ಆತ್ಮೀಯರೇ...
|
(ಮಂಗಳೂರು ರೈಲ್ವೆ ನಿಲ್ದಾಣ) |
ನಾನು ಪಿಯುಸಿಯಲ್ಲಿದ್ದಾಗ ಬರೆಯುವ ಹುಕಿ ಹುಟ್ಟಿದ ಕಾರಣ ಅಘನಾಶಿನಿ ಕಣಿವೆಯಲ್ಲಿ.. ಎನ್ನುವ ಕಾದಂಬರಿಯೊಂದನ್ನು ಬರೆಯಲು ಆರಂಭಿಸಿದೆ. ಪ್ರಾರಂಭದ ದಿನಗಳಲ್ಲಿ ಸರಾಗವಾಗಿ ಬರೆದ ಕಾದಂಬರಿ ನಂತರದ ದಿನಗಳಲ್ಲಿ ನಿಧಾನವಾಯಿತು. ಕೊನೆ ಕೊನೆಗೆ ಎಷ್ಟು ಕುಂಟುತ್ತ ಸಾಗಿತೆಂದರೆ ಇದುವರೆಗೂ ಅದನ್ನು ಮುಗಿಸಲು ಸಾಧ್ಯವಾಗಿಲ್ಲ.
ಆ ದಿನಗಳಲ್ಲಿ ನಾನು ಕಾದಂಬರಿ ಬರೆಯುತ್ತಿರುವುದನ್ನು ತಿಳಿದಿದ್ದ ಪರಿಚಯದವರು, ದೋಸ್ತರೆಲ್ಲ ಎಂದಿಗೂ ತಮಾಷೆ ಮಾಡುವಷ್ಟು ಆಗಿಬಿಟ್ಟಿದೆ. ಈ ಕಾದಂಬರಿ ಬರೆಯಲು ಆರಂಭಿಸಿದ ನಂತರ ಅದೆಷ್ಟೋ ಕಥೆಗಳನ್ನು, ಕವಿತೆಗಳನ್ನು ನಾನು ಬರೆದಿದ್ದೇನೆ. ಆ ನಂತರವೇ ಬೆಂಗಾಲಿ ಸುಂದರಿ ಎನ್ನುವ ಕಾದಂಬರಿಯನ್ನೂ ಬರೆದು ಮುಗಿಸಿದೆ. ಆದರೆ ಅಘನಾಶಿನಿ ಕಣಿವೆಯಲ್ಲಿ ಕಾದಂಬರಿ ಬರವಣಿಗೆ ಕೆಲಸ ಮಾತ್ರ ಮುಂದುವರಿದಿರಲಿಲ್ಲ ನೋಡಿ. ಈಗೆಲ್ಲೋ ಏನನ್ನೋ ಹುಡುಕುತ್ತಿದ್ದಾಗ ಮತ್ತೆ ಅಘನಾಶಿನಿ ಕಣಿವೆಯಲ್ಲಿ ಕಾದಂಬರಿಯ ಅಪೂರ್ಣ ಹಸ್ತಪ್ರತಿ ಸಿಕ್ಕಿತು. ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ.. ಆನಂದಿಸಿ..
ಮಲೆನಾಡು, ಶಿರಸಿ, ಸಿದ್ದಾಪುರ, ಯಲ್ಲಾಪುರ, ದಂಟಕಲ್ಲು ಈ ಸುತ್ತಮುತ್ತವೇ ಕಾದಂಬರಿ ಓಡಾಡುತ್ತದೆ. ನಡು ನಡುವೆ ಸಿನಿಮಾದವರು ಫಾರಿನ್ ಗೆ ಹೋಗಿ ಶೂಟಿಂಗ್ ಮಾಡುತ್ತಾರಲ್ಲ ಹಾಗೆ ಬೆಂಗಳೂರು ಹಾಗೂ ಮಂಗಳೂರು ಮುಂತಾದ ನಗರದಗಳ ದರ್ಶನವೂ ಇದೆ. ಕುತೂಹಲ ಹುಟ್ಟಿಸುವಂತಹ, ಪತ್ತೆದಾರಿ ಕಾದಂಬರಿ ಇದು ಎನ್ನುವುದನ್ನು ಮೊದಲೇ ಹೇಳಿಬಿಡುತ್ತೇನೆ. ಆ ದಿನಗಳ ನನ್ನ ಮೊದಲ ಕಾದಂಬರಿ ಪ್ರಯತ್ನವಾಗಿರುವುದರಿಂದ ಸ್ವಲ್ಪ ಕಷ್ಟಪಟ್ಟಾದರೂ ಓದಿ. ಸಲಹೆ ನೀಡಿ.
