Friday, August 18, 2017

ತಮಾಷೆಯ ಸಾಲುಗಳು..!

ಬದಲಾವಣೆ..

ಕಿವಿಯ ಮೇಲೆ ಪೆನ್ ಇಟ್ಕಂಡ್.. 

ಕೈಯಲ್ ಟಕ್ ಟಕ್ ಅನ್ನಿಸ್ತಾ 
ಟಿಕೆಟ್ ಟಿಕೆಟ್ ಅನ್ನುವ 
ಕಂಡಕ್ಟರ್ ಗಳು ಏನಾದರು..? ಏನಾದರು?

ಅಪ್ ಡೇಟ್ ಆದರು..!


ಆಸೆ


ಕಾಣದ ಕಡಲಿಗೆ..

ಹಂಬಲಿಸಿದೆ ಮನ..
ಕಾಣುವ ಕಡಲನು
ಮೂದಲಿಸಿದೆ..!

ಕ`ಬಡ್ಡಿ'


ಬ್ಯಾಂಕ್
'ಬಡ್ಡಿ' 
ಹೆಚ್ಚಿದಾಗೆಲ್ಲಾ 
ಕ'ಬಡ್ಡಿ' 
ಆಡುವ 
ಆಸೆ..



ಅಸಹಿಷ್ಣು ಮನ


ಹತ್ ವರ್ಷದಿಂದ 

ಕಾಡದ ಅಸಹಿಷ್ಣುತೆ...
ಅಧಿಕಾರದಿಂದ 
ಕೆಳಗಿಳಿಯುವ ಸಂದರ್ಭದಲ್ಲಿ..
ಕಾಡ್ತಾ ಇದೆಯಂತೆ..!

ಬೇಡಿಕೆ


ಉಪ್ಪ ಕೊಡ್ತೀನಿ

ಒಪ್ಕೋ ಅಂದೆ...
OPPO ಕೊಡ್ಸು
ಒಪ್ಕೋತೀನಿ ಅಂದ್ಲು..!



(ಸುಮ್ನೆ ತಮಾಷೆಗೆ ಬರೆದ ಸಾಲುಗಳು.. 
ಫೇಸ್ ಬುಕ್ಕಲ್ಲಿ ಆಗಾಗ ಬಂದಿದೆ... ಇವುಗಳು..)

Saturday, August 5, 2017

ಕಳವೆಯ ಮುದ್ದಿನ ಗೌರಿ ಇನ್ನಿಲ್ಲ

ಕಾಡು-ನಾಡಿನ ಕೊಂಡಿಯಾಗಿದ್ದ ಜಿಂಕೆ - 17 ವರ್ಷದ ಒಡನಾಟ ಅಂತ್ಯ

ಕಾಡು ಹಾಗೂ ನಾಡಿನ ನಡುವೆ ಕೊಂಡಿಯಾಗಿ, ಕಾಡು ಸಂರಕ್ಷಣೆಯ ಪಾಠವನ್ನು ನಾಡಿನ ಮಂದಿಗೆಲ್ಲ ಸಾರಿ ಹೇಳುತ್ತಿದ್ದ ಗೌರಿ ಜಿಂಕೆ ಇನ್ನಿಲ್ಲ. ಕಳವೆಯ ಕಾಡಿನಲ್ಲಿ ಹುಟ್ಟಿ, ನಾಡಿನ ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದ ಗೌರಿ ಜಿಂಕೆ ತನ್ನ ವಯೋಸಹಜ ಕಾರಣಗಳಿಂದಾಗಿ ಇಹಲೋಕ ತ್ಯಜಿಸಿದ್ದಾಳೆ.
ಕಾಡಿನ ಜಿಂಕೆ ನಾಡಿನ ಒಡನಾಡಿ :
2001ರ ಆಸುಪಾಸಿನಲ್ಲಿ ಮರಿಯಾಗಿದ್ದ ಗೌರಿ ಬೇಟೆ ನಾಯಿಗಳ ದಾಳಿಗೆ ಸಿಕ್ಕಿ ತತ್ತರಿಸಿತ್ತು. ಹುಟ್ಟಿ ಆಗಷ್ಟೇ ಐದಾರು ದಿನಗಳು ಕಳೆದಿದ್ದ ಗೌರಿಯ ಮೇಲೆ ಬೇಟೆಗಾರರ ನಾಯಿಗಳು ದಾಳಿ ಮಾಡಿದ್ದವು. ಹಾಗಿದ್ದಾಲೇ ಸ್ಥಳೀಯರೊಬ್ಬರು ತಾಯಿಯಿಂದ ಬೇರ್ಪಟ್ಟು ಪರಿತಪಿಸುತ್ತಿದ್ದ ಗೌರಿಯನ್ನು ಹಿಡಿದು ತಂದಿದ್ದರು. ಮನೆಗೆ ತಂದವರಿಗೆ ತಮ್ಮ ಮನೆಯಲ್ಲಿ ಜಿಂಕೆ ಮರಿಗೆ ಅಗತ್ಯವಾದ ಹಾಲು ಇಲ್ಲ ಎನ್ನುವುದು ಅರಿವಾಗಿ, ಹೈನುಗಳನ್ನು ಸಾಕಿದ್ದ ಪರಿಸರ ಬರಹಗಾರ ಶಿವಾನಂದ ಕಳವೆಯವರ ಮನೆಗೆ ಮರಿಜಿಂಕೆಯನ್ನು ಬಿಟ್ಟು ಬಂದಿದ್ದರು. ಅಂದಿನಿಂದ ಜಿಂಕೆ ಶಿವಾನಂದ ಕಳವೆ ಅವರ ಮನೆಯ ಒಡನಾಡಿಯಾಗಿತ್ತು.
ಮನೆಯಲ್ಲಿ ಕುಟುಂಬದ ಸದಸ್ಯರಂತೆ ಬೆಳೆದ ಜಿಂಕೆ ಮರಿಗೆ ಗೌರಿ ಎಂದು ಹೆಸರಿಟ್ಟಿದ್ದೂ ಆಯಿತು. ಮನೆಯ ಎಲ್ಲ ಸದಸ್ಯರೂ ಕೂಡ ಗೌರಿಯ ಪ್ರತಿಗೆ ಪಾತ್ರರಾದರು. ಮನೆಯ ನಾಯಿ, ದನ-ಕರುಗಳ ಜೊತೆಗೆ ತಾನೂ ಬೆಳೆಯಿತು ಗೌರಿ. ಇಂತಹ ಗೌರಿ ಕೆಲ ದಿನಗಳಲ್ಲಿಯೂ ಕಳವೆ ಊರಿನ ಎಲ್ಲರ ಪ್ರೀತಿಯನ್ನೂ ಗಳಿಸಿಕೊಂಡಿತು. ಶಿವಾನಂದ ಕಳವೆಯವರ ಮನೆಯಲ್ಲಿನ ದೋಸೆ, ಸಂಕಷ್ಟಿ ದಿನದಂದು ಮಾಡುವ ಪಂಚಕಜ್ಜಾಯ, ಸಿಹಿತಿಂಡಿಗಳು ಗೌರಿಯ ಅಚ್ಚುಮೆಚ್ಚಿನ ಆಹಾರವಾದವು. ಕಾಡಿನ ಪ್ರಾಣಿ ಜಿಂಕೆ ನಾಡಿನ ಪ್ರೀತಿಪಾತ್ರ ಪ್ರಾಣಿಯಾಗಿ ರೂಪುಗೊಂಡಿತ್ತು.
ಶಿವಾನಂದ ಕಳವೆಯವರು ಆಗಾಗ್ಗೆ ಗೌರಿಯನ್ನು ಕಾಡಿಗೆ ಪರಿಚಯಿಸುವ ಕಾರ್ಯ ಮಾಡುತ್ತಲೇ ಇದ್ದರು. ಗೌರಿ ಬೆಳೆಯುತ್ತಿದ್ದಂತೆಲ್ಲ ಕಳವೆಯವರ ಮನೆಯ ಬಳಿಗೆ ಬರುತ್ತಿದ್ದ ಜಿಂಕೆಗಳ ಹಿಂಡು ಗೌರಿಯನ್ನು ಆಕಷರ್ಿಸಿತು. ಆ ಸಂದರ್ಭದಲ್ಲಿಯೇ ಕಳವೆಯವರು ಗೌರಿಯನ್ನು ಕಾಡಿಗೆ ಕಳಿಸುವ ಕಾರ್ಯವನ್ನೂ ಮಾಡಿದರು. ಕಾಡಿನ ಹಿಂಡಿನ ಜೊತೆಗೆ ಗೌರಿಯನ್ನು ಕಳಿಸಿದರು. ಮೊದ ಮೊದಲು ಅಂಜಿದ್ದ ಗೌರಿ ನಂತರ ಕಾಡಿನ ಗೆಳೆಯರ ಜೊತೆ ಬೆರೆತುಕೊಂಡಿತು.
ಗೌರಿಗೊಬ್ಬ ಮಗ ಗಣೇಶ :
ಗೌರಿಗೆ ಒಂಭತ್ತು ವರ್ಷವಾಗಿದ್ದಾಗ ಅದು ಗರ್ಭ ಧರಿಸಿತು. ಅಲ್ಲದೇ ಮರಿಯನ್ನೂ ಹಾಕಿತು. ಹುಟ್ಟಿದ ಮರಿಗೆ ಗಣೇಶ ಎನ್ನುವ ನಾಮಕರಣವೂ ಆಯಿತು. ಶಿವಾನಂದ ಕಳೆವಯವರ ಮನೆಯನ್ನು ತವರು ಮನೆ ಮಾಡಿಕೊಂಡಿದ್ದ ಗೌರಿ ತನ್ನ ಮರಿಯನ್ನು ಅವರ ಮನೆಗೆ ಕರೆದುಕೊಂಡು ಬಂದಿತು. ಕಾಡಿನಲ್ಲಿ ಮರಿ ಇದ್ದರೆ ಅದರ ಜೀವಕ್ಕೆ ಅಪಾಯ ಉಂಟಾಗಬಹುದು ಎನ್ನುವ ಕಾರಣಕ್ಕಾಗಿ ನಾಡಿನತ್ತ ಮರಿಯನ್ನು ಕರೆತಂದ ಗೌರಿ ಕೆಲ ದಿನಗಳ ಕಾಲ ಗಣೇಶನನ್ನು ಮನೆಯಲ್ಲಿಯೇ ಇರಿಸಿತ್ತು ಎನ್ನುತ್ತಾರೆ ಶಿವಾನಂದ ಕಳವೆಯವರು.
ಅದಾದ ನಂತರ ಗೌರಿ ಏನಿಲ್ಲವೆಂದರೂ ಒಂಭತ್ತಕ್ಕೂ ಹೆಚ್ಚಿನ ಮರಿಗಳನ್ನು ಹಾಕಿದೆ. ಆ ಮರಿಗಳೆಲ್ಲ ಇದೀಗ ದೊಡ್ಡವಾಗಿವೆ. ಅವು ಕೂಡ ಮಕ್ಕಳು-ಮರಿಗಳನ್ನು ಮಾಡಿಕೊಂಡು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಳವೆಯ ಕಾಡಿನಲ್ಲಿ ದೊಡ್ಡದೊಂದು ಹಿಂಡನ್ನು ಸೃಷ್ಟಿ ಮಾಡಿವೆ. ಕಾಡಿನಲ್ಲಿ ಹುಟ್ಟಿ, ನಾಡಿನಲ್ಲಿ ಬೆಳೆದು ನಂತರ ಮತ್ತೆ ಕಾಡಿಗೆ ಹಿಂತಿರುಗಿದ ಗೌರಿ ಆಗಾಗ ಕಳವೆಗೆ ಬರುತ್ತಲೇ ಇದ್ದಳು. ಶಿವಾನಂದ ಕಳವೆಯವರು ಹಾಗೂ ಅವರ ಕುಟುಂಬದ ಯಾರೇ ಸದಸ್ಯರು ಕಾಡಿನತ್ತ ಮುಖ ಮಾಡಿ `ಗೌರಿ... ಬಾ ಇಲ್ಲಿ..' ಎಂದರೆ ಸಾಕು ಕ್ಷಣಾರ್ಧದಲ್ಲಿ ಮನೆಯತ್ತ ಓಡಿಬರುತ್ತಿದ್ದಳು ಗೌರಿ.
ಈ ಗೌರಿಯ ಕಾರಣದಿಂದಲೇ ಕಳವೆ ಹಾಗೂ ಸುತ್ತಮುತ್ತಲ ಊರುಗಳಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಕಾಡಿನ ಬೇಟೆಗಳೂ ನಿಂತವು ಎನ್ನುತ್ತಾರೆ ಕಳವೆಯವರು. ಊರಿನ ಯಾರದೇ ಮನೆಗೆ ಹೋಗಿ ಮನೆಯ ಸದಸ್ಯರ ಮುಂದೆ ನಿಂತು ತಿಂಡಿಯನ್ನು ಕೇಳಿ ಪಡೆಯುತ್ತಿದ್ದ ಗೌರಿ ಇನ್ನಿಲ್ಲ. ಗೌರಿ ಸಾವನ್ನಪ್ಪಿರುವ ವಿಷಯ ಕೇಳಿದ ಪ್ರತಿಯೊಬ್ಬರೂ ಹೌಹಾರಿದ್ದಾರೆ. ತಮ್ಮದೇ ಕುಟುಂಬದ ಸದಸ್ಯರನ್ನು ಕಳೆದುಕೊಂಡಷ್ಟು ದುಃಖ ಪಡುತ್ತಿದ್ದಾರೆ. ವಯೋ ಸಹಜ ಕಾರಣಗಳಿಂದ ಗೌರಿ ಸಾವನ್ನಪ್ಪಿದ್ದಾಳೆ. ಆದರೂ ಕೂಡ ಹಾವು ಅಥವಾ ಇನ್ಯಾವುದೇ ವಿಷ ಜಂತು ಕಚ್ಚಿರಬಹುದು ಎನ್ನುವ ಸಣ್ಣ ಅನುಮಾನಗಳೂ ಕೂಡ ಇದೆ. ಶಿವಾನಂದ ಕಳವೆಯವೆ ಮನೆಯ ಹಿಂಭಾಗದ ಕಾಡಿನಲ್ಲಿನ ರಾಮಪತ್ರೆ ಮರದ ಕೆಳಗೆ ಗೌರಿಯ ಮೃತದೇಹ ಸಿಕ್ಕಿದೆ. ಗೌರಿಯ ಸಾವಿನ ಸುದ್ದಿ ತಿಳಿದ ತಕ್ಷಣ ಗೌರಿಯನ್ನು ಕಂಡವರು, ಮಾತನಾಡಿಸಿದವರು, ಸ್ಥಲೀಯರು, ಪರಿಸರ ಪ್ರೇಮಿಗಳು, ಪ್ರಾಣಿ-ಪಕ್ಷಿ ಪ್ರಿಯರು ಕಳವೆಯತ್ತ ಮುಖಮಾಡಿ ಗೌರಿಯ ಅಂತಿಮ ದರ್ಶನ ಮಾಡಿಕೊಂಡು ಬಂದಿದ್ದಾರೆ. ಕಾಡು-ನಾಡನ್ನು ಬೆಸೆದ ಜೀವಿಯೊಂದು ಇನ್ನಿಲ್ಲವಾಗಿದೆ. ತನ್ನದೇ ಆದ ಮೂಕಭಾಷೆಯ ಮೂಲಕ ಕಾಡಿನ ಪಾಠವನ್ನು ತಿಳಿಸಿದ ಗೌರಿ ಜಿಂಕೆ ಎಲ್ಲರ ಮನಸ್ಸಿನಲ್ಲಿ ಮಾಸಲಾರಂತಹ ನೆನಪನ್ನು ಬಿಟ್ಟು ಹೋಗಿದ್ದಾಳೆ.

