Friday, January 16, 2015

ಅಘನಾಶಿನಿ ಕಣಿವೆಯುಲ್ಲಿ-8

               `ಅಮಾ... ಆನು ವಿಕ್ರಮ.' ಎಂದು ಹೇಳಿದಾಗ ಆಕೆಯ ಮುಖವರಳಿತು. ಖುಷಿಯಿಂದ `ಏನೋ.. ನಂಬಲೆ ಆಯ್ದಿಲ್ಲೆ ನೋಡು.. ಇಷ್ಟು ಉದಯಪ್ಪಾಗ ಎಲ್ಲಿಂದ ಬಂದೆ? ಯಂಗ ಒಂದ್ ಸಾರಿ ಗೊತ್ತೇ ಆಯ್ಲೆ.. ಅರೇ.. ಕಾರು ತಯಿಂದೆ. ಯಾರದ್ದು? ಅರೇ ಕಾರಲ್ಲಿ ಯಾರಿದ್ದ?  ಬಾ ವಳಗ ಹೋಪನ. ಬಿಸಿ ಬಿಸಿ ದ್ವಾಸೆ ಮಾಡಿದ್ದೆ ಬಿಲ್ಯ. ಕಾರಲ್ಲಿದ್ದವರನ್ನೂ ಕರಿ. ನಿನ್ನಂತೂ ಕಾಂಬುಲೇ ಔತ್ಲ್ಯಲೇ..' ಎಂದು ಗ್ರಾಮ್ಯ ಭಾಷೆಯಲ್ಲಿ ವಿಕ್ರಮನಿಗೆ ಹೇಳಿದಳು ಆತನ ತಾಯಿ ಲಕ್ಷ್ಮೀಬಾಯಿ.
              `ಅಮಾ.. ಆನು ಈಗಷ್ಟೆ ಬೈಂದೆ. ಕಾರು ಯನ್ನ ಮ್ಯಾಲಿನ ಆಫೀಸರದ್ದು. ಕಾರಲ್ಲಿದ್ದವರು ಯನ್ನ ಪ್ರೆಂಡ್ಸು..' ಎಂದು ಹೇಳಿ ವಿಕ್ರಂ ಕಾರಿನ ಬಳಿ ತಾಯಿಯನ್ನು ಕರೆದೊಯ್ದ. ಕಾರಿನಲ್ಲಿದ್ದವರನ್ನು ಪರಿಚಯಿಸಿದ. ಎಲ್ಲರೂ ಕೈಯಲ್ಲಿದ್ದ ಮಣಭಾರದ ಲಗೇಜುಗಳನ್ನು ಹೊತ್ತು ಒಳಗೆ ಹೋದರು.
              ವಿಕ್ರಮನದು ಭವ್ಯ ಮನೆ. ಇಡಿ ಮನೆ ಮರದಿಂದಲೇ ಮಾಡಿದ್ದು. ಹಳೆಯ ಕಾಲದ ಮನೆ ಎಂದು ನೋಡಿದೊಡನೆ ಹೇಳಬಹುದಿತ್ತು. ಯಾವ ಶತಮಾನದಲ್ಲಿ ಮನೆಯನ್ನು ಕಟ್ಟಲಾಗಿತ್ತೋ. ಬೀಟೆ, ತೇಗಗಳ ಮರಗಳಿಂದಲೇ ಮಾಡಿದ್ದು ಸ್ಪಷ್ಟವಾಗಿತ್ತು. ಎಲ್ಲರೂ ಒಳಗೆ ಹೋಗುವ ವೇಳೆಗೆ ವಿಕ್ರಮನ ತಂಗಿ ರಮ್ಯ ಎದುರಾದಳು. ಆಕೆಯನ್ನು ಎಲ್ಲರಿಗೂ, ಎಲ್ಲರನ್ನೂ ಆಕೆಗೂ ಪರಿಚಯಿಸಿದ ವಿಕ್ರಂ. ಅಷ್ಟರಲ್ಲಿ ತಿಂಡಿ ತಯಾರಿದೆಯೆಂಬ ಅಮ್ಮನ ಬುಲಾವ್ `ಆಸ್ರಿಗೆ ಕುಡಿಯಲಾತು..' ಕೇಳಿಸತೊಡಗಿತು. ಎಲ್ಲರೂ ಮುಖ, ಕೂಕಾಲುಗಳನ್ನು ತೊಳೆದು ತಿಂಡಿ ತಿನ್ನಲು ಕುಳಿತರು. ಅವರಿಗೆ ಭರ್ಜರಿಯಾಗಿ ದೋಸೆಗಳ ಮೇಲೆ ದೋಸೆಯನ್ನು ಹಾಕಿದರು. ದೋಸೆಯ ರುಚಿ ಆಹ್...! ಜೊತೆಗೆ ಕಾಯಿ ಚಟ್ನಿ.. ಅದೆಷ್ಟು ದೋಸೆಗಳು ಉದರವನ್ನು ಸೇರಿದವೋ.
             ಅಂತೂ ತಿಂಡಿ ಮುಗಿಸುವ ವೇಳೆಗಾಗಲೇ ಬೆಳಗಿನ ಎಲ್ಲಾ ಸ್ನಾನ, ಸಂಧ್ಯಾವಂದನೆ, ದೇವರಪೂಜೆ ಇತ್ಯಾದಿ ಕೆಲಸ ಮುಗಿಸಿ ಯಾರದ್ದೋ ಮನೆಗೆ ಯಾವುದೋ ಕೆಲಸಕ್ಕೆ ಹೋಗಿದ್ದ ವಿಕ್ರಮನ ತಂದೆ ರಾಜಾರಾಮ ಭಟ್ಟರು ಮನೆಗೆ ಬಂದರು. ಬಂದವರು ವಿಕ್ರಮನನ್ನು ನೋಡಿ `ಮಾಣಿ.. ಈಗ ಬೈಂದ್ಯ..' ಎಂದವರಿಗೆ ವಿಕ್ರಮ್ ತಲೆಯಲ್ಲಾಡಿಸಿ ಏನನ್ನೋ ಹೇಳಲು ಬಾಯಿ ತೆರೆಯುವಷ್ಟರಲ್ಲಿ `ಓ ವಿಜೇತಾ.. ಓ ಪ್ರದೀಪ್.. ಅರಾಮಿದ್ರಾ? ಆಸ್ರಿಗೆ ಕುಡದಾತಾ?' ಎಂದೆಲ್ಲಾ ಕೇಳಿದಾಗ ವಿಕ್ರಮನಿಗೆ ಒಮ್ಮೆಗೇ ಆಶ್ಚರ್ಯ ಹಾಗೂ ದಿಗ್ಭ್ರಾಂತಿ. `ನಾನು ಸರ್ಪ್ರೈಸ್ ಕೊಡಬೇಕು ಎಂದು ಇವರ ಬಗ್ಗೆ ಹೇಳ್ದೇ ಇದ್ರೂ ಅಪ್ಪಯ್ಯನಿಗೆ ಹೇಗೆ ತಿಳಿಯಿತು?' ಎಂದು ಆಲೋಚಿಸುತ್ತಾ `ಅರೇ.. ಅಪ್ಪಯ್ಯಾ.. ಇವಿಬ್ರೂ ಇದೇ ಮೊದ್ಲು ನಿಂಗೆ ಸಿಕ್ತಾ ಇದ್ದ. ಆದ್ರೂ ನಿಂಗೆ ಹ್ಯಾಂಗೆ ಇವ್ರ ಬಗ್ಗೆ ಗೊತ್ತಾತು?' ಎಂದು ವಿಕ್ರಮ ಕೇಳಿದಾಗ ತಬ್ಬಿಬ್ಬಾಗುವ ಸರದಿ ಭಟ್ಟರದ್ದಾಯಿತು.
            ಆದರೂ ತಕ್ಷಣ ಸಾವರಿಸಿಕೊಂಡು `ಅಲ್ದಾ ನೀನು ಪತ್ರ ಬರೆದಿದ್ಯಲ.. ಅದ್ರಲ್ಲಿ ತಿಳಿಸಿದ್ದೆ. ಅದಕ್ಕಾಗಿ ಗೊತ್ತಾತು ಬಿಲ್ಯಾ..' ಎಂದರು. ಆದರೆ ವಿಕ್ರಂ `ನಾನು ಬರೆದ ಲೆಟರಿನಲ್ಲಿ ಈ ಬಗ್ಗೆ ತಿಳಿಸಿಯೇ ಇರಲಿಲ್ಲ. ಆದರೂ ಹೇಗೆ ತಿಳಿಯಿತು? ಇದರಲ್ಲೇನೋ ವಿಶೇಷತೆ, ನಿಘೂಡತೆ ಇದೆ..' ಅಂದುಕೊಂಡ. ನಂತರ ದೂರದ ಪಯಣಿಗರೆಲ್ಲ ರಾತ್ರಿ ನಿದ್ದೆಗೆಟ್ಟ ಆಯಾಸ ಪರಿಹಾರಕ್ಕಾಗಿ ಹಾಸಿಗೆಗೆ ತೆರಳಿದರು. ಅಲ್ಲಿಗೆ ಕಥೆಗೆ ಒಂದು ದೊಡ್ಡ ತಿರುವು ಸಿಕ್ಕಂತಾಗಿತ್ತು.
             ಹಾಗಾದರೆ ರಾಜಾರಾಮ ಭಟ್ಟರಿಗೆ ವಿಜೇತಾ, ಪ್ರದೀಪರ ಬಗ್ಗೆ ಹೇಗೆ ತಿಳಿಯಿತು? ಇವರಿಗೆ ಮೊದಲೇ ಈರ್ವರ ಪರಿಚಯ ಇತ್ತೇ? ಅಥವಾ ಬೇರೆ ಯಾರಾದರೂ ತಿಳಿಸಿದ್ದರೇ? ಇದು ಮಾತ್ರ ನಿಗೂಢವಾಗಿತ್ತು. ಜೊತೆಗೆ ವಿಕ್ರಮನನ್ನು ಹಿಂಬಾಲಿಸುತ್ತಿದ್ದ ನಿಗೂಢ ವ್ಯಕ್ತಿ ಇಲ್ಲಿಗೂ ಬಂದಿದ್ದ. ಆತ ಹೀಗೆ ವಿಕ್ರಮನ ಹಿಂಬಾಲಿಸಲು ಕಾರಣ ಏನು? ಇಷ್ಟೆಲ್ಲ ನಡೆದಿದ್ದಿ ಎಪ್ರಿಲ್ 10ರಂದು.

