಂದೇ ಉಸುರಿಗೆ ಮಾತನಾಡುತ್ತಿದ್ದ. ಅವನ ಪ್ರಶ್ನೆಗಳ ಸುರಿಮಳೆಗೆ ಎದುರಾಗಿ ನಾನು, ಯಾವುದಕ್ಕೆ ಮೊದಲು ಉತ್ತರ ಹೇಳಲಿ ಎಂದು ಆಲೋಚಿಸುತ್ತಿದ್ದ ವೇಳೆಗಾಗೇ ನಮ್ಮನ್ನು ಹೊತ್ತಿದ್ದ ಕಾಮಾಕ್ಯ ಎಕ್ಸ್ ಪ್ರೆಸ್ ರೈಲು ದಿಬ್ರುಘಡತ್ತ ಮುಖ ಮಾಡಲು ಧಡ ಧಡ ಎನ್ನುತ್ತಿತ್ತು. ಸಂಜಯ ತನ್ನ ಕಾರ್ಯ ಬಾಹುಳ್ಯದ ನಡುವೆಯೂ ಬಿಡುವು ಮಾಡಿಕೊಂಡು ಬಂದಿದ್ದ. ನನ್ನ ಮನಸ್ಸು ಹಸಿಯಾಗಿತ್ತು.
`ನೋಡು ಸಂಜು... ನಾವ್ ಅಸ್ಸಾಂಗೆ ಹೋಗವು ಅಂತಾದ್ರೆ ಮೂರು ದಿನ ಪ್ರಯಾಣ ಮಾಡವು.. ಅಷ್ಟರಲ್ಲಿ ನಿಂಗೆ ಹೇಳದ್ದೇ ಇರ್ತ್ನನಾ...' ಎಂದೆ..
`ಹು.. ಮೂರು ದಿನದ ವರೆಗೆ ಹೇಳುವಂತಹ ಕಥೆಯನೋ ನಿಂದು...ಅಷ್ಟೆಲ್ಲ ಉದ್ದ ಹೇಳಡ ಮಾರಾಯಾ. ಕಥೆ ಸಣ್ಣ ಇರ್ಲಿ ಮಾರಾಯಾ.. ಉದ್ದ ಆದ್ರೆ ಬ್ಯಾಸರ ಬಂದೋಗ್ಲಕ್ಕು ನೋಡು..' ಸಂಜಯ ಹೌಹಾರಿದಂತೆ ಕೇಳಿದ್ದ. ಕಣ್ಣು ಮಿಟುಕಿಸಿ ಹೇಳಿದ್ದ. ಅವನ ಮಾತಿನಲ್ಲಿ ತಮಾಷೆ ಎದ್ದು ಕಾಣಿಸಿತ್ತು. ನಾನು ಹಿತವಾಗಿ ನಕ್ಕಿದ್ದೆ.
`ಹಂಗೆಂತದ್ದೂ ಇಲ್ಲೆ ಮಾರಾಯಾ.. ಸರಿಯಾಗ್ ಹೇಳಿದ್ರೆ ಅರ್ಧಗಂಟೆಲ್ ಯನ್ ಕಥೆ ಮುಗಿದು ಹೋಗ್ತು.. ಇನ್ನು ಕಥೆ ಎಳಿಯವು ಹೇಳಾದ್ರೆ ಮೂರು ದಿನದವರೆಗೂ ಮಾಡ್ತಿ ನೋಡು..' ಎಂದೆ ನಾನೂ ಅಷ್ಟೇ ತಮಾಷೆಯಿಂದ.
ತಲೆ ಅಲ್ಲಾಡಿಸಿ ಹೌದೆಂದು ಒಪ್ಪಿಕೊಂಡಿದ್ದ ಸಂಜಯ `ಮೂರ್ ದಿನ ಎಲ್ಲ ಬ್ಯಾಡ ಮಾರಾಯಾ.. ಚಿಕ್ಕದಾಗಿ ಹೇಳು... ಎಂತಕ್ ಹೋಗ್ತಾ ಇದ್ದಾಜು ಹೇಳಿ... ' ಅಂದಿದ್ದ. ಧಾರಾವಾಹಿಯಂತೆ ನಾನು ಕಥೆ ಎಳೆಯುವಲ್ಲಿ ಶೂರ ಎನ್ನುವುದು ಅವನಿಗೆ ಗೊತ್ತಿತ್ತಾದ್ದರಿಂದ ಮೊದಲೇ ಆತ ಅದಕ್ಕೆ ತಡೆ ಒಡ್ಡಿಬಿಟ್ಟಿದ್ದ.