ಇಲ್ಲಿ ಬರೆಯುತ್ತಲೇ ಕಾದಂಬರಿಯನ್ನು ಪೂರ್ಣಗೊಳಿಸುವ ಪ್ರಯತ್ನವನ್ನೂ ಮಾಡುತ್ತೇನೆ. ಪಿಯುಸಿ ದಿನಗಳ ಕಾದಂಬರಿಯ ಆರಂಭವಾಗಿರುವ ಕಾರಣ ಅಲ್ಪ-ಸ್ವಲ್ಪ ಬಾಲಿಷವೂ ಆಗಿರಬಹುದು. ಸ್ವಲ್ಪ ಸುಧಾರಿಸಿಕೊಂಡು ಓದಿ.. ಅಭಿಪ್ರಾಯಗಳನ್ನು ತಿಳಿಸಿ. ನಾನು ಕುತೂಹಲಿಗನಾಗಿದ್ದೇನೆ. ಇನ್ನು ಮುಂದೆ ನೀವುಂಟು, ಕಾದಂಬರಿಯುಂಟು.
***
**1**
ಉದ್ದನೆಯ, ಸುಂದರ ಕಡಲತೀರ. ಮನಮೋಹಕ ಸೂರ್ಯಾಸ್ತದ ಚಿತ್ರ ಕಾಣುವ ಪ್ರದೇಶ. ಕ್ಷಣ ಕ್ಷಣಕ್ಕೂ ಬಂದು ಭೂಮಿಯನ್ನು ಚುಂಬಿಸುವ ಮೋಹಕ ಸಾಗರ ಅಲೆಗಳು. ಕಣ್ಣೆವೆಯಿಕ್ಕುವ ವರೆಗೂ ಕಾಣುವ ಜಲಧಿ. ಆ ಜಲಧಿಯನ್ನೇ ಬಾಚಿ ತಬ್ಬಲು ಯತ್ನಿಸುತ್ತಿರುವ ನೀಲಾಕಾಶ. ಸಮುದ್ರ ಚುಂಬನದ ಕರೆಗೆ ನಾಚಿ ನೀರಾಗಿ, ಬಳುಕಿ, ಬಾಗಿ ನಿಂತಿರುವ ನಾರಿಕೇಳ ವೃಕ್ಷ ಸಮೂಹ. ಸನಿಹದಲ್ಲೇ ಬೆಳೆದ, ಬೆಳೆಯುತ್ತಿರುವ ನಗರ ಹಾಗೂ ಅದರ ವಿಶಾಲ ಬಂದರು. ಬಂದರಿಗೆ ಬರುತ್ತಿರುವ ಹಡಗುಗಳು. ಹತ್ತಿರ ಬಂದಂತೆಲ್ಲ ಅವುಗಳ ಸದ್ದು ನೀಡುವ ಅನಿರ್ವಚನೀಯ ಭಯ. ಅವುಗಳ ಆಗಮನ, ನಿರ್ಗಮನದ ದೃಶ್ಯ ನೋಡುಗರಿಗೆ ಹೊಸದೊಂದು ಅನುಭೂತಿಯನ್ನು ತರುತ್ತಿತ್ತು. ಎಷ್ಟು ನೋಡಿದರೂ ಬೇಸರ ತರದ ಆ ಪ್ರದೇಶವೇ ಮಂಗಳೂರು. ಅಲ್ಲಿನ ಪ್ರಕೃತಿ ಸೊಬಗು, ರಮ್ಯತೆ ನೋಡುಗರನ್ನು ಮೈಮರೆಸುವಂತಿತ್ತು.
