Friday, December 19, 2014

ನಾನಾಗಬೇಕು..

ನಾನಾಗಬೇಕು
ಇಳಿವ ಇಬ್ಬನಿಯು
ನಗುವ ಹೂವಿನಂತರಾಳದಲ್ಲಿ
ಇಳಿದು ಮೂಡುವ ಹನಿ ||

ನಾನಾಗಬೇಕು
ನವ ವಸಂತಾಗಮನದ
ಹೊಸ ಹರ್ಷೋಲ್ಲಾಸದಲ್ಲಿ ಮಾಮರದ,
ಒಡಲ ಆಳದಲ್ಲೆಲ್ಲೋ ಕುಳಿತು
ಉಲಿದು ಹಾಡುವ ಕೋಗಿಲೆ ||

ನಾನಾಗಬೇಕು
ಇರುಳಲ್ಲಿ ಮಿಣುಕುವ
ಬಳುಕಿ ಕರೆವ ಮಿಂಚುಹುಳ |
ಎದೆಬಡಿತದಾವೇಗಕ್ಕಿಂತಲೂ
ಜೋರಾಗಿ ತಬ್ಬಿ ಹಿಡಿದ ಮರನ
ಕುಟ್ಟಿ ಹಸಿವೋಡಿಸುವ ಮರಕುಟಿಗ ||

ನಾನಾಗಬೇಕು
ಸುಳಿ ಸುಳಿವ ಪ್ರೀತಿ,
ನಲಿದು ನಗುವೊಂದು ನಿಸರ್ಗ |
ಹಸಿರ ಸಂಕುಲ ಜೀವಿ ಜಗತ್ತು,
ಜೊತೆಗೆ ನಿರ್ಮಲ ಜೀವನ ||

ನಾನಾಗಬಲ್ಲೆ
ಮುಂದೊಂದು ದಿನ
ಚಿಕ್ಕ ಜೀವಿ, ಹಸಿರು ಭತ್ತ |
ಆದಾರಾ ಆಸೆ ಜೀರದ ಬಯಕೆ
ಹಸನಾಗುವುದು ಮುಂದಣ ಜನುಮದಲ್ಲೇ ||

****
(ಈ ಕವಿತೆಯನ್ನು ಬರೆದಿರುವುದು 19-11-2006ರಂದು ದಂಟಕಲ್ಲಿನಲ್ಲಿ)
(ಈ ಕವಿತೆಯನ್ನು 23-01-2008ರಂದು ಆಕಾಶವಾಣಿ ಕಾರವಾರದಲ್ಲಿ ವಾಚನ ಮಾಡಲಾಗಿದೆ)