ನಾನು ಹುಂ ಅಂದವನೇ ಹೋಗುವ ಕಾರಣ ಶುರು ಹಚ್ಚಿಕೊಂಡಿದ್ದೆ. ನಮ್ಮ ಪಯಣ ಶುರುವಾಗಿತ್ತು.
ಬದುಕಲ್ಲಿ ನೂರಾರು ತಿರುವುಗಳು ಸದಾ ಇರುತ್ತವೆ. ಇಂತಹ ತಿರುವು ನನ್ನ ಬದುಕಲ್ಲೂ ಇತ್ತು. ಅದಕ್ಕೆ ತಕ್ಕಂತೆ ಹಲವಾರು ಘಟನೆಗೂ ಜರುಗಿದ್ದವು. ಇದೀಗ ನಾನು ಅಂತಹದೇ ಒಂದು ತಿರುವಿನಿಂದ ಸುದೀರ್ಘ ಪಯಣ ಶುರುಹಚ್ಚಿಕೊಂಡಿದ್ದೆ.
ಎಲ್ಲಿಯ ಅಸ್ಸಾಮು? ಎಲ್ಲಿಯ ನಮ್ಮೂರು.. ಒಂದಕ್ಕೊಂದು ಉತ್ತರ ದಕ್ಷಿಣದಂತೆ..
***
`ಸಂಜಯ.. ನಾನೂ ನೀನೂ ಡಿಗ್ರಿ ಮುಗ್ಸಿದ್ದರ ತನಕ ನಿಂಗೆ ನನ್ನ ಅಂತರಂಗ ಸಂಪೂರ್ಣ ಗೊತ್ತಿದ್ದು. ಆ ದಿನಗಳ ನಮ್ಮ ಬದುಕು, ಬವಣೆ, ಒದ್ದಾಟ ಇತ್ಯಾದಿಗಳಿಗೆಲ್ಲ ನೀನು ಪ್ರತ್ಯಕ್ಷದರ್ಶಿ. ನಮ್ಮ ಡಿಗ್ರಿ ಬದುಕು ಮುಗಿದ ತಕ್ಷಣ ನೀ ಏನೋ ಕೃಷಿ ಮಾಡ್ತಿ ಅಂತ ಊರಲ್ಲೇ ಉಳಕಂಡೆ. ಜೊತೆಗೆ ಲಾ ಓದವು ಅಂತ ಹೇಳಿ ಶಿರಸಿ ಕಾಲೇಜಲ್ಲಿ ಸೇರಿದ್ದೂ ತಿಳದಿತ್ತು. ನಂಗೆ ಮುಂದೆಂತ ಮಾಡವು ಅಂತ ಗೊತ್ತಾಗಿತ್ತಿಲ್ಲೆ. ಅದೇ ಟೈಮಲ್ಲಿ ನಂಗೆ ಎಂಬಿಎ ಸೀಟು ಸಿಕ್ಕಿತ್ತು. ಬೆಂಗಳೂರಿನ ಕಾಲೇಜೊಂದರಲ್ಲಿ ಓದಲು ಅವಕಾಶ ಸಿಕ್ಕಿತ್ತು. ಹಂಗಾಗಿ ನಾನು ಬೆಂಗಳೂರಿಗೆ ಬರೋದು ಅನಿವಾರ್ಯವೂ ಆಗಿತ್ತು..ಡಿಗ್ರಿ ಮುಗಿದ ತಕ್ಷಣವೇ ನಾನು ಬೆಂಗಳೂರಿಗೆ ಬಸ್ಸು ಹತ್ತಿದ್ದೆ..'
