ನನಗೀಗಲೂ ನೆನಪಿದೆ. ನಾನು ಮನೆಯಲ್ಲಿ ಮೊಟ್ಟಮೊದಲು ಸಾಕಿದ್ದು ಒಂದು ನಾಯಿ. ಚಿಕ್ಕವನಿದ್ದಾಗ. ಅಂದರೆ ಪ್ರೈಮರಿ ವಯಸ್ಸು. 1 ರಿಂದ 4 ಕ್ಲಾಸಿನ ಒಳಗೆ. ಆ ನಾಯಿಗೆ ರಾಜೂ ಅಂತ ಹೆಸರಿಟ್ಟಿದ್ದೆ. ಸಾಮಾನ್ಯವಾಗಿ ನಾಯಿಗೆ ರಾಜೂ, ರಾಮೂ, ಟಿಪ್ಪು ಇತ್ಯಾದಿ ಹೆಸರು ಇಡುವುದು ಕಾಮನ್ನು. ಆ ದಿನಗಳಲ್ಲಿ ನಾನು ಚಿಕ್ಕವನಿದ್ದ ಕಾರಣ ಹೆಸರಿಗೆ ವಿಶೇಷ ಸರ್ಕಸ್ ಮಾಡಲಿಲ್ಲ. ರಾಜೂ ಎಂಬ ಸಾಮಾನ್ಯ ಹೆಸರನ್ನಿಟ್ಟಿದ್ದೆ.
ಆ ರಾಜೂ ನಾಯಿಗೆ ನಾನೆಂದರೆ ಬಹಳ ಅಚ್ಚುಮೆಚ್ಚಾಗಿಬಿಟ್ಟಿತ್ತು ನೋಡಿ. ಪ್ರೈಮರಿ ಸಮಯದಲ್ಲಿ ಅತ್ಯಂತ ಹೆಚ್ಚಿನ ಕಿಲಾಡಿಯವನಾಗಿದ್ದ ನಾನು ಪರೀಕ್ಷೆಯಲ್ಲಿ ತೆಗೆದುಕೊಳ್ಳುವ ಮಾರ್ಕ್ಸುಗಳು ಅಷ್ಟಕ್ಕಷ್ಟೇ ಆಗಿತ್ತು. ನಾನು ಕಡಿಮೆ ಮಾರ್ಕು ತೆಗೆದುಕೊಂಡಾಗಲೆಲ್ಲ ಅಪ್ಪ-ಅಮ್ಮ ಜೋರಾಗಿ ಬೈದು, ಬಡಿದು ಮಾರ್ಕ್ಸ್ ವಾದಿ ಎನ್ನಿಸಿಕೊಳ್ಳುತ್ತಿದ್ದರು. ನಾನು ಬೆದರಿದ ಇಲಿಮರಿಯಂತೆ ಸುಮ್ಮನಿದ್ದಾಗ ನನ್ನ ಪರ ವಹಿಸಿ ಧ್ವನಿ ಎತ್ತುತ್ತಿದ್ದವರೆಂದರೆ ಇಬ್ಬರೇ. ಒಬ್ಬರು ನನ್ನಜ್ಜ ಇಗ್ಗಜ್ಜ. ಇನ್ನೊಬ್ಬರು ರಾಜು ನಾಯಿ.
ಅಜ್ಜ ನನ್ನನ್ನು ವಹಿಸಿಕೊಂಡು ಬರುವುದು ಸಾಮಾನ್ಯ ಸಂಗತಿ ಬಿಡಿ. ಆದರೆ ರಾಜು ನಾಯಿ.. ಮಜಾ ಅನ್ನಿಸಿದ್ದೇ ಆವಾಗ. ಬೀದಿ ಬದಿಯಲ್ಲೆಲ್ಲೋ ಬಿದ್ದುಕೊಂಡಿದ್ದ ನಾಯಿಯನ್ನು ಮನೆಗೆ ತಂದು, ಅವಿಭಕ್ತ ಕುಟುಂಬದ ನನ್ನ ಚಿಕ್ಕಪ್ಪಂದಿರ ವಿರೋಧದ ನಡುವೆಯೂ ಸಾಕಿದ ನನ್ನ ಮೇಲೆ ರಾಜುವಿಗೆ ಅದೇನೋ ವಿಶೇಷ ಪ್ರೀತಿ ಬೆಳೆದು ಬಿಟ್ಟಿತ್ತು. ಶಾಲೆಯಿಂದ ಸಂಜೆ ಮನೆಗೆ ಬಂದವನೇ ನಾನು ದೋಸೆಯನ್ನು ತಿನ್ನುವುದು ಪ್ರತಿಧಿನ ರೂಢಿ. ದೋಸೆಯನ್ನು ನಾನು ತಿನ್ನುವ ಮುನ್ನ ರಾಜುವಿಗೂ ಹಾಕಲೇಬೇಕು. ಇಲ್ಲವಾದರೆ ರಾಜುವಿನಿಂದ `ಅಯ್ಯೋ...' ಎನ್ನುವ ಊಳಾಟ ಗ್ಯಾರಂಟಿ. ನನ್ನನ್ನು ಯಾರಾದರೂ ಬಯ್ಯಲಿ, ಹೊಡೆಯಲು ಕೈಯೆತ್ತಿಕೊಂಡು ಬರಲಿ ಅಂತವರನ್ನು ಬೆನ್ನಟ್ಟಿ ಹೋಗುತ್ತಿತ್ತು ರಾಜು. ಅನೇಕರು ಇದನ್ನು ಪರೀಕ್ಷೆ ಮಾಡುವ ಸಲುವಾಗಿಯೇ ನನ್ನನ್ನು ಬೈದು, ಹೊಡೆದಿದ್ದೂ ಇದೆ ಎನ್ನಿ.