Tuesday, December 16, 2014

ಅಘನಾಶಿನಿ ಕಣಿವೆಯಲ್ಲಿ-2

(ಮಳೆಗಾಲದಲ್ಲಿ ಕಣ್ಣೀರುಮನೆಗೆ ಹೋಗುವ ರಸ್ತೆ ಪರಿಸ್ಥಿತಿ)
           ವಿಕ್ರಮ ಮೂಲತಃ ಒಬ್ಬ ಮಲೆನಾಡಿನ ಯುವಕ. ಇವನ ಊರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹತ್ತಿರದ `ಕಣ್ಣೀರು ಮನೆ' ಎಂಬ ಒಂದು ಚಿಕ್ಕ ಹಳ್ಳಿ. ಇವನ ಮನೆಯವರು ಭಾರಿ ಶ್ರೀಮಂತರು. 8-10 ಎಕರೆಯಷ್ಟು ಜಮೀನಿರುವ ಮನೆ ಇವರದ್ದು. ಊರಿನಲ್ಲಿದ್ದುದು ಆರೇಳು ಮನೆಗಳಾದರೂ ದೊಡ್ಡ ಹಾಗೂ ಊರಿನ ಕೊಟ್ಟಕೊನೆಯಲ್ಲಿದ್ದ ಮನೆ ವಿಕ್ರಮನದ್ದಾಗಿತ್ತು. ವಿಕ್ರಮ ಪಿಯುಸಿ ವರೆಗೆ ಕಾಲೇಜು ಕಲಿತಿದ್ದ. ನಂತರ ಬಿಎಯನ್ನು ಹೊರಗಿನಿಂದಲೇ ಕಲಿತು ಪಾಸು ಮಾಡಿದ್ದ. ಪಿಯುಸಿಗೆ ಹೋಗುವಾಗಲೇ ಯಲ್ಲಾಪುರದಲ್ಲಿ ಮಾರ್ಷಲ್ ಆರ್ಟ್ ಕಲಿತ ಗುರುಗಳೊಬ್ಬರು ಸಿಕ್ಕಿದ್ದರಿಂ ಶ್ರದ್ಧೆಯಿಂದ ಕಲಿತಿದ್ದ. ಕುಂಗ್ ಫೂ, ಕರಾಟೆಯನ್ನು ಭಕ್ತಿಯಿಂದ ಕಲಿತಿದ್ದ. ನಂತರದ ದಿನಗಳಲ್ಲಿ ಈ ಕರಾಟೆ, ಕುಂಗ್ ಫೂ ಗಳೇ ಆತನ ಕೈ ಹಿಡಿದಿದ್ದವು.
            ವಿಕ್ರಮನ ತಂದೆ ರಾಜಾರಾಮ ಭಟ್ಟರಿಗೆ ಮಗ ಪಿಯುಸಿಯ ನಂತರ ಓದಲು ಇಷ್ಟವಿರಲಿಲ್ಲ. ಮನೆಯಲ್ಲಿ ಸಾಕಷ್ಟು ಜಮೀನಿದ್ದರೂ ಪಾರಂಪರಿಕವಾಗಿ ಬಂದ ವೈದಿಕ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಿದ್ದರು. ರಾಜಾರಾಮ ಭಟ್ಟರ ಪೌರೋಹಿತ್ಯಕ್ಕೆ ನೂರಾರು ಜನ ಶಿಷ್ಯರೂ ಇದ್ದರು. ತನ್ನಂತೆ ಮಗನೂ ವೈದಿಕ ವೃತ್ತಿಯಲ್ಲಿ ಮುಂದುವರಿಯಲಿ, ಮಂತ್ರವನ್ನು ಕಲಿಯಲಿ, ಭಟ್ಟತನಿಕೆ ಮುಂದುವರಿಸಲಿ ಎನ್ನುವ ಆಸೆ ರಾಜಾರಾಮ ಭಟ್ಟರದ್ದಾಗಿತ್ತು.
          ಅದಕ್ಕೆ ಇಂಬು ಎಂಬಂತೆ ಕಣ್ಣೀರು ಮನೆ ಎಂಬ ಯಾರೂ ಕೇಳಿರದ ಹೆಸರಿನ ಕುಗ್ರಾಮಕ್ಕೆ ಹೋಗಿ-ಬಂದು ಮಾಡಬೇಕೆಂದರೆ ಹರಸಾಹಸ ಪಡಬೇಕಿತ್ತು. ವಿನಾಯಕ ಓದುತ್ತೇನೆ ಎಂದರೂ ಅದಕ್ಕೆ ಎದುರಾಗಿ ನೂರಾರು ಸವಾಲುಗಳಿದ್ದವು. ದಟ್ಟ ಕಾಡು, ಮಳೆಗಾಲದಲ್ಲಿ ದಿನದ 24 ತಾಸುಗಳೂ ಜೊರಗುಡುವ ಮಳೆ, ಉಕ್ಕೇರಿ ಹರಿಯುವ ಹಳ್ಳ-ಕೊಳ್ಳಗಳು, ಸೇತುವೆಯೇ ಇಲ್ಲದ ರಸ್ತೆಗಳು ಈ ಎಲ್ಲ ಕಾರಣಗಳು ವಿಕ್ರಮನ ಓದಿನ ಶತ್ರುಗಳಾಗಿದ್ದವು. ಮಳೆಗಾಲದಲ್ಲಿ ದ್ವೀಪದಂತಾಗುತ್ತಿದ್ದ ಈ ಊರು ಒಮ್ಮೊಮ್ಮೆ ತಿಂಗಳಾನುಗಟ್ಟಲೆ ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಂಡುಬಿಡುತ್ತಿತ್ತು. ಪಿಯುಸಿ ಓದಲು ವಿಕ್ರಮ ಯಲ್ಲಾಪುರಕ್ಕೆ ಬರಲು ಅದೆಷ್ಟು ಕಷ್ಟಪಟ್ಟಿದ್ದ ಎನ್ನುವುದು ಅವನಿಗಷ್ಟೇ ಗೊತ್ತು. ರಾಜಾರಾಮ ಭಟ್ಟರೂ ಮಗನನ್ನು ಮುಂದಕ್ಕೆ ಓದಿಸಲು ತಯಾರಿರಲಿಲ್ಲ. `ಓದಿ ಕಡಿದು ಗುಡ್ಡೇ ಹಾಕುವುದೆಂತದ್ದಿದ್ದು.. ಮಂತ್ರ ಕಲ್ತಕಂಡು ಭಟ್ಟತನಿಕೆ ಮಾಡು. ಮಠಕ್ಕೆ ಕಳಿಸ್ತೆ. ಆರ್ ತಿಂಗ್ಳು ಇದ್ಕಂಡು ಬಾ..' ಎಂದು ಖಂಡತುಂಡವಾಗಿ ಹೇಳಿಬಿಟ್ಟಿದ್ದರು. ತಂದೆಯೊಡನೆ ಜಗಳವಾಡಿಕೊಂಡು ವಿಕ್ರಂ ಮನೆ ಬಿಟ್ಟು ಬಂದಿದ್ದ. ಮಂಗಳೂರನ್ನು ತಲುಪಿದ್ದ.
            ಮಂಗಳೂರಿಗೆ ಬಂದ ಹೊಸತರಲ್ಲಿ ವಿಕ್ರಮನಿಗೆ ಯಲ್ಲಾಪುರದಲ್ಲಿ ಕುಂಗ್ ಫೂ-ಕರಾಟೆಯನ್ನು ಕಲಿಸಿದ್ದ ಗುರುಗಳು ಬೆನ್ನಿಗೆ ನಿಂತಿದ್ದರು. ಅವರ ಸಹಾಯದಿಂದಲೇ ಕುಂಗ್ ಫೂ-ಕರಾಟೆಯ ಶಾಲೆಯೊಂದನ್ನು ತೆರೆದಿದ್ದ. ಆ ಶಾಲೆಯ ಮೂಲಕವೇ ಅನ್ನವನ್ನು ಸಂಪಾದಿಸಲಾರಂಭಿಸಿದ್ದ. ಇನ್ನು ಅವನ ವಯಸ್ಸಿನ ವಿಚಾರಕ್ಕೆ ಬಂದರೆ ಅವನಿನ್ನೂ ಇಪ್ಪತ್ತೈದರ ತರುಣ. ಉತ್ಸಾಹಿ ಯುವಕ.  ಸ್ಫುರದ್ರೂಪಿ. ಗುಡ್ಡ-ಬೆಟ್ಟಗಳಲ್ಲಿ, ಕಾಡು-ಕಣಿವೆಗಳಲ್ಲಿ ಓಡಾಡಿದ ಆತ ಸಹಜವಾಗಿಯೇ ಕಟ್ಟುಮಸ್ತಾಗಿದ್ದ.  