Monday, December 15, 2014

ಅಘನಾಶಿನಿ ಕಣಿವೆಯಲ್ಲಿ-1

ಆತ್ಮೀಯರೇ...
(ಮಂಗಳೂರು ರೈಲ್ವೆ ನಿಲ್ದಾಣ)
                   ನಾನು ಪಿಯುಸಿಯಲ್ಲಿದ್ದಾಗ ಬರೆಯುವ ಹುಕಿ ಹುಟ್ಟಿದ ಕಾರಣ ಅಘನಾಶಿನಿ ಕಣಿವೆಯಲ್ಲಿ.. ಎನ್ನುವ ಕಾದಂಬರಿಯೊಂದನ್ನು ಬರೆಯಲು ಆರಂಭಿಸಿದೆ. ಪ್ರಾರಂಭದ ದಿನಗಳಲ್ಲಿ ಸರಾಗವಾಗಿ ಬರೆದ ಕಾದಂಬರಿ ನಂತರದ ದಿನಗಳಲ್ಲಿ ನಿಧಾನವಾಯಿತು. ಕೊನೆ ಕೊನೆಗೆ ಎಷ್ಟು ಕುಂಟುತ್ತ ಸಾಗಿತೆಂದರೆ ಇದುವರೆಗೂ ಅದನ್ನು ಮುಗಿಸಲು ಸಾಧ್ಯವಾಗಿಲ್ಲ.
                 ಆ ದಿನಗಳಲ್ಲಿ ನಾನು ಕಾದಂಬರಿ ಬರೆಯುತ್ತಿರುವುದನ್ನು ತಿಳಿದಿದ್ದ ಪರಿಚಯದವರು, ದೋಸ್ತರೆಲ್ಲ ಎಂದಿಗೂ ತಮಾಷೆ ಮಾಡುವಷ್ಟು ಆಗಿಬಿಟ್ಟಿದೆ. ಈ ಕಾದಂಬರಿ ಬರೆಯಲು ಆರಂಭಿಸಿದ ನಂತರ ಅದೆಷ್ಟೋ ಕಥೆಗಳನ್ನು, ಕವಿತೆಗಳನ್ನು ನಾನು ಬರೆದಿದ್ದೇನೆ. ಆ ನಂತರವೇ ಬೆಂಗಾಲಿ ಸುಂದರಿ ಎನ್ನುವ ಕಾದಂಬರಿಯನ್ನೂ ಬರೆದು ಮುಗಿಸಿದೆ. ಆದರೆ ಅಘನಾಶಿನಿ ಕಣಿವೆಯಲ್ಲಿ ಕಾದಂಬರಿ ಬರವಣಿಗೆ ಕೆಲಸ ಮಾತ್ರ ಮುಂದುವರಿದಿರಲಿಲ್ಲ ನೋಡಿ. ಈಗೆಲ್ಲೋ ಏನನ್ನೋ ಹುಡುಕುತ್ತಿದ್ದಾಗ ಮತ್ತೆ ಅಘನಾಶಿನಿ ಕಣಿವೆಯಲ್ಲಿ ಕಾದಂಬರಿಯ ಅಪೂರ್ಣ  ಹಸ್ತಪ್ರತಿ ಸಿಕ್ಕಿತು. ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ.. ಆನಂದಿಸಿ..
               ಮಲೆನಾಡು, ಶಿರಸಿ, ಸಿದ್ದಾಪುರ, ಯಲ್ಲಾಪುರ, ದಂಟಕಲ್ಲು ಈ ಸುತ್ತಮುತ್ತವೇ ಕಾದಂಬರಿ ಓಡಾಡುತ್ತದೆ. ನಡು ನಡುವೆ ಸಿನಿಮಾದವರು ಫಾರಿನ್ ಗೆ ಹೋಗಿ ಶೂಟಿಂಗ್ ಮಾಡುತ್ತಾರಲ್ಲ ಹಾಗೆ ಬೆಂಗಳೂರು ಹಾಗೂ ಮಂಗಳೂರು ಮುಂತಾದ ನಗರದಗಳ ದರ್ಶನವೂ ಇದೆ. ಕುತೂಹಲ ಹುಟ್ಟಿಸುವಂತಹ, ಪತ್ತೆದಾರಿ ಕಾದಂಬರಿ ಇದು ಎನ್ನುವುದನ್ನು ಮೊದಲೇ ಹೇಳಿಬಿಡುತ್ತೇನೆ. ಆ ದಿನಗಳ ನನ್ನ ಮೊದಲ ಕಾದಂಬರಿ ಪ್ರಯತ್ನವಾಗಿರುವುದರಿಂದ ಸ್ವಲ್ಪ ಕಷ್ಟಪಟ್ಟಾದರೂ ಓದಿ. ಸಲಹೆ ನೀಡಿ.
               ಇಲ್ಲಿ ಬರೆಯುತ್ತಲೇ ಕಾದಂಬರಿಯನ್ನು ಪೂರ್ಣಗೊಳಿಸುವ ಪ್ರಯತ್ನವನ್ನೂ ಮಾಡುತ್ತೇನೆ. ಪಿಯುಸಿ ದಿನಗಳ ಕಾದಂಬರಿಯ ಆರಂಭವಾಗಿರುವ ಕಾರಣ ಅಲ್ಪ-ಸ್ವಲ್ಪ ಬಾಲಿಷವೂ ಆಗಿರಬಹುದು. ಸ್ವಲ್ಪ ಸುಧಾರಿಸಿಕೊಂಡು ಓದಿ.. ಅಭಿಪ್ರಾಯಗಳನ್ನು ತಿಳಿಸಿ. ನಾನು ಕುತೂಹಲಿಗನಾಗಿದ್ದೇನೆ. ಇನ್ನು ಮುಂದೆ ನೀವುಂಟು, ಕಾದಂಬರಿಯುಂಟು.