ಭಾನುವಾರ ಬಂತೆಂದರೆ ನನಗೂ ರಾಜು ವಿಗೂ ಅದೇನೋ ಅಡಗರ. ಇಬ್ಬರೂ ಮನೆಯಿಂದ ಒಂದೋ ಒಂದೂವರೆಯೂ ಕಿ.ಮಿ ದೂರದಲ್ಲಿದ್ದ ಕುಚಗುಂಡಿ ಗದ್ದೆಯತ್ತ ಹೊರಟುಬಿಡುತ್ತಿದ್ದೆವು. ಅಲ್ಲೇ ಇರುವ ಕಾಕಾಲ ಗದ್ದೆಯಲ್ಲಿ ವಿಶಾಲವಾಗಿ ಹರಿಯುವ ಅಘನಾಶಿನಿ ನದಿಯನ್ನು ದಾಟಿ ನಾನು ಆಚೆ ದಡದಲ್ಲಿ ನಿಂತು `ರಾಜೂ ಕುರೂಯ್...' ಎಂದು ಕರೆದರೆ ಒಂದೆರಡು ಸಾರಿ ನೀರನ್ನು ಕಂಡು ಚಡಪಡಿಸುವ ರಾಜು ಏಕಾ ಏಕಿ ನೀರಿಗೆ ಧುಮುಕಿ ಲಬಕ್ ಲಬಕ್ ಎಂದು ಮುಳುಗುತ್ತ, ಯಡ್ರಾ ಬಡ್ರಾ ಈಸುತ್ತ ನಾನಿದ್ದ ದಡಕ್ಕೆ ಬಂದಾಗ ನನ್ನಲ್ಲಿ ನಗುವಿರುತ್ತಿತ್ತು. ಇತ್ಲಾ ದಡಕ್ಕೆ ಬಂದ ನಾಯಿ ನದಿ ದಾಟಿದ್ದ ಕಾರಣಕ್ಕೆ ತನ್ನ ವದ್ದೆಯಾದ ಮೈಯನ್ನು ಪಟ್ಟಾ ಪಟ್ಟಾ ಎಂದು ನನ್ನತ್ತ ಕುಡುವುತ್ತಿತ್ತು.. `ಹಚ್ಯಾ ಹೊಲಸು ಕುನ್ನಿ..' ಎಂದು ನಾನು ಬಯ್ಯುತ್ತಿದ್ದೆನಾದರೂ ಅಕ್ಕರೆಯ ಪ್ರಿತಿಗೆ ಎನ್ನುವುದು ಸುಳ್ಳಲ್ಲ ನೋಡಿ.
ಒಂದು ಭಾನುವಾರ ನಾನು ರಾಜು ಜೊತೆಗೆ ಗದ್ದೆಗೆ ಹೋಗಿದ್ದೆ. ಯಾವಾಗಲೂ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಚಿಕ್ಕಪ್ಪಂದಿರಾದ ನಾಗೇಂದ್ರ ಹಾಗೂ ಮಹೇಶರು ಆವತ್ತು ಯಾವ ಕಾರಣಕ್ಕೋ ಅಲ್ಲಿರಲಿಲ್ಲ. ನಾನು ಹೋದವನಿಗೆ ಹೊತ್ತು ಹೋಗಬೇಕಲ್ಲ. ಮದ್ಯಾಹ್ನದ ಹೊತ್ತು ಬೇರೆ. ಮನೆಯಲ್ಲಿದ್ದರೆ ಊಟಕ್ಕೆ ಬಾ ಎಂಬ ಬುಲಾವೂ ಬರುತ್ತಿತ್ತು. ಹೋದವನು ಗದ್ದೆಯಲ್ಲೆಲ್ಲ ಸುತ್ತಾಡಿದೆ. ಅಲ್ಲೊಂದು ಕಡೆ ಗದ್ದೆಯ ಹಾಳಿಯ ಮೇಲೆ ನಾಲ್ಕೈದು ಬಿಳಿಯ ಮೊಟ್ಟೆಗಳು ಕಾಣಿಸಿತು. ಕುತೂಹಲದಿಂದ ನೋಡುತ್ತಿದ್ದಂತೆ ರಾಜು ಒಂದು ಮೊಟ್ಟೆಯನ್ನು ಕಚ್ಚಿಯೇ ಬಿಟ್ಟಿತು. ಪಾ...ಪ ಆ ಮೊಟ್ಟೆಯಲ್ಲಿ ಇನ್ನೊಂದು ವಾರ ಕಳೆದಿದ್ರೆ ಹಕ್ಕಿಯಾಗಿ ಹಾರಿ ಹೊರ ಹೋಗಲು ಬಯಸಿದ್ದ ಬೆಳ್ಳಕ್ಕಿ ಮರಿಯೊಂದು ಜೀವ ತಳೆಯುತ್ತಿತ್ತು. ರಾಜು ಮೊಟ್ಟೆಯೊಡೆದದ್ದೇ ಒಡೆದದ್ದು ಒಂದೆರಡು ಸಾರಿ ವಿಲಿ ವಿಲಿ ಒದ್ದಾಡಿದ ಆ ಹಕ್ಕಿಯ ಜೀವ ಚಟ್ಟನೆ ಹಾರಿ ಹೋಯಿತು. ನಾನು ಸಿಟ್ಟಿನಿಂದ ರಾಜುವಿನ ಬೆನ್ನಿಗೆ ಗನಾಕಿ ಬಡಿದೆ. ಕಂಯ್ಕ್ ಎಂದು ಓಡಿದ ನಾಯಿ ಸುಮಾರು ಹೊತ್ತಿನ ವರೆಗೂ ನನ್ನಿಂದ ಸುರಕ್ಷಿತ ಅಂತರವನ್ನೇ ಕಾಪಾಡಿಕೊಂಡಿತ್ತು.