ಮಂಗಳೂರು ಎಂಬ ಹೆಸರೇ ಮನಮೋಹಕ. ಅಲ್ಲಿನ ಕಡಲ ಕಿನಾರೆಗಳು ಇನ್ನಷ್ಟು ಸುಂದರ. ಆ ಅರಬ್ಬೀ ಸಮುದ್ರ, ಆ ಹೊನ್ನಿನ ವರ್ಣದ ರಾಶಿ ರಾಶಿ ಉಸುಕು, ರಾಷ್ಟ್ರೀಯ ಹೆದ್ದಾರಿಗುಂಟ ಭರ್ರೆಂದು ಸಾಗುವ ವಾಹನಗಳ ಸದ್ದು, ಸಮರೋಪಾದಿಯಲ್ಲಿ ಬೆಳೆಯುತ್ತಿರುವ ಮಂಗಳೂರು ಅಪರೂಪದ ತಾಣಗಳಲ್ಲಿ ಒಂದೆಂದರೆ ತಪ್ಪಲ್ಲ.
|
(ಮಂಗಳೂರಿನ ಕಡಲ ಕಿನಾರೆ) |
ಅದು ಮಂಗಳೂರಿನ ರೈಲ್ವೆ ನಿಲ್ದಾಣ. ಒಂದೆರಡು ರೈಲುಗಳಾಗಲೇ ಪಯಣದ ನಡುವೆ ಮಂಗಳೂರಿನಲ್ಲಿ ವಿಶ್ರಮಿಸುತ್ತಿದ್ದವು. ಮತ್ತೊಂದೆರಡು ರೈಲುಗಳು ಕೂ ಹೊಡೆದು ಮುಂದಕ್ಕೆ ಸಾಗುತ್ತಿದ್ದವು. ಪ್ರಯಾಣಿಕರೋ ತಮ್ಮ ತಮ್ಮ ರೈಲಿನಲ್ಲಿ ಏರಾಟ, ಇಳಿದಾಟ ನಡೆಸಿದ್ದರು. ತಮ್ಮ ಪಾಡಿಗೆ ತಾವಿದ್ದರು. ಕೆಲವರು ಪ್ಲಾಟ್ ಫಾರ್ಮಿನಲ್ಲಿ ನಡೆಯುತ್ತಲೋ, ಕುಳಿತೋ ಕಾಲ ತಳ್ಳುತ್ತಿದ್ದರು. ಚಾಯ್ ಮಾರುವವರು ರೈಲಿಂದ ರೈಲಿಗೆ ಹೈಜಂಪ್, ಲಾಂಗ್ ಜಂಪ್ ಮಾಡುತ್ತಿದ್ದರು. ಭಿಕ್ಷುಕರಂತೂ ಮತ್ತಿನ್ಯಾವ ಸ್ಥಳದಲ್ಲಿ ಭಿಕ್ಷೇ ಬೇಡಬೇಕು ಎಂದು ಆಲೋಚಿಸುತ್ತಿದ್ದರು. ಒಟ್ಟಿನಲ್ಲಿ ರೈಲ್ವೆ ನಿಲ್ದಾಣ ಸಾಕಷ್ಟು ಕ್ರಿಯಾಶೀಲವಾಗಿತ್ತು ಎನ್ನಬಹುದು.
ಹೀಗಿದ್ದಾಗ ಅಲ್ಲಿಗೆ ರೈಲೊಂದು ಬಂದಿತು. ಕೇರಳದ ತಿರುವನಂತಪುರಂನಿಂದ ಮುಂಬಯಿಗೆ ಹೊರಟಿದ್ದ ರೈಲದು. ರೈಲು ಬಂದಿದ್ದೇ ತಡ ನಿಲ್ದಾಣದಲ್ಲಿ ಒಮ್ಮೆಲೆ ವಿದ್ಯುತ್ ಸಂಚಾರ. ಚಹಾ ಮಾಡುವವರು ತಮ್ಮ ವಿಶಿಷ್ಟ ದನಿಯಿಂದ ಚೋಯ್ ಚೋಯ್ ಎನ್ನಲು ಆರಂಭಿಸಿದರೆ ಮತ್ತೆ ಕೆಲವರು ಶೇಂಗಾ, ಕಳ್ಳೇಕಾಯ್.. ಎಂದು ಕೂಗಲಾರಂಭಿಸಿದರು.
