ಪೊಲೀಸರು ಬಂದಿದ್ದೇನೋ ಸರಿ. ಆದರೆ ಅವರೇ ನಮ್ಮನ್ನು ಬೆನ್ನಟ್ಟಿದರು? ಅವರು ನಮ್ಮನ್ನು ಬೆನ್ನಟ್ಟಿದ್ದೇ ಹೌದಾ? ಗುಂಡು ಹಾರಿಸಿದ್ಯಾಕೆ? ಎಂಬುದು ಬಗೆಹರಿಯಲಿಲ್ಲ. ಬಹುಶಃ ಹಿಂಸಾಚಾರಿಗಳನ್ನು ಪೊಲೀಸರು ಹುಡುಕುತ್ತ ಸಾಗಿರಬೇಕು. ಅವರ ಕಣ್ಣಿಗೆ ದಾರಿಯಲ್ಲಿ ನಡೆಯುತ್ತ ಬಂದಿದ್ದ ನಾವು ಕಾಣಿಸಿರಬೇಕು. ನಮ್ಮ ಚಲನವಲನದ ಮೇಲೆ ಕಣ್ಣಿಟ್ಟು ಬರುತ್ತಿದ್ದ ಪೊಲೀಸರಿಗೆ ನಮ್ಮಲ್ಲಿ ಅದೇನೋ ಅನುಮಾನ ಮೂಡಿಸುವ ಅಂಶಗಳು ಕಾಣಿಸಿರಲೇಬೇಕು. ಸಲೀಂ ಚಾಚಾ `ಓಡಿ..' ಹೇಳದೇ ಇದ್ದಿದ್ದರೆ ತಮ್ಮ ಮೇಲೂ ಗುಂಡು ಹಾರಿಸುತ್ತಿದ್ದರೇನೋ. ಅಥವಾ ನಾವು ಓಡಿದ್ದನ್ನು ಕಂಡೇ ಗುಂಡು ಹಾರಿಸಿದರೋ. ಯಾಕೋ ಆಲೋಚಿಸಿದಷ್ಟೂ ಗೋಜಲು ಗೋಜಲಾಗುತ್ತಲೇ ಸಾಗಿತ್ತು. ಹದಿನೈದು ನಿಮಿಷ ಕಾದರು. ಈ ಕಾಯುವಿಕೆಯೆನ್ನುವುದು ಬಿಸಿಲಿಗೆ ಕಾದಿದ್ದ ಬಂಡೆಗಲ್ಲಿನ ಮೇಲೆ ನಿಂತ ಅನುಭವವನ್ನು ನೀಡಿತ್ತು. ಅಡಗಿ ಕುಳಿತವರಿಗೆ ಚಡಪಡಿಕೆ ಶುರುವಾಗಿತ್ತು. ಅಡಗಿ ಕುಳಿತಲ್ಲಿಂದ ರಸ್ತೆ ಸರಿಯಾಗಿ ಕಾಣುತ್ತಿರಲಿಲ್ಲ. ರಸ್ತೆಯಲ್ಲಿ ವಾಹನ ಹೋದ ಸದ್ದೂ ಕೇಳುತ್ತಿರಲಿಲ್ಲ.
ವಿನಯಚಂದ್ರ ನಿಧಾನವಾಗಿ ಎದ್ದು ಬೆಳೆದಿದ್ದ ಪೈರಿನ ನಡುವಿನಿಂದ ಇಣುಕಿದ. ರಸ್ತೆಯಲ್ಲಿ ಯಾರೂ ಕಾಣಲಿಲ್ಲ. ಪೊಲೀಸರು ಹೋಗಿದ್ದಾರೆನ್ನಿಸಿತು. ಮಧುಮಿತಾಳಿಗೆ ಸನ್ನೆ ಮಾಡಿ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ ಕಳ್ಳ ಬೆಕ್ಕಿನಂತೆ ಮುಂದಕ್ಕೆ ಬಂದ. ರಸ್ತೆಯ ಹತ್ತಿರ ಹತ್ತಿರಕ್ಕೆ ಬಂದಂತೆಲ್ಲ ಯಾರೂ ಇಲ್ಲದ್ದು ಸ್ಪಷ್ಟವಾಯಿತು. ನಿರಾಳವಾದ. ಮುಂದಕ್ಕೆ ಸಾಗಿದ. ಮಧುಮಿತಾ ಹಿಂಬಾಲಿಸಿದಳು. ರಸ್ತೆಯನ್ನು ಬಳಸಿದರೆ ಅಲ್ಲಿ ಯಾರೂ ಇರಲಿಲ್ಲ. ಸಲೀಂ ಚಾಚಾನಿಗಾಗಿ ಹುಡುಕಿದ. ಕಾಣಲಿಲ್ಲ. ದೊಡ್ಡದಾಗಿ `ಚಾಚಾ..' ಎಂದು ಕೂಗಿದ. ಮಧುಮಿತಾಳೂ ಸಲೀಂ ಚಾಚಾನ ಹೆಸರು ಹಿಡಿದು ಕೂಗಲಾರಂಭಿಸಿದ್ದಳು. ಮಾರುತ್ತರ ಬರಲಿಲ್ಲ. ಅರೇ ಚಾಚಾ ಎಲ್ಲಿಗೆ ಹೋದ? ಪೊಲೀಸರು ಆತನನ್ನು ಹೊತ್ತೊಯ್ದರೇ? ಎನ್ನುವ ಅನುಮಾನವೂ ಮೂಡಿ ಮನಸ್ಸಿನಲ್ಲಿ ಭಯದ ಛಾಯೆ ಆವರಿಸಿತು. ಆದರೂ ಹುಡುಕುವುದನ್ನು ಬಿಡಲಿಲ್ಲ.
ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿಯೂ ಗದ್ದೆಗಳು ಬೆಳೆದು ನಿಂತಿದ್ದವು. ಮಧುಮಿತಾ ಆ ಕಡೆಯಲ್ಲಿ ಹುಡುಕಾಟ ನಡೆಸಲು ಹೋದಳು. ಕೆಲ ಕ್ಷಣಗಳ ನಂತರ ದೊಡ್ಡಾದಗಿ ಚೀರಿದ ಮಧುಮಿತಾ ವಿನಯಚಂದ್ರನನ್ನು ಕರೆದಳು. ಸಲೀಂ ಚಾಚಾನಿಗಾಗಿ ಹುಡುಕಾಟ ನಡೆಸುತ್ತಿದ್ದ ವಿನಯಚಂದ್ರ ಗಡಬಡಿಸಿ ಓಡಿಬಂದ. ನೋಡಿದರೆ ಗದ್ದೆಯ ಒಐರಿನ ನಡುವೆ ಸಲೀಂ ಚಾಚಾ ಬಿದ್ದುಕೊಂಡಿದ್ದ. ತೊಟ್ಟುಕೊಂಡಿದ್ದ ಬಟ್ಟೆ ರಕ್ತಸಿಕ್ತವಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಲೀಂ ಚಾಚಾನನ್ನು ಕಂಡಾಕ್ಷಣವೇ ವಿನಯಚಂದ್ರ ಹಾಗೂ ಮಧುಮಿತಾ ಕಂಪಿಸತೊಡಗಿದ್ದರು.
ವಿನಯಚಂದ್ರ ಸಲೀಂ ಚಾಚಾನನ್ನು ಪರೀಕ್ಷಿಸಿ ನೋಡತೊಡಗಿದ. ಪೊಲೀಸರು ಹೊಡೆದ ಗುಂಡು ಸಲೀಂ ಚಾಚಾನ ಹೊಟ್ಟೆಯನ್ನು ತೂರಿಕೊಂಡು ಹೋಗಿತ್ತು. ಕರುಳಿದ್ದ ಜಾಗದಲ್ಲಿ ದೊಡ್ಡದೊಂದು ರಂಧ್ರವಾಗಿ ಅಲ್ಲಿಂದ ನೆತ್ತರು ಸೋರಿ ಹೋಗಲು ಆರಂಭಿಸಿತ್ತು. ಪರೀಕ್ಷಿಸಿ ನೋಡಿದಾಗ ಸಲೀಂ ಚಾಚಾ ಸತ್ತಿಲ್ಲ ಎನ್ನುವುದು ಗಮನಕ್ಕೆ ಬಂದಿತು. ಆತನಿಗೆ ಗುಂಡು ತಗುಲಿತ್ತು. ಪ್ರಜ್ಞೆ ತಪ್ಪಿತ್ತು. ಅಪಾರ ರಕ್ತಸ್ರಾವ ಆಗಿತ್ತು. ತಕ್ಷಣವೇ ಮಧುಮಿತಾ ತನ್ನ ಚೀಲದಲ್ಲಿದ್ದ ನೀರನ್ನು ತೆಗೆದು ಸಲೀಂ ಚಾಚಾನ ಮುಖಕ್ಕೆ ಚಿಮುಕಿಸಿದಳು. ವಿನಯಚಂದ್ರ ರಣ ಬಿಸಿಲಿನಲ್ಲೂ ತಣ್ಣಗಾಗುತ್ತಿದ್ದ ಆತನ ಪಾದಗಳನ್ನು ನೀವುತ್ತಿದ್ದ. ಕೊಂಚ ಹೊತ್ತಿನ ಬಳಿಕ ಸಲೀಂ ಚಾಚಾನಿಗೆ ಪ್ರಜ್ಞೆ ಮರಳಿತು. ಆದರೆ ಚಾಚಾನಿಗೆ ಮಾತನಾಡಲು ಶಕ್ತಿಯೇ ಇರಲಿಲ್ಲ. ಒಂದೆರಡು ಸಾರಿ ಏನೋ ಹೇಳಲು ಪ್ರಯತ್ನಿಸಿದನಾದರೂ ನಾಲಿಗೆ ಹೊರಳಲಿಲ್ಲ. ನಿತ್ರಾಣನಾಗಿದ್ದ ಸಲೀಂ ಚಾಚಾ ಮಾತನಾಡಲು ಕಷ್ಟಪಡುತ್ತಿದ್ದ. ಮಧುಮಿತಾ ನೀರನ್ನು ಕುಡಿಸಿ ಚಾಚಾನಿಗೆ ಗಾಳಿ ಹಾಕಿದಳು. ಕೆಲ ಸಮಯದ ಬಳಿಕೆ ಸಲೀಂ ಚಾಚಾ ಮಾತನಾಡುವಷ್ಟು ಶಕ್ತಿ ಪಡೆದುಕೊಂಡ.
`ಬೇಟಾ.. ಈಗ ಗುಂಡು ಹೊಡೆದರಲ್ಲ ಅವರು ಪೊಲೀಸರೇ ಅಲ್ಲ. ಮುಂದೆ ಯಾವುದೋ ಕಡೆ ಪುಂಡಾಟಿಕೆ ನಡೆಯುತ್ತಿದೆ. ಹಿಂಸಾಚಾರ ಜೋರಾಗಿದೆ. ಈ ಗುಂಪು ಅಲ್ಲಿಂದಲೇ ಬಂದಿದೆ. ಪುಂಡರ ಗುಂಪು ಪೊಲೀಸರ ರೀತಿ ವೇಷ ಹಾಕಿಕೊಂಡು ಬಂದಿದೆ. ದೂರದಿಂದ ನಾನು ಇವರನ್ನು ಪೊಲೀಸರು ಎಂದೇ ತಿಳಿದಿದ್ದೆ. ಆದರೆ ತೀರಾ ಹತ್ತಿರಕ್ಕೆ ಬಂದಾಗಲೇ ಇವರು ಪೊಲೀಸರಲ್ಲ ಎನ್ನುವುದು ಅರ್ಥವಾಯಿತು. ಆ ಗುಂಪಿನ ನಡವಳಿಕೆ ಅಸಹಜವಾಗಿತ್ತು. ಪೊಲೀಸರ ಬಳಿ ಇರುವ ಬಂದೂಕಿಗಿಂತ ಇವರ ಬಂದೂಕು ಬೇರೆ ರೀತಿಯಿತ್ತು. ಬಣ್ಣವೂ ಅಷ್ಟೇ ದೂರದಿಂದ ಮಾತ್ರ ಪೊಲೀಸರ ಬಟ್ಟೆ. ಆದರೆ ಹತ್ತಿರದಿಂದ ನೋಡಿದರೆ ಅದರ ಬಣ್ಣವೇ ಬೇರೆ. ಆ ಕಾರಣದಿಂದಲೇ ನಾನು ನಿಮ್ಮ ಬಳಿ ಓಡಿ ಎಂದು ಹೇಳಿದೆ. ನೀವು ಓಡಿ ತಪ್ಪಿಸಿಕೊಂಡಿರಿ. ನಾನೂ ಓಡಿ ತಪ್ಪಿಸಿಕೊಳ್ಳುತ್ತಿದ್ದ ಸಂದರ್ಭದಲ್ಲೇ ಅವರು ಗುಂಡು ಹಾರಿಸಿದರು. ನನ್ನ ದುರಾದೃಷ್ಟ ಗುಂಡು ತಗುಲಿತು..' ಎಂದು ಹೇಳಿದವನಿಗೆ ಮತ್ತೆ ಸುಸ್ತಾಗಿ ಕೆಲಕಾಲ ಸುಮ್ಮನಾದ.
ವಿನಯಚಂದ್ರ `ಛೇ.. ದ್ರೋಹಿಗಳು...' ಎಂದು ಸಿಡುಕಿದ.