ಮಾರ್ಷಲ್ ಆರ್ಟ್ ಕಲಿಯುವ ಸಂದರ್ಭದಲ್ಲಿ ಕಟ್ಟುಮಸ್ತಿನ ದೇಹಕ್ಕೆ ಇನ್ನಷ್ಟು ಸಾಣೆ ಹಿಡಿದ ಕಾರಣ ಮತ್ತಷ್ಟು ಆಕರ್ಷಕವಾಗಿದ್ದ. ನಾಲ್ಕು ಜನ ಒಟ್ಟಾಗಿ ಅವನ ಮೇಲೆ ಬಿದ್ದರೂ ಅವರನ್ನು ಮಣಿಸಬಲ್ಲ ತಾಕತ್ತನ್ನು ಹೊಂದಿದ್ದ ವಿಕ್ರಂ. ಜೊತೆಗೆ ಚಾಕಚಕ್ಯತೆ ಕೂಡ ಇತ್ತು.  ವಿಕ್ರಮನ ತಾಯಿ ಮನೆಯಲ್ಲಿ ವಿಕ್ರಮಾರ್ಜುನ ವಿಜಯವನ್ನು ಓದುವಾಗ ಹೆಸರು ಇಷ್ಟವಾಗಿ ವಿಕ್ರಮ ಎಂದು ಹೆಸರಿಟ್ಟಿದ್ದರಂತೆ. ಇಂತಹ ವಿಕ್ರಮನ ರೂಪಕ್ಕೆ, ಆಕರ್ಷಕ ವ್ಯಕ್ತಿತ್ವಕ್ಕೆ ಮರುಳಾಗದ ಜನರೇ ಇಲ್ಲ ಎಂದರೆ ಅತಿಶಯೋಕ್ತಿ ಖಂಡಿತ ಅಲ್ಲ.
(ಕಣ್ಣೀರು ಮನೆ ತಲುಪಲು ಇಷ್ಟು ಕಷ್ಟ ಪಡಲೇಬೇಕು)
             ವಿಕ್ರಮನ ತಾಯಿ ಲಕ್ಷ್ಮಿ. ಊರಿನವರ ಪಾಲಿಗೆ ಲಕ್ಷ್ಮಿಬಾಯಿ. ವಿಕ್ರಮನ ಪಾಲಿಗೆ `ಲಕ್ ಬಾಯಿ..' ತಮಾಷೆಯಿಂದ ತಾಯಿಯನ್ನು ಕರೆಯುತ್ತಿದ್ದಿದ್ದೇ ಹೀಗೆ. ಸಾತ್ವಿಕ ಗುಣದ ಲಕ್ಷ್ಮೀಬಾಯಿ ಎಂದೂ ಸಿಟ್ಟಾಗಿದ್ದನ್ನು ಯಾರೂ ಕಂಡಿಲ್ಲ.ಸದ್ಗುಣಿ, ಕರುಣಾಮಯಿ, ಸಹನಾಶೀಲೆ ಇತ್ಯಾದಿಗುಣಗಳನ್ನೂ ಪೋಣಿಸಿ ಬಿಡಬಹುದು. ಮಗ ಮಂಗಳೂರಿಗೆ ಹೊರಟಾಗ ಗಂಡ ರಾಜಾರಾಮ ಭಟ್ಟರಿಗೆ ಗೊತ್ತಾಗದಂತೆ ಸಹಾಯ ಮಾಡಿದ ಖ್ಯಾತಿ, ಪ್ರೀತಿ ಇವರದ್ದು.
             ಮನೆಯಲ್ಲಿದ್ದ ಇನ್ನೊಬ್ಬರು ಸದಸ್ಯರೆಂದರೆ ವಿಕ್ರಮನ ಅಜ್ಜಿ ಮಹಾಲಕ್ಷ್ಮಿ. ಅವರ ವಯಸ್ಸಿನ ಬಗ್ಗೆ ಸ್ಪಷ್ಟವಾಗಿ ಕೇಳಿದರೆ ಹೇಳುವುದು ಕಷ್ಟ. ಕೆವರು 80 ಎಂದರೆ ಮತ್ತೆ ಕೆಲವರು 85 ಎನ್ನುತ್ತಾರೆ. 90-95 ಎಂದು ಹೇಳುವವರೂ ಇದ್ದಾರೆ. ಅಜ್ಜಿಯನ್ನೇ ಕೆಳಿದರೆ ಶತಮಾನಗಳ ಕಥೆ ಹೇಳಿಬಿಟ್ಟಾರು. ಮುಪ್ಪಾದರೂ ಅಜ್ಜಿ ಗಟ್ಟಾಗಿದ್ದಳು. ಇವರನ್ನು ನೋಡಿ ವಿಕ್ರಮ ಯಾವಾಗಲೂ ಓಲ್ಡ್ ಈಸ್ ಗೋಲ್ಡ್ ಎನ್ನುತ್ತಿದ್ದ. ವಿಕ್ರಮನಿಗೆ ಅಜ್ಜಿಯೆಷ್ಟು ಪ್ರೀತಿ ಪಾತ್ರಳೋ ಅಜ್ಜಿಗೂ ವಿಕ್ರಮನೆಂದರೆ ಪ್ರಾಣ. ಪಂಚ ಪ್ರಾಣ. ಈಕೆಯ ಗುಣವರ್ಣನೆ ಮಾಡುವಾಗ ಹಲವಾರು ವಿಶೇಷಣಗಳನ್ನು ಸೇರಿಸಬಹುದು. ಇದು ವಯಸ್ಸಾದವರ ವಿಷಯವಾದ್ದರಿಂದ ಜಾಸ್ತಿ ಹೇಳದೆ ಮುಂದಕ್ಕೆ ಸಾಗುವುದು ಒಳಿತು. ಮಹಾಲಕ್ಷ್ಮಿ, ಮಹಾಲಕ್ಷ್ಮಮ್ಮ ಅವರು ತಮ್ಮ ಮೊಮ್ಮಗ ವಿಕ್ರಮನನ್ನು ಪ್ರೀತಿಯಿಂದ ಕರೆಯುವುದು `ವೀಕೂ...' ಎಂದು. ಇದಕ್ಕೆ ಪ್ರತಿಯಾಗಿ ವಿಕ್ರಮ ಅಜ್ಜಿಯ ಬಳಿ `ಯಾವ ದಿಕ್ಕಿನಿಂದ ನೋಡಿರೂ ನಾನು ವೀಕಾಗಿ ಕಾಣಿಸ್ತ್ನಿಲ್ಲೆ.. ಅದೆಂತಕ್ಕೆ ವೀಕೂ ಹೇಳ್ತೆ...' ಎಂದು ಕೇಳಿದರೆ ಅಜ್ಜಿ `ಚಿಕ್ಕಂದಿನಲ್ಲಿ ನೀನು ಬಹಳ ಸಣ್ಣ ಇದ್ದೆ.. ಅದ್ಕೆ ಹಂಗೆ ಕರೆಯೋದು..' ಎನ್ನುತ್ತಿದ್ದರು.
            ವಿಕ್ರಮನ ಕುಟುಂಬದ ಸದಸ್ಯರು ಇಷ್ಟೇ ಅಲ್ಲ. ಇನ್ನೂ ಒಬ್ಬರಿದ್ದಾರೆ. ಕುಟುಂಬದ ಕೊಟ್ಟ ಕೊನೆಯ ಸದಸ್ಯೆ. ವಿಕ್ರಮನ ತಂಗಿ ರಮ್ಯ. ವಿಕ್ರಮನಿಗಿಂತ ನಾಲ್ಕೈದು ವಸಂತಗಳಷ್ಟು ಚಿಕ್ಕವಳು. ಅವಳು ಯಲ್ಲಾಪುರದಲ್ಲಿ ಬಿ.ಎ ಮೊದಲ ವರ್ಷದಲ್ಲಿ ಓದುತ್ತಿದ್ದಳು. ವಿಕ್ರಮನ ಒತ್ತಾಯದಿಂದಲೇ ರಾಜಾರಾಮ ಭಟ್ಟರು ಮಗಳನ್ನು ಯಲ್ಲಾಪುರದಲ್ಲಿ ಕಾಲೇಜು ಕಲಿಕೆಗೆ ಹಾಕಿದ್ದರು. ವಾಚಾಳಿ ಗುಣದ ರಮ್ಯ ಸುಮ್ಮನಿದ್ದಳೆಂದರೆ ಏನೋ ಆಗಿದೆ ಎನ್ನುವ ತೀರ್ಮಾನಕ್ಕೆ ಬರಬಹುದಿತ್ತು.
**********
           ವಿಕ್ರಮ ಸ್ಥಾಪಿಸಿದ್ದ `ಅದ್ವೈತ ಆತ್ಮರಕ್ಷಣೆ ..' ಕೇಂದ್ರಕ್ಕೆ ಮಂಗಳೂರಷ್ಟೇ ಅಲ್ಲ ಅಕ್ಕಪಕ್ಕದ ಬಜಪೆ, ಉಲ್ಲಾಳ, ಕಾಸರಕೋಡ, ಸುರತ್ಕಲ್ ಈ ಮುಂತಾದ ಕಡೆಗಳಿಂದಲೂ ಯುವಕರು ಕಲಿಯಲು ಬರುತ್ತಿದ್ದರು. ಇವನ ಗರಡಿಯಲ್ಲಿ ಪಳಗಿದವರು ಸಾಕಷ್ಟು ಹೆಸರನ್ನೂ ಗಳಿಸುತ್ತಿದ್ದರು.