-----
ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾದ ನೂರಾರು ಜನರು :
ಯಾರಾದರೂಗಣ್ಯ ವ್ಯಕ್ತಿಗಳು ಸತ್ತರೆ ನೂರಾರು ಜನರು, ಸಾವಿರಾರು ಜನರು ಅವರ ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾಗುವುದನ್ನು ನಾವು ಕಾಣುತ್ತೇವೆ. ಕೇಳುತ್ತೇವೆ. ಕಾಡು ಪ್ರಾಣಿ ಸತ್ತರೆ ನೂರಾರು ಜನರು ಅದರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದನ್ನು ಕೇಳಿದ್ದೀರಾ? ಗೌರಿಯ ಅಂತ್ಯ ಸಂಸ್ಕಾರದಲ್ಲಿ ಕಳವೆ ಹಾಗೂ ಸುತ್ತಮುತ್ತಲಿನ ನೂರಾರು ಜನರು ಪಾಲ್ಗೊಂಡಿದ್ದರು. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಪ್ರತಿಯೊಬ್ಬರ ಕಣ್ಣಾಲಿಗಳು ತುಂಬಿದ್ದವು. ಕಳವೆಯ ಗ್ರಾಮಸ್ಥರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಕಾಡು ಹಾಗೂ ನಾಡಿನ ನಡುವೆ ಕೊಂಡಿಯಾಗಿ, ನಾಡಿನ ಮಂದಿಯ ಪ್ರೀತಿಯನ್ನು ಗಳಿಸಿ, ಕಾಡಿನ ಸೂಕ್ಷ್ಮಗಳನ್ನು, ನಾಡಿನ ಕ್ರೌರ್ಯಗಳನ್ನು ಒಟ್ಟಾಗಿ ಕಂಡಿದ್ದ ಗೌರಿ ಇನ್ನು ಬರಿ ನೆನಪು ಮಾತ್ರ

-------------------

17 ವರ್ಷದ ಒಡನಾಟ
2001ರಲ್ಲಿ ಹುಟ್ಟಿ ಐದು ದಿನವಾದಾಗ ನಮ್ಮ ಮನೆಗೆ ಬಂದಿದ್ದ ಗೌರಿ 17 ವರ್ಷ ನಮ್ಮ ಜೊತೆ ಒಡನಾಡಿದೆ. ಅದಕ್ಕೆ 9ನೇ ವರ್ಷವಾದಾಗ ಕಾಡಿನ ಜೊತೆ ಒಡಡನಾಡಿ, ತದನಂತರ 9 ಮರಿಗಳನ್ನು ಹಾಕಿತ್ತು. ಸಾಮಾನ್ಯವಾಗಿ ಜಿಂಕೆಗಳು 23-25 ವರ್ಷಗಳ ಕಾಲ ಬದುಕುತ್ತವೆ. ಮನುಷ್ಯರ ಒಡನಾಟ ಇದ್ದರೆ ಜಾಸ್ತಿ ವರ್ಷಗಳ ಕಾಲ ಬದುಕಲೂ ಬಹುದು. ಆದರೆ ಗೌರಿ ಮಂಗಳವಾರ ಸಾವನ್ನಪ್ಪಿದೆ. ಗೌರಿಯ ಅಂತ್ಯಸಂಸ್ಕಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕೈಗೊಳ್ಳಲಾಗಿದೆ. ಅದರ ಅಂತ್ಯಸಂಸ್ಕಾರಕ್ಕೆ ನೂರಾರು ಜನರು ಆಗಮಿಸಿದ್ದರು. ಇದು ಪ್ರಾಣಿಯೊಂದು ಜನರ ಜೊತೆ ಹೊಂದಿದ್ದ ಒಡನಾಟಕ್ಕೆ, ಪ್ರೀತಿಗೆ ಸಾಕ್ಷಿ.
ಶಿವಾನಂದ ಕಳವೆ
ಪರಿಸರ ಬರಹಗಾರರು


(ಈ ಲೇಖನವು ಹೊಸ ದಿಗಂತದಲ್ಲಿ ಪ್ರಕತವಾಗಿದೆ)