`ವಿನಿ... ಇದೆಲ್ಲ ಗೊತ್ತಿದ್ದದ್ದೇಯಾ ಮಾರಾಯಾ... ಆದರೆ ಆಮೇಲಿನ ಸಂಗತಿಗಳು ನಂಗೆ ಅಷ್ಟಾಗಿ ಗೊತ್ತಿಲ್ಲೆ ನೋಡು... ನೀನೂ ಹೇಳ್ಕಂಜಿಲ್ಲೆ.. ನಾನೂ ಕೇಳಿದ್ನಿಲ್ಲೆ..' ಎಂದ ಸಂಜಯ.
`ಹುಂ..'ಎಂದ ನಾನು ನಿಧಾನವಾಗಿ ನನ್ನ ಕಥೆಯನ್ನು ಹೇಳಲು ಶುರುಹಚ್ಚಿಕೊಂಡಿದ್ದೆ.
`ಎಂಬಿಎಗಾಗಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಓದಲು ಬಂದೆ. ಓದಿಗಾಗಿ ಬಂದವನು ಬೆಂಗಳೂರಿನ ಥಳುಕಿಗೆ, ಬಳುಕಿಗೆ ಹೊಂದಿಕೊಳ್ಳಲಾಗದೇ ತತ್ತರಿಸಿದೆ. ವೇಗ, ಧಾವಂತ, ಓಟಕ್ಕೆ ಸರಿಸಮನಾಗಿ ಓಡಲು, ಮುನ್ನುಗ್ಗಲು ಸಾಧ್ಯವಾಗದೇ ಎಡವುವ ಹಂತವೂ ಬಂದು ತಲುಪಿತು. ಎಕ್ಸಾಮುಗಳಲ್ಲಂತೂ ಪಾಸಾಗುವ ವರೆಗೆ ಸಾಕೋಬೇಕೋ ಆಗಿಹೋಗುವ ಹಂತವೂ ತಲುಪಿತು ಬಿಡು. ಇಂಗ್ಲೀಷು ನನ್ನ ಪಾಲಿಗೆ ಕಬ್ಬಿಣದ ಕಡಲೆಯೇ ಆಗಿತ್ತು. ಆದರೆ ಕಾಲೇಜುಗಳಲ್ಲಿ ಮಾಡುತ್ತಿದ್ದ ಕನ್ನಡ ಮಾತಾಡುವ ಸ್ಪರ್ಧೆಗಳಲ್ಲಿ ನಾನೇ ಮುಂದಿರುತ್ತಿದ್ದೆ. ಎಂತ ಚಂದ ಕನ್ನಡ ಮಾತಾಡ್ತಾನೆ ಮಾರಾಯಾ ಇವ್ನು ಅನ್ನುವಷ್ಟರ ವರೆಗೆ...'
`ಆಮೇಲೆ..'
`ಇದೇನೋ ಸಾಗುತ್ತಿತ್ತು. ಆದರೆ ಓದಿನಲ್ಲಿ ಹಿಂದೆ ಬಿದ್ದಿದ್ದೆ. ಆ ದಿನಗಳಲ್ಲೇ ನನಗೆ ಪರಿಚಯ ಆದವಳು ವಿದ್ಯುಲ್ಲತಾ. ಅಸ್ಸಾಮಿನವಳು.. ಇದೋ.. ಇದೀಗ ಅವಳನ್ನೇ ಹುಡುಕಿ ಹೊರಟಿದ್ದೇನೆ.. ನಿನ್ನನ್ನೂ ಕರ್ಕೊಂಡು...' ಎಂದೆ.
`ಒಹೋ... ' ಎಂದ ಸಂಜಯ ಒಮ್ಮೆ ಅಚ್ಚರಿ ಪಟ್ಟುಕೊಂಡ. `ನಿನ್ನ ಹೆಂಡತಿಗೆ ಗೊತ್ತಾ...' ಕೀಟಲೆಯ ಧ್ವನಿಯಲ್ಲಿ ಕೇಳಿದ ಸಂಜಯ. ಇದಕ್ಕೆ ನಾನು ಉತ್ತರಿಸಲಿಲ್ಲ.