ಆ ರೈಲಿನ ಪ್ರಥಮದರ್ಜೆ ಬೋಗಿಯೊಂದರಿಂದ ಇಳಿದ ವಿಕ್ರಂ. ತನ್ನ ಲಗೇಜುಗಳನ್ನೆಲ್ಲ ಇಳಿಸಿಕೊಂಡು ಫ್ಲಾಟ್ ಫಾರ್ಮಿನ ಮೇಲೆ ನಡೆಯಲಾರಂಭಿಸಿದ. ಆ ತಕ್ಷಣ ಅದೆಲ್ಲಿದ್ದರೋ ಏನೋ, ಇಬ್ಬರು ವ್ಯಕ್ತಿಗಳು ಓಡಿ ಬಂದು ಲಗೇಜನ್ನು ತನಗೆ ಕೊಡಿ, ತನಗೇ ಕೊಡಿ ಎಂಬಂತೆ ದುಂಬಾಲು ಬಿದ್ದರು. ತಮ್ಮ ತಮ್ಮಲ್ಲೇ ಜಗಳದ `ನಾಟಕ' ಪ್ರಾರಂಭಿಸಿದರು. ಇದರಿಂದ ವಿಕ್ರಮನಿಗೆ ಒಮ್ಮೆಲೇ ರೇಗಿ ಹೋಯಿತು. ಮೊದಲೇ ರೈಲಿನ ಪ್ರಯಾಣದಿಂದ ಸುಸ್ತಾಗಿದ್ದ ಈತ ಅವರತ್ತ ತಿರುಗಿ `ನೋಡಿ ನನ್ನ ವಸ್ತುಗಳು ನನಗೇನೂ ಭಾರವಲ್ಲ. ನೀವ್ಯಾರೂ ಈ ಲಗೇಜನ್ನು ಹೊರುವುದು ಬೇಡ. ನನ್ನಲ್ಲಿ ಬಹಳ ತಾಕ್ಕತ್ತುಂಟು.. ಸುಮ್ಮನೆ ಪಿರಿ ಪಿರಿ ಮಾಡಬೇಡಿ..' ಎಂದು ಹೇಳಿದವನೇ ಜೋರಾಗಿ ನಡೆದು ಹೊರಟು ಹೋದ.
ಜಗಳ ಮಾಡಿಕೊಂಡ ಇಬ್ಬರೂ `ಬಂದ ದಾರಿಗೆ ಸುಂಕವಿಲ್ಲ..' ಎಂದುಕೊಳ್ಳುತ್ತಾ ಇನ್ನೊಬ್ಬನಿಗೆ ದುಂಬಾಲು ಬೀಳಲು ಹೊರಟರು.
ಇತ್ತ ವಿಕ್ರಂ ರೈಲು ನಿಲ್ದಾಣದಿಂದ ಹೊರಬಂದು ಟ್ಯಾಕ್ಸಿಯೊಂದನ್ನು ಹಿಡಿದು ಸುಭಾಷಚಂದ್ರ ಭೋಸ್ ನಗರದಲ್ಲಿನ ತನ್ನ ಬಾಡಿಗೆ ಮನೆಯಲ್ಲಿಗೆ ಬಂದು ಸ್ನಾನ ಮಾಡಿ ಮನಸ್ಸನ್ನು ಹಗುರಾಗಿಸಿಕೊಂಡ. ತಾನು ಹೋಗಿ ಬಂದ ಕೆಲಸದ ಬಗ್ಗೆ ಯೋಚಿಸತೊಡಗಿದ.
