Saturday, September 13, 2014

ಹರಟೆ

ಒಂದು ಇತಿಹಾಸ

ಇತ್ತೀಚೆಗೆ ಪರಿಚಯದವರ ಜೊತೆಗೆ ಮಾತನಾಡುತ್ತಿದ್ದೆ.
ಅವರೊಂದು ಇಂಟರೆಸ್ಟಿಂಗ್ ವಿಷಯವನ್ನು ತಿಳಿಸಿದರು.

ಶಿರಸಿ ತಾಲೂಕಿನ ಕರೂರಿನಲ್ಲಿ ಒಂದು ಕೋಟೆಯಿರುವ ವಿಷಯ ನನಗೆ ಬಾಲ್ಯದಿಂದಲೇ ತಿಳಿದಿದೆ.
ದಿನದಿಂದ ದಿನಕ್ಕೆ ಈ ಕೋಟೆ ನನ್ನಲ್ಲಿ ಅಪಾರ ಕುತೂಹಲವನ್ನೂ ಹುಟ್ಟುಹಾಕಿತ್ತು.
ಅದನ್ನು ನೋಡಬೇಕು ಎಂದುಕೊಂಡು ಎಂದು ಹಲವು ಸಾರಿ ಕರೂರಿನ ಕಡೆಗೆ ಪಯಣ ಬೆಳೆಸಿದ್ದೆ.
ಆದರೆ ಕಾರಣಾಂತರಗಳಿಂದ ಆಗಲಿಲ್ಲ.
ನಮ್ಮ ಮಾತು ಕರೂರಿನ ಗೌಡರಾಳ್ವಿಕೆಯ ಕಡೆಗೆ ಸರಿಯಿತು.
ಕರೂರಿನ ಗೌಡರು ಸೋದೆಯ ಅರಸರ ಸಾಮಂತರು ಎಂದು ತಿಳಿಸಿದರು ಅವರು.
ಅವರ ಕೋಟೆ ಸೋಂದಾ ಕೋಟೆಯಂತೆ ಇದೆ ಎನ್ನುವ ಮಾಹಿತಿ ತಿಳಿಸಿ ಕೋಟೆಯ ಸುತ್ತ ಮಾಸ್ತಿಗಲ್ಲುಗಳು, ವೀರಗಲ್ಲುಗಳೂ ಇವೆ. ಸ್ಥಳೀಯವಾಗಿ ಪ್ರಭುದೇವರು, ಆಂಜನೇಯನ ಗುಡಿಯನ್ನು ನಿರ್ಮಾಣ ಮಾಡಿದ್ದು ಇವರೇ ಎಂಬ ಮಾಹಿತಿಯನ್ನು ಅವರು ನೀಡಿದರು. 
ನನಗೆ ಕುತೂಹಲಗೊಂಡು ಕೇಳಿದೆ. 
ನನ್ನೂರಿನಿಂದ ಕರೂರು ನಾಲ್ಕು ಕಿ.ಮಿ.
ಕರೂರಿನ ದಿಕ್ಕಿನಲ್ಲಿ ಸಮಾ ವಿರುದ್ಧವಾಗಿ ನಾಲ್ಕು ಕಿ.ಮಿ ಹೋದರೆ ಬಾಳೂರು.
ಅಲ್ಲೂ ಒಂದು ಕೋಟೆಯಿತ್ತು. ಅಲ್ಲೂ ಗೌಡರ ಆಳ್ವಿಕೆಯಿತ್ತು. ಈಶ್ವರ, ಸುಬ್ರಹ್ಮಣ್ಯ, ಗಣಪತಿಯ ದೇವಾಲಯ ಕಟ್ಟಿಸಿದವರು ಅವರು. ಹೆಸರಾಂತ ಗುಡ್ಡೇತೋಟದ ಕೋಟೆ ವಿನಾಯಕನ ದೇವಾಲಯ ಕಟ್ಟಿದ್ದು ಇದೇ ಗೌಡರು.
ನನ್ನೂರು ಬಾಳೂರು ಗೌಡರ ಆಳ್ವಿಕೆಗೆ ಬರುತ್ತಿತ್ತೋ ಅಥವಾ ಕರೂರು ಗೌಡರ ಅಧೀನಕ್ಕೆ ಬರುತ್ತಿತ್ತೋ ಎಂಬುದು ನನ್ನೊಳಗಿನ ಕುತೂಹಲವಾಗಿ ಅವರ ಬಳಿ ಕೇಳಿದೆ.
ಅದಕ್ಕವರು ಗೊತ್ತಿಲ್ಲ ಎಂದರು. ಕೊನೆಗೆ ಯಾರದ್ದೇ ಆಳ್ವಿಕೆಗೆ ಬರಲಿ. ಸೋದೆ ಅರಸರ ಸಾಮಂತರು ಇವರಾದ ಕಾರಣ ಸೋದೆ ಅರಸರ ಅಧೀನಕ್ಕೆ ಬರುತ್ತದೆ ಎಂದರು. ನಾನು ಹುಂ ಎಂದು ಸುಮ್ಮನಾದೆ.

