ಪ್ರಸ್ತುತ ಜಗತ್ತಿನಲ್ಲಿ ಫುಟ್ಬಾಲ್ನಲ್ಲಿ ಅತ್ಯಂತ ಹೆಚ್ಚು ಗೋಲುಗಳನ್ನು ಗಳಿಸಿರುವವರ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿರುವಾತ ಭಾರತದ ಸುನೀಲ್ ಛೇಟ್ರಿ. ಭಾರತ ಫುಟ್ಬಾಲ್ ತಂಡದ ನಾಯಕ. ಇತ್ತೀಚೆಗಷ್ಟೇ ಇಂಟರ್ಕಾಂಟಿನೆಂಟಲ್ ಕಪ್ ಗೆದ್ದ ಸಂಭ್ರಮದಲ್ಲಿರುವ ಛೆಟ್ರಿ ಮುಂಬರುವ ಏಷ್ಯನ್ ಕಪ್ಗಾಗಿ ಸಿದ್ಧತೆಯನ್ನು ಕೈಗೊಳ್ಳುತ್ತಿದ್ದಾರೆ. ಸದಾ ಕ್ರಿಯಾಶೀಲವಾಗಿರುವ, ಜೊತಗಾರರನ್ನು, ಎದುರಿನಲ್ಲಿರುವವರನ್ನು ಹುರಿದುಂಬಿಸುತ್ತ ಉತ್ಸಾಹವನ್ನು ಹೆಚ್ಚಿಸುವ ಸುನೀಲ್ ಛೇಟ್ರಿ ಮನಬಿಚ್ಚಿ ಮಾತನಾಡಿದರು.
ಪ್ರಶ್ನೆ : ನೀವೀಗ ವಿಶ್ವದಲ್ಲೇ ಎರಡನೇ ಅತ್ಯಂತ ಹೆಚ್ಚು ಗೋಲ್ ಗಳಿಸಿದ ಆಟಗಾರ. ಮುಂದೆ ನಂ.1 ಗುರಿ ಇದೆಯಾ?
ಛೆಟ್ರೀ : ಪ್ರಸ್ತುತ ಆಡುತ್ತಿರುವ ಆಟಗಾರರ ಪೈಕಿ ಗೋಲ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇನೆ. ಲಿಯೋನಲ್ ಮೆಸ್ಸಿ ಗೋಲ್ ಗಳಿಕೆಯನ್ನು ಸರಿದೂಗಿಸಿದ್ದೇನೆ. ನಿಜ. ನಾನು ಯಾವತ್ತೂ ಸ್ಥಾನಗಳ ಬಗ್ಗೆ ಚಿಂತನೆ ನಡೆಸಿಲ್ಲ. ಮೆಸ್ಸಿನ ನನ್ನ ಅತ್ಯಂತ ಪ್ರೀತಿಯ ಆಟಗಾರ. ಮೆಸ್ಸಿಯ ಆಟವನ್ನು ನಾನು ಬಹಳ ಎಂಜಾಯ್ ಮಾಡುತ್ತೇನೆ. ರೋನಾಲ್ಡೋ ಆಟವನ್ನೂ ಕೂಡ ಅಷ್ಟೇ ಇಷ್ಟಪಡುತ್ತೇನೆ. ಮೊದಲನೇ ಸ್ಥಾನದ ಗುರಿಯ ಕಡೆಗೆ ಗಮನ ಇಟ್ಟಿಲ್ಲ. ನಾನು ನನ್ನ ಆಟವನ್ನು ಆಡುತ್ತೇನೆ. ಆಡುತ್ತಿದ್ದೇನೆ. ನನಗೆ ನಾನು ಗಳಿಸಿದ ಗೋಲುಗಳಿಂದ ಭಾರತ ಗೆಲ್ಲುವುದು ಮುಖ್ಯ.
ಪ್ರಶ್ನೆ : ಭಾರತ ಇಂಟರ್ಕಾಂಟಿನೆಂಟಲ್ ಕಪ್ ಗೆದ್ದಿದೆ. ಇದರ ಬಗ್ಗೆ ಏನನ್ನುತ್ತೀರಿ?
ಛೆಟ್ರಿ : ಇಂಟರ್ಕಾಂಟಿನೆಂಟಲ್ ಕಪ್ ಗೆದ್ದಿರುವುದು ಬಹಳ ಸಂತಸ ತಂದಿದೆ. ವಿವಿಧ ರಾಷ್ಟ್ರಗಳ ಎದುರು ಪರಿಣಾಮಕಾರಿ ಆಟವನ್ನು ಆಡುವ ಮೂಲಕ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವುದು, ಇಂಟರ್ಕಾಂಟಿನೆಂಟಲ್ ಕಪ್ಗಿಂತ ದೊಡ್ಡ ಪ್ರಶಸ್ತಿಗಳನ್ನು ಜಯಿಸುವುದು ನಮ್ಮೆದುರು ಇರುವ ಗುರಿ.
