(Ekadashi Gudda) |
ಮಹಾತ್ಮಾ ಗಾಂಧೀಜಿ ಜನ್ಮದಿನದ ೧೦೦ನೇ ವರ್ಷಾಚರಣೆಯ ಸಂದರ್ಭದಲ್ಲಿ ದೇಶದಲ್ಲಿ ಹಾಗೂ ರಾಜ್ಯಾದ್ಯಂತ ಹಲವಾರು ಶಾಲೆಗಳನ್ನು ನಿರ್ಮಿಸಲಾಯಿತಂತೆ. ಹೀಗೆ ನಿರ್ಮಾಣಗೊಂಡ ಶಾಲೆಗಳಲ್ಲೊಂದು, ನಮ್ಮೂರಿನದ್ದು. ಹೀಗಾಗೇ ಗಾಂಧಿ ಶತಾಬ್ದಿ ಶಾಲೆ ಎಂದೂ ನಮ್ಮೂರಿನ ಶಾಲೆಯನ್ನು ಹಿರಿಯರು ಕರೆಯುತ್ತಿದ್ದುದು ನನಗಿನ್ನೂ ನೆನಪಿದೆ. ಎರಡೂ ಊರುಗಳ ನಡುವೆ ಶಾಲೆ ಇದ್ದರೂ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುತ್ಮುರ್ಡು-ದಂಟಕಲ್ ಎಂಬ ಉದ್ದನೆಯ ಹೆಸರಿದ್ದರೂ, ಆಡು ಮಾತಿನಲ್ಲಿ ಅದು ಮುತ್ಮುರ್ಡು ಶಾಲೆ ಎಂದೇ ಕರೆಸಿಕೊಳ್ಳುತ್ತಿತ್ತು.
ಇಂತಹ ಶಾಲೆಗೆ ಮೊದಲು ಕಲಿಸಲು ಬಂದವರು ಮಾದೇವ ಮಾಸ್ತರರು ಎನ್ನುವುದು ನನ್ನ ಅಜ್ಜನ ಬಾಯಿಂದ ಆಗಾಗ ಕೇಳಿ ಬರುತ್ತಿದ್ದ ಮಾತು. ಶಾಲೆಯನ್ನು ತೆರೆದವರೂ ಅವರೇ ಎಂದೂ ಎಲ್ಲೋ ಕೇಳಿದ್ದೆ ಬಿಡಿ. ಮಾದೇವ ಮಾಸ್ತರರು ಪೋಸ್ಟ್ ಮಾಸ್ತರರಾಗಿಯೂ ಕಾರ್ಯ ನಿರ್ವಹಿಸಿದ್ದರಂತೆ. ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದರಂತೆ. ಊರಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗೂ ಕಾರಣರಾದವರಂತೇ ಎಂಬೆಲ್ಲ ಮಾತುಗಳನ್ನೂ ಕೇಳಿದ್ದೇನೆ.
ಮುತ್ಮೂರ್ಡಿನ ಸುಬ್ಬಜ್ಜ (ಸುಬ್ರಾಯ ಹೆಗಡೆ) ಈ ಶಾಲೆಯ ಆರಂಭಕ್ಕೆ ಕಾರಣರಾದವರು ಎನ್ನುವ ಮಾತುಗಳೂ ಇದೆ. ಗೋಕರ್ಣದ ಕೋಟಿ ತೀರ್ಥ ಸೇರಿದಂತೆ ಹಲವು ಪ್ರಮುಖ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದ ಸುಬ್ಬಜ್ಜ ಈ ಶಾಲೆಯನ್ನು ನಿರ್ಮಾಣ ಮಾಡಿ, ಅಲ್ಲಿಗೆ ಶಿಕ್ಷಕರು ಬರುವಂತೆ ಮಾಡಿದರು ಎನ್ನುವ ಮಾತುಗಳು ಅವರಿವರ ಬಾಯಲ್ಲಿ ಕೇಳಿ ಬಂದಿದೆ. ಒಟ್ಟಿನಲ್ಲಿ ಶಾಲೆ ನಿರ್ಮಾಣ ಮಾಡಿದ್ಯಾರು ಎನ್ನುವುದು ಗೊಂದಲಕ್ಕೆ ಕಾರಣವಾದರೂ ಶಾಲೆಯಿಂದ ನೂರಾರು ಜನರಿಗೆ ವಿದ್ಯಾದಾನವಾಗಿದೆ ಎನ್ನುವುದು ಸುಳ್ಳಲ್ಲ.