ಕರೂರು ಅರಸರ ಬಗ್ಗೆ ಇನ್ನೊಂದು ವಿಷಯವನ್ನು ಅವರು ತಿಳಿಸಿದರು.
ಕರೂರು ಅರಸ ತನ್ನ ಮಗಳನ್ನು ಆಂದ್ರಪ್ರದೇಶದ ನಾಗಾರ್ಜುನಕೊಂಡಕ್ಕೆ ಮದುವೆ ಮಾಡಿಕೊಟ್ಟಿದ್ದನಂತೆ.
ಕರೂರು ಅರಸನ ಮಗಳ ಮನೆತನದವರು ಇಂದಿಗೂ ಇದ್ದಾರಂತೆ ಎಂದರು.
ನನಗೆ ಅಚ್ಚರಿಯಾಯಿತು. ಅವರನ್ನು ಹುಡುಕಿ ಹೋಗುವ ಸಾಹಸ ಮಾಡುವ ತುಡಿತ ಹುಟ್ಟಿತು.
ಸುಮ್ಮನೇ ಕೇಳಿದೆ.
`ಅಲ್ಲಾ ಮಾರಾಯ್ರೆ.. ಈಗ ಬಸ್ಸು ಕಾರುಗಳಿವೆ. ಅವುಗಳ ಮೇಲೆ  ಕರೂರಿನಿಂದ ಅಜಮಾಸು 500 ಕಿ.ಮಿ ದೂರವಿರುವ ನಾಗಾರ್ಜುನ ಕೊಂಡಕ್ಕೆ ಹೋಗಿ ಹುಡುಕಿ ಅದ್ಹೇಗೆ ಮಗಳನ್ನು ಕೊಟ್ಟರು? ಅಲ್ಲ ಅವರು ಕುದುರೆ ಮೇಲೆ ಹೋದರು ಕನಿಷ್ಟ ಒಂದು ವಾರ ಬೇಕಲ್ಲ. ಇನ್ನು ನಡೆದುಕೊಂಡು ಹೋದರೆ ಒಂದು ತಿಂಗಳೇ ಬೇಕು. ನಡುವೆ ಕೃಷ್ಣಾ, ತುಂಗಭದ್ರಾ ನದಿಗಳು ಸಿಗುತ್ತವೆ. ಆಗ ಆ ನದಿಗಳು ಈಗಿನದ್ದಕ್ಕಿಂತ ಹೆಚ್ಚು ಅಬ್ಬರಿಸುತ್ತ ಹರಿಯುತ್ತಿದ್ದವು. ಅದನ್ನು ಹೇಗೆ ದಾಟಿದರು? ಅಲ್ಲ ಕರೂರಿನ ಗೌಡರು ನಾಗಾರ್ಜುನ ಕೊಂಡದ ವರೆಗೆ ಹೋಗಿ ತಮ್ಮ ಮಗಳಿಗೆ ಅನುರೂಪ ಗಂಡನ್ನು ಹುಡುಕಿ, ಆ ಗಂಡು ಅಲ್ಲಿಂದ ಇಲ್ಲಿಗೆ ಬಂದು ಹೆಣ್ಣು ನೋಡಿ, ಮದುವೆ ನಿಶ್ಚಯಿಸಿ, ಮದುವೆಯಾಗಿ ಮತ್ತೆ ಮರಳಿ ಹೋಗಲು ಏನಿಲ್ಲವೆಂದರೂ ಕನಿಷ್ಟ ಮೂರ್ನಾಲ್ಕು ತಿಂಗಳೇ ಬೇಕಾಗಿರಬಹುದಲ್ಲವೇ? ಇನ್ನು ತಂದೆ-ತಾಯಿ ಮಗಳನ್ನು ನೋಡಲು ಹೋಗಬೇಕು ಅಥವಾ ಮಗಳು ತವರಿಗೆ ಮರಳಬೇಕು ಎಂದರೆ ಮತ್ತೆ ತಿಂಗಳುಗಟ್ಟಲೆ ಪಯಣ ನಡೆಯಲೇಬೇಕು.. ಎಂತಾ ಕಾಲ ಮಾರಾಯ್ರೆ..' ಎಂದೆ.
ಅವರೂ ಹೌದು.. ಎಂದು ವಿಸ್ಮತರಾದರು.

ಕೊನೆಗೆ ಮೊನ್ನೆ ಇದೇ ವಿಷಯವನ್ನು ಶಿರಸಿಯ ಇತಿಹಾಸ ತಜ್ಷ ಲಕ್ಷ್ಮೀಶ ಹೆಗಡೆ ಅವರ ಮುಂದಿಟ್ಟೆ.
ಅವರು ಹೇಳಿದ್ದು `ಅಲ್ಲ ಗಂಡನ್ನು ಹುಡುಕಿಕೊಂಡು ಕರೂರು ಗೌಡರು ನಾಗಾರ್ಜುನ ಕೊಂಡಕ್ಕೆ ಹೋದರು ಅಂತ ಹೇಗೆ ಭಾವಿಸುತ್ತೀರಿ? ಸೋದೆ ಅರಸರಿಗೆ ನಾಗಾರ್ಜುನ ಕೊಮಡದ ಅರಸರ ಮಿತ್ರರಿದ್ದು ಕರೂರು-ನಾಗಾರ್ಜುನಕೊಂಡದ ನಡುವೆಯೆಲ್ಲೋ ಭೇಟಿಯಾಗಿ, ಸ್ನೇಹ ಬೆಳೆದು ಕರೂರು ಅರಸರು ಮಗಳ ಮದುವೆ ಪ್ರಸ್ತಾಪ ಮಾಡಿರಬಹುದಲ್ಲ.. ಹಾಗೆಯೇ ಅಲ್ಲಿಂದಲೇ ಬಂದು ಮದುವೆ ಮಾಡಿಕೊಂಡು ಹೋಗಿರಬಹುದು..' ಎಂದರು.
ನನಗೆ ಹೌದಲ್ಲ ಅನ್ನಿಸಿತಾದರೂ ಅರಸರ ಮಗಳು ತವರಿಗೆ ಬರುವುದು ಹಾಗೂ ಕರೂರು ಅರಸರು ನಾಗಾರ್ಜುನ ಕೊಂಡಕ್ಕೆ ಮಗಳ ನೋಡುವುದನ್ನು ಹೋಗುವುದರ ಬಗ್ಗೆ ಕೇಳಿದೆ.
ಅದಕ್ಕವರು `ಆಗ ಕುದುರೆಗಳೇ ಸಂಚಾರಕ್ಕೆ ಬಳಕೆಯಾಗುತ್ತಿದ್ದವು. ಕುದುರೆಗಳು ನಮ್ಮ ಕಾರುಗಳಿಗಿಂತ ವೇಗವಾಗಿ ಓಡಬಲ್ಲ ತಾಕತ್ತು ಹೊಂದಿವೆ. ಈಗಿನದಕ್ಕಿಂತ ಮೂರ್ನಾಲ್ಕು ದಿನಗಳು ವಿಳಂಬವಾಗಿ ಆಗಿನ ಪ್ರಯಾಣ ಇರುತ್ತಿತ್ತು. ತೀರಾ ತಿಂಗಳುಗಟ್ಟಲೆ ಪ್ರಯಾಣ ನಡೆಯುವುದಿಲ್ಲ.. ಕುದುರೆಗಳು ಸಲೀಸಾಗಿ ನದಿ ದಾಟುತ್ತವೆ..' ಎಂದರು. ಅವರ ಉತ್ತರ ನನಗೆ ಸಮಾಧಾನ ತಂದಿತ್ತು.


ಆದರೆ ನಾಗಾರ್ಜುನ ಕೊಂಡದಲ್ಲಿ ಇರುವ ಕರೂರು ಗೌಡರ ಮಗಳ ಕುಟುಂಬಸ್ಥರನ್ನು ಹುಡುಕುವ ಹಂಬಲ ಮನಸ್ಸಿನಲ್ಲಿ ಮೂಡುತ್ತಿದೆ. ನಾಗಾರ್ಜುನ ಕೊಂಡ ಸೆಳೆಯುತ್ತಿದೆ. 