`ವಿದ್ಯುಲ್ಲತಾ ಎಂಬ ಹೆರಿನಲ್ಲೇ ಕ್ರಿಯಾಶೀಲತೆ ಇತ್ತು. ಚೈತನ್ಯವಿತ್ತು. ಆಕೆ ತೀರಾ ಸುಂದರಿಯಾಗಿರಲಿಲ್ಲ. ಹಾಗಂತ ಆಕೆ ತೀರಾ ಕಳಪೆಯೇನೂ ಆಗಿರಲಿಲ್ಲ. ಅಸ್ಸಾಮಿ ಹುಡುಗಿಯರಲ್ಲಿನ ವಿಶೇಷ ಆಕರ್ಷಣೆ ಅವಳಲ್ಲಿತ್ತು. ಬೆಳ್ಳಗಿನ ಅವಳ ಮುಖ.. ಹಣೆಯಲ್ಲಿ ಬೊಟ್ಟು ಇಲ್ಲದಿದ್ದರೂ, ಖಾಲಿ ಖಾಲಿಯಾಗಿದ್ದರೂ ಒಮ್ಮೆಗೆ ಸೆಳೆಯಬಲ್ಲ ಆಕೆಯ ಹಣೆ, ವಿಶಿಷ್ಟವಾದ ಕಪ್ಪು ಕಣ್ಣುಗಳು, ತುರುಬನ್ನು ಎತ್ತಿ ಕಟ್ಟುತ್ತಿದ್ದ ಆಕೆಯ ರೂಪ ಈಗಲೂ ನನ್ನ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಒಂದೇ ರೀತಿಯ ಆಸಕ್ತಿಯನ್ನು ಹೊಂದಿರುವವರು ಹತ್ತಿರಕ್ಕೆ ಬರುತ್ತಾರೆ ಎನ್ನುವುದು ಪುರಾಣ ಕಾಲದಿಂದಲೂ ನಿಜವಾದದ್ದೇ. ವಿದ್ಯುಲ್ಲತಾಳಿಗೂ ಅಷ್ಟೇ. ನನ್ನಂತೆಯೇ ಇಂಗ್ಲೀಷು ಕಬ್ಬಿಣದ ಕಡಲೆಯಾಗಿತ್ತು. ಅಸ್ಸಾಮಿ ಭಾಷೆಯಲ್ಲಿ, ಹಿಂದಿಯಲ್ಲಿ ಆಕೆಯದ್ದು ಎತ್ತಿದ ಕೈ. ಆದರೆ ಇಂಗ್ಲೀಷು ಅಂದ ಕೂಡಲೇ ಆಕೆ ಹಿಂದೇಟು ಹಾಕುತ್ತಿದ್ದಳು. ಇಂತದ್ದೇ ಗುಣವನ್ನು ಹೊಂದಿದ್ದ ನನಗೂ , ಆಕೆಗೂ ಪರಿಚಯ ಆಗಲು ಬೇರೆಯ ಕಾರಣಗಳಿರಲಿಲ್ಲ ಬಿಡು. ನನ್ನಂತೆಯೇ ಆಕೆ, ಆಕೆಯಂತೆಯೇ ನಾನು. ಯಾವಾಗಲೋ ಸ್ನೇಹ ಬೆಳೆದಿತ್ತು..'