****

          ಮದ್ಯಾಹ್ನದ ವರೆಗಿನ ಗುಟುಕು ನಿದ್ದೆಗೆ ಎಲ್ಲರೂ ಕ್ರಿಯಾಶೀಲರಾದರು. ಊರಿನ ಪರಿಸರವನ್ನು ಆಸ್ವಾದಿಸಲು ಹೊರಗೆ ಹೊರಟರು. ವಿಕ್ರಂ, ವಿಜೇತಾ, ರಮ್ಯ, ಪ್ರದೀಪರು ಹೊರಟರೆಂದರೆ ಊರಿಗೆ ಊರೇ ಮತ್ತೆ ಮತ್ತೆ ನೋಡಲಾರಂಭಿಸಿತ್ತು. ಆದರೆ ಗುಸು ಗುಸು ಸುದ್ದಿ ಮಾತನಾಡುವಷ್ಟು ಮನೆಗಳು ಹತ್ತಿರದಲ್ಲಿ ಇಲ್ಲವಾದ ಕಾರಣ ಇವರು ಎಲ್ಲರ ಬಾಯಿಗೆ ಆಹಾರವಾಗುವುದು ತಪ್ಪಿತು. ಇದರ ಪರಿವಿಲ್ಲದ ಇವರು ಊರು, ಊರಿನ ಪರಿಸರ, ಊರ ತುದಿಯಲ್ಲಿರುವ ಕಾಳಿ ನದಿಯ ಉಪನದಿ ಇಲ್ಲೆಲ್ಲ ತಿರುಗಾಡಿದರು.
           ಮುಖ್ಯ ಸಂಗತಿಗಳನ್ನು ಬರೆದಿಟ್ಟುಕೊಳ್ಳುತ್ತಿದ್ದ ವಿಜೇತಾ ಆಗಾಗ ಸುಂದರ ಪೋಟೋಗಳನ್ನು ಕ್ಲಿಕ್ಕಿಸುತ್ತಿದ್ದಳು. ಪ್ರದೀಪನಿಗೆ ಇವುಗಳಲ್ಲಿ ಆಸಕ್ತಿ ಇಲ್ಲದ ಕಾರಣ ಆತ ಈ ಯಾವ ಕೆಲಸಗಳನ್ನೂ ನಡೆಸಲಿಲ್ಲ. ಆದರೂ ಎಲ್ಲಾ ಕಡೆ ಏನನ್ನೋ ಹುಡುಕುವಿಕೆಯ, ಕಳ್ಳದೃಷ್ಟಿಯ ಬೀರುತ್ತಿದ್ದ. ಆಗಾಗ ಬಾಯಲ್ಲಂತೂ `ರಮ್ಯ ಜೀವನ.. ಸಂಪೂರ್ಣ ವಿಧಿಯ ಕಲಾವಿಧಾನ...' ಎಂತಲೋ ಮತ್ಯಾವುದೋ ಸುಂದರ ಹಾಡುಗಳನ್ನು ಹಾಡುತ್ತ ಸಾಗುತ್ತಿದ್ದ. ವಿಕ್ರಮ ಎಲ್ಲವುಗಳಿಗೆ ವಿವರಣೆ ನೀಡುತ್ತಿದ್ದರೆ, ವಾಚಾಳಿ ರಮ್ಯ ಪ್ರತಿಯೊಂದರ ಬಗೆಗೂ ಸಾಕಷ್ಟು ಹರಟುತ್ತಿದ್ದಳು. ಕಾಡಿನ ನಡು ನಡುವಿನ ಗದ್ದೆಗಳು, ತೋಟ, ತೋಟದ ಮಧ್ಯ ಮಧ್ಯದಲ್ಲಿ ತೆಂಗಿನಮರಗಳು, ಮಾವು, ಹಲಸು ಮರಗಳು ಆ ಊರಿನ ಸೊಬಗಿಗೆ ತಾವೇನನ್ನೋ ಕೊಟ್ಟಿದ್ದೇವೆ ಎನ್ನುವಂತಿದ್ದವು. ಇವರು ಮುಖ್ಯವಾಗಿ ಒಂದು ದಾರಿಯನ್ನು ಹಿಡಿದು ಹೋಗಿದ್ದರು. ಕೊನೆಗೆ ಅಲ್ಲೊಂದು ಪುಟ್ಟ ಕಟ್ಟಡ ಕಂಡು ಬಂದಿತು. ಅದನ್ನು ತೋರಿಸಿದ ವಿಕ್ರಮ್ `ಇದೇ ನಾನು ಕಲಿತ ಪ್ರೈಮರಿ ಶಾಲೆ..' ಎಂದ.
             ಆ ಶಾಲೆ ಹಳ್ಳಿಗಾಡಿನ ನ್ಯೂನತೆಗಳನ್ನೇ ಮೈವೆತ್ತಿಕೊಂಡಂತಿತ್ತು. ಎಂದೋ ಹಾಕಲಾಗಿದ್ದ ಸಿಮೆಂಟು ಅಲ್ಲಲ್ಲಿ ಕಿತ್ತು ಹೋಗಿತ್ತು. ಅಲ್ಲಲ್ಲಿ ಹಂಚುಗಳು ಒಡೆದಿದ್ದವು. ಈ ಶಾಲೆ ಸರ್ಕಾರದ ದಿವ್ಯ ನಿರ್ಲಕ್ಷ್ಯದ ಕನ್ನಡಿಯಂತೆ ಕಂಡಿತು. ಇವರು ಹೋದ ದಿನ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದರು. ಅದರೊಳಗೆ ದೊಡ್ಡದಾಗಿ ಓದಿ ಹೇಳುತ್ತಿದ್ದ ಮಾಸ್ತರರ ಧ್ವನಿ `ಬಾರ ಬಾರ ಆತೀ ಹೈ ಮುಝಕೋ.. ಮಧುರ ಯಾದ ಬಚಪನ ತೇರಿ...' ಎಂಬ ಸಾಲುಗಳೂ ಜೊತೆಗೆ ಹತ್ತೆಂಟು ಮಕ್ಕಳು ಇದೇ ಸಾಲನ್ನು ಪುನಃ ಉಚ್ಛಾರ ಮಾಡಿದ್ದೂ ಕೇಳುತ್ತಿತ್ತು.
             `ಈ ಶಾಲೆ ಹಲವು ವಿಶೇಷತೆಗಳಿವೆ. ಪ್ರತಿ ಮಳೆಗಾಲದಲ್ಲಿ ಶಾಲೆಗೆ ಅನಿರ್ದಿಷ್ಟಾವಧಿ ರಜಾ ಸಿಗುತ್ತದೆ. ಉಕ್ಕೇರಿ ಹಳ್ಳ-ಕೊಳ್ಳಗಳು ಊರಿಗೂ ಹೊರಜಗತ್ತಿಗೂ ಸಂಪರ್ಕವನ್ನು ಕಲ್ಪಿಸುತ್ತವೆ. ಯಲ್ಲಾಪುರದಿಂದ ನಮ್ಮೂರ ಶಾಲೆಗೆ ಪ್ರತಿದಿನ ಮಾಸ್ತರ್ರು ಬಂದು ಕಲಿಸಿ ಹೋಗುತ್ತಾರೆ. ತಮ್ಮದೊಂದು ಬೈಕ್ ತರುತ್ತಾರೆ. ಆದರೆ ಮಳೆಗಾಲದಲ್ಲಿ ಮಾತ್ರ ಅವರು ಶಾಲೆಗೆ ಬರುವುದು ತಪ್ಪುತ್ತದೆ. ಹಳ್ಳ-ಕೊಳ್ಳದ ನೀರಿನ ಸೆಳವು ಇಳಿದ ನಂತರವೇ ಮಾಸ್ತರ್ರು ಶಾಲೆಗೆ ಮರಳುವುದು. ಅಲ್ಲಿಯವರೆಗೂ ಮಕ್ಕಳಿಗೆ ಶಾಲೆ ನಡೆಯುವುದಿಲ್ಲ. ಸ್ಥಳೀಯವಾಗಿ ಪಿಯುಸಿ ಮುಗಿಸಿದವರಿದ್ದರೆ ಅವರು ಶಾಲೆಗೆ ಬಂದು ಮಕ್ಕಳಿಗೆ ಪಾಠ ಹೇಳುವ ಕೆಲಸವನ್ನು ಮಾಡುತ್ತಾರೆ.. ಇದು ಈ ಶಾಲೆಯ ವಿಶೇಷತೆಗಳು..' ಎಂದ ವಿಕ್ರಮ.
             ಮಧ್ಯದಲ್ಲಿ ಬಾಯಿ ಹಾಕಿದ ರಮ್ಯ. `ನಾವು ಶಾಲೆಗೆ ಹೋಗುತ್ತಿದ್ದ ದಿನಗಳು ಬಹಳ ಬೊಂಬಾಟ್.. ಅಣ್ಣ ಏಳನೇ ಕ್ಲಾಸಲ್ಲಿ ಓದುತ್ತಿದ್ದ. ನಾನು ಒಂದನೇ ಕ್ಲಾಸು.. ಸತೀಶ ಮಾಸ್ತರ್ರು ನಮ್ಮ ಮೊದಲ ಮಾಸ್ತರ್ರು.. ಆಮೇಜೆ ಜಿ. ಎಸ್. ಭಟ್ಟರು, ಅದಾದ ಮೇಲೆ ತಾರಕ್ಕೋರು, ಗಂಗಕ್ಕೋರು, ಗಡ್ಕರ್ ಮಾಸ್ತರ್ರು, ಹರೀಶ ಮಾಸ್ತರ್ರು ಎಲ್ಲಾ ನಮಗೆ ಕಲಿಸ್ತಿದ್ರು.. ಅವರೆಲ್ಲ ಎಷ್ಟು ಸ್ಟ್ರಿಕ್ಟ್ ಆಗಿದ್ದರು ಎಂದರೆ ನಾವೆಲ್ಲಾ ಗಡಗಡ.. ಸತೀಶ ಮಾಸ್ತರ್ರು, ಜಿ. ಎಸ್. ಭಟ್ಟರು ದೊಡ್ಡ ದೊಡ್ಡ ಬೆತ್ತಗಳಿಂದ ನಮಗೆ ಹೊಡೆಯುತ್ತಿದ್ದರೆ ನಮ್ಮ ಕೈ, ಬೆನ್ನ ಮೇಲೆ ಬಾಸುಂಡೆಗಳು ಬರುತ್ತಿದ್ದವು. ಇದ್ದವರ ಪೈಕಿ ಗಡ್ಕರ್ ಮಾಸ್ತರ್ರು ಪಾಪದವರು. ಯಾವಾಗಲೂ ನಗಿಸುತ್ತಿದ್ದರು. ಆದರೆ ಅಣ್ಣನಿಗೆ ಮಾತ್ರ ಅವರು ಅಂದರೆ ಕನಸಲ್ಲೂ ಕಾಡುತ್ತಾರೆ. ನಮಗೆಲ್ಲ ಮದ್ಯಾಹ್ನ ಆಟಕ್ಕೆ ಬಿಟ್ಟಿದ್ದಾಗ ಅಣ್ಣನಿಗೆ ಬುಲಾವ್ ನೀಡುತ್ತಿದ್ದ ಗಡ್ಕರ್ ಮಾಸ್ತರ್ರು ತಮ್ಮೊಡನೆ ಚೆಸ್ ಆಡಲು ಕೂರಿಸಿಕೊಳ್ಳುತ್ತಿದ್ದರು. ನಾವೆಲ್ಲ ಬಯಲಲ್ಲಿ ಆಡುತ್ತಿದ್ದರೆ ಪಾ..ಪ ಅಣ್ಣ ಆಸೆಗಣ್ಣಿನಿಂದ ನೋಡುತ್ತಿದ್ದ.. ಇನ್ನೊಂದ್ ಮಜಾ ಅಂದ್ರೆ  ಗಡ್ಕರ್ ಮಾಸ್ತರ್ರಿಗೆ ದೃಷ್ಟಿ ದೋಷ ಇತ್ತು. ಯಾವಾಗಲೂ ಚೆಸ್ಸಿನಲ್ಲಿ ಕಪ್ಪು ಕಾಯಿ ಅವರದ್ದೇ ಆಗಬೇಕಿತ್ತು. ಅಣ್ಣನದ್ದು ಬಿಳಿಯ ಕಾಯಿ. ಅಣ್ಣ ಕಡ್ಡಾಯವಾಗಿ ಸೋಲಲೇಬೇಕು. ಪಾ..ಪ ಅಣ್ಣನ ಪಚೀತಿ ಮಜವಾಗಿತ್ತು..' ಎಂದಾಗ ಎಲ್ಲರೂ ನಕ್ಕರು.
             ಹೀಗೆ ಮಾತುಗಳು ಸಾಗುತ್ತಿದ್ದಾಗ ಎಲ್ಲರೂ ತಮ್ಮ ತಮ್ಮ ಮರೆತ ಬಾಲ್ಯದ ನೆನಹುಗಳ ಕಡೆಗೆ ಸಾಗಿದಾಗ ಪ್ರದೀಪ ಒಮ್ಮೆಲೆ ನಸುನಕ್ಕ. `ಯಾಕಪ್ಪಾ..' ಎಂದು ಕೇಳಿದಾಗ ಪ್ರದೀಪ `ಅಯ್ಯೋ ನಮ್ ಹುಡ್ಗುಗೆ ನಾನು ಹೈಸ್ಕೂಲ್ನಲ್ ಇದ್ದಾಗ ಮೊಟ್ಟ ಮೊದಲ ಬಾರಿಗೆ ಲವ್ ಲೆಟರ್ ಬರೆದಿದ್ನಪ್ಪಾ.. ಅಯ್ಯೋ ಅದೊಂದು ಗೋಳಿನ ಕಥೆ ಬಿಡಿ...' ಎಂದು ತನ್ನ ಕಥೆಯನ್ನೆಲ್ಲ ಹೇಳಿದ. ಎಲ್ಲರೂ ನಕ್ಕರು.
         ಒಂದಷ್ಟು ಪ್ರದೇಶಗಳನ್ನು ವೀಕ್ಷಿಸುವ ವೇಳೆಗೆ ಆಗಲೇ ಸಕಲ ಜೀವನ ಚೈತನ್ಯಕ್ಕೆ ಕಾರಣಕರ್ತನಾದ ನೇಸರ ಪಶ್ಚಿಮದೆಡೆಗೆ ಹೊರಟಿದ್ದ. ಎಲ್ಲರೂ ಮರಳಿ ಮನೆಯತ್ತ ನಿಧಾನವಾಗಿ ಹೆಜ್ಜೆ ಹಾಕಿದರು. ಇವರೂ ಮನೆಯ ಕಡೆಗೆ ಮರಳಲು ಮುಂದಾದರು. ಹೆಜ್ಜೆ ಹಾಕಿದರು.
         ಅವರು ಸ್ವಲ್ಪ ದೂರ ಬಂದಿರಬಹುದು. ಅಷ್ಟರಲ್ಲೊಬ್ಬರು ವಯಸ್ಸಾದ ವ್ಯಕ್ತಿ ಆ ದಾರಿಯಲ್ಲಿ ಬಂದರು. ಸಾಕಷ್ಟಿದ್ದ ಕೆಂಪಡರಿದ್ದ ಅವರ ಪಂಚೆ ಇಳಿಸಂಜೆಯ ಕೆಂಬಣ್ಣಕ್ಕೆ ಮತ್ತಷ್ಟು ಕೆಂಪಡರಿತ್ತು. ಬಾಯ್ತುಂಬ ಬಡವರ ಅಮೃತವಾದ ಕವಳವನ್ನು ಮೆಲ್ಲುತ್ತಾ ಆಗಾಗ ತುಪ್ಪುತ್ತಾ, ಏನನ್ನೋ ಹುಡುಕುವ ರೀತಿಯಲ್ಲಿ ಆಗಾಗ ಸೂರ್ಯನ ಕಿರಣಗಳ ಮರೆಮಾಡಿ ಕಣ್ಣು ಕೀಲಿಸುತ್ತಾ ಬರುತ್ತಿದ್ದರು.
        ದೂರದಿಂದಲೇ ಆತನನ್ನು ಗುರುತಿಸಿದ ರಮ್ಯ `ನೋಡಿ ಅಲ್ಲಿ ಬರ್ತಾ ಇದ್ವಲಿ ಅವರೇ ರಾಮಕೃಷ್ಣ ಗಾಂವ್ಕಾರರು. ನಮ್ಮೂರಿನವರೇ.. ಇಲ್ಲೇ ಸ್ವಲ್ಪ ದೂರದಲ್ಲಿ ಅವರ ಮನೆಯಿದೆ...' ಎಂದು ಹೇಳುವ ವೇಳೆಗೆ ಅವರು ಹತ್ತಿರ ಬಂದು `ನೀವ್ಯಾರು? ನಿಂಗವ್ಕೆ ಯಲ್ಲಾತು? ಗುರ್ತು ಸಿಕ್ಕಿದ್ಲ್ಯಲೇ ಯಂಗ..' ಎಂದು ಕೇಳಿದಾಗ ವಿಕ್ರಮ್ `ನಾನು ಗಾಂವ್ಕಾರಜ್ಜ ವಿಕ್ರಮ. ರಾಜಾರಾಮ ಭಟ್ರ ಮಗ. ಇವೆಲ್ಲ ಯನ್ನ ಪ್ರೆಂಡ್ಸು..' ಎಂದ.
           ಅದಕ್ಕೆ ಗಾಂವ್ಕಾರರು `ಯೇ ನೀ ಮಂಗ್ಲೂರಲ್ಲಿದ್ಯಡ.. ಯಂತಾ ಮಾಡ್ತಾ ಅಲ್ಲಿ? ಯಲ್ಲಾ ಸುಡುಗಾಡು ನೌಕರಿ ಹೇಳ್ತ.. ಯಂತಾ ಮಾಡ್ತ್ವ ಏನ..' ಎಂದು ಹೇಳಿದಾಗ ವಿಕ್ರಮ್ ಒಂದೆರಡು ದೀರ್ಘ ವಾಕ್ಯಗಳ ಉತ್ತರ ಕೊಟ್ಟ.
            `ಈ ನಿನ್ನ ಗೆಳೆಯಂದಿಕ್ಕಳ್ನ ನೀ ಹೋಪೂದ್ರೊಳಗ ಯಮ್ಮನೆಗೆ ತೆಕಂಡು ಬಾ ಬಿಲ್ಯ..'ಎಂದು ಹೇಳಿ ತಮ್ಮ ಮನೆಗೆ ಆಮಂತ್ರಣವನ್ನು ನೀಡಿ ಹೊರಟು ಹೋದರು ಗಾಂವ್ಕಾರರು.
            ಗಾಂವ್ಕಾರರು ಹೋದ ನಂತರ ಅವರ ಬಗ್ಗೆ ವಿಕ್ರಮ್, ರಮ್ಯ ಇಬ್ಬರೂ ಹೆಚ್ಚಿನ ವಿವರಣೆ ನೀಡಿದರು. ಇವರ ಮಾತಿನಿಂದ `ಗಾಂವ್ಕಾರರದ್ದು ಚಿಕ್ಕ, ಸುಂದರ ಕುಟುಂಬವಾಗಿತ್ತು. ಸುಖ, ಶಾಂತಿ, ಸಂಪತ್ತು ತುಳುಕುತ್ತಿದ್ದ ಕಾಲದಲ್ಲಿ ಇದ್ದೊಬ್ಬ ಮಗ ಇದ್ದಕ್ಕಿದ್ದಂತೆ ಕಾಣೆಯಾದ. ಇನ್ನೂತನಕ ಆತನ ಸುಳಿವು ತಿಳಿಯದ ಕಾರಣ ಅದೇ ಚಿಂತೆಯಲ್ಲಿ ಕೊರಗುತ್ತಿದ್ದ ಗಾಂವ್ಕಾರರು ಪ್ರತಿಯೊಬ್ಬ ಯುವಕನಲ್ಲೂ ತನ್ನ ಕಳೆದುಹೋದ ಮಗನನ್ನು ಹುಡುಕುತ್ತಿದ್ದಾರೆ' ಎನ್ನುವ ವಿಷಯ ತಿಳಿದುಬಂದಿತು.
           ವಿಕ್ರಮ್ `ಗಾಂವ್ಕಾರರ ಮಗ ಒಳ್ಳೆಯ ಪ್ರತಿಭಾವಂತನಾಗಿದ್ದ. ಹಾಡು, ಚಿತ್ರಕಲೆ, ರಂಗೋಲಿ ಹಾಕುವುದು, ಮಿಮಿಕ್ರಿ ಇವುಗಳಲ್ಲೆಲ್ಲ ಎತ್ತಿದ ಕೈ ಆಗಿತ್ತು. ನನಗಿಂತ ಎರಡು ವರ್ಷ ಸೀನಿಯರ್. ಪಾಪ ಈಗ ಎಲ್ಲಿದ್ದಾನೋ..? ಹೇಗಿದ್ದಾನೋ..? ಅಥವಾ ಬದುಕಿದ್ದಾನೋ ಗೊತ್ತಿಲ್ಲ. ಪಾಪ.. ಈ ವೃದ್ಧ ತಂದೆ ತಾಯ್ಗಳ ದುಃಖ ಹೇಳತೀರದು..' ಎಂದ.
            ಈ ಬಗ್ಗೆ ಕೊಂಚ ಮರುಗುವಿಕೆ ಕೊರಗುವಿಕೆಯೆಲ್ಲ ನಡೆಯುವ ವೇಳೆಗೆ ಕತ್ತಲೆಯ ರಥ ಬೆಳಕ ಗಾಡಿಯನ್ನಟ್ಟಿ ಆಗಿತ್ತು. ಆ ಸಂದರ್ಭದಲ್ಲಿಯೇ ಇವರೆಲ್ಲ ಮನೆಯನ್ನು ತಲುಪಿದ್ದರು.