ಹಕ್ಕಿಯ ಮೊಟ್ಟೆ ಒಡೆಯಿತಲ್ಲ ಛೇ,. ಎಂದುಕೊಂಡು ಮುಂದಕ್ಕೆ ಬರುತ್ತಿದ್ದಂತೆ ಅಲ್ಲೊಂದು ಕಡೆ ಕುಚಗುಂಡಿಯ ಒಬ್ಬಾತ ದನಗಳನ್ನು ಮೇಯಿಸುತ್ತಿದ್ದ. ಹೆಸರು ಸರಿಯಾಗಿ ನೆನಪಾಗುತ್ತಿಲ್ಲ. ಕುಚಗುಂಡಿಯ ಮಂಜ ಎನ್ನುವವನ ಮಗ ಎಂಬುದು ಅಸ್ಪಷ್ಟವಾಗಿ ನೆನಪಿದೆ. ಅವನ ಬಳಿ ಹೋದವನೇ ಅದೂ ಇದೂ ಮಾತಿಗೆ ನಿಂತೆ. ಆತ ಸುಮಾರು ಹೊತ್ತು ಹಲುಬಿದ. ಅಷ್ಟರಲ್ಲಿ ಅಲ್ಲೆಲ್ಲೋ ಅಡ್ಡಾಡಿದ ರಾಜು ಹತ್ತಿರ ಬಂದಿತು. ದನ ಮೇಯಿಸುತ್ತಿದ್ದವನ ಕಣ್ಣಿಗೆ ರಾಜು ಬಿದ್ದಿತು. ಅಲ್ಲಿ ಹುಲ್ಲು ಮೇಯುತ್ತಿದ್ದ ದನಗಳ ಕಣ್ಣಿಗೆ ರಾಜು ಬಿದ್ದ ಪರಿಣಾಮ ಒಂದೆರಡು ದನಗಳು ಬುಸ್ಸೆನ್ನುತ್ತ ರಾಜುವನ್ನು ಬೆನ್ನಟ್ಟಿ ಬಂದವು. ಅವುಗಳ ಭಯಕ್ಕೆ ಹೆದರಿ ನನ್ನ ಕಾಲ ಬುಡದಲ್ಲಿ ಬಂದು ಮಲಗಿತು ರಾಜು. ರಾಜುವನ್ನು ಕಂಡಾತ `ನಂಗೆ ಕೊಡ್ರಾ ಈ ಕುನ್ನಿಯಾ..' ಎಂದ ದನಕಾಯುವವ. ನಾನು ಆಗೋದಿಲ್ಲ ಎಂದೆ. ಮತ್ತೊಂದೆರಡು ಸಾರಿ ಕೇಳಿದ. ನಾನು ಮತ್ತೆ ನಕಾರಾತ್ಮಕ ಉತ್ತರ ನೀಡಿದೆ. ಆತ ಸುಮ್ಮನಾದ.
ಅಲ್ಲೇ ಒಂದು ಮಾಳ ಇತ್ತು. ನಾನು ಸೀದಾ ಮಾಳ ಹತ್ತಿದೆ. ಕೆಳಗೆ ನಿಂತಿದ್ದ ರಾಜು ಮತ್ತೆ ಚಡಪಡಿಸಲಾರಂಭಿಸಿತು. ನನ್ನ ಹಾಗೂ ರಾಜುವನ್ನು ನೋಡುತ್ತಿದ್ದ ಆ ದನಕಾಯುವ ವ್ಯಕ್ತಿ, `ಹೋಯ್.. ಆ ನಾಯಿಯನ್ನು ಹೊತ್ಕಂಡು ಹೋಗ.. ಮಾಳದ ಮೇಲೆ ಹತ್ಸಾ...' ಎಂದ. ನಾನು ತುಂಟ ಎಂದು ಆಗಲೇ ಹೇಳಿದ್ದೆನಲ್ಲಾ.. ಆತ ಹೇಳಿದಂತೆ ಮಾಡಿದೆ. ಮಾಳದ ಮೇಲೆ ಹತ್ತಿಸಿದೆ. ಮೊದ ಮೊದಲು ಹೆದರಿದಂತೆ ಇದ್ದ ರಾಜು ಕೊನೆಗೆ ಮಾಳದಲ್ಲೇ ಕುಣಿಯಲಾರಂಭಿಸಿತು. ಸುಮಾರು ಹೊತ್ತು ಕಳೆದ ಮೇಲೆ ನನಗೆ ಹಸಿವಾಗಲಾರಂಭಿಸಿತು. ನಾನು ಸೀದಾ ಮಾಳದಿಂದ ಇಳಿದೆ. ಹಾಗೆ ಇಳಿಯುವವನು ರಾಜುವನ್ನು ಹಿಡಿದು ಇಳಿಯಲಾರಂಭಿಸಿದೆ. ಕೊನೆಗೆ ಅದೇ ದನಕಾಯುವವನು `ರಾಜುವನ್ನು ಅಲ್ಲೇ ಬಿಟ್ಟು ಇಳಿಯಾ.. ಎಂತಾ ಮಾಡ್ತೈತಿ ನೋಡ್ವಾ...' ಎಂಬ ಐಡೀರಿಯಾ ಕೊಟ್ಟ.
ನನಗೆ ಸರಿಯೆನ್ನಿಸಿ ನಾಯಿಯನ್ನು ಮಾಳದ ಮೇಲೆಯೇ ಬಿಟ್ಟು ಕೆಳಕ್ಕಿಳಿದೆ. ಇಳಿದು ಮನೆಗೆ ಹೊರಟವನಂತೆ ನಟಿಸಿದೆ. ರಾಜು ಒಂದೆರಡು ಸಾರಿ ನೋಡಿತು. ಚಡಪಡಿಸಿತು. ಮಾಳವೆಂದರೆ ಸಾಮಾನ್ಯವಾಗಿ ನೆಲದಿಂದ 6-7 ಅಡಿ ಎತ್ತರದಲ್ಲಿರುತ್ತದೆ. ಚಡಪಡಿಸಿದ ನಾಯಿ ಸೀದಾ ಜಿಗಿದೇ ಬಿಟ್ಟಿತು. ಜಿಗಿದ ನಾಯಿ ಮತ್ತೆ ಮೇಲೇಳುವಾಗ ಕಂಯೋ ಕಂಯೋ ಎಂದು ಕೂಗುತ್ತಲೇ ಇತ್ತು. ನಾನು ಏನೋ ಭಾನಗಡಿ ಆಗಿದೆ ಎಂದು ಹೆದರಿದೆ. ನಾಯಿಯನ್ನು ಹೊತ್ತುಕೊಂಡು ಓಡಿದೆ. ಗದ್ದೆಯಲ್ಲಿಯೇ ಇದ್ದ ಮನೆಯಲ್ಲಿ ನಾಯಿಯನ್ನು ಬಿಟ್ಟವನೇ ಮನೆಯ ಕಡೆಗೆ ಕಾಲ್ಕಿತ್ತೆ.