Friday, March 10, 2017

ಯಲ್ಲಾಪುರದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಅಮ್ಮಕ್ಕ

98ರ ಹರೆಯದ ಅಮ್ಮಕ್ಕಜ್ಜಿ ಬಿಚ್ಚಿಟ್ಟ ಸ್ವಾತಂತ್ರ್ಯ ಹೋರಾಟದ ವಿವರಗಳು

*****
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅದೆಷ್ಟೋ ಕೋಟ್ಯಂತರ ಜನರು ಹೋರಾಡಿದ್ದಾರೆ. ಹಲವರು ಹೋರಾಟ, ಹರತಾಳ, ಪ್ರತಿಭಟನೆಗಳ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರೆ ಇನ್ನೂ ಹಲವರು ತೆರೆಮರೆಯಲ್ಲಿ ಉಳಿದು ಸಕ್ರಿಯ ಹೋರಾಟದಲ್ಲಿ ತೊಡಗಿಕೊಂಡವರಿಗೆ ಸಹಾಯ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಂತವರಲ್ಲೊಬ್ಬರು ಬರಬಳ್ಳಿಯ ಗುಡ್ಡೇಮನೆಯ ಅಮ್ಮಕ್ಕ ಗಣಪತಿ ಭಟ್.
ಅಮ್ಮಕ್ಕ ಗಣಪತಿ ಭಟ್ಟರು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುವ ಮೂಲಕ ಜನಮಾನಸದಲ್ಲಿ ನೆಲೆನಿಂತಿದ್ದಾರೆ. ಪತಿ ಗಣಪತಿ ಭಟ್ಟರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದ ಸಂದರ್ಭದಲ್ಲಿ ಅಮ್ಮಕ್ಕ ಗಣಪತಿ ಭಟ್ಟರು ಕೈಗೊಂಡ ಕಾರ್ಯ ಅನುಪಮವಾದುದು. ತೆರೆಮರೆಯಲ್ಲಿ ಅಮ್ಮಕ್ಕ ಗಣಪತಿ ಭಟ್ಟರು ಕೈಗೊಂಡ ಕಾರ್ಯ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರನ್ನು ಕಾಪಾಡಿದೆ.
ಅಮ್ಮಕ್ಕ ಗಣಪತಿ ಭಟ್ಟರು ಪತಿ ಗಣಪತಿ ಭಟ್ಟರನ್ನು ಮದುವೆಯಾಗುವ ವರೆಗೂ ಆಗೊಮ್ಮೆ ಈಗೊಮ್ಮೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತುಗಳನ್ನು ಕೇಳುತ್ತಿದ್ದರಷ್ಟೇ. ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರವಾಸ ಸೇರಿದಂತೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಆಗೊಮ್ಮೆ ಈಗೊಮ್ಮೆ ಮಾಹಿತಿಗಳನ್ನು ಕೇಳುತ್ತಿದ್ದರು. ನಂತರದಲ್ಲಿ ಬರಬಳ್ಳಿಯ ಗುಡ್ಡೆಮನೆ ಗಣಪತಿ ಭಟ್ಟರ ಜೊತೆ ಅಮ್ಮಕ್ಕ ಭಟ್ಟರ ವಿವಾಹ ನಡೆಯಿತು. ಪತಿ ಗಣಪತಿ ಭಟ್ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರ ಪತಿಯ ಜೊತೆಗೆ ಆಗೀಗ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಗುಡ್ಡೇಮನೆಗೆ ಬರುತ್ತಿದ್ದರು. ಹೀಗೆ ಬರುವವರಲ್ಲಿ ಅನೇಕ ಕ್ರಾಂತಿಕಾರಿಗಳೂ ಇದ್ದರು. ಅಂತವರಿಗೆಲ್ಲ ಮನೆಯಲ್ಲಿ ಆಶ್ರಯ ನೀಡಿ ಅಡುಗೆ ಮಾಡಿ ಹಾಕುವ ಕಾರ್ಯ ಅಮ್ಮಕ್ಕ ಗಣಪತಿ ಭಟ್ಟರದ್ದಾಗಿತ್ತು.
1940ರ ದಶಕದಲ್ಲಿ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರು ಮನೆಗೆ ಬರುತ್ತಿದ್ದರು. ಪತಿ ಗಣಪತಿ ಭಟ್ಟರ ನೇತೃತ್ವದಲ್ಲಿ ಸಾಕಷ್ಟು ಸಭೆಯೂ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಅಮ್ಮಕ್ಕ ಗಣಪತಿ ಬಟ್ಟರು ಪಾಲ್ಗೊಳ್ಳುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ನಿಮಿತ್ತ ಗಣಪತಿ ಭಟ್ಟರು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿಯೂ ಕೂಡ ಸ್ವಾತಂತ್ರ್ಯ ಹೋರಾಟಗಾರರನ್ನು ಮನೆಯಲ್ಲಿ ಇರಲು ಅವಕಾಶ ಕಲ್ಪಿಸಿ, ಅವರಿಗೆ ಅಡುಗೆ ಮಾಡಿ ಹಾಕುವ ಕಾರ್ಯವನ್ನು ಕೈಗೊಂಡಿದ್ದರು. ಅಷ್ಟೇ ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿ ಬರುತ್ತಿದ್ದ ಪೊಲೀಸರ ಕಣ್ಣನ್ನು ತಪ್ಪಿಸಿ ಅವರನ್ನು ಬೇರೆಡೆಗೆ ಕಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹೀಗೆ ತಾವು ಅದೆಷ್ಟೋ ನೂರು ಸ್ವಾತಂತ್ರ್ಯ ಹೋರಾಟಗಾರರಿಗೆ ಊಟ ಹಾಕಿದ್ದೇನೆ ಎಂದು ಅಮ್ಮಕ್ಕ ಹೇಳುತ್ತಾರೆ.
ನಾನು ಅಕ್ಷರ ಕಲಿತಿಲ್ಲ. ಮದುವೆಯಾಗುವ ವರೆಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಹೋರಾಟದ ಮಾಹಿತಿಗಳು ಕಿವಿಗೆ ಬೀಳುತ್ತಿದ್ದವು. ನಾನು ಮದುವೆಯಾಗಿ ಬಂದ ಮೇಲೆ ಮನೆಯಲ್ಲಿ ಅದೆಷ್ಟೋ ಸಾರಿ ಸ್ವಾತಂತ್ರ್ಯ ಹೋರಾಟದ ಕರಪತ್ರಗಳನ್ನು ಅಡಗಿಸಿ ಇಟ್ಟಿದ್ದೇನೆ. ತಲೆ ತಪ್ಪಿಸಿಕೊಂಡು ಬರುತ್ತಿದ್ದ ಚಳುವಳಿಗಾರರನ್ನು ಉಳಿಸಿ, ಊಟ ಹಾಕಿದ್ದೇನೆ. ಇವರನ್ನು ಹುಡುಕಿ ಬರುವ ಪೊಲೀಸರ ಬಳಿ ಏನೇನೋ ಸಬೂಬುಗಳನ್ನು ಹೇಳಿ ಸಾಗಹಾಕಿದ್ದೇನೆ. ಅದೆಷ್ಟೋ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆಮನೆ ವಾಸ ಮಾಡಿದ್ದಾರೆ. ನಾನು ನನಗೆ ತಿಳಿದ ರೀತಿಯಲ್ಲಿ ಕಾರ್ಯ ಮಾಡಿದ್ದೇನೆ. ನಿಜಕ್ಕೂ ಇದೊಂದು ಅಲ್ಪ ಮಟ್ಟದ ದೇಶಸೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರಂತೆ ನಾನು ಸೆರೆಮನೆ ವಾಸ ಮಾಡಿಲ್ಲ ಎನ್ನುವ ಬೆಜಾರೂ ನನಗಿದೆ ಎಂದು ಅಮ್ಮಕ್ಕ ಗಣಪತಿ ಭಟ್ ಹೇಳುತ್ತಾರೆ.
ಈಗ ಅಮ್ಮಕ್ಕ ಗಣಪತಿ ಭಟ್ಟರಿಗೆ 95 ವರ್ಷಗಳಾಗಿದೆ. ಕಿವಿ ಕೇಳುವುದಿಲ್ಲ. ಕಣ್ಣು ಅಸ್ಪಷ್ಟವಾಗಿ ಕಾಣಿಸುತ್ತದೆ. ಸಕ್ರಿಯರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಳ್ಳುವವರಿಗೆ ಸಹಾಯ ಮಾಡಿದ ಅಮ್ಮಕ್ಕರಂತಹ ಅದೆಷ್ಟೋ ಸಾಧ್ವಿಯರು ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತಾರೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇಂತಹ ಮಹಿಳಾ ಸಾಧಕಿಯರ ಸಾಧನೆ ಎಲ್ಲರಿಗೂ ಪ್ರೇರಣಾದಾಯವಾಗುತ್ತದೆ. ಆಧುನಿಕ ತಂತ್ರಜ್ಞಾನ ಬೆಳೆದು ನಿಂತಿರುವ ಇಂದಿನ ದಿನಮಾನದಲ್ಲಿ, ಏನೂ ಇಲ್ಲದ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ ಅಮ್ಮಕ್ಕ ಗಣಪತಿ ಭಟ್ ಸ್ಪೂತರ್ಿಯ ಸೆಲೆಯಾಗಿ ನಿಲ್ಲುತ್ತಾರೆ.


ದಾಸ್ಯ (ಕಥೆ)