`ಆಮೇಲೆ..' ಎಂದು ಹೇಳುವ ವೇಳೆಗಾಗಲೇ ರೈಲು ಕರ್ನಾಟಕ ಗಡಿಯನ್ನು ದಾಟಿ ಆಂಧ್ರವನ್ನು ಹಾದು ಮುನ್ನುಗ್ಗುತ್ತಿತ್ತು. ಒಂದಿಬ್ಬರು ಚಾಯ್ ವಾಲಾಗಳು ಚಾಯ್ ಚಾಯ್ ಎನ್ನುತ್ತಲೂ, ಕಾಫಿ ಟಿ ಎನ್ನುತ್ತಲೂ ಸಾಗಿದ್ದರು. ನಾನು ಒಬ್ಬನನ್ನು ಕರೆದು ಇಬ್ಬರಿಗೂ ಚಾಯ್ ತಗೊಂಡು ಕುಳಿತೆ. ಒಂದು ಸಿಪ್ ಸೊರ್... ಎನ್ನುತ್ತಾ ಕುಡಿಯುತ್ತಿರುವಂತೆಯೇ ಸಂಜಯ `ಮುಂದೇನಾಯ್ತು ಹೇಳು ಮಾರಾಯಾ...'ಎಂದ. ಮುಂದುವರಿದ ಆತನೇ `ಪ್ರೀತಿ ಹುಟ್ಟಿತು.. ಅವಳನ್ನು ಹುಡುಕಿ ಹೊರಟಿದ್ದೀಯಾ.. ಇಷ್ಟೇ ಅಲ್ವಾ ನಿನ್ನ ಕಥೆ...' ಎಂದ.
ತಲೆ ಕೊಡವಿದ ನಾನು `ನನ್ನ ಕಥೆಯಲ್ಲಿ ಈ ಅಂಶಗಳೂ ಇದೆ. ಆದರೆ. ಇಷ್ಟೇ ಅಲ್ಲ ನನ್ನ ಕಥೆ. ಇನ್ನೂ ಇದೆ. ಸುಮ್ನೇ ಕೇಳು ಮಾರಾಯಾ..' ಎಂದೆ. ಸಂಜಯ ಸುಮ್ಮನೆ ಚಹಾ ಕುಡಿಯುತ್ತ ನನ್ನ ಮಾತಿಗೆ ಕಿವಿಯಾದ.
`ವಿದ್ಯುಲ್ಲತಾಳ ಸಾನ್ನಿಧ್ಯದಿಂದಲೇ ನನ್ನಲ್ಲಿ ಚೈತನ್ಯ ಸಂಚಾರವಾಗಿತ್ತು. ಹೊಸ ಹುರುಪು ನನ್ನಲ್ಲಿ ಮೂಡಿತ್ತು. ಇಂಗ್ಲೀಷಿನ ಕಡೆಗಿದ್ದ ಕೀಳರಿಮೆ ನನ್ನಲ್ಲಿ ಇದ್ದಕ್ಕಿದ್ದಂತೆ ಮಾಯವಾಗಿದದ್ದವು. ಆಕೆ ಅದೆಷ್ಟು ಕಲಿತಳೋ ಬಿಟ್ಟಳೋ ಗೊತ್ತಾಗಲಿಲ್ಲ. ನಾನಂತೂ ಆಕೆಯ ಜತೆಯಲ್ಲಿಯೇ ನನ್ನೊಳಗಿನ ಕೀಳರಿಮೆಯನ್ನು, ಹಿಂದೇಟು ಹಾಕುವಿಕೆಯನ್ನು ಮರೆತು ಹೊಸ ಚೈತನ್ಯವನ್ನು ಪಡೆದುಕೊಂಡಿದ್ದೆ.'
`ನನ್ನ ಬಗ್ಗೆ ಆಕೆ ಅದೆಷ್ಟು ತಿಳಿದುಕೊಂಡಳೋ ಗೊತ್ತಿಲ್ಲ. ಆದರೆ ಆಕೆಯ ಬಗ್ಗೆ ನಾನು ಬಹಳ ತಿಳಿದುಕೊಂಡೆ. ಅವಳು, ಅವಳ ಸಂಸ್ಕೃತಿ, ಆಹಾರ, ಆಚಾರ, ವಿಚಾರ.. ಅಹೋಮರು.. ಬೃಹ್ಮಪುತ್ರಾ ನದಿಯ ಅಘಾದತೆ, ತುಂಬಿ ಹರಿಯುವಾಗಿನ ಬ್ರಹ್ಮಪುತ್ರಾ ನದಿಯ ರುದ್ರ ನರ್ತನ.. ಬಿಹೂ ನೃತ್ಯ.. ಅಸ್ಸಾಮಿ ವಾದ್ಯಗಳು, ಅಸ್ಸಾಮಿನ ವಿಶಿಷ್ಟ ಖಾದ್ಯಗಳ ರುಚಿ ಹತ್ತಿಸಿದ್ದೂ ಇವಳೇ. ಅಸ್ಸಾಮಿನ ಖಾರ್ ಎಂಬ ಸಾಂಪ್ರದಾಯಿಕ ಖಾದ್ಯ, ಜೋಲ್ಪಾನ್, ಪಿಥಾ, ಲಾರು ಮುಂತಾದ ಸ್ನ್ಯಾಕ್ಸ್ ಗಳು, ನರಸಿಂಗ್ ಮೊಸರು ಜೋಲ್, ಮೊಸರ್ ತೆಂಗಾ, ಪುರಾ ಮುಂತಾದ ಹತ್ತಾರು ಆಹಾರಗಳ ರುಚಿ ತೋರಿಸಿದ್ದಲ್ಲದೇ ಕೆಲವನ್ನು ಮಾಡುವ ರೀತಿಯನ್ನು ನನಗೆ ಕಲಿಸಿದ್ದಳು...'