ಪ್ರಶ್ನೆ : ಪ್ರಸ್ತುತ ಭಾರತ 97ನೇ ರ್ಯಾಂಕಿನಲ್ಲಿದೆ. ಭಾರತದ ಮುಂದಿನ ಗುರಿ?
ಛೆಟ್ರೀ : ಭಾರತೀಯ ಫುಟ್ಬಾಲ್ ದಿನದಿಂದ ದಿನಕ್ಕೆ ಗುಣಮಟ್ಟವನ್ನು ವೃದ್ಧಿಸಿಕೊಳ್ಳುತ್ತಿದೆ. ಉನ್ನತ ರ್ಯಾಂಕಿನ ದೇಶಗಳ ಜತೆ ಆಡುತ್ತ ಆಡುತ್ತ ಕೌಶಲ್ಯವನ್ನು ವೃದ್ಧಿಸಿಕೊಳ್ಳುತ್ತಿದೆ. ಈ ಮೊದಲು ಭಾರತ 100ಕ್ಕಿಂತ ಹೆಚ್ಚಿನ ರ್ಯಾಂಕಲ್ಲಿತ್ತು. ಆದರೆ ಉತ್ತಮ ಆಟವನ್ನು ಪ್ರದಶರ್ಿಸುವ ಮೂಲಕ 100 ರ್ಯಾಂಕುಗಳ ಒಳಗೆ ಬಂದು ತಲುಪಿದೆ.ಪ್ರಸ್ತುತ 97ನೇ ರ್ಯಾಂಕಿನಲ್ಲಿರಬಹುದು. ಮುಂದಿನ ದಿನಗಳಲ್ಲಿ 50ನೇ ರ್ಯಾಂಕಿನ ಸನಿಹ ಬರಬೇಕೆನ್ನುವ ಕನಸು ಎಲ್ಲರಲ್ಲಿಯೂ ಇದೆ. ತಂಡದ ಪ್ರತಿಯೊಬ್ಬರೂ ಉತ್ತಮ ಆಟವನ್ನು ಆಡುವ ಮೂಲಕ ಭಾರತದ ಫುಟ್ಬಾಲ್ ರ್ಯಾಂಕಿಂಗ್ ಹಾಗೂ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದೇವೆ.
ಪ್ರಶ್ನೆ : ಈಗಾಗಲೇ ವಿಶ್ವಕಪ್ ಆರಂಭವಾಗಿದೆ. ವಿಶ್ವಕಪ್ ಜ್ವರ ಏರಲಾರಂಬಿಸಿದೆ..
ಛೇಟ್ರಿ : ಹೌದು. ರಷ್ಯಾದಲ್ಲಿ ನಡೆಯುತ್ತಿರುವ ಈ ವಿಶ್ವಕಪ್ ಪ್ರತಿಯೊಬ್ಬರನ್ನೂ ಮೋಡಿ ಮಾಡಲು ಆರಂಭಿಸಿದೆ. ನಾನು ಮುಂದಿನ ಏಷ್ಯನ್ಕಪ್ಗೆ ತಯಾರಿ ನಡೆಸುವುದರ ಜತೆಗೆ ವಿಶ್ವಕಪ್ನ್ನು ಸವಿಯುತ್ತೇನೆ. ಪಂದ್ಯವಿರುವ ಸಮಯದಲ್ಲಿ ಟಿವಿಯ ಮುಂದಿನಿಂದ ಏಳುವುದೇ ಇಲ್ಲ. ಖಂಡಿತವಾಗಿಯೂ ಎಲ್ಲರ ಜತೆ, ಎಲ್ಲರಂತೆ ಪಂದ್ಯಗಳನ್ನು ಎಂಜಾಯ್ ಮಾಡುತ್ತ ನೋಡುತ್ತೇನೆ.
ಪ್ರಶ್ನೆ : ವಿಶ್ವಕಪ್ಪನ್ನು ಯಾರು ಗೆಲ್ಲಬಹುದು?