             `ನಾನು ಏನ್ ಮಾಡಿದ್ದೆ ಅಂತ ನನ್ನ ಮಾತನಾಡಿಸಲಿಕ್ಕೆ ಬಂದ್ಯೋ.. ಹೋಗ್ ಹೋಗು.. ಬೇರೆ ಏನಾದರೂ ಕೆಲಸ ನೋಡ್ಕೋ ಹೋಗ್..' ಎಂದು ದೇವಮ್ಮ ನನ್ನನ್ನು ಗದರಿದಾಗ ನಾನು ಒಮ್ಮೆ ಪೆಚ್ಚಾಗಿದ್ದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿಯ ಬಳಿ ನಾನು ಹೋಗಿ ಬಂದ ಕಾರಣವನ್ನು ತಿಳಿಸಿದಾಗ ಒಮ್ಮೆಲೆ ಸಾರಾ ಸಗಟಾಗಿ ನನ್ನ ಕೋರಿಕೆಯನ್ನು ತಿರಸ್ಕರಿಸಿದ್ದರು ದೇವಮ್ಮ. ಆದರೂ ಮನಸ್ಸಿನಲ್ಲಿ ಏನೋ ಒಂದು ಆಶಾವಾದ. ದೇವಮ್ಮನವರು ಗದರಿದ್ದರೂ ನಾನು ಅಲ್ಲಾಡದೇ ಕುಳಿತಿದ್ದೆ.
             95-96 ವರ್ಷದ ದೇವಮ್ಮನವರನ್ನು ನಾನು ಮಾತನಾಡಿಸಲು ತೆರಳಿದ್ದರ ಹಿಂದೆ ಮೂರ್ನಾಲ್ಕು ಕಾರಣಗಳಿದ್ದವು. ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿಯೇ ದೇವಮ್ಮನವರು ಬದುಕಿರುವ ಹಿರಿಯ ವ್ಯಕ್ತಿ ಎಂಬುದು ಒಂದು ಕಾರಣವಾಗಿದ್ದರೆ, ಸ್ವಾತಂತ್ರ್ಯ ಹೋರಾಟದಲ್ಲಿ ದೇವಮ್ಮನವರ ಕುರಿತು ನಾನು ಯಾವುದೋ ಒಂದು ಪುಸ್ತಕದಲ್ಲಿ ಓದಿದ್ದೆ. ಅದರ ಅನ್ವಯ ಸ್ವಾತಂತ್ರ್ಯ ಹೋರಾಟದಲ್ಲಿ ದೇವಮ್ಮನವರು ಪಾಲ್ಗೊಂಡ ಬಗ್ಗೆ ವಿವರಗಳನ್ನು ಪಡೆದು ಅದನ್ನು ಸಾಕ್ಷ್ಯಚಿತ್ರ ಮಾಡಬೇಕೆಂದು ಹೊರಟಿದ್ದೆ.
              ದೇವಮ್ಮನವರನ್ನು ಭೇಟಿ ಮಾಡುವ ಮೊದಲು ನನ್ನಲ್ಲಿ ಅನೇಕ ಕಲ್ಪನೆಗಳಿದ್ದವು. ಸ್ವಾತಂತ್ರ್ಯ ಹೋರಾಟ ಮಾಡಿದ್ದ ಹಲವರನ್ನು ನಾನು ಕಂಡಿದ್ದೆ. ಅವರೆಲ್ಲರೂ ಪುರುಷರಾಗಿದ್ದರು. ಬಿಳಿಯ ಧೋತಿ. ಅಷ್ಟೇ ಶುಭ್ರ ಜುಬ್ಬಾ, ತಲೆಯ ಮೇಲೆ ಬಿಳಿಯ ಟೊಪ್ಪಿಗೆ ಹಾಕಿಕೊಂಡು ಠಾಕು, ಠೀಕಾಗಿ ನಡೆದು ಬರುತ್ತಿದ್ದ ಅದೆಷ್ಟೋ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ನಾನು ನೋಡಿ ಮನದಣಿಯೆ ವಂದಿಸಿದ್ದೆ. ಕಣ್ಣು ಮಂಜಾಗಿದ್ದರೂ, ಕೈಕಾಲುಗಳಲ್ಲಿ ತ್ರಾಣ ಇಲ್ಲದೇ ಇದ್ದರೂ ಯಾರ ಸಹಾಯವೂ ಇಲ್ಲದೇ ಸ್ವಾಭಿಮಾನದಿಂದ ನಡೆದು ಬರುತ್ತಿದ್ದ ಹಿರಿಯ ಜೀವಗಳನ್ನು ಕಣ್ತುಂಬಿಕೊಂಡು ಅವರ ಪಾದಕ್ಕೆರಗಿದ್ದೆ. ಆದರೆ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರು ಹೇಗಿರಬಹುದು ಎನ್ನುವುದು ನನಗೆ ಖಂಡಿತವಾಗಿಯೂ ತಿಳಿದಿರಲಿಲ್ಲ. ಅಲ್ಲೊಬ್ಬರು ಇದ್ದಾರಂತೆ, ಇಲ್ಲೊಬ್ಬರು ಇದ್ದಾರಂತೆ, ಯಾರಿಗೋ ಸ್ವಾತಂತ್ರ್ಯ ಹೋರಾಟಗಾರರ ಪೆನ್ಶನ್ ಬರುತ್ತದಂತೆ ಎಂಬ ಮಾಹಿತಿಗಳನ್ನಷ್ಟೇ ಕೇಳಿ ತಿಳಿದಿದ್ದೆ. ದೇವಮ್ಮನವರ ಬಗ್ಗೆ ತಿಳಿದಾಗ ನಾನು ಒಮ್ಮೆಲೆ ಬಾನೆತ್ತರಕ್ಕೆ ನೆಗೆದು ಖುಷಿಯಿಂದ ಅವರನ್ನು ಮಾತನಾಡಿಸುವುದೇ ಸರಿಯೆಂದುಕೊಂಡು ತಯಾರಾಗಿದ್ದೆ.
             ದೇವಮ್ಮ ದೇವತೆಯಂತೆ ಕಾಣಬಹುದೇ? ಖಾದಿ ಸೀರೆಯನ್ನು ಉಟ್ಟು ಗತ್ತಿನಿಂದ ಬರಬಹುದೇ? ಎಂಬೆಲ್ಲ ಭಾವನೆಗಳು ನನ್ನ ಮನದಲ್ಲಿ ಕುಣಿದಾಡುತ್ತಿದ್ದವು. ಇದೇ ಆಲೋಚನೆಯಲ್ಲಿಯೇ ದೇವಮ್ಮನವರ ಮನೆಯ ಬಾಗಿಲನ್ನು ತೆಗೆದಾಗ ದೇವಮ್ಮನ ಮೊಮ್ಮಕ್ಕಳ್ಯಾರೋ ಇರಬೇಕು ಬಾಗಿಲು ತೆಗೆದಿದ್ದರು. ನಾನು ಅವರ ಬಳಿ ಬಂದ ವಿಷಯವನ್ನು ಹೇಳಿದಾಗ ಅವರು ನನ್ನ ಬಳಿ `ಒಂದು ನಿಮಿಷ, ನಿಂತ್ಕೊಂಡಿರಿ..' ಎಂದು ಒಳಹೋಗಿದ್ದರು.
           ಅವರು ಒಳಹೋದ ಅರ್ಧ ಗಳಿಗೆಯಲ್ಲಿ ಆ ಮನೆಯ ಕತ್ತಲೆಯ ಆಳದಲ್ಲಿ  ದೊಡ್ಡ ಧ್ವನಿಯಲ್ಲಿ ನನ್ನ ಬಳಿ ಮಾತನಾಡಿದ ವ್ಯಕ್ತಿ `ಯಾರೋ ಬಂದಿದ್ದಾರೆ, ನಿಮ್ಮನ್ನು ಮಾತನಾಡಿಸಬೇಕಂತೆ. ಅದೇನೋ ಸಾಕ್ಷ್ಯಚಿತ್ರ ಮಾಡ್ತಾರಂತೆ..' ಎಂದು ಕೂಗುತ್ತಿದ್ದುದು ಕಿವಿಗೆ ಬಿದ್ದಿತ್ತು. ಅದಕ್ಕೆ ಪ್ರತಿಯಾಗಿ ಕ್ಷೀಣ ಧ್ವನಿಯೊಂದು ಏನೋ ಮಾತನಾಡಿದ್ದು ಅಸ್ಪಷ್ಟವಾಗಿ ನನ್ನ ಕಿವಿಗೆ ಬಿದ್ದಿತ್ತು. ಏನೋ ಕಸಿವಿಸಿ ನನ್ನೊಳಗೆ ಆ ಕ್ಷಣದಲ್ಲಿ ಮೂಡಿದ್ದು ಸುಳ್ಳಲ್ಲ. ನನ್ನನ್ನು ನಿಲ್ಲಿಸಿ ಹೋದ ವ್ಯಕ್ತಿ ಮರಳಿ ಬಂದು `ಒಳಗೆ ಬನ್ನಿ. ಕುಳಿತುಕೊಳ್ಳಿ. '  ಎಂದರು.