`ನನ್ನ ಹೊಟ್ಟೆಗೆ ಗುಂಡುಬಿದ್ದಿದೆ. ನಾನು ಖಂಡಿತ ಉಳಿಯುವುದಿಲ್ಲ. ಸಾವು ನನ್ನ ಕಣ್ಣ ಮುಂದೆ ಸುಳಿದಾಡುತ್ತಿದೆ. ನಾನು ಸತ್ತ ತಕ್ಷಣ ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳದೇ ನೀವು ಮುಂದುವರಿಯಿರಿ. ಭಾರತ ತಲುಪುವವರೆಗೂ ಪ್ರಯಾಣ ಮಾಡುತ್ತಲೇ ಇರಿ. ನಿಮಗೆ ನಾನು ಇಲ್ಲದಿದ್ದರೂ ತೊಂದರೆಯಿಲ್ಲ. ಹೋಗುವ ಮಾರ್ಗದ ಬಗ್ಗೆ ತಿಳಿಸಿದ್ದೇನೆ. ಆ ಪ್ರಕಾರವಾಗಿ ಸಾಗಿ. ಯಾವುದೇ ಅಪಾಯ ಎದುರಾದರೂ ಅದನ್ನು ಎದುರಿಸಿ. ಅಪಾಯ ದೊಡ್ಡದಾಗಿತ್ತೋ ಅದನ್ನು ಪರಿಹಾರ ಮಾಡುವಂತಹ ಶಾರ್ಟ್ ಕಟ್ಟುಗಳನ್ನು ಹುಡುಕಿ ಸಾಗಿ. ನಿಮ್ಮನ್ನು ಭಾರತಕ್ಕೆ ತಲುಪಿಸುವ ಹೊಣೆಗಾರಿಕೆ ನನ್ನದಾಗಿತ್ತು. ಆದರೆ ನಾನು ಅರ್ಧದಲ್ಲಿಯೇ ನಿಮ್ಮನ್ನು ಕೈಬಿಡುವಂತಾಗುತ್ತಿದೆ. ನೀವು ಮುಂದಕ್ಕೆ ಹೋಗಿ ಭಾರತ ಮುಟ್ಟಿದರೆ ನಾನು ನಿರಾಳ. ಸತ್ತ ನಂತರ ಆತ್ಮವೆನ್ನುವುದು ಇದ್ದರೆ ಆಗ ಶಾಂತಗೊಳ್ಳುತ್ತದೆ...' ಎಂದ ಸಲೀಂ ಚಾಚಾ. ಮಾತುಗಳು ತೊದಲಲು ಆರಂಭಗೊಂಡಿದ್ದವು.
`ಚಾಚಾ.. ಇಲ್ಲ.. ನೀನು ಸಾಯೋದಿಲ್ಲ. ನಿನ್ನನ್ನು ಉಳಿಸಿಕೊಳ್ಳುತ್ತೇವೆ. ನಾವು ತಾಂಗೈಲ್ ನ ಹೊರ ವಲಯದಲ್ಲೇ ಇದ್ದೇವೆ. ಇಲ್ಲೇ ಎಲ್ಲಾದರೂ ಆಸ್ಪತ್ರೆ ಇದ್ದೇ ಇರುತ್ತದೆ. ನಿನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೇವೆ..' ಎಂದು ವಿನಯಚಂದ್ರ ಹೇಳಿದವನೇ ಸಲೀಂ ಚಾಚಾನನ್ನು ಎತ್ತುಕೊಳ್ಳಲು ಮುಂದಾದ. ಆಗ ಸನ್ನೆಯ ಮೂಲಕವೇ ಬೇಡ ಎಂದ ಸಲೀಂ ಚಾಚಾ.