***
**1**
          ಉದ್ದನೆಯ, ಸುಂದರ ಕಡಲತೀರ. ಮನಮೋಹಕ ಸೂರ್ಯಾಸ್ತದ ಚಿತ್ರ ಕಾಣುವ ಪ್ರದೇಶ. ಕ್ಷಣ ಕ್ಷಣಕ್ಕೂ ಬಂದು ಭೂಮಿಯನ್ನು ಚುಂಬಿಸುವ ಮೋಹಕ ಸಾಗರ ಅಲೆಗಳು. ಕಣ್ಣೆವೆಯಿಕ್ಕುವ ವರೆಗೂ ಕಾಣುವ ಜಲಧಿ. ಆ ಜಲಧಿಯನ್ನೇ ಬಾಚಿ ತಬ್ಬಲು ಯತ್ನಿಸುತ್ತಿರುವ ನೀಲಾಕಾಶ. ಸಮುದ್ರ ಚುಂಬನದ ಕರೆಗೆ ನಾಚಿ ನೀರಾಗಿ, ಬಳುಕಿ, ಬಾಗಿ ನಿಂತಿರುವ ನಾರಿಕೇಳ ವೃಕ್ಷ ಸಮೂಹ. ಸನಿಹದಲ್ಲೇ ಬೆಳೆದ, ಬೆಳೆಯುತ್ತಿರುವ ನಗರ ಹಾಗೂ ಅದರ ವಿಶಾಲ ಬಂದರು. ಬಂದರಿಗೆ ಬರುತ್ತಿರುವ ಹಡಗುಗಳು. ಹತ್ತಿರ ಬಂದಂತೆಲ್ಲ ಅವುಗಳ ಸದ್ದು ನೀಡುವ ಅನಿರ್ವಚನೀಯ ಭಯ. ಅವುಗಳ ಆಗಮನ, ನಿರ್ಗಮನದ ದೃಶ್ಯ ನೋಡುಗರಿಗೆ ಹೊಸದೊಂದು ಅನುಭೂತಿಯನ್ನು ತರುತ್ತಿತ್ತು. ಎಷ್ಟು ನೋಡಿದರೂ ಬೇಸರ ತರದ ಆ ಪ್ರದೇಶವೇ ಮಂಗಳೂರು. ಅಲ್ಲಿನ ಪ್ರಕೃತಿ ಸೊಬಗು, ರಮ್ಯತೆ ನೋಡುಗರನ್ನು ಮೈಮರೆಸುವಂತಿತ್ತು.
             ಮಂಗಳೂರು ಎಂಬ ಹೆಸರೇ ಮನಮೋಹಕ. ಅಲ್ಲಿನ ಕಡಲ ಕಿನಾರೆಗಳು ಇನ್ನಷ್ಟು ಸುಂದರ. ಆ ಅರಬ್ಬೀ ಸಮುದ್ರ, ಆ ಹೊನ್ನಿನ ವರ್ಣದ ರಾಶಿ ರಾಶಿ ಉಸುಕು, ರಾಷ್ಟ್ರೀಯ ಹೆದ್ದಾರಿಗುಂಟ ಭರ್ರೆಂದು ಸಾಗುವ ವಾಹನಗಳ ಸದ್ದು, ಸಮರೋಪಾದಿಯಲ್ಲಿ ಬೆಳೆಯುತ್ತಿರುವ ಮಂಗಳೂರು ಅಪರೂಪದ ತಾಣಗಳಲ್ಲಿ ಒಂದೆಂದರೆ ತಪ್ಪಲ್ಲ.
(ಮಂಗಳೂರಿನ ಕಡಲ ಕಿನಾರೆ)
             ಅದು ಮಂಗಳೂರಿನ ರೈಲ್ವೆ ನಿಲ್ದಾಣ. ಒಂದೆರಡು ರೈಲುಗಳಾಗಲೇ ಪಯಣದ ನಡುವೆ ಮಂಗಳೂರಿನಲ್ಲಿ ವಿಶ್ರಮಿಸುತ್ತಿದ್ದವು. ಮತ್ತೊಂದೆರಡು ರೈಲುಗಳು ಕೂ ಹೊಡೆದು ಮುಂದಕ್ಕೆ ಸಾಗುತ್ತಿದ್ದವು. ಪ್ರಯಾಣಿಕರೋ ತಮ್ಮ ತಮ್ಮ ರೈಲಿನಲ್ಲಿ ಏರಾಟ, ಇಳಿದಾಟ ನಡೆಸಿದ್ದರು. ತಮ್ಮ ಪಾಡಿಗೆ ತಾವಿದ್ದರು. ಕೆಲವರು ಪ್ಲಾಟ್ ಫಾರ್ಮಿನಲ್ಲಿ ನಡೆಯುತ್ತಲೋ, ಕುಳಿತೋ ಕಾಲ ತಳ್ಳುತ್ತಿದ್ದರು. ಚಾಯ್ ಮಾರುವವರು ರೈಲಿಂದ ರೈಲಿಗೆ ಹೈಜಂಪ್, ಲಾಂಗ್ ಜಂಪ್ ಮಾಡುತ್ತಿದ್ದರು. ಭಿಕ್ಷುಕರಂತೂ ಮತ್ತಿನ್ಯಾವ ಸ್ಥಳದಲ್ಲಿ ಭಿಕ್ಷೇ ಬೇಡಬೇಕು ಎಂದು ಆಲೋಚಿಸುತ್ತಿದ್ದರು. ಒಟ್ಟಿನಲ್ಲಿ ರೈಲ್ವೆ ನಿಲ್ದಾಣ ಸಾಕಷ್ಟು ಕ್ರಿಯಾಶೀಲವಾಗಿತ್ತು ಎನ್ನಬಹುದು.
             ಹೀಗಿದ್ದಾಗ ಅಲ್ಲಿಗೆ ರೈಲೊಂದು ಬಂದಿತು. ಕೇರಳದ ತಿರುವನಂತಪುರಂನಿಂದ ಮುಂಬಯಿಗೆ ಹೊರಟಿದ್ದ ರೈಲದು. ರೈಲು ಬಂದಿದ್ದೇ ತಡ ನಿಲ್ದಾಣದಲ್ಲಿ ಒಮ್ಮೆಲೆ ವಿದ್ಯುತ್ ಸಂಚಾರ. ಚಹಾ ಮಾಡುವವರು ತಮ್ಮ ವಿಶಿಷ್ಟ ದನಿಯಿಂದ ಚೋಯ್ ಚೋಯ್ ಎನ್ನಲು ಆರಂಭಿಸಿದರೆ ಮತ್ತೆ ಕೆಲವರು ಶೇಂಗಾ, ಕಳ್ಳೇಕಾಯ್.. ಎಂದು ಕೂಗಲಾರಂಭಿಸಿದರು.