`ಬ್ರಹ್ಮಪುತ್ರಾ ನದಿಯ ಎಡಕ್ಕೆ ಬಹು ದೂರದ ಗುಡ್ಡದ ಗಡಿಯಲ್ಲಿ, ಭೂತಾನಿಗೆ ಹತ್ತಿರದಲ್ಲೆಲ್ಲೋ ಅವಳ ಮನೆ ಇದೆಯಂತೆ. ಎಂದೋ ಒಮ್ಮೆ ಅವಳು ಹೇಳಿದ್ದ ನೆನಪು. ತುಂಬು ಕುಟುಂಬದ ಮನೆ. ಹೊರ ಜಗತ್ತಿನ ಹೆಚ್ಚಿನ ಸೌಲಭ್ಯಗಳು, ಸೌಕರ್ಯಗಳನ್ನು ಕಾಣದ ಮನೆ. ಹಳೆಯ ಸಂಸ್ಕೃತಿಗಳನ್ನು ಉಳಿಸಿಕೊಂಡಂತಹ ಮನೆ ಅವಳದ್ದು. ಅಪ್ಪ, ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರು, ಅಮ್ಮ, ಹಿರಿಯಜ್ಜಿ ಹೀಗೆ ಮನೆ ತುಂಬ ಜನವೋ ಜನರು. ಸುಲಭವಾಗಿ ಹೇಳಬೇಕಂದರೆ, ತೆಲುಗು ಸಿನಿಮಾಗಳಲ್ಲಿ ಬರುವ ಅವಿಭಕ್ತ ಕುಟುಂಬಗಳಂತೇ ಅನ್ನಬಹುದು. ಆದರೆ ಇಡೀಯ ಕುಟುಂಬದಲ್ಲಿ ಎಂಬಿಎ ಓದುತ್ತಿರುವವಳು ಅಂದರೆ ವಿದ್ಯುಲ್ಲತಾ ಒಬ್ಬಳೆ ಆಗಿದ್ದಳಂತೆ. ಅವಳ ಕುಟುಂಬದಲ್ಲಿ ಪಿಯುಸಿ, ಡಿಗ್ರಿ ತನಕ ಓದಿದವರು ಹಲವರಿದ್ದರೂ, ಯಾರೊಬ್ಬರೂ ಇನ್ನೂ ಜಾಸ್ತಿ ಓದಿರಲಿಲ್ಲ ಎನ್ನುವುದು ಆಕೆಯಿಂದಲೇ ತಿಳಿದು ಬಂದ ಸಂಗತಿಯಾಗಿತ್ತು.'