ಛೆಟ್ರಿ : ಖಂಡಿತವಾಗಿಯೂ ಬ್ರೆಝಿಲ್ ವಿಶ್ವಕಪ್ನ ಫೆವರೆಟ್. ಇದಲ್ಲದೇ ಇಂಗ್ಲೆಂಡ್ ಅಥವಾ ಅಜರ್ೆಂಟಿನಾಗಳೂ ಕಪ್ ಗೆಲ್ಲಬಹುದು. ಇನ್ನು ಕಳೆದ ಸಾರಿಯ ಚಾಂಪಿಯನ್ ಜರ್ಮನಿಯನ್ನು ಕಡೆಗಣಿಸುವ ಹಾಗಿಲ್ಲ. ವಿಶ್ವಕಪ್ನಲ್ಲಿ ಎಲ್ಲವೂ ಗುಣಮಟ್ಟದ ಆಟವನ್ನೇ ಆಡುತ್ತವೆ. ಅಚ್ಚರಿಯ ಫಲಿತಾಂಶಗಳು ಬಂದರೂ ಬರಬಹುದು. ಏಷ್ಯಾದ ತಂಡಗಳು ಪರಿಣಾಮಕಾರಿಯಾದ ಆಟವನ್ನು ಆಡಬಹುದು. ಆಫ್ರಿಕಾದ ತಂಡಗಳಿಂದ ಅಚ್ಚರಿಯ ಫಲಿತಾಂಶ ನಿರೀಕ್ಷೆ ಮಾಡಬಹುದು.
ಪ್ರಶ್ನೆ : ಯಾರು ನಿಮ್ಮ ಫೆವರೆಟ್ ಆಟಗಾರ? ಈ ವಿಶ್ವಕಪ್ನಲ್ಲಿ ಯಾರ ಕಾಲ್ಚಳಕ ನಡೆಯಬಹುದು?
ಛೆಟ್ರೀ: ಅಜರ್ೆಂಟಿನಾದ ಲಿಯೋನಲ್ ಮೆಸ್ಸಿ ಹಾಗೂ ಪೋಚರ್ುಗಲ್ನ ಕ್ರಿಶ್ಚಿಯಾನೋ ರೋನಾಲ್ಡೋ ಈ ವಿಶ್ವಕಪ್ನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಖಂಡಿತವಾಗಿಯೂ ನನಗೆ ಈ ಇಬ್ಬರೂ ಆಟಗಾರರು ಫೆವರೇಟ್. ಇನ್ನು ಈ ವಿಶ್ವಕಪ್ನಲ್ಲಿ ಬ್ರೆಜಿಲ್ನ ನೇಯ್ಮರ್, ಬೆಲ್ಜಿಯಮ್ನ ಕೆವಿನ್ ಡಿ ಬ್ರ್ಯೂನ್ ತಮ್ಮ ಕಾಲ್ಚಳಕವನ್ನು ತೋರುತ್ತಾರೆ.
ಪ್ರಶ್ನೆ ; ಮೆಸ್ಸಿ-ರೋನಾಲ್ಡೋ ಇವರಲ್ಲಿ ಯಾರು ಗ್ರೇಟ್?
ಛೆಟ್ರಿ : ಇಬ್ಬರೂ ಬೇರೆ ಬೇರೆ ರೀತಿಯ ಕೌಶಲ್ಯವನ್ನು ಹೊಂದಿರುವ ಆಟಗಾರರು. ಇಬ್ಬರ ತಂತ್ರಗಳೂ ಭಿನ್ನ. ಈ ಇಬ್ಬರ ನಡುವೆ ಹೋಲಿಕೆ ಬೇಡ. ಇಬ್ಬರ ಆಟವನ್ನೂ ನಾವು ಎಂಜಾಯ್ ಮಾಡೋಣ. ಗಳಿಸುವ ಗೋಲುಗಳಿಗೆ ಖುಷಿ ಪಡೋಣ.
ಪ್ರಶ್ನೆ : ಭಾರತ ವಿಶ್ವಕಪ್ನಲ್ಲಿ ಭಾಗವಹಿಸುವುದು ಯಾವಾಗ?