********


`ಅಣಾ ನಾನೊಂದು ಧಾರವಾಹಿ ಮಾಡೋಣ ಅಂತಿದ್ದೇನೆ' ಎಂದಳು ತಂಗಿ.
`ಎಂತದ್ದೇ ಅದು?' ಎಂದೆ ನಾನು.
`ವಿನಯನ ಲೈಫ್ ಸ್ಟೋರಿ ಅಂತ ಮಾಡೋಣ ಅಂದುಕೊಂಡಿದ್ದೇನೆ' ಎಂದಳವಳು.
`ಶಿ.. ಬ್ಯಾಡ.. ನನ್ ಲೈಫ್ ಸ್ಟೋರಿ ಅಷ್ಟು ಇಂಟರೆಸ್ಟಿಂಗ್ ಆಗಿಲ್ಲ. ಟಿ.ಆರ್.ಪಿ. ಬರೋದಿಲ್ಲ.. ಬ್ಯಾಡ..ಬಿಡು' ಎಂದೆ.
`ಅಯ್ಯೋ.. ಮಾರಾಯಾ.. ಯಾರಂದಿದ್ದು ನಿನ್ ಲೈಫ್ ಸ್ಟೋರಿ ಅದರಲ್ಲಿ ಇರ್ತದೆ ಅಂತ?' ಎಂದಳು ಅವಳು.
`ಮತ್ತೆ... ನನ್ ಹೆಸರು ಇಟ್ಟಿದ್ದೀಯಲ್ಲೆ...' ಎಂದೆ.
`ಅಯ್ಯೋ ಮಾರಾಯಾ.. ಹೆಸರಷ್ಟೇ ವಿನಯನ ಲೈಫ್ ಸ್ಟೋರಿ ಅಂತ. ಕಥೆಯಲ್ಲೆಲ್ಲೂ ನೀನು ಬರೋದಿಲ್ಲ. ನಿನಗೆ ಸಂಬಂಧಿಸಿದ್ದೂ ಅಲ್ಲ. ಒಂದು ಕೌಟುಂಬಿಕ ಧಾರವಾಹಿ ಅದು. ಸುಮ್ನೆ ನೆಪಕ್ಕಷ್ಟೆ ನಿನ್ ಹೆಸರು.' ಎಂದಳವಳು.
ನಾನು ಪೆಚ್ಚಾಗಿ ನೋಡುತ್ತಿದ್ದಾಗಲೇ ಅವಳು ಮುಂದುವರಿಸಿದಳು `ಅಲ್ಲಾ.. ಈಗಿನ ಎಷ್ಟೋ ಸಿನಿಮಾಗಳನ್ನು ನೋಡು ಕತೆಗೂ ಟೈಟಲ್ಲಿಗೂ ಸಂಬಂಧವೇ ಇರೋದಿಲ್ಲ. ಎಂತದ್ದೋ ಕಥೆ ಇನ್ನೆಂತದ್ದೋ ಹೆಸರು. ಹಂಗೆ ಈ ಧಾರವಾಹಿ ಕೂಡ. ಹೆಸರಷ್ಟೇ ನಿಂದು. ಕಥೆ ಇನ್ನೇನೋ. ನಿಂಗೆ ಬೇಜಾರಾಗ್ತದೆ ಅಂತಾದ್ರೆ ಎಲ್ಲಾದರೂ ಧಾರವಾಹಿಯ ಒಂದೆರಡು ಸಾಲಲ್ಲಿ ನಿನ್ನ ಲೈಫು ಅನ್ನೋ ಒಂದೆರಡು ಸಾಲಿನ ಡೈಲಾಗು ಸೇರಿಸಿಬಿಡ್ತೀನಿ.. ಥೇಟು ಈಗಿನ ಕನ್ನಡ ಸಿನೆಮಾಗಳಲ್ಲಿ ಬರೋ ಥರಾ..' ಎಂದಳು.
ನಾನು ಪೆಚ್ಚಾದೆ. ತಂಗಿ ನಕ್ಕಳು..!



********


ವಾದ್ರಾ ಬಿಸಿನೆಸ್. :

2004ರಿಂದ2014ರ ನಡುವೆ ಪಂಜಾಬಿನಲ್ಲಿ ನಾನು ತಗೊಂಡಿದ್ದ ನೂರಾರು ಎಕರೆ ಜಮೀನಿತ್ತು.
ನನ್ನಲ್ಲಿ ಸಿಕ್ಕಾಪಟ್ಟೆ ಅಕೌಂಟ್ಸ್ ಇತ್ತು ಆದ್ರೂ ದುಡ್ಡು ಬೇಕಿತ್ತು.
ತಕ್ಷಣ ನನ್ನ ಮೊಬೈಲಿನಲ್ಲಿ ನನ್ನ ಜಮೀನಿನ ಐದಾರು ಪೋಟೋ ತೆಗೆದೆ.
ಮೋಬೈಲಿನಲ್ಲಿ OLX appsನ ಡೌನ್ ಲೊಡ್ ಮಾಡದೆ.
ಪೋಟೋ ಅಪ್ಲೋಡ್ ಮಾಡದರೆ `ಬಿಟ್ಟಿ ಜಮಿನು ಬೇಕಾದವ್ರು ತಗೋಳಿ..' ಅಂತ ಕ್ಯಾಚಿ ಟೈಟಲ್ ಕೊಟ್ಟೆ
ಶೇರ್ ಮಾಡದೆ.. ನಾನ್ ಶೇರ್ ಮಾಡಿದ ಅರ್ಧ ಗಂಟೇಲೆ ಹೆಸರಾಂತರಿಂದ, ಖ್ಯಾತನಾಮರಿಂದ, ವಿದೇಶಿಯರಿಂದೆಲ್ಲ ಪೋನ್ಸ್ ಬರೋಕೆ ಶುರುವಾಯ್ತು.
ಒಂದಿಬ್ಬರು ಒಳ್ಳೆ ರೇಟಿಗೆ ಜಮೀನು ತಗೋಳೋಕೆ ತಯಾರಾಗಿದ್ರು.
ನಾನು ಅವರಿಗೆ ಕೂಡಲೇ ಜಮೀನು ಮಾರಿಬಿಟ್ಟೆ.
ಬಂದ ದುಡ್ಡಲ್ಲಿ ಅರ್ಧ ಅತ್ತೆಗೆ ಕೊಟ್ಟೆ.

ಈ ನಡುವೆ ಹೆಂಗೆ ಮಾರಾಟ ಮಾಡ್ಬೇಕು ಗೊತ್ತಾ?
OLX..!!