 (ಮುಂದುವರಿಯುತ್ತದೆ..)

Tuesday, January 13, 2015

ಶೇರು ಹನಿಗಳು

ಮುಖ್ಯಸ್ಥ

ಸಾಮಾಜಿಕ ಜಾಲತಾಣಗಳಲ್ಲಿ
ಕಂಡ ಕಂಡದ್ದನ್ನೆಲ್ಲ
ಶೇರ್ ಮಾಡುವವನನ್ನು
ಶೇರೂಗಾರ ಎನ್ನಬಹುದೆ?

ತೋಫಾ..

ಹಿಂದುಸ್ಥಾನದ ಬಗ್ಗೆ
ಪ್ರತಿಯೊಂದನ್ನೂ ಶೇರ್
ಮಾಡುವವನನಿಗೆ
ಶೇರ್-ಎ-ಹಿಂದುಸ್ಥಾನ್
ಬಿರುದನ್ನು ಕೊಡಬಹುದು |

ಹೀಗೂ ಉಂಟೇ

ಸಾಮಾಜಿಕ ಜಾಲತಾಣದಲ್ಲಿ
ಅತಿ ಹೆಚ್ಚು ಶೇರ್
ಮಾಡುವ ಅಪ್ಪಂದಿರಿಗೆ
ಶೇರ್ಪಾ ಎನ್ನಬಹುದು |

ಪ್ರತಿದಾಳಿ

ಶೇರ್ ಮಾಡುವ ವ್ಯಕ್ತಿ
ಶೇರ್ ಮಾಡುವ ಇನ್ನೊಬ್ಬ
ವ್ಯಕ್ತಿಯ ಜೊತೆ ಸ್ಪರ್ಧೆಗಿಳಿದು
ದಾಳಿ-ಪ್ರತಿದಾಳಿ
ನಡೆಸಿದರೆ
ಶೇರ್ ಗೆ ಸವ್ವಾ ಶೇರ್
ಎನ್ನಬಹುದು |