        ದೇವಮ್ಮ ಅಜ್ಜಿಯ ಆಹ್ವಾನಕ್ಕಾಗಿ ಕಾಯುತ್ತ ಕುಳಿತಿದ್ದ ನಾನು ಮನೆಯನ್ನೆಲ್ಲ ಗಮನಿಸತೊಡಗಿದ್ದೆ. ದೊಡ್ಡ ಹಳೆಯ ಕಾಲದ ಮನೆ. ಆರು ಅಡಿ ಅಗಲದ ಮಣ್ಣಿನ ಗೋಡೆ. ದಪ್ಪ ದಪ್ಪನೆಯ ತೇಗದ ಮರದ ಕಂಬಗಳು. ಯಾವ ಶತಮಾನದಲ್ಲಿ ಕಟ್ಟಿದ್ದರೋ ಏನೋ. ಸಾಕಷ್ಟು ಕೋಣೆಗಳು ಆ ಮನೆಗಿದ್ದರೂ ಮನೆಯ ಮಧ್ಯದಲ್ಲಿ ಒಂದು ಆಟದ ಅಂಗಳ. ಅಲ್ಲೊಂದಷ್ಟು ಹೂಗಿಡಗಳನ್ನು ಬೆಳೆಸಲಾಗಿತ್ತು. ಗೋಡೆಯ ಮೇಲೆಲ್ಲ ಹಳೆಯ ಕಾಲದ ರೇಖಾಚಿತ್ರಗಳು. ಯಾರ್ಯಾರೋ ಹಿರಿಯರನ್ನು ಆ ಚಿತ್ರಗಳು ಬೆಡಗಿನಿಂದ ಮೂಡಿಸಿದ್ದವು. `ಒಳಗೆ ಬರಬೇಕಂತೆ..' ಅಜ್ಜಿಯಿಂದ ತಾರನ್ನು ತಂದ ವ್ಯಕ್ತಿ ನನ್ನ ಬಳಿ ಹೇಳಿದ್ದರು. ಅವರ ಹಿಂದೆ ನಾನು ಹೆಜ್ಜೆ ಹಾಕಿದೆ.
ಕತ್ತಲೆಯ ಆಳದಲ್ಲಿ ಅಜ್ಜಿ ದೇವಮ್ಮ ಕುಳಿತಿದ್ದರು. ಬೆಳಕು ಬರದಂತಹ ಕೋಣೆ ಅದಾಗಿತ್ತಾದರೂ ನಾವು ಬಂದ ಬಾಗಿಲಿನಿಂದ ಮಸುಕಾದ ಬೆಳಕು ಕೋಣೆಯೊಳಕ್ಕೆ ಇಣುಕುತ್ತಿತ್ತು. ಅಲ್ಲೊಂದು ಹಳೆಯ ಮಂಚದ ಮೇಲೆ ಕುಳಿತಿದ್ದರು ದೇವಮ್ಮ. ನಾನು ಹೋದ ಕೂಡಲೇ `ನೀ ಯಾರಾ?' ಎಂದರು. ನಾನು ಏನೋ ಹೇಳಲು ಮುಂದಾದೆ. ಆದರೆ ನನ್ನ ಜೊತೆ ಬಂದಿದ್ದ ವ್ಯಕ್ತಿ `ಅವರಿಗೆ ಕಿವಿ ಕೇಳಿಸುವುದಿಲ್ಲ. ಅವರ ಬಳಿ ಹೋಗಿ ದೊಡ್ಡದಾಗಿ ಹೇಳಿ..' ಎಂದರು. ನಾನು ದೇವಮ್ಮನವರ ಹತ್ತಿರ ಹೋಗಿ `ನಾನು ವಿನಯ..' ಎಂದೆ. `ನೀನು ವಿನಯನಾ? ಯಾರ ಮನೆ ನಿನಗೆ..' ಮತ್ತೆ ಕೇಳಿದ್ದರು ದೇವಮ್ಮ. `ದಂಟಕಲ್ ಸುಬ್ಬಣ್ಣನ ಮಗ ನಾನು..' ಎಂದೆ. `ಸುಬ್ಬಣ್ಣ ಅಂದರೆ ಯಾರಾ? ಇಗ್ಗಣ್ಣನ ಮಗನಾ?' ಅಜ್ಜಿ ಮತ್ತೆ ಕೇಳಿದ್ದರು. `ಹು.. ಹೌದು..' ಎಂದೆ. `ಇಗ್ಗಜ್ಜ.. ಬಹಳ ಒಳ್ಳೆಯ ಮನುಷ್ಯ.. ಇಗ್ಗಜ್ಜನ ಹಿರಿ ಮೊಮ್ಮಗ ನೀನು ಹೇಳಾತು.. ಅಲ್ದನಾ..?' ಎಂದರು ದೇವಮ್ಮ. ನಮ್ಮ ನಡುವೆ ಆಪ್ತತೆ ಬೆಳೆಯುತ್ತಿತ್ತು. ನಾನು ಬಂದ ಕಾರ್ಯವನ್ನು ಸಾಂಗವಾಗಿ ಮಾಡಲು ಇದು ಅನುಕೂಲ ಮಾಡಿಕೊಡುತ್ತಿತ್ತು. ಹೀಗಾಗಿ ಅಜ್ಜಿಯ ಬಳಿ ನನ್ನ ಮನೆಯ, ಅಜ್ಜನ ವಿಷಯಗಳನ್ನೆಲ್ಲ ಮಾತನಾಡಿದೆ.
`ನಿಂಗ್ ಎಂತಾ ಬೇಕು? ಅದೆಂತದ್ದೋ ಮಾಡ್ತ್ಯಡಾ..?' ಎಂದರು ದೇವಮ್ಮ. `ಏನಿಲ್ಲ ಅಜ್ಜಿ ನೀವು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಅಂತ ಕೇಳದಿ. ಅದ್ಕೆ ನಿಮ್ಮ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನ, ಸ್ವಾತಂತ್ರ್ಯ ಹೋರಾಟಗಳ ಕುರಿತಾದ ವಿವರಗಳನ್ನು ಸಂಗ್ರಹಿಸೋಣ ಅಂತ ಬಂಜಿ. ಅದನ್ನ ವೀಡಿಯೋ ಮಾಡಿ ಇಟ್ಕಳವು ಅಂತ ಬಂಜಿ..' ಎಂದೆ.
`ಅದರಿಂದ ಎಂತಾ ಆಗ್ತಾ.. ಸ್ವಾತಂತ್ರ್ಯ ಬಂತು.. ಈಗಿನವ್ಕೆ ಅದರ ಬೆಲೆ ಎಲ್ಲಾ ಗೊತ್ತಿಲ್ಯಲಾ ತಮಾ.. ನಾನು ಆ ಕಥೆನೆಲ್ಲಾ ಹೇಳಿದ್ರೆ ಯಾರು ಕೇಳ್ತ್ವಾ? ನಿಂಗ್ ಬೇರೆ ಹ್ವಾರ್ಯ ಇಲ್ಲೆ ಕಾಣಿಸ್ತು ನೋಡು. ಬೇರೆ ಎಂತಾದ್ರೂ ಮಾಡು..' ದೇವಮ್ಮನ ದನಿಯಲ್ಲಿ ಅದೇನೋ ಬೇಸರವಿತ್ತು. ನಾನು ಪಟ್ಟು ಬಿಡದೇ ಮತ್ತೆ ಮತ್ತೆ ಕೇಳಿದೆ. ಅಜ್ಜಿಯೂ ಮೊಂಡು ಹಠ ಮಾಡುತ್ತಿದ್ದರು. ಹೇಗಾದರೂ ಆಗಲಿ, ಅಜ್ಜಿಯ ಬಾಯಿಂದ ಆಕೆಯ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಕೇಳಿ, ಅದನ್ನು ದಾಖಲಿಸಿಕೊಂಡು ಹೋಗುವುದೇ ಸೈ ಎಂದು ಕುಳಿತಿದ್ದೆ.
ನಾನು ಬಿಡುವವನಲ್ಲ ಅನ್ನಿಸಿರಬೇಕು ಅಜ್ಜಿಗೆ. ಕೊನೆಗೊಮ್ಮೆ ಅಜ್ಜಿಯೇ ಸೋತರು. `ಎಂತಾ ಹೇಳವಾ ನಿಂಗೆ.. ನಂಗೆ ಎಲ್ಲಾ ಮರ್ತೋಗ್ತಾ ಇದ್ದು. ಸರಿ ನೆನಪಿಲ್ಲೆ..' ಎನ್ನುತ್ತಿದ್ದಂತೆಯೇ ನಾನು `ನೆನಪಿದ್ದಷ್ಟನ್ನ ಹೇಳಿ..' ಎಂದೆ. `ಆತೋ.. ಅಂತೂ ನೀ ಬಿಡಂವ ಅಲ್ಲ ಹೇಳಾತು..' ಎಂದು ಬೊಚ್ಚು ಬಾಯಿಯಲ್ಲಿ ನಕ್ಕರು.