Friday, September 12, 2014

ಸಾಗುವ ಬಾ ಜೊತೆಗಾರ

ಸಾಗುವ ಬಾ ಜೊತೆಗಾರ
ಮೆರೆವ ಮರೀಚಿಕೆಯ
ಮರುಳು ಗಾಡಿನ ನಾಡೊಳಗೆ |

ತಲೆಯ ಮೇಲೆ ಸುಡುವ
ರಣ ಬಿಸಿಲು, ಬಸವಳಿಕೆ
ಬಾಯಾರಿಕೆ, ಜೊತೆಗಿರುವ
ಕಷ್ಟ-ನಕ್ಷತ್ರಿಕರು |

ಸಾಗುವ ಬಾ ಜೊತೆಗಾರ.
ಅಳುಕಿಲ್ಲ, ಬಳುಕಿಲ್ಲ
ಕೊನೆಗಾಣದ ರವೆ ರವೆಯ
ಮರಳ ಕಣ ಕಣವ
ಪಾದದಿಂದೊದ್ದು ಸಾಗುವಾ,
ಗಮ್ಯ ತಲುಪುವಾ |

ಹಲ್ಕಿರಿಯುವ ನೆರಳು
ಸಾವ ಸೆಳವು,
ಹಾಗೆಯೇ ಇರಲಿ ಬಿಡು |
ಮೆರೆವ ಮರುಳು
ಮರಳು ದಿಬ್ಬವ
ಮರೆತು ಬಿಡು |

ನಾನು ನೀನಷ್ಟೇ
ಜೊತೆಗಾರರು ಕೊನೆತನಕ.
ಅಳುಕ ಬೇಡ ನೀ,
ಸ್ವರ್ಗದ ಮೆಟ್ಟಿಲೇರುವವರೆಗೆ
ಧರ್ಮರಾಜನ ಜೊತೆಗೊಂದು
ಶ್ವಾನವಿತ್ತಲ್ಲವೇ ಹಾಗೆ
ನನ್ನೊಡನೆ ನೀನು |

ಬಿಡಿಸದ ಬಂಧ, ನಂಟು
ಗಟ್ಟೀ ಛಲ, ದಿಟ್ಟತನ
ಸಾಗುವ ಬಾ ಜೊತೆಗಾರ |

**

(ಈ ಕವಿತೆಯನ್ನು ಬರೆದಿರುವುದು 04-02-2007ರಂದು ದಂಟಕಲ್ಲಿನಲ್ಲಿ)

Tuesday, September 9, 2014

ಪರಾಮಶಿ (ಕಥೆ)