            ಆ ರೈಲಿನ ಪ್ರಥಮದರ್ಜೆ ಬೋಗಿಯೊಂದರಿಂದ ಇಳಿದ ವಿಕ್ರಂ. ತನ್ನ ಲಗೇಜುಗಳನ್ನೆಲ್ಲ ಇಳಿಸಿಕೊಂಡು ಫ್ಲಾಟ್ ಫಾರ್ಮಿನ ಮೇಲೆ ನಡೆಯಲಾರಂಭಿಸಿದ. ಆ ತಕ್ಷಣ ಅದೆಲ್ಲಿದ್ದರೋ ಏನೋ, ಇಬ್ಬರು ವ್ಯಕ್ತಿಗಳು ಓಡಿ ಬಂದು ಲಗೇಜನ್ನು ತನಗೆ ಕೊಡಿ, ತನಗೇ ಕೊಡಿ ಎಂಬಂತೆ ದುಂಬಾಲು ಬಿದ್ದರು. ತಮ್ಮ ತಮ್ಮಲ್ಲೇ ಜಗಳದ `ನಾಟಕ' ಪ್ರಾರಂಭಿಸಿದರು. ಇದರಿಂದ ವಿಕ್ರಮನಿಗೆ ಒಮ್ಮೆಲೇ ರೇಗಿ ಹೋಯಿತು. ಮೊದಲೇ ರೈಲಿನ ಪ್ರಯಾಣದಿಂದ ಸುಸ್ತಾಗಿದ್ದ ಈತ ಅವರತ್ತ ತಿರುಗಿ `ನೋಡಿ ನನ್ನ ವಸ್ತುಗಳು ನನಗೇನೂ ಭಾರವಲ್ಲ. ನೀವ್ಯಾರೂ ಈ ಲಗೇಜನ್ನು ಹೊರುವುದು ಬೇಡ. ನನ್ನಲ್ಲಿ ಬಹಳ ತಾಕ್ಕತ್ತುಂಟು.. ಸುಮ್ಮನೆ ಪಿರಿ ಪಿರಿ ಮಾಡಬೇಡಿ..' ಎಂದು ಹೇಳಿದವನೇ ಜೋರಾಗಿ ನಡೆದು ಹೊರಟು ಹೋದ.
            ಜಗಳ ಮಾಡಿಕೊಂಡ ಇಬ್ಬರೂ `ಬಂದ ದಾರಿಗೆ ಸುಂಕವಿಲ್ಲ..' ಎಂದುಕೊಳ್ಳುತ್ತಾ ಇನ್ನೊಬ್ಬನಿಗೆ ದುಂಬಾಲು ಬೀಳಲು ಹೊರಟರು.
           ಇತ್ತ ವಿಕ್ರಂ ರೈಲು ನಿಲ್ದಾಣದಿಂದ ಹೊರಬಂದು ಟ್ಯಾಕ್ಸಿಯೊಂದನ್ನು ಹಿಡಿದು ಸುಭಾಷಚಂದ್ರ ಭೋಸ್ ನಗರದಲ್ಲಿನ ತನ್ನ ಬಾಡಿಗೆ ಮನೆಯಲ್ಲಿಗೆ ಬಂದು ಸ್ನಾನ ಮಾಡಿ ಮನಸ್ಸನ್ನು ಹಗುರಾಗಿಸಿಕೊಂಡ. ತಾನು ಹೋಗಿ ಬಂದ ಕೆಲಸದ ಬಗ್ಗೆ ಯೋಚಿಸತೊಡಗಿದ.
              ವಿಕ್ರಂ ಒಬ್ಬ ಸಾಹಸಿ. ಅವನೊಬ್ಬ ಕುಂಗ್ ಫೂ ಮಾರ್ಷಲ್ ಆರ್ಟಿಸ್ಟ್. ಇದರೊಂದಿಗೆ ಕರಾಟೆಯನ್ನೂ ಕಲಿತಿದ್ದ. ಜೊತೆಗೆ ಪ್ರಖ್ಯಾತ ಜಿಮ್ನಾಸ್ಟಿಯನ್ ಕೂಡ ಆಗಿದ್ದ. ಜಿಮ್ನಾಸ್ಟಿಕ್ ನಲ್ಲಿ ಹಲವಾರು ಪದಕಗಳನ್ನೂ ಗಳಿಸಿದ್ದ. ಏನೇ ತೊಂದರೆ ಬಂದರೂ ಎದೆಗುಂದದಂತೆ ಬದುಕುವುದನ್ನು ಆತ ರೂಢಿಸಿಕೊಂಡಿದ್ದ. ಕೈ ಹಾಕಿದ ಕೆಲಸವನ್ನು ಎಂದಿಗೂ ಅರ್ಧಕ್ಕೆ ಬಿಡುವವನಲ್ಲ. ಮಂಗಳೂರಿನಲ್ಲಿ ಆತ ಒಂದು ಕುಂಗ್ ಫೂ ಹಾಗೂ ಕರಾಟೆಯ ತರಬೇತಿ ಕೇಂದ್ರವೊಂದನ್ನು ಪ್ರಾರಂಭಿಸಿದ್ದ. ಅದ್ವೈತ ಆತ್ಮರಕ್ಷಣೆ ಎಂಬ ಸುಂದರವಾದ ಹೆಸರನ್ನೂ ಅದಕ್ಕೆ ಇಟ್ಟಿದ್ದ. ಎಲ್ಲೇ ಕುಂಗ್ ಫೂ, ಕರಾಟೆಯ ಬಗ್ಗೆ ಸ್ಪರ್ಧೆಗಳಿದ್ದರೂ ಅಲ್ಲೆಲ್ಲ ಇವನ ತರಬೇತಿ ಕೇಂದ್ರಕ್ಕೆ ಪ್ರಶಸ್ತಿಗಳು ಬಂದೇ ಬರುತ್ತಿದ್ದವು. ಇವನಿಂದ ಕಲಿತ ಹಲವಾರು ಜನ ರಾಷ್ಟ್ರವ್ಯಾಪಿ ಹೆಸರಾಗಿದ್ದರು. ಎಲ್ಲೆಡೆ ತಮ್ಮ ಪ್ರತಿಭೆ ಮೆರೆದಿದ್ದರು. ಇದೇ ಕಾರಣಕ್ಕಾಗಿ ವಿಕ್ರಂ ಕೊಚ್ಚಿಗೆ ಹೋಗಿ ವಾಪಾಸ್ ಬಂದಿದ್ದ. ಅಲ್ಲಿನ ಒಂದೆರಡು ಕರಾಟೆ ಕೇಂದ್ರಗಳೂ ವಿಕ್ರಂನ ಸಲಹೆ ಪಡೆದಿದ್ದವು. ಈ ಬಗ್ಗೆಯೇ ವಿಕ್ರಂ ಆಲೋಚನೆ ಮಾಡತೊಡಗಿದ್ದ.
***
             ಇದೇ ಸಂದರ್ಭದಲ್ಲಿ ಆತನ ರೂಮಿನ  ಕಂಪೌಂಡಿನ ಹೊರಗಿನಿಂದ ಒಬ್ಬ ವ್ಯಕ್ತಿ ನಿಂತು ವಿಕ್ರಂ ಮಾಡುವ ಕೆಸವನ್ನೆಲ್ಲಾ ವೀಕ್ಷಿಸುತ್ತಿದ್ದ. ವಿಕ್ರಮನಿಗೆ ಈ ಬಗ್ಗೆ ತಿಳಿದೇ ಇರಲಿಲ್ಲ. ವಿಕ್ರಮ್ ಎಲ್ಲೇ ಹೋಗಲಿ, ಏನೇ ಮಾಡಲಿ ಆತನನ್ನೇ ಹಿಂಬಾಲಿಸಿ ವಿಕ್ರಂ ಮಾಡುವ ಕೆಲಸವನ್ನೆಲ್ಲ ವೀಕ್ಷಿಸುತ್ತಿದ್ದ. ಅಪರಿಚಿತ ವ್ಯಕ್ತಿ ತನ್ನ ಬಗ್ಗೆ ಚಿಕ್ಕ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ.