`ಬೇಟಾ.. ಬೇಡ. ಉಪಯೋಗವಿಲ್ಲ. ನೀನೆಷ್ಟೇ ಶತಪ್ರಯತ್ನ ಮಾಡಿದರೂ ನಾನು ಬದುಕುವುದಿಲ್ಲ. ನೀನು ನನ್ನನ್ನು ಹೊತ್ತುಕೊಂಡು ಹೋಗುವುದು, ಹತ್ತಾರು ಕಿಲೋಮೀಟರ್ ಅಲೆಯುವುದು, ಆಸ್ಪತ್ರೆ ಹುಡುಕುವುದು, ಆಸ್ಪತ್ರೆಯಲ್ಲಿ ವೈದ್ಯರೋ, ಅವರಿಗೆ ಏನಾದರೂ ಸಬೂಬು ಹೇಳುವುದು.. ಇವೆಲ್ಲ ಸಾಧ್ಯವಾಗದ ಮಾತು. ನನ್ನೊಳಗಿನ ರಕ್ತವೆಲ್ಲ ಬಸಿದುಹೋಗಿದೆ. ಖಂಡಿತ ಇನ್ನು ಹೆಚ್ಚು ಸಮಯ ನಾನು ಬದುಕಲಾರೆ. ನನ್ನ ಸಾವು ಸ್ಪಷ್ಟವಾಗಿದೆ. ನಾನು ಸಾಯುವುದು ಮುಖ್ಯವಲ್ಲ. ನೀವು ಬದುಕುವುದು ಬಹುಮುಖ್ಯ. ನಾನು ಸತ್ತ ವಿಷಯ ನನ್ನ ಕುಟುಂಬಕ್ಕೆ ತಿಳಿದರೆ ಕೆಲಕಾಲ ದುಃಖ ಪಡುತ್ತಾರೆ. ತೊಂದರೆಯಿಲ್ಲ. ನೀವು ಭಾರತ ತಲುಪಿ ಚನ್ನಾಗಿ ಬದುಕಿದರೆ ಅದರಂತಹ ಸಂತಸದ ವಿಷಯ ಇನ್ನೊಂದಿಲ್ಲ. ಬೇಟಾ ನಿಮಗೆ ನಾನು ಮಗುವಾಗಿ ಹುಟ್ಟುತ್ತೇನೆ. ಆಮೇಲೆ ನೀವು ನನ್ನನ್ನು ಚನ್ನಾಗಿ ನೋಡಿಕೊಳ್ಳಬಹುದಂತೆ. ನನ್ನ ಬ್ಯಾಗಿನಲ್ಲಿ ಮ್ಯಾಪ್ ಇದೆ. ತಿಂಡಿ ಇದೆ. ನೀರು ಸೇರಿದಂತೆ ಅಗತ್ಯ ವಸ್ತುಗಳು, ಇದೆ. ಕೊಂಚ ಹಣವೂ ಇದೆ. ನಿಮಗೆ ಅದು ಉಪಯೋಗಕ್ಕೆ ಬರುತ್ತದೆ. ಅವನ್ನು ತೆಗೆದುಕೊಳ್ಳಿ. ಸಾಗುವ ಮಾರ್ಗವಂತೂ ಗೊತ್ತಿದೆಯಲ್ಲ ಬೇಟಾ...' ಎಂದ ಸಲೀಂ ಚಾಚಾ.
`ಚಾಚಾ.. ಬೇಡ.. ಸಾಯುವ ಮಾತಾಡ ಬೇಡ. ಈ ಬೆಂಗಾಲಿ ನಾಡಿನಲ್ಲಿ ನಮಗೆ ನಿನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಚಾಚಾ...' ಎಂದಳು ಮಧುಮಿತಾ.
`ಬೇಟಿ.. ಇಲ್ಲ ಬೇಟಿ. ನೀವು ಪ್ರೇಮಿಗಳು. ಒಬ್ಬರನ್ನೊಬ್ಬರು ಇಷ್ಟಪಟ್ಟವರು. ನಾಳಿನ ಒಳ್ಳೆಯ ಭವಿಷ್ಯಕ್ಕಾಗಿ ಇಂದು ಹೋರಾಟವನ್ನು ಮಾಡುತ್ತಿರುವವರು. ನಿಮ್ಮ ಈ ಹೋರಾಟದ ಮಾರ್ಗದಲ್ಲಿ ನಾನು ಒಂದು ಮೆಟ್ಟಿಲು ಅಂದುಕೊಳ್ಳಿ. ಆವತ್ತು ನಾನು ಹೇಳಿದ್ದೆ ನಾನು ಸತ್ತಾದರೂ ನಿಮ್ಮನ್ನು ಭಾರತ ತಲುಪುವಂತೆ ಮಾಡುತ್ತೇನೆ ಅಂತ. ಆದರೆ ನಾನು ಸಾಯುತ್ತಿದ್ದೇನೆ. ನಿಮ್ಮನ್ನು ಭಾರತ ತಲುಪಿಸಲಾಗುತ್ತಿಲ್ಲ. ಛೇ.. ಮುಂದೆ ನಿಮ್ಮ ಬದುಕು ಚನ್ನಾಗಿ ಇದ್ದರೆ ನನ್ನನ್ನು ಮರೆಯಬೇಡಿ. ನಾನು ನಿಮಗಾಗಿ ಸಾವನ್ನಪ್ಪಿದ್ದೆ ಎನ್ನುವುದು ನೆನಪಾದರೆ ಸಾಕು ನಾನು ಧನ್ಯನಾಗುತ್ತೇನೆ..' ಎಂದು ಸಲೀಂ ಚಾಚಾ ಸುಮ್ಮನಾದ.