Sunday, January 11, 2015

ರಾಜು ನಾಯಿಯ ನೆನಪು

           ನನಗೀಗಲೂ ನೆನಪಿದೆ. ನಾನು ಮನೆಯಲ್ಲಿ ಮೊಟ್ಟಮೊದಲು ಸಾಕಿದ್ದು ಒಂದು ನಾಯಿ. ಚಿಕ್ಕವನಿದ್ದಾಗ. ಅಂದರೆ ಪ್ರೈಮರಿ ವಯಸ್ಸು. 1 ರಿಂದ 4 ಕ್ಲಾಸಿನ ಒಳಗೆ. ಆ ನಾಯಿಗೆ ರಾಜೂ ಅಂತ ಹೆಸರಿಟ್ಟಿದ್ದೆ. ಸಾಮಾನ್ಯವಾಗಿ ನಾಯಿಗೆ ರಾಜೂ, ರಾಮೂ, ಟಿಪ್ಪು ಇತ್ಯಾದಿ ಹೆಸರು ಇಡುವುದು ಕಾಮನ್ನು. ಆ ದಿನಗಳಲ್ಲಿ ನಾನು ಚಿಕ್ಕವನಿದ್ದ ಕಾರಣ ಹೆಸರಿಗೆ ವಿಶೇಷ ಸರ್ಕಸ್ ಮಾಡಲಿಲ್ಲ. ರಾಜೂ ಎಂಬ ಸಾಮಾನ್ಯ ಹೆಸರನ್ನಿಟ್ಟಿದ್ದೆ.
(ಥೇಟ್ ಹಿಂಗೇ ಇತ್ತು ರಾಜು... )
               ಆ ರಾಜೂ ನಾಯಿಗೆ ನಾನೆಂದರೆ ಬಹಳ ಅಚ್ಚುಮೆಚ್ಚಾಗಿಬಿಟ್ಟಿತ್ತು ನೋಡಿ. ಪ್ರೈಮರಿ ಸಮಯದಲ್ಲಿ ಅತ್ಯಂತ ಹೆಚ್ಚಿನ ಕಿಲಾಡಿಯವನಾಗಿದ್ದ ನಾನು ಪರೀಕ್ಷೆಯಲ್ಲಿ ತೆಗೆದುಕೊಳ್ಳುವ ಮಾರ್ಕ್ಸುಗಳು ಅಷ್ಟಕ್ಕಷ್ಟೇ ಆಗಿತ್ತು. ನಾನು ಕಡಿಮೆ ಮಾರ್ಕು ತೆಗೆದುಕೊಂಡಾಗಲೆಲ್ಲ ಅಪ್ಪ-ಅಮ್ಮ ಜೋರಾಗಿ ಬೈದು, ಬಡಿದು ಮಾರ್ಕ್ಸ್ ವಾದಿ ಎನ್ನಿಸಿಕೊಳ್ಳುತ್ತಿದ್ದರು. ನಾನು ಬೆದರಿದ ಇಲಿಮರಿಯಂತೆ  ಸುಮ್ಮನಿದ್ದಾಗ ನನ್ನ ಪರ ವಹಿಸಿ ಧ್ವನಿ ಎತ್ತುತ್ತಿದ್ದವರೆಂದರೆ ಇಬ್ಬರೇ. ಒಬ್ಬರು ನನ್ನಜ್ಜ ಇಗ್ಗಜ್ಜ. ಇನ್ನೊಬ್ಬರು ರಾಜು ನಾಯಿ.
            ಅಜ್ಜ ನನ್ನನ್ನು ವಹಿಸಿಕೊಂಡು ಬರುವುದು ಸಾಮಾನ್ಯ ಸಂಗತಿ ಬಿಡಿ. ಆದರೆ ರಾಜು ನಾಯಿ.. ಮಜಾ ಅನ್ನಿಸಿದ್ದೇ ಆವಾಗ. ಬೀದಿ ಬದಿಯಲ್ಲೆಲ್ಲೋ ಬಿದ್ದುಕೊಂಡಿದ್ದ ನಾಯಿಯನ್ನು ಮನೆಗೆ ತಂದು, ಅವಿಭಕ್ತ ಕುಟುಂಬದ ನನ್ನ ಚಿಕ್ಕಪ್ಪಂದಿರ ವಿರೋಧದ ನಡುವೆಯೂ ಸಾಕಿದ ನನ್ನ ಮೇಲೆ ರಾಜುವಿಗೆ ಅದೇನೋ ವಿಶೇಷ ಪ್ರೀತಿ ಬೆಳೆದು ಬಿಟ್ಟಿತ್ತು. ಶಾಲೆಯಿಂದ ಸಂಜೆ ಮನೆಗೆ ಬಂದವನೇ ನಾನು ದೋಸೆಯನ್ನು ತಿನ್ನುವುದು ಪ್ರತಿಧಿನ ರೂಢಿ. ದೋಸೆಯನ್ನು ನಾನು ತಿನ್ನುವ ಮುನ್ನ ರಾಜುವಿಗೂ ಹಾಕಲೇಬೇಕು. ಇಲ್ಲವಾದರೆ ರಾಜುವಿನಿಂದ `ಅಯ್ಯೋ...' ಎನ್ನುವ ಊಳಾಟ ಗ್ಯಾರಂಟಿ. ನನ್ನನ್ನು ಯಾರಾದರೂ ಬಯ್ಯಲಿ, ಹೊಡೆಯಲು ಕೈಯೆತ್ತಿಕೊಂಡು ಬರಲಿ ಅಂತವರನ್ನು ಬೆನ್ನಟ್ಟಿ ಹೋಗುತ್ತಿತ್ತು ರಾಜು. ಅನೇಕರು ಇದನ್ನು ಪರೀಕ್ಷೆ ಮಾಡುವ ಸಲುವಾಗಿಯೇ ನನ್ನನ್ನು ಬೈದು, ಹೊಡೆದಿದ್ದೂ ಇದೆ ಎನ್ನಿ.
             ಭಾನುವಾರ ಬಂತೆಂದರೆ ನನಗೂ ರಾಜು ವಿಗೂ ಅದೇನೋ ಅಡಗರ. ಇಬ್ಬರೂ ಮನೆಯಿಂದ ಒಂದೋ ಒಂದೂವರೆಯೂ ಕಿ.ಮಿ ದೂರದಲ್ಲಿದ್ದ ಕುಚಗುಂಡಿ ಗದ್ದೆಯತ್ತ ಹೊರಟುಬಿಡುತ್ತಿದ್ದೆವು. ಅಲ್ಲೇ ಇರುವ ಕಾಕಾಲ ಗದ್ದೆಯಲ್ಲಿ ವಿಶಾಲವಾಗಿ ಹರಿಯುವ ಅಘನಾಶಿನಿ ನದಿಯನ್ನು ದಾಟಿ ನಾನು ಆಚೆ ದಡದಲ್ಲಿ ನಿಂತು `ರಾಜೂ ಕುರೂಯ್...' ಎಂದು ಕರೆದರೆ ಒಂದೆರಡು ಸಾರಿ ನೀರನ್ನು ಕಂಡು ಚಡಪಡಿಸುವ ರಾಜು ಏಕಾ ಏಕಿ ನೀರಿಗೆ ಧುಮುಕಿ ಲಬಕ್ ಲಬಕ್ ಎಂದು ಮುಳುಗುತ್ತ, ಯಡ್ರಾ ಬಡ್ರಾ ಈಸುತ್ತ ನಾನಿದ್ದ ದಡಕ್ಕೆ ಬಂದಾಗ ನನ್ನಲ್ಲಿ ನಗುವಿರುತ್ತಿತ್ತು. ಇತ್ಲಾ ದಡಕ್ಕೆ ಬಂದ ನಾಯಿ ನದಿ ದಾಟಿದ್ದ ಕಾರಣಕ್ಕೆ ತನ್ನ ವದ್ದೆಯಾದ ಮೈಯನ್ನು ಪಟ್ಟಾ ಪಟ್ಟಾ ಎಂದು ನನ್ನತ್ತ ಕುಡುವುತ್ತಿತ್ತು.. `ಹಚ್ಯಾ ಹೊಲಸು ಕುನ್ನಿ..' ಎಂದು ನಾನು ಬಯ್ಯುತ್ತಿದ್ದೆನಾದರೂ ಅಕ್ಕರೆಯ ಪ್ರಿತಿಗೆ ಎನ್ನುವುದು ಸುಳ್ಳಲ್ಲ ನೋಡಿ.
          ಒಂದು ಭಾನುವಾರ ನಾನು ರಾಜು ಜೊತೆಗೆ ಗದ್ದೆಗೆ ಹೋಗಿದ್ದೆ. ಯಾವಾಗಲೂ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಚಿಕ್ಕಪ್ಪಂದಿರಾದ ನಾಗೇಂದ್ರ ಹಾಗೂ ಮಹೇಶರು ಆವತ್ತು ಯಾವ ಕಾರಣಕ್ಕೋ ಅಲ್ಲಿರಲಿಲ್ಲ. ನಾನು ಹೋದವನಿಗೆ ಹೊತ್ತು ಹೋಗಬೇಕಲ್ಲ. ಮದ್ಯಾಹ್ನದ ಹೊತ್ತು ಬೇರೆ. ಮನೆಯಲ್ಲಿದ್ದರೆ ಊಟಕ್ಕೆ ಬಾ ಎಂಬ ಬುಲಾವೂ ಬರುತ್ತಿತ್ತು. ಹೋದವನು ಗದ್ದೆಯಲ್ಲೆಲ್ಲ ಸುತ್ತಾಡಿದೆ. ಅಲ್ಲೊಂದು ಕಡೆ ಗದ್ದೆಯ ಹಾಳಿಯ ಮೇಲೆ ನಾಲ್ಕೈದು ಬಿಳಿಯ ಮೊಟ್ಟೆಗಳು ಕಾಣಿಸಿತು. ಕುತೂಹಲದಿಂದ ನೋಡುತ್ತಿದ್ದಂತೆ ರಾಜು ಒಂದು ಮೊಟ್ಟೆಯನ್ನು ಕಚ್ಚಿಯೇ ಬಿಟ್ಟಿತು. ಪಾ...ಪ  ಆ ಮೊಟ್ಟೆಯಲ್ಲಿ ಇನ್ನೊಂದು ವಾರ ಕಳೆದಿದ್ರೆ ಹಕ್ಕಿಯಾಗಿ ಹಾರಿ ಹೊರ ಹೋಗಲು ಬಯಸಿದ್ದ ಬೆಳ್ಳಕ್ಕಿ ಮರಿಯೊಂದು ಜೀವ ತಳೆಯುತ್ತಿತ್ತು. ರಾಜು ಮೊಟ್ಟೆಯೊಡೆದದ್ದೇ ಒಡೆದದ್ದು ಒಂದೆರಡು ಸಾರಿ ವಿಲಿ ವಿಲಿ ಒದ್ದಾಡಿದ ಆ ಹಕ್ಕಿಯ ಜೀವ ಚಟ್ಟನೆ ಹಾರಿ ಹೋಯಿತು. ನಾನು ಸಿಟ್ಟಿನಿಂದ ರಾಜುವಿನ ಬೆನ್ನಿಗೆ ಗನಾಕಿ ಬಡಿದೆ. ಕಂಯ್ಕ್ ಎಂದು ಓಡಿದ ನಾಯಿ ಸುಮಾರು ಹೊತ್ತಿನ ವರೆಗೂ ನನ್ನಿಂದ ಸುರಕ್ಷಿತ ಅಂತರವನ್ನೇ ಕಾಪಾಡಿಕೊಂಡಿತ್ತು.
          ಹಕ್ಕಿಯ ಮೊಟ್ಟೆ ಒಡೆಯಿತಲ್ಲ ಛೇ,. ಎಂದುಕೊಂಡು ಮುಂದಕ್ಕೆ ಬರುತ್ತಿದ್ದಂತೆ ಅಲ್ಲೊಂದು ಕಡೆ ಕುಚಗುಂಡಿಯ ಒಬ್ಬಾತ ದನಗಳನ್ನು ಮೇಯಿಸುತ್ತಿದ್ದ. ಹೆಸರು ಸರಿಯಾಗಿ ನೆನಪಾಗುತ್ತಿಲ್ಲ. ಕುಚಗುಂಡಿಯ ಮಂಜ ಎನ್ನುವವನ ಮಗ ಎಂಬುದು ಅಸ್ಪಷ್ಟವಾಗಿ ನೆನಪಿದೆ. ಅವನ ಬಳಿ ಹೋದವನೇ ಅದೂ ಇದೂ ಮಾತಿಗೆ ನಿಂತೆ. ಆತ ಸುಮಾರು ಹೊತ್ತು ಹಲುಬಿದ. ಅಷ್ಟರಲ್ಲಿ ಅಲ್ಲೆಲ್ಲೋ ಅಡ್ಡಾಡಿದ ರಾಜು ಹತ್ತಿರ ಬಂದಿತು. ದನ ಮೇಯಿಸುತ್ತಿದ್ದವನ ಕಣ್ಣಿಗೆ ರಾಜು ಬಿದ್ದಿತು. ಅಲ್ಲಿ ಹುಲ್ಲು ಮೇಯುತ್ತಿದ್ದ ದನಗಳ ಕಣ್ಣಿಗೆ ರಾಜು ಬಿದ್ದ ಪರಿಣಾಮ ಒಂದೆರಡು ದನಗಳು ಬುಸ್ಸೆನ್ನುತ್ತ ರಾಜುವನ್ನು ಬೆನ್ನಟ್ಟಿ ಬಂದವು. ಅವುಗಳ ಭಯಕ್ಕೆ ಹೆದರಿ ನನ್ನ ಕಾಲ ಬುಡದಲ್ಲಿ ಬಂದು ಮಲಗಿತು ರಾಜು. ರಾಜುವನ್ನು ಕಂಡಾತ `ನಂಗೆ ಕೊಡ್ರಾ ಈ ಕುನ್ನಿಯಾ..' ಎಂದ ದನಕಾಯುವವ. ನಾನು ಆಗೋದಿಲ್ಲ ಎಂದೆ. ಮತ್ತೊಂದೆರಡು ಸಾರಿ ಕೇಳಿದ. ನಾನು ಮತ್ತೆ ನಕಾರಾತ್ಮಕ ಉತ್ತರ ನೀಡಿದೆ. ಆತ ಸುಮ್ಮನಾದ.
            ಅಲ್ಲೇ ಒಂದು ಮಾಳ ಇತ್ತು. ನಾನು ಸೀದಾ ಮಾಳ ಹತ್ತಿದೆ. ಕೆಳಗೆ ನಿಂತಿದ್ದ ರಾಜು ಮತ್ತೆ ಚಡಪಡಿಸಲಾರಂಭಿಸಿತು. ನನ್ನ ಹಾಗೂ ರಾಜುವನ್ನು ನೋಡುತ್ತಿದ್ದ ಆ ದನಕಾಯುವ ವ್ಯಕ್ತಿ, `ಹೋಯ್.. ಆ ನಾಯಿಯನ್ನು ಹೊತ್ಕಂಡು ಹೋಗ.. ಮಾಳದ ಮೇಲೆ ಹತ್ಸಾ...' ಎಂದ. ನಾನು ತುಂಟ ಎಂದು ಆಗಲೇ ಹೇಳಿದ್ದೆನಲ್ಲಾ.. ಆತ ಹೇಳಿದಂತೆ ಮಾಡಿದೆ. ಮಾಳದ ಮೇಲೆ ಹತ್ತಿಸಿದೆ. ಮೊದ ಮೊದಲು ಹೆದರಿದಂತೆ ಇದ್ದ ರಾಜು ಕೊನೆಗೆ ಮಾಳದಲ್ಲೇ ಕುಣಿಯಲಾರಂಭಿಸಿತು. ಸುಮಾರು ಹೊತ್ತು ಕಳೆದ ಮೇಲೆ ನನಗೆ ಹಸಿವಾಗಲಾರಂಭಿಸಿತು. ನಾನು ಸೀದಾ ಮಾಳದಿಂದ ಇಳಿದೆ. ಹಾಗೆ ಇಳಿಯುವವನು ರಾಜುವನ್ನು ಹಿಡಿದು ಇಳಿಯಲಾರಂಭಿಸಿದೆ. ಕೊನೆಗೆ ಅದೇ ದನಕಾಯುವವನು `ರಾಜುವನ್ನು ಅಲ್ಲೇ ಬಿಟ್ಟು ಇಳಿಯಾ.. ಎಂತಾ ಮಾಡ್ತೈತಿ ನೋಡ್ವಾ...' ಎಂಬ ಐಡೀರಿಯಾ ಕೊಟ್ಟ.
            ನನಗೆ ಸರಿಯೆನ್ನಿಸಿ ನಾಯಿಯನ್ನು ಮಾಳದ ಮೇಲೆಯೇ ಬಿಟ್ಟು ಕೆಳಕ್ಕಿಳಿದೆ. ಇಳಿದು ಮನೆಗೆ ಹೊರಟವನಂತೆ ನಟಿಸಿದೆ. ರಾಜು ಒಂದೆರಡು ಸಾರಿ ನೋಡಿತು. ಚಡಪಡಿಸಿತು. ಮಾಳವೆಂದರೆ ಸಾಮಾನ್ಯವಾಗಿ ನೆಲದಿಂದ 6-7 ಅಡಿ ಎತ್ತರದಲ್ಲಿರುತ್ತದೆ. ಚಡಪಡಿಸಿದ ನಾಯಿ ಸೀದಾ ಜಿಗಿದೇ ಬಿಟ್ಟಿತು. ಜಿಗಿದ ನಾಯಿ ಮತ್ತೆ ಮೇಲೇಳುವಾಗ ಕಂಯೋ ಕಂಯೋ ಎಂದು ಕೂಗುತ್ತಲೇ ಇತ್ತು. ನಾನು ಏನೋ ಭಾನಗಡಿ ಆಗಿದೆ ಎಂದು ಹೆದರಿದೆ. ನಾಯಿಯನ್ನು ಹೊತ್ತುಕೊಂಡು ಓಡಿದೆ. ಗದ್ದೆಯಲ್ಲಿಯೇ ಇದ್ದ ಮನೆಯಲ್ಲಿ ನಾಯಿಯನ್ನು ಬಿಟ್ಟವನೇ ಮನೆಯ ಕಡೆಗೆ ಕಾಲ್ಕಿತ್ತೆ.
           ವಾಸ್ತವದಲ್ಲಿ ಆಗಿದ್ದೇನೆಂದರೆ ಮಾಳದಿಂದ ಕೆಳಕ್ಕೆ ನಾಯಿ ಜಿಗಿದಿದ್ದೇನೋ ಖರೆ. ಮಾಳಕ್ಕೆ ಹತ್ತಲು ಬಿದಿರಿನಿಂದ ಏಣಿಯೊಂದನ್ನು ಮಾಡಿದ್ದರು. ಆ ಏಣಿಯಿಂದ ಚಿಕ್ಕ ಚೂಪಾದ ಚೂರೊಂದು ಮುಂದಕ್ಕೆ ಚಾಚಿಕೊಂಡಿತ್ತು. ನಾಯಿ ಜಿಗಿದಿದ್ದೇ ಈ ಚೂರಿಗೆ ತಾಗಿತು. ಕಾಲೆಜ್ಜೆ ಸಿಕ್ಕಿಬಿದ್ದು ತಲೆಕೆಳಗಾಗಿ ನಾಗಿ ಬಿದ್ದಿತ್ತು. ಆ ರಭಸಕ್ಕೆ ನಾಯಿಯ ಕಾಲೊಂದು ಮುರಿದು ಬಿಟ್ಟಿತ್ತು. ನಾನು ಗದ್ದೆಯಲ್ಲಿ ಬಿಟ್ಟವನೇ ಮನೆಗೆ ಓಡಿ ಮನೆಯಲ್ಲಿಯೇ ನಿಂತಿದ್ದು.
          ನಾನು ಉಸಿರು ಬಿಡುತ್ತ ಓಡಿ ಬಂದಿದ್ದನ್ನು ನೋಡಿದ ಮನೆಯವರಿಗೆ ನಾನೇನೋ ಭಾನಗಡಿ ಮಾಡಿರುವುದು ಪಕ್ಕಾ ಆಯಿತು. ಆದರೆ ಏನು ಭಾನಗಡಿ ಮಾಡಿದ್ದೇನೆ ಎನ್ನುವುದು ತಿಳಿಯಲಿಲ್ಲ. ಪೊಲೀಸ್ ಸ್ಟೇಷನ್ನುಗಳಲ್ಲಿ ನಡೆಯುವುದಕ್ಕಿಂತ ಹೆಚ್ಚಿಗೆ ತನಿಖೆ ನಡೆಯಿತು. ನಾನು ಏನನ್ನೂ ಬಾಯಿ ಬಿಡಲಿಲ್ಲ. ಆ ಸಮಯದಲ್ಲೇ ಮನೆಯವರ್ಯಾರೋ ರಾಜು ನಾಯಿ ಇಲ್ಲದ್ದನ್ನು ಗಮನಿಸಿದರು. ಅದಕ್ಕೆ ತಕ್ಕಂತೆ ಮತ್ಯಾರೋ ರಾಜು ನಾಯಿ ನನ್ನ ಜೊತೆಗೆ ಹೋಗಿದ್ದನ್ನೂ ಕಂಡಿದ್ದರು. ಅವರು ಹೇಳಿದ್ದೇನೆಂದರೆ ನಾನು ರಾಜುವಿಗೆ ಏನೋ ಮಾಡಿಬಿಟ್ಟಿದ್ದೇನೆ. ಹಾಗಾಗಿ ರಾಜು ಕಾಣಿಸುತ್ತಿಲ್ಲ ಎನ್ನುವುದು.
           ಆಗ ಶುರುವಾಯ್ತು ನೋಡಿ ಅಪ್ಪನ ಹೊಡೆತ... ಅಬಾಬಾಬಾ... ಕೊನೆಗೆ ನಾನು ಬಾಯಿಬಿಟ್ಟಿದ್ದೆ. ಆ ಮದ್ಯಾಹ್ನ ೂಟ ಮುಗಿಸಿ ಮದ್ಯಾಹ್ನದ ಗುಕ್ಕು ನಿದ್ದೆ ಮುಗಿಸಿ ಸಂಜೆ ಆಗಬೇಕು ಎನ್ನುವಷ್ಟರಲ್ಲಿ ಗದ್ದೆಯ ಕಡೆಗಿಂದ ನಿಧಾನವಾಗಿ ಕಾಲನ್ನು ಎಳೆಯುತ್ತ ಬರುತ್ತಿತ್ತು ನೋಡಿ ರಾಜು ಕುನ್ನಿ.. ಸಧ್ಯ ಏನೂ ಆಗಿಲ್ಲವಲ್ಲ ಎನ್ನುವ ನಿಟ್ಟುಸಿರು ನನ್ನಲ್ಲಿ. ಆದರೆ ಆ ಘಟನೆಯ ನಂತರ ರಾಜು ಮಾತ್ರ ನನ್ನ ಪರವಾಗಿ ನಿಲ್ಲುವುದನ್ನು ನಿಲ್ಲಿಸಿತ್ತು. ಯಾರಾದರೂ ನನಗೆ ಬೈಯಲಿ, ಹೊಡೆಯಲಿ ಅದು ಗುರ್ರೆಂದು ಅವರನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಿಬಿಟ್ಟಿತ್ತು. ಪಾ..ಪ ಅದೇನೋ ಆಘಾತವಾಗಿತ್ತು ಅದಕ್ಕೆ.