(ಮುಂದುವರಿಯುತ್ತದೆ..)

Friday, December 12, 2014

ಹನಿ-ಮಿನಿ ಚುಟುಕುಗಳು

ಫೂಲನ್ ದೇವಿ

ಹಿಂದೊಮ್ಮೆ ಆಕೆಯಿದ್ದಳು
ಫೂಲನ್ ದೇವಿ |
ಗುಂಡು ಹೊಡೆದರು ಜನ
ಆಕೆಯಾದಳು Fallen ದೇವಿ ||

ಸತ್ಯಾಗ್ರಹ

ಸತ್ಯಾಗ್ರಹವೆಂದರೆ ಸತ್ಯದ
ಆಗ್ರಹ ಎಂದವರಾರು?
ಹಾಗೆಂದರೆ ಸತಿ ಮಾಡಿದ
ಆಗ್ರಹ ಎಂದರ್ಥವಂತೆ ||

ಮದುವೆ

ಪ್ರೀತಿಸಿ ಪ್ರೀತಿಸಿ
ಸುಸ್ತಾಗುವವರಿಗೆ ಸಿಗುವ
ಒಂದು ಸ್ಟಾಪು |
ಫಾರ್ ಎ ಛೇಂಜ್ ರೂಟು ||

ಆಸ್ಟ್ರೇಲಿಯಾದ ಗೆಲುವು

ಚಿಂತಿಸಬೇಡಿ ಈ ಮ್ಯಾಚಿನಲ್ಲೂ
ಗೆಲ್ತಾರೆ ಆಸ್ಟ್ರೇಲಿಯಾದವರು |
ಯಾಕಂದ್ರೆ ಅವರ
ಜೊತೆಗಿದ್ದಾನೆ ಅಂಪಾಯರ್ರು ||