ವಾಸ್ತವದಲ್ಲಿ ಆಗಿದ್ದೇನೆಂದರೆ ಮಾಳದಿಂದ ಕೆಳಕ್ಕೆ ನಾಯಿ ಜಿಗಿದಿದ್ದೇನೋ ಖರೆ. ಮಾಳಕ್ಕೆ ಹತ್ತಲು ಬಿದಿರಿನಿಂದ ಏಣಿಯೊಂದನ್ನು ಮಾಡಿದ್ದರು. ಆ ಏಣಿಯಿಂದ ಚಿಕ್ಕ ಚೂಪಾದ ಚೂರೊಂದು ಮುಂದಕ್ಕೆ ಚಾಚಿಕೊಂಡಿತ್ತು. ನಾಯಿ ಜಿಗಿದಿದ್ದೇ ಈ ಚೂರಿಗೆ ತಾಗಿತು. ಕಾಲೆಜ್ಜೆ ಸಿಕ್ಕಿಬಿದ್ದು ತಲೆಕೆಳಗಾಗಿ ನಾಗಿ ಬಿದ್ದಿತ್ತು. ಆ ರಭಸಕ್ಕೆ ನಾಯಿಯ ಕಾಲೊಂದು ಮುರಿದು ಬಿಟ್ಟಿತ್ತು. ನಾನು ಗದ್ದೆಯಲ್ಲಿ ಬಿಟ್ಟವನೇ ಮನೆಗೆ ಓಡಿ ಮನೆಯಲ್ಲಿಯೇ ನಿಂತಿದ್ದು.
ನಾನು ಉಸಿರು ಬಿಡುತ್ತ ಓಡಿ ಬಂದಿದ್ದನ್ನು ನೋಡಿದ ಮನೆಯವರಿಗೆ ನಾನೇನೋ ಭಾನಗಡಿ ಮಾಡಿರುವುದು ಪಕ್ಕಾ ಆಯಿತು. ಆದರೆ ಏನು ಭಾನಗಡಿ ಮಾಡಿದ್ದೇನೆ ಎನ್ನುವುದು ತಿಳಿಯಲಿಲ್ಲ. ಪೊಲೀಸ್ ಸ್ಟೇಷನ್ನುಗಳಲ್ಲಿ ನಡೆಯುವುದಕ್ಕಿಂತ ಹೆಚ್ಚಿಗೆ ತನಿಖೆ ನಡೆಯಿತು. ನಾನು ಏನನ್ನೂ ಬಾಯಿ ಬಿಡಲಿಲ್ಲ. ಆ ಸಮಯದಲ್ಲೇ ಮನೆಯವರ್ಯಾರೋ ರಾಜು ನಾಯಿ ಇಲ್ಲದ್ದನ್ನು ಗಮನಿಸಿದರು. ಅದಕ್ಕೆ ತಕ್ಕಂತೆ ಮತ್ಯಾರೋ ರಾಜು ನಾಯಿ ನನ್ನ ಜೊತೆಗೆ ಹೋಗಿದ್ದನ್ನೂ ಕಂಡಿದ್ದರು. ಅವರು ಹೇಳಿದ್ದೇನೆಂದರೆ ನಾನು ರಾಜುವಿಗೆ ಏನೋ ಮಾಡಿಬಿಟ್ಟಿದ್ದೇನೆ. ಹಾಗಾಗಿ ರಾಜು ಕಾಣಿಸುತ್ತಿಲ್ಲ ಎನ್ನುವುದು.
ಆಗ ಶುರುವಾಯ್ತು ನೋಡಿ ಅಪ್ಪನ ಹೊಡೆತ... ಅಬಾಬಾಬಾ... ಕೊನೆಗೆ ನಾನು ಬಾಯಿಬಿಟ್ಟಿದ್ದೆ. ಆ ಮದ್ಯಾಹ್ನ ೂಟ ಮುಗಿಸಿ ಮದ್ಯಾಹ್ನದ ಗುಕ್ಕು ನಿದ್ದೆ ಮುಗಿಸಿ ಸಂಜೆ ಆಗಬೇಕು ಎನ್ನುವಷ್ಟರಲ್ಲಿ ಗದ್ದೆಯ ಕಡೆಗಿಂದ ನಿಧಾನವಾಗಿ ಕಾಲನ್ನು ಎಳೆಯುತ್ತ ಬರುತ್ತಿತ್ತು ನೋಡಿ ರಾಜು ಕುನ್ನಿ.. ಸಧ್ಯ ಏನೂ ಆಗಿಲ್ಲವಲ್ಲ ಎನ್ನುವ ನಿಟ್ಟುಸಿರು ನನ್ನಲ್ಲಿ. ಆದರೆ ಆ ಘಟನೆಯ ನಂತರ ರಾಜು ಮಾತ್ರ ನನ್ನ ಪರವಾಗಿ ನಿಲ್ಲುವುದನ್ನು ನಿಲ್ಲಿಸಿತ್ತು. ಯಾರಾದರೂ ನನಗೆ ಬೈಯಲಿ, ಹೊಡೆಯಲಿ ಅದು ಗುರ್ರೆಂದು ಅವರನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಿಬಿಟ್ಟಿತ್ತು. ಪಾ..ಪ ಅದೇನೋ ಆಘಾತವಾಗಿತ್ತು ಅದಕ್ಕೆ.