            ಇಂತಹ ರಾಜು ನನ್ನನ್ನು ಶಾಲೆಗೆ ಕಳಿಸಿಕೊಡಲು ಬರುತ್ತಿತ್ತು. ನಮ್ಮೂರಿನಿಂದ ನಾನು ಹೋಗುತ್ತಿದ್ದ ಅಡ್ಕಳ್ಳಿ-ಕೋಡ್ಸಿಂಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2.5 ಕಿ.ಮಿ ದೂರವಾಗುತ್ತದೆ. ಎಷ್ಟೇ ವೇಗವಾಗಿ ನಡೆದರೂ 30 ನಿಮಿಷ ಬೇಕೇ ಬೇಕು. ನಾನು, ನನ್ನ ಜೊತೆಗೆ ಬಾಳಗಾರ್ ಗಪ್ಪತಿ, ಹಂಚಳ್ಳಿಯ ಶ್ರೀಪಾದ, ಶ್ರೀಪಾದನ ತಂಗಿ ನಾಗರತ್ನಾ, ಸಂತೋಷಣ್ಣ, ಮೇಲಿನಮನೆಯ ರಂಜು ಇಷ್ಟು ಜನ ಶಾಲೆಗೆ ಹೋಗುವವರು. ದಾರಿಯಲ್ಲಿ ದೊಡ್ಡದೊಂದು ಗುಡ್ಡ, ಗವ್ವೆನ್ನುವ ಕಾಡು, ಹೆಣ ಸುಡುವ ಸ್ಮಷಾನ ಇಷ್ಟ ಸಿಕ್ಕೇ ಸಿಗುತ್ತಿತ್ತು. ನಮ್ಮ ಧೈರ್ಯಕ್ಕೆ ರಾಜು ಬರುತ್ತಿದ್ದ. ರಾಜುವಿನ ಧೈರ್ಯಕ್ಕೆ ನಾವಿರುತ್ತಿದ್ದೆವು.
           ಶಾಲೆಗೆ ಹೊರಟ ನಮ್ಮ ಹಿಂದೋ, ಮುಂದೋ ಬಾಲ ಅಲ್ಲಾಡಿಸುತ್ತ ಬರುತ್ತಿದ್ದ ರಾಜುವನ್ನು ದಾರಿ ಮಧ್ಯ ಅನೇಕ ಸಾರಿ `ರಾಜು.. ಮನೆಗೆ ನಡಿಯಾ...' ಎಂದು ನಾನು ಬಯ್ಯುತ್ತಿದ್ದರೂ ಆತ ಜೊತೆಗೆ ಬರುತ್ತಿದ್ದ. ಮುಂದೋ, ಹಿಂದೋ ಎಸ್ಕಾರ್ಟ್ ಮಾಡುತ್ತಿದ್ದ. ಅಂತವನ ಬೆನ್ನ ಮೇಲೆ ಒಂದೆರಡು ಸಾರಿ ನಾನು ನನ್ನ ಪಾಟಿಚೀಲವನ್ನು ಹಾಕಿ ಕಟ್ಟಿ ಕಳಿಸಿದ್ದೂ ಇದೆ. ದಾರಿ ಮಧ್ಯದಲ್ಲಿ ಅವನ್ನು ಬೀಳಿಸಿ, ಬಾಲ ಅಲ್ಲಾಡಿಸುತ್ತಾ  ನಿಂತಿದ್ದ ರಾಜು ನನ್ನ ಕಣ್ಣೆದುರಿಗೆ ಇನ್ನೂ ಸ್ಪಷ್ಟವಾಗಿದೆ. ನಮ್ಮ ಜೊತೆಗೆ ಶಾಲೆಯ ಬಳಿ ಬರುವ ರಾಜು ಶಾಲೆಯ ಆಟದ ಬಯಲಿನಲ್ಲಿ ನಿಂತು ಎದುರು ಒಮ್ಮೆ ನೋಡುತ್ತಿದ್ದ. ಬಯಲಿನಲ್ಲಿ ಯಾವುದಾದರೂ ಬೇರೆಯ ನಾಯಿಗಳಿದ್ದರೆ ಸದ್ದಿಲ್ಲದೇ ಮನೆಗೆ ವಾಪಾಸಾಗುತ್ತಿದ್ದ ರಾಜು, ಯಾರೂ ಇಲ್ಲ ಎಂದಾದರೆ ಮೈದಾನದಲ್ಲೇ ಸುತ್ತಾಡುತ್ತಿದ್ದ. ನಾನು ಕಲ್ಲು ಹೊಡೆದು ಓಡಿಸಿದ ಮೇಲೆಯೇ ಮನೆಗೆ ವಾಪಾಸಾಗುತ್ತಿದ್ದ. ಅನೇಕ ಸಾರಿ ಈ ಮೈದಾನದಲ್ಲಿಯೇ ರಾಜು ಬೇರೆಯ ನಾಯಿಗಳೊಂದಿಗೆ ಜಿದ್ದಾ ಜಿದ್ದಿನ ಕಾಳಗ ಮಾಡಿದ್ದನ್ನು ನಾನು ನೋಡಿದ್ದೇನೆ. ಗಾಯ ಮಾಡಿಕೊಂಡು ಬರುತ್ತಿದ್ದ ನಾಯಿಗೆ ಬೂದಿಯನ್ನು ಹಚ್ಚಿ ಸಮಾಧಾನ ಪಡಿಸಿದ್ದೇನೆ.
             ರಾಜು ಇದ್ದ ಸಮಯದಲ್ಲಿಯೇ ಬೆಳ್ಳ ಎನ್ನುವ ಇನ್ನೊಂದು ನಾಯಿ ನಮ್ಮ ಮನೆಯಲ್ಲಿತ್ತು. ಎಲ್ಲಿಂದಲೋ ಬಂದು ನಮ್ಮನೆಯಲ್ಲಿ ಉಳಿದಿದ್ದ ನಾಯಿ ಅದು. ಚಿಕ್ಕಪ್ಪಂದಿರು ಈ ನಾಯಿಯನ್ನು ಅಕ್ಕರೆಯಿಂದ ಸಾಕಿದ್ದರು. ಬೆಳ್ಳ ಹಾಗೂ ರಾಜು ಅಣ್ಣ ತಮ್ಮಂದಿರಂತಿದ್ದರು. ನಮ್ಮ ಮನೆಯಲ್ಲಿಯೇ ಅವರು ಜಾಗವನ್ನೂ ಪಾಲು ಮಾಡಿಕೊಂಡಿದ್ದರು. ಬೆಳ್ಳ ಹೆಬ್ಬಾಗಿಲ ಬಳಿ ತನ್ನ ಕಾರ್ಯಸ್ಥಾನ ಮಾಡಿಕೊಂಡಿದ್ದರೆ ರಾಜು ಹಿತ್ಲಾಕಡಿಗೆ ಉಳಿದಿದ್ದ. ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಅಡಿಕೆ ಬೇಯಿಸಲು ಹೆಬ್ಬಾಗಿಲ ಬಳಿ ಹಾಕುತ್ತಿದ್ದ ದೊಡ್ಡ ಒಲೆ ಬೆಳ್ಳನ ವಾಸಸ್ತಾನವಾಗಿದ್ದರೆ ಹಿತ್ಲಾಕಡಿಗೆ ಬಚ್ಚಲಮನೆಯ ಒಲೆ ರಾಜುವಿನ ಅಂತಪುರವಾಗಿತ್ತು. ಇಬ್ಬರಿಗೂ ಭಯಂಕರ ದೋಸ್ತಿಯಿದ್ದರೂ ದೋಸೆ ಹಾಕುವಾಗ ಅಥವಾ ಅನ್ನ ಹಾಕುವಾಗ ಮಾತ್ರ ಪಕ್ಕಾ ಶತ್ರುಗಳ ತರ. ಪರಸ್ಪರ ಹಲ್ಲು ತೋರಿಸುವುದು, ಗುರ್ರೆನ್ನುವುದು, ಕಾಲು ಕೆರೆಯುವುದು ನಡೆದೇ ಇತ್ತು. ಹೀಗೆ ಜಗಳ ಆರಂಭವಾದ ಸಂದರ್ಭದಲ್ಲಿ ಇವೆರಡರ ಪೈಕಿ ಸ್ವಲ್ಪ ಸಣ್ಣದಾಗಿದ್ದ ರಾಜುವೇ ಸೋಲೊಪ್ಪಿಕೊಳ್ಳುತ್ತಿತ್ತು ಬಿಡಿ. ಆಮೇಲೆ ನಾನು ಬೆಳ್ಳನನ್ನು ಸರಪಳಿಯಿಂದ ಕಟ್ಟಿಹಾಕಿದ ನಂತರ ರಾಜುವಿಗೆ ಪ್ರತ್ಯೇಕವಾಗಿ ಅನ್ನ ಹಾಕುತ್ತಿದ್ದೆ. ಅನ್ನ ಹಾಕಿದವನು ಅಲ್ಲೇ ನಿಂತಿದ್ದರೆ ರಾಜು ನನಗೂ ಗುರ್ರೆನ್ನುತ್ತಿತ್ತು. ಆಗ ಮಾತ್ರ ನಾಯಿಯ ಬೆನ್ನು ಮುರಿದು ಬಿಡಬೇಕು ಎನ್ನುವಷ್ಟು ಸಿಟ್ಟು ಬರುತ್ತಿತ್ತು.
             ನಾನು ರಾಜುವನ್ನು ಸಾಕಿರುವುದು ನನ್ನ ಚಿಕ್ಕಪ್ಪಂದಿರಿಗೆ ಇಷ್ಟವಿರಲಿಲ್ಲ. ಮೊದ ಮೊದಲು ಅದನ್ನು ಸಾಕಿದ್ದು ಇಷ್ಟ ಪಟ್ಟವರಂತೆ ನಟಿಸಿದ್ದರು. ಆದರೆ ಕೊನೆ ಕೊನೆಗೆ ಅವರು ಮಾತು ಮಾತಿಗೂ ಬಯ್ಯತೊಡಗಿದ್ದರು. ನಾನು ಚಿಕ್ಕವನಾಗಿದ್ದ ಕಾರಣ ನಾನೇನೇ ಹೇಳಿದರೂ ಅದಕ್ಕೆ ಬೆಲೆಯೇ ಇರುತ್ತಿರಲಿಲ್ಲ. ಅಪ್ಪಯ್ಯ ಮನೆ ಯಜಮಾನನಾಗಿದ್ದ ಕಾರಣ ತಮ್ಮಂದಿರ ಬೇಜಾರನ್ನು ಶಮನ ಮಾಡುವ ಕಾಯಕದಲ್ಲಿ ನಿರತನಾಗುತ್ತಿದ್ದ. ಈಗಿನ ರಾಜಕಾರಣಿಗಳು ಹೇಗೆ ಅಲ್ಪ ಸಂಖ್ಯಾತರನ್ನು ಓಲೈಸುತ್ತಾರೋ ಹಾಗೆ.
           ನಾನು ಅಥವಾ ನನ್ನಮನೆಯಲ್ಲಿ ಏನೇ ಒಳ್ಳೆಯದನ್ನು ಸಾಕಿದರೂ, ವಸ್ತುಗಳನ್ನು ಸಾಕಿದರೂ ಅದನ್ನು ನನಗೆ ಕೊಡಿ ಎಂದು ಕೇಳುವವರು ಆಗಲೂ ಇದ್ದರು ಈಗಲೂ ಇದ್ದಾರೆ. ಹೀಗಿದ್ದಾಗ ಚಾರೆಕೋಣೆಯ ಒಬ್ಬರು ನಮ್ಮೂರಿಗೆ ಬಂದಿದ್ದರು. ನಮ್ಮ ಮನೆಯ ಪಕ್ಕದ ಮನೆಗೆ ಚಾರೇಕೋಣೆಯ ಸಂಬಂಧವೂ ಇದೆ ಎನ್ನಿ. ಬಂದವರೇ ಅವರ ಮನೆ ಕಾಯಲು ನಾಯಿಯೊಂದು ಬೇಕು. ರಾಜುವನ್ನು ಕೊಡುತ್ತೀರಾ ಎಂದು ಕೇಳಿದರು. ನಾನು ಇಲ್ಲ ಎಂದೆ. ಆದರೆ ಅಪ್ಪ ತಮ್ಮಂದಿರನ್ನು ಓಲೈಸುವ ಸಲುವಾಗಿ ರಾಜುವನ್ನು ಕೊಟ್ಟುಬಿಡಲು ನಿರ್ಧಾರ ಮಾಡಿದ್ದರು. ನಾನು ಶಾಲೆಗೆ ಹೋಗಿದ್ದ ಸುಸಂದರ್ಭವನ್ನೇ ನೋಡಿ ರಾಜುವನ್ನು ಕೊಟ್ಟು ಹಾಕಿದ್ದರು. ಮನೆಗೆ ಬಂದವನು ನಾನು ಆ ದಿನ ಮಾಡಿದ ರಂಪಾಟ ಅಷ್ಟಿಷ್ಟಲ್ಲ ಬಿಡಿ. ಆ ದಿನ ನನಗೆ ಮನೆಯಲ್ಲಿನ ಎಲ್ಲ ಸದಸ್ಯರೂ ಯಥಾನುಶಕ್ತಿ ಹೊಡೆದು ಬಿಟ್ಟಿದ್ದರು. ನಾನು ಸುಮ್ಮನಾಗಿರಲಿಲ್ಲ.
            ಅತ್ತ ಚಾರೆಕೋಣೆಗೆ ಹೋದ ರಾಜು ಸುಮ್ಮನಿರುತ್ತದೆಯೇ? ಅಲ್ಲಿ ತಾನೂ ಪ್ರತಿಭಟನೆ ಶುರುಮಾಡತೊಡಗಿತ್ತು. ಮೊದಲೆರಡು ದಿನ ಊಟ ಮಾಡಲಿಲ್ಲ. ಏನೋ ರೋಗ ಬಂದವರಂತೆ ನಟಿಸಿತು. ಕೊನೆಗೆ ಹಸಿವು ಸಿಕ್ಕಾಪಟ್ಟೆ ಹೆಚ್ಚಿದಾಗ ಹಾಲು ಕುಡಿದು ಅನ್ನ ಊಟ ಮಾಡಿತಂತೆ. ನಾಲ್ಕು ದಿನಕ್ಕೆಲ್ಲಾ ನಾಯಿ ಅವರ ಮನೆಯವರಂತೆ ಆಯಿತು. ನಾಯಿಗೆ ಹಳೆಯದೆಲ್ಲ ಮರೆತಿದೆ. ಇನ್ನು ತೊಂದರೆಯಿಲ್ಲ ಎಂದು ಕಟ್ಟಿದ್ದ ಸರಪಳಿ ಬಿಚ್ಚಿ ಬಿಟ್ಟರು. ಆಗ ನಾಯಿಯ ಅಸಲಿ ಬಣ್ಣ ಬಯಲಾಯಿತು ನೋಡಿ. ಸೀದಾ ಅಲ್ಲಿಂದ ಓಡಿದ ರಾಜು  ನಾಲ್ಕು ಸಾರಿ ಅಘನಾಶಿನಿ ನದಿಯನ್ನು ದಾಟಿ, ಒಂದು ಒಪ್ಪತ್ತಿನೊಳಗೆಲ್ಲ ನಮ್ಮ ಮನೆಗೆ ಹಾಜರಾಗಿಬಿಟ್ಟಿತ್ತು.
            ಧರಿದ್ರ ನಾಯಿ ಮತ್ತೆ ಬಂತಾ..? ಎಂದು ಚಿಕ್ಕಪ್ಪ ಬಯ್ಯುತ್ತಿದ್ದರೆ `ತಮಾ.. ನೋಡಾ... ನಾಯಿ ಬಂತಲಾ... ಉಂಚಳ್ಳಿ ಜಲಪಾತದ ಹತ್ತಿರದಿಂದ ನಡೆದುಕೊಂಡು ಬಂತಲಾ.. ಅದಕ್ಕೊಂದು ದೋಸೆ ಹಾಕಾ...' ಎಂದು ಅಮ್ಮ ಖುಷಿಯಿಂದ ಹೇಳಿದ್ದು ಇನ್ನೂ ನೆನಪಿನಲ್ಲಿದೆ. ಆ ದಿನದಿಂದ ಮತ್ತೆ ರಾಜು ಹಾಗೂ ನಾನೂ ಒಂದೇ ದೋಣಿಯ ಕಳ್ಳರಾಗಿಬಿಟ್ಟಿದ್ದೆವು.
             ಇದಾಗಿ ಆರೆಂಟು ತಿಂಗಳಾಗಿತ್ತು. ನಮ್ಮ ಮನೆಯಲ್ಲಿ ಕೊನೆಕೊಯ್ಲಿನ ಹಂಗಾಮು. ಮನೆಯಲ್ಲಿ ಕೊನೆ ಕೊಯ್ದಿದ್ದರು. ಸಿಕ್ಕಾಪಟ್ಟೆ ಚಳಿ ಬೇರೆ. ಜನವರಿಯೇನೋ. ಅಂಗಳದಲ್ಲಿ ಅಡಿಕೆ ಬೇಯಿಸಲು ಬೆಂಕಿ ಹಾಕಿದ್ದರು. ಆ ಬೆಂಕಿಯ ಮುಂದೆ ರಾಜು ಮಲಗಿದ್ದ. ಯಾವತ್ತೂ ಆ ಒಲೆಯ ಎದುರು ಮಲಗುತ್ತಿದ್ದ ಬೆಳ್ಳ ಆವತ್ತು ಮಾತ್ರ ಸದ್ದಿರದೇ ಮನೆಯ ಒಳಗೆ ಬಂದು ರಬ್ಬಿಕೊಂಡು ಮಲಗಿದ್ದ. ರಾತ್ರಿ ಯಾವುದೋ ಜಾಗದಲ್ಲಿ  ನಾಯಿ ದೊಡ್ಡದಾಗಿ ಕೂಗಿದ ಸದ್ದು. ಆ ನಂತರ ನಾಯಿ ಕಂಯೋ.. ಎಂದು ಕೂಗಿದ್ದೂ ಕೇಳಿಸಿತು. ತಕ್ಷಣ ಚಿಕ್ಕಪ್ಪಂದಿರು ದೊಡ್ಡ ಬಡಿಗೆಯನ್ನು ಹಿಡಿದು ಮನೆಯಿಂದ ಹೊರಕ್ಕೆ ಬಂದಿದ್ದರು. ಆದರೆ ಅಷ್ಟರಲ್ಲಿ ಗುರ್ಕೆ (ಹುಲಿಯ ಜಾತಿಗೆ ಸೇರಿದ್ದು, ಮರಿ ಚಿರತೆ ಎನ್ನಬಹುದು) ರಾಜುವನ್ನು ಕಚ್ಚಿ ಹೊಡಿದುಕೊಂಡು ಹೋಗಿತ್ತು.
         ಬೆಳಗ್ಗೆ ಎದ್ದ ನಾನು ರಾಜುಗಾಗಿ ಹುಡುಕಿದರೆ ಎಲ್ಲಿದೆ ನಾಯಿ? `ತಮಾ ಇಲ್ನೋಡು.. ರಾಜುವನ್ನು ಎಳೆದೊಯ್ದ ಗುರುತು.. ನೋಡು ನೆಲ ಹೆಂಗೆ ಉಗುರಿನಲ್ಲಿ ಗಟ್ಟಿಯಾಗಿ ಗೀರಿದ್ದು.. ಗುರ್ಕೆ ಹಿಡಿದಾಗ ತಪ್ಪಿಸಕ್ಕಂಬಲೆ ಭಾರಿ ಪ್ರಯತ್ನ ಮಾಡಿತ್ತು ಕಾಣ್ತು ನೋಡು..' ಎಂದರು ಅಮ್ಮ. ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಬಂದ ಬೆಳ್ಳ ರಾಜುವನ್ನು ಗುರ್ಕೆ ಹಿಡಿದ ಜಾಗವನ್ನು ಮೂಸಿ ನೋಡಿದ. ಹೂಕ್ಷ್.. ಎಂದು ಒಮ್ಮೆ ಸೀನಿದ. ರಾತ್ರಿ ಗುರಕೆ ಬಂದಿರುವುದನ್ನು ಅರಿತ ಬೆಳ್ಳ ಮನೆಯೊಳಕ್ಕೆ ಹೊಕ್ಕಿದ್ದನೇನೋ. ರಾಜುವಿಗೆ ಅದು ಗೊತ್ತಾಗಿರಲಿಲ್ಲ. ಚಳಿ, ಒಳ್ಳೆ ಬೆಂಕಿ ಹಾಕಿದ್ದಾರೆ. ಬೆಳ್ಳನೂ ಇಲ್ಲ. ಆರಾಮಾಗಿ ಮಲಗೋಣ ಎಂದು ನಿದ್ರೆಗೆ ಜಾರಿದ್ದ ರಾಜು ಗುರ್ಕೆ ಬಾಯಿಗೆ ಬಲಿಯಾಗಿದ್ದ. ಬೆಳ್ಳ ಸೀನಿದ್ದು ಮಾತ್ರ ನನಗೆ ನಿಟ್ಟುಸಿರಿನ ಹಾಗೇ ಅನ್ನಿಸಿತು.
             ಈ ಘಟನೆ ಜರುಗಿ ಕನಿಷ್ಟ 20 ವರ್ಷಗಳೇ ಸರಿದಿವೆ. ಅದಾದ ಮೇಲೆ ಕನಿಷ್ಟ 10ಕ್ಕೂ ಹೆಚ್ಚು ನಾಯಿಗಳನ್ನೂ, 15ಕ್ಕೂ ಹೆಚ್ಚು ಬೆಕ್ಕುಗಳನ್ನೂ ನಾನು ತಂದು ಸಾಕಿದ್ದೇನೆ. ನಾಯಿಗಳಿಗೆ ನಿಖಿತಾ, ಬಿಂಬಿ, ಭೀಮಣ್ಣ ಖಂಡ್ರೆ ಹೀಗೆ ತರಹೇವಾರಿ ಹೆಸರುಗಳನ್ನೂ, ಸೋನು, ಮೋನು, ಸಾಂಬ, ರಂಗೀಲಾ ಈ ಮುಂತಾದ ಬೆಕ್ಕಿಗೂ ಇಟ್ಟು ಖುಷಿ ಪಟ್ಟಿದ್ದೇನೆ. ಆದರೆ ಮೊದಲು ಸಾಕಿದ ನಾಯಿ ರಾಜು ಮಾತ್ರ ಇನ್ನೂ ನೆನಪಿನಲ್ಲಿದೆ. ಪ್ರತಿ ಚಳಿಗಾಲದಲ್ಲಿ ರಾಜುವಿನ ನೆನಪು ಕಾಡುತ್ತಿರುತ್ತದೆ. ಎಷ್ಟೇ ನಾಯಿಗಳನ್ನು ತಂದರೂ ಮನದ ಮೂಲೆಯಲ್ಲಿದ್ದ ರಾಜು ಮತ್ತೊಮ್ಮೆ ಕಣ್ಣೆದುರು ಬಂದಂತಾಗುತ್ತದೆ. ರಾಜೂ ಕುರೂಯ್.. ಎಂದು ಕರೆಯೋಣ ಅನ್ನಿಸುತ್ತಿದೆ. ನಾಯಿಯೊಂದು ಅಚ್ಚಳಿಯದೇ ಉಳಿದಿದ್ದು ಹೀಗೆ.