`ತಮಾ.. ನಂಗೀಗ 95 ವರ್ಷದ ಮೇಲಾತು. ನೋಡು 80 ವರ್ಷದ ಹಿಂದೆ ಎಲ್ಲ ಶುರು ಆತು ಅಂದ್ಕ. ಆಗ ಭಾರತದಲ್ಲಿ ಎಲ್ಲ ಕಡೆ ಫಿರಂಗಿಯವ್ ಇದ್ದಿದ್ದ. ಬಿಳಿ ಬಿಳಿ ಮುಷಡಿಯವ್ವು. ನಾನು ಸಣ್ಣಕ್ಕಿದ್ದಾಗ ಯನ್ ಅಪ್ಪಯ್ಯ ಈ ಬ್ರಿಟೀಷರ ಕಥೆ ಹೇಳತಿದ್ದಾ. ಆವಾಗ ಆನು ಯನ್ ತಮ್ಮ ಬಿಟ್ಟ ಕಣ್ ಬಿಟ್ಟಂಗೆ, ಬಾಯಿ ಕಳಕಂಡು ಕೇಳತಿದ್ಯಾ. ಯಾರೋ ಗೋಖಲೆ ಅಂತ ಇದ್ರಡಾ, ಬಾಲಗಂಗಾಧನಾಥ ತಿಲಕ್ ಅಂತ ಇದ್ರಡಾ.. ಸ್ವರಾಜ್ಯ ಹೋರಾಟ ಹೇಳಿ ಶುರು ಹಚ್ಚಕಂಜ್ರಡ, ಅದ್ಯಾರೋ ಗಾಂಧೀಜಿ ಹೇಳಿ ಇದ್ರಡ ಅಂತೆಲ್ಲ ಹೇಳತಿದ್ದ.. ಅಪ್ಪಯ್ಯ ಹೇಳತಿದ್ದ ಕಥೆಗಳೇ ಯನ್ನ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ..' ಎಂದು ದೇವಮ್ಮ ಶುರು ಮಾಡಿದ್ದರು. ನಾನು ಸದ್ದಿಲ್ಲದಂತೆ ನನ್ನ ನೈಟ್ ವಿಷನ್ ಕ್ಯಾಮರಾ ತೆಗೆದು ಅಜ್ಜಿಯ ವಿವರಗಳನ್ನೆಲ್ಲ ದಾಖಲಿಸಲು ಆರಂಭಿಸಿದ್ದೆ.
`ಅಪ್ಪಯ್ಯ ಹೇಳುತ್ತಿದ್ದ ಕಥೆಗಳನ್ನೆಲ್ಲ ಕೇಳಿ ಕೇಳಿ ಯಂಗೂ, ತಮ್ಮಂಗೂ ಎಂತಾದ್ರೂ ಮಾಡವು ಅನ್ನಿಸ್ತಿತ್ತು. ಆದರೆ ಆವಾಗೆಲ್ಲ ಯಂಗಕ್ಕಿಗೆ ಸಣ್ಣವಯಸ್ಸು ನೋಡು. ಯಂಗಂತೂ 10-15 ವರ್ಷ. ತಮ್ಮ ಯನ್ನಕ್ಕಿಂತ ಇನ್ನೂ ಎರಡು ವರ್ಷ ಸಣ್ಣವ. ಬಾಯಲ್ಲಿ ನಂಗವ್ ಹಾಂಗ್ ಮಾಡಿ ಬಿಡ್ತ್ಯ ಹಿಂಗ್ ಮಾಡಿ ಬಿಡ್ತ್ಯ ಹೇಳಿ ಹೇಳಕತ್ತ ಇರ್ತಿದ್ಯ. ಆದರೆ ಎಂತಾ ಮಾಡವು ಅಂತ ಇಬ್ರಿಗೂ ಗೊತ್ತಿತ್ತಿಲ್ಲೆ. ಮನೆಯಲ್ಲಿ ಆವಾಗ ನಾನೇ ದೊಡ್ಡವ. ಹಿಂಗಾಗಿ ಆನು ಎಂತಾ ಹೇಳತ್ನೋ ಹಂಗೆ ತಮ್ಮ ಮಾಡ್ತಿದ್ದ. ಸ್ವಾತಂತ್ರ್ಯ ಹೋರಾಟದಲ್ಲಿ ನಂಗವ್ವೂ ಪಾಲ್ಗೊಳ್ಳವು ಹೇಳಿ ಇತ್ತು. ಆದರೆ ಹೆಂಗೆ ಅಂತ ಗೊತ್ತಿಲ್ಲೆ. ಎಲ್ಲಾ ಹರತಾಳದ ಕಥೆಗಳನ್ನ ಹೇಳ್ತಾ ಇದ್ರೆ ನಂಗಕ್ಕಿಗೆ ಮೈಯೆಲ್ಲ ರೋಮಾಂಚನ. ಯಾರೋ ಬೋಲೋ ಭಾರತ ಮಾತಾ ಕಿ.. ಎಂದರೆ ಎಲ್ಲರಿಗಿಂತ ಮೊದಲು ಜೈ ಎನ್ನುವವರು ಯಂಗವ್ವೇ ಆಗಿದ್ಯ. ಹಿಂಗಿದ್ದಾಗ ಆವತ್ತೊಂದಿನ ನಮ್ಮೂರಲ್ಲಿ ಒಬ್ರು ಸ್ವಾತಂತ್ರ್ಯ ಹೋರಾಟಗಾರರು ಬಂದಿದ್ದರು. ಅವರ ಭಾಷಣ ಇತ್ತು. ನಮ್ಮೂರಲ್ಲಿ ಜನರನ್ನ ಹುರಿದುಂಬಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಅಣಿಗೊಳಿಸೋದು ಅವರ ಉದ್ದೇಶ ಆಗಿತ್ತು. ಆ ಭಾಷಣ ಕಾರ್ಯಕ್ರಮಕ್ಕೆ ನಾನು-ತಮ್ಮ ಇಬ್ರೂ ಹೋಗವು ಅಂತ ಅಂದಕಂಡ್ಯ. ತಂಗೀ.. ನಿಂಗಕ್ಕಿಗೆ ಇದರ ಉಸಾಬರಿ ಬ್ಯಾಡ. ಯಂಗವ್ವು ದೊಡ್ಡವ್ ಇದ್ಯ. ಯಂಗವ್ ಇದ್ನೆಲ್ಲಾ ನೋಡಕತ್ಯ. ನಿಂಗವ್ ಮನೆಬದಿಗೆ ಇರಿ ಅಂತ ಅಪ್ಪಯ್ಯ ತಾಕೀತು ಮಾಡಿಬಿಟ್ಟಿದ್ದ.. ಅಪ್ಪಯ್ಯನ ಕಣ್ಣುತಪ್ಪಿಸಿ ಹೋಗವು ಅಂತ ನಾನು-ತಮ್ಮ ನಿರ್ಧಾರ ಮಾಡಿದ್ಯ..' ಎಂದು ಅಜ್ಜಿ ಮಾತು ನಿಲ್ಲಿಸಿದಳು. ಒಮ್ಮೆ ತಾವು ಕುಳಿತಿದ್ದ ಹಾಸಿಗೆಯಿಂದ ಏಳಲು ಯತ್ನಿಸಿದರು. ಸಾಧ್ಯವಾಗಲಿಲ್ಲ. `ತಮಾ.. ಇಲ್ ಬಾ.. ಸ್ವಲ್ಪ ಯನ್ನ ಕೈ ಹಿಡ್ಕ ನೋಡನ..' ಎಂದರು. ನಾನು `ಅಜ್ಜಿಯನ್ನು ಹಿಡಿದುಕೊಂಡೆ. ನಿಧಾನವಾಗಿ ಎದ್ದು ನಿಂತ ಅಜ್ಜಿ.. ಕೋಣೆಯಿಂದ ಹೊರಕ್ಕೆ ನನ್ನನ್ನು ಹಿಡಿದುಕೊಂಡೇ ಬಂದಳು. ಬಂದವಳೇ ಸೀದಾ ಹೊರಗಡೆ ಇದ್ದ ಬಾಂಕಿನ ಮೇಲೆ ಕುಳಿತು ಅಲ್ಲೇ ಇದ್ದ ಎಲೆಬಟ್ಟಲಿಗೆ ಕೈ ಹಾಕಿದಳು. ನಾನು ಮೌನವಾಗಿ ಅಜ್ಜಿಯನ್ನು ಗಮನಿಸುತ್ತ ನಿಂತೆ.
`ಅಪ್ಪಯ್ಯ ಭಾಷಣ ಕೇಳಲು ಹೋಗಿದ್ದ. ಆನು-ತಮ್ಮ ಹಿತ್ಲಾಕಡೆ ಬಾಗಿಲಿಂದ ಸೀದಾ ಭಾಷಣ ನಡೆತಾ ಇದ್ದಿದ್ ಜಾಗಕ್ಕೆ ಹೊಂಟ್ಯ. ನಂಗವ್ ಹೋಗೋ ಹೊತ್ತಿಗೆ ಅಲ್ಲಿ ಮಾತು ಶುರುವಾಗಿ ಹೋಗಿತ್ತು. ಎಂತಾ ಮಾತು ಹೇಳ್ತೆ.. ನಮ್ಮೂರ್ನವ್ ಅಲ್ದೆ ಅಚ್ಚಿಚ್ಚೆ ಊರ್ನವ್ವೂ ಬಂದಿದ್ದ. ದೇವಸ್ಥಾನ ಕಟ್ಟೆ ಮೇಲೆ ನಿಂತಕಂಡಿದ್ದ ವ್ಯಕ್ತಿ ಎಷ್ಟು ಗಟ್ಟಿಯಾಗಿ ಮಾತಾಡ್ತಾ ಇದ್ದಿದ್ರು ಅಂದ್ರೆ ಆಹಾ.. ಆನು-ತಮ್ಮ ಇಬ್ರೂ ಮೈಮರೆತುಬಿಟ್ಟಿದಿದ್ಯ.. ಹಿಂಗೇ ಮಾತು ನಡೀತಾ ಇತ್ತು. ಆವಾಗ್ಲೇ ನಂಗಳ ಹಿಂದಿಂದ ದೊಡ್ಡ ಶಬ್ದ ಕೇಳಚು..' ಎಂದ ಅಜ್ಜಿ ಚಿಕ್ಕದೊಂದು ನಿಟ್ಟುಸಿರು ಬಿಟ್ಟಳು. ನನಗೆ ಕುತೂಹಲ ಶುರುವಾಗಿತ್ತು.