                `ರಾಮಚಂದ್ರ ಆತ್ಮಹತ್ಯೆ ಮಾಡ್ಕ್ಯಂಡನಡಾ.. ನಿಂಗೊತ್ತಾತಾ' ಎಂದು ಮುಂಜಾನೆ ನಾನು ಏಳುತ್ತಿದ್ದಂತೆಯೇ ಮಾಬಲು ಹೇಳಿದ್ದ. ನಾನು ಒಮ್ಮೆ ಅಚ್ಚರಿಗೊಂಡೆ. ಚಿಕ್ಕ ಶಾಕ್ ನೊಂದಿಗೆ `ಹೌದನಾ..?, ಎಂತಕ್ಕಡಾ? ಯಾವತ್ತು ಆತ್ಮಹತ್ಯೆ ಮಾಡಿಕೊಂಡಿದ್ದು..?' ಎಂದು ವಿಚಾರಿಸಲಾಗಿ ಮಾಬಲು `ಗೊತ್ತಿಲ್ಲೆ ಮಾರಾಯಾ.. ನಿನ್ನೆ ರಾತ್ರಿ ಅದ್ಯಾವುದೋ ಲಾಡ್ಜಿಗೆ ಹೋಗಿ ರೂಂ ಮಾಡಿಕೊಂಡು ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡ್ಕ್ಯಂಜಾ ಅಂತ ಎಲ್ಲ ಕಡೆ ಸುದ್ದಿ. ಯಂಗೂ ಖರೆ ವಿಷ್ಯ ಇನ್ನೂ ತೆಳದ್ದಿಲ್ಲೆ ನೋಡು. ಆದ್ರೆ ಸಣ್ಣ ವಯಸ್ಸಾಗಿತ್ತಲಾ ಮಾರಾಯಾ.. ಅಂವ ಆತ್ಮಹತ್ಯೆ ಮಾಡ್ಕ್ಯತ್ತಾ  ಅಂದ್ರೆ ಯಾರೂ ನಂಬಲೆ ಸಾಧ್ಯ ಇಲ್ಲೆ ನೋಡು..' ಎಂದ ಮಾಬಲು.
               `ಹೌದಾ ಮಾರಾಯಾ.. ಆರಡಿ ಆಳು ಆಗಿದ್ನಲಾ.. ಮೊನ್ನೆ ಅಷ್ಟೆ ಎಂತದ್ದೋ ಜಾಬ್ ಸಿಕ್ಕಿದ್ದು ಹೇಳಿ ಸ್ವೀಟ್ ಕೊಟ್ಟಿಕ್ಕೆ ಹೋಗಿದ್ದ. ಖರೆ ಅಂವ ಆತ್ಮಹತ್ಯೆ ಮಾಡ್ಕ್ಯಂಡಿದ್ದೇ ಹೌಡನಾ..? ' ವಿಷಯವನ್ನು ಸ್ಪಷ್ಟಪಡಿಸಿಕೊಳ್ಳಲು ನಾನು ಮತ್ತೊಮ್ಮೆ ಕೇಳಿದ್ದೆ.
               `ಥೋ ಮಾರಾಯಾ.. ಆನೂ ಹಿಂಗೆ ಅಂದಕಂಡಿದ್ನಾ.. ಎಲ್ಲಾರೂ ಹಂಗೆ ಅಂದ್ವಾ.. ಅದಕ್ಕಾಗಿ ನಂಬಲೇ ಬೇಕಾತು ನೋಡು..' ಎಂದು ಮಾಬಲು ಹೇಳಿದಾಗ ನಾನು ನಂಬಲೇಬೇಕಾಯಿತು. `ಬಾ ಅವ್ನ ಅಂತ್ಯಸಂಸ್ಕಾರ ನೋಡ್ಕ್ಯಂಡಾದ್ರೂ ಬಪ್ಪನ..' ಎಂದು ಮಾಬಲುವನ್ನು ರಾಮಚಂದ್ರನ ಮನೆಯ ಕಡೆಗೆ ಕರೆದೊಯ್ದೆ.
               ಮೂಲೆಮನೆ ರಾಮಚಂದ್ರ ಅಂದರೆ ನಮ್ಮ ಬಳಗದಲ್ಲಿಯೇ ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದ ಅಂದರೆ ತಪ್ಪಾಗಲಿಕ್ಕಿಲ್ಲ. ನಮ್ಮದೆಲ್ಲ ಒಂದೇ ವಯಸ್ಸು. ಆತನಿಗೂ ನನ್ನಷ್ಟೇ ಅಂದರೆ 25ರ ಆಜುಬಾಜಿನ ವಯಸ್ಸು. ಉಕ್ಕುವ ಯೌವನ. ಹುಚ್ಚುಖೋಡಿಯ ಮನಸ್ಸು. ಕಾಲೇಜು ದಿನಗಳಲ್ಲಿ ಕ್ರೀಡೆಗಳಲ್ಲಿ ರಾಮಚಂದ್ರನನ್ನು ಬಿಟ್ಟರೆ ಇನ್ನೊಬ್ಬರಿರಲಿಲ್ಲ. ಎಲ್ಲದರಲ್ಲಿಯೂ ಆತನೇ ಮುಂದು. ಆರಡಿಯ ಆಜಾನುಬಾಹು ಬೇರೆ. ಹುಡುಗಿಯರಂತೂ ಆತನನ್ನು ಮುತ್ತಿಕೊಳ್ಳುತ್ತಿದ್ದರು. ಇಂತಹ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದರೆ ನಂಬಲು ಅಸಾಧ್ಯವೇ. ಯಾಕೋ ಏನೆಲ್ಲ ಆಲೋಚನೆಗಳು ಮನಸ್ಸಿನಲ್ಲಿ ಮೂಡಿದವು. ಥಟ್ಟನೆ ತಲೆ ಕೊಡವಿ ಮಾಬಲುವಿನ ಜೊತೆ ಅವರ ಮನೆಯ ಕಡೆಗೆ ಮುನ್ನಡೆದೆ.
                ನಮ್ಮ ಗೆಳೆಯರ ಬಳಗದಲ್ಲಿ ರಾಮಚಂದ್ರನದ್ದು ವಿಶೇಷ ಪಾತ್ರ. ಎಲ್ಲ ಕಡೆ ಕಾಣಿಸಿಕೊಂಡು ಎಲ್ಲೆಡೆ ಸಲ್ಲುವವನಾಗಿದ್ದ. ನಗುತ್ತ, ನಗಿಸುತ್ತ ಖುಷಿ ಖುಷಿಆಯಗಿ ಇರುತ್ತಿದೆ. ಆತನಿದ್ದ ಕಡೆಯಲ್ಲಿ ಕ್ರಿಯಾಶೀಲತೆಯೇ ಇದೆಯೇನೋ ಎನ್ನುವಂತಿದ್ದ. ಆತನ ಮನೆಯಲ್ಲೂ ಕೂಡ ಆತನಿಗೆ ಪೂರಕವಾಗಿಯೇ ಇದ್ದರು. ಕೇಳಿದ್ದನ್ನು ಕೊಡಿಸುವ ಅಪ್ಪ, ಮಗನ ನಡೆ ನುಡಿಗಳಿಗೆಲ್ಲ ಸೈ ಎನ್ನುವ ಅಮ್ಮ. ಒಟ್ಟಿನಲ್ಲಿ ಆತನ ಬದುಕಿನಲ್ಲಿ ಎಲ್ಲವೂ ಇದ್ದವು. ಅಂತವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದರೆ ನಂಬುವುದು ಕಷ್ಟವೇ.
              ರಾಮಚಂದ್ರನನ್ನು ನಾನು ಅನೇಕ ಸಾರಿ ಅರ್ಥಮಾಡಿಕೊಳ್ಳಲು ಯತ್ನಿಸಿ ಸೋತಿದ್ದಿದೆ. ಆಗೊಮ್ಮೆ ಈಗೊಮ್ಮೆ ನಗುತ್ತಾನೆ. ತಮಾಷೆ ಮಾಡುತ್ತಾನೆ. ತಾನಿರುವ ವಾತಾವರಣವನ್ನು ಸದಾ ಖುಷಿ ಖುಷಿಯಾಗಿ ಇಡಲು ಪ್ರಯತ್ನಿಸುತ್ತಿದ್ದಂತಹ ವ್ಯಕ್ತಿ. ಆದರೆ ತನ್ನ ಹಾಸ್ಯವನ್ನು ಎಂದೂ ಎಲ್ಲೆ ಮೀರಲು ಬಿಟ್ಟವನಲ್ಲ. ಗಂಭೀರ ಅಂಶಗಳು ಆತನಲ್ಲಿ ಸಾಕಷ್ಟಿದ್ದವು. ಜೀವನದಲ್ಲಿ ಎಂದೂ ನಿರಾಸೆಯನ್ನು ಅನುಭವಿಸಿದವನಲ್ಲ. ಸೋಲಿಗೆ ಹೆದರಿದವನಂತೂ ಅಲ್ಲವೇ ಅಲ್ಲ. ಇಂತಹ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದರೆ ಹೇಗೆ ಸಾಧ್ಯ ಎನ್ನುವ ಆಲೋಚನೆಯಲ್ಲಿಯೇ ಆತನ ಮನೆಗೆ ಹೋದೆ.