ನನ್ನ ಅಪ್ಪನ ಬಳಿ ಕೇಳಿದ್ದ ಸಂದರ್ಭದಲ್ಲಿ, ತಾನು ಈ ಶಾಲೆಯಲ್ಲಿ ಓದಿಲ್ಲ ಎಂದೂ, ಕೋಡ್ಸರದ ಬಳಿಯ ಬಿಡಕಿ ಶಾಳೆಯಲ್ಲಿ ಓದಿದ್ದೆಂದೂ ಹೇಳಿದ್ದ. ನನ್ನ ಅಪ್ಪನ ವಾರಗೆಯವರ್ಯಾರೂ ಕೂಡ ಈ ಶಾಲೆಯಲ್ಲಿ ಓದಿಲ್ಲ. ಅಂದರೆ ನನ್ನ ಅಪ್ಪನ ನಂತರದ ೧೦-೧೨ ವರ್ಷಗಳ ತರುವಾಯ ಈ ಶಾಲೆ ಆರಂಭಗೊಂಡಿದೆ. ಸುತ್ತಮುತ್ತ ಯಾವುದೇ ಶಾಲೆ ಇಲ್ಲದ ಸಂದರ್ಭದಲ್ಲಿ ಆರಂಭಗೊಂಡ ಶಾಲೆ ಪ್ರಮುಖವಾಗಿ ದಂಟಕಲ್ ಹಾಗೂ ಮುತ್ಮೂರ್ಡು ಗ್ರಾಮಗಳ ಮಕ್ಕಳ ವಿದ್ಯಾದಾನಕ್ಕೆ ಕಾರಣವಾಗಿದೆ.
ಅಜ್ಜ, ಹಾಗೂ ಅಪ್ಪನ ನೆನಪಿನ ಅಂಗಣದಿಂದ ತಿಳಿದು ಬಂದ ವಿಷಯವೇನೆಂದರೆ, ಆ ದಿನಗಳಲ್ಲಿ ಅಡಕಳ್ಳಿಯಲ್ಲಿ (೧೯೬೨ರಲ್ಲಿ ಆರಂಭ) ಶಾಲೆ ಆರಂಭಗೊಂಡಿದ್ದರೂ, ಮುತ್ಮುರ್ಡು ಹಾಗೂ ದಂಟಕಲ್ ಗ್ರಾಮಗಳ ಮಕ್ಕಳು ದಟ್ಟ, ಗವ್ವೆನ್ನುವ ಕಾಡು, ಗುಡ್ಡ, ತುಂಬಿ ಹರಿಯುವ ಹಳ್ಳಗಳನ್ನು ದಾಟಿ ಅಡಕಳ್ಳಿಗೆ ಹೋಗುವುದು ತ್ರಸದಾಯಕವಾಗಿತ್ತು. ದೊಡ್ಡದೊಂದು ತಾಯಿ ಬೇರಿಗೆ ಮರಿ ಟಿಸಿಲುಗಳಿರುವಂತೆ ಮುತ್ಮುರ್ಡಿನಂತಹ ಶಾಲೆಗಳು ತರುವಾಯ ಆರಂಭವಾದವು. ಮೊದ ಮೊದಲಿಗೆ ಒಂದರಿಂದ ನಾಲ್ಕನೇ ಕ್ಲಾಸಿನವರೆಗೆ ತರಗತಿಗಳು ನಡೆಯುತ್ತಿದ್ದವು. ಅಂಗನವಾಡಿ, ಬಿನ್ನೆತ್ತಿ, ಒಂದು, ಎರಡು, ಮೂರು, ನಾಲ್ಕು ಕ್ಲಾಸುಗಳ ವರೆಗೆ ಓದಿದ ತರುವಾಯ ಅಡ್ಕಳ್ಳಿ ಶಾಲೆಯತ್ತ ಮುಖ ಮಾಡಬೇಕಿತ್ತು. ಹೀಗಾಗಿ ಹಲವರಿಗೆ ಈ ಶಾಲೆ ಅನುಕೂಲವಾಯಿತು.