           ಹೀಗಿದ್ದಾಗ ಒಂದು ದಿನ ವಿಕ್ರಮ ಸ್ಥಾಪಿಸಿದ್ದ ಮಾರ್ಷಲ್ ಆರ್ಟ್ ಕಲಿಕಾ ಕೇಂದ್ರದ ಬಳಿಯಲ್ಲೇ ಇನ್ನೊಂದು ಮಾರ್ಷಲ್ ಆರ್ಟ್ ಕೇಂದ್ರ ಪ್ರಾರಂಭವಾಗಿತ್ತು. ಆರಂಭದಲ್ಲೇ ಸಾಕಷ್ಟು ಗಿಮಿಕ್ಕುಗಳನ್ನು ಮಾಡಿದ್ದ ಆ ಕೇಂದ್ರ `ಹೊಸ ನೀರು ಬಂದು ಹಳೇ ನೀರನ್ನು ಕೊಚ್ಚಿಕೊಂಡು ಹೋಯಿತು' ಎಂಬಂತೆ ತನ್ನತ್ತ ಎಲ್ಲರನ್ನೂ ಸೆಳೆಯಲಾರಂಭಿಸಿತ್ತು. ಸಾಕಷ್ಟು ಹಣವನ್ನು ಹೊಂದಿದ್ದ ಅದರ ಮಾಲೀಕರು ತರಹೇವಾರಿ ಜಾಹೀರಾತಿನ ಮೂಲಕ ಯಶಸ್ವಿಯಾಗಿದ್ದರು. 50ಕ್ಕೂ ಅಧಿಕ ಜನರಿದ್ದ ವಿಕ್ರಮನ ಕಲಿಕಾ ಕೇಂದ್ರದ ಪರಿಸ್ಥಿತಿ ಇದರಿಂದ ಯಾವ ಪರಿಣಾಮ ಎದುರಿಸಿತೆಂದರೆ ಕೊನೆ ಕೊನೆಗೆ ಕೇವಲ 15-20 ಜನರಷ್ಟೇ ಉಳಿಯುವಂತಾಯಿತು. ವಿಕ್ರಮನ ವೃತ್ತಿಗೆ ಬಲವಾದ ಹೊಡೆತ ಬೀಳಲಾರಂಭವಾಗಿತ್ತು, ಇದರಿಂದ ಚಿಂತಾಕ್ರಾಂತನಾದ ವಿಕ್ರಮ ಖಿನ್ನತೆಗೆ ಒಳಗಾಗಿ ಸದಾಕಾಲ ಇದರ ಬಗ್ಗೆಯೇ ಆಲೋಚನೆ ಮಾಡಲು ಆರಂಭಿಸಿದ್ದ.
(ಕಣ್ಣೀರು ಮನೆ ರಸ್ತೆಯ ಕಣ್ಣೀರು ತರಿಸುವ ದಾರಿ)
            ಅದೊಂದು ದಿನ ಇದೇ ಆಲೋಚನೆಯಲ್ಲಿ ಮುಂಜಾನೆ ಬೇಗನೇ ಎದ್ದು ತನ್ನ ಕಲಿಕಾ ಕೇಂದ್ರಕ್ಕೆ ಬಂದ ವಿಕ್ರಮ. ಅಷ್ಟರಲ್ಲಾಗಲೇ ಅಲ್ಲಿಗೆ ಬಂದು ನಿಂತಿದ್ದ ವಿಕ್ರಮನ ಆಪ್ತರಲ್ಲಿ ಆಪ್ತನಾದ ಗೆಳೆಯ ಪ್ರದೀಪ. ತಾನೂ ನಗುವುದು, ಇತರರನ್ನೂ ನಗಿಸುವುದು ಪ್ರದೀಪನ ಕಾರ್ಯ. ಧ್ವನಿ ಅಷ್ಟೇನೂ ಚನ್ನಾಗಿರಲಿಲ್ಲ. ಆದರೆ ಹಾಡುವ ಹುಚ್ಚು ಮಾತ್ರ ವಿಪರೀತವಿತ್ತು. ಹಾಡನ್ನು ಆತ ಹಾಡುತ್ತಾನೆ ಎನ್ನುವುದಕ್ಕಿಂತ ಅರಚುತ್ತಾನೆ ಎಂದರೆ ಸರಿಯಾಗುತ್ತಿತ್ತು. ಆದರೆ ಆತ ಜೀವನದಲ್ಲಿ ಅದೆಷ್ಟೋ ದೊಡ್ಡ ದೊಡ್ಡ ನೋವುಗಳನ್ನು ಎದುರಿಸಿದ್ದಾನೆ ಎನ್ನುವುದನ್ನು ಆತನ ಕಣ್ಣನ್ನು ನೋಡಿದರೆ ಅರ್ಥವಾಗಿ ಬಿಡುತ್ತಿತ್ತು.
             ಆತ ಚಿಕ್ಕವಯಸ್ಸಿನವನಾಗಿದ್ದರೂ ಬಹಳಷ್ಟು ಜೀವನಾನುಭವವನ್ನು ಕಂಡಿದ್ದ. ಪದೇ ಪದೆ ಅನುಭವಿಸುತ್ತಲೂ ಇದ್ದ. ಈತ ಮೂಲತಃ ಸಾಗರ ಕಡೆಯ ಹಳ್ಳಿಯೊಂದರ ಹುಡುಗ. ಪ್ರದೀಪ ಹುಟ್ಟಿದ ಕೆಲವೇ ವರ್ಷಗಳಲ್ಲಿ  ಕುಡುಕ ತಂದೆ ಪ್ರದೀಪನನ್ನೂ ಆತನ ತಾಯಿಯನ್ನೂ ಬಿಟ್ಟು ಮತ್ತೊಬ್ಬಳ ಜೊತೆಗೆ ಓಡಿಹೋದ. ತಾಯಿ ಕಷ್ಟಪಟ್ಟು ಸಾಕಿದ್ದಳು. ಹಾಗೂ ಹೀಗೂ ಪಿಯುಸಿ ಓದಿದ. ಪಿಯುಸಿ ಓದುತ್ತಿದ್ದಾಗ ಒಂದು ಹುಡುಗಿಯನ್ನು ಪ್ರೀತಿಸಿದ. ಆಕೆ ಆತನನ್ನು ತಿರಸ್ಕಾರ ಮಾಡಿದಳು. ಆಗ ಛಲಕ್ಕೆ ಬಿದ್ದ ಪ್ರದೀಪ ಅವಳ ಬಳಿ `ನೋಡು.. ಇನ್ನು ಆರೇಳು ವರ್ಷಗಳಲ್ಲಿ ಕರ್ನಾಟಕವೇ ನನ್ನನ್ನು ಹೊಗಳುವಂತೆ ಆಗುತ್ತೇನೆ...' ಎಂದು ಹೇಳಿ ಅವಳ ಕಡೆಗೆ ಸಿಟ್ಟಿನಿಂದ ಬಂದಿದ್ದ. ಅಲ್ಲಿಂದ ಊರು ಬಿಟ್ಟು ಬಂದವನಿಗೆ ಜೊತೆಯಾಗಿದ್ದು ಪ್ರದೀಪನಂತೆ ಮನೆಯಿಂದ ಬಂದಿದ್ದ ವಿಕ್ರಂ. ಇಬ್ಬರ ಭೆಟಿಯೂ ಮಂಗಳೂರಿನಲ್ಲೇ ಆಗಿತ್ತು. ಅಲ್ಲಿ, ಇಲ್ಲಿ ಏನೇನೋ ಕೆಲಸ ಮಾಡಿ ಕಾಲೇಜು ಮುಗಿಸಿದ ಆತನಿಗೆ ಇತ್ತೀಚೆಗೆ ದೊಡ್ಡದೊಂದು ಕೆಲಸವೂ ಸಿಕ್ಕಿತ್ತು. ಆದರೆ ಆತನಿಗೆ ಸಿಕ್ಕ ಕೆಲಸ ಏನು ಎನ್ನುವುದನ್ನು ಮಾತ್ರ ಯಾರಿಗೂ ಹೇಳಿರಲಿಲ್ಲ. ಗೆಳೆಯ ವಿಕ್ರಮನ ಬಳಿಯೂ ಹೇಳದೇ ಉಳಿದಿದ್ದ. ವಿಚಿತ್ರವೆಂದರೆ ಇಂತಹ ಪ್ರದೀಪ ಪದೇ ಪದೆ ಕಾಣೆಯಾಘಿಬಿಡುತ್ತಿದ್ದ. ಹೇಳದೇ ಕೇಳದೇ ಎಲ್ಲೋ ಹೋಗಿಬಿಡುತ್ತಿದ್ದ. ವಿಕ್ರಮ ಸಾಕಷ್ಟು ಬಾರಿ ಈ ಕುರಿತು ವಿಚಾಸಿದಿದ್ದನಾದರೂ ಉತ್ತರ ಬರದಿದ್ದಾಗ ಕೇಳುವುದನ್ನೇ ಬಿಟ್ಟಿದ್ದ. ಇಂತಹ ನಿಘೂಡತೆಯೇ ಮುಂದೊಂದು ದಿನ ಪ್ರದೀಪ ಹಾಗೂ ವಿಕ್ರಮನ ಬಾಳಲ್ಲಿ ಬಹುದೊಡ್ಡ ತಿರುವನ್ನು ನೀಡಲಿತ್ತು.