ಇಂತಹ ರಾಜು ನನ್ನನ್ನು ಶಾಲೆಗೆ ಕಳಿಸಿಕೊಡಲು ಬರುತ್ತಿತ್ತು. ನಮ್ಮೂರಿನಿಂದ ನಾನು ಹೋಗುತ್ತಿದ್ದ ಅಡ್ಕಳ್ಳಿ-ಕೋಡ್ಸಿಂಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2.5 ಕಿ.ಮಿ ದೂರವಾಗುತ್ತದೆ. ಎಷ್ಟೇ ವೇಗವಾಗಿ ನಡೆದರೂ 30 ನಿಮಿಷ ಬೇಕೇ ಬೇಕು. ನಾನು, ನನ್ನ ಜೊತೆಗೆ ಬಾಳಗಾರ್ ಗಪ್ಪತಿ, ಹಂಚಳ್ಳಿಯ ಶ್ರೀಪಾದ, ಶ್ರೀಪಾದನ ತಂಗಿ ನಾಗರತ್ನಾ, ಸಂತೋಷಣ್ಣ, ಮೇಲಿನಮನೆಯ ರಂಜು ಇಷ್ಟು ಜನ ಶಾಲೆಗೆ ಹೋಗುವವರು. ದಾರಿಯಲ್ಲಿ ದೊಡ್ಡದೊಂದು ಗುಡ್ಡ, ಗವ್ವೆನ್ನುವ ಕಾಡು, ಹೆಣ ಸುಡುವ ಸ್ಮಷಾನ ಇಷ್ಟ ಸಿಕ್ಕೇ ಸಿಗುತ್ತಿತ್ತು. ನಮ್ಮ ಧೈರ್ಯಕ್ಕೆ ರಾಜು ಬರುತ್ತಿದ್ದ. ರಾಜುವಿನ ಧೈರ್ಯಕ್ಕೆ ನಾವಿರುತ್ತಿದ್ದೆವು.
ಶಾಲೆಗೆ ಹೊರಟ ನಮ್ಮ ಹಿಂದೋ, ಮುಂದೋ ಬಾಲ ಅಲ್ಲಾಡಿಸುತ್ತ ಬರುತ್ತಿದ್ದ ರಾಜುವನ್ನು ದಾರಿ ಮಧ್ಯ ಅನೇಕ ಸಾರಿ `ರಾಜು.. ಮನೆಗೆ ನಡಿಯಾ...' ಎಂದು ನಾನು ಬಯ್ಯುತ್ತಿದ್ದರೂ ಆತ ಜೊತೆಗೆ ಬರುತ್ತಿದ್ದ. ಮುಂದೋ, ಹಿಂದೋ ಎಸ್ಕಾರ್ಟ್ ಮಾಡುತ್ತಿದ್ದ. ಅಂತವನ ಬೆನ್ನ ಮೇಲೆ ಒಂದೆರಡು ಸಾರಿ ನಾನು ನನ್ನ ಪಾಟಿಚೀಲವನ್ನು ಹಾಕಿ ಕಟ್ಟಿ ಕಳಿಸಿದ್ದೂ ಇದೆ. ದಾರಿ ಮಧ್ಯದಲ್ಲಿ ಅವನ್ನು ಬೀಳಿಸಿ, ಬಾಲ ಅಲ್ಲಾಡಿಸುತ್ತಾ ನಿಂತಿದ್ದ ರಾಜು ನನ್ನ ಕಣ್ಣೆದುರಿಗೆ ಇನ್ನೂ ಸ್ಪಷ್ಟವಾಗಿದೆ. ನಮ್ಮ ಜೊತೆಗೆ ಶಾಲೆಯ ಬಳಿ ಬರುವ ರಾಜು ಶಾಲೆಯ ಆಟದ ಬಯಲಿನಲ್ಲಿ ನಿಂತು ಎದುರು ಒಮ್ಮೆ ನೋಡುತ್ತಿದ್ದ. ಬಯಲಿನಲ್ಲಿ ಯಾವುದಾದರೂ ಬೇರೆಯ ನಾಯಿಗಳಿದ್ದರೆ ಸದ್ದಿಲ್ಲದೇ ಮನೆಗೆ ವಾಪಾಸಾಗುತ್ತಿದ್ದ ರಾಜು, ಯಾರೂ ಇಲ್ಲ ಎಂದಾದರೆ ಮೈದಾನದಲ್ಲೇ ಸುತ್ತಾಡುತ್ತಿದ್ದ. ನಾನು ಕಲ್ಲು ಹೊಡೆದು ಓಡಿಸಿದ ಮೇಲೆಯೇ ಮನೆಗೆ ವಾಪಾಸಾಗುತ್ತಿದ್ದ. ಅನೇಕ ಸಾರಿ ಈ ಮೈದಾನದಲ್ಲಿಯೇ ರಾಜು ಬೇರೆಯ ನಾಯಿಗಳೊಂದಿಗೆ ಜಿದ್ದಾ ಜಿದ್ದಿನ ಕಾಳಗ ಮಾಡಿದ್ದನ್ನು ನಾನು ನೋಡಿದ್ದೇನೆ. ಗಾಯ ಮಾಡಿಕೊಂಡು ಬರುತ್ತಿದ್ದ ನಾಯಿಗೆ ಬೂದಿಯನ್ನು ಹಚ್ಚಿ ಸಮಾಧಾನ ಪಡಿಸಿದ್ದೇನೆ.
