(ಸೀತಾದಂಡೆ.) |
ವಾಪಸ್ಸಾಗುವ ದಾರಿಯನ್ನು ಹಿಡಿದು ಎಲ್ಲರೂ ಬರುತ್ತಿದ್ದರು. ಸ್ವಲ್ಪ ದೂರ ಬಂದಿರಬಹುದಷ್ಟೇ, ಆಗ ಅಲ್ಲಿ ಒಬ್ಬ ವ್ಯಕ್ತಿ ನೆಲದ ಮೇಲೆ ಬಿದ್ದು ಹೊರಳಾಡುತ್ತಿರುವುದು, ಒದ್ದಾಡುತ್ತಿರುವುದು ಕಾಣಿಸಿತು. ಆ ವ್ಯಕ್ತಿಯ ಬಾಯಲ್ಲಿ ಬಿಳಿ ನೊರೆ ಬರುತ್ತಿತ್ತು. ಹತ್ತಿರ ಹೋಗಿ ನೋಡಿದಾಗ ಅಲ್ಲಿ ಬಿದ್ದಾತ ಆಗಷ್ಟೇ ಜಲತಾತದಿಂದ ಓಡಿ ಕಣ್ಮರೆಯಾದ, ಎಲ್ಲೆಂದರಲ್ಲಿ ಹಿಂಬಾಲಿಸಿ ಕಾಟಕೊಟ್ಟು ಕಾಡುತ್ತಿದ್ದ ಅಪರಿಚಿತನೇ ಎಂಬುದು ತಿಳಿಯಿತು. ಎಲ್ಲರೂ ಗಡಬಡಿಸಿ ಕೇಳಿದಾಗ ಆತ `ಹಾವು.. ಹಾವು..' ಎಂದು ಅಸ್ಪಷ್ಟವಾಗಿ ತೊದಲಿದ. ಎಲ್ಲರೂ ನೋಡಲಾಗಿ ಕಾಲಿನ ಪಾದದ ಬಳಿ ಹಾವು ಕಚ್ಚಿದ ಗುರುತು ಕಾಣಿಸಿತು. ವಿಕ್ರಮ ತಕ್ಷಣ ಪ್ರಥಮ ಚಿಕಿತ್ಸೆಗೆಂಬಂತೆ ಒಂದು ದಾರ ಹಾಗೂ ಬ್ಲೇಡನ್ನು ತೆಗೆದುಕೊಂಡ. ತಕ್ಷಣವೇ ಪ್ರದೀಪ `ಏ ವಿಕ್ರಂ.. ನಿನಗೆ ತಲೆ ಕೆಟ್ಟಿದೆಯಾ.. ಎಲ್ಲೆಂದರಲ್ಲಿ ಆತ ನಿನ್ನನ್ನು ಫಾಲೋ ಮಾಡಿ, ಕಾಟಕೊಟ್ಟವನು ಇವನು.. ಇಂತವನಿಗೆ ಪ್ರಥಮ ಚಿಕಿತ್ಸೆ ಯಾಕೆ ಮಾರಾಯಾ? ನಿನ್ನ ಫಾಲೋ ಮಾಡಿದವನ ಜೀವ ಉಳಿಸಲಿಕ್ಕೆ ನೋಡ್ತೀಯಲ್ಲೋ..' ಎಂದ.
`ಏ ಸುಮ್ನಿರೋ.. ಪಾಪ ಆತ ಸಾಯ್ತಿದ್ದಾನೆ. ಸೇಡಿದ್ದರೆ ಅದು ಕೊನೆಗಿರಲಿ. ಈಗ ಆತನನ್ನು ಉಳಿಸೋದು ಮುಖ್ಯ. ಬದುಕಿ ಉಳಿದರೆ ಯಾಕೆ ನಮ್ಮನ್ನು ಆತ ಹಿಂಬಾಲಿಸುತ್ತಿದ್ದ ಎಂಬುದನ್ನು ಕೇಳಿದರಾಯ್ತು..' ಎಂದ ವಿಕ್ರಂ. ಜೊತೆಗೆ ಪ್ರದೀಪನ ಮಾತನ್ನು ನಿರ್ಲಕ್ಷಿಸಿ ಆಗಂತುಕನಿಗೆ ಪ್ರಥಮ ಚಿಕಿತ್ಸೆ ನೀಡಿದ.