Thursday, December 4, 2014

ಮುಪ್ಪಿನಲ್ಲೂ ಮುಕ್ಕಾಗದ ಕ್ರಿಯಾಶೀಲತೆ

ದೇಹಕ್ಕೆ ಮುಪ್ಪಾಗಿದ್ದರೂ ಕಲೆಗೆ, ಕ್ರಿಯಾಶೀಲತೆಗೆ ಮುಪ್ಪಿಲ್ಲ ಎನ್ನುವುದಕ್ಕೆ ನಗರದ ವೀರಭದ್ರಗಲ್ಲಿಯ ನಿವಾಸಿ ಮೀನಾಕ್ಷಿ ಶಿವಪ್ಪ ಬೆಂಡೀಗೇರಿ ಇವರೇ ಸಾಕ್ಷಿ. ವಯಸ್ಸು ಎಂಭತ್ತಾಗಿದ್ದರೂ ಚಟುವಟಿಕೆಯಿಂದ ಕೆಲಸ ಮಾಡುವ ಇವರ ಉತ್ಸಾಹ ಕುಂದಿಲ್ಲ.
ಮೀನಾಕ್ಷಿ ಬೆಂಡೀಗೇರಿಯವರ ಮನೆಯ ಒಳಹೊಕ್ಕರೆ ಸಾಕು. ನೋಡಗರನ್ನು ಹಲವಾರು ವಿಶಿಷ್ಟ ವಸ್ತುಗಳು ಸೆಳೆಯುತ್ತವೆ. ವಿಶಿಷ್ಟ ವಿನ್ಯಾಸದ ಬಾಗಿಲು ತೋರಣ, ಗ್ಲಾಸ್ ಪೇಂಟಿಂಗ್ಸ್, ಬಳೆ ಡಿಸೈನ್ಸ್, ಮೇಟಿ, ಉಲ್ಲನ್ನಿನ ಹಾರ ಹೀಗೆ ನೂರಾರು ಬಗೆಯ ವಸ್ತುಗಳನ್ನು ಮಾಡಿದ್ದಾರೆ. ಯವ್ವನದ ಹುರುಪಿನಲ್ಲಿಯೇ ಈಗಲೂ ಕೆಲಸ ಮಾಡುವ ಮೀನಾಕ್ಷಿ ಬೆಂಡೀಗೇರಿಯವರು ಸದಾ ಒಂದಿಲ್ಲೊಂದು ವಿಶಿಷ್ಟ ವಸ್ತುಗಳನ್ನು ತಯಾರಿಸುತ್ತಲೇ ಇರುತ್ತಾರೆ.
ಟಿಕಲಿ ಕುಶಲತೆ, ಸೀರೆ ಡಿಸೈನ್, ವಿಧ ವಿಧದ ಗೊಂಬೆಗಳು, ಉಲ್ಲನ್ನಿನ ರಚನೆಗಳು, ಮಫ್ಲರ್ಗಳು, ಬಟ್ಟೆಯ ಮೇಲಿನ ಅಲಂಕಾರಗಳು, ತೂಗಾಡುವ ವಿವಿಧ ಅಲಂಕಾರಿಕ ವಸ್ತುಗಳು ಹೀಗೆ ನೂರಾರು ಬಗೆಯ ವಸ್ತುಗಳು ಮೀನಾಕ್ಷಿ ಬೆಂಡೀಗೇರಿಯವರ ಕೈಯಲ್ಲಿ ಅರಳಿವೆ. ಟಿಕಲಿ ಸೇರಿದಂತೆ ಹಲವಾರು ವಸ್ತುಗಳಿಂದ ಮಾಡಿದ ಬಗೆ ಬಗೆಯ ಚಿತ್ರಗಳಿಗೆ ಗ್ಲಾಸು, ಮರದ ಚೌಕಟ್ಟನ್ನು ಹಾಕಿ ಇಡಲಾಗಿದೆ. ಮೀನಾಕ್ಷಿ ಅವರು ತಯಾರಿಸಿದ ಹಲವು ವಸ್ತುಗಳು ನಗರದ, ತಾಲೂಕಿನ, ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿರುವ ಪರಿಚಯದವರ ಮನೆಯ ಕಪಾಟುಗಳನ್ನು ಅಲಂಕರಿಸಿವೆ. ಮನೆ ಮನೆಯ ಶೋಕೇಸ್ ಗಳಲ್ಲಿ ನಗುತ್ತ ನಿಂತಿವೆ.
(ಮೀನಾಕ್ಷಿ ಬೆಂಡೀಗೇರಿ)
80 ವರ್ಷ ವಯಸ್ಸಾಗಿರುವ ಮೀನಾಕ್ಷಿ ಶಿವಪ್ಪ ಬೆಂಡೀಗೇರಿ ಅವರು ಕಳೆದ 50 ವರ್ಷಗಳಿಂದ ವಿವಿಧ ಬಗೆಯ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಪರಿಚಯಸ್ತರು ಕೇಳಿದರೆ ಬಗೆ ಬಗೆಯ ವಸ್ತುಗಳನ್ನು ತಯಾರು ಮಾಡುವ ಮೀನಾಕ್ಷಿ ಬೆಂಡೀಗೇರಿಯವರು ದುಡ್ಡಿಗಾಗಿ ಎಂದೂ ಮಾರಾಟ ಮಾಡಿಲ್ಲ. ಬಗೆ ಬಗೆಯ ವಸ್ತುಗಳನ್ನು ತಯಾರು ಮಾಡಲು ಅಗತ್ಯವಿರುವ ಸಾಮಗ್ರಿಗಳನ್ನು ಅವರಿಗೆ ತಂದುಕೊಟ್ಟರೆ ಬಗು ಬೇಗನೆ ಬಯಸಿದ ಆಲಂಕಾರಿಕ ವಸ್ತುಗಳನ್ನು ತಯಾರಿಸಿಕೊಡುತ್ತಾರೆ. 50 ವರ್ಷದ ಅವಧಿಯಲ್ಲಿ ಅದೆಷ್ಟೋ ಸಹಸ್ರ ವಸ್ತುಗಳನ್ನು ತಯಾರು ಮಾಡಿರುವ ಮೀನಾಕ್ಷಿ ಬೆಂಡೀಗೇರಿಯವರು ಓದಿರುವುದು ಕೇವಲ 6ನೇ ತರಗತಿ. ಇವರಿಗೆ ಈಗಾಗಲೇ 2 ಸಾರಿ ಹೃದಯದ ಶಸ್ತ್ರಚಿಕಿತ್ಸೆಯೂ ಆಗಿದೆ. ಹೃದಯದ ಶಸ್ತ್ರಚಿಕಿತ್ಸೆ ಮೀನಾಕ್ಷಿ ಬೆಂಡೀಗೇರಿಯವರ ಉತ್ಸಾಹವನ್ನು ಕುಗ್ಗಿಸಿಲ್ಲ.