ರಾಜು ಇದ್ದ ಸಮಯದಲ್ಲಿಯೇ ಬೆಳ್ಳ ಎನ್ನುವ ಇನ್ನೊಂದು ನಾಯಿ ನಮ್ಮ ಮನೆಯಲ್ಲಿತ್ತು. ಎಲ್ಲಿಂದಲೋ ಬಂದು ನಮ್ಮನೆಯಲ್ಲಿ ಉಳಿದಿದ್ದ ನಾಯಿ ಅದು. ಚಿಕ್ಕಪ್ಪಂದಿರು ಈ ನಾಯಿಯನ್ನು ಅಕ್ಕರೆಯಿಂದ ಸಾಕಿದ್ದರು. ಬೆಳ್ಳ ಹಾಗೂ ರಾಜು ಅಣ್ಣ ತಮ್ಮಂದಿರಂತಿದ್ದರು. ನಮ್ಮ ಮನೆಯಲ್ಲಿಯೇ ಅವರು ಜಾಗವನ್ನೂ ಪಾಲು ಮಾಡಿಕೊಂಡಿದ್ದರು. ಬೆಳ್ಳ ಹೆಬ್ಬಾಗಿಲ ಬಳಿ ತನ್ನ ಕಾರ್ಯಸ್ಥಾನ ಮಾಡಿಕೊಂಡಿದ್ದರೆ ರಾಜು ಹಿತ್ಲಾಕಡಿಗೆ ಉಳಿದಿದ್ದ. ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಅಡಿಕೆ ಬೇಯಿಸಲು ಹೆಬ್ಬಾಗಿಲ ಬಳಿ ಹಾಕುತ್ತಿದ್ದ ದೊಡ್ಡ ಒಲೆ ಬೆಳ್ಳನ ವಾಸಸ್ತಾನವಾಗಿದ್ದರೆ ಹಿತ್ಲಾಕಡಿಗೆ ಬಚ್ಚಲಮನೆಯ ಒಲೆ ರಾಜುವಿನ ಅಂತಪುರವಾಗಿತ್ತು. ಇಬ್ಬರಿಗೂ ಭಯಂಕರ ದೋಸ್ತಿಯಿದ್ದರೂ ದೋಸೆ ಹಾಕುವಾಗ ಅಥವಾ ಅನ್ನ ಹಾಕುವಾಗ ಮಾತ್ರ ಪಕ್ಕಾ ಶತ್ರುಗಳ ತರ. ಪರಸ್ಪರ ಹಲ್ಲು ತೋರಿಸುವುದು, ಗುರ್ರೆನ್ನುವುದು, ಕಾಲು ಕೆರೆಯುವುದು ನಡೆದೇ ಇತ್ತು. ಹೀಗೆ ಜಗಳ ಆರಂಭವಾದ ಸಂದರ್ಭದಲ್ಲಿ ಇವೆರಡರ ಪೈಕಿ ಸ್ವಲ್ಪ ಸಣ್ಣದಾಗಿದ್ದ ರಾಜುವೇ ಸೋಲೊಪ್ಪಿಕೊಳ್ಳುತ್ತಿತ್ತು ಬಿಡಿ. ಆಮೇಲೆ ನಾನು ಬೆಳ್ಳನನ್ನು ಸರಪಳಿಯಿಂದ ಕಟ್ಟಿಹಾಕಿದ ನಂತರ ರಾಜುವಿಗೆ ಪ್ರತ್ಯೇಕವಾಗಿ ಅನ್ನ ಹಾಕುತ್ತಿದ್ದೆ. ಅನ್ನ ಹಾಕಿದವನು ಅಲ್ಲೇ ನಿಂತಿದ್ದರೆ ರಾಜು ನನಗೂ ಗುರ್ರೆನ್ನುತ್ತಿತ್ತು. ಆಗ ಮಾತ್ರ ನಾಯಿಯ ಬೆನ್ನು ಮುರಿದು ಬಿಡಬೇಕು ಎನ್ನುವಷ್ಟು ಸಿಟ್ಟು ಬರುತ್ತಿತ್ತು.
ನಾನು ರಾಜುವನ್ನು ಸಾಕಿರುವುದು ನನ್ನ ಚಿಕ್ಕಪ್ಪಂದಿರಿಗೆ ಇಷ್ಟವಿರಲಿಲ್ಲ. ಮೊದ ಮೊದಲು ಅದನ್ನು ಸಾಕಿದ್ದು ಇಷ್ಟ ಪಟ್ಟವರಂತೆ ನಟಿಸಿದ್ದರು. ಆದರೆ ಕೊನೆ ಕೊನೆಗೆ ಅವರು ಮಾತು ಮಾತಿಗೂ ಬಯ್ಯತೊಡಗಿದ್ದರು. ನಾನು ಚಿಕ್ಕವನಾಗಿದ್ದ ಕಾರಣ ನಾನೇನೇ ಹೇಳಿದರೂ ಅದಕ್ಕೆ ಬೆಲೆಯೇ ಇರುತ್ತಿರಲಿಲ್ಲ. ಅಪ್ಪಯ್ಯ ಮನೆ ಯಜಮಾನನಾಗಿದ್ದ ಕಾರಣ ತಮ್ಮಂದಿರ ಬೇಜಾರನ್ನು ಶಮನ ಮಾಡುವ ಕಾಯಕದಲ್ಲಿ ನಿರತನಾಗುತ್ತಿದ್ದ. ಈಗಿನ ರಾಜಕಾರಣಿಗಳು ಹೇಗೆ ಅಲ್ಪ ಸಂಖ್ಯಾತರನ್ನು ಓಲೈಸುತ್ತಾರೋ ಹಾಗೆ.