ಸಲೀಂ ಚಾಚಾನ ಪ್ರಾಣಪಕ್ಷಿ ಹಾರಿಹೋಯಿತೆ ಎಂದುಕೊಂಡ ವಿನಯಚಂದ್ರ. ಆತ ಸಾವನ್ನಪ್ಪಿರಲಿಲ್ಲ. ಆದರೆ ನಿತ್ರಾಣಗೊಂಡಿದ್ದ ಆತನ ಬಾಯಿಂದ ಮಾತುಗಳು ಹೊರಬರದಂತಾಗಿದ್ದವು. ಕಣ್ಣುಗಳನ್ನು ಮುಚ್ಚಿ-ತೆರೆದು ಮಾಡುತ್ತಿದ್ದ. ಇನ್ನರೆಘಳಿಗೆಯಲ್ಲಿ ಆತ ಸಾಯುತ್ತಾನೆ ಎನ್ನುವುದು ನಿಕ್ಕಿಯಾಗಿತ್ತು. ಇದ್ದಕ್ಕಿದ್ದಂತೆ ಸಲೀಂ ಚಾಚಾನ ಕಣ್ಣುಗಳು ಉಜ್ವಲ ದೀಪದಂತೆ ಕಾಣತೊಡಗಿತು. ಅದೆಷ್ಟು ಹೊಳಪಾಗಿ ಕಾಣಿಸಿತೆಂದರೆ ಮಧುಮಿತಾ ಹಾಗೂ ವಿನಯಚಂದ್ರ ಒಮ್ಮೆ ಬೆರಗು ಪಟ್ಟುಕೊಂಡರು. ಮತ್ತೊಂದು ನಿಮಿಷದಲ್ಲಿಯೇ ಸಲೀಂ ಚಾಚಾನ ದೇಹ ನಿಶ್ಚಲವಾಯಿತು. ಎದೆಬಡಿತ ಸ್ಥಬ್ಧವಾಯಿತು. ಕೈಕಾಲುಗಳು ತಣ್ಣಗಾದವು. ಉಸಿರಾಟ ನಿಂತುಹೋಯಿತು. ಸಲೀಂ ಚಾಚಾ ಪ್ರಾಣಬಿಟ್ಟಿದ್ದ.
ಮಧುಮಿತಾ ಹಾಗೂ ವಿನಯಚಂದ್ರ ಇಬ್ಬರೂ ರೋಧಿಸತೊಡಗಿದ್ದರು. ಇಬ್ಬರಲ್ಲಿಯೂ ಅಳುವಿನ ಅಣೆಕಟ್ಟೆ ಒಡೆದಂತಾಗಿತ್ತು. ಅಣ್ಣನಲ್ಲ, ತಮ್ಮನಲ್ಲ, ಮಾವನಲ್ಲ, ಸಂಬಂಧಿಯೂ ಅಲ್ಲ.. ಹೋಗಲಿ ಊರಿನವನಾ ಅದೂ ಅಲ್ಲ. ಪರಿಚಯಸ್ಥನಂತೂ ಅಲ್ಲವೇ ಅಲ್ಲ. ಯಾವುದೋ ನಾಡಿನಿಂದ ಬಂದ ನನಗೆ ಯಾವುದೋ ನಾಡಿನಲ್ಲಿ ಯಾರಿಂದಲೋ ಪರಿಚಯವಾದವನು ಸಲೀಂ ಚಾಚಾ. ಅಂತವನು ನನ್ನನ್ನು ಭಾರತ ತಲುಪಿಸಬೇಕು, ನಮ್ಮ ಪ್ರೇಮ ಗೆಲ್ಲಬೇಕು ಎಂದು ಜೊತೆಗೆ ಬಂದನಲ್ಲ. ತನ್ನ ಮಕ್ಕಳು, ಹೆಂಡತಿಯರು, ಕುಟುಂಬ, ಮನೆ, ಜಮೀನು ಎಲ್ಲವನ್ನೂ ಬಿಟ್ಟು ಭಾರತಕ್ಕೆ ಕಳಿಸಲು ಜೊತೆಗೂಡಿ ಬಂದಿದ್ದನಲ್ಲ. ಇಂತಹ ಚಾಚಾನನ್ನು ಅನುಮಾನಿಸಿದೆನಲ್ಲ. ಧರ್ಮಾಂತರ ಮಾಡುತ್ತಿದ್ದಾನೆ ಎಂದುಕೊಂಡೆನಲ್ಲ. ಛೇ. ಎಂದುಕೊಂಡ ವಿನಯಚಂದ್ರ.