ಸ್ವಲ್ಪ ಹೊತ್ತಿನ ನಂತರ ಆ ಅಪರಿಚಿತ ವ್ಯಕ್ತಿ ಚೇತರಿಸಿಕೊಂಡ. ತಕ್ಷಣ ವಿಕ್ರಂ `ಈಗ ಹೇಳು.. ಯಾರು ನೀನು..?' ಎಂದ.
`ಅದನ್ನೆಲ್ಲಾ ಆಮೇಲೆ ಹೇಳ್ತೀನಿ.. ಮೊದಲು ನಿಮ್ಮ ಮನೆಗೆ ಹೋಗೋಣ ನಡೀರಿ..' ಎಂದ ಆಗಂತುಕ.
`ನಮ್ಮ ಮನೆಗಾ..? ಅದೆಲ್ಲಾ ಆಗೋದಿಲ್ಲ..'
`ಮೊದ್ಲು ಹೋಗೋಣ.. ಆ ನಂತ್ರ ನಾನ್ಯಾರು ಎನ್ನುವುದನ್ನೆಲ್ಲಾ ಹೇಳ್ತೀನಿ.. ಪ್ಲೀಸ್ ನಾನು ಹೇಳೋದನ್ನು ಕೇಳಿ..' ಅಂಗಲಾಚಿದ ಆಗಂತುಕ.
`ಓಕೆ.. ಸರಿ..' ಎಂದ್ಹೇಳಿ ಆತನನ್ನು ಕರೆದೊಯ್ಯಲು ಹೊರಟ ವಿಕ್ರಮನನ್ನು ಪ್ರದೀಪ ಮತ್ತೆ ವಿರೋಧಿಸಿದ. ಈಗಲೂ ಪ್ರದೀಪನ ಮಾತನ್ನು ತೆಗೆದುಹಾಕಲಾಯ್ತು. ಅಂತೂ ಸಂಜೆಯ ವೇಳೆಗೆ ಆ ಆಗಂತುಕನೊಡಗೂಡಿ ಅವರ ತಂಡ `ಕಣ್ಣೀರು ಮನೆ'ಗೆ ವಾಪಸಾಯಿತು.
ಹಾಗಾದರೆ ಇದೇ ಕಥೆಗೆ ದೊಡ್ಡ ತಿರುವೇ? ಆ ಆಗಂತುಕ ಯಾರಿರಬಹುದು? ಆತ ಒಳ್ಳೆಯವನೇ? ಕೆಟ್ಟವನೇ? ಎಲ್ಲವುಗಳಿಗೂ ಕಾಲವೇ ಉತ್ತರ ಹೇಳಬೇಕು.
*****9*****
ಅತ್ತ ಬೇಣದಗದ್ದೆಯ ಶಿವರಾಮನ ಮನೆಯಲ್ಲಿ, ಅಲ್ಲಿಗೆ ಬಂದಿದ್ದ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣ ಯಾವುದೋ ವಿಷಯಕ್ಕಾಗಿ ಶತಪಥ ತಿರುಗುತ್ತಿದ್ದ. ಆತನಿಗೆ ಬರಬೇಕಿದ್ದ ವಸ್ತುಗಳಿಗೋ, ಬರಬೇಕಿದ್ದ ವ್ಯಕ್ತಿಗಳಿಗೋ ಕಾಯುತ್ತಿರುವುದು ಸ್ಪಷ್ಟವಾಗಿತ್ತು. ಅದಲ್ಲದೇ ಈಗ್ಗೆರಡು ದಿನಗಳಿಂದ ತನ್ನ ಅಣ್ಣ ಬೇಣದಗದ್ದೆಯ ಶಿವರಾಮನಲ್ಲಿಯೂ ಏನೋ ಒಂದು ಬದಲಾವಣೆ ಆಗಿತ್ತು. ಮೊದಲಿನ ಹಾಗೇ ಇಲ್ಲದ ಆತನಿಗೆ ತಾನು ಮಾಡುತ್ತಿರುವ ಕೆಲಸದ ಬಗ್ಗೆ ಅನುಮಾನ ಬಂದಿದೆಯಾ ಎಂದೂ ಸುಬ್ರಹ್ಮಣ್ಯ ಯೋಚನೆ ಮಾಡುತ್ತಿದ್ದ. `ಹಾಗಾಗದಿದ್ದರೆ ಸಾಕು..' ಎಂದುಕೊಳ್ಳುತ್ತಿದ್ದ.