ಒಂದು ದಿನದಲ್ಲಿ ಕನಿಷ್ಟ 10 ತಾಸುಗಳ ಕಾಲ ಈ ರೀತಿಯ ವಿವಿಧ ವಸ್ತುಗಳನ್ನು ತಯಾರು ಮಾಡುತ್ತಾರೆ. ಹವ್ಯಾಸವಾಗಿ ಬೆಳೆದು ಬಂದಿರುವ ವಿಶಿಷ್ಟ ಕಲೆ ಮುಪ್ಪಿನಲ್ಲಿ ಬೇಸರವನ್ನು ಓಡಿಸುವ ಕಾರ್ಯವಾಗಿ ಬೆಳೆದು ನಿಂತಿದೆ. ಯುವಕರು, ಯುವತಿಯರು ನಾಚುವಂತೆ ಕೆಲಸ ಮಾಡುವ ಮೀನಾಕ್ಷಿ ಬೆಂಡೀಗೇರಿಯವರಿಗೆ 80 ವರ್ಷಗಳಾದರೂ ಕಣ್ಣು ಸೂಕ್ಷ್ಮವಾಗಿದೆ. 20 ವರ್ಷದ ಯುವಕರಿಗೆ ಕಣ್ಣಿನ ಸಮಸ್ಯೆ ಬಂದು ಕನ್ನಡಕ ಹಾಕಿಕೊಳ್ಳುತ್ತಿರುವ ಈ ಕಾಲದಲ್ಲಿ 80 ವರ್ಷದ ಮೀನಾಕ್ಷಿಯವರು ಯಾರ ಸಹಾಯವೂ ಇಲ್ಲದೇ ಸೂಜಿಗೆ ದಾರವನ್ನು ಪೋಣಿಸುವುದನ್ನು ನೋಡಿದಾಗ ಅಚ್ಚರಿಯೆನ್ನಿಸುತ್ತದೆ. ಅವರ ಕೈಗೆ ಯಾವುದೇ ವಸ್ತುಗಳು ಸಿಕ್ಕರೆ ಸಾಕು ಚಕಚಕನೆ ವಿಶಿಷ್ಟವಾದ ಆಕೃತಿ ಪಡೆದುಕೊಳ್ಳುತ್ತವೆ. ಗಣಪ, ಗೊಂಬೆ, ನವಿಲು, ಬಾತುಕೋಳಿ, ತಾಜಮಹಲ್, ತೂಗಾಡುವ ಬೆಳಕಿನ ದೀಪಗಳು, ಆಕಾಶ ಬುಟ್ಟಿಗಳು ಹೀಗೆ ಮೀನಾಕ್ಷಿಯವರ ಕೈಯಿಂದ ಜೀವತಳೆದ ವಸ್ತುಗಳು ಒಂದಕ್ಕಿಂತ ಒಂದು ಸುಂದರವಾಗಿದೆ. ನೋಡುಗರನ್ನು ಸೆಳೆಯುತ್ತವೆ.
ಮೀನಾಕ್ಷಿ ಬೆಂಡೀಗೇರಿಯವರಿಗೆ 12 ಜನ ಮಕ್ಕಳು. ಅವರಲ್ಲಿ 6 ಮಕ್ಕಳು ಬದುಕಿದ್ದಾರೆ. ಶಿರಸಿ ಮೂಲದವರೇ ಆಗಿರುವ ಮೀನಾಕ್ಷಿಯವರ ಕೈಚಳಕ ವೀಕ್ಷಿಸುವವರು ಮೀನಾಕ್ಷಿಯವರ ಮೊಮ್ಮಗ ನಿರಂಜನ ಅವರ ಮೊಬೈಲ್ ಸಂಖ್ಯೆ 8123297802ಗೆ ಕರೆ ಮಾಡಬಹುದಾಗಿದೆ.
****
ಕಳೆದ 50 ವರ್ಷಗಳಿಂದ ನಾನು ವಿವಿಧ ಬಗೆಯ ವಸ್ತುಗಳನ್ನು ತಯಾರಿಸುತ್ತಿದ್ದೇನೆ. ಈಗ ಈ ವಸ್ತುಗಳೇ ನನಗೆ ಬೇಸರ ಕಳೆಯುತ್ತವೆ. ಒಂದು ದಿನಕ್ಕೆ 4-5 ವಿವಿಧ ವಸ್ತುಗಳನ್ನು ತಯಾರು ಮಾಡಬಲ್ಲೆ. ಯಾರಿಗೂ ಮಾರಾಟ ಮಾಡುವುದಿಲ್ಲ. ಬದಲಾಗಿ ಖುಷಿಯಿಂದ ಮಾಡಿಕೊಡುತ್ತೇನೆ. ಹಲವರು ನನ್ನಿಂದ ವಿವಿಧ ವಸ್ತುಗಳನ್ನು ತಯಾರು ಮಾಡುವುದನ್ನು ಕಲಿತುಕೊಂಡವರಿದ್ದಾರೆ. ನನಗಿಂತ ಜಾಸ್ತಿ ಸಾಧನೆ ಮಾಡಿವರನ್ನು ಕಂಡು ಸಂತಸವಾಗುತ್ತದೆ.
~ಮೀನಾಕ್ಷಿ ಬೆಂಡೀಗೇರಿ
ವೀರಭದ್ರಗಲ್ಲಿ
***
ನನ್ನ ಅಜ್ಜಿ ಪ್ರತಿದಿನ ಹಲವಾರು ಆಲಂಕಾರಿಕ ವಸ್ತುಗಳನ್ನು ತಯಾರು ಮಾಡುತ್ತಾರೆ. ಅವರಿಗೆ ಅಗತ್ಯವಾದ ವಸ್ತುಗಳನ್ನು ನಾವು ಮಾರುಕಟ್ಟೆಗೆ ಹೋಗಿ ತಂದುಕೊಡುತ್ತೇವೆ. ಸದಾ ಒಂದಿಲ್ಲೊಂದು ವಸ್ತುವನ್ನು ಮಾಡುತ್ತಲೇ ಇರುತ್ತಾರೆ. ಅವರ ಕಣ್ಣು ಇನ್ನೂ ಸೂಕ್ಷ್ಮವಾಗಿದೆ. ಯಾರ ಮೇಲೂ ಅವಲಂಬಿತರಾಗಿಲ್ಲ. ಕೆಲವೊಮ್ಮೆ ಅವರ ಉತ್ಸಾಹ ಕಂಡು ನಾವು ದಂಗಾಗಿದ್ದಿದ್ದೆ. ಅವರ ಕಾರ್ಯ ವೈಖರಿ ನಮಗೆ ಸಂತೋಷವನ್ನು ನಿಡುತ್ತದೆ.
~ನಿರಂಜನ
ಮೀನಾಕ್ಷಿಯವರ ಮೊಮ್ಮಗ