ನಾನು ಅಥವಾ ನನ್ನಮನೆಯಲ್ಲಿ ಏನೇ ಒಳ್ಳೆಯದನ್ನು ಸಾಕಿದರೂ, ವಸ್ತುಗಳನ್ನು ಸಾಕಿದರೂ ಅದನ್ನು ನನಗೆ ಕೊಡಿ ಎಂದು ಕೇಳುವವರು ಆಗಲೂ ಇದ್ದರು ಈಗಲೂ ಇದ್ದಾರೆ. ಹೀಗಿದ್ದಾಗ ಚಾರೆಕೋಣೆಯ ಒಬ್ಬರು ನಮ್ಮೂರಿಗೆ ಬಂದಿದ್ದರು. ನಮ್ಮ ಮನೆಯ ಪಕ್ಕದ ಮನೆಗೆ ಚಾರೇಕೋಣೆಯ ಸಂಬಂಧವೂ ಇದೆ ಎನ್ನಿ. ಬಂದವರೇ ಅವರ ಮನೆ ಕಾಯಲು ನಾಯಿಯೊಂದು ಬೇಕು. ರಾಜುವನ್ನು ಕೊಡುತ್ತೀರಾ ಎಂದು ಕೇಳಿದರು. ನಾನು ಇಲ್ಲ ಎಂದೆ. ಆದರೆ ಅಪ್ಪ ತಮ್ಮಂದಿರನ್ನು ಓಲೈಸುವ ಸಲುವಾಗಿ ರಾಜುವನ್ನು ಕೊಟ್ಟುಬಿಡಲು ನಿರ್ಧಾರ ಮಾಡಿದ್ದರು. ನಾನು ಶಾಲೆಗೆ ಹೋಗಿದ್ದ ಸುಸಂದರ್ಭವನ್ನೇ ನೋಡಿ ರಾಜುವನ್ನು ಕೊಟ್ಟು ಹಾಕಿದ್ದರು. ಮನೆಗೆ ಬಂದವನು ನಾನು ಆ ದಿನ ಮಾಡಿದ ರಂಪಾಟ ಅಷ್ಟಿಷ್ಟಲ್ಲ ಬಿಡಿ. ಆ ದಿನ ನನಗೆ ಮನೆಯಲ್ಲಿನ ಎಲ್ಲ ಸದಸ್ಯರೂ ಯಥಾನುಶಕ್ತಿ ಹೊಡೆದು ಬಿಟ್ಟಿದ್ದರು. ನಾನು ಸುಮ್ಮನಾಗಿರಲಿಲ್ಲ.
ಅತ್ತ ಚಾರೆಕೋಣೆಗೆ ಹೋದ ರಾಜು ಸುಮ್ಮನಿರುತ್ತದೆಯೇ? ಅಲ್ಲಿ ತಾನೂ ಪ್ರತಿಭಟನೆ ಶುರುಮಾಡತೊಡಗಿತ್ತು. ಮೊದಲೆರಡು ದಿನ ಊಟ ಮಾಡಲಿಲ್ಲ. ಏನೋ ರೋಗ ಬಂದವರಂತೆ ನಟಿಸಿತು. ಕೊನೆಗೆ ಹಸಿವು ಸಿಕ್ಕಾಪಟ್ಟೆ ಹೆಚ್ಚಿದಾಗ ಹಾಲು ಕುಡಿದು ಅನ್ನ ಊಟ ಮಾಡಿತಂತೆ. ನಾಲ್ಕು ದಿನಕ್ಕೆಲ್ಲಾ ನಾಯಿ ಅವರ ಮನೆಯವರಂತೆ ಆಯಿತು. ನಾಯಿಗೆ ಹಳೆಯದೆಲ್ಲ ಮರೆತಿದೆ. ಇನ್ನು ತೊಂದರೆಯಿಲ್ಲ ಎಂದು ಕಟ್ಟಿದ್ದ ಸರಪಳಿ ಬಿಚ್ಚಿ ಬಿಟ್ಟರು. ಆಗ ನಾಯಿಯ ಅಸಲಿ ಬಣ್ಣ ಬಯಲಾಯಿತು ನೋಡಿ. ಸೀದಾ ಅಲ್ಲಿಂದ ಓಡಿದ ರಾಜು ನಾಲ್ಕು ಸಾರಿ ಅಘನಾಶಿನಿ ನದಿಯನ್ನು ದಾಟಿ, ಒಂದು ಒಪ್ಪತ್ತಿನೊಳಗೆಲ್ಲ ನಮ್ಮ ಮನೆಗೆ ಹಾಜರಾಗಿಬಿಟ್ಟಿತ್ತು.
ಧರಿದ್ರ ನಾಯಿ ಮತ್ತೆ ಬಂತಾ..? ಎಂದು ಚಿಕ್ಕಪ್ಪ ಬಯ್ಯುತ್ತಿದ್ದರೆ `ತಮಾ.. ನೋಡಾ... ನಾಯಿ ಬಂತಲಾ... ಉಂಚಳ್ಳಿ ಜಲಪಾತದ ಹತ್ತಿರದಿಂದ ನಡೆದುಕೊಂಡು ಬಂತಲಾ.. ಅದಕ್ಕೊಂದು ದೋಸೆ ಹಾಕಾ...' ಎಂದು ಅಮ್ಮ ಖುಷಿಯಿಂದ ಹೇಳಿದ್ದು ಇನ್ನೂ ನೆನಪಿನಲ್ಲಿದೆ. ಆ ದಿನದಿಂದ ಮತ್ತೆ ರಾಜು ಹಾಗೂ ನಾನೂ ಒಂದೇ ದೋಣಿಯ ಕಳ್ಳರಾಗಿಬಿಟ್ಟಿದ್ದೆವು.
ಇದಾಗಿ ಆರೆಂಟು ತಿಂಗಳಾಗಿತ್ತು. ನಮ್ಮ ಮನೆಯಲ್ಲಿ ಕೊನೆಕೊಯ್ಲಿನ ಹಂಗಾಮು. ಮನೆಯಲ್ಲಿ ಕೊನೆ ಕೊಯ್ದಿದ್ದರು. ಸಿಕ್ಕಾಪಟ್ಟೆ ಚಳಿ ಬೇರೆ. ಜನವರಿಯೇನೋ. ಅಂಗಳದಲ್ಲಿ ಅಡಿಕೆ ಬೇಯಿಸಲು ಬೆಂಕಿ ಹಾಕಿದ್ದರು. ಆ ಬೆಂಕಿಯ ಮುಂದೆ ರಾಜು ಮಲಗಿದ್ದ. ಯಾವತ್ತೂ ಆ ಒಲೆಯ ಎದುರು ಮಲಗುತ್ತಿದ್ದ ಬೆಳ್ಳ ಆವತ್ತು ಮಾತ್ರ ಸದ್ದಿರದೇ ಮನೆಯ ಒಳಗೆ ಬಂದು ರಬ್ಬಿಕೊಂಡು ಮಲಗಿದ್ದ. ರಾತ್ರಿ ಯಾವುದೋ ಜಾಗದಲ್ಲಿ ನಾಯಿ ದೊಡ್ಡದಾಗಿ ಕೂಗಿದ ಸದ್ದು. ಆ ನಂತರ ನಾಯಿ ಕಂಯೋ.. ಎಂದು ಕೂಗಿದ್ದೂ ಕೇಳಿಸಿತು. ತಕ್ಷಣ ಚಿಕ್ಕಪ್ಪಂದಿರು ದೊಡ್ಡ ಬಡಿಗೆಯನ್ನು ಹಿಡಿದು ಮನೆಯಿಂದ ಹೊರಕ್ಕೆ ಬಂದಿದ್ದರು. ಆದರೆ ಅಷ್ಟರಲ್ಲಿ ಗುರ್ಕೆ (ಹುಲಿಯ ಜಾತಿಗೆ ಸೇರಿದ್ದು, ಮರಿ ಚಿರತೆ ಎನ್ನಬಹುದು) ರಾಜುವನ್ನು ಕಚ್ಚಿ ಹೊಡಿದುಕೊಂಡು ಹೋಗಿತ್ತು.
