(ದೇವಕಾರದ ಸೊಬಗು) |
ದೇವಕಾರ ಹೆಸರಿಗೆ ತಕ್ಕಂತೆ ದೇವರದ್ದೇ ಕಾರುಬಾರಿನ ಜಾಗ ಎಂದರೂ ತಪ್ಪಾಗಲಿಕ್ಕಿಲ್ಲ. ದಟ್ಟ ಕಾಡು, ಎತ್ತ ನೋಡಿದರತ್ತ ಹಸಿರಿನ ಚೆಲುವು ತುಂಬಿರುವ ದೇವಕಾರ ಗ್ರಾಮದ ಹತ್ತಿರವೇ ಇದೆ ಜಲಪಾತ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ಕಾರವಾರ ತಾಲೂಕುಗಳ ಗಡಿ ಪ್ರದೇಶದಲ್ಲಿರುವ ಈ ಜಲಪಾತ ತನ್ನ ಚೆಲುವಿನಿಂದ ಎಲ್ಲರನ್ನು ಸೆಳೆಯುತ್ತದೆ. ಪಶ್ಚಿಮ ಘಟ್ಟದ ತುದಿಯಿಂದ ಕಣಿವೆಯಾಳಕ್ಕೆ ಧುಮ್ಮಿಕ್ಕುವ ನೀರಿನ ಸೊಬಗನ್ನು ವೀಕ್ಷಿಸುವುದೇ ಖುಷಿಯ ಸಂಗತಿ. ಕಾಳಿ ನದಿಯನ್ನು ಸೇರುವ ಹಳ್ಳವೊಂದರ ಸೃಷ್ಟಿ ದೇವಕಾರ ಜಲಪಾತ. 15-200 ಅಡಿ ಎತ್ತರದ ಈ ಜಲಪಾತವನ್ನು ಮಳೆಗಾಲ ಹೊರತು ಪಡಿಸಿ ಉಳಿದೆಲ್ಲ ಕಾಲದಲ್ಲಿಯೂ ನೋಡಬಹುದಾಗಿದೆ.
ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಂತಹ ಕಾಡಿನ ನಡುವೆ ಇರುವ ಈ ಜಲಪಾತ ವೀಕ್ಷಣೆ ಮಾಡಬೇಕೆಂದರೆ ಸಾಹಸವನ್ನೇ ಮಾಡಬೇಕು. ಕೊಡಸಳ್ಳಿ ಹಾಗೂ ಕದ್ರಾ ಅಣೆಕಟ್ಟುಗಳ ನಡುವಿನ ಪ್ರದೇಶದಲ್ಲಿ ಇರುವ ದೇವಕಾರ ಗ್ರಾಮವನ್ನು ತಲುಪುವುದು ಸುಲಭವಲ್ಲ. ವರ್ಷದ ಆರು ತಿಂಗಳು ಈ ಊರು ದ್ವೀಪವೇ ಸರಿ. ಮೂರು ಕಡೆಯಲ್ಲಿ ಸುತ್ತುವರಿದಿರುವ ಕಾಳಿ ನದಿಯ ನೀರು. ಇನ್ನೊಂದು ಕಡೆ ಎದೆಮಟ್ಟಕ್ಕೆ ಏರಬೇಕಾದಂತಹ ಕಡಿದಾದ ಪಶ್ಚಿಮ ಘಟ್ಟ. ಇಂತಹ ಪ್ರದೇಶದಲ್ಲಿ ದೇವಕಾರ ಗ್ರಾಮವಿದೆ. ದೇವಕಾರ ಗ್ರಾಮದಿಂದ 1-2 ಕಿ.ಮಿ ಅಂತರದಲ್ಲಿ ಜಲಪಾತವಿದೆ. ಜಲಪಾತ ವರ್ಷದ ಎಲ್ಲ ಕಾಲದಲ್ಲಿಯೂ ಧುಮ್ಮಿಕ್ಕುತ್ತದೆ. ಮಳೆಗಾಲದಲ್ಲಿ ತನ್ನ ಸೊಬಗನ್ನು ನೂರ್ಮಡಿಸಿಕೊಳ್ಳುತ್ತದೆ. ಇಂತಹ ಜಲಪಾತವನ್ನು ಕಣ್ತುಂಬಿಕೊಳ್ಳಬೇಕೆಂದರೆ ಕನಿಷ್ಟ 10 ಕಿ.ಮಿ ನಡೆಯುವುದು ಕಡ್ಡಾಯ.