Friday, January 9, 2015

ಅಘನಾಶಿನಿ ಕಣಿವೆಯಲ್ಲಿ-7

`ಹಲೋ... ಮಂಗಳೂರು ಮೇಲ್ ಪತ್ರಿಕೆನಾ..?'
`ಹೌದು.. ನೀವ್ಯಾರು? ಹೇಳಿ ಏನು ವಿಷಯ?'
`ನಾನು ವಿನಾಯಕ ಅಂತ.. ನಿಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುವ ವಿಕ್ರಂ ಅವರ ಬಳಿ ಮಾತನಾಡಬೇಕಿತ್ತು..'
`ಒಂದ್ನಿಮಿಷ ಇರಿ.. ಹೇಳ್ತೀನಿ...'
ವಿಕ್ರಂ ಪೋನೆತ್ತಿಕೊಂಡ. `ಹಲೋ..' ಎಂದ. `ಏನಪ್ಪಾ...ದೊರೆ... ನೀನು ಮಂಗಳೂರಿಗೆ ಹೋಗಿ ನಮ್ಮನ್ನೆಲ್ಲ ಮರೆತೇಬಿಟ್ಯಾ?' ಎಂದ ವಿನಾಯಕ.
ಇದನ್ನು ಕೇಳಿದ್ದೇ ತಡ ವಿಕ್ರಂ ಅತ್ಯಾಶ್ಚರ್ಯದಿಂದ `ಅರೇ ವಿನಾಯ್ಕಾ.. ಎಂತದೋ ಮಾರಾಯಾ.. ಏನ್ ಶಾಕ್ ಕೊಟ್ಟು ಬಿಟ್ಯಾ? ಮತ್ತೆ..? ಎಲ್ಲಿಂದ ಮಾತಾಡ್ತಾ ಇದ್ದೆ? ಏನ್ ವಿಶೇಷ? ಹೇಂಗಿದ್ದೆ? ಮನೆಲ್ಲಿ ಎಲ್ಲಾ ಅರಾಮಿದ್ವಾ?' ಎಂದ ವಿಕ್ರಂ.
`ಎಲ್ಲಾ ಅರಾಮಿದ್ದ ಮಾರಾಯಾ.. ನೀನು ಹೆಂಗಿದ್ದೆ ಹೇಳು.. ಆನು ಯನ್ ಮೊಬೈಲಿಂದನೇ ಪೋನ್ ಮಾಡ್ತಾ ಇದ್ನಾ.. ನಿನ್ ಹತ್ರ ಮಾತಾಡನಾ ಹೇಳಿ ಸುಮಾರ್ ಟ್ರೈ ಮಾಡಿ.. ನಿಮ್ಮನಿಗೆ ಪೋನ್ ಮಾಡಿ ನಿನ್ ನಂಬರ್ ಇಸ್ಕಂಡು ಪೋನ್ ಮಾಡ್ತಾ ಇದ್ದಿ ನೋಡಿ.. ಏನೋ ದೊಡ್ ಮನ್ಷಾ.. ಪೇಪರ್ ಕೆಲಸಕ್ಕೆ ಸೇರಿದ್ದು ಎಲ್ಲಾ ಪೋನ್ ಮಾಡಿ ಹೇಳಲೆ ಆಕ್ತಿಲ್ಯನಾ..? ನಂಗವ್ವೇ ಪೋನ್ ಮಾಡಿ ಹೇಳವನಾ ನಿಂಗೆ..?' ಹುಸಿಮುನಿಸಿನಿಂದ ದಬಾಯಿಸಿದ ವಿನಾಯಕ.
`ಥೋ.. ಅದೆಂತಾ ಹೇಳವು ಮಾರಾಯಾ... ಏನೇನೋ ಆಗ್ತು.. ಲೈಫಲ್ಲಿ ಸಿಕ್ಕಾಪಟ್ಟೆ ತಿರುವು ಸಿಕ್ಕಿ ಈಗ ಪತ್ರಿಕೋದ್ಯಮಿಯೂ ಆಗ ಪ್ರಸಂಗ ಬಂತು ನೋಡು.. ಅದೆಲ್ಲಾ ನೀ ಎದುರಿಗೆ ಸಿಕ್ಕಾಗ ಹೇಳ್ತಿ.. ದೊಡ್ ಕಥೆ ಮಾರಾಯಾ...' ಎಂದ ವಿಕ್ರಂ
`ಅಡ್ಡಿಲ್ಯಾ.. ನಾನು ಹಿಂಗೆ ಸುಮ್ನೆ ಪೋನ್ ಮಾಡಿದ್ನಾ.. ನನ್ನ ಮೊಬೈಲ್ ನಂಬರ್ ಕೊಟ್ಟಾಂಗೂ ಆತು.. ನಿನ್ ಕೈಲಿ ಮಾತಾಡದಾಂಗೂ ಆತು.. ಸುಮಾರ್ ದಿನಾ ಆಗಿತ್ತಲಾ.. ಭಾವ ನೆಂಟ ಹೇಳದ್ನೇ ಮರೆತು ಹೋಗಿದ್ವನೋ ಅನ್ನೋವಷ್ಟ್ ಟೈಮಾಗಿತ್ತಲಾ...' ಎಂದ ವಿನಾಯಕ. `ಹುಂ' ಎಂದ ವಿಕ್ರಂ.. ಪೋನ್ ಇಡಲು ಹವಣಿಸುತ್ತಿದ್ದಂತೆ ವಿನಾಯಕನ ಮೊಬೈಲ್ ನಂಬರ್ ಬರೆದಿಟ್ಟುಕೊಂಡ. `ಹೇಯ್ ವಿನೂ.. ನಾನು ನಿನ್ ಹತ್ರ ಮಾತಾಡವಾ.. ಸಂಜೆ ಮಾತಾಡ್ತಿ.. ಬಹಳ ಇಂಟರೆಸ್ಟಿಂಗ್ ಆದ ಒಂದು ವಿಷ್ಯ ಇದ್ದು.. ಅದಕ್ಕೆ ನಿನ್ನ ಸಹಕಾರ, ಸಹಾಯ ಎಲ್ಲಾ ಬೇಕು.. ಸಂಜೆ ಮಾತಾಡ್ತಿ...' ಎಂದವನೇ ಪೋನ್ ಇಟ್ಟ.
ಅಚ್ಚರಿಯಲ್ಲಿಯೇ ವಿನಾಯಕನೂ ಪೋನ್ ಇಟ್ಟಿದ್ದ.