(ಮುಂದುವರಿಯುತ್ತದೆ )

Tuesday, March 7, 2017

ಹುಲಿರಾಯ ಬಂದು ಹಾಯ್ ಅಂದಿದ್ದ...! ಜೊತೆಯಲ್ಲಿ ಮರಿಯನ್ನೂ ಕರೆತಂದಿದ್ದ!!


            ಇದು ನಿನ್ನೆ ಬೆಳಗನ ಜಾವ ನಡೆದ ಘಟನೆ. ಇನ್ನೂ ನನ್ನ ಮನಸ್ಸಿನಲ್ಲಿ ಹಸಿಯಾಗಿಯೇ ಇದೆ.
 ನಿನ್ನೆ ರಾತ್ರಿ ನಾನು ಮಲಗಲು ನಡುರಾತ್ರಿ 2 ಗಂಟೆ ಆಗಿತ್ತು. ಮಲಗಿ ಅರೆಘಳಿಗೆ ಆಗಿರಲಿಲ್ಲ. ಅಪ್ಪ `ತಮಾ ಹುಲಿ ಕೂಗ್ತಾ ಇದ್ದು ಕೇಳು..' ಎಂದ.. ನಾನು ಏಳಲಿಲ್ಲ. ನಮ್ಮೂರಿನಲ್ಲಿ ಆಗೊಮ್ಮೆ ಈಗೊಮ್ಮೆ ಹುಲಿ ಕೂಗುವುದು ಕೇಳಿದ್ದ ನನಗೆ ಇದು ಸಹಜ ಅನ್ನಿಸಿ ಕಡ್ಡ ಹರಿದು ಮಲಗಿದ್ದೆ. ಅಮ್ಮ ಎದ್ದಿದ್ದಳಿರಬೇಕು. `ಮೇಲಿನ ಮನೆ ಹತ್ರ ಕಾನಿನಲ್ಲಿ ಎಲ್ಲೋ ಹುಲಿ ಕೂಗ್ತಾ ಇದ್ದು..' ಎಂದು ಹೇಳಿದ ಅಪ್ಪ ಸುಮ್ಮನಾಗಿದ್ದ. ಅದಾಗಿ ಮತ್ತೊಂದು ಹತ್ತು ಹದಿನೈದು ನಿಮಿಷವಾಗಿರಲಿಲ್ಲ. ಮನೆಯ ಪಕ್ಕದಲ್ಲೇ ಒಮ್ಮೆ ಗಂವ್... ಎಂದಿತು ಸದ್ದು. ನಮ್ಮ ಮನೆಯೇ ಅದುರಿತೇನೋ ಎಂಬಂತೆ ಸದ್ದು. ಅಜಮಾಸು 10 5ರಿಂದ 10 ಸೆಕೆಂಡುಗಳ ಕಾಲ. ಮನೆಯೊಳಕ್ಕೆ ಮಲಗಿದ್ದ ನಾವು ಒಮ್ಮೆ ಬೆಚ್ಚಿ ಬಿದ್ದಿದ್ದೆವು. ಗಂವ್.. ಎನ್ನುವ ಸದ್ದು ಅಘನಾಶಿನಿ ಕಣಿವೆಯಲ್ಲಿ ಮತ್ತೆ ಮಾರ್ದನಿಸಿದಂತಾಯಿತು.
              `ತಮಾ... ಹುಲಿ ಬಂಜೋ... ಇಲ್ಲೇ ಎಲ್ಲೋ ಇದ್ದು..' ಅಮ್ಮ ಎದ್ದು ಲೈಟ್ ಹಾಕಿ ಕೂಗಿದಳು. ಅಪ್ಪ `ಯೇಹೇ.. ಅದು ಹುಲಿಯಲ್ಲ.. ಹಂದಿ..' ಎಂದ. `ಇಲ್ಯಪಾ ಇಲ್ಲೆ.. ಇದು ಹುಲಿನೇಯಾ..' ಎಂದ ಅಮ್ಮ ಸೀದಾ ಅಡುಗೆ ಮನೆಗೆ ಹೋಗಿ ಲೈಟ್ ಹಾಕಿದಳು. ಅಲ್ಲಿಂದ ಸೀದಾ ಅಪ್ಪನನ್ನು ಕರೆದು `ಬನ್ನಿ... ನಂಗೆ ಒಬ್ಬನೇ ಹೋಪಲೆ ಹೆದರ್ಕೆ ಆಗ್ತಾ ಇದ್ದು.. ಕೊಟ್ಟಿಗೆಗೆ ಹೋಗೋಣ..' ಎಂದಿದ್ದು ಕೇಳಿಸಿತು. ಅಪ್ಪ ಎದ್ದು ಬಂದ. ಅಮ್ಮ ಕೊಟ್ಟಿಗೆ ಲೈಟ್ ಹಾಕಿದಳು.
              ಕೊಟ್ಟಿಗೆಯಲ್ಲಿದ್ದ ಒಂದೆ ಒಂದು ಹಸು. ಪ್ರೀತಿಯ ಶ್ರೀದೇವಿ ಆಗಲೇ ಬೆಚ್ಚಿ ಬೆದರಿ ಮೈ ರೋಮಗಳನ್ನೆಲ್ಲ ನೆಟ್ಟಗೆ ಮಾಡಿಕೊಂಡು ಕಿವಿಚಟ್ಟೆಯನ್ನು ಸುತ್ತಲೂ ತಿರುಗಿಸುತ್ತ, ಮನೆಯ ಪಕ್ಕದಲ್ಲಿನ ಕಾಡನ್ನೂ, ಮನೆಯ ಕೆಳಭಾಗದಲ್ಲಿದ್ದ ರಸ್ತೆಯನ್ನೂ ನೋಡುತ್ತ ನಿಂತಿದ್ದಳು. ಹುಲಿ ಬಂದಿದ್ದು ಖರೆಯಾಗಿತ್ತು. ಆದರೆ ಎಲ್ಲಿ ಬಂದಿದೆ ಎಂಬುದು ಗೊತ್ತಾಗಲಿಲ್ಲ. ಮನೆಯ ಅಂಗಳದಲ್ಲೆಲ್ಲೋ ಇದೆ ಎನ್ನಿಸಿತ್ತು. ಅಪ್ಪ ಹುಡುಕಲು ಹೋಗುತ್ತಿದ್ದನೇನೋ, ಅಮ್ಮ ಬೇಡವೇ ಬೇಡ ಎಂದು ಗದರಿಸಿ ಸುಮ್ಮನಾಗಿಸಿದ್ದಳು.
               ಸೀದಾ ದೇವರ ಒಳಕ್ಕೆ ಬಂದಿದ್ದ ಅಮ್ಮ ಜಂವಟೆಯನ್ನು ತೆಗೆದುಕೊಂಡು ಬಡಿಯಲು ಹೊರಟಿದ್ದಳು. ನಾನು ಸುಮ್ಮನಿರು ಮಾರಾಯ್ತಿ.. ಜಂವಟೆ ಎಲ್ಲ ಬಡಿಯೋದು ಬೇಡ ಎಂದೆ. ಆಕೆ ಸುಮ್ಮನಾಗಿದ್ದಳು. ದೊಡ್ಡದಾಗಿ ಗದ್ದಲ ಮಾಡಿ ಹುಲಿಯನ್ನು ಓಡಿಸುವುದು ಅಮ್ಮನ ಉದ್ದೇಶವಾಗಿತ್ತು. ಕೊಟ್ಟಿಗೆಯಲ್ಲಿ ಒಂದೇ ಒಂದು ದನ ಇದೆ. ಅದಕ್ಕೆ ಏನಾದರೂ ತೊಂದರೆ ಮಾಡಿದರೆ ಎನ್ನುವ ಭಯ ಅಮ್ಮನನ್ನು ಕಾಡುತ್ತಿತ್ತು. ಅಲ್ಲಿಂದ ಶುರುವಾಯಿತು ನೋಡಿ ಅಮ್ಮನಿಗೆ ಸಂಕಟ. ಮೂನರ್ಾಲ್ಕು ಸಾರಿ ಮನೆಯನ್ನೆಲ್ಲ ಓಡಾಡಿದಳು. ಹುಲಿ ಬಂದಿದೆ ಎನ್ನುವುದು ಖಚಿತವಾಗಿತ್ತು. ಆದರೆ ಹುಲಿ ಹುಂಚುತ್ತ ಕುಳಿತರೆ ಕಷ್ಟ ಎನ್ನುವುದು ಅಮ್ಮನ ಭಾವನೆ.
ಅಮ್ಮನಿಗೆ ದನವನ್ನು ಉಳಿಸಿಕೊಳ್ಳಬೇಕು ಎನ್ನುವ ಆಲೋಚನೆ ತಲೆಯಲ್ಲಿ. ಸೀದಾ ಹೋದವಳೇ ಕೊಟ್ಟಿಗೆಯಲ್ಲಿ ಕಾಯಿಸಿಪ್ಪೆ, ಅದೂ ಇದೂ ತಂದು ದೊಡ್ಡಾಗಿ ಬೆಂಕಿಯನ್ನು ಹಾಕಿದಳು. ಅಪ್ಪನ ಬಳಿ ಇಲ್ಲೇ ಇರಿ ಎಂದು ಹೇಳಿ ಬೆಳಕು ಮೂಡುವವರೆಗೂ ಕೊಟ್ಟಿಗೆಯಲ್ಲಿ ಕಾಯುತ್ತಲೇ ಇದ್ದರು. ಅಷ್ಟರ ನಡುವೆ ತಿಂಡಿಯನ್ನು ಮಾಡುವ ಸಲುವಾಗಿ ಅಮ್ಮ ಮಿಕ್ಸರ್ ಸದ್ದು ಮಾಡಿದ್ದಳು. ಆಗ ಇನ್ನೊಮ್ಮೆ ಕೂಗಿತ್ತು ನೋಡಿ ಹುಲಿ. ಆದರೆ ಮೊದಲಿನಷ್ಟು ದೊಡ್ಡದಾಗಿರಲಿಲ್ಲ. ಸಣ್ಣ ಸ್ವರ ಇತ್ತು. ಹುಲಿ ಎಲ್ಲೋ ದೂರ ಹೋಯಿತು ಎಂದುಕೊಂಡೆವು. ಬೆಳಕಾದ ಮೇಲೆಯೇ ಮನೆಯವರಿಗೆಲ್ಲ ಸಮಾಧಾನ.
                 ದೂರದಲ್ಲೆಲ್ಲೋ ಮಂಗನ ಗ್ವಾಲೆ ದೊಡ್ಡದಾಗಿ ಕಿರುಚಾಡಿದ್ದು ಕೇಳಿಸಿತು. ನಾನು, ಅಮ್ಮ, ಅಪ್ಪ ಎಲ್ಲ ಕಿವಿಗೊಟ್ಟು ಆಲಿಸಿದೆವು. ನನ್ನ ಮನೆಯ ಜಮೀನಿನ ಪಕ್ಕದಲ್ಲಿಯೇ ಹಾದು ಹೋಗಿದ್ದ ಅಘನಾಶಿನಿ ನದಿಯ ಇನ್ನೊಂದು ದಡಡದಲ್ಲಿ ಮಂಗನ ಗ್ವಾಲೆ ದೊಡ್ಡದಾಗಿ ಕೂಗಿದ ಸದ್ದು ಕೇಳಿಸಿತ್ತು. `ಹುಲಿ ಹೊಳೆ ದಾಟಿ ಹೋಗಿದೆ..' ಎಂದ ಅಪ್ಪ. ಹುಲಿಯನ್ನು ಕಂಡರೆ ಮಂಗಗಳು ವಿಚಿತ್ರ ಸ್ವರದಲ್ಲಿ ಕೂಗುತ್ತವಂತೆ. ಹಾಗೆಯೇ ಕೂಗಿದ್ದವು ಮಂಗಗಳು. ಅರ್ಧಗಂಟೆಯ ನಂತರ ಮಂಗಗಳ ಕಮಾಂಡರ್ ಇರಬೇಕು. ಅದು ದೊಡ್ಡದಾಗಿ ಸಿಗ್ನಲ್ ಕೊಟ್ಟಿತು. ಅಷ್ಟಾದ ಮೇಲೆ ಮಂಗಗಳು ಕೂಗುವುದು ಬಂದಾಯಿತು. ಬಹುಶಃ ಹುಲಿ ಅವರ ಕಣ್ಣಂಚಿನಿಂದ ದೂರ ಹೋಗಿರಬೇಕು. ಎಲ್ಲರೂ ಸೇಫ್.. ಎಂದು ಮಂಗನ ಗ್ವಾಲೆಯ ನಾಯಕ ಹೇಳಿರಬೇಕು. ಎಲ್ಲ ಚುಪ್ ಚಾಪ್..
                ಆ ಸಮಯದಲ್ಲಿಯೇ ದೂರದಲ್ಲೆಲ್ಲೋ ನಾಯಿ ಬೊಗಳಿದ್ದೂ ಕೂಡ ನಮ್ಮ ಕಿವಿಗೆ ಬಿದ್ದಿತ್ತು. ಒಂದೋ ಎರಡೋ ನಾಯಿಗಳು ತಾರಕ ಸ್ವರದಲ್ಲಿ ಅರಚುತ್ತಿದ್ದವು. ಹುಲಿ ಅಲ್ಲಿಗೆ ಹೋಗಿರುವುದು ಪಕ್ಕಾ ಆಗಿದ್ದು. ಅಷ್ಟರಲ್ಲಿ ಬೆಳಕು ಮೂಡಿತ್ತಲ್ಲ..., ಅಮ್ಮ ಹುಲಿಯ ಜಾಡನ್ನು ಹುಡುಕಲು ಆರಂಬಿಸಿಬಿಟ್ಟಿದ್ದಳು. ಅಂಗಳದಲ್ಲೆಲ್ಲೋ ಹುಡುಕಿದ್ದವಳಿಗೆ ಹುಲಿಯ ಜಾಡು ಸಿಕ್ಕಿರಲಿಲ್ಲ. ಕೊನೆಗೆ ನನ್ನ ಮನೆಗೆ ಬರುವ ರಸ್ತೆಯಲ್ಲಿ ಹುಲಿಯ ಹೆಜ್ಜೆಗಳು ಕಾಣಿಸಿದವು. ಅಮ್ಮ ನನ್ನನ್ನು ಕರೆದು ತೋರಿಸಿದಳು. ನಾನು ಕೂಡಲೇ ಒಂದಷ್ಟು ಪೋಟೋಗಳನ್ನು ಕ್ಲಿಕ್ಕಿಸಿಕೊಂಡೆ. ಹುಲಿ ಯಾವ ದಿಕ್ಕಿನಲ್ಲಿ ಹೋಗಿರಬೇಕು ಎಂದುಕೊಂಡೆವು. `ತಮಾ.. ನೋಡ್ಕ್ಯಂಡು ಬಪ್ಪನ ನೆಡಿ..' ಎಂದಳು. ನಾನು ಹೊರಟೆ. ಮೊದ ಮೊದಲಿಗೆ ನಾಲ್ಕು ಹೆಜ್ಜೆಗಳು ಕಾಣಿಸಿದವು. ನಂತರ ಎಂಟು ಹೆಜ್ಜೆಗಳು ಕಣ್ಣಿಗೆ ಬಿದ್ದವು. ಎರಡು ಜೊತೆ ಹೆಜ್ಜೆಗಳು ಅಜಜಮಾಸು ನಾಲ್ಕಿಂಚಿಗಿಂತ ದೊಡ್ಡದು. ಮತ್ತೆರಡು ಜೊತೆ ಹೆಜ್ಜೆಗಳು 2-3 ಇಂಚು ದೊಡ್ಡದಾಗಿತ್ತು. ಎರಡು ಹುಲಿಗಳಿದ್ದು ಸಾಬೀತಾಗಿತ್ತು. ಒಂದು ದೊಡ್ಡದು. ಇನ್ನೊಂದು ಮರಿ. ದೊಡ್ಡ ಹೆಜ್ಜೆಯ ಗಾತ್ರ ನೋಡಿದರೆ ದೊಡ್ಡ ಹುಲಿ ಏನಿಲ್ಲ ಎಂದರೂ ಆರು ಅಡಿ ಇರಲೇ ಬೇಕು ಎಂದು ತಕರ್ಿಸಿದೆ. ಧೂಳಿನ ರಸ್ತೆಯಲ್ಲಿ ಆಳವಾದ ಅಚ್ಚಾಗಿತ್ತು. ಹೀಗಾಗಿ ತೂಕವೂ ಸಾಕಷ್ಟಿರಬೇಕು ಎಂದುಕೊಂಡೆ.