ಹಾಗಾದರೆ ಆತ ಮಾಡುತ್ತಿದ್ದ ಕೆಲಸ ಏನು? ಮುಂದೆ ಶಿವರಾಮ್ ಹಾಗೂ ಸುಬ್ಬಣ್ಣ ಏನಾಗುತ್ತಾರೆ? ಎಲ್ಲವೂ ಗೋಜಲು ಗೋಜಲಾಗಲು ಆರಂಭಿಸಿತ್ತು.
*****
`ಅದಕ್ಕುತ್ತ ಆನು ಹೇಳ್ತಿ.. ತಡಿ...' ಎಂದು ಧ್ವನಿ ಬಂದಾಗ ಎಲ್ಲರಿಗೆ ಅಚ್ಚರಿ. ತಿರುಗಿ ನೋಡಿದರೆ ರಾಜಾರಾಮ ಭಟ್ಟರು.
ಆ ಆಗಂತುಕನನ್ನು ಕಣ್ಣೀರು ಮನೆಗೆ ಕರೆತಂದ ನಂತರ ಆತನನ್ನು ವಿಚಾರಿಸಲಾಗಿ ರಾಜಾರಾಮ ಭಟ್ಟರು ಹೀಗೆಂದಿದ್ದರು.
`ವಾಟ್.. ಇಂವನ ಬಗ್ಗೆ ನಿಂಗೊತ್ತಿದ್ದನಾ ಅಪ್ಪಯ್ಯಾ..' ಎಂದು ಕಕ್ಕಾಬಿಕ್ಕಿಯಾಗಿ ಕೇಳಿದ್ದ ವಿಕ್ರಮ. `ಹುಂ.. ಹೌದಾ.. ಪ್ವಾರಾ.. ಯಂಗೊತ್ತಿದ್ದು.. ಅದು ದೊಡ್ಡ ಕಥೆ.. ಇಂವ ಇದ್ನಲಾ.. ಇಂವ ಬೇರೆ ಯಾರೂ ಅಲ್ದಾ.. ಯಂಗಳ ರಾಂಕೃಷ್ಣ ಗಾಂವ್ಕಾರರ ಮನೆ ಪ್ವಾರನಾ.. ವಿಷ್ಣು..' ಎಂದು ಹೇಳಿದರು ಭಟ್ಟರು.
`ಆ..? ಹೌದಾ..? ಹಂಗಾದ್ರೆ ಅಂವ ಯನ್ನ ಫಾಲೋ ಮಾಡಿದ್ದೆಂತಕ್ಕೆ? ಎಲ್ಲೋದ್ರೂ ಹಿಂದಿಂದೇ ಬರ್ತಿದ್ದಿದ್ದು, ಹುಡುಕ್ತಿದ್ದು, ಮಾತು ಕೇಳಲು ಪ್ರಯತ್ನ ಮಾಡ್ತಿದ್ದಿದ್ದು ಯಂತಕ್ಕೆ..?' ಕೇಳಿದ ವಿಕ್ರಮ.
`ಹೇಳ್ತಿ ತಡಿ.. ಇಂವ ಸಣ್ಣಕ್ಕಿದ್ದಾಗ ಮನೆ ಬಿಟ್ಟು ಓಡಿ ಹೋಯಿದ್ನಡಾ ಹೇಳಿ ಹೇಳ್ತಿಪ್ವಿಲ್ಯಾ.. ಅದಾದ ಮೇಲೆ ಒಂದ್ ಸಲ ಯಂಗ ಯಾವ್ದೋ ಊರಲ್ಲಿ ಸಿಕ್ಕಿದ್ದ ಬಿಲ್ಯ.. ಅಲ್ಲಿ ಇವ್ನ ಪರಿಸ್ಥಿತಿ ಭಾಳ ತೊಂದ್ರೇಲಿ ಇತ್ತು.. ಆಗ ಇಂವನ್ನ ಾನೇ ಕಾಪಾಡಿದ್ದು..'