ಮುತ್ಮುರ್ಡ್ ಶಾಲೆಯ ಮಾಸ್ತರ್ರು ರೋಲು ದೊಣ್ಣೆಯಲ್ಲಿ ಹೊಡೆಯುತ್ತಿದ್ದರಂತೆ. ಹುಡುಗರು ಕೈನ್ನು ಟೇಬಲ್ ಮೇಲೆ ಇರಿಸುವಂತೆ ಹೇಳಿ, ರೋಲು ದೊಣ್ಣೆಯ ಮೂಲಕ ಕುಟ್ಟಾಣಿಯಲ್ಲಿ ಕವಳ ಕುಟ್ಟುವಂತೆ ಕುಟ್ಟುತ್ತಿದ್ದಂತೆ, ಒಂದರಿಂದ ೨೦ರವರೆಗೆ ಮಗ್ಗಿ ಹೇಳುವುದರ ಜತೆಗೆ ಉಲ್ಟಾ ಪಲ್ಟಾ ಹೇಳುವಂತೆ ಕಾಟ ಕೊಡುತ್ತಿದ್ದರಂತೆ, ಹೇಳದಿದ್ದರೆ ಕಾಲಿನ ಮೊಣಕಾಲಿನ ಕೆಳಗೆ ಮೂಳೆಯ ಮೇಲೆ ಟಣಾರನೆ ಭಾರಿಸುತ್ತಿದ್ದರಂತೆ, ಅಷ್ಟಲ್ಲದೇ ಒಂದ್ ಮುಕ್ಕಾಲ್ ಮುಕ್ಕಾಲು ಎಂದು ಮಗ್ಗಿಯನ್ನು ಮುಕ್ಕಾಲರ ರೀತಿಯಲ್ಲಿ, ಅರ್ಧದ ರೀತಿಯಲ್ಲೆಲ್ಲ ಹೇಳಿಸುತ್ತಿದ್ದರಂತೆ ಎಂಬ ಅಂತೆ ಕಂತೆಗಳೆಲ್ಲ ನಾವು ಸಣ್ಣವರಿದ್ದಾಗ ಕಿವಿಗೆ ಬಿದ್ದು, ಮುತ್ಮುರ್ಡ್ ಶಾಲೆಯ ಮಾಸ್ತರರ ಬಗ್ಗೆ ಭಯ ಹುಟ್ಟಿಸಿದ್ದವು.
ಇದೆಲ್ಲ ತಮಾಷೆಯಿರಬೇಕು ಬಿಡು, ಸುಮ್ಮನೇ ನಮ್ಮನ್ನು ಹೆದರಿಸಲು ಮಾಡುತ್ತಿರುವ ನಾಟಕ ಎಂದು ನಮ್ಮದೇ ವಾರಗೆಯ ಹುಡುಗನೊಬ್ಬ ಹೇಳಿದ್ದ. ನಾವು ಅದನ್ನು ನಂಬಿಕೊಂಡಿದ್ದೆವು. ಆದರೆ ನಮ್ಮೂರಿನ ಹಿರಿಯಜ್ಜನೊಬ್ಬ ಕಾಲು, ಮುಕ್ಕಾಲರ, ಅರ್ಧದ ಮಗ್ಗಿಗಳನ್ನು ಸರಾಗವಾಗಿ ಹೇಳಿದ್ದು ಕೇಳಿದ್ದಾಗಲೆಲ್ಲ ಮುತ್ಮುರ್ಡು ಶಾಲೆಯ ಕುರಿತಾದದ್ದೆಲ್ಲ ಸುಳ್ಳಲ್ಲ, ಅಂತೆ, ಕಂತೆಯಲ್ಲ ಎನ್ನಿಸಿದ್ದವು.