(ಮುಂದುವರಿಯುತ್ತದೆ)             

ಕರೆದಿದೆ ಬಾರಾ ದೇವಕಾರ

(ದೇವಕಾರದ ಸೊಬಗು)
ಉತ್ತರ ಕನ್ನಡ ಜಿಲ್ಲೆಯ ನಿಸರ್ಗದಲ್ಲಿ ಹೊರ ಜಗತ್ತಿಗೆ ಅಷ್ಟಾಗಿ ಪರಿಚಿತವಾಗದ ಅನೇಕ ಜಲಪಾತಗಳಿವೆ. ಸೌಂದರ್ಯ, ಅಬ್ಬರ, ದೈತ್ಯ ನಿಲುವು ಹೊಂದಿರುವ ಜಲಪಾತವೊಂದಿದೆ. ಹೊರ ಜಗತ್ತಿಗೆ ಅಷ್ಟಾಗಿ ಪರಿಚಿತವಾಗದ ಈ ಜಲಪಾತವೇ ದೇವಕಾರ ಜಲಪಾತ.
ದೇವಕಾರ ಹೆಸರಿಗೆ ತಕ್ಕಂತೆ ದೇವರದ್ದೇ ಕಾರುಬಾರಿನ ಜಾಗ ಎಂದರೂ ತಪ್ಪಾಗಲಿಕ್ಕಿಲ್ಲ. ದಟ್ಟ ಕಾಡು, ಎತ್ತ ನೋಡಿದರತ್ತ ಹಸಿರಿನ ಚೆಲುವು ತುಂಬಿರುವ ದೇವಕಾರ ಗ್ರಾಮದ ಹತ್ತಿರವೇ ಇದೆ ಜಲಪಾತ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ಕಾರವಾರ ತಾಲೂಕುಗಳ ಗಡಿ ಪ್ರದೇಶದಲ್ಲಿರುವ ಈ ಜಲಪಾತ ತನ್ನ ಚೆಲುವಿನಿಂದ ಎಲ್ಲರನ್ನು ಸೆಳೆಯುತ್ತದೆ. ಪಶ್ಚಿಮ ಘಟ್ಟದ ತುದಿಯಿಂದ ಕಣಿವೆಯಾಳಕ್ಕೆ ಧುಮ್ಮಿಕ್ಕುವ ನೀರಿನ ಸೊಬಗನ್ನು ವೀಕ್ಷಿಸುವುದೇ ಖುಷಿಯ ಸಂಗತಿ. ಕಾಳಿ ನದಿಯನ್ನು ಸೇರುವ ಹಳ್ಳವೊಂದರ ಸೃಷ್ಟಿ ದೇವಕಾರ ಜಲಪಾತ. 15-200 ಅಡಿ ಎತ್ತರದ ಈ ಜಲಪಾತವನ್ನು ಮಳೆಗಾಲ ಹೊರತು ಪಡಿಸಿ ಉಳಿದೆಲ್ಲ ಕಾಲದಲ್ಲಿಯೂ ನೋಡಬಹುದಾಗಿದೆ.
ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಂತಹ ಕಾಡಿನ ನಡುವೆ ಇರುವ ಈ ಜಲಪಾತ ವೀಕ್ಷಣೆ ಮಾಡಬೇಕೆಂದರೆ ಸಾಹಸವನ್ನೇ ಮಾಡಬೇಕು. ಕೊಡಸಳ್ಳಿ ಹಾಗೂ ಕದ್ರಾ ಅಣೆಕಟ್ಟುಗಳ ನಡುವಿನ ಪ್ರದೇಶದಲ್ಲಿ ಇರುವ ದೇವಕಾರ ಗ್ರಾಮವನ್ನು ತಲುಪುವುದು ಸುಲಭವಲ್ಲ. ವರ್ಷದ ಆರು ತಿಂಗಳು ಈ ಊರು ದ್ವೀಪವೇ ಸರಿ. ಮೂರು ಕಡೆಯಲ್ಲಿ ಸುತ್ತುವರಿದಿರುವ ಕಾಳಿ ನದಿಯ ನೀರು. ಇನ್ನೊಂದು ಕಡೆ ಎದೆಮಟ್ಟಕ್ಕೆ ಏರಬೇಕಾದಂತಹ ಕಡಿದಾದ ಪಶ್ಚಿಮ ಘಟ್ಟ. ಇಂತಹ ಪ್ರದೇಶದಲ್ಲಿ ದೇವಕಾರ ಗ್ರಾಮವಿದೆ. ದೇವಕಾರ ಗ್ರಾಮದಿಂದ 1-2 ಕಿ.ಮಿ ಅಂತರದಲ್ಲಿ ಜಲಪಾತವಿದೆ. ಜಲಪಾತ ವರ್ಷದ ಎಲ್ಲ ಕಾಲದಲ್ಲಿಯೂ ಧುಮ್ಮಿಕ್ಕುತ್ತದೆ. ಮಳೆಗಾಲದಲ್ಲಿ ತನ್ನ ಸೊಬಗನ್ನು ನೂರ್ಮಡಿಸಿಕೊಳ್ಳುತ್ತದೆ. ಇಂತಹ ಜಲಪಾತವನ್ನು ಕಣ್ತುಂಬಿಕೊಳ್ಳಬೇಕೆಂದರೆ ಕನಿಷ್ಟ 10 ಕಿ.ಮಿ ನಡೆಯುವುದು ಕಡ್ಡಾಯ.
(ದೇವಕಾರದಲ್ಲಿರುವ ದೇವಸ್ಥಾನ)
ಈ ಜಲಪಾತವನ್ನು ತಲುಪಲು ಪ್ರಮುಖವಾಗಿ ಮೂರು ದಾರಿಗಳಿವೆ. ಯಲ್ಲಾಪುರದಿಂದ ಇಡಗುಂದಿ ಮಾರ್ಗವಾಗಿ ಕಳಚೆ ಗ್ರಾಮ ತಲುಪುವುದು. ಕಳಚೆ ಗ್ರಾಮದಿಂದ 12 ಕಿ.ಮಿ ಕಡಿದಾದ ಗುಡ್ಡ ಬೆಟ್ಟವನ್ನು ಹತ್ತಿಳಿದು ನಡೆದು ದೇವಕಾರ ಗ್ರಾಮವನ್ನು ತಲುಪುವುದು ಒಂದು ಮಾರ್ಗ. ಯಲ್ಲಾಪುರದಿಂದ ಇಡಗುಂದಿ ಮಾರ್ಗವಾಗಿ ಬಾರೆ ಎಂಬ ಊರಿನ ದಾರಿಯಲ್ಲಿ ಸಾಗುವುದು. ಅಲ್ಲಿಂದ ಕಾನುರು ಎಂಬ ಗ್ರಾಮದ ಬಳಿ ಬಂದು 3 ಕಿ.ಮಿ ನಡೆದರೆ ಜಲಪಾತದ ನೆತ್ತಿಯನ್ನು ತಲುಪಬಹುದು. ಆದರೆ ಜಲಪಾತದ ತಲೆಭಾಗದಿಂದ ಕೆಳಕ್ಕೆ ಇಳಿಯುವುದು ಅಸಾಧ್ಯ. ಅತ್ಯಂತ ಕಡಿದಾದ, ಇಳಿಜಾರು ಕಲ್ಲುಬಂಡೆಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ನುರಿತ ಚಾರಣಿಗರು ಮಾತ್ರ ಕೆಳಕ್ಕೆ ಇಳಿಯಬಹುದಾಗಿದೆ. ಮೇಲ್ಭಾಗದಿಂದ ಜಲಪಾತವನ್ನು ವೀಕ್ಷಿಸುವವರು ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಮೂರನೇ ಮಾರ್ಗ ಕಾರವಾರದಿಂದ ಆಗಮಿಸುವುದು. ಕಾರವಾರದಿಂದ ಕೈಗಾ ಮೂಲಕ ಕೊಡಸಳ್ಳಿಗೆ ಆಗಮಿಸಿ ಕೊಡಸಳ್ಳಿ ಅಣೆಕಟ್ಟೆ ಅಧಿಕಾರಿಗಳ ಅನುಮತಿ ಪಡೆದು ಅಣೆಕಟ್ಟು ದಾಟಿದರೆ ದೇವಕಾರಿಗೆ ತೆರಳುವ ಕಚ್ಚಾ ರಸ್ತೆ ಮಾರ್ಗ ಸಿಗುತ್ತದೆ. ಈ ರಸ್ತೆ ಮಾರ್ಗದಲ್ಲಿ 11 ಕಿ.ಮಿ ಸಂಚರಿಸಿದರೆ ದೇವಕಾರ ಗ್ರಾಮ ಸಿಗುತ್ತದೆ. ಸ್ಥಳೀಯರ ಬಳಿ ಜಲಪಾತದ ಬಗ್ಗೆ ಕೇಳಿದರೆ ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಮಳೆಗಾಲದಲ್ಲಿ ಈ ರಸ್ತೆ ಮಾತ್ರ ನದಿ ನೀರಿನಲ್ಲಿ ಮುಳುಗಿರುತ್ತದೆ. ಬೇಸಿಗೆಯಲ್ಲಿ ಮಾತ್ರ ಈ ಮಾರ್ಗದಲ್ಲಿ ಸಂಚಾರ ಮಾಡಬಹುದು.
ದೇವಕಾರ ಗ್ರಾಮದಲ್ಲಿ ಕೆಲವೇ ಕೆಲವು ಮನೆಗಳಿವೆ. ಬಡ, ಮಧ್ಯಮ ವರ್ಗದ ಕುಟುಂಬಗಳು ಇಲ್ಲಿ ವಾಸ ಮಾಡುತ್ತಿವೆ. ಇಲ್ಲಿಗೆ ಪ್ರವಾಸಿಗರು ಬರುವುದು ಕಡಿಮೆ. ಆಗಮಿಸುವ ಪ್ರವಾಸಿಗರಿಗೆ ಕೇವಲ ಜಲಪಾತವನ್ನು ತೋರಿಸುವ ಕಾರ್ಯವನ್ನು ಮಾತ್ರ ಸ್ಥಳೀಯರು ಮಾಡುತ್ತಾರೆ. ಪ್ರವಾಸಿಗರಿಗೆ ಅಗತ್ಯವಾದ ಊಟ, ತಿಂಡಿಗಳನ್ನು ಇಲ್ಲಿಗೆ ಬರುವಾಗ ಪ್ರವಾಸಿಗರೇ ತರತಕ್ಕದ್ದು. ಆಧುನಿಕ ಜಗತ್ತಿನ ಸೌಲಭ್ಯಗಳು ಈ ಊರಿಗೆ ಇನ್ನೂ ತಲುಪಿಲ್ಲದ ಕಾರಣ ಈ ಊರಿನ ಪರಿಸರವನ್ನು ಮಲಿನ ಮಾಡುವುದು ನಿಷಿದ್ಧ. ಇಲ್ಲಿ ಮೊಬೈಲ್ ರಿಂಗಣಿಸುವುದಿಲ್ಲ. ಬಸ್ಸುಗಳು, ವಾಹನಗಳ ಸುಳಿವಿಲ್ಲ. ವಿದ್ಯುತ್ ಸಂಪರ್ಕ ಕೆಲವೇ ಮನೆಗಳಿಗಿದೆ. ಪ್ರವಾಸಿಗರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲ. ಬೆಳಿಗ್ಗೆ ಮುಂಜಾನೆ ಜಲಪಾತ ವೀಕ್ಷಣೆಗೆ ಬಂದರೆ ಸಂಜೆ ಮರಳಲೇ ಬೇಕು. ದಟ್ಟ ಕಾಡು ಇದಾದ್ದರಿಂದ ಕಾಡು ಪ್ರಾಣಿಗಳ ಹಾವಳಿ ಸದಾ ಇರುತ್ತದೆ. ಸ್ಥಳೀಯರ ಮಾರ್ಗದರ್ಶನವಿಲ್ಲದೇ ಇಲ್ಲಿಗೆ ಆಗಮಿಸುವುದು ಅಪಾಯಕರ.
(ಕೊಡಸಳ್ಳಿ ಅಣೆಕಟ್ಟು)
ದೇವಕಾರ ಗ್ರಾಮದಲ್ಲೊಂದು ದೇವಾಲಯವಿದೆ. ಜಲಪಾತಕ್ಕೆ ಆಗಮಿಸುವವರು ಈ ದೇವಾಲಯದ ಬಳಿ ವಿರಮಿಸಬಹುದು. ದೇವರಿಗೆ ಪೂಜೆ ಮಾಡಿ ಧನ್ಯತೆಯನ್ನು ಪಡೆಯಬಹುದು. ಆಗಮಿಸುವ ಮಾರ್ಗ ಮಧ್ಯದಲ್ಲಿ ಕಾಳಿ ನದಿಯ ವಿಹಂಗಮ ನೋಡವನ್ನೂ ನೋಡಬಹುದು. ಕೊಡಸಳ್ಳಿ ಅಣೆಕಟ್ಟು ಹಾಗೂ ಕದ್ರಾ ಅಣೆಕಟ್ಟಿನ ಹಿನ್ನೀರಿನ ಸೊಬಗನ್ನು ವೀಕ್ಷಿಸಬಹುದು.
ಕಷ್ಟಪಟ್ಟು ಆಗಮಿಸಿದರೆ ಜಲಪಾತ ಇಷ್ಟವಾಗುತ್ತದೆ. 10-12 ಕಿ.ಮಿ ದೂರದ ಟ್ರೆಕ್ಕಿಂಗಿನ ಸುಸ್ತು, ಕಷ್ಟವನ್ನೆಲ್ಲ ಜಲಪಾತದ ಸೊಬಗು ಒಂದೇ ಏಟಿಗೆ ಓಡಿಸಿಬಿಡುತ್ತದೆ. ತಣ್ಣನೆಯ ಜಲಪಾತದ ನೀರಂತೂ ಮನಸ್ಸಿನ ಎಲ್ಲ ದುಃಖ, ಕಷ್ಟಗಳಿಗೆ ಪೂರ್ಣವಿರಾಮ ಹಾಕಿಬಿಡುತ್ತದೆ. ಹೊಟ್ಟೆಗೆ ಅಮೃತದಂತಹ ಸವಿಯನ್ನು ನೀಡುತ್ತದೆ. ದೈತ್ಯ ಬಂಡೆಗಳ ಸಾಲಿನಿಂದ ಧುಮ್ಮಿಕ್ಕುವ ಜಲಪಾತ ನೋಡಿದಷ್ಟೂ ನೋಡಬೇಕೆನ್ನಿಸುತ್ತದೆ. ಹಾಲ್ನೊರೆಯ ಸೊಬಗಂತೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಮಳೆಗಾಲದ ನಂತರ ನೀರು ಹೆಚ್ಚಾಗಿರುವ ಸಂದರ್ಭದಲ್ಲಿ ಈ ಜಲಪಾತ ಭೋರೆನ್ನುವ ಸದ್ದು ಮೂರ್ನಾಲ್ಕು ಕಿ.ಮಿ ವರೆಗೂ ಕೇಳಿಸುತ್ತದೆ. ಗವ್ವೆನ್ನುವ ಕಾಡಿನಲ್ಲಿ ಜಲಪಾತದ ಭೋರೆನ್ನುವ ಸದ್ದು ಒಳ್ಳೆಯ ಅನುಭೂತಿಯನ್ನು ನೀಡುತ್ತದೆ. ನೀವೂ ಈ ಅನುಭವವನ್ನು ಸವಿಯಬೇಕಿದ್ದರೆ ಜಲಪಾತಕ್ಕೆ ತೆರಳಲೇ ಬೇಕು. ಹಾಗಿದ್ರೆ ಯಾಕೆ ತಡ? ಈಗಲೇ ರೆಡಿ ಮಾಡಿಕೊಳ್ಳಿ ನಿಮ್ಮೆಲ್ಲ ವಸ್ತುಗಳನ್ನು. ಹೊರಡಲು ತಯಾರಾಗಿ.
ಜಲಪಾತಕ್ಕೆ ತಲುಪುವ ಬಗೆ
ಬೆಂಗಳೂರಿನಿಂದ ಆಗಮಿಸುವವರು ಹುಬ್ಬಳ್ಳಿ ಅಥವಾ ಶಿವಮೊಗ್ಗ-ಶಿರಸಿ ಮೂಲಕ ಯಲ್ಲಾಪುರ ತಲುಪಿ ಅಲ್ಲಿಂದ ಬಸ್ ಅಥವಾ ವಾಹನ ಮೂಲಕ ಕಳಚೆ ತಲುಪಿ ಅಲ್ಲಿಂದ ಟ್ರೆಕ್ಕಿಂಗ್ ಮೂಲಕ ಜಲಪಾತ ತಲುಬಹುದು. ಮಂಗಳೂರಿನ ಕಡೆಯವರು ಕಾರವಾರ ತಲುಪಿ ಕೈಗಾ-ಕೊಡಸಳ್ಳಿ ಮೂಲಕ ಕಾಳಿ ನದಿ ದಾಟಿ ಟ್ರೆಕ್ಕಿಂಗ್ ಮಾಡಿ ಜಲಪಾತದ ಒಡಲು ತಲುಪಬಹುದು. ಹುಬ್ಬಳ್ಳಿಯಲ್ಲಿ ಹತ್ತಿರದ ವಿಮಾನ ನಿಲ್ದಾಣವಿದೆ. ಅಂಕೋಲಾ, ಕಾರವಾರದಲ್ಲಿ ರೈಲು ನಿಲ್ದಾಣಗಳಿವೆ. ಕಾರವಾರದಿಂದ ಕೊಡಸಳ್ಳಿ, ಯಲ್ಲಾಪುರದಿಂದ ಕಳಚೆಯ ವರೆಗೆ ಸರ್ಕಾರಿ ಬಸ್ ಓಡಾಡುತ್ತದೆ. ಅಲ್ಲಿಂದ ಟ್ರೆಕ್ಕಿಂಗ್ ಅನಿವಾರ್ಯ.