`ಅದೇನೋ ಸರಿ.. ಆದ್ರೆ ಅಂವ ಯನ್ನ ಹಿಂದಿಂದೇ ಬರ್ತಿದ್ದಿದ್ದು ಯಂತಕ್ಕೆ? ವಿಷ್ಣೂನೇ ಹೇಳಿ ಯಂಗೆಂತಕ್ಕೆ ತಿಳೀದಿಲ್ಲೆ? ನಿ ಯಂತಕ್ಕೆ ಹೇಳಿದ್ಲೆ?'' ಎಂದು ನಡುವೆ ಬಾಯಿ ಹಾಕಿ ಕೇಳಿದ ವಿಕ್ರಮ.
``ಅಂವನ್ನ ನಿಂಗೆ ಸಹಾಯ ಮಾಡ ಹೇಳಿ ಆನೆ ಕಳಿಸಿದ್ದಿದ್ದಿ ಬಿಲ್ಯ. ನಿಂಗೆ ಯಾರೇ ತೊಂದ್ರೆ ಕೊಟ್ಟರೂ ಅಂವ ನಿನ್ನ ಉಳಿಸ್ತಿದ್ದ. ಹಂಗಾಗಿ ನಿನ್ನ ಜೊತೆಗೆ ಅಂವ ಬರ್ತಿದ್ದ. ಅಂವ ಆವಾಗಾವಾಗ ತನ್ನ ವೇಷ ಬದಲಾಯಿಸ್ತಿದ್ದ. ಅದಕ್ಕಾಗಿ ನಿಂಗೆ ಗೊತ್ತಾಯ್ದಿಲ್ಲೆ.. ಮತ್ತೆ ಅದನ್ನ ನಿಂಗೆ ತಿಳಿಸದು ಯಂಗೆ ಸಡಿ ಕಂಡಿದ್ಲೆ. ಜೊತಿಗೆ ನೀನು ಯಂತದ್ದನ್ನೇ ಮಾಡಿದ್ರೂ ಮಾಡ್ತಿದ್ರೂ ಅದನ್ನ ಯಂಗೆ ತಿಳಿಸ್ತಿದ್ದ. ನೀನು ಕುಂಗ್ ಫು ಶಾಲೆ ಬಿಟ್ಟು ಪೇಪರ್ರಿಗೆ ಸೇರಿದ್ದನ್ನೆಲ್ಲಾ ಯಂಗೆ ಇವನೇ ಹೇಳಿ ಬಿಟ್ಟಿಕಿದ.' ಎಂದರು ಭಟ್ಟರು.
`ಅಯ್ಯಪ್ಪಾ.. ಎಲ್ಲಿಂದ ಎಲ್ಲೀವರೆಗೆ ಲಿಂಕ್ ಉಂಟಪ್ಪಾ..' ಎಂದು ಗೊಣಗಿದ ಪ್ರದೀಪ. ವಿಕ್ರಮ ಕಕ್ಕಾಬಿಕ್ಕಿಯಾಗಿದ್ದ.
`ಇಷ್ಟೇ ಅಲ್ಲ ತಡಿ.. ನಿನ್ನ ಆ ಕುಂಗ್ ಫೂ ಶಾಲೆ ಯಂಗೆ ಇಷ್ಟ ಆಯ್ದಿಲ್ಲೆ.. ನಿಂಗೂ ಅದು ಗೊತ್ತಿದ್ದು.. ಅದಕ್ಕಾಗೇ ನೀನಾಗೇ ಆ ಶಾಲೆ ಬಾಗಿಲು ಹಾಕ್ಲಿ ಹೇಳಿ ನಾನು ಮಾಡಿದ್ದಿ.. ಕೊನೆಗೆ ಆ ಮಂಗ್ಳೂರಿನ ಪೇಪರ್ರಿನಲ್ಲಿ ಕೆಲ್ಸ ಸೊಗೋ ಹಂಗೆ ಮಾಡಿ, ನಿನ್ನ ಕೆಲಸ ಬದ್ಲು ಮಾಡದಿ.. ಇಷ್ಟೇ ಅಲ್ದಾ.. ಇನ್ನೂ ಒಂದು ಮುಖ್ಯ ಸಂಗ್ತಿ ಹೇಳ್ತಿ ಕೇಳು.. ಈ ವಿಜೇತಾ ಇದ್ದಲಾ.. ಇದು ಯಂಗೆ ಮೊದಲಿಂದ್ಲೂ ಗೊತ್ತಿತ್ತಿದ್ದೇಯಾ.. ಯನ್ನ ಷಡ್ಕ ಅಂದ್ರೆ ನಿನ್ನ ಆಯಿಯ ಕೌಟುಂಬಿಕ ಸಂಬಂಧಿಕರಡ. ಹಂಗಾಗಿ ಅವ್ಳೂ ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದ..' ಎಂದರು ಭಟ್ರು.