               ನನ್ನ ಮನೆಯಿಂದ 100 ಮೀಟರ್ ದೂರ ಹೋಗುವ ವೇಳೆಗೆ ಇದ್ದಕ್ಕಿದ್ದಂತೆ ಹಂದಿಯ ಹೆಜ್ಜೆಗಳು ಕಾಣಲು ಸಿಕ್ಕಿತು. ಹುಲಿಯ ಹೆಜ್ಜೆಗಳ ನಡುವೆ ಹಂದಿಯ ಹೆಜ್ಜೆಗಳು. ಓಹೋ ಹಂದಿ ಗ್ವಾಲೆಗೂ-ಹುಲಿಗೂ ಮುಖಾಮುಖಿಯಾಗಿದೆ ಎಂದುಕೊಂಡೆ. ಅಮ್ಮ `ಹಂದಿ ಗ್ವಾಲೆಯನ್ನು ಹುಲಿ ಬೆನ್ನಟ್ಟಿರಬೇಕು..' ಎಂದಳು. ನನಗೆ ಇದು ಹೌದೆನ್ನಿಸಿತು. ಸುಮಾರು ಅರ್ಧ ಕಿಲೋಮೀಟರ್ ವರೆಗೂ ಈ ಹೆಜ್ಜೆಗಳು ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ನಂತರ ತೋಟದ ಕಡೆಗೆ ಹೊರಳಿದ್ದವು. ಅಲ್ಲಿಯ ವರೆಗೆ ಹೆಜ್ಜೆ ಜಾಡು ಹಿಡಿದು ಹೊರಟಿದ್ದ ನಾವು ಹುಲಿ ಇಲ್ಲೆ ಎಲ್ಲೋ ಹೊರಳಿ ನದಿ ದಾಟಿದೆ ಎಂದುಕೊಂಡು ವಾಪಾಸಾದೆವು. ಮನೆಗೆ ಬಂದು ಅಪ್ಪನ ಬಳಿ ವಿಷಯ ಹೇಳಿದೆ. `ಹಂದಿ ಗ್ವಾಲೆ ಇದ್ದರೆ ಹುಲಿ ಯಾವತ್ತಿಗೂ ಅದನ್ನು ಬೆನ್ನಟ್ಟುವುದಿಲ್ಲ. ಒಂಟಿ ಹಂದಿ ಇದ್ದರೆ ಮಾತ್ರ ಅದನ್ನು ಬೆನ್ನಟ್ಟುತ್ತದೆ..' ಎಂದ. ನನಗೂ ಹಂದಿಯ ಹೆಜ್ಜೆಗಳು ಎರಡು ಜೊತೆ ಮಾತ್ರ ಇದ್ದಂತೆ ಕಾಣಿಸಿ ಒಂಟೀ ಹಂದಿಯನ್ನು ಹುಲಿ ಬೆನ್ನಟ್ಟಿದೆ ಎಂಬ ನಿರ್ಧಾರಕ್ಕೆ ಬಂದೆ.
               ಮನೆಯಲ್ಲಿ ನಂತರ ಹುಲಿಯದ್ದೇ ಮಾತು. ನಮ್ಮೂರಿನವರಿಗೆಲ್ಲ ಹುಲಿ ಕೂಗಿದ ಸದ್ದು ಕೇಳಿಸಿತ್ತಂತೆ. ದಂಟಕಲ್ ಸುಬ್ಬಣ್ಣನ ಮನೆಯ ಹತ್ತಿರ ಹುಲಿ ಬಂದಿದೆ. ಬಹುಶಃ ಕೊಟ್ಟಿಗೆಗೆ ಬಂದು ದನಕ್ಕೆ ತೊಂದರೆ ಕೊಟ್ಟಿರಬೇಕು ಎಂದು ನಮ್ಮೂರಿನವರು ಮಾತಾಡಿಕೊಂಡಿದ್ದರಂತೆ. ಆದರೆ ಮನೆಯ ಹತ್ತಿರ ಬಂದಿದ್ದ ಹುಲಿ ಕೂಗಿದ್ದು ಬಿಟ್ಟರೆ ಬೇರೆ ಯಾವುದೇ ಭಾನಗಡಿ ಮಾಡಿರಲಿಲ್ಲ. ನಮ್ಮ ಮನೆಯಲ್ಲಿ ಎಲ್ಲ ನಿಟ್ಟುಸಿರಾಗಿದ್ದರು. ಸಂಜೆ ಅಘನಾಶೀನಿಯನ್ನು ದಾಟಿ ಪಕ್ಕದ ಊರಿಗೆ ಕಾರ್ಯ ನಿಮಿತ್ತ ಹೋಗಿದ್ದೆ. ಅಲ್ಲೂ ಕೂಡ ಹುಲಿ ಬಂದಿರುವ ವಿಷಯ ಮಾತಾಡುತ್ತಿದ್ದರು.
               ಪ್ರತಿ ವರ್ಷ ನಮ್ಮೂರಿನಲ್ಲಿ ಒಮ್ಮೆ ಅಥವಾ ಎರಡು ಮೂರು ಸಾರಿ ಹುಲಿ ಕಾಣಿಸಿಕೊಳ್ಳುತ್ತದೆ. ನಾನು ಶಾಲೆಗೆ ಹೋಗುವ ಸಂದರ್ಭದಲ್ಲಿ ಒಂದೆರಡು ಸಾರಿ ಹುಲಿರಾಯನ ದರ್ಶನ ಮಾಡಿದ್ದೆ. ಆದರೆ ಹುಲಿರಾಯ ಇಷ್ಟು ಹತ್ತಿರದಲ್ಲಿ ಗರ್ಜನೆ ಮಾಡಿದ್ದು ಕೇಳಿರಲಿಲ್ಲ. ನಮ್ಮೂರ ಫಾಸಲೆಯಲ್ಲಿ ಚಿಟ್ಟು ಚಿರತೆ, ಕಪ್ಪು ಚಿರತೆಗಳೆಲ್ಲ ಆಗೀಗ ಬಂದು ಹಾಯ್ ಎನ್ನುತ್ತವೆ. ಗಮಿಯಗಳಂತೂ ನಮ್ಮೂರಿನ ಗದ್ದೆಯನ್ನು ತಮ್ಮ ಮೈದಾನ ಮಾಡಿಕೊಂಡಿವೆ. ಹಂದಿಗಳಿಗಂತೂ ನಮ್ಮೂರಿನ ಬಾಳೆಯ ಗಡ್ಡೆಗಳು ಸಿಕ್ಕಿಲ್ಲ ಎಂದರೆ ಅದೇನನ್ನೋ ಕಳೆದುಕೊಂಡೆವು ಎಂಬಂತೆ ವರ್ತಿಸುತ್ತವೆ.
ಇಂತಹ ವನ್ಯ ಪ್ರಾಣಿಗಳಿರುವಲ್ಲಿ ಬೇಟೆಗಾರರೂ ಇದ್ದಾರೆ. ಕಳೆದ ವರ್ಷ ಹೇರೂರಿನ ಕೆಲವರು ಕಾಡೆಮ್ಮೆ ಬೇಟೆ ಮಾಡಿದ್ದರು. ಅದು ಸಾಕಷ್ಟು ಸುದ್ದಿಯೂ ಆಗಿತ್ತು. ಈ ವರ್ಷದ ಚಳಿಗಾಲದಲ್ಲಿ ಹುಲಿರಾಯ ಬಂದಿರಲಿಲ್ಲ. ಹುಲಿರಾಯನ ಹಾಯಿಸಾಲಿನಲ್ಲಿ ನಮ್ಮೂರು ಬಿಟ್ಟಿತೇನೋ ಎಂದುಕೊಂಡಿದ್ದೆ. ಆದರೆ ಹುಲಿರಾಯ ನಮ್ಮ ಮನೆಯ ಅಂಗಳಕ್ಕೆ ಬಂದು ಹಾಯ್ ಹೇಳಿದ್ದ. ಅಷ್ಟೇ ಅಲ್ಲ ತನ್ನ ಮುಂದಿನ ಪೀಳಿಗೆಯನ್ನೂ ಕರೆತಂದು ನನ್ನ ಮನೆಯನ್ನು ತೋರಿಸಿದ್ದ.
                 ಹಿಂದೆ ನಮ್ಮೂರಿನಲ್ಲಿ ಸಿಕ್ಕಾಪಟ್ಟೆ ಹುಲಿಗಳಿದ್ದವಂತೆ. ನಮ್ಮೂರಿನ ಹಿರಿಯರಾಗಿದ್ದ ದಿ. ಗಣಪತಿ ಗಣೇಶ ಹೆಗಡೆಯವರು ತಮ್ಮ ಯವ್ವನದ ದಿನಗಳಲ್ಲಿ ಮೂರು ಹುಲಿಗಳನ್ನು ಗುಂಡಿಕ್ಕಿ ಕೊಂದಿದ್ದರಂತೆ. ನಂತರದ ದಿನಗಳಲ್ಲಿ ಹುಲಿ ಸಂತತಿಯೂ ಕಡಿಮೆಯಾಗಿತ್ತು. ಆಗೊಮ್ಮೆ ಈಗೊಮ್ಮೆ ಹುಲಿಗಳು ಬಂದಿದ್ದರೂ ದಾಂಡೇಲಿಯ ಕಾಡಿನಿಂದ ಬಂದಿರಬೇಕು ಎಂದಕೊಂಡಿದ್ದೇವೆ. ಈ ವರ್ಷ ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಒಂದೆರಡು ಕಡೆಗಳಲಿ ಬೆಂಕಿ ಬಿದ್ದಿದೆ. ನೀರು ಬತ್ತಿದೆ. ಆಹಾರವೂ ಕಡಿಮೆಯಾಗಿರಬೇಕು. ಹೀಗಾಗಿ ಹುಲಿ ತನ್ನ ಮರಿಯ ಜತೆಗೂಡಿ ಆಹಾರ ಹುಡುಕಿ ಬಂದಿರಬೇಕು. ಹೀಗೆ ಬಂದ ಹುಲಿ ನಮ್ಮೂರ ಕಡೆಗೆ ಹೆಜ್ಜೆ ಹಾಕಿರಬೇಕು. ಹುಲಿ ಬಂದಿದ್ದರಿಂದ ನಮ್ಮ ಮನೆಯಲ್ಲಿ ಭಯವಾಗಿದ್ದರೂ, ನನಗೆ ಖುಷಿಯಾಗಿದೆ. ನಶಸುತ್ತಿರುವ ಹುಲಿ ನನ್ನ ಮನೆಯಂಗಳಕ್ಕೆ ಬಂದು ಗರ್ಜನೆ ಮಾಡಿದ್ದು, ನಾನಿದ್ದಿನಿ ಕಣೋ.. ಎಂದಂತೆ ಭಾಸವಾಗಿದ್ದು ನನಗೆ ಖುಷಿಯನ್ನು ಕೊಟ್ಟಿದೆ. ಮುಂದೆ ಹುಲಿ ಬಂದರೆ ಹೆಂಗಾದರೂ ಮಾಡಿ ಪೋಟೋ ಹೊಡ್ಕಳ್ಳಬೇಕು ಎಂಬ ಭಾವನೆ ಬಲವಾಗುತ್ತಿದೆ.




ಈ ಚಿತ್ರದಲ್ಲಿ ಕಾಡುಹಂದಿಯ ಹಾಗೂ ಹುಲಿಯ ಹೆಜ್ಜೆಗಳಿವೆ.
ಇದರಲ್ಲಿ ಹುಲಿಯ ಹೆಜ್ಜೆಯ ಚಿತ್ರಗಳನ್ನು ನನ್ನ ಮನೆಯ ಅಂಗಳದಲ್ಲಿ ತೆಗೆದಿದ್ದು.
ಕಾಡುಹಂದಿಯ ಹೆಜ್ಜೆಗಳ ಚಿತ್ರಗಳನ್ನು ಮನೆಯಿಂದ 200 ಮೀಟರ್ ದೂರದಲ್ಲಿ ತೆಗೆದಿದ್ದು.