             ಮನೆ ನೀರವವಾಗಿತ್ತು. ತಂದೆ-ತಾಯಿಗಳು ದುಃಖದಲ್ಲಿದ್ದರು. ಆತನ ಶವ ಹೊರ ಮನೆಯಲ್ಲಿತ್ತು. ಬಂಧುಗಳು ಆಗಲೇ ಮುಂದಿನ ಕಾರ್ಯವನ್ನು ಕೈಗೊಂಡಾಗಿತ್ತು. ನಾನು ಅರೆಘಳಿಗೆ ರಾಮಚಂದ್ರನ ಶವದ ಮುಂದೆ ನಿಂತೆ. ಮನಸ್ಸಿನಲ್ಲಿ ಆತನ ಆತ್ಮಕ್ಕೆ ಶಾಂತಿ ಸಿಗಲಿ ಭಗವಂತ ಎಂದು ಹಾರೈಸಿದೆ. ಮೆಚ್ಚಿನ ಗೆಳೆಯನನ್ನು ಕಳೆದುಕೊಂಡ ದುಃಖ ಬಹಳೆ ಕಾಡಿತು. ಕೆಲ ಹೊತ್ತಿನ ನಂತರ ಆತನ ಅಂತ್ಯ ಸಂಸ್ಕಾರ ಕೂಡ ನಡೆಯಿತು. ಭಾರವಾದ ಹೃದಯದೊಂದಿಗೆ ನಾನು ಅಲ್ಲಿಂದ ಮರಳಿದೆ.
              ರಾಮಚಂದ್ರನ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ನನಗೆ ಕೊನೆಗೂ ತಿಳಿದಿರಲಿಲ್ಲ. ನಾನು ಅದನ್ನು ತಿಳಿಯಬೇಕಲ್ಲ ಎಂದುಕೊಂಡು ಹೊರಟೆ. ಸೊಕಾಸುಮ್ಮನೆ ಪತ್ತೆದಾರಿಕೆ ಕೆಲಸಕ್ಕೆ ಇಳಿದೆ ಎನ್ನಿ. ಆತನ ಪರಿಚಯ ಇದ್ದವರ ಬಳಿ ವಿಚಾರಿಸಿದೆ. ನಾನು ವಿಚಾರಿಸಿದವರೆಲ್ಲರೂ ಬಗೆ ಬಗೆಯ ಕಾರಣಗಳನ್ನು ತಿಳಿಸಿದರು. ಒಬ್ಬ ಅನಾರೋಗ್ಯ ಎಂದರೆ ಮತ್ತೊಬ್ಬ ಪ್ರೇಮವೈಫಲ್ಯ ಎಂದರು. ಮತ್ತಿನ್ಯಾರೋ ಆತ ಕೆಲಸ ಮಾಡುತ್ತಿದ್ದ ಆಫೀಸಿನಲ್ಲಿ ಮೇಲಧಿಕಾರಿಗಳ ಜೊತೆ ವೈಮನಸ್ಸು ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದೂ ತಿಳಿಸಿದರು. ಆದರೆ ಯಾರೊಬ್ಬರೂ ನಿಖರ ಕಾರಣವನ್ನು ತಿಳಿಸಲಿಲ್ಲ. ನನಗೆ ಉತ್ತರ ಗೊತ್ತಾಗುವ ಬದಲು ಮತ್ತಷ್ಟು ಗೊಂದಲವೇ ಹೆಚ್ಚಿತು. ಕೊನೆಗೆ ಆತನ ಮನೆಗೆ ಹೋಗಿ ವಿಚಾರಿಸಿದರೆ ನಿಖರ ಕಾರಣ ಗೊತ್ತಾಗುತ್ತದೆ ಎಂದುಕೊಂಡೆ. ನಾಲ್ಕೈದು ದಿನಗಳ ನಂತರ ಆತನ ಮನೆಗೆ ಹೋದೆ.
           ಮನೆಯಲ್ಲಿ ವಿಷಯವನ್ನು ಹೇಗೋ ತಿಳಿಸಿದೆ. ದುಃಖದ ಮಡುವಿನಲ್ಲಿದ್ದ ಆತನ ಮನೆಯವರು ಆತನ ಕೋಣೆಯನ್ನು ತೋರಿಸಿದರು. ನಾನು ರಾಮಚಂದ್ರನ ಕೋಣೆಗೆ ತೆರಳಿ ಆತನ ಆತ್ಮಹತ್ಯೆಗೆ ಕಾರಣ ಸಿಗಬಹುದಾ ಎಂದು ಹುಡುಕಾಡಲಾರಂಭಿಸಿದೆ. ಆತ ಕೂರುತ್ತಿದ್ದ ಜಾಗ, ಟೇಬಲ್, ಮಂಚದ ಕೆಳಗೆ ಎಲ್ಲ ಹುಡುಕಿದೆ. ಹೀಗೆ ಹುಡುಕುತ್ತಿದ್ದಾಗ ಅಚಾನಕ್ಕಾಗಿ ಮೆಡಿಕಲ್ ರಿಪೋರ್ಟ್ ಒಂದು ಸಿಕ್ಕಿತು. ಬೇಗನೆ ತೆಗೆದು ನೋಡಿದೆ. ರಾಮಚಂದ್ರನ ಬ್ಲಡ್ ಟೆಸ್ಟ್ ರಿಪೋರ್ಟ್ ಇತ್ತು. ಯಾವು ಯಾಔಉದೋ ಟೆಸ್ಟುಗಳು. ಏನೇನೋ ತಪಾಸಣೆ ಮಾಡಿದ್ದರು. ಮೊದಲಿಗೆ ನನಗೆ ತಲೆಬುಡ ಅರ್ಥವಾಗಲಿಲ್ಲ. ಆದರೆ ಅಲ್ಲೊಂದು ಕಡೆಗೆ ನನ್ನ ಕಣ್ಣು ಹಾಗೆಯೇ ನಿಂತಿತು. ಬ್ಲಡ್ ರಿಪೋರ್ಟಿನ ಕೊನೆಯಲ್ಲಿ ಎಚ್.ಐ.ವಿ. ಟೆಸ್ಟ್ ಮಾಡಲಾಗಿತ್ತು. ಅದು ಪಾಸಿಟಿವ್ ರಿಪೋರ್ಟ್ ತೋರಿಸುತ್ತಿತ್ತು. ನನಗೆ ಒಂದರೆಘಳಿಗೆ ಕೈಕಾಲು ಕಂಪಿಸತೊಡಗಿತು. ಅಂದರೆ ರಾಮಚಂದ್ರನಿಗೆ ಏಡ್ಸ್ ಇತ್ತೇ? ಒಂದು ಕ್ಷಣ ನನ್ನಲ್ಲಿ ಆತಂಕ ಕಾಡಿತು. ಮನಸ್ಸು ಒಪ್ಪಲು ನಿರಾಕರಿಸಿತು.
             ತಕ್ಷಣವೇ ಆತನ ಮನೆಯವರಿಗೆ ಈ ರಿಪೋರ್ಟ್ ತೋರಿಸಿದೆ. ಅವರಿಗೂ ಒಂದು ಕ್ಷಣ ನಂಬುವುದು ಸಾಧ್ಯವಾಗಲಿಲ್ಲ. ಕಣ್ಣಲ್ಲಿ ಅಚ್ಚರಿಗಳಿತ್ತು. ಆತಂಕವೂ ಇತ್ತು. ಮನೆಯವರಂತೂ ಆ ರಿಪೋರ್ಟನ್ನು ನಂಬಲು ತಯಾರಿರಲಿಲ್ಲ. ಆತನ ತಾಯಿಯಂತೂ `ರಾಮಚಂದ್ರನಿಗೆ ಮದುವೆ ಗೊತ್ತಾಗಿತ್ತು. ಎಂಗೇಜ್ ಮೆಂಟಿಗೆ ತಯಾರಿ ಕೂಡ ನಡೆದಿತ್ತು. ಹುಡುಗಿ ಕಡೆಯವರು ಜಾತಕದ ಜೊತೆಗೆ ಮೆಡಿಕಲ್ ಚೆಕ್ ಅಪ್ ರಿಪೋರ್ಟ್ ಕೇಳಿದ್ದರು. ಅದಕ್ಕೆ ರಾಮಚಂದ್ರ ಬ್ಲಡ್ ಟೆಸ್ಟ್ ಮಾಡಿಸಿಕೊಂಡು ಬಂದಿದ್ದ. ಆದರೆ ನನ್ನ ಮನಸ್ಸು ಹೇಳುತ್ತಿದೆ. ಆತನಿಗೆ ಏಡ್ಸ್ ಇರಲಿಲ್ಲ. ಖಂತಿವಾಗಿಯೂ ರಾಮಚಂದ್ರ ತೀರಾ ಹೆಂಗಸರ ಸಹವಾಸ ಮಾಡುವಂತವನಲ್ಲ. ಏನೇ ಇದ್ದರೂ ನಮ್ಮ ಬಳಿ ಹೇಳುತ್ತಿದ್ದ. ಈಗ ಆತನ ಮದುವೆಗೆ ಗೊತ್ತು ಮಾಡಿದ್ದ ಹುಡುಗಿ ಕೂಡ ಪರಿಚಯದವಳೇ ಇದ್ದಳು. ಅವರು ಒಬ್ಬರಿಗೊಬ್ಬರು ಒಪ್ಪಿದ್ದರೂ ಕೂಡ. ಮದುವೆಗೆ ಈಗ ಎಲ್ಲರೂ ಬ್ಲಡ್ ಟೆಸ್ಟ್ ಮಾಡಿಸಬೇಕು ಎನ್ನುತ್ತಾರಲ್ಲ. ಅದಕ್ಕೆ ಈತನೂ ಟೆಸ್ಟ್ ಮಾಡಿಸಿದ್ದ..' ಎಂದು ಹೇಳಿದರು.