ನನ್ನ ಅರಿವಿಗೆ ಬರುವ ಸಂದರ್ಭದಲ್ಲಿ ಈ ಶಾಲೆ ಎನ್ನುವುದು ಹಾಳು ಬಿದ್ದಿತ್ತು. ನಮ್ಮೂರ ಬೆನ್ನಿಗೆ ಉದ್ದಕ್ಕೆ ನಿಂತಿರುವ ಏಕಾದಶಿ ಗುಡ್ಡದ ಬುಡದಲ್ಲಿ ಒಂದೇ ಒಂದು ಕೊಠಡಿ, ಮುರಿದು ಹೋಗಿದ್ದ ಒಂದು ಭಾಗಿಲು, ಅಲ್ಲಲ್ಲಿ ಕಿತ್ತು ಹೋದ ಹಾಗೂ ಯಾರೋ ಕದ್ದುಕೊಂಡು ಹೋದ ಹಂಚುಗಳನ್ನೊಳಗೊಂಡ ಒಂದು ಮಾಡು. ಅರ್ಧ ಬಿದ್ದಿದ್ದ ಗೋಡೆ, ಬೀಗವೇ ಇರದಿದ್ದ ಬಾಗಿಲು. ಒರಲೆಯ ಮನೆ. ಆಗೀಗ ಬಿಕ್ಕೆ ಹಣ್ಣಿಗೋ, ಕವಳಿ ಹಣ್ಣಿಗೋ, ಪರಗೆ ಹಣ್ಣಿಗೋ ಅಥವಾ ಚೌತಿಯ ಸಂದರ್ಭದಲ್ಲಿ ಗೌರಿ ಹೂ ಮುಂತಾದ ಫಲವಳಿಗೆ ಸಾಮಾನು ಸಂಗ್ರಹಿಸಲು ಏಕಾದಶಿ ಗುಡ್ಡ ಹತ್ತಿದ ಸಂದರ್ಭದಲ್ಲಿ ಮುತ್ಮುರ್ಡು ಶಾಲೆಯ ಹಳೆಯ, ಶಿಥಿಲ ಕಟ್ಟಡ ನಮ್ಮ ಕಣ್ಣಿಗೆ ಬೀಳುತ್ತಿತ್ತಲ್ಲದೇ, ನಮ್ಮೊಳಗೆ ನಮಗೇ ಗೊತ್ತಿಲ್ಲದಂತೆ ಭಯವನ್ನು ಹುಟ್ಟು ಹಾಕುತ್ತಿತ್ತು.
ಹಿಂದೆಲ್ಲ ನಮ್ಮೂರಿನಲ್ಲಿ ಒಂದೊಂದು ಮನೆಗಳಲ್ಲಿ ಹತ್ತಾರು ಜನ ಮಕ್ಕಳಿದ್ದು, ಅವರೆಲ್ಲ ಮುತ್ಮುರ್ಡು ಶಾಲೆಗೆ ಓದಲು ಹೋಗುತ್ತಿದ್ದರಂತೆ. ಕ್ರಮೇಣ ಕೇಂದ್ರ ಸರ್ಕಾರದ ಕುಟುಂಬ ಯೋಜನೆಯಂತಹ ಜನಸಂಖ್ಯಾ ನಿಯಂತ್ರಣದ ಯೋಜನೆಗಳು ಮನೆ ಮನೆಗಳನ್ನು ಹೊಕ್ಕ ಮೇಲೆ ನಮ್ಮೂರಲ್ಲಿ ಹಾಗೂ ಮುತ್ಮುರ್ಡುಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಯಿತು. ಕ್ರಮೇಣ ಮುತ್ಮುರ್ಡು ಶಾಲೆಗೂ ವಿದ್ಯಾರ್ಥಿಗಳ ಬರ ಎದುರಾಯಿತು. ಹೀಗಿದ್ದಾಗಲೇ ಸರ್ಕಾರ ಮಕ್ಕಳು ಕಡಿಮೆ ಇರುವ ಶಾಲೆಗಳನನು ಮುಚ್ಚುವ ನಿರ್ಧಾರ ಮಾಡಿತು. ಮುತ್ಮುರ್ಡು ಶಾಲೆಗೂ ಬಾಗಿಲು ಹಾಕುವ ಪ್ರಸಂಗ ಎದುರಾಯಿತು. ನಾವು ಶಾಲೆಗೆ ಹೋಗುವ ವೇಳೆಗೆ ಮುತ್ಮುರ್ಡು ಶಾಲೆಗೆ ಬೀಗ ಬಿದ್ದು ಒಂದು ದಶಕಗಳೇ ಕಳೆದಿತ್ತೇನೋ. ಹೀಗಾಗಿ ನಾನು ಬಿನ್ನೆತ್ತಿಯಿಂದ ಅಡ್ಕಳ್ಳಿ ಶಾಲೆಯನ್ನೇ ಆಶ್ರಯಿಸಬೇಕಾಯಿತು.