Monday, December 15, 2014

ಅಘನಾಶಿನಿ ಕಣಿವೆಯಲ್ಲಿ-1

ಆತ್ಮೀಯರೇ...
(ಮಂಗಳೂರು ರೈಲ್ವೆ ನಿಲ್ದಾಣ)
                   ನಾನು ಪಿಯುಸಿಯಲ್ಲಿದ್ದಾಗ ಬರೆಯುವ ಹುಕಿ ಹುಟ್ಟಿದ ಕಾರಣ ಅಘನಾಶಿನಿ ಕಣಿವೆಯಲ್ಲಿ.. ಎನ್ನುವ ಕಾದಂಬರಿಯೊಂದನ್ನು ಬರೆಯಲು ಆರಂಭಿಸಿದೆ. ಪ್ರಾರಂಭದ ದಿನಗಳಲ್ಲಿ ಸರಾಗವಾಗಿ ಬರೆದ ಕಾದಂಬರಿ ನಂತರದ ದಿನಗಳಲ್ಲಿ ನಿಧಾನವಾಯಿತು. ಕೊನೆ ಕೊನೆಗೆ ಎಷ್ಟು ಕುಂಟುತ್ತ ಸಾಗಿತೆಂದರೆ ಇದುವರೆಗೂ ಅದನ್ನು ಮುಗಿಸಲು ಸಾಧ್ಯವಾಗಿಲ್ಲ.
                 ಆ ದಿನಗಳಲ್ಲಿ ನಾನು ಕಾದಂಬರಿ ಬರೆಯುತ್ತಿರುವುದನ್ನು ತಿಳಿದಿದ್ದ ಪರಿಚಯದವರು, ದೋಸ್ತರೆಲ್ಲ ಎಂದಿಗೂ ತಮಾಷೆ ಮಾಡುವಷ್ಟು ಆಗಿಬಿಟ್ಟಿದೆ. ಈ ಕಾದಂಬರಿ ಬರೆಯಲು ಆರಂಭಿಸಿದ ನಂತರ ಅದೆಷ್ಟೋ ಕಥೆಗಳನ್ನು, ಕವಿತೆಗಳನ್ನು ನಾನು ಬರೆದಿದ್ದೇನೆ. ಆ ನಂತರವೇ ಬೆಂಗಾಲಿ ಸುಂದರಿ ಎನ್ನುವ ಕಾದಂಬರಿಯನ್ನೂ ಬರೆದು ಮುಗಿಸಿದೆ. ಆದರೆ ಅಘನಾಶಿನಿ ಕಣಿವೆಯಲ್ಲಿ ಕಾದಂಬರಿ ಬರವಣಿಗೆ ಕೆಲಸ ಮಾತ್ರ ಮುಂದುವರಿದಿರಲಿಲ್ಲ ನೋಡಿ. ಈಗೆಲ್ಲೋ ಏನನ್ನೋ ಹುಡುಕುತ್ತಿದ್ದಾಗ ಮತ್ತೆ ಅಘನಾಶಿನಿ ಕಣಿವೆಯಲ್ಲಿ ಕಾದಂಬರಿಯ ಅಪೂರ್ಣ  ಹಸ್ತಪ್ರತಿ ಸಿಕ್ಕಿತು. ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ.. ಆನಂದಿಸಿ..
               ಮಲೆನಾಡು, ಶಿರಸಿ, ಸಿದ್ದಾಪುರ, ಯಲ್ಲಾಪುರ, ದಂಟಕಲ್ಲು ಈ ಸುತ್ತಮುತ್ತವೇ ಕಾದಂಬರಿ ಓಡಾಡುತ್ತದೆ. ನಡು ನಡುವೆ ಸಿನಿಮಾದವರು ಫಾರಿನ್ ಗೆ ಹೋಗಿ ಶೂಟಿಂಗ್ ಮಾಡುತ್ತಾರಲ್ಲ ಹಾಗೆ ಬೆಂಗಳೂರು ಹಾಗೂ ಮಂಗಳೂರು ಮುಂತಾದ ನಗರದಗಳ ದರ್ಶನವೂ ಇದೆ. ಕುತೂಹಲ ಹುಟ್ಟಿಸುವಂತಹ, ಪತ್ತೆದಾರಿ ಕಾದಂಬರಿ ಇದು ಎನ್ನುವುದನ್ನು ಮೊದಲೇ ಹೇಳಿಬಿಡುತ್ತೇನೆ. ಆ ದಿನಗಳ ನನ್ನ ಮೊದಲ ಕಾದಂಬರಿ ಪ್ರಯತ್ನವಾಗಿರುವುದರಿಂದ ಸ್ವಲ್ಪ ಕಷ್ಟಪಟ್ಟಾದರೂ ಓದಿ. ಸಲಹೆ ನೀಡಿ.
               ಇಲ್ಲಿ ಬರೆಯುತ್ತಲೇ ಕಾದಂಬರಿಯನ್ನು ಪೂರ್ಣಗೊಳಿಸುವ ಪ್ರಯತ್ನವನ್ನೂ ಮಾಡುತ್ತೇನೆ. ಪಿಯುಸಿ ದಿನಗಳ ಕಾದಂಬರಿಯ ಆರಂಭವಾಗಿರುವ ಕಾರಣ ಅಲ್ಪ-ಸ್ವಲ್ಪ ಬಾಲಿಷವೂ ಆಗಿರಬಹುದು. ಸ್ವಲ್ಪ ಸುಧಾರಿಸಿಕೊಂಡು ಓದಿ.. ಅಭಿಪ್ರಾಯಗಳನ್ನು ತಿಳಿಸಿ. ನಾನು ಕುತೂಹಲಿಗನಾಗಿದ್ದೇನೆ. ಇನ್ನು ಮುಂದೆ ನೀವುಂಟು, ಕಾದಂಬರಿಯುಂಟು.