         ರಾಮಚಂದ್ರನ ತಾಯಿ ಹೇಳಿದ ಮಾತಿನಲ್ಲೂ ಸತ್ಯವಿದೆ ಎನ್ನಿಸಿತು. ಅಷ್ಟೇ ಏಕೆ. ನನಗೆ ರಾಮಚಂದ್ರನ ಮೇಲೆ ನಂಬಿಕೆ ಇತ್ತಲ್ಲ. ಆತನಿಗೆ ಏಡ್ಸ್ ಇದೆ ಎನ್ನುವ ಕಳಂಕ ಬೇರೆ ಬಂದಿತಲ್ಲ. ಈ ಕಾರಣದಿಂದಲೇ ಆತ ಆತ್ಮಹತ್ಯೆ ಮಾಡಿಕೊಂಡನಲ್ಲ ಎನ್ನಿಸಿತು. ಹೊರ ಜಗತ್ತಿಗೆ ಈ ವಿಷಯ ತಿಳಿದರೆ ರಾಮಚಂದ್ರನನ್ನು ಕೀಳಾಗಿ ಕಾಣುತ್ತಾರಲ್ಲ ಛೆ.. ಎಂದೂ ಅನ್ನಿಸಿತು. ಮನಸ್ಸು ಬೇಜಾರಾಗಿದ್ದಾಗಲೇ ಹೊರಗಡೆ ಪೋಸ್ಟ್ ಮ್ಯಾನ್ ಬಂದು ಬಾಗಿಲು ತಟ್ಟಿದ್ದ. ರಾಮಚಂದ್ರನ ತಂದೆ ಪತ್ರವನ್ನು ತೆಗೆದುಕೊಂಡು ಒಡೆದು ನೋಡಿದರು. ಲಕೋಟೆಯನ್ನು ಒಡೆದು ನೋಡಿದವರೇ ಕುಸಿದು ಕುಳಿತರು.
          ಹೌಹಾರಿದ ನಾನು ಅವರ ಬಳಿಯಿದ್ದ ಲಕೋಟೆ ಪಡೆದು ಓದಲಾರಂಭಿಸಿದೆ. ಅದರಲ್ಲೊಂದು ಬ್ಲಡ್ ರಿಪೋರ್ಟ್ ಇತ್ತು. ಜೊತೆಗೊಂದು ಪತ್ರ. ಬ್ಲಡ್ ರಿಪೋರ್ಟ್ ರಾಮಚಂದ್ರನ ಹೆಸರಿನಲ್ಲಿತ್ತು. ಅದರಲ್ಲಿ ಎಚ್.ಐ.ವಿ. ಕಾಲಮ್ಮಿನಲ್ಲಿ ನೆಗೆಟಿವ್ ಎಂದಿತ್ತು. ನನಗೆ ಮತ್ತೆ ಗೊಂದಲ. ರಾಮಚಂದ್ರನಿಗೆ ಏಡ್ಸ್ ಇತ್ತೋ ಇಲ್ಲವೋ ಅಂತ. ಕೊನೆಗೆ ಜೊತೆಯಲ್ಲಿದ್ದ ಪತ್ರವನ್ನು ಓದಲಾರಂಭಿಸಿದೆ. ಆತನ ಬ್ಲಡ್ ಟೆಸ್ಟ್ ಮಾಡಿದ್ದ ಲ್ಯಾಬಿನವರು ಬರೆದಿದ್ದ ಪತ್ರ ಅದು.
           ರಾಮಚಂದ್ರನಿಗೆ ಬರೆದಿದ್ದ ಆ ಪತ್ರದಲ್ಲಿ `ಬ್ಲಡ್ ಟೆಸ್ಟ್ ರಿಪೋರ್ಟಿನಲ್ಲಿ ಪ್ರಮಾದವಾಗಿದೆಯೆಂದೂ, ಹಿಂದೆ ಕಳಿಸಿದ್ದ ರಿಪೋರ್ಟ್ ನಲ್ಲಿ ಟೆಸ್ಟ್ ಮಾಹಿತಿ ಕೊಂಚ ಹೆಚ್ಚೂ ಕಡಿಮೆಯಾಗಿದೆಯೆಂದೂ, ಕಣ್ತಪ್ಪಿನಿಂದ ಒಂದೆರಡು ಪ್ರಮಾದವಾಗಿದೆ. ಎಚ್.ಐ.ವಿ ನೆಗೆಟಿವ್ ಇದ್ದಿದ್ದನ್ನು ಎಚ್.ಐ.ವಿ. ಪಾಸಿಟಿವ್ ಎಂದು ಬರೆಯಲಾಗಿದೆ. ಆದರೆ ತಮಗೆ ಎಚ್.ಐ.ವಿ. ಪಾಸಿಟಿವ್ ಆಗಿಲ್ಲ. ನೆಗೆಟಿವ್ ಆಗಿದೆ. ತಾವು ಈ ಕುರಿತು ಭಯಪಡಬೇಕಿಲ್ಲ. ತಮಗೆ ಈಗ ನೀಡಲಾಗಿರುವ ರಿಪೊರ್ಟ್ ಬೇರೊಬ್ಬರದ್ದಾಗಿದೆ.  ಹಳೆಯ ಮೆಡಿಕಲ್ ರಿಪೋರ್ಟ್ ಬದಲು ಸರಿಪಡಿಸಿ ಕಳಿಸಿರುವ ಈ ಹೊಸ ರಿಪೋರ್ಟ್ ತೆಗೆದುಕೊಳ್ಳಿ. ಲ್ಯಾಬಿನ ಕೆಲಸಗಾರರ ಪರಾಮಶಿಯಿಂದ ಈ ರೀತಿಯಾಗಿದೆ. ದಯವಿಟ್ಟು ಕ್ಷಮೆಯಿರಲಿ' ಎಂದು ಬರೆದಿತ್ತು.
          ಪತ್ರ ಓದಿ ಮುಗಿಸುತ್ತಿದ್ದಂತೆ ನನ್ನೊಳಗೆ ಹೇಳಿಕೊಳ್ಳಲಾಗದ ತಳಮಳ. ಸಿಟ್ಟೋ, ಸೆಡವೋ ಏನೊಂದೂ ಅರ್ಥವಾಗಲಿಲ್ಲ. ಲ್ಯಾಬಿನ ಕೆಲಸಗಾರರ ತಪ್ಪಿನಿಂದಾಗಿ ಒಂದು ಜೀವ ಬಲಿಯಾಗಿತ್ತು. ಲ್ಯಾಬಿನವರು ಪರಾಮಶಿಯ ಹೆಸರು ಹೇಳುತ್ತಿದ್ದರೂ ಈಗೊಂದು ಪ್ರಮಾದ ಜರುಗಿಬಿಟ್ಟಿತ್ತು. ಯಾವುದೇ ರೋಗವಿಲ್ಲದೇ ಆರಾಮಾಗಿದ್ದ ರಾಮಚಂದ್ರ ಟೆಸ್ಟಿನಲ್ಲಿದ್ದ ತಪ್ಪಿನ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದ. ಏನೂ ಇಲ್ಲದಿದ್ದರೂ ತಾನೇ ಬಲಿಯಾಗಿದ್ದ. ರಾಮಚಂದ್ರನಿಗೆ ಏಡ್ಸ್ ಇರಲಿಲ್ಲ ಎಂದು ಖುಷಿಪಡಲೋ ಅಥವಾ ಆತ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ದುಃಖ ಪಡಲೋ, ಲ್ಯಾಬಿನ ಕೆಲಸಗಾರರ ನಿರ್ಲಕ್ಷ್ಯಕ್ಕೆ ಸಿಟ್ಟಾಗಲೋ ಅರ್ಥವಾಗಲಿಲ್ಲ. ಏನೂ ಇಲ್ಲದೇ ಏಡ್ಸ್ ಹಣೆಪಟ್ಟಿ ಹೊತ್ತು, ಆ ಹಣೆಪಟ್ಟಿಯನ್ನು ಕಳಚಿಡುವ ಸಮಸಯದಲ್ಲಿ ಆತನೇ ಇರಲಿಲ್ಲ. ಹನಿಗೂಡಿದ ಕಣ್ಣಿನೊಂದಿಗೆ ಆತನ ಮನೆಯಿಂದ ವಾಪಾಸಾಗಿದ್ದೆ.