'ಆಕೆಯ ಅಪ್ಪ ಮನೆಯ ಯಜಮಾನನಾಗಿದದ್ದ ಕಾರಣವೋ ಏನೋ, ಆಕೆ ಕುಟುಂಬದಲ್ಲಿ ಮುದ್ದಿನಿಂದಲೇ ಬೆಳೆದವಳು. ಅಸ್ಸಾಮಿನಲ್ಲಿ, ಹಿಂದಿಯಲ್ಲಿ.. ಆಕೆಯನ್ನು ಮೀರಿಸುವವರೇ ಇರಲಿಲ್ಲ. ಆದರೆ ಆಕೆಗೆ ಇಂಗ್ಲೀಷು ಮಾತ್ರ ಕಷ್ಟ ಕಷ್ಟ ಎಂಬಂತಾಗಿತ್ತು. ಅದ್ಹೇಗೇಗೋ ಇಂಗ್ಲೀಷಿನಲ್ಲಿ ಬರೆದು, ಪಾಸಾಗಿ ಬೆಂಗಳೂರಿಗೆ ಬರುವಂತಾಗಿದ್ದಳು. ಆಕೆಯ ಮನೆಯಲ್ಲಂತೂ ವಿದ್ಯುಲ್ಲತಾ ಬೆಂಗಳೂರಿಗೆ ಬರುವುದು ಸುತಾರಾಂ ಇಷ್ಟವಿರಲಿಲ್ಲವಂತೆ. ಆದರೂ ಅದ್ಹೇಗೋ ಒತ್ತಾಯ ಮಾಡಿ, ಹರಪೆ ಬಿದ್ದು, ಒಂದೆರಡು ದಿನಗಳ ಕಾಲ ಉಪವಾಸವನ್ನೇ ಕೈಗೊಂಡು ಬಂದಿದ್ದಳಂತೆ. ಬೆಂಗಳೂರಿಗೆ ಬಂದವಳು ಥೇಟು ನನ್ನಂತೆಯೇ.. ಇಲ್ಲಿನ ಧಾವಂತದಲ್ಲಿ ಕಳೆದೇ ಹೋಗುತ್ತೇನೆ, ಹೋಗುತ್ತಿದ್ದೇನೆ ಎನ್ನುವ ಸಂದರ್ಭದಲ್ಲಿ ಆಕೆಗೆ ನಾನು ಜತೆಯಾಗಿದ್ದೆ..'
'ನನಗೆ ಗೊತ್ತೆ ಇಲ್ಲದಂತೆಯೇ ಆಕೆಯ ಮೇಲೆ ಪ್ರೀತಿ ಹುಟ್ಟಿತ್ತು. ಆಕೆಯ ಮನಸ್ಸಿನಲ್ಲಿಯೂ ಹುಟ್ಟಿತ್ತೇನೋ ಗೊತ್ತಿಲ್ಲ. ಶುಭ ಸಂದರ್ಭದಲ್ಲಿ ಆಕೆ ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದಳು. ನನಗೆ ಸ್ವರ್ಗ ಮೂರೇ ಗೇಣಿಗೆ ಕೈಗೆ ಸಿಗುತ್ತದೆ ಎನ್ನುವಷ್ಟು ಸಂಭ್ರಮ..'
'ಆ ದಿನಗಳಲ್ಲಿ ನಾವು ಬೆಂಗಳೂರಿನಲ್ಲಿ ಅಡ್ಡಾಡಿದ ಜಾಗಗಳಿಲ್ಲ ಬಿಡು. ಕಾಲೇಜಿಗೆ ಹೋಗುತ್ತಿದ್ದೆವಾದರೂ ಅದರ ಜತೆ ಜತೆಯಲ್ಲಿಯೇ ನಮ್ಮ ಸುತ್ತಾಟ ಸಾಕಷ್ಟು ನಡೆದಿತ್ತು. ಬೆಂಗಳೂರಿನ ಜ್ಞಾನಭಾರತಿಯ ಅಂಗಣಗಳು, ವಾರಕ್ಕೊಮ್ಮೆ ದೂರದ ಬೆಟ್ಟ ಗುಡ್ಡಗಳಿಗೆ ನಡೆಸುವ ಟ್ರೆಕ್ಕಿಂಗುಗಳು, ಸ್ವಲ್ಪವ ಸಮಯ ಸಿಕ್ಕರೂ, ಕಾಡು, ನದಿ, ನೀರು, ಬೆಟ್ಟ ಎಂದುಕೊಂಡು ಹೊರಟುಬಿಡುತ್ತಿದ್ದೆವು.'