ವಿಕ್ರಮನಿಗೆ ಮತ್ತೆ ದಿಘ್ಬ್ರಾಂತಿ. ತಾನು ನಂಬಿದ್ದ ವಿಜೇತಾ ಹೀಗಿರಲು ಸಾಧ್ಯ ಎಂದುಕೊಂಡಿರದ ವಿಕ್ರಮನಿಗೆ ಶಾಕ್ ಮೇಲೆ ಶಾಕ್. ತಾನು ನಂಬಿಕೊಂಡಿದ್ದೆಲ್ಲವೂ ಸುಳ್ಳಾದಂತೆ, ಜಗತ್ತಿನಲ್ಲಿ ತನ್ನ ವಿರುದ್ಧದಲ್ಲಿ ಗೂಢಚಾರಿಕೆ ಮಾಡಿದಂತೆ ಅನ್ನಿಸಿತು. ತಾನಂದುಕೊಂಡಿದ್ದೆಲ್ಲವೂ ನಿಜವಲ್ಲ. ತಾನೊಬ್ಬನೆ ಒಂದು ಕಡೆ.. ಉಳಿದವರೆಲ್ಲ ತನ್ನ ವಿರುದ್ಧ ಇರುವವರೇ. ತನ್ನ ಅಸ್ತಿತ್ವವೇ ಸುಳ್ಳಾ.. ಇವರೆಲ್ಲರ ಆಟದ ಕಾಯಿಯಾಗಿ ತಾನು ಬಳಕೆಯಾದೆನಾ ಎಂದುಕೊಂಡ ವಿಕ್ರಮ. `ವಾಟ್.. ಇದನ್ನೆಲ್ಲಾ ನಂಬೂಲೆ ಆವ್ತ್ಲೆ.. ಹೌದಾ ವಿಜೇತಾ..?' ಎಂದ ವಿಕ್ರಮ.
`ಯಸ್.. ಇದೆಲ್ಲಾ ನಂಗೂ ಗೊತ್ತಿತ್ತು.. ನನ್ನ ಹೆಲ್ಪ್ ಕೂಡ ಇತ್ತು. ಏನೋ ಲೈಫ್ ನಲ್ಲಿ ಒಂದು ಟ್ವಿಸ್ಟ್ ಇರಲಿ ಅಂತ ಹೀಗೆ ಮಾಡಿದೆ. ಆದರೆ ಈ ಊರನ್ನು ನಾನು ನೋಡಿರಲಿಲ್ಲ. ಯಾರ್ಯಾರದ್ದೋ ಮೂಲಕ ಭಟ್ರ ಬಗ್ಗೆ, ನಿನ್ನ ಬಗ್ಗೆ ನನಗೆ ತಿಳೀತು. ಏನೋ ಹೀಗೆ ಮಾಡಿದೆ. ಆದರೆ ಈ ವಿಷ್ಣುವಿನ ಬಗ್ಗೆ ನನಗೆ ಗೊತ್ತಿರಲಿಲ್ಲ. ಇನ್ನು ನಿನ್ನ ಬಗ್ಗೆ ಹೇಳಬೇಕಂದ್ರೆ ನಿನ್ನ ಚಿಕ್ಕಂದಿನಿಂದ್ಲೂ ನೋಡ್ತಿದ್ದೆ. ಆದರೆ ನಾನು ಬೆಳೆಯುತ್ತಿದ್ದಂತೆ ನನ್ನ ಮಮ್ಮಿ ಡ್ಯಾಡಿ ಮಂಗಳೂರಿಗೆ ಬಂದರು. ಹಾಗಾಗಿ ನೀನು ಏನಾದೆ ಎನ್ನುವುದು ಗೊತ್ತಾಗಿರಲಿಲ್ಲ. ಆ ನಂತರ ನಿನ್ನನ್ನು ನೋಡಿದ್ದು ಮಂಗಳೂರಿನಲ್ಲಿ ಕುಂಗ್ ಫೂ ಸಂದರ್ಶನದಲ್ಲಿ. ನಂತರ ಭಟ್ರು