(ದೇವಕಾರದಲ್ಲಿರುವ ದೇವಸ್ಥಾನ) |
ದೇವಕಾರ ಗ್ರಾಮದಲ್ಲಿ ಕೆಲವೇ ಕೆಲವು ಮನೆಗಳಿವೆ. ಬಡ, ಮಧ್ಯಮ ವರ್ಗದ ಕುಟುಂಬಗಳು ಇಲ್ಲಿ ವಾಸ ಮಾಡುತ್ತಿವೆ. ಇಲ್ಲಿಗೆ ಪ್ರವಾಸಿಗರು ಬರುವುದು ಕಡಿಮೆ. ಆಗಮಿಸುವ ಪ್ರವಾಸಿಗರಿಗೆ ಕೇವಲ ಜಲಪಾತವನ್ನು ತೋರಿಸುವ ಕಾರ್ಯವನ್ನು ಮಾತ್ರ ಸ್ಥಳೀಯರು ಮಾಡುತ್ತಾರೆ. ಪ್ರವಾಸಿಗರಿಗೆ ಅಗತ್ಯವಾದ ಊಟ, ತಿಂಡಿಗಳನ್ನು ಇಲ್ಲಿಗೆ ಬರುವಾಗ ಪ್ರವಾಸಿಗರೇ ತರತಕ್ಕದ್ದು. ಆಧುನಿಕ ಜಗತ್ತಿನ ಸೌಲಭ್ಯಗಳು ಈ ಊರಿಗೆ ಇನ್ನೂ ತಲುಪಿಲ್ಲದ ಕಾರಣ ಈ ಊರಿನ ಪರಿಸರವನ್ನು ಮಲಿನ ಮಾಡುವುದು ನಿಷಿದ್ಧ. ಇಲ್ಲಿ ಮೊಬೈಲ್ ರಿಂಗಣಿಸುವುದಿಲ್ಲ. ಬಸ್ಸುಗಳು, ವಾಹನಗಳ ಸುಳಿವಿಲ್ಲ. ವಿದ್ಯುತ್ ಸಂಪರ್ಕ ಕೆಲವೇ ಮನೆಗಳಿಗಿದೆ. ಪ್ರವಾಸಿಗರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲ. ಬೆಳಿಗ್ಗೆ ಮುಂಜಾನೆ ಜಲಪಾತ ವೀಕ್ಷಣೆಗೆ ಬಂದರೆ ಸಂಜೆ ಮರಳಲೇ ಬೇಕು. ದಟ್ಟ ಕಾಡು ಇದಾದ್ದರಿಂದ ಕಾಡು ಪ್ರಾಣಿಗಳ ಹಾವಳಿ ಸದಾ ಇರುತ್ತದೆ. ಸ್ಥಳೀಯರ ಮಾರ್ಗದರ್ಶನವಿಲ್ಲದೇ ಇಲ್ಲಿಗೆ ಆಗಮಿಸುವುದು ಅಪಾಯಕರ.