ವಿಕ್ರಂ ಒಬ್ಬ ಸಾಹಸಿ. ಅವನೊಬ್ಬ ಕುಂಗ್ ಫೂ ಮಾರ್ಷಲ್ ಆರ್ಟಿಸ್ಟ್. ಇದರೊಂದಿಗೆ ಕರಾಟೆಯನ್ನೂ ಕಲಿತಿದ್ದ. ಜೊತೆಗೆ ಪ್ರಖ್ಯಾತ ಜಿಮ್ನಾಸ್ಟಿಯನ್ ಕೂಡ ಆಗಿದ್ದ. ಜಿಮ್ನಾಸ್ಟಿಕ್ ನಲ್ಲಿ ಹಲವಾರು ಪದಕಗಳನ್ನೂ ಗಳಿಸಿದ್ದ. ಏನೇ ತೊಂದರೆ ಬಂದರೂ ಎದೆಗುಂದದಂತೆ ಬದುಕುವುದನ್ನು ಆತ ರೂಢಿಸಿಕೊಂಡಿದ್ದ. ಕೈ ಹಾಕಿದ ಕೆಲಸವನ್ನು ಎಂದಿಗೂ ಅರ್ಧಕ್ಕೆ ಬಿಡುವವನಲ್ಲ. ಮಂಗಳೂರಿನಲ್ಲಿ ಆತ ಒಂದು ಕುಂಗ್ ಫೂ ಹಾಗೂ ಕರಾಟೆಯ ತರಬೇತಿ ಕೇಂದ್ರವೊಂದನ್ನು ಪ್ರಾರಂಭಿಸಿದ್ದ. ಅದ್ವೈತ ಆತ್ಮರಕ್ಷಣೆ ಎಂಬ ಸುಂದರವಾದ ಹೆಸರನ್ನೂ ಅದಕ್ಕೆ ಇಟ್ಟಿದ್ದ. ಎಲ್ಲೇ ಕುಂಗ್ ಫೂ, ಕರಾಟೆಯ ಬಗ್ಗೆ ಸ್ಪರ್ಧೆಗಳಿದ್ದರೂ ಅಲ್ಲೆಲ್ಲ ಇವನ ತರಬೇತಿ ಕೇಂದ್ರಕ್ಕೆ ಪ್ರಶಸ್ತಿಗಳು ಬಂದೇ ಬರುತ್ತಿದ್ದವು. ಇವನಿಂದ ಕಲಿತ ಹಲವಾರು ಜನ ರಾಷ್ಟ್ರವ್ಯಾಪಿ ಹೆಸರಾಗಿದ್ದರು. ಎಲ್ಲೆಡೆ ತಮ್ಮ ಪ್ರತಿಭೆ ಮೆರೆದಿದ್ದರು. ಇದೇ ಕಾರಣಕ್ಕಾಗಿ ವಿಕ್ರಂ ಕೊಚ್ಚಿಗೆ ಹೋಗಿ ವಾಪಾಸ್ ಬಂದಿದ್ದ. ಅಲ್ಲಿನ ಒಂದೆರಡು ಕರಾಟೆ ಕೇಂದ್ರಗಳೂ ವಿಕ್ರಂನ ಸಲಹೆ ಪಡೆದಿದ್ದವು. ಈ ಬಗ್ಗೆಯೇ ವಿಕ್ರಂ ಆಲೋಚನೆ ಮಾಡತೊಡಗಿದ್ದ.
***
ಇದೇ ಸಂದರ್ಭದಲ್ಲಿ ಆತನ ರೂಮಿನ ಕಂಪೌಂಡಿನ ಹೊರಗಿನಿಂದ ಒಬ್ಬ ವ್ಯಕ್ತಿ ನಿಂತು ವಿಕ್ರಂ ಮಾಡುವ ಕೆಸವನ್ನೆಲ್ಲಾ ವೀಕ್ಷಿಸುತ್ತಿದ್ದ. ವಿಕ್ರಮನಿಗೆ ಈ ಬಗ್ಗೆ ತಿಳಿದೇ ಇರಲಿಲ್ಲ. ವಿಕ್ರಮ್ ಎಲ್ಲೇ ಹೋಗಲಿ, ಏನೇ ಮಾಡಲಿ ಆತನನ್ನೇ ಹಿಂಬಾಲಿಸಿ ವಿಕ್ರಂ ಮಾಡುವ ಕೆಲಸವನ್ನೆಲ್ಲ ವೀಕ್ಷಿಸುತ್ತಿದ್ದ. ಅಪರಿಚಿತ ವ್ಯಕ್ತಿ ತನ್ನ ಬಗ್ಗೆ ಚಿಕ್ಕ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ.
(ಮುಂದುವರಿಯುತ್ತದೆ..)