ಪರಿಚಯವಾದರು. ಕೊನೆಗೆ ನೀನು ಗೊತ್ತಿದ್ರೂ ಗೊತ್ತಿಲ್ಲದ ಹಾಗೆ ನಡೆದುಕೊಂಡೆ. ನಿಂಗೊತ್ತಿರಬಹುದು, ಒಂದಿನ ನೀನು ನಮ್ಮನೆಗೆ ಬಂದಿದ್ದಾಗ ನನ್ನ ಡ್ಯಾಡಿ ಶಿರಸಿ ಏರಿಯಾದಲ್ಲಿ ಎಲ್ಲಾ ಗೊತ್ತಿದೆ ಎಂದಿದ್ದರು. ಹೀಗೆ.. ಮೂಲತಃ ಅವರೂ ಇಲ್ಲಿಯ ಏರಿಯಾದವರೇ. ಜೊತೆಗೆ ನನಗೂ ಕೂಡ ಈ ಏರಿಯಾ ನೋಡೋಣ ಎನ್ನಿಸ್ತು ನಿಂಜೊತೆ ಬಂದು ಬಿಟ್ಟೆ..' ಎಂದಳು ವಿಜೇತಾ..
ಉಫ್... ಒಂದು ಹೊಡೆತದ ಮೇಲೆ ಇನ್ನೊಂದು ಹೊಡೆತ.. ಒಂದನ್ನು ನಂಬಬೇಕೋ ಬೇಡ್ವೋ ಎನ್ನುವುದರೊಳಗೆ ಇನ್ನೊಂದು... ಯಾವ ಯಾವ ರೀತಿಯ ತಿರುವುಗಳು.. ಎಷ್ಟೆಲ್ಲಾ ಚೇಂಜು.. ಇದೆಲ್ಲ ಹೌದಾ.. ಆದರೆ ಯಾಕಾಗಿ ಇವೆಲ್ಲಾ? ನಿಮ್ಮೆಲ್ಲರ ಪಾಲಿಗೆ ನಾನು ಆಟದ ವಸ್ತು ಆದೆನಾ? ನಿಮ್ಮೆಲ್ಲರಿಗೂ ಎಲ್ಲವೂ ಗೊತ್ತಿದೆ. ಆದರೆ ನಾನು ಮಾತ್ರ ಏನೂ ಗೊತ್ತಿಲ್ಲದ ಹಾಗೆ ಬಫೂನ್ ಆಗಿಬಿಟ್ಟೆ.. ಪ್ರದೀಪ, ವಿನಾಯಕ.. ನೀವೂ ಈ ಸುರುಳಿಯ ಒಂದು ಭಾಗ ಆಗಿದ್ದರೆ ಹೇಳಿ ಬಿಡ್ರಪ್ಪಾ.. ಶಾಕುಗಳ ಸರಮಾಲೇ ಈಗಲೇ ಮುಗಿದು ಹೋಗಲಿ..' ದೀನನಾಗಿದ್ದ ವಿಕ್ರಮ
ಪ್ರದೀಪ ಹಾಗೂ ವಿನಾಯಕರು ತಮಗೂ ಇದಕ್ಕೂ ಯಾವುದೇ ಸಂಬಂಧಿವಿಲ್ಲ. ತಮಗೇನೂ ಗೊತ್ತಿಲ್ಲ ಎಂದರು.
`ತಂದೆಯಾದವಂಗೆ ಮಗನ್ನ ಸರಿಯಾದ ಹಾದಿಯಲ್ಲಿ ಹೋಗೂಲೆ ಹೇಳೋ ಹೊಣೆ ಇರ್ತು. ನೀನೂ ಕೂಡ ಒಳ್ಳೆಯ ದಾರಿಯಲ್ಲಿ ಹೋಗೂದು ನಂಗೆ ಬೇಕಿತ್ತು ಅದಕ್ಕಾಗಿ ಹಿಂಗೆ ಮಾಡಿದೆ..' ಎಂದರು ಭಟ್ಟರು.