(ಕೊಡಸಳ್ಳಿ ಅಣೆಕಟ್ಟು) |
ಕಷ್ಟಪಟ್ಟು ಆಗಮಿಸಿದರೆ ಜಲಪಾತ ಇಷ್ಟವಾಗುತ್ತದೆ. 10-12 ಕಿ.ಮಿ ದೂರದ ಟ್ರೆಕ್ಕಿಂಗಿನ ಸುಸ್ತು, ಕಷ್ಟವನ್ನೆಲ್ಲ ಜಲಪಾತದ ಸೊಬಗು ಒಂದೇ ಏಟಿಗೆ ಓಡಿಸಿಬಿಡುತ್ತದೆ. ತಣ್ಣನೆಯ ಜಲಪಾತದ ನೀರಂತೂ ಮನಸ್ಸಿನ ಎಲ್ಲ ದುಃಖ, ಕಷ್ಟಗಳಿಗೆ ಪೂರ್ಣವಿರಾಮ ಹಾಕಿಬಿಡುತ್ತದೆ. ಹೊಟ್ಟೆಗೆ ಅಮೃತದಂತಹ ಸವಿಯನ್ನು ನೀಡುತ್ತದೆ. ದೈತ್ಯ ಬಂಡೆಗಳ ಸಾಲಿನಿಂದ ಧುಮ್ಮಿಕ್ಕುವ ಜಲಪಾತ ನೋಡಿದಷ್ಟೂ ನೋಡಬೇಕೆನ್ನಿಸುತ್ತದೆ. ಹಾಲ್ನೊರೆಯ ಸೊಬಗಂತೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಮಳೆಗಾಲದ ನಂತರ ನೀರು ಹೆಚ್ಚಾಗಿರುವ ಸಂದರ್ಭದಲ್ಲಿ ಈ ಜಲಪಾತ ಭೋರೆನ್ನುವ ಸದ್ದು ಮೂರ್ನಾಲ್ಕು ಕಿ.ಮಿ ವರೆಗೂ ಕೇಳಿಸುತ್ತದೆ. ಗವ್ವೆನ್ನುವ ಕಾಡಿನಲ್ಲಿ ಜಲಪಾತದ ಭೋರೆನ್ನುವ ಸದ್ದು ಒಳ್ಳೆಯ ಅನುಭೂತಿಯನ್ನು ನೀಡುತ್ತದೆ. ನೀವೂ ಈ ಅನುಭವವನ್ನು ಸವಿಯಬೇಕಿದ್ದರೆ ಜಲಪಾತಕ್ಕೆ ತೆರಳಲೇ ಬೇಕು. ಹಾಗಿದ್ರೆ ಯಾಕೆ ತಡ? ಈಗಲೇ ರೆಡಿ ಮಾಡಿಕೊಳ್ಳಿ ನಿಮ್ಮೆಲ್ಲ ವಸ್ತುಗಳನ್ನು. ಹೊರಡಲು ತಯಾರಾಗಿ.
ಜಲಪಾತಕ್ಕೆ ತಲುಪುವ ಬಗೆ
ಬೆಂಗಳೂರಿನಿಂದ ಆಗಮಿಸುವವರು ಹುಬ್ಬಳ್ಳಿ ಅಥವಾ ಶಿವಮೊಗ್ಗ-ಶಿರಸಿ ಮೂಲಕ ಯಲ್ಲಾಪುರ ತಲುಪಿ ಅಲ್ಲಿಂದ ಬಸ್ ಅಥವಾ ವಾಹನ ಮೂಲಕ ಕಳಚೆ ತಲುಪಿ ಅಲ್ಲಿಂದ ಟ್ರೆಕ್ಕಿಂಗ್ ಮೂಲಕ ಜಲಪಾತ ತಲುಬಹುದು. ಮಂಗಳೂರಿನ ಕಡೆಯವರು ಕಾರವಾರ ತಲುಪಿ ಕೈಗಾ-ಕೊಡಸಳ್ಳಿ ಮೂಲಕ ಕಾಳಿ ನದಿ ದಾಟಿ ಟ್ರೆಕ್ಕಿಂಗ್ ಮಾಡಿ ಜಲಪಾತದ ಒಡಲು ತಲುಪಬಹುದು. ಹುಬ್ಬಳ್ಳಿಯಲ್ಲಿ ಹತ್ತಿರದ ವಿಮಾನ ನಿಲ್ದಾಣವಿದೆ. ಅಂಕೋಲಾ, ಕಾರವಾರದಲ್ಲಿ ರೈಲು ನಿಲ್ದಾಣಗಳಿವೆ. ಕಾರವಾರದಿಂದ ಕೊಡಸಳ್ಳಿ, ಯಲ್ಲಾಪುರದಿಂದ ಕಳಚೆಯ ವರೆಗೆ ಸರ್ಕಾರಿ ಬಸ್ ಓಡಾಡುತ್ತದೆ. ಅಲ್ಲಿಂದ ಟ್ರೆಕ್ಕಿಂಗ್ ಅನಿವಾರ್ಯ.