ಇಂತಹ ಶಾಲೆ ನಾನು ಮೂರನೇ ಕ್ಲಾಸಿನಲ್ಲಿದ್ದಾಗ ಮತ್ತೊಮ್ಮೆ ತೆರೆಯುವ ಮುನ್ಸೂಚನೆ ಸಿಕ್ಕಿತು. ಮುತ್ಮುರ್ಡಿನ ಎಂ. ಎಸ್. ಹೆಗಡೆ ಅವರ ಪ್ರಯತ್ನದ ಫಲವಾಗಿ ಶಾಲೆ ಬಾಗಿಲು ತೆರೆಯಿತು. ಮೊದಲ ವರ್ಷ ಎಂ. ಎಸ್. ಹೆಗಡೆಯವರ ಮಗ ಓಂಕಾರ ಶಾಲೆಯ ಏಕೈಕ ಅಧಿಕರತ ವಿದ್ಯಾರ್ಥಿ. ತದನಂತರದಲ್ಲಿ ನನ್ನ ತಂಗಿ, ನನ್ನದೇ ಓರಗೆಯ ಪಕ್ಕದ ಮನೆಯ ಹುಡುಗಿ, ತಂಗಿಯ ಓರಗೆಯ ಇನ್ನೋರ್ವ ಹುಡುಗ ಹೀಗೆ ಹಲವರು ಶಾಲೆಗೆ ಏರಿದರು. ಶಾಲೆಗೆ ದಾಖಲಾದ ಮಕ್ಕಳ ಸಂಕ್ಯೆ ೧೦ನ್ನೂ ದಾಟಿತು. ಓರ್ವ ಶಿಕ್ಷಕಿ ಕೂಡ ಕಾನಸೂರಿನಿಂದ ಬಂದು ಹೋಗಲು ಆರಂಭಿಸಿದರು. ಈ ದಿನಗಳಲ್ಲಿ ನಾನೂ ಕೆಲವು ಕಾಲ ಮುತ್ಮುರ್ಡು ಶಾಲೆಗೆ ಹೋಗಲು ಆರಂಭಿಸಿದ್ದೆ. ಕೊನೆಗೆ ನನ್ನ ಅಡ್ಕಳ್ಳಿ ಶಾಲೆಯ ಹೆಡ್ಮಾಸ್ತರ್ ಆಗಿದ್ದ ರಮೇಶ್ ಗಡ್ಕರ್ ಅವರು ನನ್ನ ಅಪ್ಪನನ್ನು ಶಾಲೆಗೆ ಕರೆಸಿ, ವಿನಯನ್ನು ಮುತ್ಮುರ್ಡು ಶಾಲೆಗೆ ಸೇರಿಸುವುದಾದರೆ ಟಿಸಿ ಕೊಡುತ್ತೇನೆ ನೋಡಿ ಎಂದಿದ್ದೂ, ಅಪ್ಪ ಅದಕ್ಕೆ ಸುತಾರಾಂ ಒಪ್ಪದೇ, ನನ್ನನ್ನು ಮತ್ತೊಮ್ಮೆ ಅಡ್ಕಳ್ಳಿ ಶಾಲೆಗೆ ಹೋಗುವಂತೆ ಮಾಡಿದ್ದೂ ಆಯಿತು.
ಅದಾಗಿ ಹತ್ತಾರು ವರ್ಷಗಳ ಕಾಲ ಮುತ್ಮುರ್ಡು ಶಾಲೆ ಬಾಗಿಲು ತೆರೆದಿತ್ತು. ಸೀಮಾ ಮೇಡಂರಿಂದ ಆರಂಭಗೊಂಡು, ಪಿ. ಜಿ. ಹಾವಗೋಡಿ, ರಮೇಶ ನಾಯ್ಕ ಮುಂತಾದ ಮಾಸ್ತರರು ಶಿಕ್ಷಕರಾಗಿ ಬಂದಿದ್ದರು. ತದನಂತರದಲ್ಲಿ ನನ್ನ ಚಿಕ್ಕಪ್ಪನೇ ಶಾಲೆಗೆ ಮಾಸ್ತರರಾಗಿಯೂ ಬಂದಿದ್ದರು.