**
(ಈ ಕಥೆಯನ್ನು ಬರೆದಿದ್ದು 09-09-2014ರಂದು ಶಿರಸಿಯಲ್ಲಿ)

Monday, September 8, 2014

ಹನಿಗಳೊಂದಿಗೆ ಎಂಜಾಯ್ ಮಾಡಿ

ಪಾಕಿಸ್ತಾನ

ಪಾಕಿಸ್ತಾನವೆಂದರೆ ನಿಲುಕಿಗೆ
ಕಾಣುವ ಮರುಭೂಮಿ ನಾಡು |
ಒಡಲೊಳಗೆ ಅರಾಜಕತೆಯ ಗೂಡು ||
ಆದರೂ ತುಂಬಿ ತುಳುಕುತ್ತಿದೆ
ಭಾರತದ ವಿರುದ್ಧ ಸೇಡು ||

ಹೊಸ ಆಶ್ರಮ

ಅಭಲಾಶ್ರಮ, ಅನಾಥಾಶ್ರಮ,
ವೃದ್ಧಾಶ್ರಮ, ಪಾದುಕಾಶ್ರಮ
ಇವೆಲ್ಲವನ್ನೂ ಕಂಡದ್ದಾಯ್ತು |
ಇನ್ನು ಕಮಂಡಲಾಶ್ರಮ
ಲಾಂಗೂಲಾಶ್ರಮ ಹಾಗೂ
ಕೌಪೀನ ಆಶ್ರಮಗಳನ್ನಷ್ಟು
ನೋಡುವುದೊಂದೇ ಬಾಕಿ ||

ಸಾನಿಯಾ ಆಟ

ಹಿಂದೊಮ್ಮೆ ಅಧ್ಬುತವಾಗಿ ಆಡುತ್ತಿದ್ದಳು
ಸಾನಿಯಾ ಆಟ |
ಹುಡುಗರಿಗಂತೂ ಆಕೆಯ ಕಡೆಗೇ ನೋಟ ||
ಆನಂತರ ಪ್ರಸಿದ್ಧವಾಗಿದ್ದು ಮಾತ್ರ
ಆಕೆಯ ಮೈಮಾಟ ||

ರೈತನ ಕಥೆ

ನಮ್ಮ ನಾಡಿನ ರೈತ
ಬೆಳೆದ ಬೆಳೆಗೆ
ಬೆಲೆ ಬಂದರೆ
ಆತ ಧನಿಕ |
ಬೆಲೆ ಬರದಿದ್ದರೆ ಮಾತ್ರ
ಕುಡಿಯುವ ಕೀಟನಾಶಕ ||

ಗೋರ್ಮೆಂಟು ಬಸ್ಸು

ಜೋರಾಗಿ ಓಡಲು ಪ್ರಯತ್ನಿಸಿ
ಸಾಧ್ಯವಾಗದೇ ನಿಲ್ಲುವ ಹಾಗೂ
ಪ್ರತಿ ಘಟ್ಟದಲ್ಲೂ ದಮ್ಮು
ಕೆಮ್ಮುಗಳನ್ನು ಪ್ರದರ್ಶಿಸುವುದೇ
ಗೋರ್ಮೆಂಟು ಬಸ್ಸು ||


Sunday, September 7, 2014

ನನ್ನ ಒಲವು

ನೀನೆಂದರೆ ಒಲವ ಖನಿ
ಪ್ರೀತಿಯ ಬನಿ |

ಎದೆಯಾಳದಲ್ಲಿ ಹುದುಗಿಟ್ಟ
ಅವ್ಯಕ್ತ ಬಾವ ನೀನು |
ಕಣ್ಣಲ್ಲಿ ಜಿನುಗಿದ್ದರೂ 
ಉದುರದ ನೀರು ನೀನು |

ಬಾಯಿ ಬೊಚ್ಚಾಗಿದ್ದರೂ
ಉಕ್ಕುವ ನಗು ನೀನು |
ಮಗುವಿನ ಒಡಲಿನಿಂದ 
ಇಳಿವ ಕೇಕೆ ನೀನು |

ಶತಮಾನಗಳಿಂದ ಬಂದ
ಸಂಪ್ರದಾಯ ನೀನು |
ಹರಿವ ನದಿಗೆ ಅಡ್ಡಾಗಿ
ಕಟ್ಟಿದ ಒಡ್ಡು ನೀನು |

ಮರೆತರೂ ಮರೆಯದ
ಸೇಡಿನ ಕಿಡಿ ನೀನು |
ವರ್ಷಗಳುರುಳಿದರೂ ಮಾಯದ
ಗಾಯದ ಕಲೆ ನೀನು |

ಒಲವೇ ಹೀಗೆ ಸದಾ ಕಾಲ ಕಾಡುತ್ತದೆ
ಬಿಡದೇ ಸೆಳೆಯುತ್ತದೆ. |
ಒಳಗೊಳಗೆ ಮೊಳೆಯುತ್ತದೆ.
ಹೆಮ್ಮರವಾಗಿ ನಿಲ್ಲುತ್ತದೆ |

**

(ಈ ಕವಿತೆಯನ್ನು ಬರೆದಿದ್ದು 07-09-2014ರಂದು ಶಿರಸಿಯಲ್ಲಿ)