***
**1**
          ಉದ್ದನೆಯ, ಸುಂದರ ಕಡಲತೀರ. ಮನಮೋಹಕ ಸೂರ್ಯಾಸ್ತದ ಚಿತ್ರ ಕಾಣುವ ಪ್ರದೇಶ. ಕ್ಷಣ ಕ್ಷಣಕ್ಕೂ ಬಂದು ಭೂಮಿಯನ್ನು ಚುಂಬಿಸುವ ಮೋಹಕ ಸಾಗರ ಅಲೆಗಳು. ಕಣ್ಣೆವೆಯಿಕ್ಕುವ ವರೆಗೂ ಕಾಣುವ ಜಲಧಿ. ಆ ಜಲಧಿಯನ್ನೇ ಬಾಚಿ ತಬ್ಬಲು ಯತ್ನಿಸುತ್ತಿರುವ ನೀಲಾಕಾಶ. ಸಮುದ್ರ ಚುಂಬನದ ಕರೆಗೆ ನಾಚಿ ನೀರಾಗಿ, ಬಳುಕಿ, ಬಾಗಿ ನಿಂತಿರುವ ನಾರಿಕೇಳ ವೃಕ್ಷ ಸಮೂಹ. ಸನಿಹದಲ್ಲೇ ಬೆಳೆದ, ಬೆಳೆಯುತ್ತಿರುವ ನಗರ ಹಾಗೂ ಅದರ ವಿಶಾಲ ಬಂದರು. ಬಂದರಿಗೆ ಬರುತ್ತಿರುವ ಹಡಗುಗಳು. ಹತ್ತಿರ ಬಂದಂತೆಲ್ಲ ಅವುಗಳ ಸದ್ದು ನೀಡುವ ಅನಿರ್ವಚನೀಯ ಭಯ. ಅವುಗಳ ಆಗಮನ, ನಿರ್ಗಮನದ ದೃಶ್ಯ ನೋಡುಗರಿಗೆ ಹೊಸದೊಂದು ಅನುಭೂತಿಯನ್ನು ತರುತ್ತಿತ್ತು. ಎಷ್ಟು ನೋಡಿದರೂ ಬೇಸರ ತರದ ಆ ಪ್ರದೇಶವೇ ಮಂಗಳೂರು. ಅಲ್ಲಿನ ಪ್ರಕೃತಿ ಸೊಬಗು, ರಮ್ಯತೆ ನೋಡುಗರನ್ನು ಮೈಮರೆಸುವಂತಿತ್ತು.
             ಮಂಗಳೂರು ಎಂಬ ಹೆಸರೇ ಮನಮೋಹಕ. ಅಲ್ಲಿನ ಕಡಲ ಕಿನಾರೆಗಳು ಇನ್ನಷ್ಟು ಸುಂದರ. ಆ ಅರಬ್ಬೀ ಸಮುದ್ರ, ಆ ಹೊನ್ನಿನ ವರ್ಣದ ರಾಶಿ ರಾಶಿ ಉಸುಕು, ರಾಷ್ಟ್ರೀಯ ಹೆದ್ದಾರಿಗುಂಟ ಭರ್ರೆಂದು ಸಾಗುವ ವಾಹನಗಳ ಸದ್ದು, ಸಮರೋಪಾದಿಯಲ್ಲಿ ಬೆಳೆಯುತ್ತಿರುವ ಮಂಗಳೂರು ಅಪರೂಪದ ತಾಣಗಳಲ್ಲಿ ಒಂದೆಂದರೆ ತಪ್ಪಲ್ಲ.
(ಮಂಗಳೂರಿನ ಕಡಲ ಕಿನಾರೆ)
             ಅದು ಮಂಗಳೂರಿನ ರೈಲ್ವೆ ನಿಲ್ದಾಣ. ಒಂದೆರಡು ರೈಲುಗಳಾಗಲೇ ಪಯಣದ ನಡುವೆ ಮಂಗಳೂರಿನಲ್ಲಿ ವಿಶ್ರಮಿಸುತ್ತಿದ್ದವು. ಮತ್ತೊಂದೆರಡು ರೈಲುಗಳು ಕೂ ಹೊಡೆದು ಮುಂದಕ್ಕೆ ಸಾಗುತ್ತಿದ್ದವು. ಪ್ರಯಾಣಿಕರೋ ತಮ್ಮ ತಮ್ಮ ರೈಲಿನಲ್ಲಿ ಏರಾಟ, ಇಳಿದಾಟ ನಡೆಸಿದ್ದರು. ತಮ್ಮ ಪಾಡಿಗೆ ತಾವಿದ್ದರು. ಕೆಲವರು ಪ್ಲಾಟ್ ಫಾರ್ಮಿನಲ್ಲಿ ನಡೆಯುತ್ತಲೋ, ಕುಳಿತೋ ಕಾಲ ತಳ್ಳುತ್ತಿದ್ದರು. ಚಾಯ್ ಮಾರುವವರು ರೈಲಿಂದ ರೈಲಿಗೆ ಹೈಜಂಪ್, ಲಾಂಗ್ ಜಂಪ್ ಮಾಡುತ್ತಿದ್ದರು. ಭಿಕ್ಷುಕರಂತೂ ಮತ್ತಿನ್ಯಾವ ಸ್ಥಳದಲ್ಲಿ ಭಿಕ್ಷೇ ಬೇಡಬೇಕು ಎಂದು ಆಲೋಚಿಸುತ್ತಿದ್ದರು. ಒಟ್ಟಿನಲ್ಲಿ ರೈಲ್ವೆ ನಿಲ್ದಾಣ ಸಾಕಷ್ಟು ಕ್ರಿಯಾಶೀಲವಾಗಿತ್ತು ಎನ್ನಬಹುದು.
             ಹೀಗಿದ್ದಾಗ ಅಲ್ಲಿಗೆ ರೈಲೊಂದು ಬಂದಿತು. ಕೇರಳದ ತಿರುವನಂತಪುರಂನಿಂದ ಮುಂಬಯಿಗೆ ಹೊರಟಿದ್ದ ರೈಲದು. ರೈಲು ಬಂದಿದ್ದೇ ತಡ ನಿಲ್ದಾಣದಲ್ಲಿ ಒಮ್ಮೆಲೆ ವಿದ್ಯುತ್ ಸಂಚಾರ. ಚಹಾ ಮಾಡುವವರು ತಮ್ಮ ವಿಶಿಷ್ಟ ದನಿಯಿಂದ ಚೋಯ್ ಚೋಯ್ ಎನ್ನಲು ಆರಂಭಿಸಿದರೆ ಮತ್ತೆ ಕೆಲವರು ಶೇಂಗಾ, ಕಳ್ಳೇಕಾಯ್.. ಎಂದು ಕೂಗಲಾರಂಭಿಸಿದರು.
            ಆ ರೈಲಿನ ಪ್ರಥಮದರ್ಜೆ ಬೋಗಿಯೊಂದರಿಂದ ಇಳಿದ ವಿಕ್ರಂ. ತನ್ನ ಲಗೇಜುಗಳನ್ನೆಲ್ಲ ಇಳಿಸಿಕೊಂಡು ಫ್ಲಾಟ್ ಫಾರ್ಮಿನ ಮೇಲೆ ನಡೆಯಲಾರಂಭಿಸಿದ. ಆ ತಕ್ಷಣ ಅದೆಲ್ಲಿದ್ದರೋ ಏನೋ, ಇಬ್ಬರು ವ್ಯಕ್ತಿಗಳು ಓಡಿ ಬಂದು ಲಗೇಜನ್ನು ತನಗೆ ಕೊಡಿ, ತನಗೇ ಕೊಡಿ ಎಂಬಂತೆ ದುಂಬಾಲು ಬಿದ್ದರು. ತಮ್ಮ ತಮ್ಮಲ್ಲೇ ಜಗಳದ `ನಾಟಕ' ಪ್ರಾರಂಭಿಸಿದರು. ಇದರಿಂದ ವಿಕ್ರಮನಿಗೆ ಒಮ್ಮೆಲೇ ರೇಗಿ ಹೋಯಿತು. ಮೊದಲೇ ರೈಲಿನ ಪ್ರಯಾಣದಿಂದ ಸುಸ್ತಾಗಿದ್ದ ಈತ ಅವರತ್ತ ತಿರುಗಿ `ನೋಡಿ ನನ್ನ ವಸ್ತುಗಳು ನನಗೇನೂ ಭಾರವಲ್ಲ. ನೀವ್ಯಾರೂ ಈ ಲಗೇಜನ್ನು ಹೊರುವುದು ಬೇಡ. ನನ್ನಲ್ಲಿ ಬಹಳ ತಾಕ್ಕತ್ತುಂಟು.. ಸುಮ್ಮನೆ ಪಿರಿ ಪಿರಿ ಮಾಡಬೇಡಿ..' ಎಂದು ಹೇಳಿದವನೇ ಜೋರಾಗಿ ನಡೆದು ಹೊರಟು ಹೋದ.
            ಜಗಳ ಮಾಡಿಕೊಂಡ ಇಬ್ಬರೂ `ಬಂದ ದಾರಿಗೆ ಸುಂಕವಿಲ್ಲ..' ಎಂದುಕೊಳ್ಳುತ್ತಾ ಇನ್ನೊಬ್ಬನಿಗೆ ದುಂಬಾಲು ಬೀಳಲು ಹೊರಟರು.
           ಇತ್ತ ವಿಕ್ರಂ ರೈಲು ನಿಲ್ದಾಣದಿಂದ ಹೊರಬಂದು ಟ್ಯಾಕ್ಸಿಯೊಂದನ್ನು ಹಿಡಿದು ಸುಭಾಷಚಂದ್ರ ಭೋಸ್ ನಗರದಲ್ಲಿನ ತನ್ನ ಬಾಡಿಗೆ ಮನೆಯಲ್ಲಿಗೆ ಬಂದು ಸ್ನಾನ ಮಾಡಿ ಮನಸ್ಸನ್ನು ಹಗುರಾಗಿಸಿಕೊಂಡ. ತಾನು ಹೋಗಿ ಬಂದ ಕೆಲಸದ ಬಗ್ಗೆ ಯೋಚಿಸತೊಡಗಿದ.
              ವಿಕ್ರಂ ಒಬ್ಬ ಸಾಹಸಿ. ಅವನೊಬ್ಬ ಕುಂಗ್ ಫೂ ಮಾರ್ಷಲ್ ಆರ್ಟಿಸ್ಟ್. ಇದರೊಂದಿಗೆ ಕರಾಟೆಯನ್ನೂ ಕಲಿತಿದ್ದ. ಜೊತೆಗೆ ಪ್ರಖ್ಯಾತ ಜಿಮ್ನಾಸ್ಟಿಯನ್ ಕೂಡ ಆಗಿದ್ದ. ಜಿಮ್ನಾಸ್ಟಿಕ್ ನಲ್ಲಿ ಹಲವಾರು ಪದಕಗಳನ್ನೂ ಗಳಿಸಿದ್ದ. ಏನೇ ತೊಂದರೆ ಬಂದರೂ ಎದೆಗುಂದದಂತೆ ಬದುಕುವುದನ್ನು ಆತ ರೂಢಿಸಿಕೊಂಡಿದ್ದ. ಕೈ ಹಾಕಿದ ಕೆಲಸವನ್ನು ಎಂದಿಗೂ ಅರ್ಧಕ್ಕೆ ಬಿಡುವವನಲ್ಲ. ಮಂಗಳೂರಿನಲ್ಲಿ ಆತ ಒಂದು ಕುಂಗ್ ಫೂ ಹಾಗೂ ಕರಾಟೆಯ ತರಬೇತಿ ಕೇಂದ್ರವೊಂದನ್ನು ಪ್ರಾರಂಭಿಸಿದ್ದ. ಅದ್ವೈತ ಆತ್ಮರಕ್ಷಣೆ ಎಂಬ ಸುಂದರವಾದ ಹೆಸರನ್ನೂ ಅದಕ್ಕೆ ಇಟ್ಟಿದ್ದ. ಎಲ್ಲೇ ಕುಂಗ್ ಫೂ, ಕರಾಟೆಯ ಬಗ್ಗೆ ಸ್ಪರ್ಧೆಗಳಿದ್ದರೂ ಅಲ್ಲೆಲ್ಲ ಇವನ ತರಬೇತಿ ಕೇಂದ್ರಕ್ಕೆ ಪ್ರಶಸ್ತಿಗಳು ಬಂದೇ ಬರುತ್ತಿದ್ದವು. ಇವನಿಂದ ಕಲಿತ ಹಲವಾರು ಜನ ರಾಷ್ಟ್ರವ್ಯಾಪಿ ಹೆಸರಾಗಿದ್ದರು. ಎಲ್ಲೆಡೆ ತಮ್ಮ ಪ್ರತಿಭೆ ಮೆರೆದಿದ್ದರು. ಇದೇ ಕಾರಣಕ್ಕಾಗಿ ವಿಕ್ರಂ ಕೊಚ್ಚಿಗೆ ಹೋಗಿ ವಾಪಾಸ್ ಬಂದಿದ್ದ. ಅಲ್ಲಿನ ಒಂದೆರಡು ಕರಾಟೆ ಕೇಂದ್ರಗಳೂ ವಿಕ್ರಂನ ಸಲಹೆ ಪಡೆದಿದ್ದವು. ಈ ಬಗ್ಗೆಯೇ ವಿಕ್ರಂ ಆಲೋಚನೆ ಮಾಡತೊಡಗಿದ್ದ.
***
             ಇದೇ ಸಂದರ್ಭದಲ್ಲಿ ಆತನ ರೂಮಿನ  ಕಂಪೌಂಡಿನ ಹೊರಗಿನಿಂದ ಒಬ್ಬ ವ್ಯಕ್ತಿ ನಿಂತು ವಿಕ್ರಂ ಮಾಡುವ ಕೆಸವನ್ನೆಲ್ಲಾ ವೀಕ್ಷಿಸುತ್ತಿದ್ದ. ವಿಕ್ರಮನಿಗೆ ಈ ಬಗ್ಗೆ ತಿಳಿದೇ ಇರಲಿಲ್ಲ. ವಿಕ್ರಮ್ ಎಲ್ಲೇ ಹೋಗಲಿ, ಏನೇ ಮಾಡಲಿ ಆತನನ್ನೇ ಹಿಂಬಾಲಿಸಿ ವಿಕ್ರಂ ಮಾಡುವ ಕೆಲಸವನ್ನೆಲ್ಲ ವೀಕ್ಷಿಸುತ್ತಿದ್ದ. ಅಪರಿಚಿತ ವ್ಯಕ್ತಿ ತನ್ನ ಬಗ್ಗೆ ಚಿಕ್ಕ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ.