*****

           ವಿನಾಯಕ ವಿಕ್ರಮನ ಮಾವನ ಮಗ. ಒಂದೇ ವಾರಗೆಯವರು. ವಿನಾಯಕನ ಊರು ಶಿರಸಿ-ಸಿದ್ದಾಪುರ ಮಾರ್ಗ ಮದ್ಯದ ಕಾನಸೂರು ಬಳಿಯ ದಂಟಕಲ್ ಎಂಬ ಚಿಕ್ಕ ಹಳ್ಳಿ. ವಿಕ್ರಂ ಹಾಗೂ ವಿನಾಯಕ ಇಬ್ಬರಿಗೂ ಪರಸ್ಪರ ಅಜ್ಜನಮನೆ ಸಂಬಂಧ. ಅಂದರೆ ವಿನಾಯಕನ ತಂದೆಯ ತಂಗಿ ವಿಕ್ರಮನ ತಾಯಿ. ಅದೇ ರೀತಿ ವಿಕ್ರಮನ ತಂದೆಯ ತಂಗಿ ವಿನಾಯಕನ ತಾಯಿ. ಯಾವ ಸಾಲಿನಿಂದ ನೋಡಿದರೂ ಇಬ್ಬರಿಗೂ ಪರಸ್ಪರ ಅಜ್ಜನಮನೆ ನೆಂಟಸ್ತನ. ಬಾಲ್ಯದಿಂದ ಇಬ್ಬರೂ ಆಪ್ತರು.
            ಹೇಳಿದಂತೆಯೇ ಸಂಜೆಯ ವೇಳೆಗೆ ವಿಕ್ರಮ, ವಿನಾಯಕನಿಗೆ ಪೋನ್ ಮಾಡಿದ. ವಿಕ್ರಮನಿಂದ ಪೋನ್ ಬರುತ್ತದೆ ಎನ್ನುವ ಕಾರಣಕ್ಕಾಗಿ ಸಿಗ್ನಲ್ ಸಿಗದ ತನ್ನೂರಿನಿಂದ ಮೊಬೈಲ್ ಸಿಗ್ನಲ್ ಇರುವ ಸ್ಥಳಕ್ಕೆ ಬಂದು ಕಾಯುತ್ತಿದ್ದ ವಿನಾಯಕ. ಆರಂಭದಲ್ಲಿ ಉಭಯಕುಶಲೋಪರಿಯನ್ನೆಲ್ಲ ತಿಳಿಸಿದ ಮೇಲೆ ವಿಕ್ರಂ `ಶಿರಸಿಯಲ್ಲಿ ಸಧ್ಯದಲ್ಲಿ ಯಾವುದಾದರೂ ಕೊಲೆ, ದರೋಡೆ, ಹೊಡೆದಾಟ ಇತ್ಯಾದಿ ಏನಾದರೂ ಗಲಾಟೆ ನಡೆದಿತ್ತಾ?' ಎಂದ.
           `ಸಧ್ಯ ಇಲ್ಲ.. ಈಗೊಂದು ತಿಂಗಳ ಹಿಂದೆ ಜಾತ್ರೆ  ಟೈಮ್ನಲ್ಲಿ ಏನೇನೋ ನಡೆದಿತ್ತು.. ದರೋಡೆ ಆಗಿತ್ತು.. ಗಲಾಟೆನೂ ಸುಮಾರು ಆಗಿತ್ತು.. ಆಮೇಲೆ ಈಗೊಂದು 15 ದಿನದ ಹಿಂದೆ ಸ್ಮಗ್ಲಿಂಗ್ ವಿಚಾರದಲ್ಲಿ ಇಬ್ಬರು ಕಾಲೇಜು ಹುಡುಗರನ್ನು ಪೊಲೀಸರು ಅರೆಸ್ಟ್ ಮಾಡಿದ್ರು..' ಎಂದ ವಿನಾಯಕ.
           `ಹೌದಾ..? ಎಂತಾ ಸ್ಮಗ್ಲಿಂಗ್ ಅದು?'
           `ಹುಲಿಯುಗುರು ಸ್ಮಗ್ಲಿಂಗ್ ಮಾಡ್ತಾ ಇದ್ದಿದ್ದ.. ಕಾಲೇಜು ಹುಡುಗ್ರು.. ಗಂಧದ ತುಂಡೂ ಇತ್ತು.. ಪೊಲೀಸರು ಅರೆಸ್ಟ್ ಮಾಡಿದ್ದು ಗೊತ್ತಿತ್ತು.. ಒಂದೆರಡ್ ದಿನಾ ಭಯಂಕರ ಗಲಾಟೆ ಆಗಿತ್ತು.. ಆಮೇಲ ಇದ್ದಕ್ಕಿದ್ದಾಂಗೆ ತಂಡ್ ಆಜು.. ಇದ್ ಬಿಟ್ರೆ ಮತ್ತೆಂತದ್ದೂ ಆದಾಂಗಿಲ್ಲೆ ನೋಡು..' ಎಂದ ವಿನಾಯಕ
          `ಹೌದಾ... ಆಮೇಲೆ ಎಂತಾದ್ರೂ ಆಜಾ..?' ವಿಕ್ರಂ ಕೇಳಿದ
          `ಮತ್ತೆಂತದ್ದೂ ಇಲ್ಲೆ... ಎಲ್ಲಾ ಸರಿ.. ನೀ ಎಂತಕ್ಕೆ ಇದನ್ನೆಲ್ಲಾ ಕೇಳ್ತಾ ಇದ್ದೆ? ಶಿರಸಿಯಲ್ಲಿ ನಡೆದ ದರೋಡೆ, ಸ್ಮಗ್ಲಿಂಗ್ ಬಗ್ಗೆ ನಿಂಗೆಂತಕ್ಕೋ ಅಷ್ಟೆಲ್ಲ ಆಸಕ್ತಿ?' ಎಂದು ಪ್ರಶ್ನಿಸಿದ್ದ ವಿನಾಯಕ.
           `ಎಂತಕ್ಕೂ ಅಲ್ಲಾ ಮಾರಾಯಾ.. ನಮ್ ಆಪೀಸಿಗೆ ಒಂದು ಸುದ್ದಿ ಬಂದಿತ್ತು.. ಶಿರಸಿ ರಿಪೋರ್ಟರ್ರೋ ಅಥವಾ ಮತ್ಯಾರೋ ವರದಿ ಮಾಡಿದ್ದು.. ಅದು ನಿಜಾನೋ ಸುಳ್ಳೋ.. ಹೇಳಿ ಕನ್ಫರ್ಮ್ ಮಾಡ್ಕಂಬಲೆ ಕೇಳಿದ್ನಾ..' ಎಂಬ ಸುಳ್ಳನ್ನು ಹೇಳಿ ಪೋನ್ ಇಟ್ಟ. ವಿಕ್ರಮನಿಗೆ ಎಲ್ಲೋ ಏನೋ ಹೊಳೆದಂತಾಯಿತು. ತಾನು ಮಾಡುತ್ತಿದ್ದ ತನಿಖಾ ವರದಿಗೂ ವಿನಾಯಕ ಹೇಳಿದ್ದ ಅಂಶಕ್ಕೂ ಸಾಕಷ್ಟು ಸಂಬಂಧವಿದೆಯೇನೋ ಅನ್ನಿಸಿತು.
          ಹಾಗಾದರೆ ಶಿರಸಿಯೇ ಎಸ್ ಗುಂಪಿನ ಕಾರ್ಯಸ್ಥಾನವೇ? ತಾನು ಯಾವುದಕ್ಕೂ ಒಮ್ಮೆ ಶಿರಸಿಗೆ ಹೋಗಿಬರಬೇಕು ಎಂದು ಕೊಂಡ ವಿಕ್ರಮ. ಶಿರಸಿಯಲ್ಲಿ ಯಾರನ್ನು ಬಂಧಿಸಿದ್ದರೋ ಅವರನ್ನು ಮಾತನಾಡಿಸಿದರೆ ಏನಾದರೂ ಸಿಗಬಹುದು. ಅಂದರೆ ನಾನು ಶಿರಸಿಗೆ ಸಾಧ್ಯವಾದಷ್ಟು ಬೇಗನೆ ಹೋಗಲೇಬೇಕು ಎಂದುಕೊಂಡವನು ರೂಮಿನಲ್ಲಿದ್ದ ಟಿವಿಯನ್ನು ಹಾಕಿದ. ಟಿವಿಯಲ್ಲಿ ಶಿರಸಿಯಲ್ಲೊಂದು ಕೊಲೆಯಾಗಿದೆಯೆಂದೂ, ಕೊಲೆಯಾದ ವ್ಯಕ್ತಿ ಶಿರಸಿಯಲ್ಲಿ ಕೆಲ ದಿನಗಳ ಹಿಂದೆ ಸ್ಮಗ್ಲಿಂಗ್ ವ್ಯವಹಾರದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದನೆಂದೂ, ಕೊಲೆ ಮಾಡಿದವರು ತಲೆ ತಪ್ಪಿಸಿಕೊಂಡಿದ್ದಾರೆಂದೂ ತಿಳಿಯಿತು. ಆಗಲೇ ವಿಕ್ರಮನಿಗೆ ತನ್ನ ತನಿಖೆ ಒಂದು ಹಂತಕ್ಕೆ ಬಂತು ಎಂದುಕೊಳ್ಳುತ್ತಿದ್ದಂತೆ ಮತ್ತೆಲ್ಲೋ ಹಾದಿ ತಪ್ಪುತ್ತಿದೆ ಎಂದು ಅರ್ಥವಾಯಿತು. ಆದರೂ ಶಿರಸಿಗೆ ಹೋಗಿ ಪ್ರಯತ್ನಿಸುವುದು ಒಳಿತು ಎಂದುಕೊಂಡ. ಬದುಕಿರುವ ಇನ್ನೊಬ್ಬ ಕಾಲೇಜು ವಿದ್ಯಾರ್ಥಿಯನ್ನಾದರೂ ಮಾತನಾಡಿಸೋಣ ಎಂದುಕೊಂಡ.
              ಮರುದಿನವೇ ಆತ ನವೀನಚಂದ್ರರ ಛೇಂಬರಿಗೆ ಹೋದ. ನವೀನಚಂದ್ರರು ಆಗಲೇ ಅಲ್ಲಿ ಕುಳಿತಿದ್ದರು. ಒಳಬಂದ ವಿಕ್ರಮನನ್ನು ನೋಡಿ `ವಿಕ್ರಂ... ನಂಗ್ಯಾಕೋ ನೀವು ಈ ತನಿಖೆಯನ್ನು ಕೈ ಬಿಡುವುದೇ ಒಳ್ಳೆಯದು ಎನ್ಸುತ್ತೆ. ಇದರಿಂದ ಉಪಯೋಗ ಇಲ್ಲ. ಜೊತೆಗೆ ಅಪಾಯವೇ ಹೆಚ್ಚು. ಏನಂತೀಯಾ?' ಎಂದರು.
             `ಆದ್ರೆ ಸರ್.. ಈಗ ನಾನು ಒಂದು ಹಂತದೆಡೆಗಿನ ಹುಡುಕಾಟವನ್ನು ಮುಗಿಸಿದ್ದೇನೆ. ಇಲ್ಲಿ ಮುಖ್ಯ ಪಾತ್ರ ವಹಿಸುವುದು ಎಸ್ ಲಾಕೇಟಿನ ಒಂದು ಗುಂಪು. ಆ ಗುಂಪಿನ ಕಾರ್ಯಸ್ಥಳವೋ ಅಥವಾ ಪ್ರಮುಖ ಪ್ರದೇಶವೋ ಗೊತ್ತಿಲ್ಲ. ಅದು ಶಿರಸಿ ಎನ್ನುವುದು ತಿಳಿದಿದೆ. ಇಂತಹ ಸಮಯದಲ್ಲಿ ನನ್ನ ಹುಡುಕಾಟವನ್ನು ನಿಲ್ಲಿಸಲಾರೆ ಸರ್..' ಎಂದ ವಿಕ್ರಂ.
           `ಹಾಗಲ್ಲಪ್ಪಾ... ಈ ನಿನ್ನ ತನಿಖೆ ಬಹಳ ಡೇಂಜರ್ರು. ಇಲ್ಲಿ ಹಲವು ರೀತಿಯ ತೊಂದರೆ ಬರಬಹುದು. ಅದೂ ಅಲ್ದೆ ಆ ಗುಂಪು ಕೊಲ್ಲೋದಕ್ಕೂ ಹೇಸೋದಿಲ್ಲ ಎನ್ನುವುದು ಅರಿವಾಗಿದೆ. ಮಂಗಳೂರು ಹಾಗೂ ಶಿರಸಿಗಳಲ್ಲಿ ನಡೆದಿರೋ ಕೊಲೆಗಳೇ ಇದಕ್ಕೆ ಸಾಕ್ಷಿ. ಸುಮ್ನೆ ಅಪಾಯವನ್ನು ಮೈಮೇಲೆಳೆದುಕೊಳ್ಳುವಂತದ್ದು ಏನಿದೆ? ಅಂತಹ ಕೆಲಸವನ್ನು ನಾವ್ಯಾಕೆ ಮಾಡ್ಬೇಕು ಹೇಳಿ. ' ಎಂದರು ನವೀನಚಂದ್ರ.
           `ಸರ್.. ನಾನು ಮೊದಲು ಇಲ್ಲಿ ಸೇರೋವಾಗ ನಿಮಗೆ ಹೇಳಿದ್ದೆ. ಅದರ ಜೊತೆಗೆ ನಾನು ಮಾಡ್ತಿರೋ ವೃತ್ತಿಯೇ ಅಂತದ್ದಾಗಿದೆ. ಹರಿತವಾದ ಕತ್ತಿಯ ಮೇಲೆ ನಡೆದುಕೊಂಡು ಓಡಾಡುವಂತದ್ದು. ಅದರಲ್ಲಿ ತಿರುಗಿ ಬರುವ ಪ್ರಶ್ನೆಯೇ ಇಲ್ಲ ಸಾರ್.. ನೀವ್ ಹೆದರಬೇಡಿ... ಎಂತದ್ದೇ ಸಮಸ್ಯೆ ಬಂದರೂ ನಾನು ಹಿಂದಕ್ಕೆ ತಿರುಗೋದಿಲ್ಲ..'
           `ಆದ್ರೂ... ಒಂದ್ ಸಾರಿ ಆಲೋಚನೆ ಮಾಡಿ..'
           `ಇಲ್ಲ ಸಾರ್.. ನಾನು ಈ ಹುಡುಕಾಟ ನಿಲ್ಲಿಸೋದಿಲ್ಲ. ಏನೇ ಕಷ್ಟ ಬಂದರೂ.. ಸಾವೇ ಎದುರಿಗೆ ಬಂದರೂ ಅದನ್ನು ಎದುರಿಸಿ ನಿಲ್ಲುತ್ತೇನೆ...'
(ಮಲೆನಾಡಿನಲ್ಲಿ ಮಂಜಿನ ಮುಂಜಾವು)
           `ಹಹ್ಹಹ್ಹ..! ವೆಲ್ ಡನ್..ಗುಡ್ ವಿಕ್ರಂ. ನಾನು ಮಾಡಿದ ಪರೀಕ್ಷೆಯಲ್ಲಿ ನೀನು ಗೆಲುವು ಸಾಧಿಸಿದೆ. ನಾನು ನಿನ್ನನ್ನು ಪರೀಕ್ಷೆ ಮಾಡಲಿಕ್ಕಾಗಿ ಕೇಳಿದ್ದೆ. ಆದರೆ ನೀನು ಅದಕ್ಕೆ ಹೆದರಲಲ್ಲಿಲ್ಲ ನೋಡು. ಕೇಸಿನ ಬಗ್ಗೆ ನಿನ್ನ ನಿಷ್ಟೆ ಯಾವ ರೀತಿ ಇರಬಹುದು ಎಂದುಕೊಂಡೆ. ಪರವಾಗಿಲ್ಲ.. ಒಳ್ಳೆ ಕೆಲಸ ಹಾಕ್ಕೊಂಡಿದ್ದೀಯಾ.. ಗುಡ್..' ಎಂದರು ನವೀನಚಂದ್ರ.
          `ಓಹ್... ನಾನು ಇದೇನಿದು ಅಂದ್ಕೊಂಡೆ.. ಯಾಕೆ ಹೀಗೆ ಅವರು ಹೇಳ್ತಾ ಇದ್ದಾರೆ ಎಂದೂ ಆಲೋಚನೆ ಮಾಡಿದ್ದೆ ನೋಡಿ..'
         `ನೋಡು.. ಒಂದು ಮುಖ್ಯ ಸುದ್ದಿ ಹೇಳ್ಬೇಕು. ನಿಮ್ಮೂರು ಇರೋದು ಉತ್ತರ ಕನ್ನಡದಲ್ಲಿ ಅಲ್ವಾ? ಅಲ್ಲಿಯೇ ಈ ಗುಂಪಿನ ಕಾರ್ಯಸ್ಥಾನ ಇರೋದು ಅಂತ ಹೇಳಿದ್ರಿ ನೀವು. ನೀವ್ಯಾಕೆ ಅಲ್ಲಿಗೆ ಹೋಗಿ ನಿಮ್ಮ ತನಿಖೆ ಮುಂದುವರಿಸಬಾರದು? ಈ ಕುರಿತು ಒಂದೆರಡು ದಿನ ತಡವಾದರೂ ತೊಂದರೆಯಿಲ್ಲ. ಆದರೆ ನಿಜವಾದ ಆರೋಪಿ, ಈ ಎಲ್ಲದ್ದಕ್ಕೂ ಕಾರಣವಾಗಿರುವ ತಂಡ ಸಿಕ್ಕಿಬಿಟ್ಟರೆ ಅಷ್ಟೇ ಸಾಕು. ನಿನಗೆ ಎಷ್ಟು ದಿನದ ರಜೆ ಬೇಕಾದರೂ, ಜೊತೆಗೆ ಯಾವುದೇ ರೀತಿಯ ಸಹಾಯ ಬೇಕಾದರೂ ನನ್ನಿಂದ ಹಾಗೂ ನಮ್ಮ ಆಫೀಸಿನಿಂದ  ಸಿಗುತ್ತದೆ...' ಎಂದರು ನವೀನಚಂದ್ರ.
           `ನಾನೂ ಅದನ್ನೇ ತಿಳಿಸೋಕೆ ಬಂದೆ ಸಾರ್.. ನಾನು ಇವತ್ತು ಸಂಜೆ ಊರಿಗೆ ಹೊರಡೋಣ ಎಂದುಕೊಂಡಿದ್ದೇನೆ. ನಿಮ್ಮ ಸಹಾಯಕ್ಕೆ ಥ್ಯಾಂಕ್ಸ್. ಸರ್.. ನನಗೆ ಕನಿಷ್ಟ 2 ವಾರದ ರಜೆ ಬೇಕು. ನಾನು ಅಲ್ಲಿನ ಹುಡುಕಾಟಾನ ಕಾಲಕಾಲಕ್ಕೆ ತಕ್ಕಂತೆ ನಡೆಯುವ ವಿದ್ಯಮಾನಗಳನ್ನು ವರದಿ ಮಾಡ್ತೀನಿ ಸರ್. ಆದರೆ ನನ್ನ ತನಿಖೆ ಪೂರ್ತಿ ಆಗುವ ವರೆಗೂ ಆ ವರದಿ ಪತ್ರಿಕೆಯಲ್ಲಿ ಬರಬಾರದು..' ಎಂದ ವಿಕ್ರಮ.
           ಸರಿ. ಆದ್ರೆ ಒಂದು ಮುಖ್ಯವಾದ ವಿಷಯ. ನೀನು ಅಲ್ಲಿಗೆ ಹೋದಾಗ ಪೇಪರ್ರಿನವನು ಅಂತ ಹೇಳಬೇಡ. ಯಾವುದಾದರೂ ರಿಸರ್ಚ್ ಕೆಲಸಕ್ಕೆ ಬಂದಿದ್ದೇನೆ ಎಂದು ಹೇಳಿ. ಜೊತೆಗೆ ನನ್ನ ಕಾರನ್ನೂ ತೆಗೆದುಕೊಂಡು ಹೋಗು. ಸಹಾಯಕ್ಕೆ ಬರುತ್ತೆ. ' ಎಂದು ಹೇಳಿದರು. ಇದಾದ ನಂತರವೂ ಹಲವು ವಿಷಯಗಳು ವಿನಿಮಯವಾದವು. ನಂತರ ವಿಕ್ರಂ ತನ್ನ ರೂಮಿಗೆ ಮರಳಿದ.