`ಹಂಗಾರೆ ಕುಂಗ್ ಫೂ ಕಲ್ಸೂದು ಒಳ್ಳೆ ದಾರಿ ಅಲ್ದಾ..?'
`ಒಳ್ಳೇದೋ ಕೆಟ್ಟದ್ದೋ.. ನಮಗ್ಯಾಕೆ ಬೇಕು ಆ ಹೊಡೆದಾಟದ ವೃತ್ತಿ? ನಿನ್ನ ಆ ಹೊಲ್ಸು ಉಸಾಬರಿ ನಮಗೆ ಬೇಕಾದ ಹಣ ಕೊಡ್ತ್ಲೆ. ಅದು ಜೊತೆಗೆ ಸುಖಾ ಸುಮ್ನೆ ಮೈ ಮುರಿಯೋ ಹಂಗೆ ಒದ್ದಾಡೂದು. ಇನ್ನು ನಾವು ಹವ್ಯಕರು. ನಮಗೆಲ್ಲಾ ಇದು ಅವ್ತ್ಲೆ.. ನಾವು ಯಂತಿದ್ರೂ ಸಸ್ಯಾಹಾರಿಗಳು. ಅಂತಾದ್ದೆಲ್ಲಾ ಆ ನಾಯ್ಕರಿಗೋ, ಗೌಡ್ರಿಗೋ, ಕುಣಬಿ ಮರಾಟ್ಯಕ್ಕಗೋ, ಸಿದ್ದಿಗಳಿಗೋ ಲಾಯಕ್ಕು.. ಅದ್ಕೆ ಹಿಂಗ್ಮಾಡಿದಿ ಬಿಲ್ಯ. ಇನ್ನು ನೀನು ಪತ್ರಿಕೆಗೆ ಸೇರಿದ್ದು ನಾನು ಒಪ್ದಿ. ಯಂತಕ್ಕಂದ್ರೆ ಅದರಲ್ಲಿ ನಿಂಗೆ ಹೆಸರು ಬತ್ತು. ನಾಕು ಜನ ನಿನ್ನ ಬಗ್ಗೆ ಹೆಮ್ಮೆಯಿಂದ ಮಾತಾಡದ್ನ ನೋಡಲಾವುತು,, ಹಂಗಾಗಿ ಹಿಂಗ್ ಮಾಡದಿ..'
ಭಟ್ಟರ ಈ ಮಾತಿಗೆ ವಿಕ್ರಮ ಏನೂ ಮಾತಾಡಲಿಲ್ಲ. ಅವನ ತಲೆಯ ತುಂಬಾ ದಿಗ್ಬ್ರಾಂತಿ, ವಿಶಿಷ್ಟತೆ, ಅಚ್ಚರಿ, ನಿಘೂಡತೆಗಳಲ್ಲೇ ತುಂಬಿ ಹೋಗಿತ್ತು. ಅಷ್ಟು ಹೊತ್ತಿಗೆ ಸಾಕಷ್ಟು ಕತ್ತಲೂ ಆವರಿಸಿದ್ದರಿಂದ ಎಲ್ಲರೂ ಮುಂದಿನ ಕಾರ್ಯಗಳತ್ತ ಮುಖಮಾಡಿದರು. ವಿಕ್ರಮ ಯೋಚಿಸಡೊಗಿದ್ದ.
ಅಷ್ಟರಲ್ಲೇ ಊಟಕ್ಕೆ ಬುಲಾವ್ ಬಂದಿತ್ತು. ಊಟ ಮುಗಿದ ನಂತರ ವಿನಾಯಕ, ಪ್ರದೀಪ, ವಿಜೇತಾ ಇವರೆಲ್ಲ ವಿಷ್ಣುವಿನ ಬಳಿ ಮಾತನಾಡತೊಡಗಿದ್ದರು. ಆದರೆ ವಿಕ್ರಂ ಅವರ ಜೊತೆಗೆ ಸೇರಲಿಲ್ಲ. ಮನೆಯ ಹೊರಗೆ ಅಂಗಳದಲ್ಲಿ ಒಮದು ಕಡೆ ಕುಳಿತು ಆಲೋಚಿಸತೊಡಗಿದ್ದ.
(ಮುಂದುವರಿಯುತ್ತದೆ..)
No comments:
Post a Comment