ಛೆಟ್ರಿ ; ಭಾರತ ವಿಶ್ವಕಪ್ನಲ್ಲಿ ಭಾಗವಹಿಸಬೇಕು ಎನ್ನುವುದು ಕೋಟ್ಯಂತರ ಅಭಿಮಾನಗಳ ಕನಸು. ಭಾರತ ಏಷ್ಯಾದ ವಲಯದಲ್ಲಿ ಕೆಳ ಹಂತದಲ್ಲಿದೆ. ಆದರೆ ದಿನದಿಂದ ದಿನಕ್ಕೆ ಭಾರತದ ಫುಟ್ಬಾಲ್ ಗುಣಮಟ್ಟವನ್ನು ವೃದ್ಧಿಸಿಕೊಳ್ಳುತ್ತಿದೆ. ಏಷ್ಯಾದ ಅಗ್ರ 10 ರಾಷ್ಟ್ರಗಳ ಯಾದಿಯಲ್ಲಿ ಸ್ಥಾನ ಗಳಿಸಿಕೊಳ್ಳುವುದು ಭಾರತ ತಂಡದ ಎದುರಿಗೆ ಇರುವ ಮೊದಲ ಗುರಿ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಏಷ್ಯಾದ ಪ್ರಬಲ ಫುಟ್ ಬಾಲ್ ರಾಷ್ಟ್ರಗಳಾದ ಇರಾನ್, ಜಪಾನ್, ಸೌದಿ ಅರೆಬಿಯಾ, ಕೋರಿಯಾಗಳಂತಹ ರಾಷ್ಟ್ರಗಳ ಜತೆ ಭಾರತ ಹೆಚ್ಚು ಹೆಚ್ಚು ಪಂದ್ಯಗಳನ್ನು ಆಡುವ ಕಡೆಗೆ ಗಮನ ಹರಿಸಿದೆ. ಬೇರೆ ಬೇರೆ ದೇಶಗಳ ಜತೆ ಹೆಚ್ಚು ಹೆಚ್ಚು ಆಟವಾಡಿದಂತೆಲ್ಲ ಭಾರತೀಯ ಆಟಗಾರರ ಗುಣಮಟ್ಟ ಹಾಗೂ ಸಾಮಥ್ರ್ಯ ವೃದ್ಧಿಯಾಗುತ್ತದೆ.
ಪ್ರಶ್ನೆ : ಏಷ್ಯನ್ ಕಪ್ಗೆ ನಿಮ್ಮ ತಯಾರಿ ಹೇಗಿದೆ?
ಛೇಟ್ರಿ : ನಮ್ಮ ಮುಂದೆ ಏಷ್ಯನ್ ಕಪ್ ಇದೆ. ಈ ಪಂದ್ಯಾವಳಿಯಲ್ಲಿ ಏಷ್ಯಾದ ಪ್ರಬಲ ತಂಡಗಳು ಭಾಗವಹಿಸುತ್ತಿವೆ. ಅವುಗಳ ಮುಂದೆ ನಮ್ಮ ಸಾಮಥ್ರ್ಯವನ್ನು ಪ್ರದರ್ಶನ ಮಾಡುವುದು ನಮ್ಮ ಗುರಿ. ಇದಕ್ಕಾಗಿ ಕಠಿಣ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದೇವೆ. ಪ್ರಬಲ ರಾಷ್ಟ್ರಗಳ ವಿರುದ್ಧ ಗುಣಮಟ್ಟದ ಪ್ರದರ್ಶನಕ್ಕೆ ನಾವು ಪ್ರಯತ್ನಿಸಲಿದ್ದೇವೆ.
ಪ್ರಶ್ನೆ : ಹೊಸ ಹಾಗೂ ಮುಂದಿನ ಪೀಳಿಗೆಯ ಆಟಗಾರರಿಗೆ ನೀವೇನು ಹೇಳಬಯಸುತ್ತೀರಿ?
ಛೇಟ್ರಿ : ಉತ್ತಮವಾಗಿ ಆಡಿ. ಒಲ್ಳೆಯ ತರಬೇತಿ ಪಡೆಯಿರಿ. ಹೆಚ್ಚಿನ ಶ್ರಮ ವಹಿಸಿ. ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಅಷ್ಟಾದರೆ ಫುಟ್ಬಾಲ್ ನಿಮ್ಮನ್ನು ಕೈಹಿಡಿಯಬಲ್ಲದು.
ಪ್ರಶ್ನೆ ; ಫುಟ್ಬಾಲ್ ಪ್ರೇಮಿಗಳಿಗೆ ಏನು ಹೇಳ ಬಯಸುವಿರಿ?
ಛೇಟ್ರಿ ; ಇಂಟರ್ಕಾಂಟಿನೆಂಟಲ್ ಕಪ್ ಸಂದರ್ಭದಲ್ಲಿ ಪಂದ್ಯಗಳಿಗೆ ಅಭಿಮಾನಿಗಳ ಕೊರತೆಯಿತ್ತು. ಕೊನೆಗೆ ನಾನು ಪಂದ್ಯವನ್ನು ನೋಡಲು, ಬೆಂಬಲಿಸಲು ಬನ್ನಿ ಎಂದು ಮನವಿ ಮಾಡಿಕೊಳ್ಳಬೇಕಾಯಿತು. ಭಾರತದಲ್ಲಿ ಫುಟ್ಬಾಲ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ನಮ್ಮ ಬೆನ್ನಿಗೆ ನಿಂತರೆ ನಮ್ಮಿಂದ ಇನ್ನಷ್ಟು ಉತ್ತಮ ಆಟವನ್ನು ಪ್ರದಶರ್ಿಸಲು ಸಾಧ್ಯವಿದೆ.