ಬೆಳಗ್ಗೆ ಎದ್ದ ನಾನು ರಾಜುಗಾಗಿ ಹುಡುಕಿದರೆ ಎಲ್ಲಿದೆ ನಾಯಿ? `ತಮಾ ಇಲ್ನೋಡು.. ರಾಜುವನ್ನು ಎಳೆದೊಯ್ದ ಗುರುತು.. ನೋಡು ನೆಲ ಹೆಂಗೆ ಉಗುರಿನಲ್ಲಿ ಗಟ್ಟಿಯಾಗಿ ಗೀರಿದ್ದು.. ಗುರ್ಕೆ ಹಿಡಿದಾಗ ತಪ್ಪಿಸಕ್ಕಂಬಲೆ ಭಾರಿ ಪ್ರಯತ್ನ ಮಾಡಿತ್ತು ಕಾಣ್ತು ನೋಡು..' ಎಂದರು ಅಮ್ಮ. ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಬಂದ ಬೆಳ್ಳ ರಾಜುವನ್ನು ಗುರ್ಕೆ ಹಿಡಿದ ಜಾಗವನ್ನು ಮೂಸಿ ನೋಡಿದ. ಹೂಕ್ಷ್.. ಎಂದು ಒಮ್ಮೆ ಸೀನಿದ. ರಾತ್ರಿ ಗುರಕೆ ಬಂದಿರುವುದನ್ನು ಅರಿತ ಬೆಳ್ಳ ಮನೆಯೊಳಕ್ಕೆ ಹೊಕ್ಕಿದ್ದನೇನೋ. ರಾಜುವಿಗೆ ಅದು ಗೊತ್ತಾಗಿರಲಿಲ್ಲ. ಚಳಿ, ಒಳ್ಳೆ ಬೆಂಕಿ ಹಾಕಿದ್ದಾರೆ. ಬೆಳ್ಳನೂ ಇಲ್ಲ. ಆರಾಮಾಗಿ ಮಲಗೋಣ ಎಂದು ನಿದ್ರೆಗೆ ಜಾರಿದ್ದ ರಾಜು ಗುರ್ಕೆ ಬಾಯಿಗೆ ಬಲಿಯಾಗಿದ್ದ. ಬೆಳ್ಳ ಸೀನಿದ್ದು ಮಾತ್ರ ನನಗೆ ನಿಟ್ಟುಸಿರಿನ ಹಾಗೇ ಅನ್ನಿಸಿತು.
ಈ ಘಟನೆ ಜರುಗಿ ಕನಿಷ್ಟ 20 ವರ್ಷಗಳೇ ಸರಿದಿವೆ. ಅದಾದ ಮೇಲೆ ಕನಿಷ್ಟ 10ಕ್ಕೂ ಹೆಚ್ಚು ನಾಯಿಗಳನ್ನೂ, 15ಕ್ಕೂ ಹೆಚ್ಚು ಬೆಕ್ಕುಗಳನ್ನೂ ನಾನು ತಂದು ಸಾಕಿದ್ದೇನೆ. ನಾಯಿಗಳಿಗೆ ನಿಖಿತಾ, ಬಿಂಬಿ, ಭೀಮಣ್ಣ ಖಂಡ್ರೆ ಹೀಗೆ ತರಹೇವಾರಿ ಹೆಸರುಗಳನ್ನೂ, ಸೋನು, ಮೋನು, ಸಾಂಬ, ರಂಗೀಲಾ ಈ ಮುಂತಾದ ಬೆಕ್ಕಿಗೂ ಇಟ್ಟು ಖುಷಿ ಪಟ್ಟಿದ್ದೇನೆ. ಆದರೆ ಮೊದಲು ಸಾಕಿದ ನಾಯಿ ರಾಜು ಮಾತ್ರ ಇನ್ನೂ ನೆನಪಿನಲ್ಲಿದೆ. ಪ್ರತಿ ಚಳಿಗಾಲದಲ್ಲಿ ರಾಜುವಿನ ನೆನಪು ಕಾಡುತ್ತಿರುತ್ತದೆ. ಎಷ್ಟೇ ನಾಯಿಗಳನ್ನು ತಂದರೂ ಮನದ ಮೂಲೆಯಲ್ಲಿದ್ದ ರಾಜು ಮತ್ತೊಮ್ಮೆ ಕಣ್ಣೆದುರು ಬಂದಂತಾಗುತ್ತದೆ. ರಾಜೂ ಕುರೂಯ್.. ಎಂದು ಕರೆಯೋಣ ಅನ್ನಿಸುತ್ತಿದೆ. ನಾಯಿಯೊಂದು ಅಚ್ಚಳಿಯದೇ ಉಳಿದಿದ್ದು ಹೀಗೆ.
(ಥೇಟ್ ಹಿಂಗೇ ಇತ್ತು ರಾಜು... ) |

No comments:
Post a Comment