ಹೀಗಿದ್ದ ಸಂದರ್ಭದಲ್ಲೇ ಶಾಲೆಗೆ ಹೊಸ ಕಟ್ಟಡವೂ ಮಂಜೂರಾಯಿತು. ಸಿಮೆಂಟಿನ ಕಟ್ಟಡ, ಹಳೆಯ ಕಟ್ಟಡದ ಮುಂಭಾಗದಲ್ಲಿ ಭವ್ಯವಾಗಿ ನಿರ್ಮಾಣಗೊಂಡಿತು. ಒಂದೇ ಕೊಠಡಿಯನ್ನು ಹೊಂದಿದ್ದ ಈ ಕಟ್ಟಡ ಸಾಕಷ್ಟು ಸುಭದ್ರವೂ, ವಿಶಾಲವೂ ಆಗಿತ್ತು. ಇಷ್ಟರ ಜತೆಗೆ ಶಾಲೆಗೊಂದು ಬೋರ್ವೆಲ್, ದೊಡ್ಡ ಮೈದಾನ ಎಲ್ಲವೂ ನಿರ್ಮಾಣವಾಯಿತು. ಅಷ್ಟಾದರೂ ಶಾಲೆಯ ವಿದ್ಯಾರ್ಥಿಗಳ ಸಂಕ್ಯೆ ೧೫ದನ್ನು ದಾಟಲಿಲ್ಲ. ಈ ನಡುವೆ ಶಾಲೆಯಲ್ಲಿ ಐದನೇ ತರಗತಿಯೂ ಆರಂಭವಾಯಿತು.
ಈ ನಡುವೆ ಶಾಲೆಯಲ್ಲಿ ಬೆಳ್ಳಿ ಹಬ್ಬ ಆಚರಸುವ ನಿರ್ಧಾರಕ್ಕೆ ಊರಿನ ಸಸಹೃದಯಿಗಳು ಬಂದರು. ಶಾಲೆ ಆರಂಭಗೊಂಡು ೫೦ ವರ್ಷದ ಮೇಲೆ ಅನೇಕ ವಸಂತಗಳು ಕಳೆದಿದ್ದರೂ, ಶಾಲೆಯಲ್ಲಿ ಸಂಭ್ರಮ ಸಡಗರ ಹೆಚ್ಚಿತು. ಬೆಳ್ಳಿ ಹಬ್ಬದ ನೆಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಚರಣೆಗೆ ಮುಂದಾಗಲಾಯಿತು. ವಿದ್ಯಾರ್ಥಿಗಳ ಜತೆಗೆ ಪಾಲಕರು ಹಾಗೂ ಪೋಷಕರಿಗೂ ವಿವಿಧ ಸ್ಪರ್ಧೆಗಳನ್ನು ಇರಿಸಲಾಗಿತ್ತು. ನಂತರ ಸ್ಥಳೀಯ ಶಾಸಕರೂ ಕಾರ್ಯಕ್ರಮಕ್ಕೆ ಆಗಮಿಸಿದರು. ಅಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನೂ ಹಲವು ಕಾರ್ಯಕ್ರಮ ನೀಡಿದೆ. ಹಾಸ್ಯ ಕಾರ್ಯಕ್ರಮ ಹಲವರನ್ನು ಸೆಳೆಯಿತು ಕೂಡ. ಇದೇ ವೇಳೆ ನಮ್ಮೂರಿನ ಸಾಧಕ ರಾಮಚಂದ್ರ ಹೆಗಡೆ ಹಾಗೂ ಮುತ್ಮೂರ್ಡಿನ ಸಾಧಕ ನಾಗೇಶ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರೋ ನಾಲ್ಕೋ ನಡೆದಿದ್ದ ನೆನಪು.