************7**************

              ಸರಿ. ಹೊರಡುವ ವಿಷಯವನ್ನು ವಿಜೇತಾಳಿಗೆ ತಿಳಿಸಿದ. ವಿಷಯವನ್ನು ಕೇಳಿದವಳೇ ತಾನೂ ಬರುವುದಾಗಿ ಹಟ ಹಿಡಿದಳು. ಕೊನೆಗೆ ನವೀನಚಂದ್ರನ ಒಪ್ಪಿಗೆ ಮೇರೆಗೆ  ಆಕೆಯೂ ಹೊರಟಳು. ವಿಕ್ರಂ ಹಾಗೂ ವಿಜೇತಾ ತಮ್ಮೆಲ್ಲ ಲಗೇಜುಗಳನ್ನು ಕಾರಿನಲ್ಲಿ ತುಂಬಿ ಹೊರಡಲು ಅನುವಾಗುತ್ತಿದ್ದಂತೆ ಪ್ರದೀಪ ಪ್ರತ್ಯಕ್ಷನಾದ. ಅದ್ಯಾರು ಹೇಳಿದ್ದರೋ, ಹೇಗೆ ಗೊತ್ತಾಯಿತೋ.. ಪ್ರದೀಪ ತನ್ನೆಲ್ಲಾ ಲಗೇಜುಗಳ ಸಮೇತ ತಯಾರಾಗಿ ಬಂದಿದ್ದ. ತಾನೂ ವಿಕ್ರಮನ ಜೊತೆಗೆ ಬರುತ್ತೇನೆ ಎಂದು ಹೇಳಿದವನೇ ವಿಕ್ರಮನ ಮಾತಿಗೂ ಕಾಯದೇ ಕಾರನ್ನೇರಿಬಿಟ್ಟ. ವಿಕ್ರಮ ಬೇಡ ಬೇ ಎನ್ನುತ್ತಿದ್ದರೂ ಅದನ್ನು ಪ್ರದೀಪ ಕೇಳದಂತಿದ್ದ. ವಿಧಿಯಿಲ್ಲದೇ ವಿಕ್ರಮ ಗಾಡಿ ಚಾಲೂ ಮಾಡಿದ.! ಕತೆ ಇಲ್ಲಿಂದ ಸಂಪೂರ್ಣ ಬದಲಾವಣೆಯ ಮಾರ್ಗ ಹಿಡಿದಿತ್ತು. ಮಲೆನಾಡು ಕರೆದಿತ್ತು.
             ಎಷ್ಟು ಬೇಡವೆಂದರೂ ನವೀನಚಂದ್ರರು ತಮ್ಮ ಕಾರನ್ನು ವಿಕ್ರಮನಿಗಾಗಿ ನೀಡಿದ್ದರು. ಅಂತೂ ರಾತ್ರಿಯ ಹೊತ್ತಿಗೆ ವಿಕ್ರಮ, ವಿಜೇತಾ ಹಾಗೂ ಪ್ರದೀಪ ನಿಘೂಡಗಳ ತವರು ಉತ್ತರ ಕನ್ನಡದ ಕಡೆಗೆ ಹೊರಟರು. ವಿಕ್ರಮನಿಗೆ ಮತ್ತೆ ತನ್ನ ಮನೆಗೆ ಮರಳುವ ತವಕ. ಹಿಡಿದ ಕೆಲಸವನ್ನು ಬೇಗನೇ ಮುಗಿಸುವ ತುಡಿತ ಇದ್ದರೆ ಅರಿಯದ ಸುಂದರ ಜಿಲ್ಲೆಯ ಕಡೆಗೆ ಸಾಗುತ್ತಿರುವ ಬಗ್ಗೆ ವಿಜೇತಾ ಹಾಗೂ ಪ್ರದೀಪರಲ್ಲಿ ಕುತೂಹಲವಿತ್ತು. ಇಲ್ಲಿ ವಿಕ್ರಮನ ಮನಸ್ಸು ಪ್ರದೀಪನೆಡೆಗೆ ಮಾತ್ರ ಚಿಕ್ಕದೊಂದು ಅನುಮಾನದ ಎಳೆಯನ್ನು ಹರಿಯಬಿಟ್ಟಿತ್ತು. ಆದರೂ ಪ್ರದೀಪನ ಜೊತೆಗೆ ಮೊದಲಿನಂತೆ ವರ್ತನೆ ಮಾಡುತ್ತಿದ್ದ.
              ವೇಗವಾಗಿ ಚಲಿಸುತ್ತಿದ್ದ ಕಾರಿಗಿಂತ, ಕಾರಿನಲ್ಲಿ ಕುಳಿತಿದ್ದ ಮೂವರ ಮನಸ್ಸುಗಳು ಮತ್ತಷ್ಟು ವೇಗವಾಗಿ ಎತ್ತೆತ್ತಲೋ ಓಡುತ್ತಿದ್ದವು. ವಿಕ್ರಮ ಮತ್ತೆ ಮತ್ತೆ ತನ್ನ ಹುಡುಕಾಟದ ಬಗ್ಗೆ ಆಲೋಚಿಸುತ್ತಿದ್ದರೆ, ವಿಜೇತಾ ತಾನು ಇಲ್ಲಿಗೆ ಹೊರಡಲು ಮನೆಯಲ್ಲಿ ಒಪ್ಪಿಗೆ ಕೇಳಿದಾಗ ಮನೆಯವರು ಏನೋ ಹೇಳಲು ಹೊರಟವರು ಹಾಗೇ ತಡೆದು ಒಪ್ಪಿಗೆ ನೀಡಿದ ತಂದೆ ತಾಯಿಯರ ನಡೆಯ ಬಗ್ಗೆ ಆಲೋಚಿಸುತ್ತಿದ್ದಳು.
           ಪ್ರದೀಪ ಮಾತ್ರ ಆಗಾಗ `ಭೀಗಿ ಭೀಗಿ ರಾತೋ ಮೆ....' ಅಂತಲೋ.. `ಯಾರು ಯಾರು ನೀ ಯಾರು..?' ಅಂತಲೋ ಸಂಬಂಧವೇ ಇಲ್ಲದ ಯಾವು ಯಾವುದೋ ಹಾಡುಗಳನ್ನು ಹಾಡುತ್ತಿದ್ದ. ಜೊತೆಗೆ ತನ್ನ ಕುಟುಂಬದ ಬಗ್ಗೆ ಆಲೋಚನೆ ಮಾಡುತ್ತಿದ್ದ. ಈ ಮೂವರ ನಡುವೆ ಕಾರಿನಲ್ಲಿದ್ದ ಟೇಪ್ ರೆಕಾರ್ಡರ್ ಮಾತ್ರ ಮುಖೇಶನ ಹಾಡುಗಳನ್ನು ಒಂದರ ಹಿಂದೊಂದರಂತೆ ಹಾಡುತ್ತಿದ್ದವು. ಈ ಎಲ್ಲ ಕಾರಣಗಳಿಂದ ಕಾರಿನಲ್ಲಿ ಮೌನ ಇರಲಿಲ್ಲ. ಮಂದ್ರ ದನಿಯಲ್ಲಿ ಹಾಡು ಕೇಳಿಸುತ್ತ ಮನಸ್ಸು ತಣ್ಣಗೆ ಹರಿಯತೊಡಗಿತ್ತು.
            ಅಜಮಾಸು 300 ಕಿ.ಮಿ ಸಾಗಿದ ನಂತರ ಅಂಕೋಲಾ ಸಿಕ್ಕಿತು. ಅಲ್ಲೊಂದು ಕಡೆ ಕಾರನ್ನು ನಿಲ್ಲಿಸಿದ ವಿಕ್ರಮ. ಅಲ್ಲಿ  ಚಹಾ ಕುಡಿದು ಮುಖಕ್ಕೆ ನೀರನ್ನು ರಪ್ಪನೆ ಚಿಮುಕಿಸಿ, ಆಗೀಗ ಸುಳಿದು ಬರುತ್ತಿದ್ದ ನಿದ್ದೆಗೆ ಗುಡ್ ಬೈ ಹೇಳಿದ ವಿಕ್ರಮ. ವಿಜೇತಾ ಆಗೀಗ ವಿಕ್ರಮನ ಕುಟುಂಬದ ಬಗ್ಗೆ ವಿಚಾರಿಸುತ್ತಿದ್ದಳು. ಅದಕ್ಕೆಲ್ಲ ದೀರ್ಘವಾಗಿ ಉತ್ತರಿಸುತ್ತಿದ್ದ. ಆಗಾಗ ಪ್ರದೀಪನ ಹಾಸ್ಯ ರಸಾಯನದ ತುಣುಕುಗಳೂ ಚೆಲ್ಲುತ್ತಿದ್ದವು. ಬಾಳೆಗುಳಿ ಕ್ರಾಸಿನಲ್ಲಿ ಬಲಕ್ಕೆ ತಿರುಗಿಸಿ ಕಾರನ್ನು ಹುಬ್ಬಳ್ಳಿ ರಸ್ತೆಯ ಕಡೆಗೆ ಚಾಲನೆ ಮಾಡಿದರು. ಮಧ್ಯರಾತ್ರಿಯ ಸಮಯ ಮೀರಿ ಬೆಳಗಿನ ಮುಂಜಾವು ದೂರದ ಭೀಮನವಾರೆ ಗುಡ್ಡದಲ್ಲಿ ಇಣುಕಲು ಪ್ರಯತ್ನಿಸುತ್ತಿತ್ತು. ಅಲ್ಲೆಲ್ಲೋ ಆಗಾಗ ಸಿಗುತ್ತಿದ್ದ ಲೈಟುಗಳು., ಎದುರಿನಿಂದ  ಬರುತ್ತಿದ್ದ ವಾಹನಗಳ ಭರ್ರೆನ್ನುವ ಸದ್ದು, ಕಾಡಿನ ನಡುವಣ ಒಂಟಿ ಪಯಣ.. ಏನೋ ಒಂಥರಾ ಎನ್ನಿಸಿತು. ಸ್ವಲ್ಪ ಸಮಯದಲ್ಲಿ ಅರಬೈಲ್ ಘಟ್ಟದ ಅಂಕುಡೊಂಕು ಸಿಕ್ಕಿತು. ವೇಗವಾಗಿ ಹತ್ತಿ ಯಲ್ಲಾಪುರವನ್ನು ತಲುಪುವ ವೇಳಗೆ ಸೂರ್ಯ ಬಾನಂಚಿನಲ್ಲಿ ಮತ್ತಷ್ಟು ಏರಿ ಬಂದಿದ್ದ.
          ಮುಂಜಾನೆಯ ಚುಮು ಚುಮು ಬೆಳಕಿನಲೆಯ ಆಗಮನದ ಜೊತೆ ಜೊತೆಯಲ್ಲಿಯೇ ಕಾರು ಒಂದೆರಡು ರಸ್ತೆಯನ್ನು ಹಾದು, ಕೊನೆಗೊಂದು ಕಚ್ಚಾ ರಸ್ತೆಯಲ್ಲಿ ನಿಧಾನವಾಗಿ ಸಾಗಿತು. ಮೊದಲ ಸೂರ್ಯನ ಕಿರಣ ಧರೆಯನ್ನು ಮುತ್ತಿಕ್ಕುವ ವೇಳೆಗೆ ಮನೆಯೊಂದರ ಅಂಗಳದಲ್ಲಿ ಕಾರು ಬಂದು ನಿಂತಿತು.  ಆಗಲೇ ವಿಜೇತಾ ಹಾಗೂ ಪ್ರದೀಪರು ನಿದ್ರೆಗೆ ಜಾರಿದ್ದರು. ಮನೆಯಂಗಳದಲ್ಲಾಗಲೇ ಸುಂದರ ರಂಗೋಲಿ ಮಿನುಗುತ್ತಿತ್ತು. ವಿಕ್ರಮ ಒಮ್ಮೆ ಕಾರಿನ ಹಾರನ್ ಮಾಡಿದ. ಮನೆಯೊಳಗಿನಿಂದ ಹೊರ ಬಂದ ಒಬ್ಬಾಕೆ ಯಾರು ಬಂದಿರಬಹುದು ಬೆಳ್ಳಂಬೆಳಿಗ್ಗೆ ಎಂದು ಕುತೂಹಲ, ಗಾಭರಿಯಿಂದ ನೋಡಲು ಆರಂಭಿಸಿದಳು.

(ಮುಂದುವರಿಯುತ್ತದೆ) 

Thursday, January 8, 2015

ಖಾಲಿಯಿದೆ ಬಾಳಪುಟ

ಖಾಲಿಯಿದೆ ಬಾಳಪುಟ
ಯಾರ ಚಿತ್ರವೂ ಇಲ್ಲ
ಪ್ರೀತಿಯನು ಬಯಸುತಿದೆ
ಜೊತೆಗೆ ಯಾರೂ ಇಲ್ಲ |

ಬೆರೆತಿದೆ ನೂರು ನೋವು
ಜೊತೆಗೆ ಕಷ್ಟದ ಸೊಲ್ಲು
ಒಂಟಿತನ ಓಡಿಸಲು
ಜೊತೆಯ ಬಯಸಿದೆಯಲ್ಲ |

ಎದೆಯ ಗುಂಡಿಗೆಯೊಳಗೆ
ಯಾರ ರೇಖೆಯೂ ಇಲ್ಲ
ಮನದ ಒಬ್ಬಂಟಿತನ
ಕಳೆಯಬಯಸಿದೆಯಲ್ಲ |

ಎದುರಲಿದೆ ಕಲ್ಪನೆಯು
ಮನದ ಬದಲಾವಣೆಯು
ನೂರು ಬಯಕೆಯ ಸುತ್ತ
ಮನವು ಸುತ್ತಿದೆಯಲ್ಲ |

ಖಾಲಿಯಿದೆ ಬಾಳಪುಟ
ಪ್ರಿತಿ ದೊರೆಯುವ ವರೆಗೆ
ಮುತ್ತಿಕೊಂಡಿದೆ ಮುಸುಕು
ತೆರೆಯ ಸರಿಯುವ ವರೆಗೆ |

***
(ಈ ಕವಿತೆಯನ್ನು ಬರೆದಿರುವುದು 16-10-2006ರಂದು ದಂಟಕಲ್ಲಿನಲ್ಲಿ)