Tuesday, December 2, 2014

ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ

ಅಂಗವೈಕಲ್ಯದಲ್ಲೂ ಸಾಧನೆ ಮಾಡುತ್ತಿರುವ ವಿನಾಯಕ ಹೆಗಡೆ
***
(\ವಿನಾಯಕ ಹೆಗಡೆ/)
ಸಾಧಿಸುವ ಛಲ ಎಂತವರಲ್ಲೂ ಕಿಚ್ಚನ್ನು ಹಚ್ಚಿಸುತ್ತದೆ. ಸಾಧಿಸಬೇಕೆಂಬ ಮನಸ್ಸಿದ್ದರೆ ಅಂಗವೈಕಲ್ಯವೂ ತಡೆಯಾಗುವುದಿಲ್ಲ. ಅಂಗವೈಕಲ್ಯವಿದ್ದರೂ ಸಾಧನೆ ಮಾಡುತ್ತಿರುವ ವ್ಯಕ್ತಿಯೊಬ್ಬರು ಶಿರಸಿಯಲ್ಲಿದ್ದಾರೆ ಅವರೇ ವಿನಾಯಕ ಹೆಗಡೆ.
ನಗರದಲ್ಲಿ ಊದಬತ್ತಿ ವಿನಾಯಕ ಎಂದೇ ಖ್ಯಾತಿಯನ್ನು ಗಳಿಸಿರುವ ವಿನಾಯಕ ಹೆಗಡೆ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ವಿನಾಯಕ ಹೆಗಡೆಯವರನ್ನು ಸಮಾಜ ಬುದ್ಧಿಮಾಂದ್ಯ ಎಂದು ಕಡೆಗಣಿಸಿಬಿಟ್ಟಿದೆ. ನಗರದ ಕೆ.ಎಚ್.ಬಿ. ಕಾಲೋನಿಯ ನಿವಾಸಿಯಾಗಿರುವ ವಿನಾಯಕ ಹೆಗಡೆ ಊದಬತ್ತಿ, ಧೂಪ, ಕಪರ್ೂರ, ಲೋಬಾನ ಈ ಮುಂತಾದ ಗೃಂಧಿಗೆ  ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜೀವನವನ್ನು ನಡೆಸುತ್ತಿದ್ದಾರೆ.
ವಿನಾಯಕನ ಶೃದ್ಧೆ, ಛಲ, ಹೋರಾಟ ಮನೋಭಾವ, ಗುರಿ ಇತ್ಯಾದಿಗಳ ಬಗ್ಗೆ ಎರಡು ಮಾತಿಲ್ಲ. ಕೇವಲ 24 ವರ್ಷ ವಯಸ್ಸಿನ ವಿನಾಯಕ ಹೆಗಡೆ ಹತ್ತನೇ ತರಗತಿಯ ವರೆಗೆ ಓದಿದ್ದಾನೆ. ಜೀವನದಲ್ಲಿ ಕಠಿಣ ಶ್ರಮ ವಹಿಸಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ವಿನಾಯಕನೇ ಸಾಕ್ಷಿ. ಪ್ರಾರಂಭದ ದಿನಗಳಲ್ಲಿ ವಿನಾಯಕ ಹೆಗಡೆ ನಗರದಲ್ಲಿ ಊದಬತ್ತಿ ತಂದು ಮಾರಾಟ ಮಾಡಲು ಆರಂಭಿಸಿದರೆ ಕೊಳ್ಳುವವರೇ ಇರಲಿಲ್ಲ. ಬೇಡವೇ ಬೇಡ ಎಂದು ಹೀಗಳೆದವರು ಅನೇಕಮಂದಿ. ಹೀಗಿದ್ದಾಗಲೇ ಸ್ಥಳೀಯರ ನೆರವಿನಿಂದಲೇ ಊದಬತ್ತಿ ಮಾರಾಟದ ಪಟ್ಟುಗಳನ್ನು ಕಲಿತವನು ವಿನಾಯಕ ಹೆಗಡೆ. ಕೆಲವೇ ವರ್ಷಗಳ ಹಿಂದೆ ಸಮಾಜ ಈತನನ್ನು ಬುದ್ಧಿಮಾಂದ್ಯ, ಮಾನಸಿಕ ಅಸ್ವಸ್ಥ ಎಂದೆಲ್ಲ ಕರೆದಿತ್ತು. ಇಂತಹ ವ್ಯಕ್ತಿ ಈಗ ಸಂಪೂರ್ಣ ಸ್ವಾವಲಂಬಿ. ಮಾನಸಿಕವಾಗಿ ಸ್ವಸ್ಥಡೀಗ ಒಬ್ಬನೇ ಹುಬ್ಬಳ್ಳಿಗೆ ಹೋಗಿ, ಹುಬ್ಬಳ್ಳಿ ನಗರವನ್ನು ಸುತ್ತಾಡಿ ಊದಬತ್ತಿ, ಲೋಬಾನ, ಕಪರ್ೂರ ಸೇರಿದಂತೆ ಅಗತ್ಯವಸ್ತುಗಳನ್ನು ಯಾರ ಸಹಾಯವಿಲ್ಲದೇ ತರಬಲ್ಲ. ಅದನ್ನು ಶಿರಸಿಗೆ ತಂದು ಮಾರಾಟ ಮಾಡಬಲ್ಲವನಾಗಿದ್ದಾನೆ.
ಊದಬತ್ತಿ ಮಾರಾಟದ ಆರಂಭದ ದಿನಗಳಲ್ಲಿ ಅಪಾರ ಕಷ್ಟವನ್ನು ಅನುಭವಿಸಿದ ವಿನಾಯಕನನ್ನು ಹೀಗಳೆದವರೇ ಅನೇಕ. ಆದರೆ ಆತನ ಶೃದ್ಧೆ, ಛಲ, ವಿಶ್ವಾಸ, ಸಾಧಿಸಬೇಕೆಂಬ ಬಯಕೆ ಎಲ್ಲರನ್ನೂ ಮರುಳು ಮಾಡಿಬಿಟ್ಟಿದೆ. ಹೀಗಳೆದವರೇ ಈಗ ಆತನ ಬೆನ್ನಿಗೆ ನಿಂತಿದ್ದಾರೆ. ಆರಂಭದ ದಿನಗಳಲ್ಲಿ ವಿನಾಯಕನಿಂದ ಊದಬತ್ತಿಯನ್ನು ಕೊಂಡವರು ದುಡ್ಡನ್ನು ಕೊಡದೇ ಸತಾಯಿಸಿದ್ದಾರೆ. ಆದರೆ ವಿನಾಯಕನ ಶ್ರಮ ಅವರ ಮನಸ್ಸನ್ನು ಬದಲಿಸಿಬಿಟ್ಟಿದೆ. ಊದಬತ್ತಿ ಕೊಳ್ಳಲು ಯಾರು ಹಿಂದೇಟು ಹಾಕಿದ್ದರೋ ಅವರೇ ತಮ್ಮ ಪರಿಚಯದವರಿಗೆ ಹೇಳಿ ವಿನಾಯಕನ ಬಳಿ ಊದಬತ್ತಿಯನ್ನು ಕೊಳ್ಳುವಂತೆ ಮಾಡುತ್ತಿದ್ದಾರೆ. ನಗರದ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು ವಿನಾಯಕನ ಊದಬತ್ತಿಯ ಖಾಯಂ ಗಿರಾಕಿಗಳು. ಬ್ಯಾಂಕ್ ನೌಕರರು, ಲಾಯರ್ಗಳೂ ಈತನ ಊದಬತ್ತಿಯನ್ನು ಕೊಳ್ಳುವವರೇ. ದೈಹಿಕ ವೈಕಲ್ಯದ ಕಾರಣದಿಂದಾಗಿ ಮಾತನಾಡಲು ಕಷ್ಟಪಡುವ ವಿನಾಯಕನ ಸ್ನೇಹಮಯ ಮನೋಭಾವ ಎಲ್ಲರನ್ನು ಸೇಳೆದುಬಿಟ್ಟಿದೆ. ಇದೀಗ ವಿನಾಯಕ ಹೆಗಡೆ ಊದಬತ್ತಿಯನ್ನು ಮಾರಾಟ ಮಾಡಲು ಹಿಡಿದು ಐದು ವರ್ಷಗಳಾಗಿವೆ.
ವಿನಾಯಕನ ಮನೆಯಲ್ಲಿ ತಾಯಿ, ಮಗ ಇಬ್ಬರೇ. ತಾಯಿಗೆ ಅನಾರೋಗ್ಯ. ಊದಬತ್ತಿಯನ್ನು ಮಾರಾಟ ಮಾಡುವ ಮಗ ತಾಯಿಯನ್ನು ಸಾಕುತ್ತಿದ್ದಾನೆ. ಬದುಕಿನಲ್ಲಿ ಅದಿಲ್ಲ, ಇದಿಲ್ಲ, ಉದ್ಯೋಗವಿಲ್ಲ, ಸೌಲಭ್ಯವಿಲ್ಲ ಎಂದು ಕೊರಗುವವರಿಗೆ ವಿನಾಯಕ ಒಂದು ಮಾದರಿಯಾಗುತ್ತಾನೆ. ಜೀವನದಲ್ಲಿ ಮುಂದೆ ಊದಬತ್ತಿ ಮಾರಾಟವನ್ನು ದೊಡ್ಡ ಉದ್ಯಮವನ್ನಾಗಿ ಮಾಡಿ ನಾಲ್ಕಾರು ಜನರಿಗೆ ಕೆಲಸವನ್ನು ನೀಡಬೇಕು ಎನ್ನುವ ಕನಸನ್ನು ಹೊಂದಿರುವ ವಿನಾಯಕ ಹೆಗಡೆಯ ಶ್ರಮಕ್ಕೆ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಇಂತಹ ವಿನಾಯಕನಿಗೆ ಶಿರಸಿ ನಗರದಾದ್ಯಂತ ಮಿತ್ರರೇ. ಕೆಲವು ಮೊಬೈಲ್ ಶಾಪಿನವರು ಈತನಿಗೆ ವ್ಯಾಪಾರ ಮಾಡಿಸಿಕೊಟ್ಟರೆ ನಗರದ ಅನೇಕ ಆಟೋಗಳವರು ವಿನಾಯಕನಿಂದ ದುಡ್ಡನ್ನು ತೆಗೆದುಕೊಳ್ಳದೇ ಬೇಕಾದಲ್ಲಿಗೆ ಆತನನ್ನು ಕರೆದೊಯ್ದು ಬಿಡುತ್ತಾರೆ. ನಗರದ ಬಹುತೇಕ ಬ್ಯಾಂಕುಗಳ ನೌಕರರು ಈತನ ಬಳಿ ವ್ಯಾಪಾರ ಮಾಡುತ್ತಾರೆ. ಈತನ ಶ್ರಮವನ್ನು ಕಂಡ ನಗರವಾಸಿಗಳು ನಗರದ ಬ್ಯಾಂಕಿನಲ್ಲಿ ಸಾಲವನ್ನೂ ಕೊಡಿಸಿದ್ದಾರೆ.
ಯಾರೂ ತನ್ನನ್ನು ಕರುಣೆಯಿಂದ ಕಾಣುವುದು ಬೇಡ. ಹೀಗಳೆಯುವುದು ಬೇಡ. ಕಷ್ಟಪಟ್ಟು ವ್ಯಾಪಾರ ಮಾಡುತ್ತೇನೆ. ಅದಕ್ಕೆ ಬೆಲೆ ನೀಡಿದರೆ ಸಾಕು ಎನ್ನುವ ವಿನಾಯಕ ಹೆಗಡೆ ಊದಬತ್ತಿ ವ್ಯಾಪಾರದಲ್ಲಿ ಮಹತ್ ಸಾಧನೆಯನ್ನು ಮಾಡುವ ಗುರಿ ಇಟ್ಟುಕೊಂಡಿದ್ದಾನೆ. ಸಾಧನೆಯ ಮಾರ್ಗದಲ್ಲಿ ಅಂಗವೈಕಲ್ಯತೆ ಸಮಸ್ಯೆಯೇ ಅಲ್ಲ ಎನ್ನುವುದು ಈತನ ಮನದಾಳದ ಮಾತು. ನೂರಾರು ಜನ ನಿರುದ್ಯೋಗಿಗಳಿಗೆ, ವಿಕಲಚೇತನರಿಗೆ ವಿನಾಯಕ ಹೆಗಡೆ ಮಾದರಿಯಾಗಿದ್ದಾನೆ. ತಮ್ಮ ಕಾಲಿನ ಮೇಲೆ ತಾವೇ ನಿಂತುಕೊಳ್ಳಲು ಸ್ಪೂರ್ತಿಯಾಗಿದ್ದಾನೆ. ಊದಬತ್ತಿ ವಿನಾಯಕ ಹೆಗಡೆಯವರನ್ನು ಸಂಪರ್ಕಿಸಬೇಕಾದರೆ 9483068087 ಈ ದೂರವಾಣಿಗೆ ಕರೆ ಮಾಡಬಹುದಾಗಿದೆ.