ವಿದ್ಯಾರ್ಥಿಗಳ ಸಂಕ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಬೇಕು ಎಂದು ನಮ್ಮದೇ ರಾಜ್ಯ ಸರ್ಕಾರ ಆದೇಶ ನೀಡಿದ ಸಂದರ್ಭದಲ್ಲಿ ಮತ್ತೊಮ್ಮೆ ಮುತ್ಮುರ್ಡು ಶಾಲೆಗೆ ಆತಂಕ ಎದುರಾಯಿತು. ಈ ಶಾಲೆಯನ್ನು ಹತ್ತಿರದ ಶಾಲೆಗಳ ಜತೆಗೆ ವಿಲೀನ ಮಾಡಬೇಕು ಎನ್ನುವುದು ಆಡಳಿತ ವರ್ಗದ ಆದೇಶವಾಯಿತು. ಮುತ್ಮುರ್ಡು ಶಾಲೆಯನ್ನು ಪಕ್ಕದ ಅಡ್ಕಳ್ಳಿ ಶಾಲೆಯ ಜತೆಗೆ ವಿಲೀನ ಮಾಡುವ ಸಂದರ್ಭದಲ್ಲಿ ಮತ್ಮುರ್ಡು ಶಾಲೆಗೆ ಒಂದು ಕೊಠಡಿ, ಒಂದು ಮಾಸ್ತರು, ನಾಲ್ಕು ಮಕ್ಕಳು, ಒಂದು ಅಡುಗೆಯವರಿದ್ದರು. ಇದರಲ್ಲಿ ಶಾಲಾ ಕೊಠಡಿ ಹೊರತುಪಡಿಸಿ ಉಳಿದದ್ದೆಲ್ಲ ಒಂದೇ ಮನೆಯದ್ದಾಗಿತ್ತು ಎನ್ನುವುದು ವಿಶಿಷ್ಟ ಸಂಗತಿ. ಅಷ್ಟೇ ಏಕೆ ಆ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದವರೂ ಕೂಡ ಅದೇ ಶಿಕ್ಷಕ, ವಿದ್ಯಾರ್ಥಿ ಕುಟುಂಬದವರೂ ಎಂಬುದು ವಿಚಿತ್ರ, ವಿಸ್ಮಯ ಸಂಗತಿಯಾಗಿತ್ತು.
ಅಂದಹಾಗೆ ಈಗ ಮುತ್ಮುರ್ಡು ಶಾಲೆ ಬಾಗಿಲು ಹಾಕಿದೆ. ದೈತ್ಯ ಎಕಾದಶಿ ಗುಡ್ಡದ ಬುಡದಲ್ಲಿ ಬಿಳಿಯ ಬಣ್ಣದ ಶಾಲೆ ಮಳೆ-ಗಾಳಿಯ ಅಬ್ಬರಕ್ಕೆ ಸಾಕ್ಷಿಯಾಗಿ ನಿಂತಿದೆ. ನನ್ನ ತಂಗಿಯ ಓರಗೆಯವರು ನೆಟ್ಟಿದ್ದ ತೆಂಗಿನ ಗಿಡಗಳು ನಿಧಾನವಾಗಿ ದೊಡ್ಡದಾಗುತ್ತಿವೆ. ಹೂವಿನ ಗಿಡಗಳು ಆಗಾಗ ಹೂವರಳಿಸಿಕೊಂಡು ನಗುತ್ತ ನಮ್ಮನ್ನು ಕರೆಯುತ್ತಿವೆ. ಹಳೆಯ ಕಟ್ಟಡ ಅವಸಾನ ತಲುಪಿ ತನ್ನ ಅಂತಿಮ ಕ್ಷಣಗಳನ್ನು ಎದುರಿಸುತ್ತಿದ್ದರೆ, ಹೊಸ ಕಟ್ಟಡದ ಬಣ್ಣ ಮಾಸಿದೆ. ಊರಿನಲ್ಲಿ ವಿದ್ಯಾರ್ಥಿಗಳ ಸಂಕ್ಯೆ ಹೆಚ್ಚಾದರೆ ಮತ್ತೊಮ್ಮೆ ಶಾಲೆ ಬಾಗಿಲು ತೆರೆಯಬಹುದು.
ಹಲವು ನೆನಪುಗಳ ಗುಚ್ಛವನ್ನೇ ಒಳಗೊಂಡಿರುವ ಮುತ್ಮುರ್ಡು ಶಾಲೆ ನಮ್ಮ ನೆನಪುಗಳನ್ನು ಮತ್ತೊಮ್ಮೆ ಉದ್ದೀಪನ ಗೊಳಿಸುವ ಕಾರ್ಯ ಕೈಗೊಳ್ಳುತ್ತದೆ. ಬಾಲ್ಯದ ಕ್ರಿಯಾಶೂಲತೆಗೆ, ಜೀವಂತಿಕೆಗೆ, ಇಂದಿನ ಸೃಜನಶೀಲತೆಗೆ ಇಂತಹ ಶಾಲೆಗಳ ಪಾತ್ರ ಬಹಳ ಮಹತ್ವದ್ದು.