ವಿನಯಚಂದ್ರನ ಮನಸ್ಸಿನಲ್ಲಿದ್ದ ದುಃಖ ಅಸಹನೆಯ ರೂಪವನ್ನು ತಾಳಿತ್ತು. ಏನನ್ನು ಕಂಡರೂ ಸಿಟ್ಟು ಬರಲು ಆರಂಭಿಸಿತ್ತು. ಮಧುಮಿತಾ ಅಳುತ್ತಲೇ ಇದ್ದಳು. ಸಲೀಂ ಚಾಚಾನ ದೇಹ ನಿಶ್ಚಲವಾಗಿ ಬಿದ್ದಿತ್ತು. ತಕ್ಷಣ ಸಲೀಂ ಚಾಚಾನ ದೇಹವನ್ನು ಮಣ್ಣು ಮಾಡಲು ಸಾಧ್ಯವಾ ಎಂದು ಸುತ್ತಮುತ್ತ ನೋಡಿದ ವಿನಯಚಂದ್ರ. ಮಣ್ಣು ಮಾಡಲು ಅಗತ್ಯವಾದ ಹತ್ಯಾರ ಸಿಗಲಿಲ್ಲ. ಕಾಲಬುಡದಲ್ಲಿದ್ದ ಮಣ್ಣನ್ನು ಕೈಯಲ್ಲಿ ಬಗೆಯಲು ಸಾಧ್ಯವಾ ಎಂದೂ ಪ್ರಯತ್ನಿಸಿದ. ಕೆಲಕಾಲ ಹಾಗೆ ಮಾಡಿ ಕೈತುಂಬಾ ಗಾಯಮಾಡಿಕೊಂಡ. ಕೊನೆಗೊಮ್ಮೆ ಸಲೀಂ ಚಾಚಾನ ನಿಶ್ಚಲ ದೇಹವನ್ನು ಹೊತ್ತುಕೊಂಡು ಅದೇ ಬೈರು ಬೆಳೆದಿದ್ದ ಗದ್ದೆಯ ನಡುವೆ ತೆಗೆದುಕೊಂಡು ಹೋಗಿ ಒಂದು ಕಡೆ ಮಲಗಿಸಿದ. ನಂತರ ಸುತ್ತಲ ಪೈರನ್ನು ಕಿತ್ತು ತಂದು ಸಲೀಂ ಚಾಚಾನ ದೇಹದ ಮೇಲೆ ಹರವಿದ. ಅರ್ಧಗಂಟೆಯ ನಂತರ ಆತನ ದೇಹ ಸಂಪೂರ್ಣವಾಗಿ ಪೈರಿನಿಂದ ಮುಚ್ಚಿತ್ತು. ಸುತ್ತಲ ಗದ್ದೆಗೆ ಬೆಂಕಿ ತಾಗದಂತೆ ಎಚ್ಚರ ವಹಿಸಿ ಸಲೀಂ ಚಾಚಾನನನು ಮುಚ್ಚಿದ್ದ ಪೈರು ರಾಶಿಗೆ ಬೆಂಕಿ ಹಾಕಿದ ವಿನಯಚಂದ್ರ.