Monday, November 24, 2014

ಬಯಕೆ

ಮುಗಿಲು ಮುಟ್ಟಿದೆ  ನೂರು ಚಿಂತೆ
ಕೇಳುವವರು ಇಲ್ಲವೇ |
ಒಡಲು ತುಂಬಿದೆ ನೋವ ಸಂತೆ
ಅರಿಯುವವರು ಇಲ್ಲವೆ ||

ತುಂಬಿ ತುಳುಕಿದೆ ನೋವು ದುಗುಡ
ಹಂಚಿಕೊಳ್ಳಲೆ ನಾನು?
ಹಲವು ಪ್ರೀತಿ, ಸವಿ ನುಡಿಯ
ತುಂಬಿ ಕೊಡುವಿರೆ ನೀವು?|

ನನ್ನ ದುಗುಡಕೆ ನೀವು ನೀಡಿ
ಪುಟ್ಟ ನಲಿವು-ಪ್ರೀತಿ |
ನನ್ನ ಭಯವ ಅರಿತು ನೀವು
ಮಾತಿನಿಂದಲೇ ಓಡಿಸಿ ||

**

(ಈ ಕವಿತೆಯನ್ನು ಬರೆದಿರುವುದು 10-12-2006ರಂದು ದಂಟಕಲ್ಲಿನಲ್ಲಿ)