(ಮುಂದುವರಿಯುತ್ತದೆ..)

Friday, December 12, 2014

ಹನಿ-ಮಿನಿ ಚುಟುಕುಗಳು

ಫೂಲನ್ ದೇವಿ

ಹಿಂದೊಮ್ಮೆ ಆಕೆಯಿದ್ದಳು
ಫೂಲನ್ ದೇವಿ |
ಗುಂಡು ಹೊಡೆದರು ಜನ
ಆಕೆಯಾದಳು Fallen ದೇವಿ ||

ಸತ್ಯಾಗ್ರಹ

ಸತ್ಯಾಗ್ರಹವೆಂದರೆ ಸತ್ಯದ
ಆಗ್ರಹ ಎಂದವರಾರು?
ಹಾಗೆಂದರೆ ಸತಿ ಮಾಡಿದ
ಆಗ್ರಹ ಎಂದರ್ಥವಂತೆ ||

ಮದುವೆ

ಪ್ರೀತಿಸಿ ಪ್ರೀತಿಸಿ
ಸುಸ್ತಾಗುವವರಿಗೆ ಸಿಗುವ
ಒಂದು ಸ್ಟಾಪು |
ಫಾರ್ ಎ ಛೇಂಜ್ ರೂಟು ||

ಆಸ್ಟ್ರೇಲಿಯಾದ ಗೆಲುವು

ಚಿಂತಿಸಬೇಡಿ ಈ ಮ್ಯಾಚಿನಲ್ಲೂ
ಗೆಲ್ತಾರೆ ಆಸ್ಟ್ರೇಲಿಯಾದವರು |
ಯಾಕಂದ್ರೆ ಅವರ
ಜೊತೆಗಿದ್ದಾನೆ ಅಂಪಾಯರ್ರು ||