`ನನಗೀಗಲೂ ನೆನಪಿದೆ. ಒಂದು ದಿನ ಆಕೆಯನ್ನು ಮೊಟ್ಟ ಮೊದಲ ಬಾರಿಗೆ ನನ್ನ ರೂಮಿಗೆ ಕರೆತಂದಿದ್ದೆ. ಏನೇ ಪ್ರೀತಿ ಇದ್ದರೂ ಆಕೆ ಅಳುಕಿನಿಂದಲೇ ನನ್ನ ರೂಮಿಗೆ ಬಂದಿದ್ದಳು...'ಎಂದವನೇ ಸುಮ್ಮನಾದೆ. ನನ್ನ ತಲೆಯಲ್ಲಿ ಆ ದಿನಗಳ ನೆನಪು ಹಾಗೆಯೇ ಓಡಲಾರಂಭಿಸಿತ್ತು. ಸಂಜಯ ಗಂಭೀರವಾಗಿ ಕೇಳುತ್ತಿದದ್ದವನು ನನ್ನ ಕಡೆಗೆ ನೋಡಲಾರಂಭಿಸಿದ್ದ.
ಸುದೀರ್ಘ ಮೌನದ ನಂತರ ನಾನೇ ಮಾತು ಮುಂದುವರಿಸಿದೆ. `ಆ ದಿನ ಏನೆಲ್ಲ ಆಗೋಯ್ತು. ಆಕೆಗೆ ಇಷ್ಟವಿರಲಿಲ್ಲ. ನಾನೇ ಬಲವಂತ ಮಾಡಿಬಿಟ್ಟೆ. ಪ್ರೀತಿ ಮಧುರವಾಗಿರಲಿ, ಶುಭ್ರವಾಗಿರಲಿ ಎಂದೆಲ್ಲ ಹೇಳಿದ್ದಳು ಆಕೆ. ಆದರೆ ನಾನೇ ಒತ್ತಾಯ ಮಾಡಿಬಿಟ್ಟೆ. ನನ್ನ ಒತ್ತಾಯಕ್ಕೆ ಆಕೆ ಸಹಕರಿಸಿದ್ದಳು. ನನ್ನದೇ ರೂಮಿನಲ್ಲಿ ನಾನು ಆಕೆಯನ್ನು ಆವರಿಸಿಕೊಂಡಿದ್ದೆ. ಅಲ್ಲೇ ನಮ್ಮ ಮಿಲನವಾಗಿತ್ತು. ಆದರೆ ಅಮೇಲೆ ನಡೆದಿದ್ದೆಲ್ಲ ದುರಂತ ಎಂಬಂತಾಗಿಬಿಟ್ಟತು. ಅಷ್ಟೆಲ್ಲ ಆದ ಮೇಲೆ ನನ್ನ ಬಳಿ ಆಕೆ ಕೇಳಿದ್ದೊಂದೇ ಮಾತು.. ನಿನ್ನನ್ನು ನಂಬಿದ್ದೆ. ಆದರೆ ಈ ರೀತಿ ಮಾಡುತ್ತೀಯಾ ಅಂತ ಗೊತ್ತಿರಲಿಲ್ಲ. ಈಗಲೂ ನಿನ್ನನ್ನು ನಂಬಿದ್ದೇನೆ. ಮುಂದೆಯೂ ಕೂಡ ನಿನ್ನನ್ನು ನಂಬಿರುತ್ತೇನೆ.. ನನ್ನ ನಂಬಿಕೆಯನ್ನು ಕೊಂದು ಬಿಡಬೇಡ.. ಎಂದಿದ್ದಳು. ನಾನು ಮೌನವಾಗಿದ್ದೆ. ಆದರೆ ಆ ದಿನದ ನಂತರ ನನ್ನ ಬದುಕಿನಲ್ಲೂ, ಆಕೆಯ ಬದುಕಿನಲ್ಲೂ ಸಿಕ್ಕ ತಿರುವುಗಳು ಮಾತ್ರ ಉಫ್.. ಹೇಗೆ ಹೇಳಲಿ..?'
(ಮುಂದುವರಿಯುತ್ತದೆ...)