`ಕ್ಷಮಿಸು ಚಾಚಾ.. ನೀನು ನನಗೆ ನಂಬಿಕೆಯ ಪಾಠಗಳನ್ನು ಹೇಳಿದ್ದೆ. ನಾವು ಹೇಗೆ ಬೆಳೆಸಿಕೊಳ್ಳುತ್ತೇವೆಯೋ ಆಗೆ ನಮ್ಮ ನಂಬಿಕೆಗಳು ಬೆಳೆದುನಿಲ್ಲುತ್ತವೆ ಎಂದಿದ್ದ. ನಿಮ್ಮ ಧರ್ಮದ ಪ್ರಕಾರ ಸತ್ತವರನ್ನು ಹೂಳಬೇಕು. ಆದರೆ ನಾನು ನಿನ್ನ ಧರ್ಮದವನಲ್ಲ. ನನ್ನ ನಂಬಿಕೆ ಬೇರೆ. ನಿನ್ನ ದೇಹವನ್ನು ಅಗ್ನಿಗೆ ಅರ್ಪಿಸುತ್ತಿದ್ದೇನೆ. ಸಾಧ್ಯವಿದ್ದರೆ ನಿನ್ನ ದೇಹವನ್ನು ನಾನು ಹೂತು ಹಾಕುತ್ತಿದ್ದೆ. ಆದರೆ ನಾನು ಎಷ್ಟು ಪ್ರಯತ್ನ ಪಟ್ಟರೂ ಒಂದಡಿ ಆಳದ ಗುಂಡಿಯನ್ನೂ ನನ್ನ ಬಳಿ ತೋಡಲು ಸಾಧ್ಯವಾಗಲಿಲ್ಲ. ನಿನ್ನ ಧರ್ಮದ ನಂಬಿಕೆಯನ್ನು ನಾನು ಹಾಳು ಮಾಡಿದ್ದೇನೆ. ಆದರೆ ನನಗೆ ಇದು ಅನಿವಾರ್ಯವಾಗಿತ್ತು. ಚಾಚಾ.. ಕ್ಷಮಿಸಿಬಿಡು. ನನಗೆ ಬೇರೆ ಮಾರ್ಗವೇ ಇರಲಿಲ್ಲ...' ಎಂದ ವಿನಯಚಂದ್ರ.
ಚಾಚಾನ ದೇಹ ನಿಧಾನವಾಗಿ ಅಗ್ನಿಯಲ್ಲಿ ಭಸ್ಮವಾಗುತ್ತಿತ್ತು. ದೂರದಿಂದ ನೋಡುತ್ತಿದ್ದ ವಿನಯಚಂದ್ರನ ಮೂಗಿಗೆ ಚಾಚಾನ ದೇಹ ಸುಟ್ಟ ವಾಸನೆ ಬಡಿಯುತ್ತಿತ್ತು. ಮಧುಮಿತಾ ಅತ್ತು ಅತ್ತು ವಿನಯಚಂದ್ರನ ಭುಜಕ್ಕೆ ಒರಗಿ ನಿಂತಿದ್ದಳು. ಇಷ್ಟುಹೊತ್ತೂ ಕಿಡಿಕಾರುತ್ತಿದ್ದನೋ ಎಂಬಂತಿದ್ದ ಸೂರ್ಯ ನಿಧಾನವಾಗಿ ಬಾನಂಚಿಗೆ ಜಾರುತ್ತಿದ್ದ. ಸೂರ್ಯನ ಸವಾಲು ಸೋತಿತೋ ಎನ್ನುವಂತಿತ್ತು. ಚಾಚಾನ ಚೀಲವನ್ನು ಹೊತ್ತುಕೊಂಡ ವಿನಯಚಂದ್ರ. ಒಂದೇ ದಿನದಲ್ಲಿ ಹಲವು ಆಘಾತಗಳು ಸಂಭವಿಸಿದ್ದವು. ಮೊದಲು ಚಾಚಾನ ಸೈಕಲ್ ರಿಕ್ಷಾ ಹಿಂಸಾಚಾರಿಗಳ ಪುಂಡಾಟಕ್ಕೆ ಬೆಂಕಿಗೆ ಆಹುತಿಯಾಗಿತ್ತು. ಇದೀಗ ಸಲೀಂ ಚಾಚಾ ಕೂಡ ಸತ್ತಿದ್ದ. ಆತನ ದೇಹಕ್ಕೆ ವಿನಯಚಂದ್ರನೇ ಅಗ್ನಿಸ್ಪರ್ಷ ಮಾಡಿದ್ದ. ವಿನಯಚಂದ್ರನಿಗೆ ಸೈಕಲ್ ರಿಕ್ಷಾ ಹಾಗೂ ಸಲೀಂ ಚಾಚಾನ ನಡುವೆಯಿದ್ದ ಅವಿನಾಭಾವ ಸಂಬಂಧ ಒಮ್ಮೆ ಮನಸ್ಸಿನಲ್ಲಿ ಮೂಡಿತು. ಮಧುಮಿತಾಳನ್ನು ಹಿಡಿದುಕೊಂಡು ನಿಧಾನವಾಗಿ ಮುಂದಕ್ಕೆ ನಡೆಯತೊಡಗಿದ. ನಡೆಯಬೇಕಿದ್ದ ದಾರಿ ಇನ್ನೂ ಸಾಕಷ್ಟಿತ್ತು. ನಡೆದಂತೆಲ್ಲ ದೀರ್ಘವಾಗುತ್ತಿದೆಯೋ ಅನ್ನಿಸಿತು.
(ಮುಂದುವರಿಯುತ್ತದೆ...)